ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, October 6, 2010

ಹರಿಣಾಕ್ಷಿ

ರಾಜಾರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ಹರಿಣಾಕ್ಷಿ
ಹರಿಣಿಯು ಜಿಗಿವಾ ತರೆದಲಿ
ಭರದಲಿ ಹರಿಣಾಕ್ಷೀ ನೀ
ಕರೆದೆಯೇನೆ ? ಶರವೆಸೆದೆಯೇನೆ ?
ಥರಥರ ಜಿಗಿದೂ ಕಂಗಳ ಸೆಳೆದೂ
ಅರೆವಳಿಕೆಯ ಕೊಟ್ಟಿರುವೆಯೇನೆ ?

ಬಿರುಬಿಸಿಲ ಝಳ ಮರೆತಿರುವಾಗಿನ
ಹರವು ಬಲುತಂಪು ಹಿತವೆನಗೆ
ನೊರೆಹಾಲ ಕೊಟ್ಟ ಕೈ ತೊರೆವೆನೇನೆ ?
ಮರೆವೆನೇನೆ ? ಮೈಮರೆಯನೇನೆ ?

ತಿರೆಯೆಲ್ಲವು ದೇವೇಂದ್ರನ ನಂದನ
ತಿರುಗುತ್ತಿರೆ ನೀ ಒಳಹೊರಗೆ
ಇರಿವ ಕಣ್ಣೋಟ ನಿನ್ನ ಮೈಮಾಟ
ಸರಿಯುಂಟೇ ? ಮಿಗಿ ಮಿಗಿಲುಂಟೇ ?

ಬರಿದೆ ಮಸಲತ್ತು ಮತ್ತು ಬರಿಸುತಿದೆ
ನೆರೆಕೆರೆಯ ಜನರು ನೋಡುವರು
ಹರಿವಾಣದಂತ ನನ್ನೆದೆಯ ತುಂಬಿರುವ
ಪರಿಕಾಣದೇನೆ ? ಮನಗಾಣದೇನೆ ?

ತೊರೆಪಕ್ಕದಲ್ಲಿ ಬೆಳೆದಿರುವ ರಂಭೆಯಾ
ಭರಪೂರ ಬೆಳೆದ ಆ ನಿನ್ನ ಊರು
ಕರವೀರ ಸಂಪಿಗೆಯ ನಾಸಿಕದವಳೇ
ಗುರಿಯಿಟ್ಟೆಯೇನೆ ? ಅಂಬೆಸೆದೆಯೇನೆ ?

ಹರೆಯ ಹುಡುಕಿತ್ತು ನಿನ್ನಕಂಡಾಗಿಂದ
ಬರಿದಾಯ್ತು ಬದುಕು ನೀನದಕೆಬೇಕು
ಪರಿಪಕ್ವಗೊಳ್ಳುವರೆ ಕಾಯಲಾರೆ
ಬರಲಾರೆಯೇನೆ ? ಇರಲಾರೆಯೇನೆ ?

ಮೊರೆಮೊರೆದು ಸ್ವಾಗತಿಪ ಕುರುಹಕಂಡೆ
ಗರಿಬಿಚ್ಚಿ ನಿಂತ ನವಿಲನ್ನು ಕಂಡೆ
ಅರೆನಿದ್ದೆಯ ನಟಿಸುವ ನಯನಕಂಡೆ
ತರವೇನೆ ನಿನಗೆ? ಬರಲೊಲ್ಲೆಯಾಕೆ
?

12 comments:

  1. ಹರಿಣಾಕ್ಷಿಯ ಚಿತ್ರ ಮತ್ತು ಬಣ್ಣನೆ ಸೊಗಸಾಗಿದೆ.ಧನ್ಯವಾದಗಳು ಸರ್.

    ReplyDelete
  2. ಹರಿಣಾಕ್ಷಿಯ ಬಗೆಗಿನ ಕವನ ಮನ ಮುಟ್ಟಿವೆ
    ನೀವೊಬ್ಬ ಬೇಂದ್ರೆಯಂತೆ

    ReplyDelete
  3. ಉತ್ಕೃಷ್ಟ ಪದ ಪು೦ಜಗಳು. ಹರಿಣಾಕ್ಷಿಯ ವರ್ಣಿಸುವ ಪರಿಗೆ ಸರಿಸಾಟಿಯು೦ಟೆ?
    ಶುಭಾಶಯಗಳು ಭಟ್ ಸರ್.

