ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, December 7, 2010

ಬಹಿರಂಗದಿಂದ ಅಂತರಂಗಕ್ಕೆ

ಚಿತ್ರಗಳ ಋಣ : ಡೈಜಿವರ್ಕ್.ಕಾಮ್
ಬಹಿರಂಗದಿಂದ ಅಂತರಂಗಕ್ಕೆ

೮೦ ರ ದಶಕದಲ್ಲಿ ವಾರಪತ್ರಿಕೆಯೊಂದು ಹುಟ್ಟಿದಾಗ ಅದರ ಪ್ರಸರಣ ಜಾಸ್ತಿಯಾಗಿದ್ದು ಕೇವಲ ಒಬ್ಬ ಸಂಪಾದಕನ ಸಂಪಾದಕೀಯದಿಂದ ಎಂದರೆ ಸುಳ್ಳಲ್ಲ! ಅಂದಿನದಿನಗಳಲ್ಲಿ ಜನ ಬಣ್ಣದ ಚಿತ್ರಗಳಿಗೆ ಮಾರುಹೋದವರಲ್ಲ, ಆಗೆಲ್ಲಾ ಕಪ್ಪು-ಬಿಳುಪು ಛಾಯಾಚಿತ್ರಗಳೇ ಪ್ರಕಟಿಸಲ್ಪಡುತ್ತಿದ್ದವು, ಎಲ್ಲೋ ಅಪರೂಪಕ್ಕೊಂದು ಬಣ್ಣದ ಚಿತ್ರವಿರುತ್ತಿತ್ತು. ಕೆಲವು ಪತ್ರಿಕೆಗಳವರು ’ಬಣ್ಣದ ಚಿತ್ರಗಳ ಅಲ್ಬಂ ಕೊಟ್ಟಿದ್ದೇವೆ ನೋಡಿ’ಅಂತ ಮುಖಪುಟದಲ್ಲೇ ಬರೆಯುತ್ತಿದ್ದರು. ಅದಕ್ಕೆ ’ತರಂಗ’ವೂ ಹೊರತಾಗಿರಲಿಲ್ಲ. ಆದರೆ ಓದುವ ಗೀಳುಳ್ಳ ಜನರಿಗೆ ಅವರ ಮಾತಿಗೆ ಧ್ವನಿಯಾಗುವ, ತಮ್ಮೊಳಗಿನ ಹೇಳಿಕೊಳ್ಳಲಾಗದಿದ್ದ ಹಲವು ಭಾವಗಳಿಗೆ ಜೀವತುಂಬಿ ಕಣ್ಮುಂದೆ ನಿಲ್ಲಿಸುವ ಸಂಪಾದಕನೊಬ್ಬನ ಅವಶ್ಯಕತೆಯಿತ್ತು. ಆ ಕೆಲಸವನ್ನು ಗುಲ್ವಾಡಿ ಸುಂದರವಾಗಿ-ಸುಲಲಿತವಾಗಿಮಾಡಿದರು.

