ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 15, 2011

ಮರೆತೆಯಾದರೆ ಅಯ್ಯೋ ಮರೆತಂತೇ ನನ್ನ ....


ಮರೆತೆಯಾದರೆ ಅಯ್ಯೋ ಮರೆತಂತೇ ನನ್ನ ....

ವಿಶ್ವಕನ್ನಡ ಸಮ್ಮೇಳನ ಅದ್ಧೂರಿಯಾಗಿ ಮುಗಿದಿದ್ದು ಅತ್ಯಂತ ಖುಷಿಯ ವಿಚಾರ. ಅದರ ಮಧ್ಯೆ ನಾರಾಯಣ ಮೂರ್ತಿಗಳ ನೀರಸ ಭಾಷಣ ಅಷ್ಟೇ ದುಃಖತಂದ ವಿಚಾರ. ಕನ್ನಡದ ನೆಲದಲ್ಲಿ ಹುಟ್ಟಿ, ಇಲ್ಲಿನ ಉಪ್ಪನ್ನವನ್ನೇ ಉಂಡು ಇಲ್ಲಿನ ನೆಲಜಲದ ಸೌಲಭ್ಯವನ್ನೇ ಪಡೆದು, ವಿಶ್ವವೇ ನಿಬ್ಬೆರಗಾಗುವ ತಂತ್ರಾಂಶ ಸಂಸ್ಥೆಯನ್ನು ಕಟ್ಟಿ ತನ್ನ ವ್ಯವಹಾರ ಚಾಣಾಕ್ಷತೆಯನ್ನು ಮೆರೆದ ಮೂರ್ತಿ ಕನ್ನಡಕ್ಕೆ ತಾನು ಕೊಟ್ಟಿದ್ದು ಮಾತ್ರ ಏನೂ ಇಲ್ಲ ಎಂದರೆ ತಪ್ಪಲ್ಲ. ಕೇವಲ ಕನ್ನಡ ನೆಲದಲ್ಲಿ ಸೌಕರ್ಯಗಳು ಸಿಕ್ಕವು ಅಂತ ಅದನ್ನು ಬಳಸಿಕೊಂಡರೂ ಉದ್ಯೋಗವನ್ನು ಕನ್ನಡದವರಿಗಾಗಿಯೇ ಮೀಸಲಿಟ್ಟ ಯಾವುದೇ ಗುರುತು ಕಾಣಲಿಲ್ಲ. ಬೆಂಗಳೂರು ಮಂಗಳೂರು ಮೈಸೂರು ಹೀಗೇ ಎಲ್ಲೆಲ್ಲೂ ಅವರ ಸಂಸ್ಥೆಯ ಶಾಖೆ ಇರಬಹುದು ಬಿಡಿ ಅದು ಬೇರೇ ವಿಷಯ, ಅದನ್ನೇ ಕನ್ನಡಿಗರಲ್ಲದ ವಿಪ್ರೋದ ಅಜ಼ೀಂ ಪ್ರೇಮ್ಜೀ ಅಥವಾ ಇನ್ನಿತರ ಯಾವುದೇ ಸಂಸ್ಥೆಗಳು ಮಾಡಿಯಾವು..ಅದು ಅವರವರ ವ್ಯಾವಹಾರಿಕ ಅನುಕೂಲತೆಯ ಪ್ರಶ್ನೆ. ಆದರೆ ಕನ್ನಡದವರೇ ಆಗಿ ಈ ಮಟ್ಟಕ್ಕೆ ಬೆಳೆದು ಕನ್ನಡನಾಡಿಗೆ ನೀಡಿದ ಹೆಮ್ಮೆಯ ಕೊಡುಗೆ ಯಾವುದೂ ಇಲ್ಲ!

