ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 9, 2011

ವೇದ ದೀವಿಗೆ


ವೇದ ದೀವಿಗೆ

ಸೇರು ಸಜ್ಜನರನ್ನು ದೂರಗಳ ಮಿತಿಯಿರದೇ
ಸಾರು ಅವರಿರುವೆಡೆಗೆ ದಾರಿ ಹುಡುಕುತಲಿ
ನಾರು ಹೂವಿನ ಜೊತೆಗೆ ದೇವಮುಡಿಗೈದಂತೆ
ಏರು ಆ ಎತ್ತರಕೆ | ಜಗದಮಿತ್ರ

ಯಾರಿಗೂ ಕಮ್ಮಿಯೇಂ ಎಂಬ ಭಾವವು ಬೇಡ
ದಾರಿಹೋಕರು ನಾವು ತಿಳಿಮೊದಲು ಅದನು
ಹೀರುತ್ತ ಈ ಜಗದ ಅಪವಿತ್ರ ಬಳುವಳಿಯ
ಜಾರುವುದು ತರವಲ್ಲ | ಜಗದಮಿತ್ರ

ಹೇರಿ ನಡೆವುದು ಕತ್ತೆ ಭಾರವನು ದೂರದೆಡೆ
ಯಾರದೋ ವಸ್ತುಗಳು ಅದಕೆ ಅರಿವಿರದೇ
ಊರೂರು ಸುತ್ತುವುದು ಭಾರೀ ಪೆಟ್ಟಿಗೆ ಹೆದರಿ
ಕೇರಿ ಬೇಕಾದ್ದು ಪಡೆ | ಜಗದಮಿತ್ರ

ಸೂರು ಸಂತತಿ ಸಂಪದಭಿವೃದ್ಧಿಯಲಿ ತೊಡಗಿ
ತೇರೆತ್ತರದ ಬಯಕೆ ರಾಶಿಗಳ ನಡುವೆ
ಮೀರುತ್ತ ಕರ್ತವ್ಯ ಮಿತಿಯ ಸ್ವಾರ್ಥಕ್ಕಾಗಿ
ತೂರಿ ಪುನರಪಿ ಬರುವೆ | ಜಗದಮಿತ್ರ

ಯಾರೂ ಹೇಳುವುದಿಲ್ಲ ಬೇರೇ ಮಾರ್ಗವದಿಲ್ಲ
ಪಾರಾಗಲದುವೊಂದೇ ಜ್ಞಾನದ್ಹಾಯ್ದೋಣಿ
ಬೇರು ಎಲ್ಲಿಹುದೆಂದು ಹುಡುಕುತ್ತ ಮುನ್ನಡೆದು
ಭೂರಿ ಆನಂದ ಪಡೆ | ಜಗದಮಿತ್ರ

ಹಾರಿಹೋಗುವ ಮೊದಲು ಅರಿಯುತ್ತ ವೇದಗಳ
ದಾರಿದೀವಿಗೆಯಾಗಿ ಬಳಸು ತತ್ವಗಳ
ಖಾರ-ಉಪ್ಪುಗಳತಿಯ ಹಿಂಸೆಯಿರುವಶನಗಳ
ದೂರವಿಡು ತಿನ್ನದಲೇ | ಜಗದಮಿತ್ರ

ವಾರವಾರಕು ನವ್ಯ ವರುಷವರುಷಕು ದಿವ್ಯ
ಯಾರೋ ಕವಿ-ಸಾಹಿತಿಯ ಸೃಷ್ಟಿಯಂತಲ್ಲ
ನೂರಾರು ಯುಗಗಳನು ದಾಟುತ್ತ ನಡೆತಂದು
ಸೋರಿಕರಗದು ವೇದ | ಜಗದಮಿತ್ರ

Saturday, January 8, 2011

”ವೇದಸುಧೆ’ಯ ವಾರ್ಷಿಕೋತ್ಸವ

’ವೇದಸುಧೆ’ಯ ವಾರ್ಷಿಕೋತ್ಸವ

ಸಹೃದಯರೇ,

ನಮ್ಮ ನಿಮ್ಮೆಲ್ಲರ ಪ್ರೀತಿಯ ವೇದಿಕೆ ’ವೇದಸುಧೆ’ ---ಜಾತಿ,ಮತ,ಪಂಥ,ಜನಾಂಗವನ್ನೆಲ್ಲಾ ಮೀರಿನಿಂತ ಜ್ಞಾನದಾಹೀ ಬಳಗ. ವೇದಸುಧೆ ಎಂದರೆ ಕೇವಲ ಮಡಿಯುಟ್ಟವರ ತಾಣ ಎಂಬ ಪರಿಕಲ್ಪನೆ ಹೊರಗೋಡಿಸಿ ತಮ್ಮೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಬಯಸುತ್ತೇವೆ. ವೇದ ಎಂದರೆ ಜ್ಞಾನವೇ ಹೊರತು ಮತ್ತೇನೋ ಅರಗಿಸಲಾರದ ಕಬ್ಬಿಣದ ಕಡಲೇಕಾಳಲ್ಲ. ಹಿರಿಯರಾದ ಶತಾಯುಷಿ ಪಂಡಿತ್ ಸುಧಾಕರ ಚತುರ್ವೇದಿಯವರು ಬಯಸಿ, ವೇದಮೂರ್ತಿ ಸುಧಾಕರ ಶರ್ಮಾರವರು ಅನುಮೋದಿಸಿ, ಅಭಿಯಂತರರೂ ಮಿತ್ರರೂ ಆದ ಹರಿಹರಪುರ ಶ್ರೀಧರ್ ರವರು ತಮ್ಮ ನಿತ್ಯಬೆಳಕುನೀಡುವ ವೃತ್ತಿಯೊಂದಿಗೆ ಸೇವೆಗಾಗಿ ಈ ಒಂದು ಬಳಗವನ್ನು ರೂಪಿಸಿದರು. ದೈವೀಪ್ರೇರಣೆಯೋ ನಿಸರ್ಗದ ಇಚ್ಛೆಯೋ ಎಲ್ಲೆಲ್ಲೋ ಇದ್ದ ನಾವುಗಳನೇಕರು ’ವೇದಸುಧೆ ಬಳಗ’ವಾಗಿ ಬೆಳೆಯುತ್ತಿದ್ದೇವೆ. ಯಾವುದೇ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೇ ಕೇವಲ ಎಲ್ಲರ ಒಳಿತಿಗಾಗಿ ಒಂದಷ್ಟು ಜ್ಞಾನವನ್ನು ಹಂಚುವ ಸಲುವಾಗಿ ’ವೇದಸುಧೆ’ ಒಂದುವರ್ಷದಿಂದ ಶ್ರಮಿಸುತ್ತಿದೆ.

ಹಿಂದೂ ತಮ್ಮನ್ನೆಲ್ಲಾ ಆಗಾಗ "ವೇದಸುಧೆಗೆ ಬನ್ನಿ" ಎಂದು ಕರೆದಿದ್ದೇನೆ. ಈಗ ವೇದಸುಧೆ ವರ್ಷದ ಕೂಸು. ನಿಧಾನಕ್ಕೆ ಅಂಬೆಗಾಲಿಕ್ಕುತ್ತಿದೆ. ಈ ಕೂಸಿನ ಬೆಳವಣಿಗೆಯ ಜೊತೆಜೊತೆಗೆ ನಮ್ಮೆಲ್ಲರ ಮಾನಸಿಕ ವಿಕಸನ ಸಾಧ್ಯ ಎಂಬುದು ಹಲವು ಓದುಗರ ಅಭಿಪ್ರಾಯ. ಇಲ್ಲಿ ವೇದ ಮಂತ್ರಗಳನ್ನಷ್ಟೇ ಅಲ್ಲದೇ ಹಲವು ಜ್ಞಾನಪೂರಿತ ಕವನಗಳು, ಮುಕ್ತಕಗಳು, ಸ್ವಾರಸ್ಯಕರ ಘಟನೆಗಳು, ಧ್ವನಿಮುದ್ರಿತ ಹಾಡುಗಳು, ಪ್ರವಚನಗಳು ಇತ್ಯಾದಿ ಹಲವು ಹತ್ತು ಕೃತಿಗಳನ್ನು ತಾವು ಕಾಣಬಹುದಾಗಿದೆ. ನಮ್ಮ ನಿಮ್ಮೆಲ್ಲರ ವೇದಸುಧೆಗೆ ವರ್ಷ ತುಂಬಿದ ಹರ್ಷವನ್ನು ಹಂಚಿಕೊಳ್ಳಲು 'ವೇದಸುಧೆ ಬಳಗ' ಹಾಗೂ ಹಾಸನದ 'ಮನೆಮನೆ ಕವಿಗೋಷ್ಠಿ'ಯ ಸದಸ್ಯರಿಂದ ಇದೇ ಜನವರಿ ೩೦ ರಂದು ಭಾನುವಾರ ಹಾಸನದ ಶ್ರೀಶಂಕರಮಠದ ಸಭಾಭವನದಲ್ಲಿ ದಿನಪೂರ್ತಿಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜ್ಞಾನದಾಯೀ ಕಾರ್ಯಕ್ರಮಗಳ ಜೊತೆಗೆ ಮನೋರಂಜಕ ಗೀತಗಾಯನಗಳು, ಗೋಷ್ಠಿಗಳು ನಡೆಯುತ್ತವೆ. ವೇದಸುಧೆ ಬಳಗದ ಸದಸ್ಯಮಿತ್ರರಾದ ಕವಿನಾಗರಾಜರ ಪುಸ್ತಕ ಹಾಗೂ ಇನ್ನಿತರ ಒಂದೆರಡು ಪುಸ್ತಕಗಳ ಬಿಡುಗಡೆಯೂ ಇದೆ.

ಹಾಸನದ ಜನರ ಉತ್ತಮ ಮನೋಭೂಮಿಕೆ ಹೇಗಿದೆಯೆಂಬುದು ಅಲ್ಲಿಗೆ ನೇರವಾಗಿ ಹೋಗಿ ನೋಡಿವದರಿಗೆ ಮಾತ್ರ ಗೊತ್ತಾಗುವ ವಿಷಯ. ಸಜ್ಜನರನೇಕರು ಸೇರಿರುವ ಹಾಸನದ ಕೇಂದ್ರ ಭೂಮಿಕೆಗೆ ಬೆಂಗಳೂರೂ ಸೇರಿದಂತೇ ರಾಜ್ಯದ/ದೇಶದ/ವಿಶ್ವದ ಎಲ್ಲಾ ಕಡೆಯ ಜನರನ್ನು ಆಹ್ವಾನಿಸುತ್ತಿದ್ದೇವೆ. ವಿವರಗಳನ್ನು ಈ ಕೆಳಗೆ ಲಗತ್ತಿಸಿದ ಆಹ್ವಾನ ಪತ್ರಿಕೆಯಲ್ಲಿ ನೋಡಿ.




http://vedasudhe.blogspot.com/

ಮತ್ತಷ್ಟು ವಿವರಗಳಿಗೆ ಭೇಟಿಕೊಡಿ :
http://vedasudhe.blogspot.com/2011/01/normal-0-false-false-false-en-us-x-none.html
ಬರಲಿಚ್ಛಿಸುವವರು ತಮ್ಮ ವಿವರಗಳನ್ನು ವೇದಸುಧೆಗೆ [ ಮಿಂಚಂಚೆಯ] vedasudhe@gmail.com ಮೂಲಕ ಕಳುಹಿಸಿದರೆ ವ್ಯವಸ್ಥೆಗೆ ಅನುಕೂಲವಾಗುತ್ತದೆ.

ತಮಗೆಲ್ಲಾ
ಆದರದ ಸ್ವಾಗತ. ಬನ್ನಿ ವೇದಸುಧೆಗೆ ಕೈಜೋಡಿಸೋಣ, ಇದು ವೇದದ ಪ್ರಚಾರಕ್ಕಾಗಿಯಲ್ಲ-ಬದಲಾಗಿ ನಮ್ಮ ಒಳಿತಿಗಾಗಿ ವೇದವನ್ನು ತಿಳಿಯುವ ಸಲುವಾಗಿ. ತಮ್ಮೆಲ್ಲರ ಉಪಸ್ಥಿತಿಯನ್ನು ಅಪೇಕ್ಷಿಸಿ ಈ ಆಮಂತ್ರಣ, ನಮಸ್ಕಾರ.


Thursday, January 6, 2011

"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"

ಚಿತ್ರಗಳ ಕೃಪೆ : ಅಂತರ್ಜಾಲ

"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"

[ಪ್ರೇತಾತ್ಮಗಳ ಇರುವಿಕೆಯನ್ನು ವಿಜ್ಞಾನ ಒಪ್ಪುತ್ತದೆ ಆದರೆ ಅವುಗಳ ರೂಪವನ್ನಾಗಲೀ ಆಕೃತಿಯನ್ನಾಗಲೀ ಹೀಗೇ ಅಂತ ಯಾರೂ ಬಣ್ಣಿಸಲಾರರು, ಇದೊಂದು ಮೂರನೆಯ ಆಯಾಮವನ್ನು ಮಕ್ಕಳು ಅನುಭವಿಸುವ ಲೇಖನ]

ಓದುಗಾಯಾಂ ಪ್ರತಿಬೋಧಿತಾಂ ಲೇಖಕಾಂ ವಿ.ಆರ್.ಭಟ್ಟೇನ ಸ್ವಯಂ
ಸ್ವಾನಂದಂ ಮಿಶ್ರಿತಾಂ ಹಲವೆಡೆ ಲಘುಹಾಸ್ಯದಿಂ ಪೂರಿತಾಂ |
ಭಯಕೃದ್ಭಯನಾಶಿನೀಂ ಲೇಖನಂ ಏಕಾಧ್ಯಾಯದಿ ವಿರಚಿತಾಂ
ಅನುಕಂಪ
ಜನಕಂ ಇಹದೊಳು ನಿಶಾಸಮಯ ದ್ವೇಷಿಣಂ||
[ತಮಾಷೆಗೆ ಬರೆದ ಮೇಲಿನ ಶ್ಲೋಕಕ್ಕೆ ವ್ಯಾಕರಣ-ಛಂದಸ್ಸು,ಭಾಷಾಲಂಕಾರಗಳನ್ನು ಪರಿಗಣಿಸಬೇಡಿ]

ಮಕ್ಕಳ ಜಗತ್ತೇ ಬೇರೆ. ಆವರ ಆಟ-ಪಾಟಗಳ ವೈಖರಿ ಎಂಥವರಿಗೂ ಮುದನೀಡುವಂಥದ್ದು. ಯಾರಮೇಲೇ ಕೋಪವೋ ತಾಪವೋ ಪರಿತಾಪವೋ ಇದ್ದರೂ ಮಕ್ಕಳನ್ನು ನೋಡಿದಾಗ ಅದೆಲ್ಲಾ ಮರೆತುಹೋಗುತ್ತದೆ! ಅದಕ್ಕೇ ಇರಬೇಕು ಮಕ್ಕಳ ಆ ಜೀವನದ ಮಜಲುಗಳನ್ನು, ಬಾಲ್ಯವನ್ನು ಜೀವಮಾನಪೂರ್ತಿ ಇರಗೊಡುವುದಿಲ್ಲ ಸೃಷ್ಟಿ. ಒಂದೊಮ್ಮೆ ಎಲ್ಲರೂ ಮಕ್ಕಳ ಥರಾ ಇದ್ದಿದ್ದರೆ ಕಡಿದುಹೋದ ಸಂಬಂಧಗಳು ಮತ್ತೆ ಬೆಸೆಯುತ್ತಿದ್ದವೇನೋ. ಮಣ್ಣು ಮರಳು ನೀರು ಬಣ್ಣ ಪೆನ್ಸಿಲ್ ಕಾಗದ ಕಡ್ಡಿ ಏನೇ ಸಿಕ್ಕರೂ ಸಿಕ್ಕಿದವಸ್ತುವಿಗೆ ತಕ್ಕಹಾಗೇ ಆಟ ಆರಂಭವಾಗುತ್ತದೆ. ಮಕ್ಕಳು ಇಲ್ಲದಿದ್ದರೆ ಗಿಜಿಗುಡುವ ಈ ಜಗವೆಲ್ಲಾ ಹಕ್ಕಿಗಳಿಲ್ಲದ ಜಾಗದಂತೇ ಆಗುತ್ತಿತ್ತೇನೋ.

ನಾವೆಲ್ಲಾ ಚಿಕ್ಕವರಿರುವಾಗ ಸಾಯಂಕಾಲವಾದರೆ ಸಾಕು ನಮಗೆ ಕತ್ತಲೆ ಇರುವೆಡೆ ಹೋಗಲು ಹೆದರಿಕೆ, ಒಂಥರಾ ಪುಕು ಪುಕು ನಡುಕ, ಬರೀ ಪುಕ್ಕಲುತನ. ಕೆಲವೊಮ್ಮೆ ಒಬ್ಬರೇ ಇರಬೇಕಾದ ಜಾಗದಲ್ಲಿ ಕುಂತಲ್ಲೇ ಚಳಿಮಳೆಗಾಲವನ್ನೂ ಲೆಕ್ಕಿಸದೇ ಇಳಿಯುವ ಬೆವರು! ಮಕ್ಕಳಿಗೆ ದೊಡ್ಡವರಿಗಿಂತಾ ಹೆದರಿಕೆ ತುಂಬಾ ಜಾಸ್ತಿ ಇರುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ನಮ್ಮಲ್ಲಿ ನಾವೆಲ್ಲಾ ಚಿಕ್ಕವರಿರುವಾಗ ಶಾಲೆಗೆ ಹೋಗಿ ಬರುವಾಗೆಲ್ಲಾ ಯಾವುದಾದರೊಂದು ಕಥೆಗಳು ಸುದ್ದಿಗಳು ನಮ್ಮೊಳಗೆ ಹರಿದಾಡುತ್ತಲೇ ಇರುತ್ತಿದ್ದವು. ಕಾಗೆ ಎಂಜಲು ಮಾಡಿದ ಹುಳಿಸೇಬೀಜ, ಮಾವಿನಮಿಡಿ, ಇತ್ಯೇತ್ಯಾದಿಗಳಿಂದ ಹಿಡಿದು ಹಬ್ಬದ ಸಾಲಿನ ತಿಂಡಿಗಳಾದ ಚಕ್ಕುಲಿ, ಉಂಡೆ ಮುಂತಾದುವುಗಳನ್ನು ಹಂಚಿಕೊಂಡು ಅದೂ ಇದೂ ಮಾತನಾಡುತ್ತಾ ಹಳ್ಳಿಯ ಕಾಲು ಹಾದಿಗಳಲ್ಲಿ ಅಡ್ಡಾ ದಿಡ್ಡೀ ಓಲಾಡುತ್ತಾ ಸಾಗುವ ನಮ್ಮ ವೈಖರಿಯೇ ಬಹಳ ಆಮೋದಕರವಾಗಿರುತ್ತಿತ್ತು. ಅಲ್ಲಿ ಒಬ್ಬೊಬ್ಬರು ಒಂದೊಂಥರಾ ಕಥೆಗಳನ್ನು ಹೊತ್ತುಬರುತ್ತಿದ್ದರು! ಕಥೆಗಳಲ್ಲಿನ ಪಾತ್ರಗಳು ಕೆಲವೊಮ್ಮೆ ಕಣ್ಣೆದುರೇ ಬರುತ್ತಿವೆಯೇನೋ ಎಂಬಂತೇ ಬಣ್ಣಿಸುವ ಕಲಾವಿದರು ನಮ್ಮಲ್ಲಿದ್ದರು.

ಇಂತಹ ಕಥೆಗಳಲ್ಲಿ ದೆವ್ವ-ಭೂತ-ಪಿಶಾಚಿಗಳ ಕಥೆಯೇನೂ ಕಮ್ಮಿ ಇರುತ್ತಿರಲಿಲ್ಲ. ಊರಲ್ಲಿ ಮುದುಕರು ಯಾರಾದ್ರೂ ತೀರಿಕೊಂಡರೆ ವಾರಗಟ್ಟಲೆ ಅಂಥದ್ದೇ ಸುದ್ದಿ. ಸತ್ತವರು ಏನಾಗುತ್ತಾರೆ. ಭೂತ-ಪ್ರೇತವಾದವರು ಏನುಮಾಡುತ್ತಾರೆ-ಇವೆಲ್ಲಾ ಹಾದಿಯುದ್ದಕ್ಕೂ ಹಲವು ದಿನ ಗ್ರಾಸವಾದ ವಿಷಯಗಳು. ಅದರಲ್ಲಂತೂ ನಾವು ಚಿಕ್ಕವರಿರುವಾಗ ಬಂದ " ನಾ ನಿನ್ನ ಬಿಡಲಾರೆ’ ಸಿನಿಮಾವನ್ನು ನಮ್ಮ ಸದಾಶಿವ ನೋಡಿಬಿಟ್ಟಿದ್ದ! ಆತ ಹೇಳಿದ ಕಥೆ ಕೇಳಿ ತಿಂಗಳುಗಟ್ಟಲೇ ನಮಗೆ ಹೇಳಿಕೊಳ್ಳಲಾಗದ "ಧೈರ್ಯ ಭಯಂಕರ ಧೈರ್ಯ" ! ಧೈರ್ಯ ಎನ್ನುವಾಗ ನಡುಗುತ್ತಿದ್ದೆವು ಎನ್ನಲು ಅಧೈರ್ಯ ! ನಮ್ಮಲ್ಲಿಯೇ ಕೆಲವರನ್ನು ಆಯ್ಕೆಮಾಡಿ ’ಎದಗ’ರೆಂದು ಹೆಸರಿಸಿದ್ದೆವು. ಎದಗ ಎಂದರೆ ಎದೆ ಗಟ್ಟಿ ಇರುವವನು-ಯಾವುದಕ್ಕೂ ಹೆದರುವ ಆಸಾಮಿಯಲ್ಲ ಅಂತ. ಈಗ ಹೇಳುತ್ತೇನೆ ಕೇಳಿ ಅವರೆಲ್ಲಾ ಹೆಸರಿಗೆ ಮಾತ್ರ ಎದಗರಾಗಿದ್ದರು. ಇಂತಹ ಎದಗರ ಜೊತೆಗೆ ನಾವು ಸಾದಾ ಸೀದಾ ಹುಡುಗರು ಹೋಗುವಾಗ ನಮಗೆ ಭಯವಿರಬೇಕೇಕೆ? ಹಾಗಂತ ಕೊಚ್ಚಿಕೊಳ್ಳುವುದು ನಮ್ಮ ಎದಗರು ಎನಿಸಿಕೊಂಡವರದಾಗಿತ್ತು.


ನಮಗೆ ಆಗ ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆ ಇರುತ್ತಿದ್ದು ಮಧ್ಯೆ ಊಟಕ್ಕೆ ೧೧ ರಿಂದ ೨ ಗಂಟೆ ಬಿಡುವಿರುತ್ತಿತ್ತು. ಸಾಯಂಕಾಲ ೫:೩೦ಕ್ಕೆ ಶಾಲೆಬಿಟ್ಟಾಗ ಊರದಾರಿಯಲ್ಲಿ ಅವರವರ ಮನೆಗಳು ಬಂದಾಗ ಅವರವರು ಗುಂಪಿಗೆ ವಿದಾಯ ಹೇಳಿ ಗುಂಪು ನಿಧಾನವಾಗಿ ಕರಗುತ್ತಾ ಹೋಗುತ್ತಿತ್ತು. ದೂರ ದೂರ ಒಂಟಿ ಮನೆಯಿರುವವರು ಪಾಪ ಅವರ ಫಜೀತಿ ಹೇಳತೀರ! ಮನೆಯಲ್ಲಿ ಇಂದಿನಂತೇ ಮಕ್ಕಳನ್ನು ಕರೆದೊಯ್ಯಲು ಯಾರೂ ಬರುತ್ತಿರಲಿಲ್ಲ. ನಮಷ್ಟಕ್ಕೆ ನಾವೇ ಸ್ವತಂತ್ರರು. ಯಾವ ಬೀದಿನಾಯಿಗೂ ಕಲ್ಲೆಸೆಯ ಬಹುದಿತ್ತು;ಅಟ್ಟಿಸಿಕೊಂಡು ಬಂದರೆ ಮರವೇರಿ ತಪ್ಪಿಸಿಕೊಳ್ಳಬಹುದಿತ್ತು, ಅದಿಲ್ಲಾ ಎಲ್ಲೋ ಅಪ್ಪೀತಪ್ಪೀ ಕಚ್ಚಿದರೆ ಏನೂಮಾಡಲಾಗದ ಸ್ಥಿತಿ ಇರುತ್ತಿತ್ತು. ಆದರೂ ಅಲ್ಲಲ್ಲಿ ಯಾರ್ದೋ ಮಾವಿನ ಮರಗಳಿಗೆ ಕಾಯಿಬಿಟ್ಟಾಗ ಕಲ್ಲೆಸೆಯುವುದು,ಜಂಬೇ ಹಣ್ಣು [ಗುಲಾಬಿ ಬಣ್ಣದ ಜಂಬುನೇರಳೆ ಹಣ್ಣು] ಕೊಯ್ಯುವುದು ಇದೆಲ್ಲಾ ಸರ್ವೇಸಾಮಾನ್ಯ ಕಿತಾಪತಿ. ನಮ್ಮ ಮಧ್ಯೆಯೂ ಕೆಲವೊಮ್ಮೆ ಪಕ್ಷಪಂಗಡಗಳು ಹುಟ್ಟಿಕೊಳ್ಳುತ್ತಿದ್ದವು. ಆಗಾಗ ವಿಭಜನೆ, ಮತ್ತೆ ವಿಲೀನ, ಮತ್ತೆ ವಿಭಜನೆ ಮತ್ತೆ ವಿಲೀನ--ಇದೂ ಕೂಡ ಸತತ ಅನುಷ್ಠಾನದಲ್ಲಿರುವ ಕಾರ್ಯವಾಗಿತ್ತು.


ದೆವ್ವಕ್ಕೆ ಕಾಲು ತಿರುವುಮುರುವಾಗಿರುತ್ತದಂತೆ, ದೆವ್ವ ಬಿಳಿಯ ಬಣ್ಣದಲ್ಲಿ ಇರುವುದಂತೆ, ರಾತ್ರಿ ಹೊತ್ತಲ್ಲಿ ಗುಡ್ಡಗಳಲ್ಲಿ ಕೊಳ್ಳಿ ದೀಪಗಳನ್ನು ಹಿಡಿದು ಓಡಾಡುತ್ತವಂತೆ. ಅಕಸ್ಮಾತ್ ಯಾರಾದರೂ ಸಿಕ್ಕಿದರೆ ಅವರಿಗೆ ಗ್ರಹಚಾರ ಕಟ್ಟಿಟ್ಟದ್ದಂತೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ರಾತ್ರಿಗಳಲ್ಲಿ ಒಡ್ಡೋಲಗವೆತ್ತಿಕೊಂಡು ನಾನಾ ವಾದ್ಯಗಳನ್ನು ಬಾರಿಸಿಕೊಳ್ಳುತ್ತಾ ಅವು ಸಾಗುತ್ತವಂತೆ. ಶಿವನ ದೇವಸ್ಥಾನವಿರುವಲ್ಲಿಯವರೆಗೂ ಅವು ಹಾಗೇ ನಡೆದು ಹೋಗಿಬಂದು ಮಾಡುತ್ತಲೇ ಇರುತ್ತವಂತೆ. ಕಣ್ಣು ಅತ್ಯಂತ ಕೆಂಪಗಿರುತ್ತದಂತೆ. ಕೈಬೆರಳುಗಳು ಚೂಪಾಗಿದ್ದು ಹೊಟ್ಟೆ ಬಗೆದು ರಕ್ತಹೀರಲು ಅದು ಅವುಗಳಿಗೆ ಸಹಕಾರಿಯಂತೆ. ಅವುಗಳಲ್ಲಿ ಕೆಲವು ದೆವ್ವಗಳು ಮನುಷ್ಯರಿಗೆ ಉಪಕಾರಿಗಳಾದರೆ ಇನ್ನೂ ಕೆಲವು ದೆವ್ವಗಳು ಅಪಕಾರಿಗಳಾಗಿದ್ದು ಅತ್ಯಂತ ಕ್ರೂರ ಸ್ವಭಾವದವಂತೆ.---ಹೀಗೇ ಇಲ್ಲಸಲ್ಲದ ವರ್ಣನೆಗಳುಳ್ಳ ಕಥೆಗಳನ್ನು ಹೇಳಿದರೆ ಅದೇ ಒಂದು ಕಾದಂಬರಿಯಾದೀತು! ಮಾಧ್ಯಮವಾಹಿನಿಗಳೂ ಯಾವುದೇ ಭಯಾನಕ ಧಾರಾವಾಹಿಗಳೂ ಇಲ್ಲದ ಆ ಕಾಲದಲ್ಲಿಯೇ ಆ ರೀತಿಯ ನಡುಕ ಹುಟ್ಟಿಸುತ್ತಿದ್ದ ವಿಷಯಗಳು ಇವತ್ತಿನ ಪುಟಾಣಿಗಳಿಗೆ ಹೇಗನಿಸಬಹುದು ಎಂಬುದು ತರ್ಕಿಸಬೇಕಾದ ವಿಷಯ.

ದೆವ್ವಗಳು ಕಾಣಿಸಿಕೊಳ್ಳುವ ಜಾಗಗಳೂ ಕೆಲವು ಗುರುತಿಸಲ್ಪಟ್ಟಿದ್ದವು. ಜನನಿಬಿಡ ಸ್ಥಳಗಳಲ್ಲಿ, ಊರುಕೇರಿಗಳ ಮನೆಗಳ ಮಧ್ಯದಲ್ಲಿ ದೆವ್ವಗಳು ಕಾಣಿಸುತ್ತಿರಲಿಲ್ಲ. ಯಾರೂ ಜಾಸ್ತಿ ತಿರುಗಾಡದ ಜಾಗಗಳಲ್ಲೇ ಅವುಗಳ ಅಬರ್ತಳ ಜೋರು! ಒಬ್ಬರೇ ಯಾರಾದರೂ ಅಂತಹ ಜಾಗಗಳ ಮುಖಾಂತರ ಹಾದುಹೋಗುವಾಗ ಅವರಿಗೆ ಕೆನ್ನೆಗೆ ಬಾರಿಸುವುದು, ಕಲ್ಲೆಸೆಯುವುದು, ವಿಕೃತಸ್ವರದಲ್ಲಿ ಕೂಗುವುದು, ಅಕರಾಳವಿಕರಾಳ ರೂಪದಲ್ಲಿ ಕಂಡು ಪ್ರಜ್ಞೆತಪ್ಪಿಸುವುದು, ದೆವ್ವಕಂಡು ಹೆದರಿದ ಕೆಲವರು ಜ್ವರದಿಂದ ವಾರಗಟ್ಟಲೇ ಮೇಲೇಳದಿದ್ದುದು-ಕೆಲವರು ಹೆದರಿ ಅಸುನೀಗಿದ್ದು ಇಂಥದ್ದಕ್ಕೆಲ್ಲಾ ದೆವ್ವಗಳು ಕಾರಣ ಅಂತ ನಾವು ಕೇಳಿದ್ದಷ್ಟೇ, ಆದರೆ ದೆವ್ವಗಳನ್ನು ನೋಡಿರಲಿಲ್ಲ. ನಮ್ಮೂರಲ್ಲಿ ’ಗೋಳ್‍ಮಕ್ಕಳ ಹೊಂಡ’ , ಬೆಳ್ಳರೆ, ಶಿಂಗಾರಬೇಣ, ಬೋಳಗುಡ್ಡೆ ಹೀಗೇ ಇವೆಲ್ಲಾ ದೆವ್ವಗಳ ರಂಗಸ್ಥಳಗಳು ಈ ಜಾಗಗಳಾಗಿದ್ದವು. ಆ ಜಾಗಗಳ ಮನೆ ಹಾಳುಬೀಳಲಿ ಬೇರೇ ಖಾಲೀ ಜಾಗಗಳಲ್ಲಿ ಒಂದರ್ಧ ಕಿಲೋಮೀಟರು ಒಬ್ಬರೇ ನಡೆಯಬೇಕೆಂದರೆ ಅಲ್ಲೂ ದೆವ್ವಗಳು ಕಾಣಿಸುತ್ತವೇನೋ ಎಂಬ ಭಯವಿತ್ತಲ್ಲ ಅದನ್ನೀಗ ನೆನೆದರೆ ನಗು ಬರುತ್ತದೆ. ’ಗೋಳ್‍ಮಕ್ಕಳ ಹೊಂಡ’ ಎಂಬ ಹೆಸರು ಕೇಳಿದರೇ ಒಂಥರಾ ನಮ್ಮ ನರನಾಡಿಗಳನ್ನೆಲ್ಲಾ ದೆವ್ವಗಳು ಹಿಡಿದು ಎಳೆದಹಾಗೇ ಆಗುತ್ತಿತ್ತು !


ರಾತ್ರಿಹೊತ್ತಿನಲ್ಲಿ ವಿದ್ಯುದ್ದೀಪಗಳು ಹಠಾತ್ತನೇ ಹೋಗಿಬಿಟ್ಟರೆ ನಮ್ಮ ಕಥೆ ಅದೊಂದು ಹೇಳಲಾಗದ ವ್ಯಥೆ! ಯಾರೇ ದೊಡ್ಡವರು ಹತ್ತಿರವಿದ್ದರೂ ಅವರನ್ನು ಕಂಡರೇ ದೆವ್ವ ಆ ರೂಪದಲ್ಲಿ ಬಂದುಬಿಟ್ಟಿತೇನೋ ಎಂಬ ಭಯದಲ್ಲಿ ನಮ್ಮ ಪ್ರಸಾದವೆಲ್ಲಾ ಒಣಗಿಹೋಗುತ್ತಿತ್ತು. ಕತ್ತಲೆಯಲ್ಲಿ ಬೆಕ್ಕು ಕೂಗಿದರೆ, ಪಕ್ಕದ ಗುಡ್ಡದಲ್ಲಿ ನರಿ ಕೂಗಿದರೆ ನಮಗೆಕೋ ಅನುಮಾನ ! ವಿದ್ಯುತ್ತು ಮರಳಿಬಂದಮೇಲೇ, ಸೌದೆಯ ಒಲೆಯಲ್ಲಿ ಆರುತ್ತಿರುವ ಕಿಡಿಯೊಂದು ಮತ್ತೆ ಹೊಗೆಯಾಡಿ ಹೊತ್ತಿಕೊಂಡಂತೇ ಕುಟುಕುಜೀವ ನಮ್ಮ ಶರೀರದಲ್ಲಿ ಮತ್ತೆ ಉಸಿರಾಡಿ ನಮ್ಮ ದೇಹದಲ್ಲಿ ಚೈತನ್ಯ ಮರಳಿಬರುತ್ತಿತ್ತು. ಯಾರೋ ಪುಣ್ಯಾತ್ಮ ವಿಶ್ವೇಶ್ವರಯ್ಯನಂತೆ ಆ ದೀಪವನ್ನು ತಯಾರಿಸಲು ಆರಂಭಿಸಿದ್ದು, ಅವನಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು. ಬಡಪಾಯಿ ಮಕ್ಕಳನ್ನು ಕಂಡು ಆ ವ್ಯಕ್ತಿಗೆ ವಿದ್ಯುತ್ ತಯಾರಿಸುವ ಬುದ್ಧಿಯನ್ನು ದೇವರೇ ನೀಡಿರಬೇಕು ! ಅಂತಹ ದೀಪವೊಂದು ಇರದಿರುತ್ತಿದ್ದರೆ ದೆವ್ವಗಳು ಖಂಡಿತಾ ನಮ್ಮನ್ನು ಬದುಕಬಿಡುತ್ತಿರಲಿಲ್ಲ ! ಆದರೂ ನಮಗೆ ರಾತ್ರಿ ಹೊತ್ತಿನಲ್ಲಿ ಉಚ್ಚೆಗೆ ಅವಸರವಾದರೆ ಸ್ವಲ್ಪ ಕಷ್ಟವಾಗುತ್ತಿತ್ತು. ಯಾಕೆಂದರೆ ಅಪ್ಪಟ ಸಂಪ್ರದಾಯವಾದಿಗಳಾದ ನಮ್ಮಲ್ಲೆಲ್ಲಾ ಆ ಕಾಲಕ್ಕೆ ಕಕ್ಕಸು-ಬಚ್ಚಲುಮನೆ ಮನೆಯೊಳಗೇ ಇರುತ್ತಿರಲಿಲ್ಲ. ಹೊರಗೆ ಅನತಿ ದೂರದಲ್ಲಿ ಇರುವ ಅವುಗಳಿಗೆ ವಿದ್ಯುದ್ದೀಪದ ವ್ಯವಸ್ಥೆ ಇರುತ್ತಿರಲಿಲ್ಲ.ದೊಡ್ಡವರನ್ನು ಎಬ್ಬಿಸಿ ವಿನಂತಿಸಿ ಕರೆದೊಯ್ದರೂ ಮೂತ್ರಬಿಡುವಾಗ ನಮ್ಮ ಕೈಕಾಲು ಥರಥರಥರ ನಡುಗುತ್ತಿತ್ತು. ಅಸಲಿಗೆ ನಾವೆಲ್ಲಾ ಚಿಕ್ಕವರಿರುವಾಗ ಕಕ್ಕಸು ಮನೆಯೇ ಇರಲಿಲ್ಲ. ಎಲ್ಲರೂ ಸುತ್ತಲ ಗುಡ್ಡಗಳಿಗೆ ಚೊಂಬಿನಲ್ಲಿ ನೀರು ತೆಗೆದುಕೊಂಡು ಹೋಗಿ ಮಲವಿಸರ್ಜನೆ ಮಾಡಿಬರಬೇಕಾಗಿತ್ತು. ಅಲ್ಲೆಲ್ಲೋ ಕುರುಚಲು ಪೊದೆಗಳ ನಡುವೆ ಹಾವಿಗೆ,ಚೇಳಿಗೆ ಹೆದರುತ್ತಾ ಅಂತೂ ಹೊರಹಾಕಲೇ ಬೇಕಾಗಿದ್ದನ್ನು ಹೊರಹಾಕಿ ವಾಪಸ್ಸಾಗುತ್ತಿದ್ದೆವು. ಮಳೆಗಾಲದಲ್ಲಿ ಸೋನೆಮಳೆ ಸುರಿಯುವಾಗ ಕಕ್ಕಸಿಗೆ ಅವಸರವಾದರೆ ಕೊಡೆಯನ್ನು ಹಿಡಿದೇ ಕುಕ್ಕರುಗಾಲಿನಲ್ಲಿ ಕುಳಿತು ವಿಸರ್ಜನಾ ಕ್ರಿಯೆ ನಡೆಯುತ್ತಿತ್ತು. ಅಲ್ಲೂ ದೆವ್ವಗಳು ಬಂದರೆ ಎಂಬಾಭಯ ನಮ್ಮನ್ನು ಬಿಟ್ಟಿರುತ್ತಿರಲಿಲ್ಲ!


