ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 1, 2010

ಕನಸು

ಕನ್ನಡದ ಇಂದಿನ ಪ್ರಖ್ಯಾತ ಕವಿಗಳಲ್ಲಿ ಶ್ರೀ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಒಬ್ಬರು. ನಾನು ಇಷ್ಟಪಡುವ ಕವಿಗಳಲ್ಲಿ ಅವರೂ ಒಬ್ಬರು. ನವೋದಯ ಸಾಹಿತ್ಯ ಮತ್ತು ನವ್ಯಕಾವ್ಯಗಳ ಭರಾಟೆಯಿಂದ ತತ್ತರಿಸಿದ ಕನ್ನಡ ಸಾಹಿತ್ಯ ಲೋಕಕ್ಕೆ ಸದಭಿರುಚಿಯ ಸರಾಗವಾಗಿ ಹಾಡಬಲ್ಲ ಕವನ ಸಾಹಿತ್ಯವನ್ನು ಒದಗಿಸಿದ ಮಹಾನುಭಾವ ಅವರು. ಅವರ ಅನೇಕ ಭಾವಗೀತೆಗಳು ರಾಗಬದ್ಧವಾಗಿದ್ದು ಹಲವು ಸಂಗೀತಗಾರರಿಂದ ಸಂಗೀತ ಸಂಯೋಜನೆಗೊಂಡು ಬಹುತೇಕ ಪ್ರತಿಯೊಂದು ಸಂಗೀತ ಗೋಷ್ಠಿಯಲ್ಲಿ ಹಾಡಲ್ಪಡುವಷ್ಟು ಜನಪ್ರಿಯವಾಗಿವೆ. ಅನೇಕ ಧ್ವನಿ ಸುರುಳಿಗಳರೂಪದಲ್ಲಿ ನಮ್ಮ ಮಧ್ಯೆಯಲ್ಲಿ ಅನುರಳಿಸುತ್ತಿವೆ. ಆಲೈಸಿದಾಗ ತುಂಬಾ ಇಂಪಾಗಿ ಕೇಳಿ ಬಹಳ ಮುದನೀಡುತ್ತವೆ! ಮೇಲಾಗಿ ಅವರ ಕವನಗಳು ಅವರೇ ಎದುರು ನಿಂತು ಅರ್ಥ ಹೇಳಿದರೇನೋ ಎನ್ನುವಷ್ಟು ಸರಳ ಶಬ್ಧಗಳಿಂದ ಕೂಡಿವೆ. ಓದುಗರ ಮನಸ್ಸಿನಲ್ಲಿ ಭಾವತರಂಗಗಳನ್ನೆಬ್ಬಿಸುವ ಅವು ಕವಿ ನಮಗಾಗೇ ಬರೆದರೇನೋ ಎಂಬಷ್ಟು ನಮಗೆ-ನಮ್ಮ ಹೃದಯಕ್ಕೆ ಹತ್ತಿರವಾಗುತ್ತವೆ. ಪ್ರತೀ ಕವನದಲ್ಲೂ ಏನೋ ಆಪ್ತತೆ, ಏನೋ ಅಪ್ಯಾಯಮಾನ ಅನಿಸಿಕೆ, ಏನೋ ಅನನ್ಯ ಭಾವನೆ ! ಈ ಕವಿ ನಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಎಂಬಷ್ಟು ಮಾಂತ್ರಿಕತೆ, ಮಾಯದ ಮೋಡಿಗಾರನಂತೆ ತನ್ನತ್ತ ಸೆಳೆಯುವ ಕಾಂತತ್ವ []ಶ್ರೀಯುತರ ’ ದೀಪಿಕಾ ’ ಕವನ ಸಂಕಲವನ್ನು ಬಹಳ ಹಿಂದೆಯೇ ಓದಿದ್ದೆ. ಅದರಲ್ಲಿನ ಕವನಗಳು ಬಹಳ ಜನಪ್ರಿಯವಾಗಿವೆ. ಅವುಗಳಲ್ಲೊಂದು ’ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ !...’ ಇದನ್ನು ಬಹಳ ಸಮಯ ನನ್ನ ಮನಸ್ಸು ಗುನುಗುನಿಸುತ್ತಲೇ ಇರುತ್ತದೆ.

