ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 10, 2010


ಅರ್ಥವಾಗದ ಬದುಕು

ಬೇಸರವು ಕೆಲವೊಮ್ಮೆ ಯಾಕೋ ಹಾಗೊಳಗೊಳಗೆ
ಆಸರೆಯ ಬಯಸಿಹುದು ಮನವೇನೋ ನೆನೆದು
ನೇಸರನ ಎತ್ತರಕೆ ಎತ್ತಿಡುತ ಏಣಿಯನು ಕಾಣದಿಹ ಗುರುತು ಹುಡುಕಿ!

ದರ್ಪವೋ ದುಗುಡವೋ ದುಮ್ಮಾನವೋ ಅರಿಯೆ
ಸರ್ಪ ಹೆಡೆ ಎತ್ತಿ ನಿಂತಂತೆ ಬುಸುಗುಡುತ
ಅರ್ಪಣಾ ಭಾವವನು ಪಡೆಯಲೊಮ್ಮೆಗೆ ತಿರುವು ನೆನಪಿರದ ಕುರುಹು ನೆನೆದು!

ಕಾಮಾದಿ ರಕ್ಕಸರು ಬೀಡುಬಿಟ್ಟಿಹ ಕಾಡು
ಆಮೋದದಲಿ ಒಮ್ಮೆ ಗಹಗಹಿಸಿ ನಗುತ
ವ್ಯೋಮಯಾನಕೆ ಹೊರಟ ಗಗನಯಾತ್ರಿಯ ಸಡ್ಡು ಗೊತ್ತಿರದ ವಿಷಯ ಹಿಡಿದು

ಬರೆದು ಬಿಡು ಸಾಕೆನುತ ನೆನಗುದಿಯ ಬೇಗೆಗಳ
ಉರಿಯುತಿಹ ಮನದಿಂದ ಹೊರ ಹರಿದು ಬಿಡಲು
ಹರಿದು ಬಿಸುಡುವ ಅಚ್ಚ ಹುಚ್ಚನಂದದಿ ಹಲವು ಗೋಜಲಿನ ಮಡಿಲೊಳಿಳಿದು!

ಬಡತನದ ಬವಣೆ ಸಿರಿತನದವರ ಹಮ್ಮಿನಲಿ
ಗಡಬಡಿಸಿ ನಿಂತು ಧಿಮಿಗುಡುತ ಮಧ್ಯದಲಿ
ಚಡಪಡಿಸಿದನಗ್ನಿ ತಾ ಹೆದರಿ ಮುದುರುತ್ತ ಮುಂದಿರುವ ಕೇಡು ನೆನೆದು!

ಹರಿಯೇನು ಹರನೇನು ಯಾರು ಬಂದರೂ ಕೇಳೆ
ನರನನ್ನ ತಪ್ಪ ತೋರಿಸು ಎನುತ ಅದುರಿ
ಥರಥರ ನಡುಗುತ್ತ ಭೀಷ್ಮ-ವಲಲರ ನೆನೆದು ಸತ್ಯವನು ಹುಡುಕಿ ದಣಿದು

ಮಾಧ್ಯಮದಿ ಆದರ್ಶ ಬೋಧೆಯನು ಹೇಳುವರು
ಆದ್ಯತೆಯ ಅರಿವನ್ನು ಮೆಟ್ಟಿ ಹೊರನಡೆದು
ಸಾಧ್ಯತೆಯ ತೂರಿ ತಣ್ಣೀರೆರಚಿ ಚಿವುಟುತ್ತ ಮೊಟಕುವರು ಬಹಳ ಮೆರೆದು!

8 comments:

 1. nice one
  ಬದುಕಿನ ಜಂಜಾಟ ನಾನಾ ವಿಧ. ಅದನ್ನು ನಿಮ್ಮ ಕವನದಲ್ಲಿ ಚನ್ನಾಗಿ ವರ್ಣಿಸಿದ್ದೀರಾ.

  ReplyDelete
 2. bhat sir,
  tumbaa chintanege hacchida kavana..... chennaagide........

  ReplyDelete
 3. ನಿಮ್ಮ ಬ್ಲಾಗಿನಲ್ಲಿನ ಕವನ ನನಗೆ ಸ್ಪೂರ್ತಿಯಾಗಿದೆ ಬಹಳ ಸಲ. ತು೦ಬ ಚೆನ್ನಾಗಿ ಬರೆಯುತ್ತೀರಿ ನೀವು.

