ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 24, 2010

|| ಗುರು ಬುದ್ಧಿ ವಿಶೇಷತಃ ||


|| ಗುರು ಬುದ್ಧಿ ವಿಶೇಷತಃ ||

ಜಗತ್ತಿನಲ್ಲಿ ಎಲ್ಲರ ಬುದ್ಧಿಗಿಂತ ಗುರುಬುದ್ಧಿ ವಿಶೇಷ ಎಂದು ಪ್ರಮಾಣೀಕೃತವಾಗಿದೆ! ಇದು ಇಂದಿನ ನಮ್ಮ ವಿಜ್ಞಾನಕ್ಕೂ ಸವಾಲೊಡ್ಡಿ ಜಯಿಸಬಹುದಾದ ವಿಷಯ! ಸದ್ಗುರುವೊಬ್ಬ ಕೇವಲ ತನ್ನ ತಪೋಬಲದಿಂದ ಕುಳಿತಲ್ಲೇ ಎಲ್ಲವನ್ನೂ ಗಳಿಸಬಲ್ಲ. ಎಲ್ಲಾ ಜ್ಞಾನ, ಭಾಷೆ, ಪರಿಕರ ಏನು ಬೇಕು ಹೇಳಿ ಅದನ್ನೆಲ್ಲವನ್ನೂ ಪಡೆಯಬಲ್ಲ ಯೋಗಸಿದ್ಧಿ ಗುರುವಿಗೆ ಸಾಧ್ಯ. ಹಾಗಂತ ಎಲ್ಲಾ ಗುರುವಿಗೂ ಅದು ಧಕ್ಕಲೇ ಬೇಕೆಂತಿಲ್ಲ ಅಥವಾ ಧಕ್ಕಿದವರೆಲ್ಲ ಅದನ್ನು ಪ್ರಯೋಗಿಸಿ ತೋರಿಸಬೇಕೆಂದಿಲ್ಲ.

ತನಗಾಗಿ ಪರಿತಪಿಸದ, ತನ್ನ ಹೊಟ್ಟೆಬಟ್ಟೆಯ ಹಾಗೂ ತನ್ನ ಸ್ವಾಸ್ಥ್ಯದ ಚಿಂತೆಯನ್ನು ಮರೆತು ಕೇವಲ ಆತ್ಮೋನ್ನತಿ ಬಯಸಿ, ಮೋಕ್ಷ ಬಯಸಿ ತಪಸ್ಸನ್ನಾಚರಿಸುವ ಯತಿಗೆ ಗುರುವೆನ್ನುತ್ತಾರೆ. ಸದ್ಗುರುವಾದವನು ’ನಾನು’ ಎಂಬ ಅನಿಸಿಕೆ ತೊರೆದು ’ನಾವು’ ಎಂಬ ಹಂತವನ್ನು ತಲ್ಪಿ ತನ್ನ ಆತ್ಮೋದ್ಧಾರದ ಜೊತೆಗೆ ನಂಬಿಬಂದ ಶಿಷ್ಯಗಣದ ಉದ್ಧಾರವನ್ನು ಬಯಸುತ್ತಾನೆ. ಇಂತಹ ಸಾಧನೆಯ ಮಾರ್ಗ ಬಲು ದುರ್ಗಮ, ಬಹಳ ಕಠಿಣ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಈ ದಿನಗಳಲ್ಲಿ ಸಿಗುವ ಕಣ್ಣಿಗೆ ರಾಚುವ ಹಲವು ಐಹಿಕ ಸುಖೋಪಭೋಗಗಳನ್ನು ತ್ಯಜಿಸಿ ಏಕನಿಷ್ಠೆಯಿಂದ ಇಂದ್ರಿಯನಿಗ್ರಹಮಾಡಿ ಸಾಧನೆಮಾಡುವುದು ವಜ್ರಾದಪಿ ಕಠೋರ! ಹಿಂದಿನ ಕಾಲದಲ್ಲಿ ಸರಿಸುಮಾರು ೧೯ ನೇ ಶತಮಾನಕ್ಕೂ ಮುಂಚೆ ಕೊನೇಪಕ್ಷ ಸರಿಯಾದ ಶಿಷ್ಯಂದಿರಾದರೂ ಸಿಗುತ್ತಿದ್ದರು, ಈಗ ನಿಜವಾದ ಸನ್ಯಾಸಿಗಳಿಗೆ ಶಿಷ್ಯರು ಸಿಗುವುದು ದುರ್ಲಭ, ಅದೇ ಢಾಂಬಿಕರಿಗೆ ಬಹಳಜನ ಸಿಗುತ್ತಾರೆ!

ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯ ವೃತ

ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಪ್ರಾಜ್ಞರು ಗುರುತಿಸಿದ್ದಾರೆ. ಈ ಹುಣ್ಣಿಮೆಯ ದಿನ ಗುರುವನ್ನು ನೆನೆಯುವುದರಿಂದ, ದರ್ಶಿಸುವುದರಿಂದ, ತೀರ್ಥ-ಮಂತ್ರಾಕ್ಷತೆಗಳನ್ನು ಪಡೆಯುವುದರಿಂದ ವಿಷಿಷ್ಟ ಅನುಭೂತಿ ಉಂಟಾಗುವುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ನಮಗೆ ವಿದ್ಯೆ ಕಲಿಸಿದ, ಬುದ್ಧಿ ಹೇಳಿದ, ತಿದ್ದಿಬರೆಸಿದ, ಗುದ್ದು ಕೊಟ್ಟು ಒಂದು ಮನುಷ್ಯರೂಪಕ್ಕೆ ತಂದ ಗುರುವಿಗಲ್ಲದೇ ನಮ್ಮೊಳಗಿನ ನಮ್ಮಾತ್ಮಕ್ಕೆ ಪರದ ತತ್ವವನ್ನು ಪರಿಚಯಿಸುವ, ಆ ಮೂಲಕ ಆತ್ಮಕ್ಕೆ ಉತ್ತಮ ಸಂಸ್ಕಾರ ಕೊಡುವ ಗುರುಗಳೆಲ್ಲರನ್ನೂ ನೆನಪುಮಾಡಿಕೊಂಡು ಅವರ ಪಾದಾರವಿಂದಗಳಿಗೆ ಶಿರಸಾ ವಂದಿಸುವ ದಿನವೇ ಗುರುಪೂರ್ಣಿಮೆ. ಗುರುವಿನ ಮೂಲವನ್ನು ಹುಡುಕಿದರೆ ಅದು ಪರೋಕ್ಷ ಆದಿನಾರಾಯಣ ಅಂದರೆ ಮಹಾವಿಷ್ಣುವನ್ನೇ ಪುನಃ ಸೇರುತ್ತದೆ. ಯಾವ ಪರಂಪರಾ ಶ್ಲೋಕವನ್ನೇ ತೆಗೆದುಕೊಂಡರೂ ಮೂಲದಲ್ಲಿ ಆ ಶ್ಲೋಕ ನಾರಾಯಣನ ಕುರಿತೇ ಪ್ರಾರಂಭವಾಗುತ್ತದೆ.

