ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 6, 2010

ಸಂಪಾದಕ, ಸಂಪಾದಕೀಯ ಮತ್ತು ಸಂಪಾದನೆ

ಚಿತ್ರ ಋಣ : ಅಂತರ್ಜಾಲ

ಸಂಪಾದಕ, ಸಂಪಾದಕೀಯ ಮತ್ತು ಸಂಪಾದನೆ

ಸಂಪಾದಕ

ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಯೂ ಸಂಪಾದಕ ಜೀವಿಯೇ! ಎಲ್ಲಿ ಸಂಪಾದಿಸುವ ಕೆಲಸ ನಡೆಯುತ್ತದೆಯೋ ಅದನ್ನು ಸಂಪಾದಕತ್ವ ಎನ್ನುತ್ತೇವೆ ಮತ್ತು ಆ ಕೆಲಸವನ್ನು ನಿರ್ವಹಿಸುವ ವ್ಯಕ್ತಿ/ಜೀವಿ ಸಂಪಾದಕ. ಸಂಪಾದನೆ ಎಂದರೆ ಕಲೆಹಾಕುವ ಕೆಲಸ. ಯಾವುದನ್ನು ಬೇಕಾದರೂ ಕಲೆಹಾಕಬಹುದು. ನಾವು ಜೇನುಹುಳಗಳನ್ನು ನೋಡುತ್ತೇವೆ. ಅವು ಹನಿ ಹನಿ ಮಕರಂದವನ್ನು ತಮ್ಮ ಮೂತಿಯಲ್ಲಿ ಶೇಖರಿಸಿಕೊಂಡು ತಂದು ತಮ್ಮದೇ ಆದ ಶೈಲಿಯಲ್ಲಿ ಮಾಡಿದ ಮೇಣದ ಗೂಡಿನ ಕೋಶಗಳಲ್ಲಿ ಸಂಪಾದಿಸುತ್ತವೆ. ಅರ್ಚಕನೊಬ್ಬ ನಾನಾಥರದ ಹೂವುಗಳನ್ನು ಸಂಪಾದಿಸಿಕೊಂಡು ಅರ್ಚನೆ ಮಾಡುತ್ತಾನೆ, ನಾವೆಲ್ಲ ನಿತ್ಯವೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪ-ಪುಣ್ಯಗಳನ್ನು ಸಂಪಾದಿಸುತ್ತಿರುತ್ತೇವೆ. ಹೀಗೇ ಅನೇಕ ಹುಳ-ಹುಪ್ಪಟೆ-ಹಕ್ಕಿ-ಪಕ್ಷಿಗಳೆಲ್ಲ ತಮ್ಮ ತಮ್ಮ ಜೀವನ ಧರ್ಮಾನುಸಾರ ಸಂಪಾದಕತ್ವವನ್ನು ನೆರವೇರಿಸುತ್ತವೆ. ಉದರಂಬರಣೆಗೆ ವ್ಯಕ್ತಿ ಯಾವುದೋ ಮಾರ್ಗದಲ್ಲಿ ಕೆಲಸಮಾಡುತ್ತ ಹಣವನ್ನು ಸಂಪಾದಿಸುತ್ತಾನೆ. ಹೀಗೇ ಎಲ್ಲರೂ ಸಂಪಾದಕರೇ. ಆದರೆ ಸರ್ವೇ ಸಾಮಾನ್ಯವಾಗಿ ನಾವು ಸಂಪಾದಕರೆಂದು ಕರೆಯುವುದು ಒಂದು ಪತ್ರಿಕೆ,ನಿಯತಕಾಲಿಕೆ,ಬೇರೆಯವರ ಕೃತಿಗಳ ಸಂಪುಟ ಮುಂತಾದುವುಗಳಲ್ಲಿ ಸಂಪಾದಕತ್ವ ನಿರ್ವಹಿಸುವ ವ್ಯಕ್ತಿಗಳಿಗೆ. ಇಲ್ಲಿ ಸಂಪಾದಕರಾಗಲು ಇಂಥದ್ದೇ ಮಾನದಂಡವೇನೂ ಇಲ್ಲ. ಪ್ರತಿಭೆಯಿಂದ ಮೇಲೆಬರುವವರು ಅನೇಕರಾದರೆ, ಅವರವರ ವೈಯಕ್ತಿಕ ಪ್ರಭಾವ,ಪ್ರಲೋಭನೆಗಳನ್ನು ಅಥವಾ ಸಾಂದರ್ಭಿಕವಾಗಿ ಸಿಗಬಹುದಾದ ’ಬಿದ್ದುಹೋಗುವ ಜಾಗ ತುಂಬುವ’ ಕೆಲಸವನ್ನು ವಹಿಸಿಕೊಂಡು ಸಂಪಾದಕರಾಗಿ ಕೆಲಸಮಾಡುವವರಿರುತ್ತಾರೆ.