ಬೆಣ್ಣೆ ತಿಂದವರು ಕೈಯ್ಯನ್ನು ಇತರರ ಬಾಯಿಗೆ ಒರೆಸಿದಂತೇ ಯಾವ ಲೆಕ್ಕಕ್ಕೂ ಸಿಗದ ಅತೀ ಚಿಕ್ಕಮಟ್ಟದಲ್ಲಿ ಇನ್ಫೋಸಿಸ್ ಫೌಂಡೇಶನ್ ಮತ್ತಿತರ ಚಿಕ್ಕಪುಟ್ಟ ಪ್ರತಿಷ್ಠಾನಗಳನ್ನು ಹುಟ್ಟುಹಾಕಿ ಅದರಿಂದ ಕನ್ನಡಿಗರಿಗೆ ಹಲವಾರು ರೀತಿಯಲ್ಲಿ ಉಪಕೃತರು ಎಂದು ವೇದಿಕೆಯಲ್ಲಿ ಯಾರೋ ಹೇಳಿದ ಮಾತನ್ನು ಮಾಧ್ಯಮಗಳಲ್ಲಿ ಕಂಡು ನಗು ಉಕ್ಕಿಬಂತು. ಹೌದಪ್ಪಾ ಬಹಳ ಮನನೀಯರು ಪ್ರಾತಃಸ್ಮರಣೀಯರು ಎಂದು ನನಗರಿವಿಲ್ಲದೇ ಬಾಯಿಂದ ಹೊರಬಿತ್ತು. ಕನ್ನಡದ ಡಾ| ರಾಜಕುಮಾರ್ ಇರುವವರೆಗೆ "ಅಭಿಮಾನೀ ದೇವರುಗಳೇ " ಎನ್ನುತ್ತಾ ಯಾರಿಗೂ ಬಿಡಿಗಾಸನ್ನೂ ಸಹಾಯಮಾಡದೇ ಬದುಕಿದರು...ಅದೇ ವಿಷ್ಣುವರ್ಧನ್ ಆಗಲೀ ಅಂಬರೀಷ್ ಆಗಲೀ ಹಾಗೆ ಮಾಡಲಿಲ್ಲ. ಅವರು ಏನನ್ನೂ ಕೊಡದೇ ಹೋದರೂ ನಮ್ಮ ಕನ್ನಡ ಜನತೆ ಅವರನ್ನು ಇಂದಿಗೂ ನೆನೆಯುತ್ತಾ ಕಷ್ಟವಾದರೂ ಅವರ ಮಕ್ಕಳೆಂದು ಅಭಿಮಾನದಿಂದ ಆ ಮೂವರು ಮಕ್ಕಳ ಚಲನಚಿತ್ರಗಳನ್ನು ಹೊತ್ತು ಮೆರೆಯುವುದು ಕನ್ನಡ ಜನತೆಯ ಅಭಿಮಾನೀ ಸ್ವಭಾವದ ಧ್ಯೋತಕ. ಅದೇರೀತಿಯಲ್ಲಿ ನಾರಾಯಣ ಮೂರ್ತಿಗಳನ್ನೂ ಬಹಳ ಅಭಿಮಾನದಿಂದ ಕಂಡರು. ಬಂಡಾಯ ಸಾಹಿತಿಗಳು ವಿರೋಧಿಸಿದರೂ ಪ್ರಜ್ಞಾವಂತ ಸಾಹಿತಿಗಳು ತಟಸ್ಥಸ್ಥಿತಿಯಲ್ಲಿದ್ದು ಉಧ್ಘಾಟನೆಗೆ ಅವರನು ಕರೆದಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಬದುಕಿನಲ್ಲಿ ಮನುಷ್ಯನಿಗೆ ಹಣೆಬರಹವೂ ಮಹತ್ತರ ಪಾತ್ರವಹಿಸುತ್ತದೆ ಎಂಬುದಕ್ಕೆ ಅತ್ಯಂತ ಸಮರ್ಪಕ ಉದಾಹರಣೆ ನಾರಾಯಣ ಮೂರ್ತಿ. ಅದೇ ರೀತಿ ಇನ್ನೂ ಕೆಲವರು ಸಿಗುತ್ತಾರೆ. ಬರೇ ಅವರಲ್ಲಿನ ಆದರ್ಶ, ಮ್ಯಾನೇಜಮೆಂಟಿಗೆ ಸಂಬಂಧಿಸಿದ ಚಾಣಾಕ್ಷತನ, ಕಾರ್ಯದಕ್ಷತೆ ಮತ್ತು ಪರಿಷ್ರಮವೇ ಅಲ್ಲದೇ ಅವರ ನಸೀಬು ಅತ್ಯಂತ ಚೆನ್ನಾಗಿತ್ತು. ಎಲ್ಲವೂ ಇದ್ದ ಅನೇಕರನ್ನು ನೋಡಿದ್ದೇನೆ... ಅವರಲ್ಲಿ ಯಾವ ಕೊರತೆಯೂ ಇಲ್ಲ...ಆದರೆ ಅವರು ಯಾವುದೇ ಕೆಲಸ ಮಾಡಿದರೂ ಗುಡ್ಡಕ್ಕೆ ಮಣ್ಣುಹೊತ್ತಂತೇ ಆಗುತ್ತದೆ. ಇದಕ್ಕೆ ಕಾರಣ ಅವರ ವಿಧಿಲಿಖಿತವಷ್ಟೇ ಅಲ್ಲದೇ ಇನ್ನೇನೂ ಇಲ್ಲ. ಅಪಥ್ಯವಾದರೂ ಸಹಿಸಿಕೊಳ್ಳಿ ಇವತ್ತು ನಾವು ನೀವು ನೋಡಿದ ನಾರಾಯಣ ಮೂರ್ತಿಗಿಂತಲೂ ಅತ್ಯಂತ ಉತ್ತಮ ರೀತಿಯಲ್ಲಿ ಮ್ಯಾನೇಜ್‍ಮೆಂಟ್ ಗೊತ್ತಿರುವ ಅಥವಾ ಬೋಧಿಸುವ ವ್ಯಕ್ತಿಗಳು ಭಾರತದಲ್ಲಿದ್ದಾರೆ...ಕರ್ನಾಟಕದಲ್ಲೇ ಇದ್ದಾರೆ. ಆದರೆ ನಾರಾಯಣ ಮೂರ್ತಿಗಳ ಯೋಗ ಚೆನ್ನಾಗಿದೆ ಹೀಗಾಗಿ ಅವರು ಎಸೆದ ಕಲ್ಲಿಗೆಲ್ಲಾ ಹಣ್ಣು ಉದುರುತ್ತಲೇ ನಡೆದಿದೆ!

ಮಾಧ್ಯಮದಲ್ಲಿ ನಾರಯಣ ಮೂರ್ತಿಗಳ ಭಾಷಣದ ಬಗ್ಗೆ ತರ್ಕ ನಡೆದೇ ಇತ್ತು.ಇಷ್ಟೆಲ್ಲಾ ಇದೇ ಮೊಟ್ಟಮೊದಲ ಸರ್ತಿ ನಾರಾಯಣ ಮೂರ್ತಿ ಸಾರ್ವಜನಿಕ ವೇದಿಕೆಯಲ್ಲಿ ಕನ್ನಡದಲ್ಲಿ ಮಾತನಾಡಿದ್ದು. ಯಾವುದೋ ಭಾಷೆಯ ಜನ ಕನ್ನಡವನ್ನು ಹೊಸದಾಗಿ ಕಲಿತು ಮಾತನಾಡಿದಂತೇ ಗಿಣಿಪಾಠದ ರೀತಿಯಲ್ಲಿ ಅವರು ಬಿತ್ತರಿಸಿದ ನುಡಿಗಳು ಬಹಳ ನೀರಸವೆನಿಸಿದವು. ಮತ್ತೆ ಹುಟ್ಟಿದರೆ ಕನ್ನಡನಾಡಿನಲ್ಲಿಯೇ ಎಂಬುದಕ್ಕೆ ಸಮಜಾಯಿಷಿ ನೀಡಿದ್ದಾನೆ ಪಂಪ ಮಹಾಕವಿ. ಆದಿಕವಿಗಳ ಯಾವ ಕೃತಿಗಳಬಗ್ಗಾಗಲೀ ಜೀವಿತದ ಬಗ್ಗಾಗಲೀ ಹೆಚ್ಚಾಗಿ ಓದಿರದ ತಿಳಿದಿರದ ಮೂರ್ತಿಗಳು ಪಂಪನ ಕುರಿತು ಹೇಳುವಾಗ ಸೇರಿದ ಲಕ್ಷಾಂತರ ಜನರ ಹಿಂದೆ ಪಂಪ ನಿಂತು ಅಳು ವರೀತಿ ಇತ್ತು! ಮತ್ತೆ ಕನ್ನಡದಲ್ಲೇ ಇವರೂಒ ಹುಟ್ಟಬೇಕಂತೆ ಯಾಕೆಂದರೆ ಹಿಂದಿನ ಸರಕಾರಗಳು ತೆರಿಗೆ ವಿನಾಯತಿ ನೀಡಿ ಇವರನ್ನೆಲ್ಲಾ ಬೆಳೆಸಿದರಲ್ಲಾ ಅದರ ರುಚಿಸಿಕ್ಕಿರಬಹುದು! ಪತ್ರಕರ್ತ ರವಿ ಬೆಳಗೆರೆ ಮಾಧ್ಯಮದಲ್ಲಿ ಹೇಳಿದ್ದು ಕೇಳಿದೆ. ಸುಂದರವಾಗಿರುವ ನಟಿಯನ್ನು ನಟಿಸಲು ಕೇಳಬಹುದು, ಉತ್ತಮ ಹಾಡುಗಾರನಿಂದ ಹಾಡಿಸಬಹುದು ಅದೇ ರೀತಿ ಉತ್ತಮ ಉದ್ದಿಮೆದಾರನಿಂದ ಒಳ್ಳೆಯ ಉದ್ದಿಮೆಗಳ ಬಗ್ಗೆ ಯೋಜನೆ ನಿರೂಪಿಸಬಹುದೇ ಹೊರತು ಅದರ ಹೊರತಾಗಿ ಅವರಿಂದ ಒಳ್ಳೆಯ ಭಾಷಣಗಳನ್ನೆಲ್ಲಾ ನಿರೀಕ್ಷಿಸುವುದು ತಪ್ಪು ಎಂಬುದರ ಜೊತೆಗೆ ಕನ್ನಡ ಸಮ್ಮೇಳನದ ಆ ವೇದಿಕೆಗೆ ಉದ್ಘಾಟಕರಾಗಿ ನಾರಾಯಣ ಮೂರ್ತಿಗಳ ಆಯ್ಕೆ ನಿಜವಾಗಿಯೂ ಅಪ್ರಸ್ತುತ ಎಂಬುದನ್ನು ವಿವರಿಸಿ ಹೇಳುತ್ತಿದ್ದರು.

