ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 30, 2011

ಬದುಕಿಗೊಂದು ನಿತ್ಯ ಪಾಠ


ಬದುಕಿಗೊಂದು ನಿತ್ಯ ಪಾಠ

[ಸ್ನೇಹಿತರೆಲ್ಲರಿಗೂ ೨೦೧೨ ಹಾರ್ದಿಕ ಶುಭಾಶಯಗಳು]

ಬದುಕಿಗೊಂದು ನಿತ್ಯ ಪಾಠ ಆಟ ಹಾಸ್ಯ ಹೂರಣ
ಕೆದಕಿತೆಗೆದು ಭಾವಗಳನು ಅದಕೆ ಕಟ್ಟಿ ತೋರಣ !

ಮುಗಿಯದಿರಲಿ ಮಂದಹಾಸ ಲಘುವಿಗದುವೆ ಕಾರಣ
ತೆಗೆದು ಬಿಸುಡಿ ಕೋಪತಾಪ ಜೀವಕದುವೆ ಮಾರಣ !

ನಡೆವ ಹಾದಿಯಲ್ಲಿ ನಾವು ನಮ್ಮಷ್ಟಕೇ ವಾರಣ!!
ಪಡೆವ ಕಷ್ಟ-ಸುಖಗಳೆಲ್ಲ ಖರ-ನಂದನ-ತಾರಣ !

ಗೆಲುವು-ಸೋಲು ಮಜದ ಮಜಲು ತಾರದಿರಲಿ ದಾರುಣ
ಒಲವು-ಸ್ನೇಹ ಎಳೆದುತರಲಿ ಕೊರತೆ ಭರಿಸೆ ಪೂರಣ

ನವನವೀನ ಜಾಯಮಾನ ನಾಗರಿಕತೆ ಪ್ರೇರಣ
ಜನರಾಶಿಯು ಅರಿತು ಬದುಕೆ ದಿನವು ನವ್ಯ ಚಾರಣ !

Thursday, December 29, 2011

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

ನನ್ನೀ ಜೀವನ ಸಮುದ್ರಯಾನದಿ ಚಿರಧ್ರುವತಾರೆಯು ನೀನು !

೯೪ ರ ಹೂತ್ತಿಗೆ ನಾನಿನ್ನೂ ಏನೂ ಅಲ್ಲದೇ ಬೆಂಗಳೂರಲ್ಲಿ ನೆಲೆನಿಲ್ಲಲು ಸರಿಯಾದ ಜಾಗ ಹುಡುಕುತ್ತಿರುವಾಗಲೇ ಕೇಳಿಬಂದದ್ದು ಕುವೆಂಪು ಅಸ್ತಂಗತರಾದ ಸುದ್ದಿ. ಬಾಲ್ಯದಲ್ಲಿ ಪಠ್ಯಗಳನ್ನು ಓದುವಾಗ ಅವರು ಬರೆದ ಅದೆಷ್ಟು ಹಾಡುಗಳು ಬಂದಿದ್ದವೋ ನೆನಪಿಲ್ಲ, ಒಟ್ಟಾರೆ ಎಲ್ಲಿ ನೋಡಿದರೂ ಕುವೆಂಪು ಕುವೆಂಪು ಕುವೆಂಪು. ಬಾಯಿಪಾಠಮಾಡಲಾಗದ ಹಾಡುಗಳ ಮಧ್ಯದ ಸಾಲುಗಳನ್ನು ನಮ್ಮ ಶಿಕ್ಷಕರು ಕೇಳಿದಾಗ ಒಮ್ಮೊಮ್ಮೆ ಕೋಪದಿಂದ " ಅವನ್ಯಾರೋ ಕುವೆಂಪುವಂತೆ ಕುವೆಂಪು ಯಾಕಾದ್ರೂ ಅಷ್ಟೆಲ್ಲಾ ಹಾಡು ಬರೆದ್ನೋ ಪುಣ್ಯಾತ್ಮ, ಬೇರೆ ಕೆಲ್ಸ ಇರ್ಲಿಲ್ವೆ ಕುವೆಂಪುಗೆ? ಇಲ್ಲಿ ನಮ್ ತಲೆ ತಿಂತಾರೆ" ಎಂದುಕೊಂಡಿದ್ದೂ ಇದೆ! ಆ ವಯಸ್ಸೇ ಹಾಗಿತ್ತು, ಅಲ್ಲಿ ಅಪ್ಪ-ಅಮ್ಮ ನಮಗಾಗಿ ಪಡುವ ಪಾಡು, ಅವರ ಕಷ್ಟ-ಸುಖ, ಕವಿ-ಕಾವ್ಯ-ಪರಂಪರೆ ಇದನ್ನೆಲ್ಲಾ ಅರ್ಥವಿಸಿಕೊಳ್ಳಲಾಗದ ಮುಗ್ಧ ಬುದ್ಧಿಮಟ್ಟ. ಕುವೆಂಪು ಅಂದರೆ ಯಾರು ಆತ ಯಾಕೆ ಹಾಗೆಲ್ಲಾ ಬರೆದರು ಎಂದು ಎಂದೂ ಚಿಂತಿಸುವುದಕ್ಕೆ ಒಗ್ಗದ ಮನ. ಕಾಲ ನಿಲ್ಲುವುದಿಲ್ಲವಲ್ಲ, ಸರಿದೇ ಹೋಗುತ್ತದೆ, ಮುಪ್ಪಡರಿದ ಕುವೆಂಪು ಸಾಹಿತ್ಯಲೋಕವನ್ನು ಬಿಟ್ಟು ಉದಯರವಿಯಲ್ಲಿ ಅಸ್ತಂಗತರಾಗಿದ್ದರು-ಅದು ಈಗ ಕಥೆ ಅಥವಾ ನೆನಪು ಮಾತ್ರ.

ಬರವಣಿಗೆ ಬರಹಗಾರನಿಗೆ ಖುಷಿ ಕೊಡುವುದರ ಜೊತೆಜೊತೆಗೇ ಓದುಗರ ಮಹಾಸಾಗರದಲ್ಲಿ ಎಷ್ಟು ದಿನ ತೇಲುತ್ತದೆ, ಎಷ್ಟುದಿನ ತನ್ನತನವನ್ನು ಎತ್ತಿಹಿಡಿದು ಮೆರೆಸುತ್ತದೆ ಎಂಬುದು ಯೋಚಿಸಬೇಕಾದ ವಿಷಯ. ಅನೇಕ ಲಕ್ಷಮಂದಿ ಬರಹಗಾರರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಗಳನ್ನು ನೀಡಿದರೂ ಕೇವಲ ಕೆಲವರು ಮಾತ್ರ ತಮ್ಮ ಅತ್ಯುತ್ತಮ ಕೃತಿಗಳಿಂದ ಅಜರಾಮರರಾಗುತ್ತಾರೆ. ರಸಋಷಿಗಳಾದ ಅಂಥವರಿಗೆ ’ಗೌಡಾ’ ಕೊಡುವುದೂ ಬೇಕಾಗಿಲ್ಲ. ಯಾಕೆಂದರೆ ಅವರ ಹೆಸರುಗಳ ಅಂದಗೆಟ್ಟುಹೋಗುತ್ತದೆ. ಉನ್ನತ ಸ್ತರದ ಯಾವುದೇ ವ್ಯಕ್ತಿಗೆ ಡಾ. ಸೇರಿಸಿದರೆ ಮೈಯ್ಯೆಲ್ಲಾ ಉರಿದ ಅನುಭವ, ಪ್ರಾಯಶಃ ಅದು ಇತ್ತೀಚೆಗೆ ಕೊಡು-ಕೊಳ್ಳುವ ವಿಷಯಕ್ಕೆ ಇಳಿದು ಬೆಲೆಕಳೆದುಕೊಂಡಿದ್ದಕ್ಕೋ ಏನೋ. ಅಂತೂ ಕನ್ನಡದ ಹಿರಿಯ ಜೀವಗಳಿಗೆ ಗೌಡಾ ಹಚ್ಚಿದರೂ ಬಿಟ್ಟರೂ ಅವರ ಗೆಲ್ಮೆ ಹೆಚ್ಚಿನದೇ ಆಗಿದೆ. ಯಾಕೆಂದರೆ ಅವರು ಅನುಸರಿಸಿದ ಬಾಳ ಪಥ ಆ ಮಟ್ಟದ್ದಿದೆ. ಕಥೆಗಾರ ಎಸ್. ದಿವಾಕರ್ ಜೊತೆ ಒಮ್ಮೆ ಮಾತನಾಡುವಾಗ ಡೀವೀಜಿಯವರ ಬಗ್ಗೆ ಹೇಳುತ್ತಿದ್ದೆ, ಆಗ ಅವರು ಹೇಳಿದ್ದೂ ಇದನ್ನೇ " ಬರಹಗಾರನ ಬರಹಗಳು ಎಷ್ಟು ಬಾಳಿಕೆ ಬರುತ್ತವೆ, ಎಂಡ್ಯೂರನ್ಸ್ ಎಷ್ಟಿರುತ್ತದೆ ಎಂಬುದರ ಮೇಲೆ ಆತನ ಬರಹವನ್ನು ಗುರುತಿಸಬಹುದು " ಎಂದರು. ಕನ್ನಡಕ್ಕೊದಗಿದ ಅಂತಹ ಮಹಾನುಭಾವರಲ್ಲಿ ಕುವೆಂಪುವೂ ಒಬ್ಬರು.

ಎಂಬತ್ತರ ದಶಕ ಮುಗಿಯುತ್ತಿರುವ ವೇಳೆ ಎಲ್ಲೆಲ್ಲೂ ಕೇಳಿಸಿದ್ದು ಮೈಸೂರು ಅನಂತಸ್ವಾಮಿಗಳು ಹಾಡಿದ " ಓ ನನ್ನ ಚೇತನಾ ಆಗು ನೀ ಅನಿಕೇತನ ...." ಅದನ್ನೇ ಎ ಸೈಡು ಬಿ ಸೈಡು ಕೇಳೀ ಕೇಳೀ ಕೇಳೀ ಬೇಸರವಾದರೂ ಅರ್ಥವನ್ನು ಅವಲೋಕಿಸುತ್ತಾ ನಡೆದಾಗ ನಮ್ಮನ್ನೇ ನಾವು ಕಳೆದುಕೊಳ್ಳುವ ಲೋಕವೊಂದರ ಸೃಷ್ಟಿಯನ್ನು ನಮ್ಮೊಳಗೇ ಹುಟ್ಟಿಸಿಬಿಡುತ್ತದೆ ಆ ಹಾಡು ! ಎಲ್ಲಿಯೂ ನಿಲ್ಲದಿರು... ಮನೆಯನೊಂದ ಕಟ್ಟದಿರು... ಇದು ಕವಿ ಹೃದಯದಲ್ಲಿ ಹೇಗೆ ಬಂತು ಎಂಬುದು ಅವರಿಗಿಂತ ತೀರಾ ಎಳಬನಾದ ನನಗೆ ಸ್ಪಷ್ಟವಿಲ್ಲ. ಕುಪ್ಪಳ್ಳಿಯಂತಹ ಕುಗ್ರಾಮದ ಮಜಭೂತಾದ ತೊಟ್ಟಿಮನೆಯಿಂದ ಮೈಸೂರು ನಗರದ ’ಉದಯರವಿ’ಗೆ ಅವರು ಹೋಗಬೇಕಾಗಿ ಬಂದಾಗ ಹಾಗೆ ಬರೆದರೇ ? ಗೊತ್ತಿಲ್ಲ. ’ಅಣ್ಣನ ನೆನಪು’ ಎಂಬುದನ್ನು ಬರೆದೇ ಅಷ್ಟಿಷ್ಟು ಹೆಸರುಪಡೆದ ಪೂಚಂತೇ ಮಹಾಮೇರು ಕುವೆಂಪುವಿನ ಮಗನಾದರೂ ಆ ಮಟ್ಟಕ್ಕೆ ಬೆಳೆಯಲಿಲ್ಲ! ಅದೊಂದು ಶಕೆ; ಒಬ್ಬರಂತೇ ಇನ್ನೊಬ್ಬರು ಆಗಲು ಸಾಧ್ಯವಾಗದೇ ಹೋಗಬಹುದು, ಬಹುತೇಕರಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಸಾಹಿತ್ಯಕ ರಸಾಭಿಜ್ಞತೆಗೆ ಅದರದ್ದೇ ಆದ ಆಯಾಮ ಇದೆ. ಬರೆದಿದ್ದೆಲ್ಲಾ ಸಾಹಿತ್ಯವಾಗುವುದಿಲ್ಲವಲ್ಲ? ಅಂತೆಯೇ ತೇಜಸ್ವಿಯವರ ಬರಹಗಳೆಲ್ಲ ಎಲ್ಲರನ್ನೂ ಮೆಚ್ಚಿಸಬಲ್ಲ ’ಸತ್ಯಾವತಾರ’ದ ನುಡಿಗಳಾಗಿರಲಿಲ್ಲ!

ಪೂಚಂತೇ ಜೊತೆಗೆ ಅವರ ಬರಹಗಳನ್ನು ಬೆರಳಚ್ಚು ಮಾಡಿಕೊಟ್ಟ ಅನುಭವವಿರುವ ಮಿತ್ರ ಪರಾಂಜಪೆ ಹೇಳುತ್ತಿದ್ದರು " ತೇಜಸ್ವಿ ಅಪ್ಪನಷ್ಟು ತಾದಾತ್ಮ್ಯ ಭಾವವನ್ನು ಹೊಂದಿದವರಾಗಿರಲಿಲ್ಲ. ಬರೆಯಬೇಕೋ ಬರೆಯಬೇಕು ಆದರೆ ಬರವಣಿಗೆಯ ಗುಣಮಟ್ಟದ ಬಗ್ಗೆ ಅವರು ತಲೆಕೆಡಿಸಿಕೊಳ್ಳದ ಬರಹಗಾರರು " ಎಂದು. ತೀರಾ ಇತ್ತೀಚೆಗೆ ಕುವೆಂಪು ಅವರ ಮೊಮ್ಮಗಳು ಈಶಾನ್ಯೆ ದಿನಪತ್ರಿಕೆಯೊಂದರಲ್ಲಿ ಚಿಕ್ಕ ಲೇಖನ ಬರೆದಿದ್ದು ಓದಿದೆ; ಇಲ್ಲ-ಕುವೆಂಪು ಮೊಮ್ಮಗಳು ಎನ್ನುವ ಮಟ್ಟದ್ದಲ್ಲ! ಕುವೆಂಪು ಕುವೆಂಪುವೇ; ಅದೊಂದು ರಸಋಷಿಯ ಕನ್ನಡಾವತಾರ !

ಕುವೆಂಪು ಅವರ ತಾದಾತ್ಮ್ಯತೆಯ ಬಗ್ಗೆ ಘಟನೆಯೊಂದು ಹೀಗಿದೆ: ಒಮ್ಮೆ ಕುವೆಂಪು ಮನೆಯಲ್ಲಿ ಕಳ್ಳತನವಾಯ್ತು. ಕದ್ದ ಕಳ್ಳ ಆಮೇಲೆ ದಿನವೆರಡರ ನಂತರ ಸಿಕ್ಕಿ ಬಿದ್ದಾಗ ಆತನನ್ನು ಪೋಲೀಸರು ಕುವೆಂಪು ಅವರ ಮನೆಗೆ ಎಳೆತಂದು ಎಲ್ಲೆಲ್ಲಿ ಹೇಗ್ಹೇಗೆ ಏನೇನು ಕದ್ದೆ ? ಎಂದು ಪ್ರಶ್ನಿಸಿದಾಗ, ಕಳ್ಳ ಹೇಳಿದ್ದು "ನಾನು ಕಳ್ಳತನಮಾಡುವಾಗ [ಕುವೆಂಪುವನ್ನು ಬೆರಳಿಟ್ಟು ತೋರಿಸಿ]ಓ ಇವರು ಇಲ್ಲೇ ಓದ್ತಾ ಕೂತಿದ್ರು " ! ಇನ್ನೊಂದು ಚಿಕ್ಕ ವೈಯ್ಯಕ್ತಿಕ ಟಿಪ್ಪಣಿ ಎಂದರೆ ಆಗಿನ ಕಾಲದಲ್ಲಿ ಅನೇಕರು ಕುವೆಂಪು ಅವರಿಗೆ ಕಾಗದ ಬರೆದು ಮಕ್ಕಳಿಗೆ ಹೆಸರು ಸೂಚಿಸುವಂತೇ ಕೋರುತ್ತಿದ್ದರು. ಉತ್ತರ ಬರೆಯಲು ಅಂಚೆ ಕಾರ್ಡುಗಳನ್ನು ಯಾರಾದರೂ ಕೆಲಸಗಾರರಲ್ಲಿ ಹೇಳಿಕಳಿಸಿ ಕುವೆಂಪು ತರಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಅವರು ಒಂದೋ ಎರಡೋ ರೂಪಾಯಿ ಕೊಡುತ್ತಿದ್ದರಲ್ಲಾ ಖರ್ಚಾಗಿ ಉಳಿದ ಚಿಲ್ಲರೆ ಹಣ ಕೈಗೆ ಮರಳಿ ಬರುವವರೆಗೆ ಕಾರ್ಡು ತಂದವರನ್ನು ಕೇಳುತ್ತಲೇ ಇರುತ್ತಿದ್ದರು.

ವಿಜಯಕರ್ನಾಟಕದಲ್ಲಿ ಹಿಂದೊಮ್ಮೆ ’ಮಹಾಕಾವ್ಯಗಳು ಎಂದರೆ ಅವು ಸಾಮಾನ್ಯರಿಗೆ ಅರ್ಥವಾಗದ್ದು’ ಎಂದು ಅಸಡ್ಡೆಯಾಗಿ ’ಸ್ಫೂರ್ತಿ ಸೆಲೆ’ ಎಂಬ ಶೀರ್ಷಿಕೆಯಡಿಯಲ್ಲಿ ಯಾರೋ ನಿತ್ಯ ಬರೆಯುವವರು ಬರೆದಿದ್ದರು, ಅದನ್ನು ವಿರೋಧಿಸಿ ಅಣಕವನ್ನೂ ಬರೆದ ನೆನಪು ನನಗಿದೆ, ಅದೂ ಈ ಬ್ಲಾಗ್ ನಲ್ಲೇ ಇದೆ. ರಟ್ಟೆಗಾತ್ರದ ಕೆಲಸಕ್ಕೆ ಬಾರದ ಭಾಷಾಂತರಮಾಡಿದ ಪುಸ್ತಕಗಳನ್ನು ಬರೆಯಬಹುದು ಆದರೆ ಮಹಾಕಾವ್ಯಗಳನ್ನು ಬರೆಯುವುದು ಅಷ್ಟು ಸುಲಭವೇ? ನಮ್ಮಲ್ಲಿ ಒಂದು ದಂತಕಥೆಯಿತ್ತು: ’ರಾಮಾಯಣ ದರ್ಶನಂ’ ಬರೆಯುವ ಸಮಯದಲ್ಲಿ ಕುವೆಂಪು ಸ್ನಾನಮಾಡಿಕೊಂಡು ಒದ್ದೆ ಬಟ್ಟೆಯಲ್ಲಿ ಒಂದು ಮಣೆಯಮೇಲೆ ಕುಳಿತು ಬರೆಯುತ್ತಿದ್ದರಂತೆ. ಬರೆಯುತ್ತಾ ಬರೆಯುತ್ತಾ ಬಟ್ಟೆ ಒಣಗಿದಮೇಲೆ ಕಾವ್ಯ ಅಲ್ಲಿಗೇ ನಿಲ್ಲುತ್ತಿತ್ತು ಮತ್ತೆ ಮಾರನೇ ದಿನ ಮುನ್ನಡೆಯುತ್ತಿತ್ತು--ಎಂಬುದಾಗಿ. ಎಷ್ಟು ಸುಳ್ಳೋ ಎಷ್ಟು ಖರೆಯೋ ಗೊತ್ತಿಲ್ಲ, ಆದರೆ ನಾವೆಲ್ಲಾ ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾದ ಯಾವುದೋ ಅಂತಃಸತ್ವ ಅವರಲ್ಲಿತ್ತು, ಆ ಧೀ ಶಕ್ತಿ ಆ ದಿನಗಳಲ್ಲಿ ನಿಂತು ಆ ಮಹಾಕಾವ್ಯವನ್ನು ಕನ್ನಡದಲ್ಲಿ ಅವರು ಬರೆದರು ಎಂಬುದಂತೂ ಸತ್ಯವೇ ಸರಿ. ನಾವೆಲ್ಲಾ ಬರೆಯಬೇಕು ಎಂದುಕೊಳ್ಳುತ್ತೇವೆ, ಅಂದುಕೊಂಡಿದ್ದನ್ನೆಲ್ಲಾ ಬರೆಯಲು ಪದಪುಂಜಗಳ ಕೊರತೆ ಕೆಲವರಿಗಾದರೆ, ಸಮಯದ ಮಿತಿ ಇನ್ನು ಕೆಲವರಿಗೆ, ಬರೆಯಬೆಕೆನ್ನುವಷ್ಟರಲ್ಲಿ ಮರೆತುಹೋಗುವ ಬವಣೆ ಇನ್ನೂ ಕೆಲವರಿಗೆ! ಆದರೆ ಯಾವುದನ್ನೂ ತಪ್ಪದೇ ನಿರರ್ಗಳವಾಗಿ ಕುಮಾರವ್ಯಾಸ ಭಾರತವನ್ನು ಬರೆದಂತೇ ಕುವೆಂಪು ರಾಮಾಯಣ ಬರೆದರು ಎಂಬುದು ವಿಶೇಷ; ಅದು ಕನ್ನಡಿಗರಿಗೆ ಹೆಮ್ಮೆ.

೨೯ ಡಿಸೆಂಬರ್ ೧೯೦೪ ರಂದು ಇಂದಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹಿರೇಕೊಡಿಗೆ ಎಂಬ ಕುಗ್ರಾಮದಲ್ಲಿ ಕುಪ್ಪಳಿ ವೆಂಕಟಪ್ಪಗೌಡರ ಮಗನಾಗಿ ಜನಿಸಿದ ಈ ಕಿಂದರಿಜೋಗಿ ಕುಣಿಸದ ಹುಡುಗರಿಲ್ಲ!ಬಾಲ್ಯ ಕಳೆದಿದ್ದು ಮಲೆನಾಡ ಸಿರಿದೇವಿ ನೆಲೆನಿಂತ ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ.

ಕುವೆಂಪು ಅವರ ಕುಪ್ಪಳಿ ಮನೆ

ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ದನಿಯು ದನ ಕಾಯುವನ ಕೊಳಲೊಡನೆ ಬರಲಿ

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ......

ಎಂತಹ ಸಹಜ ಭಾವೋನ್ಮಾದ ನೋಡಿ! ಜಮೀನ್ದಾರರಾದ ತಂದೆ ಮಗನ ಉತ್ತಮ ವಿದ್ಯಾಭ್ಯಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಶಿಕ್ಷಕರನ್ನು ಕರೆಸಿಕೊಂಡು ಮನೆಯಲ್ಲೇ ಪ್ರಾಥಮಿಕ ಓದು-ಬರಹ ಕಲಿಯುವಂತೇ ಅನುಕೂಲ ಕಲ್ಪಿಸಿದರು; ಬಹುಶಃ ಸುಸಂಕೃತ ದಕ್ಷಿಣ ಕನ್ನಡದ ಸುಶಿಕ್ಷಿತ ಉಪಾಧ್ಯಾಯ ಪಾಠ ಹೇಳದಿದ್ದರೆ ನಮಗೆ ಕುವೆಂಪು ಪ್ರಸಿದ್ಧ ’ಕುವೆಂಪು’ವಾಗಿ ಸಿಗುತ್ತಿದ್ದರೋ ಇಲ್ಲವೋ. ಅಡಿಪಾಯಕ್ಕೆ ಬಳಸಿದ ವಸ್ತುಗಳು ವಜ್ರಾದಪಿ ಕಠಿಣವಾಗಿದ್ದರೆ ಕಟ್ಟಡ ಸಹ ಚೆನ್ನಾಗಿರುವುದಂತೆ, ಹಾಗೇನೇ ಇಲ್ಲೂ ಕುವೆಂಪು ಅವರ ಪ್ರಾಥಮಿಕ ಶಾಲೆ ಮನೆಯಲ್ಲೇ ಸುಲಲಿತವಾಗಿ ನಡೆಯಿತು. ನಂತರ ತೀರ್ಥಹಳ್ಳಿಯಲ್ಲಿದ್ದ ಆಂಗ್ಲೋ ವರ್ನೇಕ್ಯೂಲರ್ ಶಾಲೆಗೆ ಮಧ್ಯಮ ತರಗತಿಗಳ ಓದಿಗಾಗಿ ಸೇರಿದರು. ೧೨ ನೇ ಎಳೆಯ ವಯಸ್ಸಿನಲ್ಲಿ ಇದ್ದಾಗ ತಂದೆ ವೆಂಕಟಪ್ಪ ಗೌಡ ಅನಾರೋಗ್ಯದಿಂದ ಮಡಿದರು. ಪ್ರೌಢಶಾಲೆಗಾಗಿ ಮೈಸೂರಿನ ವೆಸ್ಲಿಯನ್ ಹೈ ಸ್ಕೊಲ್ ಸೇರಿದ ಕುವೆಂಪು ಪದವಿಗಾಗಿ ತೆರಳಿದ್ದು ಮಹಾರಾಜಾ ಕಾಲೇಜಿಗೆ. ೧೯೨೯ರಲ್ಲಿ ಕನ್ನಡ ಪ್ರಾಮುಖ್ಯವಾಗುಳ್ಳ ಪದವಿಯನ್ನು ಪಡೆದರು. ಕಾಲೇಜು ವ್ಯಾಸಂಗದ ವೇಳೆ ಟಿ.ಎಸ್.ವೆಂಕಣ್ಣಯ್ಯ ಮತ್ತು ಬಿ.ಎಂ.ಶ್ರೀಕಂಠಯ್ಯರಂತಹ ಘಟಾನುಘಟಿಗಳ ಕಲಿಸುವಿಕೆ ಮತ್ತು ಪ್ರಭಾವ ಕುವೆಂಪುವಿನಮೇಲಾಯಿತು ಎಂಬುದನ್ನು ಮರೆಯುವಂತಿಲ್ಲ. ೧೯೩೭ ರಲ್ಲಿ ಹೇಮಾವತಿ ಎಂಬ ಕನ್ಯೆಯನ್ನು ಮದುವೆಯಾದರು. ಎರಡು ಹೆಣ್ಣು-ಎರಡು ಗಂಡು ಹೀಗೇ ನಾಕು ಮಕ್ಕಳ ತಂದೆಯ ತುಂಬು ಸಂಸಾರ ನಡೆಸಿದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚಂದ್ರ, ಇಂದುಕಲಾ ಮತ್ತು ತಾರಿಣಿ ಇವು ಆ ಮಕ್ಕಳ ಹೆಸರುಗಳು. ತಾರಿಣಿಯನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಚಿದಾನಂದಗೌಡರಿಗೆ ಮದುವೆಮಾಡಲಾಗಿತ್ತು.

ಹೊಸದಾಗಿ ಕೊಂಡ ಕಾರು ಮನೆಯೆದುರು ಬಂದು ನಿಂತಾಗ " ಚಕ್ರಚರಣಕೆ ಸ್ವಾಗತ" ಎಂದಿದ್ದ ಭಾವಜೀವಿ ಮೈಸೂರಿನ ತಮ್ಮ ಮನೆಗೆ ’ಉದಯರವಿ’ ಎಂದು ಹೆಸರಿಸಿದ್ದರು. ನೂರಾರು ಹೊಸ ಶಬ್ದಗಳನ್ನು ಕನ್ನಡಕ್ಕೆ ಜೋಡಿಸಿದ್ದಲ್ಲದೇ ತನ್ನದೇ ಆದ ವಿಚಾರಲಹರಿಯಲ್ಲಿ ಕನ್ನಡ ಕಾವ್ಯ-ಮಿಮಾಂಸೆಯಲ್ಲಿ ವಿಹರಿಸುತ್ತಾ ಹಲವು ಹತ್ತು ಉಪಯುಕ್ತ ಪದಗಳನ್ನು ನಿಗದಿತವಾಗಿ, ಸರ್ವಸಮ್ಮತ ಬಳಕೆಗೆ ಅರ್ಹವಾಗಿ, ದಾರ್ಶನಿಕ ಆದರ್ಶಗಳಿಂದ ಕೂಡಿದ್ದಾಗಿ ಕಂಡು ಕನ್ನಡದಲ್ಲಿ ಅವುಗಳ ಬಳಕೆಗೆ ಬೇಕಾದ ಪರಿಕಲ್ಪನೆ ತಂದರು. ಈ ಕಾರಣದಿಂದಲೇ ಅನೇಕ ಜನ ಹೊಸದಾಗಿ ಜನಿಸಿದ ತಮ್ಮ ಮಕ್ಕಳಿಗೆ ಹೆಸರು ಸೂಚಿಸುವಂತೇ ಕುವೆಂಪು ಅವರನ್ನು ಕಾಣಲು ಹೋಗುತ್ತಿದ್ದರಂತೆ !

'ಉದಯರವಿ' -ಮೈಸೂರು ಮನೆ

೧೯೨೯ರಲ್ಲಿ ಪದವಿ ಮುಗಿದ ತಕ್ಷಣಕ್ಕೇ ಅಧ್ಯಾಪಕ ವೃತ್ತಿ ಅವರಿಗೆ ಅದೇ ಕಾಲೇಜಿನಲ್ಲಿ ದಕ್ಕಿತು! ನಂತರ ೧೯೩೬ರಲ್ಲಿ ಸಹಾಯಕ ಅಧ್ಯಾಪಕರಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಮತ್ತೆ ೧೯೪೬ರಲ್ಲಿ ಮರಳಿ ಮಹಾರಾಜಾ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿದರು. ೧೯೫೫ ರಲ್ಲಿ ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾದರು. ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಅಧಿಕಾರ್ ಸ್ವೀಕರಿಸಿ ೧೯೬೦ರ ಅಂದರೆ ನಿವೃತ್ತಿ ವಯಸ್ಸಿನ ವರೆಗೂ ಅದನ್ನು ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಲಿತವರಲ್ಲಿ ಈ ಸ್ಥಾನಕ್ಕೆ ಏರಿದ ಮೊದಲಿಗರಾದರು ಕುವೆಂಪು. ಯಾವುದೋ ರಸನಿಮಿಷದಲ್ಲಿ ಬರೆಯಲು ಆರಂಭಿಸಿದ್ದು ’ಬಿಗಿನರ್ ಮ್ಯೂಸ್’ ಎಂಬ ಆಂಗ್ಲ ಕವನ ಸಂಕಲನ! ಅಚಾನಕ್ಕಾಗಿ ಅವರ ದೃಷ್ಟಿ ಕನ್ನಡದತ್ತ ಹೊರಳಿತು; ನಂತರ ಅವರಲ್ಲಿ ಕನ್ನಡವೇ ಎಲ್ಲದಕ್ಕೂ ಆದ್ಯತೆ ಪಡೆಯಿತು. ಕನ್ನಡಕ್ಕೆ ಅಷ್ಟಾಗಿ ಆದ್ಯತೆ ಇರದ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ’ಕನ್ನಡ ಅಧ್ಯಯನ ಸಂಸ್ಥೆ’ಯನ್ನು ಕಟ್ಟಿದರು. ಕನ್ನಡ ಮಾಧ್ಯಮದಲ್ಲಿ ಓದುವವರಿಗೆ ಹಲವು ಅನುಕೂಲ ಕಲ್ಪಿಸುವಲ್ಲಿ ಕುವೆಂಪು ಬಹಳ ಪ್ರಯತ್ನ ನಡೆಸಿದರು. ಜಿ. ಹನುಮಂತರಾವ್ ಹಿಂದೆ ನಡೆಸಿದ್ದ :ಜನಸಾಮಾನ್ಯನಿಗೆ ಸಿಗಬೇಕಾದ ಜ್ಞಾನಕ್ಕಾಗಿ ಆ ಮಟ್ಟದ ಪುಸ್ತಕಗಳನ್ನು ಹೊರತರುವ ಕಾಯಕದಲ್ಲಿ ಕುವೆಂಪು ಯಶಸ್ವಿಯಾದರು. ತನ್ನ ನಡೆ-ನುಡಿ ಜೀವನಗತಿಗಳಲ್ಲಿ ಜಾತೀಯತೆಯನ್ನು ಮೀರಿನಿಂತ ಕುವೆಂಪು ೧೯೪೬ರಲ್ಲಿ ’ಶೂದ್ರ ತಪಸ್ವಿ’ ಎಂಬ ಕೃತಿಯನ್ನು ಬರೆದು ಶೂದ್ರರು ಜ್ಞಾನವನ್ನು ಪಡೆಯಲು ಅರ್ಹರಲ್ಲ ಎಂಬುದನ್ನು ಅಲ್ಲಗಳೆದರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯ ವಾಕ್ಯವನ್ನು ಗುನುಗುತ್ತಿದ್ದ ಅವರು ಬರೆದ ರಾಮಾಯಣ ದರ್ಶನದಲ್ಲಿ ರಾಮ ಸೀತೆಯೊಂದಿಗೆ ತಾನೂ ಬೆಂಕಿಗೆ ಜಿಗಿದು ತನ್ನ ಸತ್ವಪರೀಕ್ಷೆಮಾಡಿಕೊಳ್ಳುತ್ತಾನೆ! ಬೆಂಗಳೂರು ವಿಶ್ವವಿದ್ಯಾನಿಲಯದ ೧೯೭೪ ರ ಪದವೀಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಕುವೆಂಪು ಅವರ ಭಾಷಣ ’ವಿಚಾರಕ್ರಾಂತಿಗೆ ಆಹ್ಬಾನ’ ಇಂದಿಗೂ ಪ್ರಸ್ತುತವಾಗಿದೆ. ೧೯೮೭ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ ಶಿವಮೊಗ್ಗೆಯಲ್ಲಿ ಜ್ಞಾನ ಸಹ್ಯಾದ್ರಿಯ ಮಡಿಲಲ್ಲಿ ಕುವೆಂಪು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು.

ಕೃತಿಗಳು :
___________

ಮಹಾಕಾವ್ಯ:

ಶ್ರೀ ರಾಮಾಯಣ ದರ್ಶನಂ ಭಾಗ-೧ [೧೯೪೯] ಮತ್ತು ಭಾಗ-೨ [೧೯೫೭]


ಕವನ ಸಂಕಲನಗಳು:

ಕೊಳಲು (೧೯೩೦)
ಪಾಂಚಜನ್ಯ (೧೯೩೬)
ನವಿಲು (೧೯೩೭)
ಕಿಂದರಿಜೊಗಿ ಮತ್ತು ಇತರ ಕವನಗಳು (೧೯೩೮)
ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ (೧೯೪೪)
ಶೂದ್ರ ತಪಸ್ವಿ (೧೯೪೬)
ಕಾವ್ಯ ವಿಹಾರ (೧೯೪೬)
ಕಿಂಕಿಣಿ (೧೯೪೬)
ಅಗ್ನಿಹಂಸ (೧೯೪೬)
ಪ್ರೇಮ ಕಾಶ್ಮೀರ (೧೯೪೬)
ಚಂದ್ರಮಂಚಕೆ ಬಾ ಚಕೋರಿ (೧೯೫೪)
ಇಕ್ಷುಗಂಗೋತ್ರಿ (೧೯೫೭)
ಕಬ್ಬಿಗನ ಕೈಬುತ್ತಿ
ಪಕ್ಷಿಕಾಶಿ
ಜೇನಾಗುವಾ
ಕುಟಿಚಕ
ಕಾದಿರದಕೆ
ಕಥನ ಕವನಗಳು

ರೂಪಕಗಳು :

ಬಿರುಗಾಳಿ (೧೯೩೦)
ಮಹರಾತ್ರಿ (೧೯೩೧)
ಸ್ಮಶಾನ ಕುರುಕ್ಷೇತ್ರಮ್ (೧೯೩೧)
ಜಲಗಾರ (೧೯೩೧)
ರಕ್ತಾಕ್ಷಿ(೧೯೩೨)
ಶೂದ್ರ ತಪಸ್ವಿ (೧೯೪೪)
ಬೆರಳ್ಗೆ ಕೊರಳ್ (೧೯೪೭)
ಯಮನ ಸೋಲು
ಚಂದ್ರಹಾಸ
ಬಲಿದಾನ

ಆತ್ಮಚರಿತ್ರೆ :

ನೆನಪಿನ ದೋಣಿಯಲಿ (೧೯೮೦)


ಕಥಾಸಂಕಲನಗಳು :

ಮಲೆನಾಡಿನ ಚಿತ್ರಗಳು (೧೯೩೩)
ಸನ್ಯಾಸಿ ಮತ್ತು ಇತರೆ ಕತೆಗಳು (೧೯೩೭)
ನನ್ನ ದೇವರು ಮತ್ತು ಇತರ ಕತೆಗಳು (೧೯೪೦)

ಕುವೆಂಪು ಸ್ಮಾರಕ

ಸಾಹಿತ್ಯ ವಿಮರ್ಶೆ :

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (೧೯೪೪)
ಕಾವ್ಯವಿಹಾರ (೧೯೪೬)
ತಪೋನಂದನ (೧೯೫೧)
ವಿಭೂತಿ ಪೂಜೆ (೧೯೫೩)
ದ್ರೌಪದಿಯ ಶ್ರೀಮುಡಿ (೧೯೬೦)
ವಿಚಾರಕ್ರಾಂತಿಗೆ ಆಹ್ವಾನ (೧೯೭೬)
ಸಾಹಿತ್ಯಪ್ರಾಚರ

ಜೀವನಚರಿತ್ರೆ :

ಸ್ವಾಮಿ ವಿವೇಕಾನಂದ(೧೯೨೬)
ಶ್ರೀ ರಾಮಕೃಷ್ಣ ಪರಮಹಂಸ(೧೯೩೪)
ಗುರುವಿನೊಡನೆ ದೇವರೆಡೆಗೆ

ಮಕ್ಕಳ ಕಥೆಗಳು :

ಬೊಮ್ಮನಹಳ್ಳಿಯ ಕಿಂದರಿಜೋಗಿ(೧೯೩೬)
ಮರಿ ವಿಜ್ಞಾನಿ(೧೯೪೭)
ಮೇಘಾಪುರ(೧೯೪೭)
ನನ್ನ ಮನೆ(೧೯೪೭)
ನನ್ನ ಗೋಪಾಲ
ಅಮಲನ ಕಥೆ

ಸಿನಿಮಾಕ್ಕೆ ಅಳವಡಿಸಿದ ಕಾದಂಬರಿ :

ಕಾನೂರು ಸುಬ್ಬಮ್ಮ ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು

ಪ್ರಶಸ್ತಿಗಳು :

ಜ್ಞಾನಪೀಠ ಪ್ರಶಸ್ತಿ - ೧೯೬೭ [೪]
ಪದ್ಮ ಭೂಷಣ - ೧೯೫೮[೫]
ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೫೫[೬]
ರಾಷ್ಟ್ರಕವಿ - ೧೯೬೪[೬]
ಪಂಪ ಪ್ರಶಸ್ತಿ - ೧೯೮೭[೬]
ಪದ್ಮ ವಿಭೂಉಷಣ - ೧೯೮೮[೫]
ಕರ್ನಾಟಕ ರತ್ನ- ೧೯೯೨[೬]

ಕುವೆಂಪು ಅವರ ಸಹಿ

ಹೀಗೇ ಅನೇಕ ಕೃತಿಗಳು ಒಂದೊಂದೂ ಜನಮನಗೆಲ್ಲುವಲ್ಲಿ ದಿನೇ ದಿನೇ ದಾಪುಗಾಲು ಹಾಕಿದವು. ಕುವೆಂಪು ನಮ್ಮೊಡನಿಲ್ಲ ೧೧ ನವೆಂಬರ್ ೧೯೯೪ ರಂದು ಅವರು ಇಹಲೋಕ ತೊರೆದರು ಎಂದರೂ ನಂಬಲು ಸಾಧ್ಯವಾಗದಷ್ಟು ಆಪ್ತವಾಗಿ ಓದುಗನ ಹೃದಯಮಂಚವನ್ನೇರಿ ವಿಹರಿಸತೊಡಗಿದ ಬರಹಗಳನ್ನು ಬಾಗಿಲುಹಾಕಿ ಹೊರದ್ದಬ್ಬುವ ದಾರ್ಷ್ಟ್ಯವಾಗಲೀ ಅಗತ್ಯವಾಗಲೀ ಯಾರಲ್ಲೂ ಇರಲಿಲ್ಲ; ಯಾಕೆಂದರೆ ಅವು ನಮ್ಮದೇ ಜೀವನದ ಭಾಗಗಳನ್ನು ಘಳಿಗೆಗಳನ್ನು ಹೋಲುತ್ತಿದ್ದವು! ಮಹಾತಪಸ್ವಿಯೊಬ್ಬ ತನ್ನ ದೇಹತ್ಯಾಗಮಾಡಿದ ಮಹಾಸಮಾಧಿಯ ಸ್ಥಳದಲ್ಲಿ ಯಾವುದೋ ಅವ್ಯಕ್ತ ಪ್ರಭೆ ಅವಿತು ಎಲ್ಲರನ್ನೂ ಪ್ರಲೋಭಿಸುವಂತೇ ಕುಪ್ಪಳಿಯ ಕವಿಯ ಮೂಲ ಮನೆ, ಅಲ್ಲಿನ ಜೀವನ ವಿಧಾನ, ಹಿಂದೊಮ್ಮೆ ಅಲ್ಲಿ ವಾಸವಿದ್ದ ಜನ ಬಳಸಿದ ವಸ್ತುಗಳು, ಕುವೆಂಪು ಬಳಸಿದ ವಸ್ತುಗಳು, ಬರೆಯಲು ಕೂರುತ್ತಿದ್ದ ಜಾಗ, ಆ ಕಾಲದ ಬಾಣಂತೀ ಕೋಣೆ, ಮೀನು ಹುರಿಯುವ ಕಾವಲಿ ಒಂದೇ ಎರಡೇ ಹಲವು ನೆನಪಿನ ಕುರುಹುಗಳು ಅಲ್ಲಿವೆ; ಕರೆಯುತ್ತವೆ. ಮಳೆಗಾಲದಲ್ಲಿ ನೆನೆದು ಬಂದು ಕಂಬಳಿ ಒಣಗಿಸಿ ಜೋರಾಗಿ ಉರಿವ ಬಚ್ಚಲ ಒಲೆಯಲ್ಲಿ ಚಳಿಗೆ ಮೈಕಾಸಿ, ಬಿಸಿ ಬಿಸಿ ನೀರು ಸ್ನಾನಮಾಡಿ, ನಾಮದ ಪೆಟ್ಟಿಗೆ ತೆರೆದು ನಾಮ ಹಚ್ಚಿಕೊಳ್ಳುತ್ತಿದ್ದ ’ಕಥೆಗಾರ ಮಂಜಣ್ಣ’ಮಾತ್ರ ಅಲ್ಲಿಲ್ಲ, ಆತನೂ ಕುವೆಂಪು ಅವರಿಗಿಂತ ಮೊದಲೇ ಕಾಲವಾಗಿರಬೇಕು; ಆದರೂ ಅತ ಕುವೆಂಪು ಅವರೊಟ್ಟಿಗೇ ಬದುಕಿದ್ದಾನೆ-ಅವರ ಕಥೆಗಳಲ್ಲಿ, ಕವನ-ಸಾಹಿತ್ಯಗಳಲ್ಲಿ, ಕುವೆಂಪುವೆಂಬ ಆ ಮಹಾನ್ ಚೇತನಕ್ಕೆ ನಿಮ್ಮೆಲ್ಲರೊಟ್ಟಿಗೆ ನನ್ನದೊಂದು ಸಣ್ಣ ನಮಸ್ಕಾರ.