ಸ್ವಯಂ ಪ್ರತಿಭೆಯಿಂದ ಸ್ವಯಂಭುವಿನ ಥರ ಮೇಲೆದ್ದು ಸಂಪಾದಕರಾದವರು ತಮ್ಮ ಸ್ವಂತಿಕೆಯನ್ನು ಕಾಪಿಡಲು ಯಾರ ಮರ್ಜಿಗೋ ಮುಲಾಜಿಗೋ ಬರೆಯುವ/ಸಂಪಾದಿಸುವ ವ್ಯಕ್ತಿಗಳಾಗುವುದು ಕಡಿಮೆ.ಇಂಥವರು ವಿಸ್ತ್ರತ ಅಧ್ಯಯನಶೀಲರಾಗಿರುತ್ತಾರೆ. ತಮ್ಮ ಸುತ್ತಲ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವವರಾಗಿರುತ್ತಾರೆ,ಸಹನಶೀಲರಾಗಿರುತ್ತಾರೆ,ಸ್ಮಯಪ್ರಜ್ಞೆ ಮತ್ತು ಸ್ಮಯ ಸ್ಪೂರ್ತಿ ಎರಡನ್ನೂ ಹೊಂದಿದವರಾಗಿರುತ್ತಾರೆ.ತತ್ವ-ತರ್ಕ ಮುಂತಾದ ಹಲವು-ಹತ್ತು ವಿಷಯಗಳಲ್ಲಿ ಸ್ವಾನುಭವದಿಂದ ಬೆಳೆಯುತ್ತಬಂದವರಾಗಿರುತ್ತಾರೆ,ತತ್ವನಿಷ್ಠರಾಗಿರುತ್ತರೆ. ಮನುಜಮತ ಮತ್ತು ವಿಶ್ವಪಥ ಅವರ ಮಾರ್ಗವಾಗಿರುತ್ತದೆಯೇ ವಿನಃ ಕೇವಲ ಯಾವುದೇ ಧರ್ಮಕ್ಕೋ, ರಾಜಕೀಯ ಪ್ರಲೋಭನೆಗೋ ಒಳಗಾಗಿರುವುದಿಲ್ಲ. ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಲೇಖನಿಯಿಂದ ತಿದ್ದಬಲ್ಲ ಆದರ್ಶಗಳನ್ನು ಅವಲೋಕಿಸುತ್ತಾರೆ,ಅಳವಡಿಸಿಕೊಂಡಿರುತ್ತಾರೆ. ಒಂದರ್ಥದಲ್ಲಿ ಸಂಪಾದಕರು ನ್ಯಾಯಾಧೀಶರ ರೀತಿಯಲ್ಲಿ ಬಹಳ ಗಂಭೀರ ತರಗತಿಯವರಾಗಿದ್ದು ನಿಷ್ಪಕ್ಷಪಾತಿಗಳಾಗಿರುತ್ತಾರೆ. ಸಾಮಾನ್ಯರಿಗಿಂತ ಭಿನ್ನವಾಗಿ ಆದರೆ ಸಾಮಾನ್ಯರ ಬೇಕು-ಬೇಡಗಳಿಗೆ ಕನ್ನಡಿಹಿಡಿದು ಅದನ್ನು ಆಳುವ ಪ್ರಭುಗಳಮುಂದೆ ಎತ್ತಿ ಇಡುವ ಸಮಾಜೋದ್ಧಾರದ ಕೆಲಸವನ್ನು ಮಾಡುತ್ತಿರುತ್ತಾರೆ. ತನ್ನ ಜಾಣತನದಿಂದ ಕಾವಿ-ಖಾದಿ-ಖಾಕಿ ಗಳಾದಿಯಾಗಿ ಎಲ್ಲರಂಗದಲ್ಲೂ ತಮ್ಮ ಟೆಸ್ಟ್ ಪ್ರೋಬ್ ಇಟ್ಟು ಆಗಾಗ ಇರುವುದನ್ನು ಪರಿಶೀಲನೆ ಮಾಡುತ್ತಿರುತ್ತಾರೆ. ಯಾಕೆಂದರೆ ಇವತ್ತು ನಾವು ಕಲಿಗಾಲದಲ್ಲಿದ್ದೇವೆ. ಕಲಿಯ ಪ್ರಭಾವದಿಂದ ಲೌಕಿಕ ವ್ಯವಹಾರಗಳಲ್ಲಿ ತೊಡಗಿಕೊಂಡ ಅನೇಕ ಜನ ದಾರಿ ತಪ್ಪಿಬಿಡಬಹುದು-ಹೀಗಾಗಿ ಅವರನ್ನೆಲ್ಲ ಸರಿದಾರಿಗೆ ತರಲು ತಮ್ಮ ಬರವಣಿಗೆಯನ್ನು ಬಳಸುತ್ತಾರೆ. ಬರವಣಿಗೆಯ ಹರಿತವಾದ ಶೈಲಿಯೇ ಖಡ್ಗದ ರೀತಿ,ಈಟಿಯ ರೀತಿ ಅಂಥವರಿಗೆ ತಾಗಿ ಅವರು ಸುಧಾರಿಸಲಿ ಎಂಬುದು ಸಂಪಾದಕರ ಅಭಿಮತವಾಗಿರುತ್ತದೆಯೇ ಹೊರತು ಅಲ್ಲಿ ಕುಚೋದ್ಯಕ್ಕೆ, ಕುಹಕಕ್ಕೆ ಅವಕಾಶವಿರುವುದಿಲ್ಲ! ಸಂಪಾದಕನೊಬ್ಬ ಒಳ್ಳೆಯ ಡ್ರೈವರ್, ಹಿ ಮಸ್ಟ್ ಬಿ ಏ ಡ್ರೈವಿಂಗ್ ಫೋರ್ಸ್ ಟು ದಿ ಸೊಸೈಟಿ! ಜನರಿಗೆ ಸ್ಪಂದಿಸುತ್ತ,ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತ ಪ್ರತೀ ಹಂತದಲ್ಲೂ ಉತ್ಕೃಷ್ಟ ಸಂಪಾದಕೀಯವನ್ನು ಮತ್ತು ಇತರ ಕೃತಿಗಳನ್ನು ಕೊಡುವ ಸ್ವಭಾವ ಇಂತಹ ಸುಧಾರಸ ಮನೋವೃತ್ತಿಯವರದಾಗಿರುತ್ತದೆ.

