ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, May 24, 2010

ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ...

ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ...

ಇವತ್ತು ಅನಿವಾರ್ಯವಾಗಿ ಮತ್ತೆ ಇದೇ ಅಂಕಣ ಬರೆಯಬೇಕಾಗಿ ಬಂತು. ನಮ್ಮ ಬಾಂಧವರನೇಕರು ಕರ್ನಾಟಕದ ನೆಲದಲ್ಲೇ ವಿಮಾನ ದುರಂತದಲ್ಲಿ ಮಡಿದರು. ಸುಮಾರು ೧೬೦ ಜನ ಅಸುನೀಗಿದ ಆ ಕ್ಷಣ ವಿಮಾನದಲ್ಲಿದ್ದೂ ಜಿಗಿದು ಜೀವ ಉಳಿಸಿಕೊಂಡು ಬಂದ ಸಾವಿಗೆ ಬಾಗಿಲುಹಾಕಿ ಬದುಕಿಬಂದ ೭-೮ ಮಂದಿಯನ್ನು ವಿಚಾರಿಸಿದರೆ ಮಾತನಾಡಿಸಿದರೆ ವಿಮಾನದ ಒಳಗಿನ ಅಂತಿಮ ಕ್ಷಣದ ಚಿತ್ರವನ್ನು ಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಕೂಡ ಜೀವಭಯದಿಂದ ಚೀರುತ್ತಿದ್ದುದಾಗಿ ಅವರಲ್ಲಿ ಒಬ್ಬರು ಈಗಾಗಲೇ ಹೇಳಿದ್ದಾರೆ.

ಹಲವಾರು ಬಾರಿ ನಾನು ಹತ್ತಿರದಿಂದ ಮಾಲಿಕೆಯಲ್ಲಿ ಹೇಳುತ್ತಲೇ ಬಂದಿರುವ ಸಾಮಾನ್ಯ ವಿಷಯ ಜಗತ್ತನ್ನೆಲ್ಲ ಯಾವುದೋ ಶಕ್ತಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ; ತನ್ನ ಇಚ್ಛೆಯಂತೆ ಅದು ನಿರ್ವಹಿಸುತ್ತದೆ. ಕೆಲವರು ಎಷ್ಟೇ ಅವಿತುಕೊಂಡರೂ ಬಿಡದೇ ಸೆಳೆದಪ್ಪುವ ಸಾವು ಇನ್ನು ಕೆಲವರು ತನ್ನನ್ನು ಕರೆದುಕೋ ಅಂತ ಕೂಗಿ ಕರೆದರೂ ಹತ್ತಿರ ಬರುವುದಿಲ್ಲ! ಕೆಲವರನ್ನು ಕುಂತಲ್ಲಿ ನಿಂತಲ್ಲಿ ಆ ಕ್ಷಣಕ್ಕೇ ಹೃದಯ ಸ್ತಂಭಿಸಿ ಬರಸೆಳೆದರೆ ಇನ್ನು ಕೆಲವರು ನರಳಿ ನರಳಿ ಬದುಕುಳಿವಂತೇ ಮಾಡಿ ಯಾಕಪ್ಪಾ ಈ ಜೀವನ ಎನಿಸುವಷ್ಟು ಅವರಿಗೆ ಪೀಡನೆ ಕೊಡುತ್ತದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಓದಿದ್ದು ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರು ಕೊಂಕಣ ರೈಲ್ವೆ ಸಲುವಾಗಿ ಕೆಲೆಸಮಾಡುತ್ತಿರುವಾಗ ಬೆಟ್ಟದಿಂದ ಉರುಳಿಬಂದ ಕಲ್ಲು ಬೆನ್ನಮೇಲೆ ಬಿದ್ದು ಆ ದಿನದಿಂದ ಅವರು ಮಲಗಿದಲ್ಲೇ ಜೀವಹಿಡಿದು ಅರ್ಧದೇಹಧಾರಿಯಾಗಿ[ ಶರೀರದ ಕೆಳಭಾಗಕ್ಕೆ ಸ್ವಾಸ್ಥ್ಯವಿಲ್ಲ]ಅಮ್ಮನಿಂದ ಸೇವೆ ಮಾಡಿಸ್ಕೊಳ್ಳುತ್ತ ಬದುಕಿರುವುದು. ಯಾಕೆ ಹೀಗೆ ? ಒಂದೋ ಸರಿಯಾಗಿ ಇರಲಿ ಅಥವಾ ಹೋಗಿಬಿಟ್ಟರೆ ಚೆನ್ನ ಎಂದುಕೊಂಡರೆ ಯಾವುದೂ ನಮ್ಮ ಕೈಲಿಲ್ಲ. ನಾವೆಣಿಸಿದ ರೀತಿ ನಡೆಯುವುದೇ ಇಲ್ಲ.