Monday, December 26, 2011

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ಚಿತ್ರ ಕೃಪೆ : ಮಂಜುನಾಥ ಹೆಗಡೆ, ಸಾಯೀಮನೆ.

ಸೀತಾರಾಮ್ ಜೈಜೈರಾಮ್ ಭಜರೇ ಮನ ...!

ದಿನ ಪೂರ್ತಿ ಭಜನೆಗಳ ಮಹಾಪೂರವೇ ಹರಿದರೆ ಕುಳಿತ ದೇವರಿಗೆ ಎಷ್ಟು ಸಂತಸವಾಗಬಹುದು! ಇಂಥಾ ಭಜನೆಗಳ ಮಹಾಪೂರವನ್ನೇ ಭಜನೆ ಪ್ರಹರ ಎಂದು ನಮ್ಮಲ್ಲಿ ಕರೆಯುತ್ತಾರೆ. ಅಪರೂಪಕ್ಕೊಮ್ಮೆ ಈ ಸುಸಂಧಿ ನನಗೊದಗಿತ್ತು! ನನ್ನ ಬಾಲ್ಯದ ದಿನಗಳು, ಚಳಿಯಲ್ಲೂ ಗಡಗಡ ಗುಡುತ್ತಾ ಹರಕಲು ಚಾಪೆಯ ಮೇಲೆ ಕುಳಿತು ಕೈಲಿ ತಾಳ ಹಿಡಿದು ಓರಗೆಯ ಒಂದಿಬ್ಬರು ಬಾಲಕರು ಮತ್ತು ಮಿಕ್ಕುಳಿದ ಹಿರಿಯರೊಡನೆ ನಾನು ಊರ ದೇವಸ್ಥಾನಗಳ ಭಜನೆಪ್ರಹರಗಳಲ್ಲಿ ತಲ್ಲೀನನಾಗುತ್ತಿದ್ದುದು ನೆನಪಿಗೆ ಬಂತು; ಜೊತೆಗೆ ಕೆಲವು ಸ್ನೇಹಿತರು ಕೂಡಾ ಸಿಕ್ಕಿದ್ದು ಸಂತೋಷವನ್ನು ದ್ವಿಗುಣಗೊಳಿಸಿತ್ತು. ಅನೇಕ ಹಿರಿಯ ಜೀವಗಳು ಇನ್ನೂ ಭಜನೆಯಲ್ಲಿ ಆಸ್ಥೆ ವಹಿಸಿದ್ದು ಬಹಳ ಹಿಡಿಸಿತು. ಹಳೇಕಾಲದ ಭಜನೆಗಳು, ಆದಿತಾಳ-ಜಂಪೆತಾಳ-ತ್ರಿತಾಳ-ಏಕತಾಳ ಇತ್ಯಾದಿ ಹಲವು ತಾಳಗಳು, ಸಾಥ್ ಕೊಡುವ ಚಿಕ್ಕ ಭಜನೆ ಡೋಲು, ಹಾರ್ಮೋನಿಯಂ, ತಬಲಾ ಇತ್ಯಾದಿ ಕೆಲವು ಮಿತ ವಾದ್ಯ ಪರಿಕರಗಳಿದ್ದವು. ಪರವೂರ ಕೆಲವು ಭಜನಾಸಕ್ತರು ತಮ್ಮ ಕಂಠಸಿರಿಯನ್ನು ತೋರಿಸಿ ಗಮನ ಸೆಳೆಯಲು ಹತ್ತಾರು ಕಿಲೋಮೀಟರು ಕ್ರಮಿಸಿ ಬಂದಿದ್ದರು.

ಊರಿಗೆ ಹೋದದ್ದು ನಮ್ಮ ಕೆಲವು ವೈಯ್ಯಕ್ತಿಕ ಕಾರ್ಯಕ್ರಮಗಳಿಗಾದರೆ ಅಲ್ಲಿಗೆ ಹೋದಾಗ ತಿಳಿದದ್ದು--ಕಾರ್ತೀಕ ಅಮಾವಾಸ್ಯೆಗೆ ಅಲ್ಲಿನ ಜನರಿಗೆ ಸೂತಕವಿದ್ದುದರಿಂದ ಈ ಸರ್ತಿಯ ಭಜನೆ ಪ್ರಹರನ್ನು ಈ ಮಾರ್ಗಶೀರ್ಷ ಅಮಾವಾಸ್ಯೆಗೆ ನಡೆಸುತ್ತಿದ್ದಾರೆಂದು. ’ಸಿಕ್ತಲೇ ಮಗನೇ ಚಾನ್ಸು’ ಎಂದುಕೊಂಡವನು ನೇರವಾಗಿ ದೌಡಾಯಿಸಿದ್ದೇ ದೇವಸ್ಥಾನಕ್ಕೆ! ಬೆಳಿಗ್ಗೆ ೧೦ಕ್ಕೆ ಆರಂಭವಾದ ಭಜನೆ ಮಾರನೇದಿನ ಬೆಳಿಗ್ಗೆ ೧೦ಕ್ಕೆ ಓಕುಳಿಯಾಗುತ್ತದೆ, ಅಲ್ಲಿಗೆ ತಿಂಗಳದಿನ ಪ್ರತೀ ಸಂಜೆ ನಡೆಸುವ ಭಜನೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ. ಮುಕ್ತಾಯದ ಮಂಗಳದಿನದಂದು ದೇವರಿಗೆ ವಿಶೇಷ ಅಭಿಷೇಕ, ಪೊಜೆ, ಉಪಚಾರ ಮತ್ತು ಮಹಾಮಂಗಳಾರತಿ, ಸೇರಿದ ಭಕ್ತರಿಗೆ ಊಟ. ಇವು ಸದಾ ನಡೆದೇ ಇವೆ. ಸೇವಾ ಸಮಿತಿಯ ಮಂದಿ ವರ್ಗಿಣಿ ಹಾಕಿಕೊಂಡು ನಡೆಸುವ ಕಾರ್ಯಕ್ರಮಗಳಲ್ಲಿ ಹೆಚ್ಚುಳಿದ ಸಾಮಾನುಗಳನ್ನು ಆ ರಾತ್ರಿ ಹರಾಜಿನ ಮೂಲಕ ವಿಲೇವಾರಿ ಮಾಡಿ ಬಂದ ಹಣವನ್ನು ದೇವರ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತಾರೆ.ದೇವರಿಗೇ ಬೊಕ್ಕಸವೇ ಎಂದು ಕೇಳಬೇಡಿ, ಸ್ಥಾನಿಕವಾಗಿ ದೇವರು ತನ್ನ ಆಸ್ಥಾನದಲ್ಲಿ ನಡೆಸುವ ಎಲ್ಲಾ ಚಡಂಗಗಳಿಗೂ ಖರ್ಚಿಗೆ ಬೇಡವೇ ಮತ್ತೆ?

ಸದಾಶಿವ, ಗಜಾನನ ಇತ್ಯಾದಿ ಕೆಲವು ಸ್ನೇಹಿತರೊಂದಿಗೆ ಮಾತುಕತೆ ರಸವತ್ತಾಗಿತ್ತು. ಅದೇ ನಾವೆಲ್ಲಾ ಒಂದೆಲ್ಲಾ ಒಂದು ಕಾಲದಲ್ಲಿ ಈ ದೇವಸ್ಥಾನಗಳಲ್ಲಿ ಭಜನೆ ಪ್ರಹರದ ರಾತ್ರಿ ಚಳಿಕಾಯಿಸಲು ದೇವಸ್ಥಾನದ ಮಗ್ಗುಲ ತುಸುದೂರದ ಖಾಲೀ ಜಾಗದಲ್ಲಿ ಹೊಡಚ್ಲು[ಕ್ಯಾಂಫೈರ್]ಹಾಕಿಕೊಳ್ಳುವುದಿತ್ತು. ಅಕ್ಕಪಕ್ಕ ಗಿಡಮರಗಳಿಂದ ಬಿದ್ದಿರುವ ಕಸ-ಕಡ್ಡಿಗಳನ್ನೂ ಯಾರೋ ಎಸೆದ ಒಂದಷ್ಟು ರದ್ದೀ ಕಾಗದಗಳನ್ನೂ ಯಾವುದೋ ಕೆಲಸಕ್ಕೆ ಅಂತ ತಂದು ಬಳಕೆಗೆ ಜಾಸ್ತಿ ಎನಿಸಿ ಬಿಸಾಕಿದ ಹಗರದಬ್ಬೆಯ ತುಂಡುಗಳನ್ನೂ ಒತ್ತಟ್ಟಿಗೆ ಒಟ್ಟಿ ಕಡ್ಡಿಗೀರಿ ಉರಿಯುವ ಬೆಂಕಿಯ ಸುತ್ತ ಕುಳಿತು ಚಳಿಹೋಯ್ತೆಂದುಕೊಳ್ಳುವುದು ನಮಗೆ ಬಲು ಖುಷಿಕೊಡುತ್ತಿತ್ತು. [ಇಂದು ಅಂತಹ ಮಕ್ಕಳೂ ಇಲ್ಲ, ಮಕ್ಕಳಲ್ಲಿ ಆ ಉತ್ಸಾಹವೂ ಇಲ್ಲ!]ಅದೇ ಮಕ್ಕಳು ನಾವಿಂದು ಒಬ್ಬ ಬಿ.ಇ.ಓ ಆದರೆ ಇನ್ನೊಬ್ಬ ಡಾಕ್ಟರೇಟ್ ಪಡೆದು ಪ್ರಾಂಶುಪಾಲನಾಗಿದ್ದಾನೆ, ನಾನು ಹೀಗಿದ್ದೇನೆ ನಿಮ್ಮೊಡನೆ!--ಹೇಗಿದೆ ಜೀವನ ವ್ಯಾಪಾರ ? ಮಜವೆನಿಸುವುದಿಲ್ಲವೇ?

ಒಂದೆಡೆ ಸೇರಿದ್ದ ನಮ್ಮಲ್ಲಿ ಹಲವು ಮಾತುಕತೆಗಳಾದವು. ಬಾಲ್ಯದ ಲಹರಿಯಿಂದ ಹಿಡಿದು ಇಂದಿನ ಗಡಸು ಜೀವನದ ಹಲವು ಮಗ್ಗಲುಗಳು ಮಾತಿನಲ್ಲಿ ಸುಳಿದವು. ಒಮ್ಮೆಯಾದರೂ ಈ ಸರ್ತಿ ಊರಲ್ಲೊಂದು ಸಾಂಸ್ಕೃತಿಕ ಹಬ್ಬ ಮಾಡಬೇಕು. ಅದಕ್ಕೆ ಜಾತಿ-ಧರ್ಮಗಳ ಬಂಧನವಿಲ್ಲ. ನಮ್ಮ ಊರ ಮಹನೀಯರಲ್ಲಿ ಬಣ್ಣದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಗೋಪಾಲ್ ಮಾಸ್ತರರಿದ್ದಾರೆ, ಗದಾಯುದ್ಧದಲ್ಲಿ ಭೀಮನಾಗಿ ಮಿಂಚಿದ ಡಿಯೇಗ್ ಗೊನ್ಸಾಲ್ವಿಸ್ ಇದ್ದಾರೆ, ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದ ಮಾಜೀ ಯುವಕರ ಸಂಘವೇ ಇದೆ! ಉತ್ತಮ ಸಂಗೀತಗಾರರಿದ್ದಾರೆ, ಉತ್ತಮ ವಕೀಲರಿದ್ದಾರೆ,ವಾಗ್ಮಿಗಳಿದ್ದಾರೆ, ವಿದ್ವಾಂಸರಿದ್ದಾರೆ, ನುರಿತ ವೈದ್ಯರಿದ್ದಾರೆ, ದಂತತಜ್ಞರುಗಳಿದ್ದಾರೆ, ಆಯ್.ಎ.ಎಸ್ ಅಧಿಕಾರಿಗಳಿದ್ದಾರೆ, ಯಕ್ಷಗಾನದ ಪ್ರಮುಖ ಪಾತ್ರಧಾರಿಯಾಗಿ ಮೆರೆದವರಿದ್ದಾರೆ, ಭಾಗವತರಿದ್ದಾರೆ, ಚಿತ್ರಕಲೆಯಲ್ಲಿ ಛಾಪು ಒತ್ತಿದವರಿದ್ದಾರೆ, ಜನಪದ ಸಂಗೀತವನ್ನು ತಮ್ಮದೇ ಸುಶ್ರಾವ್ಯ ಕಂಠದಲ್ಲಿ ಹಾಡುವ ಮಂದಿ ಇದ್ದಾರೆ, ರೈತರಿದ್ದಾರೆ, ಶ್ರಮಿಕರಿದ್ದಾರೆ, ಪುರೋಹಿತರಾಗಿ ದೂರದ ಊರುಗಳಿಗೆ ಸಾಗಿಹೋದ ಜನ ಇದ್ದಾರೆ---ಎಂದಮೇಲೆ ನಮ್ಮೂರಲ್ಲಿ ಯಾವರಂಗದಲ್ಲೂ ಕಮ್ಮಿ ಎನಿಸುವ ಕೊರತೆ ತೋರಿಬರುವುದಿಲ್ಲ. ಆದರೆ ವೃತ್ತಿಯನ್ನಾಧರಿಸಿ ಹಲವಾರು ಮಂದಿ ಊರಿನಿಂದ ಬಹುದೂರ ನೆಲೆಸಿದ್ದಾರೆ. ಅವರುಗಳನ್ನೆಲ್ಲಾ ಕರೆದು ಕಲೆಹಾಕಿ ಕೊನೇಪಕ್ಷ ಏಕದಿನ ಕಾರ್ಯಕ್ರಮ ನಡೆಸಬಹುದೇ ಎಂಬಕುರಿತು ನಾವು ನಾವೇ ಮಾತಾಡಿಕೊಂಡೆವು. ಗೆಳೆಯರ ಬಳಗದಲ್ಲಿ ಅನೇಕ ಜನ ಸಾಹಿತ್ಯಾಸಕ್ತರೂ ಬರಹಗಾರರೂ ಇರುವುದರಿಂದ ಈ ಕಾರ್ಯಕ್ರಮಕ್ಕೂ ಮುಂಚೆ ಬರಹಗಳಲ್ಲಿ ಕೆಲವನ್ನಾದರೂ ಪುಸ್ತಕರೂಪದಲ್ಲಿ ತರುವಂತೇ ಕೇಳಿದ್ದಾರೆ. ಕ್ಷಣವೊಮ್ಮೆ ಮೈ ಜುಂ ಎಂತು, ನಮ್ಮೂರ ಬಗ್ಗೆ ಬಹಳ ಹೆಮ್ಮೆ ಎನಿಸಿತು.

ತುತ್ತಿನ ಚೀಲ ತುಂಬಿಸುವ ಭರದಲ್ಲಿ ಸಾಗುವ ದಾರಿ ಸೇರುವ ಗಮ್ಯ ಮೊದಲು ಅರಿವಿಗೆ ಬಾರದಲ್ಲ ? ಕಾಲೇಜು ವಿದ್ಯೆಯಲ್ಲಿ ಎರಡುವರ್ಷ ಪೂರೈಸಿದ ಮೇಲೆ ಯಾರ್ಯಾರೋ ಎಲ್ಲೆಲ್ಲಿಗೋ ಹೋದೆವು; ಯಾರು ಎಲ್ಲಿ ಎತ್ತ ಎಂಬುದರ ಬಗ್ಗೆ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡವರಲ್ಲ, ಎಲ್ಲರೂ ಅವರವರ ಕೆಲಸಗಳಲ್ಲಿ ಬ್ಯೂಸಿ ಬ್ಯೂಸಿ. ಆದರೂ ಬಾಲ್ಯಕಾಲದ ಚಡ್ಡೀ ದೋಸ್ತಿಯ ಆ ಅನ್ಯಾದೃಶ ಅನುಭವ ಮತ್ತೆ ಮತ್ತೆ ಸ್ನೇಹಿತರು ಸಿಕ್ಕಾಗ ಮನಃಪಟಲದಲ್ಲಿ ಸುಳಿದಾಡುತ್ತದೆ. ಸುಬ್ರಹ್ಮಣ್ಯನೆಂಬ ಗೆಳೆಯನಿಗೂ ನನಗೂ ಯಾವುದೋ ಮಾತಿನ ಜಟಾಪಟಿ ನಡೆದಿದ್ದು, ನನ್ನ ಉಪನಯನಕ್ಕೆ ಆತನಿಗೆ ಬರದಂತೇ ನಾನು ತಾಕೀತು ಮಾಡಿದ್ದು, ಬರದಂತೇ ಮುಳ್ಳಬೇಲೀ ಹಾಕುತ್ತೇನೆಂದು ಹೆದರಿಸಿದ್ದು, ಇನ್ನೂ ಹಸಿಹಸಿ ಎಂಟನೇ ವಯಸ್ಸಿಗೇ ನನಗೆ ಉಪನಯನವಾಗಿದ್ದು ಎಲ್ಲವನ್ನೂ ನೆನೆದು ನನ್ನಷ್ಟಕ್ಕೇ ಒಂಥರಾ ಆನಂದಪಡುತ್ತೇನೆ. ಸುಬ್ರಹ್ಮಣ್ಯ ಸಿಗದೇ ದಶಕಗಳೇ ಸಂದವು. ಆತ ಹೇಗಿದ್ದಾನೋ ಈ ಸರ್ತಿಯೂ ಸಂದರ್ಶಿಸಲಾಗಲಿಲ್ಲ. ಬಡತನದಲ್ಲಿದ್ದ ಅವರ ಮನೆಯ ಹೊರಜಗುಲಿಗೆ ಶಿರವಾಳೆ [ಕಿಟಕಿ ಜಾಲಂದ್ರ]ಇರಲಿಲ್ಲ. ಒಂದೇ ಚಡ್ಡಿ-ಅಂಗಿಯಲ್ಲಿ ಇಡೀವಾರ ಶಾಲೆಯನ್ನು ಮುಗಿಸಬೇಕಾಗಿತ್ತು. ಚಪ್ಪಲಿಯಿಲ್ಲದ ಬರಿಗಾಲಲ್ಲಿ ಆತ ನಡೆದುಬರುತ್ತಿದ್ದ. ಸಣ್ಣಗೆ ಕಿಲಾಡಿಯಾಗಿದ್ದ ಆತ ಶಾಲೆಗೆ ಮಾತ್ರ ಸರಿಯಾಗಿ ಬರುತ್ತಿದ್ದ. ಬಡತನದ ಆ ಮುಖವನ್ನೊಮ್ಮೆ ನೆನೆದು ಕಣ್ಣಾಲಿ ತುಂಬಿಕೊಳ್ಳುತ್ತದೆ.

ವಿಶ್ವನಾಥ ನಮಗಿಂತ ಮೂರ್ನಾಕು ವರ್ಷ ಹಿರಿಯ. ಆತನ ತಂದೆ ೭೫-೭೬ ವರ್ಷದ ರಾಮಣ್ಣ ಮೊನ್ನೆ ಕೂಡಾ ಭಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹಳೆಯ ರಾಗಗಳನ್ನು ಹಾಡಿ ಎಲ್ಲರ ಮನಗಳಲ್ಲೂ ಭಾವತರಂಗಗಳು ಮಾರ್ದನಿಸುವಂತೇ ಮಾಡಿದರು. ಕಳೆದವರ್ಷ ಅಕಾಲ ಜ್ವರದಿಂದ ಬಳಲಿ ವಿಶ್ವನಾಥ ತೀರಿಕೊಂಡಿದ್ದರ ಬಗ್ಗೆ ನಾನು ಬರೆದಿದ್ದೆ. ಜಾಸ್ತಿ ಓದಿರದಿದ್ದರೂ ಎಲ್ಲರಿಗೂ ಸ್ನೇಹಿತನಾಗಿದ್ದ ವಿಶ್ವನಾಥನ ಬಗ್ಗೆ ಹೊಸದಾಗಿ ಮತ್ತೆ ಬರೆಯುವುದಾಗುವುದಿಲ್ಲ. ಈ ಸಲದ ಭಜನೆ ಪ್ರಹರದಲ್ಲಿ ಪಾಪ ವಿಶ್ವನಾಥ ಇರಲಿಲ್ಲ. ಜೀವಿಯ ಜೀವನದಲ್ಲಿ ಯಾವುದು ಘಟಿಸಬೇಕೋ ಅದು ನಡೆಯಲೇ ಬೇಕಾದುದು ವಿಧಿಯನಿಯಮ. ಊರಕಡೆ ಎರಡು ಪ್ರದೇಶಕ್ಕೆ ನಾನು ಭೇಟಿಕೊಟ್ಟಿದ್ದೆ: ಎರಡೂ ಕಡೆಗಳಲ್ಲಿ ಮುದ್ದಾದ ಒಂದೊಂದು ಬೆಕ್ಕಿನ ಮರಿಗಳಿದ್ದವು. ಒಂದರ ತಾಯಿ ಮನೆಯ ಹತ್ತಿರದ ರಾಷ್ಟ್ರೀಯ ರಸ್ತೆ ದಾಟುತ್ತಿರುವಾಗ ವಾಹನಕ್ಕೆ ಸಿಲುಕಿ ಅಸುನೀಗಿದೆಯಂತೆ. ಆಗಿನ್ನೂ ಆ ಮರಿ ಕಣ್ಣನ್ನೇ ತೆರೆದಿರಲಿಲ್ಲವಂತೆ. ಬಾಟಲಿಯಲ್ಲಿ ಹಾಲುಣಿಸಿ ಆ ಮರಿಯನ್ನು ಬೆಳೆಸಿದ್ದಾರೆ-ಈಗ ಅಲ್ಲಿ ಇಲ್ಲಿ ಓಡಾಡುತ್ತಿದೆ. ಇನ್ನೊಂದರ ಅಮ್ಮನಿಗೆ ವಾತವೋ ಏನೋ ಮುದುರಿಕೊಂಡು ಸತ್ತುಹೋಯಿತಂತೆ, ಆ ಮರಿಯೂ ಚಿಕ್ಕದೇ ಇತ್ತು, ಹೊಟ್ಟೆಗೆ ಆಹಾರ ಹುಡುಕಿ ತಿನ್ನುವುದನ್ನು ಕಲಿತಿರದ ಅಮ್ಮನನ್ನೇ ಅವಲಂಬಿಸಿದ ಆ ಮರಿಗಳನ್ನು ಕಂಡಾಗ ’ಅಮ್ಮನ ಪಾತ್ರ’ದ ಋಣ ತೀರಿಸಲಾಗುವುದಿಲ್ಲ ಎಂಬುದು ನೆನಪಿಗೆ ಬಂತು. ಆ ವಿಷಯದಲ್ಲಿ ನನಗೆ ಅಮ್ಮನ ಪ್ರೀತಿಯಲ್ಲಿ ಕಿಂಚಿತ್ತೂ ಕೊರತೆಯಾಗಲಿಲ್ಲ; ಇವತ್ತಿಗೂ ನನಗೆ ಅಮ್ಮನ ಪ್ರೀತಿಯ ಆಸರೆ ಇದೆ.

ಹಳೆಯ ಮನೆಗಳು ಕಸುವು ಕಳೆದುಕೊಂಡು ಅಲ್ಲಲ್ಲಿ ಬಳಸಿದ ಕಟ್ಟಿಗೆಗಳಲ್ಲಿ ಹುಳುಬಿದ್ದು ಅಜಡಾಗಿವೆ. ಹೊಸಮನೆಗಳು ತಾರಸಿಯವು ಇನ್ನೂ ಮೇಲೆದ್ದಿಲ್ಲ. ದಶಕಗಳ ಹಿಂದೆ ಕಾಡು ಸಮೃದ್ಧವಾಗಿತ್ತು, ನಾಟುಗಳು, ಮರಮಟ್ಟುಗಳು ಸಿಗುತ್ತಿದ್ದವು, ಮನೆ ಕಟ್ಟುವುದಿರಲಿ, ದುರಸ್ತಿಯಿರಲಿ ಸಲೀಸಾಗಿ ನಡೆಯಬಹುದಿತ್ತು. ಆದರೆ ಈಗ ದುರಸ್ತಿಯೂ ತೀರಾ ದುಬಾರಿ, ಹೊಸಮನೆಕಟ್ಟಿದರೆ ಹಳೆಯ ಆ ಕಟ್ಟಿಗೆಯ ಅಥವಾ ಹಂಚಿನ ಮನೆಗಳ ಆಪ್ತತೆ ತಾರಸಿ ಮನೆಗಳಲ್ಲಿ ಕಾಣುವುದಿಲ್ಲ! ಕಾಲಗತಿಗೆ ತಕ್ಕಂತೇ ಚಳಿ-ಮಳೆಗಳಲ್ಲಿ ಬೆಚ್ಚಗೂ ಬಿಸಿಲಲ್ಲಿ ತಣ್ಣಗೂ ಇರುತ್ತಿದ್ದ ಹಂಚಿನ ಮನೆಗಳನ್ನು ಮತ್ತೆ ಕಟ್ಟಿದರೆ ಪರೋಕ್ಷವಾಗಿ ಕಾಡು ಕಡಿಯುವ ಕೆಲಸಕ್ಕೆ ನಾವೇ ಪ್ರೇರೇಪಣೆ ನೀಡಿದಂತಾಗುತ್ತದೆಯಲ್ಲವೇ? ಸದ್ಯ ನಮ್ಮನೆಗೆ ಅಂತಹ ತೊಂದರೆ ತೀರಾ ಇಲ್ಲ, ಸಾಕಷ್ಟು ಸರ್ತಿ ಸುಣ್ಣ, ಬಣ್ಣ ಹಚ್ಚಿಸಿಕೊಂಡ ಮನೆಯ ಕಟ್ಟಿಗೆಯಲ್ಲಿ ಇರುವ ಹುಳಗಳು ಅಲ್ಲಲ್ಲೇ ಸತ್ತುಹೋದವೋ ಏನೋ!

ಊರಿಗೆ ಹೋದಾಗೆಲ್ಲಾ ಹತ್ತಾರು ಸಾರಿ ಅಂದುಕೊಳ್ಳುವುದು ನಾವು ಕಲಿತ ಶಾಲೆಕಡೆ ಹೋಗಿ ಬರಬೇಕು ಎಂದು. ಇಂದು ಅಂತಹ ಮಾಸ್ತರಮಂದಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾವು ಹುತುತು ಕಬಡ್ಡಿ ಆಡಿದ ಜಾಗ ಈಗ ಕ್ರಿಕೆಟ್ಟಿಗೆ ಬಳಕೆಯಾಗುತ್ತಿರಬಹುದು. ಮಗ್ಗಿ ಹೇಳಿಕೊಡುತ್ತಾರೋ ಇಲ್ಲವೋ ಎಂಬುದೂ ತಿಳಿದಿಲ್ಲ. ಆಗ ನಮ್ಮಲ್ಲಿದ್ದಿದ್ದು ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯೊಂದೇ! ಅದೂ ನಮ್ಮ ಶಾಲೆಯಲ್ಲಿ ಗಂಡುಮಕ್ಕಳೇ ಒಂದು ಕಾಲಕ್ಕೆ ಜಾಸ್ತಿ ಇದ್ದುದರಿಂದ ’ಕನ್ನಡ ಗಂಡುಮಕ್ಕಳ ಶಾಲೆ’ ಎಂದು ನಾವೂ ಓದಲು ಆರಂಭಿಸುವ ಮುನ್ನ ಅದಕ್ಕೆ ಹೆಸರಿದ್ದಿದ್ದು ತಿಳಿದುಬರುತ್ತದೆ. ಒಂದಾನೊಂದು ದಿನ ನಾವು ಅಂತಹ ಠಸ್ಸೆಯನ್ನೂ ಕಾಗದಪತ್ರಗಳಲ್ಲಿ ಕಂಡಿದ್ದೆವು; ಈಗ ಅದು ಹಾಗಿಲ್ಲ, ಬರೇ ಗಂಡುಮಕ್ಕಳಿರಲಿ ಮಕ್ಕಳ ಸಂಖ್ಯೆಯೇ ಇದೆಯೋ ಇಲ್ಲವೋ ಗೊತ್ತಾಗಿಲ್ಲ! ಊರಲ್ಲಿ ಅಲ್ಲಲ್ಲಿ ಖಾಸಗೀ ಶಾಲೆಗಳು ತಲೆ ಎತ್ತಿವೆ, ಎಲ್ಲರಿಗೂ ಒಳಗೊಳಗೇ ಇಂಗ್ಲೀಷ್ ವ್ಯಾಮೋಹ! ಶಾಲೆಯ ಆ ದಿನಗಳಲ್ಲಿ ನಮಗೆ ಆಡಲು ಅಷ್ಟೊಂದೆಲ್ಲಾ ಆಟದ ಪರಿಕರಗಳಿರಲಿಲ್ಲ. ಇಡೀ ಶಾಲೆಯಲ್ಲಿ ಕಲಿಯುವ ಒಟ್ಟೂ ಸುಮಾರು ೩೫೦-೪೦೦ ಮಕ್ಕಳಿಗೆ ಇದ್ದುದು ಎರಡೇ ಕೇರಂಬೋರ್ಡು, ಹಳೆಯ ಕೆಲವು ಡಂಬೆಲ್ಸು. ನಮ್ಮ ಶಾಲೆಯಲ್ಲಿ ಅಂದು ಯಾವುದೇ ವಾದ್ಯ ಪರಿಕರಗಳಿರಲಿಲ್ಲ. ಕುಡಿಯುವ ನೀರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ವಿದ್ಯುದ್ದೀಪ ಇರಲಿಲ್ಲ. ನಕಾಶೆಗಳು ಸಾಕಷ್ಟು ಇರಲಿಲ್ಲ. ಆದರೂ ಮಕ್ಕಳಲ್ಲಿ ಮಾತ್ರ ಅವುಗಳ ಕೊರತೆ ಕಂಡುಬರಲಿಲ್ಲ. ಇರುವುದನ್ನೇ ಬಳಸಿಕೊಂಡಿದ್ದೆವು. ಒಟ್ಟಾಗಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು.

ಶಾಲೆಯ ಅಂಗಳದಲ್ಲಿ ಸಣ್ಣ ಹೂದೋಟವಿತ್ತು. ಅಲ್ಲಿ ನಿತ್ಯವೂ ಗಿಡಗಳಿಗೆ ಪಾಳಿಯ ಪ್ರಕಾರ ನೀರು ಹಾಕುವುದು[ಚಳಿ ಮತ್ತು ಬೇಸಿಗೆ ಕಾಲಗಳಲ್ಲಿ]ಮತ್ತು ಅವುಗಳ ಲಾಲನೆ ಪಾಲನೆ ಮಕ್ಕಳ ಜವಾಬ್ದಾರಿಯೇ ಆಗಿತ್ತು. ಶಂಖಪುಷ್ಪದ ಬಳ್ಳಿ, ಗಡಿಯಾರ ಸಂಪಿಗೆ ಮುಂತಾದ ಅಪರೂಪದ ಹೂಗಳು ಅರಳಿ ನಿಲ್ಲುತ್ತಿದ್ದವು. ಬಣ್ಣಬಣ್ಣದ ಗಿಡಗಳನ್ನು ನೋಡುತ್ತಾ ಗಾಳಿಗೆ ಅವು ತಲೆಯಾಡಿಸುವಾಗ ನಮಗೂ ಅವುಗಳಿಗೂ ಭಾವಬಂಧನ ಬೆಸುಗೆಯಾಗುತ್ತಿತ್ತು. ಅದರ ಮಗ್ಗುಲಲ್ಲೇ ಮರದ ಧ್ವಜಸ್ತಂಭ ನೆಟ್ಟಿದ್ದರು. ಆಗಾಗ ನಡೆಯುವ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ನಡೆಸಲು ಅದು ಬಳಕೆಯಾಗುತ್ತಿತ್ತು. ಸ್ಥಳೀಯ ಯುವಕ ಸಂಘದ ಸಹಕಾರದೊಂದಿಗೆ ನಾವು ಮಕ್ಕಳೆಲ್ಲಾ ಶ್ರಮದಾನಮಾಡಿ ಅಂಗಳದ ಒಂದು ಪಕ್ಕದಲ್ಲಿ ವೇದಿಕೆಯೊಂದನ್ನು ಕಟ್ಟಿದ್ದೆವು. ವಾರ್ಷಿಕ ಸ್ನೇಹ ಸಮ್ಮೇಲನಕ್ಕೆ ಅದು ಬಳಕೆಯಾಗುತ್ತಿತ್ತು. ಡಿಸೆಂಬರ್, ಜನವರಿ ಹೊತ್ತಿಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತೀರಾ ದೂರವೇನೂ ಅಲ್ಲ. ಹೆಚ್ಚೆಂದರೆ ಗೋಕರ್ಣ, ಮುರ್ಡೇಶ್ವರ, ಬನವಾಸಿ ಈ ಥರದ ಜಾಗಗಳಿಗೆ. ಆದರೂ ಅಲ್ಲಲ್ಲೇ ಅದೂ ಇದೂ ನೋಡುತ್ತಾ ಎರಡು ದಿನಗಳು ಕಳೆದುಹೋಗುತ್ತಿದ್ದವು. ಒಟ್ಟಿಗೇ ಕೂತು ಒಂದೇ ವಾಹನದಲ್ಲಿ ಪ್ರಯಾಣಿಸುವುದು, ’....ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಜಯವಾಗಲಿ/ಜಯವಾಯಿತು’ ಎಂದು ಕೈಬರಹದಲ್ಲಿ ಬರೆದಿದ್ದ ಚೀಟಿಕಟ್ಟುಗಳಿಂದ ಒಂದೊಂದನ್ನೇ ಅಲ್ಲಲ್ಲಿ ಹಾರಿಬಿಡುತ್ತಾ ಸಾಗುವುದು, ದಾರಿಯುದ್ದಕ್ಕೂ ಹಾಡು, ಜೈಕಾರ, ತೆರಳಿದ ಜಾಗಗಳಲ್ಲಿ ಒಟ್ಟಿಗೇ ಊಟ, ತಿಂಡಿ, ವಿಶ್ರಾಂತಿ ಬಹಳ ಮಜವಾಗಿರುತ್ತಿತ್ತು. ನೆನೆಸಿದರೆ ಬಾಲ್ಯ ಮತ್ತೆ ಬರುವುದೇ?