ಪ್ರತಿಭೆಯಿಲ್ಲದೇ,ಅರ್ಹತೆಯೂ ಇಲ್ಲದೇ ಕೇವಲ ಪ್ರಲೋಭನೆಯಿಂದ ಸಂಪಾದಕಸ್ಥಾನಕ್ಕೆ ಬಂದು ಕುಳಿತ ವ್ಯಕ್ತಿ ಮಂಗ ಕೈಯಲ್ಲಿ ಮಾಣಿಕ್ಯ ಪಡೆದಂತೆ ಆಡುತ್ತಾರೆ. ಅವರಿಗೆ ಸಂಪಾದಕನ ಆದರ್ಶಗಳು ಒಗ್ಗುವುದಿಲ್ಲ. ಅವರು ಏಕಮುಖವಾಗಿರುತ್ತಾರೆ. ಅವರದ್ದು ಹಿಟ್ಲರ್ ವಾದವಾಗಿರುತ್ತದೆ. ತಮ್ಮ ನುಡಿಯನ್ನು ಎಲ್ಲರೂ ಏಕರೂಪದಲ್ಲಿ ಅಂಗೀಕರಿಸಬೇಕೆಂಬುದು, ಮತ್ತು ತಾವು ಹೇಳಿಕೆ ಕೊಟ್ಟಮೇಲೆ ಜಗತ್ತಿಗೇ ಅದು ಆದರ್ಶ ಎಂಬ ಅತಿಯಾದ ಅಹಂಕಾರ ಹೊಂದಿರುತ್ತಾರೆ. ತಮ್ಮ ಮಾತನ್ನು ಪರಿಚಯದ/ಸುತ್ತಲಿನ ಒದುಗ ಪ್ರಪಂಚ ಮನ್ನಿಸಿ ನಡೆಯಲಿ, ಯಾವಾಗಲೂ ತಮ್ಮ ಮಾತಿಗೇ ಸೊಪ್ಪುಹಾಕಲಿ ಎಂಬ ಎಡಬಿಡಂಗಿಗಳಾಗಿರುತ್ತಾರೆ. ಸ್ನೆಹಿತವರ್ಗದವರೆಲ್ಲರೂ ತಮ್ಮನ್ನೇ ರೋಲ್ ಮಾಡೆಲ್ ಥರ ಅನುಸರಿಸಲಿ ಎಂಬ ಅಂಡೆಪಿರ್ಕಿಗಳಾಗಿರುತ್ತಾರೆ. ಹೆಂಗಸರ/ಹೆಣ್ಣುಮಕ್ಕಳ ಮಧ್ಯೆ ಸಭೆಯಲ್ಲಿ ಕಂಗೊಳಿಸುವ ಕೃಷ್ಣಪರಮಾತ್ಮರಾಗಿರುತ್ತಾರೆ! ರಾಜಕಾರಣಿಗಳ ಮಾತಿಗೆ ಕಟ್ಟುಬೀಳುವ ಕೋಡಂಗಿಗಳಾಗಿರುತ್ತಾರೆ. ಖಾಕಿಯನ್ನು ದೂರದಲ್ಲೇ ಕಂಡರೂ ಬಟ್ಟೆ ಒದ್ದೆಮಾಡಿಕೊಳ್ಳುವ ನಜಬಂಢರಾಗಿರುತ್ತಾರೆ. ಕಾಣುವ ಕಾವಿಗಳಿಗೆಲ್ಲ ಸೆಲ್ ಫೋನ್ ನಲ್ಲೇ ಸಲಾಮುಹೊಡೆದು ಸಾಷ್ಟಾಂಗವೆರಗುವ ಭಟ್ಟಂಗಿಗಳಾಗಿರುತ್ತಾರೆ! ಇಂಥವರಿಗೆ ಜ್ಞಾನಾರ್ಜನೆಗಿಂತ ಪೊಳ್ಳು ಸ್ವಪ್ರತಿಷ್ಠೆ, ದುರಹಂಕಾರ,ದುರಭಿಮಾನವೇ ಮೊದಲಾದ ಎಲ್ಲಾ ಬೇಡದ ಗುಣ-ಸ್ವಭಾವಗಳು ಮೈಗೊಂಡು ತಮಗೇ ತಿಳಿಯದೇ ಅವರು ಬಾಹುಕರಾಗಿರುತ್ತಾರೆ! ’ವಸುದೈವ ಕುಟುಂಬಕಮ್’ ಎಂಬದನ್ನು ಗಾಳಿಗೆ ತೂರಿ ಸಮಾಜದ ಮುಂದೆ ಧುತ್ತೆಂದು ಬೇರೆ ಮಾಧ್ಯಮದವರು ಎತ್ತಿಹಿಡಿಯುವ ಕೆಟ್ಟ ಘಟನಾವಳಿಗಳನ್ನೆಲ್ಲ ’ಕೇವಲ ಷಡ್ಯಂತ್ರ’ ಎಂದು ಬಣ್ಣಿಸುತ್ತ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಂಚದ ಕೆಳಗೆ ತೂರಿ ಮಲಗಿಬಿಡುತ್ತಾರೆ! ಜಗತ್ತು ಎನನ್ನುತ್ತದೆ ಎಂಬ ಕನಿಷ್ಠ ಪರಿಜ್ಞಾನ ಕೂಡ ಅವರಿಗಿರುವುದಿಲ್ಲ. ಕೆಲವೊಮ್ಮೆ ಈ ಪೀಳಿಗೆಯವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ’ಪ್ರಸಾದ’ಪಡೆದು ಬರೆಯುತ್ತಿರುತ್ತಾರೆ. ಹಾಗೆ ನೋಡಿದರೆ ಸಮಾಜಕ್ಕೆ ಬೇಕಾಗುವ ಯಾವ ಕೃತಿಯೂ ಅವರಿಂದ ರಚಿತವಾಗಿರುವುದಿಲ್ಲ; ಸಮಾಜೋನ್ನತಿಯ ಕೆಲಸ ಅವರ ಜಗದಲ್ಲಿ ಕನಸಿನ ಮಾತು. ಬದುಕು ಪೂರ್ತಿ ’ಪ್ರಸಾದ’ ಹೆಚ್ಚಿಸಿಕೊಳ್ಳುವ ಇಂಥವರು ತಾವೂ ಬೆಳೆಯುವುದಿಲ್ಲ, ತಮಗೆ ತಿಳಿದ ವ್ಯಕ್ತಿಗಳನ್ನೂ ಸಮಾಜದಲ್ಲಿ ಬೆಳೆಯಗೊಡುವುದಿಲ್ಲ! ಹೆಚ್ಚಾಗಿ ಇಂತಹ ’ಸಂಪಾದಕ’ರಿರುವುದು ಚಿಕ್ಕ-ಪುಟ್ಟ ಪತ್ರಿಕೆಗಳು-ವಾರಕ್ಕೋ-ತಿಂಗಳಿಗೋ ಹೊರಡುವ ಸಮುದಾಯಗಳ ಪತ್ರಿಕೆಗಳು, ಸೂರ್ಯನ ಬೆಳಕನ್ನು ಅಷ್ಟಾಗಿ ನೋಡದ ಪಾಕ್ಷಿಕಗಳು ಇತ್ಯಾದಿಗಳಲ್ಲಿ. ಅಲ್ಲಿ ಅವರೈರುವವರೆಗೆ ಅವರ ಅಂಡೆಪಿರ್ಕಿತನವಿರುವುದರಿಂದ ಪತ್ರಿಕೆಯ ಬೆಳವಣಿಗೆಯಾಗಲೀ ವಿಕಸನವಗಲೀ,ವಿಸ್ತ್ರತ-ಮೌಲ್ಯಯುತ ಕೃತಿಗಳ ಪ್ರಕಟಣೆಯಾಗಲೀ ಸಾಧ್ಯವೇ ಇರುವುದಿಲ್ಲ. ತನ್ನ ಮೂಗಿನ ನೇರಕ್ಕೆ ಸೂರ್ಯಬಂದರೆ ಅವನ್ನನ್ನೇ ಕೆಕ್ಕರಿಸಿ ನೋಡಿ ಉಗುಳುವ ಬಹುದೊಡ್ಡ ಕಮಂಗಿಗಳು ಇವರು! ಹೀಗಾಗಿ ಸಂಪಾದಕ ಹೇಗಿರಬೇಕು ಎಂಬುದು ಇಂಥವರಿಗೆ ಅಪಥ್ಯ ವಿಷಯ. ಸಮಾಜವನ್ನು ಶುದ್ಧ-ವಿಚಾರಪೂರಿತ,ಮೌಲ್ಯಯುತ,ಸಾರಯುತ,ನಿಷ್ಕಪಟ,ನಿರ್ಭೀತ,ನಿಷ್ಪಕ್ಷಪಾತ ಸಂಪಾದಕೀಯವೆಂಬ ಪಂಚಗವ್ಯದಿಂದ ಶುದ್ಧೀಕರಿಸಬೇಕಾದ ಸಂಪಾದಕರುಗಳಲ್ಲಿ ಹೀಗೆ ಎರಡನೆಯ ವಿಭಾಗದವರೂ ಇದ್ದಾರೋ ಎಂಬುದು ನಿಮಗೆಲ್ಲ ಆಶ್ಚರ್ಯವುಂಟುಮಾಡಬಹುದು, ಆದರೆ ಇದು ಸತ್ಯ, ಬಹುಶಃ ಪತ್ರಿಕೋದ್ಯಮ,ಪ್ರಕಾಶನಗಳು ಬದುಕಿರುವವರೆಗೂ!