ಭಗವಂತ ತನ್ನ ಭಕ್ತರ ಒಳಿತಿಗಾಗಿ, ಅವನಾಡುವ ನಾಟಕದ ಪಾತ್ರಧಾರಿಗಳಿಗೆ ಪರೋಕ್ಷ ಸಹಕರಿಸಲಾಗಿ, ಹಾರಾಡುವ ಮತಿಗೆಟ್ಟ ಜನರ-ರಕ್ಕಸ ಸಂಸ್ಕೃತಿಯ ದಮನಕ್ಕಾಗಿ ಆಗಾಗ ಬೇರೆಬೇರೆ ರೂಪದಲ್ಲಿ ಅವತರಿಸುತ್ತಾನೆ ಎಂಬುದನ್ನು ಅವನೇ ಗೀತೆಯಲ್ಲಿ ಹೇಳಿದ್ದಾನಲ್ಲವೇ ? ಈ ಅವತಾರಗಳಲ್ಲಿ ಪೂರ್ಣಾವತಾರ, ಅಂಶಾವತಾರ, ಅಂಶಾಂಶಾವತಾರ ಎಂಬ ಕೆಲವು ಭೇದಗಳಿವೆ. ಉದಾಹರಣೆಗೆ ವರಾಹ, ನಾರಸಿಂಹ, ರಾಮ, ಕೃಷ್ಣ ಇವೆಲ್ಲ ಪೂರ್ಣಾವತಾಗಳಾದರೆ ತಿರುಪತಿ ಶ್ರೀನಿವಾಸ, ದತ್ತಾತ್ರೇಯ, ಅಯಪ್ಪ ಇವುಗಳೆಲ್ಲಾ ಅಂಶಾವತಾರಗಳು. ವ್ಯಾಸ, ಪರಾಶರ, ಶಂಕರ, ರಾಮಾನುಜ, ಮಧ್ವ ಈ ಥರದವೆಲ್ಲಾ ಅಂಶಾಂಶಾವತಾರಗಳೆಂದರೆ ತಪ್ಪೇನಿಲ್ಲ. ಹೀಗೇ ಹಲವು ಸ್ತರಗಳಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಗೋಚರಿಸುವ ಈ ಗುರುಪರಂಪರೆಗಳಲ್ಲಿ ಏರುತ್ತಾ ಏರುತ್ತಾ ಹಿಂದಕ್ಕೆ ಹೋದರೆ ಕಾಣುವುದು ಶ್ರೀಮನ್ನಾರಾಯಣ ಸ್ವರೂಪ! ನನಗೊಬ್ಬ ಗುರು, ಆ ಗುರುವಿಗೆ ಇನ್ನೊಬ್ಬ ಗುರು, ಅವರ ಗುರುವಿಗೆ ಮತ್ತೊಬ್ಬ ಗುರು ಹೀಗೇ ಸ್ತರಗಳು ಮೇಲೆ ಹೋಗುತ್ತವೆ. ಒಟ್ಟಿನಲ್ಲಿ ಇಡೀ ಗುರುಸಂಕುಲವನ್ನೇ ಧ್ಯಾನಾವಾಹನಾದಿ ಪೂಜೆ ನಡೆಸಿ ಒಮ್ಮೆ ಅವರ ಋಣ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಈ ಗುರುಪೂಜೆಯನ್ನು ಆಯಾಯ ಧರ್ಮಗಳವರು ಅವರವರ ಧರ್ಮಾನುಸಾರ ನೆರವೇರಿಸಬಹುದು.

ಮಳೆಗಾಲದಲ್ಲಿ ಮುಂಗಾರಿನ ಮಳೆಯ ಸೇಚನಕ್ಕೆ ಭೂಮಿ ನೆನೆದಾಗ ಅಲ್ಲಿ ಹಲವು ಥರದ ಕ್ರಿಮಿಕೀಟಗಳು ಹುಟ್ಟಿಕೊಂಡು ಭೂಮಿಯ ಮೇಲ್ಪದರದಲ್ಲಿ ನೆಲೆಗೊಳ್ಳುತ್ತವೆ. ಕಪ್ಪೆಮರಿಗಳು, ಏಡಿಮರಿಗಳು, ಎರೆಹುಳುಗಳು, ಶತಪದಿ, ಸಹಸ್ರಪದಿ, ಚೇಳು, ಪಡಚೇಹುಳು, ಶಂಖದ ಹುಳು, ಬಸವನಹುಳು .....ಹೀಗೇ ಒಂದೆರಡಲ್ಲ ಅನೇಕ ಸಹಸ್ರಥರದ ಪ್ರಭೇದಗಳನ್ನು ಹೊಂದಿರುವ ಕೀಟಕುಟುಂಬಗಳ ಸಂತಾನವೃದ್ಧಿ ಈ ಕಾಲಘಟ್ಟದಲ್ಲಿ ಜಾಸ್ತಿ. ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ಬೋಧಿಸುವ-ಪ್ರತಿಪಾದಿಸುವ ಸನ್ಯಾಸಿಗಳು ಓಡಾಡಿದರೆ ತಾನು ಎಲ್ಲಿ ಅವುಗಳ ಜೀವಕ್ಕೆ ಕುತ್ತು ತರಬೇಕಾಗುತ್ತದೋ ಎಂಬ ಅನಿಸಿಕೆಯಿಂದ ಒಂದು ಸರಿಯಾದ ತಪೋಯೋಗ್ಯ ಜಾಗ ಹುಡುಕಿ ಅಲ್ಲಿ ನಾಲ್ಕು ಮಾಸಗಳು ಅಥವಾ ನಾಲ್ಕು ಪಕ್ಷಗಳ ಪರ್ಯಂತ ತಪಸ್ಸಿನಲ್ಲಿ ಮಗ್ನರಗುತ್ತಾರೆ. ಒಂದೇ ಕಡೆ ಅವರು ಹಾಗೆ ಮೊಕ್ಕಾಂ ಹೂಡಿರುವ ವೇಳೆ ಬೇರೆ ಬೇರೆ ಸ್ಥಳಗಳ ಶಿಷ್ಯರು ಗುರುವನ್ನು ಕಾಣಲೂ ಸಾಧ್ಯವಾಗುತ್ತದೆ. ಹೀಗಾಗಿ ವ್ಯಾಸಮಹರ್ಷಿಯನ್ನೂ ತಮ್ಮ ಗುರುಸಂಕುಲವನ್ನೂ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರದಿಂದಲೂ ನೈವೇದ್ಯವೇ ಮೊದಲಾದ ವಿಶೇಷ ಉಪಚಾರಗಳಿಂದಲೂ ಅರ್ಚಿಸಿ, ಪೂಜಿಸಿ ತಾವು ಕೈಗೊಳ್ಳುವ ದೀರ್ಘ ತಪಸ್ಸಿಗೆ ಅನುಕೂಲವಿರುವಂತೆಯೂ ತಮ್ಮಿಂದ ಶಿಷ್ಯಗಣದ ಉದ್ಧಾರಕ್ಕೆ ಅನುಕೂಲವಾಗಲೆಂದೂ ಪ್ರಾರ್ಥಿಸುತ್ತಾರೆ. ಹೀಗೆ ಪೂಜಿಸಿದ ವೃತದ ಆದಿಭಾಗದಲ್ಲಿ ಆ ದಿನದ ಜಪತಪಗಳನ್ನು ಪೂರೈಸಿ ಹೊರಬಂದು ನೆರೆದ ಶಿಷ್ಯರಿಗೆ ಅಭಿಮಂತ್ರಿಸಿದ ಅಕ್ಷತೆಗಳನ್ನು ಎರಚುವುದು ಅಥವಾ ಕೊಡುವುದು ಸಂಪ್ರದಾಯ. ಹಾಗೆ ಗುರುವು ಕೊಡುವ ಆ ಮಂತ್ರಾಕ್ಷತೆ ಎಂದಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾಗಿರುತ್ತದೆ ಮತ್ತು ಅದಕ್ಕೆ ವ್ಯಾಸಮಂತ್ರಾಕ್ಷತೆ ಎಂದೇ ಕರೆಯುತ್ತಾರೆ. ಹೇಗೆ ದೊಡ್ಡ ಆಯಸ್ಕಾಂತದ ಪ್ರಭಾವ ಜಾಸ್ತಿ ಇರುತ್ತದೋ ಹಾಗೇ ಉಳಿದ ದಿನ ಸಣ್ಣ ಆಯಸ್ಕಾಂತವಾದರೆ ಗುರುಪೂರ್ಣಿಮೆಯ ದಿನ ಅತೀದೊಡ್ಡ ಆಯಸ್ಕಾಂತದ ಬಲ ಈ ಆಶೀರ್ವಾದಕ್ಕಿದೆ ಎಂಬುದು ಅನುಭವಿಕರ ಮಾತು.