ಒಂಬಲತಿ ಎಂಬುದು ಹೆಣ್ಣು ದೆವ್ವ. ಸಾಮಾನ್ಯ ಹೆಂಗಸಿನ ರೂಪವೇ ಇರುತ್ತದಂತೆ. ಆದರೆ ಆಕೆಯ ಅಂಗೈ ತೂತಂತೆ. ಅವಳು ಬಂದರೆ ತನ್ನ ಕೈಮುಂದೆ ಮಾಡಿ ಕವಳ [ಎಲೆಯಡಿಕೆ] ಕೊಡು ಎನ್ನುತ್ತಾಳಂತೆ. ಕವಳ ಕೊಟ್ಟಾಗ ಕೈಯ್ಯ ತೂತಿನ ಮೂಲಕ ಅದು ಕೆಳಗೆ ಬೀಳುತ್ತದಲ್ಲಾ ಆಗ ಅದನ್ನು ಎತ್ತಿಕೊಡು ಎನ್ನುತ್ತಾಳಂತೆ. ಅದನ್ನು ಎತ್ತಲು ನಾವು ಬಗ್ಗಿದಾಗ ಕುತ್ತಿಗೆಮುರಿಯುತ್ತಾಳಂತೆ. ಆದರೆ ಚರ್ಮದ ಚಪ್ಪಲಿಗೂ ಅವಳಿಗೂ ಬದ್ಧ ದ್ವೇಷವಂತೆ. ಚರ್ಮದ ಚಪ್ಪಲಿ ಕಂಡರೆ ಸಾಕು ಬೆಂಕಿಯನ್ನು ಕಂಡ ಕಾಡುಪ್ರಾಣಿಯಂತೇ ದೂರ ಓಡುತ್ತಾಳಂತೆ. ಆಕೆ ಕೂಡಾ ಬರುವುದು ಒಬ್ಬರೇ ಓಡಾಡುವಾಗ! ಹಾಗೆಲ್ಲಾ ಜನಸಂದಣಿಯ ನಡುವೆ ಆಕೆ ಕಾಣಿಸಿಕೊಳ್ಳುವುದಿಲ್ಲ. ಇಂತಹ ಜನಜನಿತ ಊಹಾಪೋಹಗಳೂ ಕಲ್ಪನೆಗಳೂ ಸೇರಿ ಇದ್ದಬದ್ದ ನಮ್ಮ ಶಕ್ತಿಯನ್ನೆಲ್ಲಾ ಉಡುಗಿಹಾಕಿಬಿಡುತ್ತಿದ್ದವು. ನಾವೆಲ್ಲಾ ಹವಾಯಿ ಚಪ್ಪಲಿ ಹಾಕುತ್ತಿದ್ದುದರಿಂದ ಚರ್ಮದ ಚಪ್ಪಲಿ ಯಾವುದೆಂಬುದು ಅಷ್ಟಾಗಿ ತಿಳಿಯದು. ಆದರೂ ಸಾಲ್ಕೋಡ್ ಹೆಗಡೇರು ಹಾಕುತ್ತಾರಲ್ಲಾ ನಡೆಯುವಾಗ ನರ್ ಚರ್ ನರ್ ಚರ್ ನರ್ ಚರ್ ಎನ್ನುವ ಚಪ್ಪಲಿ ಆ ಚಪ್ಪಲಿಯೇ ಚರ್ಮದ ಚಪ್ಪಲಿ ಎಂದು ಯಾರೋ ಹೇಳಿದ್ದರು. ಹೀಗಾಗಿ ಆಪತ್ಕಾಲಕ್ಕಾಗಿ ದರೋಡೆಕೋರರನ್ನು ನಿಭಾಯಿಸಲು ಏ.ಕೆ.೪೭ ಇಟ್ಟುಕೊಂಡಂತೇ ನನಗೂ ಅಂತಹ ನರ್ ಚರ್ ಎನ್ನುವ ಚರ್ಮದ ಚಪ್ಪಲಿಯೊಂದನ್ನು ಇಟ್ಟುಕೊಳ್ಳುವ ಆಸೆಯಾಗಿತ್ತು ! ಅದನ್ನು ಧರಿಸಿ ನಡೆಯುವಾಗ ಹೇಗೂ ಒಂಬಲತಿ ಬರುವುದಿಲ್ಲ;ಒಂಬಲತಿ ಹಾಗಿರಲಿ ದೆವ್ವಗಳೇ ಬರುವುದಿಲ್ಲ ಎಂದಮೇಲೆ ಅದು ಬ್ರಿಟಿಷರು ಭಾರತಕ್ಕೆ ಕೊಟ್ಟ ಸ್ವಾತಂತ್ರ್ಯಕ್ಕಿಂತಾ ದೊಡ್ಡ ಸ್ವಾತಂತ್ರ್ಯದ ಥರಾ ನನಗೆ ಭಾಸವಾಗುತ್ತಿತ್ತು! ಒಪಕ್ಷ ಒಂಬಲತಿ ಬಂದುಬಿಟ್ಟರೆ ಮೆಟ್ಟಿರುವ ಚರ್ಮದ ಚಪ್ಪಲಿಯನ್ನು ಅವಳೆಡೆಗೆ ಬೀಸಿ ಎಸೆದುಬಿಟ್ಟರೆ ಪಾಕಿಗಳು ಭಾರತಕ್ಕೆ ಬಾಂಬು ಎಸೆದಂತೇ ಆಗಿಬಿಡುವುದಲ್ಲವೇ? ಓಹೊಹೊ ನಗೆಯಾಡಬೇಡಿ ಸ್ವಾಮೀ ನಮ್ಮ ಪಾಡು ಯಾರಿಗೆಬೇಕು ಹೇಳಿ ! ದೊಡ್ಡವರನ್ನು ಕೇಳಿದರೆ ಬೈತಾರೆ, ಚಿಕ್ಕವರಲ್ಲಿ ಯಾರೂ ದೆವ್ವಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ನುರಿತವರಲ್ಲ. ಒಂದು ಗುಟ್ಟು ಹೇಳಲೋ ? ನಮ್ಮಲ್ಲಿ ಅನೇಕ ದೊಡ್ಡವರಿಗೂ ದೆವ್ವದ ಭಯ ಇತ್ತು. ಅವರಲ್ಲೂ ಕೆಲವರು ರಾತ್ರಿ ಮೂತ್ರವಿಸರ್ಜನೆಗೆ ಅವಸರವಾದರೂ ನೋವನುಭವಿಸುತ್ತಾ ತಡೆದುಕೊಂಡು ಬೆಳಿಗ್ಗೇನೇ ಹೋಗುವುದು ನಮಗೆ ಗೊತ್ತಿರದ ವಿಷಯವೇನಲ್ಲ ಬಿಡಿ !

ಇನ್ನು ನೆಂಟರಮನೆಗಳಿಗೆ ಹೋದರೆ ಅಲ್ಲಿಯ ದೆವ್ವ-ಭೂತ-ಪಿಶಾಚಿಗಳ ನೆಟ್‍ವರ್ಕೇ ಬೇರೆ ! ಇದೆಲ್ಲಾ ಒಂಥರಾ ಮೊಬೈಲ್ ನೆಟ್‍ವರ್ಕ್ ಇದ್ದಹಾಗೇ. ಕೆಲವು ರೋಮಿಂಗ್ ನಲ್ಲಿರುತ್ತವೆ. ಕೆಲವು ರೋಮಿಂಗ್ ಸೌಲಭ್ಯ ಇಲ್ಲದವು. ರೋಮಿಂಗ್ ಸೌಲಭ್ಯ ಇದ್ದವು ಅಲ್ಲೂ ಬರುತ್ತಿದ್ದವು! ಅಮ್ಮನ ಜೊತೆಗೆ ಅಮ್ಮನ ತವರುಮನೆಗೆ ಹೋದಾಗ ಅಥವಾ ಇನ್ನೆಲ್ಲಿಗೋ ಹೋದಾಗ ನಮಗೆ ಈ ವಿಷಯದಲ್ಲಿ ಯಮಯಾತನೆ! ಅಲ್ಲಿ ಇನ್ನೂ ಕಷ್ಟ. ರಾತ್ರಿ ಎಲ್ಲಾಕಡೆಯೂ ನಮ್ಮನೆಯ ರೀತಿಯಲ್ಲೇ ದೀಪ ಇರಲು ಸಾಧ್ಯವೇ ? ಅಲ್ಲಿರುವ ದೀಪವನ್ನೇ ಅವಲಂಬಿಸಿ ನಾವು ನಮ್ಮ ವಿಸರ್ಜನಾ ವ್ಯವಹಾರವನ್ನು ತಹಬಂದಿಗೆ ತಂದುಕೊಳ್ಳುವುದು ಬಾರೀ ಸಾಹಸದ ಕೆಲಸವೇ ಆಗುತ್ತಿತ್ತು. ಹಗಲು ಹೊತ್ತಿನಲ್ಲಿ ಅಲ್ಲಿನ ಹುಡುಗರ ಜೊತೆ ಆಡಿ ಹೊತ್ತುಕಳೆಯುವ ನಮಗೆ ಹಾಗೂ ಹೀಗೂಮಾಡಿ ರಾತ್ರಿಯನ್ನು ಕಳೆಯಬೇಕಾಗಿ ಬರುತ್ತಿತ್ತು. ಕನಸಿನಲ್ಲಿ ದೆವ್ವಗಳನ್ನು ಕಂಡರಂತೂ ಹಾಸಿಗೆಯೆಲ್ಲಾ ಒದ್ದೆಯಾಗುವ ಪ್ರಸಂಗ! ಯಾರಲ್ಲಿ ಹೇಳುವುದು ? ಹೇಳಲಾರೆವು ಹೇಳದೇ ಇರಲಾರೆವು.

ದೆವ್ವಗಳ ಕಾಟ ಕೆಲವು ಊರುಗಳಲ್ಲಿ ತುಂಬಾ ಜಾಸ್ತಿ ಇತ್ತೆಂದು ಕೇಳುತ್ತಿದ್ದೆವು. ಊರಿನಲ್ಲಿ ವರ್ಷಕ್ಕೊಮ್ಮೆ ಹಸಿರುಪೂಜೆ/ ಗಡಿ ಪೂಜೆ/ ಊರಹಬ್ಬ / ಆರಿದ್ರಾಮಳೆ ಹಬ್ಬ ಎಂಬೆಲ್ಲಾ ಹೆಸರಲ್ಲಿ ಕರೆಸಿಕೊಳ್ಳುವ ಬೇಸಿಗೆ-ಮಳೆ ಗಡಿಕಾಲದ ಪೂಜೆಯೊಂದು ನಡೆಯುತ್ತಿತ್ತು. ಆಗ ಅಲ್ಲಿ ಸಾವಿರಾರು ಬಾಳೆಹಣ್ಣುಗಳನ್ನೂ, ಹತ್ತಾರು ಎಳೆನೀರುಗಳನ್ನೂ, ನೂರಾರು ತೆಂಗಿನಕಾಯಿಗಳನ್ನೂ, ಅನ್ನ, ಹಲಸಿನ ಹಣ್ಣಿನ ಕಡುಬು ಮೊದಲಾದವನ್ನೂ ಊರ ಜಟಗ, ಮಾಸ್ತಿ[ಮಹಾಸತಿ], ಚೌಡಿ, ನಾಗರು, ಕೀಳು ಇವುಗಳಿಗೆಲ್ಲಾ ನಿವೇದಿಸುತ್ತಿದ್ದರು. ಕೀಳಿಗೆ ಹಾಕುವ ಅನ್ನದ ಬಲಿಯನ್ನು ನೋಡಿದಾಗ ಅವುಗಳಿಗೆ ಕುಡಿಯಲು ಎಳೆನೀರು ಕಡಿದು ಅಲ್ಲಲ್ಲಿ ಇಡುವಾಗ 'ಕೀಳು' ಎಂದರೇನೆಂದು ಯಾರನ್ನಾದರೂ ಕೇಳಿದರೆ ಅವರು ಸರಿಯಾಗಿ ಉತ್ತರಿಸುತ್ತಲೇ ಇರುತ್ತಿರಲಿಲ್ಲ. ಕೀಳು ಎಂದರೆ ದೆವ್ವ-ಭೂತಗಳಿಗೆ ಇರುವ ಪರ್ಯಾಯ ಪದ ಎನ್ನುವುದು ನಮಗೆ ತಿಳಿದಿರಲಿಲ್ಲ. ಊರು ಬೆಳೆಯುತ್ತಾ ಬಂದಹಾಗೇ ದೆವ್ವಗಳ ಸಂಖ್ಯಾಬಲ ಕಮ್ಮಿಯಾಯಿತೋ ಅಥವಾ ಜನರಿಗೆ ಆ ಭಾವನೆ ಕಮ್ಮಿಯಾಯಿತೋ ಸೃಷ್ಟಿಕರ್ತನೇ ಬಲ್ಲ. ಈಗೀಗ ದೆವ್ವಗಳ ಸುದ್ದಿ ಅಷ್ಟಾಗಿ ಕೇಳುವುದಿಲ್ಲವಪ್ಪ ! ಹಳ್ಳಿಗಳಲ್ಲಿ ಪ್ರತೀ ಮನೆಯ ತೋಟದಲ್ಲೋ ಗದ್ದೆಯಲ್ಲೋ ಮನೆಯ ಹಿತ್ತಿಲಲ್ಲೋ ಬೀಡುಬಿಟ್ಟು ಸ್ಥಾನ ಪಡೆಯುವ ನಾಗ ಚೌಡಿಗಳಿಗೆ ಪಟ್ಟಣ ಮತು ಶಹರಗಳಲ್ಲಿ ಅಷ್ಟೆಲ್ಲಾ ಆಸಕ್ತಿ ಇರುವುದಿಲ್ಲವೇ ? ಇಂಚಿಂಚು ಜಾಗಕ್ಕೂ ಕೊರತೆಯಿರುವ ಈ ಕಾಂಕ್ರೀಟ್‍ಕಾಡು ಅವಕ್ಕೆ ಬೇಸರವೇನೋ ಅನಿಸುತ್ತದೆ. ನೀವೇ ನೋಡಿ ನಗರಗಳಲ್ಲಿ ಎಲ್ಲೋ ಅಲ್ಲಲ್ಲಿ ದೇವಸ್ಥಾನಗಳ ಸಮೀಪ ಬಿಟ್ಟರೆ ಇನ್ನೆಲ್ಲಾದರೂ ನಾಗ ಚೌಡಿ ಮುಂತಾದ ದೇವತೆಗಳ ಜಾಗವನ್ನು ಕಾಣುವಿರೇ?

ದೆವ್ವ ಕಲ್ಲೆಸೆಯುವುದು ಒಂದು ಚಮತ್ಕಾರ! ಒಮ್ಮೆ ನಮ್ಮಲ್ಲಿನ ಗಾಜಣ್ಣನ ಕಣ್ಣಿಗೆ ದೆವ್ವ ಕಲ್ಲೆಸೆದಿತ್ತು. ಆತನಿಗೆ ಕಣ್ಣೊಳಗೆ ಸಣ್ಣ ಕಲ್ಲು ತುಣುಕು ಓಡಾಡಿದಂತೇ ಭಾಸವಾಗಿ ನೋವಾಗುತ್ತಿತ್ತಂತೆ. ಕಣ್ಣು ಕೆಂಪಾಗಿ ಊದಿಕೊಂಡಿದ್ದುದ್ದನ್ನು ನೋಡಿದ್ದಕ್ಕೆ ನಾನೇ ಸಾಕ್ಷಿ! ಆದರೆ ಅದು ದೆವ್ವದ ಕಲ್ಲೆಸೆತವೇ ಅಥವಾ ಗಾಳಿಯಲ್ಲಿನ ಧೂಳು ಗಾಳಿಬೀಸುವ ರಭಸಕ್ಕೆ ಕಣ್ಣಿಗೆ ಹಾರಿರುವುದೇ ಎಂಬುದು ಅರ್ಥವಾಗದೇ ಉಳಿದ ವೈಜ್ಞಾನಿಕ ವಿಚಾರ. ದೆವ್ವಗಳನ್ನು ’ಗಾಳಿ’ ಎಂದೂ ಕರೆಯಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಚಿಕ್ಕಮಕ್ಕಳನ್ನು ಕೆಟ್ಟಜಾಗಗಳೆಂದು ಗುರುತಿಸಲ್ಪಟ್ಟ ’ಗೋಳ್‍ಮಕ್ಕಳ ಹೊಂಡ’ ದಂತಹ ಜಾಗಗಳ ಹತ್ತಿರವೂ ಕರೆದೊಯ್ಯಬಾರದಂತೆ! ಅಕಸ್ಮಾತ್ ಕರೆದೊಯ್ದರೆ ಅವರಿಗೆ ಮರಳಿ ಬಂದಮೇಲೆ ಕೆಂಪು ಹಾನ ಎತ್ತುವುದು [ಓಕುಳಿನೀರು], ಕಲ್ಲುಪ್ಪು ಮಂತ್ರಿಸಿ ಬೆಂಕಿಗೆ ಎಸೆಯುವುದು ಇದೆಲ್ಲಾ ನಡೆಯುತ್ತಿತ್ತು. ಹಾಗೂ ಮಕ್ಕಳು ರಾತ್ರಿ ಚೀರುತ್ತಲೇ ಇದ್ದರೆ ಮಾರನೇ ದಿನ ಸತ್ಯಹೆಗಡೇರು, ಕೊಡ್ಲಮನೆ ಭಟ್ರು ಇವರಲ್ಲಿ ಯಾರಾದ್ರೂ ವಿಭೂತಿ ಮಂತ್ರಿಸಿಕೊಡುತ್ತಿದ್ದರು. ಅದನ್ನು ತಂದು ಹಾಕಿದಾಗ ಮಗುವಿನ ಕೂಗು ಮಾಯ ! ಇದು ಕಾಕತಾಳೀಯವೋ ಅಥವಾ ನಮಗರಿವಿರದ ಇನ್ಯಾವುದೋ ಕ್ರಿಯೆಯೋ ಅರ್ಥವಾಗದಲ್ಲ.


ಕೆಲವು ಜನಾಂಗಗಳಲ್ಲಿ ದೆವ್ವ ಕಡಿಯುವ ಪರಿಪಾಠವಿತ್ತು. ಯಾರಿಗಾದರೂ ದೆವ್ವದ ಕಾಟ ಶುರುವಾಗಿದೆಯೆಂದು ತಿಳಿದರೆ ’ನೋಟ ನೋಡುವವ’ರನ್ನು ಕರೆಯುತ್ತಿದ್ದರು. ನೋಟನೋಡುವುದು ಎಂದರೆ ಅದೊಂದು ಚಿಕಿತ್ಸೆ. ಅದರ ಕ್ರಮ ಹೇಗೆಂದರೆ ಮನೆಯ ಜಗುಲಿಯ ಮೂಲೆಯೊಂದರಲ್ಲಿ ಮಣೆಯಮೇಲೆ ಹಂದಿದಾಡೆಯಲ್ಲಿ ನೋಟನೋಡುವ ಅನಕ್ಷರಸ್ಥ ವ್ಯಕ್ತಿ ಅದೇನನ್ನೋ ಗೀಚುತ್ತಾ ಕಂಡ ಕಂಡ ಹಾಗೇ ಏನನ್ನೋ ಬಡಬಡಾಯಿಸುತ್ತಾ ಮಧ್ಯೆಮಧ್ಯೆ ಸುತ್ತಿದ ಬಾಳೆ ಎಲೆಯನ್ನು ಕತ್ತರಿಸುತ್ತಾ ಕೂರುತ್ತಿದ್ದ. ತಲೆಯನ್ನು ಜೋರಾಗಿ ಅಲ್ಲಾಡಿಸುವ ಆತ ಸ್ವಲ್ಪಮಟ್ಟಿಗೆ ಕೂದಲನ್ನೂ ಅಲ್ಲಾಡಿಸುತ್ತಾ ಬಾಯಲ್ಲಿ

"ಓಹೋಹೋಸ್ಸುಹಾ.....ಉಸುವಸುವಾ......ಉಸುವಸುವಾ.....ಊಂ.ಹೂಂ....ಸ್ಸುವಾ....ಮಾರಮ್ಮ ನಿನುಗೇ ಮೂರ್ಕೋಳಿ ನಿನುಗೇ ಆರ್ಕೋಳಿ ನಿನುಗೇ ಅಹ ಅಹ ಹಾಂ ಹಾಂ ಹಾಂ ಷಟ್ "

ಎಂದೆಲ್ಲಾ ಹಲುಬುತ್ತ ವಿಶಿಷ್ಟವಾದ ಧ್ವನಿಯನ್ನು ಹೊರಡಿಸುತ್ತಿದ್ದ. ಗಂಟೆಗಟ್ಟಲೇ ಒದರಾಡುವ ಆತ ಕೊನೆಯ ಘಟ್ಟದಲ್ಲಿ ಮುಂದೆ ಇಟ್ಟ ತೆಂಗಿನಕಾಯಿಯನ್ನು ಎತ್ತಿ ಒಂದೇ ಏಟಿಗೆ ಅದನ್ನು ನೆಲಕ್ಕಪ್ಪಳಿಸಿ ಒಡೆದಾಗ ದೆವ್ವ ಕಡಿದು ಮುಗಿಯಿತೂ ಅಂತರ್ಥ! ನೋಟನೋಡಿಸುತ್ತಾರೆಂಬ ಗಾಳಿಸುದ್ದಿ ನಮಗೆ ಮೊದಲೇ ಬೇರೆ ಮಕ್ಕಳ ಮುಖಾಂತರ ಸಿಕ್ಕಿರುತ್ತಿದ್ದು, ದೂರದವರೆಗೆ ಕೇಳಿಸುವ ಆತನ ಅಬರಾಟದ ಸದ್ದಿಗೆ ಆತ ಕುಳಿತ ಅಂತಹ ಮನೆಗೆ ನಾವು ನೋಡಲು ಹೋಗುತ್ತಿದ್ದೆವಾದರೂ ಕೊನೇಕ್ಷಣದಲ್ಲಿ ಕಣ್ಣೆಲ್ಲಾ ಕೆಂಪಗೆಮಾಡಿಕೊಂಡು ಆತ ತೆಂಗಿನಕಾಯಿ ಬಡಿದು ಒಡೆಯುವ ಸಮಯದಲ್ಲಿ ದೂರದಲ್ಲಿ ಅಡಗಿ ನೋಡುತ್ತಿದ್ದೆವು! ಸೊಸೆ ಇರುವ ಮನೆಯಲ್ಲಿ ಕೆಲವೊಮ್ಮೆ ಅತ್ತೆಗೂ ಸೊಸೆಗೂ ಆಗಿಬರದಾಗ ಸೊಸೆಯ ಮೈಮೇಲೆ ’ದೆವ್ವ’ ಬರುತ್ತಿತ್ತು ! ನೋಟನೋಡಿದಾಗ ಬಿಟ್ಟುಹೋಗುವ ಆ ದೆವ್ವ ಕೆಲವು ತಿಂಗಳುಗಳ ನಂತರ ಮತ್ತೆ ಒಕ್ಕರಿಸುತ್ತಿತ್ತು. ಕೆಲವು ಗೂರಲು ಉಬ್ಬಸದ ರೋಗಿಗಳಿಗೆ ರೋಗ ಉಲ್ಬಣಿಸಿ ಶ್ವಾಸೋಚ್ವಾಸವೇ ಕಷ್ಟವಾದಾಗ ಅದು ’ಗಾಳಿ ಮೆಟ್ಟಿದ್ದು’ ಎನ್ನುವ ಜನರಿದ್ದು ನೋಟನೋಡಿದರೆ ಕಮ್ಮಿಯಾಗುತ್ತಿತ್ತಂತೆ. ಅದಕ್ಕೆ ಯಾವ ವೈಜ್ಞಾನಿಕ ಕಾರಣವಿತ್ತು ಅದೂ ಅರ್ಥವಾಗಲಿಲ್ಲ. ಕೊಳ್ಳಿದೆವ್ವ ಎಂಬುದನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ ಬಿಡಿ. ಯಾಕೆಂದರೆ ನಿಮ್ಮೆಲ್ಲರ ಜೀವನದಲ್ಲೂ ಅಲ್ಲಿಲ್ಲಿ ಆ ಸುದ್ದಿ ಬಂದಿರುತ್ತದೆ. ಕೊನೇಪಕ್ಷ ಮಾಧ್ಯಮದಲ್ಲಾದರೂ ನೋಡಿರುತ್ತೀರಿ. ಕೊಳ್ಳಿದೆವ್ವಗಳು ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಕೈಬೆರಳುಗಳನ್ನೇ ಬೆಂಕಿಯಕೊಳ್ಳಿಯಂತೇ ಉರಿಸಿಕೊಂಡು ಓಡಾಡುವ ಇನ್ನಿಲ್ಲದ ವೈಷಿಷ್ಟ್ಯದವು.

ದೆವ್ವಗಳ ಬಗ್ಗೆ ಸ್ವಾರಸ್ಯಕರ ಘಟನೆಗಳೂ ಇವೆ. ಒಂದಿನ ನಮ್ಮ ಗುರುಮಾಸ್ತರು ದೆವ್ವದಕಥೆಯೊಂದನ್ನು ತರಗತಿಯಲ್ಲಿ ಬಿತ್ತರಿಸಿದ್ದರು. ಅದೇನೆಂದು ಕೇಳಿ-- ಬಡ ಬ್ರಾಹ್ಮಣನೊಬ್ಬನಿಗೆ ದೆವ್ವಾ ಎಂದರೆ ಭಯಂಕರ ಹೆದರಿಕೆಯಿತ್ತಂತೆ. ಆತ ಕಾಡದಾರಿಯಲ್ಲಿ ಒಮ್ಮೆ ನಡೆದುಹೋಗುವಾಗ ಹೆಗಲಮೇಲಿದ್ದ ಅಂಗವಸ್ತ್ರ [ಟವೆಲ್ ಥರದ ಶಾಲು] ಹಾದಿಯ ಪಕ್ಕದ ಮುಳ್ಳಿನ ಗಿಡದ ಕೊಂಬೆಗೆ ಸಿಕ್ಕಾಕಿಕೊಂಡು, ಆತ ಮುಂದೆ ಹೋಗಲು ಪ್ರತ್ನಿಸಿದಾಗಲೆಲ್ಲಾ ಹಿಂದೆ ಯಾರೋ ಎಳೆದ ಅನುಭವ! ತಿರುಗಿ ನೋಡಿಬಿಟ್ಟರೆ ದೆವ್ವ ಏಕ್ ದಂ ಝಾಡಿಸಿ ಮುಖಕ್ಕೇ ಹೊಡೆದರೆ ಎಂಬ ಅತೀವ ಆತಂಕ. ಹೃದಯಬಡಿತ ೭೨ ಹೋಗಿ ೧೨೨ ! ವೇದ ಓದುವಾಗ ಗುರುಗಳು ಹೇಳಿದ್ದರಂತೆ " ನೋಡಪ್ಪಾ ವೃಕ್ಷಗಳಲ್ಲಿ ಅದರಲ್ಲೂ ಅಶ್ವತ್ಥವೃಕ್ಷದಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಬುಡದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ತುದಿಯಲ್ಲಿ ಶಿವನೂ ಇರುತ್ತಾರೆ. ಅದಕ್ಕೇ ಅಶ್ವತ್ಥವೃಕ್ಷವನ್ನು ವೃಕ್ಷರಾಜ ಎನ್ನುತ್ತಾರೆ. ಅಕಸ್ಮಾತ್ ಕಾಡುಮೇಡುಗಳಲ್ಲಿ ಅಲೆಯುವಾಗ ನಮಗೆ ಹೆದರಿಕೆಯಾದರೆ

ಮೂಲತೋ ಬ್ರಹ್ಮರೂಪಾಯಾ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ||

ಎಂದು ಪ್ರಾರ್ಥಿಸಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ. " ಎಂಬುದಾಗಿ. ಗಡಿಬಿಡಿಯಲ್ಲಿ ಆತ ಆ ಶ್ಲೋಕವನ್ನು ನೆನಪಿಸಿಕಳ್ಳುತ್ತಿದ್ದರೂ ದೇಹಪೂರ್ತಿ ಬೆವತುಹೋಗಿ ಕಂಪಿಸುತ್ತಾ

ಮೂಲತೋ ಮಧ್ಯರೂಪಾಯ ಮಧ್ಯತೋ ಮೂಲರೂಪಿಣೇ |
ಅಗ್ರತೋ ...........ಎಂದೆಲ್ಲಾ ತೊದಲುತ್ತಾ ಹೇಗೂ ಸಾಯುವುದೇ ಗ್ಯಾರಂಟಿ ಎಂದುಕೊಂಡು ಮನೆಯವರನ್ನೆಲ್ಲಾ ನೆನಪಿಸಿಕೊಂಡು ದುಃಖಿಸುತ್ತ ಒಮ್ಮೆ ಮನಸ್ಸು ಗಟ್ಟಿಮಾಡಿ ಓರೆಗಣ್ಣಿನಲ್ಲಿ ನಿಧಾನಕ್ಕೆ ಕತ್ತು ತಿರುವಿ ನೋಡಿದನಂತೆ.....ನೋಡುತ್ತಾನೆ ಪಂಚೆ ಮುಳ್ಳಿನ ಪೊದೆಗೆ ಸಿಕ್ಕಿಕೊಂಡಿತ್ತು! ’ಬದುಕಿದೆಯಾ ಬಡಜೀವವೇ?’ ಎಂದುಕೊಳ್ಳುತ್ತಾ ಮನಗೆ ಬಂದು ಗಂಟೆಗಟ್ಟಲೇ ವಿಶ್ರಮಿಸಿದನಂತೆ!

ದೆವ್ವಗಳಲ್ಲಿ ಮರಾಠಿ ದೆವ್ವ, ಕನ್ನಡ-ತಮಿಳು-ತೆಲುಗು ಈ ರೀತಿ ಭಾಷಾವಾರು ದೆವ್ವಗಳಿದ್ದವೋ ಇಲ್ಲವೋ ಗೊತ್ತಿಲ್ಲ. ಆದರೂ ದೇಶಾದ್ಯಂತ ದೆವ್ವಗಳು ಇದ್ದವು ಎಂಬುದು ಮಾತ್ರ ಖಾತ್ರಿ. ದೆವ್ವಗಳು ಈಗ ಅಲ್ಪಸಂಖ್ಯಾತರ ಸಾಲಿಗೆ ಸೇರಿವೆಯೇನೋ ಅನಿಸುತ್ತಿದೆ! ಅಲ್ಪಸಂಖ್ಯಾತರಿಗೆ ಕೊಡಬೇಕಾದ ಆದ್ಯತೆಗಳನ್ನು ತಮಗೂ ಕೊಡಿ ಎಂದು ಹೇಳಲು ಅವು ಮುಂದೆಬಂದರೆ ನೋಡಲಾದರೂ ಸಿಗುತ್ತಿದ್ದವೇನೋ! ಸಾಕು ಆಯ್ತಾ ? ಹುಷಾರು ನೀವಿದನ್ನು ಓದಿ ಮುಗಿಸಿದ ದಿನ ಎಲ್ಲಾದರೂ ಕೊಳ್ಳಿದೆವ್ವ ಸಿಕ್ಕಿದರೆ ಹೇಳಲು ಮರೀಬೇಡಿ. ದೆವ್ವಗಳ ಭಯದಲ್ಲಿ ಅನುಕೂಲವಾಗಲಿ ಎಂದು ಕವಿ ದಿ| ಬಿ.ಎಂ.ಶ್ರೀಕಂಠೈಯ್ಯನವರು ನಮಗೆ ಕರುಣಿಸಿದ ಹಾಡಿನೊಂದಿಗೆ[ಹಾಡನ್ನು ಕತ್ತಲೆಯಲ್ಲಿ ಬೆಳಕೇ ಕೈ ಹಿಡಿದು ಮಕ್ಕಳನ್ನು ಕಾಪಾಡು ಎಂಬ ಈ ಅರ್ಥದಲ್ಲಿ ಬಳಸಿಕೊಂಡು] ದೆವ್ವಗಳ ಪುರಾಣವನ್ನು ಸದ್ಯಕ್ಕೆ ಮಡಚಿಟ್ಟು ಅದಕ್ಕೆ ಮಂಗಲಾರತಿ ಮಾಡೋಣ:


ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆಮ್ಮನು .......

Monday, January 3, 2011

ಸೂತ್ರಧಾರಗೊಂದನೆ


ಸೂತ್ರಧಾರಗೊಂದನೆ

ಇಗೋ ನಿನಗೆ ವಂದನೇ
ತಗೋ ಸದಾಭಿನಂದನೇ

ಮುನ್ನ ನೋವನೆಲ್ಲ ಮರೆತು
ನನ್ನ ಮನದಿ ಭಾವತಳೆದು
ಚೆನ್ನಾಗಿಹ ಶಬ್ದಗಳನು
ತಿನ್ನಬಡಿಸುವಾತನೇ

ರನ್ನ ಪಂಪ ಹರಿಹರಾದಿ
ಚಿನ್ನದಂಥ ಕವಿಗಳಿಂದ
ಕನ್ನವಿಟ್ಟು ಜನರಹೃದಯ
ಜೊನ್ನ ಸಮಯದೊಯ್ದನೇ !

ಅನ್ನನೀರು ಬಿಟ್ಟು ಅಳುವ
ಸೊನ್ನೆಯಾದ ಹಲವು ಮನಕೆ
ಕೆನ್ನೆ ಚಿವುಟಿ ಮುದವನೀಡಿ
ಪನ್ನದಲ್ಲಿ ಅಳೆದನೇ

ಹೊನ್ನು ಹೆಣ್ಣು ಮಣ್ಣಿಗೆಲ್ಲಾ
ಮನ್ನಣೆಯನು ನೀಡದಂತೇ
ಬೆನ್ನು ತಟ್ಟಿ ಬುದ್ಧಿಹೇಳಿ
ಚೆನ್ನುಡಿಯಲಿ ನಗುವನೇ

ಹುನ್ನಾರದ ಹುಳುಕು ಮನಕೆ
ನಿನ್ನೆ ಮೊನ್ನೆ ಗಳನು ತಿಳಿಸಿ
ಸನ್ನೆಯಲೇ ತಿದ್ದಿ ತೀಡ್ವ
ನನ್ನೊಡೆಯನೇ ವಂದನೇ

Sunday, January 2, 2011

ಸೊಗದೇಬೇರಿನ ಶರಬತ್ತು !


ಸೊಗದೇಬೇರಿನ ಶರಬತ್ತು !

