ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 26, 2010

ಉದ್ಯಾನದಲ್ಲೊಂದರ್ಧಘಂಟೆ !!


ಚಿತ್ರಗಳ ಋಣ : ಅಂತರ್ಜಾಲ

ಉದ್ಯಾನದಲ್ಲೊಂದರ್ಧಘಂಟೆ !!

ತದರಿನನನ......ರಿನನನ...ರಿನನನ.... ಎನ್ನುತ್ತ ತಮ್ಮಷ್ಟಕ್ಕೆ ಹಾಡಿಕೊಳ್ಳುತ್ತ ಕುಳಿತಿದ್ದರು ವೆಂಕೋಬರಾಯರು. ನಾನೂ ರಾಯರಿಗೆ ಪರಿಚಯವಿದ್ದರೂ ಸಿಗುವುದು ಅಪರೂಪ. ಎಲ್ಲಾದರೂ ಪುಗಸಟ್ಟೆ ಮನೋರಂಜನೆ ಬೇಕೆಂದಿದ್ದರೆ ಪಾರ್ಕಿಗೆ ಹೋಗುವುದು ಜಾಸ್ತಿ. ನೀವೀಗ ಕೇಳುವ ಪ್ರಶ್ನೆ ಮೊದಲೇ ನನಗೆ ತಿಳಿದಿದೆ. ಪಾರ್ಕಿನಲ್ಲೇನು ಸಿಗುತ್ತೆ ಮನೋರಂಜನೆ.... ನೀನೇನೋ ತಲೆ ತುರಿಸಿಕೊಂಡು ಹಾಡು ಬರೆಯುತ್ತೇನೆ ಎಂದು ಕುಳಿತುಕೊಂಡುಬಿಡಬಹುದು ಆದರೆ ನಮಗೆಲ್ಲಾ ಏನ್ ಸಿಗುತ್ತೆ ಮಹಾ?

ನೆವರ್, ನೆವರ್ ಮಿಸ್ ಎನ್ ಅಪಾರ್ಚ್ಯುನಿಟಿ --ಇದು ಒಂದುಕಾಲದಲ್ಲಿ ಸ್ಪೈಸ್ ಟೆಲಿಕಾಂ ನವರ ಸ್ಲೋಗನ್ ಆಗಿದ್ದರೂ ಯಾವಾಗಲೂ ಅದು ಅವರದೇ ಆಗಿರಲು ಆ ಮಾತೇನು ಅವರಪ್ಪನಮನೆ ಸೊತ್ತೇ? ಅದೆಲ್ಲಾ ಇರ್ಲಿ, ನಾನು ಹೇಳುತ್ತಿರುವುದು ತಾವು ಪಾರ್ಕಿನಲ್ಲಿ ಮಜಾ ತೆಗೆದುಕೊಳ್ಳುವುದನ್ನು ಮರೆಯಬೇಡಿ ಎಂದು. ತಲೆಹರಟೆ ಎಂದಿರೇ ಹಾಂ ಒಂಥರಾ ಹಾಗೇ ಅಂದುಕೊಳ್ಳಿ ತಪ್ಪೇನಿಲ್ಲ!

ನೀವೇ ವಿಚಾರ ಮಾಡಿ... ಪಾರ್ಕಿನಲ್ಲಿ ಥರಾವರಿ ಜನರ ಜಾತ್ರೆಯೇ ಇರುತ್ತದೆ [ಕೆಲವು ಪಾರ್ಕಿನಲ್ಲಿ ಗಿಡಗಳೂ ಇರುವುದಿಲ್ಲ, ಜನರೂ ಇರುವುದಿಲ್ಲ.. ತುಕ್ಕು ಹಿಡಿದ ಬೋರ್ಡುಗಳು ಮಾತ್ರ ನಮ್ಮನ್ನೇ ಹೆದರಿಸುವಂತೆ ನಿಂತಿರುತ್ತವೆ ಅನ್ನಿ!] ಆದರೂ ಹಲವೊಂದು ಪಾರ್ಕುಗಳು ಜನನಿಬಿಡ. ಅಲ್ಲಿ ಸುಮ್ಮನೇ ಹೋಗಿ ಒಂದುಕಡೆ ಕುಳಿತುಕೊಳ್ಳಿ.

ಅಗೋ ಅಲ್ಲಿ ಲಕ್ಷ್ಮಮ್ಮನಂತೆ ಯಾರೋ ಕರೆದರು. ನೋಡುತ್ತಲೇ ಇದ್ದೇನೆ, ನಾನೇನೂ ವಯಸ್ಸಾದ ಮುದುಕಿ[ ಎಡಮುದುಕಿಯಲ್ಲ ] ಎಂದುಕೊಂಡರೆ ಇನ್ನೂ ವಯಸ್ಸು ೪೫ ದಾಟಿರುವ ಹಾಗಿಲ್ಲ. ೯೯ ಕೆಜಿ ಶರೀರದ ಕಾಂಪ್ಲೆಕ್ಸ್ ನ್ನು ಎರಡೂ ಸೇರಿದಂತೆ ೯ ಕೆಜಿ ತೂಗುವ ಕಾಲುಗಳ ಪಿಲ್ಲಾರ್ ಮೇಲೆ ಹೊತ್ತುಕೊಂಡು ದಸ್ಸೋ ಬುಸ್ಸೋ ದಸ್ಸೋ ಬುಸ್ಸೋ ಎನ್ನುತ್ತ ಗಾಳಿಗೆ ಹಾಯಿದೋಣಿ ತೂಗಿದ ಹಾಗೇ, ಹಳೆಯ ಗೋಡೆ ಗಡಿಯಾರದ ಪೆಂಡೂಲಂ ತೂಗಿದ ಹಾಗೇ ಆಕಡೆ ಈಕಡೆ ಆಕಡೆ ಈಕಡೆ ತೂಗುತ್ತ ಬಂತು ಸವಾರಿ! ಆ ಇಬ್ಬರು ಹೆಂಗಸರು ನನ್ನ ಪಕ್ಕದ ಕಲ್ಲು ಬೆಂಚಿನಮೇಲೆ ಕುಳಿತು ಹರಟಲು ತೊಡಗಿದರು.

" ಅಲ್ರೀ ಲಕ್ಷ್ಮಮ್ನೋರೇ ನಿಮ್ಮನೇಲ್ ಏನ್ ತಿಂಡಿ ಇವತ್ತು? "

" ಪೂರಿ ಸಾಗು"
ನೋಡಿದಾಗಲೇ ಅಂದುಕೊಂಡಿದ್ದೆ ’ಕಾಂಪ್ಲೆಕ್ಸ್’ ಕಟ್ಟಿರುವುದು ಬರಿದೇ ಅಲ್ಲ ಅದರ ಹಿಂದೆ ಸಾಕಷ್ಟು ’ಪರಿಶ್ರಮ’ ಅಡಗಿದೆ ಅಂತ, ಹೌದಪ್ಪಾ ಹೌದು ಅನುಮಾನವೇ ಇಲ್ಲ!