ಮೊನ್ನೆ ಅವಧಾನದಲ್ಲಿ ಡಾ| ಆರ್ ಗಣೇಶ್ ಹೇಳುತ್ತಿದ್ದರು ಅವಧಾನಿಯ ಪರಿಚಯಕ್ಕಿಂತ ಅವಧಾನದ ಪರಿಚಯ ಮುಖ್ಯ, ೩ ಗಂಟೆಗಳಲ್ಲಿ ತಾನೇನು ಕೊಡುತ್ತಿದ್ದೇನೆ ಎಂಬುದು ಪ್ರಾಮುಖ್ಯ ಎಂಬುದಾಗಿ. ಅದೇ ರೀತಿಯಲ್ಲಿ ಗುಲ್ವಾಡಿಯವರ ವೈಯ್ಯಕ್ತಿಕತೆಗಿಂತ ಅವರ ಬರಹಗಳ ಕುರಿತು ಸ್ವಲ್ಪ ಬರೆಯುತ್ತಿದ್ದೇನೆ. ಕನ್ನಡಿಗೆ ಕನ್ನಡಿ ಎಂದು ಯಾರಾದರೂ ಪರಿಚಯಿಸಬೇಕೇಕೆ ಅದರಲ್ಲಿ ಮುಖವನ್ನು ನೋಡಿಕೊಂಡಾಗ ನಮಗನಿಸುತ್ತದೆ ’ಓಹೋ ಇದು ಕನ್ನಡಿ ’ ! ನಮ್ಮ ದೇಹವನ್ನೇನೋ ಕನ್ನಡಿಯಲ್ಲಿ ಕಂಡೆವು ಆದರೆ ಭಾವಕ್ಕೆ ಹಿಡಿಯುವ ಕನ್ನಡಿ ಬೇಕಲ್ಲ ? ಅನೇಕ ಕವಿ-ಸಾಹಿತಿಗಳು ಆ ಕೆಲಸ ಮಾಡಿದ್ದಾರೆ-ಮಾಡುತ್ತಿದ್ದಾರೆ. ಆದರೆ ಪ್ರಸಕ್ತ ವಿದ್ಯಮಾನಗಳನ್ನೂ ಸೇರಿಸಿದಂತೆ ಹತ್ತುಹಲವು ವಿಭಿನ್ನ ಕ್ಷೇತ್ರಗಳಮೇಲೆ ’ಕನ್ನಡಿ ಪ್ರಯೋಗ’ ಮಾಡಿದ್ದು ಶ್ರೀ ಸಂತೋಷ್ ಕುಮಾರ್ ಗುಲ್ವಾಡಿ. ಕ್ಷತ್ರಿಯನೊಬ್ಬನ ಕೈಯ್ಯಲ್ಲಿ ಖಡ್ಗ ಝಳಪಿಸಿದಂತೇ ಪತ್ರಕರ್ತನೊಬ್ಬನ ಕೈಯ್ಯಲ್ಲಿ ಲೇಖನಿ ಕುಣಿದಾಗ ಜನ ಅದನ್ನು ಗಮನಿಸುತ್ತಾರೆ.ಬರಹವನ್ನು ಜನಸಮುದಾಯದ ಒಕ್ಕೊರಲಿನ ಧ್ವನಿಯಾಗಿ ಬರೆದಾಗ ಇದು ತಮ್ಮದೇ ಘಟನೆಯೋ ಕಥೆಯೋ ಎಂಬಂತಹ ಅನಿಸಿಕೆ ಜನಿಸಿ ಜನ ಅದನ್ನು ಬಹುವಾಗಿ ಮೆಚ್ಚುತ್ತಾರೆ. ಅಂತಹ ಹಲವು ಲೇಖನಗಳನ್ನು ಗುಲ್ವಾಡಿ ಉಣಬಡಿಸಿದ್ದರು.

