ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, September 18, 2010

ನಂದದ ನಂದಾದೀಪ


ನಂದದ ನಂದಾದೀಪ

ಪ್ರತ್ಯಾಹಾರದ ಬಗ್ಗೆ ಕೆಲದಿನಗಳ ಹಿಂದೆ ಬರೆಯುತ್ತ ಹೇಳಿದ್ದೆ-- ಒಳಗಿರುವ ಆತ್ಮವನ್ನು ಬಾಹ್ಯವಾಗಿ ನಾವು ಪಂಚೇಂದ್ರಿಯಗಳ ಮೂಲಕ ವಿಭಿನ್ನವಾಗಿ ನೋಡುತ್ತೇವೆ ಎಂದು. ಇದಕ್ಕೆ ಜ್ವಲಂತ ಉದಾಹರಣೆ ಬ್ರಹ್ಮೈಕ್ಯ ಡಾ|ಪುಟ್ಟರಾಜ ಗವಾಯಿಗಳು. ಅವರಿಗೆ ಕಣ್ಣೆಂಬ ಹೊಸ ಇಂದ್ರಿಯ ಬೇಕಾಗಿರಲಿಲ್ಲ. ಅವರು ಕಣ್ಣಿಲ್ಲದೆಯೂ ಹಲವನ್ನು ಕಂಡಿದ್ದರು ! ಇದು ಅವರ ಆತ್ಮ ಶಕ್ತಿ! ಜೀವಿತದ ಎಳವೆಯಿಂದ ಮಣ್ಣಲ್ಲಿ ಮಿಳಿವವರೆಗೂ ಪರಹಿತಕ್ಕಾಗಿ ದುಡಿದ, ಸೇವೆಸಲ್ಲಿಸಿದ ಅದ್ಬುತ ಚೈತನ್ಯವದು. ಖುದ್ದಾಗಿ ನಾನವರನ್ನು ನೋಡಿದ್ದಿಲ್ಲ,ಆದರೆ ಅವರ ಬಗ್ಗೆ ಸಾಕಷ್ಟು ಓದಿದ್ದೆ, ಕೇಳಿದ್ದೆ,ಮಾಧ್ಯಮಗಳಲ್ಲಿ ನೋಡಿದ್ದೆ. ’ಗಾನಯೋಗಿ ಪಂಚಾಕ್ಷರಿ ಗವಾಯಿ’ ಎನ್ನುವ ಸುಮಧುರ ಕನ್ನಡ ಸಿನಿಮಾವನ್ನು ಕೂಡ ನೋಡಿದ್ದೆ.