ಸಂಪಾದಕೀಯ

ಸಂಪಾದನಕ್ರಿಯೆಯಲ್ಲಿ ಸಂಪಾದಕರು ಬಹಳ ಜಾಣ್ಮೆಯನ್ನು ಮೆರೆಯಬೇಕಾಗುತ್ತದೆ. ಪತ್ರಿಗೆಗಳಲ್ಲಿ ದುಡಿಯುವ ಸಂಪಾದಕರಿಗಂತೂ ದಿನವೂ ಹಲವು ಸಾವಿರ ಕೃತಿಗಳು,ಪತ್ರಗಳು,ಮಿಂಚಂಚೆಗಳು ಬರುತ್ತಿರುತ್ತವೆ. ಸುತ್ತಲ ಲೋಕದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ರಾಜಕೀಯ-ಸಾಮಾಜಿಕ,ಆರ್ಥಿಕ,ಜಾಗತಿಕ ಪಿಡುಗುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಅನೇಕ ಹಳೆಯ-ಹೊಸ ಕವಿ-ಸಾಹಿತಿಗಳ ಕೃತಿಗಳ ಪ್ರಕತಣೆ,ಅವಲೋಕನ,ಪುನರ್ಮುದ್ರಣ,ಪರಿಶ್ಕರಣವೇ ಮೊದಲಾದ ಕಾರ್ಯಗಳು ನಡೆಯುತ್ತಿರುತ್ತವೆ. ಹೊಸಹೊಸ ಬಗೆಯ ಲೇಖನ-ಅಂಕಣಗಳನ್ನು ಕೊಟ್ಟು-ಕಟ್ಟಿ ಬೆಳೆಸಬೇಕಾದ ಪ್ರಮೇಯ ಇದೆ. ಇದರೊಂದಿಗೆ ತನ್ನ ಎಲ್ಲಾ ಕಾರ್ಯಗಳಿಗೆ ಪೂರಕ ಗುಣಮಟ್ಟದಲ್ಲಿ ಬರೆಯುವ ಅರ್ಹತೆಯುಳ್ಳ ವ್ಯಕ್ತಿಗಳನ್ನು ಆಯ್ದು ಒಂದು ದೊಡ್ಡ ಟ್ರೂಪ್ ಕಟ್ಟಿಕೊಳ್ಳುವುದರೊಂದಿಗೆ ಆ ಟ್ರೂಪ್ ಕೆಡದಂತೆ, ಒಡೆಯದಂತೆ ಸಂರಕ್ಷಣೆ ಮತ್ತು ಸಂವಹನಮಾಡುವುದೂ ಕೂಡ ಸಂಪಾದಕನ ಜಾವಾಬ್ದಾರಿಯ ವ್ಯಾಪ್ತಿಗೆ ಒಳಪಡುತ್ತದೆ. ಹಲ್ಲುಗಳ ಮಧ್ಯೆ ನಾಲಿಗೆ ಕೆಲಸನಿರತವಾಗಿರುವಂತೆ ಎಲ್ಲರ ಮಧ್ಯೆ ತಾನಿದ್ದು ತನ್ನ ಇರವನ್ನು ಗಮನಿಸುತ್ತ ಹೊರಜಗದ ಪರಿಯನ್ನೂ ಅವಲೋಕಿಸಿ ಬರೆಯುವ ವೃತ್ತಿ ಭೂಮಿ ತನ್ನನ್ನೇ ಸುತ್ತುತ್ತ ಸೂರ್ಯನನ್ನೂ ಸುತ್ತುವುದಕ್ಕೆ ಹೋಲಿಸಬಹುದಾಗಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ಸಮಾಜಕ್ಕೆ ಹಿತವೆನಿಸುವ, ರಾವಣತ್ವವನ್ನು ಮರ್ದಿಸಿ ರಾಮತ್ವಮೆರೆಸುವ, ಸಮಾಜಘಾತುಕರನ್ನು ನಿಗ್ರಹಿಸುವ ಮೂರನೆಯ ಕಣ್ಣನ್ನು ತೆರೆಯುವ ಮುಕ್ಕಣ್ಣನಾಗಬೇಕಾಗುತ್ತದೆ! ಹರಿತವಾದ ಲೇಖನಿಯಿಂದ ಧೂರ್ತ ರಾಜಕಾರಣಿಗಳನ್ನು, ಖೂಳರನ್ನು, ಕಳ್ಳರನ್ನು, ಹಗಲು ದರೋಡೆಕೋರರನ್ನು, ವಂಚಕರನ್ನು, ವೇಷಧಾರಿಗಳನ್ನು, ತಪ್ಪಿತಸ್ಥರನ್ನು ಜನರಮುಂದೆ-ಸಮಾಜದ ಮುಂದೆ ಹೆಡೆಮುರಿಗೆ ಕಟ್ಟಿ ತಂದು ನಿಲ್ಲಿಸುವ ಯೋಧ ಈ ಸಂಪಾದಕನಾಗಬೇಕಾಗುತ್ತದೆ. ಪ್ರಕೃತಿಯ ವಿಕೋಪಗಳಲ್ಲಿ, ವಿಪರ್ಯಾಸಗಳಲ್ಲಿ, ಅನಿವಾರ್ಯತೆಯಲ್ಲಿ, ವಿಪ್ಲವಗಳಲ್ಲಿ ಘಟನೆಗಳನ್ನು ಮನದಂದು ಮಾರ್ದನಿಸುವ, ಇದ್ದುದರಲ್ಲೇ ಸುಖದಿಂದಿರುವ ಲೋಕದ ಇತರ ಜನಸಮುದಾಯಕ್ಕೆ ಕೂಗಿ ಹೇಳಿ ಸಹಾಯಕ್ಕಾಗಿ ಕರೆಯುವ ಕಹಳೆಯಾಗಬೇಕಾಗುತ್ತದೆ. ರಾಜಕೀಯ-ಆರ್ಥಿಕ ಡೋಲಾಯಮಾನ ಪರಿಸ್ಥಿತಿ ಉದ್ಭವವಾದಾಗ ಸಮಾಜದಲ್ಲಿ ಅಲ್ಲೋಲ ಕಲ್ಲೋಲವಗದಂತೆ ಕರೆಕೊಡುವ ರಾಜನಾಗಬೇಕಾಗುತ್ತದೆ! ನೀತಿ ಬಾಹಿರ ಕೆಲಸಗಳಲ್ಲಿ ತೊಡಗಿದ ಜನರನ್ನು ಮಟ್ಟಹಾಕುವ ದಂಡಾಧಿಕಾರಿಯಾಗಬೇಕಾಗುತ್ತದೆ. ಒಟ್ಟಾರೆ ಜನರ ಕಣ್ಣಿಗೆ ಕಣ್ಣಾಗಿ,ಜನರ ದನಿಗೆ ದನಿಯಾಗಿ,ಜನರ ಕಿವಿಗೆ ಕಿವಿಯಾಗಿ--ಹೀಗೇ ಜನಪಂಚೇಂದ್ರಿಯಗಳು ಏನನ್ನು ಸಾಮನ್ಯವಾಗಿ ಅನುಭವಿಸುತ್ತವೆಯೋ ಅದನ್ನೇ ತನ್ನ ಸ್ವಾನುಭವಕ್ಕೆ ತೆಗೆದುಕೊಳ್ಳುವ ಪರಕಾಯ ಪ್ರವೇಶ ಮಾಡುವ ಅತಿಮಾನುಷಶಕ್ತಿಯ ರೀತಿ ಕೆಲಸ ಮಾಡಬೇಕಾಗುತ್ತದೆ!