ಅದೂ ಇದೂ ಬೇಕಾದ್ದು ಬೇಡಾದ್ದು ಉಗುರಿನಿಂದ ತಲೆಯವರೆಗಿನ ಎಲ್ಲಾವಿಚಾರಗಳ ಪಾರಾಯಣ ಕೇಳಿದೆ! ಸುಮಾರು ೧೦ ನಿಮಿಷವಾಗಿತ್ತೇನೋ. ಮಧ್ಯೆ ಮಧ್ಯೆ ಒಬ್ಬೊಬರಾಗಿ ಹೆಂಗಸರು ಬರುತ್ತಲೇ ಇದ್ದರು. ನಾನು ಸಹಜವಾಗಿ ಎಲ್ಲವನ್ನೂ ನೋಡಿದರೂ ನೋಡದ ಹಾಗೇ ಜಾಣಕುರುಡನಾಗಿದ್ದೆ ! ಸುಮಾರು ೧೫ ನಿಮಿಷಗಳಲ್ಲಿ ೧೫-೨೦ ಹೆಂಗಸರು ಸೇರಿದರು. ಕಥೆ ಕಥೆ ಕಥೆ, ಕಾಡು ಹರಟೆ. ಗಂಡಂದಿರು ಎದುರಿಗಿಲ್ಲದ ಸಂತೋಷದಲ್ಲಿ ಮಂಗಗಳ ಥರ ಕಾಲಕಳೆದಿದ್ದೇ ಬಂತು. ಎಲ್ಲರೂ ತೂಕದ ’ತೂಗಮ್ಮ’ಗಳೇ!

" ರೀ ಅವರ್ಮನೆ ಸಂಗೀತಾ ಓಡಿಹೋಗ್ಬಿಟ್ಳಂತೆ ಕಣ್ರೀ"

" ಹೌದಾ ನಾ ಮೊದ್ಲೇ ಲೆಕ್ಕ ಹಾಕಿದ್ದೆ ಒಂದಲ್ಲಾ ಒಂದಿನ ಆಕೆ ಹೋಗೇ ಹೋಗ್ತಾಳೆ ಅಂತ, ಹಾಗೇ ಆಗ್ಲಿ ಬಿಡಿ ಸುಧಮ್ಮಂಗೆ ಸ್ವಲ್ಪ ಬುದ್ಧಿಬರ್ಬೇಕು"

ನೋವಲ್ಲೂ ನಲಿವನ್ನು ಕೊಡುವವರು ಇದ್ದಾರೆ ಅನ್ನುತ್ತಾರಲ್ಲ ಇಲ್ಲಿ ಅದು ಬೇರೆ ರೀತಿ- ಪರರ ನೋವಲ್ಲೂ ತಾವು ಇತರರಿಗೆ ಅದನ್ನಾಡಿಕೊಂಡು ನಲಿವು ಕೊಡುತ್ತಾರೆ. ನನಗಂತೂ ಅಲ್ಲಲ್ಲೇ ಸಿಟ್ಟು, ವಿಷಾದ, ನೋವು, ನಲಿವು ನೀವು ಏನೇ ಹೇಳಿ ನವರಸಗಳು ಮೇಳೈಸಿದ ಅನುಭವ! ಅಲ್ಲಲ್ಲೇ ಸಣ್ಣಗೆ ಹಾಡು ಹಾಡಿಕೊಳ್ಳುವವರು, ಸಿಳ್ಳೆಯಲ್ಲಿ ಹಾಡು ನುಡಿಸುವ ಆಧುನಿಕ ಸಿಳ್ಳೆಕಲಾವಿದೆಯರಾದ ಗರತಿಯರು, ಮಗ ವಿದೇಶದಿಂದ ಮೂರು ತಿಂಗಳಹಿಂದೆ ತಂದ ತಿನ್ನಲಾಗದೇ ಫ್ರಿಜ್ ನಲ್ಲಿ ಇಟ್ಟಿದ್ದ ಸ್ವೀಟು ಇಲ್ಲಿಗೆ ತಂದು ಗೆಳತಿಯರೊಂದಿಗೆ ವಿದೇಶೀ ಸಂಗತಿಗಳನ್ನು ರುಚಿರುಚಿಯಾಗಿ ಹರಟಿ ಹಳಸಲು ಸ್ವೀಟನ್ನು ಅಂತಸ್ತು ತೋರಿಸಲೂ ಆಯಿತು ಮತ್ತು ಖರ್ಚುಮಾಡಿದ ಹಾಗೂ ಆಯಿತು ಎಂಬಂತೇ ತಂದಿರುವವರು, ನಿನ್ನೆ ಖರೀದಿಸಿದ ರೇಷ್ಮೆ ಸೀರೆಗಳನ್ನು ತೋರಿಸಿ ಹೊಟ್ಟೆ ಉರಿಸಲು ಬಂದವರು ಹೀಗೇ ಹಲವು ಥರದವರಿದ್ದರು!

ಅಲ್ಲಾ ಸ್ವಾಮೀ ನಮ್ಮೂರಲ್ಲಿ ಹಬ್ಬಗಳಿಗೆ ಮಾತ್ರ ಕರಿದ ಪದಾರ್ಥಗಳನ್ನು ಮಾಡೋರು. ಈಗ್ಲೂ ಹಾಗೇನೆ. ಅಲ್ಲಿ ತೂಗಪ್ಪ-ತೂಗಮ್ಮ ಇಲ್ಲವೇ ಇಲ್ಲ! ದಿನಬೆಳಗಾದರೆ ಇಲ್ಲದ್ದು ಸಲ್ಲದ್ದು ಮಾಧ್ಯಮದ ಅಡುಗೆ ಶೋ ಗಳಲ್ಲಿ ಕಂಡಿದ್ದು ಅಂತ ಅದೂ ಇದೂ ಕರಿಯುತ್ತಲೇ ಇದ್ದರೆ ಸಮಾಜದಲ್ಲಿ ಎಲ್ಲರೂ ’ತೂಕದ ವ್ಯಕ್ತಿ’ಗಳಾಗುತ್ತಾರೆ ಎಂಬುದು ನನ್ನ ಥೀಸಿಸ್, ಇದರ ಬಗ್ಗೆ ಪ್ರಬಂಧ ಬರೆದರೆ ನನಗೆ ಗಿನ್ನೆಸ್ ದಾಖಲೆ ಪಾರ್ಕಿನಲ್ಲಿ ನಾನು ಕೂತಾಗಲೇ ಕೈಗೆ ತಂದುಕೊಟ್ಟು ಹೋಗುತ್ತಾರೆ!