ಮೊನ್ನೆ ಅನಿರೀಕ್ಷಿತವಾಗಿ ಮೊದಲು ಬಿದ್ದ ಬೇಸಿಗೆ ಮಳೆಗೆ ಹಾಗೇ ರಸ್ತೆಯಲ್ಲಿ ನೆನೆದಿದ್ದೆ. ಆ ದಿನ ಗುಡುಗು ಸಿಡಿಲಿನ ಆರ್ಭಟ ಬಹಳವಾಗಿತ್ತು. ರಾತ್ರಿ ಮಲಗಿದ ಮೇಲೆ ಕೂಡ ಮಳೆ ಹನಿಯುತ್ತಿತ್ತು. ವಿದ್ಯುದ್ದೀಪ ಇರಲಿಲ್ಲ. ಆ ರಾತ್ರಿ ಕನಸುಕಂಡೆ. ಕನಸಿನಲ್ಲಿ ಎಲ್ಲಿಂದಲೋ ಹಾರುವ ತಟ್ಟೆಯೊಂದು ಬಂದು ನನ್ನ ಮೈಗೆ ಸೋಕಿ ನಿಂತಹಾಗೆ, ಅದರ ಥಳುಕಿನ ಬಣ್ಣಗಳು,ಬಣ್ಣದ ದೀಪಗಳು ಕಣ್ಣುಕೋರೈಸುವ ವೈಭವದಿಂದ ಕೂಡಿದ್ದವು. ಅದರಲ್ಲಿನ ವ್ಯಕ್ತಿಗಳಾಗಲೀ,ಬೇರೆ ಯಾವುದೇ ಥರದ ಜೀವಿಗಳಾಗಲೀ ಕಾಣುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಯಾವುದೋ ಮಾಧ್ಯಮದಲ್ಲಿ ಆಗಾಗ ಕಾಣುವ ಆದರೆ ಗುರುತಿಸಿ ಹಿಡಿಯಲು, ಸಂಶೋಧಿಸಲು ಸಿಗದ ಹಾರುವ ತಟ್ಟೆಗಳು ಮತ್ತು ಅವುಗಳು ವಿದೇಶಗಳಲ್ಲಿ ನೆಲಕ್ಕಿಳಿದು ಹೊಲಗದ್ದೆಗಳಲ್ಲಿ ಮೂಡಿಸಿದ ನಕ್ಷೆ-ಚಿತ್ತಾರಗಳು ಬಿತ್ತರಗೊಳ್ಳುವಾಗ ನೋಡಿದ್ದೆ. ಅದರ ಪ್ರತಿಫಲಿತ ಪರಿಣಾಮವೋ ಏನೋ ಕನಸಿನ ರೂಪದಲ್ಲಿ ಬಂದಿತ್ತು. ನಾನು ಆ ತಟ್ಟೆಯನ್ನು ಕನಸಲ್ಲೂ ಅಷ್ಟು ದೂರದಿಂದ ನೋಡುತ್ತಿದ್ದೆ. ತಟ್ಟೆಯ ಜೊತೆ ಒಬ್ಬನೇ ಇರುವುದರಿಂದ ತುಂಬಾ ಭಯ ಹುಟ್ಟಿಸಿತ್ತು, ಯಾಕೆಂದರೆ ಅದರಲ್ಲಿ ಯಾರಿರಬಹುದು, ಏನುಮಾಡಬಹುದು ಎಂಬುದು ತಿಳಿಯುತ್ತಿರಲಿಲ್ಲ!ಆದರೂ ಅದನ್ನು ನೋಡಿದಾಗ ಮೈಮನವೆಲ್ಲ ಪುಳಕಗೊಂಡಿತ್ತು,ಬಹಳ ಖುಷಿಯಾಗಿತ್ತು. ಆ ಭಯಮಿಶ್ರಿತ ಖುಷಿ ಹಾಗೇ ಸುಮಾರು ಹೊತ್ತು ಮುಂದುವರಿದಿರಬೇಕು ! ಕೊನೆಗೊಮ್ಮೆ ಯಾಕೋ ಎಚ್ಚರವಾಗಿಬಿಟ್ಟಿತು, ಗಡಿಯಾರ ನಾಲ್ಕುಗಂಟೆ ತೋರಿಸುತ್ತಿತ್ತು. ಅದನ್ನು ನಮ್ಮ ಲಕ್ಷ್ಮೀನಾರಾಯಣಭಟ್ಟರ ಶೈಲಿಯಲ್ಲಿ ಕವನಿಸಿ ನಿಮ್ಮ ಮುಂದಿಡುತ್ತಿದ್ದೆನೆ---


