ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, July 12, 2010

ಛಲಛಲ


ಇರಲೇಕೆ ಈ ಜಗದಿ ಛಲವಿಲ್ಲದಿರೆ ಮನದಿ
ಬರಲುಂಟೆ ಪರಲೋಕದಾ ಗಂಟು ನಮಗೆ ?
ಹರಿವಾಣದೆದೆಯಲ್ಲಿ ಸಾಧಿಪಗೆ ನೂರೆಂಟು
ನರನ ನಾಡಿಯ ಮಿಡಿತ | ಜಗದಮಿತ್ರ

ಬರುವ ಸಂಕಷ್ಟಗಳ ದುಃಖ-ದುಮ್ಮಾನಗಳ
ಇರುವೆಯಂದದಿ ಕಂಡು ತಿರುಗಿ ಮುನ್ನಡೆದು
ಅರಿವು ಕೊಡುವರ ಕೂಡ ಹದ ಸ್ನೇಹವಂ ಪಡೆದು
ಹಿರಿಯೋ ಛಲದಾ ಕತ್ತಿ | ಜಗದಮಿತ್ರ

ಅರೆಘಳಿಗೆ ಮರೆತಿರಲು ಜಗವು ಮರೆವುದು ನಿನ್ನ
ಹೊರಗೆ ಸಾಧಿಪ ಸಮಯ ಸೀಮಿತವು ಇಹದಿ
ಹರನಿಲ್ಲ-ಹರಿಯಿಲ್ಲ ಜನರು ಮೊದಲೇ ಇಲ್ಲ
ಗುರಿಯಿಲ್ಲದಿರೆ ನಿನಗೆ | ಜಗದಮಿತ್ರ

ಜಗಕಾಗಿ ಬದುಕಿದರು ಶ್ರೀರಾಮ ಶ್ರೀಕೃಷ್ಣ
ಬಗೆಬಗೆಯ ಕಷ್ಟಗಳ ನುಂಗಿ ನೀರ್ ಕುಡಿದು
ಲಘುಬಗೆಯ ಕಾರ್ಪಣ್ಯಕಿಟ್ಟು ಮನದಲಿ ಕಿಚ್ಚು
ಧಗ ಧಗನೆ ಉರಿಸುನೀ | ಜಗದಮಿತ್ರ

ಹೇಡಿಯೆಂಬರು ನಿನಗೆ ನಗೆಯಾಡಿ ಬೆರಳಿಟ್ಟು
ಆಡಿಕೊಂಬರು ನಿನ್ನ ಎಲ್ಲರೆದುರಿನಲಿ
ಬೀಡಾಡಿಗಳ ನಿನ್ನ ಛಲದಿಂದ ದಮನಿಸುತ
ರೂಢಿಗುತ್ತಮನಾಗು | ಜಗದಮಿತ್ರ

ಛಲದಿಂದ ಶಿವಧನುವ ಮುರಿದನಾ ಶ್ರೀರಾಮ
ಹಲವು ಯೋಜನದುದ್ದ ಹಾರಿದನು ಹನುಮ !
ಗೆಲುವ ಗಾಂಢೀವಿ ತಾ ಪಡೆದ ಪಾಶುಪತಾಸ್ತ್ರ
ನಿಲುವು ನಿನಗಿದು ತರವು | ಜಗದಮಿತ್ರ

ಬಲವು ಬಹುಥರವಿಹುದು ಚೆಲುವು ಕ್ಷಣಿಕದ್ದಿಹುದು
ಒಲವು ಸಾರ್ಥಕ್ಯಕ್ಕೆ ದಾರಿಯಲಿ ದೀಪ
ಹಲವು ಹದಿನೆಂಟು ಪದ-ಪಟ್ಟಗಳು ನಿನಗಿಹವು
ಛಲವ ಸಾಧಿಸಿ ಪಡೆಯೋ | ಜಗದಮಿತ್ರ

6 comments:

 1. ಇವು inspiring ಕಗ್ಗಗಳು. ಬದುಕಿಗೆ ಚೈತನ್ಯ ತುಂಬಿಕೊಡಬಲ್ಲಂತಹವು. ಜಗದಮಿತ್ರ, ಇಂತಹ ಕಗ್ಗಗಳನ್ನು ಬರೆಯುವ ಮೂಲಕ ನಿಜವಾಗಿ ಜಗದಮಿತ್ರನಾಗುತ್ತಿದ್ದಾನೆ.

  ReplyDelete
 2. ನಿಮ್ಮ ಛಲಕ್ಕೆ ಮೆಚ್ಚಲೇ ಬೇಕು.ಇಲ್ಲಿ ನಾಲ್ಕು ಭಾರಿ ಬರೆದದ್ದೆಲ್ಲಾ ತಾಂತ್ರಿಕ ದೋಷದಿಂದ ಹಾಳಾಯ್ತು. ಹಾಗಾಗಿ ಹೆಚ್ಚು ಬರೆಯುವುದಿಲ್ಲ.ಇದೂ ಪ್ರಕಟವಾಗದಿದ್ದರೆ.....