ಯಾವುದೇ ತಾಪತ್ರಯವಿರದ ಆ ದಿನಗಳ ಮಹತ್ವ ಇವತ್ತಿಗೆ ಅರಿವಿಗೆ ಬರುತ್ತದೆ. ಇದ್ದರೂ ಒಂದೇ ಇರದಿದ್ದರೂ ಒಂದೇ ಎಂಬ ಮನೋಭಾವ ಅಂದಿಗೆ ಆಗುತ್ತಿದ್ದುದು ಕಾಲಕಳೆದಮೇಲೆ ಅದುಬೇಕು, ಇದುಬೇಕು ಎಂಬ ಆಸೆಗೆ ಇಳಿದುಬಿಡುತ್ತದೆ! ಹೆತ್ತವರಾಗಿ ಸಹಜವಾಗಿ ನಮ್ಮ ಏಳ್ಗೆಗೆ ಕಾರಣೀಭೂತರಾದ ನಮ್ಮ ಪಾಲಕರು ತಾವು ಪಡೆಯದ ಸೌಲಭ್ಯಗಳನ್ನು ನಮಗಾಗಿ ಕಲ್ಪಿಸಿದ್ದರು. ಮಕ್ಕಳ ಮುಖದ ಗೆಲುವಿನ ನಗುವಿನಲ್ಲಿ ಕಷ್ಟದ ಚಣಗಳನ್ನು ಕಳೆಯಲೆತ್ನಿಸುತ್ತಾ ಓದಿಸಿದ ಅವರಿಗೆ ನಾವೆಷ್ಟೇ ಕೃತಜ್ಞರಾಗಿದ್ದರೂ ಕಮ್ಮಿ ಎನಿಸುತ್ತದೆ. ಜೀವನದ ಭಾಗವಾಗಿ ಕೆಲವು ಕೆಲಸಗಳನ್ನೂ ಮಾಡಿಕೊಳ್ಳುವ ಕಲೆಯನ್ನು ಅವರು ನಮಗೆ ಧಾರೆ ಎರೆದರು. ಕೇವಲ ಪುಸ್ತಕದ ವಿದ್ಯೆ ವಿದ್ಯೆಯಲ್ಲಾ ಜೀವನಕ್ಕೆ ಬೇಕಾದ ಕಾರ್ಯಗಳನ್ನು ನಿಭಾಯಿಸಲು ಕಲಿಯಬೇಕೆಂಬುದೂ ಅವರ ಇಚ್ಛೆಯಾಗಿತ್ತು. ಅದು ಇಂದು ನಮಗೆ ಹೆಜ್ಜೆಹೆಜ್ಜೆಗೆ ಸಹಕಾರಿಯಾಗಿದೆ. ಅಂತಹ ಕಾರ್ಯಗಳಲ್ಲಿ ಸಾಮೂಹಿಕವಾಗಿ ಕಲೆಯುವ ಎಲ್ಲರೊಳಗೊಂದಾಗುವ ಕಲೆ ಕೂಡ ಒಂದು. ಅದೇ ಈ ಭಜನೆ ಕಾರ್ಯಕ್ರಮ. ಭಾವಪೂರಿತವಾಗಿ ಭಜನೆಗಳಲ್ಲಿ ನಾವು ತೊಡಗಿಕೊಂಡಾಗ ನಮ್ಮದೆಲ್ಲವನ್ನೂ ಪರಮಾತ್ಮನ ಪಾದಕ್ಕೆ ಹಾಕಿ ಶರಣಾದಾಗ ಯಾವುದೋ ರಕ್ಷಣಾ ಕವಚ ಸಿಕ್ಕ ಅನುಭವ ನಮಗಾಗುತ್ತದೆ; ಯಾವುದೋ ಅವ್ಯಕ್ತ ಆಸರೆ ನಮ್ಮನ್ನು ಪೊರೆಯುವ ಭರವಸೆ ಇತ್ತಂತಾಗುತ್ತದೆ. ಅಂತಹ ಆ ಆಸರೆ ಪುಟ್ಟ ಕಂದಮ್ಮಗಳ ಅಮ್ಮಂದಿರನ್ನು ಕಸಿದುಕೊಳ್ಳದಿರಲಿ, ಯಾವುದೇ ಜೀವಿಯೂ ಅಮ್ಮನ ಪ್ರೀತಿಯಿಂದ ವಂಚಿತವಾಗದಿರಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ಭಜನೆಯ ಸಾಲೊಂದಿಗೆ ಇದೋ ಲೋಕದ ಹಿತಾರ್ಥ ವಂದಿಸಿಕೊಳ್ಳುತ್ತಿದ್ದೇನೆ :

ಸೀತಾರಾಮ್ ಜೈಜೈರಾಮ್ ಭಜರೇ ಮನ......ಭಜರೇ ಮನ ಭಜ ರಾಮನಾಮ
ಸೀತಾರಾಮ್ ಜೈಜೈರಾಮ್ ಭಜರೇ ಮನ...

Wednesday, December 21, 2011

ನಾ ಮತ್ತೆ ಹೆತ್ತೆ ಕೂಸೊಂದ ಕಾಣಬನ್ನಿ !

ಚಿತ್ರಕೃಪೆ : ಪಿಕ್ಚರ್ಸ್ ಇಂಡಿಯಾ
ನಾ ಮತ್ತೆ ಹೆತ್ತೆ ಕೂಸೊಂದ ಕಾಣಬನ್ನಿ !

[ಆತ್ಮೀಯ ಸ್ನೇಹಿತರೇ, ಕವನ ಹುಟ್ಟುವ ರಸನಿಮಿಷಗಳನ್ನು ಕೂಸಿನ ಹುಟ್ಟಿಗೆ ಹೋಲಿಸಿ ಬರೆದ ಜನಪದ ಶೈಲಿಯ ಈ ಹಾಡಿನೊಂದಿಗೆ ವಾರ ಕಾಲ ನಾನು ನಿಮ್ಮಿಂದ ಬೀಳ್ಕೊಂಡು ಆಮೇಲೆ ಮುಂದಿನ ಮಂಗಳವಾರದಿಂದ ಮತ್ತೆ ಬರೆಯುತ್ತೇನೆ. ಚಳಿಗಾಲದಲ್ಲಿ ನಮ್ಮೂರ ಶಾಲೆಗಳಲ್ಲಿ ವಾರ್ಷಿಕ ಸ್ನೇಹಸಮ್ಮೇಳನ ನಡೆಯುತ್ತಿತ್ತು. ಅದಕ್ಕೆ ಮಕ್ಕಳೆಲ್ಲಾ ಸೇರಿ ಇಂತಹ ಹಾಡುಗಳಿಗೆ ನರ್ತಿಸುತ್ತಿದ್ದುದು ನೆನಪಾಗ್ತಾ ಇದೆ. ಅದೇ ನೆನಪು ನಿಮ್ಮನ್ನೂ ನಿಮ್ಮ ಬಾಲ್ಯದ ಬಾಹ್ಯ ಪ್ರಪಂಚದ ಆಳಕ್ಕೆ ಕರೆದೊಯ್ಯಬಹುದು, ಕಾಲು ಹಾಕಿ ಕೈಯ್ಯ ತಟ್ಟಿ ಇಂಥದ್ದನ್ನು ಅನುಭವಿಸಿದರೇ ಅದರ ಮಜಾ ಬೇರೇಯೇ ಆಗಿರುತ್ತದೆ. ಅಂದುಕೊಳ್ಳುತ್ತೇನೆ ಈ ಹಾಡಿನೊಂದಿಗೆ ನೀವೆಲ್ಲಾ ಮನಸಾ ಆ ಲಹರಿಯನ್ನು ಅನುಭವಿಸುತ್ತೀರಿ ಅಂತ. ನಿಮ್ಮೊಡನೆ ಸದಾ -ವಿ.ಆರ್.ಭಟ್, ನಮಸ್ಕಾರ.]

ನಾ ಮತ್ತೆ ಹೆತ್ತೆ ಕೂಸೊಂದ ಕಾಣಬನ್ನಿ
ಇದರ ಸುತ್ತ ನಿಂತು ಜೋಗುಳವ ಹಾಡಬನ್ನಿ !

ಹಲವು ಹೆತ್ತಿದ್ದೆ ವರುಷಗಳ ದಿನಗಳಲ್ಲಿ
ಗೆಲುವು ಬೆಳೆಬೆಳೆದು ಏರಿದವು ಬಾನಿನಲ್ಲಿ !
ಅಗೋ ಅಲ್ಲೊಂದಿದೆ
ಇಗೋ ಇಲ್ಲೊಂದಿದೆ
ತಗೊಳಿ ಸಂಭ್ರಮದ ಓಲೆಯಿದು ಪ್ರೀತಿಯಿಂದ
ನಿಮ್ಮ ಅಭಿಮಾನ ಬಹುಮಾನ ನಂಗೆ ಅಂದ !

ತಿಂಗಳೊಂಬತ್ತು ಬೇಡದಾ ಕೂಸುಗಳಿವು
ಅಂಗಳಕ್ಕಿಳಿದು ಆಡುವಾ ಕಂದಮ್ಮಗಳಿವು
ಹುಟ್ಟಿದಾಕ್ಷಣದಲ್ಲೇ
ನೆಗೆತಕುಣಿತವದಿಲ್ಲೇ
ಅಹಹ ಎಂತೆಂಥಾ ರಸನಿಮಿಷ ಅವುಗಳಿಂದ
ಬದುಕು ರಂಗಾಯ್ತು ದಿನದಿನಕು ಈ ಖುಷಿಯಿಂದ

ಹೊತ್ತ ಗರ್ಭವೆಲ್ಲ ಕೂಸುಗಳು ಆಗುವುದಿಲ್ಲ !
ಹುಟ್ಟೋಕ್ಕಿಂತ ಮೊದಲೆ ಗರ್ಭಪಾತ ಆಗುತ್ತಲ್ಲ !!
ಒಲವು ಹೆಚ್ಚೇ ಇದ್ರೂ
ಕೆಲವು ಜನಿಸುವುದಿಲ್ಲ
ಹೋಗ್ಲಿ ಅದಕೆಲ್ಲಾ ತಲೆಕೆಡಿಸಿ ಕೂರುವುದಿಲ್ಲ
ಆಗ್ಲಿ ಬೇಕಾದ್ದು ಮತ್ತೆ ಹಡೆದೇ ತೀರುವೆನಲ್ಲ !

ಚಳಿಯ ನಡುಕದಲೂ ಹಡೆಯುವುದು ನಿಲ್ಲುವುದಿಲ್ಲ
ಗಿಳಿಯ ಉಲಿಯಲ್ಲೂ ಹೊಸ ಕೂಸು ಜನಿಸುವುದಲ್ಲ !
ನಾಕು ಮತ್ತೊಂದೈದು
ಹೆಜ್ಜೆ ಹಾಕೀ ಗೆಯ್ದು
ಬಣ್ಣ ಬಣ್ಣದ ಕುಲಾವಿ ಕುಚ್ಚು ಕಟ್ಟುವೆ
ಅಣ್ಣ-ಅಕ್ಕ-ತಮ್ಮ ಎಲ್ಲರನು ತಲ್ಪಿ ತಟ್ಟುವೆ !

ಅಕ್ಕ ನೋಡೂ ಬಾ ನಿಮ್ಮನೆಯ ಚೊಕ್ಕ ಕನ್ನಡ
ಅಕ್ಕಿ ಬೇಳೆ ಕಾಳು ಎಲ್ಲ ಶುದ್ಧ ಬೆರಕೆ ಎನ್ನಡ !
ತತ್ತಾ ತತ್ತೋಂ ತೈಯ್ಯ
ಧಿತಾಂ ಧಿತ್ತೋಂ ತೈಯ್ಯ
ಸಕ್ಕರೆಯ ಪಾಕ ಸೇರ್ಸೀ ಸಿಹಿಯಮಾಡಿದೆ
ಮಕ್ಕಳೊಂದಿಗೇ ನೀವು ಬಂದು ತಿನ್ನಬಾರದೇ ?

Monday, December 19, 2011

|| ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ||

ಅಂತರ್ಜಾಲದ ಕೃಪೆಯಿಂದ ದೊರೆತ ಚಿತ್ರ ಕೇವಲ ಕಲ್ಪನೆಗಾಗಿ


|| ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ||

ವ್ಯಾಸಂ ವಶಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಮೂಕಂ ಕರೋತಿ ವಾಚಾಲಂ ಪಂಗು ಲಂಘಯತೇ ಗಿರಿಮ್|
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||

ಪ್ರಿಯ ಶ್ರೋತೃವೃಂದವೇ, ಅಷ್ಟಾದಶ ಪುರಾಣಗಳನ್ನು ಬರೆದ ಮಹಾಮುನಿಗಳು ಮಿಕ್ಕಿದ್ದನ್ನು ನೀವೇ ಬರೆದುಕೊಳ್ಳಿ ಎಂದು ಜನರಿಗೇ ಬಿಟ್ಟುಬಿಟ್ಟರು. ಆ ಸಮಯದಲ್ಲಿ ಭಯಂಕರವಾಗಿ ತಲೆಕೆರೆಸಿಕೊಂಡ ಸೂತರು ಶೌನಕಾದಿ ಮುನಿಗಳಿಗೆ ಕಲಿಯುಗದ ಬ್ಯಾಂಕಮ್ಮಗಳ ಕುರಿತಾಗಿ ಒಂದು ಮಹಾಪುರಾಣವನ್ನು ಬೋಧಿಸಿದರು. ಪುರಾಣಗಳನ್ನು ಕದ್ದೂಮುಚ್ಚಿ ಕೇಳುವ ಚಟದವರಾದ ತಿಪ್ಪಾ ಭಟ್ಟರು ಇನ್ಯಾರೋ ಅದನ್ನು ಮತ್ಯಾರಿಗೋ ಮತ್ತೆಲ್ಲೋ ಹೇಳುವಾಗ ಆಡ್ಡಗೋಡೆಯ ಸಂದಿಯಲ್ಲಿ ನಿಂತು ಕೇಳಿಸಿಕೊಂಡರು ಎಂಬಲ್ಲಿಗೆ ಬ್ಯಾಂಕಮ್ಮಗಳ ಪುರಾಣ ಆರಂಭವಾದ ಹಾಗೇ.

ತ್ರೇತಾಯುಗದಲ್ಲಿ ವೈಕುಂಠದ ಶ್ರೀಮನ್ನಾರಾಯಣ ಭುವಿಯೆಂಬ ಈ ಭುವಿಯಲ್ಲಿ ಅಯೋಧ್ಯೆಯಲ್ಲಿ ದಶರಥ ಎಂಬಂಥಾ ರಾಜನಿಗೆ ಮಗನಾಗಿ ಜನಿಸಿದ. ಜನಿಸಿದ ಮಗನಿಗೆ ವಶಿಷ್ಠರಾದಿಯಾಗಿ ಋಷಿಗಳು ಸೇರಿ ’ರಾಮ’ ಎಂದು ನಾಮಕರಣಮಾಡಿದರು. ವಿದ್ಯಾಭ್ಯಾಸಕ್ಕಾಗಿ ಗುರು ವಿಶ್ವಾಮಿತ್ರರನ್ನು ಆಶ್ರಯಿಸಿದ ರಾಮ-ಲಕ್ಷ್ಮಣರು ಅಲ್ಲಿ ಹಲವಾರು ಅಸುರರನ್ನು ಕೊಂದರು. ಮಿಥಿಲಾ ನಗರದಲ್ಲಿ ಜನಕರಾಜನ ಕುವರಿಗೆ ಸ್ವಯಂವರವೆಂದರಿತ ವಿಶ್ವಾಮಿತ್ರರ ಅಣತಿಯಂತೇ ರಾಮ ಮಿಥಿಲೆಗೆ ತೆರಳಿ ಶಿವಧನುಸ್ಸನ್ನು ಹೆದೆಯೇರಿಸಿ ಮುರಿದು ಸೀತೆಯನ್ನು ಮದುವೆಯಾದ. ಪಟ್ಟಕ್ಕೆ ಉತ್ತರಾಧಿಕಾರಿ ರಾಮನಾಗುತ್ತಾನೆ ಎಂದು ಮಂಥರೆಯಿಂದ ಕಿವಿಯೂದಿಸಿಕೊಂಡ ಕೈಕೇಯಿ ರಾಮನ ವನವಾಸಕ್ಕೆ ಕಾರಣಳಾದಳು. ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮ ವನವಾಸಕ್ಕೆ ತೆರಳಿಯೇ ಬಿಟ್ಟ! ದಿನಗಳು ಕೆಲವು ಕಳೆದಮೇಲೆ ರಾಮ-ಲಕ್ಷ್ಮಣ ಕಾಡಿನಲ್ಲಿ ಕಂದಮೂಲಫಲಗಳನ್ನು ಹುಡುಕಿ ತಿರುಗುತ್ತಿರುವಾಗ ಭಯಂಕರವಾಗಿ ಭೋರ್ಗರೆವ ದನಿಯನ್ನು ಕೇಳಿದರು. ರಾಮನೆಂಬ ರಾಮನೇ ತತ್ತರಿಸಿ ಹೋಗಬೇಕು ಆ ಸದ್ದಿಗೆ! ಕೆಲವೇ ಕ್ಷಣಗಳಲ್ಲಿ ಸುಂದರವಾದ ರೂಪದ ಹೆಣ್ಣೊಬ್ಬಳು ರಾಮನನ್ನು ಮುಖಾಮುಖಿಯಾಗಿ ತನ್ನನ್ನು ಮದುವೆಯಾಗು ಎಂದಳು. ರಾಮ-ಲಕ್ಷ್ಮಣರು ಅಲ್ಲಿ ನಿಂತಾಗ ಅವರ ನಡುವೆ ಸುಮಾರು ದೂರದ ಜಾಗವಿತ್ತು. ರಾಮ ತಾನೊಲ್ಲೆ ತನಗೆ ಮದುವೆಯಾಗಿದೆ, ನನ್ನ ಅನುಜ ಲಕ್ಷ್ಮಣನಿದ್ದಾನೆ ಕೇಳು ಎಂದ. ಲಕ್ಷ್ಮಣನಲ್ಲಿಗೆ ತೆರಳಿದ ಆಕೆ ಅವಮಾನಿತಳಾಗಿ ಮತ್ತೆ ರಾಮನಲ್ಲಿಗೆ ಬಂದಳು. ಹೀಗೇ ಎರಡು ಮೂರು ರೌಂಡು ಹೊಡೆದಮೇಲೆ ಕೋಪದಿಂದ ಲಕ್ಷ್ಮಣ ಬಂದಿದ್ದ ಆ ಶೂರ್ಪನಖಿಯ ಮೂಗನ್ನು ಕತ್ತರಿಸಿ ಬಿಸಾಕಿದ.

ಮೂಗು ಕುಯ್ಸಿಕೊಂಡ ತಂಗಿ ಅಣ್ಣ ರಾವಣನ ಲಂಕೆಗೆ ಕೂಗುತ್ತಲೇ ತೆರಳಿದಳು. " ಓಹೋ ಹಾಗೋ ನೋಡಿಕೊಳ್ಳುತ್ತೇನೆ ಚಿಂತಿಸಬೇಡ " ಎಂದು ರಾವಣ ಸಮಾಧಾನಿಸಿದ. ಮುಂದೆ ರಾಮಾಯಣ ನಡೆದದ್ದು ನಿಮಗೆ ತಿಳಿದೇ ಇದೆ. ರಾಮಾಯಣ ಕಾಲದಲ್ಲಿ ಈ ಮೂಗು ಕುಯ್ಸಿಕೊಂಡ ಶೂರ್ಪನಖಿ ಅಲಾಯ್ದ ಒಂದು ದಿನ ಬಂದು ರಾಮನನ್ನು ಕಂಡಳು. " ಹೋಯ್ ರಾಮ ಇದೆಂಥದು ಮಾರಾಯ ? ನಿಂದೆಲ್ಲಾ ಬರೀ ಹೆಂಗಸರಲ್ಲಿ ಪೌರುಷ ತೋರೋದೇ ಆಗ್ಹೋಯ್ತು. ತಾಕತ್ತಿದ್ದರೆ ನನ್ನ ಕುಲ ಸಾವಿರವಾಗಲಿ ಎಂದು ವರ ಕೊಡು " ಎಂದು ಚಾಲೇಂಜ್ ಮಾಡಿಬಿಟ್ಟಳು! ಎಷ್ಟೆಂದರೂ ಹೆಣ್ಣಲ್ಲವೇ ಪಾಪ ಎಂದುಕೊಂಡ ಶ್ರೀರಾಮ " ತಥಾಸ್ತು, ಕಲಿಯುಗದಲ್ಲಿ ನಿಮ್ಮ ಕುಲ ಸಾವಿರವಾಗಿ ಬ್ಯಾಂಕುಗಳಲ್ಲಿ ಕೆಲಸಮಾಡುವಂತಾಗಲಿ " ಎಂದು ಹರಸಿಬಿಟ್ಟ!!

ಬರುತ್ತ ಬರುತ್ತಾ ತ್ರೇತ, ದ್ವಾಪರ ಕಳೆದು ಕಲಿಯುಗ ಬಂದೇಬಿಟ್ಟಿತು! ಹಣಕಾಸಿನ ವ್ಯವಹಾರಕ್ಕಾಗಿ ವ್ಯವಸ್ಥಿತ ರೂಪವೊಂದನ್ನು ಕೊಡುವಲ್ಲಿ ಕಲಿಯುಗದ ಗಂಡಸರು ಮುಂದಾದರು. ಆ ವ್ಯವಸ್ಥಿತ ಹಣಕಾಸು ಸಂಸ್ಥೆಗಳು ಮೂಲದಲ್ಲಿ ಖಾಸ್ಗೀ ಮಟ್ಟದಲ್ಲಿ ನಡೆಯುತ್ತಿದ್ದವು. ಯಾವಾಗ ಅದೂ ಸ್ಥಿರವಲ್ಲ; ಹಣದ ವ್ಯವಹಾರ ನೋಡಿ, ಯಾರಿಗಾದರೂ ಮೋಸವಾದೀತು ಎಂಬ ಕಾರಣಕ್ಕೆ ಪ್ರಜೆಗಳು ಎಂಬತಕ್ಕಂಥವರು ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ನಡೆಸುವ ಸರಕಾರ ಎಂಬ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಅದನ್ನು ಹತೋಟಿಯಲ್ಲಿ ಇಟ್ಟುಕೊಂಡರು. ಇಂತಹ ಸಂಸ್ಥೆಗಳನ್ನು ನ್ಯಾಷನಲೈಸ್ಡ್ ಬ್ಯಾಂಕುಗಳು ಎಂದು ಕರೆಯಲಾಯಿತು.

ಈ ನ್ಯಾಷನಲೈಸ್ಡ್ ಬ್ಯಾಂಕುಗಳಲ್ಲಿ ಕೆಲಸಮಾಡುವ ಮಂದಿಯನ್ನು ನಿಗದಿಪಡಿಸಬೇಕಲ್ಲಾ ? ಅದಕ್ಕೇ ಕೆಲವು ಪೂರಕ ಪರೀಕ್ಷೆಗಳನ್ನು ಆಯಾ ಬ್ಯಾಂಕುಗಳ ಆಡಳಿತ ಮಂಡಳಿ ಕೈಗೊಂಡಿತು. ರಾಮನ ಶಾಪ ಓ ಸಾರಿ ವರ ಎಲ್ಲಾದರೂ ಸುಳ್ಳಾಗುವುದುಂಟೇ ? ಒಡ್ಡಿದ ಪರೀಕ್ಷೆಗಳಿಗೆ ಎಲ್ಲೆಲ್ಲಿಂದಲೋ ಈ ಶೂರ್ಪನಖಿ ವಂಶಸ್ಥರು ಬಂದುಬಿಟ್ಟರು! ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸೀಟುಗಳಲ್ಲಿ ಆಸೀನರಾಗಿಯೂ ಬಿಟ್ಟರು !!ತಮ್ಮೊಳಗೇ ಪುಳಕಗೊಂಡ ಬ್ಯಾಂಕಿನ ಗಂಡು ಕೆಲಸಗಾರರು ನಿತ್ಯವೂ ಶೂರ್ಪನಖಿಯರನ್ನು ಹೊಗಳಿಯೇ ಹೊಗಳಿದರು.

’ಶೂರ್ಪನಖಾ’ ಎಂದರೆ ಹೆಸರೇ ಎಷ್ಟು ಚಂದನೋಡಿ! ಅಂತಹ ಶೂರ್ಪನಖಿಯರ ನಖಗಳೂ ಕೆಲವೊಮ್ಮೆ ಶೂರ್ಪವಾಗೇ ಇರುತ್ತವೆ, ಹಲವು ಬಣ್ಣಗಳನ್ನು ಧರಿಸುತ್ತವೆ. ಎಲ್ಲರೂ ಶೂರ್ಪನಖವುಳ್ಳವರಲ್ಲ ಎಂಬ ಕಾರಣಕ್ಕೆ ಸಮೂಹಿಕವಾಗಿ ಬ್ಯಾಂಕಮ್ಮಗಳು ಎಂದುಬಿಡೋಣ ಅಲ್ಲವೇ? ಇಂತಹ ಬ್ಯಾಂಕಮ್ಮಗಳು ನಿತ್ಯವೂ ಚಳಿಯಲ್ಲಿ ಬೆಳಿಗ್ಗೆ ಬರುವುದು ತಡವಾಗಿ. ನಿಗದಿತ ಸಮಯಕ್ಕಿಂತ ೧೫ ನಿಮಿಷಗಳು ಮೊದಲೇ ಬ್ಯಾಂಕಿನ ದಿನದ ವಹಿವಾಟು ಮುಗಿಸದಿದ್ದರೆ ಅವರು ಬ್ಯಾಂಕಮ್ಮಗಳೇ ಅಲ್ಲ ! ಬೆಳ್ಳಂಬೆಳಿಗ್ಗೆ ಹತ್ತುಗಂಟೆಗೆಲ್ಲಾ ಸೀಟನ್ನು ಅಲಂಕರಿಸುವ ಅವರ ನಿತ್ಯದ ದಿರಿಸುಗಳು ಸಿನಿಮಾ ನಟಿಯರನ್ನು ಹೋಲುವಂತಿರುತ್ತವೆ. ಒಂದೇ ಸಮ ಕೆಲಸಮಾಡಿ ಬೇಜಾರಾಗುತ್ತದೆ ನೋಡಿ ಯಾರಾದರೂ " ನೀವು ತುಂಬಾ ಚೆನ್ನಾಗ್ ಕಾಣಸ್ತೀರ " ಎಂದರೆ ಆಕಾಶಕ್ಕೆ ಮೂರೇ ಗೇಣು!! ನಿಮಗೆ ಬ್ಯಾಂಕುಗಳಲ್ಲಿ ಕೆಲಸ ಬೇಗ ಆಗಬೇಕೋ ? ಹಾಗಾದರೆ ಬ್ಯಾಂಕಮ್ಮಗಳನ್ನು ಹೊಗಳಿ! ಅದಿಲ್ವೋ " ಏನ್ ಬೇಕ್ರಿ ಅಲ್ಹೋಗ್ರಿ " ಎಂದು ಅವರು ವಾಚಾಮಗೋಚರವಾಗಿ ನೀವು ಬ್ಯಾಂಕಿಗೆ ಬಂದಿದ್ದೇ ಅಪರಾಧ ಎನ್ನುವ ರೀತಿಯಲ್ಲಿ ನೋಡುವುದರಲ್ಲಿ ಯಾವುದೇ ಸಂಶಯವಿಲ್ಲ!

ಬಂಗಾರದ ಸರ ಖರೀದಿಸಿದ್ದು, ಚೀಟಿ ಹಾಕಿದ್ದು, ಮಗ-ಮಗಳು ಓದುತ್ತಿರುವುದು ಅಥವಾ ಇನ್ಫೋಸಿಸ್ಸು-ವಿಪ್ರೋ ಸೇರಿರುವುದು ಇತ್ಯಾದಿಗಳಿಂದ ಹಿಡಿದು ತರಕಾರೀ ಮಾರುಕಟ್ಟೆಯ ವರೆಗಿನ ಎಲ್ಲಾ ಸುದ್ದಿ ಮತ್ತು ಕ್ಷೇಮಸಮಾಚಾರಗಳ ಪರಸ್ಪರ ವಿಲೇವಾರಿ ಆದಮೇಲೇಯೇ ನಿಮಗೆ ಬಟವಾಡೆಮಾಡಬೇಕಾದ ಕೆಲಸಕ್ಕೋ ಠೇವಣಿ ತೆಗೆದುಕೊಳ್ಳಬೇಕಾದ ಕೆಲಸಕ್ಕೋ ಮತ್ತಿನ್ಯಾವುದಕ್ಕೋ ಅವರು ಬರುವುದು. ಅಲ್ಲೀವರೆಗೆ ಅವರಿಗೆ ಪುರುಸೊತ್ತಿರುವುದಿಲ್ಲ. ಅಷ್ಟೇ ಹೊತ್ತಿಗೆ ಸರಿಯಾಗಿ ಕಾಫಿ ಬರುತ್ತದೆ, ಮಾರ್ನಿಂಗ್ ಕಾಫೀ ಬ್ರೇಕು. " ಸರ್ವರ್ ಬರ್ತಾ ಇಲ್ಲ" " ಲಾಗಿನ್ ಆಗ್ತಾ ಇಲ್ಲ" ಎಂಬ ಹೇಳಿಕೆಗಳು ತೀರಾ ಸಾಮಾನ್ಯ. ಅವನ್ಯಾವನೋ ಹತ್ತಿರ ಬಂದು " ಈಗ ಬರ್ತಾ ಇದೆ ನೋಡಿ " ಎಂದು ಅರ್ಧಘಂಟೆ ಬಿಟ್ಟು ಹೇಳಿಹೋಗುತ್ತಾನೆ. ಅಲ್ಲೀವರೆಗೂ ನೀವು ನಿಂತೇ ಇರಬೇಕು, ಕಾದೇ ಇರಬೇಕು.

ಕೆಲವು ಬ್ಯಾಂಕುಗಳಲ್ಲಿ ಕರೆಂಟು ಹೋದರೆ ಬ್ಯಾಂಕಮ್ಮಗಳಿಗೆ ಹಬ್ಬವೇ ಹಬ್ಬ! ಸುದ್ದಿಯ ಸಡಗರ!! ಯೂಪಿಎಸ್ಸು ಎರಡು ಮೂರು ಕಂಪ್ಯೂಟರುಗಳಿಗೆಮಾತ್ರ ಸಾಕು, ಮಿಕ್ಕಿದ್ದಕ್ಕೆ ಕರೆಂಟು ಬರಬೇಕು ಎಂಬ ಹೇಳಿಕೆ ನೀಡಿ ಕೂತಿರುತ್ತಾರೆ. ಜಾಸ್ತಿ ಮಾತಾಡಿದಿರೋ ನಿಮ್ಮನ್ನು ನಖದಿಂದ ಶಿಖದವರೆಗೂ ದುರುಗುಟ್ಟಿ ನೋಡಿ ಜನ್ಮ ಜಾಲಾಡಿಬಿಟ್ಟಾರು ಹುಷಾರು! ಯಾಕೆಂದರೆ ವಂಶವಾಹಿನಿ ಪ್ರಭಾವ !!ಯಾರದೋ ಹುಟ್ಟಿದ ಹಬ್ಬವಾದರೆ ಬ್ಯಾಂಕಮ್ಮಗಳಲ್ಲಿ ಕೆಲವರಿಗೆ ಪರ್ಮಿಶನ್ ಮೇಲೆ ರಜೆ! ಎಲ್ಲೋ ಜಾತ್ರೆ ಇದ್ದರೆ ಅವರೂ ಹೋಗಬೇಕು ಪಾಪ ಮನುಷ್ಯರಲ್ವೇ? ಅಂತೂ ಯಾರದೋ ದುಡ್ಡು ಎಣಿಸುವವರು ಎಲ್ಲಮ್ಮನ ಜಾತ್ರೆ ಮಾಡುವುದಂತೂ ಗ್ಯಾರಂಟಿ! ಪಾಸ್ ಬುಕ್ ವಗೈರೆ ನೀವು ವಾರಕ್ಕೂ ಮೊದಲೇ ಕೊಟ್ಟಿರಬೇಕು! ಈಗ ಕೈಲಿ ಬರೆಯುವ ಪ್ರಮೇಯವೇ ಇಲ್ಲ, ಎಲ್ಲಾ ಸಸಾರ, ಆದರೆ ಬಟನ್ ಒತ್ತುವುದು ತ್ರಾಸದಾಯಕ!! ಅಲ್ಲಿ ಶೂರ್ಪ’ನಖ’ ಅಡ್ಡಬರುತ್ತದೆ! ಉಗುರು ಕಟ್ಟಾದರೆ ಥೂ ಅಸಹ್ಯವಪ್ಪ, ಅವರಂತೂ ಸಹಿಸಲಾರರು! ತಿಂಗಳ ಸಂಬಳ ಎಣಿಸಿಕೊಳ್ಳುವಾಗಲೂ ನಖದ ಪ್ರಶ್ನೆಯೇ ಬರುವುದಿಲ್ಲ, ಸಂಬಳ ನೇರ ಅಕೌಂಟಿಗೇ ಜಮಾ ಆಗುತ್ತದೆಯಲ್ಲ!

ಇಂತೀ ಪರಿಯಲ್ಲಿ ಒಂದಾನೊಂದು ಕಾಲಕ್ಕೆ ಒಂದಾನೊಂದು ಬ್ಯಾಂಕಿನಲ್ಲಿ ಒಬ್ಬ ಆಂಟಿ ಸೋ ಸಾರಿ ಒಬ್ಬ ಬ್ಯಾಂಕಮ್ಮ ಇದ್ದಳು. ಅವಳಮನೆ ಫ್ಯಾಷನ್ನೋ ಅವಳನ್ನು ನೋಡಬೇಕಾಗಿತ್ತು. ತ್ರೀಪೋರ್ಥ್ ಪ್ಯಾಂಟು ಟೀ ಶರ್ಟಿನಲ್ಲಿ ರಾರಾಜಿಸುತ್ತಿದ್ದ ಅವಳ ಸುತ್ತ ಹಲವು ಕಥೆಗಳೇ ಇದ್ದವು. ತಾನು ಯಾವುದೇ ಸಿನಿಮಾ ನಟಿಗೂ ಕಮ್ಮಿ ಇಲ್ಲ ಎಂದುಕೊಂಡು ಓಡಾಡುತ್ತಿದ್ದ ಅವಳಿಕೆ ಅದಾಗಲೇ ಮೂರ್ನಾಲ್ಕು ಮದುವೆಗಳೂ ವಿಚ್ಛೇದನಗಳೂ ನಡೆದುಹೋಗಿದ್ದವಂತೆ ಎಂಬುದು ಕೆಲವು ಗ್ರಾಹಕರ ಅಂಬೋಣವಾಗಿತ್ತು. ಸಖಿಯರ ಮಧ್ಯೆ ಕುಳಿತುಕೊಳ್ಳುವ ರಾಣಿಯಂತೇ ಮಿಕ್ಕ ಬ್ಯಾಂಕಮ್ಮಗಳ ಮಧ್ಯೆ ವಿಹರಿಸುತ್ತಿದ್ದ ಆ ಬ್ಯಾಂಕಮ್ಮನ ಖರ್ಚಿಗೆ ಬರುವ ಸಂಬಳ ಸಾಲುತ್ತಿದ್ದುದು ಡೌಟು. ಜಗತ್ತಿನಲ್ಲಿರುವ ಎಲ್ಲಾ ಸೆಂಟೂ, ಎಲ್ಲಾ ಲೋಶನ್ನೂ ಎಲ್ಲಾ ಪೌಡರೂ ಅವಳ ತಾಬಾ ಇದ್ದವು!ಇಷ್ಟೆಲ್ಲಾ ಹಾರಾಡುತ್ತಿದ್ದ ಆಕೆಯೆ ವೃತ್ತಿಜೀವನದಲ್ಲಿ ಕೆಲಸಮಾತ್ರ ಆಮೆವೇಗಕ್ಕೂ ಕಮ್ಮಿಯದು. ತಪ್ಪೆಣಿಸುವ ಮ್ಯಾನೇಜರ ಕಡೆಗೆ ಹೆಪ್ಪುಗಟ್ಟಿದ ಕಡು ಲಿಪ್‍ಸ್ಟಿಕ್ ಪೂಸಿತ ದಿವ್ಯ ನಗೆಯನ್ನು ಬೀರಿಬಿಟ್ಟರೆ ಅವರು ತೆಪ್ಪಗಾಗಿಬಿಡುತ್ತಿದ್ದರು!

ಪುರಾಣ ಮುಂದುವರಿಸುವ ಸಮಯದಲ್ಲಿ ಬೆಕ್ಕು ಅಡ್ಡ ಬಂದಿದ್ದರಿಂದ ಇಲ್ಲಿಗೇ ನಿಲ್ಲಿಸಿಬಿಟ್ಟರು! ತಿಪ್ಪಾ ಭಟ್ಟರಿಗೆ ರಸಭಂಗವಾಗಿ ಮಹಾಕೋಪಾವಿಷ್ಟರಾಗಿ ಪಂಚೆ ಕೊಡವಿಕೊಂಡು ಎದ್ದುಹೋದರು ಎಂಬಲ್ಲಿಗೆ ಬ್ಯಾಂಕಮ್ಮಗಳ ಅಷ್ಟಾಧಿಕ ವಂಶೋತ್ತರೀ ಪುರಾಣವು ಸದ್ಯಕ್ಕೆ ಮಂಗಲವಪ್ಪುದು.

