ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 19, 2012

ವಿಶ್ವಕ್ಕೇ ಗೊತ್ತು ಭಾರತದ ತಾಕತ್ತು! ಅದು ನಿತ್ಯ ನೂತನ; ಸತ್ಯ ಸನಾತನ.

ಿತ್ರಋಣ: ಅಂತರ್ಜಾಲ
ವಿಶ್ವಕ್ಕೇ ಗೊತ್ತು ಭಾರತದ ತಾಕತ್ತು! ಅದು ನಿತ್ಯ ನೂತನ; ಸತ್ಯ ಸನಾತನ. 

[ ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ
ಅಧ್ಯಾಯ-೩ ]

ನೀವೀಗ ಕೇಳುತ್ತೀರಿ ’ಇದರಲ್ಲಿ ಹೊಸದೇನಿದೆ ಭಟ್ಟರೇ?’, ಹೊಸದು ಎಂದರೆ ಹೊಸದಲ್ಲ, ಹಳೆಯದಾಗಲು ಸಾಧ್ಯವಿಲ್ಲ ಅಂಥಾ ಕೆಲವು ವಿಷಯಗಳು ನಮಗೆ ಆಗಾಗ ಅಲ್ಲಲ್ಲಿ ಸಿಗುತ್ತವೆ; ಕಾಣುತ್ತವೆ, ಮನದಲ್ಲಿ ನೆಲೆನಿಂತು ಕಾಡುತ್ತವೆ; ಆತ್ಮೀಯವಾಗಿ ಆತುಕೊಳ್ಳುತ್ತವೆ; ಸ್ನೇಹಿತರ ಥರಾ ಜೋತುಬೀಳುತ್ತವೆ. ಅವು ನಮ್ಮವೇ ಮತ್ತು ನಮ್ಮವರದೇ ವಿಷಯಗಳು, ಗೊತ್ತಿರುವವೇ ಆದರೂ ಮತ್ತೊಮ್ಮೆ ಕೇಳುವ, ಕೆದಕುವ, ಕಾಣುವ, ತಿಳಿಯುವ ತಣಿಯದ ಕುತೂಹಲ! ರಾಮಕಥೆ ನಡೆಯುವಲ್ಲೆಲ್ಲಾ ಬೊಗಸೆಯಗಲಿಸಿ ಪ್ರೀತಿಯನ್ನೂ ದಯೆಯನ್ನೂ ಸದಾ ಅದೇ ಶ್ರೀರಾಮರೂಪ ದರುಶನವನ್ನೂ ಬೇಡುತ್ತ ಆನಂದಬಾಷ್ಪ ಸುರಿಸುವ ಹನುಮ ನಿಂತಿರುವ ಹಾಗೇ, ಇಂಥಾ ವಿಷಯಗಳು ಪ್ರಸ್ತಾಪವಾದಾಗಲೆಲ್ಲಾ ನಾವು ಹನುಮರಾಗುತ್ತೇವೆ-ಕಥಾನಾಯಕರು ರಾಮರಾಗುತ್ತಾರೆ; ಯಾಕೆಂದರೆ

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಬೀಡು

ನಮ್ಮ ಕನ್ನಡನಾಡು. ಅಷ್ಟೇ ಏಕೆ ಈ ಪುಣ್ಯಭೂಮಿ ಭಾರತ ಕೂಡಾ. ರಾಮಾಯಣ, ಮಹಾಭಾರತಗಳಂಥಾ ಅದ್ಭುತ ಕೃತಿಗಳು ಪ್ರಪಂಚದಲ್ಲಿ ಇನ್ನೆಲ್ಲೂ ಕಾಣುವುದಿಲ್ಲ. ಕೋಟಿ ಕೋಟಿ ಕೃತಿಕಾರರು ಜನಿಸಿ, ಬರೆದು ಸಾಗಿ ಸಂದರೂ ನಮ್ಮನೆಲದ ಈ ಕಾವ್ಯಗಳನ್ನು ಅವಲೋಕಿಸಿದರೆ ಬೇರಾವ ಕಾವ್ಯಗಳಿಗೂ ಆ ಸಾರ್ವಕಾಲಿಕತೆ ಇಲ್ಲ, ದಕ್ಕುವುದೂ ಇಲ್ಲ. ವ್ಯಕ್ತಿಯೊಬ್ಬ ಉತ್ತಮನಾದರೆ ಯಾವ ಫಲ? ಮಧ್ಯಮನಾದರೆ ಯಾವುದು? ಅಧಮನಾದರೆ ಏನು ಫಲ? ಯಾರ ಸಂಗ ಮುಕ್ತಿತರಂಗ? ಇನ್ಯಾರ ಸಂಗ ಇಹದ ವಂಗ? ಮತ್ತಿನ್ಯಾರ ಸಂಗ ಮಾನಭಂಗ? ಹೀಗೇ ಮನುಜ ಜೀವನಕ್ಕೆ ಯಾವುದು ವಿಹಿತ, ಯಾವುದು ಹಿತ ಮತ್ತು ಯಾವುದು ಅಹಿತ ಎನ್ನುವುದನ್ನು ಆಧಾರಸಹಿತವಾಗಿ ಎತ್ತಿಕೊಡುವ ಅದಮ್ಯ ಆಕರಗಳು ನಮ್ಮ ರಾಮಾಯಣ-ಮಹಾಭಾರತಗಳು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||

ನಿಶ್ಚಲ ತತ್ವವನ್ನು ಹೇಗೆ ಪದಕ್ರಮದಲ್ಲಿ ಶ್ರೀಶಂಕರರು ಬೋಧಿಸಿದರು ಎಂಬುದನ್ನು ಕಾಣುತ್ತೇವೆ. ಸಾಗರ ವಿಶಾಲವಾಗಿದೆ, ಸಂತೋಷಕೊಡುತ್ತದೆ. ಸಾಗರಗರ್ಭದಲ್ಲಿ ಮುತ್ತು-ರತ್ನಗಳೇ ಅಡಗಿವೆ. ಸಮೂಹದೊಡನೆ ವಿಹರಿಸುವಾಗ ಮಹಾಸಮುದ್ರ ಸುಖದ ಕಡಲು; ಅದೇ ಏಕಾಂತದಲ್ಲಿ ಒಬ್ಬರೇ ಕಡಲಕಿನಾರೆಯಲ್ಲಿ ಬಹುಕಾಲ ವಿಶ್ರಮಿಸಿದರೆ ಆಗ ಅಳುಬರುತ್ತದೆ ಎಂಬುದು ಕೂತು ನೋಡಿದವರ ಅನುಭವ. ಕಾರಣವಿಷ್ಟೇ: ನಾವು ಯಾರೆಂಬುದರ ಮೂಲವನ್ನು ಅಲ್ಲಿ ನಾವು ಕಾಣತೊಡಗುತ್ತೇವೆ! ನಾನು ನಿಜವಾಗಿಯೂ ಯಾರು? ಇಂಥವರ ಮಗನೇ, ಇಂಥಾ ಹುಡುಗನ ಅಪ್ಪನೇ-ಅಮ್ಮನೇ? ಇಂಥಾ ವ್ಯಕ್ತಿ ಗಂಡ ಯಾ ಹೆಂಡತಿಯೇ? ಎಲ್ಲವೂ ಹೌದು, ಆದರೆ ಅದಕ್ಕೂ ಮೀರಿ ನನ್ನೊಳಗೇನಿದೆ? ಹುಟ್ಟಿದಾಗ ಜೀವ ಎಂಬುದು ಎಲ್ಲಿಂದ ಬರುತ್ತದೆ, ಸತ್ತಾಗ ಅದೆಲ್ಲಿ ಮರೆಯಾಗಿ ಹೋಗುತ್ತದೆ? ಹೀಗೆ ಸಾಗುವ ಮನೋರಥದ ವೇಗ ಆ ಕಿನಾರೆಗೆ ಸೀಮಿತವಲ್ಲ; ಅದು ಆಕಾಶದ ಅವಕಾಶದ ಅನಂತತೆಯಲ್ಲಿ ಅದೇನನ್ನೋ ಹುಡುಕುತ್ತದೆ; ಹುಡುಕಲು ಹಾತೊರೆಯುತ್ತದೆ. ಮನುಷ್ಯನಿಗೆ ಇಡೀ ದಿನ ಕೆಲಸಮಾಡಿ ದಣಿದಾಗ ನಿದ್ದೆ ಆವರಿಸುತ್ತದೆ, ೨೪ ಗಂಟೆಗಳಲ್ಲಿ ಸಾಮಾನ್ಯವಾಗಿ ೫-೬ ಗಂಟೆಗಳ ಕಾಲ ನಿದ್ದೆಯಲ್ಲಿ ಕಳೆಯುತ್ತದೆ. ನಿದ್ದೆ ಮಾಡಿ ಎದ್ದರೇನೇ ಮುಂದಿನ ಕೆಲಸ ಸಲೀಸು, ನಿದ್ದೆ ಇಲ್ಲದಿದ್ದರೆ ಯಾವ ಕೆಲಸವೂ ಸಾಧ್ಯವೇ ಇಲ್ಲವೆಂಬ ಭಾವನೆ.

ನಿದ್ದೆಗೊಮ್ಮೆ ನಿತ್ಯಮರಣ
ಎದ್ದಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೆ ಸನತ್ಕುಮಾರದೇವ
ಎಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ನಮ್ಮನಷ್ಟೆ ಮರೆತಿದೆ !

ಬೇಂದ್ರೆಯವರ ಹಾಡು ಹಲವರಿಗೆ ಗೂಢ, ಕೆಲವರಿಗೆ ಘನತರ, ಅವು ವೇದಾಂತವನ್ನು ಸಾರುತ್ತವೆ. ಆ ವೇದಾಂತದಲ್ಲೇ ನಮ್ಮ ಮೂಲದ ಸೂತ್ರ ಅಡಗಿದೆ:

ಯೋ ವೇದಾದೌ ಸ್ವರಃ ಪ್ರೋಕ್ತೋ
ವೇದಾಂತೇ ಚ ಪ್ರತಿಷ್ಠಿತಃ |
ತಸ್ಯಃ ಪ್ರಕೃತಿ ಲೀನಸ್ಯ
ಯಃ ಪರಃ ಸಃ ಮಹೇಶ್ವರಃ ||

ನಮ್ಮ ಸುತ್ತ ನಡೆದಾಡಲು, ಬೆಳೆತೆಗೆಯಲು, ಮನೆಕಟ್ಟಿ ಸಂಸಾರ ನಡೆಸಲು ಈ ಭೂಮಿ ಇದೆ, ಕುಡಿಯಲು ಶುದ್ಧ ನೀರು ಸಾಕಾರಗೊಳ್ಳುತ್ತದೆ, ಉಸಿರಾಡಲು ಹವೆಯಿದೆ-ತಂಗಾಳಿಯಿದೆ, ಕಾಯಿಸಲು-ಬೇಯಿಸಲು-ದಹಿಸಲು ಅಗ್ನಿಯಿದೆ-ಬೆಂಕಿಯಿದೆ, ಇವೆಲ್ಲಾ ತನ್ನೊಳಗೇ ಇರಲು ಆಕಾಶವಿದೆ-ಅವಕಾಶವಿದೆ. ಬಿಸಿಲಿಗೆ ಸೂರ್ಯನಿದ್ದಾನೆ, ಬೆಳದಿಂಗಳಿಗೆ ಚಂದ್ರನಿದ್ದಾನೆ. ಆದರೆ ಅವು ನಮಗೆ ಸಕಲರೀತಿಯಲ್ಲಿ ನೆರವನ್ನು ನೀಡುತ್ತಿದ್ದರೂ ಅವುಗಳಲ್ಲೇ ಅವಿತಿರುವ ನಮ್ಮ ಮೂಲದ ಅರಿವು ನಮಗಿಲ್ಲ! ಈ ನೆಲದಲ್ಲಿ ರಾಮನಿದ್ದ-ಸಾರ್ವಭೌಮನಿದ್ದ, ಈ ನೆಲದಲ್ಲಿ ಕೃಷ್ಣನಿದ್ದ-ಜಗದ್ಗುರುವಿದ್ದ. ನಿರ್ಗುಣವು ನಮಗಾಗಿ ಸಗುಣವಾಗಿ ಬಂದಾಗ ಅದನ್ನು ಕಾಣುವ ಭಾಗ್ಯ ನಮಗಿರಲಿಲ್ಲ, ಕೆಲವರಿಗೆ ಸಿಕ್ಕಾಗ ಏನು ಕೇಳಬೇಕೆಂಬುದೇ ತಿಳಿಯಲಿಲ್ಲ. ಕೆಲವರಿಗೆ ಸಿಕ್ಕಾಗ ಏನೇನೂ ದಕ್ಕಲಿಲ್ಲ! ’ಭಗವಂತ ಸಿಕ್ಕರೆ ಏನು ಕೇಳುತ್ತೀಯ?’ ಎಂದು ಹಲವರಲ್ಲಿ ಪ್ರಶ್ನೆಮಾಡಿದರೆ, ಕೆಲವರಿಗೆ ದಿಕ್ಕೇ ತೋಚುವುದಿಲ್ಲ, ಇನ್ನೂ ಕೆಲವರಿಗೆ ಸಂಸಾರ ತಾಪ-ತ್ರಯಗಳ ಸಮಸ್ಯೆಗಳೇ ಪ್ರಧಾನವಾಗಿ ಗೋಚರಿಸಿ ಮತ್ತಿನ್ನೇನೂ ಕೇಳಲು ಉಳಿದಿರುವುದಿಲ್ಲ!

ನವನಾಗರಿಕತೆ ಎಂಬ ಆಮಿಷಕ್ಕೆ ಬಲಿಯಾದ ನಮ್ಮ ಯುವಪೀಳಿಗೆಯ ಹಲವರಿಗೆ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಬಗ್ಗೆ ಅರಿವಿಲ್ಲ, ಸರಿಯಾಗಿ ಅರಿಯದೇ ಇರುವ ಹಿರಿಯರ-ಪಾಲಕ-ಎಡಪಂಥೀಯರ ದುರ್ಧೋರಣೆಯಿಂದ ನಮ್ಮ ಸಂಸ್ಕೃತಿಗೆ ಬೆಲೆಯಿಲ್ಲ! ಯುವ ಬರಹಗಾರರನ್ನು ಕೇಳಿದರೆ ಯಾವುದೋ ವಿದೇಶೀ,ಪರದೇಶೀ ಕವಿಗಳನ್ನು ಹೆಸರಿಸಿ ಉದ್ದುದ್ದ ಅಡ್ಡಡ್ಡ ಕೊರೆಯುತ್ತಾರೆ ಬಿಟ್ಟರೆ ಬಹುತೇಕರಿಗೆ ನಮ್ಮ ಕಾಳಿದಾಸನ ಕೃತಿಗಳ ಒಡನಾಟವಿಲ್ಲ, ಚಾಣಕ್ಯನ ಅರ್ಥಶಾಸ್ತ್ರದ ಸಾಂಗತ್ಯವಿಲ್ಲ, ಬಾಣ, ಭವಭೂತಿ, ಪಾಣಿನಿ, ವರಾಹಮಿಹಿರ, ಭಾಸ್ಕರ, ಆರವಿ ಯಾರದೂ ಹಿಡಿಸುವುದಿಲ್ಲ!-ಯಾಕೆಂದರೆ ಅರ್ಥವಾಗುತ್ತಿಲ್ಲ, ಅರ್ಥಗ್ರಹಿಸಿದವರನ್ನು ಕೇಳುವ ಮನಸ್ಸಿಲ್ಲ. ದೀಪದ ಚಿತ್ರಕ್ಕೂ ಉರಿಯುವ ದೀಪಕ್ಕೂ ಇರುವ ಸಹಜ ವ್ಯತ್ಯಾಸದ ಪರಿಕಲ್ಪನೆಯಿಲ್ಲ. ಪರದೇಶಗಳ ಪ್ರಲೋಭನೆಯಲ್ಲೇ-ಎಲ್ಲಾ, ಕೇಳುತ್ತಾರೆ ’ಅಲ್ಲಿ ಏನುಂಟು ಏನಿಲ್ಲ?’! ವಿದೇಶೀ ಕವಿ-ಸಾಹಿತಿಗಳನ್ನು ತಾನೂ ಓದಿದ್ದೇನೆ ಎಂಬುದನ್ನು ಕೊಚ್ಚಿಕೊಳ್ಳುವ-ಆ ಮೂಲಕ ’ವಿಶಾಲ ಓದುಗ’ ಎಂಬ ಬಿರುದನ್ನು ಪಡೆಯುವ ಹುಮ್ಮಸ್ಸು ನಮ್ಮ ಪ್ರಾಚೀನ ಕವಿ-ಸಾಹಿತಿಗಳನ್ನು ಮರೆಮಾಚಿಬಿಡುತ್ತದೆ. ಸಂಸ್ಕೃತಭಾಷೆ ಮತ್ತು ಅದರಲ್ಲಿನ ಕವಿ-ಕಾವ್ಯ-ಸಾಹಿತ್ಯಗಳನ್ನು ನಾವು ಬ್ರಾಹ್ಮಣೀಕರಿಸಿಬಿಟ್ಟಿದ್ದೇವೆ! ಅದು ಬ್ರಾಹ್ಮಣರದ್ದು ಎಂದು ಸೀಲು ಹೊಡೆದು ತೆಗೆಯಲಾರದಂತೇ ಮುಚ್ಚಳ ಜಡಿದುಬಿಟ್ಟಿದ್ದೇವೆ; ಕಂಡಲ್ಲಿ ಹೂಂಕರಿಸುತ್ತೇವೆ, ಧಿಕ್ಕರಿಸುತ್ತೇವೆ. ಆದರೆ ಒಮ್ಮೆ ಅಂಥಾ ಕೃತಿಗಳ ಬಗ್ಗೆ ಕಿಂಚಿತ್ತಾದರೂ ತಿಳಿದುಕೊಂಡರೆ ನಾವೇರ್ನು ಈ ಜಗತ್ತಿನಲ್ಲಿ ಎಂಬುದನ್ನು ಅರಿಯಲು ಅದು ಸಹಕರಿಸುತ್ತದೆ. ಈ ಜನಸಾಗರದ ಕಿನಾರೆಯಲ್ಲಿ ಕುಳಿತು ನಮ್ಮನ್ನು ನಾವು ಮತ್ತೊಮ್ಮೆ ಯಾರು?-ಎಂದು ಪ್ರಶ್ನಿಸಿಕೊಳ್ಳುವುದಕ್ಕೆ ಅದು ಅನುಕೂಲ ಕಲ್ಪಿಸುತ್ತದೆ.

ಆಗೊಮ್ಮೆ ಈಗೊಮ್ಮೆ ನಮಗೆ ಕೆಲವು ವಿಶೇಷ ಘಟನೆಗಳು ಕಾಣುತ್ತವೆ. ೧೯ನೇ ಶತಮಾನದ ಅಂತ್ಯದ ಮತ್ತು ೨೦ನೇ ಶತಮಾನದ ಆದಿಯಲ್ಲಿ ಜೀವಿಸಿದ್ದ ಶ್ರೀನಿವಾಸ ರಾಮಾನುಜನ್ ಎಂಬ ಗಣಿತಜ್ಞ, ಸಮಾಜಕ್ಕೆ ಹಲವಾರು ವಿಶಿಷ್ಟ ಕೊಡುಗೆಗಳನ್ನು ಕರುಣಿಸಿದ ವಿಶ್ವೇಶ್ವರಯ್ಯ, ಕಾವ್ಯವನ್ನೇ ಉಸಿರಾಗಿ ಬದುಕಿ ಅದರಲ್ಲೇ ಸರಸವಾಡಿದ ಮುದ್ದಣ, ಸಿಗುವುದೆಲ್ಲವನ್ನೂ ತ್ಯಜಿಸಿ ತ್ಯಾಗಿಯಾಗಿ-ಯೋಗಿಯಾಗಿ ಬದುಕಿದ ಡಿವಿಜಿ, ರಾಮಾಯಣ ದರ್ಶನವನ್ನು ತನ್ನದೇ ವ್ಯಾಖ್ಯಾನದಲ್ಲಿ ಬರೆದ ಕುವೆಂಪು, ಮಕ್ಕಳ ಅವಸಾನಗಳನ್ನು ಕಾಣುತ್ತಲೇ ನಾಕುತಂತಿಯನ್ನು ಮೀಟಿದ-ಗಂಗಾವತರಣವನ್ನು ತೋರಿಸಿದ ಬೇಂದ್ರೆ, ಬಡತನದಲ್ಲೂ ಸುಖದಾಂಪತ್ಯದ ಸೊಬಗನ್ನು ಮಲ್ಲಿಗೆಯಾಗಿ ಪೋಣಿಸಿದ ನರಸಿಂಹಸ್ವಾಮಿ ಇವರೆಲ್ಲಾ ನಮ್ಮ ನಡುವಿನ ಆಶ್ಚರ್ಯವಾಗುತ್ತಾರೆ! ಅವತಾರಗಳಂತೇ ಕಾಣುತ್ತಾರೆ! ಕುವೆಂಪು, ವಿಶೇಶ್ವರಯ್ಯನವರವನ್ನುಳಿದು [ವಿಶ್ವೇಶ್ವರಯ್ಯನವರಿಗೂ ರಾಜಾಶ್ರಯ ಸಿಗುವ ಮೊದಲು ಕೂಳಿಗೂ ಕಷ್ಟವಿತ್ತು!] ಇನ್ನುಳಿದ ಎಲ್ಲರ ಮನೆಗಳಲ್ಲೂ ಬಡತನ ಹೇಗಿತ್ತು ಎಂಬುದರ ಬಗ್ಗೆ ಮತ್ತೆ ಹೊಸ ವ್ಯಾಖ್ಯಾನ ಬೇಡ. ಅವರೆಲ್ಲಾ ಆ ಯಾ ಕೆಲಸಗಳಿಗಾಗಿಯೇ ಜನಿಸಿದರು, ಬಾಳಿದರು. ರಾಮಾನುಜನ್ ಜೀವಿಸಿದ್ದು ೩೨ ವರ್ಷ, ಮುದ್ದಣ ಬದುಕಿದ್ದು ೩೧ ವರ್ಷ, ಆದಿಶಂಕರರು ಬದುಕಿದ್ದು ೩೨ ವರ್ಷ, ಆದರೆ ಸಾಮಾನ್ಯನೊಬ್ಬನ ಜೀವಿತದಲ್ಲಿ ಸಾಧಿಸಲಾಗದ್ದನ್ನು ಅವರು ಸಾಧಿಸಿ ತೋರಿಸಿದರು. ಇವರ್ಯಾರಿಗೂ ಅವರ ಉಪಜೀವನ, ಜೀವಿತಕ್ಕೆ ಬಳಸುವ ವಸ್ತುಗಳು-ಉಪಕರಣಗಳು, ವಾಹನಗಳು, ಅನುಕೂಲತೆಗಳು, ಸಂವಹನ ಮಾಧ್ಯಮದ ಸವಾಲುಗಳು ಸಾಧನೆಗೆ ಅಡ್ಡಿಬರಲಿಲ್ಲ; ಯಾರೂ ಪೂರ್ವಾಗ್ರಹ ಪೀಡಿತರಾಗಿರಲಿಲ್ಲ. 