ಕನ್ನಡ ಸಂಸ್ಕೃತಿಯಬಗ್ಗೆ ತಮ್ಮನ್ನು ಕೊಟ್ಟುಕೊಂಡ ಹಲವು ಮಹಾನುಭಾವ ಕವಿ-ಸಾಹಿತಿಗಳಲ್ಲಿ ಯಾರಿಗೋ ಸಿಗಬೇಕಾಗಿದ್ದ ಗೌರವಕ್ಕೆ ಮೂರ್ತಿ ಪಾತ್ರರಾಗಿದ್ದೂ ಕೂಡ ಅವರ ಯೋಗವೇ! ಉದ್ದಿಮೆದಾರರಿಗೆ ಅವರ ಉದ್ದಿಮೆಯ ವಸಾಹತುಗಳಲ್ಲಿನ ವೇದಿಕೆಗಳು ಮತ್ತು ರಾಜಕೀಯದವರಿಗೆ ಹಲವು ವೇದಿಕೆಗಳು ಸಿಗುತ್ತವೆ ಆದರೆ ಕನ್ನಡದ ಕಟ್ಟಾಳುಗಳಿಗೆ ತಮ್ಮ ಮಾತುಗಳನ್ನು ಹಂಚಿಕೊಳ್ಳಲು ಯಾವುದೇ ಜಾಗವಿರುವುದಿಲ್ಲ. ಅವರು ತಮ್ಮ ಅನಿಸಿಕೆಗಳನ್ನು ಅದುಮಿಟ್ಟುಕೊಂಡೇ ಜೀವಿಸಿ ತೆರಳುತ್ತಾರೆ. ಅಂತಹ ಮಹಾನ್ ಚೇತನಗಳೆಷ್ಟೋ ಕಾಲಗರ್ಭದಲ್ಲಿ ಸಂದುಹೋಗಿವೆ. ಅವರೆಲ್ಲರಿಗೂ ನಮ್ಮ ನಮನಗಳು. ಆದರೆ ಕನ್ನಡದ ಬಗ್ಗೆ ಯಾವ ಕಳಕಳಿಯಾಗಲೀ ಗೌರವವಾಗಲೀ ಇರದ ಮೂರ್ತಿಗಳನ್ನು ಪುಗ್ಗೆಗೆ ಗಾಳಿತುಂಬಿಸಿದಂತೇ ತಯಾರುಮಾಡಿ ವೇದಿಕೆ ಹತ್ತಿಸಿದ್ದು ನಿಜಕ್ಕೂ ವಿಷಾದಕರ. ಅದೇ ಅವರ ಮಡದಿ ಸುಧಾಮೂರ್ತಿಯವರಾದರೂ ಪರವಾಗಿರಲಿಲ್ಲ. ಮನುಷ್ಯನಿಗೆ ಹಣದ ವ್ಯಾಮೋಹದ ಜೊತೆಗೆ ಭಾಷಾವ್ಯಾಮೋಹವೂ ಸ್ವಲ್ಪ ಇರಬೇಕಾಗುತ್ತದೆ. ಅದರಲ್ಲೂ ಅತ್ಯಂತ ಪ್ರಾಚೀನ ಭಾಷೆಯೆನಿಸಿದ ಕನ್ನಡದ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದರೆ ಮೂರ್ತಿಯವರು ಹೆಂಡತಿಯನ್ನು ಕೇಳಿ ಹೇಳಬೇಕಾಗಬಹುದು.