ರಾಮೇಗೌಡ್ರು ಲೈಟಾಗಿ ಬೈಟೂ ಕಾಪಿ ಕುಡ್ದು ಎರ್ಡಿಡ್ಲಿ ತಿಂದು ಉದ್ದುದ್ದ ಪೈಜಾಮಿನಲ್ಲಿ ಅಡ್ಡಡ್ಡ ಕಾಲಾಡಿಸುತ್ತ ಬಂದೇಬಿಟ್ಟರು. ಇವತ್ತು ಅವರಜೊತೆ ಅವರ ಅಳಿಯನೋ ಯಾರೋ ಬಂದಿದ್ದಾರೆ. ಸುಮಾರು ಹದಿನೈದು ಕೋಳಿಗಳನ್ನು ತುಂಬಿದ ಚೀಲದಷ್ಟು ಸಣ್ಣ ಹೊಟ್ಟೆ! ಹೊಟ್ಟೆಯ ಸುತ್ತ ಸ್ಕೂಟರ್ ಟೈರು ಇದ್ದಹಾಗೇ ಅಲ್ಲೇ ಒಂದು ರಿಂಗಿನ ಆಕಾರ! ಬಟ್ಟೆಯೊಳಗಿದ್ದರೇ ಹೀಗೆ ಇನ್ನು ಬಟ್ಟೆ ತೆಗೆದರೆ ಸುಮೋಗಳೆಲ್ಲ ಹೆದರಿ ಜಪಾನುತೊರೆಯಲೇ ಬೇಕು ಏನಂತೀರಿ? ರಾಮೇ ಗೌಡ್ರು ಬರದಿದ್ರೆ ಪಾರ್ಕಿಗೆ ಕಳೆಯೇ ಇಲ್ಲ, ಬರೇ ಪಾರ್ಕಿನಲ್ಲಿ ಬೆಳೆದಿರುವ ಕಳೆಗಳನ್ನೇ ನೋಡಿ ಮರಳಬೇಕು! ಅವರ ಗತ್ತೇನು ಗಾಂಭೀರ್ಯವೇನು ಆ ನಡಿಗೆಯೇನು ನಾಲ್ಕು ಜನರಿಗೆ ಬದುಕನ್ನು ರೂಪಿಸಿಕೊಟ್ಟಿದ್ದೇನೆಂಬ ಸಂತೋಷವೇನು ಇದನ್ನೆಲ್ಲ ಅವರಬಾಯಿಂದಲೇ ನೀವೊಮ್ಮೆ ಕೇಳಬೇಕು. ಆಗ ಅದರ ನಿಜವಾದ ರುಚಿ ಅನುಭವಕ್ಕೆ ನಿಲುಕುತ್ತದೆ.

ರಾಮೇಗೌಡ್ರ ಬಳಗವೇ ಒಂದಷ್ಟು ಜನ ಇದಾರೆ. ಅಭಿಮಾನ ಅನ್ನಿ, ಕಾಸು ಬೇಕಾದಾಗ ಅನಿವಾರ್ಯತೆಗೆ ಇರಲಿ ಅಂತ ಬೆನ್ನಿಗೆ ಆತುಕೊಂಡಿರುವವರೆನ್ನಿ [ರಾಮೇಗೌಡ್ರು ಕಾಸು ಬಿಚ್ಚುತ್ತಾರೋ ಇಲ್ಲವೋ ಅದು ತಿಳಿದಿಲ್ಲ, ಆದರೂ ಬಾಯಲ್ಲಿ ಪಟಾಕಿ ಹಾರಿಸಿದ್ದಾರಲ್ಲ ಅದನ್ನೇ ಕೇಳಿ ರಾಮೇಗೌಡ್ರು ಜನೋಪಕಾರಿ ಎಂದುಕೊಂಡವರೆಷ್ಟೋ!] ಈ ಬಳಗವೆಲ್ಲ ಟೈರ್ ಟ್ಯೂಬ್ ಇದ್ದವ್ರೇ! ಎಲ್ಲರಲ್ಲೂ ಒಂದೊಂದು ಸೇರಿ ಟೈರಿನ ಅಂಗಡಿಯೇ ಪಾರ್ಕಲ್ಲಿ ಪ್ರಾರಂಭಗೊಂಡಹಾಗೇ ಇರುತ್ತದೆ. ಇವರೆಲ್ಲರ ಕಥೆ ಏನು ಗೊತ್ತೇ ? ರಾತ್ರಿ ಮಲಗಿದಾಗ ಹಲವು ಕೋಳಿಗಳು ಇವರೆಲ್ಲರೊಡನೆ ಅತ್ಮಕಥೆ ಹೇಳಿಕೊಂಡು ಗೋಳಿಡುವುದೇ ಅವರು ಘೀಳಿಡುವುದಕ್ಕೆ ಕಾರಣ. ಅದಕ್ಕೇ ಆದಷ್ಟೂ ಅವುಗಳನ್ನು ಮಟ್ಟಹಾಕುವ ಲೆಕ್ಕದಲ್ಲಿ ಬೇಗ ಜೀರ್ಣಿಸಿ ಕರಗಿಸಿಬಿಟ್ಟರೆ ಆಮೇಲೆ ಅವುಗಳ ಕಥೆ ಕೇಳುವ ತೊಂದರೆ ತಪ್ಪುತ್ತದಲ್ಲಾ ಎಂಬುದು ತುಂಬಿದ ಹಂಬಲ! ಜೊತೆಗೆ ಅಷ್ಟಿಷ್ಟು ಮೊಬೈಲ್ ಬಗ್ಗೆ, ಈ ಮೇಲ್ ಬಗ್ಗೆ ಎಲ್ಲ ಪರಸ್ಪರ ತಿಳುವಳಿಕೆ ಪಡೆಯುವಾ ಅಂತ. ಪಾರ್ಕಿಗೆ ಹಂದಿಗಳಂತೇ ಬಂದವರೇ ಇವರು ನಿಲ್ಲುವುದೇ ಇಲ್ಲ! ಜೋರಾಗಿ ಓಡುವವರು, ನಿಧಾನಕ್ಕೆ ಸ್ಕೂಟರ್ ಬಿಟ್ಟ ಹಾಗೇ ಬ್ಯಾಲೆನ್ಸ್ ಮಾಡಿಕೊಂಡು ಓಡುವವರು, ಯೋಗಾಸನದ ತಪ್ಪು ಭಂಗಿಗಳನ್ನು ತಪತಪತಪನೆ ಹಾಕುವವರು, ಬಸ್ಕಿ ಹೊಡೆಯುವವರು, ನೀರಲ್ಲಿ ನೆನೆದ ನಾಯಿ ತಲೆಯಲ್ಲಾಡಿಸಿದಂತೇ ಮಾಡುವವರು, ಕೈಕಾಲಿನ ಎಲ್ಲಾಬೆರಳು-ಸಂದಿ ಇತ್ಯಾದಿಗಳಲ್ಲಿ ಥರಥರದ ಶಬ್ಢ ಹೊರಡಿಸುವವರು, ನಿಂತಲ್ಲೇ ಸ್ಕೂಲ್ ಕವಾಯತು ಮಾಡಿದ ಹಾಗೇ ಮಾಡುವವರು, ಹಾವು ಬಳುಕಿದ ಹಾಗೇ ಬಳುಕಲು ಪ್ರಯತ್ನಿಸಿ ಬೀಳುವವರು ಹೀಗೇ ಒಂದೇ ಎರಡೇ? ಮರೆಯಲು ಸಾಧ್ಯವಾಗದ ಅಗಾಧ ಅನುಭವ ಸ್ವಾಮೀ!