ಕನಸು

ಎಲ್ಲೋ ನಡೆಯಿತೋ ಮನಸು
ತಲ್ಲಣಿಸಿತೋ !
ಹುಲ್ಲೆಯಂತೆ ಹಾರಿ ಹೆದರಿ
ಒಲ್ಲೆನೆಂದಿತೋ


ದೂರದೊಂದು ಲೋಕದಿಂದ
ಹಾರುವಾ ತಟ್ಟೆಯಲೀ ಬಂದ
ಯಾರೋ ತಾಕಿ ನನ್ನಾ ಮೈಗೆ
ಭಾರೀ ಭಯವ ತಂದರಿಲ್ಲಿ


ಹಸಿರು ಕೆಂಪು ನೀಲಿ ಹಳದಿ
ಹೊಸತು ದೀಪ ರಾಶಿಗಳಲಿ
ಮಿಸುನಿ ಮೆರುಗು ಥಳುಕು ಬಣ್ಣ
ಎಸೆದು ಕೋರೈಸಿಹುದು ಕಣ್ಣ


ಎಂದೂ ನೋಡದಂಥಾ ಕನಸು
ಇಂದು ನನ್ನ ಮನದಾ ತುಂಬಾ
ಮಿಂದೆ ಅದರ ಸೆಳವಿನಲ್ಲಿ
ಚಂದದಿಂದ ನಲಿಯುತಲ್ಲಿ


ನೌಕೆಯಷ್ಟೇ ಕಂಡೆ ನಾನು
ನೂಕಿದವರು ಕಾಣಲಿಲ್ಲ
ಬಾಕಿಯಿತ್ತು ಹಲವು ಸಂಗ್ತಿ
ನಾಕು ಗಂಟೆಗೆಚ್ಚರವಾಗಿ

9 comments:

  1. ಸಧ್ಯ ಬೇಗ ಎಚ್ಚರ ಆಯ್ತಲ್ಲಾ!
    ಇಲ್ಲ ಅಂದಿದ್ರೆ ಯಾವುದೋ ಲೋಕದಕ್ಕೆ ಹೋಗಿ ನಮಗೆ ಸಾಹಿತ್ಯದ ಸಾರವೇ ಇಲ್ಲದ ಹಾಗೆ ಮಾಡ್ತಿದ್ರಲ್ಲಾ!
    ಅಲ್ಲಾ
    ಯಾವ ಜಾದುವೂ ಬರ್ಲಿಲ್ವಾ?
    ಹ್ಹ ಹ್ಹ ಹ್ಹಾ!
    ಚೆನ್ನಾಗಿದೆ ಕಣ್ರೀ N S L ನೆನಪಿನೊಂದಿಗೆ ಮೂಡಿದ ಕನಸೆಂಬ ಕವನ

    ReplyDelete
  2. ಭಟ್ಟರೇ,
    ಲಕ್ಷ್ಮೀನಾರಾಯಣ ಭಟ್ಟರ ಶೈಲಿಯಲ್ಲಿ ಕವನ ರಚನೆಯನ್ನು ರಚಿಸಿದ ರೀತಿ ಚೆನ್ನಾಗಿತ್ತು...

    ReplyDelete
  3. ಚೆ೦ದದ ಕನಸಿನ ಕವನ.
    ಸಧ್ಯ ನನಸಿಗೆ ಬ೦ದಿರಲ್ಲಾ!!!

