ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, April 18, 2010

ಆಲಸ್ಯ ಗುರಿತಲುಪುವ ವ್ಯಕ್ತಿಗೆ ಮಾರಕ

ಆಲಸ್ಯ-ಗುರಿತಲುಪುವ ವ್ಯಕ್ತಿಗೆ ಮಾರಕ

ಒಂದಾನೊಂದು ರಾಜ್ಯವಿತ್ತು, ಆ ರಾಜ್ಯದಲ್ಲಿ ರಾಜನಿಗೆ ಇಬ್ಬರು ಹೆಂಡಂದಿರು. ಒಬ್ಬೊಬ್ಬರಲ್ಲಿ ಒಬ್ಬೊಬ್ಬ ಗಂಡು ಸಂತತಿಯಾಗಿತ್ತು. ಕರುಳಿನ ಕುಡಿಗಳು ಬೆಳೆದು ದೊಡ್ಡವರಾಗುತ್ತಾ ನಡೆದರು. ಇಬ್ಬರಲ್ಲಿ ಒಬ್ಬನಿಗೆ ಯುವರಾಜ ಪಟ್ಟವನ್ನು ಕೊಡಲೇಬೇಕಲ್ಲ. ಹೀಗಾಗಿ ಆ ಪಟ್ಟವನ್ನು ಯಾರಿಗೆ ಕೊಡಬೇಕು ಎಂಬುದು ರಾಜನಿಗೆ ಉದ್ಭವಿಸಿದ ಸಮಸ್ಯೆ. ಎರಡೂ ಮಕ್ಕಳು ಎರಡು ಕಣ್ಣುಗಳಿಗೆ ಸಮ. ಅಂದಮೇಲೆ ಈಗ ಯಾರಿಗೆ ಯುವರಾಜ ಪಟ್ಟವನ್ನು ಕಟ್ಟಲಿ? --ಇದನ್ನೇ ತಲೆಯಲ್ಲಿ ತುಂಬಿಕೊಂಡು ರಾಜ ಬಹಳ ಶತಾಯ ಗತಾಯ ತಿರುಗುತ್ತಿದ್ದ. ರಾಜನಿಗೆ ಆ ಕ್ಷಣಕ್ಕೆ ರಾಜಗುರುಗಳ ಸ್ಮರಣೆಯಾಯಿತು. ಅವರನ್ನು ಆಸ್ಥಾನಕ್ಕೆ ಕರೆಯಿಸಿ ಏಕಾಂತದಲ್ಲಿ ಈ ವಿಷಯ ಅವರಲ್ಲಿ ಹೇಳಿಕೊಂಡ. ರಾಜಗುರುಗಳು ಕೆಲವೊಂದು ಸಮಯ ಕಳೆಯಲಿ ಎಂದೂ, ಅಷ್ಟರಲ್ಲಿ ಹಲವಾರು ರೀತಿಯಲ್ಲಿ ತಾವು ಈರ್ವರನ್ನೂ ಪರೀಕ್ಷಿಸಿ ಕೊನೆಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು. ರಾಜ ಅದಕ್ಕೆ ಸಮ್ಮತಿಸಿದ.