ಲೇಖಕನೊಬ್ಬ ಬರೆಯುವಾಗ ಅವನದೇ ಆದ ಶೈಲಿಯಲ್ಲಿ ಬರೆಯುತ್ತಾ ಹೋಗುವುದು ನಿಸರ್ಗ ಸಹಜ ಧರ್ಮ. ಕೆಲವರು ಅತ್ಯುತ್ತಮವಾಗಿ ಬರೆದರೆ, ಇನ್ನು ಕೆಲವರು ಉತ್ತಮ, ಇನ್ನೂ ಕೆಲವರು ಮಧ್ಯಮ ಮತ್ತೂ ಹಲವರು ಕನಿಷ್ಠ ತರಗತಿಯ ಬರಹಗಳನ್ನು ಪ್ರಕಟಿಸುತ್ತಾರೆ. ಎಲ್ಲರೂ ಬರೆದದ್ದು ಓದಲು ರುಚಿಸಬೇಕೆಂದೇನಿಲ್ಲ. ಕೆಲವರು ತಾವು ಎರಡೇ ಸಾಲಿನಲ್ಲಿ ಬರೆದರೂ ಸಾಗರದಷ್ಟು ಮಹತ್ವಪೂರ್ಣ ವಿಷಯಗಳನ್ನು ಸಾಸಿವೆಯಷ್ಟಾಗಿಸಿ ಕೊಡುವ ಚಾಕಚಕ್ಯತೆ ಹೊಂದಿದ್ದೇವೆ ಎಂದುಕೊಳ್ಳುತ್ತಾರೆ ! ಇವತ್ತಿಗೆ ಅಂತಹ ಸರ್ವಜ್ಞ ಯಾರೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಒಪ್ಪಿಕೊಳ್ಳಬೇಕಾದ ಸತ್ಯ! ಕೆಲವರಿಗೆ ವಿಷಯದ ವ್ಯಾಪ್ತಿಯ ಮೇಲೆ ಅವಲಂಬಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪುಟಗಟ್ಟಲೇ ಬರೆಯುವ ಹವ್ಯಾಸ. ಮುಂದಿನಿಂದ ಓದುವುದನ್ನು ಸಮ್ಮತಿಸಿದ ಹಲವು ಜನ ಮರೆಯಲ್ಲಿ ಓದುತ್ತಾರೆ, ಮನಸ್ಸು ಮೆಚ್ಚಿದರೂ ತಮ್ಮೊಳಗೇ ಅದನ್ನು ಹುದುಗಿಸಿಟ್ಟುಕೊಂಡು " ಪೇಜುಗಟ್ಟಲೇ ಬರೆಯುತ್ತಾನೆ " ಎನ್ನುತ್ತಾರೆ. ಹೀಗೆ ಮಾತು ತೆಗೆದುಕೊಂಡವರಲ್ಲಿ ಗುಲ್ವಾಡಿಕೂಡ ಒಬ್ಬರು. ಅವರ ಸಂಪಾದಕೀಯ ವಿಷಯವನ್ನಾಧರಿಸಿ ಎರಡರಿಂದ ಮೂರು ಪುಟಗಳಷ್ಟು ಉದ್ದವಾಗಿರುತ್ತಿತ್ತು. ಆದರೂ ಜನ ಅದನ್ನು ಪುಸ್ತಕರೂಪಮಾಡಿಸಿ ಕೊಂಡುಕೊಂಡರು ಎಂದರೆ ಅವರ ಪ್ರಭಾವಳಿ ಯಾವರೀತಿ ಇದ್ದಿರಬಹುದು !

ಕೆಲವು ಪತ್ರಕರ್ತರನ್ನು, ಬರಹಗಾರರನ್ನು ಮೇಲ್ನೋಟಕ್ಕೆ ನಾವು ಒಪ್ಪಿಕೊಳ್ಳುವುದಿಲ್ಲ. ಆದರೂ ಅವರು ನಮಗೆ ಹತ್ತಿರವಾಗೇ ಇರುತ್ತಾರೆ. ನಮ್ಮನ್ನು ತಮ್ಮತ್ತ ಸೆಳೆಯುತ್ತಲೇ ಇರುತ್ತಾರೆ. [ಕೆಲವರು ನಡೆಸುವ/ಬರೆಯುವ ಪತ್ರಿಕೆಗಳಂತೂ/ಬರಹಗಳಂತೂ ಸಮಾಜದ ಒಂದುವರ್ಗ ಮಾತ್ರ ಓದುವಂತಹದಾಗಿರುತ್ತವೆ.] ಆದರೆ ಅವರಲ್ಲೂ ಅದೇನೋ ಚುಂಬಕ ಶಕ್ತಿ ಇರುತ್ತದೆ. ಆ ಅಂತರಂಗವನ್ನೂ ಕೂಡ ನಾವು ಬಹಿರಂಗಗೊಳಿಸುವುದಿಲ್ಲ. ಆದರೆ ನಮ್ಮಂತರಂಗವನ್ನು ಬಹಿರಂಗಗೊಳಿಸಿದ್ದು ಅಂದಿಗೆ ಇದೇ ಗುಲ್ವಾಡಿವಯವರು! ಹಾಗಂತ ’ತರಂಗ’ ವರ್ಗೀಕೃತವಲ್ಲ, ಅದು ಸಾರ್ವತ್ರಿಕ ಉತ್ತಮ ಪತ್ರಿಕೆಯೇ. ಆ ದಿನಗಳಲ್ಲಿ ಸಂಪಾದಕರನೇಕರು ಬೇರೇ ಬೇರೇ ಯಾವುದೋ ರಂಗಗಳ ಹಿನ್ನೆಲೆಯಿಂದ ಬಂದಿದ್ದು ಹಲವರಲ್ಲಿ ಬರೆಯುವ ಕಲೆಯಿರಲಿಲ್ಲ. ಅನೇಕ ಅಭಿಜಾತ ಚಿತ್ರ ಕಲಾವಿದರು ಬರೆದ ಚಿತ್ರಗಳು ಹೇಗೆ ಚಿತ್ರಗಳೇ ಆಗಿರುವುದಿಲ್ಲವೋ ಹಾಗೇ ಕೆಲವರು ಬರೆದದ್ದನ್ನೇ ಸಂಪಾದಕೀಯ ಎಂದು ಓದಬೇಕಾದ, ಅವರನ್ನೇ ಸಂಪಾದಕರೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಅಂತಹ ದಿನಗಳಲ್ಲಿ ಅಕ್ಷರಶಃ ಸೂರ್ಯನೇ ತನ್ನ ದಿಕ್ಕನ್ನು ಬದಲಾಯಿಸಿ ಪಶ್ಚಿಮ ದಿಕ್ಕಿನಲ್ಲಿ ಮೂಡಿದನೋ ಎಂಬಂತೇ ಮಣಿಪಾಲ ಪ್ರೆಸ್ ನವರು ನಡೆಸುವ ಪತ್ರಿಕೆಗಳಲ್ಲಿ ಒಂದಾದ ’ತರಂಗ’ಕ್ಕೆ ಸಂಪಾದಕರಾಗಿ ಬಂದವರು ಗುಲ್ವಾಡಿ.