    ಕನಸ ಹನಿಹನಿಸಿ ಎದ್ದು,
    ಅದ ಗುನಗುನಿಸಿ ಎದ್ದು-ಬಿದ್ದು,
    ನನಸ ಸಾಧನೆಗೆ ಮುಗಿಬಿದ್ದು
    ಅರಳಿದೆ ಜೀವನ
    ಅರಿಯದ ಅನೂಹ್ಯ ಬೆರಗಿನ ಲೋಕ
    ಅದರ ಆಸಕ್ತಿಯೇ ನಮ್ಮ ಜೀವನದ ರಸಪಾಕ

    ReplyDelete
  4. ಅನುಕರಣೆಯ ಕವನವಾದರೂ ಸ್ವಾರಸ್ಯಪೂರ್ಣ್ವವಾಗಿರುವ ಈ ಕವನ ಓದಿ ಬಹಳ ಖುಶಿ ಆಯಿತು.

    ReplyDelete
  5. ಬಿದ್ದ ಕನಸಿಗೆ ಕವನ ಕಟ್ಟುವುದು ಬಲು ಕಷ್ಟ. ನೀವದನ್ನು ಸಾಧಿಸಿದ್ದೀರಿ.ನಿತ್ಯವೂ ಹೇಗೂ ಒಳ್ಳೆಯ ಚಿಂತನೆಯಲ್ಲಿಯೇ ಮಲಗುತ್ತೀರಿ. ಬಿದ್ದ ಕನಸನ್ನು ನೆನಪಲ್ಲಿಟ್ಟುಕೊಂಡು ಮರೆಯದೆ ಅದಕ್ಕೆ ಅಕ್ಷರ ಕೊಡುವ ಸಾಹಸ ಮಾಡಿ, ಒಂದು ಮಾಲಿಕೆ ಮಾಡಿಬಿಡಿ. ಒಂದು ಹೊಸ ದೃಷ್ಟಿಕೋನವೇ ಮೂಡಿ ಬಂದೀತು.

    ReplyDelete
  6. ಎಲ್ಲಿ ಜಾರಿತೋ.. ಮನವೂ... ನನ್ನನ್ನು ನಿರಂತರ ಕಾಡುವ ಹಾಡು.... ಅತ್ಯಂತ ಸುಂದರ ಗೀತೆ... ಅದರ ಶೈಲಿಯಲ್ಲೇ ಬಂದ ನಿಮ್ಮ ಕವನ ಚೆನ್ನಾಗಿದೆ. ಕನಸಿನಲ್ಲಿ ಅಲ್ಲಿಯ ಲೋಕಕ್ಕೇ ಹೋಗಿ ಬಂದಿದ್ದರೆ, ನಮಗಿನ್ನೂ ಸ್ವಾರಸ್ಯಕರ ಕಥೆ ಸಿಗುತ್ತಿತ್ತು... ಕನಸಿನ ಮಾಲಿಕೆ ಶುರು ಮಾಡಿ ಸಾರ್... ಓದಲು ಆಸಕ್ತಿಕರವಾಗಿರತ್ತೆ....

    ReplyDelete
  7. ಭಟ್ಟರೇ ನಿಮ್ಮ ಬ್ಲಾಗಿಗೆ ಬಹಳ ದಿನಗಳ ನಂತರ
    ಬರುತ್ತಿದ್ದೇನೆ ..ಯಾರೋ ಆಪ್ತರ ಮನೆಗೆ ಬಂದಂತೆ
    ಅನುಭವ ವಾಗುತ್ತಿದೆ!ಹತ್ತು ದಿನ ಕಂಪ್ಯೂಟರ್ ಕೆಟ್ಟು
    ಒದ್ದಾಡು ವಂತಾಗಿತ್ತು.ನೀವು ಪುಣ್ಯವಂತರು !
    ಬಣ್ಣ ಬಣ್ಣದ ಕನಸುಗಳು ಬೀಳುತ್ತವೆ!

    ReplyDelete
  8. ಮಿತ್ರರೇ,ಬಹಳ ಚೆನ್ನಾಗಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೀರಿ,ಎಲ್ಲಾ ಓದುಗ ಮಿತ್ರರಿಗೂ ಧನ್ಯವಾದಗಳು,ನೆಟ್ ಸರಿ ಹೋದ ಮೇಲೆ ತಮ್ಮಗೆ ವಿಸ್ತ್ರತ ರೀತಿಯಲ್ಲಿ ಅಭಿನಂದನೆ ಹೇಳುವವನಿದ್ದೇನೆ,ಇನ್ನೇನು ಸರಿಹೋಗಬಹುದು!

    ReplyDelete