ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 17, 2010

ಸರ್ಜನರ ಹೃದಯದಿ ಸಜ್ಜನರ ಕಂಡೆನು.....


ಸರ್ಜನರ ಹೃದಯದಿ ಸಜ್ಜನರ ಕಂಡೆನು.....

ಹೀಗೊಬ್ಬ ಬ್ಲಾಗಿಗ ಸಿಗಬಹುದೆಂದು ಕನಸುಮನಸಲ್ಲೂ ಎಣಿಸಿರಲಿಲ್ಲ. ನನ್ನ ಬ್ಲಾಗ್ ಶುರುವಾದ ಕೆಲವು ದಿನಗಳಲ್ಲಿ ಬ್ಲಾಗಾಡಿಗರಾಗಿ ಒಬ್ಬರು " ದೇವನೂರು ತಿರುಮಲಾಚಾರ್ ಕೃಷ್ಣಮೂರ್ತಿ " ಎನ್ನುವ ಹೆಸರಿನವರು ಬಂದು ಸೇರಿದರು. ಚಿತ್ರವಿಲ್ಲದ ಬರೇ ಮನುಷ್ಯಾಕೃತಿಯ ಬಿಂಬರೂಪದಲ್ಲಿ ಸೇರಿದ್ದರು. ದೇವರ ಬಗ್ಗೆ ಬರೆದಿದ್ದನ್ನು ನೋಡಿ ಯಾರೋ ಹೊಸ ಪೀಳಿಗೆಯ ಲ್ಯಾಪ್ಟಾಪ್ ಹಿಡಿದ ಪುರೋಹಿತರು ಬಂದಿದ್ದಾರೆ ಎಂದುಕೊಂಡೆ. ಆದರೆ ಅದು ನಿಜವಾಗಿರಲಿಲ್ಲ ಬದಲಿಗೆ ಒಬ್ಬ ಗಣಕಯಂತ್ರವನ್ನು ಉಪಯೋಗಿಸುವ ತಜ್ಞವೈದ್ಯರು ಅವರು ಎಂಬುದು ಅವರ ಪ್ರತಿಕ್ರಿಯೆಯ ಕೊಂಡಿ ಹಿಡಿದು ಹುಡುಕಿದಾಗಲೇ ಗೊತ್ತಾಗಿದ್ದು! ಅನುಮಾನವೋ ಅನುಮಾನ! ತಾನು ಕಣ್ಣು-ಮೂಗು-ಗಂಟಲು ತಜ್ಞ ಡಾಕ್ಟರು ಅಂತಾರೆ ಪ್ರೊಫೈಲ್ ನಲ್ಲಿ, ಸಾಮಾನ್ಯವಾಗಿ ಡಾಕ್ಟರುಗಳು ಬರೆಯುವ ಜನವಲ್ಲ, ಅವರು ಬರೆದ ಚಿಕಿತ್ಸಾ ಚೀಟಿಯನ್ನು ಓದುವ ಔಷಧಗಳ ಅಂಗಡಿಯವರು ಬ್ರಹ್ಮಲಿಪಿಯನ್ನೂ ಓದುವವರಾಗಿರುತ್ತಾರೆ! ಯಾಕೆಂದರೆ ವೈದ್ಯರು ಸಾಮಾನ್ಯವಾಗಿ ಬರೆದ ಯಾವುದೇ ಅಕ್ಷರವನ್ನೂ ಬಹುತೇಕರು ಓದಲಾಗುವುದಿಲ್ಲ. ಈ ನಿಟ್ಟಿನಲ್ಲಿ ಔಷಧಗಳ ಅಂಗಡಿಯ ಮಾಲೀಕರಿಗೆ ವಿಶೇಷವಾದ ಅವಾರ್ಡ್ ಕೊಟ್ಟು ಸತ್ಕರಿಸಬೇಕು! ಇರಲಿ. ಇಲ್ಲಿ ಇದು ಕಥೆಯೇ ಬೇರೆ, ನಿಜ್ವಾಗಿಯೂ ಹೇಳುತ್ತೇನೆ ಕೇಳಿ- ಇವರೋ ಒಂದೇ ವೈದ್ಯರೇ ಅಲ್ಲ ಅಥವಾ ಇವರು ಅಡ್ಡಕಸುಬಿ ವೈದ್ಯರು ಎಂಬೆಲ್ಲಾ ಹುರುಳಿಲ್ಲದ ಆಲೋಚನೆಗಳು ಮನಸ್ಸಲ್ಲಿ ಬಿಂಬಿತವಾಗಿದ್ದವು! ನನ್ನೊಳಗೇ ಇಬ್ಬರು ವಿ.ಆರ್.ಭಟ್ ಹುಟ್ಟಿಕೊಂಡು ಪರಸ್ಪರ ವಾಗ್ವಾದ ಶುರುವಾಗಿಬಿಟ್ಟಿತ್ತು ! ಒಬ್ನು " ಏ ಅವರು ಒಳ್ಳೆ ಡಾಕ್ಟ್ರು " ಅಂತಾ ಇದ್ರೆ ಇನ್ನೊಬ್ಬ " ಹೋಗಲೇ ನಿಂಗೇನ್ ಗೊತ್ತು ಡಾಕ್ಟ್ರೆಲ್ಲಾ ಬ್ಲಾಗ್ ಬರ್ಯಲ್ಲ, ಅವ್ರ್ಯಾವ್ ಸೀಮೆ ಡಾಕ್ಟ್ರು ಬ್ಲಾಗ್ ಬರ್ಯೋರು " ಈ ಪೀಕಲಾಟದಲ್ಲಿ ಸೋತು ಸುಣ್ಣವಾಗಿದ್ದೆ!