ಈ ನಡು ನಡುವೆಯೇಜನರ ಜೇಬಿಗೂ ಭಾರವಾಗದ ದರದಲ್ಲಿ ಜನರಿಗೆ ರುಚಿ ರುಚಿಯಾದ ಆಹ್ಲಾದಕರ ಕೃತಿಗಳನ್ನು ನೀಡುತ್ತ ಮುಂದೆಸಾಗುವ, ಬೆಳೆಯುವ-ಬೆಳಗುವ ತ್ರಿವಿಕ್ರಮನಾಗಬೇಕಾಗುತ್ತದೆ. ಬಹುತೇಕ ಸಂಪಾದಕರಿಗೆ ಇವುಗಳಲ್ಲಿ ಕೆಲವೊಂದು ಮಾತ್ರ ಸಿದ್ಧಿಸಿರುತ್ತದೆ. ಮಿಕ್ಕಿದ್ದರ ಗೋಜಿಗೆ ಅವರು ಹೋಗುವುದೇ ಇಲ್ಲ. ಇವತ್ತು ಸಂಪಾದಕರಿಗೆ ಹಿಂದಿನ ಸಂಪಾದಕರ ರೀತಿ ಅಚ್ಚನ್ನು[ಮುದ್ರಣ ದೋಷ] ತಿದ್ದುವಲ್ಲಿ ಬಹಳ ಸಮಯವೇನೂ ಪೋಲಗದು, ಈಗ ಗಣಕ ಯಂತ್ರಗಳಿವೆ, ಲೋಹದ ಮೊಳೆಗಳನ್ನು ಜೋಡಿಸಿ ಅಚ್ಚಿಸುವ ಕಾಲವಿದಲ್ಲ, ಪೂರಕ ಪರಿಸರವಿದೆ-ಪರಿಕರಗಳಿವೆ, ಪದವಿಪಡೆದ ಬರಹಗಾರರಿದ್ದಾರೆ, ಸರಸ್ವತಿ ಎಲ್ಲರಲ್ಲೂ ಸ್ಪುರಿಸುತ್ತ ಅಧ್ಯಯನ-ಅಧ್ಯಾಪನ ಎರಡೂ ರಂಗ ವಿಸ್ತರಿಸಲ್ಪಟ್ಟಿದೆ, ದೃಶ್ಯಮಾಧ್ಯಮಗಳು/ಶ್ರಾವ್ಯ ಮಾಧ್ಯಮಗಳು ಕ್ಷಣಕ್ಷಣದ ವರದಿಗಳನ್ನು ಹೊತ್ತು ತರುತ್ತಿರುತ್ತವೆ-- ಈ ಎಲ್ಲ ಲಭ್ಯ ಉಪಲಬ್ಧಗಳಿಂದ ಸಂಪಾದಕೀಯ ಬಹಳ ಸರಳವಾಗಿ,ಸ್ಫುಟವಾಗಿ,ನಿರರ್ಗಳವಾಗಿ ಸ್ರವಿಸಲು ಬರುವ ತೈಲಧಾರೆಯಂತೆ ಹರಿಯಲು ಸಾಧ್ಯವಿದೆ; ಇದಕ್ಕೆ ಸಂಪಾದಕನ ಧೈರ್ಯ,ಸ್ಥೈರ್ಯ ಮತ್ತು ಉಳಿದ ಮನೋಭೂಮಿಕೆ ಸಜ್ಜಾಗಿ ಕಾರ್ಯ ನಡೆಯುತ್ತಿರಬೇಕಷ್ಟೇ.