ಈ ಸುಸಂದರ್ಭ ಒಂದು ಕಥೆ ಹೇಳುತ್ತೇನೆ ಕೇಳಿ- ಶ್ರೀ ಶಂಕರರು ತಿರುಗುತ್ತ ತಿರುಗುತ್ತ ಹಿಮಾಲಯದ ತಪ್ಪಲಿನ ಗುಹೆಯೊಂದರಲ್ಲಿ ತನಗೆ ಬೇಕಾದ ಆಧ್ಯಾತ್ಮಿಕ ಗುರುವನ್ನು ಕಾಣುತ್ತಾರೆ. ಹಾಗೆ ಕಂಡಿದ್ದು ಕೇವಲ ಯೋಗ ದೃಷ್ಟಿಯಿಂದಲೇ ಹೊರತು ನೇರವಾದ ದರ್ಶನ ಅವರಿಗಿನ್ನೂ ಆಗಿರುವುದಿಲ್ಲ. ಶಂಕರರು ಕಾಯುತ್ತಾ ಕಾಯುತ್ತಾ ಬಹಳ ಸಮಯವಾಗುತ್ತದೆ. ಆದರೆ ಗುಹೆಯಲ್ಲಿ ಇರುವ ಆ ಗುರುಗಳು ಸಮಾಧಿ ಸ್ಥಿತಿಯಲ್ಲಿದ್ದಾರೆ. ಅವರನ್ನು ಜಾಗ್ರತಸ್ಥಿತಿಗೆ ತಂದರೆ ಕೋಪಬರಲೂ ಬಹುದು ಅಥವಾ ಹಾಗೆ ತಪೋಭಂಗ ಮಾಡಿದ ಪಾಪ ಬರಬಹುದೆಂಬ ಅನಿಸಿಕೆಯಿಂದ ಕೇವಲ ಯೋಗ ಮಾರ್ಗದಿಂದಲೇ ಅವರ ಆತ್ಮವನ್ನು ಸಂಧಿಸಿ ತಾನು ಬಂದಿದ್ದೇನೆ ಎನ್ನುತ್ತಾರೆ. ಆಗ ಎಚ್ಚೆತ್ತ ಗುರುಗಳು ಕೇವಲ ತನ್ನ ಕಾಲು ಪಾದಗಳನ್ನು ಮಾತ್ರ ಹೊರಗೆ ಕಾಣಿಸಿ ಮಿಕ್ಕಿದ ಶರೀರಭಾಗದ ದರ್ಶನ ಕೊಡದಂತೇ ಇರುತ್ತಾರೆ. ಮತ್ತು ಕೇಳುತ್ತಾರೆ " ನೀನು ಬಂದೆ ಅಂದೆಯಲ್ಲ, ಯಾರು ನೀನು ? " " ನಾವು ಬಂದಿದ್ದೇವೆ " ಶಂಕರರು ಹೀಗೆ ಹೇಳುವವರೆಗೂ ಅವರು ಹಾಗೇ ಬರೇ ಪಾದಗಳನ್ನು ಮಾತ್ರ ತೋರಿಸಿದರಂತೆ. ಆ ಗುರುಗಳೇ ಗುರು ಗೋವಿಂದ ಭಗವತ್ಪಾದರು. ಆಗ ಶಂಕರರ ಬಾಯಿಂದ ಹುಟ್ಟಿದ್ದು ’ಗೋವಿಂದಾಷ್ಟಕಮ್’ ಅಷ್ಟಕ ಸ್ತೋತ್ರ! ಹೀಗೇ ಗುರುವನ್ನು ಕಾದು ನೋಡಬೇಕೆಂಬುದು ಪ್ರತೀತಿ.

ಇತ್ತೀಚಿನ ಇಂತಹ ಒಂದು ಗುರುವೆಂದರೆ ಬ್ರಹ್ಮೈಕ್ಯ ಶ್ರೀ ಶ್ರೀಧರ ಸ್ವಾಮಿಗಳು. ಕರ್ನಾಟಕದ ಗಡಿಭಾಗದಲ್ಲಿ ಗುಲಬರ್ಗಾದ ಲಾಡ್ ಚಿಂಚೋಳಿಯಲ್ಲಿ ಜನಿಸಿದ ದತ್ತಾತ್ರೇಯನ ಅವತಾರವಾದ ಶ್ರೀ ಭಗವಾನರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಜನರನ್ನು ಉದ್ಧರಿಸಿದ್ದಾರೆ. ಯಾವುದೇ ಪವಾಡಗಳನ್ನು ಅವರೌ ಮಾಡುತ್ತಿರಲಿಲ್ಲ, ಬದಲಾಗಿ ಅವರ ಉಪಸ್ಥಿತಿಯಿದ್ದಲ್ಲಿ ಹಲವು ಪವಾಡಗಳು ನಡೆಯುತ್ತಿದ್ದವು. ಒಮ್ಮೆ ಹೀಗಾಯಿತು ಅತೀ ಬಡವನೊಬ್ಬ ಶ್ರೀಗಳಲ್ಲಿ ಬೇಡಿದ "ಸ್ವಾಮೀ ನಾನೊಬ್ಬ ಬಡವ, ನನ್ನಲ್ಲಿ ಕೊಡಲು ಏನೂ ಇಲ್ಲ, ತಾವು ಒಮ್ಮೆ ನಮ್ಮನೆಗೆ ಬಂದು ತಮ್ಮ ಪಾದಧೂಳಿಯಿಂದ ನಮ್ಮನ್ನು ಪುನೀತರನ್ನಾಗಿ ಮಾಡ್ಬೇಕು. " ತಮಾಷೆಗಾಗಿ ಗುರುಗಳು " ಆಯ್ತಪ್ಪಾ ನೀನು ಹೋಗಿ ಬಯಲಿನಲ್ಲಿರುವ ಧೂಳನ್ನು ತಂದು ನಿಮ್ಮನೆಯ ನೆಲದಮೇಲೆಲ್ಲಾ ಚೆಲ್ಲು, ನಾನು ನಡೆದು ಹೋದಾಗ ಅಲ್ಲಿ ನನ್ನ ಪಾದ ಸೋಕುವುದರಿಂದ ಅದು ನನ್ನ ಪಾದಧೂಳಿಯೇ ಆಯಿತಲ್ಲ ಇನ್ನೇನು ಆಗದೇ ? " ಎಂದರಂತೆ. ಶ್ರದ್ಧೆಯಿಂದ ಮರುಮಾತನಾಡದ ಆ ಶಿಷ್ಯ ಗುರುಗಳು ಹೇಳಿದ ಹಾಗೇ ಮಾಡಿದ್ದು ಗುರುಗಳನ್ನು ಕರೆದೊಯ್ಯಲು ಬಂದ. ಗುರುಗಳಿಗೆ ಬಹಳ ಕನಿಕರ ಮೂಡಿಬಿಟ್ಟಿತು. ತಕ್ಷಣಕ್ಕೆ ಗುರುಗಳು ಹೊರಟು ಆತನ ಮನೆಗೆ ಬಂದು ಆತನಿಗೆ ಹೇಳಿದಂತೇ ಮನೆಯ ತುಂಬೆಲ್ಲ ನಡೆದಾಡಿದರು. ಅವರು ಹೋದಲ್ಲೆಲ್ಲಾ ಬಂಗಾರದ ನಾಣ್ಯಗಳು ಕಾಣಿಸಿಕೊಂಡವು ! ಅವುಗಳನ್ನೆತ್ತಿ ಗುರುಗಳ ಪಾದಕ್ಕೆ ತುಲಸೀ ಸಮೇತ ಅರ್ಚಿಸಿದ ಆ ಭಕ್ತ. ಆತನ ನಿರ್ವಿಣ್ಣಭಾವ ನೋಡಿದ ಗುರುಗಳು " ಬದುಕು ಪೂರ್ತಿ ನಿನಗಿದು ಸಾಕು" ಎಂದು ಎಲ್ಲಾ ಬಂಗಾರದ ನಾಣ್ಯಗಳನ್ನೂ ಅವನ ಕೈಗೆ ಹಾಕಿ, ತಲೆಯಮೇಲೆ ಅಭಯ ಹಸ್ತವನ್ನಿಟ್ಟು ಹರಸಿದರು. ಅಂದಿನಿಂದ ಆತನಿಗೆ ಯಾವುದೇ ಬಡತನದ ಭವಣೆ ಕಾಡಲಿಲ್ಲ.

