ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 3, 2011

ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !


ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದಲಿ ನಿನ್ನಯ ಠಾವೇ !

ಸೃಷ್ಟಿಕರ್ತ ಬ್ರಹ್ಮನ ಮಗ ಋಷಿ ಕಷ್ಯಪನ ನಾಲ್ಕು ಮಡದಿಯರಲ್ಲಿ ಮೂರನೆಯವಳಾದ ಕದ್ರು ಎಂಬಾಕೆಯಲ್ಲಿ ನಾಗಗಳು ಜನಿಸಿದವು ಎಂಬುದು ಪುರಾಣೋಕ್ತ ಮಾಹಿತಿ. ನಾಗಗಳ ಅಧಿಪತ್ಯವಿರುವುದು ಪಾತಾಳಲೋಕದಲ್ಲಿ ಎಂದೂ ಪುರಾಣಗಳು ಹೇಳುತ್ತವೆ. ಜನಮೇಜಯ ಸರ್ಪಯಾಗವನ್ನೇ ನಡೆಸಿ ಸಹಸ್ರಾರು ನಾಗ ಸಂಕುಲಗಳು ನಶಿಸಿಹೋದರೂ ’ಆಸ್ತಿಕ’ನೆಂಬ ಬ್ರಾಹ್ಮಣ ಕುವರನ ತಡೆಯುವಿಕೆಯಿಂದಾಗಿ ಒಂಬತ್ತು ಪ್ರಮುಖ ನಾಗಗಳು ಮತ್ತು ಅವುಗಳ ವಂಶಗಳು ಉಳಿದುಕೊಂಡವು ಎಂದು ತಿಳಿದುಬರುತ್ತದೆ.


अनन्तं वासुकिं शेषं पद्मनाभं च कम्बलम् ।
शंखपालं धार्तराष्ट्रं तक्षकं कालियं तथा ||

[ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ || ]

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳನ್ನು ಹೆಸರಿಸಿದ್ದಾರೆ. ಹೀಗೆ ಉಳಿದುಕೊಂಡ ನಾಗಗಳಲ್ಲಿ ಕಾಲಿಯನನ್ನು ದ್ವಾಪರಯುಗದಲ್ಲಿ ಶ್ರಾವಣ ಮಾಸದ ಶುದ್ಧ ಅಥವಾ ಶುಕ್ಲಪಕ್ಷದ ಪಂಚಮಿಯ ದಿನ ಶ್ರೀಕೃಷ್ಣ ಮರ್ದಿಸಿ ಆತನ ವಿಷದೂಷಣಗಳನ್ನು ನಿಲ್ಲಿಸಿದ ಎಂಬುದೊಂದು ಐತಿಹ್ಯ.

