ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, November 27, 2010

'ನಿಮ್ಮೊಡನೆ ವಿ.ಆರ್. ಭಟ್ ' ಗೆ ವರ್ಷದ ಸಂಭ್ರಮ

'ನಿಮ್ಮೊಡನೆ ವಿ.ಆರ್. ಭಟ್ ' ಗೆ ವರ್ಷದ ಸಂಭ್ರಮ

ಸಹೃದಯೀ ಮಿತ್ರರೇ, ಹೃತ್ಪೂರ್ವಕ ನಮಸ್ಕಾರಗಳು.


ತಾವು ಈ ಮಿಂಚಂಚೆಯನ್ನು ತಮ್ಮ ಕ್ಷೇಮದಲ್ಲಿ ಓದುತ್ತೀರೆಂದು ಭಾವಿಸುತ್ತೇನೆ, ಮತ್ತು ಸತತವಾಗಿ ತಮ್ಮೆಲ್ಲರ ಹಿತವನ್ನು ಬಯಸುವವನಾಗಿದ್ದೇನೆ.

ದಿನಗಳು ಉರುಳುವುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಎಷ್ಟುದಿನಗಳು ಉರುಳಿದವು ಎನ್ನುವುದು ನೆನೆಪಿನಲ್ಲಿ ಉಳಿಯುವುದು ಕಮ್ಮಿ. ಹೀಗೇ ಕುಳಿತು ಉರುಳುವ ದಿನಗಳ ಲೆಕ್ಕಾಚಾರ ಹಾಕುತ್ತಾ ಇದ್ದಾಗ ಗೋಚರವಾಗಿದ್ದು ನನ್ನ ಬ್ಲಾಗ್ ನ ವಿಷಯ. ’ನಿಮ್ಮೊಡನೆ ವಿ.ಆರ್.ಭಟ್’ ಎಂಬ ನನ್ನ ಬ್ಲಾಗ್ ಅನಿರೀಕ್ಷಿತವಾಗಿ ಆರಂಭಿಸಿದೆ. ಅಂದಿನಿಂದಾರಭ್ಯ ಇಲ್ಲೀವರೆಗೆ ೨೪ ವಿಭಿನ್ನ ಮಾಲಿಕೆಗಳ ದ್ವಾರಾ ೨೫೬ ಕೃತಿಗಳನ್ನು ತಮಗೆಲ್ಲಾ ಓದಬಡಿಸಿದ್ದೇನೆ. ಇದೇ ಡಿಸೆಂಬರ್ ೩ನೇ ದಿನಾಂಕಕ್ಕೆ ಒಂದು ವರ್ಷವನ್ನು ಪೂರೈಸುತ್ತದೆ. ಈ ಎಲ್ಲಾ ದಿನಗಳಲ್ಲಿ ನಿಮಗೆ ಓದಿಸಿರುವ ಕೃತಿಗಳಲ್ಲಿ, ಬರೆದಿರುವ ಪತ್ರಗಳಲ್ಲಿ ಕಾರಣಾಂತರಗಳಿಂದ ಬೇಸರವನ್ನೋ, ವಿಷಾದವನ್ನೋ, ನೋವನ್ನೋ ಗೊತ್ತಿದ್ದೋ ಗೊತ್ತಿಲ್ಲದೆಯೋ ಉಂಟುಮಾಡಿದ್ದರೆ ಮನೆಯ ಸದಸ್ಯನೋಪಾದಿಯಲ್ಲಿ ಇದನ್ನೆಲ್ಲಾ ನೀವು ಕ್ಷಮಿಸಿದ್ದೀರಿ,ನನ್ನ ಜೊತೆ ಬೆನ್ನು ತಟ್ಟುತ್ತಾ ಹಾಗೇ ನಡೆದುಬಂದಿದ್ದೀರಿ.

ಸಂಗೀತ, ಸಾಹಿತ್ಯ, ಕಲೆ - ಈ ಮೂರು ಮನುಷ್ಯ ಜೀವನಕ್ಕೆ ದೈವನೀಡಿದ ಉದ್ದಾತ್ತ ದೇಣಿಗೆಗಳು. ಪಶುವಿಗೂ ಮನುಜನಿಗೂ ಇರುವ ಹಲವು ಭೇದಗಳಲ್ಲಿ ಇವೂ ಒಂದೊಂದು. ಅದರಲ್ಲಂತೂ ಸಾಹಿತ್ಯ ಮತ್ತು ಸಂಗೀತಕ್ಕೆ ಇರುವ ಸಂಬಂಧ ದೇಹ ಮತ್ತು ಆತ್ಮಕ್ಕಿರುವ ಸಂಬಂಧವೇ ಸರಿ! ಆತ್ಮವಿರದಿದ್ದರೆ ದೇಹಕ್ಕೆ ಹೇಳುವ ಹೆಸರೇ ಬೇರೆ ಇದೆಯಲ್ಲವೇ ? ಅದೇರೀತಿ ಸಾಹಿತ್ಯವಿರದಿದ್ದರೆ ಸಂಗೀತಕ್ಕೆ ಅಷ್ಟೊಂದು ಮಹತ್ವ ಬರುತ್ತಲೇ ಇರಲಿಲ್ಲ. ಸಂಗೀತ ಸೊನ್ನೆಯಿದ್ದಂತೇ ಅದಕ್ಕೆ ಸಾಹಿತ್ಯ ಸೇರಿದಾಗ ಅದರ ನಿಜವಾದ ಬೆಲೆ ಗೊತ್ತಾಗುತ್ತದೆ! ಸ್ವರಗಳೇ ಸಂಗೀತಕ್ಕೆ ಮುಖ್ಯವಾದರೂ ಬರೇ ಸ್ವರಗಳ ಆಲಾಪನೆಯನ್ನು ಕೇಳುತ್ತಾ ಯಾರೂ ಕುಳಿತುಕೊಳ್ಳುವುದಿಲ್ಲ; ಅದಕ್ಕೆಂತಲೇ ಈ ನಡುವೆ ಸುಗಮ ಸಂಗೀತದ ಕ್ರಾಂತಿಯೇ ಆಯಿತು ಅಲ್ಲವೇ ?