ಕನ್ನಡ ಭಾಷೆಯಲ್ಲಿ ಈಗಲೂ ಬಳಕೆದಾರರಿಗೆ ಸುಲಭಸಾಧ್ಯವಾಗುವ ತಂತ್ರಾಂಶಗಳಿಲ್ಲ ಎಂಬುದು ಹಲವರಿಗೆ ತಿಳಿದಿರುವ ವಿಷಯ. ಬರಹ ಕನ್ನಡ ಈಗಿನ ತಂತ್ರಾಂಶದ ಬಗ್ಗೇ ಹಲವು ತಕರಾರುಗಳನ್ನು ಕೆಲವರು ಮಾಡಿದ್ದಾರೆ. ಈ ನಡುವೆ ನುಡಿ ಎಂಬ ತಂತ್ರಾಂಶವನ್ನು ಸರಕಾರ ಮಾನ್ಯಮಾಡಿ ಬಳಕೆಗೆ ತಂದಿತಾದರೂ ಅದರ ವ್ಯಾಪ್ತಿಯೂ ಅಷ್ಟಕ್ಕಷ್ಟೇ. ಇನ್ಫೋಸಿಸ್ ನಂತಹ ಸಂಸ್ಥೆಗೆ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಅವರ ವಸಾಹತುಗಳಲ್ಲಿ ಹೆಚ್ಚೆಂದರೆ ಕೇವಲ ಕನ್ನಡಬಲ್ಲ ೧೦ ಉದ್ಯೋಗಿಗಳ ಒಂದು ವಾರದ ಸಮಯ ಸಾಕು. ಆದರೆ ಈ ಮಹಾನುಭಾವ ಕನ್ನಡಕ್ಕೆ ಅಂತಹ ಯಾವುದೇ ಕೊಡುಗೆಯನ್ನು ಕೊಟ್ಟವರಾಗಲೀ ಕೊಡುತ್ತೇನೆ ಎಂದವರಾಗಲೀ ಅಲ್ಲ! ತಮ್ಮ ಅನುಕೂಲಕ್ಕಾಗಿ ನಾವಿರುವ ಸ್ಥಳವನ್ನೋ ದೇಶವನ್ನೋ ಸ್ವಲ್ಪ ಹೊರಗಿನಿಂದ ನೆಚ್ಚಿಕೊಳ್ಳುವ ಸ್ವಭಾವ ಎಲ್ಲಾ ಉದ್ದಿಮೆದಾರರಿಗೂ ಇರುತ್ತದೆ. ಇದರಲ್ಲಿ ಅದೂ ಬೆಂಗಳೂರಿನಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ಕಡೆಗಳಿಂದ ಬಂದು ನೆಲೆಸಿದ ಹಲವು ವ್ಯಾಪಾರಿಗಳು ಕನ್ನಡ ರಾಜ್ಯೋತ್ಸವಕ್ಕೆ ತಮ್ಮ ದೇಣಿಗೆ ಕೊಡುವುದನ್ನು ಸ್ಮರಿಸಬಹುದಾಗಿದೆ. ಅಂತಹ ಜನಗಳೇ ಅನಿವಾರ್ಯವಾಗಿ ನೆಚ್ಚಿಕೊಂಡರೂ ತಾನು ಮಾತ್ರ ಒಂಚೂರೂ ಜಗ್ಗದೇ ಬಗ್ಗದೇ ಕನ್ನಡಕ್ಕೂ ತನಗೂ ಏನೂ ಸಂಬಂಧವೇ ಇಲ್ಲಾ ಎನ್ನುವ ರೀತಿಯಲ್ಲಿ ಇರುವ ಮೂರ್ತಿಗಳನ್ನು ಈ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದು ಮತ್ತು ಬೆಂಕಿ ಬಿದ್ದಾಗ ಬಾವಿ ತೋಡಿದಂತೇ ತುರ್ತಾಗಿ ಅವರೌ ಕನ್ನಡದ ಭಾಷಣವನ್ನು ಬರೆಸಿಕೊಂಡು ತಯಾರಾಗಿ ಬಂದಿದ್ದು ನಿಜಕ್ಕೂ ನಗುಉಕ್ಕಿಸಿದ ಸಂಗತಿ! ಇಷ್ಟೆಲ್ಲಾ ಗೌರವಯುತವಾಗಿ ನಡೆದಕೊಂಡ ಕನ್ನಡ ಜನತೆಗೆ ತನ್ನ ಕಡೆಯಿಂದ ಈಗಲೂ ಯಾವುದೇ ಕೊಡುಗೆಯನು ಘೋಷಿಸದೇ ಸುಮ್ಮನಾದ ಮೂರ್ತಿಯವರನ್ನು ಕನ್ನಡದ ಕಂದಾ ಎಂದು ಕರೆದವರಿಗೆ ದೊಡ್ಡ ನಮಸ್ಕಾರ.

ಇಷ್ಟಕ್ಕೂ ನನ್ನ ಮತ್ತು ಮೂರ್ತಿಗಳ ನಡುವೆ ಯಾವುದೇ ದ್ವೇಷವಿಲ್ಲ, ವೈಮನಸ್ಸಿಲ್ಲ. ಆದರೆ ಕನ್ನಡಕ್ಕೆ ಕ್ಷಣವೂ ಮನಸ್ಸನ್ನು ಕೊಡದ ವ್ಯಕ್ತಿ ಯಾರೇ ಆದರೂ ಅವರನ್ನು ಇಂಥಾ ಸಭೆ-ಸಮಾರಂಭಗಳ ವೇದಿಕೆಗೆ ಆಹ್ವಾನಿಸಿದರೆ ಅದು ಸಹಿಸಲಾರದ ಮನಸ್ಸು ನನ್ನದು ಮತ್ತು ನನ್ನಂಥಾ ಅನೇಕರದು ಎಂದು ನಾನು ನಂಬಿದ್ದೇನೆ. ಕನ್ನಡದ ಜನ ಭಿಕ್ಷುಕರಲ್ಲ...ನಿಮ್ಮ ಸಂಸ್ಥೆಯಲ್ಲಿ ನಮ್ಮ ಯುವಕರಿಗೇ ಮನ್ನಣೆ ನೀಡಿ ಎಂದು ಮೂರ್ತಿಗಳಲ್ಲಿ ಬೇಡುವುದಿಲ್ಲ. ನಮ್ಮಜನ ಸಾಕಷ್ಟು ವಿದ್ಯಾ-ಬುದ್ಧಿವಂತರು, ಜಾಗತಿಕ ಮಟ್ಟದಲ್ಲಿ ಬೆಳೆಯಬಲ್ಲ-ಬೆಳಗಬಲ್ಲ ಸಾಮರ್ಥ್ಯವುಳ್ಳವರು..ಅಂಥವರ ನಡುವೆಯೇ ನೀವೂ ಹುಟ್ಟಿ ಬೆಳೆದು ಯೋಗದಿಂದ ಬಹುದೊಡ್ಡ ಉದ್ದಿಮೆ ಕಟ್ಟಿ ಬೆಳೆಸಿದಿರಿ...ನಮಗೆ ಹೊಟ್ಟೆಯುರಿಯಿಲ್ಲ. ಆದರೆ ನಿಂತ ನೆಲದ ಸುತ್ತಲ ಜನರು ನಿಮ್ಮನ್ನೆಷ್ಟು ಪ್ರೀತಿಯಿಂದ ಆತುಕೊಂಡರೋ ಆ ಪ್ರೀತಿಯ ಋಣಕ್ಕೆ ನಿಮ್ಮಿಂದ ಯಾವುದೇ ಬೆಲೆಕಟ್ಟಲು ಸಾಧ್ಯವಿಲ್ಲ...ಕಟ್ಟಿದರೂ ಕಟ್ಟಬಹುದು ಬಿಡಿ ಉದ್ದಿಮೆದಾರರಿಗೆ ಎಲ್ಲವೂ ವ್ಯಾವಹಾರಿಕವೇ ಆಗಿರುತ್ತದೆ!