ಹಿಂದೊಮ್ಮೆ ಕ್ಷತ್ರಿಯ ನಾಗಕುಲವೇ ಜಗತ್ತಿನ ಬಹುಭಾಗವನ್ನು ಆಳಿತ್ತು ಎಂಬ ಕಥೆಯೂ ಇದೆ! ಅವುಗಳಲ್ಲಿ ಮೊದಲನೆಯ ರಾಜ ಅನಂತ- ಇದೀಗ ಸುದ್ದಿಯಲ್ಲಿರುವ ಕೇರಳದ ತಿರುವನಂತಪುರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದನಂತೆ. ವಾಸುಕಿ ಕೈಲಾಸದಲ್ಲಿ ನಿಂತು ಆಳಿದರೆ ತಕ್ಷಕ ತಕ್ಷಶಿಲೆಯಲ್ಲಿ ನೆಲೆನಿಂತು ರಾಜ್ಯಭಾರ ನಡೆಸುತ್ತಿದ್ದ. ಇನ್ನುಳಿದಂತೇ ಕಾರ್ಕೋಟಕ, ಪಿಂಗಳ ಮತ್ತು ಐರಾವತ ಹೀಗೇ ಹಲವು ನಾಗಗಳು ಇಂದಿನ ಪಂಜಾಬಿನ ಐರಾವತಿ ಅಥವಾ ರಾವಿ ನದೀ ಮುಖಜ ಭೂ ಪ್ರದೇಶದಲ್ಲಿ ಆಳುತ್ತಿದ್ದರು. ಇಂತಹ ಒಂದು ಪ್ರದೇಶ ಗಂಗಾನದಿಯೆಡೆಯಲ್ಲೂ ಇತ್ತು. ಅಲ್ಲಿಂದಲೇ ಅರ್ಜುನನ ಹೆಂಡತಿಯಾಗಿ ಉಲೂಪಿ ಬಂದಿದ್ದಳು ಎಂದೂ ಪ್ರತೀತಿ ಇದೆ. ಮತ್ಸ್ಯ ಪುರಾಣದ ಹತ್ತನೇ ಅಧ್ಯಾಯದಲ್ಲಿ ನಾಗಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ. ಆ ಸಮಯದಲ್ಲಿ ಕತ್ತಲೆಯಕಾಲದಲ್ಲಿ ಸುಮಾರು ೧೦೦ ವರ್ಷಗಳ ಕಾಲ ನಾಗಗಳು ಆಳಿದ್ದಾಗಿಯೂ ಅವುಗಳಲ್ಲಿ ಕೆಲವು ಬೌದ್ಧಮತಾವಲಂಬಿಗಳಾಗಿದ್ದರೆಂದೂ ಕ್ರಮೇಣ ಗಂಗಾನದಿಯಲ್ಲಿ ಸ್ನಾನಮಡುತ್ತಾ ಅಶ್ವಮೇಧ ಯಾಗವನ್ನು ಮಾಡಿದ ತರುವಾಯ ಅವರೆಲ್ಲಾ ವೈಷ್ಣವ ಮತವನ್ನು ಸ್ವೀಕರಿಸಿದರು ಎಂದೂ ಆ ಪುರಾಣ ಹೇಳುತ್ತದೆ! ಮಥುರಾ, ಪದ್ಮಾವತಿ, ಕಾಂತಿಪುರ ಮತ್ತು ತಿರುವನಂತಪುರ ಇವು ನಾಗಗಳ ಪ್ರಮುಖ ರಾಜಧಾನಿಗಳಾಗಿದ್ದವು ಎಂಬ ಸಂಗತಿಯೂ ತಿಳಿದುಬರುತ್ತದೆ. ಇಂದಿನ ನಾಗ್ಪುರ್ ಪ್ರದೇಶ ಕೂಡ ನಾಗಗಳಿಗೆ ಸಂಬಂಧಿಸಿದ್ದೇ ಆಗಿತ್ತು ಎಂದೂ ಪುರಾಣೋಕ್ತ ದಾಖಲೆಗಳು ಹೇಳುತ್ತವೆ.

ಇಂದಿಗೂ ನಾಗವಂಶಿ ಕ್ಷತ್ರಿಯರು ಎನಿಸಿರುವ ಹಲವು ಜನ ರಾಜಸ್ತಾನದ ಕೆಲವು ಭಾಗಗಳು, ಮಧ್ಯಪ್ರದೇಶದ ಕೆಲವುಭಾಗಗಳು ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲೂ ಕಂಡುಬರುತ್ತವೆ. ಕರ್ನಾಟಕದ ತುಳುನಾಡು ಅಥವಾ ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಕೆಲಭಾಗಗಳಲ್ಲಿಯೂ ಇವರು ಸಿಗುತ್ತಾರೆ.

ನಾಗಪಂಚಮಿ ಅಥವಾ ನಾಗರಪಂಚಮಿಯನ್ನು ಭಾರತದಲ್ಲಷ್ಟೇ ಅಲ್ಲದೇ ನೇಪಾಳೀಯರೂ ಆಚರಿಸುತ್ತಾರೆ. ಜಗತ್ತಿನಲ್ಲಿ ಪರಿಪೂರ್ಣ ಮತ್ತು ಏಕೈಕ ಸನಾತನ ಧರ್ಮ ಇರುವುದು ನೇಪಾಳದಲ್ಲಿ ಮಾತ್ರ! ಅಂತಹ ನೇಪಾಳದ ಕಠ್ಮಂಡುವಿನಲ್ಲಿ ಒಂದಾನೊಂದು ಕಾಲದಲ್ಲಿ ನಾಗಗಳೇ ತುಂಬಿಕೊಂಡಿದ್ದವಂತೆ! ಜನವಸತಿ ಬೆಳೆದಂತೇ ಜನರಿಗೆ ತೊಂದರೆಯಾಗತೊಡಗಿತು. ಹಾವುಗಳಿಗೂ ಕಷ್ಟಕೋಟಲೆ ಎದುರಾಯಿತು. ಅದನ್ನು ನಿವಾರಿಸಿಕೊಳ್ಳಲು ನೇಪಾಳದ ರಾಜ ನಾಗಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಅವುಗಳಿಗೇ ಅಂತಲೇ ಕೆಲವು ಜಾಗಗಳನ್ನು ಬಿಟ್ಟುಕೊಟ್ಟ ಎಂಬುದೂ ಕೂಡ ಇನ್ನೊಂದು ಕಥೆ.