ಓದುಗ ಪ್ರಭುಗಳಾದ ನಿಮ್ಮಿಂದ ಬಂದಿರುವ ಹಲವಾರು ಪ್ರತಿಕ್ರಿಯೆಗಳಿಗೆ ನಾನು ಋಣಿಯಾಗಿದ್ದೇನೆ. ಕೃತಿಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ನಿಮ್ಮಲ್ಲಿ ಎಷ್ಟೋ ಜನ ನನ್ನನ್ನು ಖುದ್ದಾಗಿ ನೋಡಿಲ್ಲ, ಆದರೂ ನೋಡಿದಂತಹ ಅನುಭವವನ್ನು ಹೊಂದಿದ್ದೀರಿ ಎಂದು ನನಗನ್ನಿಸಿದೆ. ನನ್ನ ಬದುಕನ್ನು ಬರವಣಿಗೆಗೆ ಸಾಕಷ್ಟು ಮೀಸಲಿರಿಸಿದ್ದೇನೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳನ್ನು ವಿವಿಧ ಮಾಧ್ಯಮಗಳಲ್ಲಿ ಪ್ರತ್ಯಕ್ಷವಾಗಿ ಯಾ ಪರೋಕ್ಷವಾಗಿ ನಿಮಗೆ ಕೊಡಲು ಉದ್ಯುಕ್ತನಾಗಿದ್ದೇನೆ.

ನಿಮ್ಮ ಸಹಕಾರಕ್ಕೆ, ಸಲಹೆಗಳಿಗೆ, ಪ್ರೀತಿಗೆ, ವಿಶ್ವಾಸಕ್ಕೆ ಹೃದಯಾಂತರಾಳದ ಪ್ರೀತಿ-ಭಕ್ತಿ ತುಂಬಿದ ವಂದನೆಗಳನ್ನು ಅರ್ಪಿಸುತ್ತಿದ್ದೇನೆ. ಕಳೆದ ದಿನಗಳಲ್ಲಿ ನೀಡಿದ ನಿಮ್ಮ ಸಹಕಾರವನ್ನು ಸದಾ ಮುಂದುವರಿಸುವಂತೇ ತಮ್ಮಲ್ಲಿ ಭಿನ್ನವಿಸಿಕೊಳ್ಳುತ್ತಿದ್ದೇನೆ. ಅನೇಕ ಜನರು ನನ್ನಲ್ಲಿ ಕೇಳುತ್ತಿದ್ದ ಒಂದೇ ಪ್ರಮುಖ ಪ್ರಶ್ನೆ " ಸರ್ ನೀವು ಯಾಕೆ ಪುಸ್ತಕ ಹೊರತರಬಾರದು ? " ಎಂದು. ಪುಸ್ತಕಗಳನ್ನು ಆಯಾಕಾಲಕ್ಕೆ ಹೊರತರುತ್ತೇನೆ ಎಂಬುದು ನನ್ನ ಉತ್ತರವಾಗಿದೆ. ವಿದ್ಯುನ್ಮಾನ ಪ್ರಸರಣ ಮಾಧ್ಯಮ ಜಾಗತಿಕ ಮಟ್ಟದ್ದು. ಎಲ್ಲೇ ಕುಳಿತವರೂ ನನ್ನ ಕೃತಿಗಳನ್ನು ತಕ್ಷಣಕ್ಕೆ ತೆಗೆದುನೋಡುವ, ಓದುವ ಅವಕಾಶವಿರುವುದು ಈ ಮಾಧ್ಯಮಕ್ಕೆ ಮಾತ್ರ ! ಅದಕ್ಕಾಗಿ ಬ್ಲಾಗೆಂಬುದು ಒಂದರ್ಥದಲ್ಲಿ ಸರ್ವವ್ಯಾಪಿ ಎಂಬುದನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ಎಲ್ಲೆಲ್ಲೂ ಇರುವ ಕನ್ನಡ ಸಾಹಿತ್ಯ ಪ್ರೇಮಿಗಳು ಎಲ್ಲೇ ಇದ್ದಾದರೂ ಈ ಸವಲತ್ತನ್ನು ಅನುಭವಿಸಲು ಅನುವು ಮಾಡಿಕೊಟ್ಟ ಗೂಗಲ್ ಸಂಸ್ಥೆಯವರಿಗೆ [ಹಾಗೂ ವರ್ಡ್ ಪ್ರೆಸ್ ಸಂಸ್ಥೆಯವರಿಗೆ] ನಾನು ಕೃತಜ್ಞ.