ಜಟಿಲೋ ಮುಂಡೀ ಲುಂಛಿತಕೇಶಃ
ಕಾಷಾಯಾಂಬರಬಹುಕೃತವೇಷಃ|
ಪಶ್ಯನ್ನಪಿ ಚ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||

ಹರಿ-ಹರ ಭೇದವೆಣಿಸದ ಭಗವತ್ಪಾದ ಶಂಕರರದ್ದು

ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ||

ಎಂಬ ಭಾವ. ಹಾಗಾಗಿ ಅವರು ಜೀವನದ ಕೊನೆಯಲ್ಲಿ ಭಜಗೋವಿಂದಮ್ ಎನ್ನಿ ಎನಲಿಲ್ಲ ಎಂಬುದು, ಹಾಗೆ ವಾದಿಸುವ ಮೂಢರಿಗೆ ನನ್ನ ಉತ್ತರವಾಗಿದೆ.  ’ಉದರನಿಮ್ಮಿತ್ತಂ ಬಹುಕೃತವೇಷಃ’ ಎಂದು ಅದೆಷ್ಟೋ ಸಾರಿ ಬಳಸುತ್ತೇವೆ-ಅದು ಎಲ್ಲಿಂದ ಬಂತೆಂಬುದು ನಮಗೆ ಗೊತ್ತಿರುವುದಿಲ್ಲ; ಯಾಕೆಂದರೆ ’ಭಜಗೋವಿಂದಮ್’ ಸ್ತೋತ್ರವನ್ನು ನಾವು ಪೂರ್ಣವಾಗಿ ಪಠಿಸಲಿಲ್ಲ; ಅದು ಯಾರೋ ಸಂನ್ಯಾಸಿ ಹೇಳಿದ್ದೆಂಬ ಅಸಡ್ಡೆಯಿಂದ ನಮಗೆ ಬೇಕಾಗಿಯೂ ಇಲ್ಲ! ಅಲ್ಲವೇ?  ವೈದ್ಯ, ತಂತ್ರಜ್ಞ, ವಿಜ್ಞಾನಿ, ಬರಹಗಾರ, ರೈತ, ರಾಜಕಾರಣಿ ಯಾವುದೇ ವೇಷವನ್ನು ತೊಟ್ಟರೂ ಎಲ್ಲವೂ ನಮ್ಮ ಉದರಂಭರಣೆಯ ಮೂಲೋದ್ದೇಶದಿಂದಲೇ ಆಗಿವೆ. ಹಸಿದವನಿಗೆ ಹೊಟ್ಟೆ ತುಂಬಿಸುವ ಚಿಂತೆ, ಹೊಟ್ಟೆ ತುಂಬಿದಮೇಲೆ ಹಾಯಾಗಿ ನಿದ್ರಿಸುವ ಚಿಂತೆ, ಉಂಡು ಹಾಯಾಗಿ ನಿದ್ರಿಸುವಷ್ಟರಮಟ್ಟಿಗೆ ಅನುಕೂಲವುಳ್ಳ ವ್ಯಕ್ತಿಗೆ ಮೈಥುನದ ಚಿಂತೆ,  ಹೀಗೇ ಈ ಸಂಸಾರ ’ಸಂನ್ಯಾಸಿ ಸಾಕಿದ ಬೆಕ್ಕಿನ ಕಥೆ’ಯಂತಾಗುತ್ತದೆ!

ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಂ |
ವೃದ್ಧೋ ಯಾತಿ ಗ್ರಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾ ಪಿಂಡಂ ||

ಎಲ್ಲವೂ ಸರಿಯಿದ್ದರೆ ಕೊಳ್ಳುಬಾಕರಾಗುತ್ತೇವೆ. ಜೀವನಕ್ಕೆ ಬೇಡವಾದ ಕ್ರೆಡಿಟ್ ಕಾರ್ಡ್ ಮೊರೆಹೋಗುತ್ತೇವೆ, ಸಾಲದಲ್ಲಿ ಕಾರು ಕೊಳ್ಳುತ್ತೇವೆ, ಸಾಲಮಾಡಿ ಇನ್ಯಾರೂ ಕಟ್ಟದ ಬಂಗಲೆ ಕಟ್ಟುತ್ತೇವೆ! ಬೇರಾರಲ್ಲೂ ಇರದ ದಿರಿಸುಗಳೇ ಬೇಕು, ವಿದೇಶೀ ಪರಿಮಳದ್ರವ್ಯಗಳೇ ಬೇಕು. ಹೀಗೇ ಅತಿಯಾಶೆ ನಮ್ಮನ್ನು ದೋಚಿಬಿಡುತ್ತದೆ; ಎಲ್ಲದರ ಅರಿವಾಗುವಾಗ ಬೆಳಗಾಗಿಹೋಗಿರುತ್ತದೆ, ಆದರೆ ನಮ್ಮ ಮನಸ್ಸಿಗೆ ಮಾತ್ರ ಅಂಧಕಾರ ಹೆಚ್ಚುತ್ತಲೇ  ಹೋಗುತ್ತದೆ! 

ನೀರವದ ನಡುರಾತ್ರಿಯಲ್ಲಿ ರಾಜಕುಮಾರ ಸಿದ್ಧಾರ್ಥ ಹಯವನ್ನಡರಿ ಹೊರಟಿದ್ದ! ಕುದುರೆಗೆ ಅಪರಾತ್ರಿಯ ಕತ್ತಲ ಹಾದಿಯಲ್ಲಿ ಅದೆಲ್ಲಿಗೋ ತೆರಳುವ ಯೋಚನೆ, ಯೋಜನೆ ವಿಚಿತ್ರವಾಗಿ ಕಂಡಿತು. ಆದರೆ ಸಿದ್ಧಾರ್ಥನ ಮನಸ್ಸು ದೃಢವಾಗಿತ್ತು, ಅಚಲವಾಗಿತ್ತು. ಲೋಕಪರ್ಯಟನೆಯನ್ನು ಮಾಡಿದ್ದ ಆತ ಪ್ರಜೆಗಳಲ್ಲಿನ ಸುಖದುಃಖಗಳ ಸಂಭವನೀಯತೆಯನ್ನು ಮನದಲ್ಲೇ ಕೂಡಿ-ಕಳೆದು, ಎಣಿಸಿ-ಗುಣಿಸಿ ಜೀವನದಲ್ಲಿ ಸುಖಕ್ಕಿಂತ ಹೆಚ್ಚಿನ ಭಾಗ ದುಃಖವೇ ಎಂಬುದನ್ನು ಮನಗಂಡಿದ್ದ. ಸುಖವನ್ನೀವ ಈ ಜಾಗದ ಎಲ್ಲಾ ಭೋಗವಸ್ತುಗಳೂ ಪರೋಕ್ಷ ದುಃಖವನ್ನೇ ಕೊಡುವಂಥವು ಎಂಬುದು ಅವನ ಮನಸ್ಸಿಗೆ ನಿಲುಕಿಬಿಟ್ಟಿತ್ತು. ಜನರ ಕೊನೆಮೊದಲಿಲ್ಲದ ದುಃಖಕ್ಕೆ ಕಾರಣವನ್ನು ಕಾಣಬಯಸಿದ ಸಿದ್ಧಾರ್ಥ ಪರಚಿಂತನೆಯಲ್ಲಿ ತೊಡಗಿಕೊಂಡಿದ್ದ, ಈ ರಾಜ್ಯ-ಈ ಸತಿಸುತರು-ಈ ಧನಕನಕ ಭೋಗಭಾಗ್ಯಗಳೆಲ್ಲಾ ನಶ್ವರವೆನಿಸಿದವು. ಪ್ರೀತಿಯ ಕುದುರೆಯನ್ನಡರಿ ಬಹುದೂರದ ಕಾಡಿಗೆ ಯುವರಾಜ ತೆರಳುವ ಸಂದರ್ಭದಲ್ಲಿ  ಕುದುರೆಗೆ ತಿಳಿಹೇಳಿದ ಬಗೆಯನ್ನು ಕವಿ ಹೀಗೆ ಬಣ್ಣಿಸಿದ್ದಾರೆ :

ತಿರುತಿರುಗಿ ನನ್ನ ಮೊಗ ನೋಡದಿರು ಬೇಡದಿರು
ಕೊರಗದಿರು ಮರುಗದಿರು ನನ್ನ ಸಲುವಾಗಿ
ಅರಿವಿನಾ ಮಾರ್ಗವಿದು ಪರದ ಸನ್ಮಾರ್ಗವಿದು
ಧರೆಯ ದುಃಖದ ಭಾರವಿಳಿಪ ಮಾರ್ಗವಿದು

ನಡೆ ಹಯವೇ ನಡೆ ಮುಂದಕೀಗ
ಸಾರವಿಲ್ಲದ ಸುತಸತಿ ವ್ಯಾಮೋಹದಿಂ ದೂರ
ಸಾರಿಹೋಗುವ ನಾವು ಮುಂದಕೀಗ

ಬೋಧೀವೃಕ್ಷದ ಕೆಳಗೆ ಆಸೀನನಾದ ಸಿದ್ಧಾರ್ಥ, ನಮಸ್ಕರಿಸಿ ಕುದುರೆಯನ್ನು ಮರಳಿ ರಾಜಧಾನಿಗೆ ಕಳುಹಿಸಿದ. ಬಹುಕಾಲದ ತಪಸ್ಸಿನ ಬಳಿಕ ಒಂದುದಿನ ಜ್ಞಾನೋದಯವಾಯಿತು. ’ಆಸೆಯೇ ದುಃಖಕ್ಕೆ ಮೂಲ’ ಎಂಬ ಕಾರಣ ಅವನ ದೃಷ್ಟಿಗೆ ಗೋಚರಿಸಿತು. ಆಸೆಯನ್ನು ತೊಡೆದುಹಾಕಿ ನಿರುಮ್ಮಳರಾಗಲು ಜನರಿಗೆ ಕರೆ ನೀಡಿದ ಸಿದ್ಧಾರ್ಥ, ಗೌತಮ ಬುದ್ಧನೆನಿಸಿದ. ಇದೇ ಆಶಯವನ್ನು ಸನಾತನ ಧರ್ಮಸೂತ್ರ ಆ ಮೊದಲೇ ಪರೋಕ್ಷ ಹೇಳಿತ್ತು. ತನ್ನ ಜೀವಿತಕ್ಕೆ ಅತ್ಯಾವಶ್ಯಕವಾದ ವಸ್ತು-ಒಡವೆಗಳನ್ನು ಬಿಟ್ಟು ಮಿಕ್ಕರೀತಿಯಲ್ಲಿ ಧನ-ಕನಕ-ಆಸ್ತಿ-ವಸ್ತುಗಳ ಸಂಚಯನ ಸರಿಯಲ್ಲವೆಂದು ಅದು ಸಾರಿದೆ. ’ಸರಳ ಜೀವನ ಮತ್ತು ಉನ್ನತ  ಚಿಂತನ’ಇದು ಸನಾತನ ಜೀವನಧರ್ಮದಲ್ಲಿ ನಡೆದುಬಂದ ಪರಂಪರೆ-ಇದನ್ನು ಗಾಂಧೀಜಿ ಕೂಡ ಅನುಸರಿಸಿದರು. ವಿದೇಶಕ್ಕೆ ಸೂಟು ಬೂಟಿನಲ್ಲಿ ತೆರಳಿದ್ದ ಗಾಂಧೀಜಿ ಅರಿವಿನ ಮೆಟ್ಟಿಲನ್ನು ಏರುತ್ತಾ ಹೋದಂತೇ ಅವುಗಳನ್ನೆಲ್ಲಾ ಕಿತ್ತೆಸೆದು ಪಂಚೆಗಳೆರಡರಲ್ಲೇ ದೇಶದುದ್ದಗಲ ಸಂಚರಿಸುತ್ತಿದ್ದರು. ಮಾಯಾಲೋಕದ ಮಾಯೆಯ ಮೋಡಿಗೆ ಒಳಗಾಗದೇ ಬದುಕುವ ಸರಳ ಜೀವಿತವನ್ನು ಬದುಕುತ್ತಾ ಉಳಿದವರಿಗೆ ತೋರಿಸಿದರು. 

ತಿರುಕನೊಬ್ಬ ಕನಸುಕಂಡ, ಕನಸಿನಲ್ಲಿ ಆ ರಾಜ್ಯದ ರಾಜ  ಸತ್ತುಹೋಗಿದ್ದ, ವಾರಸುದಾರರಿಲ್ಲದ ಕಾರಣ ಅಮಾತ್ಯರು ಪಟ್ಟದಾನೆಯ ಸೊಂಡಿಲಲ್ಲಿ ಹಾರವನ್ನು ಕೊಟ್ಟು, ನೂತನ ರಾಜನನ್ನು ಆಯ್ಕೆಮಾಡುವಂತೇ ವಿನಂತಿಸುತ್ತಾರೆ. ಗಜ-ಗಾಂಭೀರ್ಯದಲ್ಲಿ ಮುಂದರಿದು ಬಂದು ಹಾರಹಾಕಿ ತಾನೇ ರಾಜನಾದ ಹಾಗೇ ಅನ್ನಿಸುತ್ತದೆ. ಆಹಹಾ ಎಂಥಾ ಭಾಗ್ಯ! ಯಾರುಗುಂಟು ಯಾರಿಗಿಲ್ಲ. ತುಸು ನಿಮಿಷ ತಡೆದು ಸಿಟ್ಟಿಗೆದ್ದ ರಾಜನ ಸೈನಿಕರು ಮನೆಗೆ ಮುತ್ತಿಗೆ ಹಾಕಿದಹಾಗೇ ಭಾಸವಾಗಿ ಎಚ್ಚರವಾಗುತ್ತದೆ-ತಿರುಕ ಮಗ್ಗಲು ಬದಲಾಯಿಸಿ ಹೆದರಿ ಎದ್ದು ಕುಳಿತುನೋಡುತ್ತಾನೆ-ನಡೆದಿದ್ದು ಕನಸು, ನಿಜವಲ್ಲ!  ಆದರೆ ನಿಜವೇ ಎನ್ನುವ ಭಾವನೆಮಾತ್ರ ಅದಷ್ಟು ಕಾಲ ಸುಳ್ಳಾಗಿರಲಿಲ್ಲ. ವೇದಿಕೆಯಲ್ಲಿ ಸತ್ತಂತೇ ಮಲಗಿದ ವ್ಯಕ್ತಿಯನ್ನು ಮೇಲೆತ್ತಲು ಯಾವ ಉಪಕರಣದ ಸಹಾಯವನ್ನೂ ಪಡೆಯದೇ ಐಂದ್ರಜಾಲಿಕ ಮೇಲೆತ್ತುತ್ತಾನೆ, ವೇದಿಕೆಯನ್ನೇ ಸುಂದರ ಪುಷ್ಪೋದ್ಯಾನವನ್ನಾಗಿ ಮಾಡುತ್ತಾನೆ. ಇಂದ್ರಜಾಲ ಪ್ರದರ್ಶನ ಮುಗಿಯುವವರೆಗೂ ಅದು ಸುಳ್ಳಲ್ಲ, ಆಚೆ ಎದ್ದು ಬಂದಮೇಲೆ ಅದು ನಿಜವಲ್ಲ! ಸಾವಿರಾರು ರೂಪಾಯಿಗಳ ನೋಟುಗಳನ್ನು ಚಕಚಕನೇ ಸೃಜಿಸುವ ಜಾದೂಗಾರನಿಗೆ ಮನೆಯಲ್ಲಿ ಬಡತನ!! ಹಾಗಾದರೆ ನಾವು ನೋಡಿದ್ದು ಸುಳ್ಳೇ? ಸುಳ್ಳಲ್ಲ, ಅದು ನಿಜವೇ. ಆದರೆ ಅದೊಂದು ಭ್ರಮಾಲೋಕ; ಅದರಂತೇ ಈ ಲೋಕ! ಅದಕ್ಕೇ ಈ ಲೋಕ ಮಿಥ್ಯಾಲೋಕ; ಇದು ಇಂದ್ರಜಾಲ, ಮಹೇಂದ್ರನಾಡುವ ಮಹೇಂದ್ರಜಾಲ.

ಕಸ್ತ್ವಂ ಕೋಹಂ ಕುತ ಆಯಾತಃ
ಕಾ ಮೇ ಜನನೀ ಕೋ ಮೇ  ತಾತಃ |
ಇತಿ ಪರಿಭಾವಯ ಸರ್ವಮಸಾರಂ
ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ ||


ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು|ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಯಾರ ಮಗನೇ ಆದರೂ ಯಾರೇ ಜೊತೆಯಲ್ಲಿದ್ದರೂ ವಿಧಿ ಬರಹವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭಿಮನ್ಯು ಅಮ್ಮನ ಉದರಲ್ಲಿದ್ದಾಗ ಚಕ್ರವ್ಯೂಹವನ್ನು ಭೇದಿಸಿ ಒಳನುಗ್ಗುವವರೆಗಿನ ಕಥೆ ಕೇಳಿದ್ದ, ನಂತರದ ತಂತ್ರಗಾರಿಕೆ ಅವನಿಗೆ ಗೊತ್ತಿರಲಿಲ್ಲ. ಈ ಪ್ರಪಂಚ ಕಂಡ ಅತೀ ಎಳವೆಯ ಮಹಾನ್ ಪರಾಕ್ರಮಿ ಎಂಬುದರಲ್ಲಿ ಎರಡುಮಾತಿಲ್ಲ, ಅರ್ಜುನನ ಮಗನೂ ಹೌದು, ಅಜ್ಜ ದೇವೇಂದ್ರನ ಮೊಮ್ಮಗನೂ ಹೌದು, ಹತ್ತಿರದಲ್ಲೇ ಮಾವನೆನಿಸಿಕೊಂಡ ಕೃಷ್ಣ ಕೂಡ ಇದ್ದಾನೆ. ಆದರೂ ಅಭಿಮನ್ಯು ಸತ್ತನೇಕೆ ಎಂಬುದು ನಮ್ಮ ಸರ್ವಜ್ಞ ಕವಿಯ ಪ್ರಶ್ನೆ. ಯಾರೇ ಇದ್ದರೂ ಆ ಯಾರೋ ಯಾರೂ ಅಲ್ಲ! ಅವರೆಲ್ಲಾ ನಿಮಿತ್ತಮಾತ್ರ. ನಾಟಕದ ಪಾತ್ರಗಳಂತೇ, ಯಕ್ಷಗಾನದ ವೇಷಗಳಂತೇ ಆ ಯಾ ಕಾಲಕ್ಕೆ ಹಾಗೆ ಗೋಚರವಷ್ಟೇ. ಯಾವುದು ಸತ್ಯ ಎಂದರೆ ಈ ಜಗದ ಆಚೆ ಇರುವ ಪರವೇ ನಿಜವಾದ ಸತ್ಯ.  ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದಲ್ಲಿ ಬ್ರಹ್ಮಾಂಡದ ವರ್ಣನೆ ಬರುತ್ತದೆ: ದೇವಿಯನ್ನು ’ಅನೇಕ ಕೋಟಿ ಬ್ರಹ್ಮಾಂಡ ಜನನಿ’ ಮತ್ತು ಲಲಿತಾ ತ್ರಿಶತಿಯಲ್ಲಿ ’ಲಕ್ಷ ಕೋಟ್ಯಂಡ ನಾಯಿಕಾ’ಎಂದೂ ವರ್ಣಿಸಲಾಗಿದೆ. ಕೇವಲ ನಾವಿರುವ ಈ ಬ್ರಹ್ಮಾಂಡವನ್ನು ತೆಗೆದುಕೊಂಡರೆ: ಉದ್ದ ಒಂದು ಲಕ್ಷ ಜ್ಯೋತಿರ್ವರ್ಷಗಳು ಅರ್ಥಾತ್ ೬೦,೦೦೦,೦೦೦,೦೦೦ ಕೋಟಿ ಮೈಲುಗಳು. ನಮ್ಮ ಆಯುಷ್ಯ ೧೦೦ವರ್ಷವಿದ್ದು, ಗಂಟೆಗೆ ೧೦೦೦ಮೈಲುಗಳ ವೇಗದಲ್ಲಿ ದಿನ-ವಾರ-ತಿಂಗಳು-ವರ್ಷ-ಜನ್ಮವಿಡೀ ಪಯಣಿಸುತ್ತಲೇ ಹೋದರೆ, ಗುರಿಯನ್ನು ತಲ್ಪುವುದಕ್ಕೆ ನಮಗೆ ಅಂತಹ ೭೦ ಕೋಟಿ ಜನ್ಮಗಳು ಬೇಕು!!! ಈ ಬ್ರಹ್ಮಾಂಡದ ಎಡಪಾರ್ಶ್ವದಲ್ಲಿ, ಬ್ರಹ್ಮಾಂಡದ ಕೇಂದ್ರಬಿಂದುವಿನಿಂದ ೨೦,೦೦೦,೦೦೦,೦೦೦ ಕೋಟಿ ಮೈಲುಗಳ ದೂರದಲ್ಲಿ ಸೂಜಿಯ ಮೊನೆಗಿಂತಾ ಚಿಕ್ಕದಾಗಿ ಕಾಣುವುದೇ ನಮ್ಮ ಸೌರಮಂಡಲ!!ಈ ಸೌರಮಂಡಲದ ವ್ಯಾಸ ೭೩೩ ಕೋಟಿ ಮೈಲುಗಳು. ನಮ್ಮ ಬ್ರಹ್ಮಾಂಡದ ಎಂಟುಕೋಟಿ ಭಾಗಗಳಲ್ಲಿ ಇದು ಒಂದು ಭಾಗಮಾತ್ರ! ವಿಸ್ತಾರದ ಮರುಭೂಮಿಯ ಅತಿ ಚಿಕ್ಕ ಮರಳುಕಣದಂತೇ ಎನ್ನಬಹುದಾದ ಇದರಲ್ಲಿ, ನಮ್ಮ ಪೃಥ್ವಿಯೂ ನವಗ್ರಹಗಳೂ ಅಡಗಿವೆ. ನಮ್ಮ ಪೃಥ್ವಿಯ ವ್ಯಾಸ ೭೯೨೬ ಮೈಲುಗಳು, ಅಂದರೆ ಮರಳಿನ ಕಣವನ್ನು ಮತ್ತಷ್ಟು ವಿಭಜಿಸಿ ೧೦ ಲಕ್ಷ ಭಾಗಮಾಡಿದರೆ ಆಗ ಸಿಗುವ ಒಂದು ಭಾಗ ಮಾತ್ರ ನಮ್ಮ ಪೃಥ್ವಿ!!

ನಮ್ಮ ಬ್ರಹ್ಮಾಂಡದ ಅಗಲ ಅದರ ಉದ್ದದ ಒಂಭತ್ತನೇ ಒಂದು ಭಾಗ. ಲಟ್ಟಣಿಗೆಯ ಆಕಾರದಲ್ಲಿರುವ ನಮ್ಮ ಬ್ರಹ್ಮಾಂಡದ ಉಬ್ಬು ಹೊಟ್ಟೆಯಂತಿರುವ ಭಾಗದಲ್ಲಿ ಅಜಮಾಸು ೫,೦೦೦ ಕೋಟಿ ನಕ್ಷತ್ರಗಳಿವೆಯೆಂಬುದು ವಿಜ್ಞಾನಿಗಳ ಒಂದು ಅಂದಾಜು. ಬ್ರಹ್ಮಾಂಡದ ಒಳಭಾಗದಲ್ಲಿ ಇರುವ ಒಟ್ಟೂ ನಕ್ಷತ್ರಗಳ ಸಂಖ್ಯೆ ೧೦,೦೦೦ ಕೋಟಿ. ನಕ್ಷತ್ರಗಳ ನಡುವಿನ ಜಾಗದಲ್ಲಿ, ಆ ಅವಕಾಶದಲ್ಲಿ ಒಂದು ಬಗೆಯ ಅನಿಲ ತುಂಬಿಕೊಂಡಿದೆ. ಈ ಬ್ರಹ್ಮಾಂಡದ ಒಳಭಾಗದಲ್ಲಿ ನಮ್ಮ ಸೌರಮಂಡಲವನ್ನೇ ಹೋಲುವ ಸಹಸ್ರ ಲಕ್ಷ ಸೌರಮಂಡಲಗಳಿವೆ ಎಂಬುದು ಅನೇಕ ವಿಜ್ಞಾನಿಗಳ ಊಹೆ. ಆದರೆ ಅವು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ! ಬ್ರಹ್ಮಾಂಡದ ಜನನ ಸರಿಸುಮಾರು ೧೫೦೦ ಕೋಟಿವರ್ಷಗಳ ಹಿಂದೆ ಆಗಿರಬಹುದೆಂಬುದು ಒಂದು ಅಂಬೋಣ. ಜನನಕ್ಕೆ ಕಾರಣ ಪ್ರಳಯದಂತಹ ಮಹಾಸ್ಫೋಟ! [ಬಿಗ್ ಬ್ಯಾಂಗ್]ಎಂದು ನಂಬಲಾಗಿದೆ. ಸ್ಫೋಟಕ್ಕೆ ಕಾರಣಗಳು ತಿಳಿದುಬಂದಿಲ್ಲ! ಹಬ್ಬಲ್, ಐನ್ ಸ್ಟೀನ್ ಮುಂತಾದ ಕೆಲ ವಿಜ್ಞಾನಿಗಳು ಕೊಟ್ಟ ಕಾರಣಗಳು ಹೀಗಿವೆ: ಮಹಾಸ್ಫೋಟಕ್ಕೆ ಚಣಕಾಲ ಮುಂಚೆ ವಿಶ್ವವು ಅತ್ಯುಚ್ಚ ತಾಪಮಾನದಲ್ಲಿತ್ತು. ಗಾತ್ರ ಶೂನ್ಯವಾಗಿದ್ದು ಒತ್ತಡ ಅತ್ಯಧಿಕಗೊಂಡು ಸ್ಫೋಟಿಸಿತು. ಸ್ಫೋಟದ ನಂತರ ವಿಶ್ವವು ಹಿಗ್ಗಿ ತಣ್ಣಗಾಯ್ತು! ವಿಕಿರಣವೇ ಪ್ರಧಾನವಾಗಿದ್ದ ಆ ಸಮಯದಲ್ಲಿ ಕಾಲಾನಂತರದಲ್ಲಿ ಉಪ-ಪರಮಾಣು ಕಣಗಳಿಂದ ಹಗುರವಾದ ಜಲಜನಕ, ಹೀಲಿಯಂ ಮೊದಲಾದ ಮೂಲಧಾತುಗಳು ಅಸ್ತಿತ್ವಕ್ಕೆ ಬಂದವು. ವಿಶ್ವದ ವಯಸ್ಸು ಹೆಚ್ಚಿದಂತೇ ತಾಪಮಾನ ಕಮ್ಮಿಯಾಗುತ್ತಾ ಅದರಲ್ಲಿ ಅಸಂಖ್ಯ ಬ್ರಹ್ಮಾಂಡಗಳು ಹೆಪ್ಪುಗಟ್ಟಿ ಘನಾಕಾರ ಪಡೆಯಲು ಆರಂಭಿಸಿದವು.