ಸಂಪಾದನೆ

ಸಂಪಾದನೆಯೆಂದರೆ ಗಳಿಕೆ,ಗಳಿಸುವುದು,ದುಡಿಮೆ,ಸಂಭಾವನೆ ಹೀಗೆಲ್ಲ ಆಗುತ್ತದಲ್ಲವೇ ? ಸಂಪಾದನೆಯೆಂದರೆ ಸಂಪಾದಕನ ಅರ್ಥದಲ್ಲಿ ಸಂಗ್ರಹಿಸಿದ,ಆಯ್ದ,ಸಂಗ್ರಹಯೋಗ್ಯ,ಪ್ರಕಟಣಪೂರ್ವದ, ಓದುಗರ ಕೈಗೆ ಅಚ್ಚಿಸಿ ಕೊಡಬಹುದಾದ ತಿದ್ದಿ.ತೀಡಿ, ಬಣ್ಣಹಚ್ಚಿ, ಹದಗೊಳಿಸಿ, ಹುಬ್ಬು ಬರೆದು-ವೇಷತೊಡಿಸಿ,ಆಭರಣಗಳಿಂದ ಅಲಂಕರಿಸಿದ ನಾಟ್ಯ ಸರಸ್ವತಿ; ಸಾಸಿವೆ,ಕೋಸಂಬರಿ, ಹುಳಿ,ಮಜ್ಗೆ-ಹುಳಿ, ತಿಳಿಸಾರು, ಕೂಟು, ಹೋಳಿಗೆ, ಫೇಣಿ, ಸಜ್ಜಿಗೆ, ಶ್ಯಾವಿಗೆ ಮತ್ತು ಗಸಗಸೆ ಪಾಯಸ, ನುಚ್ಚಿನುಂಡೆ, ಕಾಯ್ಗಡಬು, ಕೆನೆಮೊಸರು, ಮಾವಿನ್ಕಾಯ್ ನೀರ್ಗೊಜ್ಜು, ಪುಳಿಯೋಗರೆ, ಕೇಸರೀಬಾತು ಎಲ್ಲವುಗಳಿಂದ ಎಡೆಸಿಂಗರಿಸಿ ನಿವೇದಿಸಲು ತಯಾರಿ ನಡೆಸಿರುವ, ಇಂಗು-ಕರಬೇವಿನ ಮೇಲೋಗರಕ್ಕೆ ಸಿದ್ಧವಾದ ಅಡುಗೆ!

ಸಂಪಾದಕನ ಸಂಪಾದನೆಯ ಜೋಳಿಗೆಯಲ್ಲಿ ಇಲ್ಲದ ಕಜ್ಜಾಯವಿಲ್ಲ. ಸಮಾಜಕ್ಕೆ ನಿರ್ವಂಚನೆಯಿಂದ, ನಿಷ್ಕಳಂಕಿತನಾಗಿ, ನಿಸ್ಪೃಹನಾಗಿ, ನಿರುಪದ್ರವಕಾರಿಯಾಗಿ, ನಿರ್ವಿಕಾರಿಯಾಗಿ, ನಿರ್ವಿಣ್ಣನಾಗಿ, ಮೊಗೆದು ಬಡಿಸುವ ವಿಶಾಲ ಹೃದಯದ ಬಾಣಸಿಗನಾಗಿ, ಅಕ್ಷಯಾಂಬರನೀಡುವ ಶ್ರೀಕೃಷ್ಣನಾಗಿ, ಕಲಿಸುವ ಅಧ್ಯಾಪಕರಿಗೇ ಅಘೋಷಿತ ಪ್ರಾಧ್ಯಾಪಕನಾಗಿ, ತನ್ನ ಭಂಡಾರದಿಂದ ಎತ್ತಿಕೊಡುವ ಭಕ್ತನಾಗಿ, ದೇಶಸೇವೆಯ ಛಲದಂಕಮಲ್ಲನಾಗಿ ಕೊಡಬಹುದಾದ ಕೈತುತ್ತು ಬಹಳ. ಬಾಯಿ ಚಪ್ಪರಿಕೆಗೆ-ನೆಂಜಿಕೊಳ್ಳಲು ವಿವಿಧರೀತಿಯ ಹಪ್ಪಳ,ಸಂಡಿಗೆ-ಉಪ್ಪನಿಕಾಯಿ ವ್ಯಂಜನಗಳನ್ನೂ ಇಟ್ಟು ಗಾರ್ನಿಶ್ [ಅಲಂಕರಿಸಿ] ಕೊಡುವ ಕಲೆ ಒಳ್ಳೆಯ ಸಂಪಾದಕನದ್ದು. ಇಲ್ಲಿ ಆತನ ಸಂಪಾದನೆಯ ಮುಂದೆ ಸಂಭಾವನೆ ಗೌಣ! ಕಾಟಾಚಾರಕ್ಕೆ ಏನೋ ಬರೆಯಬೇಕಪ್ಪ ಅಂತ ಬರೆಯದೇ ತನ್ನ ಮನೋಗತ ಕ್ಷಣಿಕ ಸುಖವಾಂಚೆಗಳನ್ನು-ಇಷ್ಟಾರ್ಥಗಳನ್ನೂ ಪಕ್ಕಕ್ಕಿಟ್ಟು ಜನಸಾಮನ್ಯರ ಮುಖವಾಣಿಯಾಗಿ, ಜನರಿಗಾಗಿ-ಸಮಾಜಕ್ಕಾಗಿ ಏನಾದರೊಂದು ಕಾಣಿಕೆಯನ್ನು ಕೊಡುತ್ತಲೇ ಇರಲೇಬೇಕೆಂಬ ತಹತಹವನ್ನು ಹೊಂದಿದವನ ಜೋಳಿಗೆಯಲ್ಲಿ ತುಂಬಿಹರಿದ ಜ್ಞಾನಗಂಗೆ-ಜ್ಞಾನಸರಸ್ವತಿ ನಿಜವಾದ
ಸಂಪಾದನೆ. ಈತ ಅಲೆಮಾಇಯಾಗುತ್ತನೆ, ಸನ್ಯಾಸಿಯಾಗುತ್ತಾನೆ,ವೈದ್ಯನಾಗುತ್ತಾನೆ, ವಿಭೀಷಣನಾಗುತ್ತಾನೆ-ಒಟ್ಟಾರೆ ಈತ ನಿರ್ವಹಿಸದ ಪಾತ್ರಗಳೇ ಇಲ್ಲ. ಕೆರೆಯನೀರನು ಕೆರೆಗೆ ಚೆಲ್ಲಿ ಎಂಬಂತೆ ಶೂನ್ಯದಲ್ಲಿ ಹಿಡಿದ ತನ್ನ ಜೋಳಿಗೆಯಲ್ಲಿ ಸಾವಿರ ಸಾವಿರ ಮನಗಳಿಗೆ ಆದರ್ಶವಾಗಬಲ್ಲ, ಲಕ್ಷೋಪಲಕ್ಷಜನರು ಓದಿ ಆಸ್ವಾದಿಸುವ,ಪ್ರಚುರಗೊಳ್ಳಲು ಸನ್ಮಾರ್ಗ ಬೋಧಿಸುವ ಕನಸುಗಳನ್ನು ಕೃತಿಗಳ ರೂಪದಲ್ಲಿ ಕಟ್ಟಿ ಪೇರಿಸಿ ಮುಂದಿಡುವ ಕಾಯಕವೇ ಈ ಸಂಪಾದನೆ. ಸಂಪಾದನೆಯಲ್ಲಿ ಸದಭಿರುಚಿಯ ಜನಾಭಿಪ್ರಾಯದಿಂದ ಕ್ರೋಢೀಕರಿಸಿದ ಅನೇಕ ಅಂಶಗಳು ಕಾಣಸಿಗುತ್ತವೆ.