ಈ ಲೋಕದ ವ್ಯವಹಾರವೇ ಹಾಗೆ! ನಾವು ಚಾಲಕರು ಎಂದುಕೊಂಡ ವಾಹನ ನಮ್ಮ ನಿಯಂತ್ರಣ ತಪ್ಪಿ ಇನ್ನೆಲ್ಲೋ ಸಾಗಬಹುದು, ಅಥವಾ ನಾವು ನಮ್ಮ ಕೈತಪ್ಪಿ ಹೊಯಿತೆಂದು ಕೈಚೆಲ್ಲುವಾಗ ಅನಿರೀಕ್ಷಿತ ತಿರುವಿನಿಂದ ನಮ್ಮ ವಾಹನ ನಮ್ಮ ನಿಯಂತ್ರಣಕ್ಕೆ ಮರಳಿ ಸಿಗಬಹುದು. ಎಷ್ಟೋ ಅಪಘಾತಗಳಲ್ಲಿ ಕೆಲವು ಚಿಕ್ಕಮಕ್ಕಳು ಮಾತ್ರ ಬದುಕಿ ಉಳಿಯುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ವಾಹನ ದುರಂತವೊಂದರಲ್ಲಿ ಎಲ್ಲರೂ ಸತ್ತರೂ ಚಿಕ್ಕ ಮಗುವೊಂದು ದೂರ ಎಸೆಯಲ್ಪಟ್ಟು ಏನೂ ಏಟಾಗದೇ ಹಾಗೇ ಬದುಕಿ ಕ್ಷೇಮವಾಗಿತ್ತು!


ಸಮಾಜದಲ್ಲಿ ಎಲ್ಲಾ ಥರದ ವ್ಯವಸ್ಥೆ ಇದ್ದರೂ ಹಾವು ಕಚ್ಚಿದ ನೆಪದಿಂದ ಸಾವು ಬರುವುದು, ನಾಯಿ ಕಚ್ಚಿದ ನೆಪದಿಂದ ಹುಚ್ಚು ಹಿಡಿದು ಸಾಯುವುದು, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಹಾಕಾಯಿಲೆಗಳಾದ ಟಿ.ಬಿ.,ಕ್ಯಾನ್ಸರ್ ಇತ್ಯಾದಿಗಳು ಜನರನ್ನು ಬಲಿತೆಗೆದುಕೊಳ್ಳುವುದು, ಯಕ್ಕಶ್ಚಿತ ಕಾಯಿಲೆಯಾದ ಕಾಮಾಲೆ ಜೀವಗಳನ್ನೇ ತಿಂದುಹಾಕುವುದು, ಪಾರ್ಕಿನ್ಸನ್, ಪೋಲಿಯೋ ಮುಂತಾದ ಕಾಯಿಲೆಗಳು ಔಷಧಗಳಿದ್ದರೂ ಬರುವುದು, ಕುಂಟರು-ಕುರುಡರು-ಮೂಕರು-ಹೆಳವರು ಅನಿರೀಕ್ಷಿತವಾಗಿ ಜನಿಸುವುದು...ಇವೆಲ್ಲಾ ನೋಡಿದರೆ ಪ್ರತಿಯೊಂದಿ ಜೀವಿಯ ಹುಟ್ಟು-ಸಾವಿನ ಹಿಂದೆ ಒಂದು ದೊಡ್ಡ ಕರ್ಮದ ಜಾಲವೇ ಹೆಣೆಯಲ್ಪಟ್ಟಿದೆ, ಅದು ನಾಟ್ ಅಂಡರ್ಸ್ಟ್ಯಾಂಡೇಬಲ್ ವೆರಿ ಬಿಗ್ ರಿಮೋಟ್ ನೆಟ್ ವರ್ಕ್!