    ಅನ೦ತ್

    ReplyDelete
  4. ರಸಸಮಯದ ಕಾವ್ಯ ಅದ್ಭುತವಾಗಿದೆ. ನವರಸ ನಾಯಕರು ನೀವು. ಆಡು ಮುಟ್ಟದ ಸೊಪ್ಪಿಲ್ಲ ಭಟ್ಟರು ಕೈಯಾಡಿಸದ ಸಾಹಿತ್ಯ ಪ್ರಾಕಾರ ಮತ್ತು ರಸ ಪ್ರಾಕಾರವಿಲ್ಲ. ಒಮ್ಮೆ ಅಧ್ಯಾತ್ಮ, ಇನ್ನೊಮ್ಮೆ ಕರ್ಮಸಿದ್ಧಾಂತ ಮಗದೊಮ್ಮೆ ಶೃಂಗಾರ.ವಾ...
    ಪತ್ತೆದಾರಿ ಕಥೆಯೊಂದನ್ನು ಕಾಯುತ್ತಿದ್ದೇನೆ ನಿಮ್ಮಿಂದ.

    ReplyDelete
  5. ನವರಸ ನಾಯಕರಿಗೆ ನಮೋನ್ನಮಃ

    ReplyDelete
  6. ಹರೆಯ ಹುಡುಕಿತ್ತು ನಿನ್ನಕಂಡಾಗಿಂದ
    ಬರಿದಾಯ್ತು ಬದುಕು ನೀನದಕೆಬೇಕು
    ಪರಿಪಕ್ವಗೊಳ್ಳುವರೆ ಕಾಯಲಾರೆ
    ಬರಲಾರೆಯೇನೆ ? ಇರಲಾರೆಯೇನೆ ?
    ತುಂಬಾ ಚೆನ್ನಾಗಿದೆ V R ಭಟ್ರೇ .ಧನ್ಯವಾದಗಳು

    ReplyDelete
  7. ಕವನ ಚನ್ನಾಗಿದೆ ಸರ್
    "ಕರವೀರ ಸಂಪಿಗೆಯ ನಾಸಿಕದವಳೇ" ಹೀಗೆ ಅಲ್ಲಲ್ಲಿ ವರ್ಣನೆ ಚನ್ನಾಗಿ ಮೂಡಿಬಂದಿದೆ

    ReplyDelete
  8. ಭಟ್ಟರೆ,
    ರವಿವರ್ಮನ ಚಿತ್ರಕ್ಕೆ ಸಮರ್ಪಕವಾದ ವರ್ಣನೆ. ಸುಮಧುರ ಭಾವಗೀತೆ.

    ReplyDelete
  9. ಬೇಂದ್ರೆಯಂತ ದೊಡ್ಡ ವ್ಯಕ್ತಿಗಳಿಗೆ ಹೊಲಿಸಿದಿರಿ, ಬೇಂದ್ರೆ ಬೇಂದ್ರೆಯೇ, ಇನ್ನೊಬ್ಬ ಬೇಂದ್ರೆ ಹುಟ್ಟಲು ಸಾಧ್ಯವೇ, ಹೊಗಳಿಕೆ ಜಾಸ್ತಿಯಾಯಿತು, ಇರಲಿ ನಿಮ್ಮೆಲ್ಲರ ಪ್ರತಿಕ್ರಿಯೆಗಳು ಪರಮಾತ್ಮನಿಗೆ ಅರ್ಪಿತ, ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು, ಶ್ರೀ ಸೀತಾರಾಮರೇ ತಮ್ಮ ಬಯಕೆ ಇಡೇರಿಸಲು ಪ್ರಯತ್ನಿಸುತ್ತೇನೆ,ನಮಸ್ಕಾರ

    ReplyDelete
  10. ಬ್ಲಾಗಿಗೆ ಲಿಂಕಿಸಿಕೊಂಡ ದೊಡ್ಡಮನಿ ಮಂಜು ಅವರಿಗೆ ಸ್ವಾಗತ ಹಾಗೂ ನಮನ

    ReplyDelete