ಕಾಲವೇ ಹಲವಕ್ಕೆ ಉತ್ತರಹೇಳುತ್ತದಲ್ಲವೇ ? ಹೀಗಾಗಿ ತಾಳ್ಮೆಯಿಂದ ನೋಡುತ್ತಲೇ ಇದ್ದೆ. ಹತ್ತಿರ ಹತ್ತಿರ ಹತ್ತಿರ ಸೆಳೆಯುವ ಅವರ ಬ್ಲಾಗ್ ಮಂತ್ರ ಜಾಸ್ತಿ ಆಗುತ್ತಲೇ ಹೋಯಿತು! ಅವರ ಸಾಹಿತ್ಯಿಕ ಕೃತಿಗಳಲ್ಲಿ ಅಡಗಿರುವ ಅಂತಃಸ್ಸತ್ವ ನನ್ನನ್ನು ಬಿಡುತ್ತಲೇ ಇರಲಿಲ್ಲ. ಬರುಬರುತ್ತ ಅವರ ಜಿಜ್ಞಾಸೆಯ ಪ್ರತಿಕ್ರಿಯೆಗಳು ಅವರು ಹೊಸೆದ ಹೊಸಹೊಸ ಕವನಗಳು ನನ್ನ ಮನವನ್ನು ನಾಟಿದವು. ನೋಡಿ, ನಂಗೆ ಅವರ ಮಿಂಚಂಚೆಯಾಗಲೀ ಅವರ ಜಂಗಮ ದೂರವಾಣಿಯಾಗಲೀ ಗೊತ್ತಿರಲಿಲ್ಲ. ಒಮ್ಮೆ ಹೇಗಾದರೂ ಸಂಪರ್ಕಿಸಬೇಕೆಂಬ ಅವ್ಯಕ್ತ ಇಚ್ಛೆ ಮನದಲ್ಲಿ ಹೆಡೆಯಾಡುತ್ತಿತ್ತು. ನಾಗರಪಂಚಮಿ ಬಂತಲ್ಲ ಅದಕ್ಕೇ ಬಹುಶಃ ಈ ಹೆಡೆಯಾಡುವ ಪ್ರಕ್ರಿಯೆಯೆಲ್ಲಾ ಜಾಸ್ತಿ ಎಂದು ಸುಮ್ಮನಾಗಿದ್ದೆ! ಆದರೂ ನಮ್ಮೊಳಗಿನ ಆತ್ಮಕ್ಕೆ ಇರುವ ಅವಿನಾಭಾವ ಸಂಪರ್ಕದ ಕೊಂಡಿ ನಮ್ಮನ್ನು ಯಾವುದೋ ಮಾರ್ಗದಿಂದ ಬೆಸೆಯುತ್ತದೆ ಎಂಬುದು ಸುಳ್ಳಲ್ಲ, ಇಲ್ಲೂ ಅದೇ ರೀತಿಯಲ್ಲಿ ಈ ವೈದ್ಯರು " ನಾನು ೩ ದಿನಗಳ ಮಟ್ಟಿಗೆ ಬೆಂಗಳೂರಿಗೆ ಬರುತ್ತಿದ್ದೇನೆ, ನನ್ನ ದೂರವಾಣಿ ಇಂಥದ್ದು " ಎಂದು ನೇರವಾಗಿ ನನ್ನ ಪ್ರತಿಕ್ರಿಯೆಗೆ ಉತ್ತರಹಾಕಿದ್ದನ್ನು ಕಂಡ ನನ್ನೊಳಗಿನ ಕಚ್ಚದ ನಾಗಪ್ಪ ಅವರ ’ಕೊಳಲಿ’ಗೆ ಮನಸೋತು ಹೊರಬಂದಿದ್ದ! ಅದನ್ನು ನೋಡಿದ ಮರುಕ್ಷಣವೇ ನಾನವರಿಗೆ ಕರೆಮಾಡಿದೆ. ಬಿ.ಎಸ್.ಎನ್.ಎಲ್. ಜಂಗಮದೂರವಾಣಿಯ ಸಮಸ್ಯೆ ಒಂದರ್ಥದಲ್ಲಿ ಅತ್ತೆ-ಸೊಸೆ ಜಗಳದ ರೀತಿಯೇ! ಇದನ್ನೆಲ್ಲಾ ನೀವು ಅನುಭವಿಸಿರುತ್ತೀರಿ. ಮೂರ್ನಾಲ್ಕು ಸಲ ಕರೆ ಮಧ್ಯದಲ್ಲೇ ನಿಂತುಹೋಯಿತು. ಆದರೂ ನಾವು ತ್ರಿವಿಕ್ರಮ ಪ್ರಯತ್ನದಿಂದ ಮತ್ತೆ ಸಂಪರ್ಕಕ್ಕೆ ಬಂದೆವು. ಮರುದಿನ ಸಪ್ನಾ ಬುಕ್ ಹೌಸ್ ನಲ್ಲಿ ಸಂಧಿಸುವುದು ಎಂದು ಅಂದುಕೊಂಡೆವು.