ನಮಗೆ ಇದೇ ನೌಕರಿ ಸಿಗಲಿ, ನಮಗೆ ಇದೇ ವಿದ್ಯೆ ಬರಲಿ, ನಮಗೆ ಬೇಕಾದಷ್ಟು ಹಣ ಸಿಗಲಿ, ನಮಗೆ ರಾಶಿ ರಾಶಿ ಒಡವೆ-ವಸ್ತ್ರ ಸಿಗಲಿ ಎಂಬೆಲ್ಲಾ ನಮ್ಮ ಆಸೆಗಳು ಕೇವಲ ಆಸೆಗಳಾಗಿರಲೂ ಬಹುದು ಅಥವಾ ಆಸೆಗಳು ಕೈಗೂಡಬಹುದು. ಇದನ್ನೆಲ್ಲ ಅರಿತ ನಮ್ಮ ಪೂರ್ವಜರು ತಮ್ಮ ಅನುಭವದಿಂದ ಬರೆದ ಕೆಲವು ಶ್ಲೋಕಗಳನ್ನು ನೋಡಿ-

ಜನನೀಂ ಜನ್ಮಸೌಖ್ಯಾನಾಂ ವರ್ಧಿನೀ ಕುಲಸಂಪದಾಂ |
ಪದವೀಂ ಪೂರ್ವಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ||

ಈ ಮಾತಿನ ಹರವು ಎಷ್ಟೊಂದು ಗಂಭೀರ ! ಯಾರು ಎಲ್ಲಿ, ಹೇಗೆ, ಯಾವಾಗ, ಯಾವರೀತಿ, ಯಾರಿಗೆ ಮಗುವಾಗಿ ಹುಟ್ಟಬೇಕು, ಏನೆಲ್ಲಾ ಉಪಭೋಗಿಸಬೇಕು, ಏನು ವೃತ್ತಿ ಮಾಡಬೇಕು, ಯಾವರೀತಿ ದುಡಿಮೆ ಆ ವ್ಯಕ್ತಿಗೆ ಸಿಗಬೇಕು, ಆತನ ದುಡಿಮೆಗೆ ಯಾವರೀತಿ ಪ್ರತಿಫಲ ಸಿಗಬೇಕು, ವ್ಯಕ್ತಿಗೆ ಎಲ್ಲಿಯ ಸಂಬಂಧಗಳು ಬೆಳೆಯಬೇಕು, ಯಾವ ಮಟ್ಟಕ್ಕೆ ವ್ಯಕ್ತಿ ಬೆಳೆಯಬೇಕು, ಯಾವ ಕಾಯಿಲೆ ವ್ಯಕ್ತಿಗೆ ಬಾಧಿಸಬೇಕು, ಯಾವ ಅಪಘಾತವನ್ನು ವ್ಯಕ್ತಿ ಎದುರಿಸಬೇಕು/ಎದುರಿಸಬಾರದು, ಯಾವ್ಯಾವ ವ್ಯಕ್ತಿಗಳನ್ನು-ಸಂಬಂಧಿಕರನ್ನು ಯಾವ್ಯಾವಾಗ ಕಳೆದುಕೊಳ್ಳಬೇಕು ಇವೆಲ್ಲಾ ವಿಷಯಗಳು ಪೂರ್ವ ನಿರ್ಧರಿತ, ಇದು ಮೇಲ್ನೋಟಕ್ಕೆ ನಮ್ಮ ಊಹೆಗೆ ನಿಲುಕದ್ದಾದರೂ ವಸ್ತುನಿಷ್ಠ ಸತ್ಯ ಇಂದಿಗೂ ಎಂದಿಗೂ ಎಂದೆದಿಗೂ-ಈ ಲೋಕ ಇರುವಲ್ಲೀವರೆಗೂ!