ದೇವರು ಒಂದನ್ನು ಕೊಟ್ಟರೆ ಇನ್ನೊಂದನ್ನು ಕೊಡ ಎನ್ನುತ್ತಾರೆ ಅನುಭಾವಿಗಳು. ಇದು ನಿಜವೇನೋ ಅನಿಸುತ್ತದೆ: ಹಲವು ಸನ್ನಿವೇಶಗಳಲ್ಲಿ. ಒಬ್ಬಾತ ಕುರುಡನೋ ಕಿವುಡನೋ ಆಗಿದ್ದರೆ ಅವನಿಗೆ ಉಳಿದ ಇಂದ್ರಿಯಗಳಲ್ಲಿ ಸ್ಪಂದನ ಜಾಸ್ತಿಯಾಗಿ [ಒಬ್ಬನೇ ವ್ಯಕ್ತಿ ಎರಡೆರಡು ಕೆಲಸಮಾಡಿದ ಹಾಗೇ ] ಕೆಲಸಮಾಡದ ಇಂದ್ರಿಯದ ಜಾಗವನ್ನು ತುಂಬುತ್ತವೆ. ಇಂತಹ ವ್ಯಕ್ತಿಗಳಿಗೆ ದೇವರು ವಿಶೇಷ ಚೈತನ್ಯವನ್ನು ಕೊಟ್ಟಿರುತ್ತಾನೆ. ದೇ ಆ ಬ್ಲೆಸ್ಡ್ ವಿತ್ ರಿಮೇನಿಂಗ್ ಸ್ಪೆಷಲ್ ಸೆನ್ಸಿಟಿವ್ ಆರ್ಗನ್ಸ್. ಹಾಗಾಗಿ ಇಂಥವರು ಮಾಡಿದ ಪ್ರಯತ್ನಗಳೆಲ್ಲ ಫಲದಾಯಕವಾಗುವ ಹಾಗೇ ಭಗವಂತ ಅನುಗ್ರಹಿಸುತ್ತಾನೆ. ಇದನ್ನು ಹಿಂದೆ ನಾನು ಹೇಳಿದ್ದ ಮಾರ್ಜಾಲ ನ್ಯಾಯಕ್ಕೆ ಹೋಲಿಸಬಹುದು.ಅದರಲ್ಲೂ ಕೆಲವರು ಬಹಳ ಅದ್ಬುತ ಶಕ್ತಿಯನ್ನು ಪಡೆದಿರುತ್ತಾರೆ. ಬದುಕಿನ ಸಾರವನ್ನು ಬಹುಬೇಗ ಅರಿಯುವ ಇವರು ಮಿಕ್ಕುಳಿದವರಿಗೆ ದಾರಿದೀಪವಾಗುತ್ತಾರೆ.

ಪಂಡಿತ್ ಪುಟ್ಟರಾಜ ಗವಾಯಿಗಳು ಅಂತಹ ಒಬ್ಬ ಅದಮ್ಯ ಚೇತನ. ಅವರು ತನಗಾಗಿ ಬದುಕಲಿಲ್ಲ, ಹಲವರಿಗಾಗಿ ಬದುಕಿದರು. ನಾನು ಕೇಳಿದ ಒಂದು ವಿಷಯ- ಒಬ್ಬ ತಾಯಿ ಹಡೆದ ಶಿಶುವನ್ನು ೪-೫ ತಿಂಗಳಾಗುವ ಹೊತ್ತಿಗೆ ಅದು ಕುರುಡು ಎಂದು ತಿಳಿದಾಗ, ಎತ್ತಿ ತಂದು ಪುಟ್ಟರಾಜ ಗವಾಯಿಗಳ ಆಶ್ರಮದ ಹೊರಾಂಗಣದ ಬಾವಿಯ ಪಕ್ಕ ಮಲಗಿಸಿ ಹೊರಟುಹೋಗಿದ್ದಳಂತೆ, ಇದು ನಡೆದಿದ್ದು ಯಾವುದೋ ಒಂದು ರಾತ್ರಿ. ಬೆಳಿಗ್ಗೆ ಶಿಷ್ಯರಿಂದ ವಿಷಯ ತಿಳಿದ ಗವಾಯಿಗಳು ಆ ಮಗುವನ್ನು ತನ್ನ ಕೈಗೆತ್ತಿಕೊಂಡು ಸ್ವತಃ ಅದಕ್ಕೆ ಬಾಟಲಿಯಿಂದ ಹಾಲುಣಿಸಿ ನಂತರ ಹಾಗೇ ಜೋಪಾನಮಾಡಿದರಂತೆ. ಈಗ ಆ ಗಂಡು ಮಗು ಬೆಳೆದು ಸಂಗೀತ ಕಲಿತು ಸಂಗೀತ ಶಿಕ್ಷಕನಾಗಿ ಕೆಲಸಮಾಡುತ್ತಿದೆಯಂತೆ! ಇದು ಗವಾಯಿಗಳ ವೈಖರಿ. ಅದಕ್ಕೇ ನಿಜವಾಗಿ ಅದು ಪುಣ್ಯಾಶ್ರಮ--ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ.