ಬೆಳಗಾಯಿತು, ಬಹಳ ಬೇಗ ಸಮಯ ಸರಿದು ಹೋಯಿತು. ನನಗೆ ಭಾನುವಾರ ಸೋಮವಾರ ಅಂತೆಲ್ಲಾ ಇಲ್ಲವೇ ಇಲ್ಲ. ನಾನಾಯಿತು ನನ್ನ ಕೆಲಸವಾಯಿತು ಎಂದುಕೊಂಡು ಅಹರ್ನಿಶಿ ಕೆಲಸದಲ್ಲಿರುವ ಪ್ರವೃತ್ತಿ ನನ್ನದು. ಯಾಕೆಂದರೆ ಬ್ಲಾಗಿಗೆ ಬರೆಯುವ ಚಟ ಇದೆಯಲ್ಲ-ಇದು ಸಣ್ಣಸಾಮಾನ್ಯ ಚಟವಲ್ಲ! ಆದರೆ ಒಳ್ಳೆಯ ಚಟವೆನ್ನಿ! ನಮ್ಮನೆಯಲ್ಲಿ ನನಗೆ ’ಗಣಕಋಷಿ’ ಎನ್ನುವುದೊಂದು ಬಾಕಿ ಇದೆ. ಅಷ್ಟರಮಟ್ಟಿಗೆ ಗಣಕಯಂತ್ರದ ಮುಂದೆ ಸ್ಥಾಪಿತರಾದ ಹಲವರಲ್ಲಿ ನಾನೂ ಒಬ್ಬ! ಶನಿವಾರ ರಾತ್ರಿ ಬಹಳ ಬರೆಯುತ್ತ ಆದ ಆಯಾಸದಿಂದ ಹತ್ತು ನಿಮಿಷ ಆಳಸಿಯಾಗಿದ್ದಕ್ಕೆ ವೈದ್ಯರನ್ನು ತಲ್ಪಲು ಹನ್ನೊಂದೂವರೆಯಾಯ್ತು. ನನಗೆ ಬೇರೆ ಯಾವ್ಯಾವುದೋ ಕರೆಗಳು ಬಂದವು--ಅವುಗಳಿಗೆಲ್ಲಾ ನಾನು ಹೇಳಿದ್ದು "ನನಗಿವತ್ತು ಡಾಕ್ಟರ್ ಅಪಾಯಿಂಟ್ ಮೆಂಟ್ ಇದೆಯಪ್ಪಾ " ಎಂದು! ಹಾಗಂದ ತಕ್ಷಣ " ಏನಾಗಿದೆ ಸರ್, ಸಾರಿ ಸರ್, " ಎಂಬೆಲ್ಲಾ ಮರುತ್ತರಗಳು ಕೇಳಿಬಂದವು. ನನಗೆ ಒಳಗೊಳಗೇ ನಗು. ಅಂತೂ ನಾವು ಸಪ್ನಾದಲ್ಲಿ ಸೇರುವ ಹೊತ್ತಿಗೆ ವೈದ್ಯರು ಕೆಲವು ಒಳ್ಳೆಯ ಪುಸ್ತಕಗಳನ್ನು ಖರೀದಿಸುತ್ತಿದ್ದರು. ನಾನು ಇನ್ನೇನು ಒಳಗೆ ಅಡಿಯಿಡುವ ಹೊತ್ತು-ಮತ್ತೆ ಕರೆಮಾಡಿ ಬಾಗಿಲ ಹತ್ತಿರದಲ್ಲೇ ಇರುತ್ತೇನೆ ಅಂದರು. ಒಳಗೆ ಹೋದೆ.ನನಗೆ ಅವರ ಚಾಯಾಚಿತ್ರವನ್ನು ಇತ್ತೀಚೆಗೆ ಅವರ ಬ್ಲಾಗಿನಲ್ಲಿ ನೋಡಿದ್ದರಿಂದ ಹೇಗೂ ಹೀಗಿರುತ್ತಾರೆಂಬ ಚಹರೆ ಗೊತ್ತಿತ್ತು. ಪ್ರಾಯಶಃ ಅವರಿಗೂ ಕೀಟಲೆ ಬುದ್ಧಿಯ ನನ್ನ ಮುಖವನ್ನು ಬ್ಲಾಗ್ ನಲ್ಲಿ ಆಗಾಗ ನೋಡಿ ನೆನಪಿತ್ತು ಅನಿಸುತ್ತದೆ. ಅಡಿಯಿಡುವಾಗಲೇ ಹಸ್ತಲಾಘವ, ಆಮೇಲೆ ಆತ್ಮೀಯ ಅಪ್ಪುಗೆ. ನಾನು ಹೊಸದೊಂದು ಲೋಕದಲ್ಲಿದ್ದೆ! ಅವರ ಆತ್ಮೀಯತೆಯ ಕೊಳಲು ನನ್ನಲ್ಲಿ ಹಲವು ತರಂಗಗಳನ್ನು ಸೃಷ್ಟಿಸಿತ್ತು!

ಅದಾದ ಕೆಲವೇ ನಿಮಿಷಗಳಲ್ಲಿ ಇನ್ನೂ ಕೆಲವರಿಗೆ ಕರೆಮಾಡಿದ್ದೇನೆ, ಅವರೆಲ್ಲ ಬರುವವರಿದ್ದಾರೆ-ಇನ್ನೇನು ಬರುತ್ತಾರೆ ಎಂದರು. ಬರಲಿ ಎಂದು ಅಲ್ಲೇ ಕೆಲನಿಮಿಷಗಳ ಕಾಲ ಮಾತಾಡುತ್ತಿದ್ದಂತೆ ಪರಾಂಜಪೆಯವರ ಪ್ರವೇಶವಾಯಿತು! ಇಲ್ಲೂ ಅಷ್ಟೇ ಕಥೆ, ಬ್ಲಾಗಿನಲ್ಲಿ ಬಾಲತಪಸ್ವಿಯ ಚಿತ್ರ ಹಾಕಿದ್ದರಿಂದ ಪರಾಂಜಪೆಯವರು ಎದುರೇ ಹಾದುಹೋದರೂ ತಿಳಿಯದ ಪರಿಸ್ಥಿತಿ! ಆದರೂ ನಮಗೆ ಐದೂ ಅಂಗಗಳು ಅಪ್ ಟು ಡೇಟ್ ಕೆಲಸಮಾಡುತ್ತಿರುವುದರಿಂದ ಸೂಕ್ಷ್ಮಗ್ರಾಹಿಯಾಗಿ ನಾವು ಅವರ ಪತ್ತೆ ಹಚ್ಚಿಬಿಟ್ಟೆವು! ನಂತರ ಪ್ರವೀಣ್ ಗೌಡ ಬಂದರು, ಅವರ ಜೊತೆ ನಾಗರಾಜ್[ಪೆನ್ನು ಪೇಪರ್ ಬ್ಲಾಗ್] ಬಂದರು.ಪ್ರವೀಣ್ ಹಿಂದಿನದಿನ ವೈದ್ಯರನ್ನು ಭೇಟಿಯಾಗಿದ್ದರಿಂದ ಗುರುತು ಹಿಡಿಯುವ ಪ್ರಮೇಯವಿರಲಿಲ್ಲ. ಆಮೇಲೆ ಎಲ್ಲಾಸೇರಿ ಗಾಂಧಿನಗರದ ಅಡಿಗಾಸ್ ನಲ್ಲಿ ಚಹಾಕ್ಕೆ ಕೂತೆವು. ಅಲ್ಲಿ ಎಲ್ಲಿಲ್ಲದ ಲೋಕವನ್ನೇ ಸೃಜಿಸಿಕೊಂಡೆವು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ನಮ್ಮ ಹರಟೆ ನಡೆಯಿತು. ಆಮೇಲೆ ಊಟವನ್ನು ಕಾಮತ್ ಯಾತ್ರಿನಿವಾಸದಲ್ಲಿ ಪೂರೈಸಿದೆವು. ಊಟದಲ್ಲಿ ಏನುತಿಂದೆವು ಎಂದು ನೀವೀಗ ಕೇಳಿದರೆ ಹೇಳಲಾಗದಷ್ಟು ಹರಟುತ್ತಿದ್ದೆವು. ನಿಜವಾಗಿಯೂ ಸಾಹಿತ್ಯದಲ್ಲಿ ಸಕ್ರಿಯರಾದ ಸ್ನೇಹಿತರು ಸಿಕ್ಕರೆ ಅಲ್ಲಿ ಕಾಲಹೋಗಿದ್ದೇ ತಿಳಿಯುವುದಿಲ್ಲ! ಇನ್ನೂ ಹಲವು ಹತ್ತು ವಿವರಣೆಯನ್ನು ಮಿತ್ರ ಪರಾಂಜಪೆ ತಮಗೆಲ್ಲ ಈಗಾಗಲೇ ’ ಜೀವನ್ಮುಖಿ’ಯಲ್ಲಿ ಉಣಬಡಿಸಿದ್ದಾರೆ.

