ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 21, 2010

ಮೋಡದ ದಿಬ್ಬಣ !
ಮೋಡದ ದಿಬ್ಬಣ
!

ಶುದ್ಧ ಶುಭ್ರ ತಿಳಿ ನೀಲಾಗಸದಲಿ
ಎದ್ದಿದೆ ಮೋಡದ ದಿಬ್ಬಣವು
ಮುದ್ದಿನ ಮದುಮಗನಂತಿಹ ಮೋಡವು
ಗೆದ್ದ ಸಾಹಸದಿ ಮುಂದಿಹುದು !

ತುಂಬಾ ಸಡಗರ ಆಹಾ ಅಬ್ಬರ
ಅಂಬರ ಮೋಡದ ಬಂಧುಗಳು
ರಂಭೆ ಊರ್ವಶಿ ತಿಲೋತ್ತಮೆಯ ಮುಖ
ಹಂಬಲಿಸುವ ಹೆಣ್ ತುಣುಕುಗಳು !

ನಡುನಡು ಮಕ್ಕಳು ನಡೆನಡೆದೋಡುತ
ಹುಡುಗಾಟವ ತಾವ್ ಬಿಂಬಿಸಿವೆ
ಗುಡುಗಿನ ಶಾಸ್ತ್ರವೇ ಮಂಗಳ ವಾದ್ಯವು
ಎಡಬಿಡದೆತ್ತಲೋ ಸಾಗುತಿವೆ !

ಬಣ್ಣದ ಸೀರೆಯ ಗರತಿಯರಿರುವರು
ನುಣ್ಣನೆ ಜಾರುತ ಮಧ್ಯದಲಿ
ಕಣ್ಣು ಹೊಡೆದು ಕೋಲ್ಮಿಂಚು ಹರಿಸುತಿಹ
ಸಣ್ಣ ಹೊಟ್ಟೆ ಹುಡುಗಿಯರಿಹರು !

ಸಾವಿರ ಸಂಖ್ಯೆಯ ಮೋಡಜನಂಗಳು
ಆವರಿಸುತ ಬಾನಂಗಳದಿ
ನಾವೆಲ್ಲರೂ ನೆಂಟರು ಈ ಮದುವೆಗೆ
ಜಾವದಲೇ ಬಂದಿಹೆವೆನುತ !

ತುಂತುರು ಹನಿಗಳ ಮಂಗಳ ಸೇಚನ
ನಿಂತಿಹ ಭೂಮಿಯ ಜನಗಳಿಗೆ
ಸಂತೆಯು ಸೇರಿದ ಸಂಭ್ರಮವಲ್ಲಿದೆ
ಅಂತರದಲಿ ತಾವ್ ನೋಡಿದಿರೇ ?

ಹದವೇರಿದ ತಂಗಾಳಿಯು ಬೀಸುತ
ಮುದಗೊಳಿಸುತ ದಿಬ್ಬಣಜನರ
ಚದುರಿದ ಹಲವನು ಒಂದೆಡೆ ಸೆಳೆಯುತ
ಒದಗುತ ಬಡಗಿನ ದಿಕ್ಕಿನಲಿ

ಬೀಗರ ಮುಖದಲಿ ಬೆಳ್ಳಿಯಹೂ ನಗೆ
ಆಗಾಗ ಅಲ್ಲಿ ಅನುರಳಿಸಿ
ಭೋಗಸುವುದಕಿದ ಮನವಿದ್ದರೆ ಸಾಕ್
ಬೇಗ ಬನ್ನಿ ನೀವ್ ಪರಿಜನರೆ

15 comments:

 1. ಉತ್ತಮ ರಚನೆ ಸರ್.. :o)

  ReplyDelete
 2. ತುಂಬಾ ಚೆನ್ನಾಗಿದೆ .. ಬಹುಷ ನಮ್ಮ ದಿಬ್ಬಣದಲ್ಲಿ ಮೋಡಗಳು ಬಂದರೆ ನಾವು ಮೋಡಗಳನ್ನು ಬೈದುಕೊಳ್ಳುತ್ತೇವೆ .ಅಲ್ಲವ ?

  ReplyDelete
 3. ಸುಂದರ,ಮೋಹಕ ವರ್ಣನೆ.
  [[ಸಣ್ಣ ಹೊಟ್ಟೆ ಹುಡುಗಿಯರಿಹರು !]] ಇದನ್ನು 'ಕಿರು ಉದರದ ಮುಗುದೆಯರಿಹರು' ಎಂದರೆ ಪ್ರಾಸ ಇನ್ನೂ ಚೆನ್ನಾಗಬಹುದು.

  ReplyDelete
 4. ಮದುವೆ ದಿಬ್ಬಣಕ್ಕೆ ಸೊಗಸಾದ ಕವನ, ಮೋಡಗಳೆ ಈ ಕವನದ ಹುಟ್ಟಿಗೆ ಕಾರಣ, ತುಂಬಾ ಚೆನ್ನಾಗಿದೆ ಧನ್ಯವಾದಗಳು.

  ReplyDelete
 5. ಕವನ ಕಲೆ ನಿಮಗೆ ಸಿದ್ಧಿಸಿದೆ. ನಿಮ್ಮ ಕಾವ್ಯಧಾರೆ ನಿರಂತರ ಹರಿಯಲಿ.