ಹದಿನಾರಾಣೆ ಸತ್ಯ ಅಂದರೆ ನಮಗ್ಯಾರಿಗೂ ಗೊತ್ತಿರದ ನಾರು ಬೇರುಗಳ ಕಷಾಯಗಳನ್ನು ಯಾವುದೋ ಒಂದು ಹದದಲ್ಲಿ ಬೆರೆಸಿ ಅಂತೂ ರೋಗಗಳನ್ನು ವಾಸಿಮಾಡುವ ನಮ್ಮ ತಿಪ್ಪಾ ಭಟ್ಟರಿಗೆ ಸೊಗದೇಬೇರಿನ ಶರಬತ್ತು ಎಂದರೆ ಎಲ್ಲಿಲ್ಲದ ಪ್ರೀತಿ ! ಅವರಾಯಿತು ಅವರ ಕೆಲಸವಾಯಿತು ಪಾಪ ಯಾರ ಗೋಜಿಗೂ ಹೋಗದ ಮುಗ್ಧ ಜೀವ ಅದು! ಭಟ್ಟರು ಕಾಯಂ ಬಳಸುವ ದ್ರಾವಣಗಳಲ್ಲಿ ಸೊಗದೇಬೇರಿನ ಶರಬತ್ತೂ ಒಂದು. ಯಾರಿಗೇ ಏನೇ ಆದರೂ ಪ್ರಥಮವಾಗಿ ಅವರು ಕುಡಿಯಲು ಕೊಡುವುದು ಸೊಗದೇಬೇರಿನ ಶರಬತ್ತು. ಅಂದಹಾಗೆ ಈ ಶರಬತ್ತಿನ ಪರಿಚಯ ನಿಮಗಿರಬೇಕಲ್ಲ? ಇಲ್ಲವೇ ? ಹಾಗಾದರೆ ಒಂದೋ ನಾಗಸಂದ್ರದ ಮೂರನೇ ಅಡ್ಡರಸ್ತೆ ಹಾಗೂ ನಾಲ್ಕನೇ ಮುಖ್ಯರಸ್ತೆ ಸೇರುವ ಜಾಗದಲ್ಲಿರುವ ’ತಿರುಮಲೇಶ’ ನಾಮಧೇಯದ ಮನೆಗೆ ಭೇಟಿಕೊಡಿ ಅಥವಾ ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಯಾವುದೇ ಆಯುರ್ವೇದದ ಅಂಗಡಿಗೆ ತೆರಳಿ ಅಲ್ಲಿ ಕೇಳಿ ಸಿಗುತ್ತದೆ! ಅದರ ರುಚಿಯನ್ನು ಬಲ್ಲವರೇ ಬಲ್ಲರು-ಇದು ಭಟ್ಟರಿಂದ ಕಡಾ ಪಡೆದು ಹೇಳಿದ ಮಾತು !

ಎಡವಟ್ಟಾಗಿದ್ದು ಎಲ್ಲಿ ಗೊತ್ತೇ? ಕೆಲವು ವರ್ಷಗಳ ಹಿಂದೆ ನಾನೂ ಅವರೂ ಯಾರದೋ ಮನೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ರೇಡಿಯೋ ಕೂಗುತ್ತಿತ್ತು. ಬೆಳ್ಳಂಬೆಳಿಗ್ಗೆ " ಮಗೂಗೆ ಏನಾಯ್ತು .......ವುಡ್ವರ್ತ್ ಗ್ರೈಪ್ ವಾಟರ್ ಕೋಡೀಯಾ ಮಗುವಾಗಿದ್ದಾಗ ನಿಮ್ಮಮ್ಮಂಗೂ ನಾನು ಅದನ್ನೇ ಕೊಡ್ತಿದ್ದೆ " ಎಂದು ಅಜ್ಜಿ ಜಾಹೀರಾತಿನಲ್ಲಿ ಕೂಗುತ್ತಿರುವುದು ಭಟ್ಟರನ್ನು ಕೆರಳಿಸಿಬಿಟ್ಟಿತ್ತು !

" ಇವ್ಕೆಲ್ಲಾ ತಲೆಯಿಲ್ಲ ಜನಮಳ್ಳೊ ಜಾತ್ರೆಮಳ್ಳೋ ನಾವೆಲ್ಲಾ ಬದುಕಿ ಬೆಳೀಲಿಲ್ವಾ ಹೇಳ್ತಾರಪ್ಪ ಗ್ರೈಪ್ ವಾಟರಂತೆ ಗ್ರೈಪ್ ವಾಟರು ನಾವು ಕುಡಿಯೋ ಕಷಾಯಾನೋ ಸೊಗದೇಶರಬತ್ತನ್ನೋ ಕುಡಿಸಿದರೆ ಆಯ್ತಪ್ಪ....ಮಕ್ಳಿಗೆಲ್ಲಾ ಏಕ್ ದಂ ಕಮ್ಮಿ ಆಗ್ತದೆ ಮಾಡೂಕೆ ಬೇರೇ ಕೆಲ್ಸಿಲ್ಲಾ ಅದಕೇ ಇಂಥಾದ್ನೆಲ್ಲಾ ಹಾಕ್ತರೆ ರೇಡಿಯೋದಲ್ಲಿ "

ಭಟ್ಟರು ಏಕಾಏಕಿ ಕೋಪಾವಿಷ್ಟರಾಗಿದ್ದರು. ಅಷ್ಟು ಸಣ್ಣ ವಿಷಯಕ್ಕೆ ಭಟ್ಟರು ನಾರಸಿಂಹಾವತಾರ ತಾಳಿಬಿಟ್ಟಿದ್ದರು. ನಿಮಗೆ ಹೇಳಲು ಮರೆತಿದ್ದೆ-- ಅಲ್ಲಿಗೆ ನಾವು ಹೋಗಿದ್ದು ಯಾರಿಗೋ ಚ್ಯವನಪ್ರಾಶ ಮಾಡಿಕೊಡಲಾಗಿ. ಚ್ಯವನಪ್ರಾಶವನ್ನು ನೀವು ಮನದಣಿಯೇ ತಿಂದಿರಬಹುದು ಅಥವಾ ಕಾಸು ಜಾಸ್ತಿ ಅಂತ ಬಿಟ್ಟಿರಲೂ ಬಹುದು. ಕ್ಯಾಡ್ ಬರೀಸ್ ಚಾಕೋಲೇಟ್ ಗಿಂತ ರುಚಿಯಲ್ಲಿ ಹೆಜ್ಜೆ ಮುಂದಿರುವ ಚ್ಯವನಪ್ರಾಶದಲ್ಲಿ ಇರುವ ಸಾಮಾನುಗಳೇ ಅಂಥದ್ದು. ಉತ್ತುತ್ತೆ,ಒಣ ದ್ರಾಕ್ಷಿ, ಬಾದಾಮಿ, ಯಾಲಕ್ಕಿ, ಲವಂಗ, ಗಸಗಸೆ, ತುಪ್ಪ ಇತ್ಯೇತ್ಯಾದಿ ಘಟಾನುಘಟಿ ಪದಾರ್ಥಗಳನ್ನೆಲ್ಲಾ ಗೊತ್ತಾದ ಹದಕ್ಕೆ ಮಿಶ್ರಣಮಾಡಿ ಜಜ್ಜಿ-ಅರೆದು ಯಾವುದೋ ಹಂತದಲ್ಲಿ ಅಂತೂ ಕಾಯಿಸಿಯೋ ಬೇಯಿಸಿಯೋ ಎಲ್ಲಾ ಮುಗಿದಮೇಲೆ ತಣ್ಣಗಾದ ಅದುವೆ 'ಚ್ಯವನಪ್ರಾಶ'.

ಚ್ಯವನಪ್ರಾಶ ಎಂಬ ಹೆಸರು ಅದಕ್ಕೆ ಬರಲು ಕಾರಣವಿದೆ. ಚ್ಯವನನೆಂಬ ಋಷಿಕುಮಾರನಿಗೆ ಎಳವೆಯಲ್ಲೇ ಇರಬೇಕೆಂದೂ ಮುಪ್ಪು ಆವರಿಸಬಾರದೆಂದೂ ಆಸೆ ಹುಟ್ಟಿತು. ಆಗ ಆತ ಹಲವು ಮಾರ್ಗಗಳಲ್ಲಿ ಅದಕ್ಕೆ ಚಿಕಿತ್ಸೆಗಳನ್ನು ಮಾಡಿಕೊಳ್ಳತೊಡಗಿದ. ಆಗ ಹುಟ್ಟಿದ್ದೇ ಈ ಚ್ಯವನಪ್ರಾಶ. ’ಪ್ರಾಶ’ ಎನ್ನುವುದು ಸಂಸ್ಕೃತದ ಮರಿ! ಪ್ರಾಶನ ಎಂದರೆ ತಿನ್ನಿಸುವುದು, ಅದರ ಬಾಲ ಕತ್ತರಿಸಿದಾಗ ಸಿಗುವುದೇ ಪ್ರಾಶ. ಆ ಪ್ರಾಶವನ್ನು ಅಂದರೆ ತಿನ್ನಬಹುದಾದದ್ದನ್ನು ಚ್ಯವನನ ನೆನಪಿನಲ್ಲಿ ಅದೇ ಹೆಸರಿಗೆ ಜೋಡಿಸಿ ಚ್ಯವನಪ್ರಾಶವಾಯಿತು. ಚ್ಯವನಪ್ರಾಶ ತಿಂದವರೆಲ್ಲಾ ಎಳಬರಾಗೇ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದಷ್ಟು ಶಕ್ತಿಯಂತೂ ಬರುವುದು ಖಚಿತ--ಈ ಸಲಹೆ ನಿಮಗೆ ಉಚಿತ ! ಸುಕನ್ಯೆ ಚ್ಯವನನ ರೂಪರಾಣಿ. ಅವಳಿಗಾಗಿ ತನ್ನ ಪ್ರಾಯ ಕಾಪಿಡಲು ಚ್ಯವನ ಪ್ರಯತ್ನಿಸಿದ ಎಂದಮೇಲೆ ನಮ್ಮ ಯುವಜನಾಂಗ ಈ ಕುರಿತು ಸ್ವಲ್ಪ ಯೋಚಿಸಬೇಕಾದ್ದು ನ್ಯಾಯ!

ಭಟ್ಟರಿಗೂ ಚ್ಯವನಪ್ರಾಶಕ್ಕೂ ತೀರಾ ಅನ್ಯೋನ್ಯತೆ ಥಳುಕುಹಾಕಿದ್ದೇನಿಲ್ಲ. ಆದರೆ ಹಲವಾರು ಔಷಧಗಳನ್ನು ಮನೆಯಲ್ಲೇ ತಯಾರಿಸಿಕೊಡುವ ಭಟ್ಟರು ಪುರೋಹಿತರಂತೇ ಅಲ್ಲಲ್ಲಿ ಅಲ್ಲಲ್ಲಿ ತನ್ನ ಅಭಿಮಾನೀ ಶಿಷ್ಯಬಳಗವನ್ನೇ ಹೊಂದಿದ್ದು ಆಗಾಗ ಅವರಿಗೆಲ್ಲಾ ಬೇಕಾದ ಔಷಧವನ್ನೋ ಕಷಾಯವನ್ನೋ ಅವರವರ ಮನೆಗೇ ತೆರಳಿ ಮಾಡಿಕೊಡುವುದು ಭಟ್ಟರ ವಾಡಿಕೆ. ಹಾಗಂತ ಭಟ್ಟರು ಯಾರಲ್ಲೂ ಇದನ್ನು ಬಡಾಯಿ ಕೊಚ್ಚಿಲ್ಲ. ಅವರನ್ನೇ ಕೇಳಿ ಯಾವುದೇ ಕೆಲಸವನ್ನೇ ಆಗಲಿ

" ಆಡದೇ ಮಾಡುವವ ರೂಢಿಯೊಳಗುತ್ತಮನು.
ಆಡಿಮಾಡುವವ ಮಧ್ಯಮನು
ಅಡಿಯೂ ಮಾಡದವ ಅಧಮನೆಂದಾ | ಸರ್ವಜ್ಞ "

ಹೀಗಾಗೀ ನಮ್ಮ ಭಟ್ಟರು ಹಾಗೆಲ್ಲಾ ಮಾತಾಡಿ ಕೆಡಿಸುವುದಿಲ್ಲ. ಒಂದು ಲೋಟ ಸೊಗದೇಶರಬತ್ತನ್ನು ಏರಿಸಿಕೊಂಡು ಚ್ಯವನಪ್ರಾಶ ಮಾಡಲು ಕುಳಿತುಬಿಟ್ಟರೆ ಆರು ಮೂರಾಗಲಿ ಮೂರು ಆರಾಗಲಿ ಅದು ಮುಗಿದಮೇಲೆಯೇ ಏಳುವುದು. ಮಧ್ಯೆ ವಿರಾಮವವೇ ಇರುವುದಿಲ್ಲ. ಚ್ಯವನಪ್ರಾಶ ಮಾಡುವುದು ತಿಂದಷ್ಟು ಸುಲಭವಲ್ಲ, ಕಮ್ಮೀ ಕಮ್ಮೀ ಅಂದ್ರೂ ೩-೪ ಗಂಟೆಕಾಲ ಬೇಕೇ ಬೇಕು, ಮಧ್ಯೆ ನಿಲ್ಲಿಸುವ ಹಾಗಿಲ್ಲ. ಹೆಚ್ಚೇಕೆ ಉಚ್ಚೆಗೆ ಎದ್ದುಹೋಗಲೂ ಆಗುವುದಿಲ್ಲ. ಅದನ್ನು ಮಾಡುವುದು ವೃತಮಾಡಿದಷ್ಟೇ ಪ್ರಯಾಸಕರ! ಆದರೂ ಯಾವುದೇ ಬೇಸರವಿಲ್ಲದೇ ಈ ಕಾಯಕದಲ್ಲಿ ತಲ್ಲೀನರಾಗುತ್ತಾರೆ. ಅರ್ಥಾತ್ ಬಸವಣ್ಣ ಹೇಳಿದ ಕಾಯಕಯೋಗಿ ಅವರು, ಶ್ರೀಕೃಷ್ಣ ಹೇಳಿದ ಹಾಗೇ ಕರ್ಮಯೋಗಿ ಅವರು.

ಚ್ಯವನಪ್ರಾಶ ಮಾಡುವುದರಲ್ಲೂ ಅದ್ಭುತ ಯಶಸ್ಸನ್ನು ಗಳಿಸಿರುವ ಶ್ರೀಯುತರು ಮಾಡಿದ ಚ್ಯವನಪ್ರಾಶ ತಿಂದವರು ಹೇಳುವಂತೇ " ಒಮ್ಮೆ ತಿಂದರೆ ಬೇರೇ ಬ್ರಾಂಡೆಡ್ ಚ್ಯವನಪ್ರಾಶಗಳನ್ನೆಲ್ಲಾ ನೀವು ಮೂಸಿ ಕೂಡ ನೋಡುವುದಿಲ್ಲ " ಸಾಕಾ ಸರ್ಟಿಫಿಕೇಟು ? ಹಾಗಂತ ಅವರು ಬಳಸುವ ಫಾರ್ಮ್ಯುಲಾಕ್ಕೊಂದು ಪೇಟೆಂಟ್ ಪಡೆಯಬೇಕೆಂಬುದು ಭಟ್ಟರ ಇರಾದೆ. ಆದರೂ ಕೆಲವೊಮ್ಮೆ ಅದರಲ್ಲಿ ವಿರಕ್ತಿ-" ಹೋಗ್ಲಿ ಬಿಡು ಒಬ್ಬನ ಜೀವಮಾನ ಎಷ್ಟ್ ದಿನಾ ಅಂತೀಯ ? ನಾ ಸತ್ತಮೇಲಾದ್ರೂ ಇದೇ ಥರ ಮಾಡೋದ್ನ ನಾಲ್ಕ್ ಜನ ಕಲ್ತಿದ್ರೆ ಮಾಡ್ಬೋದಲ್ವ? ಒಂದೊಮ್ಮೆ ಯಾರಿಗೂ ಬರ್ದೇ ಇದ್ರೆ ನಾ ಕಲಿತ ಈ ವಿದ್ಯೆ ಹಾಗೇ ಮರೆಯಾಗ್ತದಲ್ಲ ? ಬೇಕಾದವ್ರು ಬೇಕಾದ್ದು ಮಾಡ್ಕಳ್ಳಿ ಬಿಡು " ಅಂತಿದ್ರು. ಚ್ಯವನಪ್ರಾಶ ಮುಗಿದಮೇಲೆ ಮತ್ತೊಮ್ಮೆ ಸೊಗದೇಶರಬತ್ತನ್ನು ಸ್ವಲ್ಪ ಕುಡಿದರೆ ಅದರಿಂದ ಸಿಗುವ ಪರಮಾನಂದವೇ ಬಣ್ಣಿಸಲಸದಳ ಅಂತಾರೆ ಭಟ್ರು.

ಯಂಕೋಜಿ ಕೆಲವೊಮ್ಮೆ ಮಂಕಾಗಿ ಕೂತಾಗೆಲ್ಲಾ ಅವನ ತಾತ ಹೇಳೋದುಂಟು" ಹೋಗೋ ಮಂಕೆ ಭಟ್ರ ಮನೆಗೆ ಹೋಗಿ ಒಂದು ಗ್ಲಾಸು ಸೊಗದೇ ಶರಬತ್ತು ತೆಗೆದುಕೊಂಡು ಬಾ ಅದನ್ನು ಕುಡಿ ನಿಂಗಿರೋ ಆಲಸ್ಯ ಎಲ್ಲಾ ಬಿಟ್‍ಹೋಗುತ್ತೆ ನೋಡು. " ! ಕೆಲಸದಲ್ಲಿ ನಿರುತ್ಸಾಹ, ನಿದ್ರಾಹೀನತೆ, ನಿರಾಸಕ್ತಿ, ಹೊಟ್ಟೆಯ ತಳಮಳ, ಸುಸ್ತು ಇಂಥದ್ದಕ್ಕೆಲ್ಲಾ ಸೊಗದೇಬೇರಿನ ಶರಬತ್ತು ದಿವ್ಯೌಷಧ ಅಂತಾರೆ ನಮ್ ತಿಪ್ಪಾಭಟ್ರು.

ಸರಳಜೀವನ ನಡೆಸಿಬಂದ ಭಟ್ಟರನ್ನು ಎದುರಿಗೇ ಸಿಕ್ಕಿದರೂ ನೀವು ಗುರುತಿಸಲು ಸಾಧ್ಯವಿಲ್ಲ. ಆದರೆ ಗೊತ್ತಿದ್ದವರು ಅರ್ಧಾ ಕಿಲೋಮೀಟರ್ ದೂರದಿಂದಲೇ ಅವರ ಬಿಳಿಚಾಟಿ [ಕಪ್ಪು ಕೊಡೆ ಬಿಸಿಲಿನಲ್ಲಿ ತಿರುಗೀ ತಿರುಗೀ ಬೆಳ್ಳಗಾಗಿದ್ದು]ಕೊಡೆಯನ್ನು ಕಂಡೇ ಗುರುತು ಹಿಡಿಯುತ್ತಾರೆ. ಅಲ್ಲಲ್ಲಿ ತೂತುಗಳೂ ಇರುವ ಕೊಡೆಯನ್ನು ಸದಾ ಸಂಗತಿಯನ್ನಾಗಿ ಇರಿಸಿಕೊಂಡ ಭಟ್ಟರಿಗೆ ಕೊಡೆಯೆಂದ್ರೆ ಬಹಳ ಇಷ್ಟ. ಅದೊಂಥರಾ ಋಣಾನುಬಂಧ ಇದ್ದಹಾಗೇ ಅಂತಾರೆ! ಹತ್ತಾರುಸಲ ದುರಸ್ತಿ ನಡೆದಿದ್ರೂ, ಕಡ್ಡಿಗಳೆಲ್ಲಾ ತುಕ್ಕು ಹಿಡಿದು ವೇಗದ ಗಾಳಿಗೆ ಮುರಿದುಬೀಳುವಷ್ಟು ಮುದುಕಾಗಿದ್ರೂ ಭಟ್ಟರಿಗೆ ಅದೇ ಕೊಡೆಯ ಸೇವೆ ಪ್ರೀತಿ. ಅದನ್ನು ಮಾತ್ರ ಬಿಟ್ಟವರಲ್ಲ. ಅವರ ಈ ರೀತಿಯನ್ನು ನೋಡೇ ನಮ್ಮ ಕವಿಯೊಬ್ಬರು -

ತಿಪ್ಪಾ ಭಟ್ಟರ ಚೆಂದ ಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

--ಎನ್ನುವ ಹಾಡನ್ನು ಬರೆದಿರಬೇಕು ಎನಿಸುತ್ತದೆ.

ಒಮ್ಮೆ ಭಟ್ಟರ ಮಗಳನ್ನು ಪರವೂರ ಗಂಡಿನಕಡೆಯವರು ನೋಡಲು ಬಂದಿದ್ದರು. ಅವರಿಗೆಲ್ಲಾ ಸ್ವಾಗತಕೋರಿದ ಭಟ್ಟರ ಮೊದಲ ಶೈತ್ಯೋಪಚಾರ ಎಂದರೆ ಸೊಗದೇಬೇರಿನ ಶರಬತ್ತು! ಸರಿಸುಮಾರು ಮುಕ್ಕಾಲುಗಂಟೆ ಶರಬತ್ತಿನ ಬಗ್ಗೆ ಭಾಷಣಮಾಡಿದ ಭಟ್ಟರ ವಾಗ್ಝರಿಯಲ್ಲಿ ಗಂಡಿನಕಡೆಯವರು ಬಂದ ಕೆಲಸವನ್ನೇ ಮರೆತಿದ್ದರು! ಅಮೇಲೆ ಭಟ್ಟರ ಮುಗ್ದ ಸ್ವಭಾವ, ಹುಡುಗಿಯ ಸೌಂದರ್ಯ-ಅರ್ಹತೆ ಎಲ್ಲಾ ಹಿಡಿಸಿದ್ದರಿಂದ ಮದುವೆಯೂ ನಡೆದುಹೋಯಿತು. ಮದುವೆಯಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ತಾವೇ ತಯಾರಿಸಿದ ಸೊಗದೇಬೇರಿನ ಶರಬತ್ತಿನ ಬಾಟಲನ್ನು ಕೊಡಲು ಭಟ್ಟರು ಮರೆಯಲಿಲ್ಲ !

ಮೊನ್ನೆ ’ಆಯುರ್ವೇದ ಕಾಂಗ್ರೆಸ್’ ಎನ್ನುವ ಆಯುರ್ವೇದದ ಬಗೆಗಿನ ಮಾಹಿತಿ ಹಾಗೂ ಪ್ರಚಾರವನ್ನು ಸರಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತಲ್ಲ ? ಆಗ ಅಲ್ಲಿಗೆ ಬರುವ ಆಸೆ ಇತ್ತಂತೆ ಭಟ್ಟರಿಗೆ. ಆದರೆ 'ಕಾಂಗ್ರೆಸ್' ಅಂತಿದೆಯಲ್ಲ ಒಂದೊಮ್ಮೆ ಅದು ಕಾಂಗ್ರೆಸ್ ಪಾರ್ಟಿ ವತಿಯಿಂದ ನಡೆಸುವಂತಹದ್ದಿರಬಹುದು ತನಗೆ ಯಾವ ಪಕ್ಷವೂ ಬೇಡ ಎನ್ನುವ ಅಂಬೋಣದಿಂದ ಅವರು ತಪ್ಪಿಸಿಕೊಂಡರಂತೆ. ಆಮೇಲೇ ತಿಳಿದದ್ದು ಕಾಂಗ್ರೆಸ್ ಅಂದರೆ ಅದೊಂದು ಸಮಾವೇಶವೇ ಹೊರತು ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವಲ್ಲ ಎಂಬುದು. ಇಲ್ಲದಿದ್ದರೆ ಭಟ್ಟರ ಸೊಗದೇಬೇರಿನ ಶರಬತ್ತು ತುಂಬಿದ ಕೆಲವು ಬಾಟಲಿಗಳಾದರೂ ಅಲ್ಲಿ ಕಾಣಸಿಗುತ್ತಿದ್ದವು! ಶರಬತ್ತಿಗೆ ’ತಿಪ್ಪಾ ಭಟ್ಟರು ತಯಾರಿಸಿದ ’ ಎಂದಿರುತ್ತದೆ ಬಿಟ್ಟರೆ ಬೇರೇ ಯಾವುದೇ ಬ್ರ್ಯಾಂಡ್ ಹಾಕುವುದಿಲ್ಲ. ಭಟ್ಟರೇನಾದರೂ ಕಂಪನಿ ತೆರೆದು ಬ್ರ್ಯಾಂಡ್ ಹಾಕಿದ್ದರೆ ಇಷ್ಟೊತ್ತಿಗೆಲ್ಲಾ ನಟನಟಿಯರನ್ನಿಟ್ಟು ಜಾಹೀರಾತು ಕೊಟ್ಟು ಮಾರುಕಟ್ಟೆ ಗಳಿಸುವ ಅನೇಕ ಕಂಪನಿಗಳನ್ನು ಹಿಂದೆಹಾಕುತ್ತಿದ್ದರು.


ಪುರಾಣ
ಕೇಳಿದಿರಲ್ಲ ನಿಮಗೇನಾದರೂ ಭಟ್ಟರ ತಯಾರಿಕೆಯ ಸೊಗದೇ ಶರಬತ್ತು ಬೇಕೆ ? ಬೇಕೆಂದಿದ್ದಲ್ಲಿ ಮತ್ತೊಮ್ಮೆ ಅವರು ಎಲ್ಲಿ ಸಿಗುತ್ತಾರೆಂದು ವಿಚಾರಿಸಿ ಹೇಳುತ್ತೇನೆ ಆಗದೇ? ಮರೆಯದಿರಿ ಮರೆತು ನಿರಾಶರಾಗದಿರಿ ’ತಿಪ್ಪಾಭಟ್ಟರು ತಯಾರಿಸಿದ ಸೊಗದೇಬೇರಿನ ಶರಬತ್ತು’ !


Friday, December 31, 2010

ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!


ಸಂಕಲ್ಪದಲ್ಲೇ ಮುಗಿಯುವ ಸಾಧನೆಗಳು!

ಎಲ್ಲರಿಗೂ ೨೦೧೧ ಹಾರ್ದಿಕ ಶುಭಾಶಯಗಳು

ಪ್ರತೀವರ್ಷ ಡಿಸೆಂಬರ್ ೩೧ ರ ರಾತ್ರಿಯನ್ನು ಅನೇಕರು ಎಣ್ಣೆ[ಮದ್ಯ]ಕುಡಿಯುವುದರೊಂದಿಗೆ, ಅರೆನಗ್ನ ಹುಡುಗಿಯರ ನೃತ್ಯ ವೀಕ್ಷಿಸುವುದರೊಂದಿಗೆ, ಹಂಗಾಮೀ ಸಂಗಾತಿಗಳೊಂದಿಗೆ ನರ್ತಿಸಿ ಮಜಾಪಡೆಯುವುದರೊಂದಿಗೆ ಕ್ರಿಸ್ತಿಯನ್ ಹೊಸವರ್ಷವನ್ನು ಸ್ವಾಗತಿಸುತ್ತೇವೆ. ಹೊಸವರ್ಷದ ಆದಿಯಲ್ಲೇ ಎಲ್ಲಾ ಮಜಾವನ್ನೂ ಅನುಭವಿಸುವ ನಮ್ಮ ಮನಸ್ಸಿಗೆ ವಿದೇಶೀ ಆಚರಣೆಗಳ ಈ ನಂಟು ಇತ್ತೀಚೆಗೆ ತುಂಬಾ ಹೆಚ್ಚಿನಮಟ್ಟದಲಿ ಅಂಟಿಕೊಂಡುಬಿಟ್ಟಿದೆ. ವಾಸ್ತವವಾಗಿ ಯಾವುದೇ ನೈಸರ್ಗಿಕ ಬದಲಾವಣೆ ಇಲ್ಲದ ಈ ದಿನದಲ್ಲಿ ಕೇವಲ ೩೬೫ದಿನ ಪೂರೈಸಿತು ಎಂಬ ಲೆಕ್ಕದಭರ್ತಿಗಾಗಿ ಮಾತ್ರ ಇದನ್ನು ಕ್ಯಾಲೆಂಡರ್ ಬದಲಾವಣೆ ದಿನವಾಗಿ ಬಳಸುತ್ತಿದ್ದೇವೆ.ಬ್ರಿಟಿಷರು ಭಾರತಕ್ಕೆ ಬಂದಾಗ ಕೊಟ್ಟುಹೋದ ಬಳುವಳಿಗಳಲ್ಲಿ ಇದೂ ಒಂದು. ಯಾವಾಗ ಅವರ ಅನುಕೂಲಕ್ಕಾಗಿ ಅವರೇ ಬರೆದಿರುವ ಕ್ಯಾಲೆಂಡರ್ ಪ್ರಚುರಗೊಂಡಿತೋ ಅಲ್ಲಿಂದ ಮುಂದೆ ಅದೇ ತನ್ನ ಏಕಸ್ವಾಮ್ಯ ಚಕ್ರಾಧಿಪತ್ಯವನ್ನು ಜನಸಾಮಾನ್ಯರ ಮನದಲ್ಲಿ ಸ್ಥಾಪಿಸಿತು. ಇಂದು ಅದು ಎಷ್ಟರಮಟ್ಟಿಗಿದೆಯೆಂದರೆ ನಮ್ಮೆಲ್ಲಾ ದಿನಗಳ ಲೆಕ್ಕಾಚಾರದ ಬಳಕೆಗೆ ಅದೇ ಕ್ಯಾಲೆಂಡರ್ ಬಳಸುತ್ತಿದ್ದೇವೆ. ಮೂಲ ಭಾರತದ ಸನಾತನ ಶಕೆಗಳನ್ನೂ ಇಲ್ಲಿನ ಕ್ಯಾಲೆಂಡರ್ ಗಳನ್ನೂ ಮರೆತಿದ್ದೇವೆ.

ಹುಡುಗ-ಹುಡುಗಿಯರು ಸ್ವೇಚ್ಛೆಯಿಂದ ರಾತ್ರಿಪೂರ್ತಿ ಕುಡಿದು,ಕುಣಿದು ಕುಪ್ಪಳಿಸಿ ಪರಸ್ಪರ ಅಪ್ಪಿಕೊಂಡು, ಕಾಣದ ತಾಣಗಳಲ್ಲೆಲ್ಲೋ ಅನೈತಿಕವಾಗಿ ಒಂದಾಗುವುದು, ಆ ಒಂದಾಗುವುದರಿಂದ ಹಲವು ಹುಡುಗಿಯರು ತಮ್ಮತನ ಕಳೆದುಕೊಳ್ಳುವುದು, ಬೇಡದ ಗರ್ಭಕ್ಕೆ ಕೆಲವೊಮ್ಮೆ ನಾಂದಿಯಾಗುವುದು, ಧರಿಸಿದ ಗರ್ಭವನ್ನು ಮನೆಯಲ್ಲಿ ಹೇಳದೇ ೩-೪ ತಿಂಗಳ ತರುವಾಯ ತಿಳಿದಾಗ ಅಂತೂ ಇಂತೂ ೯ ತಿಂಗಳು ನಡೆಸಿ ಹಡೆದು ಕಂಡಲ್ಲಿ ಆ ಬೇಡದ ಶಿಶುವನ್ನು ಬಿಸಾಡುವುದು ಅಥವಾ ಬೇಡದ ಭ್ರೂಣವನ್ನು ಗರ್ಭಪಾತಮಾಡಿಸಿ ತೆಗೆದುಹಾಗುವುದು. ಅಮೇಲೆ ಏನೂ ನಡೆದೇ ಇಲ್ಲಾ ಎನ್ನುವ ರೀತಿಯಲ್ಲಿ ’ಪೋಸು’ಕೊಡುವುದು ನಮಗೆಲ್ಲಾ ತಿಳಿದೇ ಇದೆ. ನಾಗರಿಕ ಜಗತ್ತಿನಲ್ಲಿ ಇದಕ್ಕಿಂತಾ ಹೇಯಕೃತ್ಯ ಇನ್ನೊಂದಿಲ್ಲ. ಕೆಲಸದಲ್ಲಿರುವ ಕೆಲವು ಮಹಿಳೆಯರು ಉನ್ನತ ಅಧಿಕಾರಿಯ ಒತ್ತಾಯಕ್ಕೆ ಕಟ್ಟುಬಿದ್ದು ಅವರೊಟ್ಟಿಗೆ ಗೋವಾ, ಊಟಿ ಮೊದಲಾದ ದೇಶೀಯ ಅಥವಾ ಮಲೇಶಿಯಾ,ಹಾಂಕಾಂಗ್, ಸಿಂಗಾಪೂರ್ ಮುಂತಾದ ವಿದೇಶೀಯ ಸ್ಥಳಗಳಿಗೆ ತೆರಳಿ ಅವರಿಗೆ ಮಜಾಕೊಡುವುದೂ ಕೂಡ ನಮ್ಮರಿವಿಗೆ ಇರುವ ವಿಷಯವೇ. ಈ ಮಜಾ ಕೊಡುವ-ಪಡೆಯುವ ಹಲವರ ಮನೆಗಳು-ಮನಗಳು ಕ್ರಿಸ್ತಿಯನ್ ಹೊಸವರ್ಷದ ಆಗಮನದ ದಿನವೇ ಮುರಿದುಹೋದರೂ ಆಶ್ಚರ್ಯಪಡಬೇಕಾಗಿಲ್ಲ!

ಮನುಷ್ಯರಾಗಿ ನಾವು ಬದುಕುವುದು ಕೇವಲ ಇದ್ದಷ್ಟು ದಿನಾ ಮಜಪಡೆಯಲೇಂದೇ ಅಲ್ಲವಲ್ಲ? ಲೈಫು ಇಷ್ಟೇನೆ ಎಂದುಕೊಳ್ಳುತ್ತಾ ಬರಿದೇ ಬೇಡದ ದುಂದುಗಾರಿಕೆಯಲ್ಲಿ, ಪರಕೀಯ ಸಂಸ್ಕೃತಿಯ ಪ್ರಲೋಭನೆಯಲ್ಲಿ, ಅನುಕೂಲವೇ ಆಯಿತೆಂಬ ಹಲವರ ಮನದಿಂಗಿತವಿದ್ದರೆ ನಂತರದ ಪರಿಣಾಮಗಳ ಅವಲೋಕನ ಮಾಡಿದರೆಮಾತ್ರ ತಿಳಿಯುವುದು ಅದು ವ್ಯಭಿಚಾರಕ್ಕೊಂದು ಮಾರ್ಗ! ಮಹಾತ್ಮಾ ಗಾಂಧಿ ಹೇಳಿದರು --ಮದ್ಯ,ಮಾಂಸ,ಮಾನಿನಿ ಈ ಮೂರು ಎಲ್ಲಿವರ್ಜಿಸಲ್ಪಡುವುದೋ ಆ ಪ್ರದೇಶದ ಉದ್ಧಾರ ಸಾಧ್ಯವೇ ಹೊರತು ಅವುಗಳ ಆಸೆ, ಆಮಿಷಗಳಲ್ಲಿ ಹಲವನ್ನು ಕಳೆದುಕೊಳ್ಳುವ ಹಲವುಜನರನ್ನು ನಾವು ನೋಡುತ್ತಲೇ ಇರುತ್ತೇವೆ, ಅದರಲ್ಲಿ ನಮ್ಮಪಾತ್ರವೆಷ್ಟು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಒದಗಿಬರುತ್ತಿದೆ.

’ಹೆಣ್ಣು ತಿರುಗಾಡಿ ಕೆಟ್ಟಳು ಗಂಡು ಕೂತು ಕೆಟ್ಟ’ ಎಂಬ ಗಾದೆ ಯಾಕೆ ಹುಟ್ಟಿತು ಎಂಬುದರ ಸ್ವಾರಸ್ಯದ ಅರಿವು ಸಹಜವಾಗಿ ನಮಗಾದರೆ ಅದು ಒಳ್ಳೆಯದು. ಇವತ್ತಿನ ದಿನಮಾನ ಹೇಗಿದೆಯೆಂದರೆ ಹೆಂಗಸರ ಬಗ್ಗೆ ಮಾತನಾಡಿದರೇ ಸಾಕು ಸ್ತ್ರೀ ಸ್ಂಘಟನೆಗಳು ಒಟ್ಟಾಗಿ ಹೊಡೆಯಲು ಬರುತ್ತವೆ. ವಾಸ್ತವವನ್ನು ತಿಳಿದರೆ ಪೂರ್ವದಲ್ಲಿ ಎಂದು ಸ್ತ್ರೀ ಮನೆಯಲ್ಲಿ ಗೃಹಿಣಿಯಾಗಿದ್ದಳೋ, ಸಾಧ್ವಿಯಾಗಿದ್ದಳೋ ಆ ಕಾಲದಲ್ಲಿ ಇಷ್ಟೊಂದು ವಿಚ್ಛೇದನಗಳು ನಡೆಯುತ್ತಿರಲಿಲ್ಲ. ಇಷ್ಟೊಂದು ಭ್ರೂಣಹತ್ಯೆ ನಡೆಯುತ್ತಿರಲಿಲ್ಲ. ಮನೆಯಲ್ಲಿ ಅನ್ನ-ನೀರಿಗೆ ಕೊರತೆಯಿರುತ್ತಿರಲಿಲ್ಲ. ಮನೆಯ ಉಸ್ತುವಾರಿಯನ್ನು ಯಾರೋ ಸಂಬಳದ ನಾರಿ ಗಂಟೆಯ ಲೆಕ್ಕದಲ್ಲಿ ನಿಭಾಯಿಸಬೇಕಾದ ಅವಶ್ಯಕತೆಯಿರುತ್ತಿರಲಿಲ್ಲ. ಮಕ್ಕಳಿಗೆ ಅಮ್ಮನ ಪ್ರೀತಿಯ ಕೊರತೆ ಕಾಡುತ್ತಿರಲಿಲ್ಲ. ಇವೆಲ್ಲಾ ನಷ್ಟಗಳ ಹಿಂದೆ ಸ್ತ್ರೀ ಓಡಾಟವೇ ಕಾರಣೀಭೂತವಾಗಿದೆಯೆಂದರೆ ಅದನ್ನು ಪ್ರಮಾಣಿಸಿ ತೋರಿಸುವಷ್ಟು ಸರಕುಗಳು ನನ್ನಲ್ಲಿವೆ. ಕುಟುಂಬ ವ್ಯವಸ್ಥೆಯ ಮೌಲ್ಯಗಳೇ ಕುಸಿದುಹೋಗುತ್ತಿರುವ ಈ ಕಾಲದಲ್ಲಿ ಬೇಕಾದಷ್ಟು ದಿನ ಒತ್ತಟ್ಟಿಗೆ ಇರುವುದು ಆಮೇಲೆ ಬಿಟ್ಟುಬಿಡುವುದು ಆರಂಭವಾಗಿರುವುದರಿಂದ ಭಾರತೀಯ ಮೌಲ್ಯಗಳ ಸ್ಥಾನಪಲ್ಲಟವಾಗಿದೆ. ದುಡಿಯುವ ಮಹಿಳೆಯ ದಿನದ ಧಾವಂತವೇ ಇಡೀ ಮನೆಯ ನಗೆಯನ್ನು ನುಂಗಿಹಾಕಿದೆ! ಇಬ್ಬರೂ ದುಡಿಯುತ್ತ ಮನೆಸೇರಿದಾಗ ಯಾರು ಮನೆಗೆಲಸಗಳಲ್ಲಿ ತೊಡಗಿಕೊಳ್ಳಬೇಕೆಂಬುದು ಪ್ರಶ್ನಾರ್ಹವಾಗಿದೆ. ಹಿರಿಯರನ್ನು ದೂರವಿರಿಸುವ ಸ್ವಭಾವ ಬೆಳೆದು ಕುಟುಂಬವೆಂಬುದೇ ಒಂದು ಯಾಂತ್ರಿಕ ಜೀವನವಾಗಿದೆ!