ಈಗ ಹೇಳುತ್ತೇನೆ ಕೇಳಿ. ಸರ್ಜನರಲ್ಲಿ ಒಬ್ಬ ಸಜ್ಜನನಿದ್ದಾನೆ ಅಂತ ಎರಡು-ಮೂರು ತಿಂಗಳ ಹಿಂದೆ ಅನ್ನಿಸಿತ್ತು. ಆದರೆ ನೋಡಿದೆನಲ್ಲ ಸರ್ಜನರಲ್ಲಿ ಒಬ್ಬನಲ್ಲ ಹಲವು ಸಜ್ಜನರೇ ಅಡಗಿದ್ದಾರೆ! ನಿಮಗೆ ಯಾರು ಬೇಕು ಹೇಳಿ ಅವರನ್ನು ಕರೆದು ಹೊರತೆಗೆಯುವ ಅದ್ಬುತ ಶಕ್ತಿ ಸರ್ಜನರಿಗಿದೆ! ನನಗೆ ವೈದ್ಯರನ್ನು ನೋಡಿದಾಗ ನೆನಪಾಗಿದ್ದು ಕವಿ ದಿ| ಶ್ರೀ ಪುತಿನ ಬರೆದ ’ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು ’ ಕವನ. ತಾವೆಲ್ಲಾ ಇದನ್ನು ಒಂದಾವರ್ತಿಯಾದರೂ ಕೇಳಿಯೇ ಇರುತ್ತೀರಿ. ಹಾಡನ್ನು ಸ್ವಲ್ಪ ಬದಲಾಯಿಸೋಣ--" ಸರ್ಜನರ ಹೃದಯದಿ ಸಜ್ಜನರ ಕಂಡೆನು ಸಜ್ಜನರು ತುಂಬಿದ ಈ ಸರ್ಜನರನು ". ಮುಖಸ್ತುತಿಗೆ ಬೇಕಾಗಿ ಹೇಳುವ ಮಾತಲ್ಲ ನೀವೆಲ್ಲಾ ಒಮ್ಮೆ ನೇರ ಸಂಪರ್ಕಕ್ಕೆ ಬಂದು ತಿಳಿದುಕೊಳ್ಳಬೇಕಾದ ಅಪರೂಪದ ಸಜ್ಜನ ಸರ್ಜನ್ ಡಾ| ಡಿ.ಟಿ.ಕೆ. ತಮ್ಮ ’ಕೊಳಲು’ ಬ್ಲಾಗಿನ ಮೂಲಕ ನಮ್ಮೆಲ್ಲರ ಮನಗಳಲ್ಲಿ ಸ್ಥಾನವನ್ನು ಸಹಜವಾಗಿ ಪಡೆದುಕೊಂಡ ನವ್ಯ ಕವಿಯೋರ್ವನನ್ನು ಕಂಡೆ. ನಗುವ ನಗಿಸುವ ಮನೋಭಾವದ ಹಾಸ್ಯಕಲಾವಿದನನ್ನು ಕಂಡೆ. ಪ್ರೀತಿಯನ್ನು ಹರಿಬಿಟ್ಟು ದಾಂಪತ್ಯದ ಅನ್ಯೋನ್ಯತೆಯನ್ನು ಮೆಲುಕುಹಾಕುವ ಯಜಮಾನನ್ನು ಕಂಡೆ. ಮಗಳು ಕೊಡಿಸಿದ್ದೆಂದು ಹೊಸ ಮೊಬೈಲ್ ಹಿಡಿದು ಅಭಿಮಾನದಿಂದ ಹೇಳಿಕೊಳ್ಳುವ ಅಪ್ಪನನ್ನು ಕಂಡೆ. ನೀವು ಕಾರ್ಗಲ್ಲಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಎಂದ ಸದ್ಗೃಹಸ್ಥನೊಬ್ಬನನ್ನು ಕಂಡೆ. ವೈದ್ಯನೆಂಬ ಹಮ್ಮಿಲ್ಲದೇ ಹಲವು ವೈದ್ಯಕೀಯ ಚಿಕಿತ್ಸಾ ಕ್ರಮಗಳನ್ನು ವಿಶ್ಲೇಷಿಸಿದ-ನಮೆಗೆಲ್ಲಾ ಅರ್ಥವಾಗುವ ಹಾಗೆ ತೆರೆದಿಟ್ಟ ’ನಮ್ಮನೆಯ ವೈದ್ಯ’ರನ್ನು ಕಂಡೆ. ಒಬ್ಬ ಅದ್ವಿತೀಯ ಆತ್ಮೀಯತೆ ತೋರುವ ಆಪ್ತ ಸ್ನೇಹಿತನನ್ನು ಕಂಡೆ. ಇನ್ನೂ ಹಲವು ಹತ್ತು ಮುಖಗಳುಳ್ಳ ಶ್ರೀಯುತರು ಹಲವು ಸಜ್ಜನರನ್ನು ಮೇಳೈಸಿದ ಏಕರೂಪ ಎಂದರೆ ತಪ್ಪೇ ?

