ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 1, 2011

ಉರಿಮೂತ್ರದ ಮಹಿಮೆ!



ಉರಿಮೂತ್ರದ ಮಹಿಮೆ!

ಕ್ಷಮಿಸಿ ಉರಿಮೂತ್ರವಾದಾಗ ಬರೆಯ ಹೊರಟೆ
ಬಂದಿದ್ದು ಒಂದೊಂದೇ ಹನಿ ! ಅದೂ ಉರಿಯುತ್ತಾ ಉರಿಸುತ್ತಾ
ಏನೂ ಮಾಡಗೊಡದ ಸ್ಥಿತಿಗೆ ತಳ್ಳುವಂತೇ

ಆಗೊಮ್ಮೆ ನೋವಲ್ಲೂ ದೇಶದ ನಕಾಶೆಯ ನೆನಪಾಗಿ
ನಡುವೆ ಕಾವೇರಿಯ ಹರವು ಹರಿವೂ ನೆರವಾಗಿ
ಕಂಡೆ ತಮಿಳುರಾಜ್ಯವ ಬಿರುಬೇಸಿಗೆಯಲ್ಲಿ ಬತ್ತಿಹೋಗಿ
ನನ್ನಂತೇ ಅಲ್ಲಿ ಉಂಟುಮಾಡಿರಬಹುದೇ ಹಲವರಿಗೆ ಉರಿಮೂತ್ರವ ?

ಕತ್ತುಮೇಲೆತ್ತಿದರೆ ರಾಜಸ್ಥಾನದಿ ಕಣ್ಣು
ಎಡಕ್ಕೆ ಚಲಿಸಿದರೆ ಆಂಧ್ರದಲ್ಲೂ ಅದೇ ಹುಣ್ಣು!
ಗುಜರಾತಿನಲ್ಲೂ ಬಹುತೇಕ ನನ್ನ ಪಂಗಡವೇ !
ನೀರಿಲ್ಲದೂರಿನಲಿ ದೂರುವುದು ಯಾರಲ್ಲಿ ?
ಮತ್ತೆ ಭಗೀರಥ ಹುಟ್ಟಿಬರನೇ ?

ಗಾದೆ ಬದಲಾಗಿದೆ!
ಸಮುದ್ರದ ನಂಟು ಸಿಹಿನೀರಿಗೆ ಬಡತನ !
ನಗಬೇಕಾಗಿದೆ ಮಾನವನ ತಾಕತ್ತಿಗೆ
ಕೋಟಿ ಕೋಟಿ ಮುಂಗಡಪತ್ರ ಘೋಷಿಸಿದರೂ
ನೀರನ್ನು ಕೊಂಡು ತರಲಾಗದ ವಿಪತ್ತಿಗೆ !

ಮುಂಗಾರು ಬಂದಿದೆ ಎಂದು ಕೇಳಿದೆ
ಅದಾಗಲೇ ನೋವಿರುವ ಮೂತ್ರನಾಳದಲ್ಲೋ
ಕೋಶದಲ್ಲೋ ತಂಪಿನ ಅನುಭವ !
ಸುರಿಯಲಿ ಮುಂಗಾರು ಭೋರ್ಗರೆದು ಹದದಲಿ
ಹರಿಯಲಿ ನದಿ-ಕೊಳ್ಳ ಸರೋವರಗಳು ತುಂಬಿತುಳುಕಲಿ
ತಣಿಯಲಿ ದಾಹಗೊಂಡ ನೆಲ
ತಣಿಸಲಿ ಜನಗಳ ಮನ-ಹೊಲ
ನೀಗಲಿ ಉರಿಮೂತ್ರದಿ ಹನಿಯುವ ಉರಿಯುರಿ ಜಲ

5 comments:

  1. ಭಟ್ರೆ,

    ಉರಿಮೂರ್ತವನ್ನು ಯಾವಮಟ್ಟಕ್ಕೆ ಹೋಲಿಸಿದ್ದೀರಿ ಓದಿ ಸಕ್ಕತ್ ನಗುಬಂತು. ಕೊನೆಗೂ ಮುಂಗಾರು ಬರುತ್ತಿದೆಯಲ್ಲಾ ಎಲ್ಲಾ ತಂಪಾಗಲಿ ಬಿಡಿ..

    ReplyDelete
  2. ಭಟ್ ಸರ್;ಉರಿ ಮೂತ್ರ ಹೋಗಿ ಸರಿ ಮೂತ್ರವಾಗಲಿ.ಸಿಹಿ ಮೂತ್ರ ರೋಗದಲ್ಲಿ ಆಗುವಂತೆ ಅತಿ ಮೂತ್ರವೂ ಬೇಡ!ಏನಂತೀರಿ?

    ReplyDelete
  3. ಭಟ್ಟರೆ,
    ವಿನೋದದ ಹೊದಿಕೆಯಲ್ಲಿ ತುಂಬ ಸಂಕೀರ್ಣ ಅನುಭವವನ್ನು ಕವನಿಸಿದ್ದೀರಿ. ನಮ್ಮ ದೇಶಕ್ಕೇ ಈಗ ಉರಿಮೂತ್ರರೋಗವಾಗಿದೆ ಎನ್ನುವದು ಸರಿ. ಎಲ್ಲಾ ಒಳ್ಳೇದಾಗಲಿ ಎಂದು ಆಶಿಸೋಣ!

    ReplyDelete
  4. bhat sir, after reasing twice i could understand your poem... good one sir

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

    ReplyDelete