ಇದು ಕೇಳಲು ಕಥೆ ಎನಿಸಿದರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಪುರದ ಶ್ರೀ ಶ್ರೀಧರಾಶ್ರಮದಲ್ಲಿ ಇದರ ದಿನಾಂಕ ಮತ್ತು ಭಕ್ತ ವ್ಯಕ್ತಿ ಯಾರಗಿದ್ದ ಎಂಬ ದಾಖಲೆ ಸಹಿತ ಸಿಗುತ್ತದೆ! ಇಂತಹ ಹಲವು ಸಾವಿರ ಘಟನೆಗಳು ಶ್ರೀಧರರ ಅವತಾರದಲ್ಲಿ ನಡೆದವು. ಅದಕ್ಕೇ ಅವರನ್ನು ಜನ ’ಭಗವಾನ್’ ಎಂದರು, ’ಅಘಟಿತ ಘಟನಾ ಅದ್ಬುತ ಶಕ್ತಿ’ ಎಂದರು. ಇಂತಹ ಗುರುವನ್ನು ಪಡೆಯಲು ಯೋಗ ಬೇಕು. ಇದು ಎಲ್ಲರಿಗೂ ಲಭ್ಯವಲ್ಲ. ಇಂದಿನ ನಮ್ಮ ಜಂಜಾಟಗಳಲ್ಲಿ ಸಿಲುಕಿಕೊಂಡು ನಮ್ಮ ಮೂಲಸ್ವರೂಪವನ್ನೇ ಮರೆತ ನಾವು ಚಕ್ರವ್ಯೂಹದ ಅಭಿಮನ್ಯುವಿನ ರೀತಿ ಆಗಿಬಿಟ್ಟಿದ್ದೇವೆ. ಹುಟ್ಟು-ಸಾವು ಎಂಬ ಈ ಜೀವನ ಚಕ್ರದಿಂದ ಹೊರಬರಲು ಅದಕ್ಕಿರುವ ಮಾರ್ಗವೊಂದೇ ಅದು ಗುರುವನ್ನು ಮೊರೆಹೋಗುವುದು! ಅವರ ದರ್ಶನ, ಪಾದಸ್ಪರ್ಶನದಿಂದ ಮಾತ್ರ, ಅವರ ಕೃಪೆಯಿಂದ ಮಾತ್ರ ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನಮ್ಮಲ್ಲಿನ ಗಾದೆ ಹೀಗಿದೆ -’ಹರ ಮುನಿದರೂ ಗುರು ಕಾಯುತ್ತಾನೆ’ ಎಂದು. ಮನೆಯಲ್ಲಿ ಚಿಕ್ಕವರಿರುವಾಗ ಅಪ್ಪ ಮುನಿಸಿಕೊಂಡರೆ ಅಮ್ಮನ ಸೆರಗಿನ ಹಿಂದೋ ಕಾಲಹಿಂದೋ ನಿಂತು ಅಮ್ಮನ ಮುಖೇನ ಅಪ್ಪನ ಸಿಟ್ಟನ್ನು ಶಮನಗೊಳಿಸುತ್ತಿದ್ದೆವು. ಅದೇ ರೀತಿ ಹರನಿಗೇ ಅಂದರೆ ದೇವರಿಗೇ ಕೋಪಬಂದು ನಿನ್ನನ್ನು ತರಿದುಬಿಡುತ್ತೇನೆ ಎಂತ ಬಂದರೂ ರಾಮನಿಗೆ ಹನುಮ ತೋರಿದಂತೆ ಕೇವಲ ದೇವರ ನಾಮಬಲದಿಂದ ದೇವರನ್ನೇ ಮಂತ್ರಮುಗ್ಧಗೊಳಿಸಿ ತನ್ಮೂಲಕ ನಮ್ಮನ್ನು ಕಾಪಾಡುವ, ಸನ್ಮಾರ್ಗ ಬೋಧಿಸಿ ನಮ್ಮನ್ನು ಉದ್ಧರಿಸುವ ಸ್ಥಾನವೊಂದಿದ್ದರೆ ಅದು ’ಗುರು’ ಮಾತ್ರ. ಅಮ್ಮನ ಪ್ರೀತಿ, ಅಪ್ಪನ ವಾತ್ಸಲ್ಯ, ಸ್ನೇಹಿತನ ಹೆಗಲು, ಅಕ್ಕ-ತಂಗಿ-ಅಣ್ಣ-ತಮ್ಮ ಈ ಎಲ್ಲರ ಆಪ್ತತೆ ತೋರುವ ಸಕಲವೂ ಆಗಿ ಸಂಭಾಳಿಸುವ, ಸಂತೈಸುವ, ಆಲಿಸುವ, ಲಾಲಿಹಾಡುವ, ರಮಿಸುವ, ಎತ್ತಿ ಮುದ್ದಾಡುವ ಪರಾತ್ಪರ ಶಕ್ತಿಯಾದ ಇಂತಹ ಗುರುವನ್ನು ಸ್ಮರಿಸಲು ಬೇರೆ ಹಲವು ಲೌಕಿಕ ಕಾರಣಗಳು ಬೇಕಿಲ್ಲ. ಇಂತಹ ಗುರುರೂಪವನ್ನು ನೆನೆಯೋಣವೇ ?

ನೆನೆವೆ ಶ್ರೀಧರ ಸತತ ಗುರುವರ
ನಿನ್ನ ಅಡಿದಾವರೆಗಳ
ಮನವನಣಿಗೊಳಿಸುತ್ತ ಭವಹರ
ಕನವರಿಸುವೇ ಪದಗಳ

ದೇಗಲೂರಲಿ ಹುಟ್ಟಿಬೆಳೆಯುತ ದೇಗುಲವೆ ನೀನಾಗಿಹೆ
ಸಾಗಿ ದೂರದಿ ಉತ್ತರದಿ ನಿನ್ನ ಪಾದಪದ್ಮವನೂರಿದೆ
ಯಾಗಯಜ್ಞದ ತಿರುಳ ಅರುಹಿದೆ ಮಾರ್ದನಿಸಿ ಜನಕೂಗಿರೆ
ಸಾಗರದ ಪ್ರಾಂತದಲಿ ನೆಲೆಸಿದ ಯೋಗಿ ನಿನ್ನನು ಭಜಿಸುವೆ

ದತ್ತರೂಪನೆ ಕಮಲಾ ತನಯನೆ ವಿಮಲ ಕೋಮಲ ನೇತ್ರನೆ
ನೆತ್ತಿನೇವರಿಸುತ್ತ ಹರಸಿದೆ ಭಕ್ತಜನರನುರಾಗನೆ
ಒತ್ತಿ ಬೆರಳನು ಹರಿಸಿ ತೀರ್ಥವ ಕೊಟ್ಟೆ ನೀನೌಷಧವನು
ಎತ್ತುವೆನು ಮಂಗಳದ ಆರತಿ ಸೃಷ್ಟಿಗೊಡೆಯನೆ ನಮಿಪೆನು
----


ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ|
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

22 comments:

  1. ಗುರುಪೂರ್ಣಿಮಾದ ಮುನ್ನಾ ದಿನ ಒ೦ದು ಉತ್ತಮ ಚಿ೦ತನೆಯನ್ನು ಕೊಟ್ಟಿದ್ದೀರಿ ಭಟ್ ಸರ್.
    ಧನ್ಯವಾದಗಳು
    ಅನ೦ತ್

    ReplyDelete
  2. ಶ್ರೀಯುತ ಭಟ್ರೇ,
    ಗುರು ಪೂರ್ಣಿಮೆಯ ಈ ಸಂದರ್ಭದಲ್ಲಿ ನಿಮ್ಮ ಲೇಖನ ಮತ್ತು ಕವನ ಸಮಯೋಚಿತವಾದುದು, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿದ್ದು ಇದಕ್ಕೆ ಅಲ್ಲವೇ? ನಮ್ಮೆಲ್ಲರ ಒಳಿತಿಗಾಗಿ ಕರ್ಯಸಿದ್ಧಿಗಾಗಿ ಗುರುಗಳ ಪಾದಕ್ಕೆ ಶರಣಾಗುವುದು ಹಿತಕರ.
    ಉತ್ತಮ ಮಾಹಿತಿಗೆ ಧನ್ಯವಾದಗಳು.......

    ReplyDelete
  3. ಧನ್ಯವಾದಗಳು ಶ್ರೀಯುತ ಅನಂತರಾಜ್ ಮತ್ತು ಶ್ರೀಯುತ ಪ್ರವೀಣ್, ಗುರುವಿಗೆ ನಮಿಸಿ ನಾವೆಲ್ಲಾ ಕೃತಾರ್ಥರಾಗೋಣ, ಭವಬಂಧನ ಬಿಡಿಸಲು-ಆತ್ಮಕ್ಕೆ ಸಂಸ್ಕಾರ ಕೊಡುವಂತೆ ಬಯಸೋಣ,ಬೇಡೋಣ.

    ReplyDelete
  4. ಗುರುವನ್ನು ಸ್ಮರಿಸುವುದು ಕೊನೇಪಕ್ಷ ಗುರುಪೂರ್ಣಿಮೆಯಂದಾದರೂ ನಡೆಯಬೇಕಾದ ಕೆಲಸ, ಕೆಲ್ಸ ಅಲ್ಲ ಕರ್ತವ್ಯ, ಸ್ವಲ್ಪ ನೆನೆಸಿಕೊಂಡಿದ್ದೇನೆ, ಓದಿ ನೀವೂ ಗುರುವನ್ನು ನೆನೆದಿರಿ, ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಯುತ ವಸಂತ್

    ReplyDelete
  5. ಜಗದ್ಗುರು ಚಂದ್ರಶೇಖರ ಭಾರತಿಗಳ ಅಪರಾವತಾರವೇ ಶ್ರೀಧರ ಗುರುಗಳೆಂದು ತಿಳಿಯಲ್ಪಟ್ಟಿದೆ ಎಂದು ಕೇಳಿದ್ದೇನೆ. ಅಂತಹ ಮಹಾಮಹಿಮರನ್ನು ನೆನೆಯುವುದೇ ಭಾಗ್ಯ. ಚಾತುರ್ಮಾಸದ ವಿವರಣೆಯನ್ನು ಓದಿ ಸಾಕಷ್ಟು ತಿಳಿದುಕೊಂಡೆ. ನಿಮ್ಮ ಚಿಂತನ ಸಾಗರದಲ್ಲಿ ಈಜುವುದೇ ಒಂದು ಸುಖ. ಅನೇಕ ಧನ್ಯವಾದಗಳು.