ನನಗನಿಸಿದ್ದು ಇಂಥಾ ’ಮನುಷ್ಯ’ ವೈದ್ಯರೂ ಇದ್ದಾರ್ಯೇ ನಮ್ಮ ಇಂದಿನ ದಿನದಲ್ಲಿ! ಇರಬೇಕ್ರೀ ಇಂಥವರು. ಸೇವೆಯೆಂಬ ಸೋಗಿನಲ್ಲಿ ಹಣವನ್ನೇ ಪರಿಗಣಿಸಿ ಬಹುಮಹಡಿಗಳ ಹಾಸ್ಪಿಟಲ್ ಕಟ್ಟುವ ಹಾಗೂ ವೈದ್ಯ ವೃತ್ತಿಯನ್ನೇ ಕಂಪ್ಲೀಟ್ ಕಮರ್ಷಿಯಲೈಸ್ ಮಾಡಿರುವ ಅಸಂಖ್ಯಾತ ವೈದ್ಯರುಗಳ ನಡುವೆ ಕೇವಲ ಬೆರಳೆಣಿಕೆಯಷ್ಟು ವೈದ್ಯರು ಈ ರೀತಿ ಇರುತ್ತಾರೆ. ಅಪರೂಪಕ್ಕೆ ಪರಮಾತ್ಮ ಅವರನ್ನೂ ಹುಟ್ಟಿಸುತ್ತಾನೆ. ಯಾಕೆಂದರೆ ಯಾರಾದರೂ ಬಡವರು ಕಾಸಿಲ್ಲದವರು ಬಂದರೆ ಸರಕಾರೀ ಆಸ್ಪತ್ರೆಗಳಲ್ಲಿ ಕುಳಿತು ಸುಲಿಯುವ ಹಲವು ವೈದ್ಯರಿಲ್ಲವೇ ? ಅವರೆಲ್ಲರ ನಡುವೆ ಗೀತೆಯ ಬೋಧೆಯಂತೇ " ತದಾತ್ಮಾನಾಮ್ ಸೃಜಾಮ್ಯಹಮ್" --ತನ್ನ ಆತ್ಮವನ್ನೇ ಹಲವು ಹಂತಗಳಲ್ಲಿ, ಹಲವು ರೂಪಗಳಲ್ಲಿ, ಹಲವು ಪರಿಚ್ಛೇದಗಳಲ್ಲಿ ಸೃಷ್ಟಿಸುತ್ತೇನೆ ಎಂದು ಪರಮಾತ್ಮ ಹೇಳಿದ್ದಾನೆ. ಅವನ ಸೃಷ್ಟಿಯ ಒಂದು ರೂಪ ಇದೂ ಸಹಾ ಅಂದರೆ ತಪ್ಪಲ್ಲವಲ್ಲ. ’ಕೃಷ್ಣ’ನೆಂಬ ಹೆಸರನ್ನೇ ಹೊತ್ತಿದ್ದರೂ ಯಾವುದೇ ಕುಟಿಲ ಕಾರಸ್ಥಾನವಿಲ್ಲದ ’ರಾಮ’ನಾದ ಈ ವೈದ್ಯರಲ್ಲಿ ಸಿಗದ ಪರಿಹಾರವೇ ಇಲ್ಲ. ನಾನು ಆಯುರ್ವೇದವೆಂದೆ-ಅದರಬಗ್ಗೆ ಮಾತನಾಡಿದರು, ಯೋಗವೆಂದೆ-ಅದನ್ನೂ ಅಳವಡಿಸಿಕೊಂಡಿದ್ದಾಗಿ ತಿಳಿಸಿದರು, ಧ್ಯಾನವೆಂದೆ- ಅದು ಬೇಕೇಬೇಕು ಎಂದರು, ಪರಾತತ್ವದಲ್ಲಿ ನಂಬಿಕೆಯೆಂದೆ-ತಾನು ನಾಸ್ತಿಕನಾಗಿದ್ದಾಗಿನಿಂದ ಆಸ್ತಿಕತೆಗೆ ಬಂದ ಎಲ್ಲಾ ಹಂತಗಳನ್ನೂ ವಿವರಿಸಿದರು. ಕಾವ್ಯದಲ್ಲಿ ತನ್ನನ್ನೇ ತಾನು ಮರೆಯುವ ತಾಕತ್ತು ಇದೆಯೆಂಬ ನಿತ್ಯಸತ್ಯವನ್ನು ಉಸುರಿದ ಈ ವೈದ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವಸಂತೋಷಕ್ಕಾಗಿ ಹಾಗೂ ನಮಗೆಲ್ಲರಿಗಾಗಿ ಕಾವ್ಯ ರಚನೆಯಲ್ಲಿ ತೊಡಗುತ್ತಾರೆ! [ refer : http://dtkmurthy.blogspot.com] ಐ ಸೆಲ್ಯೂಟ್ ದಿ ಒನ್ ವ್ಹೂ ಸ್ಟ್ಯಾಂಡ್ಸ್ ಔಟ್ ಆಫ್ ದಿ ಕ್ರೌಡ್.