ಹಾಗೆ ನೋಡುತ್ತಾ ನೋಡುತ್ತಾ ಹೋದರೆ ನಾಗಗಳು ಮಳೆಯ ದೇವತೆಗಳೆಂದೂ ಮಳೆಯನ್ನು ನಿಯಂತ್ರಿಸುವ ಅಥವಾ ಬರಿಸುವ ತಾಕತ್ತು, ಆ ಅಧಿಕಾರ ನಾಗಗಳಿಗೆ ಮಾತ್ರ ಇದೆಯೆಂಬುದೂ ಅಲ್ಲಿನ ಜನರ ನಂಬಿಕೆ. ಹಾಗಾಗಿ ರಾಜನಾದವನಿಗೆ ತಾಂತ್ರಿಕ ಶಕ್ತಿಯನ್ನು ಕೊಟ್ಟು ಮಳೆ-ಬೆಳೆಗಳು ಸಕಾಲಕ್ಕೆ ಆಗುವಂತೇ ಮಾಡುವುದು ನಾಗಗಳು ಎನ್ನುತ್ತಾರೆ. ನಾಗಪಂಚಮಿಯ ದಿನ ಅಲ್ಲಿನ ಮನೆಗಳಲ್ಲಿ ನಾಗರ ಛಾಯಾಚಿತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ. ಪ್ರತೀಮನೆಯ ಮುಂಭಾಗದ ಬಾಗಿಲಿನ ಮೇಲೆ ನಾಗನ ಚಿತ್ರ ಅಂಟಿಸಿ ದುಷ್ಟಶಕ್ತಿಗಳು ಬರಗೊಡದಂತೇ ನಾಗನಲ್ಲಿ ಪ್ರಾರ್ಥಿಸುತ್ತಾರೆ. ಭಾರತದಲ್ಲಿ ಇರುವಂತೇ ಅಲ್ಲಿಯೂ ಹಾಲು, ಹೂವು ಹಣ್ಣು ಇತ್ಯಾದಿಗಳಿಂದ ಪೂಜೆ ನಡೆಯುತ್ತದೆ ಎಂಬುದು ಗಮನಾರ್ಹ.


ಇನ್ನು ಭಾರತದಲ್ಲಿ ಅದರಲ್ಲಂತೂ ದಕ್ಷಿಣಭಾರತದಲ್ಲಿ ದ್ರಾವಿಡರು ನಾಗಪೂಜೆ ಇತಿಹಾಸದಲ್ಲೂ ಕಂಡುಬರುತ್ತದೆ. ಇತಿಹಾಸದಲ್ಲಿ ಹೆಸರಿಸಿದ ಪಂಚದ್ರಾವಿಡ ದೇಶಗಳಲ್ಲಿ ನಮ್ಮ ಕರ್ನಾಟಕವೂ ಒಂದು. ಕರ್ನಾಟಕದಲ್ಲಿ ನಾಗರ ಪಂಚಮಿಯಂದು ಕೆಲವೆಡೆ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ತೆರಳಿ ತಮ್ಮ ಅಣ್ಣ-ತಮ್ಮಂದಿರಿಗೆ ತನಿ ಎರೆಯುವ ಪದ್ಧತಿ ಇದೆ. ಇದೊಂದು ಮಮತೆ ತುಂಬಿದ, ಅಕ್ಕರೆ ತುಂಬಿದ ಆತ್ಮೀಯತೆಯ ಕೈಂಕರ್ಯ. ಮದುವೆಯಾಗಿ ಹೋದ ತಂಗಿಯೋ ಅಕ್ಕನೋ ತವರಲ್ಲಿ ಇರುವ ತನ್ನ ಸಹೋದರರನ್ನು ಮರೆತಿಲ್ಲಾ ಎಂಬುದನ್ನು ನೆನಪಿಸುವ ಸಲುವಾಗಿಯೂ ಮತ್ತು ಗಂಡನ ಮನೆಗೆ ತೆರಳಿ ಅಲ್ಲಿನ ಕೆಲಸ-ಕಾರ್ಯಗಳಲ್ಲಿ ಸದಾ ತೊಡಗಿಕೊಂಡಿದ್ದ ಆಕೆಗೆ ಕಾಡುವ ತವರಿನ ನೆನಪು ಮರುಕಳಿಸುತ್ತಾ ಆಕೆ ಬೇಸರಗೊಳ್ಳದಿರಲಿ ಎಂಬುದೂ ಕೂಡ ಇದರ ಹಿಂದಿರುವ ಉದ್ದೇಶ.