    ’ದೀಪಂ ದೇವ ದಯಾನಿಧೇ ’ ????????

    ReplyDelete
  6. ಹೌದಿರಬೇಕು! ನನಗೂ ಆಶ್ಚರ್ಯ, ಯಾಕೆಂದರೆ ಶೃಂಗೇರಿಯ ಹಿಂದಿನ ಜಗದ್ಗುರು ಅಭಿನವ ವಿದ್ಯಾ ತೀರ್ಥರು ತಾವೇ ಸ್ವತಃ ಇಚ್ಛಿಸಿ ವರದಪುರಕ್ಕೆ ಬಂದಿದ್ದರು, ಅವರು ಸೇರಿದ ಭಕ್ತರಿಗೆ ಹೇಳಿದ್ದು-ನೀವೆಲ್ಲ ಇಂತಹ ಮಹಾನ್ ಸ್ವಾಮಿಗಳನ್ನು ಪಡೆಯಲು ಯೋಗಬೇಕು, ಶ್ರೀಧರರು ತಮಗಿಂತ ಮೇಲಿನ ಹಂತದಲ್ಲಿದ್ದಾರೆ, ಇದು ನಿಮ್ಮ ಭಾಗ್ಯ ಎಂಬುದಾಗಿ, ಅವರು ಬಂದಾಗ ಅಲ್ಲಿನ ಕಟ್ಟಡವೊಂದರ ಹೊರಗೆ ಮೆಟ್ಟಿಲುಗಳ ಮೇಲೆ ಕುಳಿತು ಛಾಯಾಚಿತ್ರ ತೆಗೆಯುವುದೆಂತ ತೀರ್ಮಾನವಾಯ್ತಂತೆ, ಆಗ ಅಭಿನವ ವಿದ್ಯಾ ತೀರ್ಥರು ನೀವೇ ಮೇಲಿನ ಮೆಟ್ಟಿಲಮೇಲೆ ಕುಳಿತುಕೊಳ್ಳಿ ತಾವು ಕೆಳಗಡೆ ಕೂತುಕೊಳ್ಳುತ್ತೇವೆ ಎಂದರಂತೆ, ಆದರೆ ಹೊರನೋಟಕ್ಕೆ ರಾಜಸನ್ಯಾಸವನ್ನು ಅನುಭವಿಸುತ್ತಿರುವ ಅಭಿನವ ವಿದ್ಯಾತೀರ್ಥರಿಗೆ ಸಿಗಬೇಕಾದ ಆ ಸ್ಥಾನಕ್ಕೆ ಗೌಣವಾಗಬರದೆಂಬ ಆ ತುಡಿತದಿಂದ ಶ್ರೀಧರರು ತಾವೇ ಕೆಳಗೆ ಕೂತಿರುವ ದಾಖಲೆ ಚಿತ್ರಸಾಹಿತ ಓದಸಿಗುತ್ತದೆ, ಶ್ರೀಯುತ ಸುಬ್ರಹ್ಮಣ್ಯ, ದೀಪಂ ದೇವ.... ಸದ್ಯದಲ್ಲೇ ಮುಂದುವರಿಸುವೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  7. ವಿ. ಆರ್. ಭಟ್ಟರೆ...

    ಬಹಳ ಸಕಾಲಿಕ ಬರಹ...

    ಗುರು ಪೂರ್ಣಿಮೆಯಂದು "ಸದ್ಗುರು ಶ್ರ್‍ಇಧರ ಸ್ವಾಮಿಜಿಯವರ ಬಗೆಗೆ ಬರೆದದ್ದು...
    ಈ ಸುಸಮಯದಲ್ಲಿ ಅವರ ನೆನಪು..
    ನಾಮ ಸ್ಮರಣೆ ಮಾಡುವ ಭಾಗ್ಯ ಕೊಟ್ಟಿದ್ದಕ್ಕೆ ಧನ್ಯವಾದಗಳು...

    ಗುರು ಬದುಕಿನ ದಾರಿ ದೀಪ ಅನ್ನುತ್ತಾರೆ ಹಿರಿಯರು..
    ಗುರು ಎಂದರೆ ಜ್ಞಾನ, ತಿಳುವಳಿಕೆ..
    ಎಷ್ಟು ಪವಿತ್ರವಾದ ಭಾವನೆ ಇದು !

    ನಮಗೆ ಜ್ಞಾನ ಕೊಟ್ಟ ಗುರುವಿನ ಬಗೆಗೆ ಪವಿತ್ರ ಭಾವನೆ ಇಟ್ಟುಕೊಳ್ಳಬೇಕು..
    ಅಲ್ಲವೆ?

    ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನು ಅರ್ಪಿಸುವೆ...

    ನಾಳೆ ವಸಂತಪುರದ "ಪಾದುಕಾಶ್ರಮದಲ್ಲಿ" ವಿಶೇಷ ಪೂಜೆಯಿದೆ..
    ದಯವಿಟ್ಟು ಬನ್ನಿ...

    ReplyDelete
  8. ಪ್ರಕಾಶ್ ಸಾಹೇಬ್ರೆ, ನಮ್ಮ ಸಂಕಲ್ಪ ನೀವು ಹೇಳಿದ್ದೇ ಆಗಿದೆ, ಶ್ರೀಧರರನ್ನು ನೆನೆಸಿ ಎರಡು ಹನಿ ಸುರಿಸಿದ ವಿನಃ ನಮಗೆ ಊಟ ರುಚಿಸುವುದಿಲ್ಲ, ನಾಳೆ ಹಾಗಾಗಿ ವಸಂತಪುರದಲ್ಲಿ ನಮ್ಮ-ನಿಮ್ಮ ಭೇಟಿ, ಸದ್ಗುರುವು ಎಲ್ಲರಿಗೂ ನವಚೇತನ ಕೊಡಲಿ,ಅವರ ಕಷ್ಟ-ಕಾರ್ಪಣ್ಯ ಕಳೆಯಲಿ ಎಂದು ಪ್ರಾರ್ಥಿಸಿ ಹಾರೈಸುತ್ತೇನೆ, ನೀವು ಸಲ್ಲಿಸಿದ ಧನ್ಯವಾದಗಳೆಲ್ಲವೂ ಶ್ರೀ ಶ್ರೀಧರಾರ್ಪಣ. ನಿಮಗೂ ಪ್ರತಿಧನ್ಯವಾದಗಳು

    ReplyDelete
  9. ಶ್ರೀ ಶ್ರೀ ಶ್ರೀಧರ ಸ್ವಾಮಿಗಳ ಬಗ್ಗೆ ನಿಮ್ಮ ಭಕ್ತಿಪೂರ್ವಕ ಲೇಖನ ಸಕಾಲಿಕ.ಆ ಗುರುಗಳ ಆಶೀರ್ವಾದ ನಮ್ಮೆಲ್ಲರಿಗೂ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ.ಧನ್ಯವಾದಗಳು.