ಜಯತು ಕೊಳಲಿನ ಕೃಷ್ಣ ಮೂರುತಿ
ಹರಸಿ ಬನ್ನಿ ಅನುದಿನ
ನಮ್ಮ ಬ್ಲಾಗಲಿ ಹಾಡು ಬರೆಯಲು
ನೀಡಿ ನಮಗೆ ಚೇತನ

ನಮ್ಮೊಡನೆ ಅಂದು ಸ್ನೇಹ ಕೂಟದಲ್ಲಿ ಪಾಲ್ಗೊಂಡಿದ್ದ ಶ್ರೀ ಪರಾಂಜಪೆ, ಶ್ರೀ ಪ್ರವೀಣ್ ಆರ್. ಗೌಡ, ಶ್ರೀ ನಾಗರಾಜ್ ನಿಮಗೆಲ್ಲರಿಗೂ ಒಂದನೆಗಳು. ಎಲ್ಲರೂ ಬಹಳ ಉತ್ತಮ ಸಂಸ್ಕೃತಿಯನ್ನು ಹೊಂದಿದವರೇ, ಒಳ್ಳೆಯ ಬರಹಗಾರರೇ. ಆದರೂ ನಮ್ಮೆಲ್ಲಾ ಸಾಮಾನ್ಯರಲ್ಲಿ ಅವರೊಬ್ಬ ಸರ್ಜನ್ ನಡುವೆ ತೂರಿಕೊಂಡು ಅತ್ಯಂತ ವಿಶಿಷ್ಟವಾಗಿ ಕಾಣುತ್ತಾರೆ! ಹೀಗಾಗಿ ನಮ್ಮೆಲ್ಲರ ಬಗ್ಗೆ ಪರಾಂಜಪೆಯವರೇ ಬರೆದಿರುವುದರಿಂದ ಮತ್ತೆ ಹೊಸದಾಗಿ ಅದನ್ನೇ ಹಾಡಲಿಲ್ಲ. ಎಲ್ಲರ ಬಗ್ಗೆಯೂ ಕಳಕಳಿ, ಗೌರವ ಇದ್ದೇ ಇದೆ. ಎಲ್ಲರನ್ನೂ ಮೊದಲೇ ಹೃದಯದಲ್ಲಿ ಹುದುಗಿಸಿಕೊಳ್ಳುವಷ್ಟು ಜಾಗ ಮಾಡಿಕೊಂಡು ವೀ. ಆರ್. ಭಟ್ [we are bhat]ಆಗಿದ್ದೇನೆ, ನಿಮ್ಮೆಲ್ಲರ ಸ್ನೇಹದ ಕಾರಂಜಿ ಸದಾ ಚಿಮ್ಮುತ್ತಿರಲಿ, ಹಾಗೇ ಆ ಕಾರಂಜಿಯ ಹಾರುವ ತುಂತುರು ಹನಿಗಳು ಸಾವಿರ ಸಾವಿರ ಕವನಗಳಾಗಿ ಎಲ್ಲ ಬ್ಲಾಗಿಗರ ಅಂಗಳಗಳಲ್ಲಿ ರಾರಾಜಿಸಲಿ, ಹಿತವಾದ ’ಕೊಳಲ’ಗಾನ ಗಾಳಿಯಲ್ಲಿ ತೇಲಿ ತೇಲಿ ಬಂದು ಕರ್ಣಾನಂದಕರವಾಗಿ ಪರಿಣಮಿಸಲಿ ಎಂದು ಹಾರೈಸುತ್ತೇನೆ, ಎಲ್ಲರಿಗೂ ನಮಸ್ಕಾರ.

18 comments:

  1. ಭಟ್ ಸರ್,
    ಮೂರ್ತಿ ಸರ್ ಜೊತೆ ಆಗಾಗ ಫೋನಿನಲ್ಲಿ ಮಾತನಾಡುತ್ತಾ , ಅವರ ಪ್ರೀತಿ ಪಡೆಯುತ್ತಿದ್ದವರಲ್ಲಿ ನಾನು ಒಬ್ಬ.... ಸ್ವಲ್ಪ ದಿನದ ಹಿಂದೆ , ನಮ್ಮ ಕಂಪನಿಯವರ ಜೊತೆ ಜೋಗಕ್ಕೆ ಹೋಗುವ ಟ್ರಿಪ್ ಇತ್ತು..... ಹೋಗುವ ಮೊದಲು ಅವರನ್ನು ಫೋನಿನ ಮೂಲಕ ಸಂಪರ್ಕ ಮಾಡಿ, ಅವರನ್ನು ಭೇಟಿ ಮಾಡುವ ಇಂಗಿತ ತೋರಿಸಿದೆ..... ಅದಕ್ಕೆ ಅವರು ತೋರಿಸಿದ ಪ್ರೀತಿ ಎಂದಿಗೂ ಮರೆಯಲಾರೆ.... ಅಲ್ಲಿಗೆ ಹೋಗಿ ತಲುಪಲು ತುಂಬಾ ತಡವಾದ್ದರಿಂದ , ಮತ್ತು ಜೋಗದಲ್ಲಿ ನನ್ನ ಸಂಗಡಿಗರ ಯಾರದು ಮೊಬೈಲ್ ಸಿಗ್ನಲ್ ಸಿಗದೇ ಹೋದ ಕಾರಣ ಅವರನ್ನು ಭೇಟಿಯಾಗುವ ಭಾಗ್ಯ ಸಿಗಲಿಲ್ಲ..... ಮಾರನೆ ದಿನ ಅವರು ನನಗೆ ಫೋನ್ ಮಾಡಿ ಅವರ ನಿರಾಸೆ ತೋಡಿಕೊಂಡಾಗ ತುಂಬಾ ತುಂಬಾ ಬೇಸರವಾಗಿತ್ತು.... ಅದಕ್ಕೆ , ಈ ಸಾರಿ ಮಳೆಗಾಲ ಮುಗಿಯುವುದರೊಳಗೆ ನನ್ನ ಕುಟುಂಬದ ಜೊತೆ ಅವರನ್ನು ಭೇಟಿಯಾಗಲೇ ಬೇಕು ಎಂದುಕೊಂಡಿದ್ದೇನೆ..... ಧನ್ಯವಾದ ಸರ್.....

    ReplyDelete
  2. ವಿ.ಆರ್.ಬಿ ಸರ್, ಬಹಳ ಮನತುಂಬಿ ಬಂದ ಮತ್ತು ಹೌದು, ವಿಕೃತಗಳನ್ನೇ ವಿಜೃಂಭಿಸಿ ತೋರಿಸುವ ವೆಬ್ ದುನಿಯಾದಲ್ಲಿ ಈ ಬ್ಲಾಗ್ (ನಮ್ಮ ಕನ್ನಡ ಬ್ಲಾಗಿಗರ) ಒಂದು ವಿಶಿಷ್ಠ ಸ್ಥಾನವನ್ನೇ ಹೊಂದಿದೆ...ನನಗೆ ಅಥವಾ ನಮ್ಮಂಥವರ ಮಟ್ಟಿಗಂತೂ ಸತ್ಯ್...
    ನಿಮ್ಮ ಅನಿಸಿಕೆಗಳಿಗೆ ನನ್ನ ನಮನ.