ಪಡ್ಡೆ ಹೈಕಳು ಮೊಬೈಲಿಂದ ತಮ್ಮ ತಮ್ಮ ಹುಡುಗಿಯರನ್ನು ಬುಕ್ ಮಾಡಿಕೊಂಡು ಬಂದು ಅಲ್ಲಲ್ಲಿ ಸಂದುಗೊಂದುಗಳಲ್ಲಿ ಸರಿಯಾಗಿ ಬೆಳಕು ಬೀಳದ ಭಾಗದಲ್ಲಿ ಕುಳಿತು ತಮಗೆ ಲೋಕವೇ ಗೊತ್ತಿಲ್ಲ ಎನ್ನುವ ಹಾಗೇ ಪರಸ್ಪರ ಅಂಟಿಕೊಂಡು ಆಂಟಿಯರಿಗೆಲ್ಲ ಮುಜುಗರ ಉಂಟುಮಾಡುತ್ತಿದ್ದರು! ಅವರಲ್ಲಿ ಕೆಲವರು ’ಈ ಗುಲಾಬಿಯು ನಿನಗಾಗಿ..’ ಸ್ಟೇಜ್ ನಲ್ಲಿದ್ದರೆ ಇನ್ನು ಕೆಲವರು ’ ಈ ಬಂಧನಾ ಜನುಮ ಜನುಮದಾ...’ ದಲ್ಲಿದ್ದರು, ಸ್ವಲ್ಪಮಟ್ಟಿಗೆ ’ ಈ ಸಮಯ ಆನಂದಮಯ ...’ ಎನ್ನುವ ನಿತ್ಯಾನಂದನ ಶಿಷ್ಯರೂ ಇದ್ದರು! ಅಪರೂಪಕ್ಕೆ ’ನಾನೊಂದು ತೀರ ನೀನೊಂದು ತೀರ...’ ಹಾಡುವ ಪಾಲಕರ ನಿರ್ವಹಣೆಯಲ್ಲಿ ಸಿಕ್ಕು ಬೇರಾಗುವ ರೀತಿಯವರೂ ಇದ್ದರು.

ಹೌದೀಗ ಕೇಳಲು ಮರೆತೇ ಬಿಟ್ಟೆ ನಿಮಗೆಲ್ಲ ಒಟ್ಟೂ ಎಷ್ಟು ಆಂಟಿ-ಅಂಕಲ್ ಗಳು ಇದ್ದಾರೆ? ನಮ್ಮ ಬೆಂಗಳೂರಲ್ಲಿ ಇದಕ್ಕೆ ಕೊರತೆಯೇ ಇಲ್ಲ! ಮನೆಗೆ ಬಾಡಿಗೆಗೆ ಬಂದವರು ಯಜಮಾನನಿಗೆ ’ಅಂಕಲ್’ ಎಂದರೆ ಸ್ಕೂಲ್ ನಲ್ಲಿ ಡ್ಯಾನ್ಸ್ ಕಲಿಸುವ ಮೇಡಂ ಗೆ ಕಲಿಯುತ್ತಿರುವ ಹುಡುಗಿ ’ಆಂಟಿ’ ಎನ್ನುತ್ತಾಳೆ, ಇದೆಲ್ಲಾ ಹೋಗಲಿ ಆಫೀಸುಗಳಿಗೆ ಬಂದ ಪಡ್ಡೆಗಳು ಕೆಲವೊಮ್ಮೆ ಅಂಕಲ್ -ಆಂಟಿ ಎನ್ನುವುದನ್ನು ಮರೆತಿರುವುದಿಲ್ಲ. ಒಬ್ಬಾತ ನನ್ನ ಮಿತ್ರರೊಬ್ಬರಿಗೆ [ಅವರ ಕಚೇರಿಯಲ್ಲಿ ಕೆಲಸಮಾಡುತ್ತಿರುವಾತ ] ’ಅಂಕಲ್’ ಎಂದನಂತೆ, ಅದಕ್ಕೇ ಕೋಪಗೊಂಡ ಅವರು ತಕ್ಷಣ ಆತನ ಲೆಕ್ಕಾಚಾರಮಾಡಿ ಕೆಲಸದಿಂದ ವಜಾಗೊಳಿಸಿದ್ದಾಗಿ ತಿಳಿಸಿದರು.

ಅರ್ಧ ಘಂಟೆ ಕಳೆದಿದ್ದೇ ಗೊತ್ತಾಗಲಿಲ್ಲ ನೋಡಿ. ಅದೇನದು ಸದ್ದು? ಯಾರೋ ನಗುವಂತಿದೆ ? ಅವರೇ ಅಲ್ಲವೇ ನಾನು ನೋಡಿ ನಿಮಗೆ ತಿಳಿಸಿದ ಹೆಂಗಸರು? ಹೌದು. ಅದೇಕೆ ಆ ಥರ ನಗು, ಕೆಟ್ಟನಗು, ಹುಚ್ಚನಗು? ಹೊರಗಡೆ ಎಲ್ಲೂ ನಗದ ಜನ ಪಾರ್ಕಿನಲ್ಲಿ ನಿಮಗೆ ನಕ್ಕು ತೋರಿಸುತ್ತಾರೆ! ನಗುವಿನ ಮಿಮಿಕ್ರಿ ಮಾಡುತ್ತಾರೆ! ’ಮಣ್ಣಿನ ಮಕ್ಕಳ’ಂತೇ ಹುಟ್ಟಿದಾರಭ್ಯ ಇಲ್ಲೀವರೆಗೆ ಅವರ ಮುಖಗಳಲ್ಲಿ ನಗುವಿನ ನರ ಅಲ್ಲಾಡದೇ ಸೀಲ್ ಓಪನ್ ಆಗದ ಬಾಕ್ಸಿನ ಥರ ಇದ್ದುಬಿಡುತ್ತದೆ! ಅಪರೂಪಕ್ಕೆ " ಬಿ.ಪಿ, ಜಾಸ್ತಿಯಾಗಿದೆ, ನೀವು ಸ್ವಲ್ಪ ವ್ಯಾಯಾಮ ಮಾಡಿ, ಸ್ವಲ್ಪ ನಗುವುದನ್ನು ಅಭ್ಯಾಸಮಾಡಿಕೊಳ್ಳಿ " ಎಂದು ವೈದ್ಯರು ಹೇಳಿದ ಮಾರನೇ ದಿನವೇ ಸ್ಟಾರ್ಟ್! ನಗುವ ಹೆಂಗಸರ ಗುಂಪಿಗೆ ಹಲವು ಗಂಡಸರೂ ಬಂದು ಸೇರಿದರು... ಹ್ಹ ಹ್ಹ ಹ್ಹ ಹ್ಹ ಹ್ಹ .....ಜೋರಾಯಿತು ಜೋರಾಯಿತು ಜೋರಾಯಿತು ಅಗೋ ನೋಡಿ ತಾರಕ ಸ್ವರದಲ್ಲಿ ವಿಜೃಂಭಿಸುತ್ತಿದೆ ಹುಚ್ಚು ನಗು..ಕ್ರತ್ರಿಮ ನಗು! ಅಲ್ಲೆಲ್ಲೋ ಅಡ್ಡಾಡುತ್ತಿದ್ದ ಬೀದಿ ನಾಯಿಗಳು ಏನಾಯಿತೆಂದು ತಿಳಿಯದೇ ಕಂಗಾಲು! ಪಾಪ ಕೂಗಿದರೆ ಅವುಗಳ ಪ್ರಾಣಕ್ಕೇ ಸಂಚಕಾರ, ಕೂಗದೇ ಇದ್ದರೆ ಕೂಗಲಾರದ ನಾಯಿಗಳೇ ಇವು ಅಂತ ಯಾರಾದರೂ ತಿಳಿಯುತ್ತಾರೇನೋ.. ನಾಯಿಪಾಡು ..ಡ್ಯೂಟಿ ಮಾಡಲೇಬೇಕು!