ಇನ್ನೊಂದು ಮಾತು ನೋಡಿ-
|| ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ||

ಅಂದರೆ ನಮಗೆ ಒಂದು ಸಾಕು ಪಶುವನ್ನು ಇಟ್ಟುಕೊಳ್ಳಲಾಗಲೀ, ಮದುವೆಯಾಗಿ ಒಬ್ಬರಜೊತೆ ಸಂಸಾರ ನಡೆಸಲಾಗಲೀ, ಮಕ್ಕಳನ್ನು ಪಡೆಯಲಾಗಲೀ, ಮನೆಯನ್ನು ಕಟ್ಟಿ ವಾಸಿಸಲಾಗಲೀ ಅದಕ್ಕೆಲ್ಲ ಋಣವೆಂಬುದಿರಬೇಕು. ಋಣದ ಬಂಧನವಿರದಿದ್ದರೆ ಏನೂ ಮಾಡಿದರೂ ಅವುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಸುಲಭಸಾಧ್ಯವಾಗುವ ಈ ಕೆಲಸಗಳು ಇನ್ನು ಕೆಲವರಿಗೆ ಕಬ್ಬಿಣದ ಕಡಲೆ ಜಗೆದಂತೆ!ಕೇವಲ ದೈಹಿಕ ಹಿಂಸೆ ಮಾತ್ರ ಹಿಂಸೆಯೇ ?ಜೀವನದಲ್ಲಿ ಸಾಂದರ್ಭಿಕವಾಗಿ ಆರ್ಥಿಕವಾಗಿ ಸಾಲಸೋಲಗಳನ್ನು ಮಾಡಿಕೊಂಡು ಒದ್ದಾಡುವುದು,ತೊಳಲಾಡುವುದೂ ಕೂಡ ನಮ್ಮ ಹಣೆಬರಹವೇ ಆಗಿದೆ. ಎಲ್ಲರಿಗೂ ಜೀವನ ಹೂವಿನ ಹಾಸಿಗೆಯಲ್ಲ, ಆದರೆ ಕೆಲವರಿಗೆ ಜೀವನ ಹೂಬನ ! ಇದಕ್ಕೆ ಏನನ್ನೋಣ ? ಇದಕ್ಕೆಲ್ಲ ಕಾರಣ ನಮ್ಮ ವಿಧಿ ಎಂದು ನಾವು ಹೇಳುತ್ತೇವಲ್ಲ ಆ ವಿಧಿಗೂ ಒಂದು ನಿಯಮವಿದೆ,ನಿರ್ಬಂಧವಿದೆ. ಅದಕ್ಕೆ ಯಾರೂ ಅತೀತರಲ್ಲ. ಹೀಗೆ ವಿಧಿ ತನ್ನ ಡೈರಿಯಲ್ಲಿ ನಮ್ಮ ಸರ್ವಿಸ್ ರೆಕಾರ್ಡ್ ಬರೆಯುವಾಗ ಯಾವ ಲಂಚವನ್ನೂ ಸ್ವೀಕರಿಸುವುದಿಲ್ಲ, ಯಾರ ಮಗ/ಮಗಳು ಎಂಬ ಸ್ಥಾನಮಾನವನ್ನೂ ನೋಡುವುದಿಲ್ಲ. ದೆರ್ ಎವರಿಥಿಂಗ್ ಈಸ್ ಕಾಮನ್ ಆಂಡ್ ಸಿಂಪಲ್,ಕಾಣದ ವಿಧಿ ದೂರದಿಂದ ಪ್ರತ್ಯಕ್ಷವಾಗಿ ನಮ್ಮ ಬಗ್ಗೆ ಏನು ನೋಡಿದೆಯೋ ಅದನ್ನು ಬರೆದುಬಿಡುತ್ತದೆ. ಅದು ಬದಲಾಯಿಸಲಾರದ ಶಾಶ್ವತ ಬ್ಲಾಕ್ ಬಾಕ್ಸ್. ದೆರ್ ಎಂಡ್ಸ್ ದಿ ಮ್ಯಾಟರ್!