ಸಮಾಧಾನಕರ ಸಂಗತಿಯೆಂದರೆ ಸಮಾರೋಪದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಹಲವರು ಅಡಚಣೆ ಮಾಡುತ್ತಿದ್ದರೂ ಕನ್ನಡದ ಸಮಗ್ರತೆಯನ್ನೂ ಅದರ ಅಗಾಧತೆಯನ್ನೂ ಸಾಧಾರವಾಗಿ ಉದ್ಧರಿಸಿದ ಪಾಟೀಲ್ ಪುಟ್ಟಪ್ಪನವರನ್ನು ನೋಡಿ ಸಂತೋಷವಾಯಿತು. ಬೆಂಗಳೂರಿನಿಂದ ಬೆಳಗಾವಿಗೆ ಈ ಬಿಸಿಲ ಝಳದಲ್ಲೂ ಧಾವಿಸಿಬಂದ ಕನ್ನಡದ ೯೮ ವರ್ಷದ ಹಸುಗೂಸು ಜಿ.ವೆಂಕಟಸುಬ್ಬಯ್ಯನವರನ್ನು ನೋಡಿ ಆನಂದಭಾಷ್ಪ ಹರಿಯಿತು. ರಾಜಕಾರಣಿಗಳ ಅಟಾಟೋಪದ ಭಾಷಣಗಳಿಗೇ ಮಹತ್ವನೀಡಿದ್ದ ಆ ವೇದಿಕೆಯಲ್ಲಿ ನಿಸಾರ್ ಅಹ್ಮದ್ ರಂಥಾ ಕವಿ ಮೌನಕ್ಕೆ ಶರಣಾಗಿ ತನ್ನ ಮಾತು ಬೇಡಾ ಎಂದಿದ್ದು ನೋಡಿ ಮನ ಮರುಗಿತು. ಜಟ್ಟಿ ಕಾಳಗಕ್ಕೆ ಹೆಸರಾದ ಸಿದ್ಧರಾಮಯ್ಯನವರ ಗಂಟೆಗೊಮ್ಮೆ ಶಬ್ದವನು ನೆನಪಿಸಿಕೊಂಡು ಅಸಂಬದ್ಧವಾಗಿ ಪ್ರಲಾಪಿಸುವ ಕ್ರಮ ನೋಡಿ ತುಸು ಕೋಪವೂ ಬಂತು. ಊಟಕ್ಕಾಗಿ-ತಿಂಡಿಗಾಗಿ ೨೦ ಲಕ್ಷಜನ ಪರದಾಡದೇ ಸಲೀಸಾಗಿ ಇದನ್ನು ಪೂರೈಸಿದ್ದು ಕಂಡು ಹೆಮ್ಮೆಯೂ ಆಯಿತು. ಹೀಗೇ ಹಲವು ಭಾವಗಳ ಸಮ್ಮಿಶ್ರಣವಾಗಿತ್ತು ಈ ನಮ್ಮ ವಿಶ್ವಸಮ್ಮೇಳನ.

ನನ್ನ ಎಳವೆಯ ದಿನಗಳಲ್ಲಿ ಕವಿಯೋರ್ವರು ಬರೆದ ಕವನವನ್ನು ನನ್ನ ಚಿಕ್ಕಪ್ಪಂದಿರು ಹೇಳುವುದನ್ನು ಕೇಳಿದ್ದೆ.

ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನಾ

---ಎಂತಹ ಹೃದಯಂಗಮ ಸನ್ನಿವೇಶ! ತಾಯಿ ತನ್ನ ಮಗುವನ್ನು ತೊಟ್ಟಿಲೊಳಿಟ್ಟು ಲಾಲಿಸುತ್ತಾ ಉತ್ತಮ ಭವಿಷ್ಯದ ಕನಸುಗಳನ್ನು ಹೆಣೆಯುತ್ತಾಳೆ. ಆ ಕಾಲದಲ್ಲಿ ಆ ಮುಗ್ಧ ಮಗುವಿಗೆ ತಾಯಿ ಹಲವನ್ನು ಹಾಡಿನಮೂಲಕ ಹೇಳುತ್ತಾ ರಮಿಸುತ್ತಾಳೆ. ಕನ್ನಡದ ತಾಯಿ ತನ್ನ ಮಗುವಿನಿಂದ ಇಂತಹ ಆಣೆಯೊಂದನ್ನು ಪ್ರತಿಜ್ಞೆಯೊಂದನ್ನು ಬಯಸುತ್ತಾಳೆ.. ಮಗುವೇ ನಿನ್ನ ಜೋಗುಳದ ಹರಕೆಯಾಗಿ ನಿನ್ನಲ್ಲಿ ನಾನು ಕೇಳುತ್ತೇನೆ ನನಗಾಗಿ ನನ್ನ ರಕ್ಷಣೆಗಾಗಿ ನೀನು ಹೋರಾಡು...ಅದನ್ನು ಮರೆತರೆ ನೀನು ನನ್ನನ್ನೇ ಮರೆತಂತೇ. ನವಯುಗದ ಕಾಲಧರ್ಮದಲ್ಲಿ ತಾಯಿ-ತಂದೆಗಳನ್ನೇ ದೂರಮಾಡುವ ನಮ್ಮಲ್ಲಿ ಕೆಲವರಿಗೆ ಇದರ ಅರ್ಥವಾಗದೇ ಹೋಗಬಹುದು. ಆದರೆ ಕರುಳಕುಡಿಯ ಕಿಂಚಿತ್ ಅನಿಸಿಕೆ ಇದ್ದರೆ ಕವಿ ಇಲ್ಲಿ ಹೇಳಿದ್ದನ್ನು ಅರ್ಥೈಸಿ ನೋಡಿ. ಕನ್ನಡ ಸಮ್ಮೇಳನವಷ್ಟೇ ನಮ್ಮ ಕರ್ತವ್ಯವಲ್ಲ ಕನ್ನಡ ನಮ್ಮ ನಿತ್ಯದ ಅನುಸಂಧಾನವಾಗಬೇಕು ನಿತ್ಯಾನುಷ್ಠಾನವಾಗಬೇಕು ಎಂಬುದನ್ನು ನಿಮ್ಮೆಲ್ಲರಿಂದ ಬಯಸುತ್ತಾ ಸದ್ಯಕ್ಕೆ ವಿರಮಿಸುತ್ತೇನೆ, ನಮಸ್ಕಾರ.

3 comments:

  1. ಭಟ್ಟರೆ,
    ಈ ವಿಶ್ವ ಕನ್ನಡ ಸಮ್ಮೇಳನ ಯಾರಿಂದ, ಯಾರಿಗಾಗಿ, ಯಾಕೆ ನಡೆಯಿತು ಎಂದು ಕೇಳಿದರೆ ಉತ್ತರವಿಲ್ಲ. ಸಮ್ಮೇಳನದ ವ್ಯವಸ್ಥೆ ಚೆನ್ನಾಗಿದ್ದಿರಬಹುದು, ಬಾಯಿಬಡಕ ‘ಝಾಲಾ ಚ ಪಾಹಿಜೆ’ಗಳಿಗೆ ಸಮರ್ಪಕ ಉತ್ತರವಾಗಿರಬಹುದು ಮತ್ತು ಅಲ್ಪ ಸಮಯದಲ್ಲಿಯೇ Great Show ಮಾಡಿದ ಸಂಘಟಕರ ಸಾಮರ್ಥ್ಯ ತೋರಿಸಿರಬಹುದು; ಆದರೆ ಕೊನೆಯ ಫಲಶ್ರುತಿ ಏನು? ನಾರಾಯಣ ಮೂರ್ತಿಗಳಿಗೆ ದೊರೆತ chanceಏ? ಯಡಿಯೂರಪ್ಪನವರಿಗೆ ದೊರೆತ ಪ್ರಚಾರವೆ?