ಇನ್ನೇನು ನಾನು ಹೊರಟೆ. ಅನಿತರಲ್ಲಿ ಇಲ್ಲೀವರೆಗೆ ಯಾವತ್ತೂ ಒಂದೇ ಒಂದು ಫರ್ಲಾಂಗೂ ನಡೆದು ಗೊತ್ತಿರದ ಅತಿರಥ ಮಹಾರಥರು ಒಳ್ಳೆಳ್ಳೆಯ ಅಫೀಶಿಯಲ್ ಡೆಸ್ಸು, ಜ್ಯೂಡೋ ಶೂಸ್ ಹಾಕಿಕೊಂಡು ಶ್ರೀಮದ್ಗಾಂಭೀರ್ಯದಿಂದ ನಿಧಾನವಾಗಿ ಬರುತ್ತಿದ್ದರು. ಈಗೀಗ ಪಾರ್ಕಿನ ರಂಗಸ್ಥಳಕ್ಕೆ ಅವರ ಪಾತ್ರಗಳ ಪ್ರವೇಶ! ಭೀಮನ ಥರದವರು, ಕೌರವನ ಮೋರೆಯವರು, ಶಕುನಿ-ದುಶ್ಯಾಸನ ಎಲ್ಲಥರದ ಪರ್ಸನಾಲಿಟಿಯವರೂ ಇದ್ದರು. ಮಹಾಭಾರತವನ್ನು ಮಟ್ಟಸವಾಗಿ ನೋಡಿದ ಅನುಭವ ಕೊಡುವಷ್ಟು ಠಾಕುಠೀಕಾಗಿ ಮುಗುಮ್ಮಾಗಿ ಯುದ್ಧಮುಗಿಸಿ ಜಯಸಿರಿಯನ್ನು ಹೊತ್ತುತಂದ ಯೋಧರಂತೇ ಕಾಣುವವರಿದ್ದರು! ಹೂತ ರಥದ ಗಾಲಿಯನ್ನು ಎತ್ತುತ್ತಿರುವ ಕರ್ಣನಂತೇ ಕಾಣುವ ಬಿದ್ದ ಮೊಬೈಲ್ ಎತ್ತುತ್ತಿರುವವರಿದ್ದರು!

ಹೊರಟೆ ಎಂದುಕೊಳ್ಳುತ್ತಿರುವಾಗಲೇ ಒಂದು ಕಲ್ಲು ಬೆಂಚಿನಲ್ಲಿ ಮಾಸಿದ ಬಟ್ಟೆಯಲ್ಲಿ ಮಲಗಿದ ಉದ್ದ ಗಡ್ಡದ ಮುದುಕನೊಬ್ಬ ಕುರುಕ್ಷೇತ್ರವನ್ನು ನೆನಪಿಗೆ ತಂದ! ಅಲ್ಲೇ " ಕಳ್ಳೇಕಾಯ್ ಕಳ್ಳೇಕಾಯ್ " ಎನ್ನುತ್ತ ಆಗಾಗ ಬೆಕ್ಕು ಮಿಯಾಂವ್ ಮಿಯಾಂವ್ ಎಂದ ಹಾಗೇ ಕೂಗುವಾತ ಕೂತಿದ್ದ! ಕುರುಕ್ಷೇತ್ರದ ಕೈಲಾಗದ ಗಾಯಾಳುಗಳ ರೀತಿ ಕಂಡ! ಸಿನಿಮಾ ನೋಡಿ ಹೊರಬಂದ ಹಾಗಿದ್ದ ನನಗೆ ಏನಪ್ಪಾ ಜಗವೆನ್ನಿಸಿತು. ಜಗ ಸೋಜಿಗ !

ಸಂಪೂರ್ಣ ಕುರುಕ್ಷೇತ್ರ !
" ಕೃಷ್ಣಾ ನನ್ನಿಂದ ಯುದ್ಧ ಸಾಧ್ಯವಿಲ್ಲ, ನೋಡಿದರೆ ಎಲ್ಲರೂ ನನ್ನವರಂತೇ ಕಾಣುತ್ತಾರಪ್ಪಾ! ಬೇಡವೇ ಬೇಡ ನಾನು ಯುದ್ಧ ಬಿಟ್ಟು ತೆರಳುತ್ತೇನೆ " ಎಂದು ಹೊರಹೊರಟಾಗಲೇ ಅನಿಸಿದ್ದು ನಾನೂ ತೂಗಪ್ಪ ಆಗಿಬಿಡಬಹುದೇ? ಆ ಚಕ್ರವ್ಯೂಹವನ್ನು ಬೇಧಿಸಲು ನನ್ನಿಂದ ಸಾಧ್ಯವೇ ?

ಅಶರೀರವಾಣಿ ಮೊಳಗಿತು " ನಾಲಿಗೆ ನಿನ್ನ ಹಿಡಿತಲ್ಲಿಡು ಅರ್ಜುನ, ನಿನ್ನ ಕೆಲಸವನ್ನು ಜಾಸ್ತಿ ಮಾಡು, ಗಾಡಿ ಬಿಟ್ಟು ಭೂಮಿಗೆ ಇಳಿ, ನಾಲಿಗೆ ಬಿಗಿಹಿಡಿ, ನಿನಗೆ ಮಂಗಳವಾಗಲಿ"

" ಧನ್ಯೋಸ್ಮಿ " !

26 comments:

  1. ಹ್ಹ ಹ್ಹ ಹ್ಹಾ.............
    ಭಟ್ಟರೇ,
    ನಗೆಯ ಹಬ್ಬದಲ್ಲೂ ಒಮ್ಮೊಮ್ಮೆ ಯೋಚನೆ ಆಗ್ತಾ ಉಂಟು, ನಾನೂ ತೂಗಪ್ಪ ಆಗ್ತಾ ಇದ್ದೀನ ಅಂತ........!

    ಅಷ್ಟರಲ್ಲೇ ನಿಮ್ಮ ಧೈರ್ಯದ ಮಾತು ಆಶರೀರವಾನಿಯಾಗಿ ಮೊಳಗುವುದಲ್ಲಾ.......!
    "ನಾಲಿಗೆ ನಿನ್ನ ಹಿಡಿತಲ್ಲಿಡು ಅರ್ಜುನ, ನಿನ್ನ ಕೆಲಸವನ್ನು ಜಾಸ್ತಿ ಮಾಡು, ಗಾಡಿ ಬಿಟ್ಟು ಭೂಮಿಗೆ ಇಳಿ, ನಾಲಿಗೆ ಬಿಗಿಹಿಡಿ, ನಿನಗೆ ಮಂಗಳವಾಗಲಿ"

    ಸಿಕ್ಕಾಪಟ್ಟೆ ಚೆನ್ನಾಗಿತ್ತು.........!

    ReplyDelete
  2. ಹರಟೆ ಹೊಡೆಯುತ್ತಲೇ ’ತೂಕ’ವಾದ ವಿಚಾರವೊಂದನ್ನು ಚರ್ಚಿಸಿದ್ದೀರಿ. ಮಾತಿನ ಮರ್ಮವೇ ಹಾಗೇನೋ !. ಎಲ್ಲಿಂದೆಲ್ಲಿಗೋ ಎಳೆದುಬಿಡುತ್ತದೆ. ನಾಲಿಗೆ ಬಿಗಿ ಹಿಡಿಯಲೇ ಬೇಕಪ್ಪಾ..! ಧನ್ಯೋಸ್ಮಿ.