ಮಂಗಲಂ ಕೋಸಲೇಂದ್ರಾಯ ಮಹನೀಯ ಗುಣಾಭ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್ ||

ವೇದವೇದಾಂತವೇದ್ಯಾಯ ಮೇಘಶ್ಯಾಮಲಮೂರ್ತಯೇ |
ಪುಂಸಾಂ ಮೋಹನರೂಪಾಯ ಪುಣ್ಯಶ್ಲೋಕಾಯ ಮಂಗಳಮ್ ||

ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇಃ |
ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಳಮ್ ||

Sunday, December 18, 2011

ಆ ಮುಖ


ಆ ಮುಖ

೧೯೯೭ರಲ್ಲಿ ನಾಗಮಂಗಲ ತಾಲೂಕು ಯಾವುದೋ ಹೋಬಳಿಯ ಕೆಂಪೇಗೌಡರ ಮಗ ನಾರಾಯಣ ಗೌಡರ ಕುಟುಂಬ ಆತನನ್ನು ಊಟಕ್ಕೆ ಕರೆದಿತ್ತು. ಬ್ರಾಹ್ಮಣನಾದ ಆತ ತಮ್ಮನೆಯಲ್ಲಿ ಊಟ ಮಾಡಬಹುದೇ ಎಂಬ ಸಂದೇಹವಿದ್ದರೂ ಏನೋ ಕರೆದು ನೋಡೋಣ ಎಂಬ ಅನಿಸಿಕೆಯಿರಬೇಕು. ಮಗ ದೊಡ್ಡವನಾಗಿ ಏನಾದರೂ ದುಡೀಲಿ ಎಂಬಂತೇ ರೈತ ಕೆಂಪೇಗೌಡರು ನಾರಾಯಣನನ್ನು ಬೆಂಗಳೂರಿಗೆ ಕಳಿಸಿದ್ದರು. ಅಲ್ಲಿಲ್ಲಿ ಕೆಲಸಕ್ಕೆ ಹೋಗುತ್ತಿದ್ದ ನಾರಾಯಣ ದಿನಪತ್ರಿಕೆಯ ಸಬ್ ಏಜೆಂಟ್ ಆಗಿ ಕೆಲಸಮಾಡತೊಡಗಿದ್ದ. ಬರುವ ಹಣದಲ್ಲೇ ಕಷ್ಟಕ್ಕೇ ಅಂತ ಅಷ್ಟಿಷ್ಟು ಎತ್ತಿಟ್ಟು ನಂಬುಗೆಯವರಲ್ಲಿ ಚೀಟಿ ಹಾಕಿ ಸ್ವಲ್ಪ ಜಾಸ್ತಿ ಹಣ ಕೈಗೆ ಸಿಕ್ಕಾಗ ಚಿಕ್ಕ ಅಂಗಡಿಯೊಂದನ್ನು ಆರಂಭಿಸಿದ. ವರ್ಷಾರು ತಿಂಗಳಲ್ಲೇ ನಾರಾಯಣನ ಒಡನಾಟದಿಂದ ಆ ರಾಜಾಜಿನಗರದ ಆ ಪ್ರದೇಶದ ಸುತ್ತುವರಿ ಜನ ಆತನ ಅಂಗಡಿಗೆ ಅದೂ ಇದೂ ಕೇಳಿಕೊಂಡು ಬರಲು ಆರಂಭಿಸಿದರು. " ಚನ್ನಕೇಶವ ಪ್ರಾವಿಜನ್ ಸ್ಟೋರ್ಸ್" ಎಂಬುದು ಬರೇ ಅಂಗಡಿಯಾಗಿರದೇ ಸ್ನೇಹಿತರ ಬಳಗಕ್ಕೆ ಮೆಸ್ಸೆಂಜರ್ ಆಗಿ ಕಾರ್ಯನಿರ್ವಹಿಸುವ ಕೇಂದ್ರವಾಗಿತ್ತು. ಆತನೂ ಸೇರಿದಂತೇ ಹಲವಾರು ಜನ ಹಳ್ಳಿಯಿಂದ ಬಂದ ಮಿತ್ರರು ಅಲ್ಲಿ ಆಗಾಗ ಸೇರುತ್ತಿದ್ದರು. ಬೇರೇ ಬೇರೇ ರೂಮುಗಳಲ್ಲಿ ವಾಸಮಾಡುತ್ತಿದ್ದ ಅವರು ಪರಸ್ಪರ ಸಿಗಬೇಕಾದರೆ ಅದಕ್ಕೆ ನಾರಾಯಣನಲ್ಲಿ ತಿಳಿಸಿರುವ ಸಂದೇಶವೇ ಕಾರಣವಾಗಿರುತ್ತಿತ್ತು. ನಾರಾಯಣನಿಗೂ ಆತನಿಗೂ ವಯಸ್ಸಿನಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಒಂದೇ ಓರಗೆಯ ಹುಡುಗರಾದುದರಿಂದಲೋ ಏನೋ ಅಲ್ಲಿ ಸೇರುವ ಎಲ್ಲಾ ಹುಡುಗರೂ ನಾರಾಯಣನನ್ನೂ ಗೆಳೆಯನನ್ನಾಗಿ ಸ್ವೀಕರಿಸಿದ್ದರು; ಸಾಮನುಗಳನ್ನೂ ನಾರಾಯಣನ ಅಂಗಡಿಯಲ್ಲೇ ಖರೀದಿಸುತ್ತಿದ್ದರು.

ನಾರಾಯಣನ ಅಂಗಡಿಗೆ ಹತ್ತಿರದ ಒಂದು ಮನೆಯಿಂದ ಪೀಯೂಸಿ ಓದುವಂತಹ ವಯದ ಹುಡುಗಿಯೊಬ್ಬಳು ಆಗಾಗ ಬರುತ್ತಿದ್ದಳು. ವಯೋಮಾನದ ಸಹಜ ವಾಂಛೆಯಿಂದ ನಾರಾಯಣನಿಗೂ ಅವಳಿಗೂ ಪ್ರೇಮಾಂಕುರವಾಗಿತ್ತೆಂದು ಬೇರೇ ಹೇಳಬೇಕೇನು ? ಕೃಷ್ಣವರ್ಣದ ಸಾದಾ ಸೀದಾ ಸುಂದರಿ ಆಕೆ. ಅವರೂ ಗೌಡರೇ ಎಂಬುದನ್ನರಿತ ಸ್ನೇಹಿತರಿಗೆ ನಾರಾಯಣನ ಲವ್ವು ಮುಗ್ಗರಿಸುವುದಿಲ್ಲ ಎಂಬ ಭರವಸೆಯಿತ್ತು. ಆರಂಭದಲ್ಲಿ ಆಕೆಗೆ ಅಪ್ಪನ ವಿರೋಧವಿತ್ತೇನೋ. ಅಪ್ಪನಿಗೆ ಬರುವ ಸಂಬಳ ಸಾಲುತ್ತಿರಲಿಲ್ಲವೋ ತಿಳಿಯದು; ಆತ ಮಗಳನ್ನು ಜಾಸ್ತಿ ಓದಿಸಲೊಲ್ಲ. ಅದೇ ವೇಳೆಗೆ ನಾರಾಯಣನ ಪರಿಚಯ ಮತ್ತು ಇನ್ನೂ ಬಲಿತಿರದ ಪ್ರೇಮ ಇದ್ದುದರಿಂದ ಹುಡುಗಿ ನಾರಾಯಣನಲ್ಲಿ ಸ್ಥಿತಿಗತಿ ಹೇಳಿಕೊಂಡಿದ್ದಳು. ಬಡತನದಲ್ಲೇ ಹುಟ್ಟಿಬೆಳೆದ ಅನುಭವವಿದ್ದ ನಾರಾಯಣ ಆಕೆಗೆ ಓದಿಸುವ ಅಭಯ ನೀಡಿದ! ಫೀಸನ್ನೂ ಬೇಕಾದ ಪರಿಕರಗಳನ್ನೂ ಕೊಡಿಸುವುದಾಗಿ ಒಪ್ಪಿ ಆಕೆಯನ್ನು ಕಾಲೇಜಿಗೆ ಸೇರಿಸಿದ. ಹಾಗೂ ಹೀಗೂ ಪೀಯೂಸಿ ಮುಗಿಸಿದ ಆಕೆ ನಾರಾಯಣನ ಹೃದಯದಲ್ಲಿ ಬಲವಾಗಿ ತಳವೂರಿದ್ದಳು. ಊರಿಗೆ ತಿಳಿಸಿದ ನಾರಾಯಣ ಮತ್ತು ರತ್ನ[ಆಕೆಯ ಹೆಸರು]ರ ವಿವಾಹ ಪಶ್ಚಿಮ ಕಾರ್ಡ್ ರಸ್ತೆಯ ಸಾದರ ವಿದ್ಯಾಭಿವೃದ್ಧಿಸಂಘದ ಕಲ್ಯಾಣಮಂಟಪದಲ್ಲಿ ನಡೆಯಿತು. ಬಹಳ ವಿಶೇಷವೆಂದರೆ ಮದುವೆಗೆ ಆತ ಕೂಡ ಬಂದಿದ್ದ!

ಮದುವೆ ಮುಗಿದು ಮನೆಮಾಡಿ ವರ್ಷದ ಕಾಲ ಕಳೆದುಹೋಯ್ತು. ಮದುವೆ ವಾರ್ಷಿಕೋತ್ಸವದ ಸಲುವಾಗಿ ಸ್ನೇಹಿತರ ಬಳಗಕ್ಕೆ ಮನೆಯಲ್ಲೇ ಚಿಕ್ಕದಾಗಿ ಊಟ ಇಟ್ಟುಕೊಂಡಿದ್ದರು. ಆತನೇನಪ್ಪಾ ಅಂದರೆ ಆತ ಪುಳಿಚಾರೆ ! ತುಂಡು ತಿನ್ನುವ ಜಾತಿಯವನಲ್ಲ. ಶತಮಾನಗಳಿಂದ ವೇದಗಳನ್ನು ಓದುತ್ತಾ ಬಂದ, ಪೂಜೆ-ಪುನಸ್ಕಾರ ನಡೆಸುತ್ತಾ ಬಂದ ಕುಲೀನ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಬೆಳೆದ ಆತನಿಗೆ ಸಹಜವಾಗಿ ಬ್ರಾಹ್ಮಣ್ಯದ ಲಕ್ಷಣಗಳು ಪ್ರಾಪ್ತವಾಗಿದ್ದವು. ಹಾಗಂತ ಆತ ಸ್ವಚ್ಛತೆಯುಳ್ಳ, ಪರಿಶುದ್ಧವಾದ ಮತ್ತು ಮಾಂಸಾಹಾರ ಇಲ್ಲದ ಯಾವುದೇ ತಿನಿಸುಗಳನ್ನಾಗಲೀ ಯಾರದೇ ಮನೆಯಲ್ಲಾದರೂ ಭುಂಜಿಸಲು ಸಿದ್ಧನಿದ್ದ; ನಡೆಸಿಯೂ ಇದ್ದ. || ಆಚಾರಹೀನಂ ನಪುನಂತಿ ದೇವಾಃ || ಆಯಾ ಜನ್ಮಕ್ಕೆ ತಕ್ಕಂತೇ ವ್ಯವಹಾರ ಮತ್ತು ಆಚಾರವಿಧಿಗಳನ್ನು ಪಾಲಿಸಬೇಕಂತೆ. ಅದನ್ನರಿತಿದ್ದ ಆತನಿಗೆ ಹಲವಾರು ಬಾರಿ ಬ್ರಾಹ್ಮಣನಾಗಿ ಹುಟ್ಟಿದ್ದೇ ತಪ್ಪಾಯಿತೇ ಎಂಬ ಅನುಮಾನ ಕೂಡ ಬಂದಿತ್ತು. ಬೇಕಾದ್ದನ್ನು ತಿನ್ನಲಾಗದ ಕುಡಿಯಲಾಗದ ಕಾರಣಕ್ಕೆ ಹಾಗೆ ಸಂದೇಹ ಹುಟ್ಟಿದ್ದಲ್ಲ; ಬದಲಾಗಿ ಸಮಾಜದಲ್ಲಿ ಎಲ್ಲಿ ನೋಡಿದರೂ ಬ್ರಾಹ್ಮಣರ ಅವಹೇಳನ, ಚುಚ್ಚುಮಾತುಗಳು ನಡೆದೇ ಇದ್ದವು. ಸರಕಾರೀ ರಂಗಗಳಲ್ಲಿ ಬ್ರಾಹ್ಮಣರಿಗೆ ಅವಕಾಶ ಇಲ್ಲದಾಗುತ್ತಾ ನಡೆದಿತ್ತು. ಬ್ರಾಹ್ಮಣರು ಮಡಿವಂತರು ಅವರು ಯಾರನ್ನೂ ಹತ್ತಿರ ಸೇರಿಸಲೊಲ್ಲರು ಎಂಬ ಧೋರಣೆಯನ್ನು ತಳೆದ ಇತರೆ ವರ್ಗಗಳ ಜನ ಬ್ರಾಹ್ಮಣ ದೂಷಣೆಯನ್ನು ಸಾಮೂಹಿಕವಾಗಿ ಆರಂಭಿಸಿದ್ದರು. ಯಾಕೆ ಬ್ರಾಹ್ಮಣರು ಮಡಿ ಎನ್ನುತ್ತಾರೆ ಎಂಬುದನ್ನು ಅವಲೋಕಿಸುವ ಪ್ರಜ್ಞೆಯೇ ಇರಲಿಲ್ಲ. ಅಯ್ಯಪ್ಪ ಮಾಲೆ ಧರಿಸಿದ ಭಕ್ತರೇ ಅಷ್ಟು ಮಡಿ ಎನ್ನುತ್ತಾ ತಿರುಗುವಾಗ ನಿತ್ಯವೂ ಬ್ರಾಹ್ಮಣ್ಯವೆಂಬ ವ್ರತವನ್ನು ಆಚರಿಸಿ ಬದುಕುವ ಬ್ರಾಹ್ಮಣನನ್ನು ಯಾಕೆ ಆ ರೀತಿ ಹಳದಿಗಣ್ಣಿನಿಂದ ನೋಡುತ್ತಾರೆ ಎಂಬುದೇ ಆತನಿಗೆ ತಿಳಿಯುತ್ತಿರಲಿಲ್ಲ.

ನಾರಾಯಣ ಗೌಡರ ಮನೆಯಲ್ಲಿ ಶುದ್ಧವಾದ ಕೆಂಪುನೆಲದಮೇಲೆ ಅಗ್ರದ ಬಾಳೆಲೆ ಇಟ್ಟು ತೊಳೆದು ಉಪ್ಪು, ಉಪ್ಪಿನಕಾಯಿ ಇತ್ಯಾದಿಗಳನ್ನು ಬ್ರಾಹ್ಮಣರ ರೀತಿಯಲ್ಲೇ ಬಡಿಸಿದ್ದರು. ಬರುವವರಲ್ಲಿ ಆತನೂ ಇದ್ದನಲ್ಲ! ಚಿತ್ರಾನ್ನ, ಹಪ್ಪಳ, ಮುದ್ದೆ, ಅನ್ನ-ಸಾರು, ಪಲ್ಯ ಎಲ್ಲವೂ ಚೆನ್ನಾಗೇ ಇದ್ದವು. ಆತ ಖುಷಿಯಿಂದಲೇ ನಾರಾಯಣ ದಂಪತಿಯ ಆತಿಥ್ಯ ಸ್ವೀಕರಿಸಿದ. ನಾರಾಯಣ ದಂಪತಿಯ ಆನಂದಕ್ಕೆ ಪಾರವೇ ಇರಲಿಲ್ಲ. ಯಾಕೆಂದರೆ ವೈಯ್ಯಕ್ತಿಕವಾಗಿ ಬ್ರಾಹ್ಮಣರಲ್ಲಿ ಪೂಜ್ಯಭಾವನೆಯನ್ನು ಹೊಂದಿದ್ದ ಜನ ಅವರು. " ಅನ್ನದಾತಾ ಸುಖೀಭವ" ಎಂದು ಹಾರೈಸಿ ಬೀಳ್ಕೊಂಡ ಆತನ ಬಳಗ ಹೀಗೇ ಬಲುದೊಡ್ಡದು. ಹೋದಲ್ಲೆಲ್ಲಾ ಸ್ನೇಹಿತರು ಮುತ್ತಿಕೊಳ್ಳುವ ಏನನ್ನಾದರೂ ಕೇಳುತ್ತಲೇ ಇರುವ ವ್ಯಕ್ತಿತ್ವವನ್ನು ಆತ ಬೆಳೆಸಿಕೊಂಡಿದ್ದ. ಜಾತಿಯ ನೀತಿಗಿಂತ ವ್ಯಕ್ತಿ-ವ್ಯಕ್ತಿಗಳ ಒಡನಾಟ ಮತ್ತು ಸ್ವಚ್ಛತೆಗೆ ಆತ ತುಂಬಾ ಬೆಲೆಕೊಡುತ್ತಿದ್ದ.

ಆತನ ಮದುವೆಯ ಸಮಯ ಬೆಂಗಳೂರಿನ ಎಲ್ಲಾ ಮಿತ್ರರನ್ನೂ ಅಹ್ವಾನಿಸಲು ತೆರಳಿದ್ದ. ಅಲ್ಲಿಯೂ ಅಷ್ಟೇ ಜಾತಿ-ಧರ್ಮಕ್ಕೆ ಪ್ರಾಮುಖ್ಯತೆ ಇರಲಿಲ್ಲ. ತನ್ನ ನೀತಿ ತನಗೆ ಅವರವರ ನೀತಿ ಅವರವರಿಗೆ ಎಂಬ ಮನೋಭಾವ ಆತನದ್ದು. ನಾನು ಆತನನ್ನು ಬಹಳಕಾಲದಿಂದ ಹತ್ತಿರದಿಂದ ಬಲ್ಲೆ! ಅವನ ಪ್ರತೀ ಹೆಜ್ಜೆಯೂ ನನಗೆ ತಿಳಿದೇ ಇದೆ. ಮದುವೆಗೆ ಆಮಂತ್ರಿಸಲು ಹೋದ ಆತ ದಲಿತರ ಶಿವು ಮನೆಯಲ್ಲಿ ಪ್ರೀತಿಯಿಂದ ಕೊಟ್ಟ ಪಾನಕ ಕುಡಿದ! ದಾವೂದ್ ಸಾಬರ ಮನೆಯಲ್ಲಿ ತಿಂಡಿತಿಂದ! ಹೀಗೇ ಎಲ್ಲರೊಳಗೂ ಆತ ಒಬ್ಬನಾಗಿದ್ದ. ದಾವೂದರ ಮನೆಯವರಿಗಂತೂ ಆತ ಬಹಳ ಮೆಚ್ಚು. ಆತನ ಸ್ನೇಹದ ಸಂಕೋಲೆಯಲ್ಲಿ ಕೃಷ್ಣಪ್ಪ ಗೌಡರು, ದಾವೂದ್ ಸಾಬರು, ಮಂಗಳೂರು ಮೂಲದ ಫ್ರಾನಿಸ್ ಮೆನೆಜಿಸ್, ನನ್ನಯ್ಯ ಮೇಸ್ತ, ದಾಮೋದರ ನಾಯ್ಕ, ವಾಸು ಪಟಗಾರ ಮೊದಲಾದವರಿದ್ದರು.

೧೨-೦೯-೨೦೧೧ ರಂದು ಪಂಡಿತೋತ್ತಮರಾದ ಶ್ರೀ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರನ್ನು ಈ ಜಗತ್ತು ಕಳೆದುಕೊಂಡಿತು. ನಾವೆಲ್ಲಾ ತಿನ್ನುವುದಕ್ಕಾಗಿ ಬದುಕಿದ್ದರೆ ಬದುಕುವುದಕ್ಕಾಗಿ ಮಾತ್ರ ತಿನ್ನುತ್ತಿದ್ದ ಕೆಲವರಲ್ಲಿ ಅವರೂ ಒಬ್ಬರು! ಅವರ ಸಂಸ್ಕೃತ ಮತ್ತು ಕನ್ನಡ ಭಾಷಾಪ್ರೌಢಿಮೆ ಅಸದೃಶವಾದುದು, ಅಮೋಘವಾದುದು. ಋಗ್ವೇದ ಮತ್ತು ಯಜುರ್ವೇದಗಳೆರಡನ್ನು ಆಳವಾಗಿ ಅಧ್ಯಯನ ಮಾಡಿ ದ್ವಿವೇದಿಯಾಗಿದ್ದ ಅವರು ಪಂಚ-ಪ್ರಪಂಚ, ಮೂರರ ಮಹಿಮೆ, ಭಾಸಭಾಷಿತ, ಲಕ್ಷ್ಮೀನಾರಾಯಣ ಹೃದಯ, ಮಹಾಮೃತ್ಯುಂಜಯ ಹೋಮ ವಿಧಿ, ಸುದರ್ಶನ ಹೋಮ ವಿಧಿ, ಪಂಚ-ದುರ್ಗಾ ದೀಪ ನಮಸ್ಕಾರ ವಿಧಿ, ಮಹಾಗಣಪತೀ ಹವನವಿಧಿ, ಬ್ರಹ್ಮಕಲಶ ವಿಧಿ ಮುಂತಾದ ಜನಪ್ರಿಯ ಧಾರ್ಮಿಕ ಕೃತಿಗಳನ್ನು ರಚಿಸಿ ಸಮಾಜಕ್ಕೆ ಕೊಟ್ಟುಹೋಗಿದ್ದಾರೆ. ಯಕ್ಷಗಾನ ಪ್ರಿಯರಾದ ಅವರು ನಾಕೈದು ಪ್ರಸಂಗಗಳ ಕರ್ತೃವೂ ಹೌದು. ಆಕಾಶವಾಣಿ ಕೇಂದ್ರಗಳಿಂದ ಅವರ ಸಂದರ್ಶನಗಳು ಬಿತ್ತರಗೊಂಡಿವೆ, ಪುರೋಹಿತರಾಗಿ ಅವರು ಪಠಿಸಿದ ಮಂತ್ರಗಳ ೯ ಧ್ವನಿಸುರುಳಿಗಳೂ ಮಾರುಕಟ್ಟೆಯಲ್ಲಿವೆ. ಕಸ್ತೂರಿ ಮಾಸಿಕದಲ್ಲಿ ’ಶಬ್ದ ಸಂಸಾರ’ವೆಂಬ ಚಿಕ್ಕ ಅಂಕಣವನ್ನು ಬಹಳ ಚೊಕ್ಕವಾಗಿ ಬರೆಯುತ್ತಿದ್ದ ಅವರು ಸಮಾಜಕ್ಕೆ ಇನ್ನೂ ಬೇಕಾಗಿತ್ತು, ವಿಧಿ ಯಾರನ್ನೂ ಹೇಳಿ-ಕೇಳಿ ಮಾಡುವುದಿಲ್ಲವಲ್ಲ, ಅನಾರೋಗ್ಯ ಬಾಧಿಸಿದ್ದ ಅವರು ದಿವಂಗತರಾಗಿದ್ದಾರೆ. ಸರಕಾರದ ಕಣ್ಣಿಗೆ ಬದುಕಿರುವವರೆಗೂ ಅವರು ಕಾಣಲಿಲ್ಲ-ಯಾವ ಪ್ರಶಸ್ತಿಗಳನ್ನೂ ಕೊಡಮಾಡಲಿಲ್ಲ. ಇರಲಿಬಿಡಿ. ಅವರ ಆತ್ಮಕ್ಕೆ ಚಿರಶಾಂತಿ ಕೋರಿದವರಲ್ಲಿ ಆತನೂ ಒಬ್ಬ!

ಇತ್ತೀಚೆಗೆ ೨೦೧೧ ಡಿಸೆಂಬರ್ ೧೧ ರಂದು ಆತ ಕೆಲಸದ ನಿಮಿತ್ತ ವಿಜಯನಗರಕ್ಕೆ ತೆರಳಿದ್ದ. ದಾವೂದ್ ಸಾಬರ ಮನೆ ಇರುವುದು ವಿಜಯನಗರದಲ್ಲೇ. ಕೇರಳಮೂಲದ ದಾವೂದ್ ಮದುವೆಯಾದದ್ದು ಮದ್ರಾಸೀ ಹುಡುಗಿಯನ್ನು. ಮನೆಯಲ್ಲಿ ಆಡು ಭಾಷೆ ತಮಿಳು! ದಾವೂದ್ ಮಗ ರಶೀದ್ ಎಂಬಾತ ಆತನ ಸ್ನೇಹಿತ. ಆತನ ವಯಸ್ಸಿನವನೇ ಆದ ರಶೀದ್ ಎಷ್ಟು ಒಳ್ಳೆಯ ಹುಡುಗನೆಂಬುದು ಆತನಿಗೆ ಮಾತ್ರ ಗೊತ್ತು! ದಾವೂದ್ ಮನೆಯಲ್ಲಿ ಸ್ವಚ್ಛತೆಯಿದೆ. ಎಲ್ಲವೂ ಕ್ಲೀನು ಕ್ಲೀನು. ಅದರಲ್ಲಂತೂ ರಶೀದ್ ದಿನಕ್ಕೆರಡುಬಾರಿ ಸ್ನಾನ ಮಾಡುವಾತ. ಮನೆಯಲ್ಲಿ ಅವರು ಮಾಂಸಾಹಾರ ತಿಂದರೂ ಆತ ಬರುವ ದಿನ ಅಥವಾ ಬಂದ ದಿನ ಆ ವ್ಯವಹಾರವಿಲ್ಲ! ಆ ದಿನ ಎಲ್ಲೆಲ್ಲೂ ಅದರ ಸುದ್ದಿಕೂಡಾ ಇರುವುದಿಲ್ಲ. ಯಾವುದೋ ತಾಂತ್ರಿಕ ಕೆಲಸ ಸಮಯದಲ್ಲಿ ಮುಗಿಯದ್ದಾಗಿತ್ತು, ಅದಕ್ಕೆ ರಶೀದ್ ಕೂಡ ತನ್ನನ್ನು ತೊಡಗಿಸಿಕೊಂಡಿದ್ದ. ದಾವೂದರ ಮನೆಯಲ್ಲೇ ಆ ಕೆಲಸ ನಡೆಸುತ್ತಿದ್ದುದರಿಂದ ಹೊತ್ತು ಸರಿದದ್ದು ಗೊತ್ತಾಗಲೇ ಇಲ್ಲ. ದಾವೂದ್ ಮನೆಗೆ ಆತ ಬಂದಾಗಲೇ ಬೆಳಗಿನ ೧೧ ಗಂಟೆ. ಕಪ್ ಟೀ ಕುಡಿದು ಕೆಲಸ ಆರಂಭಿಸಿದ್ದ. ಸಮಯ ಮೂರಾದರೂ ಕೆಲಸ ಮುಗಿಯಲೇ ಇಲ್ಲ. ಹೊರಗೆ ಊಟಕ್ಕೆ ಹೋಗಿಬರಲು ಅವರ ಒಪ್ಪಿಗೆ ಇರಲಿಲ್ಲ! ಇಂದು ತಮ್ಮನೆಯಲ್ಲೇ ಊಟಮಾಡಿ ಎಂಬ ಹಠಕ್ಕೆ ಆತ ಮಣಿದಿದ್ದ. ಅವರಿಗೂ ಅನ್ನಿಸಿತ್ತೋ ಏನೋ. ಅಂದು ಶುದ್ಧ ಸಸ್ಯಾಹಾರ. ಟೊಮೇಟೋ ಸಾರು, ಬೀನ್ಸಿನ ಪಲ್ಯ, ನಂದಿನಿ ಮೊಸರು[ ಅವರು ಮೊಸರನ್ನು ಮನೆಯಲ್ಲಿ ಮಾಡೋದಿಲ್ಲ]. ಉಂಡೆದ್ದು ತಾಟು ತೊಳೆಯುತ್ತೇನೆಂದರೆ ಅವರು ಕೇಳಿಯಾರೇ ? ಮತ್ತೆ ಕೆಲಸ ಸಾಗಿತ್ತು. ಇಡೀ ದಿನ. ಮತ್ತೆ ಸಾಯಂಕಾಲ ೬ ಗಂಟೆಗೆ ಅಲ್ಲೇ ಚಹಾ. ರಾತ್ರಿಯೂ ಆಗಿ ಹೋಯ್ತು. ಮಾರನೇ ದಿನ ಸಂಕಷ್ಟಿ! ಆತನಿಗೆ ಪೂಜೆಯಿದೆ-ವ್ರತವಿದೆ!! ರಾತ್ರಿ ೧೨ರ ತನಕವೂ ಕೆಲಸ ನಡೆದಿತ್ತು. ಮತ್ತೆ ರಾತ್ರಿ ೧೦ರ ಸುಮಾರಿಗೆ ಚಪಾತಿ ಮಾಡಿದ್ದೇವೆ ಎಂದು ಹಠಮಾಡಿದರೂ ಆತ ಸ್ವೀಕರಿಸಲಿಲ್ಲ, ಯಾಕೆಂದರೆ ಮನೆಯಲ್ಲಿ ಮಾಡಿದ್ದನ್ನು ಮಾರನೇ ದಿನಕ್ಕೆ ಬಾಕಿ ಉಳಿಸುವ ಹಾಗಿರಲಿಲ್ಲ! ರಾತ್ರಿ ಹನ್ನೆರಡಕ್ಕೆ ಹೊರಟು ಹತ್ತು ಕಿಲೋಮೀಟರು ಕ್ರಮಿಸಿ ಮನೆ ತಲುಪಿ ಊಟಮಾಡಿ ಮತ್ತೆ ಬೆಳತನಕ ಆತ ಕೆಲಸಮಾಡಿದ. ನಿದ್ದೆಗೆಟ್ಟರೂ ಕರ್ತವ್ಯವನ್ನು ಮರೆಯದ ಆತನನ್ನು ನಾನು ಮೆಚ್ಚುತ್ತೇನೆ.

ಮಡೆಸ್ನಾನದ ಬಗ್ಗೆ ಆತ ಅದೂ ಇದೂ ಮಾತಾಡುವವರ ಮಧ್ಯೆ ತನ್ನ ಅಭಿಪ್ರಾಯ ತಿಳಿಸಿದ್ದ. ಅದು ಬ್ರಾಹ್ಮಣರು ಜಾರಿಗೆ ತಂದ ಅನಿಷ್ಟ ಪದ್ಧತಿ ಎಂಬ ಧೋರಣೆ ಸರಿಯಲ್ಲ ಎಂಬುದನ್ನು ವಿಶದವಾಗಿ ತಿಳಿಯಪಡಿಸಿದ. ಹಲವುಜನ ಆತನ ಅಭಿಪ್ರಾಯವನ್ನು ಓದಿದರು. ಕೆಲವರು ಪರ ಮತ್ತೆ ಕೆಲವರು ವಿರುದ್ಧವಾಗಿದ್ದರು. ಒಬ್ಬಾತನಂತೂ ಆತನನ್ನೇ ಗುರಿಯಾಗಿಸಿ ಹರಿಹಾಯ್ದ. ಎಲ್ಲಾ ಬ್ರಾಹ್ಮಣರನ್ನೂ ಏಕದೃಷ್ಟಿಯಿಂದ ನೋಡುತ್ತಾ ಬೆರಳುಮಾಡಿ ತೋರಿಸುತ್ತಾ ಹೀಗಳೆಯುವುದು ಆತನಿಗೆ ಅಸಹನೀಯವಾಗಿತ್ತು. ಬ್ರಾಹ್ಮಣ್ಯವೆಂಬ ವ್ರತದ ಪಾಲನೆಯಲ್ಲಿ ಆದ ಕೆಲಮಟ್ಟಿನ ದೋಷಗಳೇ ಈ ಗತಿಗೆ ಕಾರಣ ಎಂಬುದು ಆತನ ಇಂಗಿತವಾಗಿತ್ತು. ಉನ್ನತ ಪೀಠಗಳಲ್ಲಿ ಕುಳಿತು ಪೂಜೆಗೊಳ್ಳುವ ದೇವರುಗಳನ್ನು ನಿತ್ಯ ಆರಾಧಿಸುವ ಬ್ರಾಹ್ಮಣರಿಗೆ ನಿಜವಾದ ಬ್ರಾಹ್ಮಣ್ಯದ ಅವಶ್ಯಕತೆಯಿದೆ. ಬ್ರಾಹ್ಮಣ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಅಣಬೆಗಳ ಸೇವನೆ ಕೂಡ ನಿಷೇಧ. ಸಾಮೂಹಿಕ ಜಾಗಗಳಲ್ಲಿ ಹೋಟೆಲ್ ಗಳಲ್ಲಿ ತಿನ್ನುವುದು ನಿಷಿದ್ಧ. ಸ್ನಾನ ಮುಖಮಾರ್ಜನೆ ಶುದ್ಧಾಚಾರ ಇಲ್ಲದೇ ತಯಾರಿಸುವ ಅಡಿಗೆಯ ಸೇವನೆ ನಿಷಿದ್ಧ. ಅತಿಖಾರ-ಅತಿ ಹುಳಿ-ಅತಿಸಿಹಿ ಮತ್ತು ಅತಿ ಉಪ್ಪು ಪದಾರ್ಥಗಳು ನಿಷಿದ್ಧ. ಪ್ರಾಣಿಗಳ/ಜೀವಿಗಳ ಮಾಂಸಲಭಾಗಗಳನ್ನು ತಿನ್ನುವುದು ನಿಷಿದ್ಧ. ಧಾನ್ಯಗಳಲ್ಲೇ ಕೆಲವು ಕೆಲವುದಿನಗಳಲ್ಲಿ ನಿಷಿದ್ಧ, ಕೆಲವುದಿನಗಳಲ್ಲಿ ಅನ್ನವೇ ನಿಷಿದ್ಧ!

ಇದಕ್ಕೆಲ್ಲಾ ವೈಜ್ಞಾನಿಕ ಕಾರಣವಿದೆಯೆಂದು ಆತ ಬಲ್ಲ. ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆಂಬುದನ್ನೂ ಆತ ಬಲ್ಲ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ ಎಂಬುದು ಆತನಿಗೆ ತಿಳಿದೇ ಇದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ[ಇದಕ್ಕೆ ತಾಕತ್ತು ಬೇಕಾಗುತ್ತದೆ]ಶಕ್ತರು ಎಂಬುದು ಆತನಿಗೆ ಗೊತ್ತು. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ಆತನಿಗೆ ತಲೆನೋವಾಗಿರುವ ವಿಷಯ.

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ [ವಿದ್ಯೆ ಕಲಿಸುವಿಕೆ] ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ ಆ ಗುರುಸ್ಥಾನಕ್ಕೆ ಆತ ಸದಾ ಕೃತಜ್ಞನಾಗಿದ್ದಾನೆ. ’ಆ ಮುಖ’ವೇ ಈ ಮುಖ, ಆತ ಬೇರಾರೂ ಅಲ್ಲ ನಾನೇ ! ನನ್ನೊಳಗಿನ ’ನಾನು’ ಹೊರಬಂದು ಇದನ್ನು ಬರೆದಿದ್ದೇನೆ.

Friday, December 16, 2011

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.....


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.....

ಬೆಂಗಳೂರಿಗೆ ನಾನು ಬಂದಿದ್ದು ಅಜ್ಜಿಗೆ ಬಹಳ ಬೇಸರವಾಗಿತ್ತು. ನನ್ನನ್ನು ಅತಿಪ್ರೀತಿಯಿಂದ ತಾಯಿಯಂತೇ ಸಲಹಿದ ಅಜ್ಜಿಗೆ ಮಕ್ಕಳಲ್ಲೇ ನಾನು ಅಚ್ಚುಮೆಚ್ಚು. ಊರಿಗೆ ಬಹುದೂರದ ಬೆಂಗಳೂರಿಗೆ ಹೊರಟಮೇಲೆ ಇನ್ನು ತನಗೆ ಅಷ್ಟಾಗಿ ಹತ್ತಿರ ಸಿಗಲೊಲ್ಲ ಎಂಬ ಕಾರಣಕ್ಕೆ ಅಜ್ಜಿ ಬೇಸರಪಟ್ಟಿದ್ದು. ಹಾಗಂತ ಎಲ್ಲರಮನೆ ಮಕ್ಕಳಂತೇ ಏನೋ ಸಾಧನೆ ಮಾಡಲಿ ಎಂಬ ಎರಡನೇ ಮನಸ್ಸೂ ಇತ್ತು ! ಆದರೂ ಪ್ರೀತಿಯ ಮೊದಲನೇ ಮನಸ್ಸು ಬೇಡಿಕೆಯ ಎರಡನೇ ಮನಸ್ಸನ್ನು ಹಿಂದಕ್ಕೆ ಹಾಕಿಬಿಟ್ಟಿತ್ತು. ೯೩ರಲ್ಲಿ ಬೆಂಗಳೂರಿಗೆ ಹೊರಟು ನಿಂತಾಗ ಕಣ್ಣು ತುಂಬಾ ನೀರು ತುಂಬಿಕೊಂಡು ಬೀಳ್ಕೊಟ್ಟ ಅಜ್ಜಿಗೆ ಮೊಮ್ಮಗ ಊರಿಗೆ ಬರುವುದನ್ನೇ ನೆನೆವ ಅಪೇಕ್ಷೆ. ಅಲ್ಲಲ್ಲೇ ಮನದಲ್ಲೇ ಲೆಕ್ಕ: ಈಗ ಹೇಗಿರಬಹುದು? ಮೊಮ್ಮಗ ಒಳ್ಳೇ ಪೌಲ್ದಾರನ ಹಾಗೇ ಡ್ರೆಸ್ಸು ಹಾಕಿಕೊಂಡು ಯಾವುದೋ ಆಫೀಸಿಗೆ ಹೋಗುತ್ತಿರಬೇಕೇನೋ, ಸರ್ಕಾರೀ ಕೆಲಸ ಸಿಕ್ಕಿರಬಹುದೇ? ನಮ್ಮಂತೇ ಕಷ್ಟಪಡುವುದು ಬೇಡ, ಮೊಮ್ಮಗ ಕೈತುಂಬಾ ಹಣಸಂಪಾದಿಸಿ ಸುಖವಾಗಿ ಬಾಳಲಿ ---ಹೀಗೆಲ್ಲಾ ಯಾವ್ಯಾವುದೋ ಗಣಿತ, ಗುಣಿತ, ಭಾಗಾಕಾರ, ಸಂಕಲನ!

ಹಬ್ಬಹರಿದಿನಗಳು ಬಂದರೆ ಸಾಕು ಅಜ್ಜಿಗೆ ಇನ್ನೇನು ಮೊಮ್ಮಗ ಊರಿಗೆ ಬಂದೇ ಬಿಡುತ್ತಾನೆ ಎಂಬ ಸಂತಸ. ಎಲ್ಲರಲ್ಲೂ ಹೇಳಿಕೊಳ್ಳುವ ಹುಮ್ಮಸ್ಸು. ವಯಸ್ಸನ್ನು ಮರೆತು ಮಕ್ಕಳೊಂದಿಗೆ ಮಗುವಾಗಿ ಕುಣಿದು, ನಲಿದು ಕುಪ್ಪಳಿಸುವಾಸೆ. ಇಲ್ಲಿ ನಮ್ಮ ಕಥೆ ನಮಗೇ ಗೂತ್ತು. ಸಿಗುವ ಸಂಬಳ ನಮ್ಮ ಖರ್ಚಿಗೇ ಸಾಕಾಗದ ಪರಿಸ್ಥಿತಿಯಲ್ಲಿ ಊರಿಗೆ ಎಲ್ಲಾ ಹಬ್ಬಗಳಿಗೂ ಹೋಗಲು ಸಾಧ್ಯವೇ? ಆದರೂ ಮೊಮ್ಮಗನನ್ನು ಕಾಣುವ ಆಸೆಯಿಂದ ಮೊಮ್ಮಗ ಬಂದೇ ಬರುತ್ತಾನೆ ಎಂಬ ನಂಬಿಕೆಯಿಂದ ರವೆಉಂಡೆ, ಕೊಬ್ಬರಿಮಿಠಾಯಿ ಮಾಡಿ ಹಿತ್ತಾಳೆಯ ಡಬ್ಬದಲ್ಲಿ ತುಂಬಿಸಿಡುತ್ತಿದ್ದಳು. ಊರಿಗೆ ಪ್ರವೇಶಿಸುತ್ತಿದ್ದಂತೆಯೇ ಒಂದೋಂದೇ ಡಬ್ಬ ಈಚೆ ಬರುತ್ತಿತ್ತು. ನಾಕಾರು ಬಗೆಯ ತಿಂಡಿಗಳನ್ನು ಕೊಡುತ್ತಾ ಮೊಮ್ಮಗ ತಿಂದು ಸುಖಿಸುವುದನ್ನು ಕಂಡು ತಾನು ಸುಖಪಡುವ ಮಹಾತಾಯಿ ಅವಳಾಗಿದ್ದಳು.