    ReplyDelete
  3. ಸರ್,
    ಗೆಳೆತನ ಹುಟ್ಟಲು ಕಾರಣ ಬೇಕಿಲ್ಲ ಅಲ್ವಾ ಸರ್, ಇವತ್ತು ಪ್ರವೀಣ್ ನಮ್ಮ ಮನೆಯಲ್ಲಿ ಇದ್ದರು. ನಿಮ್ಮ ಸುತ್ತಾಟದ ಕತೆಗಳನ್ನೆಲ್ಲಾ ಹೇಳಿದರು. ಜೊತೆಗೆ ನಿಮ್ಮ ಬ್ಲಾಗ್ ಓದಿಯೂ ಕೂಡ ಖುಷಿಯಾಯ್ತು..

    ReplyDelete
  4. ಭಟ್ಟರೇ;ನಿಮ್ಮ ,ಸ್ನೇಹಕ್ಕೆ,ಪ್ರೀತಿಗೆ ,ಆತ್ಮೀಯತೆಗೆ ನನ್ನಲ್ಲಿ ಮಾತಿಲ್ಲ.ಹೃದಯ ತುಂಬಿ ಬಂದಿದೆ.ವಂದನೆಗಳು.

    ReplyDelete
  5. sir

    how r u? thanks for visiting my blog

    these days our kasthuri channel has started new programs. we had lot of shootings. even my mobile doesn't support kannada fonts. thats why i have not visited ur blog. sorry.

    ReplyDelete
  6. ನಮ್ಮ ಅಂದಿನ ಭೇಟಿಯ ಬಗ್ಗೆ ನಾನು ಸ೦ಕ್ಷೇಪವಾಗಿ ಬರೆದಿದ್ದೆ. ನೀವು ಸಾದ್ಯ೦ತವಾಗಿ ವಿವರಿಸಿ, ಸರ್ಜನರ ಸರಳ ವ್ಯಕ್ತಿತ್ವ ಮತ್ತು ಅವರ ಸಾ೦ಗತ್ಯದಲ್ಲಿ ಕಳೆದ ಕ್ಷಣಗಳ ಮೆಲುಕು ಹಾಕಿದ್ದೀರಿ. ನಿಮ್ಮ ಜೊತೆ ನಾನು ಇರಲು ಸಾಧ್ಯ ಆದದ್ದು ನನಗೆ ಖುಷಿಕೊಟ್ಟಿದೆ. ಮತ್ತೆ ಮತ್ತೆ ಇ೦ತಹ ಸ೦ದರ್ಭಗಳು ಬರುತ್ತಿರಲಿ.

    ReplyDelete
  7. ಶ್ರೀ ವಿ ಆರ್ ಭಟ್ಟ ಅವರೆ,
    ಡಾ.ಕೃಷ್ಣಮೂರ್ತಿಯವರೊಡನೆ ನಿಮ್ಮ ಮೊದಲ ಭೇಟಿಯಲ್ಲೇ ಈ ಸರ್ಜ(ಜ್ಜ)ನರ ವಸ್ತುನಿಷ್ಟ ವ್ಯಕ್ತಿ ಚಿತ್ರಣವನ್ನು ನೀಡಿದ್ದಕ್ಕೆ ಅಭಿನಂದನೆಗಳು. ನನ್ನ, ಅವರ ಸ್ನೇಹಬಾಂಧವ್ಯ ಬಹಳ ವರ್ಷಗಳದ್ದು (ಅನಾದಿ ಕಾಲದಿಂದ ಬೆಳೆದು ಬಂದಿದ್ದು ಅನ್ನಬಹುದು. "ಸ್ನೇಹ ಮಾಡಬೇಕಿಂಥವರ" ಎಂದು ಅನ್ನಿಸುವಂಥ ವ್ಯಕ್ತಿತ್ವ ಅವರದು. ಈ ಪರಿಚಯ ಸ್ನೇಹಕೂಟದಲ್ಲಿ ಕಾರಣಾಂತರಗಳಿಂದ ಭಾಗವಹಿಸಲಾಗದೆ,ನಿಮ್ಮ ಹಾಗೂ ಉಳಿದ ಬ್ಲಾಗ್ ಮಿತ್ರರ ಜೊತೆಗೆ ಕಳೆಯಬಹುದಾದ ಸಂತಸದ ಕ್ಷಣಗಳಿಂದ ನಾನು ವಂಚಿತನಾದುದರ ಬಗ್ಗೆ ಬೇಸರವಿದೆ. ಅಂದ ಹಾಗೆ ಇನ್ನೂ ಒಂದು ಗುಟ್ಟಿದೆ - ಈ ಸಜ್ಜನರ ಕಂಠಸಿರಿ ಮಧುರವಾಗಿದೆ.

    ReplyDelete
  8. ಶುದ್ಧ ಸ್ನೇಹ ಅರಳಲು ಪರಿಶುದ್ಧ ಮನಸ್ಸುಗಳಿದ್ದರೆ ಸಾಕು ಎಂಬುದು ಎಷ್ಟು ನಿಜವಾದ ಹಾಗೂ ಅರ್ಥಪೂರ್ಣ ಮಾತುಗಳು ಭಟ್ ಸಾರ್.. ಅದು ಮೂಲಕ ಇಲ್ಲಿ ಶ್ರೀ ಮೂರ್ತಿಯವರ ಬಗ್ಗೆ ನೀವು ಬರೆದ ನಿಮ್ಮ ಮಾತುಗಳ ಮೂಲಕ ಮತ್ತೊಮ್ಮೆ ಧೃಡೀಕರಿಸಲ್ಪಟ್ಟಿದೆ. ನಾನೂ ಕೂಡ ಅವರ ’ಕೊಳಲು’ ಓದುಗರಲ್ಲೊಬ್ಬಳು. ಅವರ ವ್ಯಕ್ತಿತ್ವ ಇಷ್ಟು ಚೆನ್ನಾಗಿ ನಮಗೆಲ್ಲಾ ಪರಿಚಯಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು...