    ReplyDelete
  3. ನಾನಿನ್ನೂ ಪ್ರಕಟಿಸುವ ಹಂತದಲ್ಲೇ ಓದಿ ಹರುಷ ತಂದಿರಿ ಮಹನೀಯರೇ, ನಿಮ್ಮ ಅನಿಸಿಕೆಗಳು ತುಂಬಾ 'ತೂಕ'ಯುಕ್ತ! ಯಾರೂ 'ತೂಗಪ್ಪ'ಗಳಾಗದಿರಲಿ ಅಲ್ಲವೇ? ಎಲ್ಲರೂ ಕಾಲವನ್ನರಿತು, ನಮ್ಮ ಆಯುರ್ವೇದ ಹೇಳಿದ ಹಾಗೆ ಬೆಳಿಗ್ಗೆ ಜಾಸ್ತಿ, ಮಧ್ಯಾಹ್ನ ಕಮ್ಮಿ, ರಾತ್ರಿ ಅತೀ ಕಮ್ಮಿ ತಿಂದು ಆರೋಗ್ಯದಿಂದಿರಲೆಂಬುದು ನನ್ನ ಆಶಯ, ಮರುತ್ತರಿಸಿದ್ದಕ್ಕೆ ಶ್ರೀಯುತ ಪ್ರವೀಣ್ ಮತ್ತು ಶ್ರೀಯುತ ಸುಬ್ರಹ್ಮಣ್ಯ ತಮ್ಮೀರ್ವರಿಗೂ ಧನ್ಯೋಸ್ಮಿ ! ಧನ್ಯವಾದಗಳು

    ReplyDelete
  4. ಒಳ್ಳೆಯ ಮನೋರ೦ಜನೆ ಭಟ್ಟರೆ..ಕಡೆಯಲ್ಲಿನ climax
    " ನಾಲಿಗೆ ನಿನ್ನ ಹಿಡಿತಲ್ಲಿಡು ಅರ್ಜುನ.." ತು೦ಬಾ effective..

    ಶುಭಾಶಯಗಳು
    ಅನ೦ತ್

    ReplyDelete
  5. ಶ್ರೀ ಅನಂತರಾಜ್ ಧನ್ಯವಾದಗಳು, ನಿಮ್ಮೆಲ್ಲರ ರಂಜನೆಯೇ ನನ್ನ ರಂಜನೆ, ಅದೇ ನನ್ನ ನಿಜವಾದ ಆಸ್ತಿ!

    ReplyDelete
  6. ಉದ್ಯಾನವನವೂ ಸಹ ಎಷ್ಟೆಲ್ಲ ಚಿಂತನೆಗೆ ಆಹಾರ ಕೊಡಬಲ್ಲದು ಎಂದು ವಿಸ್ಮಯವಾಗುತ್ತದೆ. ಕೊನೆಗೆ ಅರ್ಜುನನಿಗೆ ನೀಡಿದ ಸೂಚನೆಯಂತೂ ದಿವ್ಯವಾಗಿದೆ!

    ReplyDelete
  7. ಹಹ್ಹಹ್ಹ.. ನಾಲಿಗೆ ತೆವಲು ಹಿಡಿತದಲ್ಲಿ ಇಡದೇ ಹೋದ್ರೆ ನಾವೂ ತೂಗಪ್ಪಗಳಾಗೋದು ಖಚಿತ.. ಈ ಉದ್ಯಾನದಲ್ಲಿ ನಗೋರನ್ನ ದೂರದಲ್ಲಿ ಕುಳಿತು ನೋಡ್ತಾ ಇದ್ರೆ ತುಂಬಾ ತಮಾಷೆಯಾಗಿರತ್ತೆ..
    ತೂಕದ ಸಮಸ್ಯೆ ಈಗೀಗ ಇಲ್ಲೂ ಹೆಚ್ಚಾಗ್ತಿದೆ.. ಪ್ರಜೆಗಳು ನಿಜವಾದ ಅರ್ಥದಲ್ಲಿ ಭಾರ"ಅತೀಯ" ರಾಗುತ್ತಿದ್ದಾರೆ..
    ಬರಹ ತುಂಬಾ ಚೆನ್ನಾಗಿದೆ..

    ReplyDelete
  8. ಒಬೊಬ್ಬರ ಪ್ರತಿಕ್ರಿಯೆಗಳೂ ವಿಶಿಷ್ಟ! ನನ್ನ ಅನಿಸಿಕೆಯೊಡನೆ ನಿಮ್ಮ ಅನಿಸಿಕೆಗಳೂ ಕಂಡಾಗ ಬಹಳ ಸಂತಸವಾಗುತ್ತದೆ, ಆಗಾಗ ನಗುವುದರೊಟ್ಟಿಗೆ ವಿಷಯವನ್ನು ಆಸ್ವಾದಿಸುವುದು ನಮಗೆ ಪ್ರಸಕ್ತ ಬೇಕು, ಶ್ರೀಯುತ ಸುಧೀಂಧ್ರ ದೇಶಪಾಂಡೆ ಮತ್ತು ಶ್ರೀಯುತ ದಿಲೀಪ್ ಹೆಗಡೆ ತಮ್ಮೀರ್ವರಿಗೂ ಧನ್ಯವಾದಗಳು

    ReplyDelete
  9. ಜಾಣಕುರುಡರಾಗಿದ್ದುಕೊಂಡು ಒಂದು ಲೇಖನ ತಯಾರು ಮಾಡಿದಿರಿ.. :-)
    ಸಕತ್ ನಗು ಬಂತು ನಿಮ್ಮ ಲೇಖನ ನೋಡಿ.. ಚೆನ್ನಾಗಿದೆ ... :-)

    ReplyDelete
  10. hahaha super sir beLLigge beLLigge oLLe naguvina lekhana kottiddeeri......... dhanyavadagaLu...

    ReplyDelete
  11. ಹಹ್ಹಹ್ಹಾ !!! ಚೆನ್ನಾಗಿದೆ ಸರ್, ನಕ್ಕು ನಕ್ಕು ಸಾಕಾಯ್ತು.. ಅರ್ಧದಷ್ಟು ಜನ ಪಾರ್ಕ್ ಗೆ ಹೋಗೋದು ಹರಟೆ ಹೊಡ್ದು ಟೈಂಪಾಸ್ ಮಾಡ್ಲಿಕ್ಕೇನೆ .. ಅಲ್ಲೂ ಇಂತಹ ಒಂದು ಚೆಂದದ ಲೇಖನ ಹುಟ್ಟುತ್ತೆ ಅಂತ ತೋರ್ಸಿಬಿಟ್ರಿ ..