ನವಿಲುಕುಣಿಯಿತು ಎಂದು ಕೆಂಬೂತ ತಾನೂ ಕುಣಿಯಲು ಹೊರಟಿತ್ತು ಎನ್ನುವುದು ಹಳೆಯಗಾದೆ. ಅದನ್ನು ತಿರುಗಿಸಿ ಕೆಂಬೂತ ಕುಣಿಯಿತು ಎಂದು ನವಿಲೆಂಬ ನವಿಲೇ ತನ್ನ ಅಂದವನ್ನೂ ಅಲಂಕಾರವನ್ನೂ ನೃತ್ಯಪಟುತ್ವವನ್ನೂ ಮರೆತು ಕೆಂಭೂತನ ಕುಣಿತಕ್ಕೆ ಮರುಳಾಗಿ ಅದನ್ನು ಅನುಕರಿಸಲು ತೊಡಗಿರುವುದು ಎಂತಹ ವಿಪರ್ಯಾಸ ಎನಿಸುವುದಿಲ್ಲವೇ? ನಿಜಕ್ಕೂ ನೋಡಿ ನಮ್ಮ ಮಹಿಳೆಯರಲ್ಲಿ ಅನೇಕರಿಗೆ ನೌಕರಿ ಬೇಕಾಗಿಲ್ಲ. ಕೇವಲ ಟೈಮ್ ಪಾಸ್ ಗೆ ಅಂತ ಹಲವರು ತೆರಳಿದರೆ ಇನ್ನೂ ಕೆಲವರು ಮಜಾ ತೆಗೆದುಕೊಳ್ಳುವುದಕ್ಕೋ ಮತ್ತಷ್ಟು ಮಹಿಳೆಯರು ತಾವೂ ಬೇರೇ ಮಹಿಳೆಯರಿಗಿಂತ ಏನೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಲೋಸುಗವೋ ನೌಕರಿಗೆ ಸೇರುತ್ತಾರೆ. ಹೆಣ್ಣೊಬ್ಬಳು ಬಣ್ಣಬಣ್ಣದ ದಿರಿಸಿನಲ್ಲಿ ಬೇರೆ ಬೇರೇ ಕಛೇರಿಗಳಲ್ಲಿ ಕೆಲಸಮಾಡುತ್ತಾ ಕಾಮುಕ ಗಂಡಸರ ದೃಷ್ಟಿಗೆ ಬೀಳುವುದು ಅನಾಯಾಸವಾಗಿ ನಡೆಯುವ ಕ್ರಿಯೆ. ನಂತರ ಅಂತಹ ಗಂಡಸರು ಆ ಕೆಲಸದಲ್ಲಿರುವ ಮಹಿಳೆಯರನ್ನು ಬಳಸಿಕೊಳ್ಳುವುದು, ತೆವಲು ತೀರಿಸಿಕೊಳ್ಳುವುದು ಅದಕ್ಕೆ ಸಿಗುವ ಪ್ರಕ್ರಿಯೆ! ಬಂದ ಪರಿಸ್ಥಿತಿಯನ್ನು ಭಯದಿಂದಲೂ ಅಪರಾಧೀ ಮನೋಭಾವದಿಂದಲೂ ಹೇಳಲಾಗದೇ ಅದನ್ನೇ ಸ್ವೀಕರಿಸಿ ಬದುಕುವ ಮಹಿಳೆಯರು ಹಲವರಿದ್ದಾರೆ! ಎಲ್ಲೋ ಅಲ್ಲಿಲ್ಲಿ ತನಗೆ ಬೇಕಾದ ಬೇರೇ ಗಂಡಸಿನ ಸಹಾಯದಿಂದ ತನಗೆಬೇಡದ ಗಂಡಸಿನ ವಿರುದ್ಧ ದನಿಯೆತ್ತಿ ತಾನು ’ಪತಿವೃತೆ’ಯೆಂದು ಬೂಟಾಟಿಕೆ ತೋರುವ ಥರದವರೂ ಇದ್ದಾರೆ. ಎಲ್ಲೋ ಕೆಲವು ಪ್ರತಿಶತ ಮಹಿಳೆಯರು ತಮ್ಮತನವನ್ನು ಉಳಿಸಿಕೊಂಡಿರಬಹುದು-ಅದನ್ನು ಅಲ್ಲಗಳೆಯುತ್ತಿಲ್ಲ. ಆದರೆ ಬಹುತೇಕರು ಸಮಾಜದ ಹಲವು ಸ್ತರಗಳಲ್ಲಿ ಗಂಡಸರ ಗೊಂಬೆಗಳಾಗಬೇಕಾಗಿ ಬರುವುದು ಪರಿಸ್ಥಿತಿ ನಿರ್ಮಿಸುವ ಬೇಡಿಕೆಯಾಗಿದೆ.

ಇದನ್ನೆಲ್ಲಾ ಅರಿತೇ ನಮ್ಮ ಪೂರ್ವಜರು ’ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದಿದ್ದರು. ಅದರರ್ಥ ಸ್ತ್ರೀಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಬಾರದೆಂಬುದಲ್ಲ, ಪ್ರತೀ ಸ್ತ್ರೀಯ ಹಿಂದೆ ಅವಳಿಗೆ ಸಂಬಂಧಿಸಿದ ಕೈ ಅವಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲಿ, ಅವಳಿಗೆ ತೊಡಕಾಗದಿರಲಿ ಎಂಬುದಾಗಿಯಾಗಿತ್ತು. ಬಾಲ್ಯದಲ್ಲಿ ತಂದೆಯೂ, ಯೌವ್ವನದಲ್ಲಿ ಗಂಡನೂ ಮತ್ತು ವಾರ್ಧಕ್ಯದಲ್ಲಿ ಮಕ್ಕಳೂ ಹೆಣ್ಣನ್ನು ರಕ್ಷಿಸಲಿ ಎಂಬುದು ಆರ್ಷೇಯ ವಾದವಾಗಿತ್ತು. ಇದೇ ದೃಷ್ಟಿಯಿಂದ ದೈಹಿಕವಾಗಿ ಮಾಸಿಕಸ್ರಾವದಿಂದ ಬಳಲುವ ಮಹಿಳೆಗೆ ವಿಶ್ರಾಂತಿಯನ್ನು ಕೊಡಬಯಸಿ ಅದನ್ನು ’ಮೈಲಿಗೆ’ ಎಂದು ಪಟ್ಟಕೊಟ್ಟು ನಡೆಸಿಕೊಂಡು ಬಂದಿದ್ದರು. ಆದರೆ ಅದನ್ನೇ ದೊಡ್ಡ ಕಂತೆಪುರಾಣಮಾಡಿ ಆಧುನಿಕತೆಯ ಅಮಲಿನಲ್ಲಿ ಬಟ್ಟೆಗಂಟು ಕಟ್ಟಿಕೊಂಡು ಹೊಟ್ಟೆನೋವಿದ್ದರೂ ಸರಿ ತಲೆನೋವಿದ್ದರೂ ಸರಿ ಕೆಲಸಮಾಡುತ್ತಲೇ ಇರಬೇಕಾದುದು ಇಂದಿನ ಪಟ್ಟಣದ ನಾರಿಯರು ಆಯ್ದುಕೊಂಡ ಇಚ್ಛಾಪ್ರಾರಬ್ಧ! ಸಂಸ್ಕೃತದ ಯಾವ ಉಲ್ಲೇಖವನ್ನೇ ತೆಗೆದುಕೊಳ್ಳಿ ಅದು ಎಲ್ಲರಿಗೂ ಒಳಿತನ್ನೇ ಬಯಸುತ್ತದೆ. ಅಪಾರ್ಥದಿಂದ ವಿಕಲ್ಪಮಾಡಿಕೊಂಡರೆ ಅದಕ್ಕೆ ಸಂಸ್ಕೃತ ಹೊಣೆಯಲ್ಲ.

ಹೊಸವರ್ಷದ ಹೊಸ್ತಿಲಲ್ಲಿ ಹಲವು ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕೇ ಹೊರತು ಮೋಜುಮಜಾಮಸ್ತಿಯಲ್ಲ. ಆದರೆ ಇಂದು ಅದೇ ಸಂಪ್ರದಾಯವಾಗುತ್ತಿರುವುದು ಶೋಚನೀಯ. ನಾವು ಹಲವು ಸಂಕಲ್ಪ[ನ್ಯೂ ರೆಸಾಲ್ಯೂಶನ್]ಗಳನ್ನು ಪಟಪಟನೇ ಕೈಗೊಳ್ಳುತ್ತೇವೆ--ಆದರೆ ಅವು ಎಷ್ಟರಮಟ್ಟಿಗೆ ಕಾರ್ಯುಗತವಾಗುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಸುಮ್ಮನೇ ಇರಲಿ ಎಂದು ಎಲ್ಲರಲ್ಲೂ ನಮ್ಮ ಸಂಕಲ್ಪಗಳ ಬಡಾಯಿಕೊಚ್ಚಿಕೊಳ್ಳುತ್ತೇವೆ. ಆದರೆ ಕೊಚ್ಚಿದಂತೇ ನಡೆದುತೋರಿಸಿದೆವೋ ಎಂಬುದು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾದ ಅಂಶವಾಗಿದೆ. ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂಬುದೆಲ್ಲಾ ಸರಿ, ಹಾಗೆ-ಹೀಗೆ ಎಲ್ಲಾ ಮಾಡಲು ಸಾಧ್ಯವಾಯಿತೋ, ಪ್ರಯತ್ನಿಸಿದೆವೋ, ಪ್ರಯತ್ನಿಸಿ ವಿಫಲರಾದೆವೋ ಎಂದು ನೋಡಿಕೊಳ್ಳಬೇಕಾದುದು ಮಹತ್ವದ್ದು. ಇಲ್ಲದಿದ್ದಲ್ಲಿ ಮಹಾಭಾರತದ ಉತ್ತರಕುಮಾರನಿಗೂ ನಮಗೂ ಬಹಳ ವ್ಯತ್ಯಾಸ ಇರುವುದಿಲ್ಲ!

ಸಂಕಲ್ಪಕ್ಕೆಲ್ಲಾ ಮತ್ತದೇ ನಮ್ಮ ಮನಸ್ಸು ಮುಖ್ಯ. ಮನಸ್ಸನ್ನು ನಿಗ್ರಹಿಸುವ, ಉತ್ತಮ ನೀರನ್ನು ಜಮೀನಿಗೆ ಹರಿಸಿದಂತೇ ಮನಸ್ಸಿಗೆ ಒಳ್ಳೆಯ ಪ್ರೇರೇಪಣೆ ಪಡೆಯುವ ಕೆಲಸವಾಗಬೇಕು,ಜಮೀನಿನಲ್ಲಿ ಉತ್ತಮ ಬೆಳೆತೆಗೆದಂತೇ ಪಡೆದ ಒಳ್ಳೆಯ ಮನೋಭೂಮಿಕೆಯಲ್ಲಿ ಉತ್ತಮ ಸಂಕಲ್ಪಗಳನ್ನು ಆವಾಹಿಸಬೇಕು. ಕಾಲಕಾಲಕ್ಕೆ ನೀರು-ಗೊಬ್ಬರ ಇತ್ಯಾದಿಕೊಟ್ಟು ಬೆಳೆತೆಗೆಯುವಂತೇ ನಮ್ಮ ದೃಢೀಕೃತ ಸಂಕಲ್ಪಗಳಿಗೆ ಕಾರ್ಯರೂಪಕೊಡಬೇಕು. ಕೃಷಿಭೂಮಿಯಲ್ಲಿ ಕಳೆತೆಗೆಯುವಂತೇ ನಮ್ಮ ಮನಸ್ಸಿನಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು, ಋಣಾತ್ಮಕ ಭಾವಗಳನ್ನು ಕಿತ್ತೆಸೆಯಬೇಕು. ನಾಳೆಯಿಂದ ಮದ್ಯ ಬಿಟ್ಟುಬಿಡುತ್ತೇನೆ ಎಂದು ಡಿಸೆಂಬರ್ ೩೧ ರ ರಾತ್ರಿ ಅಂದುಕೊಂಡವ ೧ ನೇ ತಾರೀಕಿನ ರಾತ್ರಿ ಮತ್ತೆ ಅದಕ್ಕೆ ಎಡತಾಕುವುದೂ ಮದ್ಯಸೇವಿಸುವುದೂ ಸರ್ವೇಸಾಮಾನ್ಯ. ಮದ್ಯವನ್ನು ವರ್ಜಿಸಲೂ ಧೂಮಪಾನವನ್ನು ತೊರೆಯಲೂ ತಿಂಗಳದಿನದ ಸತತ ಮನೋನಿಗ್ರಹ ಮುಖ್ಯವಾಗುತ್ತದೆ. ಮನಸ್ಸನ್ನು ನಿಗ್ರಹಿಸಲು ಯೋಗ ಮತ್ತು ಪ್ರಾಣಾಯಾಮ ವಿಧಾನಗಳೇ ಸಾಧನಗಳಾಗುತ್ತವೆ. ನಮ್ಮ ಪ್ರತಿಜ್ಞೆಗಳು ಒಳ್ಳೆಯ ಉದ್ದೇಶಗಳಿಂದ ಕೂಡಿದ್ದು ಭೀಷ್ಮ ಪ್ರತಿಜ್ಞೆಗಳ ರೀತಿ ಇದ್ದರೆ ಮಾತ್ರ ಅವುಗಳಿಗೆ ನೈತಿಕಬಲವೂ ಒದಗಿಬರುತ್ತದೆ. ಪರರ ಹಿತವನ್ನು ಬಯಸಬೇಕೇ ಹೊರತು ಯಾರಿಗೂ ಕೇಡನ್ನು ಬಯಸಬಾರದು. " ಈ ವರ್ಷದಲ್ಲಿ ನಾನು ಆತನಿಗೆ ಬುದ್ಧಿ ಕಲಿಸೇ ಕಲಿಸುತ್ತೇನೆ " ಎಂತಲೋ " ಈ ವರ್ಷ ಆ ಹುಡುಗಿಯನ್ನು ನಾನು ಪಡೆದೇ ತೀರುತ್ತೇನೆ " ಎಂತಲೋ ಸಂಕಲ್ಪಿಸುವುದು ನೈತಿಕ ಸಂಕಲ್ಪವಲ್ಲ. ವ್ಯಕ್ತಿಯೊಬ್ಬ ಡಿಸೆಂಬರ್ ೩೧ ರ ರಾತ್ರಿ ಮೋಜುಮಜಾ ಪಾರ್ಟಿಗಾಗಿ ಹುಡುಗಿಯರ ಶೋಕಿಗಾಗಿ ಖರ್ಚುಮಾಡುವ ಲಕ್ಷಗಟ್ಟಲೇ ಹಣವನ್ನು ಅನಾಥಮಕ್ಕಳಿಗೆ, ಬಡರೋಗಿಗಳಿಗೆ, ನಿರ್ಗತಿಕರಿಗೆ ಕೊಟ್ಟು ಅವರ ಸಂತಸಕ್ಕೆ ಕಾರಣನಾಗುವುದರಲ್ಲಿ ತಾನು ಸಂಭ್ರಮಿಸಿದರೆ ಅದು ಉನ್ನತ ಸಂಕಲ್ಪ.

ಹಾಗೆ ನೋಡಿದರೆ ಸಂಕಲ್ಪ ಮಾಡುವುದಕ್ಕೂ ಕೂಡ ಉತ್ತಮ ಸಂಸ್ಕಾರ ಬೇಕು. ಮಹಾತ್ಮರ ಸಂಕಲ್ಪಗಳು ಸಿದ್ಧಿಸುತ್ತವೆ. ಉಚ್ಛಮಟ್ಟದ ಮುಮುಕ್ಷುಗಳು ಕೇವಲ ಸಂಕಲ್ಪಿಸಿದ ತಕ್ಷಣದಲ್ಲೇ ಫಲವನ್ನೂ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಜನಸಾಮಾನ್ಯರಾದ ನಮಗೆ ಸಂಕಲ್ಪದ ಮಹತ್ವವೂ ಗೊತ್ತಿಲ್ಲ, ಅದನ್ನು ನಿಭಾಯಿಸಲೂ ತಿಳಿದಿಲ್ಲ. ಅಸಲಿಗೆ ನಮ್ಮ ಸಂಕಲ್ಪವೆಲ್ಲಾ ನಿಸರ್ಗ ನಿಯಂತ್ರಿತವೇ ಹೊರತು ಸಂಕಲ್ಪಮಾಡುವುದನ್ನೆಲ್ಲಾ ನಾವು ನಡೆಸಲು ಸಾಧ್ಯವಾಗುವುದಿಲ್ಲ. ಆದರೂ ಉತ್ತಮ ಸಂಕಲ್ಪಕ್ಕೆ ನಿಸರ್ಗವೇ ಆದ್ಯತೆ ನೀಡಿ ಪುರಸ್ಕರಿಸುತ್ತದೆ. ಅದು ಫಲಿಸುತ್ತದೆ. ಪ್ರತಿಯೊಂದೂ ಆಚರಣೆಯ ಹಿಂದೆ ಅಡಗಿರುವ ತತ್ವವನ್ನು ನಾವು ಹುಡುಕಿ, ಅರಿತು ನಡೆದರೆ ಅದು ಅರ್ಥಪೂರ್ಣವಾಗುತ್ತದೆ. ಕ್ರಿಸ್ತಿಯನ್ ಸಂಸ್ಕೃತಿಯಲ್ಲಿ ದೀಪವನ್ನು ಆರಿಸಿ ಹುಟ್ಟುಹಬ್ಬವನು ಆಚರಿಸುವುದು ಹಿಂದೂಗಳಿಗೆ ಅನುಕರಣೀಯವಲ್ಲ. ದೀಪ ಅಂಧಕಾರವನ್ನು ಕಳೆಯುತ್ತದೆಯಲ್ಲವೇ? ದೀಪವನ್ನು ಬೆಳಗಬೇಕೇ ವಿನಃ ನಂದಿಸಬಾರದು. ಕುಟುಂಬದಲ್ಲಿ ಅಣ್ಣ-ತಮ್ಮ ಅಕ್ಕ-ತಂಗಿಯರಲ್ಲಿ ಎಲ್ಲರಲ್ಲೂ ಒಂದೇ ಸಮನಾದ ಶಕ್ತಿ-ಜ್ಞಾನ ಇರುವುದಿಲ್ಲ, ಆದರೂ ನಾವೆಲ್ಲಾ ಹೊಂದಿಕೊಳ್ಳುವಂತೇ ವಸುಧೆಯೇ ಒಂದು ಕುಟುಂಬವೆಂದು ತಿಳಿದ ಸನಾತನರು || ವಸುಧೈವ ಕುಟುಂಬಕಮ್ || ಎಂದಿದ್ದಾರೆ. ನಮ್ಮಲ್ಲಿ ಎಲ್ಲಾ ಜನಾಂಗಗಳಲ್ಲೂ ಜ್ಞಾನದ ಮಟ್ಟ ಒಂದೇತೆರನಾಗಿಲ್ಲ. ಜ್ಞಾನಿಗಳು ತಿಳಿಸಿದ ಮಾರ್ಗಕ್ಕೆ ಪುಷ್ಟೀಕರಣ ದೊರೆಯುತ್ತದೆ. ಅಂತಹ ಜ್ಞಾನಮಾರ್ಗ ನಮ್ಮದಾಗಲಿ. ಸಂಕಲ್ಪಗಳಿಗೆ ಸಿದ್ಧಿಸಿಗುವ ಜ್ಞಾನಿಗಳಾಗಿ ನಡೆಯೋಣವೆಂಬ ಸದಾಶಯಗಳೊಂದಿಗೆ ಶುಭಾಶಯಗಳೊಂದಿಗೆ ಮದ್ಯರಹಿತ ೨೦೧೧ನ್ನು ಸ್ವಾಗತಿಸೋಣವೇ ?

Thursday, December 30, 2010

ಕಾಡುತಿದೆ ನಿನ್ನ ನನೆಹೂ

ರಾಜಾರವಿವರ್ಮ ಕೃತ ಚಿತ್ರ ಕೃಪೆ :ಅಂತರ್ಜಾಲ
ಕಾಡುತಿದೆ ನಿನ್ನ ನೆನಹೂ
[ನವ್ಯ ಪ್ರಿಯರಿಗಾಗಿ ಈ ಕವನ]
ಕಾಡುತಿದೆ ನಿನ್ನ ನೆನಹೂ
ಅನುದಿನವೂ ಅನುಕ್ಷಣವೂ
ಬೆಂಬತ್ತು ಬೇಸರಿಸಿ
ನೆನೆಯುತಿದೆ ನನ್ನ ಮನವೂ

ರಾಮಕೇಳಿದ ರೀತಿ
ಪಶುಪಕ್ಷಿ ತರುಲತೆಗಳನು ಕಂಡು
ಬಳಿಸಾರಿ ಪ್ರಾರ್ಥಿಸಲೇ ತೋರಿರೆಂದೂ ?

ಭೀಮ ದ್ರೌಪದಿಗಾಗಿ
ಸೌಗಂಧಿಕಾ ಪುಷ್ಪವಿರುವ ತಾಣವನರಸಿ
ಅನುಜ ಹನುಮಗೆ ನಮಿಸಿ ಮಾರ್ಗತಿಳಿದಂತೇ !

ಆಗಾಗ ಅಲೆದಾಡಿ
ಗುಂಯ್ಯೆಂದು ಹಾರುತ್ತ ಹೂ ಬನದಿ ಮಕರಂದ
ಹುಡುಕಿ ಹೀರುವ ಭೃಂಗರಾಜನ ಕೇಳಲೇ ?

ರಾಗ ಹಿಂದೋಳದಲಿ
ಸ್ವರಹಿಡಿದು ಆಲಾಪಿಸುತಲಲ್ಲಿ ತನ್ಮಗ್ನ
ತಲ್ಲೀನನಾಗುತ್ತ ತನ್ನ ತಾನೇಮರೆವನಲಿ ಮೊರೆಯಿಡಲೇ ?

ದಿನವು ಸೂರ್ಯನು ಉದಿಸಿ
ಬರುವ ಬಾನೆತ್ತರಕೆ ಕತ್ತೆತ್ತಿ ಕಾಲುಪ್ಪರಿಸಿ
ಮತ್ತೆ ಅಲ್ಲೆಲ್ಲೋ ಹೊಸ ಕುರುಹಿಗಾಗಿ ಹಂಬಲಿಸಲೇ ?

ಬಳಸಿ ಬೇಸರವಾಗಿ
ತೆಗೆದಿಟ್ಟ ಬಳೆಗಳನು ಕಿಣಿಕಿಣಿಸುತಾಧ್ವನಿಯ
ಮಾರ್ದವದಲ್ಲಿ ಆ ದಿನದ ಸೊಬಗನು ನೆನೆದೆನೂ !

ಮರೆಯಲಾರೆನು ಮುಡಿದ
ಮಲ್ಲಿಗೆಯ ಒಣಗಿರುವ ಪಕಳೆಗಳ ಮೆತ್ತನಾ
ದಿಂಬಿಗಂಟಿದ ತಲೆಯ ಪರಿಮಳವ ಹೃದಯದಲಿ ಕಾಪಿಡುವೆನೂ!
ಇಂದಿಗೂ ಅಗಲೆನೂ
ಎಂದಿಗೂ ತೊರೆಯೆನೂ !

Sunday, December 26, 2010

ನಗೆ ಬಂದೇ ಬಿಡ್ತು !


ನಗೆ ಬಂದೇ ಬಿಡ್ತು !

ಬೆಳಿಗ್ಗೆಯಿಂದ ನಗಬೇಕೆಂದು
ಹತ್ತುಸಲ ಪ್ರಯತ್ನಿಸಿದೆ
ಕನ್ನಡಿ ಎದುರು ನಿಂತೆ
೩೨ ಹಲ್ಲು ಇದೆಯೋ ನೋಡಿಕೊಂಡೆ
ನಗಲು ಯತ್ನಿಸಿದಾಗಲೆಲ್ಲಾ
ರಾಜಕಾರಣಿಗಳು ನೆನಪಾದರು
ಅದೇ ರಾಗ ಅದೇ ತಾಳ ಅದೇ ಮೇಳ
ಕೆಲವರು ಬರ್ತಾರೆ
ಕೆಲವರು ಹೋಗ್ತಾರೆ
ಯಾರು ಬಂದ್ರೂ ಒಂದೇ
ನಗಲು ಸಾಧ್ಯವೇ ಇಲ್ಲ !

ಅದ್ರೂ ನಗಬೇಕು ಎಂಬ ಆಸೆ ಇತ್ತಲ್ಲ ?
ಅದಕ್ಕೇ ಉದ್ಯಾನದಲ್ಲಿ ಚಪ್ಪಾಳೆತಟ್ಟಿಕೊಂಡು
ನಗುವವರ ಜೊತೆ ಸೇರಿಬಿಟ್ಟರೆ
ಅಂದುಕೊಂಡೆ ಅವರು ಮನೆಯಲ್ಲಿ ನಗುವುದಿಲ್ಲ
ಬೇರೆಲ್ಲೂ ನಗುವುದಿಲ್ಲ
ಅದಕ್ಕೇ ಪಾಪ ಬೆಳಿಗ್ಗೆ ಎದ್ದು
ಉದ್ಯಾನಕ್ಕೆ ಬಂದು ಬಾರದ
ನಗುವನ್ನು ಅಬ್ಬರಿಸಿ ಬರಿಸುತ್ತಾರೆ !

ನಗುವಿನ ಬಗ್ಗೆ ನೆನೆದಾಗ ರಾಗಿಮುದ್ದೆ
ತಿಂದರೆ ಹೇಗೆ ಎಂಬ ಹಂಬಲ !
ಛೆ ಅದಕ್ಕೂ ಇದಕ್ಕೂ ನಂಟೇ ಇಲ್ಲಾಂತಾರೆ
ನಮ್ಮ ಮಣ್ಣಿನ ಮಕ್ಳು
ಲಾಫಿಂಗ್ ಗ್ಯಾಸ್ ಆದರೂ ತರೋಣವೆಂದರೆ
ಇವತ್ತು ರಜಾ ಇದೆಯಲ್ಲ ಅದೂ ಸಿಗಲ್ಲ
ದುಬಾರಿ ಬೇರೆ ಬಿಡಿ
ಆ ಕಾಸಿಗೆ ಬೇರೇ ಏನಾರೂ ಘನಾ ವಸ್ತು ಬರುತ್ತೆ

ಛೆ ಛೆ ಸುಮ್ನೇ ಮನ್ಸೆಲ್ಲಾ ಗೊಂದ್ಲ ಅಂತ
ಒಂದ್ ರೌಂಡ್ ತಿರುಗಾಡೋಕೆ ಹೊರಟೆ
ಅಷ್ಟು ದೂರ ಹೋಗುವಾಗ ಒಳಗೆ
ಪರಮಾತ್ಮನ್ನ ಬಿಟ್ಕಂಡಿದ್ದ ಮಹಾಪುರುಷ
ಅಂಗಾತ ಮಲಗಿ " ಆಕಾಸದಲ್ಲಿ
ಅಗಲಲ್ಲಿ ಯಾಕೆ ನಕ್ಸತ್ರ ಬರಲ್ಲ ?
ಕುಮಾರಣ್ಣ ಮುಕ್ಮಂತ್ರಿ ಆದಾಗ ಬತ್ತಿತ್ತು
ಈ ಆಳಾದವ್ರು ಬಂದ್ ಎಲ್ಲಾ ಆಳಾಗೋಗದೆ
ಅಲ್ಲಿರೋ ಮೆಸಿನ್ನು ಓಡಾಕಿಲ್ಲ " ಅಂತ
ಏನೇನೋ ಕೂಗ್ತಾ ಇದ್ದ
ಅಬ್ಬಾ ಕುಮಾರಣ್ಣ ಎಂಥೆಂಥೋರ್ಗೆಲ್ಲಾ
ಎಂಥೆಂಥಾ ಪಾಠ ಕಲ್ಸವ್ನಪ್ಪಾ ಅನ್ನೋದ್
ನೆನದಾಗ ಒಬ್ಬನೇ ನಕ್ಕೆ-ಜೋರಾಗಿ
ಸದ್ಯಕ್ಕೆ ಅಲ್ಲಿ ಮತ್ಯಾರೂ ಇರಲಿಲ್ಲ !

Friday, December 24, 2010

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?

ಚಿತ್ರ ಋಣ : ಅಂತರ್ಜಾಲ

ಕಾಮ-ರಾಜ-ರಾಣಿ ಮಾರ್ಗಕ್ಕೆ ಮಿತಿಯಿಲ್ಲವೇ ?
[ಅನ್ ಫೋಲ್ಡೆಡ್ ಲೈಫ್ ಸ್ಟೈಲ್ ಆಫ್ ನ್ಯೂ ಎರಾ]

ಮೊದಲಾಗಿ ಕ್ರೈಸ್ತ ಬಾಂಧವರಿಗೆ ಕ್ರಿಸ್ ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಹಲವು ಮಾಧ್ಯಮಗಳಲ್ಲಿ ನಾವು ಇಂದು ಸಂವಹಿಸುತ್ತೇವೆ. ಸಂವಹಿಸಲು ನಮಗೆ ತ್ವರಿತಗತಿಯ ಮಾಧ್ಯಮಗಳಾದ ಜಂಗಮ ದೂರವಾಣಿ ಹಾಗೂ ಅಂತರ್ಜಾಲಗಳು ಉಪಯುಕ್ತವಾಗಿವೆ. ಆದರೆ ಇದೇ ತಂತ್ರಜ್ಞಾನ ನಮ್ಮ ಬುದ್ಧಿಗೆ ಹಲವೊಮ್ಮೆ ಮಂಕನ್ನೂ ಕವಿಸುತ್ತದೆ. ಅದರಲ್ಲಂತೂ ಹದಿಹರೆಯದವರಿಗೆ ಮತ್ತು ಪಾತರಗಿತ್ತಿಯ ಸ್ವಭಾವದವರಿಗೆ ಈ ಮಾಧ್ಯಮಗಳು ಬಹಳ ಉತ್ತೇಜಕವಾಗಿವೆ. ಬೇಕೋ ಬೇಡವೋ ಕಾರಣಗಳೂ ಇಲ್ಲದೇ ’ಸೋಶಿಯಲ್ ನೆಟ್‍ವರ್ಕ್ ನೆಪದಲ್ಲಿ ಹಲವರು ಸ್ನೇಹಿತರಾಗುತ್ತಾರೆ. ಕೆಲವರಂತೂ ಸ್ನೇಹಬಯಸುವುದೇ ಒಳ ಉದ್ದೇಶಕ್ಕಾಗಿ ! ಮನುಷ್ಯನ ಸಹಜ ಸ್ವಭಾವ ರೂಪಕ್ಕೆ ಮರುಳಾಗುವುದು. ಇದಕ್ಕೆ ಅಪವಾದಗಳು ಇರಬಹುದು ಆದರೆ ಇದಕ್ಕೆ ಬಲಿ ಬೀಳುವವರೇ ಜಾಸ್ತಿ. ಹೀಗೇ ಹುಡುಗ-ಹುಡುಗಿ ಪರಸ್ಪರ ಅಂತರ್ಜಾಲದ ಮೂಲಕ ಪರಿಚಿತರಾಗುತ್ತಾರೆ. ವಾಸ್ತವದಲ್ಲಿ ಅವರಿಗೆ ಪರಸ್ಪರರ ಬಗ್ಗೆ ಜಾಸ್ತಿ ತಿಳಿದಿರುವುದಿಲ್ಲ. ದೂರದಲ್ಲೆಲ್ಲೋ ಇದ್ದೂ ಅತೀ ಹತ್ತಿರವೇನೋ ಎಂಬ ಭ್ರಮೆ ಹುಟ್ಟಿಸುವ ಈ ತಾಣಗಳ ಮೂಲಕ ಬಾಂಧವ್ಯ ಬೆಸೆಯುತ್ತದೆ. ಸ್ನೇಹ ಹಲವೊಮ್ಮೆ ಕ್ರಮೇಣ ಪ್ರೇಮಕ್ಕೆ ತಿರುಗುತ್ತದೆ. ಜಂಗಮದೂರವಾಣಿಗಳ ಸಂಖ್ಯೆ ವಿನಿಮಯವಾಗುತ್ತದೆ. ಶುರುವಾಯ್ತು ತಕಳಿ ಮಾರನೇ ಆ ಕ್ಷಣದಿಂದಲೇ ಎಸ್.ಎಮ್.ಎಸ್ ಮತ್ತು ಕಾಲ್ ಮಾಡಲು !

ಎಷ್ಟೋ ಸರ್ತಿ ಹುಡುಗ-ಹುಡುಗಿಯರು ತಮ್ಮ ಸಂಪರ್ಕದ ಈ ಕೊಂಡಿಗಳನ್ನು ಮನೆಯವರಿಗಾಗಲೀ ಆಪ್ತ ಸ್ನೇಹಿತರಿಗಾಗಲೀ ತಿಳಿಸುವುದೇ ಇಲ್ಲ. ಇದಕ್ಕೆ ಪೂರಕವಾಗಿ ’ಮೊಬೈಲ್ ಡೇಟಿಂಗ್’ ಎಂಬ ವ್ಯವಸ್ಥೆ, ಅಂತರ್ಜಾಲದ ಹಲವು ತಾಣಗಳ ಮೂಲಕ, ವೈವಾಹಿಕ ಸಂಪರ್ಕತಾಣಗಳ ಮೂಲಕ ಡೇಟಿಂಗ್ ವ್ಯವಸ್ಥೆಗೆ ಬೆಂಬಲ ದೊರೆಯುತ್ತದೆ. ಟೈಮ್ಸ್ ಆಫ್ ಇಂಡಿಯಾ ಥರದ ಪತ್ರಿಕೆಕೂಡ ಕೆಲವುಸಮಯ ಡೇಟಿಂಗ್ ವ್ಯವಸ್ಥೆ ನಡೆಸುತ್ತಿತ್ತು. ಅದರ ಅಂಗಸಂಸ್ಥೆಗಳಲ್ಲಿ ಇಂದಿಗೂ ಈ ಸೌಲಭ್ಯಗಳು ಲಭ್ಯವಿವೆ. ಹಾಗಾದರೆ ನಮಗೆಲ್ಲಾ ಈ ಸೌಲಭ್ಯ ಬೇಕೇ ? ಭಾರತೀಯ ಉಚ್ಚ ಸಂಸ್ಕೃತಿಯ ತಳಹದಿಯಾದ ಕೌಟುಂಬಿಕ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಇಂತಹ ವ್ಯವಸ್ಥೆಗಳು ನಮಗೆ ಅನಿವಾರ್ಯವೇ ? ಕೇಳುವವರಾರು? ಅಮೇರಿಕಾದಂಥ ಮುಂದುವರಿದ ರಾಷ್ಟ್ರ ಮಾಡುತ್ತಿದೆ ಅಂತ ನಾವೂ ಮಾಡುತ್ತೇವೆಯೇ ಹೊರತು ಅದರಲ್ಲಿ ಹುರುಳಿದೆಯೇ ಅಥವಾ ಅದರ ಸಾಧಕಬಾಧಕಗಳೇನು ಎಂಬುದರ ಬಗ್ಗೆ ನಮಗೆ ಅರಿವಾಗದಲ್ಲ.