ಬದುಕಿನ ಬಂಡಿ ಎಳೆಯುವಾಗ ಎಷ್ಟೋ ತಂದೆ-ತಾಯಿಗಳಿಗೆ ಕೆಲವೊಮ್ಮೆ ಅಂಗವಿಕಲರೋ ವಿಕಲ ಚೇತನರೋ ಹುಟ್ಟುವುದು ಅವರ ವಿಧಿಬರಹ! ಇಂತಹ ಹುಟ್ಟಿ ಯಾವುದೋ ಕೆಟ್ಟ ಘಳಿಗೆಯಲ್ಲಿ ಪಾಲಕರಿಂದ ತ್ಯಜಿಸಲ್ಪಟ್ಟ ಹಲವು ಮಕ್ಕಳ ಮಾತಾ-ಪಿತೃವಾಗಿ ಅವರನ್ನು ಉಳಿಸಿ-ಬೆಳೆಸಿ, ಸಂಗೀತ ಕಲಿಸಿ, ಅವರಿಗೆ ಒಂದರ್ಥದಲ್ಲಿ ಪುನರ್ಜನ್ಮವಿತ್ತ ಸದ್ಗುರುವೇ ಶ್ರೀ ಪುಟ್ಟರಾಜರು. ತಮಗೆ ಅಭಿಮಾನಿಗಳು ಪ್ರೀತ್ಯಾದರಗಳಿಂದ ನಡೆಸಿದ ನೂರಾರು ತುಲಾಭಾರಗಳಿಂದ ಬಂದ ಆದಾಯವನ್ನೂ ಸೇರಿದಂತೆ ಉಳ್ಳವರು ಕೊಟ್ಟ ಎಲ್ಲಾ ಸಹಾಯವನ್ನು ಕೇವಲ ಸಮಾಜದ ಇಂತಹ ಮಕ್ಕಳ ಸೇವೆಗಾಗಿ, ಅವರಿಗೊಂದು ಬದುಕು ಕಟ್ಟಿಕೊಡಲಾಗಿ ಬಳಸಿದ ಬೃಹತ್ ಕುಟುಂಬದ ಯಜಮಾನ ಶ್ರೀ ಗವಾಯಿಗಳು.

ಅಂಧನೊಬ್ಬ ಮೂರು ಭಾಷೆಗಳಲ್ಲಿ ಪಂಡಿತನೆಂದರೆ, ಹಲವು ಸಂಗೀತವಾದ್ಯಗಳಲ್ಲಿ ಪರಿಣತನೆಂದರೆ ಅವನ ಅಸಾಧಾರಣ ತಪಸ್ಸನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗೆ ಅವರಿಗೆ ಇವೆಲ್ಲವನ್ನೂ ಕಲಿಯುವುದು ಅಷ್ಟು ಸುಲಭದ ಮಾತೂ ಅಲ್ಲ. ಆದರೆ ಗವಾಯಿಗಳು ಕನ್ನಡ, ಸಂಸ್ಕೃತ ಮತ್ತು ಹಿಂದಿ ಈ ಮೂರು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು, ಅಲ್ಲದೇ ಅದನ್ನು ಹಲವರಿಗೆ ಧಾರೆ ಎರೆಯುವ ಹೊಸ ಮಾರ್ಗವನ್ನು ಹುಟ್ಟುಹಾಕಿಕೊಂಡಿದ್ದರು. ’ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಹಳೆಯ ಗಾದೆ ಈಗ ಅದು ಹಾಗಲ್ಲ ಸದ್ಗುರುವೊಬ್ಬನಿದ್ದರೆ ಸಮಾಜವೆಲ್ಲ ಕಲಿತಂತೆ, ಕಲಿತು ಜೇನು ಸವಿದಂತೆ ಎಂದರೆ ತಪ್ಪಲ್ಲ. ಪ್ರತಿನಿತ್ಯ ಪೂಜೆ, ಧ್ಯಾನ, ಸಂಗೀತಾರಾಧನೆ, ಕಲಿಸುವಿಕೆ, ಅನ್ನದಾಸೋಹವೇ ಮೊದಲಾದ ಜ್ಞಾನ, ಅಶನ-ವಶನಾದಿ ಹಲವು ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳಕು ಕಾಣದ ಕಂದಮ್ಮಗಳಿಗೆ ಮಾನಸ ಬೆಳಕನ್ನು ಹರಿಸಿದ ಜ್ಞಾನ ಜ್ಯೋತಿ ಶ್ರೀ ಪುಟ್ಟರಾಜರು. ಕಾಣುವ ಪ್ರಪಂಚದ ಜನ ಕಾಣಲಾರದ ಜನರಿಗೆ ತೊಂದರೆಕೊಟ್ಟು ತಪ್ಪು ಮಾಡಿದರೂ ಅಂತಹ ಕಣ್ಣಿರುವ ಪಾತಕಿಗಳನ್ನು ಕರೆದು ತಿಳಿಹೇಳಿ ತಿದ್ದಿದ ಖ್ಯಾತಿ ಅವರದ್ದು.

