ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 9, 2012

ಭಾವಾನಂದ ಲಹರಿ

ಚಿತ್ರಋಣ: ಅಂತರ್ಜಾಲ
ಭಾವಾನಂದ ಲಹರಿ

ಭಾವಲಹರಿ ಹರಿಯಲಿಲ್ಲಿ ರಾಗ ತಾಳ ತಾಳಲಿಲ್ಲ
ಕಾವಿನಿಂದ ಮೊಟ್ಟೆಯೊಡೆದು ಮರಿಯು ಹುಟ್ಟಿತು !
ಜೀವತಳೆದ ಭಾವನೆಗಳ ರೂಪುಗಟ್ಟಿತು

ನೋವಿನಲ್ಲು ನಲಿವಿನಲ್ಲು ಸೋಲಿನಲ್ಲು ಸೆಡವಿನಲ್ಲು
ಬೇವಿನಲ್ಲು ಮಾವಿನಲ್ಲು ಹಾಯ್ದ ಮನದೊಳು
ತಾವುಮಾಡಿ ತೂರಿ ಬಂತು ತಾನು ಮುದದೊಳು

ಜಾವಜಾವದಲ್ಲು ಜನಿಸಿ ಮತ್ತೆ ಸತ್ತು ಮರಳಿ ಹುಟ್ಟಿ
ದೇವರೂಪ ತಲುಪುವೆಡೆಗೆ ಹೆಜ್ಜೆಯಿಕ್ಕುತಾ 
ಸಾವಿನಲ್ಲು ಸೆಣಸಿ ಪುನಃ ಗೆಜ್ಜೆಕಟ್ಟುತಾ

ಯಾವ ರಂಭೆ ಮೇನಕೆಯರ ರೂಪನೋಡಿ ಸೋತು ಮಣಿದು
ದಾವಿನಲ್ಲಿ ಸಿಲುಕಿ ತಪದ ಫಲವ ಕಳೆಯಿತು ?
ಠಾವು ತನ್ನದಲ್ಲವೆಂದು ಮೂಲ ಹುಡುಕಿತು

ಗಾವುದಗಳ ದೂರ ನೆಗೆದು ತೆಪ್ಪಗೆದ್ದು ಮತ್ತೆ ಸದ್ದು !
ಕೋವಿ ಹಿಡಿದು ಈಡು ಹೊಡೆದು ಗುರಿಯ ಮೆರೆಯಿತು
ಬಾವು ಸಿಡಿದು ಮೂರ್ತರೂಪ ಹೀಗೆ ಮೊರೆಯಿತು 

Sunday, October 7, 2012

ಚೌತೀ ಮರುದಿನದ ’ಹನಿಗಾರಿಕೆ’ಯಲ್ಲಿ ಸಿಕ್ಕಿದ್ದು PUNCHಕಜ್ಜಾಯ !


ಚೌತೀ ಮರುದಿನದ ’ಹನಿಗಾರಿಕೆ’ಯಲ್ಲಿ ಸಿಕ್ಕಿದ್ದು PUNCHಕಜ್ಜಾಯ !

ಸರ್ಪಸುತ್ತು
===========

ಸರ್ಪಸುತ್ತು
ನಿಮಗೆ ಗೊತ್ತು
ಸಹಿಸಲಾರದ ಬೇನೆ
ಸರ್ಪ ಸುತ್ತಿದ್ದರೂ
ನಸುನಗುತ್ತಿರುವ
ಗಣಪನಿಗೆ ವಂದನೆ !

-ಬಂದಿದ್ದು ಉದಯವಾಣಿಯಲ್ಲಿ ವರ್ಷದ ಹಿಂದಿನ ಗಣೇಶ ಚತುರ್ಥಿಯ ಸಮಯದಲ್ಲಿ! ನಕ್ಕು ಕೆಮ್ಮು ಬಂದು ಸುಧಾರಿಸಿಕೊಳ್ಳುವ ಮೊದಲೇ ಮತ್ತೊಂದು ಪಟಾಕಿ ಸಿಡಿಯಿತು :

ರಾಗಿ ಪದ
===========

ಇದ್ದಿದ್ದರೆ ಇಂದು ಕನಕದಾಸರು
ಮತ್ತೊಮ್ಮೆ ರಾಗಿಪದ
ಹಾಡುತ್ತಿದ್ದರು
ಭಾರೀ ಶ್ರೀಮಂತರಾಗಿ
ಮಾಜಿ ಸಚಿವರಾಗಿ
ರಾಗಿ ತಿಂದೀರಾ ?
ಜೈಲಲಿ ರಾಗಿ ತಿಂದೀರಾ ?

ಗಣಪತಿಗೆ ಬಹಳ ಇಷ್ಟದ ಖಾದ್ಯಗಳಲ್ಲಿ ಒಂದು ಪಂಚಕಜ್ಜಾಯ, ಆದರೆ ಈ ಡುಂಡಿರಾಜ ಗಣಪತಿಗೆ ಇಷ್ಟದ ನೈವೇದ್ಯ PUNCHಕಜ್ಜಾಯ. ಹನಿಗವನಗಳು-ಅಣಕವಾಡುಗಳು-ಭಾವಗೀತೆಗಳು-ವಿನೋದ ಗೀತೆಗಳು-ಚುಟುಕಗಳು ಇವೆಲ್ಲಾ ಸೇರಿದ್ದೇ ಈ ಪಂಚಕಜ್ಜಾಯದ ವಿಶೇಷ. ನಮ್ಮೂರಕಡೆಗೆ ಸಮಾನ್ಯವಾಗಿ, ದೊಡ್ಡ ದೊಡ್ಡ ಹಬ್ಬಗಳ ಸಂದಿನಲ್ಲೇ ಎಲ್ಲಾದರೂ ಮನೋರಂಜಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುವುದು ವಾಡಿಕೆ. ಹೆಚ್ಚಾಗಿ ಯಕ್ಷಗಾನ ತಾಳಮದ್ದಲೆ ಅಥವಾ ಆಟಗಳನ್ನೋ ಅಥವಾ ಸುಗಮಸಂಗೀತ ರಸಧಾರೆಯನ್ನೋ ಇಟ್ಟುಕೊಳ್ಳುತ್ತಾರೆ. ಅಲ್ಲಲ್ಲಿ ಭಜನೆಗಳೂ, ಭರತನಾಟ್ಯ ಮುಂತಾದ ಕಾರ್ಯಕ್ರಮಗಳೂ ಸೇರಿರುತ್ತವೆ. ಮಹಾಚೌತಿಗೆ ಊರಿಗೆ ಹೋಗಲಿಲ್ಲ-ದಾಯಾದರಲ್ಲಿನ ಯಾವುದೋ ಸೂತಕದಿಂದ ಹಬ್ಬ ದಸರಾಕ್ಕೆ ಮುಂದೂಡಲ್ಪಟ್ಟಿದೆ; ಹಬ್ಬ ಆ ಯಾ ಸಂದರ್ಭದಲ್ಲಿ ನಡೆದರೆ ಮಾತ್ರ ಚಂದ. ಊರೆಲ್ಲೆಲ್ಲಾ ಆಚರಿಸಿ ಮುಗಿದಮೇಲೆ ಕೇವಲ ಒಂದಷ್ಟು ಕುಟುಂಬಗಳವರು ಜಾಗಟೆ ಹೊಡೆದು ಹಬ್ಬಮಾಡುವಾಗ ಎಂದಿನ ಖುಷಿ ಇರುವುದಿಲ್ಲ. ಈ ಭಾವನೆಯಲ್ಲಿ ನಾನಿದ್ದಾಗಲೇ ಪಂಚಕಜ್ಜಾಯ ಕೊಡ್ತೇನೆ ಬನ್ನಿ ಎಂದು ಸಾರ್ವತ್ರಿಕವಾಗಿ ಆಮಂತ್ರಣ ಹಿಡಿದು ಬಂದಿದ್ದು ನಮ್ಮ ಡುಂಡಿ-ಫೇಸ್ ಬುಕ್ಕಿನಲ್ಲಿ. ಹಬ್ಬ ತಪ್ಪಿದರೂ ಹೋಳಿಗೆ ತಪ್ಪಬಾರದು ಎಂದೇ ಬಯಸುವ ನಾನು ಮತ್ತು ನನ್ನಂಥಾ ಜನ ನಡೆದಿದ್ದು ಡುಂಡಿರಾಜ[ಗಣಪತಿ] ಕೊಡುವ PUNCHಕಜ್ಜಾಯ ಪಡೆಯಲಿಕ್ಕೆ!   

ಒಂದಿಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎನ್ನಬಹುದು. ’ಜಾಲಿಬಾರಿನಲ್ಲಿ ಕೂತು ಪೋಲಿಗೆಳೆಯರು’ ಹಾಡು ಬರೆದು ತುಂಟತನ ಕವಿತ್ವಕ್ಕೆ ಹೆಸರಾದ ಕವಿ ಬಿ.ಆರ್.ಲಕ್ಷ್ಮಣರಾಯರು ಕನ್ನಡ ಸಾಹಿತ್ಯ ಪ್ರಾಕಾರಕ್ಕೆ ಹೊಸದೊಂದು ಜೋಡಣೆ ಕಲ್ಪಿಸಿದರು-ಅದು ಹನಿಗವನ. ಅಧುನಿಕ ಧಾವಂತದ ಜೀವನದಗತಿಗೆ ದರ್ಶಿನಿ ಹೋಟೆಲ್ ಗಳಿದ್ದಂತೇ ತುರ್ತಾಗಿ, ತ್ವರಿತವಾಗಿ,ಚಿಕ್ಕದಾಗಿ ಏನನ್ನಾದರೂ ನೆನೆದುಕೊಂಡು ನಗಲಿಕ್ಕೆ  ಜನ ಆಸಕ್ತರಾಗಿದ್ದ ಕಾಲ. ಐದೇ ನಿಮಿಷದ ಮ್ಯಾಗಿ, ಸ್ಥಳದಲ್ಲೇ ಕಟ್ ಓಪನ್ ಕುರ್ ಕುರ್ರೆ, ಲೇಸ್ ತಮಗೆ ಲೇಸೆಂದು ಬಗೆಯುವ ಅನಿವಾರ್ಯತೆಯಲ್ಲಿದ್ದ ಜನರಿಗೆ ಸೀಮೆ ಎಣ್ಣೆ/ಗ್ಯಾಸ್/ರೇಷನ್ ಖರೀದಿಗೆ ಕ್ಯೂ ನಿಂತಾಗ, ಬ್ಯಾಂಕಿನಲ್ಲಿ ಹಣಕಟ್ಟಲೋ ಪಡೆಯಲೋ ಸರದಿ ನಿಂತಾಗ, ಬಸ್ಸಿಗಾಗಿ ಕಾದು ಬೇಸತ್ತು ನಿಂತಾಗ, ದಿನಗೆಲಸದ ಮಧ್ಯೆ ಮಧ್ಯಾಹ್ನದ ಲಂಚ್ ತೆಗೆದುಕೊಂಡು ಒಂದೈದು ನಿಮಿಷ ಕುಳಿತಲ್ಲೇ ತೂಕಡಿಸುವಾಗ ಇಂಥಾ PUNCHಮಾತ್ರೆಗಳು ಸಿಕ್ಕರೆ ಮಹದಾನಂದವಾಗುತ್ತದೆ. ಕೆಲಸದ ರಾಶಿಯ ನಡುವೆ ಕಳೆದು ಹೋದ ಜೀವಗಳ ಸೆಟೆದುಕೊಂಡ ನರಗಳು ಸಹಜ ಸ್ಥಿತಿಗೆ ಬರುವುದಕ್ಕೆ ಅವು ಸಹಕಾರಿ!

ನಾವೆಲ್ಲಾ ಚಿಕ್ಕವರಿದ್ದಾಗಿನಿಂದಲೇ ವ್ಯಂಗ್ಯ ಪ್ರಿಯರು. ಹಿಂದೊಮ್ಮೆ ನಾನು ಹೇಳಿದ್ದೆ: ರಸ್ತೆಗಳ ಮೈಲಿಗಲ್ಲುಗಳ ಮೇಲೆ ಕಪ್ಪು ಅಕ್ಷರಗಳಲ್ಲಿ ಬರೆದ ಊರುಗಳ ಹೆಸರನ್ನು ಯಾರೋ ತಿದ್ದಿ ’ಆರೊಳ್ಳಿ’ ಇರುವುದನ್ನು ’ಆಠೊಳ್ಳಿ’ ಮಾಡಿದ್ದನ್ನೂ, ’ಬೆಂಗಳೂರು’ ಇದ್ದುದನ್ನು ’ಬೆಂದಳೂರು’ ಮಾಡಿಟ್ಟಿದ್ದನ್ನೂ ನೋಡಿ ನಗುತ್ತಿದ್ದೆವು. ಇನ್ನು ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳ ನಾಮಫಲಕವನ್ನು ಓದುವುದೇ ಬಹಳ ಮೋಜಿನದಾಗಿರುತ್ತಿತ್ತು. ಅಕ್ಷರಗಳ ನಡುವೆ ಜಾಗ ಬಿಟ್ಟೂ ಬಿಟ್ಟೂ ಬರೆಯುವ ಪದ್ಧತಿಯಲ್ಲಿ ಕೆಲವೊಮ್ಮೆ ಅಕ್ಷರಗಳ ಗುರುತು ತಪ್ಪಾಗಿಬಿಡುವುದೂ ಇತ್ತು. ಹೊನ್ನಾವರ ಎಂದು ಅವರು ಬರೆದಿದ್ದರೆ ಓಡುತ್ತಿರುವ ಬಸ್ಸನ್ನು ದೂರದಿಂದ ನೋಡುತ್ತಿದ್ದವರಿಗೆ ಅದು ಕಾಣುತ್ತಿದ್ದುದು ’ಪೊನ್ನಾದರ’ ಎಂದು! ಹೊನ್ನಾವರಕ್ಕೂ ಕುಂದಾಪುರಕ್ಕೂ ಭೌಗೋಳಿಕವಾಗಿ ತೀರಾ ಹತ್ತಿರದ ಎಂಬ ಅಂತರವಲ್ಲದಿದ್ದರೂ ಡುಂಡಿಗೂ ನನಗೂ ಮತ್ತು ನಮ್ಮೊಳಗಿನ ಆ ಒಂದು ಭಾವಕ್ಕೂ ಬಹುಶಃ ಆ ಅಂತರ ಕಮ್ಮಿ ಇದೆ. ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಅವರನ್ನೂ ಅವರ ಬರಹಗಳಿಗೆ ಸ್ಪಂದಿಸುತ್ತಾ ಡ್ಯಾಮೇಜರ್ ಆಗಿರುವ ನನ್ನನ್ನೂ ಹತ್ತಿರ ತಂದಿದ್ದೇ ಅವರ ಹನಿಗವನಗಳು.  

ಡಿ ಮೋಹ
=========

ಸಿಎಂ ಆಗುವ ಮುನ್ನ ಯಡ್ಡಿ
ಸೇರಿಸಿಕೊಂಡಿದ್ದರು ಇನ್ನೊಂದು ಡಿ
ತಮ್ಮ ನೇಮಿಗೆ
ಸಿಎಂ ಆದಮೇಲೂ ಯಡ್ಡಿ
ಎಲ್ಲ ನಿಯಮ ಗಾಳಿಗೊಡ್ಡಿ
ಸೇರಿಸುತ್ತಲೇ ಹೋದರು ಡಿ
ನೋಟಿಫೈ ಆದ ಭೂಮಿಗೆ !

ಹತ್ತಿದ ಲಿಫ್ಟು ಗಕ್ಕನೆ ಮೇಲಕ್ಕೆ ಎತ್ತಿ ಫಕ್ಕನೆ ಕೆಳಕ್ಕೆ ಇಳಿಸಿ ಮಾಡುವಾಗಿನ ಗುರುತ್ವಾಕರ್ಷಣ ಶಕ್ತಿಯ ವಿಚಲಿತ ಅನುಭವ ಇಂತಹ ಹನಿಗಳದ್ದು. ನೋಡ್ತಾ ನೋಡ್ತಾ ಇದ್ದಹಾಗೇ ೩೬ ಕ್ಕೂ ಅಧಿಕ ಕೃತಿಗಳನ್ನು ಬರೆದು ಹಂಚಿದ ಡುಂಡಿಗೆ, ಕಾಶಿಗೆ ಹೋಗಿಬಂದ ಹೆತ್ತವರು ಅಲ್ಲಿ ಕಂಡ ಡುಂಡಿರಾಜ ಎಂಬ ಗಣಪತಿಯ ನೆನಪಿನಲ್ಲಿ ಇಟ್ಟ ಹೆಸರೇ ಡುಂಡಿ. ಸಂಸ್ಕೃತ ಬಲ್ಲವರನ್ನುಳಿದು ಕೆಲವರಿಗೆ ಮೊದಲು ಇದೆಂಥಾ  ಹೆಸರಪ್ಪಾ ಎನ್ನಿಸಿದ್ದೂ ಉಂಟು, ಹೇಳೋದಕ್ಕೆ ಬರದೇ ದುಂಡಿರಾಜ ಎಂದವರೂ ಉಂಟು. ಹೆಸರಿನಲ್ಲೇ ಈ ಹಾಸ್ಯಪ್ರಸಂಗವನ್ನೂ ಅಡಗಿಸಿಕೊಂಡ ಡುಂಡಿಗೆ, ಈ ಸಲುವಾಗಿ ಕೇಳಿದವರಿಗೆ ಉತ್ತರ ಹೇಳಿಯೇ ಕೂದಲುಗಳು ಜಾಸ್ತಿ ಉದುರಿ ಹೋಗಿರಬೇಕು ಎಂಬುದು ನನ್ನ someಶೋಧನೆ !  ಈ someಶೋಧನೆಗೆ ಅಡ್ಡಬಂದವರೇ ಚಂಪಾ !

ಅಭಿನಂದನೆ
============

ಪಂಪ ಪ್ರಶಸ್ತಿಗೆ
ಆಯ್ಕೆಯಾದ ನಿಮಗೆ
ಅಭಿನಂದನೆ ಚಂಪಾ    
ತಡವಾಯಿತೆಂದು
ಮಾಡದಿರಿ ರಂಪ
ನಿಮಗುಂಟು ನಮ್ಮ
ಅನುಕಂಪ ! 

ಹೋಗಲಿ ಬಿಡಿ someಶೋಧನೆ ಈಗ ಸದ್ಯಕ್ಕೆ ಅಸಾಧ್ಯವೆಂದು ಕೈಚೆಲ್ಲಿ ಕೂತರೆ,

ನಮ್ ಕುಂದಾಪ್ರದಲ್ಲಿ ಹಟ್ಟಿಕುದ್ರು
ಎಂಬ ಹಳ್ಳಿ ಇತ್ತ್ ಕಾಣಿ.
ಮೊನ್ನೆ ಮೊನ್ನೆ ಅಲ್ಲಿ ಹುಟ್ಟಿತ್ತ್
ಮಾರ್ರೆ ಈ ಮಾಣಿ
ಎಂಥಾ ಅಂತ್ರಿ ಬಿಟ್ಟಿದ್ದೇ
ಬಿಟ್ಟಿದ್ದು ಹಾಯಿಲ್ಲದ ದೋಣಿ
ಬರ್ದಿದ್ದೆಲ್ಲಾ ಓದದ್ರೆ ಅರ್ಥಾಯ್ತಿತ್ತ್ ನಿಮ್ಗೆ
ಕಾಂಬುಕ್ ಮಾಣಿ ಉಂಬುಕ್ ಗೋಣಿ ! 

[ಈ ಚುಟುಕ ಡುಂಡಿಯ ಮೇಲಿನ ಸಲುಗೆಯಿಂದಲೂ ಪ್ರೀತಿಯಿಂದಲೂ ಡುಂಡಿಯ ಓದಿನ ವಿಸ್ತಾರವನ್ನು ಬಣ್ಣಿಸುವ ಹವಣಿಕೆಯಿಂದಲೂ ನಾನು ಬರೆದಿದ್ದು, ಆಭಾಸಬೇಡ, ನಮ್ಮೆಡೆಗೆ ’ಮಾಣಿ’ ಎಂಬ ಪದವನ್ನು ಗಂಡುಮಗುವಿಗೂ ’ಕೂಸು’ ಎಂಬ ಪದವನ್ನು ಹೆಣ್ಣುಮಗುವಿಗೂ ಬಳಸುತ್ತೇವೆ]

ಅಂದಹಾಗೇ ೧೮.೦೮.೧೯೫೬ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿನಲ್ಲಿ ಜನಿಸಿದ ಡುಂಡಿರಾಜರು ಋಜುಮಾರ್ಗದವರು. ಕೃಷಿವಿಜ್ಞಾನದಲ್ಲಿ ಅತ್ಯಧಿಕ ಅಂಕಗಳೊಡನೆ ಎಂ.ಎಸ್ಸಿ ಪದವಿಯನ್ನು ಪಡೆಯುವಾಗ ರಾಜ್ಯಪಾಲರಿಂದ ಚಿನ್ನದ ಪದಕವನ್ನು ಪಡೆದವರು. ಉದರಂಭರಣೆಗಾಗಿ ಆಯ್ದುಕೊಂಡ ದಂಧೆ ಬ್ಯಾಂಕ್ ನೌಕರಿ. ಕಾರ್ಪೋರೇಷನ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಅವರಿಗೆ ವರ್ಗಾವರ್ಗಿ ಎಂಬುದು ವೃತ್ತಿ ಸಹಜವಾಗಿ ಸಿಕ್ಕ ಅನಿವಾರ್ಯತೆ. ಮಕ್ಕಳನ್ನು ಓದಿಗೆ ಹಚ್ಚಿದ್ದರಿಂದ ಹೆಂಡತಿ ಮಕ್ಕಳನ್ನು ಬೆಂಗಳೂರಲ್ಲೇ ಬಿಟ್ಟು ತಾನು ಮಂಗಳೂರಿನ ಶಾಖೆಯಲ್ಲಿ ಕೆಲಸಮಾಡುವಾಗಿನ ದಿನಗಳನ್ನು ಅವರು ತಮ್ಮ ಅಣಕವಾಡಿನಲ್ಲಿ ಹೇಳಿದ್ದು ಹೀಗೆ:

ಒಂದಿರುಳು ಫೋನಿನಲಿ ನನ್ನವಳ ಕೇಳಿದೆನು
ಚೆಂದನಿನಗಾವುದೆಂದು
ನಮ್ಮೂರು ಮಂಗ್ಳೂರೊ, ನಿಮ್ಮೂರು ಬೆಂಗ್ಳೂರೊ
ಚೆಂದನಿನಗಾವುದೆಂದು

ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಎಂದೆನ್ನ ಕೇಳಲೇಕೆ ?
ಬೆಂಗ್ಳೂರಿನಲ್ಲೀಗ ವಿಪರೀತ ಚಳಿ ಉಂಟು
ವಿಸ್ತರಿಸಿ ಹೇಳಬೇಕೆ ?

ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಫೋನಲ್ಲಿ ಚರ್ಚೆ ಏಕೆ?
ರಜೆಹಾಕಿ ಬಂದುಬಿಡಿ ಎಂದಳಾಕೆ !

ಬೆಂಗ್ಳೂರು ರಸ್ತೆಯಲಿ ಬಸ್ಸುಗಳು ಕಾರುಗಳು
ಲಾರಿಗಳು ಸಾಲು ಸಾಲು
ಬಸ್ಸು ಲಾರಿಗೆ ಬಡಿದು ಮುಸುಡಿ ಸೀಟಿಗೆ ಹೊಡೆದು
ಉದುರಿ ಹೋಗುವುದು ಹಲ್ಲು

ಶಿರಾಡಿ ಘಾಟಿಯಲಿ ಎಷ್ಟೊಂದು ಹೊಂಡಗಳು
ಗಬ್ಬೆದ್ದು ಹೋಗಿ ರೋಡು
ಉದ್ದಕ್ಕೂ ಕುಲುಕಾಟ ಬೆನ್ನುಮೂಳೆಗೆ ಏಟು
ಯಾರಿಗೂ ಬೇಡ ಪಾಡು

ಬೆಂಗ್ಳೂರಿನಲ್ಲೀಗ ವಿಪರೀತ ಟ್ರಾಫಿಕ್ಕು
ಓಡಾಟ ದೊಡ್ಡಗೋಳು
ಬೆಂಗ್ಳೂರಿಗಿಂತಲೂ ಮಂಗ್ಳೂರೆ ಸುಖವೆಂದು
ಅನ್ನಿಸದೆ ಸತ್ಯ ಹೇಳು 

ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಸುಮ್ಮನೆ ವಾದವೇಕೆ?
ಸಾಕುಬಿಡಿ ಫೋನು ಇಡಿ ಎಂದಳಾಕೆ

ದಿ|ಕೆ.ಎಸ್.ನ. ಅವರ ’ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು.....’ ಹಾಡಿನ ಧಾಟಿಯಲ್ಲಿರುವ ಈ ಅಣಕವಾಡನ್ನು ಮತ್ತೆ ವಿಸ್ತರಿಸಿ ಹೇಳೆಬೇಕೇ? ಗೊತ್ತಾಯ್ತಾ....ಸುಮ್ಮನಿರಿ ನಗದೆ ಜೋಕೆ !!

ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ’ಅಂಕಿತ ಪುಸ್ತಕ’ ಪ್ರಕಾಶನ ಹೊರತಂದ ’ಹನಿಗಾರಿಕೆ’ ಮತ್ತು ’ಬನ್ನಿ ನಮ್ಮ ಹಾಡಿಗೆ’ ಎಂಬ ಎರಡು ಪುಸ್ತಕಗಳನ್ನು ವಿಧಿಯುಕ್ತವಾಗಿ ಬಿಡುಗಡೆಗೊಳಿಸಿದ್ದು ನೆಚ್ಚಿನ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು. ವೇದಿಕೆಯಲ್ಲಿ ಹಾಜರಿದ್ದವರು ಬಿ.ಅರ್. ಲಕ್ಷ್ಮಣರಾವ್, ಚಿಂತಾಮಣಿ ಕೊಡ್ಲೆಕೆರೆ, ಜರಗನಹಳ್ಳಿ ಶಿವಶಂಕರ್, ಯಶವಂತ ಹಳಿಬಂಡಿ ಜೊತೆಗೆ ನಮ್ಮ ಡುಂಡಿ. ವೇದಿಕೆಯ ಕೆಳಗೆ ಇದ್ದವರಲ್ಲಿ ಕೆಲವರು: ಇನ್ನೊಬ್ಬ ನೆಚ್ಚಿನ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ, ಟಿ.ಎನ್ ಸೀತಾರಾಮ್, ಶ್ರೀನಿವಾಸ್ ಕಪ್ಪಣ್ಣ, ಎಂ.ಎನ್.ವ್ಯಾಸರಾವ್, ಗ್ಯಾಜೆಟ್ ಲೋಕವನ್ನು ತೆರೆದಿಡುವ ಪವನಜ, ಜೋಗಿ, ಉದಯವಾಣಿಯ ರವಿ ಹೆಗಡೆ ಇತ್ಯಾದಿ.....ನಾನು ಕಂಡಂತೆ ನನಗೆ ಸಿಕ್ಕಷ್ಟು! 

ನಿರೂಪಣೆ ’ಅಂಕಿತ’ದ ಪ್ರಕಾಶ್ ಖುದ್ದಾಗಿ ಮಾಡಿದರೆ, ಒಂದೆರಡು ಮಾತು ಮೂರ್ನಾಕು ಹಾಡು ಹಾಡಿ ರಂಜಿಸಿದವರು ಹಳಿಬಂಡಿ. ಎನ್.ಎಸ್.ಎಲ್ ಪುಸ್ತಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದಮೇಲೆ ಚುಟುಕು ಚುಟುಕು ಮಾತುಗಳನ್ನಾಡಿದವರು ಬಿ.ಆರ್.ಎಲ್. ಕಾರ್ಯಕ್ರಮದ ಮೊದಲಭಾಗದ ನಂತರ ವೇದಿಕೆಯಲ್ಲಿರುವ ಪಂಚಕವಿಗಳಿಂದ PUNCHಕವಿಗೋಷ್ಠಿ ನಡೆಯಿತು. ಎಲ್ಲರೂ ತಮ್ಮತಮ್ಮ ಹನಿಗಳನ್ನು ಒಬ್ಬೊಬ್ಬರಾಗಿ ಹೇಳಿ ರಂಜಿಸಿದರು. ಮಧ್ಯೆ ಮಧ್ಯೆ ಡುಂಡಿಯ ನಿರೂಪಣಾ ಡುಂಡಿಮವೂ ಇತ್ತು- ಈ ಎರಡನೇ ಭಾಗದಲ್ಲಿ.ಅಂತೂ ಎದುರು ಕೂತವರಿಗೆ ಇವತ್ತು ಪಂಚಕಜ್ಜಾಯ ಮೆದ್ದ ಅನುಭವ:

ಅನುಭವ
=========

ಕವಿಗಳು ಹೇಳುತ್ತಾರೆ
ಕವಿತೆಗೆ ಅರ್ಥಬೇಕಿಲ್ಲ
ಭಾವ ಬೇಕಿಲ್ಲ
ಅದೊಂದು ಅನುಭವ
ಹಾಗೆಂದರೇನು?
ಓದಿದ ನಂತರ ಅನುಭವಿಸುವ
ತಲೆನೋವಾ ? 

ಎಂದು ’ಹನಿಗಾರಿಕೆ’ಯಲ್ಲೇ ಡುಂಡಿ ಕೇಳಿದ್ದಾರೆ.

ಬನ್ನಿ ನಮ್ಮ ಹಾಡಿಗೆ [ ’ಟೈಟಲ್ ಸಾಂಗು’ ]
============

ಎಲ್ಲೂ ತಾವಿಲ್ಲವೆಂದು
ಚಡಪಡಿಸುವ ಜೋಡಿಗಳೆ
ಬೆದರಿ ರೆಕ್ಕೆ ಮುದುರಿಕೊಂಡು
ಕೂತ ಬಾನಾಡಿಗಳೆ
ಬನ್ನಿ ನಮ್ಮ ಹಾಡಿಗೆ
ನಿರಾತಂಕವಾಗಿ ಪ್ರೀತಿ
ಮಾಡಿ ನಿಮ್ಮ ಪಾಡಿಗೆ
ಹಾಡಿಗಿಲ್ಲ ಬಾಡಿಗೆ.