ಕೆಲವು ಊರುಗಳಲ್ಲಿ ಇದೇ ಸಮಯ ಜೋಕಾಲಿಗಳನ್ನೂ ಕಟ್ಟಿ ಜೀಕುವ ಪರಿಪಾಠವಿದೆ. ಇನ್ನು ಹಲವೆಡೆ ಮದರಂಗಿಯನ್ನು ಹಚ್ಚಿಕೊಳ್ಳುವ ಅಭ್ಯಾಸಕೂಡ ಇದೆ. ಒಟ್ಟಿನಲ್ಲಿ ನಾಗಪಂಚಮಿಯ ಹೆಸರಿನಲ್ಲಿ ಒಂದಷ್ಟು ಸಂತಸವನ್ನು ಪಡೆದುಕೊಳ್ಳುವ ಸಮಯ ಇದಾಗಿದೆ. ಉತ್ತರಕರ್ನಾಟಕದ ಬತ್ತೀಸ್ ಶಿರಾಳ ಮೊದಲಾದ ಕಡೆ ಜೀವಂತ ಹಾವುಗಳನ್ನೇ ಹಿಡಿದು [ಹಾವಾಡಿಗರ ಸಹಾಯದಿಂದ] ಪೂಜಿಸುವ ವೈಖರಿಯೂ ಇದೆ ! ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬ ಪ್ರಮುಖ ಹಬ್ಬಗಳಲ್ಲೊಂದು, ಹಾಗಾಗಿ ೩ ರಿಂದ ೫ ದಿನಗಳ ವರೆಗೆ ಆಚರಿಸಲ್ಪಡುತ್ತದೆ. ಪಂಚಮಿ ಹಬ್ಬಕ್ಕೆ ಕರೆಯಲು ಅಣ್ಣ ಇನ್ನೂ ಬರಲೇ ಇಲ್ಲವಲ್ಲಾ ಎಂಬ ಕಳವಳದಲ್ಲಿ ತಂಗಿ ಹಾಡಿದ ಜಾನಪದ ಗೀತೆ :

ಪಂಚ್ಮಿ ಹಬ್ಬ ಉಳಿದಾವ ದಿನನಾಕ
ಅಣ್ಣ ಬರಲಿಲ್ಲ ಯಾಕ ಕರಿಲಾಕ ?

....... ಎಂಬ ಹಾಡನ್ನು ನಾವು ಕೇಳಿಯೇ ಇದ್ದೇವಷ್ಟೇ ?


ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು-ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ-ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತಿಳಿದುಬರುವ ಅಂಶವಾಗಿದೆ. ಅದಕ್ಕೆಂತಲೇ ನಾಗಬಲಿ ಅಥವಾ ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸುವ ಭಕ್ತರು, ಆಸ್ತಿಕರು ಇದ್ದಾರೆ.

