ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 10, 2011

ವಾರಾನ್ನದಾತೆಗೆ


ವಾರಾನ್ನದಾತೆಗೆ

ಹಿಂದಕ್ಕೆ ಓದುವ ಹಂಬಲವಿರುವ ಮತ್ತು ಆರ್ಥಿಕವಾಗಿ ಯಾವುದೇ ಸೌಲಭ್ಯ ಇರದಿರುವ ಹುಡುಗರಿಗೆ ಪಟ್ಟಣಗಳಲ್ಲಿ ಇರುವ ಕೆಲವು ಕುಲೀನ ಮನೆಗಳವರು ವಾರಾನ್ನದ ಸಹಾಯ ನೀಡುತ್ತಿದ್ದರು. ವಾರಕ್ಕೊಂದು ದಿನದಂತೇ ವಾರದಲ್ಲಿ ಏಳುದಿನ ಏಳುಮನೆಗಳಲ್ಲಿ ಆಹಾರವನ್ನು ಪಡೆಯುತ್ತಾ ಒದಗಬಹುದಾದ ಬೇಸರದ ಸನ್ನಿವೇಶಗಳನ್ನು ಎದುರಿಸುತ್ತಾ ಅಲ್ಲಲ್ಲಿಗೇ ತನ್ನ ಓದುವ ಸರಂಜಾಮುಗಳನ್ನು ಹೊತ್ತು ತಿರುಗುತ್ತಾ ಓದುತ್ತಿದ್ದ ವಿದ್ಯಾರ್ಥಿಗಳು ಇಂದು ಒಳ್ಳೊಳ್ಳೆಯ ಸ್ಥಾನಗಳಲ್ಲಿ ಇದ್ದಾರೆ.

ಹೀಗೊಂದು ಘಟನೆ : ಒಬ್ಬ ಹುಡುಗನಿಗೆ ವಾರಾನ್ನದ ದಿನಗಳ ಮಧ್ಯೆ ಒಂದು ದಿನ ಅವನು ಹೋಗಬೇಕಾದ ಮನೆಯವರು ಎಲ್ಲೋ ಬೇರೆ ಊರಿಗೆ ಹೋಗಿದ್ದರಿಂದ ಆ ಹುಡುಗ ಉಪವಾಸ ಇರಬೇಕಾಗಿತ್ತು. ಹಸಿವಿಗೆ ಹೆದರಿದ ಹುಡುಗ ತನ್ನ ಸಹಾಧ್ಯಾಯಿ ಮಿತ್ರನಲ್ಲಿ ಕೋರಿಕೊಂಡು " ನಿನ್ನ ಅಮ್ಮನನ್ನು ಕೇಳು .. ಇವತ್ತೊಂದು ದಿನ ನನಗೆ ನಿಮ್ಮಲ್ಲಿ ಊಟ ಸಿಗಬಹುದೇ ? " ಎಂದು ಹೇಳಿಕಳಿಸಿದಾಗ ಆ ಮನೆಯ ಯಜಮಾನಿ ಈತನನ್ನು ಆದರದಿಂದ ಬರಹೇಳುತ್ತಾಳೆ. ಅಲ್ಲಿಗೆ ಹೋದಮೇಲೆ ಈತನಿಗೆ ಆ ಮನೆಯಲ್ಲಿ ಇರುವ ಕಿತ್ತುತಿನ್ನುವ ಬಡತನದ ಅರಿವಾಗುತ್ತದೆ. ಹೇಗೋ ಅಂತೂ ಊಟದ ಸಮಯದಲ್ಲಿ
ಆ ತಾಯಿ ತನ್ನ ನಾಲ್ಕಾರು ಮಕ್ಕಳಿಗೆ ಹಳಸಿದ ಅನ್ನವನ್ನು ಬಡಿಸಿ ಬಂದ ಅತಿಥಿ ಈ ಹುಡುಗನಿಗೆ ಬಿಸಿಬಿಸಿಯಾಗಿ ಮಾಡಿದ ಅನ್ನವನ್ನು ಬಡಿಸುತ್ತಾಳೆ. ಇದನ್ನು ಮನಗಂಡ ಈತ ಆಕೆಯಲ್ಲಿ ಕೇಳಿದಾಗ ಆಕೆ ಅದನ್ನು ವಿಶೇಷವೆಂದು ತೋರಗೊಡದೇ ಸಹಜವೆಂದು ಹೇಳುತ್ತಾಳೆ. ಸಹಾಧ್ಯಾಯಿ ಮಿತ್ರನನ್ನು ಆಮೇಲೆ ಕೇಳಿದಾಗ " ಅಕ್ಕಿ ಕಮ್ಮಿ ಇರುವುದರಿಂದ ಅಮ್ಮ ವಾರದಿಂದ ಒಪ್ಪೊತ್ತು ಮಾತ್ರ ಊಟಮಾಡಿದ್ದಾಳೆ, ಅಪ್ಪ ದುಡಿಮೆಗಾಗಿ ದೂರವೆಲ್ಲೋ ಹೋಗಿದ್ದಾರೆ " ಎಂಬುದಾಗಿ ತಿಳಿಸುತ್ತಾನೆ.