    ಶ್ಯಾಮಲ

    ReplyDelete
  9. ಸ್ನೇಹಸುಖಕ್ಕಿಂತ ಬೇರೆ ಸುಖ ಉಂಟೆ?

    ReplyDelete
  10. ವೈದ್ಯರು ಅವರ ಬ್ಲಾಗಿನಲ್ಲಿ ಬರೆದಂತೇ, ಡೀವೀಜಿ ಹೇಳಿದಂತೇ ಕೆಳೆ ಕೂಟದಲ್ಲಿ ಬಹಳ ಜ್ಞಾನ ವೃದ್ಧಿ ಸಾಧ್ಯ, ಎಷ್ಟೋ ಸಲ ಎಷ್ಟೊಂದು ವಿಷಯಗಳು ನಮಗೆ ತಿಳಿದಿರುವುದಿಲ್ಲ, ಇವನ್ನೆಲ್ಲಾ ನಮ್ಮ ಪಾಡಿಗೆ ನಾವು ತಿಳಿದು ಬಿಟ್ಟಿದ್ದೇವೆ ಎಂದುಕೊಂಡಿರುತ್ತೇವೆ, ಆದ್ರೆ ನಿಜವಾಗಿ ಅದು ಅನುಭವಕ್ಕೆ ಬರುವುದು ನಾಲ್ಕುಜನ ಸಮಾನಶೀಲರಲ್ಲಿ ಬೆರೆತಾಗ, ಪ್ರತಿಕ್ರಿಯಿಸಿದ ಎಲ್ಲಾ ಮಹಾನುಭಾವ ಮಿತ್ರರೇ ತಮಗೆಲ್ಲಾ ಅನಂತಾನಂತ ಕೃತಜ್ಞತೆಗಳು.

    ReplyDelete
  11. ಸರ್ಜನ್ನರ ಸಜ್ಜನಿಕೆಯ ಮರುಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು (ಇದು ನಮಗೆ ಮೊದಲೇ ಗೊತ್ತಿತ್ತು). ನಿಮ್ಮ ಖುಷಿಗೆ ಹೇಳಿಕೊಂಡಿರಿ. ನಾವು ನಮ್ಮ ಖುಷಿಗೆ ಮತ್ತೊಮ್ಮೆ ಓದಿದೆವು. ನೆನಪಾದಾಗೊಮ್ಮೆ ಓದಿ ಖುಷಿಪಡುತ್ತೇವೆ.ಆಯ್ತಾ!

    ReplyDelete
  12. ಸೀತಾರಾಮ್ ರಾಯರೇ, ಕೆಲವೊಮ್ಮೆ ಬೇರೆ ಓದುಗರು ಈ ಲೇಖನ ಓದುತ್ತಾರಲ್ಲ? ನಿಮಗೆಲ್ಲಾ ಮೊದಲೇ ಡಾಕ್ಟರ್ ಪರಿಚಯ ಇದ್ದಿರಬಹುದು ಆದರೆ ಎಲ್ಲರಿಗೂ ಇರಲು ಸಾಧ್ಯವೇ? ಇನ್ನೊಂದು ಹೇಳಬೇಕು ಕೆಸರೀಬಾತು ಒಂದೊಂದು ಸಲ ಮಾಡಿದಾಗಲೂ ಭಿನ್ನವಾಗಿರುತ್ತದೆ-ಮತ್ತು ಒಬ್ಬೊಬ್ಬರದೂ ತಯಾರಿಕೆ ಸ್ವಲ್ಸ್ವಲ್ಪ ಭಿನ್ನ ರುಚಿ ಹೊಂದಿರುತ್ತದೆ. ಈಗ ನನ್ನ ಪಾಳಿ ನಾನು ಮಾಡಿದ್ದೇನೆ. ಮೇಲಾಗಿ ಅವತ್ತಿನ ನಮ್ಮ ಭೇಟಿಯಲ್ಲಿ ಹೇಗಿತ್ತು ಎಂಬುದು ತಮಗೆ ಇನ್ನೊಮ್ಮೆ ನನ್ನ ಮುಖದಿಂದ ತಿಳಿಯಿತು ಅಲ್ಲವೇ ? ಓದಿ ಖುಷಿಪಟ್ಟಿರಲ್ಲ, ನಮಸ್ಕಾರ

    ReplyDelete
  13. ಮೂರ್ತಿ ಸರ್ ಬಗ್ಗೆ ನೀವು ಹೇಳಿದ್ದು 100% ಸತ್ಯ , ತುಂಬಾ ಸಂತೋಷವಾಯಿತು.

    ReplyDelete
  14. Nimmellara bheti bhaagya namage yaavaaga? November modalavaaradalli Hassanadalli ondu kaaryakramada yochane nadedide. tilisuve. aaga ellaroo seruvantaadare santoshavaagutte. vivara bareyuve.Sadhya naanu bengaloorinalliruve.
    -sridhar

    ReplyDelete
  15. Thank you Sir, ನಿಮ್ಮನ್ನೆಲ್ಲಾ ಭೇಟಿ ಮಾಡಲೂ ನಾವುಸದಾ ಉಸ್ತುಅಕರಾಗೆ ಇರುತ್ತೇವೆ, ಖಂಡಿತ ಬರುತ್ತೇವೆ, ಧನ್ಯವಾದಗಳು

    ReplyDelete
  16. ಅವರ ಬ್ಲಾಗನ್ನು ನೋಡಿದ್ದೇನೆ..
    ತುಂಬಾ ಚೆನ್ನಾಗಿ ಅನುಭವಮಾಲಿಕೆ ರೂಪಿಸಿದ್ದೀರಿ..

    ReplyDelete
  17. ಕತ್ತಲೆಮನೆ, ಧನ್ಯವಾದಗಳು ತಮ್ಮ ಅನಿಸಿಕೆಗೆ

    ReplyDelete