ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 18, 2010

ಸ್ವಗತ


ಸ್ವಗತ

ಎದ್ದು ಗೆದ್ದು ಹಾರುತಿದೆ ಮನಸು
ಕದ್ದ ಕನಸುಗಳು ಬಯಲಾಗಿ ನನಸು
ಮುದ್ದು ಮುಖದಿ ತುಸು ಮಂದಹಾಸ
ಸದ್ದಿಲ್ಲದ ಸಹಜ ಸಂತೋಷ

ಪೆದ್ದು ಪೆದ್ದಾಗಿ ಇದ್ದ ದಿನ ಹಲವು
ಒದ್ದೆ ಕಣ್ಣ ಒರಸಲಿಲ್ಲ ಕರವು
ಇದ್ದ ಈ ಅಂಗಗಳಲಿಷ್ಟು ಭೇದ
ಬದ್ಧತೆಯ ಕುರಿತೋದಿ ವೇದ !

ನಮ್ಮಣ್ಣ ನನಗಿಂತ ಭಿನ್ನ
ತಿಮ್ಮಣ್ಣ ದ್ಯಾವ್ರ್ನ ಕಂಡಿಹನ
ತಮ್ಮ ಜರುಗು ಜರುಗು ನೀನಂತ
ಸುಮ್ಮನೊರಗಿ ಮರದಡಿಗೆ ಕುಂತ

ಯೋಗ ಧ್ಯಾನ ಎಲ್ಲ ಬೆಕಂತ
ಯಾಗ ಯಜ್ಞ ಮಾಡಬೇಕಂತ
ಭೋಗಭಾಗ್ಯ ನಮ್ಮ ಹಣೆಬರವು
ಬೀಗುದ್ಯಾಕ ನೀನು ಸಿರಿವಂತ ?

ವಿಷಯ ಐತಿ ತುಂಬ ಗಂಭೀರ !
ಕಷಾಯಕ್ಕೆ ರೋಗಗಳು ಬಾರ
ಕುಶಲದೊಳು ಇದನ ನೀನರಿತೂ
ಖುಷಿಗೊಳಿಸು ನಡೆಸು ನೀ ಹಲವ್ರ

ನಿನಾರು ಎಂಬುದನ ತಿಳಕೋ
’ನಾನಲ್ಲ’ ಎಂದು ನೀ ಹೇಳ್ಕೋ
ಬಾನಲ್ಲಿ ಸೆಳಮಿಂಚು ಪಡೆದು
ಕಾನನದಿ ಕಿರುದಾರಿ ಕಂಡ್ಕೋ

6 comments:

 1. [ನಿನಾರು ಎಂಬುದನ ತಿಳಕೋ]
  ಈ ಪ್ರಶ್ನೆಗೆ ಉತ್ತರ ತಿಳಿಯಲೆಂದೇ ನೂರಾರು ವರ್ಷ ಸಾಧನೆಮಾಡಿದ ತಪಸ್ವಿಗಳಿದ್ದಾರೆ.ನಾನಾರು-ಎಂದು ನಿತ್ಯವೂ ನನ್ನ ಅಂತರಾತ್ಮನನ್ನೇ ಕೇಳಿಕೊಳ್ಳುವ ಅಭ್ಯಾಸ ಆರಂಭವಾದರೆ, ಒಂದು ಹಂತ ತಲುಪಿದಂತೆಯೇ ಅಲ್ವಾ ಭಟ್ರೆ?
  ಅಧ್ಯಾತ್ಮವು ಕೊಡುವ ಆನಂದವನ್ನು ಬೇರಾವುದೂ ಕೊಡಲಾರದು. ಹೀಗೆಯೇ ಸಾಗಲಿ. ಸರಳವಿದ್ದಷ್ಟೂ ಎಲ್ಲರಿಗೂ ಅರ್ಥವಾಗುತ್ತೆ. ಶರಣು.

  ReplyDelete
 2. ಅರ್ಥಪೂರ್ಣವಾಗಿದೆ ಪ್ರಾಸಬದ್ಧವಾಗಿದೆ. ನಿಮ್ಮ ಕಾವ್ಯಕೃಷಿ ಹೀಗೇ ಮು೦ದುವರೆಯಲಿ

  ReplyDelete
 3. ನಮಸ್ಕಾರ

  ಮೊದಲಿಗೆ ನನ್ನ ಬ್ಲಾಗಿಗೆ ಬಂದು ಪದ್ಯ ಓದಿದ ನಿಮ ಸಹೃದಯತೆಗೆ ನಮಸ್ಕಾರ. ಪೆಟ್ರೋಲ್ ಕಾರ್ಖಾನೆಯಲ್ಲಿದ್ದೂ ಲಘು ಸ್ಫೋಟಕದಂತಹ ಕಾವ್ಯ ರಚನೆ ನಿಮ್ಮದಾಗಲಿ.