’ಹಾಡಿ’ ಎಂದರೆ ನಮ್ಮೂರಕಡೆಗೆ ಅಡಕೆ ತೋಟಕ್ಕೆ ಪೂರಕವಾಗಿ ಪೂರ್ವಜರು ನಮಗೆ ಬಿಟ್ಟ ಸೊಪ್ಪಿನಬೆಟ್ಟ ಎಂದೂ ಆಗುತ್ತದೆ. ಬನ್ನಿ ನಮ್ಮ ಹಾಡಿಗೆ ಎಂದು ಕರೆದಿದ್ದಾರಲ್ಲಾ ಅವರು ಕರೆದಿದ್ದು ಹಾಡನ್ನು ಓದಬನ್ನಿ ಎಂದಾದರೂ ಒಂದರೆಕ್ಷಣ ಹೀಗೂ ಆಗಬಹುದಲ್ಲಾ ಎಂದುಕೊಂಡವನು ನಾನು. ಅದು ಹಾಗಲ್ಲಾ ಹೀಗೆ ಎಂದು ’ಅನುಭವ’ ಎಂಬ ಚುಟುಕವನ್ನು ಓದಿ ತಿಳಿದುಕೊಂಡವನು ನಾನು. ಅಪರೂಪದ ನೆಂಟರಮನೆಗೆ ಹೋದ ವಾತಾವರಣವಿತ್ತು. ನನಗೆ ಬೇಕಾದ ಎಲ್ಲರನ್ನೂ ಕಂಡ ತೃಪ್ತಿಯೂ ಇತ್ತು. ಲಕ್ಷ್ಮೀನಾರಾಯಣ ಭಟ್ಟರಿಗೆ ಕಾಲ್ಮುಟ್ಟಿ ನಮಸ್ಕರಿಸಲು ಮುಂದಾದಾಗ "ಉಹೂಂ ಉಹೂಂ ಬೇಡ ಬೇಡ" ಎನ್ನುತ್ತಾ ಅವರೂ ಪ್ರತಿಯಾಗಿ ಅದೇರೀತಿ ನಮಸ್ಕರಿಸಲು ಹೊರಟಿದ್ದು ನನ್ನನ್ನು ಪೇಚಿಗೆ ಸಿಲುಕಿಸಿತ್ತು; ಅವರ ಆಂತರ್ಯ ಅದೆಷ್ಟು ದೊಡ್ಡದು!

ನನ್ನ ಇನಿಯನ ನೆಲೆಯ ಬಲ್ಲೆಯೇನೆ ?
ಹೇಗೆ ತಿಳಿಯಲಿ ಅದನು ಹೇಳೆ ನೀನೆ 

ಇರುವೆ ಸರಿಯುವ ಸದ್ದು ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ? 

ಇಂಥಾ ಸೂಕ್ಷ್ಮ ಕುಸುರಿ ಕೆಲಸಗಳನ್ನು ಭಟ್ಟರ ಹಾಡುಗಳಲ್ಲಿ ಮಾತ್ರ ಕಾಣಲು ಸಾಧ್ಯ! ಆ ಹಾಡು ಬರೆದ ಸನ್ನಿವೇಶವನ್ನು ಸಭೆಗೂ ಮುನ್ನ ನನ್ನೊಡನೆ ಅವರು ಚರ್ಚಿಸುತ್ತಿದ್ದಾಗಲೇ ಸಭೆಗೆ ಬರಬೇಕೆಂದು ಸೂಚನೆ ಬಂತು, ನಾವು ಸಭಾಂಗಣಕ್ಕೆ ಹೋದೆವು. ಇನ್ನೊಮ್ಮೆ ಅಂತಹ ಹಲವಾರು ಸಂಗತಿಗಳನ್ನು ಹೊತ್ತು ಅಲಾಯ್ದ ಸಿಗುತ್ತೇನೆ ಬಿಡಿ. ಯಾಕೆಂದರೆ ಇಂದು ಎಲ್ಲವೂ ಹನಿಗೆ ಮೀಸಲು. ಅಂದಹಾಗೇ ಸದ್ಯಕ್ಕೆ ಸಾರಸ್ವತ ಲೋಕದಲ್ಲಿ ಮೀಸಲಾತಿ ವಗೈರೆ ಜಾರಿಯಲ್ಲಿಲ್ಲ; ಅನಧಿಕೃತವಾಗಿ ಇದ್ದರೆ ನನಗೆ ತಿಳಿದಿಲ್ಲ. ಅಲ್ಲಿ ಎಲ್ಲವೂ ಜ್ಞಾನಮಯ, ಮನದ ಯಾವ್ಯಾವುದೋ ಸ್ತರಗಳಲ್ಲಿ ನರ್ತಿಸುವ ಸರಸ್ವತಿಯ ಹೆಜ್ಜೆಗುರುತುಗಳನ್ನು ಅಕ್ಷರಗಳ ರಂಗೋಲಿಯಲ್ಲಿ ಬಿಡಿಸಿ ತೋರಿಸುವುದು ಕವಿ-ಸಾಹಿತಿಯ ಜಾಣ್ಮೆ-ಅದು ಸರಸ್ವತಿಯ ಅಶೀರ್ವಾದ ಕೂಡ. 

ಮಾನಸ ಸಂಚರರೇ
ಬ್ರಹ್ಮಣಿ ಮಾನಸ ಸಂಚರರೇ .... ಎಂಬ,  ಸಂತ ತ್ಯಾಗರಾಜ ವಿರಚಿತ ಸಂಸ್ಕೃತದ ಹಾಡು ಕರ್ನಾಟಕ ಸಂಗೀತದ ಪ್ರಕಾರದಲ್ಲಿ ವಿಶಿಷ್ಟವಾಗಿದೆ, ನನಗೆ ಬಹಳ ಆಮೋದ ನೀಡುವ ಹಾಡುಗಳಲ್ಲಿ ಅದೂ ಒಂದು. 

[ಚಿಕ್ಕ ತಿದ್ದುಪಡಿ, ಮಾನಸ ಸಂಚರರೇ ಎಂಬ ಹಾಡಿನ ಕರ್ತೃ ಶ್ರೀ ಸದಾಶಿವ ಬ್ರಹ್ಮೇಂದ್ರರು, ತಪ್ಪು ಗ್ರಹಿಕೆಯಿಂದ ತ್ಯಾಗರಾಜರು ಎಂದು ಬರೆದಿದ್ದೆ, ತಿದ್ದಿಕೊಂಡು ಓದುವುದೇ ಈಗಿರುವ  ಪಂಚ್ ! ಯಾರ ಕಣ್ಣಿಗೂ ಇದು ಬೀಳಲಿಲ್ಲವಲ್ಲ ಎಂಬುದೇ ಆಶ್ಚರ್ಯಕರ ಪಂಚ್ !! ]

ಡುಂಡಿಯ ಇನ್ನೊಂದೆರಡು-ಮೂರು ಹನಿಗಳೊಂದಿಗೆ ನಿಮ್ಮ ಬೀಳ್ಕೊಡುಗೆಯ ತಯಾರಿ ನಡೆಸಿದ್ದೇನೆ:

ಕರೀನಾ
=========

ಗಣೇಶೋತ್ಸವದಲ್ಲಿ
ವಿಶೇಷ ಆಕರ್ಷಣೆ
ಹಿಂದಿ ನಟಿ ಕರೀನಾ
ಬ್ರಹ್ಮಚಾರಿಯ ಮುಂದೆ
ಸೆಕ್ಸಿ ತಾರೆ
ಡಾನ್ಸ್ ಮಾಡೋದು ಸರೀನಾ ?

ಆಮೇಲೆ
=======

ಪೂಜೆ ಪುನಸ್ಕಾರ
ಷೋಡಶೋಪಚಾರ
ಹೆಚ್ಚೆಂದರೆ ಒಂದು ವಾರ
ಆಮೇಲೆ ಅಯ್ಯೋ
ಕೆರೆಗೆ ಹಾರ !

ಕ್ರಾಂತಿ
=======
ಸಂಕ್ರಾಂತಿ ಹಬ್ಬ ಆಚರಿಸಿದಳು ತಾಯಿ
ರೇಷ್ಮೆ ಸೀರೆಯುಟ್ಟು
ಹೂ ಮುಡಿದು ಎಳ್ಳು ಬೀರಿ
ಮಗಳು ಕ್ರಾಂತಿಕಾರಿ
ಜೀನ್ಸ್ ಪ್ಯಾಂಟ್ ಟೀ ಶರ್ಟ್ ತೊಟ್ಟು
ಟಾಕೀಸಿಗೆ ಹೋದಳು
ಬಾಯ್ ಫ್ರೆಂಡ್ಸ್ ಜತೆ
ಗಂಡು ಬೀರಿ !

ಇಷ್ಟೆಲ್ಲಾ ಹೊತ್ತು ಓದುತ್ತಾ ಕುಳಿತ ನೀವು ಹದಿಹರೆಯದ ಮಗಳ ಅಪ್ಪನೋ ಅಮ್ಮನೋ ಆಗಿದ್ದರೆ,

ಬೇಗ ಇಲ್ಲಿಂದ ಕಾಲ್ಕೀಳಿ ಹಾರಿ
ಯಾಕೆಂದರೆ ನಿಮ್ಮ ಮಗಳೂ
ಬಹಳ ಹೊತ್ತು ಒಬ್ಬಳನ್ನೇ ಬಿಟ್ಟರೆ
ಆಗಿಬಿಟ್ಟಾಳು ಕ್ರಾಂತಿಕಾರಿ !!        

ಡುಂಡಿಗೆ ಅಭಿನಂದನೆಗಳು, PUNCHಕಜ್ಜಾಯ ತಿಂದಿದ್ದಕ್ಕೆ ನಿಮಗೆಲ್ಲಾ ಧನ್ಯವಾದಗಳು, ನಮಸ್ಕಾರ. 


Thursday, October 4, 2012

ಇಲಿಯು ಪಂಜರದೊಳಿಲ್ಲ ಶ್ರೀರಾಮರಾಮಾ......

ಚಿತ್ರಋಣ: ಅಂತರ್ಜಾಲ
ಇಲಿಯು ಪಂಜರದೊಳಿಲ್ಲ ಶ್ರೀರಾಮರಾಮಾ......

ಚಕಿತರಾದರೂ ನಂಬಲೇಬೇಕಾದ ೧೦೦ ಕ್ಕೆ ಇನ್ನೂರರಷ್ಟು ಅಪ್ಪಟ ಸತ್ಯದ ವಿಚಾರ, ರೂಪಾಯಿಗೆ ೩೨ ಆಣೆ ಸತ್ಯ; ಮಿಕ್ಕಿದ ಬರಹಗಳೆಲ್ಲಾ ಸುಳ್ಳು ಇದು ಮಾತ್ರ ಸತ್ಯ ಎಂದು ತಿಳಿಯಬೇಡಿ, ಕಾಲ ಕಷ್ಟವಪ್ಪಾ ಹೀಗೆ ಬರೆದಾಗಲೇ ಮಿಕ್ಕಿದ ಬರಹಗಳೆಲ್ಲಾ ಸುಳ್ಳು ಎಂದು ಇನ್ನೂ ವಾಕ್ಯ ಪೂರ್ಣವಾಗುವ ಮೊದಲೇ ಶ್ರೀಕೃಷ್ಣ ’ಅಶ್ವತ್ಥಾಮೋ ಹತಃ .....’ ಎನ್ನುತ್ತಿದ್ದಾಗ ಶಂಖ ಊದಿದಂತೇ ತಮಗೆ ಬೇಕಾದಂತೇ ಊದಿಬಿಡುವ ಜನಗಳೂ ಇದ್ದಾರೆ. ಅಂದಹಾಗೇ ನಮ್ಮಲ್ಲಿ ಶಂಖ ಊದುವುದು ಎಂದರೆ ಕವಚ ಕುಡುಗುವುದು ಎಂದರ್ಥ ಅರ್ಥಾತ್ ಟಿಕೆಟ್ ತಗೊಳ್ಳೋದು ಎಂದು ಬೆಂಗಳೂರಿಗರೂ ಹೇಳಿದಂತೇ ಈ ಲೋಕದ ಪ್ರಯಾಣ ಮುಗಿಸುವುದು ಎಂದರ್ಥ. ನೋಡಿ ನಿಜವಾಗಿ ಶಂಖ ಊದುವುದು ಮಂಗಳಮಯ ಸನ್ನಿವೇಶಗಳಲ್ಲಿ ಮತ್ತು ಯುದ್ಧಗಳಲ್ಲಿ ಮಾತ್ರ! ಆದ್ರೆ ಗೂರಲು ಉಬ್ಬಸದ ಮುದುಕರು ಚಳಿಗಾಲದಲ್ಲಿ ಕೆಲವೊಮ್ಮೆ ತಾಳಲಾರದೇ ಮೇಲಕ್ಕೆ ಹೋಗಿಬಿಡುತ್ತಾರೆ. ಬೆಳ್ಳಂಬೆಳಿಗ್ಗೆ ಸುದ್ದಿಮಾಡಲೆಂದೇ ಇರುವ ಕೆಲವು ಜನ "ಗೊತ್ತಿಲ್ವಾ..... ಅಂವ ಶಂಖ ಊದಿಬಿಟ್ಟ" ಎನ್ನುತ್ತಾ ಬರುವುದೂ ಇರುತ್ತದೆ. ಶಂಖ ಊದುವುದಕ್ಕೂ ಅದಕ್ಕೂ ನಿಜವಾಗಿಯೂ ಸಂಬಂಧವಿಲ್ಲ, ದ್ರೋಣಚಾರ್ಯರು, ಶ್ರೀಕೃಷ್ಣ ಶಂಖ ಊದಿದಾಗ ಹೋದರು ಎಂಬ ಕಾರಣಕ್ಕೋ ಏನೋ ಅದನ್ನು ಹೀಗೆ ಬಳಸುತ್ತಿರುವುದು ವಿಪರ್ಯಾಸ. ಟಿವಿ ಜ್ಯೋತಿಷಿಗಳು ಗುರು ಮತ್ತು ಗುರೂಜಿ ಎಂಬ ಪದಗಳಿಗೆ ಸ್ಥಾನಪಲ್ಲಟ ಮಾಡಿಸಿದಂತೇ, ಬೈಗುಳಕ್ಕೆ ’ಸಂಸ್ಕೃತ ಪದಗಳು’ ಎಂದು ಕೆಲವರು ಹೇಳಿದಂತೇ ಇಲ್ಲೂ ’ಶಂಖ ಊದು’ ಎಂಬುದರ ಈ ರೀತಿಯ ಬಳಕೆ ಕರ್ಣಕಠೋರವಾಗುತ್ತದೆ ಯಾಕೆಂದರೆ ಶಂಖ ಅವಮಂಗಳದ ಸಂಕೇತವಲ್ಲ, ಬದಲಾಗಿ ಅದು ವಿಜಯದ ಸಂಕೇತ.       

ಅಂದಹಾಗೇ ಶಂಖ ಊದುವುದಕ್ಕೂ ಈ ಕಥೆಗೂ ಸಂಬಂಧವೇನೂ ಇಲ್ಲ. ಆದರೂ ತಮಾಷೆಗಾಗಿ ಹೇಳುವುದು- ಇದು ಇಲಿಗಳು ಶಂಖ ಊದಿದ ಕಥೆ!

ಗಿಳಿಯು ಪಂಜರದೊಳಿಲ್ಲಾ ಶ್ರೀರಾಮರಾಮ
ಬರಿದೇ ಪಂಜರವಾಯ್ತಲ್ಲಾ

ಎಂದು ದಾಸರು ಹಾಡಿದರು. ದಾಸರಪದಗಳನ್ನು ಕದ್ದು ಬಳಸುತ್ತೇವೆ ಎಂಬ ಆಪಾದನೆ ಕೆಲವು ಸ್ನೇಹಿತರದು. ಅದು ಒಂದು ವರ್ಗಕ್ಕೆ ಮಾತ್ರ ಮೀಸಲು ಎಂಬುದು ಅವರ ಧೋರಣೆ. ನಮ್ಮದೋ ಹಾಗಲ್ಲ; ಉತ್ತಮವಾದುದು ಎಲ್ಲಿಂದ ಬಂದರೂ ನಾವದನ್ನು ಮುಕ್ತಮನದಿಂದ ಸ್ವಾಗತಿಸುತ್ತೇವೆ, ಸ್ವೀಕರಿಸುತ್ತೇವೆ. ಮತ್ತು ಹಾಗೆ ಸ್ವೀಕರಿಸಿದ್ದನ್ನು ಮನಸಾ ಅನುಮೋದಿಸುತ್ತೇವೆ, ಅನುಸರಿಸುತ್ತೇವೆ, ಅಸ್ವಾದಿಸುತ್ತೇವೆ, ಮತ್ತಷ್ಟು ಅಂಥದ್ದನ್ನೇ ಅಪೇಕ್ಷಿಸುತ್ತೇವೆ ವಿನಃ ಅದನ್ನು ಕದ್ದು ಬಳಸುವ ಜಾಯಮಾನ ನಮ್ಮದಲ್ಲ. ಹಾಗೆ ಹೇಳುವ ಕೆಲವರಿಗೆ ಅವರ ನೈತಿಕ, ಆಧ್ಯಾತ್ಮಿಕ ಕುಬ್ಜತನದ ಅರಿವಿಲ್ಲ!  ದಾಸರು ಈ ಹಾಡನ್ನು ಹಾಡಿದ್ದೂ ’ಶಂಖ ಊದಿದ್ದ’ರ ಕುರಿತೇ ಆಗಿದೆ. ಭಗವಂತನನ್ನು ಅಕ್ಕನಿಗೆ ಹೋಲಿಸಿ ಅವರು ಮುಂದುವರಿಸುತ್ತಾರೆ ಹೀಗೆ :

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯಸಾಕಿದೆ
ಅಕ್ಕ ನೀನಿಲ್ಲದ ವೇಳೆ
ಬೆಕ್ಕುಕೊಂಡು ಪೋಯಿತಯ್ಯೋ

ಆತ್ಮವೆಂಬ ಗಿಳಿ ದೇಹವೆಂಬ ಪಂಜರದಲ್ಲಿ ಬಂಧಿಯಾಗಿರುತ್ತದೆ. ಭಗವಂತನೆಂಬ ಅಕ್ಕನ ಮಾತು ಕೇಳಿ ಸಾಕಿದೆ ಎನ್ನುತ್ತಾರೆ. ’ಅಕ್ಕ’ನಿಲ್ಲದ ವೇಳೆ ಬೆಕ್ಕು[ಯಮ] ಕದ್ದೊಯ್ದಿತು ಎನ್ನುತ್ತಾರೆ. ದಾಸರ ಪದ್ಯಗಳೆಲ್ಲವೂ ಅರ್ಥಗರ್ಭಿತವೇ. ಅವು ಭಗವಂತನನ್ನು ಭಕ್ತಿಮಾರ್ಗದಿಂದ ಸೇವಿಸಲು ಇರುವ ಸೋಪಾನಗಳು. ಅವುಗಳಲ್ಲಿಯೇ ಈ ಪದ್ಯ ಅತ್ಯಂತ ವಿಶಿಷ್ಟವಾಗಿದೆ.

ನೋಡಿ ಇದನ್ನೇ ನಾವು ಚಿಕ್ಕವರಿದ್ದಾಗ ತಮಾಷೆಗೆ ಬಳಸಿದ್ದುಂಟು. ದೇವರನ್ನು ತಮಾಷೆಯಾಗಿಯಾದರೂ ನೆನಪುಮಾಡಿಕೊಳ್ಳಬಹುದಂತೆ ಬಿಡಿ. ಕೆಲವೊಮ್ಮೆ ನಮ್ಮಲ್ಲಿ ಊಟಕ್ಕೆ ಕುಳಿತಾಗ ಗ್ರಂಥಗಳನ್ನೋ ಶ್ಲೋಕಗಳನ್ನೋ ಹೇಳುವುದಿರುತ್ತದೆ. ಹಾಗೆ ಹೇಳುತ್ತಾ ಪ್ರತೀ ಗ್ರಂಥ/ಶ್ಲೋಕದ ಕೊನೆಗೆ ರಾಮನಾಮ ಸ್ಮರಣೆ, ದೈವ ಸ್ಮರಣೆ, ಜೈಕಾರ  ಇತ್ಯಾದಿಯಾಗಿ ಹೇಳುವುದಿದೆ.

||ಭೋಜನಕಾಲೇ ಸೀತಾಕಾಂತ ಸ್ಮರಣಂ||ಎಂದಿರುವುದನ್ನು ಯಾರೋ ನನ್ನಂಥಾ ಕಿಡಿಗೇಡಿ ಯುವಕರು ತಿರುಚಿ ||ಭೋಜನಕಾಲೇ ಅಕಸ್ಮಾತ್ ಮರಣಂ ||ಎಂದು ಹೇಳಿಬಿಟ್ಟಿದ್ದರು! ಕಿವಿಗೆ ರಾಮಸ್ಮರಣೆಯೇ ಕೇಳಿದಂತೆನಿಸಿದ ಹಿರಿಯರು "ಜೈ ಜೈ ರಾಮ್" ಎಂದು ಹೇಳಿದಾಗ ಯುವಪಡೆಯ ಮುಖದಲ್ಲಿ ನಗು ತಡೆಯಲಾರದಾಗಿತ್ತು!  ಅದೇರೀತಿ ||ಹರಹರಾ ಶ್ರೀಚನ್ನಸೋಮೇಶ್ವರಾ|| ಎಂಬಲ್ಲಿ ||ಹರಹರಾ ಹರ್ಕಂಗಿ ಮಾಬ್ಲೇಶ್ವರಾ|| ಎಂದವರೂ ಇದ್ದಾರೆ. ಕೆಲವರಂತೂ ಅವರವರದ್ದೇ ಆದ ಶ್ಲೋಕಗಳನ್ನು ರಚಿಸಿ ಹೇಳುತ್ತಿದ್ದುದೂ ಉಂಟು. ಒಬ್ಬ ಪುಣ್ಯಾತ್ಮ ಇಡೀ ಕರ್ನಾಟಕದ ಜನತೆಯ ನಾನಾ ವಿಧದ ಸಿಹಿತಿನಿಸುಗಳ ವೈಖರಿಯನ್ನು ವರ್ಣಿಸಿ ಶ್ಲೋಕವೊಂದನ್ನು ರಚಿಸಿದ್ದು ನೆನಪಿಗೆ ಬರುತ್ತದೆ. ಒಬ್ಬ ಹುಡುಗನಿಗೆ ಮಾತ್ರ

ಶಾಂತಾಕಾರಂ ಭುಜಗ ಶಯನಂ
ಪದ್ಮನಾಭಂ ಸುರೇಶಂ |

ಎಂದಿರುವಲ್ಲಿ ಹೇಳುವಾಗ ಹೆದರಿಕೆಯೋ ಎಲ್ಲಿ ತಪ್ಪಿಹೋಗುತ್ತದೆಂಬ ಭಾವವೋ ಗೊತ್ತಿಲ್ಲ ಯಾವಾಗಲೂ ಹೀಗೇ ಹೇಳುತ್ತಿದ್ದ:

ಶಾಂತಾಕಾರಂ ಗಜಭುಜ ಶಯನಂ
ಪದ್ಮನಾಭಂ ಸುರೇಶಂ |

ಹೀಗೇ ನಮ್ಮ ಬಾಲ್ಯ ವಿವಿಧ ವಿನೋದಾವಳಿಗಳಿಂದ ಕೂಡಿದ್ದಿತ್ತು. ’ಮೇಲೆ’ ಹೋಗುವ ಪದಸೂಚಕವಾಗಿ ’ಹರಹರ ಹಾಕುವುದು’, ’ಗೋವಿಂದ ಹಾಕುವುದು’ ಎಂಬೆಲ್ಲಾ ಪರ್ಯಾಯ ಪದಗಳನ್ನು ಬಳಸುತ್ತಿದ್ದರು. ಇದು ಎಲ್ಲರಿಗೂ ಸಹಜ ಭಾವಾರ್ಥದಲ್ಲಿ ತೋರಿದರೂ ಸ್ಥಳಿಕರಿಗೆ ಮಾತ್ರ ಅದರ ಗೂಢಾರ್ಥ ತಿಳಿದುಬಿಡುತ್ತಿತ್ತು. ದಾಸರ ಪದಗಳನ್ನೂ ಶ್ಲೋಕಗಳನ್ನೂ ಕೆಲವೊಮ್ಮೆ ನಾವೇ ನಮಗೆ ಬೇಕಾದ ರೀತಿಯಲ್ಲಿ ತಿದ್ದಿಕೊಂಡು ತಮಾಷೆ ಮಾಡುವುದಿತ್ತು.

ನೀನೇಕೋ ನಿನ್ನ ಹಂಗೆಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ

ಎಂಬ ಹಾಡನ್ನು ಪಟ್ಟಣದ ಜನರಿಗೆ ತಕ್ಕಹಾಗೇ ತಿದ್ದಿ,

ನೀನೆಕೋ ನಿನ್ನ ಹಂಗೇಕೋ
ನಿನಗೆ ನಾಮ ಹಾಕುವ ಬಲವೊಂದಿದ್ದರೆ ಸಾಕೋ

ಎಂದು ಹೇಳಿ ನಕ್ಕಿದ್ದೇವೆ. ಎಲ್ಲಾದರೂ ಬಂದ್, ಗಲಾಟೆ, ಮುಷ್ಕರ ನಡೆಯುತ್ತಿದ್ದರೆ ನಮ್ಮ ಹಾಡು ಇದು:

ಕಲ್ಲು ಸಿಕ್ಕರೆ ಕೊಳ್ಳಿರೋ
ನೀವೆಲ್ಲರು ಕಲ್ಲುಸಿಕ್ಕರೆ ಕೊಳ್ಳಿರೋ

ಕಲ್ಲು ಸಿಕ್ಕರೆ ಉರಿ ಬಲ್ಲವರೇ ಬಲ್ಲರು !
ಮೆಲ್ಲ ತೋಚಿದ ಎಡೆಗೆಲ್ಲ ಬಿಸಾಕಿರೋ

ಹೀಗೆಲ್ಲಾ ನಾನು ಬರೆದರೆ, "|ಶಾಂತಮ್ ಪಾಪಂ ಶಾಂತಂ ಪಾಪಂ| ಎನ್ನಪ್ಪಾ ಹಾಗೆಲ್ಲಾ ಅನ್ಬಾರ್ದು" ಎನ್ನುವ ಮಂದಿಯೂ ಇದ್ದಾರು! ಇದು ದಾಸರನ್ನೋ ಗ್ರಂಥ ರಚನೆಕಾರರನ್ನೋ ಟೀಕಿಸುವ ಪರಿಯಲ್ಲ; ಕೇವಲ ತಮಾಷೆಗಾಗಿ ಹೈಕಳು ಹಾಡಿಕೊಳ್ಳುವ ಪರಿ.

ಇಷ್ಟೆಲ್ಲಾ ಹೇಳಿದ್ದಾಯ್ತಲ್ಲಾ ಈಗ ಮುಖ್ಯ ಕಥೆಗೇ ಹೋಗಿಬಿಡೋಣ. ನಾವು ಚಿಕ್ಕವರಿದ್ದಾಗಿನ ದಿನಗಳ ಕಥೆ ಇದು. ನಮ್ಮೂರಲ್ಲಿ ಮನೆಯಲ್ಲಿ ರಾತ್ರಿಯಾಯ್ತೆಂದರೆ ಇಲಿಗಳ ಕಾಟ ಬಹಳವಾಗಿತ್ತು. ಇದ್ದಬದ್ದ ಸಾಮಾನು-ದಿನಸಿ, ತರಕಾರಿ, ಬಟ್ಟೆಗಳು, ಪುಸ್ತಕಗಳು ಎಲ್ಲವನ್ನೂ ಒಂದಷ್ಟು ತಿಂದು ಒಂದಷ್ಟು ಕಡಿದು ನಿತ್ಯ ತಮ್ಮ ಅಭರ್ತಳ[ಅಸಾಧ್ಯ ಉಪಟಳ] ತೋರಿಸುತ್ತಿದ್ದವು. ರಾತ್ರಿ ಮಲಗಿದಾಗ ಮೈಮೇಲೇ ಹರಿದಾಡುವಷ್ಟೂ ಅತಿರೇಕದ ಧೈರ್ಯ! ಎಲಾ ಇವುಗಳ ಹೀಗೇ ಬಿಟ್ಟರೆ ಸಾಧ್ಯವಿಲ್ಲ ಎಂದುಕೊಂಡ ಅಪ್ಪ ಇಲಿಬೋನನ್ನು ತಂದಿದ್ದ.[ನಮ್ಮಲ್ಲಿ ನಾವು ಅಪ್ಪ-ಅಮ್ಮನನ್ನು ಬಹುವಚನದಿಂದ ಕರೆಯುವುದಿಲ್ಲ, ಅವರು ನಮಗೆ ಅತ್ಯಂತ ಆಪ್ತರಲ್ಲವೇ? ಭಗವಂತನನ್ನು ಏಕವಚನದಿಂದ ಸಂಬೋಧಿಸಿದಂತೇ ಇಲ್ಲೂ ಹಾಗೇ.] ನಿತ್ಯ ರಾತ್ರಿ ಕೊಬ್ಬರಿ ತುಣುಕು ಏನಾದರೂ ಹಾಕಿ ಬೋನನ್ನು ಇಡುವುದು ವಾಡಿಕೆಯಾಯ್ತು. ಕೆಲವು ದಿನ ಮರಿ ಇಲಿಗಳೂ ಸೇರಿದಂತೇ ಮಧ್ಯಮ ತರಗತಿಯ ದೇಹದಾರ್ಡ್ಯತೆಯ ಇಲಿಗಳೂ ಬೋನಿನಲ್ಲಿ ಬಿದ್ದವು; ಬಿದ್ದು ಶಂಖ ಊದಿದವು!

ದೇಹದಾರ್ಡ್ಯತೆಯ ಬಗ್ಗೆ ಹೇಳುವಾಗ ತಕ್ಷಣಕ್ಕೆ ನೆನಪಾಯ್ತು. ಸೊಂಡಿಲಿಗಳು ನಮ್ಮಲ್ಲಿ ಅತಿ ಕಮ್ಮಿ ಇದ್ದವು. ಅವು ನಿಜಕ್ಕೂ ಪಾಪದವು. ಅಂತಹ ಮೂಷಿಕಗಳು ಅಪರೂಪಕ್ಕೊಮ್ಮೆ ಬರುತ್ತಿದ್ದವು. ಹೆಗ್ಗಣಗಳ ಕಾಟವೇ ಜಾಸ್ತಿ. ದಪ್ಪ ಹೊಟ್ಟೆಯ ೧೦ ಕೇಜಿ ತೂಕದ ಬೆಕ್ಕಿಗಿಂತಾ ದೊಡ್ಡಗಾತ್ರದ ಹೆಗ್ಗಣಗಳು ಎದುರಾದರೆ, ನಮ್ಮ ಪೋಲೀಸರಿಗೆ ವೀರಪ್ಪನ್ ಎದುರಾದಾಗಿನ ಪರಿಸ್ಥಿತಿಯಂತೇ ಆ ಬೆಕ್ಕುಗಳ ಸ್ಥಿತಿಯೂ ಆಗುತ್ತಿತ್ತೋ ಏನೋ!! ಎದುರಾಗುವ ಬೆಕ್ಕಿಗೆ ಲಬಕ್ಕನೆ ಎರಡು ಬಿಟ್ಟು ಓಡಿಸಿ ತಮ್ಮ ಕೆಲಸ ನಡೆಸಿಕೊಳ್ಳುವ ಹೆಗ್ಗಣಗಳೂ ಇದ್ದಿರಲು ಸಾಕು. ಅವು ಮಾಡುವ ಸಪ್ಪಳಕ್ಕೆ ಕಳ್ಳರು ಬಂದಿದ್ದಾರೆ ಎಂದೇ ತಿಳಿಯಬೇಕು. ಕಳ್ಳರು ಅಕಸ್ಮಾತ್ ಆ ಹೊತ್ತಿಗೆ ಹೊರಗೆ ಬಂದಿದ್ದರೆ, ಹೆಗ್ಗಣಗಳು ಮಾಡುವ ಸದ್ದುಕೇಳಿ ಯಾರೋ ಎಚ್ಚರವಾಗಿದ್ದಾರೆ ಎಂದುಕೊಂಡು ಓಡಿಹೋಗಬೇಕಾದ ಪರಿಸ್ಥಿತಿ! ಹಗಲಿಡೀ ಅಕ್ಕಪಕ್ಕದ ತೋಟ-ಗದ್ದೆಗಳ ನೆಲದಲ್ಲಿರುವ ಮಹಮಹಾ ದೊಡ್ಡ ಬಿಲಗಳಲ್ಲಿ ಅವುಗಳ ವಾಸ. ಸಂಜೆಯಾಗುತ್ತಲೇ ಮನೆಗಳತ್ತ ಸವಾರಿಯ ಆಗಮನ. ಆ ಕಾಲಕ್ಕೆ ಜೀವನ್ ಟೋನ್ ಮತ್ತು  ಚ್ಯವನ ಪ್ರಾಶ ಎಂಬ ಲೇಹ್ಯಗಳು ದೇಹವರ್ಧನೆಗೆ ಎಂದು ಜಾಹೀರಾತು ಬರುತ್ತಿತ್ತು. ಅಂತಹದೇನನ್ನೋ ತಿಂದು ಕೊಬ್ಬಿದ ರೀತಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಓಡಾಡುತ್ತಿದ್ದ ಹೆಗ್ಗಣಗಳ ಕಾಲದಲ್ಲಿ ಬೆಕ್ಕುಗಳೇ ಸೇರಿ ಇಲಿಗೆ ಗಂಟೆ ಕಟ್ಟಲು ತಯಾರಾಗಿದ್ದವೋ ಏನೋ! ಬೆಕ್ಕುಗಳಿಗೆ ಬದುಕಬೇಕೆಂಬ ಆಸೆ ಇತ್ತಲ್ಲಾ ಅದಕ್ಕೆ.