ತೀರಾ ಫ್ಯಾಶನ್ ಪ್ರಿಯರಾದ ನಮ್ಮ ಯುವಪೀಳಿಗೆಯಲ್ಲಿ ಪರಸ್ಪರರ ದಿರಿಸುಗಳು ಬಹಳ ಕಾಮೋದ್ದೀಪಕವಾಗಿ ಪಾರದರ್ಶಕವೆಲ್ಲಾ ’ಅಪಾರ’ದರ್ಶಕವಾಗಿ ಕಣ್ಣುಕೋರಿಸುತ್ತಿರುವ ಈ ದಿನಗಳಲ್ಲಿ ಹುಡುಗಿಯರಿಗೆ ವಿದ್ಯಾಲಯಗಳಲ್ಲಿ ’ಇಂಥದ್ದನ್ನು ಧರಿಸಬೇಡಿ’ ಎನ್ನುವಹಾಗಿಲ್ಲ !ಅವರು ಆಡಿದ್ದೇ ಆಟವಾಗಿ, ಪಾಲಕರಿಗೂ ಅದು ನುಂಗಲಾರದ ತುತ್ತಾಗಿ ಹಲವೊಮ್ಮೆ ಹುಡುಗರ ವಿಕೃತ ಮನೋಸ್ಥಿತಿಗೆ ಪರ್ಯಾಯ ಕಾರಣ ಇದೇ ಎಂದರೆ ತಪ್ಪಾಗಲಾರದೇನೋ. ಕಾಲ ಹೇಗಿದೆಯೆಂದರೆ ಅಸಲಿಗೆ ಯಾರು ಹುಡುಗಿಯರು ಮತ್ತು ಯಾರು ಮದುವೆಯಾದ ಹೆಂಗಸರು ಎಂದು ಹುಡುಕಬೇಕಾದ ಕಾಲ ಒದಗಿಬಂದಿದೆ. ಹಿಂದೆ ಹೆಣ್ಣು ದುಡಿಯದಿದ್ದಾಗ, ಜಾಸ್ತಿ ತಿರುಗದಿದ್ದಾಗ ಕೌಟುಂಬಿಕ ವ್ಯವಹಾರಗಳಲ್ಲಿ ಇಷ್ಟೊಂದು ವೈಷಮ್ಯ ಕಂಡುಬರುತ್ತಿರಲಿಲ್ಲ. ಆದರೆ ಇಂದು ಹೆಣ್ಣು ತಿರುಗುತ್ತಾಳೆ, ಅಲ್ಲಿ ಇಲ್ಲಿ ಕಛೇರಿಗಳಲ್ಲಿ ಕೆಲಸಮಾಡುತ್ತಾಳೆ, ಅಲ್ಲೆಲ್ಲೋ ಆಕೆ ಯಾರದೋ ಕೃಪೆಗೋ ಅವಕೃಪೆಗೋ ಪಾತ್ರಳಾಗುತ್ತಾಳೆ. ಬೇಕಾಗಿಯೋ ಬೇಡದೆಯೋ ಇಲ್ಲದ ಸಂಬಂಧಗಳು ಹುಟ್ಟುಕೊಳ್ಳುತ್ತವೆ!

ಮನುಷ್ಯ ಸಂಬಂಧಗಳು ಕೂದಲೆಳೆಗಿಂತಾ ಸೂಕ್ಷ್ಮವಲ್ಲವೇ? ಕೇಳಿಪಡೆದರೆ ಅದು ಪ್ರೀತಿಯಿಂದ ನೀಡಿದ್ದೆನಿಸಿದರೆ ಕಸಿದು ಪಡೆದರೆ ಅದು ಬಲಾತ್ಕಾರವಾಗುತ್ತದೆಯಷ್ಟೇ? ಯಾವುದನ್ನು ಕೇಳಿಪಡೆಯಲು ಸಾಧ್ಯವಿಲ್ಲವೋ ಅದು ಬಲಾತ್ಕಾರಕ್ಕೆ ಕುಮ್ಮಕ್ಕು ಕೊಡಲು ಮುಂದಾಗುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ಬಲಾತ್ಕಾರ ನಡೆಯುವುದು ಬಹಿರಂಗಗೊಳ್ಳದಿದ್ದರೆ ಇನ್ನು ಕೆಲವೊಮ್ಮೆ ಒಮ್ಮೆ ನಡೆದ ಘಟನೆಗೇ ಅಂಟಿಕೊಂಡ ಮನಸ್ಸು ಮತ್ತದನ್ನೇ ಅನಿವಾರ್ಯವೆನ್ನುವಂತೇ ಒಪ್ಪಿಕೊಳ್ಳುವ ಸ್ಥಿತಿಯೂ ಇರುತ್ತದೆ! ಈ ವಿಷಯದಲ್ಲಿ ಚಲನಚಿತ್ರ ರಂಗದವರಂತೂ ಬಹಳವಾಗಿ ನಾರುತ್ತಾರೆ! ತಾವು ಮಾಡುವ ತಪ್ಪನ್ನು ಮುಚ್ಚಲಿಕ್ಕೆ ಹಲವು ದಾರಿಗಳನ್ನು ಅನುಸರಿಸುತ್ತಾರೆ. ಕೊನೆಗೂ ಹೆಜ್ಜೆ ತಪ್ಪಿದ ಬದುಕಿನ ಛಾಯೆ ಅವರ ಮನಗಳಲ್ಲಿ ಅಚ್ಚಳಿಯದೇ ನಿಲ್ಲುತ್ತದೆ.

ಇನ್ನು ಎಷ್ಟೋ ಹುಡುಗ-ಹುಡುಗಿಯರಿಗೆ ಪ್ರೀತಿಸುವುದೇ ಒಂದು ಮಜಾತೆಗೆದುಕೊಳ್ಳುವ ಆಟವಾಗಿ ಪರಿಣಮಿಸಿದೆ. ಒಬ್ಬೊಬ್ಬರೂ ನಾಲ್ಕೈದು ಅಥವಾ ಹೆಚ್ಚು ಸಂಬಂಧಗಳನ್ನು ಇಟ್ಟುಕೊಳ್ಳುತ್ತಿರುವುದು, ಒಬ್ಬರಾದಮೇಲೆ ಒಬ್ಬರೆಂಬಂತೇ ಅವರನ್ನು ಕಣಕ್ಕೆ ಬಿಟ್ಟುಕೊಳ್ಳುವುದು, ಬೇಸರವಾದಾಗ ಅವರನ್ನು ಕಿತ್ತೆಸೆಯುವುದು ಕಂಡುಬರುತ್ತಿರುವ ಅಂಶವಾಗಿದೆ. ಈ ಮಧ್ಯೆ ಕೆಲವರು ನಿಜವಾಗಿಯೂ ಹುಚ್ಚು ಪ್ರೀತಿಯ ಆಳಕ್ಕೆ ಇಳಿದು ತಮ್ಮನ್ನೇ ಕೊಟ್ಟುಕೊಂಡು ತಮ್ಮ ಸಂಗಾತಿ ಇಲ್ಲದಿದ್ದರೆ ತಮಗೆ ಬದುಕಲೇ ಸಾಧ್ಯವಿಲ್ಲ ಎಂಬಂತಿರುತ್ತಾರೆ. ಹುಡುಗನೊಬ್ಬನನ್ನು ಪ್ರೀತಿಸಿ ಮಂಗಳೂರಿನತನಕ ವಿಮಾನದಲ್ಲಿ ಹೋಗಿ, ಅಲ್ಲೇ ಆರ್ಯಸಮಾಜದಲ್ಲಿ ಮದುವೆಯಾದ ಹುಡುಗಿ ಕೆಲವೇ ದಿನಗಳಲ್ಲಿ ಮರಳಿಬಂದು ಪಾಲಕರನ್ನು ಸೇರಿಕೊಂಡು " ಸ್ನೇಹಿತನಾಗಿದ್ದ ನೀನು ನನ್ನನ್ನು ಗನ್ ಪಾಯಿಂಟ್‍ನಲ್ಲಿ ಹೆದರಿಸಿ ಮದುವೆಯಾಗು ಅಂತ ಹೇಳಿದೆ, ನನಗಿಷ್ಟವಿರದಿದ್ದರೂ ನಿನ್ನನ್ನು ಮದುವೆಯಾದೆ " ಎನ್ನುತ್ತಾಳೆ. ಹುಡುಗ "ಕೂಡಲೇ ಮದುವೆಯಾಗದಿದ್ದರೆ ನನಗೆ ಜೀವಸಹಿತ ಇರಲಿಕ್ಕೇ ಬೇಜಾರು " ಅಂತಿದ್ಲು ಅಂತಾನೆ. ಅಂದರೆ ಈ ಮಧ್ಯೆ ಯಾರದು ತಪ್ಪು ಯಾರದು ಒಪ್ಪು? ಸರ್ಕಾರದ ಉಚ್ಚ ನ್ಯಾಯಲಯದಲ್ಲೇ ಪ್ರೀತಿಸಿ ಮದುವೆಯಾಗಲಿಲ್ಲ ಎಂಬ ಕಾರಣಕ್ಕಾಗಿ ವಕೀಲನೊಬ್ಬ ವಕೀಲೆಯನ್ನು ಕೊಂದುಹಾಕಿದ್ದಾನೆ! ಎಲ್ಲಾ ಬರೀ ಡಂಭಾಚಾರದ ಪ್ರೀತಿ ಮತ್ತು ದೈಹಿಕ ಆಕರ್ಷಣೆಯೇ ಹೊರತು ಇದರಲ್ಲಿ ಲವಲೇಶವೂ ಪ್ರೀತಿ ಇರಲಿಲ್ಲ ಎನಿಸುವುದಿಲ್ಲವೇ ? ಇವತ್ತಿನ ದಿನ ಕಾಲೇಜು ಓದುವ ಹುಡುಗ-ಹುಡುಗಿಯರು ಪಾಲಕರ ಕಣ್ತಪ್ಪಿಸಿ ಎಲ್ಲೆಲ್ಲೋ ಸುತ್ತಾಡುವುದುದಂತೂ ನಮಗೆ ತಿಳಿದೇ ಇದೆ, ಆದರೆ ಅಂತರ್ಜಾಲದ ಪ್ರೀತಿಯ ಬಲೆಯಲ್ಲಿ ಸಿಲುಕಿ ಕಾಣದ ಪ್ರದೇಶದ ಹುಡುಗ-ಹುಡುಗಿ ಪರಸ್ಪರ ಹತ್ತಿರವಾಗುವುದು, ’ಅಗಲಿರಲಾರೆ’ ಎನ್ನುವುದು ಯಾವ ವ್ಯಾಮೋಹ ಹೇಳಿ ?

ಈ ವಿಷಯದಲ್ಲಿ ಮದುವೆಯಾದ ಗಂಡಸರಾಗಲೀ ಹೆಂಗಸರಾಗಲೀ ಹೊರತಾಗಿಲ್ಲ. ನಿಜಕ್ಕೂ ಹೇಳಬೇಕೆಂದರೆ ಕೆಲವರಿಗೆ ಇಂತಹ ವ್ಯವಸ್ಥೆಯ ಅವಶ್ಯಕತೆಯಿತ್ತು ಅನಿಸುತ್ತದೆ. ಎರಡು ಮೂರು ಮಕ್ಕಳಿರುವ ಹೆಂಗಸರು ಮತ್ತು ಗಂಡಸರು ಪರಸ್ಪರ ಪ್ರೇಮಪಾಶದಲ್ಲಿ ಬೀಳುವುದು ಬಾಹ್ಯ ಸೌಂದರ್ಯಕ್ಕಲ್ಲದೇ ಮತ್ತಿನ್ನೇನು? ಎಷ್ಟೋ ಹೆಂಗಸರಿಗೆ ಗಂಡನ ಒಳ್ಳೆಯತನದ ಬಗ್ಗೆ ಗೊತ್ತಿದ್ದರೂ ಅವನನ್ನು ಬಿಡಲಾಗದಿದ್ದರೂ ಕಾಮದ ತೆವಲು, ಹತ್ತಿಕ್ಕಲಾಗದ ಕಾಮದ ತುಡಿತಕ್ಕೆ ಇನ್ನೊಬ್ಬ ಗಂಡಸು ಬೇಕು ಎಂದರೆ ನಂಬುತ್ತೀರಾ? ಮೈಮಾಟವನ್ನೇ ನೋಡಿ ಮನಸೋಲುವ ಗಂಡಸರಿಗೆ ತಮ್ಮತ್ತ ವಾಲಿ ತಮ್ಮ ತೆವಲಿಗೆ ಸಿಗುವ ಎಲ್ಲಾ ಹುಡುಗಿಯರೂ ಬೇಕಾಗಬಹುದಾದ ಮನೋಸ್ಥಿತಿ! ಎಲ್ಲರೂ ಹಾಗೇ ಅಂತಲ್ಲ, ಆದರೆ ಅನೇಕರು ಹೀಗೇ ಇದ್ದಾರೆ, ಇರುತ್ತಾರೆ. ಈ ಅಸಡ್ಡೆಯ ಕಾಮತೃಷೆಯ ಉರಿಯನ್ನು ಹೆಚ್ಚಿಸುವುದು ಅರ್ಧಂಬರ್ಧ ತೋರಿಸುವ ದೃಶ್ಯಗಳು, ಆಲ್ಕೋಹಾಲು, ಲೈವ್ ಬ್ಯಾಂಡು, ಹಲವು ಚಲನಚಿತ್ರಗಳು ಮತ್ತು ಇಂದಿನ ಕನಿಷ್ಠ ಉಡುಪಿನ ಬಳಕೆಯ ಆಂದೋಲನ! ಕನಿಷ್ಠ ಉಡುಪು ಬಳಸುವ ಆಂದೋಲನಕ್ಕೆ ಯಾರು ಗುರುವೋ ಗೊತ್ತಿಲ್ಲ. ಹಾಗೊಮ್ಮೆ ನೋಡಿದರೆ ಇಂತಹದಕ್ಕೆ ಗುರುವಿನ ಅವಶ್ಯಕತೆಯೇ ಇಲ್ಲ.

ಅಂತರ್ಜಾಲದಲ್ಲಿ ಸಿಗುವ ಕಾಮಾದಾಟದ ತಾಣಗಳಿಗೆ ಎಳೆಯ ಹುಡುಗರು ಲಗ್ಗೆಇಡುತ್ತಾರೆ. ಗಂಡಸರು ಹೆಂಗಸರು ಕದ್ದು ನೋಡುತ್ತಾರೆ! ಜಾಹೀರಾತುಗಳು ಅನೇಕಬಾರಿ ಎಲ್ಲವನ್ನೂ ತೆರೆದುತೋರುವ ಮಟ್ಟಕ್ಕೆ ಬೆಳೆದಿವೆ. ’ಜಸ್ಟ್ ಜಾಕೀಯಿಂಗ್’ ಎಂದು ಬರುವ ಜಾಕಿ ಕಂಪನಿಯ ಜಾಹೀರಾತು ನೋಡಬೇಕು, ಖೋಡೇ ಮತ್ತು ಕಿಂಗ್ ಫಿಷರ್ ಕಂಪನಿಗಳ ಕ್ಯಾಲೆಂಡರ್ ಗಳು ಬಿಕನಿ ತೊಟ್ಟ ಯುವತಿಯರನ್ನು ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಪೇಜ್ ತ್ರೀ ಎಂಬ ಹೆಸರಿನಲ್ಲಿ ಆಂಗ್ಲ ಮಾಧ್ಯಮದ ಪತ್ರಿಕೆಯೊಂದು ಹೆಂಡದ ಪಾರ್ಟಿ ಸಂಸ್ಕೃತಿಯ ಚಿತ್ರಗಳನ್ನು ದಿನವೂ ಪ್ರಕಟಿಸುತ್ತದೆ. ಐಟೆಂ ಸಾಂಗ್ ಎಂಬ ಸೋಗಿನಲ್ಲಿ ಯುವತಿಯ ಅಂಗಾಂಗಕ್ಕೆ ಒತ್ತುಕೊಡುವ ನರ್ತನವನ್ನು ಮಾಡಿಸುವ ಚಲನಚಿತ್ರಗಳಿವೆ. ಇದಲ್ಲದೇ ಹಳ್ಳಿ ಹಳ್ಳಿಗಳಲ್ಲೂ ಅಲ್ಲಲ್ಲಿ ಅಲ್ಲಲ್ಲಿ ನಂಗಾನಾಚ್ ನಂಥ ಕೆಟ್ಟ ನರ್ತನಗಳು ಪ್ರದರ್ಶಿತವಾಗುತ್ತಿವೆ. ರಾಜಕಾರಣಿಗಳು ಬಹಿರಂಗವಾಗಿ ತಮ್ಮ ’ರಾಣಿ’ಯರನ್ನು ತೋರಿಸುವ ಕಾಲ ಇದಾಗಿದೆ: ಬೇಕಾದರೆ ಮಾಮು ಕುಮಾರಸ್ವಾಮಿಯನ್ನೇ ಕೇಳಿ. ಬೆಳಗೆರೆಯಂಥವರು ಬಾಯಿ ಚಪ್ಪರಿಸುವ ಶೈಲಿಯಲ್ಲಿ ’ಕಾಮರಾಜಮಾರ್ಗ’ ಬರೆದರೆ ೧೬,೦೦೦ಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ದಶಮಾನಕ್ಕೂ ಹಿಂದೆ ಲೋಕಾರ್ಪಣೆಗೊಂಡ ಒಳ್ಳೆಯ ಪುಸ್ತಕಗಳ ಮಾರಾಟವನ್ನೇ ಮೀರಿಸಿ ದುಪ್ಪಟ್ಟು ದಿಪ್ಪಟ್ಟು ಮಾರಲ್ಪಟ್ಟು ಮರುಮರುಮರು ಮುದ್ರಣ ಕಂಡರೆ ಇದು ಇವತ್ತಿನ ನಮ್ಮ ಜನಾಂಗದ ಅಭಿರುಚಿಯನ್ನು ತೋರಿಸುತ್ತದೆ!

ತಿಂಗಳ ಶಿಶುವೊಂದು ತುಮಕೂರಿನ ರಸ್ತೆಯಲ್ಲಿ ಬಿದ್ದಿರುತ್ತದೆ ಅಥವಾ ಬೆಂಗಳೂರಿನ ಇನ್ನೆಲ್ಲೋ ಕಸದತೊಟ್ಟಿಗಳಲ್ಲಿ ಆಗಾಗ ಶಿಶುಗಳು ಕಾಣಿಸಿಕೊಳ್ಳುತ್ತವೆ. ಎಷ್ಟೋ ಗರ್ಭಸ್ಥ ಶಿಶುಗಳು ಲೋಕವನ್ನು ಕಣ್ತೆರೆದು ನೋಡುವುದಕ್ಕೂ ಮುನ್ನವೇ ಇಹಲೋಕಯಾತ್ರೆ ಪೂರೈಸಿಬಿಡುತ್ತವೆ!----ಇವೆಲ್ಲಾ ಪಾಪದ ಕೂಸುಗಳಲ್ಲವೇ? ಇವುಗಳಿಗೆ ಕಾರಣಯಾರು? ಒಂಬತ್ತನೇ ತರಗತಿಯಲ್ಲಿರುವ ಹುಡುಗಿಗೆ ಮಾಸಿಕ ಸ್ರಾವ ಸಂಭವಿಸದೇ ಇದ್ದು ಕುಂತಲ್ಲೇ ನಿದ್ದೆ ಮಾಡುವಾಗ ಆಕೆಯ ತಾಯಿ ಆಕೆಯನ್ನು ವೈದ್ಯರಲ್ಲಿಗೆ ಒಯ್ದು ಪರೀಕ್ಷಿಸಲಾಗಿ ಆಕೆ ಗರ್ಭಿಣಿ ಎಂದು ತಿಳಿದುಬರುತ್ತದೆ! ಹುಡುಗಿಯನ್ನು ಬಲವಂತವಾಗಿ ಕೇಳಿದಾಗ ತನ್ನ ತರಗತಿಯ ಹುಡುಗನೊಬ್ಬನನ್ನು ತೋರಿಸುತ್ತಾಳೆ--ಎಂತಹ ವಿಪರ್ಯಾಸವಲ್ಲವೇ? ಇಂತಹದ್ದನ್ನೆಲ್ಲಾ ಹತ್ತಿಕ್ಕಲು ಹಿಂದಕ್ಕೆ ಕೆಲವು ರೀತಿರಿವಾಜುಗಳಿದ್ದವು, ಆದರೆ ಇಂದಿಗೆ ಅವು ಅರ್ಥಹೀನ ಸೂತ್ರಗಳಾಗಿ ಶಸ್ತ್ರಹೀನ ಯೋಧನೊಬ್ಬ ಪ್ರಚಂಡ ರಣರಂಗದಲ್ಲಿ ಕುಸಿದು ಕುಳಿತಂತೇ ಎಂದರೆ ತಪ್ಪೂಂತೀರಾ? || ಯದ್ಭಾವೋ ತದ್ಭವತಿ || ಎಂಬ ಸಂಸ್ಕೃತದ ವ್ಯಾಖ್ಯೆಯಂತೇ ನಮ್ಮ ನಮ್ಮ ಭಾವನೆಗಳು ಎಲ್ಲದಕ್ಕೂ ಕಾರಣವಷ್ಟೇ ? ಆ ಭಾವನಗಳು ಹುಟ್ಟಿಕೊಳ್ಳಲು ಪೂರಕ ಪರಿಸರವೇ ಕಾರಣವಲ್ಲವೇ? ಜನಸಾಮಾನ್ಯರಾದ ನಮಗೆ ಎಲ್ಲರಿಂದಲೂ ಮನೋನಿಗ್ರಹ ಸಾಧ್ಯವೇ? ಇಲ್ಲಾ ಎಂತಾದಮೇಲೆ ಭಾವನೆ ಕೆಣಕುವ, ಕಾಮೋತ್ತೇಜಕ ಪರಿಸರವನ್ನು ನಾವು ಅನುಮೋದಿಸಬೇಕೇ?

ಎಷ್ಟೋ ಕುಟುಂಬವೇ ಒಡೆದು ಹಾಳಾಗುವುದು ಈ ಥರದ ಅಸಭ್ಯ, ಅನೈತಿಕ ಸಂಬಂಧಗಳಿಂದಲ್ಲವೇ? ಇದೇ ಕಾರಣವಾಗಿ ಬದಲಾಗಿಹೋಗುವ ಪಾಲಕರ ಮಧ್ಯೆ ಹುಟ್ಟಿ ಬೆಳೆಯುವ ಕಂದಮ್ಮಗಳಿಗೆ ಒಂದೋ ಅಪ್ಪನೋ ಇಲ್ಲಾ ಅಮ್ಮನೋ ಸಿಗದಾಗುವ ಕಾಲಬಂದಾಗ, ಬೇರೆಯಾಗುವ ಕಾಲ ಬಂದಾಗ ಮಗುವಿನ ಮುಗ್ಧ ಮನದಲ್ಲಿ ಏಳಬಹುದಾದ ನೋವಿನ ಅಲೆ ಎಂಥದ್ದಿರಬಹುದು ನಮಗೆ ಅರ್ಥವಾಗುತ್ತದೆಯೇ? ’ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್’ ಎಂದು ಮೊದಲೇ ಸಾರುವ ತನ್ನ ಪರಾಗ ಬೀರುವ ಗಂಡುದುಂಬಿಗೆ ಬಿರಿಯುವ ಸ್ವೀಕರಿಸುವ ಗುಣಧರ್ಮದವುಳ್ಳ ಹೆಣ್ಣುದುಂಬಿ ಸೇರಲು ಹಾತೊರೆಯುತ್ತದೆ. ಸೇರುವ ಕಾಲದಲ್ಲಿ ಇರುವ ಮಧುರಕ್ಷಣಗಳು ತದನಂತರ ಇಲ್ಲದಾದಾಗ ಬೆಂಕಿಗೆ ಬಿದ್ದ ಪತಂಗದ ರೀತಿ ತನ್ನನ್ನೇ ತನ್ನ ಜೀವನವನ್ನೇ ಅರ್ಪಿಸಿಕೊಂಡು ಒದ್ದಾಡುತ್ತದೆ. ಇರುಳು ಕಂಡ ಹಾಳು ಬಾವಿಗೆ ಹಗಲು ತಾನಾಗೇ ನಡೆದುಬಂದು ಬೀಳುತ್ತದೆ. ಗುರುತು ಪರಿಚಯವಿಲ್ಲದ ಹುಡುಗನೊಬ್ಬ ಕಾರಲ್ಲಿ ಬಂದು ಕರೆದಾಗ ಕೇವಲ ಜಾಲತಾಣದ ಪರಿಚಯವಷ್ಟನ್ನೇ ಆಧಾರವಾಗಿ ಹಿಡಿದು ಹುಡುಗಿ ಆತನ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತು ಸಾಗುತ್ತಾಳೆ; ಸಾಗುತ್ತಾ ತನ್ನತನವನ್ನು ಆತನಿಗೆ ಅರ್ಪಿಸುತ್ತಾಳೆ. ಯಾವುದೋ ಮಾಲ್ ಬಳಿ, ಚಿತ್ರಮಂದಿರದಬಳಿ, ಹೋಟೆಲ್ ಬಳಿ ಕಾದು ನಿಂತ ಹಸಿದ ಹುಲಿಯ ಬಾಯಿಗೆ ಸುಂದರ ಹೆಣ್ಣು ಮೃಗ ತಾನಾಗೇ ಬಂದು ಬೀಳುವ ಈ ಕ್ರಿಯೆ ’ಡೇಟಿಂಗ್’! ಒಬ್ಬರನ್ನೊಬ್ಬರು ಅರಿಯಲು, ನಮಗೆ ಬ್ಲೈಂಡ್ ಡೇಟ್ ಅನುಕೂಲ ಎನ್ನುವ ಜನ ಪಾಲಕರ ಇತಿಮಿತಿಗಳನ್ನೂ ಮೀರಿ ಅವರ ಹಕ್ಕು-ಬಾಧ್ಯತೆಗಳನ್ನು ಲೆಕ್ಕಿಸದೇ ಕೇವಲ ತಾವೇತಾವಾಗಿ ಅಲ್ಲಿಲ್ಲಿ ಕೂತು, ನಿಂತು ಆಮೇಲೆ ನಿಧಾನಕ್ಕೆ ಮೈಗೊರಗಿ ಹೀಗೆಲ್ಲಾ ಚೇಷ್ಟೆಗಳಲ್ಲಿ ತೊಡಗಿ ಮತ್ತದೇ ಕಾಮದಾಟ ಮುಗಿದು ಅದರಲ್ಲೇ ಪರ್ಯವಸಾನವಾಗುವ ಕ್ರಿಯೆಯೇ ಡೇಟಿಂಗ್.

ಕೆಲವು ರಿಯಾಲಿಟಿ ಶೋ ಗಳಲ್ಲಿ ನಡೆಸುವ ವೈವಾಹಿಕ ಸಂದರ್ಶನಗಳೂ ಕೂಡ ಪರೋಕ್ಷ ನಮ್ಮದಲ್ಲದ ಒಂದು ರಾಜಸ ಪ್ರವೃತ್ತಿಗೆ ಕಾರಣವಾಗುತ್ತವೆ. ಹಳ್ಳಿಯ ಹುಡುಗರನ್ನು ಪೇಟೆಗೂ ಪೇಟೆಯ ಹುಡುಗಿಯರನ್ನು ಹಳ್ಳಿಗೂ ಕರೆದೊಯ್ದು ವಾಹಿನಿಗಳು ನಡೆಸುತ್ತಿರುವ ಅಧ್ವಾನದ ಶೋಗಳನ್ನು ನೋಡಿದರೆ ಇದೂ ಕೂಡ ಒಂಥರಾ ಹಿಂಸೆಯಲ್ಲವೇ ಅನಿಸುತ್ತದೆ. ಸಿನಿಮಾ ಸೇರಲೆಂದು ಬಂದ ಅನೇಕ ಹುಡುಗಿಯರು ಕಾಲಕ್ರಮದಲ್ಲಿ ಕಾಲ್ ಗರ್ಲ್ ಗಳಾದರೆ ಧನಿಕರ ಮನೆಯ ಹೆಣ್ಮಕ್ಕಳು ಮಜಾಕ್ಕಾಗಿ ಕಾಲ್ ಗರ್ಲ್ ಗಳಾಗುತ್ತಿದ್ದಾರೆ. ’ಲಿವ್-ಇನ್ ರಿಲೇಶನ್ಶಿಪ್’, ’ಒನ್ ನೈಟ್ ಸ್ಟೇ’ ಇವೆಲ್ಲಾ ಅತಿಯಾಗಿ ವಿಜೃಂಭಿಸುತ್ತಿವೆ. ಬೇಡದ ಗರ್ಭವನ್ನು ಆರಂಭದಲ್ಲೇ ನಿವಾಳಿಸಿ ಎಸೆಯುವ ಸಲುವಾಗಿ ಭೋಗನಡೆದು ೭೨ ಗಂಟೆಗಳ ನಂತರವೂ ನಿಭಾಯಿಸಬಲ್ಲ ಮಾತ್ರೆಗಳು ದೊರೆಯುತ್ತವೆ. ಯಾರಹಂಗೂ ಇಲ್ಲದೇ ಸ್ವೇಚ್ಛೆಯಿಂದ ಕಾಮದಾಟ ಪೂರೈಸಿಕೊಳ್ಳುವ ಹರೆಯದ ಹಕ್ಕಿಗಳಿಗೆ ರಂಗ ಸದಾ ಅನುಕೂಲವನ್ನೇನೋ ಕಲ್ಪಿಸಿದೆ; ಆದರೆ ಅದರಿಂದ ಆವರಿಸುವ ಮಾನಸಿಕ ಸಮಸ್ಯೆಗಳಿಗೆ, ಬಯಕೆಗಳಿಗೆ, ಖಿನ್ನತೆಗಳಿಗೆ, ಪಾಪಪ್ರಜ್ಞೆಗೆ ಯಾವ ಮಾತ್ರೆಯೂ ಇಲ್ಲ, ಅದು ಬರಲು ಸಾಧ್ಯವೂ ಇಲ್ಲ! ಹುಚ್ಚು ಹುಡುಗಾಟಕ್ಕೆ ಹಿಂದೂ ಸಂಪ್ರದಾಯದಂತೇ ಮಧ್ಯವಯಸ್ಕರಾದ ಅರುಣ್ ನಾಯರ್ ಮತ್ತು ಲಿಜ್ ಹರ್ಲೀ ಮದುವೆಯಾಗುತ್ತಾರೆ. ಗೋಸುಂಬೆಯ ಚಾಳಿಯ ಲಿಜ್ ತಿಂಗಳಲ್ಲೇ ಮತ್ತೆ ಬೇರೇ ಗಂಡಸರಲ್ಲಿ ಆಸಕ್ತಳಾಗುತ್ತಾಳೆ. ಇಂತಹ ಕಾಮಪುರಾಣಗಳನ್ನು ನಮ್ಮ ಮಾಧ್ಯಮಗಳು ಪುಂಖಾನುಪುಂಖವಾಗಿ ವಿಜೃಂಭಿಸಿ ತಿಳಿಸುತ್ತವೆ-ಇದಕ್ಕೆಲ್ಲಾ ಅರ್ಥವಿದೆಯೇ ?

ಇದನ್ನೆಲ್ಲಾ ನೋಡಿದಾಗ ನಮ್ಮ ಪೂರ್ವಜರು ರಾಮಾಯಣ ಮಹಾಭಾರತ ಮೊದಲಾದ ಮೌಲಿಕ ಮಹಾಕಾವ್ಯಗಳನ್ನು ಯಾಕೆ ಬರೆದರು ಎಂಬುದು ಅರ್ಥವಾಗುತ್ತದೆ. ಕೇವಲ ದೈಹಿಕ ಸುಖವೇ ಮಹತ್ವವೆಂದು ತಿಳಿದು ಹಾಳಾಗಬೇಡಿ ಎಂಬ ಉದಾತ್ತ ಧ್ಯೇಯಗಳನ್ನು ಉಣಬಡಿಸುವ ದಾಸರ ಹಲವು ಪದಗಳನ್ನು ನಾವು ಕೇಳಿಯೇ ಕೇಳುತ್ತೇವೆ ಆದರೂ ಹಲವೊಮ್ಮೆ ಅವನ್ನೆಲ್ಲಾ ಮರೆತುಬಿಡುತ್ತೇವೆ. ಇದು ಒಳ್ಳೆಯ ಲಕ್ಷಣವಲ್ಲ, ವಿದೇಶೀಯರು ಧನಿಕರಾಗಿರಬಹುದೇ ಹೊರತು ಅವರಿಗೆ ಮನಃಶ್ಶಾಂತಿಯಿಲ್ಲ. ಅದನ್ನರಸಿ ಅವರು ಭಾರತಕ್ಕೇ ಬರುತ್ತಾರೆ. ಯಾವುದೋ ಸನ್ಯಾಸಿಯೋ ಬಾಬಾನೋ ಸಿಕ್ಕರೆ ಅಲ್ಲಿ ಶಾಂತಿಗಾಗಿ ಬೇಡುತ್ತಾರೆ. ಹಾಗೆನೋಡಿದರೆ ಅಲ್ಲಿ ಸೂತ್ರ ಗೋತ್ರ ಗೊತ್ತಿರದ ಪಶುಗಳ ಸಂತತಿಯ ರೀತಿಯಲ್ಲೇ ಬದುಕುವ ಬದುಕದು. ಪ್ರಾಮಾಣಿಕವಾಗಿ ನೋಡಿ--ನಿಜವಾಗಿಯೂ ಜನಿಸುವ ಪ್ರೀತಿ ಸಂಗಾತಿಯನ್ನು ಅವಿರತವಾಗಿ ಕಾಳಜಿಯಿಂದ ನೋಡಿಕೊಳ್ಳುತ್ತದೆ. ಅಲ್ಲಿ ಕಾಮಕ್ಕೆ ಪ್ರಾಮುಖ್ಯತೆ ಇರುವುದಿಲ್ಲ. ಕಷ್ಟ-ಸುಖಗಳೆಂಬ ಜೀವನದ ಉಯ್ಯಾಲೆಯ ಎರಡೂ ಕಡೆಯ ಓಲಾಟಗಳಲ್ಲಿ ಅವರು ಪರಸ್ಪರರನ್ನು ಅರಿತು ಊರುಗೋಲಾಗಿ ಬದುಕುತ್ತಾರೆ. ಹರೆಯ ಕಳೆದರೂ ಮನದಲ್ಲಿ ಅದು ಹಸಿರಾಗೇ ಇರುತ್ತದೆ. ಗಂಡ-ಹೆಂಡತಿ ಎಂಬ ಅನ್ಯೋನ್ಯತೆ ಮತ್ತು ಅನುರಾಗ ಸದಾ ಅರಳಿರುತ್ತದೆ. ಬೆಳೆಯುವ ಮಕ್ಕಳಿಗೂ ಕೂಡ ಅಪ್ಪ-ಅಮ್ಮನ ಪ್ರೀತಿಯ ಆರೈಕೆ ದೊರೆಯುತ್ತದೆ. ನಮಗೆ ಜನ್ಮವಿತ್ತ ನಮ್ಮಪ್ಪ ಅಮ್ಮ ಎಷ್ಟು ಚೆನ್ನಾಗಿದ್ದಾರೆ/ದ್ದರು ನೋಡಿ ಅದೇರೀತಿ ನಾವೂ ಮುನ್ನಡೆದರೆ ಆಗ ಸ್ವಸ್ಥ ಸಮಾಜ ಮುನ್ನಡೆಯುತ್ತದೆ. ಪರಸ್ಪರರನ್ನು ಅರಿಯಲು ಡೇಟಿಂಗ್ ಪರಿಹಾರವಲ್ಲ, ಬದಲಾಗಿ ಪಾಲಕರಿರುವ ಪರಿಸರದಲ್ಲೇ ಮದುವೆಗೂ ಮುನ್ನ ಮುಕ್ತವಾಗಿ ಮಾತನಾಡಿ ಅರಿಯುವ ನಡವಳಿಕೆ ಒಳ್ಳೆಯದು. ಆ ಕಾಲ ನಮ್ಮದಾಗಿರಲಿ; ಮದುವೆಗೂ ಮುನ್ನ ನಡೆಯುವ, ಮದುವೆಯ ಹೊರತಾಗಿ ನಡೆಯುವ ದೈಹಿಕ ಸಂಬಂಧ ದೂರವಾಗಲಿ ಎಂಬ ನನ್ನಸಿಕೆಯೊಡನೆ ಮತ್ತೊಮ್ಮೆ ಸಿಗಲು ಈಗ ವಿದಾಯಕೋರುತ್ತೇನೆ.

Wednesday, December 22, 2010

ಜೀವ ಪರಿಧಿ


ಜೀವ ಪರಿಧಿ
ಪರಿಧಿಯೊಳಗೆ ಅದರ ಹೊರಗೆ
ಪರಿಕಿಸುತ್ತ ಹಲವು ಬಗೆ
ಚರಿತೆಗಳನು ದಾಖಲಿಸುವ
ಅರಿವುಗೊಡದ ಶಕ್ತಿಯೇ

ಎಲುವಗೂಡು ಗೂಡಿನಲ್ಲಿ
ಚೆಲುವಿಗಾಗಿ ಚರ್ಮಮೆತ್ತಿ
ಒಲವೆನ್ನುವ ಭಾವಬೆಸೆದು
ನಲಿವು ತರುವ ಯುಕ್ತಿಯೇ ?

ಜಗದ ಜಾಗದಲ್ಲಿ ನಿಲಿಸಿ
ಯುಗದ ಧರ್ಮ ಅದಕೆ ಮಿಳಿಸಿ
ಹಗೆ ಅಹಂಕಾರ ಲೋಭ
ಹಗುರ ತೂರ್ವ ರೀತಿಯೇ ?

ಹಲವ ಕೊಟ್ಟು ಕೆಲವುಜನಕೆ
ಕೆಲವೂ ಕೊಡದೆ ಹಲವು ಜನಕೆ
ಅಲೆಯುವಂತೆ ಆಡಿಸುತ್ತ
ಬಲವ ಹರಿವ ಸೂಕ್ತಿಯೇ ?