ನಾವು ಹಾರುತ್ತೇವೆ-ವಿಮಾನ ಹಾರಿಸುತ್ತೇವೆ, ವಾಹನ ಚಲಾಯಿಸುತ್ತೇವೆ, ವೈದ್ಯರಾಗಿ ಎಲ್ಲಾ ಕಾಯಿಲೆಗಳಿಗೆ ಔಷಧ ಹುಡುಕಿ ೦ಏನನ್ನೋ ಸಾಧಿಸ ಬಯಸುತ್ತೇವೆ, ರಾಜಕಾರಣಿಯಾಗಿ ಇಡೀ ಭೂಮಂಡಲವನ್ನೇ ಆಪೋಶನ ತೆಗೆದುಕೊಳ್ಳುವ ಅತಿಯಾಸೆಗೆ ಬಲಿಯಾಗುತ್ತೇವೆ, ಪರರನ್ನು ಹಿಂಸಿಸಿ ಮೋಜುಮಾಡಿಸುತ್ತೇವೆ, ಇನ್ನೊಬ್ಬರನ್ನು ಕುಣಿಸಿ ನಾವು ಸಂತಸಪಡುತ್ತೇವೆ, ಅಣ್ಣ-ತಮ್ಮಂದಿರಾಗಿದ್ದವರು ದಾಯಾದಿಗಳಾಗಿ ಭೂಮಿ ಪಾಲು ಹಂಚಿಕೊಳ್ಳಲು ಗುದ್ದಾಡುತ್ತೇವೆ, ವಿವಿಧ ಕಾರಣಗಳಿಗೆ ನ್ಯಾಯಬೇಡಿಕೆ ಇಟ್ಟು ನ್ಯಾಯಾಲಯ ನಡೆಸುತ್ತೇವೆ, ನಮ್ಮೊಳಗೇ ಆಳುವವರು, ಶಿಕ್ಷಿಸುವವರು-ಭಕ್ಷಿಸುವವರು-ನಿಂದಿಸುವವರು-ಹೊಗಳು ಭಟ್ಟಂಗಿಗಳು ಎಲ್ಲರನ್ನೂ ಸೃಜಿಸಿಕೊಳ್ಳುತ್ತೇವೆ. ಆದರೆ ನಾವು ನಮಗೆ ಗೊತ್ತಿಲ್ಲದೇ ಯಾವುದನ್ನೋ ಮಾಡುತ್ತಿದ್ದೇವೆ, ಗೊತ್ತಿದೆ ಎಂದು ತಿಳಿದು ಮೂರ್ಖರಾಗಿದ್ದೇವೆ!

ಹಾಗಂತ ಯಾವುದೂ ನಮಗರಿವಿಲ್ಲದಲ್ಲವಲ್ಲ ! ಅರಿವಿಗಿರುತ್ತದೆ ಆದರೆ ಕಾಲ ಮೀರಿಹೋಗಿರುತ್ತದೆ. ಒಮ್ಮೆ ಅಪಘಾತವದಾಗ ಅಯ್ಯೋ ದೇವರೇ ಐದು ನಿಮಿಷ ಮೊದಲೇ ಆಗಿದ್ದರೆ ಏನೂ ಆಗುತ್ತಿರಲಿಲ್ಲವಲ್ಲ-ಹೀಗಾಗಿಬಿಟ್ಟಿತಲ್ಲ, ಮೊದಲೇ ತಿಳಿದಿದ್ದರೆ ’ಸಿ.ಡಿ’ ತಯಾರುಮಾಡುವವರ ಬಲೆಗೆ ಬೀಳುತ್ತಿರಲಿಲ್ಲವಲ್ಲ ಅಂತ ಇತ್ತೀಚೆಗೆ ಕೆಲವು ಮಾಜಿ ಮಂತ್ರಿಗಳೂ ತಮ್ಮೊಳಗೇ ಹಪಹಪಿಸಿದ್ದಾರೆ! ಕಾಲ ಯಾರನ್ನೂ ಯಾವುದನ್ನೂ ಕಾಯುವುದಿಲ್ಲ! ಪರೀಕ್ಷೆ ಬರೆಯಲೇ ಬೇಕು, ಬರೆದಮೇಲೆ ಬರುವ ಫಲಿತಾಂಶ ಅನುಭವಿಸಲೇ ಬೇಕು.ದೇವರೇ ಪರೀಕ್ಷೆ ಮುಂದೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಹಲವತ್ತುಕೊಳ್ಳುತ್ತೇವೆ ಆದರೆ ಅದು ಎಲ್ಲಾ ಸರ್ತಿ ಸಾಧ್ಯವೇ? ಅಂತೂ ಹೀಹಾಗಬೇಕು-ಹೀಗಾಗಬಾರದು ಎಂಬುದು ಮೊದಲೇ ನಿರ್ಧರಿಸಲ್ಪಟ್ಟಿರುವ ವಿಚಾರ ಎಂದಹಾಗಾಯಿತು.