    ReplyDelete
  12. ದಿವ್ಯಾ ಮೇಡಂ, ಏನು ಮಾಡೋಣ ಕೆಲವೊಮ್ಮೆ ಪರಿಸ್ಥಿತಿ ಕಲಿಸುತ್ತದೆ, ಕೆಲವೊಮ್ಮೆ ಮನುಷ್ಯರು ಕಲಿಸುತ್ತಾರೆ, ಹಳ್ಳಿಯಲ್ಲೂ ಕೂಡ ಈಗ ಜಾಣಕುರುಡರಾಗದವರು ಕಮ್ಮಿಯೇ! ಜಾಣಕುರುಡು ಎನ್ನುವುದು ಕೆಲವೊಮ್ಮೆ ಒಂದು ಟೂಲ್ ಥರ ಕೆಲಸಮಾಡುತ್ತದೆ, ಈಗ ಇಲ್ಲೇ ನೋಡಿ ನಾನು ಅವರತ್ತಲೇ ನೋಡುತ್ತಿದ್ದರೆ ಅವರಿಗೆ ಕೋಪ ಬರುತ್ತಿತ್ತು, ಹಾಗಾಗಿ ನೋಡಿಯೂ ನೋಡದ ಹಾಗೆ ಇರಬೇಕಾಯ್ತು, ಎಲ್ಲಾದರೂ ಊರಕಡೆಯ ಎಲ್ ಐ ಸಿ ಏಜಂಟ್ ರಿಂದ ತಪ್ಪಿಸಿಕೊಳ್ಳಲು ಮಾಡುತ್ತೇವಲ್ಲ ಹಾಗೇ! ಧನ್ಯವಾದ

    ಮನಸು ಮೇಡಂ, ನಕ್ಕರೆ ಅದೇ ಸ್ವರ್ಗ ಅಂತಾರಲ್ಲ, ಯಾವಾಗಲೂ ಒಂದೇ ಥರ ಬರೆದರೆ ನೀವೆಲ್ಲ ಇವನೊಬ್ಬ ವೇದಾಂತಿ ಅಂತ ಓದದೇ ಓಡಿಹೊಗುತ್ತೀರಿ, ಅದಕ್ಕೇ ಸ್ವಲ್ಪ ಸ್ವಲ್ಪವಾದರೂ ನಗೋಣ [ ಎಂಟಾಣೆ ನಗು, ಕೊನೇಪಕ್ಷ ನಾಲ್ಕಾಣೆ ನಗು !] ತಮಗೂ ಧನ್ಯವಾದ

    ಪ್ರಗತಿ ಹೆಗಡೆಯವರೇ, ನಿಜವಾಗಿ ಹೇಳಬೇಕೇ ? ಪಾರ್ಕು ಇರುವುದೇ ಅದಕ್ಕೆ! ರಾಜರ ಕಾಲದಲ್ಲೂ ಉದ್ಯಾನಗಳಿದ್ದವು ಅಂತ ಕೇಳಿದ್ದೇವೆ ಅಲ್ಲವೇ? ರಾಜರುಗಳೂ ಕೂಡ ಬದುಕಿನ ಏಕತಾನತೆಯಿಂದ ಹೊರಬರಲು ಗಿಡ-ಮರಗಳ, ಪಕ್ಷಿಸಂಕುಲಗಳ ನಡುವೆ ಸ್ವಲ್ಪ ಹೊತ್ತು ಇರಲೆಂದು ಹಾಗೆ ಉದ್ಯಾನ ನಿರ್ಮಿಸುತ್ತಿದ್ದರು, ಈಗ ನಾವಂತೂ ರಾಜರಲ್ಲ, ಇದ್ದುದರಲ್ಲೇ ದಿನದ/ವಾರದ/ತಿಂಗಳಿನ ಒಂದೇ ಥರದ ಜೀವನದ ಸುಕ್ಕುಗಳಿಂದ ಹೊರಬರಲು ಹರಟುವುದು, ನಗುವುದು, ಕೀರ್ತನೆ-ಸಂಗೀತ ಕೇಳುವುದು, ಸಿನಿಮಾ-ನಾಟ್ಯ ನೋಡುವುದು ಬೇಕಲ್ಲವೇ ? ಮಾಡಲಿ ಬಿಡಿ ಪಾಪ, ನಾವೂ ಸಾಧ್ಯವಾದರೆ ಅವರ್ಜೊತೆ ಹರಟೆ ಹೊಡೆಯೋಣ, ಧನ್ಯವಾದ

    ReplyDelete
  13. ಹ ಹ ತುಂಬಾ ಸತ್ಯವಾಗಿ ಬರೆದಿದ್ದೀರಿ .. ಸಾಮಾನ್ಯವಾಗಿ ಪಟ್ಟಣದಲ್ಲಿ ವಾಸಿಸುವವರಿಗೆ ಮಾತ್ರ ಈ ತರಹದ ವಾಕಿಂಗ್ , ನಗೆಕೂಟ, ಎಲ್ಲ ಬೇಕಾಗೋದು ಅಲ್ಲವ . ಹಾಗೆ ರೂಪದಶಿಗಳನ್ನು ಚನ್ನಾಗಿ ಬಳಸಿಕೊಂಡಿದ್ದೀರಿ. ತುಂಬ ಚೆನ್ನಾಗಿದೆ

    ReplyDelete
  14. ಶ್ರೀಯುತ ವೆಂಕಟೇಶ ಹೆಗಡೆ, ಹಳ್ಳಿಗಳಲ್ಲಿ ಜನ ಕೊನೇಪಕ್ಷ ಗಾಡಿ ಸಿಗದ ಕಾರಣಕ್ಕೆ ನಡೆಯುತ್ತಾರೆ,ಬದುಕುವಿಕೆಗೆ ಬೇಕಾಗಿ ಮೈಬಗ್ಗಿಸಿ ಕೆಲಸ ಮಾಡುತ್ತಾರೆ, ತಿನ್ನಲು ಈ ನಮೂನೆ ಸಾವಿರ ತಿಂಡಿಗಳು ಸಿಗುವುದಿಲ್ಲ, ಅಣ್ಣ ಬೇಯಿಸಿಕೊಳ್ಳಲೇ ಪುರುಸೊತ್ತು ಇರುವುದಿಲ್ಲ-ಕೃಷಿ ಕೆಲಸಗಳ ನಡುವೆ, ಇನ್ನು ಅಂಗಡಿಗಳಲ್ಲಿ ಹಲವು ವಿಧದ ತಿಂಡಿಗಳು ಸಿಗುವುದೂ ಇಲ್ಲ! ಎಲ್ಲಾ ಲಿಮಿಟೆಡ್, ಹೀಗಾಗಿ ಅಲ್ಲಿ ತೂಗಪ್ಪ-ತೂಗಮ್ಮಗಳು ಸಹಜವಾಗಿಯೇ ಕಾಣಸಿಗುವುದಿಲ್ಲ, ಧನ್ಯವಾದಗಳು

    ReplyDelete
  15. ಸರ್ ನಕ್ಕು ನಕ್ಕು ಸಾಕಾಯಿತು ಪಾರ್ಕಿಗೆ ಬರುವವರ ವರ್ಣಿಸಿದ ರೀತಿ ,,,ಅಲ್ಲಿಯ ಪ್ರೇಮಿಗಳ ಬಗ್ಗೆ ನೀವಾಡಿದ ಮಾತು ಚನ್ನಾಗಿದೆ

    ReplyDelete
  16. ಶ್ರೀಕಾಂತ್ ನಿಮಗೆ ಸ್ವಾಗತ, ತಮ್ಮ ಥರವೇ ಹಲವು ಮಿತ್ರರು ಬಂದಿದ್ದಾರೆ: ಮೃದುಮನಸು,ವೆಂಕಟೇಶ ಹೆಗಡೆ, ರಂಜಿತಾ, ವಸುಧೇಶ್ ಪಾಠಕ್, ನಾಗೇಶ್ ಆಚಾರ್... ಇನ್ನೂ ಹಲವರು .... ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಬಯಸುತ್ತೇನೆ, ನಿಮ್ಮ ನಗುವಿಗೆ ಕಾರಣವಾದ ನನ್ನೀ ಬರವಣಿಗೆ ಇನ್ನೂ ಹಲವರಿಗೆ ನಗು ತರಿಸಲಿ, ಅವರು ನಗುವುದರ ಮೂಲಕ ಒಂದು ಮಾತನ್ನೂ ನೆನಪಿನಲ್ಲಿಟ್ಟು ನಡೆಯಲಿ ಎಂದು ಆಶಿಸುತ್ತೇನೆ, ತಮ್ಮ ಅನಿಸಿಕೆಗೆ ಧನ್ಯವಾದಗಳು