ಯಾವುದನ್ನೇ ಬರೆದರೂ ಅದಕ್ಕೆ ಸಾಕಷ್ಟು ಪೂರಕ ವಿವರಣೆ ನೀಡಿ ನ್ಯಾಯ ಒದಗಿಸುತ್ತಿದ್ದರು. ಪತ್ರಕರ್ತರೆಲ್ಲಾ ಓದುವ ಹವ್ಯಾಸದವರಲ್ಲ. ಅವರೇನಿದ್ದರೂ ಸಂಗ್ರಾಹಕರು. ಆದರೆ ವಿಸ್ತಾರ ಓದಿನ ಗೀಳನ್ನು ಹೊಂದಿದ್ದವರು ಗುಲ್ವಾಡಿ. ನಿವೃತ್ತಿಯ ನಂತರವೂ ಕಾರ್ಯಶೀಲರಾಗಿ ಅಲ್ಲಲ್ಲಿ ಅಲ್ಲಲ್ಲಿ ಬರೆಯುತ್ತಿದ್ದರು. ಬೆಂಗಳೂರಿಗೆ ಬಂದು ನೆಲೆಸಿದ್ದ ಗುಲ್ವಾಡಿಯವರನ್ನು ಒಂದೆರಡುಬಾರಿ ಬೇರೇ ಬೇರೇ ಸಮಾರಂಭಗಳಲ್ಲಿ ಭೇಟಿಮಾಡಿದ ನೆನಪು ಮರುಕಳಿಸುತ್ತಿದೆ. ಸಿಕ್ಕಾಗಲೆಲ್ಲಾ ಸಾಹಿತ್ಯಕವಾಗಿ, ಅನೌಪಚಾರಿಕವಾಗಿ, ಸಹಜವಾಗಿ, ಆತ್ಮೀಯವಾಗಿ, ಆಪ್ತ ಗೆಳೆಯನಂತೇ ನಡೆಸಿಕೊಂಡು ಮಾತನಾಡಿದ್ದರು. ಹಿಂದೊಮ್ಮೆ ಕರ್ನಾಟಕದ ಜನಮಾನಸವನ್ನೇ ಸೂರೆಗೊಂಡ ಅದ್ಬುತ ಪತ್ರಕರ್ತ ನನ್ನೆದುರು ತಮ್ಮ ’ಅಂತರಂಗ ಬಹಿರಂಗ’ ಗೊಳಿಸಿದ್ದರು. ಉತ್ತಮ ಪುಸ್ತಕಗಳ ಆಳವಾದ ಓದು ಜ್ಞಾನವನ್ನೂ ಅದರ ಅರ್ಥ ನಮ್ಮ ಸಂಸ್ಕಾರವನ್ನೂ ಹೆಚ್ಚಿಸುತ್ತದೆ ಎಂಬ ಅಭಿಪ್ರಾಯ ಅವರದಾಗಿತ್ತು. ನಿಗರ್ವಿಯಾಗಿ ಸರಳಬದುಕನ್ನು ಬದುಕಿದರು ಗುಲ್ವಾಡಿಮಾಮ.