    ReplyDelete
  2. ಉಪೋದ್ಘಾತ ---

    ಕೆಲವು ಮಿತ್ರರು ಫೋನಾಯಿಸಿ ನನ್ನಲ್ಲಿ ಕೇಳಿದರು : ’ನಾಲ್ಕು ಕಾದಂಬರಿ ಬರೆದು ಮೂರು ಕವನ ಸಂಕಲನ ಗೀಚಿ ಒಂದೆರಡು ಕಥೆಯೋ ಮತ್ತೇನನ್ನೋ ಬರೆದವರು ಕನ್ನಡದ ಕಟ್ಟಾಳುಗಳೇ ? ಅವರು ಏನುಮಹಾ ಕೊಡುಗೆ ಕೊಡುತ್ತಾರೆ ಕನ್ನಡಕ್ಕೆ ?’ --ಎಂದು ಯಾರೋ ಒಬ್ಬ ಪತ್ರಕರ್ತ ಬರೆದಿದ್ದಾರೆ ಎಂಬುದಾಗಿ.

    ಉತ್ತರವಿಷ್ಟೇ : ಇವತ್ತಿನ ಕಾಲಮಾನದಲ್ಲಿ ಬರೆಯುವವರು ಬಹಳಮಂದಿ ಇದ್ದಾರೆ. ಬರೆದದ್ದೆಲ್ಲಾ ಕಾವ್ಯ-ಸಾಹಿತ್ಯ ಆಗುತ್ತದೆಂದು ಅವರು ತಿಳಿದುಕೊಂಡಿದ್ದರೆ ಅದು ಶುದ್ಧ ತಪ್ಪು. ಬರೆಯುವಾತನ ಮನಸ್ಸು ಪಕ್ವವಾಗಿರಬೇಕು, ಅಂತಃಕರಣ ಶುದ್ಧವಿರಬೇಕು, ಲೋಕದ ನಾಲ್ಕು ಜನರಿಗೆ ಅದರಲ್ಲೂ ಮೊದಲಾಗಿ ಮಾತೃಭಾಷೆಯ ಬಾಂಧವರಿಗೆ ಉಪಕಾರವಾಗುವ ರೀತಿಯಲ್ಲಿ ಯಾವುದೇ ಪೂರ್ವಾಗ್ರಹಪೀಡಿತರಾಗದ ಓದುಗರು ಆತನ ಕೃತಿಗಳು ಸಂಗ್ರಹಯೋಗ್ಯವೆಂದು ಘೋಷಿಸಿದರೆ ಅದು ಆತನ ಕೊಡುಗೆಯಾಗುತ್ತದೆ. ಸಾಮಾನ್ಯವಾಗಿ ಉದ್ದಿಮೆದಾರರಾಗಲೀ ಸಿರಿವಂತರಾಗಲೀ ಬರೆಯುವುದು ಕಡಿಮೆ. ಉತ್ತಮವಾಗಿ ಬರೆಯುವುದೂ ಕೂಡ ಜನ್ಮಜಾತ ಕಲೆ. ಅದಕ್ಕೆ ಜನ್ಮಾಂತರಗಳ ಋಣಾನುಬಂಧವಿರಬೇಕು, ಬಹಳ ಓದಿಕೊಂಡವರೆ ಮಾತ್ರ ಬರೆಯಲಾಗುತ್ತದೆ ಎಂಬ ಮಾತು ಸುಳ್ಳು. ಜಾಗತಿಕ ಉದ್ದಿಮೆದಾರರಿಗೆ ಭಾಷೆಯ ಯಾವುದೇ ಗಂಧಗಾಳಿ ಇರುವುದು ಕಡಿಮೆ. ಅವರದೇನಿದ್ದರೂ ಹಣದ ಥೈಲಿಯನ್ನು ತುಂಬಿಸಿಕೊಳ್ಳುವ ವ್ಯವಹಾರದ ಕುರಿತೇ ಚಿಂತಿಸುವ ಮನಸ್ಸು! ಕೇವಲ ತಮ್ಮ ಅರ್ಹತೆಯಿಂದ ತೇರ್ಗಡೆಗೊಂಡು ಅಂತಹ ಉದ್ದಿಮೆದಾರರ ವಸಾಹತುಗಳಲ್ಲಿ ಕೆಲಸಗಿಟ್ಟಿಸಿದ ಕನ್ನಡದ ಉದ್ಯೋಗಿಗಳನ್ನು ಲೆಕ್ಕಿಸಿ ಆ ಉದ್ದಿಮೆದಾರರ ಕೊಡುಗೆ ಅಪಾರ ಎನ್ನಲಾಗುವುದಿಲ್ಲ. ಭಾಷೆಯೆಂಬುದು ಒಂದು ಬಾಂಧವ್ಯ. ಅಲ್ಲಿ ವ್ಯಾವಹಾರಿಕ ಸಂಬಂಧಕ್ಕಿಂತ ಅನೌಪಚಾರಿಕವಾಗಿ ಬೆಳೆಯುವ ಅನ್ಯೋನ್ಯತೆ ಬಹಳ ಮುಖ್ಯ. ಕನ್ನಡ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ ಕನ್ನಡಕ್ಕೆ ನಾವೇನು ಕೊಟ್ಟೆವು ಎನ್ನುವ ಭಾವನೆ ಬರಬೇಕು.