  ReplyDelete
 6. * ಶ್ರೀ ಪ್ರಶಾಂತ್ ಜಿ. ನಿಮಗೆ ಸ್ವಾಗತ ಮತ್ತು ಧನ್ಯವದಗಳು

  * ಶ್ರೀ ವೆಂಕಟೇಶ್ ಹೆಗಡೆ, ನಮನಗಳು

  * ಶ್ರೀ ನಾಗರಾಜ್, ಪ್ರಾಸವೆಂದರೆ ಹೇಗೆ ಎಂದು ನನಗೆ ಅರ್ಥವಾಗಲಿಲ್ಲ, ನನ್ನ ಪ್ರಕಾರ ನಾನು ಬರೆದಿದ್ದು ಸ್ಪಷ್ಟ ಪ್ರಾಸದಲ್ಲಿದೆ, ತಾವು ಹಾಡಿಕೊಂಡು ನೋಡಿ, ಬಣ್ಣ-ಸುಣ್ಣ,ಕಣ್ಣು,ಸಣ್ಣ -ಇದು ಇಲ್ಲಿನ ಪ್ರಾಸದ ಶಬ್ದಗಳು, ಮಿಕ್ಕಿದ್ದಕ್ಕೆ ಬಹಳ ಮಹತ್ವ ಕೊಟ್ಟಿಲ್ಲ ಆದರೆ ಅರ್ಥಕ್ಕೆ ತೊಂದರೆಯಿಲ್ಲ, ಸರಿಯಲ್ಲವೇ ? ನಮಸ್ಕಾರ.

  * ಶ್ರೀ ವಸಂತ್ ಕೆಲದಿನಗಳ ಮೇಲೆ ಬಂದು ಎಂಜಾಯ್ ಮಾಡಿದಿರಿ, ನಮನಗಳು.

  * ಶ್ರೀ ಹೊಸಮನೆಯವರೇ, ಅನುರಳಸಿ ಎನ್ನುವ ಶಬ್ದ ಅರಳಿಸಿ ಎಂಬ ಅರ್ಥಕ್ಕೆ ಉಪಯೋಗಿಸಲ್ಪಟ್ಟಿದೆ, ತಮಗೆ ಸ್ವಾಗತ ಹಾಗೂ ಧನ್ಯವಾದಗಳು.

  * ಶ್ರೀ ಸುಧೀಂಧ್ರ ದೇಶಪಾಂಡೆ, ತಮ್ಮ ಅನಿಸಿಕೆಗೆ ಬಹಳ ಅಭಾರಿ, ನಮಸ್ಕಾರ.

  ReplyDelete
 7. ಮದುವೆಯ ದಿಬ್ಬಣ ಮತ್ತು ಮೋಡದ ದಿಬ್ಬಣ.... ಸೊಗಸಾಗಿದೆ ಭಟ್ ಸಾರ್...

  ಶ್ಯಾಮಲ

  ReplyDelete
 8. ತಮ್ಮ ಅನಿಸಿಕೆಗೆ ಧನ್ಯವಾದಗಳು ಶ್ಯಾಮಲ ಮೇಡಂ

  ReplyDelete
 9. ಆದರೆ ಅಂತಹ ಪದ ಕಿಟ್ಟೆಲ್ ಮತ್ತು ಜಿ.ವೆಂಕಟಸುಬ್ಬಯ್ಯ ಇವರ ಕನ್ನಡ ನಿಘಂಟುವಿನಲ್ಲೂ ನನಗೆ ಕಾಣಲಿಲ್ಲ.

  ReplyDelete
 10. ಶ್ರೀಯುತ ಹೊಸಮನೆಯವರೇ, ಎಷ್ಟೋ ಗ್ರಾಮ್ಯ ಪದಗಳು, ಹೊಸಪದಗಳು ಎಲ್ಲಾ ಭಾಷೆಗಳಲ್ಲೂ ಸೇರ್ಪಡೆಗೋಳ್ಳುತ್ತಿರುತ್ತವೆ, ಹಾಗೆ ಶಬ್ದಗಳು ಸೇರುವಾಗ ಅವು ನಮ್ಮನ್ನೂ ನಿಮ್ಮನ್ನೂ ಕಾಯುತ್ತ ಕೂರುವುದಿಲ್ಲ, ಉದಾಹರಣೆಗೆ ಮಿಂಚಂಚೆ ಅಥವಾ ತಂತ್ರಾಂಶ ಇವೆಲ್ಲ ಇನ್ನೂ ನಿಮಗೆ ನಿಘಂಟಿನಲ್ಲಿ ಸಿಗುವುದಿಲ್ಲ, ಕಾದುನೋಡಿ, ಸಿಗಬಹುದು, ಥ್ಯಾಂಕ್ಸ್

  ReplyDelete
 11. ಮೋಡದ ತುಣುಕುಗಳ ನೋಡಿ, ದಿಬ್ಬಣವ ನೆನಸಿ, ಮಧುರ ಕವನ ಹೊಸೆದಿದ್ದಿರಾ... ಸಂತಸವಾಯಿತು ಓದಿ!

  ReplyDelete