ನಮ್ಮ ಭಾರತ
ಸೇತು ರಾಮೇಶ್ವರದಿಂದ ಮೇರು ಪರ್ವತದನಕ
ಹಬ್ಬಿರುವ ಉದ್ದದಾ ನಮ್ಮ ಭಾರತವು
ಆತುಕೊಂಡಿದೆ ವಿವಿಧ ಧರ್ಮ ಆಚಾರಗಳ
ಈ ಕಥೆಯ ಕೇಳಿ ಸುಖಿಸುವೆವು ಅನುದಿನವು
ಗಂಗೆ ಕಾವೇರಿ ನರ್ಮದೆ ಕೃಷ್ಣೆ ಗೋದೆಯರು
ತುಂಗೆ ಕಪಿಲೆ ಕಬಿನಿ ಬ್ರಹ್ಮಪುತ್ರೆಯರೂ
ಅಂಗಳದಿ ಮಂಗಳದ ದೀಪ ಶರಾವತಿಯು
ಬಂಗಾಳಕೊಲ್ಲಿಯಲಿ ಸಂಘಮಿಪ ನದಿಗಳು
ಭಾಷೆ ಹಲವು ನಮದು ಶ್ರೀಮಂತವಾಗಿಹುದು
ವೇಷಭೂಷಣಗಳಲು ಭಿನ್ನತೆಯ ಮೆರೆದೂ
ಕೋಶತುಂಬಲು ಹಗಲು ಇರುಳೆನದೆ ಶ್ರಮಿಸುವೆವು
ಆಶಯವು ಒಂದೇ ತಾಯೊಲುಮೆ ನಮಗಿರಲು
ಒಡಹುಟ್ಟಿದವರಂತೆ ಬದುಕಿ ಬಂದಿಹೆವಿಲ್ಲಿ
ನಡುತಟ್ಟಿ ಎದೆತಟ್ಟಿ ಸ್ವಾಭಿಮಾನದಲಿ
ಇಡಿದಾದ ಹಳೆಯ ಭಾರತ ನಮದು ನೆಲವೆನುತ
ಗಡಿನಾಡ ಜನಕೆಲ್ಲ ಗುಡುಗಿ ಹೇಳುವೆವು
ಬಲುರುಚಿಯ ಖಾದ್ಯ ನೈವೇದ್ಯ ಭಾರತಜನಕೆ
ಖಲುಶಿತದ ಮನವ ನಿರ್ಮಲಗೊಳಿಸುತಿರಲು
ಹಲಸು ಮಾವು ಬಾಳೆ ಏಲಕ್ಕಿ ಎಳೆನೀರು
ಬಳಸುತಾ ಭೂರಮೆಯ ಸಗ್ಗ ನೆನೆಯುವೆವು
ತಾಯಿ ಭಾರತಿ ನಿಂತು ಹರಸಿ ಮಕ್ಕಳನೆಲ್ಲ
ಬಾಯಿಗನ್ನವನಿಕ್ಕಿ ಮುದ್ದಿಸುವ ಕಾಲ
ಹಾಯ ಹರಿಗೋಲಿಕ್ಕಿ ದುರ್ಗಮದ ನದಿಯಲ್ಲಿ
ಮಾಯದಲಿ ರಮಿಸುವಳು ಬರಸೆಳೆದು ಬಹಳ
nice
ReplyDeleteನಮ್ಮ ಭಾರತ..ನಮ್ಮ ಕಾಯೋ ಭಾರತ..ಚೆನ್ನಾಗಿದೆ ಕವಿತೆ.
ReplyDeleteನಿಮ್ಮವ,
ರಾಘು.
ಹಿಮಾಲಯಮ್ ಸಮಾರಭ್ಯ ಯಾವದಿಂದು ಸರೋವರಮ್|
ReplyDeleteತಮ್ ದೇವನಿರ್ಮಿತಮ್ ದೇಶಮ್ ಹಿಂದುಸ್ಥಾನಮ್ ಪ್ರಚಕ್ಷ್ಯತೇ||
-ಬೃಹಸ್ಪತಿ ಆಗಮ
[ದೇವತೆಗಳಿಂದ ನಿರ್ಮಿತಗೊಂಡು ಹಿಮಾಲಯದಿಂದ ಇಂದುಸಾಗರದವರಗೆ ಪಸರಿಸಿರುವ ಈ ನಾಡನ್ನು ಹಿಂದುಸ್ಥಾನವೆಂದು ಕರೆಯುತ್ತಾರೆ.]
ಇಂತಹ ಭೂಮಿಯಲ್ಲಿ ನಮಗೆ ಜನ್ಮವಾಗಿದೆಯಲ್ಲಾ! ಇದಕ್ಕಿಂತ ಇನ್ನೇನು ಬೇಕು?
ದೇಶದ ಬಗ್ಗೆ ಎಷ್ಟು ಬರೆದರೂ ಅದು ತಾಯ ಋಣತೀರಿಸಲಾಗದಂತೆ, ಓದಿ ಅನುಭವಿಸಿದ ಸರ್ವಶ್ರೀ ಸೀತಾರಾಮ್, ರಾಘು, ಹರಿಹರಪುರಶ್ರೀಧರ್ ತಮಗೆಲ್ಲರಿಗೂ ಹಾಗೂ ಓದಿದ ಎಲ್ಲ ಮಿತ್ರರಿಗೂನಮನಗಳು
ReplyDelete