ಬಂದವರು ಹೋಗಲೇಬೇಕಲ್ಲ ? ಆದರೆ ಹೋಗುವ ಸಮಯ ಯಾವುದು ಎಂಬುದು ಯಾರಿಗೂ ನಿರ್ದಿಷ್ಟವಿಲ್ಲ. ಬಂದು ಹೋಗುವ ನಡುವಿನ ಈ ಕಾಲದಲ್ಲಿ ಮನುಷ್ಯನ ಬಾಂಧವ್ಯ ಹಬ್ಬುತ್ತದೆ, ಭಾವನೆಗಳ ಸಂಕೋಲೆ ನಮ್ಮನ್ನು ಬಂಧಿಸುತ್ತದೆ. ಇರುವಾಗ ಕೊಡದ ಮಹತ್ವವನ್ನು ಹೋದಾಗ ಕೊಡುವಂಥದೂ ಇದೆ! ತಿಂಗಳ ಹಿಂದೆ ’ಆಳ್ವಾಸ್ ನುಡಿಸಿರಿ’ಯಲ್ಲೂ ಭಾಗವಹಿಸಿದ್ದ ಗುಲ್ವಾಡಿಯವರನ್ನು ನೆನೆದಾಗ ಅವರಿನ್ನೂ ಸತ್ತಿಲ್ಲ ಬದುಕೇ ಇದ್ದಾರೆ ಅನಿಸುತ್ತದೆ. ಆದರೆ ಅವರು ನಿನ್ನೆ ಜಗವೆಂಬ ಈ ಬಹಿರಂಗದಿಂದ ಕಾಣದ ಅಂತರಂಗಕ್ಕೆ ಹೊರಟುಬಿಟ್ಟಿದ್ದಾರೆ. ಇನ್ನುಳುಯುವುದು ಅವರು ಚಂದವಾಗಿ ವಿನ್ಯಾಸಗೊಳಿಸಿ ನಮ್ಮ ಕೈಗಿತ್ತ ’ತರಂಗ’ ಮತ್ತದರಲ್ಲಿ ಅವರು ಬರೆದಿದ್ದ ಸುದೀರ್ಘಕಾಲದ ಸಂಪಾದಕೀಯ ಪುಟಗಳು ಮಾತ್ರ. ಅವರ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ, ಮರುಜನ್ಮವಿದ್ದರೆ ಅವರು ಕನ್ನಡ ಸಾರಸ್ವತ ಲೋಕದ ಕವಿ-ಸಾಹಿತಿಯಾಗಿ ಜನಿಸಲಿ ಎಂದು ಆಶಿಸುವುದರೊಂದಿಗೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ.

10 comments:

 1. ತರ೦ಗವನ್ನು ಉತ್ತು೦ಗಕ್ಕೆ ಏರಿಸಿದ ಗುಲ್ವಾಡಿಯವರು ಇತ್ತೀಚಿನ ದಿನಗಳಲ್ಲಿ ತಮ್ಮ ವಯಸ್ಸು ಮತ್ತು ಅನಾರೋಗ್ಯದ ಕಾರಣದಿ೦ದ ಸಾರ್ವಜನಿಕ ಜೀವನದ ಮು೦ಬೆಳಕಿನಲ್ಲಿ ಇರಲಿಲ್ಲ. ನಾವೆಲ್ಲಾ ತರ೦ಗವನ್ನು, ಅವರ ಸ೦ಪಾದಕೀಯ ಗಳನ್ನೂ ಓದುವ ಮೂಲಕ ಅಕ್ಷರಪ್ರೀತಿ ಬೆಳೆಸಿಕೊ೦ಡವರು. ಸಕಾಲಿಕವಾಗಿ ಅವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಗುಲ್ವಾಡಿಯವರಿಗೆ ನನ್ನ ಅ೦ತಿಮ ನಮನ.