    ReplyDelete
  10. ಮಾನ್ಯ ಕೃಷ್ಣಮೂರ್ತಿಗಳೇ ಭಾನುವಾರವಾದ್ದರಿಂದ ಮಳೆ ಕಮ್ಮಿ ಇದ್ದರೆ ಕಾರ್ಗಲ್ಲಿನಿಂದ ತಾವು ವರದಹಲ್ಲಿಗೆ ಹೋಗಿಬರಬಹುದು, ಒಂದು ಸಣ್ಣ ರಮಣೀಯ ಪಿಕ್ನಿಕ್ ಅಲ್ಲವೇ? ಅಲ್ಲದೇ ಯಾವುದೇ ಸಂಪ್ರದಾಯವನ್ನೂ, ಧರ್ಮವನ್ನೂ, ಮಾರ್ಗವನ್ನೂ ವಿರೋಧಿಸದೇ ಯುನಿವರ್ಸಲ್ ಆಗಿರುವ ಸಂದೇಶ ಸಾರಿದ ಮಹಾನುಭಾವರ ಗದ್ದುಗೆ [ಸಮಾಧಿ] ಅಲ್ಲಿರುವುದರಿಂದ ಆ ಚೈತನ್ಯ ರೂಪಿ ಪ್ರಜ್ಞಾನ ಬ್ರಹ್ಮ ಎಲ್ಲರಮೆಲೂ ಪ್ರಕಶಿಸಲಿ ಎಂಬ ದೃಷ್ಟಿಯಿಂದ ಹೇಳಿದೆನಷ್ಟೇ! ಒತ್ತಡವಿಲ್ಲ, ವಾಹನದ ಸೌಕರ್ಯ ಇದ್ದು, ಬಿಡುವಿದ್ದು ಎಲ್ಲಾ ಅನುಕೂಲವಿದ್ದರೆ ಭೇಟಿ ಕೊಡುವುದರಲ್ಲಿ ತಪ್ಪೇನಿಲ್ಲ, ಉತ್ತರ ಕರ್ನಾಟಕವೂ ಸೇರಿದಂತೆ ಇಡೀ ಭಾರತದಾದ್ಯಂತ ಸಂಚರಿಸಿ ಹಲವರಿಗೆ ಉಪಕರಿಸಿದ ಗುರುಗಳವರು, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  11. ನಾನು ಒಮ್ಮೆ ಮಾತ್ರ ವರದಹಳ್ಳಿಯ ಶ್ರೀಧರಸ್ವಾಮಿಗಳ ಆಶ್ರಮಕ್ಕೆ ಹೋಗಿದ್ದೆ. ಆದರೆ ಅದಕ್ಕೆ ಮುಂಚಿನಿಂದಲೂ ಅವರ ಬಗ್ಗೆ ಬಲು ಭಕ್ತಿ. ನಮ್ಮ ತಾಯಿಗೂ ಕೂಡ ಅವರ ಮೇಲೆ ಬಲು ಭಕ್ತಿ ಇತ್ತು.ಅದೇನೋ ಅವರು ನನ್ನ ಮನದೊಳಗೆ ನೆಲಸಿಬಿಟ್ಟಿದ್ದಾರೆ. ಒಂದು ಘಟನೆ ನೆನಪಾಗುತ್ತಿದೆ.
    ಶ್ರೀಧರ ಸ್ವಾಮಿಗಳ ಭಕ್ತರೊಬ್ಬರ ಮನೆಯಲ್ಲಿ ಪಾದಪೂಜೆ ನಡೆದಿದೆ.ತೀರ್ಥವನ್ನು ತೆಗೆದುಕೊಳ್ಳಲುಹೊರಟ ಮನೆಯೊಡತಿಯ ಕಣ್ಣಲ್ಲಿ ಕಣ್ಣೀರು ಕಂಡ ಸ್ವಾಮಿಗಳು " ಯಾಕಮ್ಮಾ ಕಣ್ಣೀರು?" ಎಂದು ಕೇಳುತ್ತಾರೆ.ಅದಕ್ಕೆ ಮನೆಯೊಡತಿ ಹೇಳುತ್ತಾಳೆ" ತಾವು ನಮ್ಮ ಮನೆಗೆ ಪದಾರ್ಪಣೆ ಮಾಡಿರುವ ಇಂದು ನನ್ನ ಮಗ ನಿಮ್ಮ ಕೈಯಲ್ಲಿ ತೀರ್ಥ ತೆಗೆದುಕೊಳ್ಳುವ ಅವಕಾಶದಿಂದ ವಂಚಿತನಾದನಲ್ಲಾ!ಎಂದು ಕಣ್ಣೀರಿಡುತ್ತಾಳೆ.ಆಗ ಶ್ರೀಧರ ಸ್ವಾಮಿಗಳು ಹೇಳುತ್ತಾರೆ" ಅಷ್ಟಕ್ಕೆ ಕಣ್ಣೀರೇಕೆ? ಇಗೋ ನೋಡು ನಿನ್ನ ಮಗನಿಗೆ ತೀರ್ಥಕೊಟ್ಟಿದ್ದಾಯ್ತು" ಎಂದು ಹೇಳಿ ಒಂದು ಉದ್ಧರಣೆ ತೀರ್ಥವನ್ನು ಅರ್ಘ್ಯಪಾತ್ರೆಗೆ ಬಿಡುತ್ತಾರೆ. ಈಗ ನೀನು ತೀರ್ಥ ತೆಗೆದುಕೊ ,ಎಂದು ಆ ತಾಯಿಗೆ ತೀರ್ಥಕೊಡುತ್ತಾರೆ. ಕೆಲವೇ ದಿನಗಳಲ್ಲಿ ಕಾಶಿಯಲ್ಲಿ ಓದುತ್ತಿದ್ದ ಮಗನಿಂದ ಪತ್ರವೊಂದು ಬರುತ್ತದೆ ಅದರಲ್ಲಿ ಅವನು ಬರೆದಿರುತ್ತಾನೆ" ಕಾಶಿಯ ವಿಶ್ವನಾಥನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ಎಲ್ಲರಿಗೂ ಗಂಗೆಯ ತೀರ್ಥವನ್ನು ಕೊಡುತ್ತಿದ್ದರು.ನಾನೂ ಕೈ ಒಡ್ಡಿದೆ, ಆಶ್ಚರ್ಯವಾಯ್ತು, ನನ್ನ ಕೈಗೆ ಬಂದದ್ದು ಪಂಚಾಮೃತ."
    ಘಟನೆಯನ್ನು ಕೇಳುವಾಗ ನನ್ನ ಮೈ ರೋಮಾಂಚನವಾಯ್ತು. ಅಂದು ಭಗವಾನ್ ಶ್ರೀಧರಸ್ವಾಮಿಗಳು ಅರ್ಘಯಪಾತ್ರೆಗೆ ಹಾಕಿದ ಪಂಚಾಮೃತತೀರ್ಥವು ಕಾಶಿಯಲ್ಲಿದ್ದ ಈ ತಾಯಿಯ ಮಗನಕೈಗೆ ಬಿದ್ದಿತ್ತು.
    ಭಗವಾನ್ ಶ್ರೀಧರರ ಮಹಿಮೆಬಗ್ಗೆ ಇಷ್ಟು ಸಾಕಲ್ಲವೇ?

    ReplyDelete
  12. ಸನ್ಮಾನ್ಯ ಶ್ರೀಧರ್, ತಮ್ಮ ಪರಿಚಯವಾದ ತಕ್ಷಣ ನಾನು ನೆನಪುಮಾಡಿಕೊಂಡಿದ್ದು ಶ್ರೀಧರರನ್ನು, ಅದನ್ನು ತಮ್ಮಲ್ಲಿ ಹೇಳಿಯೂ ಇದ್ದೆ, ಈಗಲೂ ಶ್ರೀಧರ ಎಂಬ ಆ ಹೆಸರೇ ತುಂಬಾ ಇಷ್ಟ,|| ಮೋಕ್ಷ ಶ್ರಿಯಂ ಧರತೀ ಇತಿ ಶ್ರೀಧರ || ಮೋಕ್ಷ ಶ್ರೀ ಯನ್ನು ಧರಿಸಿದವನೇ ಶ್ರೀಧರ, ನನ್ನ ಹಲವು ಅನುವು-ಆಪತ್ತುಗಳಲ್ಲಿ, ಮನುಷ್ಯ ಮಾತ್ರರಿಂದ ಮಾಡಲಾಗದ ಸಹಾಯವನ್ನು ಶ್ರೀಧರರು ಮಾಡಿದ್ದಾರೆ-ಮಾಡುತ್ತಿದ್ದಾರೆ, ಬ್ರಹ್ಮಲೀನವಾದರೂ ಅವರು ಇಂದಿಗೂ ಪ್ರಜ್ಞಾನ ಬ್ರಹ್ಮನಾಗಿ ಚೈತನ್ಯ ರೂಪದಿಂದ ವರದಪುರದಲ್ಲಿ ನೆಲೆಸಿದ್ದಾರೆ ಮಾತ್ರವಲ್ಲ, ಯಾರಾದರೂ ಬಯಸಿದರೆ ಅವರಿಗೆ ಕನಸಿನಲ್ಲಿ ದರ್ಶನವೀಯುವ, ಸಂತೈಸುವ ಕಾರ್ಯ ಈಗಲೂ ಮುಂದುವರಿದಿದೆ, ಅವರ ಕುರಿತಾಗಿ ಹಲವು ಸಾವಿರ ಕಥೆಗಳಿವೆ, ಮೈಸೂರಿನಲ್ಲಿ ಭಕ್ತರ ಮಾತು ಉಳಿಸಲು ಏಕಕಾಲಕ್ಕೆ ಎರಡೆರಡು ವೇದಿಕೆಗಳಲ್ಲಿ [ಎರಡು ಪ್ರದೇಶಗಳಲ್ಲಿ] ಪ್ರವಚನ ನೀಡಿದ್ದನ್ನು ಹಳೆಯ ಮೈಸೂರಿನ ಜನ ಇಂದಿಗೂ ಬಲ್ಲರು, ಜಯಚಾಮರಾಜೇಂದ್ರರಿಗೆ ಮಗುವಾಗುವಂತೆ ಫಲವನ್ನು ಮಂತ್ರಿಸಿ ಕೊಟ್ಟಿದ್ದರಿಂದ ದತ್ತಾವತಾರಿಗಳಾದ ಶ್ರೀಗಳ ನೆನಪಿಗೆ ಶ್ರೀಕಂಠ ದತ್ತ ಎಂದು ಅವರು ತನ್ನ ಮಗನಿಗೆ ಹೆಸರಿಸಿದರು, ಹೀಗೇ ಒಂದೇ ಎರಡೇ? ಪ್ರತಿಕ್ರಿಯಿಸಿದ್ದಕ್ಕೆ ತಮಗೆ ಧನ್ಯವಾದಗಳು, ಶ್ರೀಧರರು ತಮ್ಮ ಇಷ್ಟಾರ್ಥ ಪೂರೈಸಿ ಸದಾ ನೆಮ್ಮದಿಯಿಂಡಿದಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸಿ ಹಾರೈಸುತ್ತಿದ್ದೇನೆ,ನಮಸ್ಕಾರ.