ಇನ್ನೂ ಒಂದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು, ಕೇವಲ ಹೋಮ,ಪೂಜೆ-ಪುನಸ್ಕಾರಗಳಿಂದ ಅಥವಾ ಪ್ರಾರ್ಥನೆಗಳಿಂದ ನಮ್ಮ ಪೂರ್ವದ ಕರ್ಮಬಂಧನ ಕಡಿದುಹೋಗುವುದಿಲ್ಲ! ಅದು ಕಡಿಯಲು ನಮ್ಮ ಆದರ್ಶಗಳು,ಪರೋಪಕಾರ,ಅಹಿಂಸೆ,ಸಹಾಯ,ತ್ಯಾಗ,ಸೌಜನ್ಯ,ಪರಹಿತ ಇಂತಹ ಅನೇಕ ಸತ್ಕಾರ್ಯಗಳು ಕಾರಣ. ಲೋಹಕ್ಕೆ ನಮ್ಮ ಇನ್ನೊಂದು ಪ್ರತ್ಯಾಮ್ಲೀಯ ಗುಣವಿರುವ ಪದಾರ್ಥವನ್ನು ನಾವು ಉಜ್ಜಿದಾಗ ಕ್ರಮೇಣ ಹೇಗೆ ಹೊಳಪು ಸಿಗುವುದೋ ಹಾಗೇ ಸತತ ಒಳ್ಳೆಯ ಕಾರ್ಯಗಳನ್ನು ಒಳ್ಳೆಯ ಮನಸ್ಸಿನಿಂದ ಮಾಡುತ್ತಾ ಬದುಕಿದರೆ ಜನ್ಮಾಂತರಗಳಲ್ಲಿ ನಮ್ಮ ಕಾಫಿ ಫಿಲ್ಟರ್ ನಂತೇ ಆತ್ಮಕ್ಕೆ ಸೋಸುವ ಸಂಸ್ಕಾರ ಸಿಕ್ಕು ಅದು ಉತ್ತಮ ತರಗತಿಯನ್ನು ಹೊಂದುತ್ತ ನಡೆಯುತ್ತದೆ ಅಲ್ಲದೇ ಕೊನೆಗೊಮ್ಮೆ ಅದು ಪರಮಾತ್ಮನ ಸಾಯುಜ್ಯವನ್ನು ಸೇರಲು ಉಪಕ್ರಮಿಸಿ ಯಶಸ್ವಿಯಾಗುತ್ತದೆ. ಅಲ್ಲಿಯವರೆಗೆ ನಮ್ಮ ಕೊಡುಗೆಗಳಿಗೆಲ್ಲ ’ಇಂಥವರಿಂದ ಇಂಥಾ ಕೊಡುಗೆ’[ಉದಾಹರಣೆ: ಕೊಡೆಗೆ-ಮುದ್ದೇಗೌಡರು ಮತ್ತು ಕುಟುಂಬದವರು] ಎಂದು ಚಿಕ್ಕ ಕೊಡುಗೆಗೂ ನಾಮಫಲಕ ಬರೆಸಿಹಾಕುತ್ತಾರಲ್ಲ ಹಾಗೇ ಅವು ಅರ್ಥಹೀನವಾಗಿ, ಕ್ಷುಲ್ಲಕವಾಗಿ ಕಾಣುತ್ತವೆ.