ದಿನಗಳು ಉರುಳಿದವು. ರಾಜಗುರುಗಳು ಇಬ್ಬರೂ ರಾಜಕುಮಾರರನ್ನು ಪ್ರಜೆಗಳ ವಾಸಸ್ಥಾನದ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿಸಿದರು. ಮಧ್ಯೆ ಮಧ್ಯೆ ಅನೇಕ ಥರದ ಸಮಸ್ಯೆಗಳನ್ನು ಅವರ ಮುಂದೊಡ್ಡಿ ಅದಕ್ಕೆ ರಾಜನಾದವನು ಯಾವರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದನ್ನು ಅವರಿಂದ ಕೇಳುತ್ತಿದ್ದರು. ಹೀಗೇ ಕೆಲಸಮಯದ ನಂತರ ಒಂದು ಗ್ರಾಮದಲ್ಲಿ ಒಬ್ಬ ರೈತನನ್ನು ಭೇಟಿಯಾದರು. ಮಾರುವೇಷದಲ್ಲಿರುವ ಇವರ ಬಗ್ಗೆ ತಿಳಿಯದ ರೈತ ಸಹಜವಾಗಿ ಯಾರೋ ಒಬ ಮುನಿಮಹಾತ್ಮ ಮತ್ತು ಅವರ ಶಿಷ್ಯರು ಬಂದಿದ್ದಾರೆ ಎಂದು ತಿಳಿದು ಬಹಳ ಸಂತೋಷದಿಂದ ಹಣ್ಣು-ಹಂಪಲು ಹಾಲು ಇತ್ಯಾದಿ ಇತ್ತು ಸತ್ಕರಿಸಿದ. ನಂತರ ತನ್ನ ಮಕ್ಕಳಿಬ್ಬರ ಬಗ್ಗೆ ಹೇಳಿಕೊಂಡ. " ಸ್ವಾಮೀ ನನಗೆ ಇಬ್ಬರು ಗಂಡು ಮಕ್ಕಳು, ಇಬ್ಬರೂ ಪ್ರಾಯ ಪ್ರಬುದ್ಧರು. ಒಬ್ಬ ಮಾತ್ರ ನಿಧಾನವಾಗಿಯಾದರೂ ಕೆಲಸ ಮಾಡೇ ಮಾಡುತ್ತಾನೆ, ಆದರೆ ಇನ್ನೊಬ್ಬ ಕೆಲಸ ಮಾಡಿದರೆ ಮಾಡಿಬಿಡಬಹುದು, ಇಲ್ಲವೇ ಮಧ್ಯೆ ಆಲಸ್ಯದಿಂದ ಕುಳಿತುಬಿಟ್ಟರೆ ಕೆಲಸ ಮುಗಿಯುತ್ತದೆ ಎಂಬುದನ್ನೇ ಹೇಳಲಾಗದು. ಕೆಲಸ ಮಾಡುವಲ್ಲಿ ಆತನೂ ಯೋಗ್ಯನೇ ಆದರೆ ವಿನಾಕಾರಣ ಮಧ್ಯೆ ಆಲಸ್ಯ ಅವನಿಗೆ, ಅದು ಸರಿಯೇ ಎಂಬ ವಾದ ಅವನದ್ದು, ಇದಲ್ಲದೆ ಇನ್ನೊಬ್ಬನನ್ನು ಆತ ಹೆಳವ ಅಂತ ಅಪಹಾಸ್ಯಮಾಡುತ್ತಾನೆ.ಮತ್ತೊಬ್ಬ ಮಗ ಎಲ್ಲಾ ನಿಧಾನ, ಏನು ಹೇಳಿದರೂ ಆತ ಬೇಗ ಮಾಡಲೊಲ್ಲ, ಆದರೆ ಆತ ತಾನಾಯಿತು ತನ್ನ ಪಾಡಾಯಿತು ಎಂದು ಕೆಲಸದಲ್ಲೇ ಸದಾ ಮಗ್ನನಾಗಿರುತ್ತಾನೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ? ಅವರಿಗೆ ಬೇರೆ ತರಬೇತಿ ಬೇಕೇ ಅಥವಾ ಹೀಗೇ ಮುನ್ನಡೆಯಲೇ ಎಂದು ತಿಳಿಯದಾಗಿದೆ,ತಾವು ಮಹಾತ್ಮರು ಏನಾದರೊಂದು ಮಾರ್ಗ ತೋರಿಸಬೇಕು " ರೈತನ ಅಲವತ್ತುಕೊಳ್ಳುವಿಕೆ ರಾಜಗುರುಗಳಿಗೆ ಅರ್ಥವಾಯಿತು. ಅವರು ಆ ವಿಷಯವದಲ್ಲಿ ಯಾರದ್ದು ಸರಿ ಎಂಬ ಪ್ರಶ್ನೆಯನ್ನು ಮಾರುವೇಷದಲ್ಲಿರುವ ರಾಜಕುಮಾರರ ಮುಂದಿಟ್ಟರು.