ಈ ಸಂದಿನಲ್ಲೇ ನಿಂತು ಆಮೂಲಾಗ್ರ ಚಿಂತನ-ಮಂಥನ ನಡೆಸಿದಾಗ,

ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣ ಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ || 

ಎಂಬ ಶ್ಲೋಕದ ಅರ್ಥವ್ಯಾಪ್ತಿಗೆ ಹೊಸ ಹೊಳಹು ಲಭಿಸುತ್ತದೆ. ಒಂದು ಪೂರ್ಣವಿತ್ತು-ಅದರಿಂದ ವಿಭಜನೆಗೊಂಡ ತುಣುಕುಗಳು ಹಲವು ಅಪೂರ್ಣವಾದರೂ ಮೂಲಮಾತ್ರ ಪೂರ್ಣವೇ, ಪರಿಪೂರ್ಣವೇ! ಮಣ್ಣಿನಿಂದ ಮಡಕೆ-ಕುಡಿಕೆ-ಬೋಗುಣಿ-ಮೊಗೆ-ಹಣತೆ-ತಾಟು ಮೊದಲಾದ ಪಾತ್ರೆಗಳನ್ನೋ ಅಲಂಕಾರಿಕ ವಸ್ತುಗಳನ್ನೋ ಸಿದ್ಧಪಡಿಸಲಾಗುತ್ತದೆ, ಆದರೆ ಅವುಗಳಲ್ಲೆಲ್ಲಾ ಇರುವುದು ಮಣ್ಣೇ ಮತ್ತು ಅವು ಒಡೆದು ಮಣ್ಣೊಳಗೆ ಮತ್ತೆ ವಿಲೀನವಾದಾಗ ಇರುವುದು ಮಣ್ಣೇ ಸರಿ. ಮಿಸುನಿಗೆ ಕೆಲವು ಲೋಹಗಳನ್ನು ಸೇರಿಸಿ ಕಾಯಿಸಿ ಎರಕಹೊಯ್ದು ಪುಟಕೊಟ್ಟಾಗ ಬಂಗಾರದ ವಿವಿಧ ಆಕಾರದ ಆಭರಣಗಳು ತಯಾರಾಗುತ್ತವೆ. ಬಳಸಿ ನೋಡುತ್ತ ಹಳಸಿ ಬೇಸರಗೊಂಡ ಆಭರಣಗಳನ್ನು ಕರಗಿಸಿದಾಗ ಬಂಗಾರವನ್ನೇ ಮರಳಿ ಪಡೆಯಬಹುದಾಗಿದೆ. ನೀರಿನ ಆಗರದಲ್ಲಿ ನೀರು ಪೂರ್ಣವಾಗಿದೆ, ತುಂಬಿಕೊಂಡ ಪಾತ್ರೆಯಲ್ಲಿ ಆ ಯಾ ಪಾತ್ರೆಯ ಆಕಾರವಾಗಿ ಗೋಚರಿಸುವ ನೀರಿಗೆ ಸ್ಪಷ್ಟವಾದ ಸ್ವತಂತ್ರ ಆಕಾರವಿಲ್ಲ! ತುಂಬಿಕೊಂಡ ನೀರನ್ನು ಮತ್ತೆ ಅದೇ ಮೂಲದಲ್ಲಿ ಚೆಲ್ಲಿದರೆ ಅದು ಅಲ್ಲಿರುವ ನೀರಿನಲ್ಲಿ ಸೇರಿಹೋಗುತ್ತದೆಯೇ ಹೊರತು ತಾನು ಬೇರೇ ಎಂದು ತೋರ್ಪಡಿಸುವುದಿಲ್ಲ.

ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ
ಹರಿಸಮರ್ಪಣೆ ಮಾಡಿ ಬದುಕಿರೊ 

ಎಂಬ ದಾಸರ ಹಾಡೂ ಕೂಡ ನೆನಪಾಗುತ್ತದೆ. ದಾಸರು ಭಗವಂತ ಕೊಟ್ಟ ವಸ್ತುಗಳನ್ನೂ ಧನ-ಕನಕ-ಧಾನ್ಯಾದಿಗಳನ್ನೂ ಹರಿಸೇವೆಗೆ ಸಮರ್ಪಿಸುವ ಕುರಿತು ಹೇಳುವುದಕ್ಕೆ ಮಾತ್ರ ಇದನ್ನು ಸೀಮಿತವಾಗಿಸಿದ್ದಾರೆ, ಆದರೆ ಅದನ್ನೇ ಆಳವಾಗಿ ನಿರಾಳವಾಗಿ ಯೋಚಿಸಿದರೆ ನಮ್ಮೊಳಗಿನ ’ನಾನು’ ವನ್ನು ನಮ್ಮ ಹೊರಗೆಲ್ಲಾ ಇರುವ ’ನಾನು’ವಿನಲ್ಲಿ ಚೆಲ್ಲಿದರೆ ಆಗ ದೊರೆವುದೇ ಮೋಕ್ಷ! ಚಿಂತಿಸುವುದು ಸುಲಭ ಎಸಗುವುದು ಕಷ್ಟವಾದ ಈ ಕಾರ್ಯವನ್ನು ನಾವು ಮಾಡಿದ್ದೇ ಆದರೆ ಇಂಥಾ ಬ್ರಹ್ಮಾಂಡದ ನಾಯಕನಲ್ಲಿ ಲೀನವಾಗಿ ಆನಂದಮಯಕೋಶವನ್ನು ಸೇರಿಬಿಡುತ್ತಿದ್ದೆವು-ಜರಾಮರಣ ಚಕ್ರದಿಂದ ಬಿಡುಗಡೆ ಪಡೆಯುತ್ತಿದ್ದೆವು! ಇಂತಹ ದೈವೀ ಚಿಂತನೆಯಿರುವೆಡೆಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ನಿಧಾನವಾಗಿ ಹಿಂಜರಿಯುತ್ತವೆ. ಆ ಹಿಂಜರಿಕೆಗೆ ಕಾರಣವೇನೆಂದರೆ ಇಡೀ ಪ್ರಪಂಚದ ತುಂಬ ನಮಗೆ ವೈರಿಗಳೇ ಇಲ್ಲದಂತೇ, ಇಡೀ ಈ ಬ್ರಹ್ಮಾಂಡವೇ ನಮ್ಮ ಮನೆಯಂತೇ ಭಾವನೆ ಒಡಮೂಡುವುದು. ಹಾಗೊಮ್ಮೆ ಅಂಥಾ ಭಾವನೆ ಬಂದಿದ್ದೇ ಆದರೆ ಐಹಿಕ ಮನೋವೈಕಲ್ಯಗಳು ದೂರವಾಗುತ್ತವೆ,ಜಗಳ-ದೊಂಬಿ-ಕೋಲಾಹಲ-ಕೊಲೆ-ಸುಲಿಗೆ-ದರೋಡೆ-ಹಿಂಸೆ-ದಗಾ-ಮೋಸ ಇತ್ಯಾದಿಯಾಗಿ ಎಲ್ಲಾ ಅನೀತಿಗಳಿಗೂ ಆಸ್ಪದ ಕಮ್ಮಿಯಾಗುತ್ತದೆ. ನಾವು ನಾವಾಗಿ, ನಮ್ಮ ನಿಜದ ನೆಲೆಯನ್ನು ಅರಿತು, ಹಿನ್ನೆಲೆಯನ್ನು ಅರಿತು, ಪ್ರಕೃತಿ ಸಹಜ ಸನಾತನ ಮಾನವ ಜೀವನದ ಲಕ್ಷಣಗಳನ್ನು ರೂಢಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ನಮ್ಮನ್ನು ಕರೆದೊಯ್ಯುವ ದಾರಿ ದೀವಿಗೆಗಳಾದ ರಾಮಾಯಣ-ಮಹಾಭಾರತಗಳ ಮೂಲದಿಂದ ಹರಿದುಬಂದ ಜ್ಞಾನಗಂಗೆ ಹಲವು ಕವಿಗಳಿಗೆ ಸ್ಫೂರ್ತಿಯಾಯ್ತು, ಅಂತಹ ಅನರ್ಘ್ಯರತ್ನಗಳನ್ನು ತಮ್ಮದಾಗಿಸಿಕೊಂಡ ಮಹಾನುಭಾವರುಗಳು ಋಷಿಸದೃಶರಾದರು, ಋಷಿಸದೃಶರೇ ಕವಿಗಳಾಗಿ ಅನೇಕ ಕಾವ್ಯ-ಸಾಹಿತ್ಯಗಳನ್ನು ಬರೆದರು. ಅಂಥಾ ಸಂಗತ ಜ್ಞಾನವನ್ನು ಪಡೆದ ಅವರಲ್ಲಿ ಎಡಪಂಥೀಯರು ಜನಿಸಲಿಲ್ಲ ಯಾಕೆಂದರೆ ಹಿಮಾಲಯವನ್ನು ಕಂಡ ಮಧುಗಿರಿಯ ಬೆಟ್ಟಕ್ಕೋ ಹೊಂಗಲದ ಬಯಲಿಗೋ ತಮ್ಮ ಎತ್ತರದ ಮತ್ತು ಸಾಮರ್ಥ್ಯಗಳ ಪರಿಮಿತಿ ಅರಿವಿಗೆ ಬರುತ್ತದಲ್ಲವೇ?  ಪ್ರಾಚೀನ ಕವಿಗಳಲ್ಲಿ ಒಬ್ಬೊಬ್ಬರು ಒಂದೊಂದು ವಿಷಯಕವಾಗಿ ತಮ್ಮ ಮೇರುಸದೃಶ ಕೃತಿಗಳನ್ನು ಲೋಕಕ್ಕೆ, ಈ ಅಖಂಡ ಭಾರತಕ್ಕೆ ಕೊಡುಗೆಯಾಗಿ ನೀಡಿದರು; ಕೃತಿಗಳ ರಚನೆಯ ಹಿಂದೆ ಸನಾತನ ಸಂಸ್ಕೃತಿಯನ್ನು ಮುನ್ನಡೆಸುವುದರ ಜೊತೆಗೆ ಸಾಮಾಜಿಕ ಲೋಕಸ್ವಾಸ್ಥ್ಯವನ್ನು ಕಾಪಾಡುವ ಹೊಣೆಗಾರಿಕೆ ಮಹತ್ವ ಪಡೆದಿತ್ತೇ ವಿನಃ ತಮ್ಮ ತೀಟೆಗಾಗಿ ಅವರೆಂದೂ ಕೃತಿಗಳನ್ನು ರಚಿಸಲಿಲ್ಲ. ಹೀಗಿದ್ದ ನಾಡಲ್ಲಿ, ದೇಶದಲ್ಲಿ ಶಾಂತತೆಗೆ ಭಂಗವಿರಲಿಲ್ಲ!

ಬೆಟ್ಟದ ಬುಡದಲೊಂದು ಮನೆಯಮಾಡಿ ಮೃಗ-ಪಕ್ಷಿಗಳಿಗಂಜಿದೊಡೆಂತಯ್ಯಾ
ಸಮುದ್ರದಾ ತಡಿಯಲೊಂದು ಮನೆಯಮಾಡಿ ನೆರೆ-ತೊರೆಗಳಿಗಂಜಿದೊಡೆಂತಯ್ಯಾ 
ಸಂತೆಯೊಳಗೊಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯಾ

ಎಂಬ ಶರಣರ ವಚನದಂತೇ ಹೊರಜಗದಲ್ಲಿ ಗೌಜು-ಗಲಾಟೆ ಏನೇ ಇದ್ದರೂ ತಮ್ಮೊಳಗೇ ತಾವು ಶಾಂತವಾಗಿರುವುದಕ್ಕೆ, ಚಿತ್ತವನ್ನು ಪ್ರಶಾಂತ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಆರ್ಷೇಯ ಸಂಸ್ಕೃತಿ ಕಾರಣವಾಗಿತ್ತು. ಅದೇ ರೂಢಮೂಲದಿಂದ ಇಂದಿಗೂ ಭಾರತ ವಿಶ್ವಕ್ಕೇ ಮಾದರಿಯಾಗಿದೆ! ಅಮೇರಿಕದಂತಹ ದೊಡ್ಡಣ್ಣ ಎನಿಸಿಕೊಂಡ ಪರಮಾಣು ನಿಪುಣನಿದ್ದರೂ, ರಷ್ಯಾದಂತಹ ಮುಂದುವರಿದ ರಾಷ್ಟ್ರವಿದ್ದರೂ, ಜಪಾನ್ ನಂತರ ಶ್ರೇಷ್ಠ ತಂತ್ರಜ್ಞಾನ ನಿಪುಣ ದೇಶವಿದ್ದರೂ ಭಾರತ ಎಲ್ಲವುಗಳ ನಡುವೆ ವಿಶಿಷ್ಟವಾಗಿ ಕಂಗೊಳಿಸುತ್ತದೆ ಯಾಕೆಂದರೆ ಇಲ್ಲಿರುವ ವ್ಯಕ್ತಿಗಳೊಬ್ಬೊಬ್ಬರಲ್ಲೂ ಸುಪ್ತವಾಗಿ ರಾಮಾನುಜನ್, ವಿಶ್ವೇಶ್ವರಯ್ಯ, ಕುವೆಂಪು, ಡೀವಿಜಿ, ಮುದ್ದಣ, ಪಂಪ, ಕುಮಾರವ್ಯಾಸ ಮೊದಲಾದವರು ಅವಿತಿದ್ದಾರೆ!! ಜಗತ್ತಿನಲ್ಲಿ ತಾನೇ ಮುಂದು ಎಂದು ಬೆನ್ನು ತಟ್ಟಿಕೊಳ್ಳುವ ಪರದೇಶ ಮೆರೆಯತೊಡಗಿದಾಗ ಅಗೋಚರಶಕ್ತಿಯೊಂದು ಭಾರತಕ್ಕೆ ನವಚೈತನ್ಯವನ್ನು ನೀಡುತ್ತದೆ! ಆ ಮೂಲಕ ಹೊಸದೊಂದು ಆವಿಷ್ಕಾರ ಭಾರತದಲ್ಲಿ ಹುಟ್ಟಿಕೊಂಡು ಭಾರತ ಮುನ್ನಡೆಯುತ್ತದೆ; ವಿಶಿಷ್ಟವೆಂದು ಪರಿಗಣಿಸಲ್ಪಡುತ್ತದೆ. ಜಗತ್ತಿನ ಸರ್ವರ ಕ್ಷೇಮವನ್ನು ಬಯಸಿ, ಹಿತವನ್ನು ಬಯಸಿ ಯುಗಯುಗಗಳಿಂದ ಇಲ್ಲಿನ ಋಷಿಗಳು ಘೋರ, ಅಖಂಡ ತಪಸ್ಸನ್ನಾಚರಿಸಿ, ತಮ್ಮ ತಪಸ್ಸಿನ ಫಲವನ್ನು ಈ ನಮ್ಮ ಭಾರತಕ್ಕೆ ಕೊಟ್ಟು ತೆರಳಿದ್ದಾರೆ; ಕೆಲವರು ನಮಗೆ ಕಾಣಿಸದಂತೇ ಹಿಮಾಲಯದೆಡೆಯಲ್ಲಿ ಇನ್ನೂ ಜೀವಂತವಾಗಿದ್ದಾರೆ!

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ ||

ಜಗತ್ತಿನಲ್ಲಿಯೇ ಅತ್ಯುಚ್ಚವಾದ ಸಂಸ್ಕೃತಿಯನ್ನು ತಮ್ಮ ದೂರದರ್ಶಿತ್ವದಿಂದ, ಜ್ಞಾನಚಕ್ಷುವಿನಿಂದ ಅನುಗ್ರಹಿಸುವ ತಪಸ್ವಿಗಳು ನೆಲೆಸಲು ಹಿಮಾಲಯ ನಮ್ಮ ಪಾಲಿಗೆ ಸಹಕಾರಿಯಾಯ್ತು. ಅಂತಹ ಹಿಮಾಲಯವನ್ನು ಉತ್ತರಕ್ಕೆ ಹೊಂದಿ, ಹಿಂದೂ ಮಹಾಸಾಗರವೆಂಬ ಸಮುದ್ರವನ್ನು ದಕ್ಷಿಣಕ್ಕೆ ಹೊಂದಿರುವ ಈ ನಮ್ಮ ಭಾರತಮಾತೆ ಆಗಾಗ ಆಗಾಗ ಅತಿಶಯ ಶ್ರೇಷ್ಠ ಸಾಧಕರನ್ನು ಹಲವು ರಂಗಗಳಲ್ಲಿ ಹಡೆಯುತ್ತಲೇ ಇರುತ್ತಾಳೆ. ಅಂಥಾ ತಾಯಿ ಭಾರತಿಗೆ ನಮಸ್ಕಾರಗಳು, ಸನಾತನ ಋಷಿಪರಂಪರೆಗೆ ನಮಸ್ಕಾರಗಳು, ಮತ್ತು ಸುದೀರ್ಘ ಬರಹವನ್ನು ಮನವೆಂಬ ನಾಸಿಕದಿಂದ ಆಘ್ರಾಣಿಸಿದ ನನ್ನ ಭಾರತದ ಸಹೋದರ ಸಹೋದರಿಯರಾದ ನಿಮಗೂ ನಮಸ್ಕಾರಗಳು.    

[ಈ ಅಧ್ಯಾಯವನ್ನು ಮುಗಿಸುವ ಮುನ್ನ ಒಂದು ವಿಜ್ಞಾಪನೆ: ಭಗವದ್ಗೀತೆಯನ್ನು ಕಂಠಪಾಠಮಾಡಿಕೊಂಡು, ಕೇಳಿದ ಭಾಗವನ್ನು ಹೇಳಿದವರಿಗೆ, ಕೆಲವುವರ್ಷಗಳಿಂದ ನಿರಂತರವಾಗಿ, ದಕ್ಷಿಣಾಮ್ನಾಯ ಶೃಂಗೇರೀ ಶ್ರೀಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ನಗದು ಬಹುಮಾನ ೨೫,೦೦೦ ರೂಪಾಯಿಗಳನ್ನು ಕೊಟ್ಟು ಆಶೀರ್ವದಿಸುತ್ತಾರೆ. ಕುಸಿದ ಸಾಮಾಜಿಕ ಮೌಲ್ಯವನ್ನು ಮರಳಿ ಕಟ್ಟುವ ಪ್ರಾತಃಸ್ಮರಣೀಯರ ಈ ಪ್ರಯತ್ನ ಅಭಿನಂದನೀಯ. ಕೇವಲ ಹಣಕ್ಕಾಗಿಯಲ್ಲದೇ, ಓದುಗ ಸಮೃದಯರು ಈ ವಿಷಯದಲ್ಲಿ ಆಸಕ್ತಿ ತಳೆದು ಗೀತೆಯನ್ನು ಓದಿ, ಮನನಮಾಡಿ, ಅದರ ಸನಾತನ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಈ ಬರಹಗಾರನ ಅಪೇಕ್ಷೆ ಕೂಡ ಆಗಿದೆ.]