ಪ್ರೀತಿಯೆಂಬ ಬೀಜನೆಟ್ಟು
ನೀತಿಯಿಂದ ಬಳ್ಳಿ ಬೆಳೆದು
ಆತುಕೊಂಡು ಬದುಕ ಮರವ
ಸೋತು ಬಿಡುವ ವ್ಯಾಪ್ತಿಯೇ ?

Sunday, December 19, 2010

ದತ್ತನ ನೆನೆ ಮನವೆ


ದತ್ತನ ನೆನೆ ಮನವೆ

ಬ್ರಹ್ಮಾಂಡವನ್ನು ಧರಿಸಿಯೂ ಅದರೊಳಗೇ ಹೊಕ್ಕೂ ಇರುವ ಪರಾಶಕ್ತಿಗೆ ಆಗಾಗ ಹಲವನ್ನು ಕೆದಕುವ ಅಪೇಕ್ಷೆ. ಯಾರ್ಯಾರನ್ನು ಎಲ್ಲೆಲ್ಲಿ ಹೇಗೆ ಹೇಗೆ ಪರೀಕ್ಷಿಸಲಿ ಎಂಬುದನ್ನು ಸದಾ ಪರಿಗಣಿಸುವ ಈ ಶಕ್ತಿ ಮಾಹಾವಿಷ್ಣುವಾಗಿ ದಶಾವತಾರ ತಾಳಿಯೂ, ಮಹಾಗಣಪತಿಯಾಗಿ ೧೭ ಅವತಾರತಾಳಿಯೂ, ಮಹಾಶಕ್ತಿಯಾಗಿ ಎಣಿಕೆಯಿಲ್ಲದಷ್ಟು ಅವತಾರತಾಳಿಯೂ ಭುವಿಯಲ್ಲಿ ವಿರಾಜಿಸಿದರೆ ಅವತಾರಗಳಲ್ಲೂ ವೈವಿಧ್ಯತೆ ಮೆರೆಯುವ ಪರಿ ಬಹಳ ಖುಷಿಗೊಳಿಸುವಂಥದು. ತಾನು ಹಲವು ರೂಪಗಳಲ್ಲಿದ್ದರೂ ಎಲ್ಲರೂಪಗಳ ಮೂಲ ರೂಪ ಒಂದೇ ಎಂಬ ತತ್ವವನ್ನು ಸಾರುವ ಈ ಶಕ್ತಿಯೇ ರಾಮನೂ ಆಗುತ್ತದೆ, ಹನುಮನೂ ಆಗುತ್ತದೆ. ತನ್ನಿಂದಲೇ ತನ್ನನ್ನು ಸೃಜಿಸಿ, ಸೇವಿಸಿ ವಿಸ್ಮಯವನ್ನುಂಟುಮಾಡುವ ಈ ಶಕ್ತಿಗೆ ಹಿಂದೊಮ್ಮೆ ಅತ್ರಿ ಮಹರ್ಷಿಯ ಕಾಲದಲ್ಲಿ ಅವರ ಮಗನಾಗಿ ಆಡುವ ಆಸೆ ಬಂತಂತೆ. ಆಗ ಹುಟ್ಟಿದ ಮಗುವೇ ದತ್ತಾತ್ರೇಯ.

ಅತ್ರಿ ಮಹರ್ಷಿಯ ಪತ್ನಿ ಅನಸೂಯಾ. ಮಹಾ ಪತಿವೃತೆಯಾದ ಅನಸೂಯೆ ಯಾವ ಅಸೂಯೆಯೂ ಇಲ್ಲದ ಸಾಧ್ವಿಮಣಿ. ಮುನಿಗೆ ತಕ್ಕ ಮಡದಿ, ರೂಪವತಿಯೂ ಗುಣಾಢ್ಯಳೂ ಆಗಿರುತ್ತಾಳೆ. ಕಾರ್ಯನಿಮಿತ್ತ ಅತ್ರಿ ಹೊರಗೆ ಹೋಗಿರುವ ಒಂದುದಿನ ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ಅದರಂತೇ ಬಂದ ಮೂರುಜನ ಗಂಡಸರಿಗೆ ಉಪಚರಿಸ ಬೇಕಲ್ಲ ? ಗಂಡ ಬರುವವರೆಗೆ ಬಹಳ ಸಮಯವಾಗಬಹುದೇನೋ, ಅಲ್ಲಿಯವರೆಗೂ ಅವರಿಗೆ ತೃಷೆಗೋ ಹಸಿವಿಗೋ ಏನನ್ನೂ ಕೊಡದೇ ಹಾಗೇ ಕೂರಿಸುವುದು ಸರಿಯೇ ಎಂದುಕೊಳ್ಳುತ್ತಾ ಅವರನ್ನು ಮಾತನಾಡಿಸುತ್ತಾಳೆ ಅನಸೂಯಾ. ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ. ಬೇಡಿಕೆಯನ್ನು ನೆರವೇರಿಸದಿದ್ದಲ್ಲಿ ಅತಿಥಿ ಸೇವೆಯನ್ನು ಭಂಗಗೊಳಿಸಿದ ಪಾಪವನ್ನು ಅನುಭವಿಸಬೇಕಾಗುತ್ತದೆಂದೂ ಸಾರುತ್ತಾರೆ.

ಕ್ಷಣಕಾಲ ಯೋಚಿಸಿದ ಅನಸೂಯೆ ಮೂವರನ್ನೂ ಒಂದೇ ಕಡೆ ಸಾಲಾಗಿ ಕುಳಿತುಕೊಳ್ಳಿರೆಂದೂ ತಾನು ಹಾಲೂಡಿಸಲು ಒಪ್ಪಿರುವೆನೆಂದೂ ತಿಳಿಸುತ್ತಾಳೆ. ಬಂದ ಮೂರೂ ಗಂಡಸರು ಒಂದೆಡೆ ಕುಳಿತು ಕಾಯುತ್ತಿರುವಾಗ ತನ್ನ ಕಮಂಡಲುವಿನಿಂದ ನೀರನ್ನು ತೆಗೆದು ಪರಾಶಕ್ತಿಯನ್ನು ಧ್ಯಾನಿಸಿ ಇವತ್ತು ತನ್ನ ಪತಿವೃತಾ ಧರ್ಮಕ್ಕೆ ಕಳಂಕ ತಟ್ಟುವ ಸಮಯ ಬಂದಿದೆಯೆಂದೂ ಅನಿವಾರ್ಯವಾಗಿ ಬಂದ ಅತಿಥಿಗಳನ್ನು ತಾನು ಸೇವಿಸಬೇಕಾಗಿದೆಯೆಂದೂ ಅಂದುಕೊಳ್ಳುತ್ತಾ ಎದುರಲ್ಲಿ ಕುಳಿತಿದ್ದ ಮೂರೂಜನ ಗಂಡಸರಿಗೆ ಪ್ರೋಕ್ಷಿಸಿಬಿಡುತ್ತಾಳೆ. ಕ್ಷಣಮಾತ್ರದಲ್ಲಿ ಮೂರೂಜನ ಗಂಡಸರು ಮೂರು ಸುಂದರ ಗಂಡು ಶಿಶುಗಳಾಗಿ ಮಲಗುತ್ತವೆ. ಅಮ್ಮನ ಅಕ್ಕರೆ ತುಂಬಿದ ಅನಸೂಯೆ ಆ ಶಿಶುಗಳಿಗೆ ಎದೆ ಹಾಲನ್ನು ನೀಡುತ್ತಾಳೆ ಮಾತ್ರವಲ್ಲ ಮೂವರನ್ನೂ ಒಂದೇ ತೊಟ್ಟಿಲೊಳಿಟ್ಟು ಜೋಗುಳಹಾಡಿ ರಮಿಸುತ್ತಾಳೆ. ಅವಳ ಭಕ್ತಿ,ಶ್ರದ್ಧೆಗೆ ಒಲಿದ ಪರಾಶಕ್ತಿಯ ಮೂರು ರೂಪಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ತಾವೆಂದೂ, ಪೂರ್ವದಲ್ಲಿ ಅನುಗ್ರಹಿಸಿದಂತೇ ಅತ್ರಿ ದಂಪತಿಯ ಮಗನಾಗಿ ಅಯೋನಿಜರಾಗಿ ಜನಿಸಲು ಬಂದಿದ್ದಾಗಿಯೂ ಅನಸೂಯೆಗೆ ತಿಳಿಸಿ ದೇಹವೊಂದರಲ್ಲೇ ಮೂರು ತಲೆ, ಆರು ಕೈಗಳು ಉಳ್ಳ ಒಂದೇ ಶಿಶುವಾಗಿ ಇನ್ನುಮುಂದೆ ಇದೇ ರೂಪದಲ್ಲಿ ಇರುವುದಾಗಿ ತಿಳಿಸುತ್ತಾರೆ. ಅತ್ರಿ ಮುನಿಗೆ ದತ್ತವಾಗಿ ಬಂದ ಈ ಮಗುವನ್ನು ಮುನಿದಂಪತಿ ದತ್ತಾತ್ರೇಯನೆಂದು ನಾಮಕರಣಗೈದು ಬೆಳೆಸುತ್ತಾರೆ.

ಸಹಜವಾಗಿ ಪರಾಶಕ್ತಿಯಾದ ಪರಬ್ರಹ್ಮನ ಒಂದು ಆವಿಷ್ಕಾರವಾದ ದತ್ತಾತ್ರೇಯ ಮುನಿಯ ಸುತ್ತ ಗೋವುಗಳು, ನಾಯಿಗಳು ಇನ್ನೂ ಹಲವು ಪಶು-ಪಕ್ಷಿಗಳು ಆಗಾಗ ಸುತ್ತುವರಿಯುತ್ತವೆ. ಆತನ ಸನ್ನಿಧಾನದಲ್ಲಿ ಸಿಗುವ ಅಪರಿಮಿತ ಆನಂದಾನುಭೂತಿಯಿಂದ ಆತನ ಪಕ್ಕವೇ ನಿಲ್ಲಲು ಇಷ್ಟಪಡುತ್ತವೆ. ಆ ಯಾ ಜನ್ಮಗಳಲ್ಲಿರುವ ತನ್ನದೇ ಹಲವು ಛೇದಿತ ಅಂಶಗಳಾದ ಅವೆಲ್ಲವುಗಳಲ್ಲೂ ಪ್ರೀತಿಯನ್ನು ತೋರುವ, ಅವುಗಳ ಐಹಿಕ ಸಂಕಷ್ಟಗಳನ್ನು ನಿವಾರಿಸುವ ಮನಸ್ಸು ದತ್ತಾತ್ರೇಯನದ್ದಾಗಿರುತ್ತದೆ. ಅನೇಕ ಋಷಿಗಳೂ, ಋಷಿಕುವರರೂ ಸೇರಿದಂತೇ ಹಲವರು ದತ್ತನ ಸಾಮೀಪ್ಯವನ್ನು ಬಯಸುವಷ್ಟು ಪೂರ್ಣಕಳಾ ರೂಪಿ ದತ್ತಾತ್ರೇಯನಾಗಿರುತ್ತಾನೆ. ಶಾಂತಸರೋವರದಲ್ಲಿ ನಿಂತ ನೀರಿನಂತೇ ಪ್ರಶಾಂತ ಮನಸ್ಸುಳ್ಳ ಆಜಾನುಬಾಹು ದತ್ತಾತ್ರೇಯ ಭುವಿಯ ಬಹುತೇಕರ ಕಣ್ಮಣಿಯಾಗುತ್ತಾನೆ. ಹಲವರ ಸಂಕಷ್ಟಗಳಲ್ಲಿ ಅವರ ಕಣ್ಣೀರೊರೆಸುವ ಪರಾಶಕ್ತಿಯ ಈ ರೂಪವನ್ನು ಜನ ಶಾಶ್ವತವಾಗಿ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ. ಸಂತಾನಹೀನರಿಗೆ ಸಂತಾನವನ್ನು ಕರುಣಿಸುವ, ವಿವಿಧ ಕಾಯಿಲೆಗಳಲ್ಲಿ ತೊಳಲುವವರಿಗೆ ಅವುಗಳಿಂದ ನಿವೃತ್ತಿನೀಡುವ, ಶುದ್ಧಹಸ್ತರಿಗೆ ಅಲೌಕಿಕ ಸಹಾಯವನ್ನು ಉಣಬಡಿಸುವ ದತ್ತಾತ್ರೇಯ ತಂದೆ-ತಾಯಿಯ ಅಪೇಕ್ಷೆಯಂತೇ ವಿವಿಧ ಸನ್ಯಾಸಿಗಳ ರೂಪದಲ್ಲಿ ಪುನರಪಿ ಜನಿಸುವೆನೆಂದು ತಿಳಿಸುತ್ತಾನೆ.

ದತ್ತಾತ್ರೇಯನ ಜಾಗೃತ ಸ್ಥಳಗಳಲ್ಲಿ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ಬಹಳ ಪ್ರಸಿದ್ಧವಾಗಿದೆ. ಶ್ರೀಪಾದ ವಲ್ಲಭರು ಮತ್ತು ನರಸಿಂಹ ಸರಸ್ವತಿಗಳು ಎಂಬ ಈರ್ವರು ಸನ್ಯಾಸಿಗಳು ಒಬ್ಬರಾದಮೇಲೆ ಒಬ್ಬರಂತೇ ಇದೇ ಸ್ಥಳದಲ್ಲಿ ನೆಲೆನಿಂತು ಹಲವುಕಾಲ ತಪಸ್ಸನ್ನಾಚರಿಸ್ದೂ ಅಲ್ಲದೇ ಜಗತ್ತಿಗೇ ಒಳಿತನ್ನು ಬಯಸಿ ಹಲವು ಕಾರ್ಯಗಳನ್ನು ನಡೆಸಿದ್ದಾರೆ. ಇಂದಿಗೂ ಗಾಣಗಾಪುರದಲ್ಲಿ ನಿರ್ಗುಣಪಾದುಕೆಗಳೆಂಬ ಮಾನವ ಪಾದವನ್ನೇ ಮುಟ್ಟಿದಂತೆನಿಸುವ ಪಾದುಕೆ ಪೂಜಿತವಾಗುತ್ತಿರುವುದು ನರಸಿಂಹ ಸರಸ್ವತಿಗಳ ದಿವ್ಯ ಅನುಗ್ರಹದಿಂದ. ಭೀಮಾ-ಅಮರಜಾ ನದಿಗಳು ಸೇರುವ ಜಾಗ ಇದಾದ್ದರಿಂದ ಸಂಗಮದಲ್ಲಿ ಸ್ನಾತರಾಗಿ ದತ್ತನ ಸೇವೆ ನಡೆಸಿದರೆ ಶ್ರೇಯಸ್ಕರವೆಂಬುದು ಶತಶತಮಾನಗಳ ಇತಿಹಾಸದಿಂದ ಅನಾವರಣಗೊಂಡ ಸತ್ಯ ವಿಷಯ. ಆಗರ್ಭ ಶ್ರೀಮಂತನೂ ಕೂಡ ಇಲ್ಲಿಗೆ ಬಂದಾಗ ತನ್ನ ಅಹಂಕಾರ ನಿವೃತ್ತಿಗಾಗಿ ಮಧುಕರೀ ಭಿಕ್ಷಾನ್ನವನ್ನು ಬೇಡುವುದು ಇಲ್ಲಿನ ಸಂಪ್ರದಾಯ!

ಕರ್ನಾಟಕದ ಗುಲಬರ್ಗಾ ಜಿಲ್ಲೆಯ ಲಾಡ್ ಚಿಂಚೋಳಿಯಲ್ಲಿ ಜೀವಿಸಿದ್ದ ದೇಗಲೂರು ನಾರಾಯಣರಾವ ಪತಕಿ ಮತ್ತು ಅವರ ಪತ್ನಿ ಸೌ| ಕಮಲಾಬಾಯಿಯವರಿಗೆ ಹುಟ್ಟಿದ ಮಕ್ಕಳೆಲ್ಲಾ ಸತ್ತುಹೋಗುತ್ತಿದ್ದರು. ಅವರು ಆ ಕಾಲಕ್ಕೆ ಹೈದರಬಾದ್ ನಲ್ಲಿ ವಾಸವಿದ್ದರು. ಹೀಗಿದ್ದಾಗ ಗತಿಸಿದ ಎರಡು ಮಕ್ಕಳ ಆ ನೆನಪು ಅವರ ಮನಸ್ಸನ್ನು ತುಂಬಿ ತೀರಾ ದುರ್ಬಲಗೊಳಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕುಲಪುರೋಹಿತರಾದ ಮಾರುತಿರಾಯರು ಅವರ ಮನೆಗೆ ಆಗಮಿಸಿ ಅವರ ಪೂರ್ವಜರ ವೃತ್ತಾಂತವನ್ನೂ, ಕುಟುಂಬಕ್ಕೆ ತಗುಲಿರುವ ಸರ್ಪದೋಶವನ್ನೂ ತಿಳಿಸುತ್ತಾ ನಿವಾರಣೆಗಾಗಿ ಮತ್ತು ಮಹಾಪುರುಷನ ಜನನಕ್ಕಾಗಿ ಹಿಂದೆ ವಧಿಸಲ್ಪಟ್ಟ ಸರ್ಪರೂಪೀ ಕುಲಪುರುಷನ ಸ್ವಪ್ನವಾಣಿಯಂತೇ ದಂಪತಿ ಗಾಣಗಾಪುರಕ್ಕೆ ತೆರಳಿ ಅಲ್ಲಿ ಶ್ರದ್ಧಾಭಕ್ತಿಯಿಂದ ಸೇವೆಸಲ್ಲಿಸುವಂತೇ ತಿಳಿಸಿದರು. ಪುರೋಹಿತರಿಂದ ವಿಷಯವನ್ನು ಅರಿತ ನಾರಾಯಣರಾಯರು ಸಪತ್ನೀಕರಾಗಿ ಗಾಣಗಾಪುರಕ್ಕೆ ಬಂದು ಹಲವು ರೀತಿಯಲ್ಲಿ ಸೇವೆಸಲ್ಲಿಸಹತ್ತಿದರು. ಕೆಲವೇದಿನಗಳಲ್ಲಿ ಅವರ ನಿಷ್ಕಪಟ ಮನೋಭಾವದ ಸೇವೆಗೆ ಒಲಿದ ದತ್ತಾತ್ರೇಯನು ದರ್ಶನವಿತ್ತು ಒಂದು ಪೂರ್ಣಫಲವನ್ನು ಅನುಗ್ರಹಿಸಿ ಅದನ್ನು ಬಳಸುವಂತೆಯೂ ಮತ್ತು ಕುಲೋದ್ಧಾರಕನಾದ ಪುತ್ರನೊಬ್ಬ ಜನಿಸುವುದಾಗಿಯೂ ತಿಳಿಸುತ್ತಾನೆ. ಸಂತರ್ಪಣೆಯನ್ನು ಪೂರೈಸಿದ ದಂಪತಿ ಮರಳಿ ಹೈದರಾಬಾದ್ ಗೆ ಬರುತ್ತಾರೆ.


ಕೆಲವೇ ದಿನಗಳಲ್ಲಿ ಮತ್ತೆ ಕಮಲಾಬಾಯಿಯವರಿಗೆ ಬಸುರಿಯಾಗಿ ಬಯಕೆ ಆರಂಭವಾಗುತ್ತದೆ. ನವಮಾಸಗಳು ತುಂಬಿದ ಗರ್ಭಿಣಿಯನ್ನು ತಾಯಿ ಬಯಾಬಾಯಿಯವರ ಇಚ್ಛೆಯಂತೇ ಹಡೆಯುವ ಸಲುವಾಗಿ ಕಮಲಾಬಾಯಿಯವರ ಅಕ್ಕನಾದ ಚಂದೂಬಾಯಿಯವರ ಮನೆಗೆ [ಲಾಡ್ ಚಿಂಚೋಳಿಗೆ] ಕರೆದು ತರುತ್ತಾರೆ. ಗಾಣಗಾಪುರದಿಂದ ೧೦-೧೨ ಮೈಲು ದೂರದಲ್ಲಿರುವ ಆ ಊರಿನಲ್ಲಿ ಅದಾಗಲೇ ದತ್ತಜಯಂತಿಯ ದಿನಗಳ ಸಂಭ್ರಮ ಕಾಲಿಡುತ್ತಿತ್ತು. ದೇಸಾಯರು[ನಾರಾಯಣರಯರ ಷಡ್ಕ]ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದು ಉತ್ಸವದಲ್ಲಿ ಅವರೂ ಪಾಲ್ಗೊಳ್ಳುವವರಿದ್ದರು. ಅಂದು ಶಾಲಿವಾಹನಶಕೆ ೧೮೩೦ ಪ್ಲವಂಗನಾಮ ಸಂವತ್ಸರ ಮಾರ್ಗಶೀರ್ಷ ಶುದ್ಧ ಪೌರ್ಣಮಿ ಗುರುವಾರ ದಿನಾಂಕ ೧೯.೧೦.೧೯೦೭ ಸಾಯಂಕಾಲ ೭: ೨೩ ಗಂಟೆಗೆ ಕಮಲಾಬಾಯಿಯವರು ಪುತ್ರರತ್ನವನ್ನು ಪ್ರಸವಿಸಿದರು. ಅದೇ ಸಮಯಕ್ಕೆ ಸರಿಯಾಗಿ ದತ್ತಪ್ರಭುವಿನ ಪಲ್ಲಕ್ಕಿ ಉತ್ಸವ ಅದೇ ಮನೆಯ ಬಾಗಿಲಿಗೆ ಬಂದಿತ್ತು! ಮತ್ತೊಬ್ಬ ದತ್ತಾವತಾರಿಯ ಜನನವಾಯಿತು ಎಂದು ಬೇರೇ ಹೇಳಬೇಕೆ ?

ಈ ದತ್ತಾವತಾರಿ ಬೇರಾರೂ ಅಲ್ಲ, ತಮಗೆಲ್ಲಾ ಈ ಮೊದಲೇ ಕೆಲವು ಸಲ ಹೇಳಿದಂತೇ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳು. ಅವರ ಚರಿತ್ರೆಯನ್ನು ಈ ಸಂದರ್ಭದಲ್ಲಿ ಓದುವುದು ಅತ್ಯಂತ ಪುಣ್ಯತಮ ಕೆಲಸ. ಧರ್ಮಭೇದವಿಲ್ಲದೇ ಹಿಂದೂ ಮುಸ್ಲಿಂ ಕ್ರೈಸ್ತರನೇಕರನ್ನು ಹರಸಿದ, ಮಾರ್ಗದರ್ಶಿಸಿದ, ಅವರ ಕಷ್ಟಗಳನ್ನು ಪರಿಹರಿಸಿದ, ಮನುಷ್ಯಮಾತ್ರರಿಂದ ಮಾಡಲಾಗದ ಕೆಲಸಗಳನ್ನು ಅನಾಯಾಸವಾಗಿ ಮಾಡಿತೋರಿಸಿದ ಅಘಟಿತ ಘಟನಾ ವಿಶುದ್ಧ ವಿಶೇಷ ಶ್ರೀಗಳ ಭೌತಿಕ ಜೀವನದ ಕೆಲವು ಘಟನೆಗಳನ್ನು ಈ ಕೆಳಗೆ ಅವರ ಚರಿತ್ರೆಯಿಂದಾಯ್ದು ಪ್ರಸ್ತುತಪಡಿಸುತ್ತಿದ್ದೇನೆ [ ಚಿತ್ರಗಳಮೇಲೆ ಕ್ಲಿಕ್ಕಿಸಿ ಮರು ಕ್ಲಿಕ್ಕಿಸಿ ಗಾತ್ರವನ್ನು ಹಿಗ್ಗಿಸಿ ಓದಿಕೊಳ್ಳಿ ]:


ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜರು ಜನಿಸದ ಬಗೆ



ಶಸ್ತ್ರಕ್ರಿಯೆಯಲ್ಲಿ ಜೀವವುಳಿಸಿದ ಮಂತ್ರಾಕ್ಷತೆ


ಭಗವಾನರ ಬಾಲ್ಯದ ಕಷ್ಟಗಳನ್ನು, ಅವರ ಬಾಲಲೀಲೆಗಳನ್ನು ಅರಿತರೆ, ಸನ್ಯಾಸಿಯಾಗುವ ಮುನ್ನ " ಸಾಧು ಠೊಣಪ" ಎಂತೆಲ್ಲಾ ಜರಿವ ಜನರಿಂದ ಅವರು ಅನುಭವಿಸಿದ ಅವಮಾನಕರ ಸನ್ನಿವೇಶಗಳನ್ನು ತಿಳಿದರೆ ಬಹಳ ಖೇದವಾಗುತ್ತದೆ, ಕಣ್ಣೀರು ಬೇಡವೆಂದರೂ ಹರಿಯುತ್ತದೆ. ಹರಿ ತನ್ನ ನರರ ಜೀವನಕ್ಕೆ ಉಪಕರಿಸಲು ನರನಾರಾಯಣ ರೂಪದಲ್ಲಿ ತೊಡಗಿಸಿಕೊಂಡು ತನ್ನನ್ನೇ ತಾನು ದಂಡಿಸಿಕೊಳ್ಳುವುದು ಕೇವಲ ಜನಸಾಮಾನ್ಯನೂ ಕಷ್ಟಗಳನ್ನು ಮೀರಿ ತನ್ನನ್ನು ಕಾಣಲು ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿರುತ್ತದೆ. ಆದಿ ನಾರಾಯಣ ಅಂಶಾಂಶರೂಪದಲ್ಲೂ, ಅಂಶರೂಪದಲ್ಲೂ, ಪೂರ್ಣರೂಪದಲ್ಲೂ ಹಲವು ಅವತಾರವೆತ್ತಿ ಜಗತ್ತಿನ ರಕ್ಷಣೆಗೆ ತೊಡಗುತ್ತಾನೆ. ಶ್ರೀಧರರಲ್ಲಿ ಯಾರೋ ಕೇಳಿದರು " ಸ್ವಾಮೀ ನಿಮಗೆ ಧರ್ಮಭೇದವಿಲ್ಲವೆಂದಮೇಲೆ ಕೇವಲ ಸನಾತನ ಧರ್ಮವನ್ನೇ ಯಾಕೆ ಆಯ್ದುಕೊಳ್ಳುತ್ತೀರಿ ? " ಶ್ರೀಧರರು ಹೇಳಿದರು " ತಮ್ಮಾ, ಜಗತ್ತಿನಲ್ಲಿ ಇರುವ ಎಲ್ಲಾ ಧರ್ಮಗಳನ್ನು ತುಲನೆಮಾಡಿನೋಡು, ಯಾವುದು ಪರಿಪೂರ್ಣ ತತ್ವದಿಂದ ಕೂಡಿ ಮನುಜ ಜೀವನಕ್ಕೆ ತಕ್ಕುದಾಗಿದೆಯೋ ಅದನ್ನೇ ಆಯ್ದುಕೊಳ್ಳುವುದು ವಿಹಿತವಾಗಿ ಕಂಡುದರಿಂದ ನಾನು ಸನಾತನ ಧರ್ಮವನ್ನೇ ಆಯ್ದುಕೊಂಡಿದ್ದೇನೆ " ಕೇವಲ ಒಬ್ಬ ಪ್ರವಾದಿಯೋ ಪ್ರವರ್ತಕನೋ ಸೃಜಿಸಿ ನಡೆಸಿದ ಧರ್ಮವಲ್ಲ ಸನಾತನ ಧರ್ಮ. ಯಾರಿಗೂ ಅನ್ಯಾಯ ಬಯಸದ, ಕೇಡನ್ನು ಬಗೆಯದ, ವಿಶ್ವವೇ ತನ್ನ ಕುಟುಂಬವೆಂಬ ತತ್ವವನ್ನು ಸಾರುವ ಈ ಧರ್ಮದಲ್ಲಿ ಅಳವಡಿಸಲ್ಪಟ್ಟಿರುವ ಸೂತ್ರಗಳನ್ನು ಅವಲೋಕಿಸುವಾಗ ಯಾವುದೇ ಒತ್ತಾಯದಿಂದ ಯಾರೂ ಪ್ರಚುರಪಡಿಸದ ಇದು ಹೇಗೆ ಉಳಿದಿದೆ ಮತ್ತು ನಡೆದಿದೆ ಎಂಬುದೇ ದೈವೀ ಸಂಕಲ್ಪ! ಭಗವಾನ್ ಶ್ರೀಧರರನ್ನು ನೋಡಿದವರು ಸಾಕ್ಷಾತ್ ನಾರಾಯಣನನ್ನು ನೋಡಿದವರೇ ಎಂದರೆ ತಪ್ಪಲ್ಲ. ಶ್ರೀಧರರು ಮತ್ತೆ ಮತ್ತೆ ಅವತರಿಸಲಿ, ದತ್ತನಾಗೋ ದಿಗಂಬರನಾಗೋ ನಮ್ಮ ಜೀವನಕ್ಕೆ ಬೆಳಕನ್ನು ನೀಡಲಿ ಎಂದು ಅವರ ಜನ್ಮದಿನದ ಸಮಯದಲ್ಲಿ ಅವರ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತೇನೆ,

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ |
ಸ್ವಾನಂದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ ||

Thursday, December 16, 2010

ಲಿವಿಂಗ್ ಇನ್ ದಿ ಹೆವನ್-ಭಾಗ ೩ [ಕೊನೆಯ ಭಾಗ]


ಲಿವಿಂಗ್ ಇನ್ ದಿ ಹೆವನ್-ಭಾಗ ೩ [ಕೊನೆಯ ಭಾಗ]
[ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್]
[ಗೀತಾ ಜಯಂತಿಯ ಅಂಗವಾಗಿ ಗೀತಾ ಸಂದೇಶ]

ಹಲವು ದಿನಗಳ ಹಿಂದೆ ಈ ವಿಷಯಕವಾಗಿ ಭಾಗಗಳನ್ನು ಓದಿದ್ದೀರಿ. ಬಹಳ ಕಡೆ ನಾನು ನಮ್ಮ ಗಣಕಯಂತ್ರದ ಸರಳ ಮತ್ತು ಸುಲಭ ಸೂತ್ರವಾದ ’ಪ್ಲಗ್ ಆಂಡ್ ಪ್ಲೇ’ ಶಬ್ದವನ್ನು ಬಳಸುವುದಿದೆ. ಇಹ ಜೀವನದ ಬಹುತೇಕ ಭಾಗಗಳಲ್ಲಿ, ನಮ್ಮ ಕೆಲಸ-ಕಾರ್ಯ ಹಾಗೂ ಫಲಾಫಲಗಳಲ್ಲಿ ಇದು ಅನ್ವಯವಾಗುತ್ತದೆ. ಮಾಹಿತಿತಂತ್ರಜ್ಞಾನದ ಇಂದಿನ ಹಲವು ಉಪಕರಣಗಳು ಇದೇ ತತ್ವವನ್ನು ಅನುಸರಿಸುವುದರಿಂದ ಅವುಗಳ ಉಪಯೋಗ ಬಹಳ ಸುಲಭವಾಗಿದೆ. ಇಫ್ ಯು ವಾಂಟ್ ಟು ಯೂಸ್ ಇಟ್ ಜಸ್ಟ್ ಪ್ಲಗ್ ಇಟ್ ಎಂಬ ರೀತಿ ಇದು ಕೆಲಸಮಾಡುತ್ತದೆ.

ದೈನಂದಿನ ಕೆಲಸಗಳಲ್ಲಿ ನಾವು ಸದಾ ತೊಡಗಿಕೊಂಡಿರುತ್ತೇವೆ. ನಮಗೆ ಬಿಡುವೇ ಇರುವುದಿಲ್ಲ. ವಿಪರ್ಯಾಸವೆಂದರೆ ಜಗತ್ತಿನ ಅತೀ ಉನ್ನತ ಮಟ್ಟದ ವ್ಯಾವಹಾರಿಕ ವ್ಯಕ್ತಿಗೂ ಕೂಡ ಒಂದಷ್ಟು ಕಾಲ ಸಮಯವಿರುತ್ತದೆ. ಆತ ತಾನೆಷ್ಟೇ ಕೆಲಸನಿರತ ಎಂದುಕೊಂಡರೂ ದಿನದ ಕೆಲವು ಭಾಗಗಳನ್ನು ಬೇಡದ ಹವ್ಯಾಸಗಳಲ್ಲೋ ಚಟಗಳಲ್ಲೋ ಕಳೆಯುತ್ತಾನೆ. ಆ ಸಮಯವನ್ನು ಸದುಪಯೋಗ ಪಡೆದುಕೊಂಡರೆ ಆತನ ಸ್ವಂತದ ಏಳ್ಗೆಯೂ ಜೊತೆಗೆ ಆತನನ್ನು ಅವಲಂಬಿಸಿದವರ ಹಾಗೂ ಸುತ್ತಲ ಜಗತ್ತಿನ ಏಳ್ಗೆಯೂ ಸಾಧ್ಯವಾಗುತ್ತಿತ್ತು. ಆದರೆ ಅದನ್ನು ಆತ ಪರಿಗಣಿಸುವುದಿಲ್ಲ. ಆತನಿಗೆ ಏನಿಲ್ಲವೆಂದರೂ ಸಹಜವಾದ ಅಹಂಕಾರ ಉದ್ಭವವಾಗಿರುತ್ತದೆ. ಜಗತ್ತೆಲ್ಲಾ ತನ್ನನ್ನು ಕೊಂಡಾಡಬೇಕು, ತಾನು ಬಹುಪ್ರಸಿದ್ಧನಾಗಿ ಬೇಕಾದದ್ದಕ್ಕಿಂತಾ ಹೆಚ್ಚಿನ ಹಣವನ್ನು ಗಳಿಸಿ ಸುಖವಾಗಿ ಕಾಲಕಳೆಯಬೇಕೆಂಬುದು ಪ್ರತಿಯೊಬ್ಬರಲ್ಲೂ ಹುಟ್ಟಬಹುದಾದ ಆಸೆ.

ಅಶನಕ್ಕಾದರೆ ವಶನಕ್ಕೆ ನಂತರ ನಿದ್ರೆಗೆ ಆನಂತರ ಮೈಥುನಕ್ಕೆ ಆನಂತರ ಕೂಡಿಡುವ ಕಾರ್ಯಕ್ಕೆ ಹೀಗೇ ಆಹಾರ,ಬಟ್ಟೆ, ವಸತಿ,ನಿದ್ರೆ,ಮೈಥುನ,ಹಣಗಳಿಕೆ-ಕೂಡುವಿಕೆ ಇವುಗಳಲ್ಲೇ ಪ್ರತಿಯೊಬ್ಬರೂ ಆಸಕ್ತರಾಗಿರುತ್ತೇವೆ. ಮತ್ತೊಬ್ಬನಲ್ಲಿ ಬಿ.ಎಮ್.ಡಬ್ಲ್ಯೂ ಕಾರಿದೆ ಎಂದಾದತಕ್ಷಣ ತನ್ನಲ್ಲೂ ಒಂದಲ್ಲ ಎರಡೆರಡು ಇರಲಿ ಎಂಬ ಬಯಕೆ. ತನ್ನ ಬಂಗಲೆ ಅತೀ ಎತ್ತರವಾಗಿಯೂ ಅತೀ ಸುಂದರವಾಗಿಯೂ ಅತ್ಯಂತ ಆಧುನಿಕ ವ್ಯವಸ್ಥೆಗಳಿಂದ ಕೂಡಿದ್ದೂ ಆಗಿರಲಿ ಎಂಬ ವಾಂಛೆ. ಇದರ ಹೊರಗಿನ ಅರಿವು ನಮಗಿರುವುದೇ ಇಲ್ಲ ! ನಿಜವಾಗಿಯೂ ನಮ್ಮೊಳಗೇನಿದೆ? ಒಳಗೆ ಆತ್ಮ ಎಂಬ ಅದ್ಭುತ ಚೇತನವಿದ್ದರೆ ಅದು ಯಾವರೂಪದಲ್ಲಿರುತ್ತದೆ ? ಇವತ್ತು ವೈಜ್ಞಾನಿಕ ಬೆಳವಣಿಗೆಯಿಂದ ಹೊಸ ಹೊಸ ಯಂತ್ರಗಳನ್ನು ಕಂಡುಕೊಂಡು ಹೃದಯವನ್ನೇ ಬದಲಿಸುವ ಅಥವಾ ಇನ್ನು ಕೆಲವೇ ದಿನಗಳಲ್ಲಿ ಮೆದುಳನ್ನೇ ಬದಲಿಸುವ ಹಂತಕ್ಕೆ ನಾವು ಮುನ್ನುಗ್ಗಿದ್ದೇವೆ, ಆದರೂ ರೋಗಿಯ ಅಳಿವು ಉಳಿವಿನ ಪ್ರಶ್ನೆ ನಮ್ಮ ಕೈಲಿರುವುದಿಲ್ಲ ! ಹಾಗಾದರೆ ಅಲ್ಲೆಲ್ಲೂ ಕಾಣದ ಆ ಸುಪ್ತ ಚೇತನ ಎಲ್ಲಿ ಕುಳಿತಿದೆ? ನಾವಂತೂ ಅದರಬಗ್ಗೆ ಒಂದೇ ಒಂದು ಕ್ಷಣವೂ ಚಿಂತಿಸುವುದಿಲ್ಲ.