ಒಂದುಕಾಲಘಟ್ಟದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ತಕ್ಷಕಮೊದಲಾದ ಸರ್ಪಗಳು ಕಾರ್ತಿಕೇಯನನ್ನು ಆಶ್ರಯಿಸಿದವು ಎಂದು ತಿಳಿಯಲ್ಪಟ್ಟಿದೆ. ಅಲ್ಲಿಂದ ಮುಂದಕ್ಕೆ ಸುಬ್ರಹ್ಮಣ್ಯನಿಗೂ ನಾಗಸಂಕುಲಕ್ಕೂ ಅವಿನಾಭಾವ ಸಂಬಂಧವೇರ್ಪಟ್ಟಿದೆ. ನಾಗನ ಇನ್ನೊಂದು ರೂಪವೇ ಸುಬ್ರಹ್ಮಣ್ಯ ಎಂಬಷ್ಟು ಆ ಅನ್ಯೋನ್ಯತೆ ಬೆಳೆದುನಿಂತಿದೆ. ದಕ್ಷೀಣಕನ್ನಡದ ಕುಕ್ಕೆ, ಕೋಲಾರದ ಘಾಟಿ ಹಾಗೂ ಉತ್ತರಕನ್ನಡದ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರಗಳು ನಾಗಗಳ ಅರಾಧನೆಗೆ ವಿಶೇಷ ಆದ್ಯತೆ ನೀಡಿವೆ, ಪ್ರಸಿದ್ಧವಾಗಿವೆ. ಸಂತಾನಹೀನರು ಪೂಜಿಸಿ, ಪ್ರಾರ್ಥಿಸಿ ಮಕ್ಕಳನ್ನು ಪಡೆದ ಸಾಕ್ಷ್ಯಗಳೂ ದೊರೆಯುತ್ತವೆ!

ಇಂದಿನ ದಿನಗಳಲ್ಲಿ ಎಷ್ಟೇ ಜಂಜಡಗಳಿದ್ದರೂ ಹೆಂಗಳೆಯರು ತಮ್ಮ ನೆಮ್ಮದಿಗಾಗಿ ನಾಗರ ಪಂಚಮಿಯ ದಿನ ಹೊತ್ತಾರೆ ಎದ್ದು ಶೌಚಸ್ನಾನಾದಿಗಳನ್ನು ಮುಗಿಸಿ, ಕಡುಬು-ತಂಬಿಟ್ಟು ಮೊದಲಾದ ತಿನಿಸುಗಳನ್ನು ಮಡಿಯಲ್ಲಿ[ಶುಚಿಯಲ್ಲಿ] ಮಾಡಿ, ಅರಿಶಿನ-ಕುಂಕುಮಾದಿ ಮಂಗಳದ್ರವ್ಯಗಳನ್ನೊಡಗೂಡಿದ ಪೂಜಾ ಸಾಮಗ್ರಿಗಳೊಂದಿಗೆ ನಾಗಸ್ಥಾನಗಳಿಗೆ ತೆರಳಿ ಅಲ್ಲಿ ಹಾಲಿನಿಂದ ಅಭಿಷೇಕಮಾಡಿ ಪೂಜೆಗೈದು ನೈವೇದ್ಯ ಅರ್ಪಿಸುವುದು ಕಾಣುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಎಳೆಯ ತೆಂಗಿನ ಗರಿಗಳ ಓಲೆಗಳಿಂದ ಹಾವು, ಗಿಳಿ ಮೊದಲಾದ ಆಕೃತಿಗಳನ್ನು ಮಾಡಿ ನಾಗಬನಕ್ಕೆ ಅದನ್ನು ಹಚ್ಚುವುದು ಕಂಡುಬರುವ ಆಚರಣೆ. ಅಲ್ಲಲ್ಲಿ ಅನಾದಿ ಕಾಲದಿ ನಾಗಬನಗಳು ಮರದ ಬೀಳಲುಗಳಿಂದ ದೊಡ್ಡ ದೊಡ್ಡ ಮರಗಳಿಂದ ಅಥವಾ ಬಿದಿರುಮೆಳೆಗಳಿಂದ ಆವೃತವಾಗಿದ್ದು ಮಧ್ಯೆ ವಿರಾಜಿಸುವ ಕಲ್ಲಿನ ಅಪರೂಪದ ನಾಗಾಕೃತಿಗಳು ಕಣ್ಣಿಗೆ ನಾಗರ ಹಬ್ಬವನ್ನು ರಂಜನೀಯವಾಗಿಸುತ್ತವೆ.