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ |
ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧಃ
ಚಿದಾನಂದ-ರೂಪಃ ಶಿವೋಹಂ ಶಿವೋಹಂ ||


Saturday, December 15, 2012

ಮಹಾಮೇರು ಕಾರಂತರೂ ಬಣ್ಣದ ತುತ್ತೂರಿಯ ವಿಶ್ವೇಶ್ವರ ಭಟ್ಟರೂ

ಚಿತ್ರಋಣ : ಅಂತರ್ಜಾಲ 
ಮಹಾಮೇರು ಕಾರಂತರೂ ಬಣ್ಣದ ತುತ್ತೂರಿಯ ವಿಶ್ವೇಶ್ವರ ಭಟ್ಟರೂ

ತುಂಬಿದಕೊಡ ತುಳುಕುವುದಿಲ್ಲ ಎಂಬುದನ್ನು ಕಳೆದವಾರವಷ್ಟೇ ಪರಾಂಬರಿಸಿದ್ದೆ; ಅದು ಕಳೆದವಾರ ಮಾತ್ರ ನೋಡಿದ್ದಲ್ಲ, ಹದಿನೈದು-ಹದಿನಾರು ವರ್ಷಗಳ ಒಡನಾಟದ ವ್ಯಕ್ತಿಯ ಸ್ವಭಾವದ ಮರುಪರಿಶೀಲನೆ, ಅಷ್ಟಕ್ಕೂ ಆ ಸ್ತರದಲ್ಲಿದ್ದರೆ ಯಾರೇ ಆದರೂ ಕೊಬ್ಬಿ ನೆಲದಮೇಲೇ ನಡೆಯುತ್ತಿರಲಿಲ್ಲ! ಅಂತಹ ಮೇರು ವ್ಯಕ್ತಿತ್ವ ಶತಾವಧಾನಿ ಡಾ| ರಾ.ಗಣೇಶರದ್ದು. ಹಿಮಾಲಯದ ಮೌಂಟ್ ಎವರೆಸ್ಟ್ ಆಗಿಯೂ ಹತ್ತಿರದ ನಂದಿಬೆಟ್ಟದ ಹಾಗೇ ತೋರುವ ಅವರ ಸೌಜನ್ಯ, ಪದಗಳ ವ್ಯಾಪ್ತಿಗೆ ಮೀರಿದ್ದು. ಅಲ್ಲಿ ಪ್ರಲೋಭನೆಯ ಹಪಾಹಪಿಯಿಲ್ಲ, ಅಧಿಕಾರದ ದಾಹವಿಲ್ಲ, ಯಾವುದೇ ಪೈಪೋಟಿಯಿಲ್ಲ, ಕ್ಷುಲ್ಲಕ ರಾಜಕೀಯವಿಲ್ಲ, ಅದು ಅದೃಷ್ಟದ ಬಲವೂ ಅಲ್ಲ; ಅದೊಂದು ಪ್ರಾಮಾಣಿಕನ ಸತತ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಸಿದ್ಧಿ. ತುಂಬಿದ ಕೊಡದಂತೇ ಖಾಲೀಕೊಡ ಕೂಡ ತುಳುಕುವುದಿಲ್ಲ; ಅದರಲ್ಲಿ ತುಳುಕಲು ಏನೂ ಇರುವುದಿಲ್ಲವಲ್ಲಾ-ಹೀಗಾಗಿ. ಆದರೆ ಅರ್ಧ ಅಥವಾ ಭಾಗಶಃ ತುಂಬಿದ ಕೊಡ ಮಾತ್ರ ಹೊತ್ತು ನಡೆವಾಗ ಸದಾ ತುಳುಕಾಡುತ್ತಲೇ ಇರುತ್ತದೆ!! ’ಮಾಧ್ಯಮದ ಮಂದಿ’ ಎಂದುಕೊಳ್ಳುವ ಅನೇಕರಿಗೆ ಆ ಸ್ಥಿತಿ, ಆ ದರ್ಪ ಮತ್ತು ದುರಹಂಕಾರ. ನಾನೂ ಹಾಗೆ ನೋಡಿದರೆ ಮಾಧ್ಯಮದಲ್ಲಿಯೇ ಇದ್ದೇನೆ; ಆದರೆ ನಾನು ಹಾಗೆ ಅಂಥಾ ಕೊಳಕು ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ನನ್ನ ಹೆಜ್ಜೆ ಬಹುಸಂಖ್ಯಾಕರಿಗೆ ಗೊತ್ತೇ ಇಲ್ಲ!  ನಾನು ಗೋಸ್ಟ್ ರೈಟರ್ ಅಲ್ಲ; ಆದರೆ ಅಂಥಾ ಜನಗಳನ್ನು ಕಂಡವನು. ಗೋಸ್ಟ್ ರೈಟಿಂಗ್ ಎಂಬುದಕ್ಕೆ ಕನ್ನಡದಲ್ಲಿ ’ಪೈಶಾಚ ಬರಹಗಾರಿಕೆ’ ಎಂದರೆ ತಪ್ಪಾದೀತು ಅದು ’ನೆರಳುಬರಹಗಾರಿಕೆ’ ಎಂದರೇ ಸರಿಯೇನೋ ಎಂಬುದು ನನ್ನ ಅನಿಸಿಕೆ.  ಕನ್ನಡದಲ್ಲಿ ’ಹೆಸರೊಬ್ಬರದು ಬಸಿರೊಬ್ಬರದು’ ಎಂಬ ನಾಣ್ನುಡಿಯೊಂದಿದೆ-ಅದೇ ರೀತಿ ಇನ್ನೊಬ್ಬರ ಪರವಾಗಿ ಅವರ ಹೆಸರಿನಲ್ಲಿ ಬರೆದುಕೊಡುವ ಸಂಸ್ಕೃತಿ ಕನ್ನಡದಲ್ಲಿ ಬಹಳ ಪ್ರಾಚೀನಕಾಲದಲ್ಲಿ ಇರಲಿಲ್ಲವೇನೋ; ಆದರೆ ಈಗೀಗ ಅದೇ ಜಾಸ್ತಿಯಾಗುತ್ತಿದೆ! ಬಿಡುವಿಲ್ಲದ ಪತ್ರಕರ್ತರಿಗೋ ವೈದ್ಯರಿಗೋ ಅಥವಾ ಇನ್ಯಾವುದೋ ವೃತ್ತಿಯವರಿಗೋ ’ಸಾಹಿತಿಗಳು’ ಎಂಬ ಮತ್ತೊಂದು ಫಲಕವನ್ನು ತಗುಲಿಸಿಟ್ಟುಕೊಳ್ಳುವಾಸೆ! ಅದಕ್ಕೇ ಅಂತಹ ಜನರಿಗೆ ಅನುಕೂಲಕರವಾಗಿ, ಹೊಟ್ಟೆಪಾಡಿಗಾಗಿ ಬರೆದುಕೊಡುವ ಮಂದಿ ಇದ್ದಾರೆ. ಅವರ ಹೆಸರು ಅಲ್ಲಲ್ಲಿ ಗೊತ್ತಿದ್ದರೂ ’ಅವರೇ ಇವರು’ ಎಂಬುದು ಅವರೇ  ಬಿಡುವಿಲ್ಲದ ’ಅವರಿಗಾಗಿ’ಬರೆದ ಪುಸ್ತಕಗಳನ್ನು ಕೊಂಡಾಗ ತಿಳಿಯದು!

ಪ್ರತಿಯೊಬ್ಬ ಬರಹಗಾರನಿಗೂ ಅವನದ್ದೇ ಆದ ಶೈಲಿಯಿರುತ್ತದೆ. ಅದು ಅನೇಕರಿಗೆ ಹಿಡಿಸಲೂ ಬಹುದು, ಹಿಡಿಸದೆಯೂ ಇರಬಹುದು. ಜಾಗೃತಗೊಂಡ ಸಾಹಿತ್ಯಸರಸ್ವತಿಯ ಅಂಗಳದಲ್ಲಿ ಕಳಪೆ ಕಾಮಗಾರಿಯ ಅಡ್ಡಕಸುಬಿಗಳೂ ಇದ್ದಾರೆ; ಚೆನ್ನಾಗಿ ಕೃಷಿಮಾಡಿ ಫಸಲುಣುವ ಜನವೂ ಇದ್ದಾರೆ. ದಿನಕ್ಕೊಂದಷ್ಟು ಕೃತಿಗಳ ಬಿಡುಗಡೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದೇ ಇರುತ್ತದೆ. ಪ್ರಕಟಣೆಗೊಂಡು ಬಿಡುಗಡೆಗೊಂಡ ಕೃತಿಗಳೆಷ್ಟು ಎಂಬುದಕ್ಕಿಂತಾ ಬಹುಸಂಖ್ಯಾಕ ಓದುಗರು ಸಹಜವಾಗಿ ಮೆಚ್ಚಿದ ಕೃತಿಗಳೆಷ್ಟು ಮತ್ತು ಬರಹಗಳ ಒಳಹೂರಣದ ಸಾರ್ವಕಾಲಿಕತೆ ಎಷ್ಟು ಎಂಬುದರ ಮೇಲೆ ಬರಹಗಾರರು ಯಾವ ಮಟ್ಟಿನವರು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಇಂದು ಒತ್ತಾಯಕ್ಕಾಗಿ ’ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸುವವರನ್ನೂ, ತಮ್ಮ ಬರಹಗಳಿಗೂ ತಮಗೊಂದು ಪ್ರತಿಕ್ರಿಯೆ ಈತನಿಂದ ಸಿಗಲಿ ಎಂಬ ಕಾರಣಕ್ಕಾಗಿ ಪ್ರತಿಕ್ರಿಯಿಸುವವರನ್ನೂ ಕಾಣುತ್ತೇವೆ; ಬರವಣಿಗೆಯ ರಂಗದಲ್ಲೂ ಪಕ್ಷ-ಪಂಗಡ-ಗುಂಪುಗಾರಿಕೆ ಇದೆ ಎಂದರೆ ನಂಬುವುದು ಕಷ್ಟವಾಗುತ್ತದೆ-ಆದರೆ ಹಾಗಿದೆ ಎಂಬುದನ್ನು ಅರಿತೂ ನಂಬದಿರುವುದು ಬುದ್ಧ್ಯಾ ಎಸಗುವ ಅಪರಾಧವಾಗುತ್ತದೆ. ಬರಹಗಾರರಲ್ಲಿ ಬಲ ಮತ್ತು ಎಡಪಂಥೀಯರು ಎಂಬ ಪ್ರಮುಖ ವಿಭಾಗಗಳಿವೆ: ಭಾರತೀಯ ಮೂಲ ಸಂಸ್ಕೃತಿ ಮತ್ತು ಸದಾಶಯಗಳನ್ನು ಅರ್ಥೈಸಿಕೊಂಡು ಒಪ್ಪಿ ನಡೆಯುವವರು ಬಲಪಂಥೀಯರೆನಿಸಿದರೆ ನಮ್ಮ ಸಂಸ್ಕೃತಿಯ ಮಹತ್ವವನ್ನೂ ಆದರ್ಶಗಳನ್ನೂ ಅರಿಯದೇ ಹಾರುವ ಮೊಲಕ್ಕೆ ಮೂರೇ ಕಾಲೆಂದು ಘೋಷಿಸಿ ತಮ್ಮ ಬೆನ್ನು ತಟ್ಟಿಕೊಳ್ಳುವವರು ಎಡಪಂಥೀಯ ಬರಹಗಾರರು. ಈ ಪಂಥಗಳಿಗೆ ತಕ್ಕಂತೇ ಅವರವರಿಗೆ ಅವರವರ ಓದುಗರೇ ವಾರಸುದಾರರು! ಸತ್ಯವನ್ನು ಸತ್ಯವೆಂದು ಹೇಳಲು ಹೆದರಿಕೊಳ್ಳುವ ಕಾಲ ಬಂದುಬಿಟ್ಟಿದೆ ಯಾಕೆಂದರೆ ಸುಳ್ಳನ್ನೇ ಸತ್ಯವೆಂದು ನಕಲುದಾಖಲೆಸಹಿತ ಶ್ರುತಪಡಿಸಿ ಬಹುಮತವನ್ನು ಕೀಳುವ ಮಂದಿ ತಯಾರಾಗಿದ್ದಾರೆ; ಸತ್ಯವನ್ನು ಹೇಳುವವರ ಸಂಖ್ಯಾಬಲದ ಕೊರತೆ ಮನಗಂಡು ಸತ್ಯವನ್ನು ಕಂಡರೂ ಕಾಣದಂತೇ ಸುಮ್ಮನಿದ್ದುಬಿಡುವ ’ಬದುಕಿಕೊಳ್ಳುವ ಉಪಾಯ’ವನ್ನು ಮೊರೆಹೊಕ್ಕವರು ಅನೇಕರಿದ್ದಾರೆ; ಕುಡುಕರಲ್ಲದವರ ಸಂಖ್ಯೆ ಕಮ್ಮಿ ಇರುವ ಜಾಗದಲ್ಲಿ ಕುಡುಕರು ಹಾಕಿದ ಸಂಸ್ಕೃತಿಯೇ ವಿಜೃಂಭಿಸುತ್ತಿದೆ, ಕುಡಿಯದವರು ಮರ್ಯಾದೆಗೆ ಅಂಜಿ ಮನೆಯಲ್ಲೇ ಉಳಿದುಹೋಗಿದ್ದಾರೆ!   

ಸಂಪಾದಕರಾದೆವು ಎಂಬ ಮಾತ್ರಕ್ಕೆ ತಾವು ಹೇಳುವುದೆಲ್ಲಾ ಸತ್ಯ ಮತ್ತು ಅದನ್ನು ಜನ ಮೆಚ್ಚುತ್ತಾರೆ ಎಂದುಕೊಂಡು ತಮಗೆ ಸಿಕ್ಕಿದ ರಾಗದಲ್ಲೇ ಗರ್ಧಬಗಾಥೆಯನ್ನು ವಿಸ್ತರಿಸುತ್ತಾ ನಡೆದ ಮಂದಿಯೂ ನಮ್ಮಲ್ಲಿ ಇದ್ದಾರೆ. ಇಂದು ಪತ್ರಿಕಾ ಮಾಧ್ಯಮದ ಅಥವಾ ಸಮೂಹ ಮಾಧ್ಯಮದ ಬೆಳವಣಿಗೆಯಲ್ಲಿ ಗಣಕಯಂತ್ರದ ಜೋಡಣೆಯಿಂದ ಆದ ಕ್ಷಿಪ್ರಗತಿಯ ಬದಲಾವಣೆಗಳಿಂದ, ಬಹುತೇಕ ಪತ್ರಿಕೆಗಳು ಒಂದನ್ನೊಂದು ಅನುಕರಿಸುತ್ತಲೋ ಅಥವಾ ಸೃಜನಾತ್ಮಕ ವಿನ್ಯಾಸಗಾರರ, ಮುದ್ರಕರ ಕೈಚಳಕಗಳಿಂದಲೋ ಮೊದಲಿನ ಕಾಲಕ್ಕಿಂತಾ ಹೆಚ್ಚಿನ ಗುಣಮಟ್ಟವನ್ನು ಮುದ್ರಣ-ವಿನ್ಯಾಸ-ಮುದ್ರಣಕಾಗದಗಳಲ್ಲಿ ಪಡೆದಿವೆ; ಆದರೆ ಬರಹಗಳ ದೃಷ್ಟಿಯಿಂದ ಮೌಲ್ಯಯುತ ಬರಹಗಳ ಸಂಖ್ಯೆ ಕಮ್ಮಿಯಾಗಿದೆ ಎಂಬುದು ಸರ್ವವಿದಿತ. ಹಣತೆಗೆದುಕೊಂಡು ಪೂರ್ವಾಗ್ರಹ ಪೀಡಿತರಾಗಿ ಬರೆಯುವ ಮಂದಿ ಕೆಲವರಾದರೆ ತಲೆಯಲ್ಲಿ ಹೊಳವೇ ಇಲ್ಲದೇ ಸಿಕ್ಕಿದ್ದನ್ನೇ ಕಲಸುಮೇಲೋಗರ ಮಾಡಿ ಚಿತ್ರಾನ್ನ ಬಡಿಸುವ ಸಂಪ್ರದಾಯ ಕೆಲವರದು. ನವೆಂಬರ್ ನಲ್ಲಿ ಆರಂಭಗೊಳ್ಳುತ್ತದೆಂಬ ಹೊಸ ಪತ್ರಿಕೆಯೊಂದರ ಮಾಜಿ ಭಾವೀ ಸಂಪಾದಕರನ್ನು ಅನಿರೀಕ್ಷಿತವಾಗಿ ಭೇಟಿಯಾದೆ: ಆಹಹ ಏನು ಒನಪು ಒಯ್ಯಾರ, ಬೆಡಗು ಬಿನ್ನಾಣ ಅಂತೀರಿ !! ಇನ್ನೂ ಪತ್ರಿಕೆ ಹೊರಟೇ ಇಲ್ಲ ಆಗಲೇ ಮುಖ್ಯಮಂತ್ರಿಗಿಂತಲೂ ಬ್ಯೂಸಿ!! ಈಗ ಪತ್ರಿಕೆಯನ್ನು ಹೊರಡಿಸಬೇಕೆಂದಿದ್ದ ಯಜಮಾನರು ನಿರ್ಧಾರವನ್ನು ಕೈಬಿಟ್ಟಿದ್ದರಿಂದ ಅವರ ಪದವಿ-ಪಟ್ಟಕ್ಕೆ ಕುತ್ತುಬಂದು ಬ್ಯೂಸಿ ಎಂಬುದು ಠುಸ್ ಪಟಾಕಿಯಾಗಿಬಿಟ್ಟಿದೆ; ಪಾಪ ಮಾತನಾಡಿಸುವವರೂ ಇಲ್ಲ! ಸಿಕ್ಕಿದ ಪಟ್ಟವನ್ನು ದುರುಪಯೋಗ ಪಡಿಸಿಕೊಳ್ಳುವ ’ಪುಣ್ಯಾತ್ಮ’ರನ್ನೂ ಕಂಡಿದ್ದೇವೆ. ರಾಜಕೀಯದ ಖೂಳರಿಂದ ಒಂದಷ್ಟು ತೆಗೆದುಕೊಂಡು ಅವರನ್ನು ಹೊಗಳಿ ಬರೆಯುವುದೇನು, ಗಣಿಧಣಿಗಳಿಂದ ಪ್ರಸಾದ ಸ್ವೀಕರಿಸಿ ಅವರಕುರಿತು ಬಣ್ಣಿಸುವುದೇನು ಅಲ್ಲದೇ ಕಂಡವರ ಶೀಲ ಶಂಕಿಸುವಂತೇ ಇಲ್ಲದ ಆರೋಪಹೊರಿಸಿ ’ಇನ್ನೂ ಮುಂದೆ ಇನ್ನಷ್ಟು ಬರೆಯುತ್ತೇವೆ’ ಎಂದು ಅಮಾಯಕರನ್ನು ಹೆದರಿಸಿ ರೋಲ್ ಕಾಲ್ ಮಾಡುವ ಜನಗಳೂ ಇದ್ದಾರೆ.

ಹಿಂದಕ್ಕೆ ಗಾಂಧೀಜಿ, ಡಿವಿಜಿ ಇವರೆಲ್ಲಾ ಪತ್ರಕರ್ತರೋ ಸಂಪಾದಕರೋ ಆಗಿದ್ದ ಕಾಲಕ್ಕೆ ಪತ್ರಿಕೆಯೆಂದರೆ ಸಾರ್ವಜನಿಕರ ಕುಂದುಕೊರತೆಗಳನ್ನು ಸರಕಾರಕ್ಕೆ ತಿಳಿಸುವ ಮತ್ತು ಸರಕಾರದ/ಆಳರಸರ ಡೊಂಕುಗಳನ್ನು ತಿದ್ದುವ ಮಾಧ್ಯಮ ಅದಾಗಿತ್ತು. ಆದರೆ ಈಗ ಹಾಗಿಲ್ಲ; ಪತ್ರಿಕೆ ಎಂದರೆ ಉಳ್ಳವರ/ ಆಳರಸರ ಹೊಗಳಿಕೆಗಳನ್ನು ಪ್ರಕಟಿಸುವ ಪತ್ರಕರ್ತರ ಆಡುಂಬೊಲವಾಗಿವೆ. ಇತ್ತೀಚೆಗೆ ತಮ್ಮ ಸ್ವಾರ್ಥಕ್ಕಾಗಿ ಪರಸ್ಪರಲ್ಲಿನ ಕಿತ್ತಾಟಗಳ ಅಂತರಂಗವನ್ನು ಬಹಿರಂಗಗೊಳಿಸುವ ಮಾಧ್ಯಮಗಳಾಗಿವೆ. ಒಬ್ಬರಮೇಲೆ ಇನ್ನೊಬ್ಬರಿಗೆ ಯಾವುದೇ ಪ್ರೀತಿ, ವಿಶ್ವಾಸ, ವೃತ್ತಿಸೌಹಾರ್ದ ಇಲ್ಲ; ಹಾವು-ಕಪ್ಪೆ ವಿಶ್ವಾಸವಾಗಿಬಿಟ್ಟಿದೆ! ’ವಿಜಯಕರ್ನಾಟಕ’ದಲ್ಲಿ ಅಂಕಣಗಳು ಖುಲ್ಲಾಬಿದ್ದಾಗ ಉತ್ತಮ ಬರಹಗಾರರನ್ನು ಹುಡುಕುವ ಬೇಟೆ ನಡೆದಿತ್ತು ಎಂದು ಕೇಳಿದ್ದೇನೆ, ಆಗ ಕೆಲವರು ಅಂಕಣಕಾರರಾಗಿ ಬರೆಯತೊಡಗಿದರು, ಅಂಕಣ ಬರೆಯಲು ಅವಕಾಶಕೊಟ್ಟೆವು ಎನ್ನುತ್ತಾ ಅಂದಿನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಮತ್ತು ಅವರ ಪಟಾಲಮ್ಮು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದೂ ಇದೆ; ಅವಕಾಶ ಕೊಟ್ಟಿದ್ದು ಬರಹಗಾರನಿಗೆ ನೀಡಿದ ಭಿಕ್ಷೆ ಎಂಬಂತೇ ನಡೆದುಕೊಂಡ ರೀತಿಗಳೂ ಇವೆ.  ಉತ್ತಮ ಬರಹಗಾರರಿಲ್ಲದೇ ಪತ್ರಿಕೆ ನಡೆಯುವುದಿಲ್ಲ; ಪತ್ರಿಕೆಯ ಸಿಬ್ಬಂದಿ ಮಾತ್ರವೇ ಉತ್ತಮಬರಹಗಾರರೆನ್ನಲು ಬರುವುದೂ ಇಲ್ಲ! ಬರವಣಿಗೆ  ಎಂಬುದುದೊಂದು ಅಭಿಜಾತ ಕಲೆ! ಅದು ವ್ಯಕ್ತಿಯಲ್ಲಿ ತಂತಾನೇ ಸ್ಫುರಿಸಿಬೇಕು; ತಾನು ಕೆತ್ತುವ ವಿಗ್ರಹದ ಅಂಗಸೌಷ್ಟವದ ಬಗ್ಗೆ ಶಿಲ್ಪಿಗೆ ಮೊದಲೇ ಹೇಗೆ ತಿಳಿದಿರುತ್ತದೋ ಹಾಗೇ ಬರಹಗಾರನಿಗೆ ತನ್ನ ಬರಹವೊಂದರ ಆಮೂಲಾಗ್ರ ಪರಿಕಲ್ಪನೆ ಮನದ ಅಡುಗೆ ಮನೆಯಲ್ಲಿ ಪಾಕಗೊಂಡುಬಿಡುತ್ತದೆ. ಆ ಪಾಕವನ್ನು  ಸಮಯಕ್ಕೆ ಸರಿಯಾಗಿ ತಟ್ಟೆಗೆ ಇಳಿಸಿ ಹಾಲುಬಾಯಿಯನ್ನೋ ಮೈಸೂರುಪಾಕನ್ನೋ ಕತ್ತರಿಸಿ ಕೊಡುವುದು ಬಾಕಿ ಉಳಿಯುವ ಕೆಲಸವಾಗುತ್ತದೆ. ಅಂತಹ ಬರಹಗಳು ಓದುವುದಕ್ಕೂ, ಆಸ್ವಾದಿಸುವುದಕ್ಕೂ ಹಿತವಾಗಿರುತ್ತವೆ. ಕೇವಲ ಪದವಿಯಿಂದ ಮಾತ್ರ ’ಜರ್ನಲಿಸ್ಟ್’ ಆದವರಿಗೆ ಪಾಕದ ಸಿದ್ಧಿ ಸಾಧ್ಯವಿದೆ ಎನ್ನಲಾಗುವುದಿಲ್ಲ;ಅದು ಹೊಟ್ಟೆಪಾಡಿನ ವೃತ್ತಿಯಾಗುತ್ತದೆ.