ಇಂದು ಕಾಲ ಬದಲಾಗಿದೆ. ಸೌಕರ್ಯಗಳು, ಸೌಲಭ್ಯಗಳು ತೀರಾ ಜಾಸ್ತಿಯೇ ಆಗಿವೆ. ಆದರೆ ವಾರಾನ್ನವಿರಲಿ ಅಪರೂಪಕ್ಕೊಮ್ಮೆ ಬಂದ ಅತಿಥಿಗಳಿಗೂ ಗೊಣಗದೇ ಬಡಿಸುವ ಗೃಹಿಣಿಯರು ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ! ತನ್ನ ಹಾಗೂ ತನ್ನ ಮಕ್ಕಳ ಬವಣೆಗಳನ್ನು ಗಣಿಸದೇ ಬಂದ ಮುಗ್ಧ ವಿದ್ಯಾರ್ಥಿಯ ಹಸಿವನ್ನು ತಣಿಸಿದ ಅಂತಹ ಸಹಸ್ರಾರು ಅಮ್ಮಂದಿರ ಋಣವನ್ನು ನೆನೆದು ವಂದಿಸುತ್ತ ಮಲ್ಲಿಗೆ ಕವಿ ದಿ| ನರಸಿಂಹ ಸ್ವಾಮಿಯವರ ಸಹಜಗತಿಯಲ್ಲಿ ರಚಿಸಿದ ಈ ಹಾಡು ಇಂದು ನಿಮ್ಮೆಲ್ಲರಿಗೂ ಸೇರಿದಂತೇ ಲೋಕಾರ್ಪಣೆಗೊಳ್ಳುತ್ತಿದೆ--


"ಅಮ್ಮಾ ಹಸಿವು" ಎಂಬ ಕಂದಗಳ ರಮಿಸುತ್ತ |
ವಾರಾನ್ನ ನೀಡಿದಳು ತಾಯಿ | ಆರೇಳು ದಿನದಿಂದ ಒಪ್ಪೊತ್ತು
ಊಟದಲೂ ಸುಖಕಂಡ ಮಮತಾಮಯಿ| ತಾಯಿ ಆ ನನ್ನ ಕರುಣಾಮಯಿ

ಓದುವಗೆ ಇರಬೇಕು ನೆರವು ಸಕಲಾರ್ಥದಲಿ |
ಬೋಧಿಸುವ ಜನಬೇಕು ವಿಹಿತ ಮಾರ್ಗದಲಿ | ಸಾಧಿಸುವ ಛಲಬೇಕು
ಎಂದೆನುತ ಕಷ್ಟಗಳ ಬದಿಗೊತ್ತಿ ನೀಡಿದಳು ಎಂಥಾ ಸಹೃದಯಿ