    ಭಾಷೆಯೆಂದರೆ ಅದು ಅಮ್ಮ-ಮಗುವಿನ ಅಗಲಿರಲಾರದ ಕರುಳ ಸಂಬಂಧ ಬೆಸೆದಿರಬೇಕು. "ನನ್ನ ವಸಾಹತುಗಳಲ್ಲಿ ವಿದೇಶೀಯರೂ ಹಲವರಿದ್ದಾರೆ. ಅವರಿಗೆ ಹೇಳಿ ನಮ್ಮ ರಾಷ್ಟ್ರಗೀತೆ ಹಾಡಿಸುವುದು ನಮಗೇ ಸುಮಾರು" ಎಂದು ರಾಷ್ಟ್ರಗೀತೆಯ ಬಗ್ಗೇ ಗೌರವ ಕಮ್ಮಿ ಇಟ್ಟುಕೊಂಡ ವ್ಯಕ್ತಿಯನ್ನು ಹೆಮ್ಮೆಯ ಉದ್ದಿಮೆದಾರನೆಂದು ಕ್ಷಮಿಸಿರುವುದು ಭಾರತೀಯರ ಒಳ್ಳೆಯತನ! ಕನ್ನಡದ ಯಾರೋ ಒಬ್ಬಾತ ಎಲ್ಲೋ ಆಸ್ತಿಮನೆ ಉದ್ಯಮ ಮಾಡಿದ್ದರೆ ಆತನನ್ನು ಗುರುತಿಸಿ ಗೌರವಿಸುವುದು ಸರಿಯೇ. ಆದರೆ ಭಾಷಾಸಾಹಿತ್ಯದ ವೇದಿಕೆಯಲ್ಲಿ ಅಂಥವರನ್ನು ಉದ್ಘಾಟಕರಾಗಿ ಅಥವಾ ಪ್ರಧಾನ ಭಾಷಣಕಾರರನ್ನಾಗಿ ಆಹ್ವಾನಿಸುವುದು ತಪ್ಪು.

    ಇಂದು ಪತ್ರಿಕೋದ್ಯಮದಲ್ಲಿ ಮಾಧ್ಯಮಗಳಲ್ಲಿ ಬರೆಯುವವರು ಹರಟುವವರು ಬಹಳಜನರಿದ್ದಾರೆ. ಅವರ ಮಟ್ಟಿಗೆ ಅವರು ಬರೆದದ್ದೇ ವೇದ! ಅಂಥವರಲ್ಲಿ ಒಬ್ಬರು ಕೇಳುತ್ತಾರೆ " ಕೇವಲ ಒಂದೆರಡು ಕಥೆ ಕವನ ಕಾದಂಬರಿಗಳನ್ನು ಬರೆದ ಮಾತ್ರಕ್ಕೆ ಕನ್ನಡಕ್ಕೆ ಕೃತಿಕಾರನ ಕೊಡುಗೆಯೇನು ? " ಎಂಬುದಾಗಿ. ಹೇಳಿದೆನಲ್ಲಾ ಎಲ್ಲಾ ಕೃತಿಕಾರರನ್ನೋ ಅಥವಾ ಇಂತಹ ಪ್ರಶ್ನೆಗಳನ್ನು ಕೇಳಿದ ಬರಹಗಾರರನ್ನೋ ಉತ್ತಮ ಸಾಹಿತಿಗಳೆಂದು ತಿಳಿಯಬೇಕಾಗಿಲ್ಲ. ಇಂತಹ ಕ್ಲೀಷೆಗಳನ್ನು ಅರಿತೇ ಸಂಸ್ಕೃತದಲ್ಲಿ ಹೇಳಿದ್ದು--ಕವಿಯಾಗುವವನು ಋಷಿಸದೃಶನಾಗಿರುತ್ತಾನೆ ಎಂದು. ಹಿಂದಿನ ಹಲವು ಬರಹಗಾರರ ಕೃತಿಗಳನ್ನು ನೋಡಿ; ಅವುಗಳಲ್ಲಿ ಒಂದಿಲ್ಲೊಂದು ಜೀವನಧರ್ಮ ಸಂದೇಶವಿರುತ್ತದೆ. ಇವತ್ತಿನ ಅನೇಕ ಹೊಸ ಬರಹಗಾರರ ಬರೆಹಗಳಲ್ಲಿ ಹುರುಳೇ ಇರುವುದಿಲ್ಲ!

    ಭಾಷೆಗೆ ಬೇಕಾಗಿರುವುದು ಅದರ ಸ್ವಾಸ್ಥ್ಯ. ಅದರ ಹಿಂದಿನ ಶಬ್ದಗಳು ವ್ಯಾಕರಣ ಛಂದಸ್ಸು ಮುಂತಾದ ಅಂಗೋಪಾಂಗಗಳೊಂದಿಗೆ ಮತ್ತೆ ಹೊಸದಾಗಿ ಹಲವು ಶಬ್ದಗಳ ಸೇರ್ಪಡೆ, ಪರಿಷ್ಕರಣೆ ಇತ್ಯಾದಿ ಇದು ನಿರಂತರ ನಡೆಯಬೇಕಾದ ಕೆಲಸ. ಭಾಷೆಯ ವ್ಯಕ್ತಿ ಆಸ್ತಿ ಅಥವಾ ವ್ಯಾವಹಾರಿಕ ಔನ್ನತ್ಯ ಭಾಷೆಗೆ ಏನನ್ನೂ ಕೊಡುವುದಿಲ್ಲ ಬದಲಾಗಿ ಭಾಷೆಯನ್ನು ಬಳಸಿ ಬರೆದ ಉತ್ತಮ ಕೃತಿಗಳು ಹಲವರಿಗೆ ದಾರಿ ದೀಪಗಳಾಗುತ್ತವೆ. ಉದಾಹರಣೆಗೆ : ಡೀವೀಜಿಯವರ ಮಂಕುತಿಮ್ಮನ ಕಗ್ಗ, ಕುವೆಂಪು ಅವರ ರಾಮಾಯಣ ಮಹಾದರ್ಶನಂ, ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ [ಸುಮಧುರ ದಾಂಪತ್ಯಗೀತೆಗಳು.] ಇತ್ಯಾದಿ. ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆ ಮಾಡುವವರಿಗೆ ಪಠ್ಯಗಳಲ್ಲಿ ಇಂತಹ ಮಹಾನ್ ಕೃತಿಗಳ ಕೆಲವು ಭಾಗಗಳಾದರೂ ಬಂದರೆ ಅದು ಒಳ್ಳೆಯದು.

