ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, October 13, 2010

ಮನದ ತಂತಿಯಲ್ಲಿ ಹರಿದು

ಚಿತ್ರಋಣ : ಶೃಂಗೇರಿ. ನೆಟ್ [ಶೃಂಗೇರಿ ಮಠದ ಕೃಪೆಯಿಂದ ]

ಮನದ ತಂತಿಯಲ್ಲಿ ಹರಿದು

[ಪೀಠಸ್ಥ ಶ್ರೀ ಶಾರದಾಮಾತೆಯನ್ನು ನೆನೆದಾಗ ಕಣ್ತುಂಬಿ-ಮನದುಂಬಿ ತಂತಾನೇ ಹರಿದ ಗೇಯಗೀತೆ. ನಮ್ಮ ಮನದ ಭಾವಕ್ಕೆ ಮೂಲ ಪ್ರೇರಣೆ ದೈವದ ಈ ರೂಪದಲ್ಲಿ ಅಲ್ಲವೇ ? ತಪ್ಪೋ ಒಪ್ಪೋ ನಮ್ಮನ್ನು ಭುವಿಗೆ ವಿಧಿಬರೆಹ ಬರೆದು ಕಳಿಸಿರುವ ಅಮ್ಮಾ ಶಾರದೆ ನಮ್ಮನ್ನು ಅನುಗ್ರಹಿಸು - ಎಂಬುದು ಪ್ರಾರ್ಥನೆ. ಇದರಲ್ಲಿ ನನ್ನ ಜೊತೆ ನೀವೆಲ್ಲಾ ಸೇರಿರುವಿರೆಂದು ನಂಬಿರುತ್ತೇನೆ, ಎಲ್ಲರಿಗೂ ಶರನ್ನವರಾತ್ರಿಯ, ಶುಭದಸರೆಯ ಹಾರ್ದಿಕ ಶುಭಾಶಯಗಳು. ]

ಮನದ ತಂತಿಯಲ್ಲಿ ಹರಿದು
ಬೆಳಗಲೆಮ್ಮ ಶಾರದೆ
ಬಂದಳೊಮ್ಮೆ ದಸರೆಯಲ್ಲಿ
ಇರುವಳೇನು ಬಾರದೆ ? || ಪ ||

ಅಮ್ಮನಿನ್ನ ಪ್ರೇರಣೆಯು
ನಮ್ಮ ಬುದ್ಧಿ ತಿಳಿಯಲೊಮ್ಮೆ
ಸುಮ್ಮನಿರುವೆವಿಲ್ಲಿ ಭವದಿ
ಎಮ್ಮಮೂಲ ತಿಳಿಸು ಒಮ್ಮೆ
ಕಮ್ಮಗೋಲನೆಸೆವ ಬಾಣಗಳನು ತಡೆದು ಬದುಕಲು
ಹೆಮ್ಮೆಯಿಂದ ಜೀವಿಸುವೆವು ಅಮ್ಮ ನೀನು ಹರಸಲು || ೧ ||

ಕಾರುಣ್ಯದಿ ಕಾಣಲೊಮ್ಮೆ
ಧಾರೆಯಾಗಿ ಸ್ಫುರಿಸಲೊಮ್ಮೆ
ಭಾರಗಳನು ನೀಗಲೊಮ್ಮೆ
ಚೋರಮನವ ಶಿಕ್ಷಿಸೊಮ್ಮೆ
ದಾರಿಯುದ್ದ ಸಿಗುವ ಭಾರೀ ಕಷ್ಟಗಳನು ಹರಿಸಲು
ಭೇರಿ ಬಾರಿಸುತ್ತ ನಿನ್ನ ನೆನೆದು ಒಮ್ಮೆ ಕುಣಿಯಲು || ೨ ||

ವಿಧಿಯರೂಪ ವಿದ್ಯೆಯಲ್ಲಿ
ಕದಿಯಲಾಗದಂಥಾ ಶ್ರೇಷ್ಠ
ನಿಧಿಯತಂದು ನಮ್ಮೊಳಿರಿಸಿ
ಬದಿಗೆ ಸರಿದು ನೇಪಥ್ಯದಿ
ಸದಭಿರುಚಿಯ ಸಾಹಿತ್ಯಗಳ ಸೃಜಿಸುವಂತೆಮಾಡಿದೆ
ಅದಕೆ ತಕ್ಕ ಶಬ್ದವಾಗಿ ಲೇಖನಿಯಲಿ ಮೂಡಿದೆ || ೩ ||

