ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 20, 2010

ತಿಂಗಳ ಕನಸು

ರಾಜಾರವಿವರ್ಮ ರಚಿತ ಚಿತ್ರಕೃಪೆ-ಅಂತರ್ಜಾಲ

ತಿಂಗಳ ಕನಸು

ತಿಂಗಳ ರಾತ್ರಿಯಲಿ ತಂಗಾಳಿ ಸುಯ್ದಿರಲು
ಅಂಗಳಕಿಳಿವ ಆಸೆ
ಮಂಗಳನೋಡೋಡಿ ಓಡೋಡಿ ಕಂಡಿರಲು
ಕಂಗಳ ತುಂಬಿಹುದು ಕನಸುಗಳ ಪರಿಷೆ!

ಅಲ್ಲಿ ನೀರವದ ಪರಿಸರದಿ ಮಾಮರದಿ ಗೂಡಿನಲಿ
ಚಿಲಿಪಿಲಿ ಸವಿಯುಲಿಯ ಕೊಸರುವಿಕೆ
ಎಲ್ಲಾ ಮಲಗಿರಲು ಹಾಯಾಗಿ ಅನುಭವಿಸೆ ಸುಖನಿದ್ದೆ
ನಲ್ಲೆ ನೆನಪಾಗಿ ಉಲಿದುಲಿದು ಗುನುಗುವಿಕೆ

ಹಾಡು ಹಾಡುತ್ತ ನಡೆಯುತ್ತಾ ನಗುತಿರುವ ಚಂದಿರನ
ಜಾಡಿ ನೀರಿನಲಿ ಬಂಧಿಸುವ ಬಯಕೆ
ಆಡಿ ಮುದ್ದಾಡಿ ಮನಸಾರೆ ನೇವರಿಸೆ ಮುಂಗುರುಳ
ಬೀಡು ಬಿಟ್ಟಿಹುದು ಮನವದು ಮೇಯೋಕೆ!

ರವಿಯು ನಿರ್ಗಮಿಸಿ ಜಾವದಲಿ ಶಶಿಯುದಿಸಿ ನಸುನಗುತ
ಭುವಿಯ ಮೈಗೆಲ್ಲ ಹಾಲಿನ ಅಭಿಷೇಚನ
ಕವಿದ ಕತ್ತಲೆಯ ಮೋಡಗಳ ನಡುನಡುವೆ ಅಡಗುತ್ತ
ಸವಿವ ಕಣ್ಣಿಗೆ ಬೆಳ್ಳಿಯ ನೀರಾಜನ!

ಉದ್ದಜಡೆಯವಳೆ ಸಂಪಿಗೆನಾಸಿಕ ಮುದ್ದು ಮೊಗದವಳೆ
ಖುದ್ದು ನೀನೊಮ್ಮೆ ಇಲ್ಲಿಗೆ ಬರಬಾರದೇ ?
ಸದ್ದುಮಾಡದೆ ಹಿತ್ತಲ ಬಾಗಿಲನು ತೆರೆಯುತ್ತ ತಾಬರದೇ
ನಿದ್ದೆ ಕದ್ದವಳೆ ಇರುವೆಯ ದಯೆತೋರದೇ ?

14 comments:

 1. ಚಿತ್ರಕ್ಕೊಪ್ಪುವ ಚೆ೦ದದ ಕವನಕ್ಕೆ ಅಭಿನ೦ದನೆ

  ReplyDelete
 2. ಚಂದದ ಕವನ...........
  ಮಾಯಾ ನಗರಿಯಲ್ಲಿ ದಿನವೂ ತಿಂಗಳೇ ಇರುತ್ತಲ್ಲಾ..........!
  ಅಮಾವಾಸ್ಯೆಯೇ ಇಲ್ಲ!
  ಚಿತ್ರವೂ ಚಂದ
  ಕವನ ಇನ್ನೂ ಚಂದ!

  ReplyDelete
 3. ತಿಂಗಳು, ಅಮಾವಾಸ್ಯೆ ಎಲ್ಲಾ ಶಹರಗಳಲ್ಲಿ ಇದ್ದು ಅನುಭವಿಸಲು ಆಗುವಂಥದ್ದಲ್ಲ, ಕವನಕ್ಕೆ ಭಾವನೆ-ಕಲ್ಪನೆಯೇ ಕಾರಣ ಅಲ್ಲವೇ? ಹೀಗೇ ಇಂದು ಸಂಜೆ ಇದೊಂದು ಕಲ್ಪನೆ ಗಾಳಿಗೆ ತೇಲಿ ಬಂತು- ನನ್ನ ಮನದಿ ಕುಂತು- ಬರೆಸಿತು ನಾಳಿನ ಕಂತು, ಅತೀ ಬೇಗನೇ ಬಂದು ಕವನ ಓದಿದ್ದೀರಿ, ಪ್ರತಿಕ್ರಿಯಿಸಿದ್ದೀರಿ ,ಶ್ರೀ ಕು.ಸು. ಮುಳಿಯಾಲ ಮತ್ತು ಶ್ರೀ ಪ್ರವೀಣ್ ತಮಗೆ ಧನ್ಯವಾದಗಳು,