ಸಹೃದಯರೊಬ್ಬರು ಜಂಗಮವಾಣಿಯಲ್ಲಿ ಮಾತನಾಡಿ, ಕಳೆದವಾರ ಪ್ರಜಾವಾಣಿಯಲ್ಲಿ ಬಂದ ಪ್ರಳಯದ ಬಗೆಗಿನ ವೈಜ್ಞಾನಿಕ ಲೇಖನವೊಂದರ ಬಗ್ಗೆ ತಿಳಿಸಿ, ಆ ಮುತ್ಸದ್ಧಿ ಬರಹಗಾರರು ಹೀಗೆ ಯಾಕೆ ಬರೆದರು ಎಂದು ಕೇಳಿದರು. ವಿಷಯವಿಷ್ಟೇ: ವಿಜ್ಞಾನಿಗಳು ಪ್ರಳಯ ಸದ್ಯಕ್ಕಿಲ್ಲ ಎಂಬುದಕ್ಕೆ ಭಾರತೀಯ ಜ್ಯೋತಿಷಿಗಳ ಸಹಮತ ಮತ್ತು ಜ್ಯೋತಿಷಿಗಳ ಪ್ರಕಾರ ನಲ್ವತ್ತು ಲಕ್ಷ ವರ್ಷಗಳವರೆಗೂ ಪ್ರಳಯವಿಲ್ಲವಂತೆ ಎಂಬುದು ಅವರು ಮಾಡಿದ ಉಡಾಫೆ. ಬಲಪಂಥೀಯರೂ ಕೆಲವೊಮ್ಮೆ ಬೆನ್ನುಮೂಳೆಯ ಡಿಸ್ಕ್ ಸ್ಲಿಪ್ ಆದಂತೇ ಆಗುವುದು ನೋಡಿ ನನಗೆ ನಗುಬಂತು. ಕಲಿಯುಗಕ್ಕೆ ೪,೩೨,೦೦೦ ಮಾನುಷವರ್ಷಗಳು ಎಂದು ವೇದಾಂಗ ಜ್ಯೋತಿಷ ನಿಖರವಾಗಿ ಹೇಳಿದೆ; ವೇದಾಂಗ ಜ್ಯೋತಿಷ್ಯ ಗಣಿತಾಧಾರಿತವಾಗಿದೆ.  ವೇದಾಂಗ ಜ್ಯೋತಿಷ್ಯವೇ ಬೇರೆ ಮತ್ತು ಫಲಜ್ಯೋತಿಷ್ಯವೇ ಬೇರೆ. ಟಿವಿ ಜ್ಯೋತಿಷಿಗಳು ಫಲ ಹೇಳುವುದು ಫಲಜ್ಯೋತಿಷದ ಆಧಾರದ ಮೇಲೆಯೇ ಹೊರತು ವೇದಾಂಗ ಜ್ಯೋತಿಷ್ಯವನ್ನು ಅವರು ಬಳಸುವುದು ಅಷ್ಟಕ್ಕಷ್ಟೇ. ವೇದಾಂಗ ಜ್ಯೋತಿಷ್ಯ ಖಗೋಲ ಗಣಿತವನ್ನೂ ಒಳಗೊಂಡಿದ್ದು ಆ ವಿಷಯಕವಾಗಿ ನಮ್ಮ ಪ್ರಾಚೀನರಾದ ಇಬ್ಬರು ಆರ್ಯಭಟಂದಿರು, ಭಾಸ್ಕರಾಚಾರ್ಯ ಮೊದಲಾದವರು ಕೆಲಸ/ಸಂಶೋಧನೆ ಮಾಡಿದ್ದಾರೆ. ಫಲಜ್ಯೋತಿಷ್ಯಕ್ಕೆ ವೈಯಕ್ತಿಕ ತಪಸ್ಸಿನ ಫಲ ಮತ್ತು ದೂರದರ್ಶಿತ್ವ ಬೇಕಾಗುತ್ತದೆ. ಒಂದೇ ಕುಂಡಲಿಗೆ ಫಲಜ್ಯೋತಿಷ್ಯ ಹೇಳುವ ಬೇರೆ ಬೇರೇ  ’ಗುರೂಜಿ’ಗಳಿಂದ ಫಲಗಳು ಬೇರೆ ಬೇರೇ ಹೇಳಲ್ಪಡುವುದು ಅದಕ್ಕೇ! ಏನೂ ಇರಲಿ ವಿಜ್ಞಾನಿಗಳೆನಿಸಿಕೊಂಡವರು ಪ್ರಳಯ ಸದ್ಯಕ್ಕಿಲ್ಲ ಎಂದು ಇಂದು-ನಿನ್ನೆ ಹೇಳುವ ಬಹುಕಾಲ ಮೊದಲೇ ವೇದಾಂಗ ಜ್ಯೋತಿಷ್ಯ ಕಲಿಯುಗದ ಅಂತ್ಯ ಯಾವಾಗ ಎಂಬುದನ್ನು ತಿಳಿಸಿದೆ. ಅದನ್ನಷ್ಟು ಬಳಸಿಕೊಂಡ ಫಲಜ್ಯೋತಿಷಿಗಳು ವಿಜ್ಞಾನಿಗಳ ಜೊತೆಗೆ ತಮ್ಮ ಸಹಮತವೆಂದು ಹೇಳಿದ್ದಾರೆ. ಬರೆಯುವಾಗ ಲೇಖಕರು ಇದನ್ನು ಸರಿಯಾಗಿ ಗ್ರಹಿಸದೇ ಉಡಾಫೆ ಮಾಡಿದ್ದು ಓದುಗ ಹಿತೈಷಿಗಳೊಬ್ಬರಿಗೆ ಹಿಡಿಸದಾಗಿದೆ. ಗೊತ್ತಿಲ್ಲದ ವಿಷಯವಾದರೆ ಉಡಾಫೆ ಮಾಡಬಾರದಲ್ಲವೇ? ಗೊತ್ತಿಲ್ಲದ ಶಿವನನ್ನು ಕಾಳಿಮಠದ ಮಹಾಸ್ವಾಮಿಯನ್ನಾಗಿಸಿದ್ದು ನಮ್ಮ ವಿಶ್ವೇಶ್ವರ ಭಟ್ಟರು ಸಂಪಾದಿಸುತ್ತಿರುವ ಸುವರ್ಣ ನ್ಯೂಸ್ ವಾಹಿನಿ, ಗೊತ್ತಲ್ಲವೇ?  ಕಾವಿ ತೊಟ್ಟವರೆಲ್ಲಾ ಸನ್ಯಾಸಿಗಳಲ್ಲ ಎಂಬ ಕಾಮನ್ ಸೆನ್ಸ್ ಇಲ್ಲದೇ ಹಾದಿಹೋಕ ಮಟನ್ ಬಾಕನನ್ನು ’ಮಹಾಸ್ವಾಮಿ’ಯನ್ನಾಗಿ ಪರಿವರ್ತಿಸಿದ ’ಗರಿಮೆ’ ಆ ವಾಹಿನಿಗೆ ಸಲ್ಲುತ್ತದೆ, ಈ ಬಗ್ಗೆ ಜಾಸ್ತಿ ಬೇಡ ...ಗೊತ್ತು ನಿಮಗೆ ಅದನ್ನೇ ಕೇಳೀ ಕೇಳೀ ವಾಕರಿಕೆ ಬರುವಷ್ಟಾಗಿದೆ.     

ಪತ್ರಿಕಾ ಸಂಪಾದಕರನ್ನೇ ಗಣ್ಯವ್ಯಕ್ತಿಗಳು ಎನ್ನಲು ಸಾಧ್ಯವಾಗುವುದಿಲ್ಲ! ಪತ್ರಿಕೆಗಳು ಜನರ ಧೋರಣೆಗಳನ್ನು ಪ್ರತಿನಿಧಿಸುವ ಕಾಲ ಮುಗಿದಮೇಲೆ ಅವು ಸಾರ್ವಜನಿಕರ ಹಿತಾಸಕ್ತಿಯನ್ನೇ ಎತ್ತಿಹಿಡಿಯುತ್ತವೆ ಎಂಬ ತಳಹದಿ ಬುಡಕಳಚಿದ ಮೇಲೆ, ಹಣಕ್ಕಾಗಿ ವರದಿಗಳನ್ನು ಪ್ರಕಟಿಸಲು ಸಿದ್ಧರಿರುವ ಅನೇಕ ಸಂಪಾದಕರು ಎದುರು ಕಾಣುತ್ತಿರುವಾಗ, ಕ್ರಯ-ವಿಕ್ರಯಗಳ ಆಗರವಾಗಿ ಮಾಧ್ಯಮಗಳು ಬೆಳೆಯುತ್ತಿರುವಾಗ, ಸಂಪಾದಕರು ಗಣ್ಯರಲ್ಲ; ಅವರೂ ನಮ್ಮೆಲ್ಲರಂತೆಯೇ ಒಬ್ಬರು, ಅವರು ಆ ನೌಕರಿ ಮಾಡುತ್ತಿದ್ದಾರೆ ಎಂಬುದು ಅರ್ಥವಾಗಬೇಕಾದ ಪ್ರಧಾನ ಅಂಶವಾಗಿದೆ. ದುಡ್ಡೇ ಎಲ್ಲವೂ ಎಂಬ ಧೋರಣೆ ತಳೆದ ಜನ ಸ್ವಹಿತವನ್ನು ಕಾಪಾಡಿಕೊಳ್ಳುತ್ತಾರೆಯೇ ವಿನಃ ಅಲ್ಲಿ ಸಾರ್ವಜನಿಕರ ಹಿತಾಸಕ್ತಿ ನಗಣ್ಯವಾಗುತ್ತದೆ. ತೀರ್ಥಹಳ್ಳಿಯ ಟಿ.ಎಸ್.ರಾಮಚಂದ್ರರಾಯರು, ಡಿವಿಜಿಯವರು ಇವರೆಲ್ಲಾ ಸಂಪಾದಕರಾಗಿದ್ದಾಗ ಅವರ ಮನೆಗಳಲ್ಲಿ ಬಂದ ಅತಿಥಿಗಳಿಗೆ ಕಾಫಿ ಕೊಡಲು ಕಷ್ಟಪಡಬೇಕಾದ ಆರ್ಥಿಕತೆ ಇತ್ತು! ಯಾಕೆಂದರೆ ಅವರು ಹಣಕ್ಕಾಗಿ ಸಂಪಾದಕೀಯವನ್ನೋ ಪತ್ರಿಕಾಧರ್ಮವನ್ನೋ ಮಾರಿಕೊಂಡವರಲ್ಲ; ಪತ್ರಿಕೆಗಳಿಂದ ಸಿಗುವ ಸಂಬಳವೋ ಆದಾಯವೋ ಅವುಗಳನ್ನು ನಡೆಸಲೇ ಸಾಲುತ್ತಿರಲಿಲ್ಲ ಎಂದಮೇಲೆ ಮನೆಗೆ ಹಣತೆಗೆದುಕೊಂಡು ಹೋಗುವುದೆಲ್ಲಿಬಂತು?  ಇನ್ನು ಬರವಣಿಗೆಯ ಶೈಲಿ ಕೈ ಹಿಡಿದಿದ್ದನ್ನು ಮನಗತ ಮಾಡಿಕೊಂಡ ಒಂದಿಬ್ಬರು ಪೀತಪತ್ರಿಕೆಗಳನ್ನು ನಡೆಸುತ್ತಾರೆ; ರೋಲ್ ಕಾಲ್ ಮಾಡಿ ಕೋಟಿಗಟ್ಟಲೆ ಹಣಗಳಿಸಿ ಈಗ ಅವರಿಗೂ ನೆಮ್ಮದಿಯಿಲ್ಲ-ಸಮಾಜದ ಹಲವರ ಮನೆಗಳಲ್ಲಿ ಅಂಥಾ ಬರಹಗಾರರ ದುರ್ದೆಸೆಯಿಂದ, ಬಹಿರ್ದೆಶೆಯಿಂದ,  ಬದುಕು ಮೂರಾಬಟ್ಟೆಯಾಗಿದೆ ಎಂಬುದೂ ಸುಳ್ಳಲ್ಲ; ಅಂಥಾ ಜನ ಶಾಲೆಗಳನ್ನು ನಡೆಸುತ್ತೇವೆ ಎನ್ನುತ್ತಾರೆ, ಅನಾಥರನ್ನು ಸಾಕುತ್ತೇವೆ ಎನ್ನುತ್ತಾರೆ ಎಲ್ಲಾ ಕಣ್ಣೊರೆಸುವ ಕುಚೋದ್ಯಗಳಾಗಿ ಕಾಡುತ್ತವೆ-ತಲೆಯಲ್ಲಿ ಸಾಮಾನುಳ್ಳವರಿಗೆ!  

ದೇವಮುಡಿಯಲ್ಲಿ ಕೂತ ಹೂವು ತಾನು ಜಗವನ್ನಾಳುವ ದೇವನ ತಲೆಯನ್ನೇರ್ ಏರಿದ್ದೇನೆ ಹೇಗಿದೆ? ಎಂದು ಬೀಗುತ್ತಿತ್ತಂತೆ, ಮಾರನೇದಿನ ನಿರ್ಮಾಲ್ಯ ವಿಸರ್ಜನೆಯ ಪೂಜೆಯಲ್ಲಿ ಅರ್ಚಕರು ಅದನ್ನು ಪ್ರಸಾದವೆಂದು ತೆಗೆದು ಒಮ್ಮೆ ಆಘ್ರಾಣಿಸಿ ಮೂಲೆಗೆಸೆದರಂತೆ; ಆನಂತರ ಅದು ಯಾವುದೋ ಮರದಬುಡದಲ್ಲಿ ಹೋಗಿಬಿದ್ದಿತೋ ಕಸಕ್ಕೇ ಸೇರಿತೋ ತಿಳಿಯದು. ಹಾಗೆಯೇ ಆಯಕಟ್ಟಿನ ಸ್ಥಳವಾದ ಸಂಪಾದಕನೆಂಬ ಹುದ್ದೆಯಲ್ಲಿ ಕುಳಿತ ಹಲವರಿಗೆ ಅವರ ಅರ್ಹತೆಗಿಂತಾ ಬಿರುದು-ಬಾವಲಿಗಳೇ ಜಾಸ್ತಿಯಾಗಿವೆ; ಎಲ್ಲೆಲ್ಲೂ ಢಾಳಾಗಿ ಅವು ಸಾರ್ವಜನಿಕರ ಕಣ್ಣಿಗೆ ರಾಚುತ್ತವೆ ಮತ್ತು ಹಾಗೆ ರಾಚಲಿ ಎಂಬುವ ಉದ್ದೇಶವೇ ಅವರಿಗೂ ಇರುವುದರಿಂದ ಸಮೂಹಸನ್ನಿಯಾದಹಾಗೇ ಸಂಪಾದಕರೆಲ್ಲಾ ಗಣ್ಯರು ಎಂದು ನಮ್ಮ ಹಿರಿತಲೆಗಳು ತಿಳಿದುಕೊಂಡುಬಿಡುತ್ತವೆ; ಹೇಗೆ ನಮ್ಮಲ್ಲಿ ಆಳರಸರೂ ಶಾಸಕರೂ, ಮಂತ್ರಿಗಳೂ ಜನಪ್ರತಿನಿಧಿಗಳು-ಸಾರ್ವಜನಿಕರ ಕೆಲಸಗಾರರು ಎಂಬುದನ್ನು ಮರೆತು ಅವರಿಗೆಲ್ಲಾ ನಾವು ಡೊಗ್ಗು ಸಲಾಮು ಹೊಡೆಯುತ್ತೇವೋ ಹಾಗೆಯೇ. ಮಾಧ್ಯಮಗಳಲ್ಲಿ ಬರುವ ವರದಿಗಳ ಸತ್ಯಾಸತ್ಯತೆಯ ಬಗ್ಗೆ ಹೊಸದಾಗೇನೂ ಹೇಳುವುದೇ ಬೇಕಿಲ್ಲ; ಯಾಕೆಂದರೆ ಅದು ಯಾರಿಗೂ ಗೊತ್ತಿರದ ಗಮ್ಮತ್ತಿನ ವಿಷಯವೇ ಅಲ್ಲ; ಟಿ.ಆರ್.ಪಿ ಹೆಚ್ಚಿಸಿಕೊಂಡು ಹಲವುಕೋಟಿಗಳ ಜಾಹೀರಾತುಗಳನ್ನು ಸುಲಭವಾಗಿ ಪಡೆಯಬಹುದಲ್ಲಾ ಅಲ್ಲವೇ?

ಹೂವುಗಳು ಲಕ್ಷಾಂತರವಿದ್ದರೂ ದೇವಮುಡಿಗೆ ಏರುವ ಹೂವಿಗೆ ಯೋಗ ಇರಬೇಕು; ಹೂವು ಶವಗಳಿಗೂ ಹೋಗಬಹುದು, ರಾಜಕಾರಣಿಗಳ ಹಾರ-ತುರಾಯಿಗಳಿಗೂ ಹೋಗಬಹುದು, ಅಥವಾ ಇನ್ನಾವುದೋ ಅಲಂಕಾರಕ್ಕೂ ಬಳಸಲ್ಪಡಬಹುದು, ಯಾರಿಗೂ ಕಾಣದೇ ಬಾಡಿ ಹೋಗಲೂಬಹುದು. ಅದೇ ರೀತಿ ಯೋಗದಿಂದ ಅಥವಾ ಅದೃಷ್ಟದಿಂದ ಕೆಲವರು ಹುದ್ದೆಗಳನ್ನು ಅಲಂಕರಿಸುತ್ತಾರೆ; ಮಾಜಿಯಾಗಿರುವ ’ಮಣ್ಣಿನಮಗ’ ಇರುವ ಈ ನಾಡಿನಲ್ಲಿ ಅದೃಷ್ಟಕ್ಕೆ ಹೊಸ ಉದಾಹರಣೆ ಬೇಕೇ? ರೈತರೆಲ್ಲಾ ಮಣ್ಣಿನಮಕ್ಕಳೇ, ಆದರೆ ಮಣ್ಣಿನಮಗ ರೈತ ಎಂದು ಯಾರಾದರೂ ಒಪ್ಪಿಕೊಳ್ಳಲು ಸಾಧ್ಯವೇ? ಹೀಗಾಗಿ ಅದೃಷ್ಟದಿಂದ ಸಿಕ್ಕ ಹುದ್ದೆಯಲ್ಲೇ ನಾನಾ ಕಸರತ್ತುನಡೆಸಿ ಮತ್ತಷ್ಟು ಪ್ರಚಾರ, ಪ್ರಭಾವಳಿ ಗಿಟ್ಟಿಸಿಕೊಳ್ಳುವುದು ಕೆಲವರ ಜಾಯಮಾನ. ಅದೃಷ್ಟ ಇರುವವರೆಗೆ ಹೂವು ದೇವರ ಪಲ್ಲಕ್ಕಿಯಲ್ಲೇ ಇರುತ್ತದೆ! ಅದೇ ರೀತಿ ಅದೃಷ್ಟದಿಂದ ಪಡೆದ ಹುದ್ದೆಯಲ್ಲಿ ಮತ್ತದೇ ಅದೃಷ್ಟದಿಂದ ರಾಜಕೀಯ ನಡೆಸಿ ಇನ್ನಷ್ಟು ಸೌಲಭ್ಯಗಳನ್ನೂ ಸೌಕರ್ಯಗಳನ್ನೂ ಪಡೆದುಕೊಳ್ಳುವುದು ಕಂಡ ನಗ್ನಸತ್ಯ. ಅದೃಷ್ಟ ಖುಲಾಯಿಸಿದಾಗ ಪತ್ರಿಕಾ ಸಂಪಾದಕನೊಬ್ಬ ಝಡ್ ಕೆಟೆಗರಿ ಸೆಕ್ಯುರಿಟಿಯನ್ನೂ ಪಡೆಯಬಹುದು ಎಂದು ಓದಿತಿಳಿದ-ಅರ್ಥವಿಲ್ಲದ ಸಂಗತಿ. ಸಂಪಾದಕನೊಬ್ಬನಿಗೆ ಆ ಮಟ್ಟದ ಹೆದರಿಕೆ ಉಂಟಾಗುವಷ್ಟು, ಈ ಸಮಾಜ ಅಷ್ಟೊಂದು ಅಧಃಪತನಕ್ಕಿಳಿದಿದೆ ಎಂದರೆ ಹಾಗೆ ಸಮಾಜವನ್ನು ರೂಪುಗೊಳಿಸಿದ ಔದಾರ್ಯಕರ್ಮವನ್ನು ಮಾಧ್ಯಮವೇ ಹೊತ್ತುಕೊಳ್ಳಬೇಕಾಗುತ್ತದೆ; ಅಂತಹ ಸಮಾಜದ ಜಾತಃಕರ್ಮದಿಂದ ಅಂತ್ಯೇಷ್ಟಿಯವರೆಗಿನ ಸಕಲ ಸಂಸ್ಕಾರಗಳನ್ನೂ ಅದೇ ಮಾಧ್ಯಮ ನಡೆಸಿಕೊಡಬೇಕಾದ ಔಚಿತ್ಯವಿದೆ!      

ಪತ್ರಿಕೆ/ಮಾಧ್ಯಮ ಎಂಬುದು ಸಾರ್ವಜನಿಕರ ಮುಖವಾಣಿ ಎಂಬುದನ್ನು ಮರೆತು, ಅಲ್ಲಿ ಕೇವಲ ಸ್ವಾರ್ಥಲಾಲಸೆಯಿಂದಲೂ ಪ್ರಚಾರಪ್ರಿಯತೆಯಿಂದಲೂ ಪತ್ರಿಕಾಕರ್ತರೇ ಪರಸ್ಪರ ಕಚ್ಚಾಡಿಕೊಳ್ಳುವುದು ಎಂಥಾ ಹಾಸ್ಯಾಸ್ಪದ ವಿಷಯವೆಂದರೆ ಇಂಥವರೂ ಸಮಾಜವನ್ನು ತಿದ್ದುವ ಸಂಪಾದಕರುಗಳಾಗುತ್ತಾರೆ! ಒಬ್ಬ ಎಲೆಯಡಿಕೆ ಉಗುಳಿನ ಬಗ್ಗೆ ಬರೆದರೆ ಮತ್ತೊಬ್ಬ ಚರಂಡಿಯ ನೀರನ್ನು ಎತ್ತಿ ಎರಚಿದ ಬಗ್ಗೆ ಬರೆಯುತ್ತಾನೆ. ಜಗತ್ತಿಗೆಲ್ಲಾ ಸೂರ್ಯನೇ ತಾನೆಂದೂ, ತಾನು ರಿವಾಜಿನಂತೇ ಜೇಬಿನಿಂದ ಹೊರತೆಗೆದದ್ದೇ ಬಂದೂಕೆಂದೂ, ಹಾರಿಸಿದ ಪೀತ ಬರಹಗಳೇ ಶಿಕಾರಿಯೆಂದೂ ಕೊಚ್ಚಿಕೊಳ್ಳುವ ವ್ಯಕ್ತಿಯೊಬ್ಬನ ಪತ್ರಿಕೆ ಪೂರ್ತಿ ಅವನ ವೈಭೋಗಗಳದೇ ರಾಡಿ! ತನ್ನ ಆ ಪುಸ್ತಕ ಇಷ್ಟು ಲಕ್ಷ ಖರ್ಚು ತನ್ನ ಈ ಪುಸ್ತಕ ಅಷ್ಟು ಸಾವಿರ ಪ್ರತಿ ಈಗಾಗಲೇ ಸೋಲ್ಡ್ ಔಟ್ ಎಂದು ಮೀಸೆತಿರುವುವ ಮೂರೂಬಿಟ್ಟ ಯಜಮಾನರಿಗೆ ನೈತಿಕತೆ ಮತ್ತು ಅನೈತಿಕತೆಗಳ ಅಂತರ ಮತ್ತು ಅರ್ಥ ಎರಡೂ ಗೊತ್ತಿಲ್ಲ! ಊದಿದ ಪುಂಗಿಯನ್ನೇ ಊದುತ್ತಿದ್ದರೂ, ಸದಾ ಆಲೈಸುವ ಹೆಡ್ಡ ನಾಗಗಳು ’ತುಸು ಬುಸುಗುಟ್ಟಿದರೂ ಎಲ್ಲಾದರೂ ಅದೇ ಪುಂಗಿಯಿಂದ ಆತ ಬಡಿದು ಸಾಯಿಸಬಹುದು’ ಎಂದು ಹೆದರಿಕೊಂಡು ಬಾಲಮಡಚಿಕೊಂಡಿವೆ ಎಂಬುದು ಅಷ್ಟೇ ಸತ್ಯ. ತಮ್ಮದೇ ಗಟಾರಗಳಲ್ಲಿ ಮುಳುಗಿ ನಾತ ಬೀರುತ್ತಿರುವ ಇಂಥವರೇ ಗಟಾರಭಾತ್ಮೆಗಳನ್ನು ಸೃಷ್ಟಿಸಿ ಬರೆಯುವ ಚಾಕಚಕ್ಯತೆ ಉಳ್ಳವರೆಂಬುದು ಸುಳ್ಳಲ್ಲ, ಆದರೆ ಅಂಥಾ ಪೀತಬರಹಗಳೇ ಜನರಿಗೆ ಬೇಕಾಯ್ತೇ ಎಂಬುದು ಬಹುದೊಡ್ಡ ಪ್ರಶ್ನೆ; ಉತ್ತರಿಸುವವರಿಲ್ಲ! ಕುಡಿದೂ ಕುಡಿದೂ ಕುಡಿದೂ ಮೈಗೊಂಡುಹೋದಹಾಗೇ ಪೀತಸಾಹಿತ್ಯವನ್ನೇ ಓದಿ ಮಜಾಪಡೆಯುವ ವರ್ಗವೇ ಜಾಸ್ತಿ ಆಗಿದೆಯೇನೋ ಎಂಬ ಭಾವನೆ ಬರುತ್ತಿದೆ. ಯಾಕೆಂದರೆ ಪ್ರತಿನಿತ್ಯ ವಾಹಿನಿಗಳಲ್ಲಿ ಬರುವ ಅನೈತಿಕ ಸಂಬಂಧಗಳ ಕುರಿತಾದ ಅತಿವಿಜೃಂಭಿತ ವರದಿಗಳು ಅದನ್ನು ಸಾಬೀತುಪಡಿಸುತ್ತವೆ!