    ReplyDelete
  13. ಶ್ರೀಧರಸ್ವಾನಿಗಳ ಬಗೆಗೆ ಉತ್ತಮ ಮಾಹಿತಿ ನೀಡಿದ್ದೀರಿ. ಗುರುಪೂರ್ಣಿಮೆಗೆ ಇದರಂತಹ
    ಗುರುವಂದನೆ ಬೇರೊಂದಿಲ್ಲ.

    ReplyDelete
  14. ಶ್ರೀಧರ ಸ್ವಾಮಿಗಳ ಪರಿಚಯವನ್ನು ಮೊದಲೊಮ್ಮೆ ಬರೆದಿದ್ದೆ, ಇದು ಕೇವಲ ಗುರುವಂದನೆ ಮತ್ತು ಗುರ್ಪೂರ್ಣಿಮೆ ಕುರಿತ ಲೇಖನ, ಶ್ರೀಧರರು ಸದಾ ನಮ್ಮೆಲ್ಲರನ್ನೂ ಹರಸಲಿ, ಶ್ರೀಯುತ ಸುಧೀಂಧ್ರರೇ ತಮ್ಮ ಅನಿಸಿಕೆಗೆ ತುಂಬಾ ಆಭಾರಿ

    ReplyDelete
  15. dhanyavadagaLu sir oLLeya lekhana neediddeeri

    ReplyDelete
  16. Thank you Madam, Lord Shridhara Swami Maharaj bless you

    ReplyDelete
  17. ಹಾಸನದ ಎಂಜಿನೀಯರ್ ಮಿತ್ರರಾದ ಶ್ರೀ ಹರಿಹರಪುರ ಶ್ರೀಧರ್ ಅವರ ಅನುಭವ- 'ವೇದಸುಧೆ'ಯಲ್ಲಿ ಇದೇ ಲೇಖನಕ್ಕೆ ಅವರು ಬರೆದಿದ್ದು
    _____________________________________________________
    ಇಂದು ಗುರುಪೂರ್ಣಿಮೆ.ಅಲ್ಲದೆ ಭಾನುವಾರ. ನನ್ನ ವಾರದ ರಜೆ ಬೇರೆ.ಬೆಳಿಗ್ಗೆ ೬.೦೦ ಕ್ಕೆ ಒಂದು, ೧೦.೦೦ ಕ್ಕೆ ಒಂದು ೧೧.೩೦ ಕ್ಕೆ ಒಂದು ವ್ಯಾಸಪೂರ್ಣಿಮೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿತ್ತು.ನಿನ್ನೆ ರಾತ್ರಿ ೧೨.೦೦ ರ ನಂತರ ಮಲಗಿದ್ದೆ. ರಾತ್ರಿಯೆಲ್ಲಾ ಮಳೆ.ಬೆಳಗಿನ ಜಾವ ೪.೦೦ ಗಂಟೆಗೆ ಹಾಸನ ವಿದ್ಯುತ್ ವಿತರಣಾಕೇಂದ್ರದಿಂದ ದೂರವಾಣಿ ಕರೆ ಬಂತು. ಪಾಳಿ ಇಂಜಿನಿಯರ್ ಸುನಿತಾ ಮಾತನಾಡಿದ್ದರು. "ಬುಕ್ಹೋಲ್ಸ್ ರಿಲೆಯಿಂದ ಟ್ರಾನ್ಸ್ ಫಾರ್ಮರ್ ಟ್ರಿಪ್ ಆಗಿದೆ ಸಾರ್, ರಿಲೆ ರಿಸೆಟ್ ಆಗ್ತಾ ಇಲ್ಲ".ಇಂತಾ ಸೂಚನೆ ಬಂದರೆ ಏನೋ ತಲೆನಿಸಿ ಕಾದಿದೆ, ಎಂದೇ ಅರ್ಥ.ಸರಿ ಆಗಿನಿಂದಲೇ ಆ ಬಗ್ಗೆ ತಲೆ ಬಿಸಿ ಶುರುವಾಯ್ತು. ಎದ್ದು ಮುಖ ತೊಳೆದುಕೊಂಡು ಧಾವಿಸಿದೆ.ಮುಂದಿನದೆಲ್ಲಾ ವಿವರಣೆ ಎಲ್ಲರಿಗೂ ಅರ್ಥವಾಗುವಂತಹದಲ್ಲ. ನನ್ನೊಡನೆ ಮೂವರು ಹಿರಿಯ ಇಂಜಿನಿಯರ್ ಗಳು ಸೇರಿಕೊಂಡರು.ಎಲ್ಲರ ಬಟ್ಟೆಬರೆ ಎಲ್ಲಾ ಟ್ರಾನ್ಸ್ಫಾರ್ಮರ್ ಎಣ್ಣೆ ಮಯ.ಸೀಗೆ ಹಚ್ಚಿ ಸ್ನಾನ ಮಾಡಿದರೆ ಅಭ್ಯಂಜನವಾದಂತೆಯೇ.ಅಂತೂ ಪರಿವರ್ತಕ ದೋಷ ಸರಿಪಡಿಸಿ ಬೆಳಕು ನೀಡುವಾಗ ಮಧ್ಯಾಹ್ನ ೨.೦೦ ಗಂಟೆ ಯಾಗಿತ್ತು.ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಪರಿವರ್ತಕದ ದೋಷವೇನಾದರೂ ಸರಿಪಡಿಸಲು ಸಾಧ್ಯವಾಗದಿದ್ದರೆ ನನ್ನ ಪಾಲಿನ ಲೋಪಕ್ಕೆ ಕಾರಣವಾಗುತ್ತುತ್ತು.ಗುಡ್ದದಂತೆ ಎದುರಾದ ಸಮಸ್ಯೆ ಮಂಜಿನಂತೆ ಕರಗಿಹೋಯ್ತು. ಈಗತಾನೆ ಮನೆಗೆ ಬಂದೆ.ಮತ್ತೊಮ್ಮೆ ಶ್ರೀಧರರ ದರ್ಶನ ಮಾಡಬೇಕೆನಿಸಿ ಬ್ಲಾಗ್ ತೆರೆದೆ. ನಿನ್ನೆಯಿಂದ ಅವರ ಸ್ಮರಣೆಯಲ್ಲಿದ್ದ ನನ್ನನ್ನು ಒಂದು ಕಂಟಕದಿಂದ ಪಾರುಮಾಡಿದ್ದು ಭಗವಾನ್ ಶ್ರೀಧರೇ ಅಲ್ಲವೇ? ಇದೇ ನನ್ನ ಇಂದಿನ ಗುರುಪೂಜೆ!!ಇನ್ನು ಮುಂದೆ ನಿತ್ಯಕರ್ಮಗಳೆಲ್ಲಾ ಆಗಬೇಕು! ಎಲ್ಲರಿಗೂ ನಮಸ್ಕಾರ.