ಆಧುನಿಕ ವೈದ್ಯರು ಹೇಳುತ್ತಾರೆ ಶರೀರದಲ್ಲಿ ಕೊಲೆಸ್ಟರಾಲ್ ಜಾಸ್ತಿ ಇದ್ದರೆ ಹೃದಯಸ್ತಂಭನಕ್ಕೆ ಅದೇ ಕಾರಣವಾಗುತ್ತದೆ ಎಂದು. ಗುಲ್ವಾಡಿಯವರು ಹೃದಯಸ್ತಂಭನದಿಂದಲೇ ತಮ್ಮ ಯಾತ್ರೆಮುಗಿಸಿದರೆಂದು ನಾವು ತಿಳಿದಿದ್ದೇವೆ. ಪ್ರಾಯಶಃ ಅವರ ಆ ಸಣಕಲು ದೇಹದಲ್ಲಿ ಹಿಂಡಿತೆಗೆದರೂ ಕೊಲೆಸ್ಟರಾಲ್ ಸಿಗುತ್ತಿರಲಿಲ್ಲ! ಹಾಗಾದರೆ ಅವರಿಗೆ ೪೫-೫೦ ವರ್ಷಗಳಿಂದ ಹೃದಯ ಸಂಬಂಧೀ ತೊಂದರೆ ಅದು ಹೇಗೆ ಬಂದಿತ್ತು? ಮಾಧ್ಯಮಗಳಲ್ಲಿ ನಾವು ಎಂತೆಂತಹಾ ದಢೂತಿಗಳನ್ನು ನೋಡುತ್ತೇವೆ ಆದರೆ ಅವರಲ್ಲಿ ಅನೇಕರಿಗೆ ಹೃದಯದ ತೊಂದರೆಯೇ ಬರುವುದಿಲ್ಲ ಯಾಕೆ ? ಕಾರಣ ನಮಗೆ, ನಮ್ಮ ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ ! ನನ್ನ ಹತ್ತಿರದ ಸಂಬಂಧಿಯೋರ್ವರಿಗೆ ಮೂತ್ರನಾಳಕ್ಕೆ ಸಂಬಂಧಿಸಿದಂತೇ ತೊಂದರೆ ಕಾಣಿಸಿತು. ಅಮೇರಿಕಾದಲ್ಲಿ ತರಬೇತಿ ಪಡೆದು ಈಗ ಭಾರತದಲ್ಲಿ ಕೆಲಸಮಾಡುತ್ತಿರುವ ತಜ್ಞವೈದ್ಯರೊಬ್ಬರು ಎಲ್ಲಾ ರೀತಿಯ ಪ್ರಯೋಗಪರಿಶೀಲನೆ ನಡೆಸಿ ೨ ಸರ್ತಿ ಗುರುತರ ಶಸ್ತ್ರಚಿಕಿತ್ಸೆ ನಡೆಸಿದರು. ಆದಾಗ್ಯೂ ಕೆಲವೇ ತಿಂಗಳಲ್ಲಿ ಅವರ ಆ ತೊಂದರೆ ಮತ್ತೆ ಹಾಗೇಇರುವುದು ಕಾಣಿಸಿತು. ಆದಾದಮೇಲೆ ನಮ್ಮ ನಿಪುಣ ಆಯುರ್ವೇದ ವೈದ್ಯರನ್ನು ಕಾಣಿರೆಂದು ನಾನೊಂದು ಪುಗಸಟ್ಟೆ ಸಲಹೆಕೊಟ್ಟೆ! ಆದರೆ ಅದರಂತೇ ಅವರು ನಡೆದುಕೊಂಡು ಆ ತೊಂದರೆಯಿಂದ ಈಗ ಗುಣಮುಖರಾಗಿದ್ದಾರೆ ಎಂದರೆ ನಿಮಗೆಲ್ಲಾ ಆಶ್ಚರ್ಯವಾಗಬಹುದಲ್ಲವೇ ? ಇದು ನಡೆದ ನೈಜ ಕಥೆ ಎಂದರೆ ನೀವು ನಂಬಬಹುದೇ ? ನಂಬದಿದ್ದರೂ ಅದು ಸುಳ್ಳಾಗದಲ್ಲಾ !

ಹಲವೊಮ್ಮೆ ನಮ್ಮ ದಿನದ ವ್ಯವಹಾರಗಳಲ್ಲಿ ಬೇಡದ್ದನ್ನೆಲ್ಲಾ ತಂದು ಗುಪ್ಪೆ ಹಾಕಿಕೊಂಡು ಎಲ್ಲವೂ ನಮ್ಮ ಸಮಸ್ಯೆಗಳೇ ಎಂದು ತಿಳಿಯುತ್ತೇವಲ್ಲಾ ಇದಕ್ಕಿಂತ ದೊಡ್ಡ ತಪ್ಪು ಬೇಕೆ? ದಿನವಿಡೀ ಪರರ ಬಗ್ಗೆ ಚಿಂತಿಸುವುದು, ಅವರಿಗೆ ಕೇಡು ಬಯಸುವುದು, ಅವರ ಕಾಲೆಳೆಯಲು ಪ್ರಯತ್ನಿಸುವುದು, ಅವರ ಬೆಳವಣಿಗೆ ಕಂಡು ಕರುಬುವುದು ಇದರಲ್ಲೆಲ್ಲಾ ನಮ್ಮ ಸಮಸ್ಯೆಗಳು ಅಡಗಿವೆ ಅಲ್ಲವೇ ? ಬುದ್ಧ ಸಾರಿದಂತೇ 'ಆಸೆಯೇ ದುಃಖಕ್ಕೆ ಮೂಲ ' ಎನ್ನುವುದು ಎಷ್ಟು ಸಮಂಜಸ ನೋಡಿ. ಇಲ್ಲದ ಆಸೆಗಳಿಗೆ, ಬಯಕೆಗಳಿಗೆ ದಾಸರಾಗಿ, ಸಾಮಾಜಿಕ ವ್ಯವಸ್ಥೆಯಿಂದ ಛೇಡಿಸಲ್ಪಟ್ಟೋ ಹತ್ತಿಕ್ಕಲ್ಪಟ್ಟೋ ನಿಶ್ಚೇಷ್ಟಿತರಾಗಿ ಮರಳಿದರೂ ಮತ್ತೂ ಮತ್ತೂ ಅನಾಯಾಸವಾಗಿ ಪಡೆಯಲಾಗದ್ದನ್ನೇ ಬಯಸುವ ನಮಗೆ ಅವುಗಳಿಂದಲೇ ಸಮಸ್ಯೆಗಳ ಆರಂಭವೆಂದರೆ ತಪ್ಪೇನಿದೆ ? ಆಸೆಪಟ್ಟಿದ್ದು ಸಿಗದಾಗ ಮನಸ್ಸು ಕ್ರುದ್ಧವಾಗಿ ಬೇರೇನನ್ನೋ ಚಿಂತಿಸುತ್ತದೆ, ಅಲ್ಲೂ ಅದನ್ನು ಪಡೆಯದಾದಾಗ ಸುತ್ತಲ ಸಮಾಜದವರ ಮೇಲೆ ಕೋಪಬರುತ್ತದೆ. ಆ ಕೋಪ ತೀರಿಸಿಕೊಳ್ಳುವ ಭರದಲ್ಲಿ ಪರಿತಾಪವುಂಟಾಗುತ್ತದೆ. ಜಗಳಗಳು-ದೊಂಬಿಗಳು ನಡೆಯುತ್ತವೆ. ಈರ್ಷ್ಯೆಯುಂಟಾಗುತ್ತದೆ. ಕ್ಷಣಕ್ಷಣಕ್ಕೂ ಮನಸ್ಸು ಉದ್ವೇಗಕ್ಕೊಳಗಾಗುತ್ತದೆ. ಮನಸ್ಸಿನ ಉದ್ವೇಗ ನಮ್ಮ ಅಂಗಾಂಗಗಳಮೇಲೆ ಪರಿಣಾಮ ಬೀರುತ್ತದೆ. ಸಹಜ ಸ್ಥಿತಿಯಲ್ಲಿ ನಡೆಯಬೇಕಾದ ದೇಹಯಂತ್ರ ತನ್ನ ಮೂಲಸ್ಥಿತಿಯನ್ನು ಕಳೆದುಕೊಳ್ಳತೊಡಗುತ್ತದೆ. ಆಗ ಇಲ್ಲದ ಕಾಯಿಲೆಗಳು ಅಡರಿಕೊಳ್ಳುತ್ತವೆ."ವಂಶದಲ್ಲೇ ಇಲ್ಲದ ಕಾಯಿಲೆ ಅದು ಹೇಗೆ ಬಂತಪ್ಪಾ " ಎಂದು ಮತ್ತೆ ಕಳವಳಕ್ಕೀಡಾಗುತ್ತೇವೆ. ಹಲವು ಮಾರ್ಗದಲ್ಲಿ ಪರಿಹಾರಗಳನ್ನು ಹುಡುಕುತ್ತೇವೆ. ವೈದ್ಯರು, ಜ್ಯೋತಿಷ್ಕರು, ಧರ್ಮಗುರುಗಳು, ಪವಾಡ ಪುರುಷರು, ಪ್ರಾರ್ಥನಾ ಮಂದಿರಗಳು, ಪುನರ್ಜನ್ಮವನ್ನು ತಿದ್ದುತ್ತೇವೆನ್ನುವ ಮೂರ್ಖರು, ಪೂಜೆ-ಪುನಸ್ಕಾರಗಳು ಇನ್ನೂ ಹಲವು ದಾರಿಗಳಲ್ಲಿ ಪರಿಹಾರಗಳನ್ನು ಕಾಣಲು ಪ್ರಯತ್ನಿಸುತ್ತೇವೆ. ಆದರೆ ನಮ್ಮೊಳಗೇ ಕೂತಿರುವ ವೈದ್ಯ ಮಹಾಶಯ ಇದನ್ನೆಲ್ಲಾ ನೋಡಿ ನಗುವುದನ್ನು ಮರೆತುಬಿಡುತ್ತೇವೆ !

ಇವತ್ತಿನ ದಿನಮಾನದಲ್ಲಿ ಅನೇಕರು ಹೇಳುವುದು ತಾವು ಸಾಧಿಸಿದ್ದೇವೆ, ಬಂಗಲೆ ಕಟ್ಟಿದ್ದೇವೆ, ಕಾರುಕೊಂಡಿದ್ದೇವೆ, ಬ್ಯಾಂಕಿನಲ್ಲಿ ಹಣ ಇಟ್ಟಿದ್ದೇವೆ, ಮನೆಯಲ್ಲಿ ಯಂತ್ರಚಾಲಿತ ಕೆಲಸ ನಿರ್ವಹಣೆಯಾಗುವಂತೇ ನೋಡಿಕೊಂಡಿದ್ದೇವೆ. ಹೀಗಾಗಿ ನಮಗೆ ಯಾವುದೇ ಕೊರತೆಯೂ ಇಲ್ಲ. ಬರಿದೇ ಪರಾಶಕ್ತಿ ಇದೆಯೆಂದು ಬೊಗಳೆಬಿಡುತ್ತಾ ಹೋಮ, ಹವನ, ಪೂಜೆ-ಪುನಸ್ಕಾರೈವುಗಳಲ್ಲಿ ಕಾಲಕಳೆಯುವವರಿಗೆ ತಾವು ಹೇಳುವುದು --ಜಗತ್ತು ಸೃಷ್ಟಿಯ ಸಹಜ ನಿಯಮ, ನಮ್ಮ ಪ್ರಯತ್ನದಲ್ಲೇ ಎಲ್ಲವೂ ಅಡಗಿದೆ, ಅದರಿಂದಲೇ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ದೇವರು ಎಂಬುದೆಲ್ಲಾ ಸುಳ್ಳು, ಏನಿದ್ದರೂ ಅದೆಲ್ಲಾ ಕಟ್ಟುಕಥೆ. ಅದೇ ಜನರ ಮಕ್ಕಳನ್ನು ಯಾರೋ ಅಪಹರಿಸಿದರೆ ಅಥವಾ ಮುಂದಿನ ಅವರ ವ್ಯವಹಾರಗಳಲ್ಲಿ ಪ್ರಗತಿ ಕುಂಠಿತವಾಗಿ ಬಯಸಿದ ಫಲಗಳು ಸಿಗದೇ ಹೋದರೆ, ಮನೆಯಲ್ಲಿ ಅನುವಂಶಿಕವಾಗಿಯೋ ಕರ್ಮಬಂಧನದಿಂದಲೋ ಅನಿರೀಕ್ಷಿತವಾಗಿ ಯಾರಿಗೋ ಕಾಯಿಲೆ ಕಾಣಿಸಿಕೊಂಡರೆ ಆಗ ಅವರಲ್ಲೂ ತಮಗಿಂತಾ ಹಿರಿದಾದ ಶಕ್ತಿ ಒಂದಿದೆ ಎಂಬ ಅಭಿಪ್ರಾಯ ಮೂಡಲು ಆರಂಭವಾಗುತ್ತದೆ. ಆದರೂ ಅವರಿಗಿರುವ ಅಹಂಕಾರ ತಕ್ಷಣಕ್ಕೆ ದೇವರನ್ನು ಬಾಹ್ಯವಾಗಿ ಎಲ್ಲರೆದುರು ಒಪ್ಪಲು ಅವಕಾಶಕೊಡುವುದಿಲ್ಲ. ಎಲ್ಲಿಯವರೆಗೆ ಅವರು ಪರಾಶಕ್ತಿಯನ್ನು ಸಮಾಜದಲ್ಲಿ ಒಪ್ಪುವುದಿಲ್ಲವೋ ಅಲ್ಲೀವರೆಗೆ ಅವರಿಗೆ ಯಾವ ದೈವೀಕೃಪೆಯೂ ಸಿಗುವುದಿಲ್ಲ.

ಗಾಂಡೀವಿಯೂ ಎನಿಸಿದ ಸವ್ಯಸಾಚಿ ಮಹಾಪರಾಕ್ರಮಿ ಅರ್ಜುನ ತನ್ನಮಗ ಬಭ್ರುವಾಹನನಿಂದಲೇ ಸೋತು ಸಾವನ್ನಪ್ಪುವಾಗ ಬಾವ ಭಗವಾನ್ ಕೃಷ್ಣ ಬೇಗನೇ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಅರ್ಜುನನ ಅಂಹಕಾರದ ಅರಿವು ಆತನಿಗೆ ತಿಳಿದುಬರಲಿ ಎಂಬ ಉದ್ದೇಶ ಕೃಷ್ಣನದಾಗಿತ್ತು. ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವಾಗ ಧೀರ ಶೂರ ಪಂಚಪಾಂಡವರು ನಿಸ್ಸಹಾಯಕರಾಗಿ ತಲೆತಗ್ಗಿಸಿ ನಿಂತಿದ್ದರು. ದ್ರೌಪದಿ ಒಂದು ಕೈಯ್ಯಲ್ಲಿ ದೇಹವನ್ನು ಮುಚ್ಚಿ ಇನ್ನೊಂದು ಕೈಯ್ಯೆತ್ತಿ " ಅಣ್ಣಾ ಕೃಷ್ಣಾ "ಎಂದು ಗೋಗರೆದರೂ ಕೃಷ್ಣ ಬರಲಿಲ್ಲ, ಯಾವಾಗ ಆಕೆ ಎರಡೂ ಕೈಯ್ಯನ್ನು ಎತ್ತಿ ತನ್ನ ಮಾನಾಪಮಾನ ನಿನಗೇ ಬಿಟ್ಟಿದ್ದು ಎಂದು ಘೋಷಿಸಿದಳೋ ಆಗ ಕಾಣದ ಕೈ ಅವಳ ಸೀರೆಯನ್ನು ಅಕ್ಷಯಾಂಬರವನ್ನಾಗಿ ಮಾರ್ಪಡಿಸಿತು. ಸೆಳೆಯುತ್ತ ಸೆಳೆಯುತ್ತ ದುಷ್ಟ ದುಶ್ಶಾಸನ ತಾನೇ ಸೋತ ! ಧರ್ಮವನ್ನೇ ಸದಾ ಪರಿಪಾಲನೆ ಮಾಡುವೆನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯುಧಿಷ್ಠಿರನ ರಥ ನೆಲಕ್ಕೆ ಕುಪ್ಪಳಿಸಿ ಬಿದ್ದಿತು-ಕೃಷ್ಣನನ್ನೇ ಸಂಶಯಿಸಿ ’ ಅಶ್ವತ್ಥಾಮ ಎಂಬ ಆನೆ ಸತ್ತಿದ್ದನ್ನು ನೋಡದೇ ಘೋಷಿಸಲಾರೆ’ ಎಂಬ ಆತನ ಧೋರಣೆ ಅದಕ್ಕೆ ಕಾರಣವಾಗಿತ್ತು !

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಜಗತ್ತಿನ ಪ್ರತಿಯೊಂದೂ ಆಗುಹೋಗುವಿಕೆ ಪರಾಶಕ್ತಿಯ ಸಂಕಲ್ಪದಂತೇ ನಡೆಯುತ್ತದೆ. ನಾವೇನು ಮಾಡುತ್ತಿದ್ದೇವೋ ಅದನ್ನು ಮಾಡಿಸುತ್ತಿರುವುದು ಅದೇ ಆ ಶಕ್ತಿ. ನಾವು ಮಾಡುತ್ತಿರುವ ಕೆಲಸಗಳಿಗೂ, ಫಲಾಫಲಗಳಿಗೂ ನಮ್ಮ ಜನ್ಮಾಂತರಗಳ ಕರ್ಮಬಂಧನದ ಆವಿಷ್ಕಾರ ಅಳವಡಿಸಲ್ಪಟ್ಟಿರುತ್ತದೆ. ಯಾವಾತ ಎಲ್ಲಿ ಹುಟ್ಟಿ ಏನು ಮಾಡಿ ಯಾವಾಗ ಮರಣಿಸಬೇಕು ಎಂದೆಲ್ಲಾ ಪೂರ್ವನಿಗದಿತ ವಿಷಯಗಳು. ಬೂದಿಮುಚ್ಚಿದ ಕೆಂಡದಂತೇ ಹೊಗೆಯೊಳಗಿನ ಜ್ವಾಲೆಯಂತೇ ನಮ್ಮ ಮನಸ್ಸು ಇಹದ ಮಾಯೆಯ ಮುಸುಕಿನಲ್ಲಿ ಅಡಗಿರುತ್ತದೆ. ಆ ಮಾಯೆಯ ಮುಸುಕನ್ನು ಸ್ವಲ್ಪ ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದರೆ ಅದು ನಮ್ಮರಿವಿಗೆ ನಾವಿಡುವ ಮೊದಲ ಹೆಜ್ಜೆಯಾಗುತ್ತದೆ. ಉತ್ಸದ್ಧೀ ಮುದುಕನೊಬ್ಬನೂ ತನ್ನ ಸ್ವಾನುಭವದಿಂದ ಸಾಧ್ಯವಾಗಿಸಲಾಗದ ಅನೇಕ ಕೆಲಸಗಳನ್ನು ಎಳೆಯ ಬಾಲಕನೊಬ್ಬ ಸಲೀಸಾಗಿ ಮಾಡಿರುವ ದಾಖಲೆಗಳಿವೆ. ಅಗಣಿತ ತಪಸ್ಸನ್ನಾಚರಿಸಿಯೂ ಏನನ್ನೂ ಸಾಧಿಸಲಾಗದ ವ್ಯಕ್ತಿಗಳು ಆಗಿಹೋಗಿದ್ದಾರೆ. ಡಾಂಭಿಕ ಆಚರಣೆಯನ್ನು ತೊರೆದು ವಿಶುದ್ಧಮನಸ್ಸಿನಿಂದ ನಾವು ಮಾಡುವ ಧ್ಯಾನ ನಮ್ಮ ಉಪಕಾರಕ್ಕೆ ಬರುತ್ತದೆ. ಹೀಗಾಗಿ ಯಾರ್ಯಾರು ಏನೇನು ಆಗಬೇಕೋ ಏನೇನು ನಡೆಯಬೇಕೋ ಅದೆಲ್ಲಾ ನಡೆಯುವುದು ವಿಧಿಯೆಂಬ ಆ ಪರಾಶಕ್ತಿಯ ಇಚ್ಛೆ. ಕೆಲವೊಮ್ಮೆ ಮನಸ್ಸಿಗೆ ಹಿತ ಇನ್ನೊಮ್ಮೆ ಅಹಿತ, ಕೆಲವೊಮ್ಮೆ ಸುಖ ಇನ್ನೊಮ್ಮೆ ದುಃಖ, ಕೆಲವೊಮ್ಮೆ ಬಹುಮಾನ ಹಲವೊಮ್ಮೆ ಅವಮಾನ ಇವೆಲ್ಲಾ ಸಹಜವಾಗಿ ನಮ್ಮ ಜೀವನದ ದಾರಿಯ ಏರುತಗ್ಗುಗಳು. ಈ ಎಲ್ಲಾ ಏರುತಗ್ಗುಗಳನ್ನೂ ಸಮಭಾವದಿಂದ ಸ್ವೀಕರಿಸದರೆ ಮಾತ್ರ ನಾವು ಪ್ಲಗ್ ಆಂಡ್ ಅನ್ ಪ್ಲಗ್ ಆಗುತ್ತೇವೆ.

ಎಲ್ಲವೂ ಬೇಕು ಆದರೆ ಯಾವುದೂ ಬೇಡ ! ದಾಸರು ಹೇಳಿದರು--’ಈಸಬೇಕು ಇದ್ದೂ ಜಯಿಸಬೇಕು’. ಅವರ ಅನುಭವ ಎಷ್ಟು ಸತ್ಯವಾಗಿದೆಯಲ್ಲವೇ ? ಕಮದ ಎಲೆ ಅಥವಾ ಕೆಸವೆಯ ಎಲೆ ನೀರಲ್ಲಿ ಹಾಕಿದರೂ ನೀರನ್ನು ಹೀರಿಕೊಂಡು ಒದ್ದೆಯಾಗುವುದಿಲ್ಲವೋ ಹಾಗೇ ಜಗತ್ತಿನ ವ್ಯವಹಾರಗಳಲ್ಲಿ ನಾವಿರಬೇಕು, ಆದರೆ ಅದರಲ್ಲೇ ಮುಳುಗಿ ನಮ್ಮತನವನ್ನು ಕಳೆದುಕೊಳ್ಳಬಾರದು. ನಿಜ-ಮಾನವ ಸಹಜವಾಗಿ ಗಂಡ, ಹೆಂಡತಿ, ಮಕ್ಕಳು, ಅಪ್ಪ-ಅಮ್ಮ, ಬಂಧುಗಳು ಇವೆಲ್ಲವೂ ಮೋಹದ ಸಂಬಂಧಗಳೇ ಆದರೆ ಮೋಹ ನಮ್ಮ ಹಿಡಿತದಲ್ಲಿರಬೇಕು. ಬರೇ ಮೋಹವಲ್ಲ ಪಂಚೇಂದ್ರಿಯಗಳೂ ನಮ್ಮ ಹಿಡಿತದಲ್ಲಿರಬೇಕು. ಅಪಾಯದ ಸೂಚನೆ ಕಂಡಾಗ ಆಮೆಯೊಂದು ತನ್ನ ನಾಲ್ಕು ಕಾಲುಗಳು ಮತ್ತು ತಲೆಯನ್ನು ಹೇಗೆ ಕವಚದೊಳಗೆ ಎಳೆದು ಸೇರಿಸಿಕೊಳ್ಳುತ್ತದೋ ಹಾಗೇ ಈ ಇಂದ್ರಿಯಗಳನ್ನು ನಾವು ಹಿತಮಿತವಾಗಿ ಬಳಸಬೇಕು. ಅತಿಯಾದಾಗ ಅದೇ ನಮಗೆ ಮಾರಕವಾಗುತ್ತದೆ! ಇಂದ್ರಿಯಗಳ ಮೂಲಕ ಕರ್ಮಗಳನ್ನು ಮಾಡುತ್ತೇವೆ. ಪ್ರತಿಯೊಂದೂ ಕರ್ಮಗಳಲ್ಲಿ ಲೋಪದೋಷಗಳು ಇದ್ದೇ ಇರುತ್ತವೆ. ಆ ದೋಷಗಳು ನಮ್ಮೊಳಗಿನ ಜೀವಾತ್ಮನಿಗೆ ಅಂಟಿಕೊಂಡು ಬರುತ್ತವೆ. ಹೇಗೆ ಮೊಬೈಲ್ ನ ಸಿಮ್ಮು ತೆಗೆದು ಬೇರೆ ಹ್ಯಾಂಡ್ ಸೆಟ್ ಗೆ ಹಾಕಿದಾಗ ಅದರಲ್ಲಿರುವ ಮಾಹಿತಿಗಳಲ್ಲಿ ಅನೇಕವು ಜೊತೆಗೇ ಇರುತ್ತವೋ ಅದೇ ರೀತಿಯಲ್ಲಿ ಜನ್ಮದಿಂದ ಜನ್ಮಕ್ಕೆ ಸಾಗುವಾಗ ಇಹದ ನಮ್ಮ ಕರ್ಮಫಲಗಳು ಜೀವಾತ್ಮನ ಜೊತೆಗೇ ಸಾಗುತ್ತವೆ. ಮನಸ್ಸೆಂಬುದು ಜೀವಾತ್ಮನ ಒಂದು ಭಾಗವಾದುದರಿಂದಲೂ ನಮ್ಮ ಕರ್ಮಗಳ ಲೆಕ್ಕವನ್ನು ಒಳಗೆ ಕುಳಿತ ಪರಮಾತ್ಮನೇ ಇಟ್ಟುಕೊಳ್ಳುವುದರಿಂದಲೂ ಇಲ್ಲಿಮಾತ್ರ ಯಾರೂ ಮೋಸಮಾಡಲಾಗುವುದಿಲ್ಲ!

ಕರ್ಮಫಲಗಳಿಗನುಗುಣವಾಗಿ ಜನ್ಮವೆತ್ತುವ ನಾವು ಸಿರಿತನವೋ ಬಡತನವೋ ಅದನ್ನು ಅನುಭವಿಸಲೇ ಬೇಕಾಗಿಬರುವುದು ಪ್ರಕೃತಿಸಹಜಧರ್ಮ. ಈ ನಿಟ್ಟಿನಲ್ಲಿ ಪ್ರಾರ್ಥಿಸಿದಾಗ ಪರಮಾತ್ಮ ಪ್ರತ್ಯಕ್ಷನಾಗುವುದಿಲ್ಲ. ಪರೋಕ್ಷ ಆತನ ಸಹಾಯ ನಮ್ಮ ಮೆದುಳಿಗೆ ಒದಗಿಬರುತ್ತದೆ! ನಮ್ಮ ಬುದ್ಧಿಗೆ ಹೊಳಪು ಬರುತ್ತದೆ. ಮೊಂಡುಬುದ್ಧಿ ತೀಕ್ಷ್ಣವಾಗುತ್ತದೆ. ಉದ್ಭವಿಸುವ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವ ದಾರಿಕಾಣಿಸುತ್ತ ಹೋಗುತ್ತದೆ.ಒಳ್ಳೆಯ ಬುದ್ಧಿಯನ್ನು ಪಡೆಯುವಾಗ ಬುದ್ಧಿಗೆ ಪರಾಶಕ್ತಿಯ ಪ್ರಚೋದನೆ ಬೇಕಾಗುತ್ತದೆ. ಉತ್ತಮ ಪ್ರಚೋದನೆಗಳನ್ನು ಪಡೆಯಲು ನಾವು ನಮ್ಮನ್ನು ಸಂಸ್ಕರಿಸಿಕೊಳ್ಳಬೇಕಾಗುತ್ತದೆ. ಕಸಸಹಿತ ಇರುವ ಹಾಲನ್ನೋ ನೀರನ್ನೋ ಜಾಳಿಗೆಯಲ್ಲಿ ಸೋಸಿ ಬೇರ್ಪಡಿಸುವ ಹಾಗೇ ನಮ್ಮ ಮನಸ್ಸಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕಾಗುತ್ತದೆ. ಉತ್ತಮರ ಸಂಘದಿಂದ, ಜ್ಞಾನಿಗಳ ಸಹವಾಸದಿಂದ, ಪುಣ್ಯಪುರುಷರ ಸೇವೆಯಿಂದ-ಅನುಸರಣೆಯಿಂದ, ಯಾರಿಗೋ ಕೇಡನ್ನು ಬಯಸದೇ ಇರುವ ಸ್ವಭಾವದಿಂದ, ಅಹಿಂಸಾತ್ಮಕವಾಗಿ ಶುಚಿಯಾಗಿ ತಯಾರಿಸಿದ ಅತಿಯಾದ ಉಪ್ಪು-ಹುಳಿ-ಖಾರ-ಕಹಿ-ಬಿಸಿ ಇರದ ಸಾತ್ವಿಕ ಆಹಾರದಿಂದ, ಕಷ್ಟಾರ್ಜಿದಲ್ಲಿ ಕೆಲಭಾಗವನ್ನು ಹೆಗ್ಗಳಿಕೆಯಿಲ್ಲದೇ ದಾನಮಾಡುವ ಪ್ರಕ್ರಿಯೆಯಿಂದ, ಎಲ್ಲಾ ಪ್ರಾಣಿಗಳಲ್ಲಿ ಸಹಾನುಭೂತಿ-ಅನುಕಂಪವನ್ನು ಇರಿಸಿಕೊಳ್ಳುವುದರಿಂದ, ಅಣುರೇಣುತೃಣಕಾಷ್ಠಗಳಲ್ಲೂ ಪರಮಾತ್ಮನ ಸಾನ್ನಿಧ್ಯವಿದೆ ಎಂಬ ತಿಳುವಳಿಕೆಯಿಂದ ನಾವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದನ್ನು ವಿವೇಚಿಸಿ ನಡೆದರೆ ಆಗ ಬುದ್ಧಿಗೆ ಒಳ್ಳೆಯ ಪ್ರಚೋದನೆಯಾಗುತ್ತದೆ.

ಇಂತಹ ಪ್ರಚೋದನೆಯನ್ನು ಪಡೆಯಲು ದಿನಕ್ಕೆ ಒಂದಾವರ್ತಿಯಾದರೂ ನಿರ್ವಿಷಯ ಧ್ಯಾನಮಾಡುವುದನ್ನು ನಿಜವಾದ ಸನ್ಯಾಸಿ/ಯೋಗಿಯ ಮೂಲಕ ಕಲಿತು ಅನುಸರಿಸಿದರೆ ಆಗ ನಮ್ಮೊಳಗಿನ ಮೊಬೈಲ್ ಚಾರ್ಜ್ ಆಗುತ್ತದೆ. ಮೊಬೈಲ್ ಹೊಸದಿದ್ದಾಗ ಕಡಿಮೆ ಹೊತ್ತು ಚಾರ್ಜಿಗೆ ಹಾಕಿದರೂ ಸರಿ ಅದು ತುಂಬಾ ಹೊತ್ತು ನಮ್ಮ ಬಳಕೆಗೆ ಸಿಗುತ್ತದೆ; ವರುಷಗಳ ನಂತರ ಮೊಬೈಲ್ ಚಾರ್ಜ್ ಬೇಗ ಮುಗಿದುಹೋಗುತ್ತದೆ. ಬ್ಯಾಟರಿ ಬದಲಾಯಿಸಿದರೂ ಮತ್ತೇನೋ ಪ್ರಾಬ್ಲಮ್ಮು ಇರುತ್ತದೆ! ಹೀಗೆಯೇ ಮನುಷ್ಯ ಚಿಕ್ಕವನಿದ್ದಾಗ ಆತನಿಗೆ ಸಮಸ್ಯೆಗಳು ಜಾಸ್ತಿ ಎಡತಾಕುವುದಿಲ್ಲ. [ಎಲ್ಲೋ ಅಪವಾದಗಳಿರಬಹುದು] ಆದರೆ ಮನುಷ್ಯ ಬೆಳೆದಂತೇ ಹಲವು ಸಮಸ್ಯೆಗಳನ್ನು ಸಂದಿಗ್ಧಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂತಹ ಸಮಸ್ಯೆ-ಸಂದಿಗ್ಧಗಳು ಬರುವುದು ನಮ್ಮ ಜನ್ಮಾಂತರ ಕರ್ಮಫಲಗಳಿಂದ. ಹಾಗೆ ಬಾರದಂತೇ ಅಥವಾ ಬಂದರೂ ನಿಭಾಯಿಸಲು ಮಾರ್ಗಸಿಗುವಂತೇ ಮಾರ್ಗದರ್ಶನ ನೀಡುವ ತಾಕತ್ತಿರುವುದು ನಮ್ಮೊಳಗಿನ ಬುದ್ಧಿಗೆಮಾತ್ರ. ಯಾವ ವಿಟಾಮಿನ್ ಗಳಿಂದಲೋ ಮಾತ್ರೆಗಳಿಂದಲೋ ಬುದ್ಧಿಮಟ್ಟವನ್ನು ಅತಿಜಾಗ್ರತ ಗೊಳಿಸಲು ಸಾಧ್ಯವಿಲ್ಲ. ಅಬಾಕಸ್ ನಂತಹ ಮೆದುಳು ವ್ಯಾಯಾಮವನ್ನು ಮಾಡಿಸಿದರೂ ಅದು ಲೌಕಿಕ ಲೆಕ್ಕಾಚಾರಗಳಿಗೇ ಸೀಮಿತವಾಗಿಬಿಡುತ್ತದೆ! ಇವೆಲ್ಲಾ ಪರಿಧಿಯನ್ನು ಮೀರಿ ನಾವು ನಿಲ್ಲಬೇಕಾದರೆ ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ ಅಗತ್ಯ. ದಿನವೊಮ್ಮೆಯಾದರೂ ನೀವು ಭಗವಂತನಿಗೆ ಪ್ಲಗ್ ಹಾಕಿಕೊಳ್ಳಿ. ಇದು ಹೇಳುವಷ್ಟು ಸಲಭವಲ್ಲ.

ಧ್ಯಾನಕ್ಕೆ ಕುಳಿತಾಗ ಇಲ್ಲದ ವ್ಯವಹಾರದ ಯೋಚನೆ, ಕಾಮದ ತೆವಲುಗಳು, ಜಿಹ್ವಾಚಾಪಲ್ಯದ ಚಪ್ಪರಿಕೆಗಳು, ಶ್ರವಣಾನಂದದ ಗುಂಗುಗಳು ಇವೆಲ್ಲಾ ಅತಿಸಹಜ ಮನೋವೃತ್ತಿಗಳು. ಇವುಗಳಿಗೆಲ್ಲಾ ಬ್ರೇಕ್ ಹಾಕಿ ನಿಲ್ಲಿಸಿಕೊಂಡು ಏಕಾಂತದಲ್ಲಿ ಯಾರೊಂದಿಗೋ ಮಾತನಾಡಿದಂತೇ ಕೇವಲ ಪರಾಶಕ್ತಿಯನ್ನು ಧ್ಯಾನಿಸಬೇಕು. ಆ ಧ್ಯಾನದಿಂದ ಪಡೆದ ಚಾರ್ಜ್ ನ್ನು ನಾವು ಧಾರಣೆಮಾಡಬೇಕು. ಹಾಗೊಮ್ಮೆ ಅದನ್ನು ಧರಿಸಿದಾಗ ನಮಗೆ ಎಲ್ಲರೂ ಮಿತ್ರರಾಗುತ್ತಾರೆ, ಜಗತ್ತೇ ಕುಟುಂಬವಾಗುತ್ತದೆ, ನಮ್ಮೊಳಗೇ ನಾವು ಆನಂದತುಂದಿಲರಾಗುತ್ತೇವೆ. ಜೀವನವನ್ನು ಪರಮಾತ್ಮನ ಪ್ರಸಾದವೆಂದೂ, ಪಾಲಿಗೆಬಂದ ಪಂಚಾಮೃತವೆಂದೂ ಇದ್ದುದ್ದರಲ್ಲಿಯೇ ತೃಪ್ತಿಯಿಂದ ಕಳೆದರೆ ಅದೇ ನಿಜವಾದ ಸುಖವಾಗುತ್ತದೆ. ಹಾಗಂತ ಇಡೀದಿನ ನಾವು ಒಂದೆಡೆಕೂತು ದೇವರು ಕೊಟ್ಟಿದ್ದೇ ಇಷ್ಟು ಎಂದುಕೊಂಡರೆ ಅದು ಶುದ್ಧ ತಪ್ಪು. ವ್ಯಕ್ತಿಗಳಾಗಿ ನಾವು ನಮ್ಮ ದೈನಂದಿನ ದುಡಿಮೆಯ ವ್ಯಹವಾರಗಳನ್ನೆಲ್ಲಾ ನಿಲ್ಲಿಸುವುದಲ್ಲ. ನಾವು ಮಾಡುತ್ತಿರುವ ಕಾರ್ಯಗಳಲ್ಲಿ ಪರಮಾತ್ಮನಿಗೆ ಅದು ತಪ್ಪಾಗಿಕಾಣದಂತೇ ಆತ್ಮವಂಚನೆಮಾಡಿಕೊಳ್ಳದಂತೇ ಸತತವಾಗಿ ತೊಡಗಿಕೊಂಡರೆ ಅಲ್ಲಿ ತಂತಾನೇ ಬೆಳಕು ಬರುತ್ತದೆ. ಆ ಬೆಳಕು ಹರಿದಾಗ ಅದೇ ನಮ್ಮ ಜೀವನಕ್ಕೆ ಸಾಲುತ್ತದೆ!