  ReplyDelete
 4. ತಿಂಗಳ ರಾತ್ರಿಯಲಿ ತಂಗಾಳಿ ಸುಯ್ದಿರಲು
  ಅಂಗಳಕಿಳಿವ ಆಸೆ...ಕವನ ಚೆನ್ನಾಗಿದೆ ಸರ್.
  ನಿಮ್ಮವ,
  ರಾಘು.

  ReplyDelete
 5. ಧನ್ಯವಾದಗಳು ರಾಘು, ತಾವು ಕಾವ್ಯದ ಮಧುರರಸ ಹೀರಿದ್ದಕ್ಕೆ

  ReplyDelete
 6. [ನಿದ್ದೆ ಕದ್ದವಳೆ]

  ಪರವಾಗಿಲ್ಲ, ಭಟ್ಟರೇ!!

  ReplyDelete
 7. ಭಟ್ ಸರ್;ಚೆಂದದ ಚಿತ್ರಕ್ಕೆ ಒಪ್ಪುವ ಭಾವಪೂರ್ಣಕವನ.ಎಷ್ಟೇವಾಸ್ತವವಾದಿಯಾದರೂ ಪ್ರತಿಯೋಬ್ಬರಿಗೂ ಆನಂದ ನೀಡುವುದು ಕನಸಿನ ಲೋಕವೇ!ಕನಸಿಲ್ಲದ ಬಾಳು ಹಾಳು ಎಂದು ಎಲ್ಲೋ ಓದಿದ ನೆನಪು.ಒಳ್ಳೆಯ ಕವನ ನೀಡಿದ್ದಕ್ಕೆ ಧನ್ಯವಾದಗಳು.

  ReplyDelete
 8. ಸುಂದರ ಕವನ.... ಆದರೆ "ನೀರಾಜನ" ಈ ಪದದ ಅರ್ಥ ಸರಿಯಾಗಿ ತಿಳಿಯಲಿಲ್ಲ. ನೀಲಾಂಜನ ಎಂದಾಗಬೇಕಿತ್ತೇ?

  ReplyDelete
 9. ಸುಂದರ ಕವನ ಸರ್
  ಚಿತ್ರದ ಜೊತೆ ತಾಳೆಯಾಗಿದೆ

  ReplyDelete
 10. ಚೆಂದದ ಕಾವ್ಯದೌತಣ ಉಣಬಡಿಸಿದ್ದಕ್ಕೆ ಧನ್ಯವಾದಗಳು

  ReplyDelete
 11. ಎಲ್ಲಾಮಿತ್ರರಿಗೂ ಅನಂತ ನಮನಗಳು, ನಿಮ್ಮ ಪ್ರೀತಿ-ಆದರ ಸದಾ ಇರಲಿ, ನೆಟ್ ಪ್ರಾಬ್ಲಂ ಇದೆ ಅದಕ್ಕೆ ಚಿಕ್ಕದಾಗಿ ಉತ್ತರಿಸಿರುವೆ, ನೀರಾಜನ= ಕಣ್ಮನ ತಣಿಸುವ ಅನೇಕ ಬತ್ತಿಗಳ ಆರತಿ, ನೀಲಾಂಜನ=ದೇವರ ಮುಂದಿನ ಸಣ್ಣ ನಂದಾದೀಪ, ಎಲ್ಲರಿಗೂನಮಸ್ಕಾರಗಳು

  ReplyDelete
 12. ರಸಭರಿತ ಕವನ ರಾಜಾರವಿವರ್ಮನ ಚಿತ್ರಕ್ಕೆ ತಕ್ಕುದಾಗಿ!
  ತಮ್ಮ ಕಲ್ಪನಾಮೂಸೆಯಲ್ಲರಳುವ ಸಾಹಿತ್ಯದ ಸೊಬಗೇ ಸೊಬಗು!
  ಧನ್ಯವಾದಗಳು.

  ReplyDelete
 13. ಭಟ್ಟರೇ, ನಿಮ್ಮ ಭಾವಗೀತೆಗಳನ್ನು ಓದಿದೆ. ಸುಂದರವಾಗಿವೆ. ಸುಂದರ ಪದಗಳ ಜೋಡಣೆಯೊಂದಿಗೆ ಮಿಳಿತವಾದ ಭಾವ ಸೊಗಸಾಗಿದೆ.

  ReplyDelete