ಕರಾವಳಿ ಜಿಲ್ಲೆಗಳಲ್ಲಿ ಈ ದಿನ 'ಸುಳಿರೊಟ್ಟಿ' ಎಂಬ ಸಿಹಿ ತಿನಿಸು ಮಾಡುತ್ತಾರೆ. ನಾದುವ ಹದಕ್ಕಿರುವ ಅಕ್ಕಿ ಹಿಟ್ಟನ್ನು ಅರಿಶಿನ ಕೀಳೆಗಳಲ್ಲಿ ಹಚ್ಚಿ ಅದರಮೇಲೆ ಕಾಯಿಸಿ ಹದಗೊಳಿಸಿದ ಕಾಯಿಬೆಲ್ಲ ಲೇಪಿಸಿ ಅದನ್ನು ಮಡಚಿ ಕಾವಲಿಯಮೇಲೆ ಬೇಯಿಸುವ ಒಂದು ಕ್ರಮ ಇದು. ಅಪ್ಪಟ ಅರಿಶಿನದ ಘಮಘಮ ಅಡಿಗೆಮನೆಯನ್ನು ತುಂಬಿಕೊಳ್ಳುವುದೂ ಅಲ್ಲದೇ ತಿನ್ನುವವರಿಗೆ ಅಮೃತತುಲ್ಯ ಸಂತುಷ್ಟಿಯನ್ನು ನೀಡುತ್ತದೆ.

ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ಹಬ್ಬಗಳಿಲ್ಲದೇ ಇದ್ದರೆ ಎಂದಿನಂತೇ ಎಡಬಿಡದ ವ್ಯಾವಹಾರಿಕ, ವ್ಯಾವಸಾಯಿಕ ಒತ್ತಡಗಳ ನಡುವೆ ಬದುಕು ಸಂಪೂರ್ಣ ಯಾಂತ್ರಿಕವಾಗಿಬಿಡುತ್ತದೆ. ಇದನ್ನೆಲ್ಲಾ ನಮ್ಮ ಪೂರ್ವಜರು ಅರಿತಿರಲೂ ಸಾಕು. ಹೀಗಾಗಿ ಮಳೆಗಾಲದಲ್ಲಿ ಉಳಿದೆರಡು ಕಾಲಗಳಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿ ಬಿಡುವಿರುವುದರಿಂದ ಹಬ್ಬಗಳ ಸರದಿ ಈ ಕಾಲದಲ್ಲೇ ಜಾಸ್ತಿ ಇರುತ್ತದೆ! ಅದಕ್ಕೆ ಮೇಲುಹೊದಿಕೆಯಾಗಿ ದಕ್ಷಿಣಾಯಣದಲ್ಲಿ ಸ್ವರ್ಗದ ಬಾಗಿಲು ಹಾಕಿ ದೇವತೆಗಳೆಲ್ಲಾ ಭೂಮಿಯಲ್ಲಿ ಸಲ್ಲಿಸುವ ಪೂಜೆಗಳನ್ನು ಸ್ವೀಕರಿಸಲು ಇಲ್ಲಿಗೆ ಬರುತ್ತಾರೆ ಎಂದೂ ಹೇಳಲಾಗಿದೆ.