ಇನ್ನು ಸಾಹಿತಿಗಳು ತಾವೆಂದುಕೊಳ್ಳುವ ಕೆಲವು ಪತ್ರಿಕಾಕರ್ತರ ಬಗ್ಗೆ, ಅವರು ಬರೆದ ಪುಸ್ತಕಗಳ ಬಗ್ಗೆ ಹೇಳುವುದಾದರೆ ರಟ್ಟೆಗಾತ್ರದ ಪುಸ್ತಕಗಳಲ್ಲಿ ಹೇಳಿಕೊಳ್ಳುವ ಅಂಥಾದ್ದೇನಿದೆ ಎಂಬುದು ಎಲ್ಲೂ ಕಾಣುತ್ತಿಲ್ಲ; ಪುಸ್ತಕಗಳನ್ನು ಬರೆದದ್ದು ಯಾರೋ ಹೆಸರು ಇನ್ಯಾರದೋ ಆದ ಕೆಲವು ಘಟನೆಗಳ ಬಗ್ಗೆಯೂ ಕೇಳಿ ತಿಳಿದಿದ್ದೇನೆ. ಮೂಲ ಕೃತಿಗಳ ಅನುವಾದಗಳಂತೂ ದೇವರಿಗೇ ಪ್ರೀತಿ; ತಲೆದಿಂಬಿಗೆ ಪರ್ಯಾಯವೆನಲೂ ಗಡಸುತನದಿಂದ ಕುತ್ತಿಗೆ ನೋವು ಆದರೆ ಕಷ್ಟ! ನಿದ್ರೆ ಬಾರದ ಯಾರಾದರೂ ಇದ್ದರೆ ನಾನು ಕೆಲವು ಪುಸ್ತಕಗಳನ್ನು ಓದಲು ಕೊಡಬಹುದು, ಮಾರು ದೂರ ಕಂಡರೂ ಸಾಕು ನಿದ್ದೆ ಆರಂಭವಾಗಿಬಿಡುತ್ತದೆ. ಎಲ್ಲಾ ಬೆಕ್ಕುಗಳು ಹಾಲನ್ನೇ ಇಷ್ಟಪಟ್ಟರೆ ತೆನ್ನಾಲಿಯ ಬೆಕ್ಕು ಹಾಲನ್ನು ಕಂಡು ಓಡುತ್ತಿತ್ತು ಎಂಬ ಕಥೆ ಕೇಳಿರುವಿರಲ್ಲ? ಸಾಹಿತ್ಯದಲ್ಲಿ ಅನಾಸಕ್ತಿ ಹುಟ್ಟಬೇಕೆಂದರೆ ಅಂಥಾ ನಾಕು ಪುಸ್ತಕಗಳೇ ಸಾಕು! ನಾಳಿನದಿನ ಅಂಥಾ ಕೃತಿಗಳಿಗೂ ’ಜ್ಞಾನಪೀಠ’ ಬಂದರೆ ಆಶ್ಚರ್ಯವಿಲ್ಲ. ಇಂಥಾ ಸಾಹಿತಿಗಳಲ್ಲಿ ಅನೇಕರು ತಮ್ಮ ಶಂಖಗಳಲ್ಲಿ ಏನನ್ನೋ ಹಾಕಿಕೊಂಡು ಇಗೋ ತೀರ್ಥ ಎಂದು ಎರಚಿದರೆ ಬೊಗಸೆಹಿಡಿದು ಕುಡಿಯುವ ದಡ್ಡಮಂದಿಗೆ ಅದರ ಪರಾಮರ್ಶೆಮಾಡುವ ಯೋಗ್ಯತೆ ಇಲ್ಲದ್ದು ತಿಳಿಯುತ್ತದೆ; ಹಿಮಾಲಯವನ್ನು ಅಳೆಯಲು ಮಾರುದ್ದದ ಮೀಟರ್ ಪಟ್ಟಿ ಸಾಕು ಎಂದು ಜ್ಞಾತಿಗಳೊಬ್ಬರು ಹೇಳಿದ್ದರು-ಅದರಂತೇ ಓದುಗರು ಅಳೆಯುವ ಪಟ್ಟಿಯಾಗದಷ್ಟು ದಡ್ಡರೇ? ಎಂಬುದು ಅರ್ಥವಾಗದ ರಹಸ್ಯ; ಅದು ವ್ಯಕ್ತಿಗತ ಅಂಧಾಭಿಮಾನವೂ ಇರಬಹುದು! ಏನನ್ನು ಓದಬೇಕು ಏನನ್ನು ಓದಬಾರದು ಅಥವಾ ಏನನ್ನು ಯಾವಾಗ ಎಷ್ಟರಮಟ್ಟಿಗೆ ಓದಬೇಕು ಎಂಬುದು ಓದುಗ ಮಹಾಶಯರಿಗೆ ಬಿಟ್ಟ ವಿಷಯವಾಗಿದೆ;ಅದು ಅವರವರ ಆಯ್ಕೆಯಾಗಿದೆ. ಸಾವಿರ ಸಾವಿರ ಪುಸ್ತಕಗಳ ರಾಶಿ ಹಾಕಿದರೂ ಗಂಟೆಗಳಲ್ಲಿ ಅವುಗಳನ್ನು ಅಳೆದು-ಸುರಿದು ಯಾವುದನ್ನು ಓದಲೇಬೇಕು, ಯಾವುದನ್ನು ಓದಬೇಕು, ಯಾವುದನ್ನು ಓದಬಹುದು, ಯಾವುದನ್ನು ಓದಿದರೆ ಪರವಾಯಿಲ್ಲ, ಯಾವುದನ್ನು ಓದಲೇಬಾರದು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಸದ್ಯ ನನಗೆ ದಕ್ಕಿದೆ, ಅದು ಸತತ ಓದಿನಿಂದ ಹಲವರಿಗೆ ದಕ್ಕಲೂ ಬಹುದು. ಯಾವುದೋ ಪುಸ್ತಕವನ್ನು ಓದುವುದಿಲ್ಲ ಎಂದರೆ ಅದು ನನ್ನ ಓದಿನ ವ್ಯಾಪ್ತಿಗೆ ಬರುವುದಿಲ್ಲ ಎಂಬರ್ಥವೇ ಹೊರತು ಅದು ಧಿಮಾಕಿನ ವಿಷಯವಾಗಿರುವುದಿಲ್ಲ. ಹೇಗೆ ಔತಣ ಕೂಟದ ಊಟದ ತಟ್ಟೆಯಲ್ಲಿರುವ ಎಲ್ಲಾ ಖಾದ್ಯಗಳನ್ನೂ ಎಲ್ಲರೂ ತಿನ್ನುತ್ತಾರೆ ಎಂಬ ನಿಗದಿಯಿಲ್ಲವೋ ಹಾಗೆಯೇ ಓದು ಕೂಡ ಐಚ್ಛಿಕ, ಅದು ಬಲವಂತದ ಮಾಘಸ್ನಾನವಲ್ಲ.            

’ಕನ್ನಡಪ್ರಭ’ದ ವಿಶ್ವೇಶ್ವರಭಟ್ಟರು ದಿ| ಶಿವರಾಮ ಕಾರಂತರ ಉದಾಹರಣೆಯನ್ನು ’ಅಡಾಸಿಟಿ’ ಎಂಬ ಆಂಗ್ಲಪದವನ್ನು ಉದ್ದರಿಸುವುದಕ್ಕೆ ತಮ್ಮ ೬.೧೨.೨೦೧೨ರ ವ್ಯಾಖ್ಯಾನದಲ್ಲಿ ಮಂಡಿಸಿದ್ದರು, ಆ ಕುರಿತು ಕೆಲವು ಕಡೆ ಪ್ರಸ್ತಾಪಗಳು ಆಗುತ್ತಿರುವುದು ಕಂಡುಬಂದಿದೆ. ’ಭಾಷಾತಜ್ಞ’ ಭಟ್ಟರು ಸೊಕ್ಕು ಮತ್ತು ಧಿಮಾಕು ಎಂಬ ಪದಗಳಿಗೆ ಭಾಷ್ಯವನ್ನು ಬರೆಯಲು ಹವಣಿಸಿ, ಕಾರಂತರ ಜೀವನದ ಒಂದು ಘಟನೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಕಾರಂತರಿಗಿದ್ದಿದ್ದು ಧಿಮಾಕೇ ಹೊರತು ಸೊಕ್ಕಲ್ಲ, ಸಾಕಷ್ಟು ವಿದ್ವತ್ತು ಮತ್ತು ವಿಷಯ ಪ್ರೌಢಿಮೆ ಇರುವ ವ್ಯಕ್ತಿಗೆ ಧಿಮಾಕು ಇದ್ದರೆ ತಪ್ಪಲ್ಲ ಎಂದು ಅಪ್ಪಣೆಕೊಡಿಸಿಬಿಟ್ಟಿದ್ದಾರೆ. ಇಲ್ಲಿ ಅವರಿಗೆ ಒಂದು ಮಾತನ್ನು ತಿಳಿಸಬಯಸುತ್ತೇನೆ ಏನೆಂದರೆ: ಕಾರಂತರಿಗೆ ಸೊಕ್ಕು, ಧಿಮಾಕು ಎರಡೂ ಇರಲಿಲ್ಲ; ಬದಲಾಗಿ ಅವರ ವ್ವಭಾವವೇ ವಿಶಿಷ್ಟವಾಗಿತ್ತು. ಕಾರಂತರು ಬದುಕಿನಲ್ಲಿ ಅನುಭವಕ್ಕಾಗಿ, ಮಾಹಿತಿಗಾಗಿ ಸ್ವಂತ ಆಸ್ತಿಯನ್ನು ಮಾರಿ ವಿದೇಶಕ್ಕೆ ತೆರಳಿದ್ದರು, [ಮೀಸಾಕಾಯ್ದೆಯಲ್ಲಿ ಹಲವು ದೇಶಭಕ್ತರನ್ನು ಇಂದಿರಾಗಾಂಧಿ ಬಂಧಿಸಿದ್ದ ಕಾಲದಲ್ಲಿ] ತಮಗೆ ಕೊಡಮಾಡಿದ ಪದ್ಮಪ್ರಶಸ್ತಿಯನ್ನು ಮರಳಿ ಬಿಸುಟಿದ್ದರು, ಓಡಾಡುವಾಗ ವಾಹನದಲ್ಲಿ ವಾಹನ ಚಲಿಸುವ ದಿಕ್ಕಿಗೆ ವಿರುದ್ಧ ಮುಖದಲ್ಲಿ ಎಂದೂ ಕೂರುತ್ತಿರಲಿಲ್ಲ, ಬೆಳಿಗ್ಗೆ ಸೂರ್ಯೋದಯದ ನಂತರವೇ ಆರಂಭವಾಗುವ ಅವರ ಯಾನ ಸೂರ್ಯಾಸ್ತದ ನಂತರ ಇರುವಲ್ಲೇ ನಿಂತುಬಿಡಬೇಕಿತ್ತು-ಇವೆಲ್ಲಾ ಅವರ ರಿವಾಜುಗಳು. ಅದರಂತೇ ಓದಿಗೂ ಕೂಡ ಅವರು ಅವರದ್ದೇ ಆದ ಚೌಕಟ್ಟನ್ನು ರೂಪಿಸಿಕೊಂಡಿದ್ದರು. ಬಹುಪಠಿತ್ವದ ಪಂಡಿತರಾದ ಕಾರಂತರಿಗೆ ಭಟ್ಟರು ಹೇಳಿದ ಕನ್ನಡದ ಹಿರಿಯ ಕವಿಯ ಕವನಗಳು ಹಿಡಿಸದಿದ್ದುದಕ್ಕೆ ಕಾರಣವಿರಬಹುದು. ಆ ಹಿನ್ನೆಲೆಯಲ್ಲಿ ಕಾರಂತರು "ನಿಮ್ಮ ಕಾವ್ಯಗಳನ್ನು ಓದುವುದು ನನಗೆ ಕಷ್ಟ, ನಿಮ್ಮ ಪುಸ್ತಕದ ಬಿಡುಗಡೆಗೆ ನಾನು ಬರಲಾರೆ" ಎಂದು ಹೇಳಿದ್ದಿರಬಹುದು; ಅದು ಅವರ ಸಹಜ ಪ್ರವೃತ್ತಿ. ಕಾರಂತರು ಒಳಗೊಂದು ಹೊರಗೊಂದು ಇಟ್ಟುಕೊಂಡ ಜನವಲ್ಲ; ಯಾವುದನ್ನು ಹೇಳುತ್ತಿದ್ದರೋ ಅದನ್ನೇ ಮಾಡುತ್ತಿದ್ದರು. ಕೇವಲ ಹೊರಜನರ ದೃಷ್ಟಿಕೋನದಿಂದ ಅದನ್ನು ಅಳೆದು ಅವರಿಗೆ ಧಿಮಾಕಿತ್ತು ’ಅಡಾಸಿಟಿ’ಗೆ ಅದು ಉದಾಹರಣೆ ಎಂಬುದು ಭಟ್ಟರ ಮಾಡಿದ ಅನರ್ಥವಾಗಿದೆ. ಮುಕ್ತವಾಗಿ ಹೇಳ್ಬೇಕೆಂದರೆ ಭಾಷೆ ಕರತಲಾಮಲಕವಾಗಿದೆ ಎಂಬ ಸೊಕ್ಕಿಗೆ ಉದಾಹರಣೆ ನಮ್ಮ ಭಟ್ಟರು ಎಂದರೆ ತಪ್ಪಾಗಲಾರದಲ್ಲ! 

’ಅಂಡೆಪಿರ್ಕಿ’ ಎಂಬ ಪದವನ್ನು ತಿಂಗಳಾನು ಗಟ್ಟಲೆ ಧಾರಾವಾಹಿಯಂತೇ ವಿಜಯಕರ್ನಾಟಕದಲ್ಲಿ ಕೊರೆದಿದ್ದ ಭಟ್ಟರು ಅಲ್ಲಿಯೂ ಈಗಿರುವ ’ಕನ್ನಡಪ್ರಭ’ದಲ್ಲಿಯೂ ರಿಚರ್ಡ್ ಬ್ರಾನ್ಸನ್ ಮತ್ತು ಐಪಾಡ್ ಇಂತಹ ಕೆಲವು ವಿಷಯಗಳನ್ನು ಬಿಟ್ಟು ಬೇರೇ ಪ್ರಪಂಚದ ಪರಿಮಾರ್ಜನೆಗೆ ತೊಡಗಿಕೊಳ್ಳಲಿಲ್ಲ. ಹೆಚ್ಚೆಂದರೆ ಚೀನಾ ಗೋಡೆಯಮೇಲೆ ಅವರು ನಡೆದಿದ್ದು-ನಿಂತಿದ್ದು, ಪ್ರಧಾನಿಯ ಜೊತೆ ವಿಮಾನಯಾನದಲ್ಲಿ ಸಹಯಾತ್ರೆ ಮಾಡಿದ್ದು ಇಂಥಾ ಹೈಲೆವೆಲ್ ಪ್ರವಾಸಗಳ ಕುರಿತು ಕೆಲವು ದಿನ ಕೊರೆದಿದ್ದು-ಕೊಚ್ಚಿಕೊಂಡಿದ್ದು  ಬಿಟ್ಟರೆ ಕನ್ನಡಸಾಹಿತ್ಯದ ಮಜಲುಗಳ ಮತ್ತು ಅದರ ಆಳಗಲಗಳ ಬಗೆಗಿನ ಘನಪಾಂಡಿತ್ಯ ಭಟ್ಟರಿಗೆ ಸಿದ್ಧಿಸಲಿಲ್ಲ ಎಂಬುದನ್ನು ಅನೌಪಚಾರಿಕವಾಗಿ ಒಪ್ಪಬೇಕಾದ ವಿಷಯವಾಗಿದೆ. ’ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್’ ಎಂದ ಕನ್ನಡಕವಿಯ ಒಕ್ಕಣೆಯಂತೇ, ಕುಳಿತಲ್ಲೇ ಏನನ್ನೂ ಓದದೇ ಕೆಲವರು ಪಂಡಿತರಾಗಲೂ ಬಹುದು ಎಂಬುದು ಅಂದೇ ಸಾಧ್ಯವಾಗಿತ್ತು ಎನಿಸುತ್ತದಲ್ಲಾ ಅಂತೆಯೇ ಭಟ್ಟರೂ ಕೂಡ ಹಾಗೇ ಪಂಡಿತವರ್ಗದಲ್ಲಿ ಸೇರಿರುವುದರ ಜೊತೆಗೆ ಮಹಾಪಂಡಿತ ಎಂಬ ಬಿರುದನ್ನೂ ಪಡೆಯಲು ಅವಿರತ ತೊಡಗಿಕೊಂಡಿರುವುದು ವೇದ್ಯವಾಗುತ್ತದೆ. ಹೀಗಾಗಿ ಅವರು ಆಗಾಗ ಹಿರಿಯ ಕವಿ-ಸಾಹಿತಿಗಳ ಸುತ್ತ ಮತ್ತು ಯಾವುದೋ ಕೆಲವೊಂದು ಪದಗಳ ಸುತ್ತ ಗಿರಕಿಹೊಡೆಯಲು ಆರಂಭಿಸಿ ತಲೆಸುತ್ತು ಬಂದು ಸುಸ್ತಾದವರಂತೇ ಕಾಣಿಸುತ್ತಾರೆ!  ರಾಜಕೀಯದಲ್ಲಿ, ಪ್ರಭಾವಲಯ ಸೃಷ್ಟಿಸುವುದರಲ್ಲಿ ಮತ್ತು ತಾನು ’ಮಹಾಪಂಡಿತ’ ಎನಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಅವರಿಗೆ ಪ್ರಾವೀಣ್ಯತೆ ಇದೆ ಎಂಬುದು ಸುಳ್ಳಲ್ಲ. ಹಾಗೆಂದೇ ಗಿಂಡಿ ಹಿಡಿದವರು, ಪ್ರಪಂಚ ಬೆತ್ತಲುಮಾಡುವವರು, ಬುಡಬುಡಿಕೆ ಬಾರಿಸುವವರು, ರೀಡರ್ಸ್ ಡೈಜೆಸ್ಟ್ ಲೇಖನಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸುವವರು  ಮೊದಲಾದವರೆಲ್ಲಾ ಸದಾ ಬೆತ್ತವನ್ನೋ ಕತ್ತಿಯನ್ನೋ  ಹಿಡಿದ ’ಕರಗ’ದ ವ್ರತಧಾರಿಗಳಂತೇ ಅವರ ಸುತ್ತ ’ಸಭಾರತ್ನ’ಗಳಾಗಿ ಶೋಭಿಸುತ್ತಾರೆ! ಹೋಗಲಿ ಬಿಡಿ ಪತ್ರಕರ್ತರೆಲ್ಲಾ ಸಾಹಿತಿಗಳಾಗಬೇಕೆಂದೇನೂ ಇಲ್ಲ, ಅಥವಾ ಸಾಹಿತಿಗಳೆಲ್ಲಾ ಪತ್ರಕರ್ತರಾಗಬೇಕೆಂದೂ ಇಲ್ಲ, ಎರಡನ್ನೂ ಏಕಕಾಲಕ್ಕೆ ಸಾಧಿಸಿದ, ಸಾಮಾಜಿಕ ನಿಲುವನ್ನು ವಾದಿಸಿದ ಕೆಲ ಮಹಾತ್ಮರು ನಮ್ಮಲ್ಲಿ ಆಗಿಹೋಗಿದ್ದಾರೆ; ಸಾಹಿತಿ-ಪರ್ತಕರ್ತರೆಂದೆನಿಸಿಕೊಳ್ಳುವ ತುರಿಕೆಯುಳ್ಳವರು ಅಂಥಾ ಮಹಾತ್ಮರ ನಡೆಯನ್ನು ಗಮನಿಸಿ, ಅವರ ಹಾದಿಯಲ್ಲಿ ನಡೆದರೆ ಒಳಿತಾಗುತ್ತಿತ್ತು; ಆದರೆ ಅಂಥಾ ಪತ್ರಕರ್ತರಿಗೆ ಗಂಟಕೀಳಲು ಆಗುತ್ತಿರಲಿಲ್ಲ ಎಂಬುದೂ ಗಮನಿಸಬೇಕಾದ ತಾತ್ಪರ್ಯ. ಹಾಗೊಮ್ಮೆ ತಿರುತಿರುಗಿ ಅವಲೋಕಿಸಿದಾಗ ಭಟ್ಟರ  ತುತ್ತೂರಿ ಬಣ್ಣದ ತಗಡಿನದ್ದೆನಿಸಿದರೆ ಕಾರಂತರಂಥಾ ಶಕ್ತಿ ಮೇರು ಪರ್ವತವಾಗಿ ಕಾಣುತ್ತಾರೆ; ಜಾತ್ರೆ ಮುಗಿದರೂ ಜನ ಮರೆಯದ ಕನ್ನಡದ ಕೆಲವು ವ್ಯಕ್ತಿತ್ವಗಳಲ್ಲಿ ಕಾರಂತರೂ ಒಬ್ಬರು-ಅವರು ಭಟ್ಟರ ನಿಮ್ನ ಪದಗಳಿಗೆ ನಿಲುಕುವ ಸಣ್ಣ ಜನ ಅಲ್ಲ ಬಿಡಿ!   


Thursday, December 13, 2012

ಮಂಜಿನ ಮಧುಬಾಲೆ !

ಚಿತ್ರಋಣ: ಅಂತರ್ಜಾಲ
ಮಂಜಿನ ಮಧುಬಾಲೆ !

[ಚಳಿಗಾಲದ ಮುಂಜಾವಿನ ದೃಶ್ಯಕ್ಕೊಂದು ಕವನ] 

ಕಾನನದ ಅಂಚಿನಲಿ ಭೂರಮೆಯ ಸಂಚಿಯಲಿ
ಬಾನಗಲ ಕೆಂಪಡರಿ ಬೆಳಕುs ಹರಿದೂ
ತಾನ ತಾನನವೆಂಬ ಹಕ್ಕಿಗಳು ಚುಂಚಿನಲಿ
ಯಾನವಾರಂಭಿಸೆ ಲಲ್ಲೆsಗರೆದೂ 

ಭಾನು ರಥವೇರಿಬರೆ-ಮೇನೆಯಡರಿದ ತೆರದಿ
ಕೋನದಲಿ ಮರಗಳವು ಸಾಲು ನಿಂದು
ತಾನು ತಾನೆನ್ನುತ್ತ ಛಂಗನೋಡುವ ಭರದಿ
ದೀನಕಂಗಳ ಹರಿಣsಗಳವು ಸಂದು

ಧ್ಯಾನದಲಿ ಭಕ ಸಾಧು ಗಂಟೆಗಟ್ಟಲೆ ಹೊತ್ತು
ಮೀನುಗಳ ಹಂಬಲಿಸಿ ಮಡುವಿನಲ್ಲಿ
ಯೇನಕೇನದಿ ಕೆಲವು ಮತ್ಸ್ಯಗಳಿಗೆ ಕುತ್ತು
ಹೀನ ಸನ್ಯಾಸಿಯ ಗೊಡವೆಯಲ್ಲಿ !

ಮಾನ ಮುಚ್ಚಿಕೊಂಬ ಷೋಡಶಿ ಮೋಡಗಳು 
ಊನವ ಮರೆಮಾಚಿ ವಿವಿಧಾಕಾರ !
ಧೇನು-ಕರುಗಳ ಕೂಗು ದೂರದ ಕಾಡುಗಳ
ಧೇನಿಸಿ ಹಸಿಹುಲ್ಲು ಹಸಿರಾಹಾರ

ಸಾನುರಾಗದಿ ಸಖನ ಸೇವಿಪ ಈ ಭೂಮಿ
ಕಾನೂನು ಇಹ ರೀತಿ ಮಾಘದಲ್ಲಿ
ಸೇನೆ ನುಗ್ಗಿದಂತೆ ಸುರಿದು ಮಂಜನು ಚಿಮ್ಮಿ
ಮೌನಿಯಾ ಕೆಳೆರಾಯ ರಾಗದಲ್ಲಿ ! 

ಜೇನುಗಳು ಗುಂಯ್ಯೆಂದು ಹೂಗಳ ಮಕರಂದ- 
ಪಾನದ ಸಮಯಕ್ಕೆ ಸೋಬಾನೆಯು
ಸ್ನಾನದಿ ಶುಚಿಗೊಂಬ ಧರಣಿ ಮಂಜಲಿ ಮಿಂದು 
ಮ್ಲಾನವದನೆಯಾಗಿ ಮಧುಬಾಲೆಯು

Sunday, December 9, 2012

ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಚಿತ್ರಋಣ :ಅಂತರ್ಜಾಲ
ನಿನ್ನನಿನಿಸು ಹರುಷಗೊಳಿಸೆ ಬರೆದೆ ಬರಹವ; ಇನ್ನದೆಂತು ನೋಡಿನಗುತಲೊರೆವೆ ಸರಸವ ?