ಇಂಥಾಕಾಲಮಾನದಲ್ಲಿ ಅಪ್ಪ ಇಡುವ ಬೋನಿಗೆ ಬಿದ್ದ ಹೆಗ್ಗಣಗಳು ಕೆಲವು ತಪ್ಪಿಸಿಕೊಂಡು ಹೋಗಿಬಿಡುತ್ತಿದ್ದವು. ಬೋನು ಚಿಕ್ಕದಾಗಿದ್ದರಿಂದ ಒಳಗಡೆಯಿಂದ ಬಾಗಿಲನ್ನು ಒತ್ತಿ ತೆರೆದುಕೊಂಡು ಜಾರಿಕೊಳ್ಳುತ್ತಿದ್ದವು. ಬೆಳ್ಳಂಬೆಳಗ್ಗೆ ಇಲಿ ಬಿದ್ದಿದೆಯಾ ಎಂದು ನೋಡಲು ಮಹಡಿಯೇರಿ ಬರುತ್ತಿದ್ದ ಅಪ್ಪನನ್ನು ಕಂಡಾಗ ನಮಗೆ ದಾಸರ ಪದ ನೆನಪಾಗುತ್ತಿತ್ತು. ಅಪ್ಪನ ಹೆಸರೂ ರಾಮಚಂದ್ರ ಎಂದೇ ಆಗಿದ್ದರಿಂದ ಹಾಡು ಹೇಳಿಬರೆಸಿದ ಹಾಗಿತ್ತು.

ಇಲಿಯು ಪಂಜರದೊಳಿಲ್ಲ
ಶ್ರೀರಾಮರಾಮ ಬರಿದೇ ಪಂಜರವಾಯ್ತಲ್ಲಾ.

ಅಪ್ಪ ನಿನ್ನ ಮಾತು ಕೇಳಿ
ಒಪ್ಪಿ ಸಣ್ಣ ಬೋನು ಇರಿಸಿದೆ
ಅಪ್ಪ ನೀನಿಲ್ಲದ ವೇಳೆ
ತಪ್ಪಿಸ್ಕೊಂಡು ಹೋಯಿತಯ್ಯೋ ....

"ರಾಮನಿರುವ"ಎಂಬ ಇಲಿಯು
ರೋಮರಾಶಿ ಹೊದ್ದ ಇಲಿಯು
ನೇಮದಂತೆ ಎಲ್ಲಮೆದ್ದು
ನಾಮಹಾಕಿ ಹೋಯಿತಯ್ಯೋ ....

ಒಂಬತ್ಸಾರಿ ಬಡಿದು ನೂಕಿ
ತಿಂಬಷ್ಟ್ ಕೊಬ್ರಿ ತಿಂದುಕೊಂಡು
ನಂಬಿಕೂತ ನಮ್ಮನೆಲ್ಲಾ
ತುಂಬುಮನದಿ ಬೈದುಕೊಂಡು ...

ಹೇಳಲು ಮರೆತಿದ್ದೆ: ನಮ್ಮಲ್ಲಿ ಬೋನಿಗೆ ಪಂಜರ ಎನ್ನುವ ಗಾಂವ್ಟಿ ಪದ ಚಾಲ್ತಿಯಲ್ಲಿದೆ. ಇಲಿ-ಹುಲಿ ಇಂಥಾದ್ದನ್ನೆಲ್ಲಾ ಇಡುವುದಕ್ಕೆ ಬಳಸುವುದು ಬೋನು. ಗಿಳಿಯನ್ನು ಬಂಧಿಸಿಡುವುದು ಮಾತ್ರ ಪಂಜರ. ಆದರೆ ನಮ್ಮಲ್ಲಿ ಈ ಎಲ್ಲದಕ್ಕೂ ಪಂಜರ ಎಂಬ ಶಬ್ದವನ್ನೂ ಬಳಸುವುದುಂಟು. ಹೀಗಾಗಿ ಮೇಲಿನ ಹಾಡಿನಲ್ಲಿ ’ಇಲಿಯು ಪಂಜರದೊಳಿಲ್ಲ’ ಎಂದು ಬಳಸಿದ್ದು. ನಮಗೆ ನಮ್ಮೊಳಗೇ ನಗೆ ಮತ್ತು ಚರ್ಚೆ. ತಪ್ಪಿಸಿಕೊಂಡು ಹೋದ ಇಲಿ ತನ್ನ ಸಹಚರರಿಗೆ ಏನು ಹೇಳಿದ್ದೀತು ? 

"ಹೇಯ್ ನೋಡ್ರೋ ನೀವೆಲ್ಲಾ ರಾತ್ರಿ ಆ ಮನೆಗೆ ಹೋಗೀರಲ್ಲಾ ಹೋದಾಗ ಬಾಳ ಹುಷಾರಪ್ಪಾ .. ಅಲ್ಲಿ ಯಜಮಾನ್ರು ರಾಮ ಅಂತ, ಅವರು ಪಂಜರ ಇಡ್ತಾರೆ. ಅಪ್ಪಿ ತಪ್ಪಿ ಪಂಜರದಲ್ಲಿ ಬಿದ್ದುಗಿದ್ದೀರ ಮತ್ತೆ. ಅಕಸ್ಮಾತ್ ಪಂಜರದಲ್ಲಿ ಬಿದ್ರೂ ಇನ್ನೊಬ್ಬರನ್ನ ಸಹಾಯಕ್ಕೆ ಕೂಗಿ. ನಾವ್ಯಾರಾದ್ರೂ ಬಂದು ಮೇಲಿನಿಂದ ಬಾಗಿಲಿನ ಹಿಡಿಕೆಯಮೇಲೆ ಒತ್ತಡ ಹಾಕಿ ನಿಮ್ಮನ್ನ ತಪ್ಪಿಸ್ತೇವೆ. ಸುಮ್ನೇ ಇರ್ಬೇಡಿ ಆಯ್ತಾ...ಹಾಗೇನಾದ್ರೂ ಇದ್ರೆ  ಆಮೇಲೆ ಶಂಖ ಊದ್ಬೇಕಾಗ್ತದೆ" ಅಂತ ಮೀಟಿಂಗ್ ಕರೆದು ಹೇಳಿರಬೇಕು!

ಅದೆಲ್ಲಾ ಹೋಗ್ಲಿ, ಅನುಮಾನ ಬಂದ್ರೆ ಅದೆಷ್ಟೋ ದಿನ ಹೆಗ್ಗಣಗಳು ಬೋನು ಇರಿಸಿದ ದಿಕ್ಕಿನತ್ತ ಕೂಡ ಬರುತ್ತಿರಲಿಲ್ಲ. ಬೋನು ಇರಿಸುವವರಿಗೇ ಗಂಟೆಕಟ್ಟಿದರೆ ಹೇಗೆ ಅಂತ ಮೀಟಿಂಗ್ ನಲ್ಲಿ ಮಾತಾಡಿಕೊಂಡಿರಬಹುದು ಅಂತೀರಾ? ಹೋಗ್ಲಿ ಬಿಡಿ ಕಲಿಗಾಲ! ಸದ್ಯ ಮೀಸಲಾತಿ ಕೇಳಲೊಂದು ಮುಂದಾಗಲಿಲ್ಲ! "ನಿಮ್ಮ ಜಮೀನುಗಳಲ್ಲಿ ಕಾಯಮ್ಮಾಗಿ ವಾಸವಿರುವ ನಮಗೆ ಇಂತಿಷ್ಟು ಪಡೆಯಲು ಅರ್ಹರೆಂಬ ಹಕ್ಕನ್ನು ಕಡ್ಡಾಯ ಮಾಡತಕ್ಕದ್ದು" ಎಂದು ಇಲಿರಾಯ[ಇಲಿರಾಜ] ಘರ್ಜಿಸಿದ್ದರೆ ಇಂದಿನ ವಿಧಾನಸೌಧದ ವರೆಗೂ ಸುದ್ದಿಯಾಗುತ್ತಿತ್ತೇನೋ! ಅವುಗಳಿಗೂ ಮತ ಚಲಾಯಿಸುವ ’ಪ್ರಜಾಪ್ರಭುತ್ವ’ ಕಲ್ಪಿಸಿದ್ದರೆ ವೋಟ್ ಬ್ಯಾಂಕ್ ರಾಜಕಾರಣಿಗಳು ಅವುಗಳಿಗೆ ಬೆಂಬಲ ನೀಡುತ್ತಿದ್ದಿರಲೂ ಬಹುದಿತ್ತೇನೋ! ಬೇರೇ ಯಾರೇ ಶಂಖ ಊದಿದರೂ ಬ್ರಷ್ಟ ರಾಜಕಾರಣಿಗಳು ಮಾತ್ರ ಶಂಖ ಊದುವುದಿಲ್ಲ ನೋಡಿ! ನೀವೂ ಇಂಥಾ ಪದ್ಯಗಳನ್ನು ಕಲ್ಪಿಸಿಕೊಂಡು ಹಾಡಿ. ಮೀಸಲಾತಿ ಕೊಡಲಾಗುವುದಿಲ್ಲ ಮತ್ತೆ ಮೊದ್ಲೇ ಹೇಳ್ಬಿಟ್ಟಿದ್ದೀನಿ...ಇಲ್ಲೇನಿದ್ರೂ ನಿಮ್ಮ ಪದಭಂಡಾರ ಮತ್ತು ಅವುಗಳನ್ನು ಬಳಸುವ ಜಾಣ್ಮೆಯ ಕರಾಮತ್ತಿಗೇ ಮೆರಿಟ್ಟು. ಅಂದಹಾಗೇ ಶಂಖ ಊದುವ ಸುದ್ದಿ ಜಾಸ್ತಿ ಕೇಳಿ ನಿಮಗೆ ಬೇಜಾರಾಯ್ತೇನೋ ಅಲ್ವೇ ?

ಮಂಗಲಂ ಭಗವಾನ್ ವಿಷ್ಣುಃ
ಮಂಗಲಂ ಮಧುಸೂದನಃ |
ಮಂಗಲಂ ಪುಂಡರೀಕಾಕ್ಷೋ
ಮಂಗಲಂ ಗರುಡಧ್ವಜ ||

ಮಂಗಲ ಹಾಡಿಬಿಟ್ಟಿದ್ದೇನೆ, ಹೋಗಿಬನ್ನಿ, ಮತ್ತೆ ಸಿಗೋಣ, ಅಲ್ಲೀತನಕ ನೋಡ್ತಾ ಇರಿ.......೨೪/೭ ....... ಓ ಸಾರಿ ಸಾರಿ ಟಿವಿ ಚಾನೆಲ್ ಹುಡ್ಗೀರು ಹುಡ್ಗರು ಹೇಳಿದ್ದು ಅನಗತ್ಯವಾಗಿ ಕಂಠಪಾಠ ಆಗಿಬಿಟ್ಟಿದೆ,  ಬ ಬಾಯ್...


Sunday, September 30, 2012

ಕಾಯ್ಕಿಣಿ ಮಾಸ್ತರು ಜಯಂತಣ್ಣ ಮತ್ತು ಗೋಕರ್ಣದ ಕಡಲು

ಚಿತ್ರದಲ್ಲಿ ಎಡಗಡೆಯಲ್ಲಿ ಕೂತಿರುವವರು ಗೌರೀಶ್ ಕಾಯ್ಕಿಣಿ ಮತ್ತು ಬಲಗಡೆ ಇರುವವರು ಗಿರೀಶ್ ಕಾರ್ನಾಡ್
 [ಚಿತ್ರಗಳ ಕೃಪೆ: ಅಂತರ್ಜಾಲ ]
ಕಾಯ್ಕಿಣಿ ಮಾಸ್ತರು ಜಯಂತಣ್ಣ ಮತ್ತು ಗೋಕರ್ಣದ ಕಡಲು
[ ಆಗಿಹೋದ ಮತ್ತು ಈಗಲೂ ಇರುವ ಕವಿ-ಸಾಹಿತಿಗಳ ಕುರಿತ ಕಥಾಹಂದರದ ೮ನೇ ಕಥೆಗೆ ಸ್ವಾಗತ ]
"ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದಿದ್ದಾನೆ ಪಂಪ! ಕರ್ನಾಟಕದ ಅಷ್ಟೇ ಏಕೆ ದೇಶದ ಕಾವ್ಯ-ಸಾಹಿತ್ಯದಲ್ಲೇ ಇಷ್ಟೊಂದು ತಾಯ್ನೆಲದ ಪ್ರೇಮವನ್ನು ಇಟ್ಟುಕೊಂಡ ಕವಿ ಇನ್ನೊಬ್ಬನಿರಲಿಕ್ಕಿಲ್ಲ. ಪಂಪನ ಜನನ ಉತ್ತರಕರ್ನಾಟಕದ ಭಾಗದಲ್ಲೇ ಆಯ್ತೆನ್ನಲಾದರೂ ಆತ ಉಳಿದಿದ್ದು ಬೆಳೆದಿದ್ದು ಕದಂಬರ ರಾಜಧಾನಿ ಬನವಾಸಿಯಲ್ಲಿ. ಒಂದೆರಡಲ್ಲ ಆರಂಕುಶವಿಟ್ಟರೂ ನಾನು ಅಂಜಿ ಬನವಾಸಿಯನ್ನು ಮರೆಯಲು ಸಾಧ್ಯವಿಲ್ಲ...ಕೋಗಿಲೆಯಾಗಿಯಾದರೂ ಪರವಾಗಿಲ್ಲ, ಮರಿದುಂಬಿಯಾದರೂ ಅಡ್ಡಿಯಿಲ್ಲ ಒಟ್ನಲ್ಲಿ ಬನವಾಸಿಯಲ್ಲೇ ಜನನವಾಗಬೇಕು ಎಂಬುದು ಪಂಪನ ಅಪೇಕ್ಷೆಯಾಗಿತ್ತು. ಹಚ್ಚಹಸಿರಿನ ನಿಸರ್ಗವನ್ನೂ ಸಂಪದ್ಭರಿತ ಸಮೃದ್ಧ ಕಾಡನ್ನೂ ಹೊಂದಿದ್ದ ನಾಡು ಕವಿಗಳಿಗೆ ಇಷ್ಟವಷ್ಟೇ? ಬನವಾಸಿಗೆ ಹೋದಾಗಲೆಲ್ಲಾ ಪಂಪನ ಕುರುಹುಗಳನ್ನು ಹುಡುಕುವ ಮನಸ್ಸಾಗುತ್ತದೆ; ಹುಡುಕುತ್ತೇನೆ. ಬನವಾಸಿಯ ಏಕಮಾತ್ರ ಉಳಿಕೆಯಾದ ಮಧುಕೇಶ್ವರ ದೇವಸ್ಥಾನದಲ್ಲಿ ಪಂಪ ಎಲ್ಲಾದರೂ ಕೂತಿದ್ದ ಜಾಗ ಸಿಗಬಹುದೇ ಎಂದು ತಡಕಾಡುತ್ತೇನೆ. ಪಂಪನ ಕೃತಿಗಳು ಮಾತ್ರ ಲಭ್ಯವೇ ಹೊರತು ಪಂಪನದ್ದಾದ ಇನ್ನೇನೂ ಉಳಿದಿಲ್ಲ.

ಇಂತಹ ಪಂಪನನ್ನು ಬೆಳೆಸಿದ ಉತ್ತರಕನ್ನಡ ಕರ್ನಾಟಕಕ್ಕೆ ದೇಶಕ್ಕೆ ಅನೇಕ ಗಣ್ಯರನ್ನು ಹೆತ್ತುಕೊಟ್ಟಿದೆ. ಹಲವು ರಂಗಗಳಲ್ಲಿ ಅನಾದಿಯಿಂದಲೂ ಅನೇಕ ಪ್ರತಿಭೆಗಳು ಅರಳಿ ಮರಳಿವೆ. ಒಬ್ಬೊಬ್ಬರದೂ ಮರೆಯಲಾಗದ ಮಹಾನುಭಾವ ಪಾತ್ರ! ಯಾರನ್ನೆಲ್ಲಾ ಸಮಾಜ ಗುರುತಿಸಿ ಯಾದಿಯಲ್ಲಿ ಕಾಣಿಸಿಕೊಂಡರೋ ಅವರೂ ಸೇರಿದಂತೇ ಇನ್ನೂ ಅನೇಕ ಎಲಮರೆಯ ಕಾಯಿಗಳು ಆಗಿಹೋಗಿದ್ದಾರೆ. ಜಿಲ್ಲೆಯುದ್ದಕ್ಕೂ ಆಗಿಹೋದ ಅಜ್ಞಾತ ಪ್ರತಿಭೆಗಳಿಗೆ ಲೆಕ್ಕವೇ ಇಲ್ಲ. ಅಂತಹ ಅಜ್ಞಾತ ಕವಿಗಳಲ್ಲಿ ದಿ| ವಿ.ಜಿ.ಭಟ್ಟರೂ ಒಬ್ಬರು. ಇವತ್ತಿನ ರೀತಿಯಲ್ಲಿ ಅಂತರ್ಜಾಲ ವಗೈರೆ ಇಲ್ಲದ ಆ ಕಾಲದಲ್ಲಿ ಬರೆದರೂ ಪ್ರಕಟಿಸದೇ ಹಾಗೇ ಬಿಟ್ಟು ಬರಹಗಳು ನಶಿಸಿಹೋದ ಘಟನೆಗಳೇ ಅನೇಕ. ಜಿಲ್ಲೆಯ ಜನಜೀವನದಲ್ಲಿ ಹೇಳಿಕೊಳ್ಳುವ ಸಿರಿವಂತಿಕೆಯಿರಲಿಲ್ಲ. ಏನೋ ತಕ್ಕಮಟ್ಟಿಗೆ ಹೊಟ್ಟೆ-ಬಟ್ಟೆಗೆ, ಹಾಸು-ಹೊದಕಲಿಗೆ ತೊಂದರೆಯಾಗದ ರೀತಿಯಲ್ಲಿ ಇದ್ದ ಕಾಲಮಾನ. ಆರ್ಥಿಕ ಬಡತನದಲ್ಲೇ ಜನರಿದ್ದರೂ ಸಾಂಸ್ಕೃತಿಕವಾಗಿ ನಮಗೇನೂ ಕಮ್ಮಿ ಇರಲಿಲ್ಲ. ಕರ್ನಾಟಕದಲ್ಲೇ ಅತ್ಯಂತ ಸುಸಂಸ್ಕೃತ ಜನರನ್ನುಳ್ಳ ಜಿಲ್ಲೆ ನಮ್ಮ ಉತ್ತರಕನ್ನಡ ಎಂದು ಎದೆತಟ್ಟಿಕೊಳ್ಳಲು ನನಗೆ ಬಹಳ ಹೆಮ್ಮೆ. ಜನ ಇಂದಿಗೂ ಮಾನ-ಮರ್ಯಾದೆಗೆ ಅಂಜುವವರು, ದೇವರು-ದಿಂಡರಲ್ಲಿ ಭಯ-ಭಕ್ತಿ ಇರುವವರು, ಹೆಚ್ಚಿನ ಜನ ಮುಗ್ಧರು, ಸರಳಜೀವಿಗಳು; ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನಿಂದ ಪಡೆದ ಬೆಳೆಸಾಲವನ್ನು ಸಮಯಕ್ಕೆ ತೀರಿಸುವುದರಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನದಲ್ಲಿರುವವರು! ತೀರಾ ಆಡಂಬರ ಡೊಂಬರಾಟ ಇಲ್ಲದ ಸಾದಾ ಸೀದಾ ಜನ ಮತ್ತು ಸಾದಾ ಸೀದಾ ಜೀವನ.   

ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ

ಎಂದು ದೈವವನ್ನು ನೆನೆದ ನರಸಿಂಹಸ್ವಾಮಿಯವರ ಕವನದಂತೇ ಜಿಲ್ಲೆಯಲ್ಲಿ ಇಲ್ಲದ್ದೇ ಇಲ್ಲ. ಬೆಟ್ಟ-ಬೇಣ-ಬಯಲು-ಆಲಯ-ಕಾಡು-ಮೇಡು-ಭತ್ತದ ಗದ್ದೆ, ಬತ್ತದ ಬಾವಿ, ಭೋರ್ಗರೆವ ಕಡಲು, ನವಿಲು-ಗಿಳಿ-ಗೊರವಂಕ-ಕೋಗಿಲೆ-ಮಂಗಟ್ಟೆ ಎಲ್ಲಾ ವಿಧದ ಪಕ್ಷಿಗಳು ಹೀಗೆ ನಮ್ಮ ಉತ್ತರಕನ್ನಡ ಎಲ್ಲದರಲ್ಲೂ ತನ್ನತನವನ್ನೇ ಇಟ್ಟುಕೊಂಡಿದೆ.

ಅಡಕೆ ತೆಂಗು ಅಪ್ಪೆಮಿಡಿ ಗೊಜ್ಜು ತಂಬುಳಿ ಚಪ್ಪೆ
ಗಂಜಿ ಬಂಗಡೆ ತೂರೆ ಶಬ್ದ ಸೋಲುವ ಮೇರೆ
ಶಬ್ದ ಸೋಲುವ ಮೇರೆ ....

ಇದು ನಮ್ಮಲ್ಲಿನ ಕವಿಯೋರ್ವರ ಹಾಡಿನ ಒಂದು ಭಾಗ. ಕಥೆಗಾರ ಯಶವಂತ ಚಿತ್ತಾಲ ನಿಮಗೆ ಗೊತ್ತು, ಯಕ್ಷಗಾನಕ್ಕೆ ಪದ್ಮಶ್ರೀ ತಂದುಕೊಟ್ಟ ಚಿಟ್ಟಾಣಿ ಗೊತ್ತು, ಕೆರೆಮನೆ ಶಂಭುಹೆಗಡೆ-ಮಹಾಬಲ ಹೆಗಡೆ ಗೊತ್ತು, ಹಾಸಣಗಿ ಗಣಪತಿ ಭಟ್ಟರ ಸಂಗೀತ ಗೊತ್ತು, ಹಾಲಕ್ಕಿ ಹಾಡಿನ ಸುಕ್ರಿ ಬೊಮ್ಮ ಗೌಡ ಗೊತ್ತು, ಆಂಜನೇಯನ ಪಾತ್ರಕ್ಕೆ ಹೆಸರಾಗಿದ್ದ ಕುಮಟಾ ಗೋವಿಂದ ನಾಯ್ಕ ಗೊತ್ತು, ಮಾಜಿಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಗೊತ್ತು, ನಂದನ್ ನೀಲೇಕಣಿ ಗೊತ್ತು, ಅನಂತ್ ನಾಗ್-ಶಂಕರ್ ನಾಗ್ ಗೊತ್ತು ಇವರೆಲ್ಲಾ ಇಂದಿನ ಮತ್ತು ಇತ್ತೀಚಿನ ತಲೆಮಾರು. ಇದಕ್ಕೂ ಹಿಂದಿನ ತಲೆಮಾರಿನ ವಿಸ್ತಾರ ಬಹಳ ದೊಡ್ಡದು! ಇಂದಿನವರಿಗೆ ಹಿಂದಿನ ಕಥೆ ಹಿಡಿಸುವುದಿಲ್ಲಾ ಎಂಬ ಕಾರಣಕ್ಕಾಗಿ ತೀರಾ ಹಿಂದಿನ ಇತಿಹಾಸ ಕೆದಕಿಲ್ಲ. ಈ ಸಾಲಿನಲ್ಲಿ ನಿಮಗೆ ಗೊತ್ತಿರುವ ಇನ್ನೂ ಇಬ್ಬರೆಂದರೆ ಗೌರೀಶ ಕಾಯ್ಕಿಣಿ ಮತ್ತು ಅವರ ಮಗ ಜಯಂತ್ ಕಾಯ್ಕಿಣಿ. ’ಮುಂಗಾರು ಮಳೆ’ ಬಂದಿದ್ದೇ ಬಂದಿದ್ದು  ಅಪ್ಪನನ್ನೂ ಮಗ ಮೀರಿಸುವ ಜನಪ್ರಿಯತೆ ಪಡೆದಿದ್ದಾಗಿದೆ!  

ಉತ್ತರಕನ್ನಡದ ಸೊಗಡು ಕೇಳಿ : ಇಲ್ಲಿ ಎಲೆಯಡಿಕೆ ಹಾಕಿ ಪುರ್ರನೆ ಉಗುಳುವ ಜನ ಇದ್ದಾರೆ, ಗುಮ್ಟೆಪಾಂಗು ಬಡಿದು ಹಾಡುವವರಿದ್ದಾರೆ, ಸುಗ್ಗಿ ಕುಣಿವ ಮಂದಿ ಇದ್ದಾರೆ, ಖಾನಾವಳಿ ನಡೆಸುವ ಜನ ಇದ್ದಾರೆ, ಹೋಟೆಲ್ ಕಾಮತರಿದ್ದಾರೆ, ಕಿರಾಣಿ ಅಂಗಡಿ ಪೈಮಾಮ ’ತಾಜಾ ಉಪ್ಪಿನಕಾಯಿ ಹಪ್ಪಳ ಬಂದದೆ’ ಎಂದು ಬೋರ್ಡುಹಾಕಿರುತ್ತಾರೆ, ಮೀನು ಬುಟ್ಟಿ ಹೊತ್ತು ವಾಸನೆ ಹೊಮ್ಮಿಸುವ ಮೀನುಗಾರರಿದ್ದಾರೆ, ಕೊಂಕಣಿ, ಕೊಂಕಣ-ಮರಾಠಿ, ಮರಾಠಿ, ಕನ್ನಡ, ಹಿಂದಿ, ಉರ್ದು, ಹವಿಗನ್ನಡ ಭಾಷೆ ಬಳಸುವ ಜನ ಇದ್ದಾರೆ. ಅಡಕೆ ಮುಖ್ಯ ಬೆಳೆ, ತೆಂಗು, ಭತ್ತ, ಶೇಂಗಾ, ಕಬ್ಬು, ವೀಳ್ಯದೆಲೆ, ಬಾಳೆ ಇತ್ಯೇತ್ಯಾದಿ ನಾವು ಬೆಳೆಯದ ಬೆಳೆಗಳೇ ಇಲ್ಲ. ಕೆಲಮಟ್ಟಿಗೆ ಧಾನ್ಯಗಳನ್ನೂ ತರಕಾರಿಗಳನ್ನೂ ಬೆಳೆಯುತ್ತೇವೆ. ಜೇನು ಕೃಷಿ ಇದೆ, ಹೈನುಗಾರಿಕೆ ಇದೆ, ಬುಟ್ಟಿನೇಯುವುದು, ಮರದ ಕೆಲಸ ಹೀಗೇ ಪಟ್ಟಿ ಬರೆದರೆ ಹನುಮಂತನ ಬಾಲ! ಗುಡಿಗಾರರು ನಮ್ಮಲ್ಲಿ ಜಾಸ್ತಿ ಇದ್ದು ಸ್ವಲ್ಪ ಭಾಗ ಮಲೆನಾಡಿನ ಸಾಗರ-ಶಿವಮೊಗ್ಗಾ ಕಡೆಗಳಲ್ಲಿದ್ದಾರೆ. ನಮ್ಮಲ್ಲಿನ ವೀಳ್ಯೆದೆಲೆ, ಜಾಯಿಕಾಯಿ, ಕಾಳುಮೆಣಸು [ಅನಾದಿಯಿಂದಲೂ] ದೂರದ ವಿದೇಶಗಳಿಗೂ ಹೋಗುತ್ತವೆ! ಹಬ್ಬ ಬಂತೆಂದರೆ ಮನೆಮಂದಿ ಸೇರಿದಂತೇ ಇಡೀ ಜಿಲ್ಲೆಯ ತುಂಬಾ ಸಡಗರ ಉಕ್ಕಿ ಹರಿಯುತ್ತದೆ. ಹೊರಜಗತ್ತಿನ ಪರಿವೆಯೇ ಇಲ್ಲದ ರೀತಿಯಲ್ಲಿ ತಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡು ಇದ್ದುಬಿಡುವಂಥಾ ಸಂಭಾವಿತ ಜನ ನಮ್ಮವರು. ಇಂಥಾ ನಮ್ಮ ಉತ್ತರಕನ್ನಡದಲ್ಲಿ ರಾಮಾಯಣ ಕಾಲದ ಪ್ರದೇಶ ಗೋಕರ್ಣ! ಭೂಕೈಲಾಸವೆಂದೂ ದಕ್ಷಿಣಕಾಶಿಯೆಂದೂ ರಾವಣನಿಂದ ಆತ್ಮಲಿಂಗ ತರಲ್ಪಟ್ಟು ಗಣೇಶನ ಉಪಕಾರದಿಂದ ನೆಲದಲ್ಲೇ ಅದು ಇಳಿದುನಿಂತ ಜಾಗವೆಂದೂ ಪ್ರಸಿದ್ಧವಾಗಿದೆ; ತೀರ್ಥಕ್ಷೇತ್ರವಾಗಿದೆ. ಕರ್ನಾಟಕವೂ ಸೇರಿದಂತೇ ದಕ್ಷಿಣ ಭಾರತದ ಅನೇಕ ಜನರ ಪಿತೃಗಳ ಪಿಂಡಪ್ರದಾನ/ಅಸ್ತಿವಿಸರ್ಜನೆ ನಡೆಯುವ ಕ್ಷೇತ್ರವೂ ಹೌದು.   