ಬಿಸಿಯಾದ ಅನ್ನದಲಿ ಹೊಸಬಗೆಯ ತಿನಿಸಿನಲಿ |
ನಸುನಕ್ಕು ಬಡಿಸುವಾ ಅನ್ನಪೂರ್ಣೆಯ ಮುಖವು | ಒಸಗೆಯೇನಿದು ನಮಗೆ
ಪೂರ್ವಜನ್ಮದ ಸುಕೃತ ಹಿತನುಡಿಯ ಹೇಳಿದಳು ಅಮೃತಮಯಿ

ಇಂದು ನಿನ್ನೆಯದಲ್ಲ ತಿಂದು ಸವೆಸಿದ ಸಮಯ |
ಅಂದಿಗಾಗಲೇ ವರುಷ ನಾಲ್ಕು ಕಳೆದೂ | ಎಂದೂ ಕಡೆಗಣಿಸದೇ
" ತೊಂದರೆಯು " ಎನ್ನದೇ ಚಂದದಲಿ ಸಲಹಿದಳು ತಾಯಹೃದಯಿ

ಸಂದು ಹೋದುದು ಕಾಲ ಕುಂದುಕೊರತೆಗಳಿಲ್ಲ |
ಹಿಂದೊಮ್ಮೆ ಅನ್ನವಿತ್ತವಳನ್ನು ನೆನೆಯೆ | ಮಂದ ಲಾಂದ್ರದ ದೀಪ
ಅಂದಿನಲಿ ಹರಡಿತ್ತು ಸುಂದರ ಪಾದಗಳ ಕಂಡೆ ಬಡಪಾಯಿ

5 comments:

 1. tumbaa utkrushta vichaara. naanu ee reethi Dharawad -da maadhwa mahaa mandaladalli bada vidhyaakaankshigalige needuva riyaayatiyalli odi beledavanu. nanna haageye alli odida halavu mitraru NILAYA FOUNDATION endu maadi ella hale vidhyartigalannu ottugudisi avara sahakaaradinda namma haage anukula igina janakku innu hechchu sigali ennuva uddheshadinda halavaartu kaaryakrama -scholarship, freeship, free boarding -ge, haagu nilayada kattada kaamagarige, library-ge neravu odagisuva yojane haaki yashaswiyaagi nadesuttidare.
  indu aa sampradaya halevede ide embudakkaagi helabekaayitu.

  ReplyDelete
 2. ನಮ್ಮ ತಂದೆ ತಾವು ವಾರಾನ್ನಕ್ಕೆ ಹೋಗುತ್ತಿದ್ದುದರ ಬಗ್ಗೆ ಹೇಳುತ್ತಿರುತ್ತಾರೆ. ಅಂದಿನ ವಿದ್ಯಾರ್ಥಿಗಳ ಪರಿಶ್ರಮ ಮೆಚ್ಚಬೇಕು. ನಗರ ಪ್ರದೇಶದಲ್ಲಿ ಬೆಳೆದಂಥ ಎಷ್ಟೋ ವಿದ್ಯಾರ್ಥಿಗಳಿಗೆ ಇಂಥ ಒಂದು ಪದ್ದತಿ ಇತ್ತು ಎಂದೂ ತಿಳಿದಿರುವುದಿಲ್ಲ. ಇಂದು ಎಲ್ಲಾ ಸೌಲಭ್ಯಗಳಿದ್ದೂ ಏನೂ ಸಾಧಿಸಲಾಗದ ಜನರೇ ಹೆಚ್ಚು! (ನನ್ನ ಹಾಗೆ!)

  ReplyDelete
 3. ಭಟ್ಟರೆ,
  ಅಂತಹ ಮಹಾತಾಯಿಗೆ ಗೀತೆಯ ಮೂಲಕ ನೀವು ಸಲ್ಲಿಸಿದ ನಮನವು ಮನ ಮಿಡಿಯುವಂತಿದೆ.

  ReplyDelete
 4. ನಿಮ್ಮ ಭಾವನೆಗಳನ್ನು ಗೀತೆಯ ಮೂಲಕ ಸೊಗಸಾಗಿ ಹೇಳಿದ್ದೀರಿ.

  ReplyDelete
 5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು.

  ReplyDelete