೬ನೇ ವಯಸ್ಸಿನಷ್ಟು ಚಿಕ್ಕವನಿದ್ದಾಗ ಮನೆಯಲ್ಲಿ ಬಾಳೆಗೊನೆ ಕೊಯ್ದು ಹಣ್ಣಿಗೆ ಹಾಕಿದ್ದರು. ಯಾವುದೋ ಕಾರ್ಯದ ನಿಮಿತ್ತ ನಾವು ಮಕ್ಕಳು ಮತ್ತು ನಮ್ಮ ತಾಯಿ ಅಜ್ಜನಮನೆಗೆ ಹೋಗಬೇಕಾಗಿತ್ತು. ಅಜ್ಜನಮನೆಗೆ ಹೋಗುವ ದಿನದವರೆಗೊ ಬಾಳೇಕಾಯಿ ಹಣ್ಣಾಗಿರಲಿಲ್ಲ. ಅಜ್ಜನಮನೆಗೆ ಹೋದ ನಾವು ವಾರಕ್ಕೂ ಅಧಿಕ ದಿನ ಅಲ್ಲೇ ಇರಬೇಕಾಗಿತ್ತು. ಅಜ್ಜಿಗೆ ನಾವೆಲ್ಲಾ ಕರೆಯುತ್ತಿದ್ದುದು " ಅಮ್ಮ" ಎಂದೇ. ಅಮ್ಮನನ್ನು " ಆಯಿ" ಎಂದು ಸಂಬೋಧಿಸುವ ಪದ್ಧತಿಯಿತ್ತು, ಬಹುಶಃ ಅದು ಮಹಾರಾಷ್ಟ್ರದ ಗಾಳಿ ಮುಂಬೈ, ಪುಣೆ, ಬೆಳಗಾಂವ್, ಧಾರವಾಡ, ಹುಬ್ಬಳ್ಳಿ ಮಾರ್ಗವಾಗಿ ಶಿರಸಿ ಘಟ್ಟ ಇಳಿದು ನಮ್ಮಲ್ಲಿಗೆ ಬಂದಿರಬೇಕು! ಹೀಗಾಗಿ ಚಿಕ್ಕವರಿದ್ದಾಗ ನಮಗೆಲ್ಲಾ ’ಅಮ್ಮ’ ಎಂದರೆ ಅಜ್ಜಿ. " ಅಮ್ಮಾ, ಬಾಳೇಕಾಯಿ ಹಣ್ಣಾಯ್ದೇ ಇಲ್ಯಲೇ, ನಾನು ಅಜ್ಜನಮನೆಗೆ ಹೋಗಿ ಬಪ್ಪಲ್ಲಿಯವರೆಗೆ ಹಾಂಗೇ ಇರ್ತು ಅಲ್ದಾ ? " ಎಂದು ಹವಿಗನ್ನಡದಲ್ಲಿ ನಾನು ಕೇಳಿದ್ದೆನಂತೆ. ಅಜ್ಜನಮನೆಗೆ ಹೋದವನನ್ನು ಒಮ್ಮೆ ಯಾರದೋ ಜೊತೆಗೆ ಮನೆಗೆ ಕರೆಸಿಕೊಂಡಿದ್ದರಂತೆ. ನನಗೋ ಅಜ್ಜಿ ಬೇಕು ಆಯಿಯನ್ನು ಬಿಡಲಾಗದು! ಇಬ್ಬರೂ ಇದ್ದರೆ ನಮ್ಮಷ್ಟಕ್ಕೇ ನಾವು ಹಾಯಾಗಿ ಆಡಿಕೊಂಡಿರುತ್ತಿದ್ದೆವು. ಅದ್ಯಾವ ಪರಿ ಎಂದು ಕೇಳಿದಿರೇ ? [ಅದು ಹಾಗೇಯಪ್ಪ ಒಂಥರಾ ಸರ್ಕಾರಿ ಸಂಬಳ-ಹತ್ತಮಂದಿ ಕೈ ಗಿಂಬಳ ಎರಡನ್ನೂ ಪಡೆದು ಬೀಗುವ ಸರ್ಕಾರಿ ಅಧಿಕಾರಿಗಳ ಹಾಗೇ ಇತ್ತು !] ಮನೆಗೆ ಬಂದವ ಒಂದೆರಡು ಗಂಟೆ ಕಳೆದಮೇಲೆ " ಆಯಿ ಬೇಕು ಬೋಂಂಂಂ " ಎಂದು ಅತ್ತೆನಂತೆ. ಅದಕ್ಕೇ ಮತ್ಯಾರನ್ನೋ ಜೊತೆಮಾಡಿ ವಾಪಸು ಅಜ್ಜನಮನೆಗೆ ಕಳಿಸಿದರಂತೆ.

ವಾರ ಕಳೆದರೂ ಮನೆಗೆ ಬಂದಿರಲಿಲ್ಲ. ಬಾಳೆಕೊನೆ ಹಣ್ಣಾಗಿಬಿಟ್ಟಿತ್ತು. ಅಮ್ಮನಿಗೆ [ಅಜ್ಜಿಗೆ] ಮನಸ್ಸು ತಡೆಯಲಿಲ್ಲ. ಒಂದು ದಿನ ಬೆಳಿಗ್ಗೆ ಬೇಗನೇ ಮನೆವಾರ್ತೆ ಕೆಲಸಮುಗಿಸಿ, ಸ್ನಾನಾದಿಗಳನ್ನು ತೀರಿಸಿಕೊಂಡು, ಮನೆಯಲ್ಲಿ ಹೊರಗೆ ಕೆಲಸಕ್ಕೆ ಬಂದಿದ್ದ ಹೆಣ್ಣಾಳನ್ನು ಜೊತೆಗಿರಿಸಿಕೊಂಡು ಭಾರವಾದ ಬಾಳೇಹಣ್ಣುಗೊನೆ ಹೊತ್ತು ಅಜ್ಜನಮನೆಗೇ ಬಂದಿದ್ದಳು ನಮ್ಮಮ್ಮ! ಹಲಸಿನಕಾಯಿ ಹಪ್ಪಳ, ಬಾಳೆಗೊನೆ ಕಟ್ಟಿಕೊಂಡು ಬಂದ ಅಜ್ಜಿಯನ್ನು [ ಅಮ್ಮನನ್ನು] ನೋಡಿ ನಮಗೆ ಆಶ್ಚರ್ಯ. ಮೂಕವಿಸ್ಮಿತ ಎಂದು ಈಗ ಹೇಳಬಹುದು, ಆಗ ಆ ಶಬ್ದಗಳೆಲ್ಲಾ ಗೊತ್ತಿರಲಿಲ್ಲ ಹೀಗಾಗಿ!! ಅಜ್ಜನಮನೆಗೆ ಬಂದ ಅಮ್ಮ ಅಲ್ಲಿನವರಿಗೆ ಬೀಗಿತ್ತಿ. ಅಪರೂಪಕ್ಕೆ ಬಂದ ಬೀಗಿತ್ತಿಗೆ ಔತಣ ಏರ್ಪಡಿಸಬೇಕೆಂದರೂ ಹಠಮಾಡಿ ಸಾದಾ ಊಟ ಮುಗಿಸಿಕೊಂಡು ಊರಿಗೆ ಮರಳಿದ್ದರು ನಮ್ಮಮ್ಮ. ಅವಿಭಕ್ತ ಕುಟುಂಬವಾಗಿದ್ದ ನಮ್ಮನೆಯಲ್ಲಿ ಬಾಕಿ ಉಳಿದಂತೇ ಚಿಕ್ಕಪ್ಪಂದಿರು, ಅಜ್ಜ ಎಲ್ಲಾ ಇದ್ದರಲ್ಲ....ಯಾರಿಗೂ ಬಾಳೇಹಣ್ಣು ತಿನ್ನುವ ಯೋಗವಿರಲಿಲ್ಲ. ಯಾರಿಗೇ ಇರಲಿ ಬಿಡಲಿ ಮೊಮ್ಮಗ ಕೇಳಿದ್ದಾನೆ-ಕೊಡಬೇಕು----ಇದಿಷ್ಟೇ ನಮ್ಮಮ್ಮನ ಅನಿಸಿಕೆಯಾಗಿತ್ತು; ಅದನ್ನು ಪೂರೈಸಿದ್ದಳು.

ಪಂಜರಗಡ್ಡೆ[ ಸುವರ್ಣಗಡ್ಡೆ] ಪಲ್ಯ, ಹಾಗಲಕಾಯಿ ಹಸಿ, ಬದನೇಕಾಯಿ ಎಣ್ ಬಜ್ಜಿ, ಹೀರೇಕಾಯಿ ಗೊಜ್ಜು ಅಥವಾ ಸಿಹಿ ತಂಬ್ಳಿ...ಹೀಗೇ ಅಜ್ಜಿಯ ಅಡುಗೆಯ ಪಟ್ಟಿ ಬಹಳ ವಿಸ್ತಾರ. ಮಾಡುವ ಪ್ರತೀ ಅಡುಗೆಗೂ ಪ್ರತೀ ಪದಾರ್ಥಕ್ಕೂ ಅದರದ್ದೇ ಆದ ವಿಶಿಷ್ಟ ರುಚಿ. ಕಾಡಿನಿಂದ ಸೊಪ್ಪು ತರುವವರು ಆಗಾಗ ಮಡಾಗಲಕಾಯಿ ತರುತ್ತಿದ್ದರು. ಬಾಳೇದಿಂಡು ಸದಾ ಇರುತ್ತಿತ್ತು. ಕನ್ನೆಕುಡಿ, ತಗಟೆ [ಚಗಟೆ]ಸೊಪ್ಪು, ಬಸಲೆ, ಕೆಂಪು ಹರಿಗೆ ಹೀಗೇ ತರಾವರಿ ಸೊಪ್ಪುಗಳೂ ಬಳಸಲ್ಪಡುತ್ತಿದ್ದವು. ಮಳೆಗಾಲದ ಆದಿಯಲ್ಲಿ ಕಳಲೆ [ಬಿದಿರಿನ ಮೊಳಕೆ] ಕೂಡ ಬಳಸುತ್ತಿದ್ದರು. ಕಳಲೆ ಬಳಸುವುದರಿಂದ ಬೆನ್ನಲ್ಲಿ ಆಗಬಹುದಾದ ನಾರುಹುಣ್ಣು ಎಂಬ ಸಮಸ್ಯೆ ತಲೆಹಾಕುವುದಿಲ್ಲವಂತೆ. ಬಳಸುವ ಪ್ರತಿಯೊಂದೂ ಸಾಮಗ್ರಿ ಆದಷ್ಟೂ ಕ್ರಿಮಿನಾಶಕ ರಹಿತವಾಗಿರುತ್ತಿತ್ತು; ಆರೋಗ್ಯ ವರ್ಧಕವಾಗಿರುತ್ತಿತ್ತು.

ನಾವು ಚಿಕ್ಕವರಿದ್ದಾಗ ತಾಮ್ರ, ಕಂಚು ಮತ್ತು ಹಿತ್ತಾಳೆಯ ಪಾತ್ರೆಗಳು ಬಳಕೆಯಲ್ಲಿದ್ದವು. ಹಿತ್ತಾಳೆಯ ಲೋಟಗಳಲ್ಲೇ ಚಹಾ ಅಥವಾ ಕಷಾಯ [ನಮ್ಮೂರ ಕಡೆ ನಾವು ದಿನ ನಿತ್ಯ ಕುಡಿಯುವ ಭಾರತೀಯ ಮೂಲದ ಆರೋಗ್ಯಕರ ಪೇಯ] ಇತ್ಯಾದಿಗಳನ್ನು ಕುಡಿಯುತ್ತಿದ್ದರು. ಮಣ್ಣಿನ ಪಾತ್ರೆಗಳು ಬಹಳ ಬಳಸಲ್ಪಡುತ್ತಿದವು. ಊರಿಗೊಂದೋ ಮೂರು ನಾಕು ಗ್ರಾಮಗಳಿಗೊಂದೋ ಜಾತ್ರೆ ನಡೆಯುತ್ತಿತ್ತು. ಜಾತ್ರೆಗಳಲ್ಲಿ ಹೆಂಗಸರಿಗೆ ಬೇಕಾದ ಬಳೆ, ಪಿನ್ನು, ಬಾಚಣಿಗೆ, ಕ್ಲಿಪ್ಪು, ಸ್ನೋ, ಪೌಡರ್, ಪಾತ್ರೆಗಳು, ಮಕ್ಕಳ ಆಟಿಕೆಗಳು ಮಾರಾಟಕ್ಕೆ ಬರುತ್ತಿದ್ದವು. ಅಲ್ಲಲ್ಲಿ ಚಿಕ್ಕಪುಟ್ಟ ಸರ್ಕಸ್, ಡೊಂಬರಾಟ, ಬಾವಿಯಲ್ಲಿ ಸೈಕಲ್ ಓಡಿಸುವುದು, ಎರಡು ಕುತ್ತಿಗೆ ಮನುಷ್ಯ ಪ್ರದರ್ಶನ ಹೀಗೇ ಕೆಲವು ಅಪರೂಪದ ಸಂಗತಿಗಳು, ಆಟಗಳು ಹೆಂಗಸರು-ಮಕ್ಕಳಿಗೆ ಮುದನೀಡುತ್ತಿದ್ದವು. ಗಂಡಸರು ತಮಗೆಲ್ಲಾ ಏನೂ ಇದು ಹೊಸದಲ್ಲಾ ಎನ್ನುವ ರೀತಿ ಪೋಸುಕೊಟ್ಟು ಓರೆ‍ಗಣ್ಣಿನಲ್ಲೇ ಕುತೂಹಲಿಗಳಾಗಿ ನೋಡುತ್ತಾ ಸಾಗುತ್ತಿದ್ದರು. ಜಾತ್ರೆ ನಡೆದು ತಿಂಗಳುಗಳ ಕಾಲ ಎಲ್ಲರ ಬಾಯಲ್ಲೂ ಜಾತ್ರೆ, ಈ ಬಾರಿಯ ಜಾತ್ರೆಯ ವಿಶೇಷ ವೈಖರಿ, ಖರೀದಿಸಿದ ವಸ್ತುಗಳ ಬಗೆಗೆ, ಅಲ್ಲಿ ನೋಡಿದ ಸರ್ಕಸ್ಸು, ಏರಿದ ತೊಟ್ಟಿಲು ಇಂಥವುಗಳ ಬಗ್ಗೆ ಸುದ್ದಿ ಮುಗಿಯುತ್ತಲೇ ಇರಲಿಲ್ಲ. ನಮ್ಮೂರು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದೇ ಅವರ ಅಂಬೋಣ! ಜಾತ್ರೆಯ ಒಂದು ಮೂಲೆಯಲ್ಲೆಲ್ಲೋ ಮಣ್ಣಿನ ಪಾತ್ರೆಗಳೂ ಮಾರಾಟಕ್ಕೆ ಬರುತ್ತಿದ್ದವು. ಉದ್ದನೆಯದು, ಉರುಟುಗಟ್ಟಿನದು, ಅಗಲ ಬಾಯಿಂದು, ಬುಡ ಅಗಲ-ಕಂಠ ಚಿಕ್ಕದಾಗಿದ್ದು, ಗುಡಾಣ, ಮಡಿಕೆ-ಕುಡಿಕೆ, ಬೋಗುಣಿ, ಮೊಗೆ, ಹಣತೆಗಳು ಹೀಗೇ ಹಲವು ಆಕಾರ ವೈವಿಧ್ಯದ ಮಣ್ಣಿನ ಗೃಹೋಪಯೋಗೀ ಸಾಮಾನುಗಳು ದೊರೆಯುತ್ತಿದ್ದವು.

ಜಾತ್ರೆಗೆ ಸಾಗುವಾಗ ಕೆಲವರು ಎತ್ತಿನಗಾಡಿಗಳಲ್ಲಿ ಹೋಗುತ್ತಿದ್ದರು. ಚೆನ್ನಾಗಿ ಉಂಡು-ತಿಂಡು ಕಸುವುಳ್ಳ ಎತ್ತುಗಳು ಗಾಡಿಯನ್ನು ಖುಷಿಯಿಂದಲೇ ಎಳೆಯುತ್ತಿದ್ದವು. ಊರ ಹೊರಗಿನ ಸಮತಟ್ಟಾದ ಹಾದಿಯಲ್ಲಿ ಅವು ಸಾಗುವಾಗ ಅವುಗಳ ಕೊರಳ ಗಂಟೆಗಳ ನಿನಾದ ಬಹಳ ಮುದ ನೀಡುತ್ತಿತ್ತು. ಇಕ್ಕೆಲಗಳ ಹಸಿರು ಗಿಡಮರಗಳ ನಡುವಿನ ಹಾದಿಯಲ್ಲಿ ಅವು ನಡೆಯುವ ರಭಸಕ್ಕೆ ಮೇಲೆದ್ದ ಧೂಳಿ ಸುಂದರ ಸನ್ನಿವೇಶವನ್ನು ಸೃಷ್ಟಿಸುತ್ತಿತ್ತು. ಗಾಡಿಕಾರ ಅವುಗಳ ಹೆಸರು ಹಿಡಿದು " ಚುಚುಚುಚುಚು ಏ ಕರಿಯಾ, ಏ ನಂದಿ ಹೋಗ್ರಪ್ಪ ಬೇಗಾ " ಎಂದು ಬಾರುಕೋಲು ಎಳೆಯುವಷ್ಟರಲ್ಲಿ ಋತುಪರ್ಣನ ರಥದ ಕುದುರೆಗಳಿಗೆ ಇದ್ದ ವೇಗದಂತಹ ವೇಗದಲ್ಲಿ ಎತ್ತುಗಳು ಓಡುತ್ತಿದ್ದವು! [ಈಗಲೂ ನೆನೆಸಿಕೊಂಡರೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.... ಎಂಬ ನರಸಿಂಹಸ್ವಾಮಿಯವರ ಪದ್ಯದ ನೆನಪಾಗುತ್ತದೆ] ನಮ್ಮಂತಹ ಮಕ್ಕಳು ಎತ್ತುಗಳಿಗೆ ಭಾರ ಹೆಚ್ಚಾದೀತೆಂಬ ಅರಿವಿಲ್ಲದೇ ಗಾಡಿ ಹತ್ತಲು ಹಾತೊರೆಯುತ್ತಿದ್ದೆವು. ಕೊನೇಪಕ್ಷ ಹತ್ತುಮಾರಾದರೂ ಸರಿ ಗಾಡಿಪ್ರಯಾಣ ಏನೋ ಆಹ್ಲಾದಕರವಾಗಿರುತ್ತಿತ್ತು. ಜಾತ್ರೆಗೆ ಸಾಗಿ ದೇವರಿಗೆ ಹಣ್ಣು-ಕಾಯಿ ಸಮರ್ಪಿಸಿ ಸಂಜೆಯ ಇಳಿಬಿಸಿಲಿನಲ್ಲಿ ಹೊಳೆವ ರಥದ ಕಳಸನೋಡಿ ಮೈಮರೆಯುತ್ತಿದ್ದೆವು. ಕಿತ್ತಳೇ ಹಣ್ಣಿನ ಸುಗಂಧ ಇಡೀ ಜಾತ್ರೆಯ ಎಲ್ಲೆಲ್ಲೂ ಆವರಿಸಿರುತ್ತಿತ್ತು! ಪುಗ್ಗಿ, ಪೀಪಿ, ಪ್ಲಾಸ್ಟಿಕ್ ಹಾವು, ತಿರುಗಿಸಿ ನೋಡುವ ಚಿತ್ರಗಳ ಡಬ್ಬ, ಬಣ್ಣಬಣ್ಣದ ಬೊಂಬೆಗಳು ಅಲ್ಲಿರುತ್ತಿದ್ದವು; ಅನುಕೂಲವಿದ್ದರೆ ಖರೀದಿಸುವುದು, ಇರದಿದ್ದರೆ ಅಪ್ಪಂದೋ ಅಮ್ಮಂದೋ ಕೈ ಹಿಡಿದುಕೊಂಡು ಹಿಂತಿರುಗಿ ಆಸೆಗಣ್ಣಿನಲ್ಲಿ ಅವುಗಳನ್ನು ಇಟ್ಟಿರುವ ಅಂಗಡಿಗಳನ್ನು ನೋಡುತ್ತಾ ಸಾಗುತ್ತಿದ್ದೆವು. ಜಾತ್ರೆ ಮುಗಿದು ಅಂಗಡಿಗಳನ್ನು ಮುಚ್ಚುವ ದಿನಗಳಲ್ಲಿ ಅಂಗಡಿ ಹಾಕಿದವರು ಕಮ್ಮಿ ಬೆಲೆಗೆ ವಸ್ತುಗಳನ್ನು ಮಾರುತ್ತಾರೆ ಎಂದು ಇನ್ನೊಮ್ಮೆ ಹೋಗುವುದೂ ಇತ್ತು!

ಇಂತಹ ಜಾತ್ರೆಗಳಲ್ಲಿ ಖರೀದಿಸಿ ತಂದ ಮಣ್ಣಿನ ಪಾತ್ರೆಗಳು ನಮ್ಮಲ್ಲಿ ಬಹಳಕಾಲ ಇದ್ದವು. ರೀಯಲ್ ವಂಡರ್ಫುಲ್ ಅರ್ದನ್ ಪಾಟ್ಸ್ ! ಕಾಲ ಬದಲಾದ ಹಾಗೇ ಜರ್ಮನ್ ಬೆಳ್ಳಿ, ಅಲ್ಯೂಮೀನಿಯಂ ಮತ್ತು ಸ್ಟೀಲ್ ಪಾತ್ರೆಗಳು ಕಾಲಿಟ್ಟವು. ಆಚೀಚೆಯ ಮನೆಗಳಲ್ಲಿ ಸ್ಟೀಲ್ ಪಾತ್ರೆಗಳನ್ನೂ ಲೋಟಗಳನ್ನೂ ಬಳಸಲು ತೊಡಗಿದಾಗ ನಮ್ಮನೆಯಲ್ಲಿ ಮಾತ್ರ ಹಳೇ ಪಾತ್ರೆಗಳಿದ್ದರೆ ಮಾರ್ಯದೆಗೆ ಕಮ್ಮಿ ಎಂದು ಚಿಕ್ಕಪ್ಪಂದಿರು ಎಲ್ಲಿಂದಲೋ ಸ್ಟೀಲ್ ಪಾತ್ರೆಗಳನ್ನು ಖರೀದಿಸಿ ತಂದರು. ಹೊಸದಾಗಿ ಹೊಳೆಯುತ್ತಿದ್ದ ಲೋಟಗಳಲ್ಲಿ ಏನನ್ನಾದರೂ ಹಾಕಿಸಿಕೊಂಡು ಕುಡಿಯುವುದೇ ನಮ್ಮಂಥಾ ಮಕ್ಕಳಿಗೆ ಒಂದು ಗತ್ತು ! [ಅದು ಅಂದಿನ ದೊಡ್ಡವರಿಗೂ ಸಹ!] ಹೊಳೆಯುವ ಪಾತ್ರೆಗಳ ನಕಲೀ ವೈಖರಿಯ ಮುಂದೆ ಶುಭ್ರವಾದ, ಆರೋಗ್ಯಕರವಾದ ಮಣ್ಣಿನ ಮಡಕೆಗಳು ಒಂದೊಂದಾಗಿ ಹೀಗಳೆಯಲ್ಪಟ್ಟು ಅಟ್ಟಸೇರಿದವು. ಕೆಲವು ಹೆಂಗಸರು ಬಹಳಕಾಲದ ತಮ್ಮ ಕೋಪವನ್ನು ಅವುಗಳ ಮೇಲೆ ತೀರಿಸಿಕೊಂಡರೋ ಗೊತ್ತಿಲ್ಲ, ಕೆಲವು ಮಡಕೆಗಳು ಒಡೆದು ತೋಟದ ಮರದಬುಡದಲ್ಲಿ ಹೋಗಿ ಬಿದ್ದವು! ಅಟ್ಟವೇರಿದ ಮಡಕೆಗಳು-ಕುಡಿಕೆಗಳು ಧೂಳುಹಿಡಿದ ದಯನೀಯ ಸ್ಥಿತಿಯಲ್ಲಿ ನಮ್ಮನ್ನು ಆಗಾಗ ನೋಡುತ್ತಿದ್ದವು!

ಅಜ್ಜ ಕೊಟ್ಟ ಹಣದಲ್ಲಿ ಕೊತ್ತಂಬರಿ ಕರಡಿಗೆಯಲ್ಲಿ ಬಿಸ್ಕಿಟ್ ಪೊಟ್ಟಣದ ಜೊತೆ ಇಟ್ಟಿದ್ದ ಮೂರು ರೂಪಾಯಿಗಳನ್ನು ಒಯ್ದು ಅಜ್ಜಿ ಜಾತ್ರೆಯಲ್ಲಿ ಬಹಳಹೊತ್ತು ಕೂತು ಆಸ್ಥೆಯಿಂದ ಸೋರದ ಮತ್ತು ಆಕಾರಬದ್ಧವಾಗಿರುವ ಮಣ್ಣಿನ ಪಾತ್ರೆಗಳನ್ನು ತಂದಿದ್ದಳು. ಬಹಳ ಪ್ರೀತಿಯಿಂದ ಅವು ಒಡೆಯದ ಹಾಗೇ ಚೂಳಿಯಲ್ಲಿ ಹುಲ್ಲಿನಮೇಲೆ ಜೋಡಿಸಿಕೊಂಡು ಆಳಿನಕೈಲಿ ಹೊರಿಸಿಕೊಂಡು ಬಂದಿದ್ದಳು. ಹುಳಿಗೆ ಇಂಥದ್ದು, ಸಾರಿಗೆ ಓ ಇದು, ಸಾಸಿವೆ ಮಾಡುವಾಗ ಇದು, ಗೊಜ್ಜು ಹಾಕಿಡುವುದು ಇದರಲ್ಲಿ, ಇದರಲ್ಲಿ ತಂಬ್ಳಿಮಾಡಿದರೆ ನಮ್ಮನೆಯಲ್ಲಿ ಎಲ್ಲರಿಗೂ ಸಾಲುತ್ತದೆ, ಮತ್ತೆ ಓ ಈ ಚಿಕ್ಕದಿದೆಯಲ್ಲಾ ಅದು ಹತ್ತನಗೊಜ್ಜಿಗೆ ...ಹೀಗೇ ಆರಿಸಿ ಆರಿಸಿ ಪಾತ್ರೆಗಳು ನಿರ್ವಹಿಸಿಬೇಕಾದ ಪಾತ್ರಗಳನ್ನು ಮೊದಲೇ ಹಂಚಿಬಿಟ್ಟಿದ್ದಳು. ಪ್ರತಿಯೊಂದೂ ಪಾತ್ರೆ ಅವಳ ಪ್ರೀತಿಯ ಕರಗಳಲ್ಲಿ ಸಿಕ್ಕಾಗ ಮುದ್ದಿನ ಮಗುವಿನಂತೇ ಆಡುತ್ತಿತ್ತು; ಜೀವವಿಲ್ಲದ ಪಾತ್ರೆಗಳು ಸಜೀವಿಗಳ ರೀತಿ ಅಮ್ಮನ ಜೀವನದ ಭಾಗವಾಗಿದ್ದವು, ಅವಳೊಂದಿಗೆ ಮಾತನಾಡುತ್ತಿದ್ದವು, ಅವಳ ಸ್ಪರ್ಶದಿಂದ ಪುಳಕಗೊಳ್ಳುತ್ತಿದ್ದವು, ಅವಳ ಕೈಲೇ ನಿತ್ಯ ಸ್ನಾನಮಾಡಿಸಿ, ಕೂದಲು ಬಾಚಿಸಿಕೊಳ್ಳುತ್ತಿದ್ದವು! ಕಪ್ಪಿನದು, ಕಡುಗಪ್ಪಿನದು, ಮಣ್ಣಿನ ಬಣ್ಣದ್ದು, ನಸುಗೆಂಪಿನದು, ನಸುಗೆಂಪಿನ ಮೈಗೆ ಒಂದು ಭಾಗದಲ್ಲಿ ಕಪ್ಪು ಬಣ್ಣ ಹೊಂದಿರುವುದು ಹೀಗೇ ಅವುಗಳ ಬಣ್ಣಗಳು. ಒಂದೊಂದು ಪಾತ್ರೆಯೂ ನಿಧಾನಕ್ಕೆ ತಟ್ಟಿದರೆ ಒಂದೊಂದು ಸ್ವರ ಹೊರಡಿಸುತ್ತಿತ್ತು.

ನಾನು ಕಲಿತು ಬೆಂಗಳೂರಿಗೆ ಸೇರುವ ಹೊತ್ತಿನಲ್ಲಿ ಅಮ್ಮ ಮುದುಕಾಗಿದ್ದಳು. ಅಜಮಾಸು ೬೮-೬೯ ವರ್ಷ. ಅಡಿಗೆಮಾಡಲು ಆಗುತ್ತಿರಲಿಲ್ಲ; ಮಾಡುವುದು ಬೇಕಾಗೂ ಇರಲಿಲ್ಲ. ಆ ಸಮಯ ನಮ್ಮ ಅಡುಗೆ ಮನೆಯಲ್ಲಿ ಮಣ್ಣಪಾತ್ರೆಗಳು ಇರಲೇ ಇಲ್ಲ. ಅಟ್ಟದಮೇಲೆ ಕೆಲವು ಮಾತ್ರ ಇದ್ದವು. ಅಮ್ಮ ಅಪರೂಪಕ್ಕೆ ಹಠಮಾಡಿ ಅವುಗಳನ್ನು ಕೆಳತರಿಸಿಕೊಂಡು ಅವುಗಳಲ್ಲಿ ಏನನ್ನಾದರೂ ಮಾಡುತ್ತಿದ್ದಳು. ಬೆಂಗಳೂರಿಂದ ಮನೆಗೆ ಬರುವ ಪೌಲ್ದಾರನಂಥಾ ಮೊಮ್ಮಗನಿಗೆ ಬರುವ ಸುದ್ದಿ ಕೇಳೇ ಮಣ್ಣಿನ ಪಾತ್ರೆಗಳಲ್ಲಿ ಏನದರೂ ಪದಾರ್ಥಗಳನ್ನು ಪ್ರೀತಿಯಿಂದ ತಾನೇ ಮಾಡುತ್ತಿದ್ದಳು. " ಬೋಗುಣಿಯಲ್ಲಿ ಸೌತೇಕಾಯಿ ಸಾಸಿವೆ, ಕೆಸುವಿನ ಸೊಪ್ಪಿನ ಕರ್ಗ್ಲಿ ಮಾಡಿದ್ದೇನೆ ಮಗಾ ಎಷ್ಟು ರುಚಿಯಾಗಿದೆ ನೋಡು" ಎಂದು ಅವರು ಕರೆದರೆ ಕಿವಿ ನಿಮಿರುತ್ತಿತ್ತು; ಯಾಕೆಂದರೆ ಒಳಕಲ್ಲಿನಲ್ಲಿ ರುಬ್ಬಿ ಹಾಕಿದ ಪದಾರ್ಥವನ್ನು ಮಣ್ಣಿನ ಪಾತ್ರೆಗಳಲ್ಲಿ ಹದಗೊಳಿಸಿದಾಗ ಸಿಗುವ ಸ್ವಾದ ಇಂದಿನ ಟಪ್ಪರವೇರ್ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಸಿಗುವುದಿಲ್ಲ, ಯಾವುದೇ ಸ್ಟೀಲ್ ಪಾತ್ರೆಗಳಲ್ಲೂ ಸಿಗುವುದಿಲ್ಲ. ಮಣ್ಣಿನ ಮಡಿಕೆ-ಕುಡಿಕೆಗಳಲ್ಲಿ ಬೆಂದ ಆಹಾರದ ರುಚಿಗಟ್ಟು ಕುಕ್ಕರ್ ಒಳಗೇ ಬೆಂದ ಆಹಾರಕ್ಕೆ ದಕ್ಕುವುದಿಲ್ಲ!

೧೯೯೪ ರಲ್ಲಿ ಅಂದರೆ ಬೆಂಗಳೂರಿಗೆ ನಾನು ಬಂದ ಒಂದೇ ವರ್ಷದಲ್ಲಿ ಅಜ್ಜಿ ತೀರಿಕೊಂಡಳು. ಗತಿಸಿದ ಅಮ್ಮನೊಡನೆ ಮಡಿಕೆಗಳೂ ಕಾಲಗರ್ಭದ ಇತಿಹಾಸದ ಪುಟಗಳಾದವು. ಕಾಲ ಬದಲಾಗಿ ಹೋಯ್ತು. ಗ್ರಾಮೀಣ ಭಾಗಕ್ಕೂ ಕುಕ್ಕರ್ ಗಳು ಬಂದವು, ಗಿಡಮರಗಳೆಲ್ಲ ಸಂಖ್ಯಾಬಲದಲ್ಲಿ ಮೈನಾರಿಟಿಗೆ ಸೇರಿದವು ! ಹಿಂದಕ್ಕೆ ಹಿಂದಕ್ಕೆ ಹೊರಳಿ ನೋಡಿದಾಗ ಅಂದಿನ ನಮ್ಮ ದಿನಗಳಲ್ಲಿ ಇದ್ದ ಗಣಪತಜ್ಜ, ಮಂಜ್ನಾಥ ಮಾವ, ಪಟೇಲಜ್ಜ, ಗೌಡ್ರಕೇರಿ ಚಂದ್ರು, ಹರಿಜನ ಸಂಕ್ರು, ದೇವಪ್ಪ ಶೆಟ್ಟರು, ಮಿಡಿ ಆಚಾರಿ ಎಲ್ಲರೂ ಸಿಕ್ಕು ಮಾತಾಡುತ್ತಿರುತ್ತಾರೆ! ಹಾಗೇ ಆ ಎಳವೆಯ ದಿನಗಳಲ್ಲಿ ಎಲ್ಲವೂ ಸುಂದರ, ಎಲ್ಲರೂ ಹತ್ತಿರ! ಜೀಮೇಲೂ ಇಲ್ಲ, ಈಮೇಲೂ ಇಲ್ಲ; ಇದ್ದವರೆಲ್ಲಾ ಮೇಲು ಮತ್ತು ಫೀಮೇಲುಗಳು ಮಾತ್ರ. ಇದ್ದವರಲ್ಲಿ ಜೀವಂತಿಕೆಯಿತ್ತು, ಪರಸ್ಪರ ಸೌಹಾರ್ದವಿತ್ತು. ಜೀವನದಲ್ಲಿ ಅತಿಯಾದ ಆಸೆಯಿರಲಿಲ್ಲ, ಅತಿರೇಕದ ಸಿರಿವಂತಿಕೆಯ ಸೋಗಿರಲಿಲ್ಲ, ಆಕಾಶಕ್ಕೆ ಏಣಿಹಾಕುವ ಹುಚ್ಚು ಹಂಬಲವಿರಲಿಲ್ಲ.

ಆಧುನಿಕತೆ ಕಾಲಿಟ್ಟಂತೇ ಮಾನವೀಯ ಮೌಲ್ಯಗಳು ಮರೆತುಹೋದವು, ದುಡ್ಡೇ ದೊಡ್ಡಪ್ಪನಾಗಿ ಸದ್ಗುಣಿಗಳು ಮರೆಯಾಗತೊಡಗಿದರು. ಊರಜನರ ವ್ಯಾವಹಾರಿಕ ಚಾತುರ್ಯ ಕುಹಕವನ್ನೂ ಅಳವಡಿಸಿಕೊಂಡಿತು. ಮರಗಿಡಗಳು ಕಮ್ಮಿಯಾದವು, ಮನೆಗಳು ಜಾಸ್ತಿಯಾಗಿ ಹತ್ತಿರ ಹತ್ತಿರವಾದವು ಆದರೆ ಮನಗಳು ಮಾತ್ರ ದೂರ ದೂರ ಸರಿದವು. ಶಂಕ್ರಣ್ಣ ಪೇಟೆಗೆ ಹೋದರೆ ಅಕ್ಕ-ಪಕ್ಕದ ಮನೆಗಳಿಗೆ ಬೇಕಾದ್ದೂ ಬರುತ್ತಿತ್ತು, ಮತ್ತೊಂದಿನ ಮಾದೇವಣ್ಣನ ಪಾಳಿ! ಇಂದು ಹಾಗಿಲ್ಲ, ಚಿಕ್ಕ ಸಾಮಾನು ಹಳ್ಳಿಗಳಲ್ಲಿ ಸಿಗದ ಔಷಧಿಮಾತ್ರೆಗಳು ಎಲ್ಲಕ್ಕೂ ಅವರವರ ಮನೆಯವರೇ ಹೋಗಬೇಕು. ಯಾರೂ ಯಾರಿಗೂ ಆಪ್ತರಲ್ಲ; ಒಟ್ಟಾರೆ ಇರಬೇಕು, ಇದ್ದಾರೆ! ಗಣಪತಜ್ಜ ಅಪರೂಪಕ್ಕೆ ಅನ್ನದ ಕೇಸ್ರೀಬಾತು ಮಾಡಿಸಿದ್ದರೆ ಒಂದೊಂದೇ ಚಮಚೆಯಷ್ಟು ಬಂದರೂ ಸರಿ ನಮ್ಮಂತಹ ಪೋರಗಳನ್ನೂ ಕರೆದು ಹಂಚುವ ವೈವಾಟಿತ್ತು. ಹಲವರ ಬಾಯಲ್ಲಿ ನಲಿದ ಕೇಸ್ರೀಬಾತನ್ನು ನೋಡಿದಾಗ ಗಣಪತಜ್ಜನ ಬಾಯಲ್ಲಿ ಕೇಸ್ರೀಬಾತು ಇನ್ನೂ ರುಚಿಸುತ್ತಿತ್ತು. ಮದುವೆ-ಮುಂಜಿಗಳಲ್ಲಿ ಪರಸ್ಪರ ಅಡುಗೆಮಾಡುವುದು, ಬಡಿಸುವುದು ಇತ್ಯಾದಿ ಕೆಲಸಗಳಲ್ಲಿ ಅನುವಾಗುತ್ತಿದ್ದ ಜನ ಈಗ ಅಡುಗೆ ಭಟ್ಟರುಗಳನ್ನು ಆಶ್ರಯಿಸಿದ್ದಾರೆ; ಕರೆದರೂ ಊಟದ ಹೊತ್ತಿಗೆ ಬಂದು ಹೋಗಲು ತುಟ್ಟಿ! ಗತಿಸಿದ ಆ ಕಾಲಘಟ್ಟವನ್ನು ಆಗಾಗ ನೆನೆದಾಗ ನನ್ನ ಮನ ನೆನೆಯುವ ನೆನೆದು ಮುದಗೊಳ್ಳುವ ಹಾಡು


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ........ ನಮಸ್ಕಾರ.