ಗೋಕರ್ಣದ ಕಡಲತಡಿಯಲ್ಲೇ ನಮ್ಮಲ್ಲಿನ ಅಚ್ಚ ಗಾಂವ್ಟಿ ಪರಿಸರದಲ್ಲಿ ಒಡಮೂಡಿದ ಮಾಸ್ತರು ದಿ|ಗೌರೀಶ್ ಕಾಯ್ಕಿಣಿಯವರು. ಇತ್ತೀಚೆಗೆ ಅವರ ಜನ್ಮಶತಾಬ್ದಿಯ ಉದ್ಘಾಟನೆ ನಡೆಯಿತು. ಕವಿ ಚನ್ನವೀರ ಕಣವಿ, ಸಾಹಿತಿಗಳಾದ ಗಿರಡ್ದಿ ಗೋವಿಂದರಾಜ, ವಿ.ಜಿ.ನಾಯ್ಕ, ಎಂ.ಡಿ. ವೇದೇಶ್ವರ ಮತ್ತು ಗೌರೀಶ್ ಕಾಯ್ಕಿಣಿಯವರ ಪತ್ನಿ ಶಾಂತಾ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಕೇಳ್ಪಟ್ಟೆ, ಖುದ್ದಾಗಿ ಪಾಲ್ಗೊಳ್ಳಲಾಗಲಿಲ್ಲ. ’ಅವಮಾನವತಾವಾದ’, ’ನಾಸ್ತಿಕ ಮತ್ತು ದೇವರು’,ಮನೋವಿಜ್ಞಾನದ ರೂಪುರೇಷೆಗಳು’, ’ಸತ್ಯಾರ್ಥಿ’ ಇವು ಅವರ ಪ್ರಮುಖ ಕೃತಿಗಳು. ೨೦೦೨ ನವೇಂಬರ್ ೧೩ ರಂದು ಅವರು ಮಡಿದಾಗ ೬೨ ಕೃತಿಗಳು ಮಾತ್ರ ಪ್ರಕಟಗೊಂಡಿದ್ದವು. ಪ್ರಕಟಗೊಳ್ಳದೇ ಬಾಕಿ ಉಳಿದ ಕೃತಿಗಳನ್ನೂ ಸೇರಿಸಿ ಅವರ ಸಮಗ್ರ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ,  ’ಕಟಾಂಜನ’ ಎಂಬ ಸಂಸ್ಮರಣ ಗ್ರಂಥವನ್ನು ಪ್ರಕಟಿಸಿ, ಗೋಕರ್ಣದ ಮುಖ್ಯ ಬೀದಿಯಲ್ಲಿ ಆ ದಿನ ಮೆರವಣಿಗೆ ಮಾಡಲಾಯ್ತು ಎಂಬುದು ತಿಳಿದುಬಂತು; ಅತ್ಯಂತ ಸಂತಸದ ಸಂಗತಿ. ಈ ನೆನಪಿನಲ್ಲಿ ಒಮ್ಮೆ ನೆನಪಿಸಿಕೊಳ್ಳಲೇಬೇಕಾದ ನಮ್ಮ ಹೆಮ್ಮೆಯ ಬರಹಗಾರರು ಕಾಯ್ಕಿಣಿ ಮಾಸ್ತರು. ಅಕ್ಟೋಬರ್ ೧೨, ೧೯೧೨ ರಂದು ಗೋಕರ್ಣದಲ್ಲೇ ಜನಿಸಿ, ಧಾರವಾಡದಲ್ಲಿ ಕಾಲೇಜು ಓದಿ, ಬಂಕಿಕೊಡ್ಲ ಮತ್ತು ಗೋಕರ್ಣದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ೧೯೩೭ ರಿಂದ ೧೯೭೬ರ ವರೆಗೆ ವೃತ್ತಿಬದುಕು ನಡೆಸಿದವರು ಕಾಯ್ಕಿಣಿ ಮಾಸ್ತರು.[ನೆನಪಿರಲಿ: ಮಾಸ್ತರು ಎಂದರೇ ನಮ್ಮಲ್ಲಿ ಮಾಸ್ತರರು ಎಂದಹಾಗೇ, ಅದು ಏಕವಚನವಲ್ಲ, ನಮ್ಮಲ್ಲಿನ ವಾಡಿಕೆ] ನಮ್ಕಡೆಗೆಲ್ಲಾ ಅವರಿಗೆ ಗೌರೀಶ್ ಮಾಸ್ತರು ಅನ್ನೋದಕ್ಕಿಂತಾ ಹೆಚ್ಚಾಗಿ ಕಾಯ್ಕಿಣಿ ಮಾಸ್ತರು ಎಂದರೇ ಗೊತ್ತಾಗಿಬಿಡ್ತದೆ. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಅತ್ಯುತ್ತಮ ಬರಹಗಾರರು ಅವರು. ಯಾವುದೇ ವಿಷಯ ಹೇಳಿ, ಅವರೊಂದು ಸಾಂಬಾರ್ ಬಟ್ಲು ಇದ್ದಹಾಗೇ; ತಲೆಯೊಳಗೆ ಇಲ್ದಿದ್ದೇ ಇಲ್ಲ. ಕಣ್ಣಿಗೆ ಕಂಡಿದ್ದನ್ನು ಬರಹಕ್ಕೆ ಇಳಿಸದೇ ಬಿಟ್ಟವರೇ ಅಲ್ಲ! ಹಾಗಾಗೇ ಅವರು ಆ ಕಾಲದಲ್ಲೇ ಅಷ್ಟು ಹಳ್ಳಿಮೂಲೆಯಲ್ಲಿದ್ದರೂ ಪತ್ರಿಕೆಗೆ ಅಂಕಣಕಾರರಾಗಿದ್ದರು. ಸಾಂಪ್ರದಾಯಿಕ ಬರಹಶೈಲಿಗೆ ಅಧುನಿಕತೆಯ ಗರಂ ಮಸಾಲೆಯ ಒಗ್ಗರಣೆ ಹಾಕಿ ಹಚ್ಚಗೆ ಬೆಚ್ಚಗೆ ಕೂತು ಉಣ್ಣುವಂತೇ ಬಡಿಸುವ ಶೈಲಿ ಅವರಿಗೆ ಕರತಲಾಮಲಕವಾಗಿತ್ತು. ಬಡತನದಲ್ಲಿ ತಟ್ಟಿಬಿಡಾರದಲ್ಲೇ ಸಂಸಾರ ನಿಭಾಯಿಸಿದರೂ ಮನಸಾ ಅವರು ಬಹಳ ಧನಿಕರು! ಅವರಲ್ಲಿಗೆ ಬರದೇ ಹೋದ ಕವಿ-ಸಾಹಿತಿಗಳೇ ಇರಲಿಲ್ಲ ಎನ್ನಬಹುದು. ಬಂದ ಅಷ್ಟೂ ಮಂದಿಗೆ ಉಪಚಾರವೂ ಹಾಗೇ ನಡೆಯುತ್ತಿತ್ತು.    

ಕಳೆದವಾರ ಪತ್ರಿಕೆಯೊಂದನ್ನು ತಿರುವುತ್ತಿದ್ದೆ. ಅದರಲ್ಲಿ ಕಾಯ್ಕಿಣಿ ಮಾಸ್ತರು ’ಕರ್ನಾಟಕ ಸಂಗೀತ’ದ ಬಗ್ಗೆ ಬರೆದ ಲೇಖನವೊಂದು ಓದಲು ಸಿಕ್ಕಿತ್ತು. ಸಾಮಾನ್ಯವಾಗಿ ಸ್ವರಮೇಳದ ಬಗ್ಗೆ ಆಳವಾದ ಅಧ್ಯಯನವಿಲ್ಲದ ಯಾವೊಬ್ಬನೂ ಅದನ್ನು ಬರೆಯಲು ಸಾಧ್ಯವಿಲ್ಲ. ಹಸೀ ಗೋಡೆಗೆ ಹರಳಿಟ್ಟಹಾಗೇ ಹೇಳುವ ಅವರ ವಾಗ್ಝರಿ ಅಚ್ಚರಿ ಹುಟ್ಟಿಸುವಂಥದು. ಹೇಳುವುದನ್ನು ಹೇಳಿಯೇ ಬಿಡಬೇಕು; ಛೇ ಛೇ.. ಯಾರದೋ ಮರ್ಜಿಗೋ ಮುಲಾಜಿಗೋ ಡೊಗ್ಗು ಸಲಾಮು ಹೊಡೆದ, ಹೇಳದೇ ಹಾಗೇ ಬಚ್ಚಿಟ್ಟುಕೊಂಡ ಜನವೇ ಅಲ್ಲ ಅದು. ಕಾಲವೂ ಹಾಗೇ ಇತ್ತುಬಿಡಿ, ಪತ್ರಿಕಾಕರ್ತರಿಗೂ ಮರ್ಯಾದೆ ಇತ್ತು, ಪತ್ರಿಕೆಗಳಿಗೂ ಘನತೆ ಗೌರವ ಇತ್ತು. ಪತ್ರಿಕೆಯಲ್ಲಿ ರೋಲ್ ಕಾಲ್ ಮಾಡಲು ಕಲಿಸಿದ್ದು ದಿ| ಲಂಕೇಶರು. ಅಲ್ಲೀವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಅಂಥಾ ಗೀಳು ಇರಲಿಲ್ಲ. ಯಾವಾಗ ಜಾಹೀರಾತುಗಳಿರುವುದಿಲ್ಲವೋ ಆಗ ಪತ್ರಿಕೆ ನಡೆಸುವುದು ಕಷ್ಟ. ಜಾಹೀರಾತು ಹಾಕುವುದಿಲ್ಲಾ ಎನ್ನುವವರು ಪತ್ರಿಕೆ ಉಳಿಸಿಕೊಳ್ಳಲು ರೋಲ್ ಕಾಲ್ ಮಾಡಲು ಆರಂಭಿಸಿಬಿಡುತ್ತಾರೆ. ಈಗಲೂ ಅಂತಹ ಒಂದೆರಡು ವಾರಪತ್ರಿಕೆಗಳನ್ನು ನೀವು ನಾವೆಲ್ಲಾ ನೋಡುತ್ತೇವಲ್ಲಾ ? ಕಾಯ್ಕಿಣಿ ಮಾಸ್ತರರ ಕಾಲಕ್ಕೆ ಹಾಗೆಲ್ಲಾ ಇರಲಿಲ್ಲ; ಇದ್ದರೆ ಅವರು ಅಂತಹ ಪತ್ರಿಕೆಗಳ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ಸಂಪಾದಕರ ಜನ್ಮ ಜಾಲಾಡಿಬಿಡುತ್ತಿದ್ದರು! ಏನ್ತಿಳ್ಕೊಂಡಿದೀರಿ ನೀವು ? ಕಾಯ್ಕಿಣಿ ಮಾಸ್ತರರು ಅಂದ್ರೆ ಅಷ್ಟು ನಿಷ್ಠಾವಂತರು, ನಿಷ್ಪಕ್ಷಪಾತಿಗಳು, ನಿಷ್ಠುರವಾದಿಗಳು. ಗೋಕರ್ಣ ಕ್ಷೇತ್ರಕ್ಕೆ ಬಂದ ಕೆಲವರು ಅವರನ್ನು ಕಾಣಲು ಬಯಸಿದರೂ "ಕಾಯ್ಕಿಣಿ ಮಾಸ್ತರು ಏನಾದ್ರೂ ಹೇಳಿಬಿಟ್ರೆ ಕಷ್ಟ" ಅಂದ್ಕೊಂಡು ಹಾಗೇ ಮರಳುವುದೂ ಇತ್ತು!  

ಕಥೆ, ಕವನ, ಕಾದಂಬರಿ, ಪ್ರಬಂಧ ಇಂತಹ ಅನೇಕ ಪ್ರಾಕಾರಗಳಲ್ಲಿ ಬೆಳೆತೆಗೆದ ಮಾಸ್ತರು ಒಟ್ಟೂ ೬೭ ಕೃತಿಗಳನ್ನು ಬರೆದಿದ್ದಾರೆ. ಇನ್ನೂ ಕೆಲವನ್ನು ಬರೆದಿದ್ದಿರಬಹುದು, ಪ್ರಕಟಗೊಂಡಿದ್ದು ಇಷ್ಟು. ಇಂಥಾ ಮೇಷ್ಟ್ರಿಗೆ ಮಗನಾಗಿ ಜನಿಸಿದವರು ನಮ್ಮ ಜಯಂತ್ ಕಾಯ್ಕಿಣಿ. ನಾವೆಲ್ಲಾ ಪ್ರೀತಿಯಿಂದ ಜಯಂತಣ್ಣ ಎಂದೇ ಕರೆಯುತ್ತೇವೆ. ಬಹುಶಃ ಹತ್ತಿರದ ಬಳಕೆ ಇದ್ದರೆ ನೀವೂ ಹಾಗೇ ಕರೀತೀರಿ ಯಾಕೆಂದ್ರೆ ಅವರ ಸರಳ ಸೌಜನ್ಯ ನಡೆಯೇ ಹಾಗೆ. ಬಡ ಮಾಸ್ತರರ ತಟ್ಟಿಗುಡಿಸಲಿನಲ್ಲಿ ೧೯೫೫ ರಲ್ಲಿ ಜನಿಸಿದ ಜಯಂತ್ ಬಾಲ್ಯದಲ್ಲಿ ಬಡತನವನ್ನೇ ಅನುಭವಿಸಿದರೂ ಓದಿ ಬ್ಯಾಂಕ್ ಅಧಿಕಾರಿಯಾಗಿ ಮುಂಬೈಯಲ್ಲಿ ಕೆಲಸಮಾಡಿದರು. ಹೀಗಾಗಿ ಆರ್ಥಿಕವಾಗಿ ತಂದೆಯಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರಲಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಬರೆದರೆ ಸ್ಥಳೀಯ ಜನ ಬಹಳ ಮೆಚ್ಚುತ್ತಾರೆ ಎಂಬುದನ್ನು ಬೇಂದ್ರೆ ಹೇಳುತ್ತಿದ್ದರು. ಬೇಂದ್ರೆಯವರ ಭಾಷಾ ಶೈಲಿ ಅಪ್ಪಟ ಧಾರವಾಡದ್ದೇ ಆಗಿತ್ತು. ಬೇಂದ್ರೆಯವರ ಭಾಷಾನೀತಿಯನ್ನೇ ಅನುಸರಿಸಿದ ಜಯಂತಣ್ಣ ನಮ್ಮಲ್ಲಿನ ಭಾಷೆಯನ್ನು ಮಿಳಿಸಿ ಮಾತನಾಡುತ್ತಾರೆ-ಹೀಗಾಗಿ ನಿಮ್ಮೊಡನೆ ನಮ್ಮೊಡನೆ ಅವರು ಮಾತನಾಡುವಾಗ ಯಾರೋ ಮನೆಯಣ್ಣನೇ ಮಾತನಾಡಿದ ಹಾಗೇ ಇರುತ್ತದೆ!


ಸಾಹಿತಿಯೆಂಬ ಹಿರಿಮೆಯನ್ನು ಇಟ್ಟುಕೊಳ್ಳದೇ ನಡೆದರೆ ಸಾಹಿತಿ ಬಹುದೂರ ನಡೆದಾನು, ಆಗಮಾತ್ರ  ಓದುಗರು ಅವನನ್ನು ಹಚ್ಚಿಕೊಂಡಾರು ಎಂಬುದು ಅನುಭವ ಜನ್ಯ ಅಂಶ. ಸಾಹಿತ್ಯ ಸಹಜಧಾರೆಯಾಗಿ ಹೊರಹರಿಯಬೇಕೇ ಹೊರತು ಅಲ್ಲಿ ಕೃತ್ರಿಮತೆ ಇದ್ದರೆ ಅದು ಬಹುಸಂಖ್ಯಾಕ ಸಾಹಿತ್ಯಾಸಕ್ತರಿಗೆ ಇಷ್ಟವಾಗುವುದಿಲ್ಲ. ಕವಿಯೋ ಸಾಹಿತಿಯೋ ಮಾತನಾಡಿದರೆ ಮಾತನಾಡಿ ತೆರಳಿದ ಹಲವು ಗಂಟೆ/ದಿನ/ವಾರ/ತಿಂಗಳು/ವರ್ಷ ಆ ಮಾತಿನ ಪಸೆ ಹಾಗೇ ಇರಬೇಕು. ತೈಲಧಾರೆಯ ನಂತರ ಎಣ್ಣೆಯ ಪಸೆ ಉಳಿಯುತ್ತದೆ ಆದರೆ ಜಲಧಾರೆಯ ನಂತರ ಅಂತಹ ಯಾವುದೇ ಪಸೆ ಕಾಣಿಸುವುದಿಲ್ಲವಲ್ಲಾ? ಜನಮಾನಸದಲ್ಲಿ ಹೊಕ್ಕಿಕೂತು ಕಾಡುವ ಕವಿಯಾಗಿ ಸಾಹಿತಿಯಾಗಿ ಇನ್ನಷ್ಟು ಬೇಕು ಎನಿಸಿಕೊಳ್ಳುವುದು ಸುಲಭದ ಮಾತಲ್ಲ, ಆ ಹಂತಕ್ಕೆ ಜಯಂತಣ್ಣ ತಲ್ಪಿದ್ದರೆ ಅಲ್ಲಿ ಅವರಪ್ಪ ಕಾಯ್ಕಿಣಿ ಮಾಸ್ತರರ ಗರಡಿಯ ತಾಲೀಮು ಕೂಡ ತುಸು ಕೆಲಸಮಾಡಿರಬಹುದು. ಋಷ್ಯಾಶ್ರಮದಲ್ಲಿ ಇರುವ ಋಷಿಕುಮಾರರು ಸಹಜವಾಗಿ ದುರ್ಲಭ ಜ್ಞಾನವನ್ನಾಂತು ಸಾಧನೆ ನಡೆಸುವವರು, ಗುರುಮುಖೇನ ಸಿಗುವ ಜ್ಞಾನಧಾರೆ ಅವರಿಗೆ ಸಾಕು ಮುಂದೆ ಅವರು ಸ್ವಾನುಭವದಿಂದಲೇ ಬೆಳಗುವವರು ಹೇಗೋ ಹಾಗೇ, ವಿದ್ಯಾರ್ಜನೆ-ವೃತ್ತಿ ಈ ಸಲುವಾಗಿ ಬಹುಕಾಲ ಹೊರಗೇ ಇದ್ದರೂ ಎಳವೆಯಲ್ಲಿ ತಂದೆಯ ಪರ್ಣಕುಟಿ ನೀಡಿದ ನೆರಳು-ಅಲ್ಲಿ ಬಂದುಹೋಗುತ್ತಿದ್ದ ಸಾಹಿತ್ಯಾಸಕ್ತರೊಡನೆ ಆಗಾಗ ಪರಿಸಮಾಲೋಚಿಸುತ್ತಿದ್ದ, ಲೋಕಾಭಿರಾಮವಾಗಿ ಹರಟುತ್ತಿದ್ದ ಅಪ್ಪನ ಗಂಧಗಾಳಿ ಖಂಡಿತ ಪರಿಣಾಮ ಬೀರಿದೆ. ಆಮೇಲೆ ಬಿಡಿ ಕಕ್ಷೆ ಸೇರಿದ ಕ್ಷಿಪಣಿ ಮಾಹಿತಿ ಕಲೆಹಾಕಿ ಕೇಂದ್ರಕ್ಕೇ ಕಳುಹಿಸುವಂತೇ ತಾನೇ ತಾನಾಗಿ ಬೆಳೆಯುತ್ತಾ ಸಾಹಿತ್ಯದಲ್ಲಿ ತೊಡಗಿಕೊಂಡಾತ ಜಯಂತಣ್ಣ ಅರ್ಥಾತ್ ಜಯಂತ್ ಕಾಯ್ಕಿಣಿ. 

ಜಯಂತಣ್ಣ ಕಥೆಗಳ ಜೊತೆಗೆ ನವ್ಯಕಾವ್ಯ ಬರೆದರು, ಸಿನಿಮಾ ಹಾಡುಗಳನ್ನೂ ಬರೆದರು. ಅವರು ’ಮುಂಗಾರುಮಳೆ’ಗೆ ಬರೆದ ಹಾಡುಗಳು ಬಹಳ ಜನಪ್ರಿಯವಾದವು. ಅಲ್ಲಿಂದಾಚೆಗೆ ಜಯಂತಣ್ಣ ಸಿನಿಮಾ ಸಾಹಿತ್ಯ ರಂಗದಲ್ಲೂ ಸ್ವಲ್ಪ ಬಣ್ಣ ಪಡೆದರು! ಈ ಅಪ್ಪ-ಮಗ ಇಬ್ಬರೂ ಮಹಾನ್ ಸಾಹಸಿಗಳು. ಓದುವ ಗೀಳು ಸದಾ ಇದ್ದೇ ಇದೆ. ಬರೆಯುವ ಅನೇಕ ಯುವಜನ ಕಾಯ್ಕಿಣಿ ಮಾಸ್ತರರ ಮನೆಗೆ ಬಂದು ಸಲಹೆ ಕೇಳುತ್ತಿದ್ದರಂತೆ.  ಕೆಲಸಕ್ಕೆ ಬಾರದ ಬರಹಗಳು ಎಂದು ಬೇರೇ ಓದುಗರಿಗೆ ಅನಿಸಿದರೂ ಕಾಯ್ಕಿಣಿ ಮಾಸ್ತರರು ಹಾಗೆ ಅಸಡ್ಡೆಮಾಡುತ್ತಿರಲಿಲ್ಲವಂತೆ. ಯಾಕೆಗೊತ್ತೇ? "ಬರೆಯುವಾತ ಬರೆಯುವಷ್ಟುಕಾಲ ಈ ಲೋಕಕ್ಕೆ ಕೆಟ್ಟದ್ದು ಮಾಡುವುದರಬಗ್ಗೆ ಯೋಚಿಸಲಾರ, ಹಾಗೆ ಅಷ್ಟಾದರೂ ಕಾಲ ಆತನಿಂದ ಈ ಲೋಕಕ್ಕೆ ಒಳಿತಾದರೆ ಅದೊಂದು ಉಪಕಾರವಾದಂತೇ. ಬರೆಯಲಿ ಬಿಡು" ಎನ್ನುತ್ತಿದ್ದರಂತೆ! "ಬರವಣಿಗೆ ಎಂಬುದು ಬಹೊದೊಡ್ಡ ಸಾಗರ, ಇಲ್ಲಿ ಗಾಳಹಾಕುತ್ತಾ ಕೂರಬೇಕು, ಮೀನು ಸಿಕ್ಕರೆ ಪುಣ್ಯ, ಕೆಲವೊಮ್ಮೆ ದಿನಗಟ್ಟಲೆ ಕೂತರೂ ಏನೂ ಸಿಗದೇ ಹೋಗಬಹುದು" ಎಂಬುದು ಜಯಂತಣ್ಣನ ಹೇಳಿಕೆ. ಹೌದಲ್ಲವೇ?  ಕಾಲಘಟ್ಟವೊಂದರಲ್ಲಿ ಕವಿ ಕುವೆಂಪು ಅಂಥವರಿಗೆ ಕವಿಸಮಯ ಎಂದೇ ಬೇರೇ ಇತ್ತು. ಅಲ್ಲಿ ಮೂಡ್ ಬಂದಾಗ ಅವರು ಬರೆಯುತ್ತಿದ್ದರು. ಇವತ್ತು ನನ್ನಂತಹ ಒಬ್ಬ ಬರಹಗಾರನಿಗೆ ಸಮಯ ಸಿಗುವುದೇ ಕಷ್ಟ. ಸಿಕ್ಕ ಸಮಯದ ನಡುವೆಯೂ ಹತ್ತು ಜಂಗಮವಾಣಿ ಕರೆ, ಇಪ್ಪತ್ತೊಂದು ಎಸ್ಸೆಮ್ಮೆಸ್ಸು, ಮದುವೆಗೋ ಗೃಹಪ್ರವೇಶಕ್ಕೋ ಕರೆಯಲು ಬಂದ ನೆಂಟರು, ನಾಳಿನ ಕೆಲಸದ ಪೂರ್ವತಯಾರಿ ಆಗಿಲ್ಲವೆಂದ ಸಹೋದ್ಯೋಗಿಗಳು, ಮನೆಯಲ್ಲಿ ಸಾಮಾನು ಖಾಲಿ ಅಗಿದೆ ಎನ್ನುವ ಹೆಂಡತಿ, ಟಿವಿ ಜಾಹೀರಾತಿನಲ್ಲಿ ಕಂಡ ಚಾಕೋಲೇಟ್ ಕೊಡಿಸುವಂತೇ ಹಠಕ್ಕೆ ಬಿದ್ದ ಮಗ ....ಹೀಗೇ ಅಡ್ಡಬರುವ ಕಾರಣಗಳು ಹಲವಾರು. ಇವೆಲ್ಲವುಗಳ ನಡುವೆಯೂ ಲೋಕಾಂತದಲ್ಲೇ ಏಕಾಂತ ಕಲ್ಪಿಸಿಕೊಂಡು, ಬರೆಯಬೇಕಾದುದನ್ನು ಬರೆಯುವುದಿದೆಯಲ್ಲಾ ಅದು ನಿಜವಾದ ಸವಾಲು !

ಕಾಯ್ಕಿಣಿ ಮಾಸ್ತರರಿಗೆ ಬಂದ ಪ್ರಶಸ್ತಿಗಳು ಇಂತಿವೆ: ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೊತ್ಸವ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಡೈಮಂಡ್ ಜ್ಯುಬಿಲಿ ಅವಾರ್ಡ್, ವರ್ಧಮಾನ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಡಾ|ಶಂ.ಬಾ. ವೇದಿಕೆ ಪ್ರಶಸ್ತಿ, ಸಂದೇಶ್ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿ(ಮೀನಾಕ್ಷಿ ಎಂಬ ಕೃತಿಗೆ). ಕಾಯ್ಕಿಣಿ ಮಾಸ್ತರರು ಕನ್ನಡದಲ್ಲಿ ಬರೆದ ಹಾಗೇ ಕೊಂಕಣಿಯಲ್ಲೂ ಬರೆಯುತ್ತಿದ್ದರು ಎಂದು ಹೇಳಲು ಮರೆತುಬಿಟ್ಟಿದ್ದೆ.

ಅಪ್ಪನಂತೇ ಮಗನಿಗೂ[ಜಯಂತ್ ಕಾಯ್ಕಿಣಿ] ಅದಾಗಲೇ ಪ್ರಶಸ್ತಿಗಳು ಲಭಿಸಿವೆ: ಹಲವುಬಾರಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಸರಕಾರದ ’ಕುಸುಮಾಗ್ರಜ’ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ರಾಷ್ಟ್ರೀಯ ಕಥಾ ಪ್ರಶಸ್ತಿ, ಋಜುವಾತು ಟ್ರಸ್ಟ್ ನಲ್ಲಿ ಫೆಲೋಶಿಪ್ ಗೌರವ, ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್.

ಅಂದಹಾಗೇ ಕಾಯ್ಕಿಣಿ ಮಾಸ್ತರರ ಮನೆ ಮೊದಲು ಪರ್ಣಕುಟಿಯೇ ಆಗಿತ್ತು. ಮಗ ನೌಕರಿ ಹಿಡಿದು ಒಂದಷ್ಟು ದುಡಿದಮೇಲೆ ಈಗ ಮುಪ್ಪಿನ ತಾಯಿಗಾಗಿ, ಅಪ್ಪನ ನೆನಪಿಗಾಗಿ ಗೋಕರ್ಣದಲ್ಲಿ ಮೂಲಮನೆ ಇದ್ದ ಜಾಗದಲ್ಲೇ ಹೊಸದೊಂದು ಮನೆಯನ್ನು ನಿರ್ಮಿಸಿದ್ದಾರೆ; ಹೆಸರು ’ಪರ್ಣಕುಟಿ’!  ಪರ್ಣಕುಟಿಯಲ್ಲಿ ಕೂತು ಸಮುದ್ರದೆಡೆಗೆ ದೃಷ್ಟಿ ಹರಿಸಬಹುದು. ಚಿಕ್ಕಮಕ್ಕಳಿದ್ದಾಗ ನಾವು ಅಪರೂಪಕ್ಕೆ ಸಮುದ್ರದ ಕಿನಾರೆಗೆ ಹೋಗಿ ಅಲ್ಲಿ ಶಂಖ, ಹವಳ, ಮುತ್ತು ಇವೆಲ್ಲಾ ಸಿಗುವುದೋ ಎಂದು ಹುಡುಕುತ್ತಿದ್ದೆವು. ನಕ್ಷತ್ರಮೀನು, ಸಮುದ್ರನಾಲಿಗೆ, ಇನ್ನೇನೇನೋ ವಸ್ತುಗಳು ಕೈಗೆ ಸಿಕ್ಕಾಗ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಮೇಲೆ ಇಳಿದಾಗ ಅನುಭವಿಸಿದ  ಆನಂದಕ್ಕಿಂತಾ ಹೆಚ್ಚಿನ ಆನಂದ ನಮ್ಮದಾಗುತ್ತಿತ್ತು; ಯಾರೋ ಹಿರಿಯರು "ಹೋಗ್ರೊ ಅದೆಲ್ಲಾ ತೀರಾ ಕೆಲ್ಸಕ್ಕೆ ಬಾರದ ವಸ್ತು" ಎಂದು ಹೇಳಿದಾಗ ಹವೆತೆಗೆದ ಪುಗ್ಗಿ[ಬಲೂನಿ]ಯಂತೇ ಆಗಿಬಿಡುತ್ತಿದ್ದೆವು. ಇಲ್ಲೀಗ ವಿದೇಶೀಯರೂ ಸೇರಿದಂತೇ ನೂರಾರು ಜನ ಸದಾ ಬರುತ್ತಲೇ ಹೋಗುತ್ತಲೇ ಇರುತ್ತಾರೆ. ಹಲವರು ತಳ್ಳುಗಾಡಿಯಲ್ಲಿ ಐಸ್ ಕ್ರೀಮ್ ಮತ್ತು ಚಾಟ್ಸ್ ಅಂಗಡಿ ಇಟ್ಟುಕೊಳ್ಳುತ್ತಾರೆ. ತಾಜಾ ಎಳೆನೀರು ಸಿಗುತ್ತದೆ. ಸಮುದ್ರಸ್ನಾನದ ಸಂಕಲ್ಪ ಮಾಡಿಕೊಂಡು ಸಮುದ್ರ ಸ್ನಾನ ಮಾಡುವ ಯಾತ್ರಾರ್ಥಿಗಳು ಕೆಲವರಾದರೆ ಮೋಜಿನ ಈಜಿಗೆಂದೇ ಬಂದ ಹಲವರೂ ಇರುತ್ತಾರೆ. ಗೋಕರ್ಣಕ್ಕೆ ಬಂದರೆ ನಮಗೆ ಅಪ್ಪ ಮಹಾಬಲ ಆತನ ಮಗ ಗಣಪ ಇಬ್ಬರೂ ಸಿಗುತ್ತಾರೆ, ಅದೇರೀತಿ ಮಹಾಬಲೇಶ್ವರನ ಕೃಪೆಯಲ್ಲಿ ಅಪ್ಪ-ಮಗ ಬರೆದು ಶ್ರೀಮಂತಗೊಳಿಸಿದ ಈ ನೆಲದಲ್ಲಿ ಈ ಕವಿ-ಸಾಹಿತಿಗಳ ಸಂತತಿ ಮುನ್ನಡೆಯಲಿ. ಆತ್ಮಲಿಂಗದ ಸಾನ್ನಿಧ್ಯವಿರುವ ಈ ಕ್ಷೇತ್ರದ ಆ ’ಸಾಹಿತ್ಯ ಪರ್ಣಕುಟಿ’ಯಲ್ಲಿ ಸಾರಸ್ವತಲೋಕಕ್ಕೆ ಬೇಕಾಗುವ ಅನೇಕ ಸಾರಸ್ವತರು ಹುಟ್ಟಿಬರಲಿ, ಕವಿ-ಸಾಹಿತಿಗಳ ನೆಲೆವೀಡು ಕಾರಣಿಕ ಸನ್ನಿಧಾನದಂತೇ ಸದಾ ಶೋಭಿಸಲಿ ಎಂದು ಆತ್ಮೀಯವಾಗಿ ಹಾರೈಸಿ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ, ನಮಸ್ಕಾರ. [ವಿ.ಸೂ.: ಹೊರಡುವ ಮುನ್ನ ತೈಲಧಾರೆಯ ಪಸೆಯನ್ನು ಉಳಿಸುವ ಕವಿ ಜಯಂತಣ್ಣನ ಈ ಹಾಡನ್ನು ಇನ್ನೊಮ್ಮೆ ಕೇಳಿಬಿಡಿ: ಪ್ರೇಮಿಗಳ ನಡುವಿನ ಈ ಹಾಡನ್ನು ರಾಧಾ-ಕೃಷ್ಣರ ಪ್ರೇಮಕ್ಕೆ ಹೋಲಿಸಿ....ನೀವೆಲ್ಲೋ ಇನ್ನೊಂದು ಲೋಕದಲ್ಲಿ ವಿಹರಿಸಿದ ಅನುಭವ ನಿಮಗಾಗಬಹುದು! ]  




Friday, September 28, 2012

ಈ ಬದುಕು ’ಬಿಸಿಲು ಬೆಳದಿಂಗಳು’ !

