ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 9, 2010

ಅಭಿನವ ಭಾರತಚಿತ್ರ ಕೃಪೆ :ಅಂತರ್ಜಾಲ

ಅಭಿನವ ಭಾರತ

ನಮ್ಮದೀ ದೇಗುಲವು ಪುಣ್ಯ ಭಾರತದೇಶ
ಪಡೆದು ಬಾ ಹುಟ್ಟಲೊಮ್ಮೆ!
ಹೆಮ್ಮೆಯಲಿ ಬೀಗುವೆವು ಭರತ ಖಂಡವಿದೆಂದು
ದುಡಿದು ಬಾ ನೋಡಲೊಮ್ಮೆ!

ಅಗಣಿತ ವಿದ್ಯೆಗಳ ಆಗರವು ಈ ನೆಲವು
ಸಗರಚಕ್ರವರ್ತಿ ಆಳ್ದ ಜಗವು
ಬಗೆಬಗೆಯ ವೇಷಭೂಷಣಗಳಲಿ ಶೋಭಿಸುವ
ನಗೆಹೊನಲು ಹರಿಸಿದ ಜನರಕಡಲು

ನವರತ್ನ ರಾಶಿಗಳ ಬಳ್ಳ ಬಳ್ಳದಿ ಅಳೆದು
ಉಳ್ಳವರು ಮಾರಿದರು ಯುಗಯುಗಾಂತರದಿ
ಕವಿರತ್ನ ಕಾಳಿದಾಸನು ಮತ್ತೆ ವಾಲ್ಮೀಕಿ
ಹಳ್ಳ-ಹೊಳೆ ಹರಿಸಿದರು ಕಾವ್ಯಗಳ ತೆರದಿ

ಕನ್ನಡಾಂಬೆಯು ಸೇರಿ ಹಲವು ಮಕ್ಕಳ ಬೀಡು
ಸನ್ನಡತೆ-ಸಂಸ್ಕೃತಿಯ ವಿಶ್ವದಾಲಯವು
ಪನ್ನೀರ ಕಾರಂಜಿ ಜನರಗುಣ ಅಪರಂಜಿ
ಮುನ್ನಡೆದ ರಾಷ್ಟ್ರಗಳ ರಾಣಿಯರಮನೆಯು.

ಧುಮ್ಮಿಕ್ಕಿ ಹರಿವಂತ ಹಲವು ನದಿಗಳ ನಾಡು
ಗೊಮ್ಮಟನು ನೆಲೆನಿಂತ ದಿವ್ಯ ಪರಿಸರವು
ಹೊಮ್ಮಿ ಹೊರಹರಿದ ಹಲ ಪ್ರತಿಭೆಗಳ ಸಾಗರವು
ಗಮ್ಮತ್ತು-ಗರದಿಯಾಟವು ನಡೆದ ಸ್ಥಳವು

4 comments:

 1. ಇಂತ ದೇಶದಿ ಜನ್ಮ
  ಅದು ನಮ್ಮ ಪೂರ್ವ ಜನ್ಮದ ಫಲವು
  ಎಂತಾ ಗರ್ಭದಿ ಜನಿಸಿ ಬಂದಿಹೆವು!
  ಅನುದಿನವು ನೆನೆನೆನೆದು
  ಬಾಳು ಸಾಗಿಸೆ ಆ ಜನ್ಮ ಸಾರ್ಥಕವು!
  ಭರತಭೂಮಿಯ ಸ್ಮರಿಸಿ
  ಸ್ಮರಿಸುವಂತೆಯು ಮಾಡಿ
  ಸಾರ್ಥಕ ಪಡೆಯಿತು ನಿಮ್ಮ ಲೇಖನಿಯು ||