ಮಹಾಸ್ವಾನಿಗಳು ಮೈತುಂಬಾ ಕೆಂಪುಶಾಲನ್ನು ಹೊದ್ದಿದ್ದರು. ತಲೆಗೆ ಕೆಂಪು ರೇಷ್ಮೆಯ ಮುಂಡಾಸನ್ನು ಸುತ್ತಿದ್ದರು. ಹಣೆಯಲ್ಲಿ ಧರಿಸಿದ್ದ ವಿಭೂತಿಯ ಅವಶೇಷವೂ ಇತ್ತು. ನಿಧಾನವಾಗಿ ಭಾವುಕರಾಗಿ,  ಇಳಿಸಂಜೆ ಮೋಡಕವಿದ ವಾತಾವರಣದಲ್ಲಿ ಗಾಂಧೀಬಜಾರಿನಲ್ಲಿ ಹೆಜ್ಜೆಹಾಕುತ್ತಿದ್ದಾಗ ದೂರದಿಂದಲೇ ಇದನ್ನು ಕಂಡು ಜಂಗಮರೊಬ್ಬರು ಓಡೋಡಿ ಬಂದರು. ನಮಸ್ಕರಿಸುತ್ತಾ "ಶರಣು, ತಮ್ಮದು ಯಾವ ಮಠ?" ನಮ್ಮ ಮಹಾಸ್ವಾಮಿಗಳು ಉತ್ತರಿಸದರು "ನಮ್ಮದು ತಿಮ್ಮಲಿಂಗದೇವರ ಮಠ." ಆಗ ಜಂಗಮರು "ಏನಾದರೂ ತತ್ವ ಅಪ್ಪಣೆಯಾಗಬೇಕು" ಎಂದರು. ಸಂತೋಷಗೊಂಡ ಮಹಾಸ್ವಾಮಿಗಳು ಜಂಗಮರನ್ನು ಬಸವನಗುಡಿಯ ಕ್ಲಬ್ ಎದುರಿಗಿರುವ ಸಣ್ಣ ಉದ್ಯಾನಕ್ಕೆ ಕರೆದೊಯ್ದರು. ಸಂಜೆಯವೇಳೆ ಕ್ಲಬ್ಬಿಗೆ ಬರಬಹುದಾದ ತಮ್ಮ ಪರಿಚಿತರಿಗೆ ಕಾಣದಂತೇ ಕುಳಿತು ತತ್ವಪದಳನ್ನು ಆಶುವಾಗಿ ಕಟ್ಟಿಹೇಳಿದರು:

ನವಕೋಟಿ ಹಣವೇನು ಶಿವಭಕ್ತಿಯಿಲ್ಲದೇ-ಜಂಗಮಯ್ಯ |
ಶಿವಭಕ್ತಿಯಿರುವಾಗ ನವಕೋಟಿ ಹಣವೇಕೆ? ಜಂಗಮಯ್ಯ ||
ಭದ್ರಾಕ್ಷಿಯಿಲ್ಲದೇ ರುದ್ರಾಕ್ಷಿಯಿಂದೇನು ಜಂಗಮಯ್ಯ |
ಭದ್ರಾಕ್ಷಿಯಿದ್ದರೆ ರುದ್ರಾಕ್ಷಿಯೇತಕೋ ಜಂಗಮಯ್ಯ ||
.
.
.
.
.
ಏನೇನೋ ಗತ್ತುಮಾಡಿದ ನಮ್ಮಶಿವ 
ಏನೋ ಗಮ್ಮತುಮಾಡಿದ |
ಪಟ್ಟೆಬೂದಿ ಹಚ್ಚಿಕೊಂಡು | ಬೆಟ್ಟದೋಳ್ನ ಕಟ್ಟಿಕೊಂಡು
ಹುಚ್ಚು ಹುಚ್ಚು ಲೀಲೆಮಾಡಿದ ||
ಬೆತ್ತಲೇಲಿ ನೃತ್ಯಮಾಡಿದ-ನಮ್ಮಶಿವ
ಕತ್ತಲೇಲಿ ಸೃಷ್ಟಿಮಾಡಿದ |
ಬೆತ್ತಲೇಲಿ ನೃತ್ಯಮಾಡಿ | ಕತ್ತಲೇಲಿ ಸೃಷ್ಟಿಮಾಡಿ
ಸೊಟ್ಟಾಪಟ್ಟೆ ಲೋಕಮಾಡಿದ ||

ತಂಬೂರಿ-ಚಿಟಿಕೆಗಳಿಲ್ಲದ ಜಾಗವನ್ನು ಕೈತಟ್ಟಿ ತಾಳಹಾಕಿ ಮೈಕುಲುಕಿಸಿ ರಾಗವಾಗಿ ಹಾಡಿದರು ಮಹಾಸ್ವಾಮಿಗಳು. ತಲೆಯಲ್ಲಾಡಿಸುತ್ತಾ ತತ್ವಪದಗಳನ್ನು ಕೇಳುತ್ತಿದ್ದ ಜಂಗಮರು "ಟೀಪು ಅಪ್ಪಣೆಯಾಗಬೇಕು ಗುರುವೇ" ಎಂದಾಗ ಹಾಡಿದ ತತ್ವಪದಗಳಿಗೆ ವ್ಯಾಖ್ಯಾನವನ್ನೂ ಮಾಡಿದರು. ಈ ಇಡಿಯ ಸಂದರ್ಭವನ್ನು ಆಸ್ವಾದಿಸಬಯಸುವವರು ಡಿವಿಜಿಯವರ ’ಜ್ಞಾಪಕಚಿತ್ರಶಾಲೆ’ಯ ಏಳನೇಭಾಗವನ್ನು ಓದಬೇಕು. ಸರಳಮುಗ್ಧ ಸ್ವಭಾವವನ್ನು ಗೌರವಿಸಿ ಅದರಂತೇ ನಡೆದು ಸಮಾಧಾನ ನೀಡಬಲ್ಲ ಹೃದಯವಂತಿಕೆ ಮತ್ತು ಸರಳಪದಗಳಲ್ಲಿಯ ಹೆಣೆದ ತತ್ವಪದಗಳಲ್ಲಿಯೂ ಗಹನವೇದಾಂತದ ಸಂದೇಶಗಳನ್ನು ಹುದುಗಿಸಿ ಕಟ್ಟಿಕೊಡಬಲ್ಲ ಬಲ್ಮೆ ಡಿವಿಜಿಯವರಿಗೆ ಸಹಜವಾಗಿ ರಕ್ತಗತವಾಗಿತ್ತು. ಅಂದಹಾಗೇ ಗಾಂಧೀಬಜಾರಿನಲ್ಲಿ ಜಂಗಮರಿಗೆ ಸಿಕ್ಕ ಆ ಮಹಾಸ್ವಾಮಿಗಳು ಡಿವಿಜಿ ಎಂದರೆ ಆಶ್ಚರ್ಯಪಡಬೇಡಿ ! ಹರಿಹರ ಭೇದವನ್ನು ಅಳಿಸಲು ತಮ್ಮದು ತಿಮ್ಮ[ಹರಿ]ಲಿಂಗ[ಹರ]ದೇವರ ಮಠ ಎಂದಿದ್ದನ್ನು ಗಮನಿಸಬೇಕು. ಚಿಕ್ಕಂದಿನಿಂದಲೂ ಸಂನ್ಯಾಸ ಮತ್ತು ಪರಿವ್ರಾಜಕತ್ವದೆಡೆಗೆ ಅವರ ಮನಸ್ಸು ವಾಲುತ್ತಿತ್ತು. ಸದಾ ಅವಧೂತಪ್ರಜ್ಞೆಯನ್ನು ಹೊಂದಿದ್ದ ಡೀವಿಜಿ ಅಂತಹ ದಿರಿಸುಗಳಲ್ಲಿ ಅವಧೂತರಂತೆಯೋ ಜಂಗಮರಂತೆಯೋ ಕಾಣುತ್ತಿದ್ದರು ! ಎಪ್ಪತ್ತು ದಾಟಿದ ನಂತರವೂ ಅವರಿಗೆ ಭೈರಾಗಿ-ಜಂಗಮ ಜೀವನದ ಆಕರ್ಷಣೆ ಹೋಗಿರಲಿಲ್ಲ. ಅಂತಹ ಒಂದು ಪ್ರಸಂಗವೇ ಈ ಮೇಲೆ ಹೇಳಿದ್ದು.     

ಮಹಾತ್ಮರಿಗೆ ಜೀವನದಲ್ಲಿ ಕಷ್ಟಗಳಿರುವುದಿಲ್ಲವೆಂದೇನೂ ಅಲ್ಲ; ಎದುರಾದ ಕಷ್ಟಗಳಿಗೆ ತಮ್ಮಲ್ಲೇ ಪರಿಹಾರ ಕಂಡುಕೊಳ್ಳುವುದು ಅವರ ಸಾಮರ್ಥ್ಯ. ಕಷ್ಟ ಮನುಷ್ಯ ಸಹಜ ಎಂಬ ಭಾವದಿಂದ ತನಗೆ ಬಂದ ಕಷ್ಟವನ್ನು ಮೂರನೆಯವರಾಗಿ ಎದುರುನಿಂತು ಉತ್ತರಹೇಳಿಕೊಂಡು ಸಮಾಧಾನ ಪಡುವುದು ಅವರ ಐಚ್ಛಿಕ ನಡೆಗಿರುವ ಹಿರಿಮೆ. ೧೮-೧೯-೨೦ನೇ ಶತಮಾನದ ಕನ್ನಡದ ಬಹುತೇಕ ಕವಿಗಳು ಜೀವನದಲ್ಲಿ ಬಡವರಾಗೇ ಇದ್ದರು. ಬಡತನ ಅವರಿಗೆ ಸಹಿಸಲಸಾಧ್ಯ ವೇದನೆಯಾಗಿ ಕಾಡಲಿಲ್ಲ; ಬಡತನ ತಮಗೆ ದೇವರುಕೊಟ್ಟ ಭಾಗ್ಯ ಎಂದುಕೊಂಡೇ ಅದನ್ನವರು ಅನುಭವಿಸಿದರು; ಮುರುಕು ಗುಡಿಸಲೋ ಹರುಕು ಚಾಪೆಯೋ ಅದರಲ್ಲೇ ತೃಪ್ತಿಯಿಂದ ಕಾವ್ಯ-ಸಾಹಿತ್ಯದ ಕೃಷಿ ನಡೆಸಿದರು. ಬಡತನದಲ್ಲಿ ಕಣ್ಣೆದುರು ಸಾಯುವ ಮಕ್ಕಳ ಅನಿವಾರ್ಯ ಅಗಲಿಕೆಯ ನೋವನ್ನು ಸಹಿಸಿಯೂ ಬದುಕಿದವರು ವರಕವಿ ಬೇಂದ್ರೆ. ದೇಶಪರ್ಯಟನೆಯ ಕನಸನ್ನು ಕಾಣುತ್ತಾ ಆರ್ಥಿಕ ಹೀನ ಸ್ಥಿತಿಯಲ್ಲಿ ಎಲ್ಲಿಗೂ ಹೋಗಲಾರದಾದಾಗ ಇರುವಲ್ಲೇ ಕಾವ್ಯದಲ್ಲಿ, ಕೃತಿಗಳಲ್ಲಿ ವಿಹರಿಸಿದವರು ಸೇಡಿಯಾಪು ಕೃಷ್ಣಭಟ್ಟರು. ಬಡತನ ಅವರನ್ನೆಲ್ಲಾ ಆಳಲಿಲ್ಲ; ಆದರೆ ಅವರಿಗೂ ಬಡತನವಿತ್ತು ಎಂಬುದನ್ನು ಅಂಥವರ ಕೃತಿಗಳಿಂದ ಅಂದಾಜಿಸಿಕೊಳ್ಳಬಹುದಾಗಿದೆ. ಬದುಕಿನ ಬಂಡಿಗಳು ಸಾಗುವ ಮಾರ್ಗಗಳು ವಿಭಿನ್ನ; ಕೆಲವರಿಗೆ ಅವು ಸುಸೂತ್ರ, ಇನ್ನು ಕೆಲವರಿಗೆ ಅವು ಅತಂತ್ರ. ಸಾಗುವ ಹಾದಿ ಸುಗಮವೋ ದುರ್ಗಮವೋ ಅದನ್ನು ಕಾರಣವಾಗಿಸಿಕೊಳ್ಳದೇ ಪಾಲಿಗೆಬಂದದ್ದೇ ಪಂಚಾಮೃತವೆಂದು ಒಪ್ಪಿ, ನ್ಯಾಯ-ನೀತಿ-ಧರ್ಮಮಾರ್ಗದಿಂದ ಬದುಕಿ, ಬದುಕನ್ನು ಆದರ್ಶವಾಗಿ ತೋರಿಸಿದವರು ಆ ಕವಿಗಳು. ಕೆಲವರಿಗಂತೂ ಮನೆಯಲ್ಲಿ ನಿತ್ಯಪಡಿಗೂ ಕಷ್ಟವಿತ್ತು. ಆದರೂ ಅವರ ಮನೆಗಳಲ್ಲಿ ನಂದಾದೀಪ ನಂದುತ್ತಿರಲಿಲ್ಲ; ಬರುವ ಅತಿಥಿಗಳಿಗೆ ಅಶನ-ವಶನಕ್ಕೆ ಕೊರತೆಯಾಗುತ್ತಿರಲಿಲ್ಲ !

ತಲೆಪಾಗಿನೊಳಕೊಳಕ ಪಂಚೆನಿರಿಯೊಳಹರುಕ
ತಿಳಿಸುವೆಯೆ ರಜಕಗಲ್ಲದೆ ಲೋಗರಿಂಗೆ ?
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ-
ನಿಳೆಗೆ ಹರಡುವುದೇಕೊ-ಮಂಕುತಿಮ್ಮ

ಸವರಿದ ಕೈಗಿದ್ದ ಕೊಳೆಯಿಂದ, ಹರಿದ ಬೆವರಿನಿಂದ ತಲೆಗೆ ಸುತ್ತಿದ ಮುಂಡಾಸು ಹೊಲಸಾಗಿರಬಹುದು, ಉಟ್ಟಪಂಚೆಯ ನಿರಿಗೆಯಲ್ಲಿ ಹರುಕುಕೂಡ ಇರಬಹುದು ಅದನ್ನು ತೊಳೆದುಕೊಡುವ ರಜಕನೊಬ್ಬನಿಗಲ್ಲದೇ ಲೋಕಕ್ಕೆಲ್ಲಾ ಹೇಳುತ್ತಾರ್ಯೇ? "ಹೋಯ್ ನನ್ನ ಪಂಚೆ ಹರಿದುಹೋಗಿದೆ", "ಹೋಯ್ ನನ್ನ ಬಟ್ಟೆ ನಾರುತ್ತಿದೆ" ಎಂದು ಯಾರಾದರೂ ಪ್ರಚಾರಮಾಡುವುದು ವಿಹಿತವೇ? ಅಂತೆಯೇ ನಮ್ಮೊಳಗಿನ ಅಳಲು-ದುಗುಡ-ದುಃಖ-ದುಮ್ಮಾನಗಳನ್ನು ನಮ್ಮೊಳಗೇ ಬಗೆಹರಿಸಿಕೊಳ್ಳಬೇಕು. ನಮ್ಮೊಳಗೇ ಒಬ್ಬನಿದ್ದಾನಲ್ಲ, ಅವನೊಡನೆ ಮಾತ್ರ ಹಂಚಿಕೊಳ್ಳಬೇಕು ಎಂಬುದು ಈ ಕಗ್ಗದ ತಾತ್ಪರ್ಯ.

ತಿಮ್ಮಗುರುವಿಗೆ ಬದುಕು ಪೂರ್ತಿ ನೂರಾರು ಸಮಸ್ಯೆಗಳಿದ್ದರೂ ಅವುಗಳನ್ನವರು ಕಂಡ, ನಿಭಾಯಿಸಿದ ರೀತಿಕಂಡು ಬೆರಗಾಗುತ್ತೇವೆ. ಸರಕಾರಕ್ಕೆ ಒದಗಿಸಿದ ಸೇವೆಗೆ ಸಂದ ಅದೆಷ್ಟೋ ಧನಾದೇಶ ಪತ್ರ[ಚೆಕ್ಕು]ಗಳನ್ನು ಅವರು ಹಣವಾಗಿ ಪರಿವರ್ತಿಸಲೇ ಇಲ್ಲ. ಸಾರ್ವಜನಿಕರು ಕಟ್ಟಿದ ತೆರಿಗೆಯ ನಯಾಪೈಸೆಯೂ ಸಾರ್ವಜನಿಕ ಕೆಲಸಗಳಿಗೋ ಸರಕಾರದ ಕೆಲಸಗಳಿಗೋ ವಿನಿಯೋಗವಾಗಬೇಕೇ ಹೊರತು ಇನ್ಯಾವುದೋ ಕಾರಣಗಳಿಗೆ ಯಾರ್ಯಾರದೋ ಕೈಸೇರಬಾರದು ಎಂಬ ಅಭಿಲಾಶೆ ಅವರದಾಗಿತ್ತು. ಬಯಸಿದರೆ ಬೇಕಷ್ಟು ಹಣಗಳಿಸಿ ಸಿರಿವಂತರಾಗಿ ಬದುಕುವ ಅವಕಾಶಗಳೂ ಅರ್ಹತೆಯೂ ಡಿವಿಜಿಯವರಿಗಿದ್ದವು. ತನ್ನ ಸಾಮಾನ್ಯ ಜೀವನಕ್ಕೆ ಎಷ್ಟು ಕಮ್ಮಿ ಧನ ಬೇಕೋ ಅಷ್ಟನ್ನು ಮಾತ್ರ ನೇರವಾಗಿ ತಾನು ನಡೆಸಿದ ವೃತ್ತಿಯಿಂದ ಗಳಿಸಿದರೇ ಹೊರತು ಬಹುಮಾನವಾಗಿಯೋ, ಸನ್ಮಾನವಾಗಿಯೋ ಬಂದ ಹಣವನ್ನೂ ಸಲಹೆಗಳಿಗೆ ಗೌರವವಾಗಿ ಸಲ್ಲಿಸಲ್ಪಟ್ಟ ಹಣವನ್ನೋ ಅವರು ಸ್ವೀಕರಿಸಲೇ ಇಲ್ಲ. ಸರ್.ಎಂ. ವಿಶ್ವೇಶ್ವರಯ್ಯನವರು ಡಿವಿಜಿಯವರ ಸಮಕಾಲೀನರಾಗಿದ್ದು ಸರಕಾರದ ಹಲವು ಕಾರ್ಯಕ್ರಮಗಳಿಗೆ, ಕೆಲಸಗಳಿಗೆ ರಾಜನೀತಿಯ ಸಲಹೆಗಳನ್ನು ಗುಂಡಪ್ಪನವರಿಂದ ಪಡೆಯುತ್ತಿದ್ದರು. ಅದಕ್ಕಾಗಿ ಮೈಸೂರು ಸರಕಾರ ಅವರಿಗೆ ಒತ್ತಾಯಪೂರ್ವಕವಾಗಿ ಧನಾದೇಶಗಳನ್ನು ನೀಡುತ್ತಿತ್ತು; ಸ್ವೀಕರಿಸಲು ಒಪ್ಪದೇ ಇದ್ದರೆ ಮುಂದೆ ಅಂತಹ ಸಲಹೆಗಳನ್ನು ಕೇಳುವುದಿಲ್ಲ ಎಂದೂ ಸರಕಾರದ ಅಧಿಕಾರಿಗಳು ತಿಳಿಸಿದಾಗ, ಸಾರ್ವಜನಿಕರ ಹಿತಕ್ಕಾಗಿ ತಾನು ಸಲಹೆಗಳನ್ನು ಕೊಡುವುದು ಒಳಿತು-ಅದರಿಂದ ವಿಮುಖನಾಗಬಾರದು ಎಂಬ ದೃಷ್ಟಿಯಿಂದ ಹೊರನೋಟಕ್ಕೆ ಧನಾದೇಶಗಳನ್ನು ಪಡೆಯಲು ಒಪ್ಪಿದರು; ಪಡೆದ ಎಲ್ಲಾ ಧನಾದೇಶಗಳನ್ನೂ  ಕಬ್ಬಿಣದ ಪೆಟ್ಟಿಗೆಯಲ್ಲಿ[ಟ್ರಂಕ್] ಹಾಗೇ ಇಟ್ಟುಬಿಟ್ಟರು! ಇದು ಸರಕಾರದ ಗಮನಕ್ಕೂ ಬರಲಿಲ್ಲ!

ಹೀಗೆ ಬಾಳಿದ ತಿಮ್ಮಗುರುವಿನ ಸತಿಸುತರ ಬಗ್ಗೆ ನಾವು ಬಹಳಷ್ಟನ್ನು ಕೇಳಿಲ್ಲ. ಕಾರಣವಿಷ್ಟೇ: ತಿಮ್ಮಗುರು ತಮ್ಮ ವೈಯ್ಯಕ್ತಿಕವನ್ನು ಬಹಳವಾಗಿ ಯಾರಲ್ಲೂ ಪ್ರಸ್ತಾವಿಸುತ್ತಿರಲಿಲ್ಲ. ಡಿವಿಜಿಯವರು ನಿತ್ಯ ಪುರಂದರದಾಸರೆಂಬುದನ್ನು ಎಲ್ಲರೂ ಬಲ್ಲರು. ಅದೇ ಬದುಕಿಗೆ ಗುಂಡಪ್ಪನವರು ತಮ್ಮನ್ನು ಒಗ್ಗಿಸಿಕೊಂಡುಬಿಟ್ಟಿದ್ದರು. ಅವರ ಮಡದಿ ಭಾಗೀರಥಮ್ಮನವರು ಆರ್ಥಿಕವಾಗಿ ಅನುಕೂಲವುಳ್ಳ ಕುಟುಂಬದಿಂದಲೇ ಬಂದವರಾದರೂ ಪತಿಯೊಂದಿಗೆ ಬದುಕುವಾಗ ಪತಿಯ ಇಚ್ಛೆಯನ್ನೇ ಅನುಸರಿಸಿದವರು. ಎಂದೂ ಗಂಡ ಗುಂಡನ ಆಶಯಗಳಿಗೆ ವಿರುದ್ಧವಾಗಿ ನಡೆದವರಲ್ಲ. ’ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದ ಬಿಕ್ಕಟ್ಟಿನ ಕಾಲದಲ್ಲಿ ಗುಂಡಪ್ಪನವರ ಹತ್ತಿರದ ನೆಂಟರೊಬ್ಬರ ಮನೆಯಲ್ಲಿ ಕಾರ್ಯಕ್ರಮವೊಂದು ನಡೆಯುವುದಿತ್ತು. ಹೆಂಡತಿಮಕ್ಕಳು ಅಲ್ಲಿಗೆ ತೆರಳಬೇಕೆಂದು ಹೇಳಿ ತಾವು ಯಾವುದೋ ಬರವಣಿಗೆಗೆ ತೊಡಗಿದ್ದರು. ಸಂಜೆಯಾದರೂ ಹೆಂಡತಿ ಹೊರಟಂತೇ ಕಾಣಲಿಲ್ಲ. ಆ ಬಗೆಗೆ ಪ್ರಶ್ನಿಸಿದಾಗ "ಮಕ್ಕಳನ್ನು ಕಳುಹಿಸಿದ್ದೇನೆ" ಎಂಬ ಉತ್ತರ ಪಡೆದು "ಇಲ್ಲಾ ಇಲ್ಲಾ ತೀರಾ ಹತ್ತಿರದವರ ಮನೆ ನೀನು ಹೋಗಲೇಬೇಕು" ಎಂದು ಅನುಜ್ಞೆ ನೀಡಿದಾಗ ಉಪಾಯಗಾಣದ ಭಾಗೀರಥಮ್ಮನವರು ಗದ್ಗದಿತರಾಗಿ ಹೇಳಿದರು "ನೋಡಿ, ನೀವು ಹೋಗುವಂತೇ ಬಲವಂತಮಾಡುತ್ತಿದ್ದೀರಿ. ನನಗಿರುವುದು ಇದೊಂದೇ ಸೀರೆ. ಇದೂ ಅಲ್ಲಲ್ಲಿ ಹರಿದಿದೆ. ಇಂಥಾ ಸೀರೆಯುಟ್ಟು ಬಂಧುಗಳ ಮನೆಯ ಸಮಾರಂಭಕ್ಕೆ ಹೋಗುವುದು ಅವರಿಗೂ ಮುಜುಗರ ಉಂಟುಮಾಡಬಹುದು. ನನಗೇನೋ ಇದರಲ್ಲೇ ಸಮಾಧಾನವಿದೆ. ಆದರೆ ಜನ ನಿಮ್ಮ ಬಗ್ಗೆ ಆಡಿಕೊಳ್ಳುತ್ತಾರೆ. ಅದು ನನಗೆ ಹಿಡಿಸುವುದಿಲ್ಲ. ಧರ್ಮಪತ್ನಿಯಾಗಿ ನಾನು ನಿಮ್ಮ ಮರ್ಯಾದೆಯನ್ನು ಕಾಪಾಡಬೇಕಲ್ಲವೇ? ಹೊಸಸೀರೆ ಬೇಕೆಂದು ನಾನೇನೂ ಬಯಸುತ್ತಿಲ್ಲ, ಆದರೆ ಈ ಸಂದರ್ಭದಲ್ಲಿ ಯುಕ್ತವಾದ ನಿರ್ಧಾರವನ್ನು ನಾನು ಕೈಗೊಂಡಿದ್ದೇನೆ, ಅದಕ್ಕೆ ನೀವು ಅಡ್ಡಿಯಾಗಬಾರದೆಂಬುದು ನನ್ನ ಬೇಡಿಕೆ."   