  ReplyDelete
 3. ಅದ್ಭುತ ಕಗ್ಗಗಳು ಸರ್
  ತುಂಬಾ ಪಾಠ ಕಲಿಸುತ್ತವೆ

  ReplyDelete
 4. ಕಗ್ಗಗಳು ತಮಾಷೆಯ ರಸ ಸುರಿಸದಿರಲೆಂಬುದು ಅನಿಸಿಕೆ, ಗುರುವರ್ಯ ಡೀವೀಜಿ ಕಗ್ಗವನ್ನು ಗೀತೆಯಂತೆ ಕಡೆದರು, ಅವರ ನೆರಳಲ್ಲಿ ಕಗ್ಗಗಳು ನೀತಿ ಬೋಧಕಗಳಿಗೆ ಮಾತ್ರ ಮೀಸಲಾಗಿರಲಿ ಎಂಬ ಭಾವನೆಯಿಂದ ಹಾಸ್ಯ ರಸಪೂರಿತ ಕಗ್ಗಗಳನ್ನು ಬರೆಯಲಿಲ್ಲ! ಕಗ್ಗಗಳು ಎಲ್ಲರಿಗೂ ರುಚಿಸುವುದೂ ಕಷ್ಟ. ರುಚಿ ಎಂದೆನಿಸಿ ಬಯಸುವವರಿಗೆ ಬಿಡಲೂ ಕಷ್ಟ. ಅಂತೂ 'ಛಲ'ವನ್ನು ಛಲದಿಂದ ಓದಿದಿರಿ, ಮಿತ್ರ ಶ್ರೀಧರ ನಾಲ್ಕು ಸರ್ತಿ ಅಳಿಸಿ ಹೋದರೂ ಬಿಡದೆ ಐದನೇ ಬಾರಿ ತಮ್ಮ ಪ್ರತಿಕ್ರಿಯೆ ಮಂಡಿಸುವಲ್ಲಿ ತಮ್ಮ ಛಲವನ್ನು ಮೆರೆದಿದ್ದಾರೆ!

  ಮೊದಲಾಗಿ ಶ್ರೀ ಸುಬ್ರಹ್ಮಣ್ಯರೇ, ಜಗದಮಿತ್ರ ಎಂಬ ನಾಮ ಹುಟ್ಟಿರುವುದು 'ವಸುದೈವ ಕುಟುಂಬಕಮ್' ಎಂಬ ಧೋರಣೆಯಿಂದ, ಜಗತ್ತಿನ ಎಲ್ಲರೂ ಸುಖವಾಗಿರಲಿ ಎಂದು ಜಗದಮಿತ್ರನಾಗಿ ಹಾರೈಸುತೇನೆ, ತಮಗೆ ಧನ್ಯವಾದಗಳು

  ಛಲಬಿಡದೆ ಪ್ರತಿಕ್ರಿಯೆ ನೀಡಿದ ಶ್ರೀ ಶ್ರೀಧರ್ ತಮಗೂ ತಮ್ಮ ಅನುಭೂತಿಗೂ ಅನಂತ ನಮನಗಳು

  ಸಾಗರದಾಚೆಯವರು ದಿನವೂ ಈಚೆಬಂದು ನೆಟ್ ಮೂಲಕ ನನ್ನ ಮನಸ್ಸಿಗೆ ಬಹಳ ಖುಷಿಪಡಿಸಿದ್ದೀರಿ, ಡಾ| ಗುರುಮೂರ್ತಿ ತಮಗೂ ಅಭಿನಂದನೆಗಳು, ಅಭಿವಂದನೆಗಳು.

  ಎಲ್ಲಾ ನೇಪಥ್ಯದ ಓದುಗರಿಗೂ, ಗೂಗಲ್ ಬಜ್ ಓದುಗರಿಗೂ ಹಲವು ನೆನಕೆಗಳು, ನಮಸ್ಕಾರ.

  ReplyDelete
 5. ಜಗದ ಮಿತ್ರನ ಕಗ್ಗಗಳು ಸುಮಧುರ ಲಾಲಿತ್ಯದೀ ನಮ್ಮನ್ನು ಬದುಕಲ್ಲಿ ಭರವಸೆ ಇಟ್ಟು ಗುರಿಯಡೆಗೆ ದಿಟದ ಹೆಜ್ಜೆಯಿಟ್ಟು ನಡೆಯಲು ಪ್ರೇರೆಪಿಸುವಲ್ಲಿ ಯಶಸ್ವೀಯಾಗಿವೆ. ಚೆಂದದ ಕಗ್ಗಗಳನ್ನು ಬರೆದೊದಗಿಸಿದ್ದಕ್ಕೆ ಧನ್ಯವಾದಗಳು.

  ReplyDelete