ರಾಜಕುಮಾರರು ಒಬೊಬ್ಬರು ಒಬ್ಬೊಬ್ಬರನ್ನು ಬೆಂಬಲಿಸಿದರು. ಒಬ್ಬ ಹೇಳವನನ್ನೂ, ಇನ್ನೊಬ್ಬ ಆಳಸಿಯನ್ನೂ ಬೆನ್ನು ತಟ್ಟಿದರು. ಅಲ್ಲಿಗೆ ಮುನಿಗೆ ಅವರ ಮನೋಗತ ಅರ್ಥವಾಯಿತು. ಆಳಸಿಗಿಂತ ಮಂದಗತಿಯಲ್ಲಿ ಕೆಲಸಮಾಡುವವನೇ ಮೇಲು ಎಂದು ಒಂದು ಉದಾಹರಣೆಯ ಸಹಿತ ಹೇಳಿದರಲ್ಲದೇ ಆಲಸ್ಯವನ್ನು ದೂರಮಾಡಿದರೇ ಗುರಿಯನ್ನು ಸಕಾಲದಲ್ಲಿ ತಲುಪಲು ಸಾಧ್ಯ ಎಂಬ ಮಾತನ್ನು ಹೇಳಿದರು, ರೈತನ ಮಕ್ಕಳಿಗೆ ಬುದ್ಧಿ ಹೇಳುವ ನೆಪದಲ್ಲಿ ರಾಜಕುಮಾರರಿಗೂ ಲೋಕದ ಪರಿಜ್ಞಾನ ಬೆಳೆಸಿದರು.ರಾಜಕುಮಾರರ ಪರೀಕ್ಷೆ ಇಲ್ಲಿಗೇ ಮುಗಿಯದಿದ್ದರೂ ಅವರ ಆಂತರ್ಯವನ್ನು ಅರಿಯುವಲ್ಲಿ ಇದೂ ಒಂದು ಸಹಕಾರಿಯಾಯಿತು. ಮುನಿಗಳು ಅಂದು ಒಂದು ಕಥೆಯ ಮೂಲಕ ಅವರೆಲ್ಲರಿಗೆ ತಿಳುವಳಿಕೆ ಹೇಳಿದರು ---
ಗಚ್ಛತ್ ಪಿಪೀಲಿಕಾಯಾತಿ
ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ
ಪದಮೇಕಂ ನ ಗಚ್ಛತಿ ||