ದೇವತೆಗಳು ಅವತರಿಸಲೂ ಕೂಡ ಹಲವಾರು ಕಾರಣಗಳಿರುತ್ತವೆ, ಅಂತಹ ದೈವಾಂಶ ಸಂಭೂತರಾದ ಶ್ರೀರಾಮ,ಶ್ರೀಕೃಷ್ಣ ಇವರೆಲ್ಲ ಜನ್ಮದಲ್ಲಿ ಅನೇಕ ತೊಂದರೆಗಳನ್ನು-ಕಷ್ಟಕೋಟಲೆಗಳನ್ನು ಅನುಭವಿಸಿದ್ದಾರೆ ಎನ್ನುವಾಗ ನಾವೆಲ್ಲ ಹುಟ್ಟಲು ನಮ್ಮ ಕರ್ಮಗಳು ನಮ್ಮನ್ನು ಬಾಧಿಸುವುದೇ ಕಾರಣ ಎನ್ನಬಹುದೇನೋ. ಇದನ್ನೆಲ್ಲ ಅರಿತು ನಾವು ಸಮಾಜದಲ್ಲಿ ನಮ್ಮಿಂದ ಅನ್ಯಾಯ,ಅಪಚಾರ,ಬ್ರಷ್ಟಾಚಾರ,ದುರಾಚಾರವೇ ಮುಂತಾದ ಖೂಳವೃತ್ತಿಗಳನ್ನು ದಮನಿಸಿ ಬದುಕೋಣ, ಪರಸ್ಪರ ಪ್ರೀತಿಯಿಂದ-ಜಗದ ಜೀವಿತದ ಗುರಿಯನ್ನು ಅರ್ಥೈಸಿ ಮುಂಬರುವ ಜನ್ಮಗಳಲ್ಲಿ ಒಳ್ಳೆಯ ಹಂತಕ್ಕೆ ತಲುಪೋಣ ಅಲ್ಲವೇ?

8 comments:

 1. ಪುನರ್ಜನ್ಮ, ಕರ್ಮ ಸಿದ್ದಾಂತದ ಬಗ್ಗೆ ಬರೆದಿದ್ದೀರಾ.
  ಉತ್ತಮ ವಿಚಾರ,
  ಅಧ್ಯಾತ್ಮದ ಮಥನ
  ಆತ್ಮೋನ್ನತಿಗೆ ಸೋಪಾನ

  ReplyDelete
 2. ಭಾವನೆಗಳು ಅಕ್ಷರಗಳಾಗಿ ಮೂಡಿವೆ.ಮನುಷ್ಯನಿಗೆ ಎಲ್ಲದರ ಅರಿವು ಇರುವುದಿಲ್ಲವೆಂದಲ್ಲ, ಇರುತ್ತೆ, ಆದರೆ ಬಿಡದ ಮಾಯೆ ಮರೆವುಂಟುಮಾಡಿರುತ್ತೆ. ಹುಟ್ಟು-ಸಾವು, ಸುಖ-ದು:ಖ ಎಲ್ಲವೂ ಜೀವನದಲ್ಲಿ ಅನಿವಾರ್ಯ.ಬದುಕು ೬೦-೭೦ ವರ್ಷಗಳಾದರೆ ಮೊದಲ ಹತ್ತಿಪ್ಪತ್ತು ವರ್ಷ ಮತ್ತು ಕಡೆಯ ೫-೧೦ ವರ್ಷಗಳನ್ನು ಹೊರತುಪಡಿಸಿ ಈ ನಡುವೆ ಇರುವ ಸಾಮಾನ್ಯವಾಗಿ ಮೂವತ್ತು ವರ್ಷಗಳು ನಾವು ಹೇಗೆ ಬದುಕುತ್ತೀವೆಂಬುದು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುತ್ತೆ. ಆ ಅವಧಿಯಲ್ಲಿ ತನ್ನ ಸ್ವಾರ್ಥ ಜೀವನದ ಜೊತೆಗೆ ಸಾಮಾಜಿಕ ಚಿಂತನೆ ಮಾಡುವ ಅಭ್ಯಾಸಬೆಳಸಿಕೊಂಡವರಿಗೆ ಕೊನೆದಿನಗಳಲ್ಲಿ ಜೀವನ ಸ್ವಲ್ಪ ಹಗುರ ವೆನಿಸೀತು. ಹಾಗೆ ಮಾಡದೆ ತನ್ನ ಹೆಂಡತಿ, ಮಕ್ಕಳು, ಮೊಮ್ಮಕ್ಕಳು -ಇಷ್ಟೇ ತನ್ನ ಜೀವನವೆಂದು ತಿಳಿದು ಬದುಕುವ ಮನುಷ್ಯನಿಗೆ ಜೀವನದುದ್ದಕ್ಕೂ ಗೋಳು ತಪ್ಪಿದ್ದಲ್ಲ. ಒಂದು ಬಗೆಹರಿದರೆ ಮತ್ತೊಂತು. ಎಲ್ಲಾ ಪರಿಹರಿಸಿಬಿಡುತ್ತೀನೆನ್ನುವಷ್ಟರಲ್ಲಿ " ಜವನವರು ಬರುವ ಹೊತ್ತ ನೀನರಿಯೆ" ಆದ್ದರಿಂದ ಅಷ್ಟರೊಳಗೆ "ಚಿಂತೆಯನು ಬಿಟ್ಟು ಶ್ರೀಹರಿಯ ನೆನೆ ಮನವೆ"
  ಅಂತಕನ ದೂತರಿಗೆ ಕಿಂಚಿತ್ತು ದಯೆಯಿಲ್ಲ, ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೇ ಎಂಬ ಹಾಡು ನೆನಪಾದೀತು.

