ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 6, 2010

ಜಾಣ ಬಾ ತಡೆದು ಮನೆಗೆ !


ಬೈದುಕೊಳ್ಳಬೇಡಿ ಭಾನುವಾರವೂ ಬಿಡುವುದಿಲ್ಲ ಅಂತ, ನಾನೂ ಅದರ ಬಗ್ಗೇ ತಮ್ಮನ್ನೆಲ್ಲಾ ಸೇರಿಸಿಕೊಂಡು ಒಂದು ಸಣ್ಣ ಹಾಡು ಬರೆದಿದ್ದೇನೆ. ಹಾಡಿಕೊಳ್ಳಲು ಬರುವ, ಮುದನೀಡುವ, ಅಜ್ಞಾಪಿಸುವ,ಪ್ರಶ್ನಿಸುವ ಎಲ್ಲ ಭಾವನೆಗಳನ್ನೂ ನನ್ನಲ್ಲಿ ಭರಪೂರ ತುಂಬಿಕೊಂಡು ನಿಮ್ಮ ಪರವಾಗಿ ವಕೀಲಿ ವೃತ್ತಿ ಮಾಡಿದ್ದೇನೆ ಈ ಹಾಡಿನಲ್ಲಿ ! ನನ್ನೀ ಹಾಡು ತಮ್ಮ ಮನದಲ್ಲಿ ಸದಾ ಭಾನುವಾರದ ಹಾಡಾಗಿ ಗುನುಗುನಿಸಲಿ ಎಂಬುದು ನನ್ನ ಆಶಯ. ಕವಿಗೆ- ಕಲ್ಪನೆಗೆ ಮೊದಲೇ ಹೇಳಿದ ಹಾಗೇ ಹೊತ್ತುಗೊತ್ತು ಇಲ್ಲ. ಇದು ೯:೦೦ ರಿಂದ ೬:೦೦ ರ ಕೆಲಸದ ಅವಧಿಯ ಪರಿಮಿತಿಗೊಳಪಡುವುದಿಲ್ಲ. ಉಪಜೀವನಕ್ಕಾಗಿ ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾ ಬಿಡುವಿರದ ದುಡಿಮೆಯಲ್ಲಿ ತೊಡಗಿರುತ್ತಾನೆ. ಬಿಡುವೇ ಇಲ್ಲದ ಅವನಿಗೆ ಎಲ್ಲೋ ಒಂದು ದಿನ ಸ್ವಲ್ಪ ಜಾಸ್ತಿ ಹೊತ್ತು ಮಲಗಿದ್ದು ತಡವಾಗಿ ಎಳೋಣವೆಂದು ಅನಿಸುತ್ತದೆ, ಆದರೆ ಮನೆಯ ಮಿಕ್ಕುಳಿದ ಜನ, ಬಂಧು-ಮಿತ್ರರು ಏನಂದುಕೊಂಡಾರು ಎಂಬ ಸಂಕೋಚ,ನಾಚಿಕೆಯಿಂದ ಬೇಗ ಏಳುವ ಮನಸ್ಸಿಲ್ಲದಿದ್ದರೂ ಅರೆಬರೆ ಮನಸ್ಸಿನಿಂದ ಎದ್ದು ಕೆಲಸಮಾಡಲು ಆರಂಭಿಸುತ್ತಾನೆ. ಅಂತಹ ಮನಸ್ಸು ಸೂರ್ಯನಿಗೇ ತಡವಾಗಿ ಬರುವಂತೆ ಆದೇಶಿಸುವ ಒಂದು ಸನ್ನಿವೇಶದಲ್ಲಿ ಈ ಹಾಡು ರಚಿತವಾಗಿದೆ.

ಜಾಣ ಬಾ ತಡೆದು ಮನೆಗೆ !

ಸೂರ್ಯ ನಿನಗಾಯಿತದೊ ಭಾಳ ಬೇಗನೆ ಬೆಳಗು
ಬಾರದಿರು ಸ್ವಲ್ಪ ತಾಳು
ಇರುಳ ಪರದೆಯ ಸರಿಸಿ ಜಗಕೆ ಬೆಳಕನು ಹರಿಸಿ
ಸಾರದಿರು ದಿನವ ಕೇಳು !

ಬಹಳ ದಿನವಾಯಿತದೊ ನಿನ್ನಲ್ಲಿ ಹೇಳದೆಯೆ
ಮಲಗದೆಯೆ ಬಹಳ ಸಮಯ
ಕಹಳೆಯೂದುವರೆಲ್ಲ ಹೊತ್ತಾರೆ ಏಳದಿರೆ
ಹಲವು ಥರ ನಾಚಿಕೆ ಭಯ !

ಮಂಜಮುಂಜಾನೆಯಲಿ ಗುಂಜಿಸಿದ ದುಂಬಿಗಳ
ಕಂಡಾಯ್ತು ಬಹಳ ಹಿಂದೆ
ಸಂಜೆಗೆಂಪಿನ ನಿನ್ನ ಹಣ್ಣು ಕೆನ್ನೆಯ ನೋಡೆ
ಎಲ್ಲಿಹುದು ಸಮಯ ಮುಂದೆ ?

ಬೆಳಗು ಬೈಗಿನ ಲೆಕ್ಕ ನಮಗಿಹುದೆ ಕೆಲಸದಲಿ?
ಕಳೆಯುವುದು ಬದುಕು ಹೀಗೇ
ಒಳಗೆ ನೆಮ್ಮದಿಯಿಲ್ಲ ಸಾಕಾಯ್ತು ಅಲೆದಲೆದು
ಅನುದಿನವು ಹೊರಗೆ ಹೊರಗೆ

ಭಾನುವಾರದ ಬೆಳಗು ರಜೆಯ ದಿನದಾ ಸೊಬಗು
ಬಗೆಬಗೆಯ ಭಕ್ಷ್ಯಭೋಜ್ಯ
ಸಾನುರಾಗದ ಬಾಳ್ವೆ ಸಂಗೀತ ಸಾಹಿತ್ಯ
ಸಿಗಲುಂಟೆ ಕೆಲವು ಗಳಿಗೆ ?