೩೬೫ ಕೃತಿಗಳನ್ನು ಒದಗಿಸಲಾಗದ್ದಕ್ಕೆ ಕಾರಣಗಳು ಹೀಗಿವೆ:

೧. ಮನೆಯಲ್ಲಿ ಅಂತರ್ಜಾಲಕ್ಕೆ ಇಲ್ಲದ ಕಾಯಿಲೆ ಅಡರಿಕೊಂಡಿದ್ದು.

೨. ದೇಹಾಲಸ್ಯದಿಂದ ನಾನು ಕಳ್ ಬಿದ್ದಿದ್ದು

೩. ಮನೆಯಲ್ಲಿ ನೆಂಟರ ಜಾತ್ರೆ ಜಾಸ್ತಿ ಇದ್ದಿದ್ದು.

೪. ಬೆಂಗಳೂರಿಂದ ಬೇರೆಡೆಗೆ ಹೋಗಿದ್ದು

೫. ಅನಾರೋಗ್ಯ ಪೀಡಿತನಾಗಿ ನಿತ್ರಾಣನಾಗಿ ಬರೆಯದೇ ಇದ್ದಿದ್ದು.

೬. ಕಚೇರಿಯ ಕೆಲಸದ ಅನಿವಾರ್ಯ ಒತ್ತಡ ಬರೆಯಲು ಅಡ್ಡಿಪಡಿಸಿದ್ದು ಮತ್ತು ಇನ್ನೂ ಒಂದೆರಡು ಚಿಲ್ಲರೆ ಕಾರಣಗಳಿವೆ.

ಇವೆಲ್ಲಾ ಕಾರಣವಾಗಿ ೧೦೯ [೩೬೫-೨೫೬=೧೦೯] ಕೃತಿಗಳನ್ನು ನಿಮಗೆ ಕೊಡಲಾಗಲಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಬ್ಯಾಲೆನ್ಸ್ ಶೀಟ್ [ಅಢಾವೆ ಪತ್ರಿಕೆ] ಒಪ್ಪಿಸಿ ಆಯಿತಲ್ಲ ! ಆಯ್ತು ಇವಿಷ್ಟನ್ನು ತಮ್ಮಲ್ಲಿ ಹೇಳಿಕೊಳ್ಳುವುದಿತ್ತು, ಇನ್ನು ನನಗೆ ಮುಂದಿನ ನನ್ನ ಆಖ್ಯಾಯಿಕೆಗಳನ್ನು ಆಡಿತೋರಿಸಲು ನಿಮ್ಮೆಲ್ಲರ ಅನುಮತಿಯನ್ನು ಕೋರಿ ಮುನ್ನಡೆಯುತ್ತಿದ್ದೇನೆ.

ಅನುಕೂಲವಾದಾಗ ಭೇಟಿ ಕೊಡಿ:


ಮತ್ತೊಮ್ಮೆ ಸಿಗೋಣ

ಅನಂತಾನಂತ ಧನ್ಯವಾದಗಳೊಂದಿಗೆ,

ವಿ.ಆರ್.ಭಟ್

------------------------------------------------------


ಹಂದಿಗೆ ಅದೇ ಸುಖ ಇಂದಿಗೆ ಇದೇ ಸುಖ

ಏನಪ್ಪಾ ಚಿತ್ರವಿಚಿತ್ರ ಶಬ್ದಗಳನ್ನು ಕೇಳುತ್ತಿದ್ದೇವಲ್ಲಾ ಎಂಬ ಪ್ರಶ್ನೆ ಉದ್ಭವವಾಯಿತೇ ? ಸಹಜ. ಗೊತ್ತಿರದ ಕೆಲವು ಜಾಣ್ನುಡಿಗಳು ನಮಗೆ ಗೊತ್ತಾದಾಗ ಅವುಗಳ ಅರ್ಥವಾಗಲೀ ವ್ಯಾಪ್ತಿಯಾಗಲೀ ತಿಳಿಯುವವರೆಗೆ ಗೊಂದಲವಾಗುತ್ತದೆ. ಅವುಗಳ ವಿಸ್ತಾರ ತಿಳಿದಾಗ ಹಲವು ಸರ್ತಿ ನಾವೇ ದಂಗಾಗಬೇಕಾಗಿ ಬರುತ್ತದೆ !

ಹಳ್ಳಿಯೊಂದರಲ್ಲಿ ಗಂಡ-ಹೆಂಡತಿ-ಮಕ್ಕಳು ವಾಸವಾಗಿದ್ದರಂತೆ. ಗಂಡ-ಹೆಂಡತಿಯಲ್ಲಿ ಅಗಲಿರಲಾರದ ಅನ್ಯೋನ್ಯತೆಯಿತ್ತು. ಜತೆಗೆ ಮಕ್ಕಳೂ ಕೂಡ ಇದ್ದರಲ್ಲ, ಒಟ್ಟಿನಲ್ಲಿ ಸುಖದಲ್ಲಿ ಸಂಸಾರ ನಡೆದಿತ್ತು. ಹೀಗೇ ದಿನಗಳೆಯುತ್ತಿರಲು ಹೆಂಡತಿ ಯಾವುದೇ ಕುರುಹೂ ಇಲ್ಲದೇ ಹೃದಯಸ್ತಂಭನವಾಗಿ ಕಾಲವಾದಳು. ಕಾಲವಾದ ಹೆಂಡತಿಯನ್ನು ನೆನೆನೆನೆದು ಗಂಡ ಹಾಗೂ ಅವಳ ಮಕ್ಕಳು ಪರಿತಪಿಸುತ್ತಿದ್ದರು.