ಇದೊಂದು ಸುಭಾಷಿತ, ರತ್ನದ ಇನ್ನೊಂದು ರೂಪ ಅಂತ ಪ್ರತ್ಯೇಕ ಹೇಳಬೇಕಿಲ್ಲ ! ಇದರ ಅರ್ಥ ಇಷ್ಟೇ - ಆಮೆ ಮತ್ತು ಗರುಡ ಇವುಗಳ ನಡುವೆ ಒಂದು ಸ್ಪರ್ಧೆ. ಆಮೆ ನಿಧಾನ ನಡಿಗೆಗೆ ಹೆಸರಾದ ಪ್ರಾಣಿ. ಆದರೆ ಗರುಡ [ವೈನತೇಯ] ಜಗತ್ತನ್ನೇ ಶೀಘ್ರಗತಿಯಲ್ಲಿ ಸುತ್ತಬಲ್ಲ ಪಕ್ಷಿ.ಇವುಗಳ ನಡುವೆ ಒಂದೇ ಸ್ಥಳವನ್ನು ತಲಪುವ ಬಗ್ಗೆ ಯಾರು ಬೇಗ , ಯಾರು ಮೊದಲು ತಲಪುತ್ತಾರೆ ಎಂಬ ಬಗ್ಗೆ ಏರ್ಪಟ್ಟ ಸ್ಪರ್ಧೆ. ಪ್ರಾರಂಭವಾಯಿತು. ಎರಡೂ ಹೊರಟಿವೆ. ಆಮೆ ಅದರಪಾಡಿಗೆ ಆಮೆನಡಿಗೆಯಲ್ಲಿ ಹೊರಟಿತು, ಗರುಡ ಕೇಳಬೇಕೇ? ಬುರ್ರನೆ ಹಾರಿ ಕ್ಷಣಾರ್ಧದಲ್ಲಿ ಅಷ್ಟು ದೂರ ಕ್ರಮಿಸಿ ಮಾರ್ಗ ಮಧ್ಯದ ಒಂದು ಮರದ ಮೇಲೆ ಕುಳಿತು ಹೇಗೂ ಆಮೆ ನಿಧಾನ ಬರುತ್ತದೆಯಾದ್ದರಿಂದ ಸ್ವಲ್ಪ ವಿಶ್ರಮಿಸಲು ತೊಡಗಿತು, ಹಾಗೆ ವಿಶ್ರಮಿಸುತ್ತ ನಿದ್ದೆಗೆ ಜಾರಿಬಿಟ್ಟಿತು. ಇತ್ತ ಆಮೆರಾಯರು ನಿಧಾನವಾಗಿ ನಡೆಯುತ್ತಾ ನಡೆಯುತ್ತಾ ಕ್ರಮಿಸುತ್ತ, ಗರುಡ ಮರದಮೇಲೆ ಕುಳಿತಿರುವ ಪರಿವೆಯೂ ಇಲ್ಲದೇ ಹಾಗೇ ಮುಂದೆ ಸಾಗಿತು. ಸಂಜೆಯಾಗುವಷ್ಟರಲ್ಲಿ ಆಮೆ ಆ ನಿರ್ಧರಿತ ಸ್ಥಳವನ್ನು ತಲಪಿತು. ತಲುಪಿದ ನಂತರ ಮಿತ್ರ ಗರುಡ ಬಹಳ ಮೊದಲೇ ಬಂದಿರಬೇಕೆಂದು ಚಿಂತನೆ ನಡೆಸಿತು.ಮರದ ಮೇಲೆ ಕುಳಿತ ಗರುಡ ಮಹಾರಾಜರಿಗೆ ಎಷ್ಟೋ ಹೊತ್ತಿನ ನಂತರ ಎಚ್ಚರಿಕೆಯಾಯಿತು. ನೋಡುತ್ತಾರೆ ಸಂಜೆಯಾಗಿಬಿಟ್ಟಿದೆ. ಆಮೆ ಇನ್ನೂ ಬಂದಿಲ್ಲವಾಗಿರಬೇಕು ಎಂದು ಕೊಳ್ಳುತ್ತಾ ಒಮ್ಮೆ ಗರಿಗೆದರಿ ಹಾರಿ ನಿರ್ಧರಿತ ಅದೇ ಆ ಸ್ಥಳಕ್ಕೆ ತಲಪಿತು. ನೋಡಿದರೆ ಆಮೆ ಮೊದಲೇ ಹಾಜರಿದ್ದು ವಿಶ್ರಮಿಸಿಕೊಂಡಿತ್ತು. ಆಗ ಗರುಡನಿಗೆ ಆಮೆಯ ವೇಗವನ್ನು ಲೆಕ್ಕಹಾಕುತ್ತ ಅಲ್ಲಿ ನಿದ್ದೆ ಮಾಡಿದ್ದು ತಪ್ಪು ಎಂದು ಅರ್ಥವಾಯಿತು.

ಹೀಗೆ ಜೀವನದಲ್ಲಿ ಇನ್ನೊಬ್ಬರ ತಾಕತ್ತನ್ನು ಅವಲೋಕಿಸಿ, ತನ್ನೊಂದಿಗೆ ಹೋಲಿಸುತ್ತ ಕೆಲಸಮಾಡುವಲ್ಲಿ ವಿಳಂಬಮಾಡಿದರೆ ಇದೇ ರೀತಿ ಅಂತೂ ಮಾಡಿರುವ ಸಾಲಿಗೆ ಸೇರಬಹುದೇ ಹೊರತು ತ್ವರಿತ ಮತ್ತು ಉತ್ತಮ ಕೆಲಸ ಅದಗಲಾರದು. ಯಾವುದು ಸಕಾಲದಲ್ಲಿ ಪೂರೈಸಲ್ಪಡುತ್ತದೋ ಅದು ಮಾತ್ರ ಉತ್ತಮ ಕೆಲಸ.

3 comments:

  1. katheyolagondu kathe chennagide. Ame mathe molada bagge oddide adre ame mathu garuda ide modala sala kelthirodu.

    ReplyDelete
  2. ಅದ್ಭುತ್ ಲೇಖನ ಸೂಕ್ತ ದೃಷ್ಟಾ೦ತದೊ೦ದಿಗೆ. ಧನ್ಯವಾದಗಳು.

    ReplyDelete
  3. Thanks to Nisha, Sitaram & all

    ReplyDelete