ನಮಗೆ ತಿಳಿಯದ ಆಳಗಲ ಈ ಬ್ರಹ್ಮಾಂಡದಲ್ಲಿ ಎಲ್ಲೆಲ್ಲಿ ಏನೇನು ಅಡಗಿದೆಯೋ ಅದರ ಪರಿಪೂರ್ಣ ಅರಿವು ಸಾಮಾನ್ಯ ಮನುಷ್ಯರಿಗೆ ಯಾರಿಗೂ ಇರುವುದಿಲ್ಲ. ಬೇರೇ ಲೋಕಗಳು ಇರಲಿಕ್ಕೂ ಸಾಕು ಅವುಗಳಲ್ಲಿ ನಮ್ಮನ್ನು ಜರಾಮರಣ ಚಕ್ರದಲ್ಲಿ ಬಂಧಿಸಿರುವ ಶಕ್ತಿಯ ಆವಾಸವಿರಲೂ ಸಾಕು ಯಾರಿಗೆ ಗೊತ್ತು ? ಅಲ್ಲವೇ ? ನಾಗಗಳು ವಿನಾಕಾರಣ ಕಡಿಯುವುದೂ ಇಲ್ಲ. ಕೆಲವರನ್ನು ಮಾತ್ರ ಅಟ್ಟಿಸಿಕೊಂಡು ಬಂದು ಎಲ್ಲಿದ್ದರೂ ಬಿಡದೇ ಕಚ್ಚುತ್ತವೆ. ಇಂತಹ ವೈಜ್ಞಾನಿಕತೆ ಎಂದು ಕೊಚ್ಚಿಕೊಳ್ಳುವ ದಿನಗಳಲ್ಲೂ ಕೆಲವು ಪ್ರದೇಶಗಳಲ್ಲಿ ಕೆಲವರು ವಿಷ ಸರ್ಪಗಳ ಕಡಿತವನ್ನು ಕೇವಲ ನಮಗೆಲ್ಲಾ ಹೇಳದಿರುವ ಯಾವುದೋ ಮಂತ್ರದಿಂದ ಹೊರತೆಗೆದು ವಾಸಿಮಾಡುವುದು ಚಮತ್ಕಾರದ ವಿಷಯವಾಗಿದೆ! ದೂರದಲ್ಲಿ ಯಾರಿಗೋ ಹಾವು ಕಚ್ಚಿದರೆ ಆತ/ ಆತನ ಕಡೆಯವರು ದೂರವಾಣಿಯ ಮೂಲಕ ಆ ವ್ಯಕ್ತಿಗಳಿಗೆ ತಿಳಿಸಿಬಿಟ್ಟರೆ ಕರವಸ್ತ್ರವೊಂದನ್ನು ಗಂಟುಹಾಕುತ್ತಾ ಬಾಯಲ್ಲಿ ಏನೋ ಮಟಮಣ ಮಟಮಣ ಮಾಡುವ ಅವರು ಹಾವುಕಡಿದವನನ್ನು ಅವರಲ್ಲಿಗೆ ಕರೆದುಕೊಂಡು ಹೋಗುವವರೆಗೂ ಏನೂ ಆಗದಂತೇ ಬಂಧನ ಹಾಕುತ್ತಾರೆ! ನಂತರ ಅವರಲ್ಲಿಗೆ ಹೋದಾಗ ಸ್ವಲ್ಪ ನೀರು ಹೊಡೆದು ಏನೋ ಹೇಳಿಬಿಟ್ಟರೆ ವ್ಯಕ್ತಿ ಮಾಮೂಲಿಯಾಗಿ ಎದ್ದು ಕೂರುತ್ತಾನೆ! ಇದೆಲ್ಲವನ್ನೂ ನೋಡಿದಾಗ ಅನಿಸುವುದು ನಾಗಗಳೂ ಕೂಡ ಯಾವುದೋ ಹೊಸ ಆಯಾಮವುಳ್ಳ ಲೋಕದ ಕನೆಕ್ಷನ್ ಇರುವಂಥವು ಎಂಬುದು!

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಧನ್ಯವಾದ :

सर्पाधीश नमस्तुभ्यम्
नागानां च गणाधिपः ।
सर्वारिष्ट प्रशमनं
भक्तानां अभयप्रदः ॥

ಸರ್ಪಾಧೀಶ ನಮಸ್ತುಭ್ಯಮ್
ನಾಗಾನಾಂ ಚ ಗಣಾಧಿಪಃ |
ಸರ್ವಾರಿಷ್ಟ ಪ್ರಶಮನಂ
ಭಕ್ತಾನಾಂ ಅಭಯಪ್ರದಃ ||

|| ಓಂ ಸ್ವಸ್ತಿ ||

13 comments:

  1. ಉಪಯುಕ್ತ,ವಿಸ್ತೃತಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  2. ನಾಗ-ಸಂತತಿಯ ಕುರಿತು ವಿಷಯ ಸಂಕಲನ ಚೆನ್ನಾಗಿದೆ.
    ಕಷ್ಯಪನಿಗೆ ೧೩ ಜನ ಹೆಂಡತಿಯರು ಎಂದು ಓದಿದ ನೆನಪು. ಆದಿತ್ಯ ,ದಾನವ, ದೈತ್ಯ, ಯಕ್ಷ-ಕಿನ್ನರ ,ನಾಗ, ಪಕ್ಷಿ, ಹೀಗೆ
    ವೈವಿಧ್ಯ ಮಯ ಸೃಷ್ಟಿ ಕಷ್ಯಪನಿಂದ! [ ದಿತಿ, ಅದಿತಿ, ಧನು, ವಿನುತ, ಕರ್ದ್ರು, ಇತ್ಯಾದಿ..]