ಚಿತ್ರಗಳ ಋಣ: ಅಂತರ್ಜಾಲ 
ಈ ಬದುಕು ’ಬಿಸಿಲು ಬೆಳದಿಂಗಳು’ !

ಬಹಳ ಜನ ಸೇರಿದ್ದರು. ನಾವೆಲ್ಲಾ ಚಿಕ್ಕ ಮಕ್ಕಳು, ನೇರವಾಗಿ ಶಾಲೆಯಿಂದ ದೌಡಾಯಿಸಿದ್ದೆವು. ಅಲ್ಲಿ ನಮ್ಮಲ್ಲಿನ ಶಾಸ್ತ್ರೀಯ ಪಂಚವಾದ್ಯವಿತ್ತು, ತಳಿರುತೋರಣಗಳಿಂದ ಊರ ಮುಖ್ಯಭಾಗ ಅಲಂಕೃತಗೊಂಡಿತ್ತು. ಇಡೀ ಗ್ರಾಮದ ಜನತೆ ಸ್ವಾಮೀಜಿಯೊಬ್ಬರ ಆಗಮನಕ್ಕಾಗಿ ಕಾದಿತ್ತು. ಸಾವಿರಾರು ಜನ ಸ್ವಾಗತಕ್ಕೆ ನಿಂತ ಆ ಜಾಗಕ್ಕೆ ಬಂದಿಳಿದವರೇ ಚಿತ್ರದುರ್ಗದ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು. ನಮ್ಮೂರಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗಳಿಗೆ ಊರಿನವತಿಯಿಂದ ಗೌರವ ಸಮರ್ಪಣೆ ಕಾರ್ಯಕ್ರಮವಿತ್ತು. ಇದು ನಡೆದಿದ್ದು ಅಜಮಾಸು ೩೦ ವರ್ಷಗಳ ಹಿಂದೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಅನೇಕ ಗಣ್ಯರನ್ನು ಹೆತ್ತುಕೊಟ್ಟ ನನ್ನ ತಾಯ್ನೆಲ ಹೊನ್ನಾವರದ ಹಡಿನಬಾಳ. ಇಂದು ನಿವೃತ್ತ ಜೀವನ ನಡೆಸುತ್ತಿರುವ ಕಪ್ಪೆಕೆರೆ [ಹಡಿನಬಾಳ ಗ್ರಾಮದ ಒಂದು ಮಜರೆ] ಗಜಾನನ ಹೆಗಡೆಯವರು, ತರಳಬಾಳು ಸ್ವಾಮಿಗಳು ನಡೆಸುತ್ತಿದ್ದ ಕಾಲೇಜಿನಲ್ಲಿ ಅಂದು ಉಪನ್ಯಾಸಕರಾಗಿ ಕೆಲಸಮಾಡುತ್ತಿದ್ದರು. ಉಪನ್ಯಾಸಕರ ಕರೆಯನ್ನು ಮನ್ನಿಸಿ ಹಡಿನಬಾಳಕ್ಕೆ ತರಳಬಾಳುವಿನಿಂದ ಶ್ರೀಗಳು ಬಂದಿದ್ದರು. ಆ ಕಾಲಕ್ಕೆ ಶ್ರೀರಾಮಚಂದ್ರಾಪುರಮಠದ ಆಸ್ಥಾನ ವಿದ್ವಾನ್ ಎನಿಸಿದ್ದ ಸೂರಿ ರಾಮಚಂದ್ರ ಶಾಸ್ತ್ರಿಗಳು ’ಮೈಸೂರು ಶಾಸ್ತ್ರಿ’ಎಂದೇ ಪ್ರಸಿದ್ಧರು ಮತ್ತು ಪ್ರಕಾಂಡ ಪಂಡಿತರೂ ಆಗಿದ್ದವರು. ಅಂತಹ ವಿದ್ವನ್ಮಣಿಗಳನ್ನು ಸಭೆಯಲ್ಲಿರಿಸಿಕೊಂಡ ಹಡಿನಬಾಳದ ಜನತೆ ತರಳಬಾಳು ಶ್ರೀಗಳಿಗೆ ತನ್ನ ಗೌರವಾರ್ಪಣೆ ಸಲ್ಲಿಸಿತು. ಋಜುಮಾರ್ಗದವರೇ ತುಂಬಿದ ನಮ್ಮ ಊರು ಇಂತಹ ಅನೇಕರನ್ನು ಸ್ವಾಗತಿಸಿದೆ, ಸನ್ಮಾನಿಸಿದೆ. ಸ್ವಾಮಿಗಳಿಗೆ ಹಾರಾರ್ಪಣೆ ಮಾಡಿದ ಚಿಕ್ಕ ಬಾಲಕರಲ್ಲಿ ನಾನೂ ಒಬ್ಬ, ನೆಟ್ಟಗೆ ಗಟ್ಟಿನಿಲ್ಲಲೇ ಆಗದ ಸ್ಥಿತಿಯಲ್ಲಿ, ಗಡಗಡಗುಡುವ ಕೈಗಳಿಂದಲೇ ಹಾರವನ್ನು ಹಾಕುವಾಗ ಧರ್ಯಕ್ಕೆ ಬೆನ್ನಿಗೆ ನಿಂತಿದ್ದು ನನ್ನ ಅಜ್ಜ.

ಅಂದೇ ತರಳಬಾಳುವಿನ ಸಂಪರ್ಕ ನಮಗಾಯ್ತು. ಆಲ್ಲಿಂದಾಚೆಗೆ ಆಗಾಗ ಅಲ್ಲಿನ ಸುದ್ದಿ, ಮಠದ ಬೆಳವಣಿಗೆಗಳ ಮಾಹಿತಿ ಬರುತ್ತಲೇ ಇತ್ತು. ಅದೆಲ್ಲಕ್ಕಿಂತಾ ಹೆಚ್ಚಾಗಿ ಶ್ರೀಗಳ ಅಧ್ಯಯನ ಮಾರ್ಗ ಬಹಳ ಹಿಡಿಸಿತು. ಗುರುವೆನಿಸಿಕೊಳ್ಳುವ ವ್ಯಕ್ತಿಗೆ ಅಧ್ಯಯನ ಮತ್ತು ಅಧ್ಯಾಪನ ಸಹಜವಾಗಿ ಬೇಕು. ಇಂದು ನಾವು ಹೊರಗೆ ಏನೇ ಅಂದರೂ ಅಂದಿಗೆ ಬ್ರಾಹ್ಮಣಮಠಗಳಲ್ಲಿ ಪೀಠಾರೂಢರಾಗಿರುತ್ತಿದ್ದವರಿಗೆ ಅಧ್ಯಯನ ಕಡ್ಡಾಯವಾಗಿ ಇರುತ್ತಿತ್ತು ಮತ್ತು ಅದನ್ನವರು ಪಾಲಿಸುತ್ತಿದ್ದರು. ಲೌಕಿಕ ಪ್ರಾಪಂಚಿಕ ವ್ಯವಹಾರಗಳಲ್ಲಿ ಧೂರ್ತ ಶಿಷ್ಯರ ಹೇಳಿಕೆಗಳನ್ನು ಒತ್ತಾಯದಿಂದ ಒಪ್ಪಿದರೂ ಒಳಗಿನಿಂದ ಅವರು ವಿರಾಗಿಗಳಾಗಿರುತ್ತಿದ್ದರು. ಹಾಗಿರುವ ಗುರುವನ್ನು ನೋಡಿದ್ದ ನಮಗೆ ಕೇವಲ ಲೌಕಿಕವಾಗಿ ವ್ಯವಹಾರ ಚತುರರಾಗಿರುವ ಗುರುಗಳಾದರೆ ಮಾತ್ರ ಸಾಲುತ್ತಿರಲಿಲ್ಲ. ಗುರುವೊಬ್ಬ ಇಹ-ಪರಗಳ ಮಾರ್ಗದರ್ಶಿಯಾಗಿದ್ದು ಸ್ವತಃ ಅಧ್ಯಯನ ಶೀಲನೂ, ತನ್ನನ್ನೇ ತಾನು ತಿದ್ದಿಕೊಳ್ಳುತ್ತಾ ಲೋಕದ ಡೊಂಕನ್ನು ತಿದ್ದುವವನೂ, ಆರ್ತರ-ದೀನರ ಮೊರೆಯನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವವನೂ, ಲೋಕೋಪಕಾರಾರ್ಥವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವವನೂ, ಕಾರ್ಯದಕ್ಷನೂ, ಜಪತಪಾನುಷ್ಠಾನ ನಿರತನೂ, ಮಾನವ ಸಹಜ ಜೀವನಧರ್ಮದ ಪ್ರಬೋಧಕನೂ, ನಿಸ್ವಾರ್ಥನೂ, ನೈತಿಕನಿಷ್ಠನೂ ಮೊದಲಾದ ಸನ್ಯಾಸ ಧರ್ಮದ ಸಲ್ಲಕ್ಷಣಗಳನ್ನು ನಾವೆಲ್ಲಾ ಗುರುಸ್ಥಾನದಲ್ಲಿ ಇರುವ ವ್ಯಕ್ತಿಯಲ್ಲಿ ನಿರೀಕ್ಷಿಸುತ್ತಿದ್ದೆವು. ದೂರದ ತರಳುಬಾಳು ನಮ್ಮೂರಿಗೆ ಪ್ರಾದೇಶಿಕವಾಗಿ ಹತ್ತಿರವಾಗಿರಲಿಲ್ಲ; ಅದೂ ನಮ್ಮಂಥ ಅನೇಕ ನಮ್ಮ ಗ್ರಾಮವಾಸಿಗಳಿಗೆ ಕಣ್ಣಿಗೆ ಕಾಣದ ಪ್ರದೇಶ, ಆದರೂ ನಮ್ಮಲ್ಲಿನ ಹಿರಿಯರಿಗೆ ಒಂದು ಸಮಾಧಾನವಿತ್ತು- ಗಜಾನನ ಕರೆದಿದ್ದರೆ ಅವರು ಯೋಗ್ಯರೇ ಇರಬೇಕು ಎಂಬುದು; ಅದು ಸುಳ್ಳಾಗಲಿಲ್ಲ, ಆ ಗುರು ನಿಜಕ್ಕೂ ಯೋಗ್ಯತೆಯುಳ್ಳವರೇ ಆಗಿದ್ದರು! 

ವೃತ್ತಿಗಾಗಿ ಬೆಂಗಳೂರನ್ನು ಸೇರಿದ ನನಗೆ ರವೀಂದ್ರನಾಥ ಠಾಗೋರ್ ನಗರಕ್ಕೆ ಹೋಗುವಾಗೆಲ್ಲಾ ’ತರಳಬಾಳು ಮಾರ್ಗ’ ಎಂದು ಬರೆದಿರುವುದು ಕಾಣಿಸುತ್ತಿತ್ತು; ಪ್ರಥಮವಾಗಿ ನಾನದನ್ನು ನೋಡಿದಾಗ ಅದು ತರಳಬಾಳುವಿಗೇ ಹೋಗುತ್ತದೆ ಎಂದುಕೊಂಡುಬಿಟ್ಟಿದ್ದೆ! ಆಮೇಲೆ ಅರಿವಿಗೆ ಬಂದಿದ್ದು-ಅದು ಆ ಮಾರ್ಗಕ್ಕೆ ಇಟ್ಟ ಹೆಸರಷ್ಟೇ, ತರಳಬಾಳು ಎಂಬ ಪ್ರದೇಶ ಚಿತ್ರದುರ್ಗ ಜಿಲ್ಲೆಯಲ್ಲಿದೆ ಎಂದು. ತರಳಬಾಳು ಶ್ರೀಗಳ ಲೇಖನ ಆಗಾಗ ಅಲ್ಲಲ್ಲಿ ವಿರಳವಾಗಿ ಓದಲು ಸಿಗುತ್ತಿತ್ತು; ಸಾಹಿತ್ಯ ಪ್ರಿಯನಾದ ನನ್ನನ್ನು ಅದು ತನ್ನಲ್ಲಿರುವ ಸರಳ ನಿರೂಪಣೆಯಿಂದ ಆಕರ್ಷಿಸುತ್ತಿತ್ತು. ಗಜಾನನ ಹೆಗಡೆಯವರೂ ಸೇರಿದಂತೇ ಬಹಳ ಜನ ಹೇಳಿದ್ದರು-ತರಳಬಾಳು ಶ್ರೀಗಳು ಸಂಸ್ಕೃತವನ್ನು ಕಂಪ್ಯೂಟರಿಗೆ ಅಳವಡಿಸುತ್ತಿದ್ದಾರೆ ಎಂದು. ಗಣಕತಂತ್ರಜ್ಞರಲ್ಲದ ಶ್ರೀಗಳು ಅದು ಹೇಗೆ ಆ ಕೆಲಸ ನಿಭಾಯಿಸುತ್ತಾರೆಂಬುದೇ ಒಂದು ಸೋಜಿಗವಾಗಿತ್ತು;  ಕ್ರಿ.ಪೂ. ೫ನೇ ಶತಮಾನಕ್ಕೂ ಮೊದಲು ಬದುಕಿದ್ದನೆನ್ನಲಾದ ಮಹಾಕವಿ ಪಾಣಿನಿಯ ಅಷ್ಟಾಧ್ಯಾಯವನ್ನು ಗಣಕಯಂತ್ರಕ್ಕೆ ಅಳವಡಿಸುವ ಕಾರ್ಯಯೋಜನೆ ಅವರದಾಗಿತ್ತು !  ಸಂಸ್ಕೃತ ಸತ್ತಭಾಷೆ, ಮೃತಭಾಷೆ ಎಂದೆಲ್ಲಾ ಜರಿಯುವ ಜನ ಇಂತಹ ಸಂಸ್ಕೃತ ಪಂಡಿತರನ್ನು ಕಂಡು ಮಾತನಾಡಬೇಕು. ಪುಣ್ಯಭೂಮಿ ಭಾರತದಲ್ಲಿ ನಿಧಿನಿಕ್ಷೇಪಗಳಿಗಿಂತಾ ಹೆಚ್ಚಾಗಿ ಅನೇಕ ಜ್ಞಾನನಿಧಿಗಳು ಆಗಿಹೋಗಿದ್ದಾರೆ. ಅವರು ಹೂತಿಟ್ಟುಹೋದ ’ನಿಧಿ-ನಿಕ್ಷೇಪ’ಗಳು ಅನೇಕವಿವೆ. ಅವುಗಳನ್ನು ಅರಿತುಕೊಳ್ಳಲಾದರೂ ನಾವು ಸಂಸ್ಕೃತವನ್ನು ಅಭ್ಯಸಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ. ||ಸಂಸ್ಕಾರಾತ್ ದ್ವಿಜ ಉಚ್ಯತೇ||- ಮನುಷ್ಯ ತನ್ನ ಉತ್ತಮ ಸಂಸ್ಕಾರಗಳಿಂದ ಬ್ರಾಹ್ಮಣನಾಗುತ್ತಾನಂತೆ, ಇಂದು ಯಾವುದೇ ವಿದ್ಯೆಯೂ ಇಲ್ಲದೇ ಗುರುವೆಂದು ಪೀಠಹತ್ತಿ ಕೂತು ಮೆರೆಯುವ ಜನ ಇದ್ದಾರೆ. ಆದರೆ ಸಿರಿಗೆರೆಯ ಶ್ರೀಗಳು ಹಾಗಲ್ಲ. ಐಹಿಕ-ಪ್ರಾಪಂಚಿಕ ವಿದ್ಯೆಯನ್ನು ವಿದೇಶಗಳಲ್ಲಿ ಕಲಿತರೂ ಸಂಸ್ಕೃತವನ್ನು ಅಧ್ಯಯನಮಾಡಿದ ಶ್ರೀಗಳು ವೇದ-ವೇದಾಂಗಗಳ ಬಗೆಗೆ, ಸಂಸ್ಕೃತದಲ್ಲಿ ಬರೆಯಲ್ಪಟ್ಟ ಬಹುತೇಕ ಕಾವ್ಯ-ಸಾಹಿತ್ಯಗಳ ಬಗೆಗೆ ಅಧ್ಯಯನ ನಡೆಸಿದರು. ಶಿವಕುಮಾರ ಶ್ರೀಗಳ ಅನುಭವಗಳ ಜೊತೆಗೆ, ಉತ್ತಮ ಹೊತ್ತಗೆಗಳು ನೀಡಿದ ಈ ಸಂಸ್ಕಾರಗಳೂ ಸೇರಿಕೊಂಡಾಗ ಸಾದರ-ಲಿಂಗಾಯತರ ಮಠವಷ್ಟೇ ಎನಿಸಿದ್ದ ಪೀಠವನ್ನು ಸರ್ವಜನಮಾನ್ಯವನ್ನಾಗಿ ಬೆಳೆಸುವಲ್ಲಿ ಅದು ಸಹಕಾರಿಯಾಯ್ತು. 

ವಿಜಯಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ’ಬಿಸಿಲು ಬೆಳದಿಂಗಳು’ ಅಂಕಣವನ್ನು ಬರೆಯುತ್ತಿರುವ ಶ್ರೀಗಳ ಲೇಖನಗಳ ಬಗ್ಗೆ ಹೊಸದಾಗಿ ನಿಮಗೆ ಹೇಳುವುದೇನೂ ಬೇಕಾಗಿಲ್ಲ. ಅಲ್ಲಿ ನ್ಯಾಯ-ನೀತಿ-ದಯೆ-ಕರುಣೆ-ಅನುಕಂಪ-ಸಹನೆ-ದಾನ-ಧರ್ಮ-ದಂಡ ಎಲ್ಲದರ ಬಗೆಗೂ ಸೋದಾಹರಣವಾಗಿ ಬರೆಯುವ ಶೈಲಿ ಮತ್ತು ಅಚ್ಚುಕಟ್ಟಾಗಿ ನಿರೂಪಿತವಾಗುವ ಅವರ ಅಂಕಣ ನನ್ನ ಓದಿನ ಆದ್ಯತೆಗಳಲ್ಲೊಂದು. ಒಮ್ಮೆ ಅವರ ಪೂರ್ವಾಶ್ರಮದ ಬಾಲ್ಯಕಾಲದಲ್ಲಿ ಅಮ್ಮನ ಜೊತೆ ಹೊಲಕ್ಕೆ ಹೋದಾಗ ಆಳದಲ್ಲಿ ಬಿದ್ದು ತಲೆಗೆ ಪೆಟ್ಟುಮಾಡಿಕೊಂಡ ಘಟನೆ ವಿವರಿಸಿದ್ದರು, ಜೊತೆಗೆ ಈಗ ಕೆಲವರ್ಷಗಳ ಹಿಂದೆ ಅವರ ಪೂರ್ವಾಶ್ರಮದ ಅಮ್ಮ ಕಾಯಿಲೆಯಿಂದ ಬಳಲಿ ಖರ್ಚಿಗೆ ಹಣವಿಲ್ಲದಾದಾಗ, ಮಠದಿಂದ ಕಳುಹಿಸಿದ್ದರ ಬಗ್ಗೆ-ವಾಸಿಯಾದಮೇಲೆ ಆ ಹಣವನ್ನು ತಾವು ಇಟ್ಟುಕೊಳ್ಳಬಾರದೆಂದು ಅವರಮ್ಮ ಮಠಕ್ಕೆ ಮರಳಿಸಿದ್ದರ ಔಚಿತ್ಯದ ಬಗ್ಗೆ ವಿಶದವಾಗಿ ತಿಳಿಸಿಕೊಟ್ಟಿದ್ದರು. ||ಸರ್ವವಂದ್ಯೇಣ ಯತಿನಾಂ ಪ್ರಸೂರ್ಮಾತಾ ಪ್ರಯತ್ನತಃ||-ಲೋಕದ ಸಮಸ್ತರಿಂದಲೂ ನಮಸ್ಕರಿಸಲ್ಪಡುವ ಯತಿಯಾದರೂ ಹಡೆದಮ್ಮನಿಂದ ಮಾತ್ರ ನಮಸ್ಕಾರ ಸ್ವೀಕರಿಸದೇ, ಬದಲಾಗಿ ತಾನೇ ನಮಸ್ಕರಿಸಬೇಕು ಎಂದು ಆದಿಶಂಕರರು ಹೇಳಿದಂತೇ ಅಮ್ಮನ ಋಣ ತೀರಿಸಲು ಸಾಧ್ಯವಿಲ್ಲಾ ಎಂಬುದನ್ನು ಅವರು ಬರೆದ ಲೇಖನ ಹೇಳಿತ್ತು ಮತ್ತು ವಾರಗಟ್ಟಲೆ ಆ ಲೇಖನದ ಗುಂಗಿನಲ್ಲೇ ನಾನಿದ್ದೆ! ಮನುಷ್ಯನಾಗಿ ಹುಟ್ಟಿದಮೇಲೆ ತಪ್ಪು-ಒಪ್ಪು ಇದ್ದಿದ್ದೇ. ಎಲ್ಲರೂ ತಪ್ಪನ್ನು ಮಾಡದೇ ಇರಲು ಸಾಧ್ಯವೇ? ತಪ್ಪುಮಾಡಿದವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುವ ಶ್ರೀಗಳ ’ಸದ್ಧರ್ಮ ನ್ಯಾಯಪೀಠ’ ಒಂದು ವಿಶಿಷ್ಟ ಸಾಧನೆ. ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಹೆದರಿ ಹೆಗ್ಗಡೆಯವರ ಎದುರು ನ್ಯಾಯಕ್ಕೆ ಒಪ್ಪಿಕೊಳ್ಳುವಂತೇ ಈ ಮಠದ ಶಿಷ್ಯಗಣದ ಹಲವರು ಶ್ರೀಗಳ ವರ್ಚಸ್ಸಿಗೂ ಮತ್ತು ನ್ಯಾಯಪರತೆಗೂ ಅಂಜಿ ನಿಜವನ್ನು ಹೇಳುತ್ತಾರೆ! ತಪ್ಪಿತಸ್ಥರಿಗೆ ಕಠಿಣಶಿಕ್ಷೆಯ ಬದಲು ಅಂಥವರ ಮನಃಪರಿವರ್ತನೆ ಮಾಡುವ ಕೆಲಸ ಶ್ಲಾಘನೀಯ.

||ಅರ್ಚಕಸ್ಯ  ಪ್ರಭಾವೇನ ಶಿಲಾ ಭವತಿ ಶಂಕರ|| ಎಂಬರೀತಿಯಲ್ಲೇ ತನ್ನ ವೈಯ್ಯಕ್ತಿಕ ವರ್ಚಸ್ಸಿನಿಂದಲೂ, ವ್ಯಾವಹಾರಿಕ ಜಾಣ್ಮೆಯಿಂದಲೂ, ಆಳವಾದ ಅಧ್ಯಯನದಿಂದಲೂ, ಸನ್ಮಾರ್ಗದ ಅನುಸರಣೆ ಮತ್ತು ಬೋಧನೆಯಿಂದಲೂ ಶ್ರೀಗಳು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಸಂಕಲ್ಪಗಳು ಸಾಕಾರರೂಪ ತಳೆದಿವೆ. ಅನೇಕ ಶಾಲಾ-ಕಾಲೇಜುಗಳೂ ಸೇರಿದಂತೇ ೧೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ವೇದಾಧ್ಯಯನಕ್ಕೂ ಪಾಠಶಾಲೆಗಳನ್ನು ವ್ಯವಸ್ಥೆಮಾಡಿದ್ದು ಪ್ರಮುಖವಾಗಿ ಹೇಳಬೇಕಾದ ಅಂಶ ಯಾಕೆಂದರೆ ಅಪೌರುಷೇಯವಾದ ಅನರ್ಘ್ಯರತ್ನಗಳನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲಾ ಹಿಂದೂ ಸನ್ಯಾಸಿಗಳದ್ದಾಗಿದೆ. ಶಿಸ್ತಿನಲ್ಲೂ ತಮ್ಮದೇ ಆದ ಚೌಕಟ್ಟನ್ನು ರೂಪಿಸಿಕೊಂಡ ಶ್ರೀಗಳ ಪ್ರತೀ ವ್ಯವಹಾರವೂ ಶಿಸ್ತಿನಿಂದಲೇ ಕೂಡಿದೆ, ಅನುಕರಣೀಯವಾಗಿದೆ. ಪ್ರೌಢಾವಸ್ಥೆಗೆ ಬಂದನಂತರ ಮತ್ತೆ ನಾನು ಅವರನ್ನು ತೀರಾ ಹತ್ತಿರದಿಂದ ಕಾಣಲಿಲ್ಲವಾದರೂ ಮಿಂಚಂಚೆಯ ಮುಖಾಂತರ ಅವರನ್ನು ತಲ್ಪಬೇಕು, ಒಮ್ಮೆ ಭೇಟಿಮಾಡಬೇಕು ಎಂಬ ಇಂಗಿತ ಉಳಿದುಕೊಂಡಿದೆ-ಅದನ್ನು ಮಾಡಬೇಕಾಗಿದೆ. ಅವರ ಅಧಿಕಾರ ನಿವೃತ್ತಿ ಸ್ವಲ್ಪ ಬೇಸರ ತರಿಸಿದ್ದರೂ ಅದು ಅವರ ಗುರುಗಳು ಹಾಕಿಕೊಟ್ಟ ಕ್ರಮವಾದ್ದರಿಂದ ಹಾಗೆ ಮಾಡಬೇಡಿ ಎನ್ನುವ ಅಧಿಕಾರ ನಮಗಿದೆಯೇ?  

ಬಿಸಿಲಿನಲ್ಲೂ ಬೆಳದಿಂಗಳನ್ನು ತೋರುವ ಅಗಾಧ ಪಾಂಡಿತ್ಯವನ್ನು ಗಳಿಸಿದ ಶ್ರೀಗಳ ಲಘುಹಾಸ್ಯ ಅತಿಮಧುರ! ಅಂತಹ ಒಂದು ಉದಾಹರಣೆ ಹೀಗಿದೆ: ಒಮ್ಮೆ ಸರಕಾರದ ಸರ್ವೇ ಮತ್ತು ರೆವಿನ್ಯೂ ಇಲಾಖೆಗಳ ನೌಕರರು ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ; ಹೇಳಿಕೇಳಿ ಸಂಸ್ಕೃತ ಗೊತ್ತಿಲ್ಲದ ಜನ. ಪೂಜೆಗೆ ಬಂದ ಪುರೋಹಿತರು, ಸತ್ಯನಾರಾಯಣ ಪೂಜಾಂತ್ಯದಲ್ಲಿ || ಸರ್ವೇಜನಾಃ ಸುಖಿನೋ ಭವಂತು|| ಎಂದಾಗ ರೆವಿನ್ಯೂ ಇಲಾಖೆಯ ಜನಗಳದ್ದು ಒಂದೇಸಮನೆ ಜಗಳ ಶುರುವಾಯ್ತಂತೆ. ನಾವು ಎರಡು ಇಲಾಖೆಯವರು ಸೇರಿ ನಡೆಸಿದ ಪೂಜೆ ಇದು, ಹಾಗಿದ್ದೂ ಪುರೋಹಿತರು ಸರ್ವೇಜನ ಮಾತ್ರ ಸುಖವಾಗಿರಲಿ ಎಂದು ಹೇಗೆ ಹೇಳಿದರು ಎಂಬುದೇ ಅಲ್ಲಿನ ಜಗಳದ ವಿಷಯ. ಬುದ್ಧಿವಂತ ಪುರೋಹಿತರು "ರೆವಿನ್ಯೂ ಜನಾಃ ಸುಖಿನೋ ಭವಂತು" ಎಂದು ಅವರನ್ನು ಸಮಾಧಾನಿಸಿದರಂತೆ.-ಇದು ಶ್ರೀಗಳ ಹಾಸ್ಯಪ್ರಜ್ಞೆ. ಅರ್ಥವಾಯ್ತಲ್ಲಾ?  ನಮ್ಮಲ್ಲಿ ಎಷ್ಟೋ ಜನ ನಾವು ಪೂಜೆ ಮಾಡಿಸುತ್ತೇವೆ, ಹೇಳುವ ಮಂತ್ರಗಳ ಅರ್ಥ ನಮಗೆ ತಿಳಿದಿಲ್ಲ, ಸಂಸ್ಕೃತ ಕಂಡರೆ ಬದ್ಧವೈರ! ಆದರೂ ಪೂಜೆಗೆ ಮಾತ್ರ ಸಂಸ್ಕೃತವೇ ಅನಿವಾರ್ಯ! ಇನ್ನಾದರೂ ನಾವು ಸಂಸ್ಕೃತವನ್ನು ತಕ್ಕಮಟ್ಟಿಗೆ ಕಲಿಯೋಣವೇ? ಎಂಬ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು ಶ್ರೀಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ.