ಆಮೇಲೆ ಮಿಕ್ಕಿದ ಅರ್ಥದಲ್ಲಿ ನಮ್ಮ ನಮ್ಮ ಸ್ವಾರ್ಥಕ್ಕಾಗಿ ಗಳಿಸುವ ಗಳಿಕೆ ಸಂಪಾದನೆ! ಇದು ಎಲ್ಲರೂ ಮಾಡುವ ಮತ್ತು ಕರ್ತವ್ಯವೆಂದು ಒಳ್ಳೆಯ ಮಾರ್ಗದಲ್ಲಿ ನಡೆದು ಮಾಡಲೇಬೇಕಾದ ಕಾರ್ಯ. ಇಲ್ಲಿಯೂ ಗಳಿಸಿದ್ದೆಲ್ಲ ತನಗೇ ಎಂಬ ಸ್ವಾರ್ಥವಿರದಿದ್ದರೆ ಅದು ತುಂಬಾ ವಿಹಿತ. ಗಳಿಕೆಯಲ್ಲಿ ಭಾಗಶಃ ದಾನ-ಧರ್ಮ ಎಂದು ಸ್ವಲ್ಪ ವ್ಯಯಿಸಿ ಸಮಾಜದ ಹಿತರಕ್ಷಣೆಯಲ್ಲೂ ಸ್ವಲ್ಪ ವ್ಯಯಿಸಿದರೆ ಇಲ್ಲೂ ಈ ಸಂಪಾದಕ ಬೆಳಗುತ್ತಾನೆ.

6 comments:

  1. " ಸ೦ಪಾದನೆ " ಎ೦ಬ ವಸ್ತುವನ್ನಿಟ್ಟುಕೊ೦ಡು ಇಷ್ಟೆಲ್ಲಾ ಅರ್ಥಪೂರ್ಣ ವಿಚಾರ ಮಂಡನೆ ಮಾಡಬಹುದು ಎ0ಬುದನ್ನು ನಿಮ್ಮ ಲೇಖನದಿ೦ದ ತೋರಿಸಿಕೊಟ್ಟಿದ್ದೀರಿ. ವಿಚಾರಪೂರ್ಣವಾಗಿದೆ.

    ReplyDelete
  2. ಭಟ್ ಸರ್,
    ಅರ್ಥಪೂರ್ಣ ವಿಚಾರ...... 'ಅರ್ಥ' ಪೂರ್ಣ ಲೇಖನ ...........

    ReplyDelete
  3. ಸರ್ವಶ್ರೀ ಸೀತಾರಾಮ್, ಪರಾಂಜಪೆ, ದಿನಕರ್ ಈ ಮೂವರಿಗೂ ಮತ್ತು ಮಿಕ್ಕುಳಿದ ಎಲ್ಲಾ ಓದುಗ ಮಿತ್ರರಿಗೂ ನಮನಗಳು

    ReplyDelete
  4. ತುಂಬ ವಿಚಾರಪೂರ್ಣ ಲೇಖನ.

    ReplyDelete