    ReplyDelete
  17. ಪಾರ್ಕಿನ ವಾಕಿಂಗಿನದೆ ಒಂದು ವಿಚಿತ್ರ ಲೋಕ!ಅದರ ಒಂದು ಝಾಲಕ್ ಅನ್ನು ನಿಮ್ಮ ಲೇಖನದಲ್ಲಿ ಸೊಗಸಾಗಿ ಬಣ್ಣಿಸಿದ್ದೀರಿ ಸಾರ್.ಧನ್ಯವಾದಗಳು.

    ReplyDelete
  18. ಏನು ಹೇಳಲಿ ಸ್ವಾಮೀ, ನಿಮಗೆ ಅಲ್ಲೆಲ್ಲ ಇದು ನೋಡಲೂ ಸಿಗುವುದು ಕಷ್ಟ, ಇಲ್ಲಿ ಇದನ್ನು ಪಾರ್ಕಿಗೆ ಹೋದಾಗಲೆಲ್ಲಾ ನೋಡಬೇಕಾಗಿ ಬರುವುದು ನಮಗೆ ಕಷ್ಟ ! ಮಾನ್ಯ ಕೃಷ್ಣಮೂರ್ತೀಜಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  19. ಭಟ್ಟರೇ
    ಸೊಗಸಾದ ಲೇಖನ
    ನಗಿಸುವುದರಲ್ಲಿ ನೀವು ನಿಸ್ಸೀಮರು

    ReplyDelete
  20. ಆ ದಿಸೆಯಲ್ಲಿ ಒಂದು ಪ್ರಯತ್ನವಷ್ಟೇ ಇದು ಮಹನೀಯರೇ, ಡಾ| ಗುರುಮೂರ್ತಿ ತಮ್ಮ ಅನಿಸಿಕೆಗೆ ನಮನಗಳು

    ReplyDelete
  21. ಭಟ್ ಸರ್,
    ಹ್ಹ ಹಹಹಾ.... ಸಕ್ಕತ್ತಾಗಿದೆ ನಿಮ್ಮ ತೂಕಾಯಣ..... ಪಾರ್ಕಿಗೆ ಹೋದರೆ ಸಿಗುವ ಪುಕ್ಕಟೆ ಮನರಂಜನೆ ಯಲ್ಲೇ ಉತ್ತಮ ಬರಹ ಕೊಟ್ಟಿದ್ದೀರಿ ಧನ್ಯವಾದ ಸರ್..... ಹೊಟ್ಟೆತುಂಬಾ ನಗು ಕೊಟ್ಟಿದ್ದಕ್ಕೆ....

    ReplyDelete
  22. ಶ್ರೀಯುತ ದಿನಕರ್, 'ತೂಕದ ವ್ಯಕ್ತಿ' ಎಂದು ನಾಲ್ಕಾರು ಅರ್ಥದಲ್ಲಿ ಹೇಳಬಹುದೇನೋ ! ಇದೆಲ್ಲಾ ಯಾವುದಿರಬಹುದೆಂದು ನೀವೇ ಊಹಿಸಿ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  23. ಚೆಂದದ ಹಾಸ್ಯಾಯಣ! ಜೊತೆಗೆ ತೂಕಾಯಣ!
    ಆದರೆ ಪಾರ್ಕಿನಲ್ಲಿ ಬರೋರೆಲ್ಲಾ ಧಡುತಿಗಳೆಲ್ಲಾ ಕಾಡು ಹರಟೆ ಪ್ರಿಯರಲ್ಲಾ ಅಲ್ಲವೇ!(just kidding)
    ನಕ್ಕು ನಕ್ಕು ಸಾಕಾಯ್ತು!

    ReplyDelete
  24. ಅಂದ ಹಾಗೆ ತಮ್ಮ ಗಿನ್ನೆಸ್ ಪ್ರಶಸ್ತಿ ಕೊಡಬೇಕಾಗಿತ್ತು ತಮ್ಮ ಪಾರ್ಕು, ಬರುವ ಸಮಯ, ಕೂಡುವ ಬೆಂಚಿನ ವಿವರ ತಿಳಿಸಬೇಕಾಗಿ ವಿನಂತಿ.

    ReplyDelete
  25. ಸೀತಾರಾಮ್ ಮಹಾಶಯರೇ ತಮ್ಮ ಅನಿಸಿಕೆಗೆ ಏನೆನ್ನಲಿ? ಪಾರ್ಕಿನಲ್ಲಿ ತೆಳ್ಳಗಿದ್ದವರೂ ಇಲ್ಲಾ ಅಂದಿಲ್ಲವಲ್ಲ ! ಇದ್ದರೂ ಇರಲಿ ಬಿಡಿ ಪಾಪ, ಸಣ್ಣಗೆ ಬೆಕ್ಕು ಕಾಲ್ಸಂದಿಯಲ್ಲಿ ನುಸುಳಿದ ಹಾಗೇ ತಿರುಗಿಕೊಂಡು ಇರುತ್ತಾರೆ ಬಿಡಿ, ಆದ್ರೆ ತೂಗಪ್ಪ-ತೂಗಮ್ಮಗಳನ್ನು ನೋಡಿ ಪಾಠ ಕಲಿಯಲಾದರೂ ಆಯಿತಲ್ಲ, ನಾನು ಓಡಾಡುವ ಪಾರ್ಕು ಬರುವ ಸಮಯ ಮತ್ತು ಬೆಂಚನ್ನು ತಮಗೆ ಪ್ರತ್ಯೇಕ ಕೋರಿಯರ್ ಮೂಲಕ ಕಳಿಸುತ್ತೇನೆ, ಅದು ಇಲ್ಲೆಲ್ಲಾ ಬೇಡ, ಯಾಕೆಂದರೆ ಇವರೆಲ್ಲ ಅಲ್ಲಿ ಬಂದು ಜಮಾಯಿಸಿ ಪಾರ್ಕಿನಲ್ಲಿ ನಾನು ಹೇಳಿದ ಅತಿಥಿಗಳಿಗೆ ದೊಡ್ಡ ಸಮಸ್ಯೆಯಾದೀತು ಆಗದೇ ? ತಮ್ಮ ಪ್ರತಿಕ್ರಿಯೆ ಬಹಳ ರಸವತ್ತಾಗಿದೆ, ನಮಸ್ಕಾರ.

    ReplyDelete
  26. ತುಂಬಾ ಚೆನ್ನಾಗಿ ಬರಿತೀರ ಭಟ್ರೆ. ಕೆಲಸದ ಒತ್ತಡದ ನಡುವೆ ಸ್ವಲ್ಪ ಸಮಯ ಮನಸು ಬಿಚ್ಚಿ ನಗಲು ಅವಕಾಶವಾಯಿತು.

    ReplyDelete