  ReplyDelete
 2. ಗುಲ್ವಾಡಿಯವರದು ಚುಂಬಕ ವ್ಯಕ್ತಿತ್ವ ಆಗಿತ್ತು
  ಕೇವಲ ಒಂದು ಅಂಕಣ ಎಷ್ಟೊಂದು ಜನ ಓದುಗರನ್ನು ತನ್ನತ್ತ ಸೆಳೆದಿತ್ತೆಂದರೆ ನಂಬಲು ಅಸಾದ್ಯ,
  ಅವರಿಲ್ಲದ ಪತ್ರಿಕಾ ಜಗತ್ತು ಅನಾಥ ಪ್ರಜ್ಞೆ ಯಿಂದ ಬಳಲುತ್ತದೆ

  ReplyDelete
 3. ತರ0ಗ ದಿಂದ ಒಂದು ತಲೆಮಾರನ್ನ ಓದಿಗೆ ಹಚ್ಚಿದ ಕೀರ್ತಿ ಗುಲ್ವಾಡಿ ರವರಿಗೆ ಸಲ್ಲುತ್ತದೆ. ಅವರಬಗ್ಗೆ ಬರೆದದಕ್ಕೆ ವ೦ದನೆಗಳು

  ReplyDelete
 4. `ತರಂಗ’ವನ್ನು ಒಂದು ಉತ್ತಮ ವಾರಪತ್ರಿಕೆಯನ್ನಾಗಿ ಬೆಳೆಯಿಸುವದರಲ್ಲಿ ಗುಲ್ವಾಡಿಯವರ ಅಪಾರ ಪರಿಶ್ರಮವಿದೆ. ಅವರಿಗೆ ನನ್ನ ಪ್ರಣಾಮಗಳು.

  ReplyDelete
 5. ಗುಲ್ವಾಡಿಯವರ ವ್ಯಕ್ತಿತ್ವದ ಪರಿಚಯ ಚೆನ್ನಾಗಿ ಮಾಡಿಕೊಟ್ಟಿದ್ದೀರಿ ಸಾರ್. ಧನ್ಯವಾದಗಳು....

  ReplyDelete
 6. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ನಮನಗಳು

  ReplyDelete
 7. gulvaadiyavara bagge vivarisiddakke dhanyavaadagalu. chikkandininda naanu akkareyinda oduttidda patrike taranga. adakke gulvadiyavara merugu.
  nimmondige naaanu avarige nudinamana sallisuttiddene.

  ReplyDelete
 8. Gulvadiyavara manojna barahadattha aakarshitharaada saaviraaru odugaralli naanoo obbalu.Nirgamisida aa divya vyakthiya bagge namage innashtu maahithi kotta nimage thumba dhanyavaadagalu Battare.

  ReplyDelete
 9. ವಿ.ಆರ್.ಬಿ. ಸರ್ ಹೌದು, ಅವರ ಆ ಮೊದಲ ಪತ್ರಿಕಾ ಬರಹಗಳನ್ನು ಓದಿದ್ದೇವೆ ಆಗ ನಾವು ಡಿಗ್ರಿ ಮಾಡುತ್ತಲಿದ್ದ ದಿನಗಳು ನಮ್ಮ ಸ್ಟೂಡೆಂಟ್ ಸರ್ಕ್ಯುಲೇಟಿಂಗ್ ಲೈಬ್ರರಿಗೆ ತರಂಗವನ್ನು ಸೇರಿಸಿದ್ದು ಅವರ ಬರಹಗಳ ಕಾರಣ....ಅವರ ಆ ಪತ್ರಿಕಾ ಬೆಳವಣಿಗೆಗೆ ನೀಡೀದ ಸೇವೆ ಸ್ಮರಣಾರ್ಹ...ಸಾಂದರ್ಭಿಕ ಮತ್ತು ಸಕಾಲಿಕ ಲೇಖನ.

  ReplyDelete