ಕಾಲಾನಂತರದಲ್ಲಿ ಕೆಲವು ವರ್ಷಗಳಲ್ಲೇ ಮನುಷ್ಯ ತನ್ನ ತೋಟಗದ್ದೆಗಳಲ್ಲಿ ಓಡಾಡುವಾಗ ಹಂದಿಯೊಂದು ಕಣ್ಣಿಗೆ ಬಿತ್ತು. ಅದುತನ್ನ ಮರಿಗಳ ಬಳಗವನ್ನೆಲ್ಲಾ ಕಟ್ಟಿಕೊಂಡು ಅಲ್ಲಿಗೆ ಬಂದಿತ್ತು. ಆತನನ್ನು ಕಂಡ ಹಂದಿಗೆ ಪೂರ್ವಜನ್ಮದ ಸ್ಮರಣೆಯಾಯಿತು. ಹಂದಿನಿಂತಲ್ಲೇ ಕೆಲಸಮಯ ಕಣ್ಣೀರು ಸುರಿಸುತ್ತಾ ನಿಂತುಕೊಂಡಿತ್ತು ! ಇದನ್ನು ನೋಡುತ್ತಿದ್ದ ಆತ ಹಂದಿಗೆ ಏನೋ ಸಂಕಟವಾಗಿರಬೇಕೆಂದುಕೊಂಡ. ಹಂದಿಯ ಮರಿಗಳು ಅದೂ ಇದೂ ತಿನ್ನುತ್ತಿರುವಾಗ ಆತ ಅವುಗಳನ್ನು ಹೊಡೆಯಲೆತ್ನಿಸಿದ. ಆದರೆ ಹಂದಿ ಆತನ ಮುಂದೆ ದೈನ್ಯವಾಗಿ ನಿಂತು ಬೇಡುವಂತಿತ್ತು. ಅದು ಏನನ್ನೋ ಹೇಳಬಯಸುತ್ತಿತ್ತು. ಇದನ್ನೆಲ್ಲಾ ನೋಡಿದಆತ ಮರಿಗಳಿಗೂ ಹೊಡೆಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಹಂದಿ ಮಾತನಾಡಿತು. ಪೂರ್ವದಲ್ಲಿ ತಾನು ಆತನ ಹೆಂಡತಿಯಾಗಿದ್ದು ಈಗ ಹಂದಿಯಾಗಿದ್ದೇನೆಂದೂ ಆತನ ನೆನಪಿನಲ್ಲಿ ಹುಡುಕುತ್ತಾ ಆತನ ತೋಟಕ್ಕೆ ಆತನನ್ನೂ ಮಕ್ಕಳನ್ನೂ ನೋಡುವ ಇಚ್ಛೆಯಾಗಿ ಬಂದೆನೆಂದೂ ಹೇಳಿಕೊಂಡಿತು !

ಕಥೆಯನ್ನೆಲ್ಲಾ ಕೇಳಿದ ಆತ ಹಂದಿಯಾದ ನಿನ್ನನ್ನು ಮತ್ತೆ ಕೊಂದು ತಾನೇ ಮರಳಿ ಪಡೆಯುತ್ತೇನೆಂದ ! ಪಡೆಯಲು ಸಾಧ್ಯವೋ ಇಲ್ಲವೋ ಅಂತೂ ಘಳಿಗೆಯಲ್ಲಿ ಅವನಿಗೆ ಹಾಗನ್ನಿಸಿತ್ತು. ಆಗ ಹಂದಿ ತನ್ನನ್ನು ಕೊಲ್ಲುವುದು ಬೇಡವೆಂದೂ ತನಗೆ ಜನ್ಮದಲ್ಲಿಇರುವ ಸಣ್ಣ ಸಣ್ಣ ಮರಿಗಳನ್ನು ಬೆಳೆಸಬೇಕೆಂದೂ, ಏನೂ ಅರಿಯದ ಅವುಗಳನ್ನು ತಾನು ಬಿಟ್ಟುಬರಲಾರೆನೆಂದೂ ಪ್ರಾರ್ಥಿಸಿತು. ಅಂದಿಗೆ ನನಗೆ ಅದೇ ಸುಖವಾಗಿತ್ತು ಆದರೆ ಇಂದಿಗೆ ಹಂದಿಯಾಗಿ ನನಗೆ ಇದೇ ಸುಖವೆಂದೂ ಸಾರಿತು. ಆತ ಬಹಳ ನೊಂದ. ತನ್ನಮಕ್ಕಳನ್ನೆಲ್ಲಾ ಕರೆದು ತೋರಿಸಿದ. ಮಕ್ಕಳನ್ನು ಕಂಡ ಹಂದಿ ಹತ್ತಿರ ಬಂದು ಲಲ್ಲೆಗರೆಯಿತು. ಕಾಡು ಹಂದಿಗೂ ಜನರಿಗೂ ಅದೇನು ಸಂಬಂಧ ಎಂದು ನೋಡಲು ಊರ ಜನ ಸುತ್ತರಿದರು. ತುಂಬಾ ಹೊತ್ತು ಅಲ್ಲಿಯೇ ಇದ್ದ ಹಂದಿ ಆತ ಕೊಟ್ಟಹಣ್ಣು-ಹಂಪಲು ತಿಂದು ಸಂಜೆ ದುಃಖದಲ್ಲಿ ತನ್ನ ಮರಿಗಳನ್ನು ಕರೆದುಕೊಂಡು ಮರಳಿ ಕಾಡಿಗೆ ಹೋಯಿತು.

