ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 18, 2011

’ಜೀವನ’



’ಜೀವನ’

ತೊಗಲು ಗೊಂಬೆಗಳ್ ನಾವು ಹಗಲಿರುಳು ಆಟಗಳು
ನಗುಅಳುಗಳೆಲ್ಲವೂ ಸೂತ್ರಧಾರನದು
ಬಗೆಬಗೆಯ ಪೋಷಾಕು ಹಚ್ಚಿ-ಬಣ್ಣವ ಕುಣಿಸಿ
ನೆಗೆದೆತ್ತಿ ಒಯ್ಯುವನು | ಜಗದಮಿತ್ರ

ಹೆಗಲಿಗೇರಿಸಿ ನೊಗವ ನಡೆಯಲಾಜ್ಞಾಪಿಸುವ
ಬಗಲೊಳಗೆ ಛಾಟಿಯಿದೆ ಎಂದು ಎಚ್ಚರಿಸಿ
ಅಗಲದಾ ಗಾಡಿಯಿದು ಕಿರಿದಾದ ಹಾದಿಗಳು
ಮುಗಿದು ಮುಂದಕೆ ಸಾಗು | ಜಗದಮಿತ್ರ

ಸುಗಮ ಕೆಲವರ ದಾರಿ ದುರ್ಗಮವು ಉಳಿದರ್ಗೆ
ನಿಗಮ ಮಂಡಳಿ ಕಾಯ್ದೆ ನಮಗೆ ಕಾಣಿಸದು
ಉಗಮವಾಗುವ ದುಃಖ ದುಮ್ಮಾನಗಳ ಸಹಿಸಿ
ಜಗದ ಋಣವನು ವ್ಯಯಿಸು | ಜಗದಮಿತ್ರ

ಜಗದಿ ಉತ್ತಮರಿಂಗೆ ಸುಖದ ಬಾಳೆಂದಿಲ್ಲ
ನಗುತ ನಡೆದರ್ ರಾಮ ನಳ ವಿಕ್ರಮರುಗಳು
ಅಗಣಿತ ಜ್ಞಾನವಂ ಪಡೆಯೆ ವಿಶ್ವಾಮಿತ್ರ
ಒಗೆದ ರಾಜ್ಯವ ತಪಕೆ | ಜಗದಮಿತ್ರ

ಹಗೆತನವು ತರವಲ್ಲ ದೊರೆತ ಈ ಜೀವನದಿ
ನಗನಾಣ್ಯ ಜಾಗಗಳು ಬರವು ಜೊತೆಯಲ್ಲಿ
ಹೊಗೆಯುಗುಳಿ ನೀರ್ನುಗ್ಗಿ ನಿಂತ ನೆಲವೇ ಕುಸಿಯೆ
ಹಗುರ ಹೋಗುತ ಭಾರ ! ಜಗದಮಿತ್ರ

ಮೊಗೆದುಣಿಸು ದಯೆ ಕರುಣೆ ವಾತ್ಸಲ್ಯ ಮಮತೆಯಲಿ
ಬಗೆಯದೇ ದ್ರೋಹವನು ನೇರನಡೆಯುತಲಿ
ಯುಗಯುಗಕು ಈ ಜಗವು ಸುಖದಿ ಬಾಳ್ವುದ ಬಯಸು
ಅಗಲುವಿಕೆ ಅನಿವಾರ್ಯ | ಜಗದಮಿತ್ರ


5 comments:

  1. ಭಟ್ ಸರ್;ಜಗದ ಮಿತ್ರನ ಹಿತವಚನಗಳು ತುಂಬಾ ಸೊಗಸಾಗಿವೆ.

    ReplyDelete
  2. ಬಾಳಿನ ತಿರುಳನ್ನು ಜಗದ ಮಿತ್ರನು ಸೊಗಸಾಗಿ ತೋರಿಸುತ್ತಾನೆ. ಧನ್ಯವಾದಗಳು.

    ReplyDelete
  3. " ನೀ ಸೂತ್ರಧಾರಿ, ನಾ ಪಾತ್ರಧಾರಿ " -

    ReplyDelete
  4. ಜಗದ ಮಿತ್ರನ ಮೂಲಕ ಜೀವನದ ದಾರಿ ತಿಳಿಸಿದ್ದೀರಿ ಬಹಳ ಚೆಂದ ಇದೆ ಸಾಲುಗಳು........

    ReplyDelete
  5. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅತ್ಯಂತ ಆಭಾರಿಯಾಗಿದ್ದೇನೆ.

    ReplyDelete