ಕಣ್ಣಿರುವ ನಾವು ಮಾಡದ ಮೇರು ಸಾಧನೆಯನ್ನು ಕಣ್ಣಿರದ ಈ ಪುಣ್ಯಜೀವಿ ಇದುವರೆಗೆ ನಡೆಸಿಕೊಟ್ಟರು. ಕಣ್ಣಿರದ ಮಗುವಾಗಿ ಆಶ್ರಮಕ್ಕೆ ಬಂದ ಗವಾಯಿಗಳು ಗುರು ಪಂಚಾಕ್ಷರಿಗವಾಯಿಗಳ ಕೃಪೆಗೆ ಪಾತ್ರರಾಗಿ ಅದನ್ನು ನೆನೆಸಿ ಹಲವು ಸಾವಿರ ಕುರುಡು,ಕಿವುಡು, ಮೂಕ ಮಕ್ಕಳಿಗೆ ವಿದ್ಯಾದಾನ ಮಾಡಿದರು. ದಾಸರು ಹೇಳಿದ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತನ್ನು ಅಕ್ಷರಶಃ ಪಾಲಿಸಿ ತೋರಿಸಿದ ಈ ನಂದಾದೀಪ ನಂದಲಿಲ್ಲ, ಅದು ಬೆಳಗಿದ್ದು ಒಂದೆರಡು ದೀವಿಗೆಗಳನ್ನಲ್ಲ-ಹಲವು ಸಾವಿರ ದೀವಿಗೆಗಳನ್ನು. ಅಂತಹ ಹಲವು ದೀವಿಗಗಳನ್ನು ಸಮಾಜಕ್ಕೆ ಕೊಟ್ಟ ಶ್ರೀಗಳು ಭೌತಿಕವಾಗಿ ತನ್ನ ಅಸ್ಥಿತ್ವವನ್ನು ಮೊಟಕುಗೊಳಿಸಿದರೂ ಚೈತನ್ಯರೂಪದಲ್ಲಿ ಪುಣ್ಯಾಶ್ರಮದಲ್ಲಿ ನೆನೆನಿಂತಿದ್ದಾರೆ. ಈ ಸತ್ಪರಂಪರೆ ಸತತ ಮುನ್ನಡೆಯಲಿ, ಅವರ ಸದಾಶಯ ಸದಾ ಪೂರ್ತಿಗೊಳ್ಳುತ್ತಿರಲಿ, ಕಣ್ಣಿರುವ ಜನತೆ ಕಾಣ್ಣಿರದ,ಕಿವಿಯಿರದ, ಮಾತುಬಾರದ ಆ ಜನತೆಗೆ ಪ್ರೀತಿಯಿಂದ ಸಹಕರಿಸಲಿ ಎಂದು ಪ್ರಾರ್ಥಿಸೋಣ. ಅಗಲಿದ ಮಹಾತ್ಮರಿಗೆ ನಮ್ಮ ಭಾಷ್ಪಾಂಜಲಿಯನ್ನು ಸಮರ್ಪಿಸೋಣ.