ಜನ್ಮಕ್ಕಂಟಿದ ಬಾಂಧವ್ಯ, ನಂಟು ತೊರೆದುಹೋಗುವುದಿಲ್ಲ. ಮಾನವ ಜನ್ಮವನ್ನು ಭಗವಂತ ಕಟ್ಟಿಹಾಕಿರುವುದೇ ಭಾವನೆಗಳಿಂದ ಅಲ್ಲವೇ ? ನಾವೇನೇ ಅಂದರೂ ಇಹದ ನಮ್ಮ ಬದುಕು ಲೌಕಿಕ ಸಂಬಂಧಗಳ, ಭಾವನೆಗಳ, ರೀತಿ-ನೀತಿಗಳ, ಪ್ರೀತಿ-ಪ್ರೇಮಗಳ ಸರಪಳಿಗಳಿಂದ ಬಂಧಿಸಲ್ಪಟ್ಟಿರುತ್ತದೆ. ಇದಕ್ಕೆ ಜನಸಾಮಾನ್ಯರು ಯಾರೂ ಹೊರತಲ್ಲ! ಒಳಗಿರುವ ಆತ್ಮಕ್ಕೆ ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ ಯಾರೂ ಇರುವುದಿಲ್ಲ. ಅದಕ್ಕೆ ಯಾವ ಸಂಬಂಧವಾಗಲೀ ಹುಟ್ಟು-ಸಾವಾಗಲೀ ಇರುವುದಿಲ್ಲ. ಆದರೆ ದೇಹವನ್ನು ಧರಿಸಿ ಇಲ್ಲಿರುವವರೆಗೆ ನಮಗೆ ಎಲ್ಲವೂ ಬಾಧ್ಯಸ್ಥವೇ ! ಯಾವುದನ್ನೂ ಅಲ್ಲಗಳೆಯುವಂತಿಲ್ಲ, ಏನನ್ನೂ ಇಲ್ಲಾ ಎನ್ನುವಂತಿಲ್ಲ. ಆದರೆ ಇರುವವರೆಗೆ ನಾವು ನಾವೇ ಅಲ್ಲ, ನಾವು ಬರಿದೇ ಇಲ್ಲಿದ್ದೇವೆ ಎಂದು ತಿಳಿದು ಮನೆಯನ್ನು ಬಾಡಿಗೆಗೆ ಪಡೆದು ಇರುವಂತೇ ಜನ್ಮವನ್ನು ಬಾಡಿಗೆಗೆ ಪಡೆದು ಬದುಕಿದ್ದೇವೆ ಎಂದು ತಿಳಿದರೆ ಆಗ ನಾವು ಯಾವ ಕೆಲಸ ಮಾಡಬೇಕು, ಏನನ್ನುಮಾಡಬಾರದು ಎಂಬುದು ತಿಳಿಯುತ್ತದೆ.

ಇಲ್ಲಿರುವಷ್ಟು ದಿನ ನಾವು ಆದಷ್ಟೂ ಪರೋಪಕಾರಾರ್ಥವಾಗಿ ಬದುಕನ್ನು ವ್ಯಯಿಸೋಣ.

15 comments:

 1. ಭಟ್ ಸರ್;ನಿಮ್ಮ ಬ್ಲಾಗಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ಈ ಒಂದು ವರ್ಷದಲ್ಲಿ ಜ್ಞಾನದ ಗಂಗೆಯನ್ನೇ ಹರಿಸಿದ್ದೀರಿ.ನಿಮ್ಮ ಬರೆಯುವ ಓಘ ಎಷ್ಟಿದೆಯೆಂದರೆ ಎಷ್ಟೋ ಬರಹಗಳು ಓದದೆ ತಪ್ಪಿಹೋದದ್ದೂ ಇದೆ.ನಿಮ್ಮ ಜ್ಞಾನ ವಾಹಿನಿ ಹೀಗೇ ಸದಾ ಹರಿಯುತ್ತಿರಲಿ.ಮುಂಬರುವ ದಿನಗಳಲ್ಲಿ ನಿಮ್ಮಿಂದ ಇನ್ನಷ್ಟು ಒಳ್ಳೆಯ ಬರಹಗಳು ಬರಲಿ ಎಂದು ಹಾರೈಸುತ್ತೇನೆ.ನಮಸ್ಕಾರ.

  ReplyDelete
 2. ಆದರೆ ಇರುವವರೆಗೆ ನಾವು ನಾವೇ ಅಲ್ಲ, ನಾವು ಬರಿದೇ ಇಲ್ಲಿದ್ದೇವೆ ಎಂದು ತಿಳಿದು ಮನೆಯನ್ನು ಬಾಡಿಗೆಗೆ ಪಡೆದುಇರುವಂತೇ ಈ ಜನ್ಮವನ್ನು ಬಾಡಿಗೆಗೆ ಪಡೆದು ಬದುಕಿದ್ದೇವೆ ಎಂದು ತಿಳಿದರೆ ಆಗ ನಾವು ಯಾವ ಕೆಲಸ ಮಾಡಬೇಕು, ಏನನ್ನುಮಾಡಬಾರದು ಎಂಬುದು ತಿಳಿಯುತ್ತದೆ.
  kadeya salugalu tumba artapurnavagidae... congrats...nimma blognalli mattastu olae barahagala niriksheyalli
  srikanth