ಜಗವುಗೌಣ ನೀನಿಲ್ಲದೆ
ನಗುವದಿಲ್ಲ ನಲಿವಿಲ್ಲದೆ
ಬಗೆಯ ಬರೆದು ಹಣೆಯಮೇಲೆ
ನಗುವ ನಿನ್ನ ತೋರಲೊಮ್ಮೆ
ಅಗರು ಮಂಗಳಾರತಿಯನು ಜಗದಲಿ ಸ್ವೀಕರಿಸಲೊಮ್ಮೆ
ಮುಗುದರನ್ನು ಕಂಡು ಹರಸಿ ಪೀಠದಲ್ಲಿ ಕೂರಲೊಮ್ಮೆ || ೪ ||

14 comments:

  1. ಚೆನ್ನಾಗಿದೆ ಭಟ್ರೇ ಶಾರದಾಮಾತೆಯ ಸ್ತುತಿ. ನಿಮಗೆ, ನಿಮ್ಮ ಕುಟು೦ಬಕ್ಕೆ ಮತ್ತು ಸಮಸ್ತ ಬ್ಲಾಗ್ ಕುಟು೦ಬದ ಸದಸ್ಯರೆಲ್ಲರಿಗೆ ಶರನ್ನವರಾತ್ರಿ ಶುಭಾಶಯ

    ReplyDelete
  2. ನವರಾತ್ರಿಗೆ ಸುಂದರ ಕವನ
    ತಾಯಿ ಶಾರದೆ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ

    ReplyDelete
  3. ಭಟ್ ಸಾರ್
    ತಾಯಿ ಶಾರದೆಯ ನೆನಪು ಚೆನ್ನಾಗಿದೆ. ನಮ್ಮೆಲ್ಲರನ್ನೂ ಹರಸಿ ಸನ್ಮಂಗಳವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ... ಧನ್ಯವಾದಗಳು

    ಶ್ಯಾಮಲ

    ReplyDelete
  4. ಭಟ್ ಸರ್;ತಾಯಿ ಶಾರದೆಯ ಕವನ ನಿಮ್ಮ ಲೇಖನಿಯಲ್ಲಿ ಸೊಗಸಾಗಿ ಮೂಡಿಬಂದಿದೆ.ನಿಮಗೂ ,ಸರ್ವರಿಗೂ ದಸರೆಯ ಶುಭಾಶಯಗಳು.

    ReplyDelete
  5. ಭಟ್ಟರೆ,
    ನೀವು ಪ್ರಾರ್ಥಿಸಿದಂತೆ, ಶಾರದೆಯು ನಮ್ಮೆಲ್ಲರಿಗೂ ಮಂಗಳವನ್ನು ಮಾಡಲಿ.
    ನವರಾತ್ರಿಯ ಶುಭಾಶಯಗಳು.

    ReplyDelete
  6. ಭಟ್ ಸರ್‍, ಪ್ರಾರ್ಥನೆ ಚೆನ್ನಾಗಿದೆ. ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ ಶುಭಾಶಯಗಳು.

    ReplyDelete
  7. ಶಾರದಾ ಕುವರನಿಂದ ಮಾತೆಯ ಸ್ತುತಿ........!
    ಸರಸ್ವತಿಯು ಬಹಳ ಖುಷಿಪಟ್ಟಿರುತ್ತಾಳೆ.
    ನವರಾತ್ರಿಯ ಶುಭಾಷಯಗಳು.....

    ReplyDelete
  8. sir sharadaye prathane chenagide... . nimage mattu yella blog lockada balagakku.. navaratriya, dasarada shubhashayagalu...

    ReplyDelete
  9. Bhatre,

    Tumbaa sundara Prathane, Navraatriya subhashayagalu..

    ReplyDelete
  10. ತಾಯಿ ಶಾರದಾ ಮಾತೆಯ ನೆನೆಪು ನಿಮ್ಮ ಕವನದಲ್ಲಿ ಸುಂದರ ವಾಗಿ ಮೂಡಿ ಬಂದಿದ್ದಾಳೆ ಸರ್ ತುಂಬಾ ಚನ್ನಾಗಿದೆ

    ReplyDelete
  11. ಎಲ್ಲರಿಗೂ ಧನ್ಯವಾದಗಳು

    ReplyDelete
  12. ನವರಾತ್ರಿಗೆ ಸು೦ದರ ಕವನ ಸೃಜಿಸಿದಿರಾ,,
    ಧನ್ಯವಾದಗಳು.

    ReplyDelete