    ಹಿಂದೆಯೇ ನಾನು ಬರೆದಿದ್ದೆ--ಸಾಹಿತಿಯೊಬ್ಬ ಸಮಾಜಸುಧಾರಕನೂ ಆಗಿರುತ್ತಾನೆ. ಆತ ಹಂಸಕ್ಷೀರ ನ್ಯಾಯದಂತೇ ಹಲವೆಡೆ ಓಡಾಡುತ್ತಾ ಓದಿಕೊಳ್ಳುತ್ತಾ ಒಳ್ಳೆಯ ಹಲವು ಅಂಶಗಳನ್ನು ತನ್ನ ಕೃತಿಗಳಲ್ಲಿ ಹರಳುಗಟ್ಟಿಸಿ ಓದುಗರಿಗೆ ನೀಡುತ್ತಾನೆ. ಆ ಮೂಲಕ ಸಮಾಜದ ಹಲವು ಪಾತ್ರಗಳನ್ನು ಆತ ಅವಲೋಕಿಸುತ್ತಾನೆ, ಪಾತ್ರಗಳಲ್ಲಿ ಪರಕಾಯಪ್ರವೇಶಮಾಡಿ ತಿಳಿದು ಬರೆಯುತ್ತಾನೆ. ಇಂತಹ ಬರಹಗಾರರಿಂದ ಮಾತ್ರ ಉತ್ತಮ ಕೃತಿಗಳನ್ನು ನಿರೀಕ್ಷಿಸಲು ಸಾಧ್ಯ. ಹಾಗೆ ಕೊಡುವ ತನ್ನ ಉತ್ತಮ ಕೃತಿಗಳ ಮೂಲಕ ಹಲವರನ್ನು ತಿದ್ದುವ ಕೆಲಸ ಕೃತಿಕಾರನಿಂದ ನಡೆಯುವುದರಿಂದ ಅದು ಆತ ಭಾಷೆಗೆ ಕೊಟ್ಟ ಕೊಡುಗೆಯಾಗುತ್ತದೆಯೇ ಹೊರತು ಆದಿಕವಿ ಪಂಪನಿಗೂ ’ಪಂಪಿ’ಗೂ ಅರ್ಥವ್ಯತ್ಯಾಸ ಗೊತ್ತಿರದ ಉದ್ದಿಮೆದಾರರ ಕೊಡುಗೆ ಯಾವ ಮಟ್ಟದ್ದೆಂದು ನೀವೇ ಊಹಿಸಿ.

    ಓದಿದ ಎಲ್ಲರಿಗೂ ಮತ್ತು ಓದಿ ಪ್ರತಿಕ್ರಿಯಿಸಿದ ಸುಧೀಂಧ್ರರಿಗೂ ಅನಂತ ನಮಸ್ಕಾರಗಳು.

    ಹೊಸದಾಗಿ ಬ್ಲಾಗಿಗೆ ಬಂದವರಿಗೆ ಲಿಂಕಿಸಿಕೊಂಡವರಿಗೆ ಸ್ವಾಗತ ಹಾಗೂ ನಮನ.

    ReplyDelete
  3. ವಿ.ಆರ್.ಬಿ ಸರ್, ನಿಮ್ಮ ವ್ಯಸ್ತತೆಯ ಮಧ್ಯೆ ಸಮ್ಮೇಳನಕ್ಕೆ ಹೋಗಿ ಬಂದಿರೇ? ಸಲಾಂ ನಿಮಗೆ. ಅಲ್ಲಿನ ವಿವರಣೆಗಳು ನೀವು ಹೋಗಿದ್ದರೆ ಖಂಡಿತಾ ಸಿಗುತ್ತವೆಂದು ಆಶಿಸಿದ್ದೆ ..ನನಗೆ ನಿರಾಶೆಯಾಗಲಿಲ್ಲ. ಧನ್ಯವಾದ. ಬರೆದದ್ದೆಲ್ಲ ಕಥೆ ಕವನ ಆಗುವುದಿಲ್ಲ ಅದು ಒಪ್ಪುವಮಾತೇ ಆದರೆ ನಮ್ಮ ಪತ್ರಕರ್ತಮಿತ್ರರು ಬರೆದದ್ದು ಕನ್ನಡದಲ್ಲಿ ಎನ್ನುವುದನ್ನು ಮರೆತರು ಅನ್ಸುತ್ತೆ..ಆ ಮಟ್ಟಕ್ಕಾದರೂ ಬರೆದದ್ದು ಸ್ವಲ್ಪವೇ ಆದರೂ ಕನ್ನಡಕ್ಕೆ ಕೊಡುಗೆಯಲ್ಲವೇ...ಹಾಗಂದರೆ ನಮ್ಮಿಂದ ಪಡೆದು ನಮ್ಗೆ ಒಳ್ಲೆಯದನ್ನು ಮಾಡುತ್ತೇವೆನ್ನುವ ಉದ್ಯಮಿ ಮತ್ತು ರಾಜಕಾರಣಿ ಮಾದುತ್ತಿರುವುದೇನು..? ದೋಚುತ್ತಿರುವುದನ್ನು ಬಿಟ್ಟರೆ..?? ನನಗೂ ನಾರಾಯಣ ಮೂರ್ತಿಯವರ ಆಯ್ಕೆ ಯಾವ ರೀತಿ ಸರಿ ಎನ್ನುವುದು ಈ ವರೆಗೂ ಅರ್ಥವಾಗಿಲ್ಲ..
    ಕನ್ನಡ ಲಿಪಿ ತಂತ್ರಾಂಶದ ನಿಮ್ಮ ಮಾತು ದಿಟ, ಈ ದಿಗ್ಗಜರು ಮನ್ಸು ಮಾಡಿದ್ದರೆ ಕಷ್ಟವೇನಿರಲಿಲ್ಲ.. ಈಗಲೂ ಮನಸು ಮಾಡಬೇಕಷ್ಟೇ..ಉದ್ಘಾಟನೆ ಮಾಡಿ ಭಾಷಣ ಮಾಡಿದಾಗಲಾದರೂ ಏನಾದರೂ ಘೋಷಣೆ ಮಾಡಿರುವರೇ ಮೂರ್ತಿಗಳು...?? ತಿಳಿಯದು.
    ಉತ್ತಮ ವಿವರಣೆ ಮತ್ತು ವಿಮರ್ಶಿತ ಲೇಖನ..ಆದರೆ ವಿ.ಅರ್.ಬಿ ಯವರೇ ಊಟ ಚನ್ನಾಗಿದ್ರೆ ಮದುವೆ ಚನ್ನಾಗಿ ಆಯ್ತು ಎನ್ನುವ ನಮ್ಮ ಮಾತು ಊಟದ ನಂತರ ಬಾಳುವೆ ಮಾಡುವ ವಧೂ-ವರರ ನಿಜ ಸಾಮರಸ್ಯದತ್ತ ಹೋಗುವುದಿಲ್ಲ...ಅಲ್ಲವಾ ಅದು ಬೇಕಿಲ್ಲ ನಮಗೆ ಆದ್ರೆ ಭಾಷಾ ಸಮ್ಮೇಳನದ ವಿಷಯದಲ್ಲಿ ಸುನಾಥಣ್ಣ ಹೇಳಿದ ಹಾಗೆ...ಭಾಷೆ ಮತ್ತು ನುಡಿ ಬಾಂಧವರಿಗೆ ಸಿಕ್ಕಿದ್ದೇನು...? ಯಕ್ಷಪ್ರಶ್ನೆ..

    ReplyDelete