  ReplyDelete
 3. ಭಟ್ಟರೆ,
  ಹುಟ್ಟುಹಬ್ಬದ ಶುಭಾಶಯಗಳು. ಈ ವರ್ಷದ ನಿಮ್ಮ ಅಢಾವೆ ಪತ್ರದ ಕೊರತೆಯನ್ನು ಆಗಾಮಿ ವರ್ಷದಲ್ಲಿ ತುಂಬಿಸಲು ವಿನಂತಿಸುತ್ತೇನೆ.
  ‘ಅಂದಿಗೆ ಅದೇ ಸುಖ...’ ವಿನೋದಮಯವಾಗಿರುವಂತೆಯೇ, ಬೋಧಪ್ರದವೂ ಆಗಿದೆ.
  ನಿಮ್ಮಿಂದ ಹೆಚ್ಚೆಚ್ಚು ಲೇಖನಗಳನ್ನು ಎದುರು ನೋಡುತ್ತಿರುವೆ.

  ReplyDelete
 4. ಭಟ್ ಸರ ಬ್ಲಾಗಿನ ಹುಟ್ಟುಹಬ್ಬದ ಶುಭಾಶಯಗಳು
  ನಿಮ್ಮ ಒಂದೊಂದು ಬರಹವೂ ಭಿನ್ನ..ನೀವು ಬರೆಯುವ ಸ್ಪೀಡ್ ಗೆ ನಾವು ಹೊಂದಿಕೊಳ್ಳುವುದು ತ್ರಾಸು..ಅಂದರೆ
  ನಾವು ಆಲಸಿಗಳು..ಆದರೆ ನಿಮ್ಮ ಬರವಣಿಗೆಯ ಓಘ ಭಲೆ ಭಲೆ...!

  ReplyDelete
 5. ವಿ.ಆರ್ ಬಿ. ಸರ್ ನಿಮ್ಮ ಸತತ ಜ್ಞಾನ ಹಂಚುವಿಕೆಯ ದಾಹ ಇಂಗದೇ ಇರಲಿ...ಹುಟ್ಟುಹಬ್ಬ ಆಚರಿಸುತ್ತಿರುವ ~ನಿಮ್ಮೊಂದಿಗೆ‘ ನಾವ್..ನಮ್ಮೊಂದಿಗೆ ನೀವು...ಹೀಗೇ ದೂರ ಬಹುದೂರ ಸಾಗೋಣ...ನಿಮ್ಮ ಸ್ಪೀಡ್ ನಾನು ಹಿಡಿಯಲಾಗಿಲ್ಲ ಹಲವಾರು ನಿಮ್ಮ ಲೇಖನಗಳು ಮಿಸ್ ಆಗಿವೆ...ಸಮಯ ಸಿಕ್ಕಾಗಲೆಲ್ಲಾ ಹಿಂದಕ್ಕೆ ಹೋಗ್ತೇನೆ...ಶುಭವಾಗಲಿ.

  ReplyDelete
 6. "ನಿಮ್ಮೊಡನೆ ವಿ.ಆರ್.ಭಟ್" ಬ್ಲಾಗಿನ ಹುಟ್ಟುಹಬ್ಬದ ಶುಭಾಶಯಗಳು.

  ReplyDelete
 7. ಅಭಿನ೦ದನೆಗಳು..
  ಉತ್ತಮ ಬರಹಗಳು ಬರುತ್ತಿರಲಿ.
  ಶುಭವಾಗಲಿ.

  ReplyDelete
 8. ಆತ್ಯ್ಮೀಯಭಟ್ಟರೇ,
  ಬ್ಲಾಗ್ ಆರಂಭಿಸಿ ಕೇವಲ ಒಂದು ವರ್ಷವೆಂದರೆ ಆಶ್ಚರ್ಯವಾಗುತ್ತದೆ.ನಿಮ್ಮ ಸದಾ ಚಟುವಟಿಕೆಗಳಿಂದ ಸಾಕಷ್ಟು ಅಭಿಮಾನಿಗಳನ್ನು ಆಕರ್ಶಿಸಿದ್ದೀರಿ.ವೇದಸುಧೆಗೆ ಮಾರ್ಗದರ್ಶಕರಾಗಿದ್ದೀರಿ.ನಿಮಗೆ ಅಭಿನಂದನೆಗಳು.

  ReplyDelete
 9. ಭಟ್ಟರೇ ನಿಮ್ಮ ಬ್ಲಾಗಿಗೆ ವರ್ಷ ತುಂಬಿದ್ದು ನಮಗೆ ಹರುಷ...ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ ಅಂತ ಆಶಿಸುತ್ತೇನೆ ..