ಬದುಕಿನ ಹಲವು ಮಜಲುಗಳಲ್ಲಿ ಕಷ್ಟ-ಸುಖಗಳು ಬರುತ್ತಲೇ ಇರುತ್ತವೆ. ಸೈಕಲ್ಲಿನಲ್ಲಿ ಹೋಗುವವನಿಗೆ  ಏರು-ತಗ್ಗುಗಳು ಸಿಗುವಹಾಗೇ. ಏರುಸಿಕ್ಕಾಗ ತಳ್ಳಬೇಕು, ಏದುಸಿರು! ಇಳುಕಲಿನಲ್ಲಿ ಪೆಡಲ್ ಮಾಡುವ ಅಗತ್ಯವೇ ಇಲ್ಲ, ಶ್ರಮರಹಿತ ವೇಗದ ನಡೆ. ಸಿಹಿಯನಂತರ ಕಹಿ, ಮತ್ತೆ ಸಿಹಿ, ಮತ್ತೆ ಕಹಿ. ಇದೇ ಈ ಜೀವನ. ಕಹಿಇದ್ದಾಗಲೇ ಸಿಹಿಯ ಮಹತ್ವದ ಅರಿವು ನಮಗೆ. ಅದಕ್ಕೇ ಸಾಂಕೇತಿಕವಾಗಿ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನುತ್ತೇವೆ. ಕಹಿಯೂ ಇರಲಿ, ಸಿಹಿಯೂ ಇರಲಿ ಎಂಬುದು ಅದರ ಸಂದೇಶ. ದುಃಖವನ್ನೇ ಕೊಡಬೇಡಾ ದೇವರೇ ಎನ್ನಲು ನಾವು ಅಧಿಕಾರಸ್ಥರಲ್ಲ; ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡು ಎಂಬುದು ನಮ್ಮ ಪ್ರಾರ್ಥನೆಯಾಗಿರಬೇಕು ಅಲ್ಲವೇ? ಕಷ್ಟವನ್ನು ಬಿಸಿಲಿಗೆ ಹೋಲಿಸಿದರೆ ಸುಖವನ್ನು ಬೆಳದಿಂಗಳಿಗೆ ಹೋಲಿಸಬಹುದಾಗಿದೆ. ಆದರೆ ಒಂದೇ ಒಂದು ದಿನ ಸೂರ್ಯರಶ್ಮಿ ಇರಲಿಲ್ಲಾ ಎಂದರೆ ಈ ಜಗತ್ತು ನಡೆಯುವುದಿಲ್ಲ. ಎಲ್ಲರಿಗೂ ರಜವಿದೆ, ಮೋಜಿದೆ, ಮಜವಿದೆ. ಆದರೆ ಲೋಕವನ್ನು ಬೆಳಗುವ ದಿನಮಣಿಗೆ ಮಾತ್ರ ರಜವೆಂಬುದೇ ಇಲ್ಲ. ಆ ಬಿಸಿಲು ಇದ್ದರೇನೆ ಅನೇಕ ಜೀವಿಗಳೂ ಜೀವಗಳೂ ತರುಲತೆಗಳೂ ತಮ್ಮ ಆಹಾರ ಸಿದ್ಧಪಡಿಸಿಕೊಳ್ಳಲು ಸಾಧ್ಯ. ಅಂದಾಗ ಕಷ್ಟದಲ್ಲೇ ಒಳಿತೂ ಅಡಗಿದೆ ಎಂಬುದು ಅರಿವಾಗುತ್ತದಲ್ಲಾ? ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲೂ ನಾವಿರುವ ಪ್ರದೇಶದಲ್ಲಿ ದುಷ್ಕರ್ಮಿಗಳು ಬಾಂಬ್ ಇರಿಸಿದ್ದಾರೆ ಎಂದು ಸುದ್ದಿಬಂದರೆ ನಮಗೆ ಸುಖ ಸಿಕ್ಕೀತೇ? ಸಾಧ್ಯವಿಲ್ಲ. ಅಂದಮೇಲೆ ಬೆಳದಿಂಗಳಲ್ಲೂ ಕಷ್ಟದ ಛಾಯೆ ಇರಬಹುದಲ್ಲಾ ?   


ನನಗೆ ತೀರಾ ಪರಿಚಿತರಲ್ಲದಿದ್ದರೂ ಹಲವರ ಬಾಯಿಂದ, ಫೇಸ್ ಬುಕ್ ನಿಂದ, ಸಂಯುಕ್ತ ಕರ್ನಾಟಕ ಪತ್ರಿಕೆಯಿಂದ ಪರಿಚಿತರಾದವರು ದಿ| ಡಾ| ಸತೀಶ್ ಶೃಂಗೇರಿ. ಇನ್ನೂ ೪೪ರ ವಯಸ್ಸು. ಸಾಧಿಸುವ ಕನಸುಗಳು ಹಲವಿದ್ದವು. ಸಾಧನೆಯೂ ತಕ್ಕಮಟ್ಟಿಗೆ ಆಗಿತ್ತು. ಅವರ ವ್ಯಂಗ್ಯಚಿತ್ರಗಳು ಮಾತನಾಡುತ್ತಿದ್ದವು! ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಆಯುರ್ವೇದ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಕೆಲಸಮಾಡುತ್ತಲೂ ಖಾಸಗಿಯಾಗಿ ತಾನೇ ಚಿಕ್ಕ ಚಿಕಿತ್ಸಾಲಯವನ್ನು ನಡೆಸುತ್ತಲೂ ಇದ್ದ ಸತೀಶ್ ಅವರ ಪ್ರವೃತ್ತಿ ವ್ಯಂಗ್ಯಚಿತ್ರವನ್ನು ಬರೆಯುವುದು. ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಅದಾಗಲೇ ಮನೆಮಾತಾಗಿದ್ದ ಅವರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆದವರು. ಆಸ್ತಮಾ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ವಾರದ ಹಿಂದೆ ಬೆಂಗಳೂರಿನ ಖಾಸಗೀ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರಂತೆ. ನಿನ್ನೆ ಗುರುವಾರ ಅವರು ಹೆಂಡತಿ ಮತ್ತು ಮಗನನ್ನೂ, ಅಭಿಮಾನಿಗಳಾದ-ಸ್ನೇಹಿತರಾದ ನಮ್ಮೆಲ್ಲರನ್ನೂ ಅಗಲಿದ್ದಾರೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ.  

ವ್ಯಕ್ತಿಯೊಬ್ಬ ರೂಪುಗೊಳ್ಳಲು ಬಹುಕಾಲಬೇಕು. ಅದು ಕುಂಬಾರ ಆವೆಮಣ್ಣನ್ನು ತಂದು ಹದಮಾಡಿ ಮಡಕೆ ಮಾಡಿದಂತೇ ದೀರ್ಘ ಕೆಲಸ. ಹಡೆದ ಅಪ್ಪ-ಅಮ್ಮನ ಆರೈಕೆಯಲ್ಲಿ ಹುಟ್ಟಿದಮನೆಯ ಕಷ್ಟವನ್ನೋ ಸುಖವನ್ನೋ ಹಂಚಿಕೊಂಡು ಬೆಳೆಯುವ ಮಗು ವಿಧಿಲಿಖಿತದಂತೇ ವಿದ್ಯೆಯನ್ನು ಪಡೆದುಕೊಳ್ಳುತ್ತದೆ. ಪಡೆದುಬಂದ ಭಾಗ್ಯವನ್ನು ಅನುಭವಿಸುತ್ತದೆ. ಸುಮ್ಮನೇ ಕೆಲವೊಮ್ಮೆ ವಿಚಾರಿಸುತ್ತಾ ಕುಳಿತಾಗ ನಾವು ಬಳಸುವ ಪ್ರತಿಯೊಂದು ವಸ್ತುವೂ ನೆನಪಿಗೆ ಬರುತ್ತದೆ. ಚಹಾ ಕುಡಿಯುವ ಲೋಟ, ಸ್ನಾನಮಾಡುವ ಮಗ್ಗು, ಒರೆಸಿಕೊಳ್ಳುವ ವಸ್ತ್ರ, ಬಾಚಿಕೊಳ್ಳುವ ಹಣಿಗೆ, ರೂಪನೋಡಿಕೊಳ್ಳುವ ಕನ್ನಡಿ, ಸ್ನಾನಕ್ಕೆ ನೀರು ಬಿಸಿಮಾಡಿದ ಗೀಜರ್, ಅದಕ್ಕೆ ವಿದ್ಯುತ್ತು ಸರಬರಾಜುಮಾಡಿದ ಯಂತ್ರಗಳು, ಮನೆಯಲ್ಲಿ ನೀರು ಹೊತ್ತು ಮೇಲ್ಗಡೆ ಸಾಗಿಸುವ ಪಂಪು, ಕೂತಿರುವ ಸೋಫಾ, ಮಲಗುವ ಮಂಚ, ಹೊದೆಯುವ ಹೊದಿಕೆ, ಬೀಸುವ ಫ್ಯಾನು, ಮೊಳಗುವ ಫೋನು, ಅನ್ನಕ್ಕೆ ಅಕ್ಕಿ, ಆಸೆಗೆ ಬೇಳೇಕಾಳು-ತರಕಾರಿ, ನಾನೀಗ ಬರೆಯುತ್ತಿರುವ ತಂತ್ರಾಂಶ, ಬಳಸುತ್ತಿರುವ ಗಣಕಯಂತ್ರ, ಅಂತರ್ಜಾಲ--ಈ ಎಲ್ಲದರ ಹಿಂದೆ ಒಂದು ಅಗಾಧವಾದ ಶಕ್ತಿ ಕೆಲಸಮಾಡುತ್ತದೆ!

ಶರಣವೊಗು  ಜೀವನ ರಹಸ್ಯದಲಿ ಸತ್ತ್ವದಲಿ
ಶರಣು ಜೀವನ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮನಲಿ-ಮಂಕುತಿಮ್ಮ

ಇಂತಿಂಥಾ ವ್ಯಕ್ತಿ ಇಂತಲ್ಲೇ ಹುಟ್ಟಿ ಇಂತಿಂಥಾದ್ದನ್ನೇ ಮಾಡಬೇಕು, ಇಂತಿಷ್ಟೇ ಕಾಲ ಬದುಕಬೇಕೆಂಬ ವಿಧಿಬರಹದ ಹಿಂದಿನ ಕರ್ಮಬಂಧನದ ಜಾಲದ ಬಗೆಗೆ ನಮಗೆ ಅರಿವಿಲ್ಲ! ಆದರೂ ಬಂದ ವ್ಯಕ್ತಿ ಹೋಗುವ ಮುನ್ನ ತೊಡಗಿಕೊಂಡ ಈ ಲೋಕದ ನವಿರಾದ ಭಾವಗಳು ಕೆಲವರ ಮರಣಾನಂತರವೂ ಮರಣಿಸುವುದಿಲ್ಲ. ಅಂಥವರಲ್ಲಿ ಇತ್ತೀಚೆಗೆ ನಿಧನರಾದ ರಾಜಕಾರಣಿ ಡಾ| ವಿ.ಎಸ್. ಆಚಾರ್ಯ ಒಬ್ಬರು, ಅದೇ ರೀತಿ ಡಾ| ಸತೀಶ್ ಕೂಡ ಎಲೆಮರೆಯ ಕಾಯಿಯಂತೇ ಇದ್ದರು. ತನ್ನ ಕಟುಹಾಸ್ಯ ಭರಿತ ವ್ಯಂಗ್ಯಚಿತ್ರಗಳಿಂದ ಜನಮನ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದರೂ ಬಹುಜನರನ್ನು ತಲುಪಿ ಇನ್ನೂ ಮತ್ತಷ್ಟು ಸಾಧನೆಮಾಡುವ ಮುನ್ನವೇ ಅವರನ್ನು ವಿಧಿ ಬರಹೇಳಿದೆ-ಅವರು ತೆರಳಿದ್ದಾರೆ. ಈ ಈರ್ವರ ಬ್ಲಾಗುಗಳೂ ಇನ್ನೂ ಜೀವಂತವೇ. ನಿನ್ನೆ ಒಮ್ಮೆ ’ಶೃಂಗೇರಿ ಕಾರ್ಟೂನ್’ ಬ್ಲಾಗ್ ತೆರೆದು ನೋಡಿದೆ. ಮರೆಯಲಾಗದ ಮನುಷ್ಯ! ನಂಬಲಾಗದ ಘಟನೆ. ಡಾ| ರಾಜ್ ಕುಮಾರ ಗತಿಸಿದರೇನಾಯ್ತು? ಅವರು ಚಲನಚಿತ್ರಗಳಲ್ಲಿ ಇನ್ನೂ ಅಮರ, ಅದೇ ರೀತಿ ವಿ.ಎಸ್. ಆಚಾರ್ಯರು ರಾಜಕೀಯ ಸೇವೆಗಳಿಂದ ಅಮರರು, ಸತೀಶ್ ತಮ್ಮ ಕಾರ್ಟೂನುಗಳಿಂದ ಅಮರರು. ಆದರೂ ಎಳವೆಯಲ್ಲೇ ಹೋಗಿಬಿಟ್ಟರೆ ಅದು ತರುವ ಮಾನವಸಹಜ ನೋವು ತುಸು ಅಸಹನೀಯ. ಅದು ಮೋಹವೋ ವ್ಯಾಮೋಹವೋ ಭಾವವೋ ಬಂಧವೋ ಯಾವುದೇ ಆಗಿರಲಿ, ಬೋಗಿಯಲ್ಲಿ ಹೊರಟ ಸಹಪ್ರಯಾಣಿಕನೊಬ್ಬ ಗಮ್ಯಕ್ಕೂ ಮೊದಲೇ ಕೈಬೀಸಿ ಎಲ್ಲಿಗೋ ಇಳಿದು ಹೋದಂತೇ, ನೋಡುತ್ತಿರುವ ನಾಟಕದ ಪಾತ್ರಧಾರಿಯೊಬ್ಬ ಪಾತ್ರಮುಗಿಯುವ ಮುನ್ನವೇ ಬಣ್ಣದಮನೆಯಲ್ಲೆಲ್ಲೋ ಅಡಗಿಹೋದಂತೇ  ಎಲ್ಲಿಗೆ ಹೋಗುವರೆಂಬ ಗುರುತು ಸಿಗಲಾರದ ಜಾಗಕ್ಕೆ ತೆರಳಿಬಿಡುವ ಈ ಸನ್ನಿವೇಶದಲ್ಲಿ ಮಾನವಸಹಜ ಅಗಲಿರಲಾರದ ಆಪ್ತ ಭಾವಗಳು ಎದ್ದೆದ್ದು ಕುಣಿಯುತ್ತವೆ, ನಮ್ಮರಿವಿಗೇ ಇರದೇ ಕಣ್ಣಾಲಿಗಳು ತುಂಬಿ ನೀರು ಹೊರಹರಿಯುತ್ತದೆ. ಇದಲ್ಲವೇ ಈ ಬದುಕಿನ ಬಿಸಿಲು ಬೆಳದಿಂಗಳು ? ನಮಸ್ಕಾರ.     


Wednesday, September 26, 2012

ಕಾರ್ಯಗತಗೊಳಿಸುವ ಮುನ್ನ ಯೋಚನೆಯಿರಲಿ; ವಿವೇಚನೆಯಿರಲಿ


ಚಿತ್ರಋಣ: ಅಂತರ್ಜಾಲ
ಕಾರ್ಯಗತಗೊಳಿಸುವ ಮುನ್ನ ಯೋಚನೆಯಿರಲಿ; ವಿವೇಚನೆಯಿರಲಿ

ಒಂದೂರಲ್ಲಿ ಅಗಸನೊಬ್ಬನಿದ್ದ. ಆತ ಕತ್ತೆಯೊಂದನ್ನು ಸಾಕಿದ್ದ. ಅದರ ಹೆಸರು ಉದ್ಧಟ. ಉದ್ಧಟ ಕೃಶಕಾಯನಾಗಿದ್ದ. ಪ್ರತಿನಿತ್ಯ ಒಡೆಯನ ಕೆಲಸದಲ್ಲಿ ಮಣಭಾರದ ಬಟ್ಟೆಯ ಮೂಟೆಗಳನ್ನು ಹೊತ್ತು ಸಹಕರಿಸುತ್ತಿದ್ದ-ಉದ್ಧಟ. ಒಡೆಯ ನೀಡುವ ಆಹಾರ ಆತನಿಗೆ ಸಾಲುತ್ತಿರಲಿಲ್ಲ; ಈ ವಿಷಯದಲ್ಲಿ ಉದ್ಧಟ ಮನದಲ್ಲೇ ನೊಂದಿದ್ದ. ರಾತ್ರಿಯ ಹೊತ್ತು ಸುತ್ತಲ ಹೊಲಗದ್ದೆಗಳಿಗೆ ಹೋಗಿ ಸಿಕ್ಕಿದ್ದನ್ನು ಕದ್ದು ತಿನ್ನುತ್ತಿದ್ದ. ಬೆಳಗಾಗುವುದರೊಳಗೆ ಮನೆಗೆ ಬಂದುಬಿಡುತ್ತಿದ್ದ. ಒಮ್ಮೆ ಹೀಗೇ ರಾತ್ರಿ ಹೊರಟಾಗ ನರಿಯಣ್ಣನೊಬ್ಬ ಆತನಿಗೆ ಎದುರಾದ. ನರಿಗೂ ಹೊಟ್ಟೆ ಹಸಿದಿತ್ತು. ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳುವ ಗುರಿಹೊಂದಿದ್ದರಿಂದ ಇದೊಂಥರಾ ||ಸಮಾನ ಶೀಲೇಷು ವ್ಯಸನೇಷು ಸಖ್ಯಮ್|| ಅನ್ನೋ ಹಾಗೇ ಇಬ್ಬರೂ ಸ್ನೇಹಿತರಾದರು. ಆಹಾರ ಹುಡುಕುತ್ತಾ ಹೋದವು. ಅಲ್ಲೊಂದು ಸೌತೇ ತೋಟ ಕಂಡಿತು. ಬೇಲಿಹಾರಿ ನಿಧಾನಕ್ಕೆ ಒಳಗೆ ಹೋಗಿ ಕತ್ತಲಲ್ಲೇ ಸೌತೇಕಾಯಿಗಳನ್ನು ಹೊಟ್ಟೆತುಂಬಾ ಮೆದ್ದವು. ಉದ್ಧಟನಿಗೆ ಅಪಾರ ಸಂತೋಷವಾಯ್ತು. "ದಿನಾ ಇಲ್ಲೇ ಬರೋಣ" ಎಂದು ನರಿಯಣ್ಣನ ಕೂಡ ಹೇಳಿದ. ನರಿಯಣ್ಣಕೂಡ ತಲೆ ಅಲ್ಲಾಡಿಸಿದ. 

ಕಾಲ ಕಳಿಯಿತು. ಕೆಲವೇ ದಿನಗಳಲ್ಲಿ ಉದ್ಧಟ ಮೈಕೈ ತುಂಬಿಕೊಂಡು ಒಳ್ಳೇ ದಪ್ಪಗಾದ; ದಪ್ಪಗಾಗಿದ್ದಕ್ಕೆ ಕಾರಣಮಾತ್ರ ಯಾರಿಗೂ ತಿಳಿಯಲಿಲ್ಲ! ಹೀಗೇ ಒಂದು ರಾತ್ರಿ ಯಥಾವತ್ತಾಗಿ ಸೌತೇತೋಟಕ್ಕೆ ಹೋದ. ಸ್ನೇಹಿತ ನರಿಯಣ್ಣನೂ ಜೊತೆಯಾದ. ಇಬ್ಬರೂ ಯಥೇಚ್ಛ ಸೌತೇಕಾಯಿ ಕಬಳಿಸಿ ತೇಗಿದವು. ಹೊಟ್ಟೆತುಂಬಿದಮೇಲೆ ಉದ್ಧಟನಿಗೆ ಎಲ್ಲಿಲ್ಲದ ಆನಂದ ಉಕ್ಕೇರಿ ಹಾಡುವ-ನರ್ತಿಸುವ ಮನಸ್ಸಾಯ್ತು! ಅದನ್ನಾತ ಸ್ನೇಹಿತ ನರಿಯಣ್ಣನ ಹತ್ತಿರ ಹೇಳಿಕೊಂಡ. ನರಿಯಣ್ಣ "ಅಯ್ಯೋ ಪುಣ್ಯಾತ್ಮ, ಅಕಸ್ಮಾತ್ ನೀನು ಹಾಡತೊಡಗಿದರೆ  ಕಾಯಲು ಹೊಲದಲ್ಲಿ ಮಲಗಿರುವ ಕಾವಾಲುಗಾರನಿಗೆ ಎಚ್ಚರವಾಗುತ್ತದೆ. ಎಚ್ಚರಗೊಂಡ ಕಾವಲುಗಾರ ಅಟ್ಟಿಸಿಕೊಂಡು ಬಂದು ನಮ್ಮನ್ನು ಥಳಿಸಿ ಸಾಯಿಸುತ್ತಾನೆ. ಕೇಳು ನನ್ನ ಮಾತು. ನೀನು ಇನ್ನೆಲ್ಲಾದರೂ ಹಾಡುವೆಯಂತೆ, ಇಲ್ಲಿಮಾತ್ರ ಹಾಡಬೇಡ" ಎಂದು ಸಲಹೆ ನೀಡಿದ. ಉದ್ಧಟನಿಗೆ ನರಿಯಣ್ಣನ ಮಾತು ಹಿಡಿಸಲಿಲ್ಲ. ಅವನ ಮನಸ್ಸಿನಲ್ಲಿ ಹತ್ತಿಕ್ಕಲಾರದಂಥಾ ಹಾಡುವ ಆಸೆ ಮೇಲೆದ್ದುಬಂದಿತ್ತು. ಹಾಡದೇ ತಾಳಲಾರೆನೆಂದ. ಮತ್ತೆ ನರಿಯಣ್ಣ "ಬೇಡಾ" ಎಂದ. ಇದು ಸಾಕಷ್ಟು ಸರ್ತಿ ನಡೆಯಿತು. ಎಷ್ಟೇ ಬೇಡಾ ಎಂದರೂ "ನನಗಾದ ಸಂತೋಷವನ್ನು ಅನುಭವಿಸಲು ಹಾಡುವುದೇ ಸೈ ಎಂದ ಉದ್ಧಟ ಈಗ ಹಾಡಿಯೇ ಬಿಡುತ್ತೇನೆ" ಎಂದ. " ಆಯ್ತು ಮಾರಾಯಾ, ಒಂದು ಕೆಲಸಮಾಡು, ನೀನು ಹಾಡುವುದಕ್ಕೂ ಮುನ್ನ ನಾನು ಬೇಲಿಯನ್ನು ಹಾರಿ ಹೊಲದಿಂದ ಹೊರಕ್ಕೆ ಹೋಗಿ ನಿಂತು ನಿನಗಾಗಿ ಕಾಯುತ್ತೇನೆ. ನಾನು ಹಾಗೆ ಆಚೆಹೋದಮೇಲೆ ನೀನು ಹಾಡಬಹುದು" ಎಂದ ನರಿಯಣ್ಣ ಉದ್ಧಟನ ಉತ್ತರಕ್ಕೂ ಕಾಯದೇ ಬೇಲಿ ಹಾರಿ ಆಚೆ ನಿಂತ.

ಉದ್ಧಟನ ಸಂಗೀತ ಕಛೇರಿ ಆರಂಭವಾಯ್ತು. ಆಹಹಾ ಈ ಜಗತ್ತೆಷ್ಟು ಸುಂದರ ಎಂದುಕೊಂಡು ಉದ್ಧಟ ಹಾಡೇ ಹಾಡಿದ. ಹೊಲದ ಇನ್ನೊಂದು ಕಡೆಯಲ್ಲಿ ಮಲಗಿದ್ದ ಕಾವಲುಗಾರನಿಗೆ ವಿಚಿತ್ರ ಕೂಗು ಕೇಳಿ ಎಚ್ಚರವಾಯ್ತು. ಆಲಿಸುತ್ತಾನೆ ಗರ್ದಭ ಸಂಗೀತರಸಧಾರೆ ! "ನಮ್ಮ ಸೌತೇ ತೋಟದಲ್ಲಿ ಇಷ್ಟು ದಿನ ಕಾಯಿಗಳನ್ನು ತಿನ್ನುತ್ತಿದ್ದ ಕತ್ತೆ ನೀನೇಯೋ ಇರು ಮಾಡಿಸ್ತೀನಿ" ಎಂದು ಹಲ್ಲುಕಡಿದ ಕಾವಲುಗಾರ ಕೈಯ್ಯಲ್ಲಿ ದೊಣ್ಣೆಹಿಡಿದು ಬೆಕ್ಕಿನ ಹೆಜ್ಜೆಯಿಟ್ಟು ಉದ್ಧಟ ಇರುವೆಡೆಗೆ ಬಂದ. ಹಾಡುವಿಕೆಯಲ್ಲಿ ತನ್ಮಯನಾಗಿ ಲೋಕವನ್ನೇ ಮರೆತಿದ್ದ ಉದ್ಧಟನಿಗೆ ಸೊಂಟ ಮುರಿದುಹೋಗುವ ಹಾಗೇ ನಾಕು ರುಯ್ಯರುಯ್ಯನೇ ಬಿದ್ದಾಗಲೇ ಎಚ್ಚರ! " ಅಯ್ಯಯ್ಯೋ ಸಾಕಪ್ಪಾ ಸಾಕು ಸಾಕಪ್ಪಾ ಸಾಕು" ಎಂದು ತನ್ನದೇ ಕೂಗಿನಲ್ಲಿ ಹೇಳಿದ ಉದ್ಧಟನಿಗೆ ಜೀವ ಉಳಿದಿದ್ದೇ ದೊಡ್ಡದು. "ಇನ್ನೇನಾದ್ರೂ ಬಂದ್ರೆ ಜೀವ ಸಹಿತ ಬಿಡೋದಿಲ್ಲ ನಿನ್ನ, ಬಾ ಮತ್ತೆ ಮಾಡ್ತೀನಿ" ಎಂದ ಕಾವಲುಗಾರ ಮಾತನ್ನು ಕೇಳುತ್ತಾ, ತಾಳಲಾರದ ನೋವನ್ನು ಹೇಗೋ ಸಹಿಸಿಕೊಂಡು ಸಾವರಿಸಿಕೊಳ್ಳುತ್ತಾ ಬೇಲಿಯ ಹೊರಗೆ ಬಂದ ಉದ್ಧಟನನ್ನು ಬೇಸರದಿಂದಲೇ ನೋಡಿದ ನರಿಯಣ್ಣ. "ಗೆಳೆಯಾ, ನೋಡಪ್ಪಾ , ನಾನು ನಿನಗೆ ಸಾಕಷ್ಟು ಸಲ ಹೇಳಿದ್ದೆ. ಈಗ ಇಲ್ಲಿ ಹಾಡಬೇಡ, ಕಾವಲುಗಾರ ಬಿಡುವುದಿಲ್ಲಾ ಎಂದು, ನೀನು ಕೇಳಲಿಲ್ಲ. ನಾಳೆಯಿಂದ ಹೊಟ್ಟೆಗೂ ಇಲ್ಲ" ಎಂದ. ನರಿಯಣ್ಣನ ಮಾತು ಈಗ ನಿಜವೆನಿಸಿತು ಉದ್ಧಟನಿಗೆ. ತಪ್ಪುಮಾಡಿಬಿಟ್ಟೆ ಎನಿಸಿದ್ದರೂ ಗೆಳೆಯನ ಸಲಹೆಯನ್ನು ಆಲೋಚಿಸಿ ನೋಡದೇ ಏಕಾಏಕಿ ಹಾಡಲು ತೀರ್ಮಾನಿಸಿ ಹಾಡಿಬಿಟ್ಟಿದ್ದ. ಹಾಡಿದ್ದಕ್ಕೆ ವಾರ ಸಾಕಾಗುವಷ್ಟು ಅಸಾಧ್ಯ ನೋವು! ರಾತ್ರಿ ಕಳೆದು ಬೆಳಗಾದರೆ ಮತ್ತೆ ಮೂಟೆ ಹೊರಬೇಕು. ಉದ್ಧಟನ ಕಣ್ಣಲ್ಲಿ ಧಾರಾಕಾರ ನೀರು. ಇನ್ನುಮುಂದೆ ಯೋಚಿಸದೇ ಏನನ್ನೂ ಕಾರ್ಯಗತಗೊಳಿಸುವುದಿಲ್ಲಾ ಎಂದು ಮನದಲ್ಲೇ ಅಂದುಕೊಂಡನಾತ.

ವಿದೇಶೀ ಬಂಡವಾಳ ಧಾರಾಳವಾಗಿ ಬರುವಾಗ, ವಿದೇಶೀ ಮಳಿಗೆಗಳು ಭಾರತಕ್ಕೆ ಲಗ್ಗೆ ಇಡಲು ಪ್ರಯತ್ನಿಸುತ್ತಿರುವಾಗ ಹಿಂದೆಮುಂದೆ ಯೋಚಿಸದೇ ಕಾಂಗೈ ಸರಕಾರ ಅನುಮತಿಸುತ್ತಿರುವುದನ್ನು ನೋಡಿದರೆ ಈ ಕಥೆಯ ನೆನಪಾಗುತ್ತದೆ. ಉದ್ಧಟನ ಪಟ್ಟವನ್ನು ಸನ್ಮಾನ್ಯ ಮನಮೋಹನ ಸಿಂಘರಿಗೆ ಕೊಡುವುದೋ ಸೋನಿಯಾ ಗಾಂಧಿಗೆ ಕೊಡುವುದೋ ಇನ್ನೂ ತೊಳಲಾಟದಲ್ಲಿದ್ದೇನೆ! ಖೋತಾಬಿದ್ದ ಖಜಾನೆ ಭರ್ತಿಗೆ ದಾರಿಯನ್ನು ಕಂಡ ಭರದಲ್ಲಿ ’ಅನುಮತಿಸುತ್ತೇವೆ’ ಎಂಬ ಹಾಡುಹಾಡುತ್ತಿದ್ದಾರೆ. ಇಲ್ಲಿ ಭಾರತವೇ ಸೌತೇ ತೋಟ, ಪ್ರಜೆಗಳೇ ಕಾವಲುಗಾರರು. ಪ್ರಜೆಗಳು ನಿದ್ದೆಮಾಡುತ್ತಿದ್ದಾರೆ ಎಂಬುದಕ್ಕೆ ಇಂಧನ ತೈಲಗಳೂ ಸೇರಿದಂತೇ ಎಲ್ಲದರ ಬೆಲೆಯೇರಿಕೆಯೇ ಸಾಕ್ಷಿಯಾಗುತ್ತದೆ; ಈ ಬೆಲೆಯೇರಿಕೆ ಒಂದಲ್ಲಾ ಎರಡಲ್ಲಾ...ತಿಂಗಳಿಗೊಮ್ಮೆಯಂತೂ ಕಾಯಮ್ಮಾಗಿ ಏರುತ್ತಲೇ ಇದೆ. ಸಿಂಘರು ಹಣದುಬ್ಬರದ ಕಾರಣ ಕೊಡುತ್ತಾರೆ. ಭಾರತೀಯರು ಯೋಚಿಸಬೇಕಾದ ಕಾಲ ಬಂದಿದೆ-ಇನ್ನೂ ಇಂತಹ ಕೆಟ್ಟ ಆಡಳಿತ ನೀಡುವ ಬ್ರಷ್ಟ ರಾಜಕಾರಣಿಗಳು ನಮಗೆ ಬೇಕೇ? ಇಲ್ಲಾ ದೇಶಭಕ್ತರನ್ನು ಅನುಮೋದಿಸಿ ಅವರಿಂದ ಹೊಸದೊಂದು ಸರಕಾರ ರಚಯಿತವಾಗುವುದಕ್ಕೆ ಅನುಕೂಲ ಕಲ್ಪಿಸಿಕೊಡಬೇಕೇ ಎಂಬುದನ್ನು ನಿಶ್ಚಿತವಾಗಿಯೂ ಚಿಂತಿಸಬೇಕಾಗಿದೆ.