Wednesday, December 14, 2011

ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಇದು ನನ್ನ ಒತ್ತಾಯವಲ್ಲ, ನಿಮ್ಮೆಲ್ಲರ ಗೆಳೆಯನಾಗಿ, ಅಂತರ್ಜಾಲದ ಮೂಲಕ ನಿಮ್ಮ ಆಪ್ತ ಸಹವರ್ತಿಯಾಗಿ ಕೊಡುತ್ತಿರುವ ನನ್ನ ಸಲಹೆ ಅಷ್ಟೇ. ಕಳೆದವಾರ ನಂಬಿಕೆಯ ಬಗ್ಗೆ ಬರೆದಿದ್ದೆ. ಆಮೇಲೆ ಅತಿಯಾದ ಕೆಲಸಗಳ ನಡುವೆ ನನ್ನ ಅಂತರ್ಜಾಲದ ’ಅಂತರ್ಜಲ’ ಕಮ್ಮಿಯಾಗಿ ಹೋಗಿತ್ತು. ಬರೆಯಲು ಮನಸ್ಸಿದ್ದರೂ ವಿಷಯಗಳು ಹಲವು ಹತ್ತು ಮನಸ್ಸನ್ನು ಮುತ್ತಿಕೊಂಡು ಬರೆಯುವಂತೇ ಒತ್ತಾಯಿಸುತ್ತಿದ್ದರೂ ಬರೆಯಲು ಸಮಯಮಾತ್ರ ಕೊನೆಗೂ ಆಗಿರಲಿಲ್ಲ. ಕೇಳದೇ ಧುಮ್ಮಿಕ್ಕಿದ ಭಾವನೆಗಳ ಜಲಪಾತದಲ್ಲಿ ಕಂಡ ದೃಶ್ಯವೇ ಕನ್ನಡ ನಾಡ ಭಕ್ತಿಗೀತೆಗಳು-ನೀವದನ್ನು ಓದಿದ್ದೀರಿ.

ನಿಮ್ಮೊಡನೆ ಬ್ಲಾಗ್ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟು ಅದಾಗಲೇ ಕೆಲವು ದಿನಗಳು ಕಳೆದವು. ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುವ ಮನುಷ್ಯ ನಾನಲ್ಲ. ಸಮಾಜಕ್ಕೆ ಅಂತಹ ಕೊಡುಗೆಯನ್ನು ಕೊಟ್ಟು ಹಸಿವಿನಲ್ಲಿರುವವರಿಗೆ ಅನ್ನಕೊಡಲು ಸಾಧ್ಯವಿದ್ದರೆ, ಬಡವರ ಬಡತನಕ್ಕೆ ಕಾರಣ ಹುಡುಕಿ ಸ್ವಿಸ್ ಬ್ಯಾಂಕಿನಲ್ಲಿ ಕದ್ದೂಮುಚ್ಚಿ ಹಣವಿಟ್ಟು ಚುನಾವಣೆ ಬಂದಾಗ ಬಡವರನ್ನುದ್ಧರಿಸುವ ಸೋಗು ಹಾಕುವವರ ಆ ಕಳ್ಳಹಣವನ್ನು ತಂದು ಬೇಕಾದವರಿಗೆ, ನೊಂದವರಿಗೆ, ಆರ್ತರಿಗೆ ಹಂಚಿ ಸಮತ್ವವನ್ನು ಕಾಪಾಡಿಕೊಳ್ಳಬಹುದಾದ ತಾಕತ್ತು ನನ್ನಲ್ಲಿದ್ದಿದ್ದರೆ, ನನ್ನ ಹುಟ್ಟುಹಬ್ಬ ಎಲ್ಲರಿಗೂ ಸಂಭ್ರಮವಾದರೆ ಹೋಗಲಿ ಬಹುತೇಕರಿಗಾದರೂ ಸಂಭ್ರಮವಾದರೆ ಅದನ್ನು ಆಚರಿಸಬಹುದಿತ್ತು. ಇದು ಕೀಳರಿಮೆಯಲ್ಲ, ಇದು ಸಾಮಾನ್ಯಾತಿಸಾಮಾನ್ಯನೊಡನೆ ಸಹಜೀವನ ನಡೆಸುವ ಪ್ರವೃತ್ತಿ. ಅಂದಾದುಂಧಿ ಖರ್ಚುಮಾಡಿ, ಕೇಕು ಕತ್ತರಿಸಿ ಸಂಭ್ರಮಿಸುವ ಬದಲು ಅದೇ ಹಣವನ್ನು ಯಾರು ಅಸಹಾಯರು ಅವರಿಗೆ ನೀಡಿದರೆ ಅದರಲ್ಲಿರುವ ಖುಷಿ ನಿಜಕ್ಕೂ ಇದರಲ್ಲಿಲ್ಲ! ನನ್ನ ಮಗನಿಗೆ ಚಾಕೋಲೇಟ್ ಕೊಡಿಸುವಾಗ ಕೂಡ ಕಟ್ಟಡ ಕೂಲಿಗಳ ಮಗು ರಸ್ತೆಯಲ್ಲಿ, ಮರಳದಿಬ್ಬದಲ್ಲಿ ಹಸಿವಿನಿಂದ ಹೊರಳಾಡುದನ್ನು ಮನ ನೆನೆಯುತ್ತದೆ; ಮರುಗುತ್ತದೆ! ರಸ್ತೆಗಳಲ್ಲಿ ಡೊಂಬರಾಟನಡೆಸುವ ಎಳೆಯ ಮಕ್ಕಳನ್ನು, ಬಿಸಿಲಿನಲ್ಲಿ ಹಸಿದ ಮಗುವನ್ನು ಜೋಳಿಗೆಯಲ್ಲಿ ಹೊತ್ತು ಬೇಡುವ ತಾಯಂದಿರನ್ನೂ ನೋಡಿದಾಗ ಅಯ್ಯೋ ಎನಿಸುತ್ತದೆ. ಈ ಎಲ್ಲದರ ನಡುವೆ ನನಗೆ ಹುಟ್ಟಿದ ಹಬ್ಬದ ಸಂಭ್ರಮ ಬೇಕಾಗಿಲ್ಲ; ಅದರಂತೆಯೇ ಬ್ಲಾಗ್ ಯಾವತ್ತು ಹುಟ್ಟಿತು ಎಂಬುದನ್ನೂ ಅಷ್ಟಾಗಿ ಮತ್ತೆ ಮತ್ತೆ ಅವಲೋಕಿಸುವುದಿಲ್ಲ. ಬರೆಯುವುದಷ್ಟೇ ನನ್ನ ಆದ್ಯತೆ.

ಒಮ್ಮೆ ನಾವು ಇನ್ನೂ ದ್ವಿತೀಯ ಪಿಯೂಸಿಯನ್ನು ಓದುತ್ತಿರುವ ಸಮಯ, ನನ್ನೊಟ್ಟಿಗೆ ನನ್ನೊಬ್ಬ ಮಿತ್ರ, ಇಬ್ಬರದೂ ಒಂದು ರೂಮು, ನಮ್ಮದೇ ಅಡುಗೆ. ಒಂದು ರಾತ್ರಿ ಸುಮಾರು ೧ ಗಂಟೆಗೆ ಹೊಟ್ಟೆಯನೋವು ಎಂದು ಚೀರಹತ್ತಿದ ಆತನಿಗೆ ಏನುಕೊಡಬೇಕೆಂದು ನನಗೆ ತಿಳಿಯಲಿಲ್ಲ. ನನ್ನಲ್ಲಿ-ಅವನಲ್ಲಿ ಯಾವುದೇ ಔಷಧವಿರಲಿಲ್ಲ, ಕೆಳಮಧ್ಯಮದರ್ಜೆಯ ಪಟ್ಟಣಗಳಲ್ಲಿ ರಾತ್ರಿ ೮:೩೦ ನಂತರ ಔಷಧದ ಅಂಗಡಿಗಳು ಬಾಗಿಲು ಮುಚ್ಚಿರುತ್ತವೆ. ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೆ ಯಾರಲ್ಲಿ ಕೇಳುವುದು? ಮಾರ್ನೇ ದಿನ ನನಗೆ ಪರೀಕ್ಷೆ. ಆ ಪರೀಕ್ಷೆಯೆ ನಡುವೆಯೇ ಈ ಪರೀಕ್ಷೆ! [ಆತನಿಗೆ ಅಗ ಪರೀಕ್ಷೆಯಿರಲಿಲ್ಲ ಎಂಬುದು ಸಮಾಧಾನ] ಕತ್ತಲ ದಾರಿಯಲ್ಲಿ ಆ ಅಪರಾತ್ರಿಯಲ್ಲಿ ರಸ್ತೆಹಿಡಿದು ಆತನನ್ನು ಯಾವುದಾದರೂ ಆಸ್ಪತ್ರೆಗೆ ಒಯ್ಯಲು ನನ್ನಲ್ಲಿ ಜಾಸ್ತಿ ಹಣಕೂಡ ಇರಲಿಲ್ಲ. ಹಣವಿರದಿದ್ದಾಗ ಯಾವುದೇ ಕೆಲಸವಾಗಲಿ ಅರ್ಧ ಜಂಘಾಬಲವೇ ಉಡುಗಿಹೋಗುತ್ತದೆ! ಈಗಂತೂ ಎಲ್ಲೆಲ್ಲೂ ಎಲ್ಲರಿಗೂ ಹಣವೇ ಪ್ರಧಾನ.

ಎರಡು ನಿಮಿಷ ಯೋಚಿಸಿದೆ. ನಾನೊಬ್ಬ ಭಕ್ತಿ ಭಂಡಾರಿ. ನನಗೆ ನಾನು ನಂಬಿದ ಕಾಣದ ಆ ಶಕ್ತಿಯಲ್ಲಿ ಅತೀವ ನಂಬಿಕೆಯಿದೆ. ಅದು ರಾಮನೋ ರಹೀಮನೋ ಬುದ್ಧನೋ ಕ್ರಿಸ್ತನೋ ಎಲ್ಲವೂ ಕೂಡ; ಹಲವು ರೂಪಗಳನ್ನು ಪಡೆಯಬಲ್ಲ ನಿರಾಕಾರ ರೂಪ! ನನ್ನ ಚೀಲದಲ್ಲಿ ಒಂದು ಕರಡಿಗೆಯಲ್ಲಿ ಶ್ರೀರಾಮಚಂದ್ರಾಪುರಮಠದ ಹಿಂದಿನ ಗುರುಗಳಾಗಿದ್ದ ಬ್ರಹ್ಮೈಕ್ಯ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ತಮ್ಮ ಕರಕಮಲದಿಂದ ಶ್ರೀರಾಮ[ಶಂಕರಾಚಾರ್ಯರಿಂದ ನೀಡಲ್ಪಟ್ಟು, ಅವಿಚ್ಛಿನ್ನವಾದ ಪರಂಪರೆಯ ಸ್ವಾಮಿಗಳಿಂದ ಸದಾ ಪೂಜೆಗೊಳ್ಳುವ]ನನ್ನು ಪೂಜಿಸಿದ್ದ ಶ್ರೀಗಂಧದ ಪ್ರಸಾದದ ಉಂಡೆಗಳು ಇದ್ದವು. ನಿತ್ಯವೂ ನಾನು ಅವುಗಳಲ್ಲಿ ಚೂರು ತುಣುಕು ತೆಗೆದು ಸ್ವಲ್ಪ ನೀರು ಸೇರಿಸಿ ಕಲಸಿ ಹಣೆಗೆ ಹಚ್ಚಿಕೊಳ್ಳುತ್ತಿದ್ದೆ. ಯಾಕೋ ಶ್ರೀರಾಮನ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು, ಮನಸಾ ಗುರುಪರಂಪರೆಗೆ, ಶ್ರೀರಾಮನಿಗೆ ಒಮ್ಮೆ ನಮಿಸಿ ಸ್ವಲ್ಪ ಅವೇ ಗಂಧದ ತುಣುಕುಗಳನ್ನು ಲೋಟವೊಂದರಲ್ಲಿ ಹಾಕಿ ನೀರಿನಲ್ಲಿ ಕದಡಿ ಮಿತ್ರನಿಗೆ ಕುಡಿಸಿದೆ. ಅರ್ಧಗಂಟೆಯೂ ಕಳೆದಿರಲಿಲ್ಲ, ಹೊಟ್ಟೆನೋವು ನಿಂತಿತ್ತು!

ಇನ್ನೊಂದೆರಡು ಪ್ರಸಂಗ ಹೀಗಿದೆ: ನಾನು ಓಡಿಸುತ್ತಿರುವ ಸ್ಕೂಟರಿಗೆ ಒಂದು ಕಾರು ಬಂದು ಗುದ್ದುವ ಸನ್ನಿವೇಶ ಎದುರಾಯ್ತು. ಕಾರು ಎಡದಿಂದ ನನಗೆ ತಾಗುತ್ತಿರುವುದು ಕಾಣುತ್ತಿತ್ತು; ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಆತ ಬಹಳವೇಗದಲ್ಲಿದ್ದ. ನುಗ್ಗಿ ಬಂದ ಆತ ಎಡಕ್ಕೆ ಹೊಡೆದೇ ಬಿಟ್ಟ. ಸ್ಕೂಟರಿಗೆ ಸ್ವಲ್ಪ ಪೆಟ್ಟುಬಿದ್ದಿದ್ದು ಬಿಟ್ಟರೆ ನನಗೆ ಏನೂ ಆಗಲಿಲ್ಲ! ಗೇರುಸೊಪ್ಪೆಯ ಘಟ್ಟದ ಇಳಿಜಾರಿನಲ್ಲಿ ನಾವು ಪ್ರಯಾಣಿಸುತ್ತಿದ್ದ ಬಸ್ಸಿನ ಜಾಯಿಂಟ್ ಕಟ್ಟಾಗಿಹೋಯ್ತು. ಬಸ್ಸು ಹೇಗ್ಹೇಗೋ ಓಡಲು ತೊಡಗಿತ್ತು, ಸಾಲದ್ದಕ್ಕೆ ಬ್ರೇಕ್ ಕೂಡ ಚೆನ್ನಾಗಿರಲಿಲ್ಲ. ಡ್ರೈವರ್ ಚಿಂತೆಗೀಡಾಗಿದ್ದ. ಬಸ್ಸಿನಲ್ಲಿ ನಿದ್ದೆಮಾಡಿಕೊಂಡಿದ್ದವರನ್ನು ಬಿಟ್ಟರೆ ಮಿಕ್ಕುಳಿದವರಿಗೆ ವಿಷಯದ ಅರಿವಾಗಿತ್ತು. ಆದರೂ ಚಲಿಸುವ ವಾಹನದಲ್ಲಿ ಕುಳಿತು ಅದರ ನಿಯಂತ್ರಣ ನಮ್ಮ ಕೈಮೀರಿದಾಗ ಏನುಮಾಡಲು ಸಾಧ್ಯ ? ಇಲ್ಲೆಲ್ಲಾ ನನಗೆ ಅನಿಸಿದ್ದು ನನ್ನ ನಂಬಿಕೆ ನನ್ನನ್ನು ಇನ್ನೂ ಇಲ್ಲಿ ಉಳಿಸಿದೆ. ನನ್ನ ’ಅವತಾರ’ಕ್ಕೆ ಕರ್ತವ್ಯ ಇನ್ನೂ ಬಾಕಿ ಇದೆ!

ಚಿಕ್ಕವನಿರುವಾಗ ನಮ್ಮ ತೋಟದಲ್ಲಿ ಬಾವಿಯೊಂದನ್ನು ತೋಡುತ್ತಿದ್ದರು. ಹತ್ತಡಿ ಆಳದ ಬಾವಿಯಲ್ಲಿ ಅದಾಗಲೇ ನೀರು ಸಣ್ಣಗೆ ಜಿನುಗುತ್ತಿತ್ತು. ಕೆಸರುಸಹಿತದ ಆ ನೀರನ್ನು ಹೊರಹಾಕುವ ಕೆಲಸಕ್ಕೆ ತುಂಬಿಸಿಕೊಡುವ ಸಹಾಯಕ ನಾನಾಗಿದ್ದೆ. ಆ ದಿನ ಅಪರಾಹ್ನ ಮೂರುಗಂಟೆಯೂ ಆಗಿರಲಿಲ್ಲ. ನನಗ್ಯಾಕೋ ಕೋಪ ಬಂದಿತ್ತು; ನೀರು ತುಂಬಿಸುವುದಿಲ್ಲವೆಂದು ಜಗಳವಾಡಿ ಮೇಲಕ್ಕೆ ಹತ್ತಿ ಹೊರಟುಬಿಟ್ಟೆ. ನಾನು ಹಾಗೆ ಮಾಡಿದ ನಂತರ ಬಾವಿ ತೆಗೆಯುತ್ತಿದ್ದ ಆಳುಗಳು ತಮಗೂ ಯಾಕೋ ಸಾಕೆನಿಸಿ ಮೇಲಕ್ಕೆ ಬಂದಿದ್ದರು. ಕ್ಷಣಾರ್ಧದಲ್ಲಿ ಬಾವಿಯ ಪಕ್ಕೆ ಕುಸಿದು ಹತ್ತಾರು ಕ್ವಿಂಟಾಲು ಕಲ್ಲು ಮಿಶ್ರಿತಮಣ್ಣು ರಾಶಿ ಬಿತ್ತು! ಬಾವಿಯಲ್ಲೇ ಇದ್ದಿದ್ದರೆ ನಾವೆಲ್ಲಾ ಮಣ್ಣೊಳಗೇ ಮಣ್ಣಾಗುತ್ತಿದ್ದೆವೋ ಏನೋ.

ಇನ್ನೂ ಹಲವಾರು ಘಟನೆಗಳಿವೆ. ಇದನ್ನೆಲ್ಲಾ ನನೆಸಿದಾಗ ನನಗನಿಸಿದ್ದು ಯಾವುದೋ ಶಕ್ತಿ ನಮಗೇ ಅರಿವುಗೊಡದೆ ಸತತ ತನ್ನನ್ನು ಕೆಲಸದಲ್ಲಿ ನಿಯೋಜಿಸಿಕೊಂಡಿರುತ್ತದೆ. ನಂಬಿಕೆಯಿಂದ ಪ್ರಾರ್ಥಿಸಿದರೆ ಅದರಿಂದ ಕಷ್ಟಕ್ಕೆ ಪರಿವರ್ತನೆ ಸಿಗುತ್ತದೆ! ಪ್ರಾರ್ಥಿಸುವಾಗ ನಿಸ್ವಾರ್ಥರಾಗಿ ಪ್ರಾರ್ಥಿಸಬೇಕು. ಬರೇ ನಾನು-ನನ್ನದು ಹೆಂಡತಿ-ಮಕ್ಕಳು ಕುಟುಂಬ ಇವಷ್ಟನ್ನೇ ಅಲ್ಲದೇ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " [ಜಗತ್ತಿನ್ನ ಎಲ್ಲರ ಯೋಗಕ್ಷೇಮಾಭಿವೃದ್ಧಿಯನ್ನು ಬಯಸುವ] ಪ್ರಾರ್ಥನೆ ನಮದಾದರೆ ಅದಕ್ಕೆ ಸಿಗುವ ಫಲವೂ ಕೂಡ ದೊಡ್ಡದು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮೀಸಾ ಕಾಯ್ದೆ ಜಾರಿಗೊಳಿಸಿ ಅನೇಕರನ್ನು ವಿನಾಕಾರಣ ಶಿಕ್ಷೆಗೆ ಗುರಿಪಡಿಸಿದ್ದಳು. ಅದೇ ಕಾಲಕ್ಕೆ ಜನ ಒಳಗೊಳಗೇ ಗುಸುಗುಸು ದಂಗೆ ಎದ್ದಿದ್ದರು. ಪರಿಸ್ಥಿತಿಯನ್ನರಿತ ಇಂದಿರಾ ಕಾಂಚಿಯ ಕಡೆಗೆ ಬಂದು ಅಲ್ಲಿನ ಪರಮಾಚಾರ್ಯರನ್ನು ಭೇಟಿಮಾಡಲು ಮುಂದಾದಳು. ನೇರಮುಖ ದರ್ಶನಕ್ಕೆ ಅವಕಾಶವೀಯದ ಪರಮಾಚಾರ್ಯರಲ್ಲಿ ತನಗೂ-ತನ್ನ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಪರಮಾಚಾರ್ಯರು ಏನೂ ಪ್ರತಿಕ್ರಿಯಿಸಲಿಲ್ಲವಂತೆ. ದೇಶಕ್ಕೆ ಒಳಿತಾಗಲಿ ಎಂದು ಕೇಳಿದಾಗ ತಮ್ಮ ಬಲಗೈಯಾಡಿಸಿ ಆಶೀರ್ವಾದವೆಂಬಂತೇ ತೋರಿದರಂತೆ! ಬರುವ ಸೌಕರ್ಯವೇನಿದ್ದರೂ ಎಲ್ಲರಿಗೂ ಬರಲಿ, ದೊರೆವ ಸುಖವೇನಿದ್ದರೂ ಎಲ್ಲರಿಗೂ ಸಿಗಲಿ. ನನಗೆ ಮಾತ್ರ ಸಿಗಬಹುದಾದ ಸುಖಕ್ಕೆ ಎಂದೂ ಹಾತೊರೆಯುವುದಿಲ್ಲ. ನಮ್ಮೂರಿನ ಗಾದೆ ’ಊರಿಗಾದ ಹಾಗೇ ಪೋರನಿಗೆ’ ! ಊರಿಗೆಲ್ಲಾ ಏನು ಲಭ್ಯವೋ ಅದೇ ನನಗೂ ಸಾಕು. ಆದರೆ ಉತ್ತಮವಾದುದನ್ನು ಸಮಾಜ ಗಳಿಸಿಕೊಳ್ಳಲು ಪರಾಶಕ್ತಿಯಲ್ಲಿ ನಂಬಿಕೆ ಬೇಕು. ಮತ್ತೆ ಸಿಗೋಣ, ಧನ್ಯವಾದ.

Monday, December 12, 2011

ಅನ್ನ-ನೀರು ಇರುವವರೆಗೂ ಕನ್ನಡ !

ಅನ್ನ-ನೀರು ಇರುವವರೆಗೂ ಕನ್ನಡ !
[ಮೊನ್ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ,ಗುಂಗಿನಲ್ಲಿ ಬರೆದ ಒಂದು ಹಾಡು ನಿಮಗರ್ಪಿತ :]

ಚಿನ್ನದಾ ರನ್ನದಾ ಕನ್ನಡದಾ ತೇರನು
ಮುನ್ನಡೆಸುವುದಕೆ ಜಾಣ ಬೇಗ ಬಾ
ನಿನ್ನೆ ಇಂದು ನಾಳೆ ಎಂದು ಮೂರುದಿನದ ಜಾತ್ರೆಯಲ್ಲ
ಅನ್ನ-ನೀರು ಇರುವವರೆಗೂ ಕನ್ನಡ !

ಹಲವು ಸಾಧುಸಂತರು ಬಲಕೆ ದೇಶಭಕ್ತರು
ಗೆಲುವಿಗಾಗಿ ದುಡಿದರು ರಥವನೆಳೆದು ಖ್ಯಾತರು
ಒಲವಿನಿಂದ ಕೂಡಿದ ತವರು-ತಾಯಿ ಮನೆಯಿದು
ಚೆಲುವಿನಲ್ಲಿ ಚೆಲುವಿದು ನಮ್ಮ ಹೆಮ್ಮೆ ಕನ್ನಡ

ಪದಪದದಲು ಹಾಸ್ಯ ಹೊನಲು ಹದಪಾಕದ ಭಾಷೆಯು
ಕದವ ತೆರೆದು ಕೊಟ್ಟರು ಜ್ಞಾನಪೀಠ ಸರಸತಿ
ಮುದದಿ ಮೋದಗೊಳ್ಳುವಾ ಎಮ್ಮ ಮುದ್ದು ಕನ್ನಡ
ಗದುಗಿನಾರಣಪ್ಪನ ಹೃದಯ ಕದ್ದ ಕನ್ನಡ

ಅವರೆ ಎಂದರೊಮ್ಮೆ ಅದುವೆ ಬೇಳೆಯ ಹೆಸರಾಯಿತು
ಅವರೆ ಎಂಬ ಪ್ರತ್ಯಯವು ಹೆಸರಪಕ್ಕ ಕುಳಿತಿತು
ಅವರೆ ಎಂಬ ಸರ್ವನಾಮ ಬಹಳ ಬಳಕೆಲಿರುವುದು
ಅವರೆ ? ಪದದ ಸ್ವಾರಸ್ಯವು ಇಲ್ಲಿ ನಮಗೆ ತಿಳಿಯಿತು

ಕವಿಗಳಾಡಿ ಹೊಗಳಿದಾ ಸದಭಿರುಚಿಯ ವಾಙ್ಮಯ
ಗವಿಗಳಲ್ಲು ಗೋಪುರದಲು ಮೆರೆವ ರೀತಿ ವಿಸ್ಮಯ
ರವಿಕಾಣದ ಮೂಲೆಯನೂ ಕಾಣಿಸಿಹುದೀ ಕನ್ನಡ
ಪವಿತ್ರವು ಪರಿಶುದ್ಧವು ಪರಿಶೋಭಿಪ ಕನ್ನಡ

Friday, December 9, 2011

ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....


ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....

ಅನೇಕಜನ್ಮ ಸಂಪ್ರಾಪ್ತ ಕರ್ಮಬಂಧವಿದಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

ಶ್ರೀಧರ ಭಗವಾನರ ಬಗ್ಗೆ ಸಾಕಷ್ಟು ಇದೀಗಾಗಲೇ ಬರೆದಿದ್ದೇನೆ, ಬರೆದಷ್ಟೂ ಮೊಗೆದಷ್ಟೂ ಸಿಗುವ ದಾಖಲೆಗಳು ಮತ್ತು ಘಟನೆಗಳು ಮತ್ತೆ ಮತ್ತೆ ಬರೆಯುವಂತೇ ಪ್ರೇರೇಪಿಸುತ್ತವೆ. ಆಧುನಿಕ ವಿಜ್ಞಾನ ಕಂಡರಿಯದ ಈ ಜಗತ್ತಿನಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ವಿಷಯಗಳು ತಪಸ್ಸಿದ್ಧಿಯಿಂದ ಹೇಗೆ ಅವರಿಗೆ ಲಭ್ಯವಾಗುತ್ತಿದ್ದವು ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಜಗದೋದ್ಧಾರಕ್ಕಾಗಿ ಜನಿಸಿದ ಹಲವು ಮಹಾತ್ಮರಲ್ಲಿ ಶ್ರೀಧರರು ಒಬ್ಬರಷ್ಟೇ? ಮನೆ ತೊರೆದು ಹೊರಟು ಅದಾಗಲೇ ಹನ್ನೆರಡು ವರ್ಷಗಳು ಗತಿಸಿಹೋಗಿದ್ದವು. ತನ್ನೊಳಗಿನ ಚೈತನ್ಯವನ್ನು ಒರೆಹಚ್ಚಿ ಮುಂದೆ ಏನುಮಾಡಬೇಕೆಂಬುದನ್ನು ಗುರು ಸಮರ್ಥ ರಾಮದಾಸರಿಂದ ಅಪ್ಪಣೆಯ ರೂಪದಲ್ಲಿ ಪಡೆಯಬೇಕೆಂದು ನಿರ್ಧರಿಸಿ ಸಜ್ಜನಗಡಕ್ಕೆ ನಡೆದಿದ್ದ ಶ್ರೀಗಳು ಸಮರ್ಥರ ಸಮಾಧಿಗೆ ವಂದಿಸಿ ಅಲ್ಲಿಂದ ಉತ್ತರ ದಿಕ್ಕಿಗೆ ಸುಮಾರು ನಾಲ್ಕು ಕಿ.ಮೀ ದೂರವಿರುವ ಕಾಡಿಗೆ ತೆರಳಿದ್ದರು. ಹುಲಿಗಳ ಆರ್ಭಟ ಬಹಳ ಇದ್ದುದರಿಂದ ರಾತ್ರಿಯಿರಲಿ ಹಗಲೇ ಆ ಕಾಡಿಗೆ ಯಾರೂ ಹೋಗಲು ಹಿಂಜರಿಯುತ್ತಿದ್ದರು.

ಕಾಡಿನ ಮಧ್ಯದಲ್ಲಿ ಒಂದು ಕೋಡುಗಲ್ಲಿನ ಮೇಲೆ ಕೂತು ತಪಸ್ಸಿಗೆ ತೊಡಗಿದ ಶ್ರೀಧರರಲ್ಲಿ ಇರುವುದು ಎರಡೇ ಆಯ್ಕೆಗಳು. ಸಮರ್ಥರು ದರ್ಶನ ಕೊಟ್ಟರೆ ಅವರು ಹೇಳಿದಂತೇ ಮಾಡುವುದು ಅಥವಾ ಸಮರ್ಥರ ದರ್ಶನ ಆಗದಿದ್ದರೆ ಹಿಮಾಲಯಕ್ಕೆ ತೆರಳಿ ಅಲ್ಲಿಯೇ ತಪಸ್ಸುಮಾಡುತ್ತಾ ಇದ್ದುಬಿಡುವುದು. ದಿನವೊಂದು ಎರಡು ಮೂರು ಕಳೆದುಹೋದವು. ಕೋಡುಗಲ್ಲಿನ ಕುಳಿತ ಜಾಗವನ್ನು ಅವಲೋಕಿಸಿದರೆ ತುಸು ಜಾರಿದರೂ ಪ್ರಪಾತವಿತ್ತು. ಕೇವಲ ಒಬ್ಬರೇ ಕುಳಿತುಕೊಳ್ಳಬಹುದಾದ ಅತಿಕಿರಿದಾದ ಜಾಗದಲ್ಲಿ ಅಹೋರಾತ್ರಿ ಮೂರುದಿನಗಳ ಕಾಲ ಶ್ರೀಧರರು ತಪಗೈದ ಮೇಲೆ ಅವರ ಹೃದಯಾಕಾಶದಲ್ಲಿ ಒಂದು ದೃಶ್ಯ ಕಂಡುಬಂತು. ಅದು ಮನಸ್ಸಿನ ಕಲ್ಪನೆಯಾಗಿರದೇ ಆತ್ಮ ಸಾಕ್ಷಾತ್ಕಾರ ಶ್ರೀಧರರಿಗೆ ಲಭಿಸಿತ್ತು. " ಇಲ್ಲಿಯೇ ಭಗವಾನ್ ಶ್ರೀಧರರು ಇದ್ದಾರೆ ಅವರನ್ನು ಮೊದಲು ಪೂಜೆಮಾಡಿ ನಂತರ ತನ್ನ ಪೂಜೆಗೆ ಬನ್ನಿ " ಎಂದು ಸಮರ್ಥರು ಅಪ್ಪಣೆಕೊಡಿಸಿದ್ದಾರೆ ಎನ್ನುತ್ತಾ ಸಮರ್ಥರ ಅರ್ಚಕರಾದ ಸಖಾರಾಮ ಭಟ್ಟರು ಗಡದ ಹಲವು ಯಾತ್ರಿಕರೊಡನೆ ಕಾಡಿಗೆ ಶ್ರೀಧರರನ್ನು ಹುಡುಕುತ್ತಾ ಬಂದಿದ್ದರು ! ಸಮರ್ಥರು ತಮಗೆ ಬಹು ಇಷ್ಟವಾದ ಭಗವಾನ್ ಶಬ್ದವನ್ನು ಶ್ರೀಧರರಿಗೆ ದಯಪಾಲಿಸಿ ತಮ್ಮ ಅರ್ಚಕರ ಬಾಯಿಂದ ಹೇಳಿಸಿದ್ದರು. ಶ್ರೀಧರರ ಬಗ್ಗೆ ಅಷ್ಟಾಗಿ ಏನೂ ಅರಿಯದ ಅರ್ಚಕರು ಹಾಗೆ ಹೇಳುತ್ತಾ ನಡೆದು ಬಂದಿದ್ದರು!

" ಶಿಷ್ಯನ ಮೇಲಿನ ವಾತ್ಸಲ್ಯದಿಂದ ಶಿಷ್ಯನ ಮಹಿಮೆಯನ್ನು ಪ್ರಕಟಗೊಳಿಸುವುದಕ್ಕಾಗಿ ಗುರುಗಳು ಹಾಗೆ ಹೇಳಿದ್ದಾರೆ, ಅವರು ನಮಗೆಲ್ಲರಿಗೂ ಗುರುಗಳು. ಅವರನ್ನೇ ಪೂಜೆ ಮಾಡೋಣ ಬನ್ನಿ " ಎನ್ನುತ್ತಾ ಕೋಡುಗಲ್ಲಿನಿಂದ ಇಳಿದು ಶ್ರೀಧರರು ಸಜ್ಜನಗಡಕ್ಕೆ ಎಲ್ಲರ ಜೊತೆ ಮರಳಿ ಸಮಾಧಿಯಲ್ಲಿ ಸೇವೆ ಸಲ್ಲಿಸಿದರು.

೧೯೪೪ ರಲ್ಲಿ ಶ್ರೀಗಳು ಮಂಗಳೂರಿನ ಕೊಂಕಣಿ ಸಾರಸ್ವತ ಬ್ರಾಹ್ಮಣರಾದ ಶೆಣೈಯವರ ಮನೆಯಲ್ಲಿ ಚಾತುರ್ಮಾಸ್ಯ ನಡೆಸುತ್ತಿದ್ದರು. ಚಾತುರ್ಮಾಸ್ಯ ಸಮಯದಲ್ಲಿ ಯಾರಿಗೂ ದರ್ಶನವಿರುತ್ತಿರಲಿಲ್ಲ. ಹತ್ತಿರದ ಒಬ್ಬರು ಶಿಷ್ಯರು ಯಾರಾದರೂ ಹಣ್ಣು -ಹಾಲು ಇಂತಹ ಅಲ್ಪ ಆಹಾರವನ್ನು ಅವರು ಸ್ನಾನಕ್ಕೆ ತೆರಳಿದಾಗ ಅವರ ಕೋಣೆಗೆ ಹೋಗಿ ಇಟ್ಟುಬರಬೇಕಾಗಿತ್ತು ಬಿಟ್ಟರೆ ಮೌಖಿಕ ಸಂಭಾಷಣೆಯಾಗಲೀ ದರ್ಶನವಾಗಲೀ ಆಗುತ್ತಿರಲಿಲ್ಲ. ಈ ರೀತಿಯಾಗಿ ಎರಡುತಿಂಗಳು ಕಠಿಣ ತಪಸ್ಸಿನ ನಂತರ ವಿಜಯದಶಮಿಯ ಹೊತ್ತಿಗೆ ಗುರುಗಳು ಕೆಲವರಿಗೆ ದರ್ಶನ ನೀಡುತ್ತಿದ್ದರು. ಚಾತುರ್ಮಾಸ್ಯದ ಸಮಯವಾದ್ದರಿಂದ ಜನ ನಾಮುಂದು ತಾಮುಂದು ಎಂದು ಸೇವೆಮಾಡಲು ಹಾತೊರೆಯುತ್ತಿದ್ದರು.

ಇಂತಹ ಸಮಯದಲ್ಲಿ ಶ್ರೀನಿವಾಸ ರಾವ್ ಎಂಬ ಸಾರಸ್ವತ ಬ್ರಾಹ್ಮಣರ ಹೆಂಡತಿಯ ಅಕ್ಕನಮಗಳಾದ ರುಕ್ಮಾಬಾಯಿ ಕ್ಷಯರೋಗದಿಂದ ಹತ್ತು ವರ್ಷಗಳಿಂದಲೂ ನರಳುತ್ತಿದ್ದಳು. ಔಷಧೋಪಚಾರದಿಂದ ವಾಸಿಯಾಗದಾಗ ಶಸ್ತ್ರ ಚಿಕಿತ್ಸೆ ಕೂಡ ನಡೆದುಹೋಯಿತು. ಆದರೂ ವಾಸಿಯಾಗದ್ದರಿಂದ ಬದುಕುವುದಿಲ್ಲವೆಂದು ನಿರ್ಧರಿಸಿದ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿಕೊಟ್ಟರು. ಆ ವಿಧವೆ ಮರಣ ಸಂಕಟದಲ್ಲಿ " ನನಗೆ ಇಹಲೋಕ ಯಾತ್ರೆಯ ಕೊನೇ ಘಳಿಗೆ ಇದು, ಶ್ರೀ ಭಗವಾನ್ ಶ್ರೀಧರ ಸ್ವಾಮಿಗಳ ದರ್ಶನ ಲಭಿಸಿದ್ದರೆ ಕೃತಜ್ಞಳಾಗಿ ಇಹಲೋಕಯಾತ್ರೆ ಮುಗಿಸುತ್ತಿದ್ದೆ " ಎಂದು ಹಲುಬತೊಡಗಿದ್ದಳು. ಆಗ ಅಲ್ಲಿಯೇ ಇದ್ದ ಲಕ್ಷ್ಮೀದೇವಿ ಎಂಬಾಕೆ ಆ ಸುದ್ದಿಯನ್ನು ಎರಡು ಮೈಲಿ ದೂರದಲ್ಲಿದ್ದ ಶ್ರೀಧರರಲ್ಲಿಗೆ ತೆರಳಿ ಸನ್ನಿಧಿಯಲ್ಲಿ ಬಿನ್ನವಿಸಿದಳು. ಕೂಡಲೇ ಹೊರಟು ಅಲ್ಲಿಗೆ ತೆರಳಿದ ಶ್ರೀಧರರು ರುಕ್ಮಾಬಾಯಿಗೆ ದರ್ಶನವಿತ್ತು " ನಿನಗೆ ಮುಕ್ತಿ ಕೊಡಲೇ ? " ಎಂದು ಮೂರುಬಾರಿ ಕೇಳಿದರು. ಆಕೆ " ನನಗೀಗ ಮುಕ್ತಿ ಬೇಡ, ಬಂದ ಆಪತ್ತು ನಿವಾರಿಸಿಕೊಡಿ " ಎಂದು ಬೇಡಿದಳು; ಅಜ್ಞಾನದ ಮಾನವ ಮನಸ್ಸು ಹೀಗೇ ಲೌಕಿಕವಾಗಿರುತ್ತದೆ ನೋಡಿ! " ತಥಾಸ್ತು, ಇನ್ನು ಇಪ್ಪತೆರಡು ವರ್ಷ ಬದುಕಿರು " ಎಂದು ಶ್ರೀಧರರು ಆಶೀರ್ವದಿಸಿದರು. ಆಕೆಯೆ ಬಂಧುಗಳಿಗೆ " ಗಾಬರಿಯಾಗಬೇಡಿರಿ, ತೀರ್ಥವನ್ನು ಕೊಡುತ್ತಿರಿ " ಎಂದು ಸ್ವಸ್ಥಾನಕ್ಕೆ ಮರಳಿಬಿಟ್ಟರು.