    ReplyDelete
  18. ಶ್ರೀಧರರ ಬಗ್ಗೆ ನಿನ್ನೆ ನೆನೆದಿರಿ, ನಿಮ್ಮ ಅನಿವಾರ್ಯತೆಯಲ್ಲಿ ಇಂದು ಗುರ್ಪೂರ್ಣಿಮೆಯಲ್ಲಿ ತೀರಾ ತೊಡಗಿಕೊಳ್ಳಲಾಗದಿದ್ದರೂ ನಿಮ್ಮ ಹೃದಯ ಗುರುವನ್ನು ಬಯಸಿತ್ತು, ಸ್ಮರಿಸುತ್ತಿತ್ತು, ಅಂತೆಯೇ ನೀವೇ ಹೇಳಿದಂತೆ ಬೆಟ್ಟದಂತ ದೊಡ್ಡ ಕಷ್ಟ ಅದೂ ಹೇಳಿಸಿಕೊಳ್ಳುವ ಕಷ್ಟ ಮಂಜಿನಂತೆ ಬಂದಹಾಗೇ ಕರಗಿಹೋಯಿತು, ನಿಮಗೆ ಅವರ ಕೃಪೆ ದೊರೆತಿದೆ, ನಿಮ್ಮ ಮನಸ್ಸಿಗೆ ದೊಡ್ಡದಾಗಿ ಆಗಬೇಕಿದ್ದ ನೋವನ್ನು ಅಲ್ಪದರಲ್ಲಿ ಕಿತ್ತು ಬಿಸಾಡಿ ನಿವಾರಿಸಿದ್ದಾರೆ, ಶ್ರೀಧರರು ನಿಮಗೂ ಸೇರಿದಂತೆ ಎಲ್ಲರಿಗೋ ಒಳಿತು ಮಾಡಲಿ ಎಂದು ಹಾರೈಸುತ್ತೇನೆ.

    ReplyDelete
  19. ಭಟ್ ಸಾರ್...
    ಗುರು ಪೂರ್ಣಿಮೆಯಂದು ಶ್ರೀ ಶ್ರೀಧರ ಸ್ವಾಮಿಗಳ ಬಗ್ಗೆ ಓದಿ ತುಂಬಾ ಆನಂದವಾಯಿತು. ಸ್ವಾಮಿಗಳ ಪರಮ ಭಕ್ತೆಯೊಬ್ಬರು ನಮ್ಮ ಮನೆಗೂ ಬರುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ಸ್ವಾಮಿಗಳ ವಿಷಯ ಕೇಳಿ ಗೊತ್ತಿದ್ದರೂ ಈಗ ೨ ವರ್ಷಗಳ ಕೆಳಗೆ ಮಾತ್ರವೇ ನನಗೆ ವರದಳ್ಳಿಗೆ ಹೋಗಲು ಸಾಧ್ಯವಾಯಿತು. ನಿಜವಾಗಲೂ ಅಲ್ಲಿಯ ವಾತಾವರಣವೇ ಮನಸ್ಸಿಗೆ ತುಂಬಾ ಶಾಂತಿ, ಸಮಾಧಾನ ಕೊಡುತ್ತದೆ. ಇನ್ನೊಮ್ಮೆ ನಿಧಾನವಾಗಿ ಅಲ್ಲಿಗೆ ಹೋಗಿ ಹಲವು ಘಂಟೆಗಳಾದರು ಅಲ್ಲಿ ಸಮಯ ಕಳೆಯಬೇಕೆಂಬ ಆಸೆ... ಗುರುಗಳು ನಡೆಸಿಕೊಡಬೇಕಷ್ಟೆ. ಧನ್ಯವಾದಗಳು ಸಾರ್... ಗುರುಗಳಿಗೆ ನಮ್ಮದೊಂದು ನಮನವನ್ನು ಈ ರೀತಿ ಸಲ್ಲಿಸುವ ಅವಕಾಶ ಕೊಟ್ಟಿದ್ದಕ್ಕೆ...

    ಶ್ಯಾಮಲ

    ReplyDelete
  20. ಶ್ಯಾಮಲಾ ಮೇಡಂ ಇಲ್ಲಿ ಒಬ್ಬೊಬ್ಬರ ಅನಿಸಿಕೆಯೂ ಅದ್ಬುತ! ಇವತ್ತು ನಾವೆಲ್ಲಾ ಬೆಂಗಳೂರಿನ ವಸಂತಪುರದಲ್ಲಿರುವ ಶ್ರೀಗಳ ಪಾದುಕಾಶ್ರಮಕ್ಕೆ ಭೇಟಿ ನೀಡಿ, ದರ್ಶನ, ಪ್ರಸಾದ ಭೋಜನ ಸ್ವೀಕರಿಸಿದೆವು, ಮಿತ್ರರಾದ 'ಇಟ್ಟಿಗೆ ಸಿಮೆಂಟ್ ' ಬ್ಲಾಗಿನೊಡೆಯ ಶ್ರೀಯುತ ಪ್ರಕಾಶ್ ಕೂಡ ಬಂದಿದ್ದರು, ಗುರುಗಳ ವಿಷಯವನ್ನೇ ಮಾತನಾಡಿದೆವು, ಲೇಟೆಸ್ಟ್ ನ್ಯೂಸ್ ಕೇಳಿ-ವರದಹಳ್ಳಿಯಲ್ಲಿ ಇಂದು 3000 ಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರಂತೆ, ಗುಲಬರ್ಗಾದ ಲಾಡ್ ಚಿಂಚೋಳಿಯ ಗುರುಗಳು ಜನ್ಮತಳೆದ ಜಾಗದಲ್ಲಿ ನಿರ್ಮಿಸಿದ ಪಾದುಕಾ ಮಂದಿರದಲ್ಲಿ ಸುಮಾರು ಸಾವಿರದೋಪಾದಿಯಲ್ಲಿ ಭಕ್ತರು ಬಂದಿದ್ದರೆ,ಮುನ್ನ ಬೆಂಗಳೂರಿನಲ್ಲಿ ಸುಮಾರು 800 ಭಕ್ತರು ಸೇರಿದ್ದರು, ಗುರುದರ್ಶನ-ಭೂರಿ ಪ್ರಸಾದ ಭೋಜನ ನೀಡಿದ ಶ್ರೀ ಗುರುವನ್ನು ಇನ್ನೊಮ್ಮೆ ನೆನೆಯುತ್ತ ತಮ್ಮ ಅಸೆ ಶೀಘ್ರ ಈಡೇರಲಿ ಎಂದು ಹಾರೈಸುತ್ತೇನೆ, ಥ್ಯಾಂಕ್ಸ್

    ReplyDelete
  21. ಗುರುಪುರ್ಣಿಮೆಯಂದು ಗುರುವಿನ ಮಹತ್ವದ ಬಗ್ಗೆ ವಿಶದವಾಗಿ ಅರಿವು ನೀಡಿದ್ದಿರಿ!ಜೊತೆಗೆ ಮಹತ್ವದ ಗುರುವೊಬ್ಬರ ಜೀವನ ಪರಿಚಯಿಸಿದ್ದಿರಾ!
    ಧನ್ಯವಾದಗಳು. ಗುರು ಭಗವಾನ ಶ್ರೀಧರರ ಬಗ್ಗೆ ನನಗೆ ಗೊತ್ತಿರಲಿಲ್ಲ.

    ReplyDelete
  22. ಶ್ರೀಧರರ ಪರಿಚಯದ ಬಗ್ಗೆ ಮೊದಲೊಮ್ಮೆ ನನ್ನ 'ಭಕ್ತಿ ಸಿಂಚನ'ದಲ್ಲಿ ಬರೆದಿದ್ದೆ, ತಾವು ಇನ್ನಷ್ಟು ವಿವರಗಳನ್ನು ಆ ಮಾಲಿಕೆಯಲ್ಲಿರುವ ಲೇಖನದಿಂದ ಬಿಡುವಿದ್ದಾಗ ಓದಿ ಪಡೆಯಬಹುದು, ಶ್ರೀಧರರಿಗೆ ಈಗಿರುವ ಯಾರೇ ಸನ್ಯಾಸಿಗಳೂ ಸರಿಸಾಟಿಯಲ್ಲ, ಅಂತಹ ಉನ್ನತ ಹಂತದಲ್ಲಿ ಅವರಿದ್ದರು, ದತ್ತಾತ್ರೇಯನೇ ಅವತರಿಸಿದ ಮೇಲೆ ಕೇಳಬೇಕೆ ? ಸೀತಾರಾಮ್ ಸರ್ ತಮಗೆ ಧನ್ಯವಾದಗಳು

    ReplyDelete