  ’ಸ್ವಗತ’ ಚೆನ್ನಾಗಿದೆ. ನಿಮ್ಮ ಪದ್ಯದ ಗೆಲುವು ನಿಮ್ಮ ಸರಳ ಶೈಯಲ್ಲಿದೆ. ಉಳಿದ ಪದ್ಯಗಳನ್ನೂ ಓದಿ ಮತ್ತೆ ಬರೆಯುತ್ತೇನೆ.

  "ಕಷಾಯಕ್ಕೆ ರೋಗಗಳು ಬಾರ"

  ಇಂತಹ ಲಘುತನ ಉಳಿಸಿಕೊಳ್ಳಿ

  ReplyDelete
 4. ಬಹಳ ಸಂತೋಷ ಬಹಳ ಸಂತೋಷ, ಹೊಸ ಮಿತ್ರರು ಬಂದು ಹಾರೈಸಿದಾಗ ಇದು ಸಹಜ ತಾನೇ? ಇದೊಂದು ವಿಶಿಷ್ಟ ಕವನ, ಕವನದ ಅರ್ಥ ನಿಮ್ನಿಮ್ಮ ಊಹೆಗೆ ಬಿಟ್ಟಿದ್ದೇನೆ, ಯಾಕೆಂದರೆ ಕವನಕ್ಕೆ ಹಲವು ಅರ್ಥ ಬರಬಹುದು-ಕವನದ ಗಂಭೀರತೆಯೇ ಅದು. ಕವಿಯೋಬನ ಕಲ್ಪನೆಯನ್ನು ಆತ ಬರೆದು ಕಾವ್ಯವಾಗಿ ಕಟ್ಟಿಕೊಟ್ಟಾಗ ಅದರ ಅರ್ಥವನ್ನು ಗ್ರಹಿಸಿ ರಸಹೀರಿದರೆ ಅದು ಕವಿಯ ಬದುಕಿನ ಸಾರ್ಥಕತೆ. ರಂಗ ಕಲಾವಿದನಿಗೊಬ್ಬನಿಗೆ ಚಪ್ಪಾಳೆಯಿಂದ ಸಿಗುವ ಸ್ಫೂರ್ತಿ, ಸಿನಿಮಾ ನಟನಟಿಯರಿಗೆ ಅವರ ಅಭಿಮಾನಿಗಳು ಕೊಡುವ ಸ್ಫೂರ್ತಿ, ಚಿತ್ರಕಾರನಿಗೆ ಚಿತ್ರ ನೋಡಿ ಬೆನ್ನುತಟ್ಟುವ ಸ್ಫೂರ್ತಿ, ಸಂಗೀತಗಾರನೊಬ್ಬನಿಗೆ ಪುನಃ ಚಪ್ಪಾಳೆಯ ಸ್ಫೂರ್ತಿ ಸಿಗುವಂತೆ ಕವನ ಗೀಚುವಾತನಿಗೆ ಮಿತ್ರರು ಬಂದು ಹಾರೈಸಿದಾಗ ಅದೊಂದು ಹೊಸ ಅನುಭೂತಿ, ಅದೊಂಥರಾ ಸ್ಫೂರ್ತಿ ಅಲ್ಲವೇ ?

  ಸರ್ವಶ್ರೀ ಹರಿಹರಪುರ ಶ್ರೀಧರ್, ಡಾ| ಜ್ಞಾನದೇವ, ಬದ್ರಿನಾಥ್ ತಾವೆಲ್ಲ ಈ ಕವನ ಅನುಭವಿಸಿದ್ದಕ್ಕೆ ಬಹಳ ಕೃತಜ್ಞನಾಗಿದ್ದೇನೆ, ಆದಷ್ಟೂ ನೀವು ಬಯಸಿದಂತೆ ಹೊಸ ಹೊಸ ಕವನಗಳನ್ನು-ಕೃತಿಗಳನ್ನು ನಿಮಗೆಲ್ಲ ನಿವೇದಿಸಲು ಸದಾ ಪ್ರಯತ್ನಿಸುತ್ತೇನೆ, ನಿಮ್ಮ ಪ್ರತಿಕ್ರಿಯೆಗಳಿಗೆ ಅನಂತ ಧನ್ಯವಾದಗಳು.

  ReplyDelete
 5. ವಿಶಿಷ್ಟವಾದ ಅಪಾರ ಹರವಿನ ಸುಂದರ ಕವನ. ಚೆನ್ನಾಗಿ ಮೂಡಿದೆ.

  ReplyDelete