    ReplyDelete
  3. ಶಿವರಾಮ ಭಟ್ಟರೇ ಕಶ್ಯಪನಿಗೆ ನೀವು ಹೇಳಿದಂತೇ ಹದಿಮೂರು ಹೆಂಡತಿಯರು ಎಂಬ ಇನ್ನೊಂದು ವಾದವೂ ಇದೆ. ಅವರ ಹೆಸರುಗಳು ಈ ರೀತಿ ಇವೆ ---ಅದಿತಿ, ದಿತಿ, ಧನು, ಕಲಾ, ದನಯು, ಸಿಂಹಿಕ, ಕ್ರೋಧ, ಪ್ರದಾ, ವಿಶ್ವ, ವಿನುತಾ, ಕಪಿಲ, ಮನು ಮತ್ತು ಕದ್ರು. ಇಲ್ಲಿ ಅದಿತಿಯಲ್ಲಿ ಸಕಲ ದೇವತೆಗಳೂ [ಮಹಾವಿಷ್ಣುವಿನ ವಾಮನಾವತಾರವೂ ಸೇರಿದಂತೇ] ಮತ್ತು ಹನ್ನೆರಡು ಆದಿತ್ಯರೂ, ದಿತಿಯಲ್ಲಿ ದೈತ್ಯರೂ, ದನಯು ಮತ್ತು ಕಲಾ ಇವರಲ್ಲಿ ದಾನವರೂ, ಸಿಂಹಿಕೆಯಲ್ಲಿ ಹುಲಿ ಮತ್ತು ಸಿಂಹಗಳೂ, ಕ್ರೋಧಳಲ್ಲಿ ಸಿಡುಕು ಮತ್ತು ದುಷ್ಟ ಸಭಾವಗಳೂ, ವಿನತೆಯಲ್ಲಿ ವೈನತೇಯ ಗರುಡ ಮತ್ತು ಅರುಣರೂ, ಕದ್ರುವಿನಲ್ಲಿ ನಾಗಗಳೂ, ಮನುವಿನಲ್ಲಿ ಮಾನವರೂ ಜನಿಸಿದ ಸಂಗತಿ ಹೇಳಲ್ಪಟ್ಟಿದೆ. ಯಾವುದನ್ನು ತೆಗೆದುಕೊಳ್ಳಬೇಕೆಂಬುದರ ಬಗ್ಗೆ ನಿಷ್ಕರ್ಷೆ ಮಾಡಬೇಕಾದ ಪ್ರಸಂಗವೂ ಬರುತ್ತದೆ, ಪ್ರಸ್ತಾವಿಸಿದ್ದಕ್ಕೆ ಧನ್ಯವಾದಗಳು

    ReplyDelete
  4. ನಿಮ್ಮದು ಮಾಹಿತಿ ಪೂರ್ಣ ಬರವಣಿಗೆ. ಹಬ್ಬಗಳು ನಿಜಕ್ಕೂ ಮನೆ ಮಂದಿಯವರಲ್ಲಿ ಸಂಭ್ರಮ ಉಲ್ಲಾಸವನ್ನು ತಂದುಕೊಡುತ್ತದೆ. ನೆಂಟರು ಬಂದರಂತೂ ಮತ್ತೂ ಸಡಗರ.
    ಹಬ್ಬಗಳ ಹಿನ್ನಲೆಯ ಬಗ್ಗೆ ತಮ್ಮಿಂದ ಇನ್ನಷ್ಟು ಲೇಖನಗಳು ಮೂಡಿಬರಲಿ.

    ವಂದನೆಗಳು.

    ReplyDelete
  5. ಭಟ್ಟರೆ,
    ಉತ್ತಮ ಮಾಹಿತಿಯ ಲೇಖನ. ನಾಗರಪಂಚಮಿಯ ಶುಭಾಶಯಗಳು.

    ReplyDelete
  6. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ.

    ReplyDelete
  7. Dear Mr. Bhat,
    Let me know how to type Kannada here. I can use Nudi and Baraha. But on this word pad how to Kannada?

    Subrahmanya

    ReplyDelete
  8. You can type in gmail composer in Kannada, copy & paste, or open Baraha write--select transliteration icon on Baraha Task Bar, after transliteration you can see Kannada words in upper part of the page, right click being in upper part, select copy special text[unicode] then paste it wherever required or Open Baraha Direct, select F11 KEY & then type in Kannada letters directly over the destination page/place,Hope you got it, Thank you Sir.

    ReplyDelete
  9. nag vamsha bharaqtada prati pradeshdallu alvike madta ittu annvudu vishesha mattu naga vamshavannu arjuna yagada mulaka nasha madiddu endare adu ondu vamshada sarvanasha agide endu soochane

    ReplyDelete