ಸಂಗೀತದ ಸುಸ್ವರಸಾಮ್ರಾಜ್ಯದಿ
ಮಂಗಳಕುವರನು ಉದಯಿಸುತ
ಅಂಗವಿಕಲಚೇತನರನು ಸೇವಿಸಿ
ಕಂಗಳಿರದ ತನ್ನನೇ ಮರೆತ

ತಾನು ತನದೆಂಬ ಕಣ್ಣಿಹ ಜನತೆಗೆ
’ನಾನಿ’ಲ್ಲದ ತತ್ವವನರುಹಿ
ಗಾನದಿ ಜನರನು ರಂಜಿಸಿ ನಿತ್ಯವೂ
ಯಾನವ ಬೇಳೆಸುತ ಹಲವೆಡೆಗೆ

ಗಾನಯೋಗಿ ಪಂಚಾಕ್ಷರಿ ಹರಸಲು
ಮಾನಸಮ್ಮಾನ ಸಾಸಿರವು
ದೀನಬಂಧುವನು ನೆನೆಸಿ ಬಂದವರ
ಧೇನುರೂಪದಲಿ ಕಂಡಿಹುದು

ಯೋಗಿಯಾದ ಭವರೋಗವೈದ್ಯ
ಭೋಗಿಸಲಿರದಿರೆ ಕಣ್ಣು-ಕಿವಿ
ತ್ಯಾಗದಿ ಪೂಜೆಯ ನಡೆಸುತ ಹರಸಿದ
ಬೀಗದೆ ಪುಟ್ಟರಾಜನು ತಾ

12 comments:

  1. ‘ತ್ಯಾಗದಿ ಪೂಜೆಯ ನಡೆಸುತ ಹರಸಿದ’ ಎನ್ನುವ ನಿಮ್ಮ ಮಾತು ನೂರಕ್ಕೆ ನೂರು ನಿಜ. ನಿಮ್ಮ ಜೊತೆಗೇ ನನ್ನದೂ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇನೆ.

    ReplyDelete
  2. ಭಟ್ ಸರ್,
    ಪುಟ್ಟರಾಜ ಗವಾಯಿಗಳ ಬಗ್ಗೆ ಚುಟುಕಾಗಿ ಬರೆದು ಶ್ರದ್ದಾಂಜಲಿ ಸಲ್ಲಿಸಿದ್ದೀರಾ.... ನಮ್ಮದೊಂದು ಭಾವಪೂರ್ಣ ನಮನಗಳು ಅವರ ನಿಸ್ವಾರ್ಥ ಕಾರ್ಯಗಳಿಗೆ....

    ReplyDelete
  3. ವಿ.ಆರ್.ಭಟ್ ಸರ್: ನಮಸ್ತೆ,
    ಸುಮಾರು ೧೨ ವರ್ಷಗಳ ಹಿಂದೆ ನೋಡಿದ ಚಲನ ಚಿತ್ರ, " ಗಾನಯೋಗಿ ಪಂಚಾಕ್ಷರಿ ಗವಾಯಿ" ಇವತ್ತಿಗೂ ನೆನಪಿದೆ. "ಒಂದು ಚೆಂಬಿನ ಸದ್ದು ಕೇಳಿ, ಹಲವು ವರ್ಷಗಳ ಹಿಂದೆ ಕಳೆದು ಹೋದ ತಮ್ಮದೇ ಚೆಂಬು ಅದು" ಎಂದು ಹೇಳಿದ್ದು..!!
    ನಮಗೆ ಅವಾಗ ಆಶ್ಚರ್ಯ..! ಆಮೇಲೆ ತಿಳಿದದ್ದು ಅದು ಅವರ ಶಕ್ತಿ..
    ನೀವು ಹೇಳಿದ್ದಿರಲ್ಲ, "ಆತ್ಮ ಶಕ್ತಿ"..!
    ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ..
    ಚೆಂದದ ಲೇಖನ,
    ನಿಮಗೆ ನನ್ನ ನಮನಗಳು.