  ReplyDelete
 2. ನಮಗಿನ್ನೂ ಆಗಷ್ಟ್ ೧೫ ಬರಲು ಒಂದು ಕಾಲು ತಿಂಗಳು ತಡವಿದೆ, ಸುಮ್ಮನೇ ಈಗಿಂದಲೇ ಭಾರತ ಭಾರತ ಭಾರತ ಅಂತ ಜಪಮಾಡುವುದೇಕೆ ಎಂಬ ಹಲವರ ಅನಿಸಿಕೆಗಳ ಮಧ್ಯೆ ಶೀಯುತ ಶ್ರೀಧರ್ ತಾವು ಭಿನ್ನವಾಗಿ ಕಾಣಿಸಿದಿರಿ. ಕೆಲವರು ರಾಷ್ಟ್ರೀಯ ಹಬ್ಬಗಳನ್ನೂ ಕೂಡ ರಜಾ ಸಿಗುವ ಮಜದ ದಿನಗಳನ್ನಾಗಿ ಕಾಣುತ್ತಾರೆ! ಇದರರ್ಥ ದೇಶಭಕ್ತಿ ಈ ಕವನ ಬರೆದ ನನಗೂ -ಓದಿದ ನಿಮಗೂ ಮಾತ್ರ ಇದೆಯೆಂದಲ್ಲ, ಆದರೆ ಸಹಜವಾಗಿ ನಮ್ಮ ಭಾವನೆಗಳೇ ಹಾಗೆ. ಅಪ್ಪ ತನಗೇನು ಕೊಟ್ಟ ಎನ್ನುವ ಮಗ ಅಪ್ಪನಿಗಾಗಿ ತಾನೇನು ಕೊಟ್ಟೆ ಎಂದು ಚಿಂತಿಸುವುದಿಲ್ಲ. ಅಮ್ಮನಲ್ಲಿ ತಪ್ಪನು ಹುಡುಕುವ ಆತ ಹೆಂಡತಿಯ ಮಾತನ್ನು ಕೇಳಿ ಬೇರೆಹೋಗುವ ಜಾಯಮಾನದವ! ಅದೇ ರೀತಿ ಭಾರತ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ಭಾರತದ ತುಂಬ ಏನೆಲ್ಲಾ ಇದೆ, ಏನಿತ್ತು, ಏನಿರುತ್ತದೆ, ಭಾರತದಲ್ಲಿ ಹುಟ್ಟಿ ನಾವೇನು ಮಾಡಿದ್ದೇವೆ ಎಂಬುದನ್ನು ಮನಗಂಡರೆ ಅದೇ ಒಂದು ಅಳಿಲು ಸೇವೆ ಇದ್ದಹಾಗೆ,ಯಾಕೆಂದರೆ ಶ್ರೀ ಸಾಮಾನ್ಯನಿಗೆ ದೇಶಕ್ಕಾಗಿ ಬಹಳ ಏನನ್ನೋ ಮಾಡಲು ಆಗುವುದಿಲ್ಲ, ಆದರೆ ಕೊಡುವ ಮನಸ್ಸಾದರೂ ಇದ್ದರೆ ಅದಕ್ಕೆ ಪ್ರತಿಶತ ಐವತ್ತು ಅಂಕಗಳು ಎಂದು ಹೇಳಬಹುದು! ಕವನಿಸಿ ಪ್ರತಿಕ್ರಿಯಿಸಿದ ಶ್ರೀಯುತ ಶ್ರೀಧರ್ ತಮಗೆ ನಮಸ್ಕಾರಗಳು, ಮುಂದೆ ಓದಲಿರುವ ಎಲ್ಲಾ ದೇಶಬಂಧುಗಳಿಗೂ ನಮನಗಳು

  ReplyDelete
 3. ಅಭಿನವ ಭಾರತ..!!
  ತುಂಬಾ ಚೆನ್ನಾಗಿದೆ ಸರ್ ಕವನ...
  ನಿಮ್ಮವ,
  ರಾಘು.

  ReplyDelete
 4. ಧನ್ಯವಾದ ರಾಘು

  ReplyDelete