ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 7, 2011

ರಾಧೆಯ ಹಾಡು

ರಾಧೆಯ ಹಾಡು

ಅತಿ ಪ್ರೇಮದಿಂದ ತುಸು ಕೋಪದಿಂದ ರಾಧೆ ತನ್ನ ಕೃಷ್ಣನನ್ನು ಕಾಣುವ ರೀತಿ ಹಲವು. ಕೃಷ್ಣ ಹಲವರ ಸ್ವತ್ತು- ಆತ ಜಗತ್ತಿಗೆ ಗುರು, ಯಾದವ ಕುಲತಿಲಕ, ಹಲವರಿಗೆ ಬೇಕಾದ ವ್ಯಕ್ತಿ, ಆದರೆ ತನ್ನ ಕೃಷ್ಣ ತನಗೂ ಒಂದು ಸ್ವಲ್ಪ ಸಮಯ ಮೀಸಲಿಡಲಿ ಎಂಬುದು ರಾಧೆಯ ಅಪೇಕ್ಷೆ. ರಾಧಾಮಾಧವ ಮಧುರ ವಿಲಾಸ ಎಂದಿಗೂ ಎಲ್ಲರಿಗೂ ಖುಷಿಕೊಡುವ ಸಂಗತಿ. ಮುರಲೀಲೋಳನಾದ ಆತ, ಗೋವಳನಾದ ಆತ, ಗೋಪಿಕಾ ಮನೋಹರನಾದ ಆತ ಎಷ್ಟೆಂದರೂ ರಾಧೇಶ್ಯಾಮ ! 'ಊರಿಗೆ ಅರಸನಾದರೂ ಮನೆಗೆ ಮಗ' ಎನ್ನುವಹಾಗೆ ಯಾರಿಗೆ ಏನೇ ಆದರೂ ರಾಧೆಗೆ ಆತ ಗಂಡ, ಪ್ರಿಯತಮ, ಬಾಳಸಂಗಾತಿ ಎಲ್ಲವೂ. ರಾಧೆ ಒಮ್ಮೆ ತಾನಾಗೆ ಕೃಷ್ಣನನ್ನು ನೆನೆದು ಸ್ವಗತದಲ್ಲಿ ಹಾಡಿಕೊಂಡಿದ್ದು ಹೀಗೆ :
[ಆದಿ-ಅಂತ್ಯ ಎರಡೂ ಪ್ರಾಸಗಳನ್ನು ಏಕಕಾಲಕ್ಕೆ ಬಳಸಿ ರಚಿಸಿದ ಕವಿತೆ 'ಶ್ರೀಕೃಷ್ಣಾರ್ಪಣಮಸ್ತು' ಎಂಬುದರೊಂದಿಗೆ ನಿಮ್ಮ ಆವಗಾಹನೆಗೆ ]

ಕದ್ದು ಹೊರಟೆಯಲ್ಲ ಹೃದಯ ಮುದ್ದು ಮಾಧವ
ಉದ್ದ ಸುಳ್ಳು ಹೇಳಲೇಕೆ ಪೆದ್ದು ಯಾದವ !
ನಿದ್ದೆಯಲ್ಲೂ ನಿನದೆ ನೆನೆಪು ರಾಧಾಧವ
ಇದ್ದು ಸುಖವದೇನು ಮರೆತು ಮುರಳೀಧವ ?

ಕದ್ದು ಬೆಣ್ಣೆ ತಿಂದು ಸರಸವಾಡಿ ನಿಂದವ
ಎದ್ದು ಹಾರಿ ಹಾವ ತುಳಿದು ಗೆದ್ದುಬಂದವ
ಶುದ್ಧ ಶುಂಠ ರಗಳೆಪೋರ ಜಿದ್ದು ಇರದವ
ಒದ್ದೆ ಮನದಿ ನಿನ್ನ ವೇಣು ತುಡಿತ ಮಾರ್ದವ !

ಗುದ್ದಿ ಕಂಸನನ್ನು ವಧಿಸಿ ನ್ಯಾಯ ಪೇಳ್ದವ
ತಿದ್ದುಕೊಳದ ಶಿಶುಪಾಲನ ಶೀಘ್ರ ತರಿದವ
ಸದ್ದಿಲ್ಲದೆ ಪೂತನಿಯ ಹಾಲು ಕುಡಿದವ !
ಬಿದ್ದ ಕೌರವನ ನೋಡಿ ನಕ್ಕು ನುಡಿದವ

ಸುದ್ದಿಯಿಲ್ಲದಂತೆ ನಡೆದದೆಲ್ಲೋ ಸಂದವ
ಉದ್ದ ಸೀರೆಯಿತ್ತು ಕಾಣದಂತೆ ಉಳಿದವ !
ಎದ್ದು ಪಾರ್ಥಗಲ್ಲಿ ಗೀತೆ ಬೋಧಿಸಿದವ
ಖುದ್ದು ಬಾರೋ ಕಾಣಲೊಮ್ಮೆ ಪ್ರೇಮಾಧವ

5 comments:

  1. ಆದಿಪ್ರಾಸ ಹಾಗು ಅಂತ್ಯಪ್ರಾಸಗಳ ಸುಂದರ ಬಂಧದೊಂದಿಗೆ ಕವನ ಹೆಣೆಯುವ ನಿಮ್ಮ ಕುಶಲತೆಗೆ, ಇಗೋ ನನ್ನ ಮೆಚ್ಚುಗೆ!

    ReplyDelete
  2. ಮಂಕುತಿಮ್ಮನ ಕಗ್ಗದಲ್ಲಿ ಆದಿ ಪ್ರಾಸ ಇರುವ ಹಾಗೆ ,ಇಲ್ಲಿ ಆದಿ ಪ್ರಾಸ ಮತ್ತು ಅಂತ್ಯ ಪ್ರಾಸ ಎರಡು ಇದೆ...ಚೆನ್ನಾಗಿದೆ ಸರ್.

    ReplyDelete
  3. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು

    ReplyDelete
  4. ರಚನೆಯಲ್ಲಿ ಕೌಶಲ್ಯತೆ, ಓದುಗರ ಮನ ಸೆಳೆಯುವ ಪದ-ಸಾಲುಗಳು, ಹೊರಹೊಮ್ಮಿಸುವ ಭಾವಗಳು, ಎಲ್ಲದರಲ್ಲೂ ಪರಿಪೂರ್ಣತೆ.. ಭಟ್ ಸರ್, ತಮ್ಮ ಅ೦ಕಿತವನ್ನು ಕಡೆಯಲ್ಲಿ ಸೇರಿಸಿಬಿಟ್ಟರೆ, ಉತ್ತಮ ಕೃತಿಯಾಗಿ ಬಿಡುತ್ತದೆ. ಅಭಿನ೦ದನೆಗಳು.

    ಅನ೦ತ್

    ReplyDelete