ಗುರುಗಳು ತೆರಳಿದ ಚಣಕಾಲದ ನಂತರ ಅವಳ ಪ್ರಾಣ ಹೋದಂತಾಯ್ತು. ನಿಶ್ಚೇಷ್ಟಿತಳಾಗಿ ಬಿದ್ದಿದ್ದ ಆಕೆಗೆ ಶ್ರೀಗಳ ಅಪ್ಪಣೆಯಂತೇ ತೀರ್ಥ ಕುಡಿಸುತ್ತಲೇ ಇದ್ದರು. ಸ್ವಲ್ಪ ಹೊತ್ತಿನಲ್ಲೇ ಆಕೆಗೆ ಎಚ್ಚರವಾಯ್ತು. ತೀರ್ಥವೇ ಔಷಧವಾಗಿ ಕೆಲವೇ ದಿನಗಳಲ್ಲಿ ಆಕೆ ಸಂಪೂರ್ಣ ಗುಣಮುಖಳಾಗಿ ೨೨ ವರ್ಷಗಳ ಕಾಲ ಬದುಕಿದಳು!

ನಮ್ಮೂರಕಡೆ ಕೂಲಿಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿಪರೀತ ಕಾಯಿಲೆಯಾಗಿತ್ತು. ಅದು ಯಾರಿಗೂ ಮಾಹಿತಿ ಇರದ ’ಗಾಂಡಗುದ್ಗೆ’ ರೋಗ ! ಕೆಲಸಮಾಡಿ ಜೀವನ ಸಾಗಿಸುತ್ತಿದ್ದ ಆತನ ಕುಟುಂಬದಲ್ಲಿ ಆತನನ್ನೇ ಅವಲಂಬಿಸಿದ್ದ ಮೂರ್ನಾಕು ಜನ ಇದ್ದರು. ಗಟ್ಟಿಮುಟ್ಟಾಗಿ ಮಟ್ಟಸವಾದ ದೇಹವನ್ನು ಹೊಂದಿದ್ದ ಆತ ಕೆಲಸಮಾಡುವುದಿರಲಿ ಬದುಕುವುದೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದ. ಶ್ರೀಧರರು ಬಂದಿದ್ದಾರೆ ಎಂದು ಯಾರೋ ಹೇಳಿದ್ದನ್ನು ಕೇಳಿ ಕಷ್ಟಪಟ್ಟು ಅವರಿವರ ಹೆಗಲ ಆಸರೆಪಡೆದು ಅವರಲ್ಲಿಗೆ ಬಂದ. " ಸ್ವಾಮೀ ನನ್ನ ಗತಿ ಹೀಗಾಗಿದೆ" ಎಂದ; ಜಾಸ್ತಿ ಮಾತನಾಡಲಾರ. ಏನಾಗಿದೆ ಎಂದು ತಿಳಿದೂ ಇಲ್ಲ. ಆದರೆ ವಿಪರೀತ ತೊಂದರೆ. ಮೂತ್ರಕೋಶದ ಭಾಗ ವಿಪರೀತ ಊದಿತ್ತು. ಶರೀರದಲ್ಲೂ ಇಳಿದುಹೋಗಿದ್ದ. ಗುರುಗಳು ಅವನನ್ನು ನಖ ಶಿಖಾಂತ ಒಮ್ಮೆ ನೋಡಿದರು. ಕಮಂಡಲದಿಂದ ತೀರ್ಥ ತೆಗೆದು ಪ್ರೋಕ್ಷಿಸಿ " ತಮ್ಮಾ , ಈ ಕ್ಷಣದಿಂದ ನಿನಗೆ ಆ ರೋಗವಿಲ್ಲ ಹೋಗಿ ಬಾ ನಿನಗೆ ಒಳ್ಳೇದಾಗಲಿ " ಎಂದು ಹರಸಿ ಮಂತ್ರಾಕ್ಷತೆಯನ್ನಿತ್ತರು. ಬರುವಾಗ ಹೆಗಲ ಆಸರೆ ಪಡೆದು ಬಂದಿದ್ದ ಆತ ಮರಳುವಾಗ ತಾನೇ ನಡೆದುಹೋದ! ಕೆಲವೇ ದಿನಗಳಲ್ಲಿ ಕ್ವಿಂಟಾಲು ತೂಕದ ಸಾಮಾನು ಚೀಲಗಳನ್ನು ಹೊತ್ತ! ಅನೇಕ ವರ್ಷಗಳ ಕಾಲ ಅವನ ಆಯುಷ್ಯವಿರುವವರೆಗೊ ನೆಮ್ಮದಿಯಿಂದ ಬದುಕಿದ.

ಇಂದು ಶ್ರೀಧರ-ದತ್ತ ಜಯಂತಿ! ಅಂದು ದತ್ತಜಯಂತಿಯ ದಿನ ದೇಗಲೂರು ನಾರಾಯಣರಾಯರು-ಕಮಲಮ್ಮ ದಂಪತಿಯ ಮಗನಾಗಿ ದತ್ತನ ವರಪುತ್ರನಾಗಿ, ದತ್ತಪಲ್ಲಕ್ಕಿಯು ಲಾಡ್ ಚಿಂಚೋಳಿಯ ಮನೆಯೆದುರು ಬಂದಾಗಲೇ ಜನಿಸಿದ್ದ ಶ್ರೀಧರರು ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಮಾನವ ಸಹಜದ್ದಲ್ಲ! ಮಹಾತ್ಮರ ಜನ್ಮ ಮತ್ತು ಉದ್ದೇಶ ಇದರಿಂದಲೇ ವ್ಯಕ್ತವಾಗುತ್ತದೆ; ಅವರ ಜೀವನವೇ ಒಂದು ಸಂದೇಶವಾಗುತ್ತದೆ. ಸಾಕ್ಷಾತ್ ದತ್ತಾವತಾರಿಯಾದ ಶ್ರೀಗಳ ಭಾವಚಿತ್ರವೊಂದರಲ್ಲಿ ಕಿವಿಯಲ್ಲಿ ಈಶ್ವರ, ಹಣೆಯ ಭಾಗದಲ್ಲಿ ಶಂಖ, ಕೈಲಿ ತ್ರಿಶೂಲ ಇತ್ಯಾದಿ ಕುರುಹುಗಳು ಕಾಣಿಸುವುದನ್ನು ಗುರುತಿಸಬಹುದಾಗಿದೆ. ಗುರುಗಳು ಅಂದು ಹೇಳಿಕೊಟ್ಟ ಗುರುಮಂತ್ರದೊಂದಿಗೆ ಒಮ್ಮೆ ನಿಮ್ಮೆಲ್ಲರ ಪರವಾಗಿ ನಮಿಸುತ್ತೇನೆ :

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ |
ಸ್ವಾನಂದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ ||

Wednesday, December 7, 2011

ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !


ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !

ನಮ್ಮೂರ ಹತ್ತಿರದಲ್ಲಿ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ. ಬಹಳ ಪುರಾತನ ಕಾಲದಿಂದ ನಂಬಿ ನಡೆತಂದ ಆಚರಣೆ, ಸಂಪ್ರದಾಯಗಳು. ಅದೇ ನಿಂಬಿಕೆಗೆ ಇಂಬುಕೊಡುವ ಶ್ರೀಕುಮಾರ ಮಕ್ಕಳಾಗದಿದ್ದವರಿಗೂ ಸಂತಾನಫಲ ಕೊಡುವಲ್ಲಿ ಸಫಲ ! ಚಿಕ್ಕ ಚಿಕ್ಕ ಬೆಳ್ಳಿಯ ತೊಟ್ಟಿಲ ಹರಕೆ, ನಾಗರ ಹೆಡೆ ಹರಕೆ ಹೀಗೇ ಹರಕೆ ಹಲವು ವಿಧ.

|| ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ||

ಎನ್ನುವ ಗೀತೆಯೆ ಉಕ್ತಿಯಂತೇ ಯಾವರೂಪದಿಂದ ಹರಕೆ ಸಲ್ಲಿಸಿದರು ಎಂಬುದಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ಅಚಲ ನಂಬಿಕೆಯೇ ಅಲ್ಲಿ ಪ್ರಮುಖವಾಗುತ್ತದೆ. ಸಾವಿರಾರು ನಾಗರ ಕಲ್ಲುಗಳು ಪ್ರತಿಷ್ಠಾಪಿತಗೊಂಡಿವೆ, ಎಷ್ಟೋ ಹಳೆಯ ಮುಕ್ಕಾದ ಮುರುಡಾದ ಭಿನ್ನವಾದ ನಾಗರಕಲ್ಲುಗಳು ಮುಂದಿರುವ ಪುಷ್ಕರಣಿಯಲ್ಲಿ ಜಲಾಧಿವಾಸವಾಗಿವೆ. ಮೊನ್ನೆ ಚಂಪಾ ಷಷ್ಠಿಯಂದು ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ಇತ್ತಿದ್ದಾರೆ; ಹುಂಡಿಗೆ ಕಾಣಿಕೆ ಹಾಕಿದ್ದಾರೆ, ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ರಥೋತ್ಸವ ನಡೆಯುವುದಿಲ್ಲ, ಯಾಕೆಂದರೆ ದೇವಸ್ಥಾನ ಇರುವಲ್ಲಿ ಬಹಳ ಅಗಲವಾದ ವಿಸ್ತಾರವಾದ ಜಾಗವಿಲ್ಲ. ಅಡಕೆ ತೋಟದ ಒಂದು ಪಾರ್ಶ್ವದಲ್ಲಿ ಇರುವ ದೇವಸ್ಥಾನಕ್ಕೆ ಮೊದಲು ಕಾಲು ದಾರಿಯಲ್ಲೇ ಹೋಗಬೇಕಿತ್ತು-ಈಗ ವಾಹನ ಹೋಗುವಂತೇ ರಸ್ತೆ ಮಾಡಿದ್ದಾರೆ. ಅಲ್ಲಿ ಮಡೆಸ್ನಾನದಂತಹ ಆಚರಣೆ ನಡೆಯುವುದಿಲ್ಲ. ಆದರೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವ, ಅಷ್ಟಾಂಗಸೇವೆ, ಪಂಚವಾದ್ಯ, ಫಳ, ನಗಾರಿ, ಮೋರಿ [ಕಹಳೆ], ಛತ್ರ-ಚಾಮರ, ಶಂಖ-ಜಾಗಟೆ ಇವೆಲ್ಲವುಗಳ ಸೇವೆ ಆಗಾಗ ಇದ್ದೇ ಇದೆ. ತ್ರಿಕಾಲ ಆಗಮೋಕ್ತ ಪೂಜೆ ನಡೆಸಲ್ಪಡುತ್ತಡುವ ಈ ಜಾಗ ಹಿಂದೆ ನಾರದರಿಂದ ಪ್ರತಿಷ್ಠಿತವಾಗಿದ್ದ ಮೂರ್ತಿಯನ್ನು ಹೊಂದಿತ್ತು ಎಂಬುದು ಐತಿಹ್ಯ; ಮೂರ್ತಿ ಹಳೆಯದಾಗಿ ಸ್ವಲ್ಪ ಭಿನ್ನವಾಗಿದ್ದರಿಂದ ಆಡಳ್ತೆಯ ಹತ್ತುಸಮಸ್ತರ ವಿನಂತಿಯ ಮೇರೆಗೆ ಐದು ವರ್ಷಗಳ ಹಿಂದೆ ಹೊಸ ವಿಗ್ರಹವನ್ನು ಶ್ರೀರಾಮಚಂದ್ರಾಪುರ ಮಠದ ಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಿದ್ದಾರೆ.

ಇಲ್ಲಿ ಮಡಿ ಎಂದರೆ ಮಡಿ. ಸ್ವಚ್ಛತೆಯಲ್ಲಿ ಕೊರತೆಕಂಡರೂ ಅಥವಾ ಮಡಿಯಲ್ಲಿ ತುಸು ವ್ಯತ್ಯಾಸವಾದರೂ ಹಾವು ಕಾಣುವುದನ್ನು ನೋಡಬಹುದಾಗಿದೆ. ಇದಕ್ಕಿಂತಾ ವಿಶೇಷ ಎಂದರೆ ಈ ಸುಬ್ಬಪ್ಪನ ಅಭಿಷೇಕಕ್ಕೆ ಒಂದು ಬಾವಿ ಇದೆ. ಅದರ ಕತ್ತದ ಹಗ್ಗ ಸುಮಾರು ಉದ್ದದ್ದು. ಆ ಹಗ್ಗವನ್ನು ಆ ಗ್ರಾಮದ ಕ್ರೈಸ್ತ ಕುಟುಂಬವೊಂದು ಹೊಸೆದುಕೊಡುತ್ತದೆ. ಹಗ್ಗ ಲಡ್ಡಾಗುತ್ತಿರುವ ಹಾಗೇ ಆ ಕ್ರೈಸ್ತರ ಮನೆಯ ವಠಾರದಲ್ಲಿ ಬುಸ್ಸಪ್ಪ ಕಾಣಿಸಿಕೊಳ್ಳುತ್ತದೆ! " ಹೋಗಪ್ಪಾ ಅರ್ಥವಾಯ್ತು ತಂದುಕೊಡ್ತೇವೆ " ಅಂದರೆ ಸಾಕು ಹಾವು ಮಾಯ! ಅದಾದ ದಿನವೊಪ್ಪತ್ತಿನಲ್ಲಿ ಹಗ್ಗವನ್ನು ಅವರು ತಂದು ಸೇವೆ ಸಲ್ಲಿಸಿ ಹೋಗುತ್ತಾರೆ. ಇದು ಇವತ್ತಿಗೂ ನಡೆಯುತ್ತಿರುವ ಚಮತ್ಕಾರ. ಹಾಗಂತ ಇದುವರೆಗೂ ಆಲ್ಲಿನ ಸುತ್ತಮುತ್ತಲ ಜಾಗಗಳಲ್ಲಿ ಹಾವು ಕಚ್ಚಿ ಸತ್ತರು ಎಂಬ ದಾಖಲೆ ಇಲ್ಲ. ಹಾಗೆಲ್ಲಾ ಕಚ್ಚುವುದೂ ಇಲ್ಲ, ಹಾವುಗಳ ಇರುವಿಕೆಯೇ ಕಾಣಿಸುವುದಿಲ್ಲ, ಆದರೂ ಮೈಲಿಗೆಯಾದರೆ, ಅಶುಚಿಯಾದರೆ ಹಾವುಗಳ ಒಡ್ಡೋಲಗವೇ ಎದ್ದು ಬರುತ್ತದೆ! ಇದು ಯಾವ ನಂಬುಗೆ ? ಇದು ಯಾವ ಜೀವ ಅಥವಾ ರಸಾಯನ ವಿಜ್ಞಾನ ?

ಮಡೆಸ್ನಾನದ ಬಗ್ಗೆ ಒಂದೆರಡು ಮಾತು :

ಕರ್ನಾಟಕದಲ್ಲಿ ಬ್ರಾಹ್ಮಣರ ಮೇಲೆ ’ಮಡೆಸ್ನಾನ’ದ ಆರೋಪ ಹೊರಿಸುತ್ತಾ ಹಲವು ಲೇಖನಗಳು ಪ್ರಕಟಗೊಳ್ಳುತ್ತಿವೆ. ಕರ್ನಾಟಕದಲ್ಲಿ ಕೇವಲ ೯ % ಬ್ರಾಹ್ಮಣರಿದ್ದಾರೆ, ಅದೂ ದಿನಗಳೆದಂತೇ ಸಂಖ್ಯೆ ಕಮ್ಮಿಯಾಗುತ್ತಿದೆ! ನಶಿಸಿ ಹೋಗಬಹುದಾದ ಸಂತತಿಗಳಲ್ಲಿ ಬ್ರಾಹ್ಮಣರೂ ಸೇರಿದರೆ ಆಶ್ಚರ್ಯವಲ್ಲ. ಈಗೀಗ ಜಾತೀ ರಾಜಕಾರಣ ಹೆಚ್ಚಿ ಬಲಗೈಯ್ಯಲ್ಲಿ ಕೋಳೀ ತಿನ್ನುತ್ತಾ ಎಡಗೈಯ್ಯಲ್ಲಿ ಪೂಜೆ ಮಾಡುವ ಹೊಸ ಪೀಳಿಗೆಗೆ ನಾಂದಿ ಹಾಡಿ ಎಂದು ಇತರೆ ವರ್ಗದವರು ಅಧಿಕಾರವಾಣಿಯಲ್ಲಿ ಅಪ್ಪಣೆ ಕೊಡಿಸುತ್ತಿದ್ದಾರೆ; ಯಾಕೆಂದರೆ ಅಧಿಕಾರ ಅವರ ಕೈಲಿದೆ! ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ. ಮಡೆಸ್ನಾನ ಮಾಡುವ ಕೆಲವು ಪಂಗಡಗಳಲ್ಲೇ ಕೆಲವರು ಈ ರೀತಿ ಕಿಡಿ ಹೊತ್ತಿಸುತ್ತಿದ್ದಾರೆ.

ಬ್ರಾಹ್ಮಣರು ಮೊದಲಿನಿಂದಲೂ ಬಡವರೇ, ರಾಜಾಶ್ರಯ ಪಡೆದವರು, ಅವರಿಂದ ಅನ್ಯಾಯವಾಗಿದೆ ಎಂಬುದು ಕಪೋಲ ಕಲ್ಪಿತ ಕಥೆ! ಹಳೇಕಾಲದ ಯಾವುದೇ ಮಕ್ಕಳ ಕಥೆಯನ್ನು ತೆಗೆದುಕೊಳ್ಳಿ ’ಒಂದಲ್ಲಾ ಒಂದೂರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದನಂತೆ’ ಎಂದೇ ಆರಂಭಗೊಳ್ಳುತ್ತದೆ, ಅದಕ್ಕೆ ಅದೇ ಸಾಕ್ಷಿ! ಇದಕ್ಕೆ ಮಹಾಭಾರತದ ಕೃಷ್ಣ-ಕುಚೇಲರ ಕಥೆ ಕೂಡ ಆಧಾರವಾಗುತ್ತದೆ. ಬ್ರಾಹ್ಮಣರಲ್ಲಿ ಅಂಥಾ ಅನ್ಯಾಯದ ಬುದ್ಧಿ ಇದ್ದಿದ್ದರೆ ಕ್ಷತ್ರಿಯನಾದ ಶ್ರೀರಾಮನನ್ನೂ ಯಾದವನಾದ ಶ್ರೀಕೃಷ್ಣನನ್ನೂ ದೇವರೆಂದು ಪೂಜಿಸುತ್ತಿರಲಿಲ್ಲ. ರಾಜಕೀಯದ ಹಲವು ಸುಳಿಗಳು ಮಧ್ಯೆ ಹೆಡೆಯಾಡಿ ಕಾಲಗತಿಯಲ್ಲಿ ಕೇವಲ ವೇದ ಬೋಧಿಸಲಿಲ್ಲ ಎಂಬ ಸಿಟ್ಟಿನಿಂದ ಹುಟ್ಟಿದ ಕಥೆ ಅದು. ಇಂದಿಗೂ ಬಹುತೇಕರು ಸಂಸ್ಕೃತವನ್ನು ಹೀಗಳೆಯುತ್ತಾರೆ, " ಓದಿ ಬನ್ನಿ..." ಎಂದು ನಾವು ವೇದಸುಧೆ ಆರಂಭಿಸಿದ್ದೇವೆ, ಮುಂಜಿಮಾಡುತ್ತೇವೆ, ಆದರೆ ಪ್ರಥಮವಾಗಿ ಅವರು ನಮ್ಮ ನಿಯಮಗಳಲ್ಲಿ ಒಂದಾದ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ! ಇದು ಎಲ್ಲರಿಂದಲೂ ಸಾಧ್ಯವೇ ? ನಾನೇ ನನ್ನ ಎಷ್ಟೋ ಪ್ರಬಂಧಗಳಲ್ಲಿ ನಮ್ಮನೆಯಲ್ಲಿ ಆಳುಕಳುಗಳಾಗಿದ್ದ ಎಷ್ಟೋ ಜನಾಂಗಗಳ ಜನರುಗಳ ಬಗ್ಗೆ ನಮಗಿದ್ದ ಗೌರವ, ಪ್ರೀತಿಯನ್ನು ಹಂಚಿಕೊಂಡಿದ್ದೇನೆ, ಅದು ಭಗವಂತನ ಸಾಕ್ಷಿಯಾಗಿ ಸತ್ಯವಾದದ್ದೇ ಹೊರತು ನಾನು ಕಟ್ಟಿಬರೆದಿದ್ದಲ್ಲ. ನಮ್ಮಂತಹ ಅದೆಷ್ಟೋ ಜನ ಹಾಗೇ ನಡೆದರು. ಯಾರೋ ಎಲ್ಲೋ ಒಂದಿಬ್ಬರು ವಿಚಿತ್ರವಾಗಿ ನಡೆದುಕೊಂಡರೆ ಇಡೀ ಬ್ರಾಹ್ಮಣಕುಲವನ್ನೇ ವಾಚಾಮಗೋಚರವಾಗಿ ಹಿಗ್ಗಾಮುಗ್ಗಾ ಜಗ್ಗಾಡುವುದು ಖೇದಕರ. ಇದರ ಬಗ್ಗೆ ಇತರೆ ಜನಾಂಗಗಳು ತಿಳಿದು ಮಾತಾಡಬೇಕಾದ ಅಗತ್ಯ ಇದೆ.

ಮಹಾರಾಷ್ಟ್ರದ ಪಂಢರಾಪುರದಲ್ಲಿ ಮಠವೊಂದರ ಎದುರುಗಡೆ ಬಿದ್ದ ಎಂಜಲು ಎಲೆಗಳ ಮೇಲೆ ಅಳಿದುಳಿದ ಕೂಳಿನ ಕಾಳುಗಳನ್ನು ಯುವಕನೊಬ್ಬ ತಿನ್ನುತ್ತಿದ್ದ, ಬಹಳಜನ ಉತ್ಸುಕರಾಗಿ ನೋಡುತ್ತಿರುವಂತೆಯೇ ಆತ ಹಸುಗಳಿಗಾಗಿ ರಸ್ತೆಬದಿಯಲ್ಲಿಟ್ಟ ನೀರನ್ನೇ ಕುಡಿದ! ಜನ ಜಮಾಯಿಸಿದರು. ಆತ ಜಾಸ್ತಿ ಮಾತಾಡಲೊಲ್ಲ. ಹೆಸರು ಕೇಳಿದರು, ಆತ ಸ್ಪಷ್ಟವಾಗಿ ಏನನ್ನೂ ಹೇಳದೇ ಯಾರದೋ ಕೈಲಿದ್ದ ತಾಮ್ರದ ವಸ್ತುವಿನೆಡೆಗೆ ಕೈ ತೋರಿಸಿದ. ಯಾರಿಗೂ ಅರ್ಥವಾಗದಿದ್ದಾಗ ಮರಾಠಿಯಲ್ಲಿ " ನರ್ಮದಾ ನದಿಯ ಮಧ್ಯದಲ್ಲಿರುವ ಗಜಾನನ ಗುಡಿಯೊಂದರ ಹೆಸರೆಂ"ದ. ಜನ ಆತನನ್ನು ಅಲ್ಲಿಂದ ಗಜಾನನ ಮಹಾರಾಜ್ ಎಂತಲೇ ಕರೆದರು. ಆತ ಬ್ರಾಹ್ಮಣ ಕುಲದಿಂದಲೇ ಬಂದವನೆಂಬುದು ಆಮೇಲೆ ತಿಳಿದದ್ದು! ಅಂತಹ ಗಜಾನನ ಮಹಾರಾಜ್ ಬಹುದೊಡ್ಡ ಸಂತರಾಗಿ, ಅವಧೂತರಾಗಿ ಅನೇಕರ ಕಷ್ಟಗಳನ್ನು ನೀಗಿದರು. ಇದು ಇತಿಹಾಸ. ಅಂದು ಎಲ್ಲೋ ಬಿದ್ದ ಎಂಜಲೆಲೆಯ ಕೂಳನ್ನು ತಿಂದ ಅಂತಹ ಗಜಾನನ ಮಹಾರಾಜರಿಗೆ ಯಾವ ಕಾಯಿಲೆಯೂ ಅಂಟಲಿಲ್ಲ, ಇಂದು ಮಡೆಸ್ನಾನದಲ್ಲಿ ಎಂಜಲೆಲೆಯಲ್ಲಿರಬಹುದಾದ ಬ್ಯಾಕ್ಟೀರಿಯಾಗಳು ಹಾಗೆ ಮಡೆಸ್ನಾನ ಮಾಡುವವರಿಗೆ ಬಾಧಿಸಬಹುದು ಎಂಬುದು ಹಲವರ ಇರಾದೆ! ಹೊಟ್ಟೆ ಕೆಟ್ಟು ಆಪರೇಷನ್‍ಗೆ ತೆರಳಿದ್ದ ಬಾಲಕನೊಬ್ಬನಿಗೆ ವೈದ್ಯರು ಕೋಡಬೇಡವೆಂದರೂ ಆತನ ತಂದೆ ತಿರುಪತಿ ಲಾಡು ಕೊಟ್ಟಿದ್ದು ಆ ಪ್ರಸಾದದಿಂದ ಆತನಿಗೆ ಏನೂ ತೊಂದರೆಯಾಗದೇ ಸಲೀಸಾಗಿ ಆಪರೇಷನ್ ಮುಗಿಸಿ ಮನೆಗೆ ಮರಳಿದ್ದನ್ನು ನಾನೆಲ್ಲೋ ಓದಿದ್ದೇನೆ. ಹಲವಾರು ಜನ ಸ್ನಾನಮಮಾಡುವ ಪುಷ್ಕರಣಿಗಳಲ್ಲಿ ಸ್ನಾತರಾದ ಅದೆಷ್ಟೋ ಮಂದಿ ಇದ್ದಾರೆ-ಎಲ್ಲರಿಗೂ ಒಳಿತಾಗಿದೆ ವಿನಃ ಚರ್ಮರೋಗ ಬಾಧಿಸಲಿಲ್ಲ. ಅದು ಅಲ್ಲಲ್ಲಿನ ಕ್ಷೇತ್ರಾಧಿಪನ ಮಹಿಮೆ!! ಎಲ್ಲಿ ಭಕ್ತಿಯ ಪಾರಮ್ಯ ಇರುತ್ತದೋ ಅಲ್ಲಿ ದೇವರು ಭಕ್ತಾಧೀನನಾಗುತ್ತಾನೆ ಎಂಬುದಕ್ಕೆ ಇವೇ ಸಾಕ್ಷಿಗಳು.

ಕುಕ್ಕೆಯ ಸ್ಥಾನಿಕರಾದ ಮಲೆಕುಡಿ ಜನಾಂಗದವರು ಯಾವುದೋ ಕಾಲದಲ್ಲಿ ಅದನ್ನು ಆರಂಭಿಸಿದ್ದಿರಬೇಕು. ಅವರ ಭಕ್ತಿಗೆ ಅವರು ಹಾಗೆ ಮಾಡಿದ್ದನ್ನು ಕಂಡ ಮತ್ತಿನ್ಯಾರೋ ಬೇರೇ ಜನಾಂಗದ ಭಕ್ತರು ತಾವೂ ಹಾಗೇ ಆರಂಭಿಸಿದರು. ಶತಮಾನಗಳಿಂದ ನಡೆಯುತ್ತಿರುವ ಅದಕ್ಕೆ ಯಾರೋ ಒಂದಷ್ಟು ವಿರೋಧ ವ್ಯಕ್ತಪಡಿಸಿದರು. ನಾನು ಮಡೆಸ್ನಾನವನ್ನು ಯಾವ ರೀತಿಯಲ್ಲೂ ಯಾರ ಮೇಲೂ ಹೇರುವುದೂ ಇಲ್ಲ,ಸಮರ್ಥಿಸುವುದೂ ಇಲ್ಲ, ಅಲ್ಲಿನವರ ಹಕ್ಕಿಗೆ ಚ್ಯುತಿಯನ್ನೂ ತರಬಯಸುವುದೂ ಇಲ್ಲ. ಬದಲಾಗಿ ಇದು ಬ್ರಾಹ್ಮಣರ ಅವಹೇಳನದ ಕುರಿತು ಮಾಡಿದ ಒಂದು ಜಿಜ್ಞಾಸೆ. ಮಡೆಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಹಬ್ಬುತ್ತದಂತೆ ಎಂದು ಪತ್ರಿಕೆಗಳಲ್ಲಿ ಓದಿದ್ದಕ್ಕೆ ಕೆಲವು ನಂಬಿಕೆಯ ಉದಾರಹಣೆ ಮಂಡಿಸಿದೆ ಅಷ್ಟೇ. ನಿಶ್ಚಿತವಾಗಿ ಹೇಳುತ್ತೇನೆ ಕೇಳಿ -- ಮಡೆಸ್ನಾನ ಬ್ರಾಹ್ಮಣರು ಒತ್ತಾಯಿಸಿ ಆರಂಭಿಸಿದ್ದಲ್ಲ, ಅಲ್ಲೂ ಅಲ್ಲಿನ ಮಲೆಕುಡಿ ಎಂಬ ಜನಾಂಗದವರಿಂದ ಮೊದಲು ಆಚರಿಸಲ್ಪಟ್ಟು ಆ ನಂತರ ಬ್ರಾಹ್ಮಣಭಕ್ತರೂ ಸೇರಿದಂತೇ ಬಹಳ ಜನ ನಡೆಸಿಬಂದಿದ್ದಾರೆ.

ಧರ್ಮಸ್ಥಳದ ಹೆಗ್ಗಡೆಯವರು ಸಾರಾಸಗಾಟಾಗಿ ಕುಕ್ಕೆಯಲ್ಲಿ ನಡೆಯುತ್ತಿರುವುದೆಲ್ಲಾ ಬರೇ ಮೂಢನಂಬಿಕೆಯಮೇಲೇ ಎಂದು ಅಪ್ಪಣೆಕೊಡಿಸಿಬಿಟ್ಟರು ! ಸ್ವಾಮೀ ಹೆಗ್ಗಡೆಯವರೇ, ಧರ್ಮಸ್ಥಳದಲ್ಲಿ ಧರ್ಮದೇವತೆಗಳು ಎನಿಸಿಕೊಂಡು ನೀವು ತೋರುವ ನಾಕು ಭೂತಗಳು ಇದ್ದಾವೆ ಅವು ನಿಮಗೆ ನುಡಿಗಟ್ಟು ಕೊಡ್ತಾವೆ ಮತ್ತು ನೀವದನ್ನು ಪಾಲಿಸಬೇಕು ಎಂಬುದಾಗಿ ಹೇಳುತ್ತೀರಿ, ’ಮಹಾನಡಾವಳಿ’ ಎಂದು ನಡೆಸುತ್ತೀರಿ. ಇದೆಕ್ಕೆಲ್ಲಾ ವೈಜ್ಞಾನಿಕ ತಳಹದಿ ಇದೆಯೇ ? ಅಥವಾ ನಿಮ್ಮ ಹಾಗೂ ಭಕ್ತರ ನಂಬಿಕೆಯೇ ಇದಕ್ಕೆ ತಳಹದಿಯೆ? ಒಪ್ಪಿಕೊಳ್ಳೋಣ ಜನತೆಗೆ ನೀವು ಬಹಳಷ್ಟು ಮಾರ್ಗದರ್ಶನ ಮಾಡಿದ್ದೀರಿ, ಹಲವಾರು ರೀತಿಯ ಯೋಜನೆ-ಆಯೋಜನೆಗಳನ್ನು ಕಾರ್ಯಗತ ಗೊಳಿಸಿ ಅನೇಕರು ಅನ್ನಕಂಡುಕೊಳ್ಳುವಲ್ಲಿ ಅನುವಾಗಿದ್ದೀರಿ ಇದೆಲ್ಲಾ ಸರಿಯೇ ಇದೆ. ಆದರೆ ನಿಮ್ಮ ಬಗೆಗೂ ಅಮೃತ ಸೋಮೇಶ್ವರರು ಒಮ್ಮೆ ಅಪಸ್ವರದಲ್ಲಿ ರಾಗ ಹಾಡಿದ್ದರು ಎಂಬುದನ್ನು ನಾನು ಕೇಳಿಬಲ್ಲೆ. ಅಲ್ಲೆಲ್ಲೋ ಯಾರೋ ಹೈಸ್ಕೂಲು ಶಿಕ್ಷಕಿಯ ವಿರುದ್ಧ ನೀವು ನಡೆದುಕೊಂಡಿದ್ದು ಅದು ಮತ್ತಿನ್ನೇನೋ ಆಗಿದ್ದು ಹೀಗೇ.

ಹಿಂದಿನ ಧರ್ಮದರ್ಶಿಗಳಾಗಿದ್ದ ನಿಮ್ಮ ತಂದೆ ರತ್ನವರ್ಮರ ಬಗ್ಗೆ ಬಣ್ಣಬಣ್ಣದ ಕಥೆಗಳೇ ಇವೆ. ಊರಕಡೆ ಜನ ಈಗಲೂ ಹಲವುಮಾತನಾಡುತ್ತಾರೆ, ಅದು ಬಿಡಿ. ಆದರೂ ಪ್ರಸಕ್ತ ನೀವು ಸುಧಾರಿತ ಜನಾಂಗಕ್ಕೆ ಜನರಿಂದ ಬಂದ ಹಣವನ್ನೇ ಸದುಪಯೋಗ ಪಡಿಸುತ್ತಿರುವುದರಿಂದ ಜನ ನಿಮ್ಮನ್ನು ಮೆಚ್ಚಿದ್ದಾರೆ; ಕೆಲವರು ಪೂಜಿಸಿಯೂ ಇದ್ದಾರೆ! ಅದೂ ನಿಮ್ಮ ಮೇಲಿನ ನಂಬಿಕೆಯಿಂದಲೇ. ಇವತ್ತು ಧರ್ಮಕ್ಷೇತ್ರಗಳಲ್ಲಿ ಧರ್ಮದರ್ಶಿಗಳ ಕುಟುಂಬಿಕರು ಯಾವ ಯಾವ ರೀತಿ ಅನೈತಿಕ ಚಟುವಟಿಕೆಗಳಲ್ಲಿ ಧರ್ಮದ ಮುಸುಕಿನಲ್ಲಿ ತೊಡಗಿರುತ್ತಾರೆ ಎಂಬುದನ್ನೂ ಕೆಲವು ಜನ ನನ್ನಂಥವರು ಇಣುಕಿ ನೋಡುತ್ತಾರೆ; ಬಾವಿಯ ತಳದಲ್ಲಿ ಕೆಸರಿರುವುದು ಸಹಜ ಆದರೆ ಕುಡಿಯಲು ನಮಗದು ಶುದ್ಧಜಲ ಪೂರೈಸುತ್ತಿದೆಯಲ್ಲಾ ಎಂಬುದು ನಮಗೆ ಬೇಕಾದದ್ದು.

ಜಗತ್ತು ನಡೆಯುತ್ತಿರುವುದೇ ನಂಬಿಕೆಯಮೇಲೆ. ಗಂಡ-ಹೆಂಡತಿಯನ್ನೂ ಹೆಂಡತಿ-ಗಂಡನನ್ನೂ, ಪ್ರಜೆಗಳು ಸರ್ಕಾರವನ್ನೂ, ಸರ್ಕಾರ ಪ್ರಜೆಗಳನ್ನೂ ಹೀಗೇ ಎಲ್ಲವೂ ಒಂದನ್ನೊಂದು ನಂಬಿಯೇ ನಡೆಯುವುದಾಗಿದೆ. ಯಾರಿಗೆ ಎಷ್ಟು ಆಯುಸ್ಸು, ಯಾವದಿನ ಎಷ್ಟು ಹೊತ್ತಿನವರೆಗೆ ಬದುಕುತ್ತಾರೆ ಎಂಬುದು ಗೊತ್ತಿಲ್ಲಾ ಆದರೂ ಹುಟ್ಟುತ್ತಾರೆ, ಬೆಳೆಯುತ್ತಾರೆ, ಮದುವೆ-ಮನಕಾಲ ನಡೆಯುತ್ತದೆ ಇದೆಲ್ಲಾ ಆಗುವುದು ನಂಬಿಕೆಯೆಮೇಲೆಯೇ. ನಾಳೆ ಎಲ್ಲಿ ಭೂಕಂಪವಾಗುತ್ತದೆ, ಎಲ್ಲಿ ಸುನಾಮಿ ಬರುತ್ತದೆ, ಎಲ್ಲಿ ಚಂಡಮಾರುತೆ ಬೀಸುತ್ತದೆ, ಎಲ್ಲಿ ಅಪಘಾತವಾಗುತ್ತದೆ ಎಂಬುದು ಯಾರಿಗೂ ಗೋಚರವಲ್ಲ! ಯಾವ ಹೊತ್ತಿಗೆ ಜಗತ್ತಿನ ಯಾವುದೇ ಭಾಗದಲ್ಲೊ ಏನಾದರೂ ಘಟಿಸಬಹುದು ಅಲ್ಲವೇ?

ಈ ದೃಷ್ಟಿಯಿಂದ ಹೇಳುವುದಾದರೆ ಕುಕ್ಕೆಯಲ್ಲಿ ನಡೆಯುವುದೆಲ್ಲಾ ಬರೇ ಮೂಢನಂಬುಗೆ ಎಂಬ ಮಾತು ಹಾಸ್ಯಾಸ್ಪದವಾಗುವುದಿಲ್ಲವೇ? ಮಡೆಸ್ನಾನ ಬಿಡಿ ಅದು ಮೂರುದಿನದ್ದು-ಆಗುತ್ತದೋ ಹೋಗುತ್ತದೋ ಅದು ಶಾಸ್ತ್ರೋಕ್ತವೇನಲ್ಲ, ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದೂ ಅಲ್ಲ. ಆದರೆ ಅಸಂಖ್ಯ ಭಕ್ತರಿಗೆ ಅತಿಕಡಿಮೆ ವೆಚ್ಚದಲ್ಲಿ ನಾಗದೋಷ ಪರಿಹಾರಕ್ಕೆ ಅಲ್ಲಿ ಆಶ್ಲೇಷಾ ಬಲಿ ನಡೆಸುತ್ತಾರೆ. ಹಲವುವಿಧದ ಸೇವೆ ನಡೆಸುತ್ತಾರೆ. ವಾಸ್ತವವಾಗಿ ನಿಮ್ಮ ಧರ್ಮಸ್ಥಳವೂ ಸೇರಿದಂತೇ ಈ ಭೂಮಿಯನ್ನು ಹೊತ್ತಿರುವುದೇ ಆದಿಶೇಷ ಎಂಬ ಕಲ್ಪನೆ ಇದೆಯಲ್ಲವೇ? ಆಗಾಗ ಭೂಮಿ ಅಲ್ಲಲ್ಲಿ ಅಲ್ಲಲ್ಲಿ ಬಿರಿಯುವುದು, ಜ್ವಾಲಾಮುಖಿ ಭೋರ್ಗರೆಯುವುದು, ಭೂಮಿಯಲ್ಲಿ ವೈಜ್ಞಾನಿಕವಾಗಿ ಗುರ್ತಿಸಲ್ಪಟ್ಟ ೭ ಪ್ಲೇಟುಗಳುಗಳಲ್ಲಿ ಸ್ಥಾನದ ಹೊಂದಾಣಿಕೆಯಲ್ಲಿ ತೊಂದರೆಯಾಗಿ ಭೂಕಂಪವಾಗುವುದು ಇವೆಲ್ಲಕ್ಕೂ ಹಿಂದೆ ಯಾವ ರಹಸ್ಯವಿದೆ ಎಂಬುದನ್ನು ನಾವು ಬಲ್ಲೆವೇನು ? ಅದಕ್ಕೆ ಸಂಪೂರ್ಣ ಪರಿಹಾರ ಕೊಡಲು ನಮ್ಮಿಂದ ಸಾಧ್ಯವೇ ? ಒಂದುಕಾಲದಲ್ಲಿ ಇಡೀ ಭೂಮಂಡಲ ನಾಗಾಧಿಪತ್ಯವನ್ನೇ ಹೊಂದಿತ್ತು, ಆಮೇಲೆ ನಾಗಗಳು ಅದನ್ನು ಮಾನವರಿಗೆ ಬಿಟ್ಟುಕೊಟ್ಟವು ಎಂದಾದಾಗ ಆ ಪೂಜ್ಯ ಭಾವನೆಯಿಂದಲಾದರೂ ಅವುಗಳನ್ನು ಆರಾಧಿಸುವುದೇ ಸರಿಯೇ ಅಲ್ಲವೇ?