ನಾವೂ ಮನುಜರು ಕಣಾ ನಾವೇನು ಯಂತ್ರಗಳೆ ?
ಆಣೆ ಮಾಡುವೆನು ನಿನಗೆ
ನೋವು ಕಳೆಯಲು ಹಾಗೆ ಹೊದ್ದು ಮಲಗಲು ಹೀಗೆ
ಜಾಣ ಬಾ ತಡೆದು ಮನೆಗೆ !

6 comments:

  1. ಅ೦ದ ಹಾಗೆ ನಾನು ಇ೦ದು ಎ೦ದಿಗಿ೦ತ ತಡವಾಗಿ ಎದ್ದೆ, ಇದೀಗ ನಿಮ್ಮ ಭಾನುವಾರಾದ ಕವನ ಓದಿ ಖುಶಿಗೊ೦ಡೆ. ಚೆನ್ನಾಗಿದೆ.

    ReplyDelete
  2. ಸೂರ್ಯನಿಗೇ ಸ್ವಲ್ಪ ಹೇಳೇಬಿಡೋಣ ಅನ್ನಿಸಿತ್ತು, ನಾನು ಅನ್ನಿಸಿದ್ದನ್ನು ಹೇಳೇ ಬಿಡುತ್ತೇನೆ, ಹೀಗಾಗಿ ಬೇಗ ಏಳುವವರು ಏನಾದರೂ ಅಂದುಕೊಳ್ಳಲಿ ಅಂತ ಹೇಳಿಬಿಟ್ಟಿದ್ದೇನೆ, ನೀವೂ ಅಷ್ಟೇ, ತಡವಾಗೆದ್ದು ನನ್ನ ಅನುಮೋದಿಸಿಬಿಟ್ಟಿದ್ದೀರಿ ಹೀಗಾಗಿ 'ನಮಗೂ ನಿಮಗೂ ಕನ್ನಡವೇ ಮೇಲ್ಪಂಕ್ತಿ , ನಮಗೂ ನಿಮಗೂ ಕನ್ನಡದಲೇ ಮುಕ್ತಿ',ಧನ್ಯವಾದಗಳು

    ReplyDelete
  3. ಚೆನ್ನಾಗಿದೆ ಕವನ...
    ಪ್ರತಿದಿನವೂ ಸೂರ್ಯನಿಗಿಂತ ಮುಂಚೆಯೇ ಎದ್ದು ನಮ್ಮ ದಿನ ಶುರು ಮಾಡುವ ನಾವುಗಳು ಎದುರು ನೋಡುವುದು ಈ ಭಾನುವಾರಗಳನ್ನೇ... ವಾರದಲ್ಲೊಂದು ದಿನ ನನ್ನ ಸೂರ್ಯನ ಭೇಟಿ ನಿಧಾನವಾಗೇ ಆಗತ್ತೆ.....

    ಶ್ಯಾಮಲ

    ReplyDelete
  4. ತಮಗೆ ಹೇಳಬೇಕೆಂದರೆ ನನಗೆ ಇದು ಅನ್ವಯಿಸುವುದಿಲ್ಲ, ಕೆಲವೊಮ್ಮೆ ಸರಿರಾತ್ರಿ ೨ ಘಂಟೆ ವರೆಗೆ, ಅಥವಾ ಬೆಳಿಗ್ಗೆ ೪ ಘಂಟೆಯಿಂದ ನನ್ನ ಕೆಲಸ ಇರುತ್ತದೆ, ನನಗೆ ಬಿಡುವು ಸಿಗುವುದು ಕೇವಲ ೩-೪ ತಾಸು ಮಾತ್ರ. ಆದರೂ ಕವಿಯೊಬ್ಬ ಜನಸಾಮಾನ್ಯರ ದೈನಂದಿನ ಬದುಕನ್ನು ಅನುಭವಿಸಿ ಬರೆಯಬೇಕಾಗುತ್ತದೆ, ಬರೆದಿದ್ದೇನೆ. ನಾನು 'ಸೂರ್ಯ ವಂಶಿ' ಯಲ್ಲ, ಧನ್ಯವಾದಗಳು.

    ReplyDelete
  5. bhatre, purusottillada jeevanashailiyalliyoo purusottumaadikondu bareyutteeralla....adoo marmikavaagi....dhanyavaadagalu. kavanada theme haagoo geyate chennagi moodibandide.

    ReplyDelete
  6. ಕಾವ್ಯ-ಸಾಹಿತ್ಯವೇ ಒಂದು ಆರಾಧನೆ ನನಗೆ, ಹೀಗೆ ಒಪ್ಪಿಕೊಂಡಾದಮೇಲೆ ಸಮಯ, ಊಟ-ತಿಂಡಿ ಇದರ ದೊಂಬರಾಟ ಯಾಕೆ ಹೊರಗೆ? ಇದ್ದುದನು ಒಪ್ಪಿದೆ ಅದನ್ನೇ ಅಪ್ಪಿದೆ, ಅದರಲ್ಲೇ ಸುಖವಿದೆ, ನಿಮ್ಮಲ್ಲೂ ಹಂಚಿದೆ,ಧನ್ಯವಾದ

    ReplyDelete