  ReplyDelete
 10. ಭಟ್ಟರೇ
  ವರುಷದ ಹರುಷದ ಸಂಭ್ರಮದಲ್ಲಿ ನಾನೂ ಭಾಗಿ
  ನಿಮ್ಮ ಜ್ಞಾನ ದ ಅಮೃತ ನಮಗೆ ಲಭಿಸುತ್ತಲಿರಲಿ
  ಕೆಲವೊಂದು ಬಾರಿ ನಿಮ್ಮ ಲೇಖನ ಸೂಕ್ತ ಸಮಯದಲ್ಲಿ ಓದಲು ಸಾಧ್ಯವಾಗಿಲ್ಲ
  ಕ್ಷಮೆ ಇರಲಿ
  ಮತ್ತೊಮ್ಮೆ ಅಭಿನಂದನೆಗಳು

  ReplyDelete
 11. ತಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೆ ನೀವೆಲ್ಲಾ ನನ್ನನ್ನು ಎಷ್ಟು ಆಪ್ತವಾಗಿ ತೆಗೆದುಕೊಂಡಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ. ನಿಮ್ಮೆಲ್ಲರ ಈ ಅನಿಸಿಕೆಗಳೇ ನನ್ನ ಜವಾಬ್ದಾರಿಯನ್ನೂ ಮತ್ತು ಮುಂದೆ ನಾನು ನಡೆದುಕೊಳ್ಳಬೇಕಾದ ರೀತಿಯನ್ನೂ ಹೇಳುತ್ತವೆ. ಹಲವರಿಗೆ ದಿನವೂ ಓದಲು ಬಿಡುವಿರುವುದಿಲ್ಲ, ಆದರೂ ಇರುವ ಅತ್ಯಲ್ಪ ಸಮಯದಲ್ಲೇ ಓದುವ ಆತುರದಿಂದ ಬಂದು ಓದುತ್ತೀರಿ ಅಲ್ಲವೇ? ಅನೇಕ ಬ್ಲಾಗಿಗರು ಅಪರೂಪಕ್ಕೊಮ್ಮೆ ಬರೆಯುವವರು, ಅದಕ್ಕೆ ತಕ್ಕಂತೇ ಓದುತ್ತಾ ಸಾಗುವವರು ಹಲವರು. ಆದರೆ ನನ್ನದು ಸ್ವಲ್ಪ ಭಿನ್ನ. ಸದ್ಯಕ್ಕಂತೂ ದಿನವೂ ಏನಾದ್ರೂ ಬರೆಯಬೇಕೆಂಬುದು ನನ್ನಿಚ್ಛೆ. ನನ್ನ ವೇಗಕ್ಕೆ ನಿಮ್ಮ ವೇಗವನ್ನು ಹೊಂದಿಸಿಕೊಂಡು ಓದಿ ಎಂಬ ಒತ್ತಡವಿಲ್ಲ, ನಿಮ್ಮ ಬಿಡುವಿನಲ್ಲಿ, ನಿಮಗೆ ಅನುಕೂಲವಾದಾಗ ಓದಿ.

  ಜ್ಞಾನಾರ್ಜನೆಗೆ ಹಲವು ಮಾರ್ಗಗಳು ಸಿಗುತ್ತವೆ. ಮಾಹಿತಿ ತಂತ್ರಜ್ಞಾನದ ಕಾಲದಲ್ಲಿದ್ದೇವೆ. ಜಗತ್ತು ಕಿರಿದಾಗಿದೆ. ಆದರೆ ಯಾರಿಗೂ ಓದುವಷ್ಟು ಸಮಯಕೂಡ ಸರಿಯಾಗಿ ಸಿಗದಷ್ಟು ವ್ಯಾವಹಾರಿಕ ಒತ್ತಡದಲ್ಲಿರುತ್ತೇವೆ. ದಿನನಿತ್ಯದ ಜಂಜಡಗಳನ್ನು ಸ್ವಲ್ಪಕಾಲವಾದರೂ ಮರೆಮಾಚಲು ಬರೆಯುವ/ಓದುವ ಮಾರ್ಗ ಒಳ್ಳೆಯದು. ಧ್ಯಾನದಂತೇ ಇಲ್ಲೂ ಕೂಡ ನಮ್ಮನ್ನೇ ನಾವು ಮರೆತು ತೊಡಗಿಕೊಂಡರೆ ನಮ್ಮ ಒತ್ತಡ ಕೆಲವುಸಮಯವಾದರೂ ಇಲ್ಲವಾಗುತ್ತದೆ.

  ಬ್ಲಾಗ್ ಎಂಬ ಕಾರಣದಿಂದ ನಾವೆಲ್ಲಾ ಇಲ್ಲಿ ಪರಸ್ಪರರಿಗೆ ಭೇಟಿಯಾಗಿರುವುದು, ನಮ್ಮೆಲ್ಲರ ಸ್ನೇಹಮಿಲನವಾಗಿರುವುದು ಅತ್ಯಂತ ಸಂತೋಷದಾಯಕ. ಯಾರ್ಯಾರೋ ಎಲ್ಲೆಲ್ಲೋ ಹುಟ್ಟಿ, ಬೆಳೆದು, ಯಾವ್ಯಾವುದೋ ವೃತ್ತಿಯಲ್ಲಿ ತೊಡಗಿಸಿಕೊಂಡು, ವಯಸ್ಸಿನ ಮತ್ತು ಲಿಂಗ ಭೇದವಿಲ್ಲದೇ ಕೇವಲ ಜ್ಞಾನಾಸಕ್ತರಾಗಿ, ಮನಸ್ಸಿನ ದಾಹವನ್ನು-ಹಸಿವನ್ನು ತಣಿಸುವ ಸಲುವಾಗಿ ಬೆರೆಯುತ್ತಿದ್ದೇವೆ. ಕನ್ನಡ ಸಾರಸ್ವತಲೋಕಕ್ಕೆ ಬ್ಲಾಗಿಗರಾಗಿ ನಾವು ಹೊಸತನವನ್ನು ಗಳಿಸಿಕೊಡಬೇಕಾಗಿದೆ. ಭಾಷೆಯ ಆಳ-ಅಗಲ-ವಿಸ್ತಾರಗಳನ್ನು ಹೆಚ್ಚಿಸಲು ಪಂಪ,ರನ್ನ,ಕುಮಾರವ್ಯಾಸರಿಂದ ಹಿಡಿದು ಇಂದಿನ ನಮ್ಮ ಸಮಕಾಲೀನ ಕವಿ-ಸಾಹಿತಿಗಳ ಬದುಕು-ಬರಹಗಳನ್ನು ಅವಲೋಕಿಸುತ್ತಾ, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇವೆ ಎಂಬುದನ್ನು ಋಜುವಾತು ಪಡಿಸುವ ಸಮಯವಾಗಿದೆ. ಈ ದಿಸೆಯಲ್ಲಿ ಎಲ್ಲರೂ ಸೇರಿ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂಬುದೇ ನನ್ನ ಪ್ರಾರ್ಥನೆ-ನಿಮ್ಮೆಲ್ಲರಲ್ಲಿ.