    ReplyDelete
  4. ತಾನು ತನದೆಂಬ ಕಣ್ಣಿಹ ಜನತೆಗೆ
    ’ನಾನಿ’ಲ್ಲದ ತತ್ವವನರುಹಿ ... matu aste satya ಪುಟ್ಟರಾಜ ಗವಾಯಿಗಳ bagge.. nanu shale yalli ಪುಟ್ಟರಾಜ ಗವಾಯಿ bagge odidde.. anta sadisida chetana nammellara hagliruvuu, ondu dodda astiyannu kalidukondante agide.. bhat sir nimmondige namma bhavapurna namana...

    ReplyDelete
  5. [ತ್ಯಾಗದಿ ಪೂಜೆಯ ನಡೆಸುತ ಹರಸಿದ]
    ನಿಮ್ಮ ಮಾತು ಸತ್ಯ. ಅವರ ದೇಹವಷ್ಟೇ ಬಿಡುಗಡೆಯಾಗಿದೆ. ಬವರ ಚೇತನ ಶಕ್ತಿ ಸದಾ ಜಾಗೃತ.

    ReplyDelete
  6. ಸ್ವಾಮಿಗಳಿಗೆ ಭಾವಪೂರ್ಣ ನಮನಗಳು....

    ReplyDelete
  7. haari hoyitu nandadeepa.... mattomme huttibarali....

    ReplyDelete
  8. ವಿ ಆರ್ ಭಟ್ ಸರ್,
    ಗಾನಯೋಗಿ ಪುಟ್ಟರಾಜ ಗವಾಯಿಗಳ ಬಗ್ಗೆ ಚಿಕ್ಕಂದಿನಿಂದಲೂ ಸಾಕಷ್ಟು ಓದಿದ್ದೆ, ಅವರ ಬಗ್ಗೆ ತಿಳಿದಿದ್ದೆ. ಸದಾ ಅನ್ಯರ ಹಿತ ಚಿಂತನೆಯಲ್ಲೇ ಬದುಕಿ ಅನೇಕರ ಬಾಳಿಗೆ ನಂದಾದೀಪವಾದ ಸ್ವಾಮಿಗಳು ಈ ಭೂಮಿಯಿಂದ ಎಂದೆಂದೂ ಮರೆಯಾಗಲಾರರು. ಅವರ ಆತ್ಮ, ಆದರ್ಶಗಳು, ಅವರ ಚೈತನ್ಯ, ನಮಗೆಲ್ಲರಿಗೂ ಆಶಿರ್ವಾದ ರೂಪದಲ್ಲಿ ಸದಾ ಇಲ್ಲೇ ನೆಲೆಸಿದ್ದಾರೆ.
    ಭಾವಪೂರ್ಣ ಲೇಖನ ಮತ್ತು ಕವನಕ್ಕೆ ನಿಮ್ಮ ಧನ್ಯವಾದಗಳು.

    ReplyDelete
  9. ಪ್ರತಿಕ್ರಿಯಿಸಿದ ಎಲ್ಲರಿಗೂ ಹೃತ್ಪೂರ್ವಕ ನಮನಗಳು.

    ReplyDelete
  10. ಭಟ್ ಸರ್,
    ನಿಮ್ಮ ಶ್ರದ್ಧಾಂಜಲಿ ನನ್ನದು ಕೂಡ.

    ReplyDelete
  11. Bhatre,

    chendada lekhana, swaamigalige bhaavapoorna namanagalu.

    ReplyDelete
  12. ತಮ್ಮ ನುದಿನಮನದಲ್ಲಿ ನಾವು ಭಾಗಿಯಾಗಿ ದಿವ್ಯಚೇತನಕ್ಕೆ ನಮಿಸುತ್ತೇವೆ.

    ReplyDelete