  ReplyDelete
 3. karma theory is as scientific and as specific as
  any other law governing the universe.You reap what you sow.It is as simple as that.regards for giving
  articles which give some food for thought.

  ReplyDelete
 4. ನಮ್ಮ ಕರ್ಮದ ಫಲ ಅನುಭವಿಸಲೇ ಬೇಕು. ಯಾರಿಗೆ ಗೊತ್ತು ಯಾವಾಗ ಏನಾಗುವುದೆಂದು. ಆದರೆ ಸದಾ ಒಳ್ಳೆಯ ವಿಚಾರಗಳನ್ನು ಚಿಂತಿಸಿ, ನಿಸ್ವಾರ್ಥ ಜೀವನ ನಡೆಸುವ ಮನುಜರ್ಯಾರೂ ಕೊನೆಗಳಿಗೆಯಲ್ಲಿ ಕಷ್ಟ ಪಡಲಾರರು.
  ಆದರೆ ಒಳ್ಳೆಯವರಿಗೆ ಪರೀಕ್ಷೆಗಳು ಜಾಸ್ತಿ ಎಂದು ನನ್ನ ಅನಿಸಿಕೆ.
  nice article

  ReplyDelete
 5. ಕರ್ಮಬಂಧನವನ್ನು ವಿವರಿಸಲು ಕೇವಲ ಒಂದೆರಡು ಉದಾಹರಣೆಗಳು ಸಾಲುವುದಿಲ್ಲ, ಕರ್ಮಬಂಧನವೆಂಬುದು ಬಹಳ ಆಳದ,ವಿಸ್ತಾರದ ಟಾಪಿಕ್.ಬಹುಶಃ ನಿಜವಾದ ಪರಮಹಂಸರು ಅದನ್ನು ಅವರ ಅನುಭವದ ಮೂಸೆಯಿಂದ ಮಾತ್ರ ಅನೇಕರಿಗೆ ತಿಳಿಹೇಳಲು ಸಾಧ್ಯ. ಆದರೂ ನನಗೆ ಪರಿಸರ ಕಲಿಸಿದ ಪಾಠದಿಂದ ನನ್ನ ಅನುಭವಗಳನ್ನು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿ ಬರೆದಿದ್ದೇನೆ, ಪ್ರತಿಕ್ರಿಯಿಸಿದ ಸರ್ವಶ್ರೀ ಸೀತಾರಾಮ್, ಎಚ್.ಎಸ್.ಅಶೋಕ್ ಕುಮಾರ್, ಹರಿಹರಪುರ ಶ್ರೀಧರ್, ಡಾ.ಕೃಷ್ಣಮೂರ್ತಿ, ಪ್ರವೀಣ್ ಈ ಎಲ್ಲರಿಗೂ ಮತ್ತು ಓದಿ ಹಾಗೇ ನೇಪಥ್ಯ ಸೇರಿದ ಓದುಗ ಮಿತ್ರರಿಗೂ, ಓದುವ ಮಿತ್ರರಿಗೂ ನಮನಗಳು

  ReplyDelete
 6. ಚಿಂತನಶೀಲ ಲೇಖನ, ಉತ್ತಮವಾಗಿದೆ. ನಿಮ್ಮ ಲೇಖನದಲ್ಲಿರುವ ಬಹಳಷ್ಟು ವಿಷಯಗಳನ್ನು ನಾನೂ ಒಪ್ಪುವೆ.

  ReplyDelete