  ಬ್ಲಾಗ್‍ನಲ್ಲಿ ಪ್ರತಿಕ್ರಿಯಿಸಿದ ಡಾ|ಕೃಷ್ಣಮೂರ್ತಿ, ಶ್ರೀ ಶೀಕಾಂತ್, ಶ್ರೀ ಸುಧೀಂಧ್ರ ದೇಶಪಾಂಡೆ, ಶ್ರೀ ಉಮೇಶ್ ದೇಸಾಯಿ, ಶ್ರೀ ಆಜಾದ್, ಶ್ರೀ ನಾರಾಯಣ ಭಟ್, ಶ್ರೀಮತೀ ತೇಜಸ್ವಿನಿ, ಶ್ರೀಮತೀ ಲತಾಶ್ರೀ, ಶ್ರೀ ಹರಿಹರಪುರ ಶ್ರೀಧರ್, ಶ್ರೀ ಕವಿ ಸುರೇಶ್, ಶ್ರೀಮತೀ ಶಶಿ ಜೋಯಿಸ್, ಡಾ|ಗುರುಪಾದ ಹೆಗಡೆ --ತಮಗೆಲ್ಲರಿಗೂ ಅತಿಶಯ ಪ್ರೀತಿಯ ಅಭಿವಂದನೆಗಳು, ಶುಭಕಾಮನೆಗಳು.

  ಇನ್ನೂ ಹಲವು ಓದುಗರು, ಮಿತ್ರರು ಸಮಯದ ಅಭಾವದಿಂದ ಓದಲು ಸಾಧ್ಯವಾಗದೇ ಗೂಗಲ್ ಬಜ್ ಮುಖಾಂತರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಎಲ್ಲರಿಗೂ ವಿ.ಆರ್.ಭಟ್ ಋಣಿಯಾಗಿದ್ದೇನೆ.

  ಓದಿದವರಿಗೂ, ಓದುವವರಿಗೂ, ನೇಪಥ್ಯದ ಓದುಗರಿಗೂ ನನ್ನ ಅನಂತ ಧನ್ಯವಾದಗಳು.

  ವಿ.ಆರ್.ಭಟ್ ನಿಮ್ಮೊಡನೆ ಇರಲು ಆರಂಭಿಸಿದ ಈ ಬ್ಲಾಗ್ ಸಾಧ್ಯವಾದಷ್ಟೂ ಹೆಚ್ಚಿನ ಉತ್ತಮ ಕೃತಿಗಳನ್ನು ನಿಮಗೆಲ್ಲಾ ಕೊಡಲು ಪ್ರಯತ್ನಿಸುತ್ತದೆ ಎಂಬ ಅನಿಸಿಕೆಯೊಡನೆ ನಿಮಗೆಲ್ಲಾ ಶಿರಬಾಗಿ ಕರಮುಗಿಯುತ್ತಿದ್ದೇನೆ, ನಮಸ್ಕಾರ

  ReplyDelete
 12. ಶ್ರೀ ವಿ.ಆರ್. ಭಟ್ಟರಿಗೆ ನಮಸ್ಕಾರ. ನಿಮ್ಮ ಬ್ಲಾಗ್ ಅನ್ನು ಸತತವಾಗಿ ವೀಕ್ಷಿಸುತ್ತಿರುವವರಲ್ಲಿ ನಾನೂ ಒಬ್ಬ. ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದರೂ ನಿಮ್ಮ ಬರವಣಿಗೆಯ ಹಂಬಲ, ಬರೆಯುವ ರೀತಿ, ಚಂದದ ವಿನ್ಯಾಸ, ನನಗೆ ತುಂಬಾ ಮೆಚ್ಚುಗೆಯಾಗಿದೆ. ವರ್ಷದ ಸಂಭ್ರಮದಲ್ಲಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸ್ವೀಕರಿಸಿ.
  -ನಾಗರಾಜ್.

  ReplyDelete
 13. ಧನ್ಯವಾದಗಳು ಶ್ರೀ ನಾಗರಾಜ್ ಅವರಿಗೆ, ತಮ್ಮ ಪ್ರೀತಿಗೆ ತುಂಬಾ ಆಭಾರಿ

  ReplyDelete