ಇನ್ನೊಂದು ಮಾತು ನಂಬಿಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ: ನೀವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಧರ್ಮಸ್ಥಳ ಸಂಘಗಳನ್ನು ಮಾಡಿದ್ದೀರಲ್ಲ. ಅಲ್ಲಿ ನೀವು ಕೊಡುವ ಸಾಲಕ್ಕೆ ಯಾವ ಕಾಗದಪತ್ರ ಇರಲಿ ಇಲ್ಲದಿರಲಿ -ತೆಗೆದುಕೊಂಡವ ಅದನ್ನು ನಿಮಗೆ ಪೈಸಾ ಪೈಸಾ ಚುಕ್ತಾ ಕೊಡುತ್ತಾನೆ! ಯಾಕೆ ಗೊತ್ತೇ ? ಅದು ಧರ್ಮಸ್ಥಳದ ದುಡ್ಡು, ಹಾಗೇ ಇಟ್ಟುಕೊಂಡರೆ ಅಣ್ಣಪ್ಪ ಭೂತ ಹಿಡಿದುಕೊಂಡರೆ ಕಷ್ಟ! ಧರ್ಮದೇವತೆಗಳು ಕೈಬಿಟ್ಟರೆ ಕುಟುಂಬವೇ ಸರ್ವನಾಶವಾದೀತು ಎಂಬ ಭಯದಿಂದ ! ಅದೇ ನಂಬುಗೆ ನಿಮ್ಮಲ್ಲೂ ಇರುವುದಕ್ಕೇ ಜನರಿಗೆ ಹಾಗೆ ಸಾಲದ ರೂಪದಲ್ಲಿ ಹಣವನ್ನು ಒದಗಿಸುತ್ತೀರಿ. ಇಂಥದ್ದೇ ಸಾಲಕೊಡುವ ಕೆಲಸವನ್ನು ಬೇರೇಯಾರೋ ಇನ್ಯಾವುದೋ ಸಂಘದಿಂದ ಮಾಡಿದರೆ ವಸೂಲಾಗದೇ ಒದ್ದಾಡಬೇಕಾಗುತ್ತದೆ ಮಾತ್ರವಲ್ಲ ಸಾಲಕೊಟ್ಟವ ಜೀವ ಉಳಿಸಿಕೊಳ್ಳಲೂ ಪರದಾಡಬೇಕಾಗಬಹುದು!

ಜನರೂ ಕೂಡ ಬಹಳ ವಿಚಿತ್ರವಾಗಿದ್ದಾರೆ. ಜನರಿಗೆ ಮೋಜುಮಜಾ ಮಸ್ತಿಯೂ ಬೇಕು. ಮೊದಲಿನ ಹಾಗೇ ಜನರೆಲ್ಲಾ ನೈತಿಕನಿಷ್ಠೆಯವರೇ ಎಂದು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ: ಶ್ರೀರಾಮುಲುವಿನ ಗೆಲುವು. ಒಂದುಕಾಲಕ್ಕೆ ಏನೂ ಇರದಿದ್ದ ಹುಡುಗರಿಬ್ಬರು ರಾಜ್ಯವನ್ನೇ ಅಥವಾ ಅರ್ಧದೇಶವನ್ನೇ ಕೊಂಡುಕೊಳ್ಳುವ ಮಟ್ಟದ ಆದಾಯವನ್ನು ಪಡೆಯುತ್ತಾರೆ ಎಂದರೆ ಅದು ಎಲ್ಲಿಂದ ಹೇಗೆ ಬಂತು? ಜನರಿಗೆ ರಕ್ತ ಪರಿಚಲನೆ ಸರಿಯಾಗಿದ್ದರೆ ಮತ್ತೆ ಆ ಜಾಗಕ್ಕೆ ಗಣಿಗಳನ್ನು ನಡೆಸುವ ಯಾರನ್ನೂ ಚುನಾಯಿಸುತ್ತಿರಲಿಲ್ಲ. ಕೆಲವರಿಗೆ ತಿಳುವಳಿಕೆ ಇಲ್ಲ, ಇನ್ನು ಕೆಲವರು ಜಾತೀ ರಾಜಕಾರಣ ಮಾಡುತ್ತಾರೆ. ಶಾಸಕನೊಬ್ಬ ತಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಾನೆ ಎಂಬುದೂ ಕೂಡ ಒಂದು ನಂಬಿಗೆ! ಶಾಸಕನಾದವನು ರಾಜ್ಯದ/ಕ್ಷೇತ್ರದ ಜನರ ಹಕ್ಕು-ಬಾಧ್ಯತೆಗಳನ್ನು ಕಾಪಾಡುವುದರ ಜೊತೆಗೆ ಆ ಕ್ಷೇತ್ರದ ಸಂಪತ್ತಿನಲ್ಲಿ ಯಾವುದೇ ಅವ್ಯವಹಾರ ಆಗದ ಹಾಗೇ ನೋಡಿಕೊಳ್ಳುವುದು ಅವನ ಕೆಲಸವಾಗಿರುತ್ತದೆ. ಆದರೆ ಇಂದಾಗುತ್ತಿರುವುದೇನು: ಕೋಟಿ ಇದ್ದವರೇ ಚುನಾವಣೆಗೆ ನಿಲ್ಲಬೇಕು, ಅವರೇ ಗೆಲ್ಲುತ್ತಾರೆ ಮತ್ತೆ ಅವರೇ ಅಕ್ರಮವಾಗಿ ಸಂಪಾದಿಸುತ್ತಾರೆ. ನೈಸರ್ಗಿಕ ಸಂಪತ್ತನ್ನು ಲೂಟಿಹೊಡೆಯುತ್ತಾರೆ.

ಈಗ ಪುನಃ ವಿಜ್ಞಾನಕ್ಕೆ ಬರೋಣ. ವೈಜ್ಞಾನಿಕವೆನಿಸಿಕೊಂಡ ಮಾರ್ಗದಲ್ಲಿ ಹೆಣ್ಣುಮಕ್ಕಳ ಸ್ತನ ಅರ್ಬುದ ಕಾಯಿಲೆಗೆ ಆಪರೇಶನ್ನೇ ಮದ್ದು. ಅಥವಾ ಇನ್ಯಾವುದೋ ಅದೇ ತೆರನಾದ ಶಾಕ್ ಚಿಕಿತ್ಸೆ. ಸಂತಾನ ನಿರೋಧಕ ಅಲೋಪಥಿಯ ಮಾತ್ರೆಗಳ ಸತತ ಸೇವನೆಯಿಂದ ಇವತ್ತಿನ ಜನಾಂಗದ ಹೆಣ್ಣುಮಕ್ಕಳಲ್ಲಿ ಸ್ತನ ಅರ್ಬುದ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ನನಗೆ ಗೊತ್ತಿರುವ ಆಯುರ್ವೇದ ವೈದ್ಯರೊಬ್ಬರು ಅದ್ಭುತ ಪರಿಹಾರ ನೀಡುತ್ತಾರೆ. ಕಾಯಿಲೆ ಆಪರೇಶನ್ ಇಲ್ಲದೇ ವಾಸಿಯಾಗುತ್ತದೆ. ೩೦೦೦ ವರ್ಷಗಳ ಇತಿಹಾಸವಿರುವ ಆಯುರ್ವೇದ ನಮ್ಮ ಆಧುನಿಕ ವಿಜ್ಞಾನಿಗಳು ಹುಟ್ಟುವ ಮೊದಲೇ ಇತ್ತಲ್ಲಾ ? ಅದು ಅವೈಜ್ಞಾನಿಕ ಎನ್ನುತ್ತೀರೋ ?

ನಿಜವಾಗಿಯೂ ಈಗ ಹೇಳಿ ಯಾವುದು ನಂಬಿಗೆಯೆ ಮೇಲೆ ನಡೆಯುತ್ತಿಲ್ಲ? ನಡೆಯುವ ಎಲ್ಲಾ ಕೆಲಸಕ್ಕೂ ವೈಜ್ಞಾನಿಕ ತಳಹದಿ ಇದೆಯೇ ? ಜವಾಬ್ದಾರಿಯ ಜಾಗದಲ್ಲಿದ್ದು ಬರಿದೇ ಹಾಗ್ಯಾಕೆ ಇಲ್ಲದ್ದನ್ನು ಹೇಳುತ್ತೀರಿ ? ಮಡೆಸ್ನಾನವನ್ನು ಬಿಡಿ, ಕುಕ್ಕೆಯ ಮಿಕ್ಕಿದ ಕೆಲಸಕ್ಕೂ ಸೇರಿದಂತೇ ನೀವು ಹೇಳಿದ ಮಾತು ಸ್ವೀಕಾರಾರ್ಹವಲ್ಲ. ಅದು ನನ್ನಂತಹ ಕೆಲವರ ಅನಿಸಿಕೆಯಾದರೂ ಪರವಾಗಿಲ್ಲ.


Monday, December 5, 2011

ಕನ್ನಡದ ಅಡಿಗೆ !


ಕನ್ನಡದ ಅಡಿಗೆ !

ಕನ್ನಡ ರಾಜ್ಯೋತ್ಸವದ ಶುಭ ಅವಸರದಲ್ಲಿ ಈ ಸರ್ತಿ ಕನ್ನಡಮಾತೆಗೆ ಅರ್ಪಿಸಿದ ಹಾರ-ಆಹಾರ ಇದು. ಕನ್ನಡದಲ್ಲಿ ಹಿಂದಿನಿಂದ ಇಂದಿನವರೆಗೆ ಅದೆಷ್ಟೋ ಮಹಾನುಭಾವರುಗಳು ಬರೆದರು, ಕನ್ನಡ ಗುಡಿಯ ಸಾರಿಸಿ ರಂಗವಲ್ಲಿ ಇಟ್ಟು, ಚಂದದ ಅಡುಗೆಯನ್ನು ಮಾಡಿ ಹಬ್ಬವನ್ನು ಆಚರಿಸಿದರು. ಈ ಹಬ್ಬ ಸದಾ ಇರಲಿ, ಈ ಹಡಗು ಚಲನೆಯಲ್ಲಿರಲಿ ಎಂಬ ಸದಾಶಯದೊಂದಿಗೆ ಕನ್ನಡ ಜನತೆಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳೊಂದಿಗೆ ಸದ್ಯಕ್ಕೆ ಸ್ವೀಕರಿಸಿ ಈ ಅಡಿಗೆ:

ಅಡಿಗೆ ಸಿದ್ಧವಿದೆ ಕರೆಯಿರಿ ಗೆಳೆಯರೆ
ಅಡಿಗಡಿಗೆ ನಿಮ್ಮ ಸ್ನೇಹಿತರ
ಗುಡಿ ಕನ್ನಡದಲಿ ನಡೆದಿದೆ ಉತ್ಸವ
ಸಡಗರ ಮುಗಿಯದು ಸ್ನೇಹಪರ

ಗಡಬಡಿಸದೆ ಕಾರಂತರು ತಂದರು
ಒಡಲೊಳ ಬೆಟ್ಟದ ಜೀವಗಳ
ಬಿಡದೆ ಕಟ್ಟಿದರು ನಾಕುತಂತಿಯನು
ತುಡಿತದಿ ಬೇಂದ್ರೆಯು ಕನಸುಗಳ

ಬಿಡಿಬಿಡಿಯಾದರು ಭಗವದ್ಗೀತೆಯು
ನುಡಿಗಟ್ಟಿನ ಡೀವೀಜಿಯದು
ಕಿಡಿಕಿಡಿ ರೂಪದ ಹಾಸ್ಯದ ಪಲ್ಯವು
ಒಡನಾಡೀ ನಮ್ಮ ಬೀಚಿಯದು

ಕೊಡಮಾಡಿದರಾನವ್ಯ ನವೋದಯ
ಅಡಿಗರು ಗುಡುಗುತ ಬೇರೆದನಿ
ತಡಮಾಡದೆ ಮಕ್ಕಳ ಮನವರಿತರು
ಸಿಡಿಸುತ ರತ್ನನು ಪದಗಳನು

ಕಡೆದು ರಾಮಾಯಣ ಮೊಸರಲಿ ಬೆಣ್ಣೆಯ
ಗಡಿಗೆ ತುಂಬಿಸುತ ಕುವೆಂಪುವು
ಹಡಗು ಕಟ್ಟಿದರು ಬಿಎಂಶ್ರೀಗಳು
ಒಡೆಯದಂತೆ ಕೃಷ್ಣರಾಯ್ರುಗಳು

ಪೊಡವಿಯ ಕಥೆಗಳ ಆಸ್ತಿಯು ಮಾಸ್ತಿಯು
ಹುಡಿ ರಂಗೋಲಿಯ ಗೋರೂರು
ಪೊಡಮಡುವೆವು ಭುವನೇಶ್ವರಿ ನಿನಗೆ ನಾವ್
ಬೆಡಗಿದು ನಮ್ಮಯ ತವರೂರು

Saturday, December 3, 2011

ಡರ್ಟಿ ಎನಿಸದ ಡರ್ಟಿ ಪಿಕ್ಚರ್ !


ಡರ್ಟಿ ಎನಿಸದ ಡರ್ಟಿ ಪಿಕ್ಚರ್ !

ನಿಮ್ಮಂತೇ ಅಥವಾ ನಿಮ್ಮಲ್ಲಿ ಕೆಲವರಂತೇ ಕುತೂಹಲಿಯಾಗಿ ’ದಿ ಡರ್ಟಿ ಪಿಕ್ಚರ್’ ನೋಡಿದೆ! ನೋಡುವ ಮೊದಲು ಉತ್ಸುಕನಾಗಿದ್ದೆ, ಕಾಮದ ಬಗ್ಗೆ [ಕಾಮವನ್ನು ನೋಡುವ ಉದ್ದೇಶವಲ್ಲ] ಒಂದಷ್ಟು ಏನೇನೋ ಜೋಡಿಸಿರುತ್ತಾರೆ ಎಂದುಕೊಂಡಿದ್ದೆ, ಖಂಡಿತಾ ಹಾಗಿಲ್ಲ. ನೋಡುತ್ತಾ ನೋಡುತ್ತಾ ಕೊನೇಗೆ ನನಗೇ ಅರಿವಿಲ್ಲದೇ ಕಣ್ಣಲ್ಲಿ ಎರಡು ಹನಿಗಳು ಹುಟ್ಟಿ ಕೆನ್ನೆಯ ಪಕ್ಕೆಗಳತ್ತ ಜಾರಿದವು. ನಾವು ನೀವು ಸಾಮಾನ್ಯವಾಗಿ ತಿಳಿದುಕೊಳ್ಳುವಂತಹ ಸನ್ನಿವೇಶ ಯಾವುದೂ ಕಾಣಿಸಲಿಲ್ಲ. ಕುಟುಂಬ ಸಮೇತ ಕುಳಿತು ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಚಿತ್ರ; ಯಾಕೆಂದರೆ ಅದರಲ್ಲಿರುವ ಚಿಕ್ಕ ಪುಟ್ಟ ಬಿಚ್ಚುಡುಗೆಯ ಚಿತ್ರಗಳಿಗಿಂತಾ ಕೆಳಮಟ್ಟದ ಅಥವಾ ಬಟ್ಟೆಯೇ ಇಲ್ಲದ ಚಿತ್ರಗಳನ್ನು ನಿತ್ಯವೂ ನಾವು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತೇವೆ. [ ಇನ್ನು ೮-೧೪ ವಯಸ್ಸಿನ ಚಿಕ್ಕಮಕ್ಕಳು ತೋರಿಸಬಾರದು ಎಂಬ ಮನೋಭಾವ ಇದ್ದರೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಬಹುದು. ೬ ಕ್ಕೂ ಕೆಳಗಿನವರಿಗೆ ಅರ್ಥವಾಗುವುದಿಲ್ಲ, ೧೫ ಕ್ಕೂ ಮೇಲಿನವರು ಅವರೇ ಕದ್ದಾದರೂ ನೋಡುತ್ತಾರೆ! ]

ನಾನು ಸಿನಿಮಾ ನೋಡದೇ ವರ್ಷಗಳೇ ಕಳೆದಿವೆ. ಮಡಿವಂತಿಕೆಯಲ್ಲ, ಹಣಖರ್ಚಾಗುವ ಪ್ರಮೇಯಕ್ಕಲ್ಲ, ನಮ್ಮಂತಹ ಬರಹಗಾರರು / ತರಬೇತುದಾರರು/ ತಂತ್ರಜ್ಞರು ಎಲ್ಲರ ಜೊತೆ ಕೂತು ಸಿನಿಮಾ ನೋಡಬಾರದೆಂಬ ಮನೋಭಾವದವನೂ ಅಲ್ಲ. ಸರದಿಯಲ್ಲಿ ನಿಂತು ಟಿಕೇಟು ಕೊಳ್ಳುವುದು, ನುಗ್ಗಾಟದಲ್ಲಿ ನುಸುಳಿ ಪ್ರಯಾಸದಲ್ಲೇ ನೋಡುವುದು ನನಗೆ ಒಗ್ಗುವುದಿಲ್ಲ. ನಾವು ನೋಡಬೇಕೆನ್ನಿಸುವಷ್ಟು ದಿವಸಗಳಿಗೆ ಸಿನಿಮಾ ಹತ್ತಿರದ ಥಿಯೇಟರ್ ಗಳಿಂದ ಎದ್ದುಹೋಗಿರುತ್ತದೆ. ಅವರಿವರ ಬಾಯಿಂದ ಕಥೆ ಗೊತ್ತಾದಮೇಲೆ ನೋಡುವ ಆಸಕ್ತಿ ತೀರಾ ಉಳಿಯುವುದಿಲ್ಲ. ಅದರಲ್ಲಂತೂ ಇತ್ತೀಚೆಗೆ ಕನ್ನಡದಲ್ಲಂತೂ ಒಂದೋ ಮಚ್ಚು-ಲಾಂಗು ವ್ಯವಹಾರದ್ದು ಇಲ್ಲಾ ಯೋಗರಾಜ ಭಟ್ಟರ ಒಂದೇ ರುಚಿಯ ಚಿತ್ರಾನ್ನ ಅದೂ ಇಲ್ಲಾ ಅಂದ್ರೆ ಅಲ್ಲೊಂದಷ್ಟು ಇಲ್ಲೊಂದಷ್ಟು ಸಿನಿಮಾಗಳ ತುಣುಕು ಕಥೆ ಕದ್ದು ಸೇರಿಸಿದ ಕೊಲಾಜ್ ಇವುಗಳೇ ಆಗಿರುತ್ತವೆ. ಪುಟ್ಟಣ್ಣ ಕಣಗಾಲ್‍ರಂಥವರು ಗತಿಸಿದ ಮೇಲೆ ಎಲ್ಲೋ ಆಗೊಮ್ಮೆ ಈಗೊಮ್ಮೆ ’ಅಮೃತವರ್ಷಿಣಿ’ , ’ಯಜಮಾನ’, ’ಆಪ್ತಮಿತ್ರ’ ಹೀಗೇ ಒಂದೊಂದು ಕನ್ನಡ ಸಿನಿಮಾಗಳು ಬರುತ್ತಿವೆ. ಅಂತಹ ನಿರ್ದೇಶಕರು ಕನ್ನಡದಲ್ಲಿ ಮತ್ತೆ ಬರುತ್ತಾರಾ ಎಂದು ಈಗಲೂ ನನ್ನಂಥವರು ಹುಡುಕುತ್ತಿದ್ದಾರೆ; ಹೊಸದೊಂದು ಸಿನಿಮಾ ಸೆಟ್ಟೇರಿದಾಗ ಅದರ ನಿರ್ದೇಶಕರಲ್ಲಿ ಕಣಗಾಲ್ ರನ್ನು ಕಾಣ ಹೊರಡುತ್ತೇವೆ. ಬಹುತೇಕ ಭ್ರಮನಿರಸನಗೊಳ್ಳುತ್ತೇವೆ. ಮತ್ತೆ ಹುಡುಕುವುದು ಮತ್ತೆ ಸುಮ್ಮನೇ ಕೂರುವುದು- ಇದನ್ನು ನೆನೆದಾಗ " ಬಂದೇ ಬರುತಾನೆ ರಾಮ ಬಂದೇ ಬರುತಾನೆ....." ಹಾಡಿನ ನೆನಪಾಗುತ್ತದೆ. ಪುಟ್ಟಣ್ಣ ಮರಳುವುದೂ ಇಲ್ಲ, ಯಾರಲ್ಲೂ ಪರಕಾಯ ಪ್ರವೇಶ ಮಾಡುವುದೂ ಇಲ್ಲ ಎಂಬ ಭಾವತರಂಗಗಳು ನಮ್ಮಲ್ಲಿ ಹರಿಯುವುದೇ ಇಲ್ಲ !

ಹಿಂದೂ ಕೆಲವೊಮ್ಮೆ ಇಂತಹದ್ದೇ ಹಿಂದೀ ಸಿನಿಮಾಗಳನ್ನು ನಾನು ನೋಡಿದ್ದಿದೆ. ತಬು ನಟಿಸಿದ ಚಾಂದನಿ ಬಾರ್, ಕರೀನಾ ಕಪೂರ್ ನಟಿಸಿದ ಚಮೇಲಿ ಇಂತಹ ಚಿತ್ರಗಳನ್ನು ನೋಡಿದ್ದೇನೆ; ಖುಷಿಪಟ್ಟಿದ್ದೇನೆ. ಇವುಗಳನ್ನು ನೋಡುವುದು ನಾಯಕಿಯರು ಬಿಚ್ಚುಡುಗೆಯಲ್ಲಿ ಚೆನ್ನಾಗಿ ಕಾಣುತ್ತಾರೆ ಎಂದು ಜೊಲ್ಲು ಸುರಿಸುವುದಕ್ಕಲ್ಲ ಬದಲಾಗಿ ಇಂತಹ ಚಿತ್ರಗಳಲ್ಲಿ ನಾಯಕ, ನಾಯಕಿ ತಮ್ಮ ಅದ್ಭುತ ನಟನಾ ಕೌಶಲವನ್ನು ಹೊರಹೊಮ್ಮಿಸಲು ಸಾಕಷ್ಟು ಅವಕಾಶಗಳಿರುತ್ತವೆ. ನಟಿಯರು ಹೇಗೂ ತಮ್ಮ ದೇಹಸಿರಿಯನ್ನು ಸಾರ್ವಜನಿಕರ ಕಣ್ಣಿಗೆ ಉಣಬಡಿಸುವುದು ಸಹಜವೇ. ಅಂಥದ್ದಕ್ಕೆ ತಯಾರಿದ್ದವರು ಮಾತ್ರ ಹಾಗೆ ನಟಿಯರಾಗುತ್ತಾರೆ. ಆದರೆ ನಟಿಯರು ಎಂದಾಕ್ಷಣ ಅವರೆಡೆ ಮೂಗು ಮುರಿಯುವುದು ಅಸಡ್ಡೆಮಾಡುವುದು ಸರಿಯಲ್ಲ. ಅವರಲ್ಲೂ ಕಲೆಗಾರಿಕೆ ಇರುತ್ತದೆ. ಒಳಗೆ ಕುಳಿತ ಕಲಾವಿದನಿಗೆ ಲಿಂಗಭೇದವಿಲ್ಲ. ವೈಯ್ಯಕ್ತಿಕ ಜೀವನದಲ್ಲಿ ನಟೀಮಣಿಗಳು ಏನಾದರೂ ಮಾಡಿಕೊಳ್ಳಲಿ ಆದರೆ ಕಥೆಯಲ್ಲಿ ಬರುವ ಆ ಯಾ ಪಾತ್ರಗಳಿಗೆ ಜೀವತುಂಬಿದ್ದಾರೋ ಎಂಬುದು ನಾವು ನೋಡಬೇಕಾದ ಪ್ರಮುಖ ಅಂಶ.

ಹಿಂದೆ ಸಿನಿಮಾಗಳು ಚೆನ್ನಾಗೇ ಇರುತ್ತಿದ್ದವು ಯಾಕೆಂದರೆ ಅವುಗಳ ಕಥೆಗಳು ಹೆಚ್ಚಾಗಿ ಉತ್ತಮ ಕಾದಂಬರಿಗಳನ್ನು ಆಧರಿಸುತ್ತಿದ್ದವು. ಇಂದು ಕಾಸು ಉಳ್ಳ ನಿರ್ಮಾಪಕ ಯಾವುದೋ ನಿರ್ದೇಶಕರನ್ನೂ ಇನ್ಯಾರ್ಯಾರೋ ಕಲಾವಿದರನ್ನೂ ಕಲೆಹಾಕಿ ಒಟ್ಟಾರೆ ಮತ್ತೊಂದಷ್ಟು ಹಣಗಳಿಸಬೇಕೆಂಬ ಒಂದೇ ಉದ್ದೇಶದಿಂದ ಸಿನಿಮಾ ಮಾಡಲು ಹೊರಟು ಊಟಕ್ಕೊಂದು ಉಪ್ಪಿನಕಾಯಿ, ಹಪ್ಪಳ-ಸಂಡಿಗೆ, ಪಲ್ಯ, ಚಿತ್ರಾನ್ನ ಇವೆಲ್ಲಾ ಇರುವ ಹಾಗೇ ಅವರದ್ದೇ ಭಾಷೆಯಲ್ಲಿ ಹೇಳುವುದಾದರೆ ಒಂದು ಲವ್ ಸೀನು, ಒಂದು ಫೈಟಿಂಗು, ಒಂದು ಕ್ಲೈಮ್ಯಾಕ್ಸು, ಒಂದ್ಸ್ವಲ್ಪ ಸೆಂಟಿಮೆಂಟು, ಒಂದಷ್ಟು ಹಾಡುಗಳ ಮಧ್ಯೆ ಒಂದು ಬಿಕನಿಹಾಕಿ ಕುಣಿವ ಐಟೆಮ್ ಸಾಂಗು --ಇದಲ್ಲ ಸಿನಿಮಾ. ಎಲ್ಲೂ ಪುನರಾವರ್ತಿತವಾಗದ ಕಾಲಕ್ಕೆ ತಕ್ಕ ಸ್ವಸಾಮರ್ಥ್ಯವುಳ್ಳ ಕಥೆಯನ್ನು ಆಯ್ದುಕೊಂಡು, ಉತ್ತಮ ಭೂಮಿಕೆ, ಉತ್ತಮ ನಿರ್ದೇಶಕರು-ತಂತ್ರಜ್ಞರನ್ನು ಹಾಕಿಕೊಂಡು ಮಾಡುವ ಸಿನಿಮಾ ಎಲ್ಲೂ ನೆಲಕಚ್ಚುವುದಿಲ್ಲ!! ಅಲ್ಲಿ ಕಲವಿದರೂ ಗೆಲ್ಲುತ್ತಾರೆ, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞ ಎಲ್ಲರೂ ಉತ್ತೀರ್ಣರಾಗುತ್ತಾರೆ. ಅದು ಬಿಟ್ಟು ಹಾಡಿದ್ದನ್ನೇ ಹಾಡೋ ಕಿಸಬಾಯ್ ದಾಸರ ರೀತಿ ಮಾಡಿದ್ದನ್ನೇ ಮತ್ತೆ ಮಾಡುತ್ತಾ ಮಾಧ್ಯಮಗಳಲ್ಲಿ " ಇದೊಂಥರಾ ಡಿಫರೆಂಟ್ ಆಗಿದೆ " ಎಂದರೆ ಸಾಕಾಗೋದಿಲ್ಲ, ಪ್ರೇಕ್ಷಕ ಹುಷಾರಿದ್ದಾನೆ, ಚೆನ್ನಾಗಿಲ್ಲದಿದ್ದರೆ ತೋಪೆದ್ದುಹೋಗುತ್ತದೆ! ಆಮೇಲೆ ನಿದ್ರೆಮಾತ್ರೆ ಸುಸೈಡ್ ಅಟೆಂಪ್ಟು ಇದೆಲ್ಲಾ ನಾಟಕಮಾಡಿದರೂ ಮತ್ತೆ ಆ ಯಾ ಗೌರವ ಸ್ಥಾನಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಹೋಗಲಿ ಬಿಡಿ "ಇದೆಲ್ಲಾ ನಮಗೂ ಗೊತ್ತಿರುವ ಕಥೇನೆ ಅದ್ಯಾಕ್ ಕೊರೀತಾನೋ" ಅಂದ್ಕೊಂಡ್ರೆ ಕಷ್ಟ, ನೇರವಾಗಿ ಡರ್ಟಿಯತ್ತ ಸಾಗಿಬಿಡೋಣ.

ಸಿನಿಮಾ ಇರುವುದು ಒಬ್ಬ ನಟಿಯ ಜೀವನದ ಸುತ್ತ. ಅದು ಸಿಲ್ಕ್ ಸ್ಮಿತಾಳ ಜೀವನವನ್ನು ಹೋಲುವಂಥದ್ದೂ ಹೌದು ಮತ್ತು ಚಿತ್ರದಲ್ಲಿ ಸಿಲ್ಕ್ ಎನ್ನುವ ಹೆಸರನ್ನೇ ಬಳಸಲಾಗಿದೆ. ವಿದ್ಯಾಬಾಲನ್ ತನ್ನ ಪಾತ್ರವನ್ನು ಎಕ್ಸಲೆಂಟ್ ಆಗಿ ಮಾಡಿದ್ದಾಳೆ. ಉಳಿದ ಪಾತ್ರಗಳೂ ಸಾಕಷ್ಟು ಚೆನ್ನಾಗೇ ಮೂಡಿಬಂದಿವೆ. ಚಿತ್ರದ ಟೈಟಲ್ ಸಾಂಗ್ ಕೊನೇವರೆಗೂ ಮನೆಗೆ ಹೋದಮೇಲೂ ಮರೆತುಹೋಗುವುದಿಲ್ಲ. ನೀವೀಗಾಗಲೇ ಮಾಧ್ಯಮಗಳಲ್ಲಿ ಎಫ್ ಎಂ ರೇಡಿಯೋಗಳಲ್ಲಿ ಕೇಳಿಯೇ ಇರುತ್ತೀರಿ " ಊಲಾಲಾ ಊಲಾಲಾ ಊಲಾಲಾ ಊಲಾಲಾ ತೂ ಹೈ ಮೆರಿ ಫ್ಯಾಂಟಸಿ " ಎಂಬ ಹಾಡು. ನಟಿಯಾಗ ಹೊರಟ ಹೆಣ್ಣೊಬ್ಬಳಿಗೆ ಯಾವೆಲ್ಲಾ ರೀತಿಯ ಕಷ್ಟಕೋಟಲೆಗಳು ಬರಬಹುದು, ಜೀವನದ ಯಾವ ನೋವಿನ ಘಟ್ಟದಲ್ಲಿ ಎಂದಿನ ಅನಿವಾರ್ಯತೆಯಲ್ಲಿ ಅವಳು ಚಟಗಳಿಗೆ ಬಲಿಯಾಗುತ್ತಾಳೆ, ಗಂಡಸರು ಹೇಗೆ ಅವಳನ್ನು ದುರುಪಯೋಗಪಡಿಸಿ ಶೋಷಿಸುತ್ತಾರೆ ಎಂಬೆಲ್ಲಾ ಅಂಶಗಳ ಬಗ್ಗೆ ಕಥೆ ಹರವಿಕೊಂಡು ಸಾಗುತ್ತದೆ.

ವೃತ್ತಿ ಜೀವನದ ಆರಂಭದಲ್ಲಿ ಕೇವಲ ೫ ರೂಪಾಯಿಗಾಗಿ ಹಂಬಲಿಸುವ ನಟಿ ವೃತ್ತಿಯ ಶಿಖರವನ್ನೇರಿದಾಗ ಹಲವು ಡಿಮಾಂಡ್ ಮಾಡುತ್ತಾಳಾದರೂ ರಸಿಕ ಕಾಮುಕ ಚಿತ್ರ ನಿರ್ಮಾಪಕ, ನಿರ್ದೇಶಕ, ನಟರೊಂದಿಗೆ ಅವಳ ಸಂಬಂಧ ಹೇಗೆ ಬೆಸೆದುಕೊಂಡು ತನ್ನ್ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾಳೆ ಎಂಬುದನ್ನು ವಿಶದವಾಗಿ ಚಿತ್ರಿಸಲಾಗಿದೆ. ವಯಸ್ಸು ಇನ್ನೂ ಇದ್ದರೂ ಉದ್ಯಮಕ್ಕೆ ದುಡಿದುಕೊಡುವ ಕುದುರೆಯಾಗಿ ಕಾಣದಾಗ ಕಾಲ ಕಸದಂತೇ ವರ್ತಿಸುವ ಆ ಮಂದಿಯ ನಿರಾಕರಣೆಗಳಿಗೆ ಬೇಸತ್ತು ಕಾಲಹಾಕುವುದು, ಮತ್ತೆ ಒಮ್ಮೆ ಐದೇ ರೂಪಾಯಿಗಳಿಗಾಗಿ ಬೇಡುವುದು ಇವೆಲ್ಲಾ ಮನಸ್ಸಿಗೆ ನಾಟುತ್ತವೆ. ದಿವಾಳಿಯಾಗಿ ಸಾಲಮಾಡಿಕೊಂಡ ನಟಿಗೆ [ಅಮ್ಮನ ಮನೆಬಾಗಿಲೂ ಮೊದಲೇ ಮುಚ್ಚಿಹೋಗಿರುತ್ತದೆ] ಯಾರೂ ಇಲ್ಲದಾದಾಗ ತನ್ನ ನೋವನ್ನು ಕೇಳುವವರೇ ಇಲ್ಲದ ದುರ್ಭರ ಸ್ಥಿತಿಯಲ್ಲಿ ಮಾನಸಿಕ ಖಿನ್ನತೆಯಲ್ಲಿ ಆಕೆ ಈ ಲೋಕಕ್ಕೆ ವಿದಾಯಹೇಳುವ ಸನ್ನಿವೇಶ ಕಣ್ಣಾಲಿಗಳನ್ನು ತುಂಬಿಸುತ್ತದೆ. ಈ ಸಂದರ್ಭ ನನಗೆ ಎರಡು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ತೀರಿಕೊಂಡ ಪರ್ವೀನ್ ಬಾಬಿಯ ನೆನಪಾಯ್ತು; ತುಂಬು ಹರೆಯದ ಸುಂದರ ತರುಣಿ ಒಂದುಕಾಲದಲ್ಲಿ ಅಮಿತಾಭ್ ರಂತಹ ನಾಯಕರ ಮನವನ್ನೇ ಗೆದ್ದಿದ್ದಳು! ಆದರೆ ಸಾಯುವಾಗ ಎಂತಹ ವ್ಯಥೆಯಿಂದ ಸತ್ತಳು ಎಂಬುದು ಅನೇಕರಿಗೆ ತಿಳಿದಿರುವ ಸಂಗತಿ.

ಇತ್ತೀಚೆಗೆ ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿರುವವರು ಹಲವು ಅನೈತಿಕ ಸಂಬಂಧಗಳಲ್ಲಿ ತೊಡಗಿಕೊಂಡು ಹೆಂಡತಿ-ಮಕ್ಕಳನ್ನು ಕೈಬಿಡುತ್ತಾರೆ. ಈ ಕಥೆಯನ್ನು ಬರೆಯುತ್ತಿರುವ ಹೊತ್ತಿಗೇ ’ಜಸ್ಟ್ ಬೆಂಗಳೂರು’ ನಲ್ಲಿ ಅಂತಹ ಒಂದು ಸುದ್ದಿ ಬಿತ್ತರವಾಯ್ತು. ನಮ್ಮ ಏಳ್ಗೆಗಾಗಿ, ನಮ್ಮ ಅನುಕೂಲಕ್ಕಾಗಿ ನಮ್ಮ ಜೊತೆಯಾದ ಹೆಣ್ಣನ್ನು ನಡುನೀರಿನಲ್ಲಿ ಕೈಬಿಡುತ್ತಿರುವುದು ಖಂಡನೀಯ. ಸಿನಿಮಾಮಂದಿಯ ಈ ವರ್ತನೆ ಈಗೀಗ ಇದು ತೀರಾ ದಿನಕ್ಕೊಂದೆರಡು ವರದಿಯಾಗುತ್ತಿದೆ. ಇಂಥದ್ದನ್ನು ಹಾಗೆ ಮಾಡಿದ ನಟ/ನಿರ್ದೇಶಕರಿಗೆ ಪ್ರೇಕ್ಷಕರು ಒಟ್ಟಾಗಿ ಕಲ್ಲೆಸೆದು ನಿಯಂತ್ರಿಸಬೇಕಾಗಿದೆ.

ಒಟ್ಟಾರೆ ಹೇಳುವುದಾದರೆ ಡರ್ಟಿ ಪಿಕ್ಚರ್ ನಲ್ಲಿ ಅಂಥಾ ಡರ್ಟಿ ಸನ್ನಿವೇಶಗಳ್ಯಾವವೂ ಇಲ್ಲ. ಇಂದಿನ ಮಕ್ಕಳು ನಮಗಿಂತಾ ತಿಳುವಳಿಕೆ ಉಳ್ಳವರಾಗಿರುವುದರಿಂದ ಕುಟುಂಬ ಸಮೇತ [ಅಥವಾ ಮಕ್ಕಳನ್ನು ಬೇಕಾದರೆ ಮನೆಯಲ್ಲೇ ಬಿಟ್ಟು] ಹಾಯಾಗಿ ಕುಳಿತು ನೋಡಬಹುದು. ಹೋಗಿಬನ್ನಿ, ನೋಡಿಬನ್ನಿ , ಕಲಾವಿದರಿಗೆ / ನಟಿಯರಿಗೆ ಅಂತಹ ಸ್ಥಿತಿ ಬಾರದಿರಲಿ ಎಂದು ಹಾರೈಸಿಬನ್ನಿ. ಮುಗಿಸುವ ಮುನ್ನ: ವಿದ್ಯಾಬಾಲನ್ ಅವರಿಗೆ ಬೇಕಷ್ಟು ಅವಾರ್ಡ್‍ಗಳು ಸಿಗಬಹುದಾಗಿದೆ; ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು, ಮಿಕ್ಕವರಿಗೂ ಕೂಡ ಅಭಿನಂದನೆಗಳು.