ವಿದೇಶೀಯರ್ಯಾರೋ ಬರುತ್ತಾರೆ-ನಮ್ಮ ಉದ್ಧಾರಕ್ಕಾಗಿ ಬರುತ್ತಾರೆ ಎಂಬುದು ತಪ್ಪುಕಲ್ಪನೆ. ಕೇವಲ ೫-೬ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯ ಸ್ಥಿತಿ ಬದಲಾಗಿ ಹೋಗುತ್ತದೆ; ಸುಮಾರು ೨.೫ ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅವರನ್ನು ಅವಲಂಬಿಸಿದ ಜನ ಸೇರಿದಂತೇ ಒಟ್ಟೂ ೨೦ ಕೋಟಿ ಜನಸಂಖ್ಯೆ ಉದ್ಯೋಗ ರಹಿತವಾಗುತ್ತದೆ. ಎಲ್ಲಿಗೆ ಹೋಗಬೇಕು? ಯಾವ ರೀತಿಯಲ್ಲಿ ಅವರು ದುಡಿಮೆ ಮಾಡಬೇಕು? ಈಗಾಗಲೇ ಗೃಹಕೈಗಾರಿಕೆಗಳು, ಕುಲಕಸುಬುಗಳೂ ನೆಲಕಚ್ಚಿವೆ, ಸಣ್ಣಕೈಗಾರಿಕೆಗಳಿಗೂ ಜಾಗತಿಕ ಮಾರುಕಟ್ಟೆಯ ಪೈಪೋಟಿಯ ಬಿಸಿ ತಟ್ಟಿದೆ. ವಿದೇಶೀ ಕಂಪನಿಗಳು ಆರಂಭದಲ್ಲಿ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಬಹುದು, ಆದರೆ ಅದು ಶಾಶ್ವತವಲ್ಲ, ಕಾಲಾನಂತರ ಬೆಲೆಯಲ್ಲಿ ಹಿಡಿತವಿರುವುದಿಲ್ಲ; ಅವರು ಹೇಳಿದಷ್ಟು ಕೊಟ್ಟು ಖರೀದಿಸಬೇಕಾಗುತ್ತದೆ ಯಾಕೆಂದರೆ ಇನ್ನೆಲ್ಲೂ ಪರ್ಯಾಯ ವ್ಯಾಪಾರಸ್ಥರು ಆಗ ಇರುವುದಿಲ್ಲ!  

ಇನ್ನೊಂದು ಕಥೆಯೊಂದಿಗೆ ಈ ಕಥೆಯನ್ನು ಮುಕ್ತಾಯಮಾಡಿದರೆ ಒಳಿತೆನಿಸುತ್ತದೆ, ಇದು ನೀವು ಕೇಳಿದ್ದೇ ಕಥೆ: ಒಂದಾನೊಂದು ಕಾಲದಲ್ಲಿ ಅನೇಕ ಪಾರಿವಾಳಗಳಿದ್ದ ಒಂದು ಗುಂಪು ಆಹಾರವನ್ನರಸಿ ಹೊರಟಿತ್ತು. ಅವುಗಳಲ್ಲಿನ ರಾಜ ಅವುಗಳನ್ನು ನಿರ್ದೇಶಿಸುತ್ತಿದ್ದ. ಬಹುದೂರ ಹಾರಿದಣಿದ ಪಾರಿವಾಳಗಳಿಗೆ ಆಹಾರ ಸಿಗಲೇ ಇಲ್ಲ. ಸುಸ್ತಾಗಿ ಕುಳಿತ ಅವುಗಳಿಗೆ "ಇಷ್ಟೆಲ್ಲಾ ದೂರ ಕ್ರಮಿಸಿದ್ದೇವೆ, ತುಸುದೂರ ಹಾರಿದರೆ ಏನಾದರೂ ಸಿಗಬಹುದೆಂಬ ವಿಶ್ವಾಸ ನನಗಿದೆ, ಪ್ರಯತ್ನಿಸಿ" ಎಂದ ರಾಜನ ಮಾತಿಗೆ ಅವು ಒಪ್ಪಿ ಮತ್ತೆ ಹಾರಿದವು. ದೂರದಲ್ಲಿ ಆಲದಮರದ ಕೆಳಗಡೆ ಕಾಳುಗಳು ಹೇರಳವಾಗಿ ಬಿದ್ದಿದ್ದನ್ನು ಕಂಡವು. ಅಲ್ಲಿಗೆ ಧಾವಿಸಿ ಇಳಿದು ಕಾಳುತಿನ್ನಬೇಕೆನ್ನುವಷ್ಟರಲ್ಲಿ ಮೇಲಿನಿಂದ ದೊಡ್ಡದಾದ ಬಲೆಯೊಂದು ಬಿತ್ತು! ಕ್ಷಣಮಾತ್ರದಲ್ಲಿ ಅವು ಬೇಟೇಗಾರನ ಬಲೆಯಲ್ಲಿ ಸಿಕ್ಕಿಬಿದ್ದಿದ್ದವು. ಬೇಟೇಗಾರ ದೂರದಲ್ಲಿ ನಡೆದುಬರುವುದು ಕಾಣಿಸುತ್ತಿತ್ತು. ಇನ್ನೇನು ಎಲ್ಲಾ ಪಾರಿವಾಳಗಳೂ ತಮ್ಮ ಕಥೆ ಮುಗಿಯಿತು ಎಂದುಕೊಂಡವು.

ಪಾರಿವಾಳಗಳ ರಾಜ ಬಹಳ ಚಾಣಾಕ್ಷನಾಗಿದ್ದ. ಎಂತಹ ಗಂಡಾಂತರ ಪ್ರಸಂಗಗಳಲ್ಲಿಯೂ ವಿವೇಚಿಸಿ ನಡೆಯುವ ಚಾಕಚಕ್ಯತೆಯನ್ನು ಆತ ಹೊಂದಿದ್ದ. ಆತ ಹೇಳಿದ "ನೋಡೀ ಗೆಳೆಯರೇ, ನಾವೆಲ್ಲಾ ಬದುಕಲು ದಾರಿಯೊಂದೇ ಇದೆ. ನಾವು ಎಲ್ಲರೂ ಒಟ್ಟಾಗಿ ಒಮ್ಮೆಲೇ ಈ ಬಲೆಯನ್ನು ಹೊತ್ತುಕೊಂಡೇ ಹಾರಬೇಕು. ಹಾಗಾದರೆ ಮಾತ್ರ ನಾವು ತಪ್ಪಿಸಿಕೊಳ್ಳಲು ಸಾಧ್ಯ." ರಾಜನ ಮಾತು ಮತ್ತು ಸನ್ನೆಯನ್ನು ಅರಿತ ಪಾರಿವಾಳದ ತಂಡ ಹಾಗೇ ಮಾಡಿತು. ಬೇಟೇಗಾರ ಬಲೆಯನ್ನೇ ಎತ್ತಿಕೊಂಡು ಹಾರುತ್ತಿರುವ ಪಾರಿವಾಳಗಳನ್ನು ನೋಡಿ ಹುಚ್ಚನಂತೇ ಅರಚಿದ, ಅವುಗಳ ಬೆನ್ನಹಿಂದೇ ಓಡತೊಡಗಿದ. ಪಾರಿವಾಳಗಳು ಎಲ್ಲೂ ಕೆಳಗಿಳಿಯಲಿಲ್ಲ. ಬೆಟ್ಟ ಕಣಿವೆಗಳನ್ನು ದಾಟಿ ಬಹುದೂರ ಬಂದು ಇನ್ನೇನು ಬೇಟೇಗಾರ ತನ್ನ ಪ್ರಯತ್ನ ಕೈಬಿಟ್ಟ ಎಂಬುದು ಖಾತ್ರಿಯಾದಾಗ ಪಾರಿವಾಳಗಳ ರಾಜ ಹೇಳಿದ" ಇನ್ನು ನಾವು ತುಸು ವಿಶ್ರಮಿಸಿಕೊಂಡು ಪಕ್ಕದ ಪಟ್ಟಣಕ್ಕೆ ಹೋಗೋಣ, ಅಲ್ಲಿ ನನ್ನ ಮಿತ್ರ ಇಲಿಯೊಬ್ಬನಿದ್ದಾನೆ. ಆತ ಬಲೆಯನ್ನು ಕತ್ತರಿಸಿ ನಮ್ಮನ್ನು ಪಾರುಮಾಡುತ್ತಾನೆ" ಕೆಲಹೊತ್ತಿನ ಬಳಿಕ ಅವು ಹಾಗೇ ಮಾಡಿದವು. ಎತ್ತರದ ದೇವಸ್ಥಾನವೊಂದರ ಪಕ್ಕದ ಬಿಲದೆದುರು ದೊಪ್ಪೆಂದು ಹಾರಿ ಕುಳಿತ ಸದ್ದಿಗೆ ಇಲಿ ಒಳಸೇರಿಕೊಂಡಿತು.

 " ಅರೇ ಮಿತ್ರಾ ಇಲಿಯಾ, ನಾನು ಬಂದಿದ್ದೇನೆ...ಪಾರಿವಾಳಗಳ ರಾಜ" ಎಂಬ ಮಾತು ಕೇಳಿ ಇಲಿ ಹೊರಗೆ ಬಂತು. " ಅಯ್ಯೋ ಮಿತ್ರಾ ನೀನು ಇಲ್ಲಿ ? ಇದೆಲ್ಲಾ ಹೇಗೆ?"-ಕೇಳಿತು ಇಲಿ. ಇಲಿಗೆ ನಡೆದ ವೃತ್ತಾಂತವನ್ನು ಅರುಹಿ, ಬಲೆಯನ್ನು ಬಾಯಿಂದ ಕಡಿದು ತಮ್ಮನ್ನು ಬಿಡಿಸುವಂತೇ ಕೇಳಿತು ಪಾರಿವಾಳಗಳ ರಾಜ. ಒಪ್ಪಿದ ಇಲಿ ಪಾರಿವಾಳಗಳ ರಾಜ ಕುಳಿತ ಕಡೆಯಲ್ಲಿ ಬಲೆಯನ್ನು ಕಡಿಯತೊಡಗಿತು. "ಹೇಯ್ ಮೊದಲು ನನ್ನ ಅನುಚರರನ್ನು ಮುಕ್ತಗೊಳಿಸು...ರಾಜನಾದವನಿಗೆ ಅನುಚರರು ಚೆನ್ನಾಗಿದ್ದರೇ ತೃಪ್ತಿ, ಅದಿಲ್ಲದೇ ರಾಜ ಹೇಗೆ ಸಂತಸದಿಂದಿದ್ದಾನು? ನನ್ನ ಮಿತ್ರರನ್ನೇ ಮೊದಲು ಮುಕ್ತಗೊಳಿಸು... ಎಲ್ಲರನ್ನೂ ಬಿಡಿಸಿದಮೇಲೆ ನನ್ನನ್ನು ಬಿಡಿಸು."  ಪಾರಿವಾಳದ ರಾಜನ ಮಾತನ್ನು ಕೇಳಿದ ಇಲಿ ಗೆಳೆಯನ ಔದಾರ್ಯವನ್ನೂ ಆದರ್ಶವನ್ನೂ ಕೊಂಡಾಡಿತು ಮತ್ತು ಇತರ ಪಾರಿವಾಳಗಳು ಇದ್ದೆಡೆ ಬಲೆಯನ್ನು ಮೊದಲು ಕಡಿದು ಅವುಗಳನ್ನು ಬಿಡುಗಡೆಗೊಳಿಸಿತು. ಕೊನೆಯಲ್ಲಿ ರಾಜನೂ ಆಚೆಬಂದ. ಪಾರಿವಾಳಗಳೆಲ್ಲಾ ಇಲಿಗೆ ತಮ್ಮ ಅನಂತ ಕೃತಜ್ಞತೆಗಳನ್ನು ತಿಳಿಸಿ ಅಲ್ಲಿಂದ ತಮ್ಮೂರ ಕಡೆಗೆ ಬೀಳ್ಕೊಂಡವು.

ನೋಡುವುದಕ್ಕೆ ಅಂತಹ ಮಹಾ ದೊಡ್ಡದೇನೂ ಅಲ್ಲದಿದ್ದರೂ ವಿಷ್ಣುಶರ್ಮನೆಂಬಾತ ಬರೆದ ’ಪಂಚತಂತ್ರ’ದ ಇಂತಹ ಕಥೆಗಳು ಇವತ್ತಿಗೂ ನೀತಿಬೋಧಕವೇ. ಈ ಕೊನೆಯ ಕಥೆಯಲ್ಲಿ ಪಾರಿವಾಳಗಳು ಈ ದೇಶದ ಪ್ರಜೆಗಳು. ಬೇಟೇಗಾರರು ವಿದೇಶೀ ವ್ಯವಹಾರಸ್ಥರು! ನಮ್ಮಲ್ಲಿ ಹಾಲಿ ಇರುವ ರಾಜರಿಗೆ ತಲೆ ಸರಿ ಇರುವಹಾಗೇ ಕಾಣುತ್ತಿಲ್ಲ! ರಾಜರ ಹುಡುಕಾಟದಲ್ಲೇ ನಾವಿದ್ದೇವೆ ಎಂದರೆ ತಪ್ಪಲ್ಲ. ನಮ್ಮ ಸಹಾಯಕ್ಕೆ ಬರುವುವುದು ಚುನಾವಣೆ ಎಂಬ ಇಲಿಮಾತ್ರ. ಆದರೆ ಚುನಾವಣಾ ಇಲಿಯನ್ನು ತಲ್ಪುವವರೆಗೆ ಹಾರುವುದಕ್ಕಾಗಿ ಆದೇಶಿಸುವ ರಾಜ ನಮಗಿಲ್ಲದ ನಿಮಿತ್ತ ನಮಗೆ ನಾವೇ ಹೇಳಿಕೊಂಡು ಒಟ್ಟಿಗೇ ಹಾರಬೇಕಾಗಿದೆ; ವಿದೇಶೀಯರು ಬೀಸುವ ಬಲೆಯಿಂದ ತಪ್ಪಿಸಿಕೊಳ್ಳಬೇಕಾಗಿದೆ; ಬದುಕಿಕೊಳ್ಳಬೇಕಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಈ ದೇಶದ ಆರ್ಥಿಕ ಸ್ಥಿತಿಯನ್ನೇ ಅಡವಿಡಲು ಮುಂದಾಗುತ್ತಿರುವ ಜನರನ್ನು ತಹಬಂದಿಗೆ ತರುವುದು ನಮ್ಮೆಲ್ಲರ ಆದ್ಯತೆಯಾಗಬೇಕಾಗಿದೆ. ಭಾರತ ಬಡರಾಷ್ಟ್ರವಲ್ಲ, ಇಲ್ಲಿ ಬೇಕಾದಷ್ಟು ಹಣವಿದೆ-ಅದು ಕೆಲವೇ ಜನರ ಸೊತ್ತಾಗಿ ಸ್ವಿಸ್ ಬ್ಯಾಂಕಿನಲ್ಲಿದೆ. ಮೇಲಾಗಿ ದೇಶವ್ಯಾಪೀ ತುಂಬಿಕೊಂಡ ದೇಶದ್ರೋಹಿಗಳ ತಂಡ ನಕಲೀ ನೋಟುಗಳನ್ನು ಹೇರಳವಾಗಿ ಚಾಲನೆಗೆ ಬಿಟ್ಟಿದೆ. ಪಾಕಿಸ್ತಾನ ಪ್ರೇರಿತ ಭಾರತೀಯ ಮೂಲದ ತಂಡಗಳು ಬಾಂಗ್ಲಾದ ಕಡೆಯಿಂದ ಖೋಟಾನೋಟುಗಳನ್ನು ಒಳಕ್ಕೆ ತರುತ್ತಿದ್ದಾವೆ! ಜೊತೆಗೇ ಇರುವ ಹಲವು ವ್ಯಾಘ್ರಗಳ ಮುಖಮಾತ್ರ ಗೋವಿನದಾಗಿದೆ! ಎಲ್ಲಿಯವರೆಗೆ ಇದನ್ನೆಲ್ಲಾ ನಿಲ್ಲಿಸಲು ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಹಣದುಬ್ಬರ ಕಮ್ಮಿ ಆಗುವುದಿಲ್ಲ. ಎಲ್ಲಿಯವರೆಗೆ ಬ್ರಷ್ಟಾಚಾರ ಮತ್ತು ವೋಟ್ ಬ್ಯಾಂಕ್ ರಾಜಕಾರಣ ನಿಲ್ಲುವುದಿಲ್ಲವೋ ಅಲ್ಲೀವರೆಗೆ ಇಂತಹ ಕೃತ್ಯಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ! ನಿಜವಾದ ದೇಶಭಕ್ತರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಸಿಕ್ಕಿದ ಸ್ವಾತಂತ್ರ ಮತ್ತೆ ಪಾರತಂತ್ರ್ಯವಾಗಲಿದೆ. ಕೇವಲ ನಮ್ಮ ವೈಯ್ಯಕ್ತಿಕ ಹಿತಾಸಕ್ತಿಗಳನ್ನೊಂದೇ ಪರಿಗಣಿಸದೇ ಸಮಷ್ಟಿಯಲ್ಲಿ ದೇಶಪ್ರಜ್ಞೆ ಜಾಗೃತವಾಗಬೇಕಾಗಿದೆ. ದೇಶಭಕ್ತರೇ ನೀವು ಮಾತಾಡಿ, ಯಾರ ಕೈಗೆ ನಮ್ಮ ಮುಂದಿನ ಆಳ್ವಿಕೆ ನೀಡಬೇಕು? ಈಗಿರುವ[ಎಲ್ಲಾಪಕ್ಷಗಳಲ್ಲೂ] ಕಳ್ಳರೇ ಬೇಕೇ? ಅಥವಾ ದೇಶಭಕ್ತರ ಹೊಸದೊಂದು ದಂಡು ಸಿದ್ಧವಾಗಬೇಕೆ? ಸಮಯ ಕಡಿಮೆ ಇದೆ; ನಿರ್ಧಾರ ತ್ವರಿತವಾಗಿ ಆಗಬೇಕಾಗಿದೆ. 


Monday, September 24, 2012

ಬೇಕು ಕೃಷ್ಣಚಂದ್ರಮ

 ಚಿತ್ರಋಣ : ಅಂತರ್ಜಾಲ
ಬೇಕು ಕೃಷ್ಣಚಂದ್ರಮ 

ಬೇಕು ಬೇಕು ಬೇಕು ರಾಧೆ ಬೇಕು ಕೃಷ್ಣಚಂದ್ರಮ
ಸಾಕೆನ್ನಲು ಸಾಧ್ಯವಿಲ್ಲ ಲೋಕಕದುವೆ ಸಂಭ್ರಮ !
ನಾಕದಿಂದ ಭುವಿಗೆ ಬಂದು ಆ ಕರುಣಿಯು ರಥದಿ ನಿಂದು
ಚಾಕರಿಗಳ ಬಿಡಿಸಿ ಪೇಳ್ದ ಸಾಕಾರ ವಿಹಂಗಮ || ಪ ||

ಪೀಕುತಿರುವ ದುಷ್ಟಜನರ ನೂಕಿ ಪಾತಾಳದೆಡೆಗೆ
ದೇಖರೇಖಿ ನೋಡಿಕೊಳಲು ವಾಸುದೇವ ಸತತವೂ
ಬಾಕಿಯಿರುವ ಕಷ್ಟಗಳನು ನಾಕು ನಾಕು ಕೈಗಳಿಂದ
ಸೋಕಿಸುತ್ತ ಹರಿಸಿ ಹರಿಯು ಹರಣ ಹಸನುಗೊಳಿಸಲು  || ೧ ||

ತಾಕಿಸುತ್ತ ಬೆರಳ ತುದಿಯ ತಪ್ಪಿಸಿ ಅರಿ ಶರದ ಗುರಿಯ
ಚಾಕಚಕ್ಯತೆಯನು ಮೆರೆವ ಶ್ರೀ ಮುರಾರಿ ಮುದದೊಳು
ತೇಕಿದಣಿದು ಇಹವ ತೊರೆವ ಪೂತನಿಗಳ ಹಾಲುಕುಡಿಯೆ
ಪಾಖಂಡೀ ದಂಡು ನಡುಗೆ ಆ ಮಾಧವ ಭರದೊಳು || ೨ ||

ಪಾಕದಚ್ಚುಬೆಲ್ಲ ಉಂಡೆ ರಾಶಿರಾಶಿಯರಳ ಕಂಡೆ
ಸಾಕಷ್ಟಿದೆ ತಿನ್ನಗೊಡಲಖಂಡ ಭರತವರ್ಷದಿ
ಮೂಕ ಅರ್ಜಿ ಹಿಡಿದುಬಂದೆ ಯಾಕೆ ಬಾರನೆಂದುಕೊಂಡೆ
ಲೋಕನಾಯಕನಿಗೆ ಕಾದೆ ಬದುಕಿ ಬಹಳ ವರ್ಷದಿ || ೩ ||



Wednesday, September 19, 2012

"ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ; ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ-ನೀ ಹೋಗಿ ಅಲ್ಲಿ ಫಲವಿಲ್ಲ"


ಚಿತ್ರಋಣ: ಅಂತರ್ಜಾಲ
"ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ; ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ-ನೀ ಹೋಗಿ ಅಲ್ಲಿ ಫಲವಿಲ್ಲ"

ಪ್ರಾಕೃತಿಕ ವೈಭವದ ಹಿಮಾದ್ರಿ ಗಿರಿಶಿಖರಗಳು. ಅಲ್ಲಿ ಜನಿಸಿದವಳು ಗಿರಿ-ಜಾ; ಪರಶಿವನನ್ನು ಒಲಿಸಿ ಶಿವೆಯಾದಳು. ಶಿವೆಗೆ ಸತತವೂ ಕೈಲಾಸದಲ್ಲಿ ಕೆಲಸ. ಜಗತ್ತಿಗೆ ಪಿತನಾದ ಶಿವನ ಅರ್ಧಾಂಗಿಯಾದಮೇಲೆ ಕೇಳಬೇಕೇ? ಒಂದೇ ಒಂದು ದಿನದಲ್ಲಿ ಕೆಲಭಾಗವೂ ತನಗೇ ಎಂದುಕೊಳ್ಳುವಷ್ಟೂ ತೆರಪಿಲ್ಲ! ಬಿಡುವಿಲ್ಲದ ಕೆಲಸಗಳ ನಡುವೆ ಹೆಣ್ಣು ಪಾರ್ವತಿಯ ಮನಸ್ಸು ತನ್ನಪ್ಪನ ಮನೆಯಲ್ಲಿ ನಡೆಯುವ ಅದ್ಧೂರೀ ಹಬ್ಬದ ಕಡೆಗೆ ಹೊರಳುತ್ತದೆ. ಭಾದ್ರಪದ ಶುದ್ಧ ಚೌತಿಯಂದು ಅಪ್ಪನಮನೆಯಲ್ಲಿ ಸಡಗರವೋ ಸಡಗರ! ಎಲ್ಲೆಲ್ಲೂ ಬಾಳೆ-ಮಾವಿನ ತೋರಣ, ರಂಗವಲ್ಲಿ, ದೂರ್ವೆ-ಹೂವುಗಳ ಮಾಲೆ, ನೂರಾರು ವಿಧದ ಭಕ್ಷ್ಯಗಳ ಸಿದ್ಧತೆ, ವೇದಮಂತ್ರಗಳ ಘೋಷ, ಇಂಪಾದ ವಾದ್ಯಗಳು, ಅದ್ಭುತ ಸಂಗೀತ-ನರ್ತನ-ಗಾಯನ ವಗೈರೆ, ಗಣನಾಮ ಸಂಕೀರ್ತನೆ..........ಹೀಗೇ ಅದು ಹೇಳಿ ಮುಗಿಯುವ ಪರಿಯಲ್ಲ. ಗಿರಿರಾಜ ಆಚರಿಸುವ ಅಂತಹ ಅದ್ಭುತ ಹಬ್ಬದ ಒಂದು ದಿನಕ್ಕಾಗಿ ದಿನಮುಂದಾಗಿ ಗೌರೀತದಿಗೆಯ ದಿನ ಭೂಮಿಗೆ ಹೋಗಿ ಮಾರನೇದಿನ ಮರಳುತ್ತೇನೆ ಎಂಬುದು ಶಿವನಲ್ಲಿ ಶಿವೆಯ ಬಿನ್ನಹ. ಶಂಕರನೋ ಶಂಕರಿಯನ್ನು ಬಿಟ್ಟಿರಲಾರ; ಅವನಿಗೆ ನಿಂತರೆ-ಕೂತರೆ-ನಡೆದರೆ ಎಲ್ಲೆಲ್ಲೆಯೂ ಶಕ್ತಿ ಬೇಕೇ ಬೇಕು. ಶಕ್ತಿ ಇಲ್ಲದಿದ್ದರೆ ಕೆಲಸವಾಗುವುದಾದರೂ ಎಂತು? ಅಲ್ಲವೇ? ಸ್ವತಃ ಶಕ್ತನಾದರೂ ಶಕ್ತಿಯ ಅವಲಂಬನೆ ಬಹಳವಾಗೇ ಇದೆ. ಹೀಗಾಗಿ ಎಷ್ಟೇ ವಿಜೃಂಭಣೆ ಇದ್ದರೂ ಗೌರಿಯನ್ನು ತವರಿಗೆ ಕಳಿಸಲು ಒಲ್ಲೆ ಎನ್ನುತ್ತಾನೆ ಗೌರ!

ನೀ ಹೋದ ಹಾದಿಯಲಿ ಗಂಧ ತೇಯುವರಿಲ್ಲ;
ದೇವರಿಗೆ ದೀಪ ಮೊದಲಿಲ್ಲ ಸಿರಿಗೌರೀ
ನೀ ಹೋಗಿ ಅಲ್ಲಿ ಫಲವಿಲ್ಲ

"ಏನು ಹೇಳುತ್ತಿದ್ದೀಯಾ ಪ್ರಿಯೆ ಗೌರೀ ? ನೀನು ತವರಿಗೆ ಹೋದರೆ ಇಲ್ಲಿ ನನಗೆ ಪೂಜೆಗೆ ಅಣಿಮಾಡಿಕೊಡುವವರಾರು? ದೇವರಿಗೆ ದೀಪ ಮುಡಿಸುವವರಾರು? ಗಂಧ ತೇಯ್ವವರಾರು? ನಿನ್ನ ತವರಿನಲ್ಲಿ ಅದೆಷ್ಟೇ ಸಡಗರವಿದ್ದರೂ ನೀನು ಹೀಗೆ ಮನೆಯನ್ನು ದಿನಗಟ್ಟಲೇ ತೊರೆದು ಹಾಗೆ ಅಲ್ಲಿಗೆ ಹೋಗಲು ನನ್ನ ಮನಸ್ಸು ಒಪ್ಪದಲ್ಲಾ, ನೀನಲ್ಲಿಗೆ ಹೋಗಿ ಪ್ರಯೋಜನವಿಲ್ಲಾ, ನೀನಿಲ್ಲೇ ಇರು " ಎಂಬುದು ಪರಮೇಶ್ವರನ ಹಠ. ಹೇಗಾದರೂ ಮಾಡಿ ತನನ್ನು ಎರಡುದಿನದ ಮಟ್ಟಿಗೆ ಅನುಮತಿಸಬೇಕೆಂಬುದು ಪರಮೇಶ್ವರಿಯ ಅಪೇಕ್ಷೆ.  ವಾದ-ಪ್ರತಿವಾದಗಳ ಕುರಿತ ೧೫ ನಿಮಿಷಗಳ ಊದ್ದದ ಹಾಡನ್ನು ಅಜ್ಜಿ ರಾಗವಾಗಿ ಹಾಡುವಾಗ ನಾವೆಲ್ಲಾ ಮಕ್ಕಳು ಕೇಳುತ್ತಿದ್ದೆವು; ಜಗನ್ಮಾತೆಯ ತವರಿನ ಪ್ರೀತಿಗೆ ಮತ್ತು ಜಗತಃಪಿತನ ಕಳಿಸಿಕೊಡಲಾಗದ, ಬಿಟ್ಟಿರಲಾಗದ ಅನಿವಾರ್ಯತೆಯ ಕಥೆಗೆ ಮುಗ್ಧರಾದ ನಮ್ಮಗಳ ಮನಸ್ಸಿನಲ್ಲಿ ನಮ್ಮ ತಾಯಿ-ತಂದೆಯರೇ ಈ ರೀತಿ ವಾದಮಾಡಿಕೊಳ್ಳುತ್ತಿದ್ದಾರೋ ಎಂಬ ಅನಿಸಿಕೆ. ಇಡೀ ಆ ವಾತಾವರಣ ಭಾವನಾಮಯ; ಅದು ಗೌರೀತದಿಗೆ! ಭುವಿಗೆ ಸ್ವರ್ಣಗೌರಿಯನ್ನು ಕರೆದು ಪೂಜಿಸುವ ದಿನ! ಪರಮೇಶ್ವರನಿಗೂ ದೇವರ ಪೂಜಾ ಕೈಂಕರ್ಯವಿದೆಯೇ? ಎಂದರೆ ಪರಬ್ರಹ್ಮನೊಬ್ಬನನ್ನುಳಿದು ಮಿಕ್ಕೆಲ್ಲಾ ದೇವರಿಗೂ ಅಂತಹ ಕಾರ್ಯಗಳಿವೆ; ತ್ರಿಮೂರ್ತಿಗಳೂ ಪರಬ್ರಹ್ಮನ ಆರಾಧಕರು ಮತ್ತು ಸ್ವಯಂ ಪರಬ್ರಹ್ಮನಷ್ಟೇ ಶಕ್ತರೂ ಕೂಡ; ಇದು ಪರಾತ್ಪರತೆ. 