  ReplyDelete
 4. ಚಿಂತನೆಗೆ ಎಡೆಮಾಡುವ ಕವನ...ಚೆನ್ನಾಗಿದೆ.

  ReplyDelete
 5. ನೀವು ನಿದ್ರೆ ಮಾಡುಲ್ಲ ಭಟ್ಟರೇ, ಸಾಮಾಜಿಕ ಜಿಂಜಾಟಗಳು ನಿಮಗೆ ನಿದ್ರಿಸಲು ಬಿಡುವುದಿಲ್ಲ! ನಿಮ್ಮಂತ ಕಳಕಳಿಯ ಜನ ಹೆಚ್ಚಬೇಕು,ತಾಯಿ ಭಾರತಿಯ ದುಗುಡ ಕಡಿಮೆಯಾಗಬೆಕು, ಅವಳ ಮುಖದಲ್ಲಿ ನಲಿವು ಕಾಣಬೇಕು.

  ReplyDelete
 6. ಎನುಮಾಡೋಣ ಸಹೃದಯರೇ, ನಮ್ಮಂತೆ ಎಲ್ಲರೂ ಎನ್ನುವ ಮಾನವ ಜೀವನ ನೆನೆಸಿ ನಡೆದರೆ ಜಗತ್ತಿನಲ್ಲಿ ಮೇಲು-ಕೀಳರಿಮೆ,ದ್ವೇಷ-ವೈಷಮ್ಯ, ಮತ-ಸಿದ್ಧಾಂತಗಳ ಗೋಜಲು, ಬೇಡದ ವಸ್ತುಗಳ ಬಯಕೆಯ ಅತಿ ಆಸೆ, ಬೂಟಾಟಿಕೆ, ಕುತ್ಸಿತ ರಾಜಕೀಯ, ಬಾಂಬು-ಕತ್ತಿ-ಮಚ್ಚು-ಲಾಂಗು, ಪಿಸ್ತೂಲು-ರಿವಾಲ್ವರು ಇವೆಲ್ಲ ಇರುತ್ತಿರಲಿಲ್ಲ, ಆದರೆ ಆದರ್ಶಗಳೆಲ್ಲ ಬರೇ ಮಾಧ್ಯಮಗಳಲ್ಲಿ ಬಿಂಬಿಸಲೆಂದು ಬದಿಗಿಟ್ಟು ತನಗನಿಸಿದ ಮಾರ್ಗ ಸರಿಯೋ ತಪ್ಪೋ ಅರಿಯದೆ, ರೀತಿ-ರಿವಾಜಿಗೆ ಒಗ್ಗದೇ, ಅನುಭವಿಕರ ಮಾತಿಗೆ ಬಗ್ಗದೇ,ಯಾವುದಕ್ಕೂ ಜಗ್ಗದೇ ಮನುಷ್ಯ-ಮನುಷ್ಯರಲ್ಲಿ ಕಚ್ಚಾಟ-ಕಾದಾಟ ಶುರುವಾದಾಗ ಮನಸ್ಸು ಗುರಿಯಿಲ್ಲದ ದಾರಿ ಹಿಡಿಯುತ್ತದೆ, ಏನನ್ನೋ ಚಿಂತಿಸುತ್ತದೆ -ಅದು ಎಬ್ಸರ್ಡ್[ಅರ್ಥರಹಿತ] ! ಅಲ್ಲಿ ಮಾರ್ಗವೇ ಗೋಚರಿಸದ ಗೋಜಲು! ಹಾಗಾದಾಗ ಬರೆದರೆ ಹೇಗಿರಬಹುದು ಎಂದು ಆಲೋಚಿಸಿ ಬರೆದ ಕವನ.

  ಅರ್ಥವಿಸಿ ಪ್ರತಿಕ್ರಿಯಿಸಿದ ಸರ್ವಶ್ರೀ ಡಾ| ಗುರುಮೂರ್ತಿ, ಪ್ರವೀಣ್, ದಿನಕರ್, ಕುಸು ಮುಳಿಲಾಯ, ಪರಾಂಜಪೆ, ನಾರಾಯಣ ಭಟ್, ಹರಿಹರಪುರ ಶ್ರೀಧರ್ ತಮಗೆಲ್ಲರಿಗೂ ತುಂಬ ಕೃತಜ್ಞ, ನೇಪಥ್ಯಡ ಓದುಗರಿಗೂ, ಇನ್ನುಳಿದ ಗೂಗಲ್ ಬಜ್ ಓದುಗ ಮಹಾಶಯರಿಗೂ ನಮನಗಳು.

  ReplyDelete