ಮೋಸದಿಂದ, ವ್ಯಭಿಚಾರದಿಂದ, ಬ್ರಷ್ಟಾಚಾರದಿಂದ, ಕೊಲೆ-ಸುಲಿಗೆ-ಕಳ್ಳತನಗಳಿಂದ ದುಡಿದು ಆಮೇಲೆ ಮನೆಕಟ್ಟಿ, ಹೋಮಮಾಡಿಸಿದರೆ ಅದು ಸರಿಯಾದ ಮಾರ್ಗವಲ್ಲ. ಮನಸ್ಸನ್ನು ಎಲ್ಲೋ ನೆಟ್ಟು ತಾನು ಅಷ್ಟೆಲ್ಲಾ ಜಪಮಾಡಿದರೂ ಪ್ರಯೋಜನವಾಗಲಿಲ್ಲಾ ಎಂಬುದೂ ಸರಿಯಲ್ಲ. ವಿಜ್ಞಾನಿ ಸಂಶೋಧನೆಯಲ್ಲೂ, ಚಾಲಕ ಗಮ್ಯ ಸ್ಥಳಕ್ಕೆ ಹೋಗುವುದರಲ್ಲೂ ಹೇಗೆ ತೊಡಗಿಕೊಂಡಿರುತ್ತಾರೋ ಹಾಗೇ ನಾವುಮಾಡುವ ವೃತ್ತಿಗಳಲ್ಲಿ ನಮಗೆ ತಾದಾತ್ಮ್ಯತೆ ಇರಬೇಕು. ಹೊಟ್ಟೆಕಿಚ್ಚಿಗೆ ಮಾಡುವ ಕೆಲಸ ಅದಾಗಿರಬಾರದು. ಮನಸ್ಸನ್ನು ದಿನಕ್ಕೊಮ್ಮೆಯಾದರೂ ಚಾರ್ಜ್ ಮಾಡುವಾಗ ಬೇರಾವಯೋಚನೆಗಳೂ ಶಾರೀರಿಕ ಬಾಧೆಗಳೂ ಬಾರದಿರಲಿ ಎಂಬ ಸಲುವಾಗಿ, ಶುಚಿತ್ವ ಕಾಪಾಡಲು ’ಮಡಿ’ ಎಂಬ ಸಾಧನವನ್ನು ಹೇಳಿದ್ದಾರೆ. ಕೆಸರುಮೆತ್ತಿಕೊಂಡ, ನಾವು ತಿನ್ನುವಾಗ ಸೀರಿದ್ದನ್ನೂ ಅಂಟಿಸಿಕೊಂಡ, ಮಲ-ಮೂತ್ರಾದಿ ವಿಸರ್ಜನ ಕ್ರಿಯೆಯಲ್ಲಿ ಬಳಸಿ ಕೀಟಾಣುಗಳನ್ನು ಹಿಡಿದುಕೊಂಡಿರುವ, ಸ್ನಾನಮಾಡದೇ ಬಹಳ ಹೊತ್ತಾದಾಗ ಬೆವರನ್ನು ಹೀರಿರುವ---ಹೀಗೇ ಅನೇಕ ರೀತಿಯಲ್ಲಿ ಮಲಿನವಾಗುವ ಬಟ್ಟೆಯ ಹೊರತಾಗಿ ಸ್ವಚ್ಛವಾಗಿ ತೊಳೆದಿರಿಸಿದ ಬಟ್ಟೆಯನ್ನು ಧರಿಸಿ, ಸ್ವಚ್ಛಪ್ರದೇಶದಲ್ಲಿ, ಸುತ್ತಲ ಜಗತ್ತಿನ ಸದ್ದು ಕಮ್ಮಿ ಇರುವ ಜಾಗದಲ್ಲಿ, ಸ್ವಚ್ಛ ಹುಲ್ಲಿನ/ದರ್ಬೆಯ ಚಾಪೆಯಮೇಲೆ ಕುಳಿತಾಗ ಧ್ಯಾನಕ್ಕೆ ಮನದ ಸಿದ್ಧತೆಯಾಗುತ್ತದೆ. ಮನಸ್ಸು ತನ್ನ ದೈನಂದಿನ ವ್ಯವಹಾರಗಳ ಜಂಜಡಗಳನ್ನು ಕಳೆದುಕೊಂಡು ಪ್ರಸನ್ನವಾಗಿರುವುದು ಬಹುತೇಕ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ. ಆ ಘಳಿಗೆಯಲ್ಲಿ ಶೌಚ-ಸ್ನಾನಾದಿಗಳನ್ನು ಪೂರೈಸಿ ಧ್ಯಾನಮಾಡಿದರೆ ನಿಜಕ್ಕೂ ಚಾರ್ಜ್ ಸಿಗುತ್ತದೆ! ಆ ಘಳಿಗೆಯನ್ನು ನೆನೆದಾಗ ನಾವು ಪ್ರಾಥಮಿಕ ಶಾಲೆಯಲ್ಲಿ ಹೇಳುತ್ತಿದ್ದ ಪಾರ್ಥನೆಯೊಂದು ನೆನಪಿಗೆ ಬರುತ್ತಿದೆ --

ಸ್ವಾಮಿ ದೇವನೆ ಲೋಕಪಾಲನೆ
ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತುತೇ

ದೇವದೇವನೆ ಹಸ್ತಪಾದಗಳಿಂದಲೂ
ಮನದಿಂದಲೂ
ನಾವುಮಾಡಿದ ಪಾಪವೆಲ್ಲವ ಹೋಗಲಾಡಿಸು
ಸ್ವಾಮಿಯೇ ....

ಮೂಲ ಭಗವಂತನಿಗೆ ಯಾವುದೇ ಆಕಾರವಿಲ್ಲ. ಆದರೆ ನೀರನ್ನು ನಾವು ಪಾತ್ರೆಗಳಲ್ಲಿ ಹಿಡಿದಿಟ್ಟಾಗ ನೀರು ಹೇಗೆ ಅದೇ ಆಕಾರದಲ್ಲಿ ಕಾಣುವುದೋ ಪರಮಾತ್ಮಕೂಡ ಅವರವರ ಭಾವಕ್ಕೆ ಅನುಗುಣವಾಗಿ ಆ ಯಾ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಅಂತಹ ರೂಪಗಳನ್ನು ಕಂಡ ಮುನಿಜನರು ಜನಸಾಮಾನ್ಯರಾದ ನಮ್ಮ ಅನುಕೂಲಕ್ಕಾಗಿ ಮೂರ್ತಿಗಳನ್ನು ಸೃಜಿಸಿದರು. ನಮ್ಮ ನಿಲುವಿಗೆ ನಿಲುಕದ ಅಪರಿಮಿತ ಶಕ್ತಿಯ ಆಗರವಾದ ಭಗವಂತ ತನ್ನ ಲೀಲೆಗಾಗಿ ಆಟಕ್ಕಾಗಿ ನಮ್ಮನ್ನೆಲ್ಲಾ ಸೃಜಿಸುತ್ತಾನೆ, ನಡೆಸುತ್ತಾನೆ. ಯಾವಾಗ ಮೂಲವನ್ನು ನಾವು ಅರಿತೆವೋ, ಅರಿತು ನಡೆವೆವೋ ಕ್ರಮೇಣ ನಾವು ಅವನನ್ನೇ ಸೇರಿಹೋಗುತ್ತೇವೆ:ಅ-ದ್ವೈತ[ಎರಡಿಲ್ಲದ]ವಾಗುತ್ತೇವೆ. ಎಲ್ಲೀವರೆಗೆ ಅವನು ಬೇರೆ ನಾವೇ ಬೇರೆ ಎಂದು ತಿಳಿಯುತ್ತೇವೋ ಆಗ ನಾವು ಆತನನ್ನು ಸೇರಲಾಗುವುದಿಲ್ಲ-ದ್ವೈತವಾಗುತ್ತೇವೆ.

ಜಗತ್ತಿನ ಉಪಕಾರಕ್ಕೆ ಯಾವ ವಿಜ್ಞಾನಿಯೂ ನೀರನ್ನು ಕಂಡುಹಿಡಿಯಲಿಲ್ಲ, ಜಗತ್ತಿಗೆ ಬೆಳಕುಕೊಡಲು ನಿಯಮಿಸಿದ ಸೂರ್ಯಚಂದ್ರರು ಮಾನವಜನ್ಯವಲ್ಲ, ಹೊತ್ತಿಸಿದಾಗ ಹತ್ತುಕೊಳ್ಳುವ-ಉರಿಯುವ ಅಗ್ನಿ ನಮ್ಮ ಆವಿಷ್ಕಾರವಲ್ಲ, ಮತ್ತೊಂದು ಭೂಮಿಯನ್ನು ಮನುಷ್ಯ ತಯಾರಿಸಲು ಸಾಧ್ಯವಿಲ್ಲ, ಆಕಾಶದಷ್ಟು ಅವಕಾಶವನ್ನು ನಾವೆಲ್ಲೂ ಕಾಣಲೂ ನಿರ್ಮಿಸಲೂ ಅನುಕೂಲವೂ ಇಲ್ಲ, ಆಗುವುದೂ ಇಲ್ಲ ! ಇಂತಹ ಪಂಚಭೂತಗಳನ್ನು ದಿನವೂ ನಾವು ಒಟ್ಟಿಗೇ ಇದ್ದು ನೋಡುತ್ತೇವೆ, ಅನುಭವಿಸುತ್ತೇವೆ, ಆದರೂ ಪರಾಶಕ್ತಿಯ ಅಸ್ಥಿತ್ವವನ್ನುಮಾತ್ರ ನಾವು ಹಲವರು ನಂಬುವುದಿಲ್ಲ. ಪ್ರಯತ್ನಕ್ಕೊಂದು ಫಲವಿರಲಿ ಎಂಬ ಇಚ್ಛೆಯಿಂದ ಶಕ್ತಿ ನಮ್ಮನ್ನು ಚಂದ್ರನಲ್ಲಿಗೆ ಬಿಟ್ಟಿತು ಆದರೆ ಸೂರ್ಯನಲ್ಲಿಗೆ ಅಲ್ಲ. ಆಕಾಶದ ಆದಿ ಅಂತ್ಯವನ್ನು ನಾವು ಕಾಣಲು ಸಾಧ್ಯಗೊಡಲಿಲ್ಲ. ಮೂರುಪಾಲು ನೀರು ಒಂದುಪಾಲು ನೆಲವೆನ್ನುವ ನಮಗೆ ನೀರಿನಲ್ಲಿ ಭೂಮಿ ನಿಂತಿದೆಯೋ ಭೂಮಿಯಮೇಲೆ ನೀರಿದೆಯೋ ಸಮರ್ಪಕವಾದ ಅರಿವು ನಿಜಕ್ಕೂ ಇಲ್ಲ! ಇಷ್ಟೆಲ್ಲಾ ಪ್ರಶ್ನೆಗಳ ನಡುವೆ ಅವ್ಯಾಹತವಾಗಿ ನಾವು ಸ್ವಾರ್ಥಿಗಳಾಗಿ ನಡೆದೇ ಇದ್ದೇವೆ. ಈಗಲಾದರೂ ನಾವು ಸ್ವಲ್ಪ ನಮಗಿಂತ ಹಿರಿದಾದ ಶಕ್ತಿಯೊಂದಿದೆ ಎಂಬುದನ್ನು ಸ್ಮರಿಸಿದರೆ ಅದು ನಮ್ಮ ಏಳಿಗೆಯ ಮೊದಲದ್ವಾರವಾಗುತ್ತದೆ.

ಅತಿಕಡಿಮೆ ಹಣಹೂಡಿಕೆಯಿಂದ ಮತ್ತು ಅತಿ ಹೆಚ್ಚುಬುದ್ಧಿಮತ್ತೆಯನ್ನು ತೊಡಗಿಸಿಕೊಳ್ಳುವುದರಿಂದ ನಾರಾಯಣ ಮೂರ್ತಿಯಂಥವರು ಇನ್ಫೋಸಿಸ್ ಕಟ್ಟಿಬೆಳೆಸಿದರು, ಅತ್ಯಂತ ವೇಗದಲ್ಲಿ ಬೆಳೆದು ಸಾಧನೆಮೆರೆದು ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಆಡಿಸುವ ಸಾಮರ್ಥ್ಯವಿದೆಯೆಂಬ ಹೆಸರುಪಡೆದ ಅಮೇರಿಕಾ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿ ನಗೆಪಾಟಲಿಗೀಡಾಯಿತು. ಇವೆರಡೇ ಪ್ರಸಂಗಗಳ ಅವಲೋಕನೆಯಿಂದಲೂ ನಾವು ತಿಳಿಯಬಹುದಾದ ಸತ್ಯ--

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||

ದಿನವೂ ಪ್ಲಗ್ ಹಾಕಿಕೊಳ್ಳಿ, ನಿಧಾನಾವಾಗಿ ಬೇಕಾದಾಗೆಲ್ಲಾ ಪ್ಲಗ್ ಹಾಕಿ ಚಾರ್ಜ್ ಮಾಡಿಕೊಳ್ಳಿ, ಆ ಮೂಲಕ ಸಿಗುವ ಶಕ್ತಿಯಿಂದ, ಧೀ ಶಕ್ತಿಯಿಂದ ಎಲ್ಲರೂ ಬೆಳಗಲಿ, ಜಗತ್ತು ಸುಭಿಕ್ಷದಿಂದ ಸುಕ್ಷೇಮವಾಗಿರಲಿ ಆಶಿಸುತ್ತೇನೆ, ಅದನ್ನೇ ಸದಾ ಪ್ರಾರ್ಥಿಸುತ್ತೇನೆ, ನಮಸ್ಕಾರ.

Tuesday, December 14, 2010

ಚಪ್ಪರದ ಸಿಹಿ ನೆನಪು

ರಾಜಾರವಿವರ್ಮ ಕೃತ ಚಿತ್ರಕೃಪೆ : ಅಂತರ್ಜಾಲ

ಚಪ್ಪರದ ಸಿಹಿ ನೆನಪು

ಮೊದಲ ದಿನ ಬರಿನೊಟ ಕಣ್ಣುಗಳ ಮಿಲನವದು
ಮನವ ತುಂಬಿತು ಹಸಿಹಸಿ ಸಿಹಿಯ ನೆನಪು
ಚಪ್ಪರದಿ ಕಂಡಿರುವ ಮುಗುಳು ನಗುವಿನ ಪಾತ್ರ
ಹೊತ್ತಿಸುತ ಸಾವಿರದ ದೀಪಗಳ ಹೊಳಪು

ಊಟ ಬಡಿಸುವ ನೆಪದಿ ಪಂಕ್ತಿಯಲಿ ನಡೆಯುತ್ತ
ಕಿಣಿಕಿಣಿರ ಸಣ್ಣ ಗೆಜ್ಜೆಯ ನಾದ ಮೆರೆದೂ
ಬಾಳೆಲೆಗೆ ಬಡಿಸಿದ್ದು ಏನಂತ ತಿಳಿದಿಲ್ಲ !
ಹೊಳೆವ ಆ ಚಂದ್ರಮನ ಮೊಗದ ನಗುವಿನೊಳು

ರಾಣಿಜೇನಿನ ಹಾಗೇ ಸುಯ್ಯನೇ ಸುಳಿಸುಳಿದು
ಅಲ್ಲಲ್ಲಿ ಕಂಡು ಕಾಣದೆ ಕಾಂಬ ಪರಿಯು
ಹೃದಯದಲಿ ನೂರೆಂಟು ವಾದ್ಯಗಳು ದನಿಮಾಡಿ
ತನದೆಂಬ ಹಕ್ಕು ಸ್ಥಾಪಿಸಲು ಹೊರಡುವೊಲು !

ಅದನೆನೆದು ಹಲವುದಿನ ನೂರಾರು ಕನಸುಗಳು
ತನ್ನ ಕೈಬೆರಳುಗಳ ಜೊತೆಜೊತೆಗೇ ಆಟ
ಮದುವೆ ಮುಗಿದರೂ ಅಲ್ಲಿ ಮುಗಿದಿಲ್ಲ ಮನದಲ್ಲಿ
ದಿನವೂ ಬಯಸುತ ಮತ್ತೆ ಚಪ್ಪರದ ನೋಟ !

Saturday, December 11, 2010

ಏನಾದರೂ ಆಗು ಮೊದಲು ಮಾನವನಾಗು

ಚಿತ್ರ ಕೃಪೆ : ಅಂತರ್ಜಾಲ
ಏನಾದರೂ ಆಗು ಮೊದಲು ಮಾನವನಾಗು

ಹುಟ್ಟಿದ ಎಲ್ಲಾ ಪ್ರಾಣಿಗಳೂ ಬದುಕುತ್ತವೆ, ಬದುಕಿಗಾಗಿ ಹೋರಾಡುತ್ತವೆ, ತಿನ್ನುತ್ತವೆ-ವಿಶ್ರಾಂತಿ ಪಡೆಯುತ್ತವೆ-ಸಂತತಿ ವೃದ್ಧಿಸುತ್ತವೆ ಹೀಗೇ ಬದುಕಿ ಒಂದು ದಿನ ಸಾಯುತ್ತವೆ. ಇದರ ಪುನರಾವರ್ತನೆ ಸೃಷ್ಟಿಯ ನಿಯಮ. ಆದರೆ ಜೀವಿಗಳಲ್ಲಿ ಅತಿ ಹೆಚ್ಚು ವಿಕಸಿತ ಬುದ್ಧಿಮಟ್ಟದ ಮೆದುಳನ್ನು ಹೊಂದಿದ ಜೀವಿಯೆಂದರೆ ಮನುಷ್ಯ. ಹುಟ್ಟಿನಿಂದ ಮಾನವನೆನ್ನಿಸಿಕೊಳ್ಳುವುದಕ್ಕೂ ಸಂಸ್ಕಾರದಿಂದ ಮಾನವನೆನಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. || ಮನುಷ್ಯ ರೂಪೇಣ ಮೃಗಾಶ್ಚರಂತಿ || ಎಂಬ ಹಾಗೇ ಕೆಲವರು ಮನುಷ್ಯ ರೂಪದಲ್ಲೇ ಇದ್ದರೂ ಮೃಗಗಳಂತೇ ವರ್ತಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಸಂಸ್ಕಾರವಂತರಾಗಿರುವುದಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ಹುಟ್ಟಿ ಬೆಳೆದ ಪರಿಸರವೂ ವ್ಯಕ್ತಿಯ ಮೇಲೆ ಹಲವು ಪರಿಣಾಮ ಬೀರುತ್ತದೆ.

ಬಾಲ್ಯದಲ್ಲಿ ಮಗುವಿಗೆ ತಂದೆ-ತಾಯಿ ಮತ್ತು ಪರಿಸರ ಕೊಡುವ ಸಂಸ್ಕಾರ ಬಹಳ ಮುಖ್ಯ. ಮಗುವಿನ ಮನಸ್ಸು ಹಸಿಮಣ್ಣಿನ ಗೋಡೆಯಿದ್ದಂತೇ. ಹಸಿಮಣ್ಣಿನ ಗೋಡೆಗೆ ದೂರದಿಂದ ಚಿಕ್ಕ ಕಲ್ಲುಗಳನ್ನು ಎಸೆದರೆ ಹೇಗೆ ಅಂಟಿಕೊಳ್ಳುವುದೋ ಹಾಗೇ ಚಿಕ್ಕ ಮಗುವಿಗೆ ಗ್ರಾಹಕ ಶಕ್ತಿ ಜಾಸ್ತಿಯಿರುತ್ತದೆ. ತಾನು ಗ್ರಹಿಸಿದ್ದನ್ನು ನೆನಪಿನಲ್ಲಿಟ್ಟು ಅನುಕರಿಸುವ ಮನಸ್ಸೂ ಕೂಡ ಇರುತ್ತದೆ. ಕೂಡುಕುಟುಂಬದ ಪದ್ಧತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಸಮಾಜ ಆಧುನಿಕೀಕರಣಕ್ಕೆ ಮೊರೆಹೋಗಿ ಎಲ್ಲಾ ಅಪ್ಪ-ಅಮ್ಮ-ಮಗು ಇಷ್ಟೇ. ಎಲ್ಲೋ ಅಪ್ಪಿ-ತಪ್ಪಿ ಇಬ್ಬರು ಮಕ್ಕಳಿದ್ದರೆ ಆಶ್ಚರ್ಯ. ಮಕ್ಕಳು ಜಾಸ್ತಿ ಬೇಕು ಎಂದು ಹೇಳುತ್ತಿಲ್ಲ, ಆದರೆ ಹಿಂದಿನ ದಿನಗಳಲ್ಲಿ ಹುಟ್ಟಿದ ಮಗುವಿಗೆ ಸುತ್ತಮುತ್ತ ಹತ್ತಾರು ಜನ ಎತ್ತಿ ಆಡಿಸುವವರಿರುತ್ತಿದ್ದರು. ಮನೆಯಲ್ಲಿ ಹಿರಿಯರು, ಅನುಭವಿಕರು ಇರುತ್ತಿದ್ದು ಮಕ್ಕಳಿಗೆ ರಾಮಾಯಣ-ಮಹಾಭಾರತಗಳಿಂದ ಹಾಗೂ ಇತರ ಅನೇಕ ನೀತಿಕಥೆಗಳಾದ ಪಂಚತಂತ್ರ ಮೊದಲಾದವುಗಳಿಂದಲೂ ಇದಲ್ಲದೇ ಜನಪದರು ಹೊಸೆದ ಗ್ರಾಮೀಣ ಕಥೆಗಳಿಂದಲೂ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಆ ಮೂಲಕ ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತಿದ್ದರು, ಒಳ್ಳೆಯತನವನ್ನು ಬೋಧಿಸುತ್ತಿದ್ದರು. ಇಂದು ಇವೆಲ್ಲಾ ನೆನೆಸಲೂ ಸಾಧ್ಯವಿಲ್ಲದಷ್ಟು ನಾವೆಲ್ಲಾ ಬಿಡುವಿಲ್ಲದ ಕೆಲಸಗಳಲ್ಲಿ ನಿರತರು! ಹೀಗಾಗಿ ಮಕ್ಕಳು ಎಂದಿದ್ದರೂ ಮಕ್ಕಳೇ ಆಗಿರುವುದರಿಂದ ಅವರಿಗೆ ಸರಿಯಾಗಿ ತಿಳಿಹೇಳುವವರಾರು ಎಂಬುದು ಪ್ರಶ್ನೆಯಾಗಿದೆ.

ಸುಮಾರು ೪೦ ವರ್ಷಗಳ ಹಿಂದೆಯೇ ’ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ, ಜನಾನುರಾಗಿಯಾಗಿದ್ದ ದಿ| ಶ್ರೀ ಸಿದ್ಧಯ್ಯ ಪುರಾಣಿಕರು ತಮ್ಮ ಕಾವ್ಯದಲ್ಲಿ ಹೇಳುತ್ತಾರೆ:

ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಆಗು ನಿನ್ನಿಚ್ಛೆಯಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು

ಇವತ್ತಿನ ದಿನಮಾನದಲ್ಲಿ ನಾವು ನಮ್ಮ ಸುತ್ತಲ ಪರಿಸರದಲ್ಲಿ ನೋಡಿದಾಗ, ನಡೆಯುತ್ತಿರುವ ಕೊಲೆ-ಸುಲಿಗೆ-ದರೋಡೆಗಳು, ಅನ್ಯಾಯ-ಅತ್ಯಾಚಾರ-ಅನಾಚಾರ-ಮೋಸ ಇತ್ಯಾದಿ ಹೇಸಿಗೆಯ ಕೃತ್ಯಗಳು ಇವೆಲ್ಲಾ ಕಣ್ಣಿಗೆ ಬಿದ್ದಾಗ, ಸುದ್ದಿ ತಿಳಿದು ಮನಸ್ಸು ನೋವನ್ನು ಅನುಭವಿಸುತ್ತದೆ. ಎಷ್ಟೋ ಪ್ರಾಣಿಗಳು ಅವುಗಳಿಗೆ ಬುದ್ಧಿ ಕಮ್ಮಿ ಇದ್ದರೂ ಸಂಕೇತಗಳಿಂದಲೇ ತಮ್ಮ ತಮ್ಮ ತೊಂದರೆಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಅರ್ಥಮಾಡಿಕೊಂಡು ಬದುಕುತ್ತವೆ. ಇರುವೆಗೆ ಸಾಲಾಗಿ ಹೋಗಲು ಯಾರು ಹೇಳಿಕೊಟ್ಟರು, ಮೀನಿಗೆ ಈಜಲು ಯಾರು ಕಲಿಸಿದರು, ಹಕ್ಕಿಗೆ ಹಾರಲು ಯಾರು ತರಬೇತಿಕೊಟ್ಟರು....ಇವೆಲ್ಲಾ ನಿಸರ್ಗದ ನಿಯಮಗಳು. ದಯಾಮಯಿಯಾದ ಜಗನ್ನಿಯಾಮಕ ಮನುಷ್ಯನಿಗೆ ವಿಕಸಿತ ಮನಸ್ಸನ್ನು ಕೊಟ್ಟು ಅದರ ಕೀಲಿಯನ್ನೂ ನಮಗೇ ಕೊಟ್ಟ. ಆದರೆ ಆ ಕೀಲಿಯನ್ನು ನಾವೀಗ ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಕವಿ ಮುಂದುವರಿದು ಹೇಳುತ್ತಾರೆ :

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು ದುಡಿದು ಗಳಿಸಿ

ನಾವು ಇಚ್ಛಿಸಿದಂತೇ ನಮ್ಮ ವೃತ್ತಿ. ನಮ್ಮ ವೃತ್ತಿಯಿಂದಲೇ ನಮ್ಮ ಜಾತಿ. || ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ. ನಾವು ಯಾವ ಯಾವ ಕೆಲಸವನ್ನು ಮಾಡುತ್ತೇವೋ ಅದರಿಂದಲೇ ನಾವು ಆಯಾ ಜಾತಿಗೆ ಸೇರಿದವರೇ ವಿನಃ ಜಾತಿ ಜನ್ಮಜಾತವಲ್ಲ ಎಂದನಲ್ಲವೇ ? ಚೆನ್ನಾಗಿ ಓದು, ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸು; ಈ ಮೂಲಕ ನೀನು ಬ್ರಾಹ್ಮಣನಾಗುತ್ತೀಯ. ದೇಶದ ರಕ್ಷಣೆಗಾಗಿ ಯೋಧನಾಗಿ ಮೆರೆ ನೀನಾಗ ಕ್ಷತ್ರಿಯನಾಗುತ್ತೀಯ. ವ್ಯಾಪಾರಮಾಡಿದಾಗ ವೈಶ್ಯನೂ ಹೊಲದಲ್ಲಿ ದುಡಿದಾಗ ಶೂದ್ರನೂ ಆಗುತ್ತೀಯ. ಅಂದರೆ ಈ ನಾಲ್ಕೂ ಅಂಶಗಳು ಒಬ್ಬ ವ್ಯಕ್ತಿಯಲ್ಲೇ ಇರಲು ಸಾಧ್ಯವಷ್ಟೇ ? ಸಮಯಕ್ಕೆ ತಕ್ಕಂತೆ ಒಬ್ಬನೇ ವ್ಯಕ್ತಿ ಈ ನಾಲ್ಕೂ ವರ್ಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಕವಿ ಮತ್ತೆ ಸಾರುತ್ತಾರೆ:

ಹಿಂದೂ ಮುಸ್ಲಿಮನಾಗು ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೆ ಆಗು ಭೋಗ ಬಯಸಿ

ನೀನೊಬ್ಬ ಹಿಂದೂವೋ ಮುಸ್ಲಿಮನೋ ಬೌಧ್ಧನೋ ಕ್ರೈಸ್ತನೋ ಆಗು ಅಥವಾ ಭೋಗ ಬಯಸುವ ಚಾರ್ವಾಕನೇ ಆಗು ಆದರೆ ಅದೆಲ್ಲಕ್ಕೂ ಮೊದಲು ನೀನು ಮಾನವನಾಗು --ಎಷ್ಟು ಚೆನ್ನಾಗಿದೆ ನೋಡಿ !

ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು

ರಾಜಕಾರಣಿಯಾದರೂ ಆಗಬಹುದು, ದೇಶಭಕ್ತನಾಗಿ ಹಲವಾರು ರೀತಿಯಲ್ಲಿ ಸೇವೆಸಲ್ಲಿಸಬಹುದು, ಶಿಲ್ಪಿ-ಕಲೆಗಾರ-ವಿಜ್ಞಾನಿ-ವೈದ್ಯ ಇತ್ಯಾದಿ ಯಾವುದೇ ಉದ್ಯೋಗಲ್ಲೂ ತೊಡಗಬಹುದು...ಆದರೆ ಇದೆಲ್ಲಕ್ಕೂ ಮೊದಲು ಮಾನವರಾಗುವುದನ್ನು ಕಲಿಯಬೇಕು ಎಂಬುದು ಕಾವ್ಯದ ಸಾರ, ಸಂದೇಶ.

ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತು ಒಬ್ಬ ನಾಪಿಕ ಈ ಮೂರು ಜನರಿದ್ದರೆ ಯಾವ ವ್ಯಕ್ತಿಯೂ ಹೊರಗಿನಿಂದ ಸಿಂಗಾರಗೊಂಡು ಚೆನ್ನಾಗಿ ಕಾಣಬಹುದು. ಆದರೆ ಅದೇ ಆತನ ನಡವಳಿಕೆಗೆ ಇವರಾರೂ ಏನೂ ಮಾಡಲಾರರು. ಹರುಕು ಬಟ್ಟೆಯನ್ನೇ ತೊಟ್ಟಿದ್ದರೂ ಉತ್ತಮ ಗುಣನಡತೆ ಹೊಂದಿದ್ದರೆ ಆತ ಮಾನ್ಯನೇ ಸರಿ. ಏನೋ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಧನಿಕನಾಗದವನು ಹೃದಯಶ್ರೀಮಂತಿಕೆಯಲ್ಲಿ ಕೊರತೆ ಹೊಂದಿದವನಾಗಿರಲೇ ಬೇಕೆಂದೇನಿಲ್ಲ.

ಇವತ್ತಿನ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಬೇಡದ ಪ್ರಸಂಗಗಳನ್ನು, ಮನಕಲಕುವ ದೃಶ್ಯಗಳನ್ನೂ ಮಕ್ಕಳು ನೋಡುತ್ತಿರುತ್ತಾರೆ. ನಾವು ಒಳ್ಳೆಯ ಸಂಸ್ಕಾರವನ್ನು ಪಡೆದಮೇಲೆ ಮಕ್ಕಳನ್ನೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೇ ತಿದ್ದಬೇಕಲ್ಲವೇ? ಮೊನ್ನೆ ದೀಪಾವಳಿಯ ಸಡಗರದಲ್ಲಿ ದೇಶವೇ ನಲಿಯುತ್ತಿದ್ದರೆ ಒಂದು ಹಳ್ಳಿಯ ಒಬ್ಬರ ಮನೆಯಲ್ಲಿ ಹುಡುಗನೋರ್ವ ಅಡುಗೆ ಮನೆಗೆ ಬಂದ. ಅಮ್ಮ ಮಾಡುತ್ತಿದ್ದ ಹೋಳಿಗೆ ಪಡೆದು ತಿಂದ. ಅಮ್ಮ ಕೆಲಸದಲ್ಲಿ ನಿರತರಾಗಿರುವಾಗ ಈ ಹುಡುಗ ಮಹಡಿಯೇರಿ ಹೋಗಿ ಅಲ್ಲಿ ಮೊದಲೇ ತಾನು ತಂದಿಟ್ಟಿದ್ದ ನೇಣನ್ನು ಹಾಕಿಕೊಂಡು ನೇತಾಡಿದ ! ಏನಾಗುತ್ತದೆ ಎಂಬುದನ್ನು ಅನುಭವಿಸಿ ನೋಡಲು ಆತ ಹಾಗೆ ಮಾಡಿದ್ದು. ಹುಡುಕುತ್ತಾ ಅಮ್ಮ ಮತ್ತು ಮಿಕ್ಕುಳಿದವರು ಬರುವಷ್ಟರಲ್ಲಿ ಆತ ಶಿವನಪಾದ ಸೇರಿದ್ದ. ಇದು ಇಂದಿನ ಧಾರಾವಾಹಿ ಹಾಗೂ ಚಲನಚಿತ್ರಗಳ ಒಂದು ಮುಖದ ಪರಿಣಾಮ.

ದಿನಾಲೂ ಅನೇಕ ಮನೆಗಳಲ್ಲಿ ಮಲಗುವ ಮುನ್ನ ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಕೊಲೆಸುಲಿಗೆಯ ದೃಶ್ಯಗಳ ವಿವರಣೆಗಳನ್ನು ನೋಡುತ್ತಾರೆ. ಇದರಿಂದ ಮನಸ್ಸಿಗೆ ಋಣಾತ್ಮಕ ಭಾವಗಳು ಆವರಿಸಿಕೊಂಡು ಒಳಗೊಳಗೇ ಮನಸ್ಸು ಚಡಪಡಿಸುತ್ತದೆ. ಪೂರ್ವಜರು ಹಿಂದಕ್ಕೆ ರಾಮಾಯಣದಂತಹ ಕಥೆಯ ರಾಮನಿರ್ಯಾಣ, ಮಹಾಭಾರತದ ಕರ್ಣಾವಸಾನ ಇಂಥದ್ದನ್ನೆಲ್ಲಾ ಕೂಡ ರಾತ್ರಿ ಮಲಗುವ ಮುನ್ನ ಓದುವುದೋ, ಕೇಳುವುದೋ, ಗಮಕವಾಚಿಸುವುದೋ ಮಾಡುತ್ತಿರಲಿಲ್ಲ. ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಧನಾತ್ಮಕ ಸಂದೇಶಗಳನ್ನು ಕೊಡಬೇಕು. ಬೆಳಿಗ್ಗೆ ಎದ್ದಾಗಲೂ ಅಷ್ಟೇ. ಇದೆಲ್ಲವನ್ನೂ ಕಡ್ಡಾಯವಾಗಿ ಅನುಸರಿಸಲಿ ಎಂಬ ದೃಷ್ಟಿಯಿಂದ ಕೆಲವು ಸಂಪ್ರದಾಯಗಳನ್ನೂ ಕಟ್ಟುಪಾಡುಗಳನ್ನೂ ಆ ಕಾಲದ ಜನ ಜಾರಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು ಅಂತಹ ಯಾವುದೇ ಸಂಪ್ರದಾಯವನ್ನು ನಾವು ಪಾಲಿಸುತ್ತಿಲ್ಲ. ಎಲ್ಲದಕ್ಕೂ ನಮ್ಮ ಕುತ್ಸಿತ ಬುದ್ಧಿ ಕಡ್ಡಿಹಾಕಿ ವೈಜ್ಞಾನಿಕವಾಗಿ ನೋಡತೊಡಗುತ್ತದೆ. ವಿಜ್ಞಾನ ಶಾಸ್ತ್ರ ಕೂಡ ಮಾನವನೇ ಮಾಡಿರುವುದರಿಂದ ಅದಕ್ಕೆ ಗೋಚರವಾಗದ ಎಷ್ಟೋ ಕ್ರಿಯೆ-ಪ್ರಕ್ರಿಯೆಗಳಿವೆ ! ಮನಸನ್ನು ಶುದ್ಧೀಕರಿಸಲು ವಿಜ್ಞಾನದಲ್ಲಿ ಯಾವುದೇ ಯಂತ್ರಗಳಿಲ್ಲ. ಬದಲಾಗಿ ಧ್ಯಾನವೇ ನಾವು ಮನಸ್ಸಿಗೆ ಮಾಡಿಸಬಹುದಾದ ಸ್ನಾನವಾಗಿರುತ್ತದೆ.

ಇದನ್ನೆಲ್ಲಾ ಅರಿತೇ ಪ್ರಾಜ್ಞರು ಹೇಳಿದ್ದು : ’ ಸಜ್ಜನರ ಸಂಗವದು ಹೆಜ್ಜೇನು ಸವಿದಂತೇ ’ ಎಂದು. ಉತ್ತಮ ಸಂಸ್ಕಾರವನ್ನು ಪಡೆಯಬೇಕಾದರೆ ಉತ್ತಮರನ್ನು ಹುಡುಕಿಕೊಳ್ಳಬೇಕು. ಅಂಥವರ ಸಮಯವನ್ನು ನಿರೀಕ್ಷಿಸಿ ಅವರಿಂದ ಹಲವನ್ನು ಕಲಿಯಬೇಕು, ಅಂಥವರು ತಿಳಿಸುವ ಉತ್ತಮ ಪುಸ್ತಕಗಳನ್ನು ಓದಬೇಕು, ಸತ್ಯ, ಅಹಿಂಸೆ, ಪ್ರಾಮಾಣಿಕತೆಗಳೇ ಮೊದಲಾದ ಅಂಶಗಳನ್ನು ಸಕ್ರಿಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗಬೇಕು. ನಾವು, ನಮ್ಮ ನಾಲಿಗೆ, ನಮ್ಮ ನಡತೆ ಒಳ್ಳೆಯದಾದಾಗ ನಾಡೆಲ್ಲಾ ಒಳ್ಳೆಯದಾಗುತ್ತಾ ಹೋಗುತ್ತದೆ. ಇದಕ್ಕೆಂತಲೇ ಮಹಾತ್ಮರಾದ ಸ್ವಾಮೀ ವಿವೇಕಾನಂದರು ಹೇಳಿದರು : ’ ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು’ ನಾವು ನಮ್ಮ ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಅರಿಯೋಣ, ಸನ್ಮಾರ್ಗದಲ್ಲಿ ನಡೆಯೋಣ, ಮಾನವರಾಗೋಣ.