ಮೇಲೆ ಹೇಳಿದ ಇಂತಹ ಹಾಡುಗಳು ಇವತ್ತಿಗೆ ಲಭ್ಯವಿಲ್ಲ; ಅಜ್ಜಿಯಂದಿರೊಂದಿಗೇ ಕಾಲವಾಗಿಹೋದ ಹಾಡುಗಳು, ಕಥೆಗಳು ಅವೆಷ್ಟೋ! ಅಂತಹ ದಿವ್ಯ-ಭವ್ಯ ಸಂಸ್ಕಾರದಾಯೀ ತಾಯಿಯರಿಗೆ ನನ್ನ ನಮನಗಳನ್ನು ಸಲ್ಲಿಸುವುದರೊಂದಿಗೆ ಸ್ವರ್ಣ ಗೌರಿಗೂ ನನ್ನ ನಮಸ್ಕಾರಗಳು. ಹುಂಡುಗುತ್ತಿಗೆ ಹಿಡಿದವರಂತೇ ಏನು ಭಟ್ಟರು ಇಂಥದ್ದನ್ನೇ ಬರೆದು ಓದಲು ಕರೆಯುತ್ತಾರಲ್ಲಾ ಎಂಬ ಮನಸ್ಥಿತಿ ಬೇಡ; ಯಾಕೆಂದರೆ ಇಂಥದ್ದನ್ನು ಹೇಳಲೂ ನಮ್ಮಂತಹ ಕೆಲವುಜನ ಬೇಕು. ಭಾದ್ರಪದ ಶುದ್ಧ ತದಿಗೆ-ಚೌತಿಯ ಸಮಯದಲ್ಲಿ, ಹೊಲ-ಗದ್ದೆ-ತೋಟ-ಗುಡ್ಡ-ಬೆಟ್ಟ ಎಲ್ಲೆಲ್ಲೂ ಹಸಿಸ್ರು ತುಂಬಿದ ವಾತಾವರಣ ನಮ್ಮ ಕರಾವಳಿಯಲ್ಲಿ. ಸೊಂಪಾಗಿ ಬೆಳೆದ ಭತ್ತದ ಗದ್ದೆಗಳ ನಡುವೆ ದೂರದಲ್ಲಿ, ಗದ್ದೆ ಹಾಳಿ[ಗದ್ದೆ ಮಧ್ಯೆ ನಡೆಯಲು ಬಿಟ್ಟುಕೊಂಡಿರುವ ಕಿರಿದಾದ ಬದುವು]ಗಳ ಮೇಲೆ, ಅಡಕೆ ತೋಟದ ಅಂಚುಗಳಲ್ಲಿ ಹಾದುಬರುವ ಚಿಕ್ಕಹಾದಿಯಲ್ಲಿ, ಗುಡ್ಡ-ಬೆಟ್ಟಗಳ ಇಳಿಜಾರಿನಲ್ಲಿ ಕಾಣುವ ಕಾಲುದಾರಿಯಲ್ಲಿ ಎಲ್ಲೋ ಗೌರೀ-ಗಣೇಶರು ನಡೆದುಬಂದಂತೇ ಭಾಸ! ಮಯ್ಯೆಲ್ಲ ರೋಮಾಂಚನ!! ಅದೇ ಜಾಗಗಳಲ್ಲಿ ಹುಟ್ಟಿಕೊಳ್ಳುವ ದೂರ್ವೆಗಳನ್ನು ಸಂಗ್ರಹಿಸಲು ನಾವು ಮಕ್ಕಳು ಸಾಗಿರುತ್ತಿದ್ದೆವು. ಗೌರಮ್ಮನ ಹೂವು, ಚಂಡು[ಗೊಂಡೆ] ಹೂವು, ಡೇರೇ ಹೂವು, ಅಮೇಲೆ ಕೋಟೆ ಹೂವು[ಹಳದೀ ಬಣ್ಣದ ತುಸು ದೊಡ್ಡ ಹೂವು], ಕರವೀರ ಹೂವು, ಜಾಜಿ-ಮಲ್ಲಿಗೆ-ಇರುವಂತಿಗೆ-ಸೇವಂತಿಗೆ ಒಂದೆರಡೇ? ಎಲ್ಲವೂ ಈ ಹಬ್ಬಕ್ಕೆ ಅಣಿಯಾಗಬೇಕು.

ಜೊತೆಗೆ ದೇವರಮುಂದೆ ಅಂಗೋಡಂಗ [ಸಿಗುವ ಎಲ್ಲಾ] ಫಲಗಳಿಂದ ಫಲಾವಳಿ ಕಟ್ಟುತ್ತಿದ್ದರು ಹಿರಿಯರು; ಅಲ್ಲಿ ನಾವು ಕರಸೇವಕರು! ತೆಂಗಿನಕಾಯಿಂದ ಆರಂಭ; ಎಷ್ಟೆಂದರೂ ಅದು ಶ್ರೀಫಲ ಅಲ್ಲವೇ?  ಹೀರೆಕಾಯಿ, ಹಾಗಲಕಾಯಿ, ಗೆಣಸಿನ ಗೆಡ್ಡೆ, ಪಡುವಲಕಾಯಿ, ಮಾದಲಕಾಯಿ, ಬೆಂಡೆ, ಬದನೆ, ಚಪ್ಪರ ಬದನೆ[ಸೀಮೇ ಸೌತೆ], ಸೌತೇಕಾಯಿ, ಮಂಗಳೂರು ಸೌತೇಕಾಯಿ[ಮೊಗೇಕಾಯಿ], ದಾಳಿಂಬೆ, ಹಲಸು[ಅಪರೂಪಕ್ಕ ಸಿಕ್ಕರೆ], ಪಟ್ಟಣದಿಂದ ತಂದ ಮೂಸಂಬಿ, ಸೇಬು, ಜಾಯಿಕಾಯಿ, ಕಬ್ಬು, ವೀಳೆಯದೆಲೆ-ಹಣ್ಣಡಕೆ, ಅಡಕೆ ಶಿಂಗಾರ, ಮಾವಿನ ಎಲೆ, ಹಲವು ವಿಧದ ಸೋಡಿಗೆಗಳು, ಎಲೆಕೋಸು, ಬೇರು ಹಲಸು, ಕೆಸು[ಕೆಸವೆ],

" ತಮ್ಮಾ ಮತ್ತೆಂಥಾ ಬಿಟ್ಟೆ ನೋಡು "

ಎಂಬ ಮಾತಿಗೇ ಪ್ರಜ್ಞೆ ಬಂದಂತಾಗುತ್ತಿತ್ತು, ಇಲ್ಲದಿದ್ದರೆ ನಮ್ಮ ಲೋಕವೇ ಬೇರೆ! ನಮ್ಮಲೋಕದಲ್ಲಿ ಅಮ್ಮ-ಮಗ ನಡೆದು ಬರುತ್ತಿರುವ ಚಿತ್ರವೇ ಸದಾ! ನಮ್ಮಂತಹ ಒಬ್ಬ ಬಾಲಕ ಅಮ್ಮನ ಸೇವೆಮಾಡುತ್ತಾ, ಅಪ್ಪನ ಸವಾರಿ ಮನೆಗೆ ಬಂದಾಗ ಬಾಗಿಲು ಬಿಡದೇ ಹತನಾದಾಗ ನಮ್ಮ ಕಣ್ಣಲ್ಲೂ ಧಾರಾಕಾರ ನೀರು!  ಸತ್ತ ಬಾಲಕನಿಗೆ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿದ್ದ ಗಜೇಂದ್ರನೆಂಬ ಆನೆಯ ತಲೆ! ಅಲ್ಲಿ ಮತ್ತೆ ಜೀವ-ಆತ ಗಣಗಳಿಗೇ ದೈವ! ಪುಟ್ಟನ ಸಾಹಸಗಾಥೆಯನ್ನು ನೋಡಬಂದವರು ಆತನನ್ನು ಸೋಲಿಸಲಾಗದೇ ಅಪ್ಪನನ್ನು ಕಳಿಸಿ ಹಿಂಭಾಗದಿಂದ ತ್ರಿಶೂಲದಿಂದ ತಿವಿದು ವಧಿಸಿದ್ದ ಆ ಬಾಲಕ ಮತ್ತೆ ಕುಳಿತ! ದೇವಾನುದೇವತೆಗಳಿಂದ ತಲಾ ಒಂದೊಂದು ಉಡುಗೊರೆ; ದಿವ್ಯಾಸ್ತ್ರಗಳ-ದಿವ್ಯ ಶಕ್ತಿಗಳ ನೀಡುವಿಕೆ. ಇಂಥಾ ಬಾಲಕ ಅಮ್ಮನೊಟ್ಟಿಗೆ ಸಾದಾ ಸೀದಾ ನಡೆದುಬರುವ ಚಿತ್ರಣ ನಮ್ಮ ಮನಗಳಲ್ಲಿ. ಆತ್ಮಲಿಂಗವನ್ನು ಧರೆಗಿಳಿಸಿಕೊಟ್ಟು ತಲೆಯಮೇಲೆ ರಾವಣನಿಂದ ಗುದ್ದು ತಿಂದಿದ್ದನಂತೆ! ವ್ಯಾಸರ ಎದುರಲ್ಲಿ ಕೂತು ಗೀರ್ವಾಣ ಲಿಪಿಯಲ್ಲಿ ಮಹಾಭಾರತವನ್ನು ಬರೆದು ಅದು ಪಂಚಮವೇದವಾಗಲಿ ಎಂದು ಹರಸಿದ್ದನಂತೆ! ಪುಟಾಣಿಯಾಗಿದ್ದ ಶ್ರೀಕೃಷ್ಣನನ್ನು ತನ್ನ ತೊಡೆಯಮೇಲೆ ಕೂರಿಸಿಕೊಂಡು ಉಂಡೆ-ಚಕ್ಕುಲಿ-ಮೋದಕ ಇತ್ತನಂತೆ!ಭಕ್ತರ ಮನೆಯಲ್ಲಿ ಹೊಟ್ಟೆಬಿರಿ ಉಂಡು, ಮೂಷಿಕವೇರಿ ಹೊರಟು ಗದ್ದೆ ಹಾಳಿಯಮೇಲೆ ಸಾಗುವಾಗ ಮೂಷಿಕಕ್ಕೆ ಕಾಲುಜಾರಿ ಈ ಗಣಪ ಬಿದ್ದನಂತೆ-ಮೇಲಿನಿಂದ ನೋಡಿದ ಚಂದ್ರ ನಕ್ಕನಂತೆ-ಹೊಟ್ಟೆರಿಪೇರಿಗೆ ಹಾವುಸಿಕ್ಕಿತಂತೆ-ಎಡದಾಡೆ ಹಲ್ಲನ್ನು ಮುರಿದು ಬೀಸಿದಾಗ ಚಂದ್ರ ತತ್ತರಿಸಿಹೋದನಂತೆ! "ಭಾದ್ರಪದ ಶುಕ್ಲ ಚತುರ್ಥಿಯ ದಿನ ನಿನ್ನನ್ನು ಯಾರೋ ನೋಡದೇ ಹೋಗಲಿ-ನೋಡಿದವರಿಗೆ ಕಳಂಕ ತಟ್ಟುವಂತಾಗಲಿ" ಎಂದು ಶಪಿಸಿಬಿಟ್ಟನಂತೆ! ---ನೋಡಿ ಇಲ್ಲೇ ನಾವು ಸ್ವಲ್ಪ ವೀಕು! ಚೌತಿಯ ದಿನ ಜಾಗಟೆ ಹಿಡಿದು ಮೂರ್ತಿ ತರುವುದಕ್ಕೆ ಹೋಗಲೂ ಅನುಮಾನ-ಎಲ್ಲಾದರೂ ಅಪ್ಪಿತಪ್ಪಿ ಚಂದ್ರ ಕಂಡುಬಿಟ್ಟರೆ ನಮ್ಮ ಗತಿಯೇನು-ನಮ್ಮ ಕಥೆಯೇನು!    

ಹಿರಿಯರು ಹೇಳಿಬಿಟ್ಟಿದ್ದರು "ನೋಡ್ರೋ ಪೋರಗಳಾ ಚೌತೀದಿನ  ಚಂದ್ರನನ್ನು ನೋಡಬಾರದು. ನೋಡದ್ರೆ ಕಳ್ಳ-ಸುಳ್ಳ-ಮಳ್ಳ ಎಂಬೆಲ್ಲಾ ಅಪವಾದ ಬರ್ತದೆ." ಸಾದಾ ದಿನ ಆ ಬಗ್ಗೆ ಎಂದೂ ತಲೆಕೆಡಿಸಿಕೊಂಡವರಲ್ಲವೇ ಅಲ್ಲ. ಚಂದ್ರ "ನೋಡು" "ನೋಡು" ಎಂದು ಎದುರಾ ಎದುರೇ ಬಂದರೂ "ಓ  ಅದೇನ್ ಮಹಾ ಯಾವಾಗ್ಲೂ ನೋಡಿದ್ದೇ ಬಿಡು" ಅಂದ್ಕೊಂಡು ಸಾಗಿದವರು ನಾವು, ಆದರೆ ಮಹಾಚೌತಿಯ ದಿನಮಾತ್ರ ನಮಗೆ ಹೊರಗೆ ಹೋಗಲಿಕ್ಕೇ ಭಯ! "ಹಗಲುಹೊತ್ತಿನಲ್ಲೇ ಮೋಡದ ಮರೆಯಲ್ಲಿ ಎಲ್ಲೋ ಇದ್ದುಬಿಡುತ್ತಾನೆ, ಹೇಳೋದಕ್ಕೆ ಬರೋದಿಲ್ಲ" ಎಂದಿದ್ದರು. ಆತ ಎಲ್ಲಿದ್ದಾನೆ ಎಂಬ ಬಗ್ಗೆ ತಿಳಿದಿಲ್ಲ; ಯಾರೂ ಹೇಳುವವರಿಲ್ಲ ಯಾಕೆಂದರೆ ಯಾರೂ ನೋಡಿರುವುದಿಲ್ಲ. "ನೋಡ್ರೋ ನೋಡೇ ಬಿಡ್ತೇನೆ ಅಂತ ಸುಬ್ರಾಯ ನೋಡ್ದ; ಮಾರನೇ ವರ್ಷವೇ ಜನ ಅವ್ನಿಗೆ ’ಕಳ್ಳ’ ಅಂದ್ರು. ಅಂವ ಕಳ್ಳಾ ಏನಲ್ಲ ಪಾಪ ಕದ್ದವರು ಬೇರೇ ಯಾರೋ ಆದ್ರೂ ಅತನ ಕಥೆ ಏನಾಯ್ತು ನೋಡಿ" ಸುಬ್ರಾಯ ಕಳ್ಳನೆನಿಸಿದ ಕಥೆಕೇಳಿದ್ದ ನಮಗೆ ಜಂಘಾಬಲವೆಲ್ಲಾ ಉಡುಗಿ ಹೋಗಿತ್ತು; ಮಾರ್ಯಾದೆ ಪ್ರಶ್ನೆ ಮಾರಾರ್ಯೆ! ಹೀಗಾಗಿ ಚೌತಿ ದಿನ ಏನು ಚೌತಿ ಕಳೆದು ಮಾರನೇ ದಿನವೂ ನಾವು ಆಕಾಶದ ಕಡೆಗೆ ಮುಖ ಎತ್ತಿದವರಲ್ಲ, "ತಡೀರಿ ಪಾಸಾಗಿ ಹೋಗ್ಬುಡ್ಲಿ" ಅಂದ್ಕೊಂಡು ಇನ್ನೊಂದಿನ ತಡವಾಗಿಯೇ ನೋಡೋಣ ಏನಾಯ್ತೀಗ ಅಂತ ಸುಮ್ಮನಾದ ಜನ. ಅಕಸ್ಮಾತ್ ಚಂದ್ರ ಕಂಡುಬಿಟ್ಟರೆ ಪರಿಹಾರ ಇತ್ತೆಂಬುದನ್ನು ಯಾರೂ ಹೇಳಿರಲೇ ಇಲ್ಲ; ಯಾಕೆಂದರೆ  ನಮ್ಮ ಇವತ್ತಿನ ಮಕ್ಕಳ ಹಾಗಲ್ಲ-ಆವತ್ತೆಲ್ಲಾ ಹಿರಿಯರು ಹೇಳಿದ್ದಕ್ಕೆ ವಿರುದ್ಧವಾಗಿ ಹೋಗದ ಮಕ್ಳು ನಾವು. ನಂತರ ಒಮ್ಮೆ ಯಕ್ಷಗಾನದಲ್ಲೇ ಗೊತ್ತಾಗಿದ್ದು "ಸ್ಯಮಂತಕೋಪಾಖ್ಯಾನ ಅರ್ಥಾತ್ ಜಾಂಬವತಿ ಪರಿಣಯ" ನೋಡಿದಾಗ! ಇವತ್ತಾದರೆ "ಓ ಪರವಾಗಿಲ್ಲ ಬಿಡಿ...ಸುಂದರಿ ಸತ್ಯಭಾಮೆ ಕೃಷ್ಣನ ಮಡದಿಯಾದಳಲ್ಲಾ....ನಮಗೂ ಸತ್ಯಭಾಮೆ ಸಿಗಬಹುದು ನೋಡೋಣ" ಎಂಬ ವಿತಂಡಿಗಳೂ ಇರಬಹುದು! ಫಕ್ಕನೆ ನೀವು ಯಾರಾದ್ರೂ ನೋಡಿದ್ರೆ ಇರಲಿ ಅಂತ ಒಂದು ಶ್ಲೋಕ ಹೇಳಿಕೊಡ್ತೇನೆ ಕೇಳಿ[ಪ್ರಯೋಗಶೀಲರಾಗಬೇಡಿ, ಇದು ಅನಿವಾರ್ಯವಾಗಿ ಕಂಡಿದಕ್ಕೆ ಮಾತ್ರ ಎಮರ್ಜೆನ್ಸಿ ಮಾತ್ರೆ ಅಷ್ಟೇ.]:

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೊಧೀಃ ತವ ಹ್ಯೇಶಃ ಸ್ಯಮಂತಕಃ ||

ಮಹಾಚೌತಿಯ ಮರುದಿನ ಋಷಿಪಂಚಮಿ. ಇಲಿ ಪಂಚಮಿ ಎಂದೂ ನಮ್ಮಲ್ಲಿ ಕರೆಯುತ್ತಾರೆ. ಇವತ್ತಿನ ಮಹಾನಗರಿಗರ ಮನೆಗಳಲ್ಲಿ ನಡೆಸಿದಂತೇ ನಮ್ಮಲ್ಲಿ ಗಣಪನಿಗೆ ಒಂದೇ ಪೂಜೆಯಲ್ಲ. ಬಣ್ಣದ ಗಣಪನನ್ನು ಇಡುವ ಮಂದಿ ೨,೩,೫,೭,೯,೧೦ ಹೀಗೇ ಶಕ್ತ್ಯಾನುಸಾರ ಹಾಗೇ ಇರಿಸಿಕೊಂಡು ನಿತ್ಯವೂ ಮಧ್ಯಾಹ್ನ, ಸಾಯಂಕಾಲ ಪೂಜೆ ನಡೆಸುತ್ತಾರೆ. ಕೆಲವೊಮ್ಮೆ ಅನಿವಾರ್ಯತೆಗಳಲ್ಲಿ ಮಹಾಚೌತಿಯ ಮಾಧ್ಯಾಹ್ನದ ಒಂದೇ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುವುದಿದೆ; ಕೆಲವರಲ್ಲಿ ಮಾತ್ರ ಇದೇ ಸಂಪ್ರದಾಯವೂ ಇದೆ. ಹಿಂದೆಲ್ಲಾ ಗಣಪತಿ ಹಬ್ಬವನ್ನು ಆಚರಿಸುವುದರ ಜೊತೆಗೆ ಲೋಭಿಗಳಿಗೆ ಗಣಪತಿ  ಹಬ್ಬ ಆಚರಿಸಲು ಕಲಿಸುವ ಜಾದೂ ನಡೆಯುತ್ತಿತ್ತು! ಕಾಸನ್ನೇ ಬಿಚ್ಚದ ’ಜುಗ್ಗ’ ಎನಿಸಿಕೊಂಡವರ ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಯ ಮುಂದೆ, ಚೌತಿಯ ದಿನ ಬೆಣಚುಬಿಡುವುದಕ್ಕೂ ಮುನ್ನ ಗಣಪತಿ ವಿಗ್ರಹ, ಪೂಜೆ ಸಾಮಾನು ಇತ್ಯಾದಿಯಾಗಿ ತಂದಿಟ್ಟು ಊದಬತ್ತಿ ಹಚ್ಚಿ ಹೋಗಿಬಿಡುತ್ತಿದ್ದರು! ಯಾರೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ! ನಮ್ಮಕಡೆ ಒಂದು ಶಾಸ್ತ್ರವಿದೆ-ಗಣಪತಿ ವಿಗ್ರಹ ಮನೆಗೆ ಒಮ್ಮೆ ತಂದಮೇಲೆ ಮತ್ತೆ ಪ್ರತೀವರ್ಷ ತಂದು ಪೂಜೆ ಮಾಡಬೇಕು ಎಂದು. ಕಂಡಿದ್ದಕ್ಕೆ ಅನಿವಾರ್ಯವಾಗಿ ಮನೆಯೊಳಗೆ ತರದೇ, ತುಳಸಿಯ ಮುಂದೆಯೇ ಒಂದೇ ಪೂಜೆ ಸಲ್ಲಿಸಿ, [ಪರಸ್ಪರ ಸಾಗಹಾಕುವ ರೀತಿ] ವಿಸರ್ಜಿಸುವ ಲೋಭಿಗಳೂ ಇದ್ದರು!        

ನಮ್ಮಲ್ಲಿ ಆಗೆಲ್ಲಾ ಕಾಡುಗಳು ಹೇರಳವಾಗಿದ್ದವು. ನಮ್ಮ ತಂದೆಯ ಎಳವೆಯಲ್ಲಂತೂ ಕೊಟ್ಟಿಗೆಗೇ ಹುಲಿ ಬರುತ್ತಿತ್ತು! ದನಕರುಗಳನ್ನು ಕಾಯಲು ಪ್ರತ್ಯೇಕ ಜನ ಇರುವ ಕಾಲ ಅದಾಗಿತ್ತು. ನಮ್ಮ ಬಾಲ್ಯದಲ್ಲೂ ನಮ್ಮಲ್ಲಿ ಕೊಟ್ಟಿಗೆಗೆ ಹಸಿರು ಸೊಪ್ಪು ಹರಡುವ ಪದ್ಧತಿ ಇತ್ತು. ದನಗಳು ಪ್ರತಿನಿತ್ಯ ಗೋಮಾಳಕ್ಕೆ ತೆರಳಿದಮೇಲೆ, ಕೊಟ್ಟಿಗೆಯ ಸಗಣಿಯನ್ನೆಲ್ಲಾ ತೆಗೆದು, ಹೊಸದಾಗಿ ತಂದಿದ್ದ ಹಸಿರು ಸೊಪ್ಪು,[ಮಳೆಗಾಲದಲ್ಲಿ], ತಿಳಿಹಳದಿ ಕರಡ[ಗುಡ್ಡದಲ್ಲಿ ಮಳೆಗಾಲದಲ್ಲಿ ಬೆಳೆಯುವ ಒಂದು ಜಾತಿಯ ಹುಲ್ಲು-ಚಳಿಗಾಲದಲ್ಲಿ], ದರಕು [ಒಣಗಿ ಉದುರಿದ ಎಲೆಗಳು-ಬೇಸಿಗೆಯಲ್ಲಿ] ಹೀಗೇ ಹರಡುವ/ಹಾಸುವ ಪದ್ಧತಿ ಇತ್ತು. ಚೌತಿ ಮಳೆಗಾಲದಲ್ಲೇ ಬರುವುದರಿಂದ ಆ ಸಮಯದಲ್ಲಿ ನಿತ್ಯ ಕೊಟ್ಟಿಗೆಗೆ ಹಸಿರು ಸೊಪ್ಪು ಹಾಸುತ್ತಿದ್ದರು. ಆದರೆ ಋಷಿಪಂಚಮಿಯ ದಿನಮಾತ್ರ ಹೊಸದಾಗಿ ಹಸಿರು ಸೊಪ್ಪನ್ನು ಕೊಯ್ದು ತರುತ್ತಿರಲಿಲ್ಲ. ಋಷಿಗಳು ತಪಸ್ಸು ಮಾಡುವುದು ಸಾಮಾನ್ಯವಾಗಿ ಕಾಡುಗಳಲ್ಲಿ. ಕಾಡಿನ ಸಸ್ಯಗಳ, ಪೊದೆಗಳ ನಡುವೆ ಯಾವ ಋಷಿ ಅದೆಲ್ಲಿ ತಪಸ್ಸಿಗೆ ಕೂತಿರುತ್ತಾನೋ ಗೊತ್ತಿಲ್ಲವಲ್ಲಾ? ಅಂತಹ ಮಹನೀಯರಿಗೆ ಗೌರವಾರ್ಪಣೆ ಸಲ್ಲಿಸುವ ಸಲುವಾಗಿ ವರ್ಷದಲ್ಲಿ ಈ ಒಂದುದಿನ ಭೂಮಿಯಲ್ಲಿ [ನಮ್ಮಲ್ಲಿ] ಗಿಡ-ಮರಗಳನ್ನು ಕಡಿಯುವ/ಕತ್ತರಿಸುವ ಕೆಲಸವನ್ನು ಮಾಡುತ್ತಿರಲಿಲ್ಲ. ಋಷಿಪಂಚಮಿಯಂದು ಗಣಪತಿಯ ಉತ್ಸವಕ್ಕೇ ಪ್ರಾಮುಖ್ಯತೆ ನೀಡಲಾಗುತ್ತದೆ. ಪರಸ್ಪರರ ಮನೆಗಳಲ್ಲಿ ಕೂರಿಸಿರುವ ಗಣೇಶನನ್ನೂ ಅವನಿಗಾಗಿ ಅಲಂಕರಿಸಿರುವ ಮಂಟಪಗಳನ್ನೂ ನೋಡುವುದೇ ಕಣ್ಣಿಗೆ ಹಬ್ಬ! ಕಮಲೇ ಕಮಲೋತ್ಫತ್ತಿಃ ಅಂದಹಾಗೇ ಹಬ್ಬದೊಳಗೇ ಹಬ್ಬ ಹುಟ್ಟುವುದು ಹೀಗೆ! ಬೆನಕನ ಉತ್ಸವದಲ್ಲಿ ಕಡೇಪಕ್ಷ ೫ ವಿಗ್ರಹಗಳನ್ನಾದರೂ ನೋಡಬೇಕೆಂಬುದು ಒಂದು ಶಾಸ್ತ್ರ! ಗಣಪ ಎಲ್ಲದರಲ್ಲೂ ತನ್ನದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಂಡ ದೇವರು-ಇಲ್ಲೂ ಹಾಗೇನೆ. ಆತ ಉತ್ಸವ ಪ್ರಿಯನೂ ಹೌದು.

ಶ್ರೀ ಕಲ್ಯಾಣ ಗುಣಾವಹಂ ರಿಪುಹರಂ ದುಸ್ಸ್ವಪ್ನ ದೋಷಾಪಹಂ
ಗಂಗಾಸ್ನಾನ ವಿಶೇಷ ಪುಣ್ಯಫಲದಂ ಗೋದಾನತುಲ್ಯಂ ನೃಣಾಂ |
ಆಯುರ್ವಧನಮುತ್ತಮಂ ಶುಭಕರಂ ಸಂತಾನ ಸಂಪತ್ಪ್ರದಂ
ನಾನಾಕರ್ಮ ಸುಸಾಧನಂ ಸಮುಚಿತಂ ಪಂಚಾಗ ಮಾಕರ್ಣ್ಯತಾಂ ||

ಗಣೇಶ ಹಬ್ಬದ ಪ್ರಯುಕ್ತ ಭಟ್ಟರಿಂದ ಕಥಾಶ್ರವಣ ಮಾಡಿದಿರಿ, ಕಥಾಕಾಲಕ್ಷೇಪವನ್ನು ಮಾಡಿದಿರಿ. ಹಿಂದೂ ಪಂಚಾಂಗದ ಪ್ರಕಾರ  ಜೀವನ ಗತಿಯಲ್ಲಿ, ಪ್ರತೀ ಹೆಜ್ಜೆಯಲ್ಲೂ ಪಂಚಾಂಗ ಶ್ರವಣದ ಅವಶ್ಯಕತೆ ಕಾಣುತ್ತದೆ. ಇಂದಿನ ವಿಜ್ಞಾನಕ್ಕೂ ನಮ್ಮ ಪಂಚಾಂಗಕ್ಕೂ ಸಾಮ್ಯತೆ ಬಹಳವಿದೆ; ವಿಜ್ಞಾನ ಇನ್ನೂ ಅರಿಯದ್ದನ್ನು ವೇದಗಳ ಆಧಾರದಮೇಲೆ ಪಂಚಾಂಗ ಶ್ರುತಪಡಿಸುತ್ತದೆ. ಪಂಚಾಂಗವನ್ನೇ ಬಳಸದೇ ಅದರ ಮೌಲ್ಯವನ್ನೇ ಅರಿಯದೇ ಬರಿದೇ ಜರಿಯುವ ಜನರೂ ಇದ್ದಾರೆ. ಪಂಚಾಂಗದಲ್ಲಿ ಹೇಳುವ ಮುಹೂರ್ತಗಳು ಆ ಯಾ ಕಾಲಕ್ಕೆ ಈ ಭೂಮಿಯಲ್ಲಿ ಘಟಿಸುವ ಕಾಸ್ಮಿಕ್ ರೇ  ಅಥವಾ ಗ್ರಹಗಳಿಂದ ಹೊರಸೂಸಲ್ಪಡುವ ಪ್ರಭಾವಲಯದ ಬಗ್ಗೆ ಹೇಳುತ್ತವೆ. ಉತ್ತಮ ಪ್ರಭಾವಲಯವಿದ್ದಾಗ ನಡೆಸುವ ಕಾರ್ಯ ಮಂಗಳಕರವಾಗುತ್ತದೆ, ನೆಗೆಟಿವ್ ಎನರ್ಜಿ ಇರುವ ಹೊತ್ತಿನಲ್ಲಿ ನಡೆಸುವ ಕಾರ್ಯ ವಿಘ್ನವನ್ನು ಅನುಭವಿಸುತ್ತದೆ; ಮಾನಸಿಕ ಕ್ಲೇಶಗಳಿಗೆ ಕಾರಣವಾಗುತ್ತದೆ. ಹಿಂದಿನ ಯಾವ ಕ್ರಮವೂ ಸುಳ್ಳಲ್ಲ; ಧಾವಂತದ ಜೀವನದಲ್ಲಿ ನಮಗೆ ಅದು ಗೊತ್ತಾಗುತ್ತಿಲ್ಲ!  ಕುಳಿತು ವಿವೇಚಿಸಿದರೆ, ಯೋಚಿಸಿದರೆ, ಚಿಂತನ-ಮಂಥನ ನಡೆಸಿದರೆ ಪಂಚಾಂಗದ-ಸನಾತನ ಸುವ್ಯವಸ್ಥೆಯ ಪ್ರಜ್ಞೆ ಒಡಮೂಡೀತು. ಮತ್ತೆ ಹೀಗೇ ನಿಮಗೆ ಪೌರೋಹಿತ್ಯನೀಡುವ ಪೊರೋಹಿತನಾಗಿ ಬರುತ್ತಿರುತ್ತೇನೆ, ಪರಬ್ರಹ್ಮ ಮಹಾಗಣಪತಿ ನಿಮ್ಮೆಲ್ಲರಿಗೂ ಸುಖ-ಶಾಂತಿ-ಸಮೃದ್ಧಿಯನ್ನು ಕರುಣಿಸಲಿ, ಧನ್ಯವಾದಗಳು.