ಕವಿ ನರಸಿಂಹಸ್ವಾಮಿಯವರಿಗೆ ವೆಂಕಮ್ಮ ಹೇಗೆ ಅನ್ವರ್ಥವಾದ ಮಡದಿಯಾಗಿದ್ದರೋ ಹಾಗೆಯೇ ಅಥವಾ ಅದಕ್ಕೂ ತುಸು ಮಿಗಿಲಾದ ರೀತಿಯಲ್ಲೇ ಗಂಡನ ನೆರಳಾಗಿ ಬದುಕಿದವರು ಭಾಗೀರಥಮ್ಮ. ಇಂಥಾ ಭಾಗೀರಥಮ್ಮ ಎಳವೆಯಲ್ಲೇ, ಹರೆಯದಲ್ಲೇ ಅಗ್ನಿಆಕಸ್ಮಿಕಕ್ಕೆ ಬಲಿಯಾದರು. ಆಗಿನ್ನೂ ಡಿವಿಜಿಯರಿಗೆ ಮೂವೈತ್ತೈದೂ ತುಂಬಿರಲಿಲ್ಲ. ಮನದನ್ನೆಯ ಅವಸಾನವನ್ನು ಸಹಿಸಿಕೊಂಡು ತನ್ನ ’ನಿವೇದನ’ವನ್ನು ಆ ನೆನಪಿನಲ್ಲಿ ರಚಿಸಿದರೆಂದು ಕೆಲವರ ಅಭಿಪ್ರಾಯ. ಅದರಲ್ಲಿನ ಶೀರ್ಷಿಕಾ ಕವನ ಡಿವಿಜಿಯವರ ಮನದ ನವಿರಾದ ಭಾವನೆಗಳನ್ನು ಸ್ಪಷ್ಟಪಡಿಸುತ್ತವೆ: 

ಎನ್ನಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದೆ ಬರಹವ |
ಇನ್ನದೆಂತು ನೋಡಿನಗುತ
ಲೊರೆವೆ ಸರಸವ ||

ಕಿರಿಯ ಮಕ್ಕಳಳುವ ದನಿಗೆ
ಹಿರಿಯರಿಡುವ ಕಣ್ಣಪನಿಗೆ
ಕರಗದೆದೆಯ ಬಿದಿಯು ಬಣಬು
ಕವಿತೆಗೊಲಿವನೇಂ |
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ||

ನಿಡುಗಾಲ ತನ್ನ ಬಯಕೆಗಳನ್ನೆಲ್ಲಾ ಅದುಮಿ ಪತಿಸೇವೆಗೈದ ಹರೆಯದ ಮನದನ್ನೆ, ಸಾಧ್ವಿ ಸತ್ತು ಮಲಗಿದಾಗ, ಎಳೆಯ ಮಕ್ಕಳು ಕಂಬನಿಗರೆಯುತ್ತಿರುವಾಗ, ಸುತ್ತಸೇರಿದ ಹಿರಿಯರೂ ಕಂಡೂಕಾಣಿಸದಂತೇ ಅತ್ತು ಕಣ್ಣೊರೆಸಿಕೊಳ್ಳುತ್ತಿರುವಾಗ ಕವಿಯಲ್ಲುಂಟಾದ ಭಾವಗಳು ಹೇಗಿದ್ದವು ಎಂಬುದಕ್ಕೆ ಇದು ಕನ್ನಡಿ. ತನಗಾಗಿ ಬದುಕನ್ನೇ ಅರ್ಪಿಸಿಕೊಂಡು, ಗಂಡ ಗುಂಡಪ್ಪನ ಬದುಕುವ ರೀತಿಯನ್ನೇ ಒಪ್ಪಿಕೊಂಡು ಅದೇ ತನ್ನ ಭಾಗ್ಯವೆಂದು ಪರಿಗಣಿಸಿ ಡಿವಿಜಿಯವರೊಡನೆ ಹೆಜ್ಜೆಹಾಕಿದವರು ಭಾಗೀರಥಮ್ಮನವರು. ಎಷ್ಟೇ ಆರ್ಥಿಕ ಮುಗ್ಗಟ್ಟು ಎದುರಾದರೂ ಅದನ್ನೆಲ್ಲಾ ಧಿಕ್ಕರಿಸಿ, ಸಹಿಸಿ, ವಹಿಸಿಕೊಂಡು, ಬರೆದಂತೆಯೇ ಬದುಕಿದ ಅತ್ಯಂತ ವಿರಳ ಸಾಹಿತಿ-ಕವಿ ಗುಂಡಪ್ಪನವರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆ ಹೀಗೇ ಹಲವಾರು ಪ್ರಕಾರಗಳಲ್ಲಿ ದೇಶಕ್ಕಾಗಿ ದುಡಿದವರು, ನುಡಿದವರು, ಮಿಡಿದವರು ಡಿವಿಜಿ. ಸಂಸಾರಿಯೋ? ಹೌದು ಸಂಸಾರಿ, ಅವಧೂತರೋ? ಹೌದು ಅವಧೂತರು, ವೇರ್ದಾಂತಿಯೋ? ಹೌದು ವೇದಾಂತಿ-ಹೀಗೇ ಹಲವು ಮುಖಗಳಲ್ಲಿ ಶೋಭಿಸುತ್ತಾ ಆಸ್ತಿಕತೆಯಲ್ಲಿರುವ ನಾಸ್ತಿಕತೆಯನ್ನೂ ನಾಸ್ತಿಕತೆಯಲ್ಲಿರುವ ಆಸ್ತಿಕತೆಯನ್ನೂ ಹೊರತೆಗೆದು ತೋರಿಸುತ್ತಾ ’ಪರೋಪಕಾರಾರ್ಥಮಿದಂ ಶರೀರಂ’ ಎಂಬ ವ್ಯಾಖ್ಯೆಗೆ ಸಮರ್ಪಕ ಉದಾಹರಣೆಯಾಗಿ ನಿಲ್ಲುವ ಧೀಮಂತ ವ್ಯಕ್ತಿ ಗುಂಡಪ್ಪನವರು. ಅನೇಕಬಾರಿ ಆಲೋಚಿಸುವಾಗ ಅವರೊಬ್ಬ ವ್ಯಕ್ತಿ ಎನಿಸುವುದಕ್ಕಿಂತಾ ಹೆಚ್ಚಾಗಿ ಒಂದು ಸಂಸ್ಥೆ ಅಥವಾ ಸಂಸ್ಥಾನ ಎಂದರೇ ಸಮಂಜಸ ಎನಿಸುತ್ತದೆ; ನಾನು ಎನ್ನುವುದನ್ನು ಮರೆತು ನಾವು ಎಂಬುದನ್ನೇ ಆತುಕೊಂಡಿದ್ದ ಅವರಿಗೆ ದೇಶದ ಎಲ್ಲರ ಸಂಸಾರವೂ ಅವರದೇ ಆಗಿತ್ತು! ದೇಶವೇ ಅಥವಾ ಜಗವೇ ಅವರ ಕುಟುಂಬವಾಗಿತ್ತು. ||ವಸುಧೈವ ಕುಟುಂಬಕಮ್|| ಎಂಬುದನ್ನು ಅಕ್ಷರಶಃ ನಡೆಸಿದವರು, ಹಾಗೆ ಬಾಳಿದವರು ಡಿವಿಜಿ. ಇಂಥಾ ಮಹಾತ್ಮನ ಜೀವನದ ಘಳಿಗೆಗಳನ್ನು ಸೆರೆಹಿಡಿಯಲು ಪ್ರಾಮಾಣಿಕವಾಗಿ ನಡೆದ ಪ್ರಯತ್ನ ’ಬ್ರಹ್ಮಪುರಿಯ ಭಿಕ್ಷುಕ’ ಎಂಬ, ಅವಧಾನಿ ಗಣೇಶರು ಬರೆದ ಪುಸ್ತಕ. ವೇಗದ ಓದುಗರು ೪೫ ನಿಮಿಷಗಳಲ್ಲಿ ಓದಿಸಾಗಬಹುದಾದ ೧೫೮ ಪುಟಗಳ ಸಂಗ್ರಹಾರ್ಹ ಹೊತ್ತಿಗೆ ಮತ್ತೊಮ್ಮೆ ನಿಮ್ಮ ನೆನಪಿಗಾಗಿ ಈ ಹೊತ್ತಿಗೆ! ನಮಸ್ಕಾರ.   


Monday, December 3, 2012

ಸಂಪನ್ನಗೊಂಡ ಸಂಭ್ರಮದ ಶತಾವಧಾನ; ಹೂವಿನ ಜೊತೆಗೆ ನಾರೂ ದೇವಮುಡಿಗೈದ ವ್ಯಾಖ್ಯಾನ

ಿತ್ರಋಣ: ಅಂತರ್ಜಾಲ
ಸಂಪನ್ನಗೊಂಡ ಸಂಭ್ರಮದ ಶತಾವಧಾನ; ಹೂವಿನ ಜೊತೆಗೆ ನಾರೂ ದೇವಮುಡಿಗೈದ ವ್ಯಾಖ್ಯಾನ 

ಮೂಕ ವೇದಾಂತಕ್ಕೆ ನೋಂತನು
ವಾಕಮಂ ಬಿಟ್ಟಿರಲು ನಿಜಸುತನ್
ಈಕುಮಾರವ್ಯಾಸನಾದನು ಮಾತಿಗೇಧಾತು |
ಶ್ಲೋಕ ಫಣಿತಿಯೊಳಲ್ಲವೇ ಸು
ಶ್ಲೋಕನಾನಿರೆ ಕುವರ ನಿವನೆನ
ಗೇಕಲಿಸಿದನು ಭಾಮಿನಿಯನೀ ವಾರ್ಧಕದೆ ಚತುರಂ ||
 

ಸಾಂಸ್ಕೃತಿಕ ಕುಟುಂಬ ಸ್ವಸ್ಥಾನಕ್ಕೆ ಹೊರಟುನಿಂತಾಗ ಮತ್ತೆಂದು ಸೇರಿಯೇವು ಎಂಬ ಅನಿಸಿಕೆ. ಸೇರಿದ ವಿದ್ವಾಂಸರೊಡನೆ ಮೂರುದಿನಗಳಲ್ಲಿ ಪಡೆದುಕೊಂಡ ಅನುಭವ ಓದಿ ಬರುವಂಥದ್ದಲ್ಲ! ಮರೆಯಲಳವಲ್ಲ! ಒಬ್ಬೊಬ್ಬರಲ್ಲೂ ಒಂದೊಂದು ಕಾವ್ಯ-ಸಾಹಿತ್ಯ ವಿನೋದ ವೈಶಿಷ್ಟ್ಯ. ನಡುನಡುವೆ ಪ್ರೊ| ಅ.ರಾ.ಮಿತ್ರ. ಶತಾಯುಷಿ ಪ್ರೊ| ಜಿ.ವಿ ಇಂಥಾ ಹಿರಿಯರ ಆಗಮನ. ಮಂಗಳವೇದಿಕೆಯಂಗಳದಲ್ಲಿ ’ಪದ್ಯಪಾನ’ ಹಮ್ಮಿಕೊಂಡಿದ್ದ ಶತಾವಧಾನ ಕಾರ್ಯಕ್ರಮ ಅಭೂತಪೂರ್ವವಾಗಿತ್ತು! ಕವಿ-ಕಾವ್ಯ ರಸದೌತಣ ಕಬ್ಬಿಗ ಮನಸ್ಸಿಗೆ ಅಮೋದವೂ ಪ್ರಮೋದವೂ ಪ್ರಬೋಧವೂ ಆಗಿತ್ತು. ಹಿರಿಯರಾದ ಡಾ|ಎಸ್.ಆರ್. ರಾಮಸ್ವಾಮಿಯಂಥವರು ಮೂರು ದಿನವೂ ಕುಳಿತು ಆಸ್ವಾದಿಸುವಷ್ಟರ ಮಟ್ಟಿಗೆ ಅವಧಾನ ಮಹತ್ತು ಪಡೆದಿತ್ತು. ಸಾವಿರ ಸಭಾಸದರು, ಅದಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಹೊರಾಂಗಣದಲ್ಲಿ ಹಾಕಿದ್ದ ಶಾಮಿಯಾನದಲ್ಲಿ ಕುಳಿತು ದೊಡ್ಡ ಪರದೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದವರು, ಅದಕ್ಕೂ ಮಿಕ್ಕಿದ ಸಂಖೆಯಲ್ಲಿ ಅಂತರ್ಜಾಲದ ಮೂಲಕ ವೀಕ್ಷಿಸಿದವರು ...ಹೀಗೇ ಶ್ರೋತೃಗಳ ಸಂಖ್ಯೆ ಬಹಳವಿತ್ತು. ಶತಾವಧಾನದ ಕಾವ್ಯವಾಚನದಲ್ಲಿ ಹಾಡಿದ ಪ್ರಬುದ್ಧ/ಪ್ರಸಿದ್ಧ ಗಮಕಿ ಕೆದಿಲಾಯರನ್ನಾಗಲೀ, "ಅವಧಾನಿಗಳೇ ನಿಮ್ಮ ಮನೆಯಲ್ಲಿ ಸೊಳ್ಳೆ ಯಾವ ಛಂದಸ್ಸಿನಲ್ಲಿ ಗುಂಯ್ ಗುಡುತ್ತದೆ?" ಎಂಬಿತ್ಯಾದಿ ರಸಪ್ರಶ್ನೆಗಳ ಮಹಾಪೂರವನ್ನೇ ಹರಿಸಿದ ಸೂರ್ಯಪ್ರಕಾಶ ಪಂಡಿತರನ್ನಾಗಲೀ ಯಾರಾದರೂ ಮರೆಯಲು ಸಾಧ್ಯವೇ? ಅಷ್ಟೇ ಏಕೆ ’ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್’ ಎಂಬ ಪದ್ಯಪಾನ ಮುಂದೊಡ್ಡಿದ ಸಮಸ್ಯೆಗೆ ಅಭಿಜಾತ ಶಿಷ್ಟ ಸಾಹಿತ್ಯದ ಛಂದಸ್ಸುಗಳನ್ನು ಬಳಸಿ ೩೦ ಕ್ಕೂ ಅಧಿಕ ಪರಿಹಾರಗಳನ್ನು ಬರೆದ ಮೇಲುಕೋಟೆಯ ಅರೈಯರ್ ಶ್ರೀರಾಮಶರ್ಮರು, [ಅನೇಕ ಉತ್ತಮ ಗ್ರಂಥಗಳನ್ನು ಬರೆದ]ತಂಬಾಕಿನಚಟದ ಬಗ್ಗೆ ಆಶುಕವಿತೆಯನ್ನು ಕೇಳಿದ ಎಂ.ಏ ಹೆಗಡೆಯವರು, ವಿದ್ವಾನ್ ತ್ಯಾಗಲಿ ರಾಮಚಂದ್ರ ಶರ್ಮ ಇಂತಹ ಅನೇಕಾನೇಕರ ಸಾಹಿತ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಾಗ ಸಂಭಾವ್ಯ ಜಗತ್ತಿನಲ್ಲಿ ಶಿಷ್ಟಸಾಹಿತ್ಯಕ್ಕೆ ಮತ್ತೆ ಆದ್ಯತೆ ಸಿಗುವುದರಲ್ಲಿ ಸಂಶಯವಿರಲಿಲ್ಲ.           

ಶತಾವಧಾನ ನಡೆದಿದ್ದು ನಿಮಗೆಲ್ಲಾ ಈಗಾಗಲೇ ತಿಳಿದೇ ಇರುವಂತೇ ಬೆಂಗಳೂರಿನ ಜಯನಗರದ, ಎನ್.ಎಮ್.ಕೆ,ಆರ್.ವಿ ಕಾಲೇಜಿನ ಮಂಗಳ ಮಂಟಪದಲ್ಲಿ. ಅರ್ಧ ಕೀ.ಮೀ ದೂರದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಅಲ್ಲಿಂದ ಭವ್ಯ ಮೆರವಣಿಗೆ ಆರಂಭವಾಯ್ತು. ಅಲಂಕೃತ ವಾಹನದಲ್ಲಿ ವಾಗ್ದೇವಿ ಶಾರದೆಯ ವಿಗ್ರಹವಿತ್ತು. ಅದರ ಹಿಂದೆ ಶತಾವಧಾನಿ ಗಣೇಶರು ಜನರ ಮಧ್ಯೆ ನಡೆಯುತ್ತಿದ್ದರು. ಅದಕ್ಕೂ ಹಿಂದೆ ಸಾಲಂಕೃತ ಪಲ್ಲಕ್ಕಿಯಲ್ಲಿ ವಿವಿಧ ಅವಧಾನಿಗಳ ಪುಸ್ತಕಗಳನ್ನು ಇರಿಸಲಾಗಿತ್ತು. ಅನೇಕ ಸಾಹಿತಿಗಳು, ವಿದ್ವಾಂಸರು, ಪೃಚ್ಛಕರು ಅಭಿಮಾನದಿಂದ ಸ್ವಯಂಪ್ರೇರಿತರಾಗಿ ಕೈಯ್ಯಲ್ಲಿ ಶತಾವಧಾನ ಎಂದು ಬರೆದ ಕೀರ್ತಿಬಾವುಲಿಗಳನ್ನು ಹಿಡಿದು ನಡೆದಿದ್ದರು. ವೈದಿಕರನೇಕರು ವೇದಘೋಷಗಳನ್ನು ನಡೆಸುತ್ತಾ ನಡೆದಿದ್ದರೆ, ನಾದಸ್ವರ ಮತ್ತು ಚಂಡೆ ವಾದಕರು ಮೆರವಣಿಗೆಗೆ ಕಳೆಯಿತ್ತಿದ್ದರು. ಜಯಘೋಷಗಳು ಆಗಾಗ ಮೊಳಗುತ್ತಿರಲು ಮೆರವಣಿಗೆ ಮಂಗಳಮಂಟಪಕ್ಕೆ ಬಂತು. ಮಂಗಳಮಂಟಪದ ದ್ವಾರದಲ್ಲಿ ಬುಧಜನರನೇಕರು ಶತಾವಧಾನಿಗೆ ಶುಭಕೋರಿ ಸ್ವಾಗತಿಸಿದರು. ವೇದಿಕೆಯೆಡೆಗೆ ಬಿಜಯಂಗೈದ ಗಣೇಶರು ಮಧ್ಯೆ ಆಸೀನರಾದಮೇಲೆ ಪೃಚ್ಛಕರು ತಮ್ಮ ಹೆಸರುಗಳನ್ನು ಕರೆದಂತೆ ಬಂದು ಆಸನದಲ್ಲಿ ಮಂಡಿಸಿದರು. ವಂದನಾ ಗೀತೆಯೊಂದಿಗೆ ಆರಂಭವಾದ ಶತಾವಧಾನ ಸಮಸ್ಯಾಪೂರಣ ಭಾಗದಿಂದ ಮೊದಲನೇ ಸುತ್ತಿನಲ್ಲಿ ಆರಂಭಗೊಂಡಿತು. ದತ್ತಪದಿ, ಆಶುಕವಿತೆ, ಕಾವ್ಯವಾಚನ, ಸಂಖ್ಯಾಬಂಧ, ಚಿತ್ರಕಾವ್ಯ, ಅಪ್ರಸ್ತುತಪ್ರಸ್ತುತಿ ಹೀಗೆ ಹಲವು ಅಂಗಗಳಲ್ಲಿ ಸಾಹಿತ್ಯದ ಮಜಲುಗಳು ಮಗ್ಗುಲು ತಿರುಗುತ್ತಿದ್ದವು. ಸಾಹಿತ್ಯಾಸಕ್ತಿರಿಗೆ ’ಪದ್ಯಪಾನ’ ಅರ್ಪಿಸಿದ ರಾಜ್ಯೋತ್ಸವದ ನಿಜವಾದ ಕೊಡುಗೆ ಇದಾಗಿತ್ತು. ಪದ್ಯಪಾನದ ಮಿತ್ರಬಳಗ, ತಮ್ಮ ತನು-ಮನ-ಧನ ವ್ಯಯಿಸಿ ಹಗಲಿರುಳೂ ಶ್ರಮವಹಿಸಿ ರೂಪಿಸಿದ ಕಾರ್ಯಕ್ರಮ ಇದಾಗಿತ್ತು. ಅವರಿಗೆ ಅಕ್ಷರಗಳಲ್ಲಿ ವಂದನೆಗಳನ್ನು ಹೇಳಿದರೆ ತೀರಾ ಬಾಲಿಶವಾದೀತು; ಕೃತ್ರಿಮವಾದೀತು.   

ಅವಧಾನವನ್ನು ನಾನು ನೋಡಿದ್ದೆನೇ ಹೊರತು ವೇದಿಕೆಯಲ್ಲಿ ಪೃಚ್ಛಕನಾಗಿ ಭಾಗವಹಿಸಿರಲಿಲ್ಲ; ಹಾಗೊಂದು ನಿರೀಕ್ಷೆಕೂಡ ಇಟ್ಟುಕೊಂಡಿರಲಿಲ್ಲ. ೭ ತಿಂಗಳ ಹಿಂದೆ ಪೃಚ್ಛಕರ ಹುಡುಕಾಟ ಆರಂಭಿಸಿದ ’ಪದ್ಯಪಾನ’ ನನ್ನಲ್ಲೂ ಭಾಗವಹಿಸುವಂತೇ ಕೇಳಿತು; ಒಪ್ಪಿಕೊಳ್ಳುವ ಧೈರ್ಯ ಇರಲಿಲ್ಲ, ಯಾಕೆಂದರೆ ಪ್ರಶ್ನೆ ಕೇಳುವುದು ಯಾರಲ್ಲಿ ಎಂಬುದನ್ನು ಬಲ್ಲೆನಾದ್ದರಿಂದ ಪ್ರಶ್ನೆಗಳನ್ನು ಕೇಳಲು ನಾನು ಸಮರ್ಥನೇ ಎಂದು ಚಿಂತಿಸುತ್ತಿದ್ದೆ; ಎರಡುಮೂರು ದಿನಗಳಕಾಲ ಉತ್ತರಕೊಡಲಿಲ್ಲ. ಕೊನೆಗೆ ಮಿಂಚಂಚೆಯಲ್ಲಿ ಒಪ್ಪಿಗೆ ಸೂಚಿಸಿದೆ. ಪ್ರಶ್ನೆಗೆ ಅವಧಾನಿಗಳು ತಿರುಪ್ರಶ್ನೆ ಹಾಕಿಬಿಟ್ಟರೆ ಜೀರ್ಣಿಸಿಕೊಳ್ಳುವ ತಾಕತ್ತು ನನಗೆಲ್ಲಿ ಎಂಬ ಕಾರಣವೇ ನನ್ನನ್ನು ಹಿಂಡುತ್ತಿತ್ತು. ಮೇಲಾಗಿ ಅವಧಾನಿ ಗಣೇಶರು ಅವಧಾನಗಳಲ್ಲಿ ಕಟ್ಟುನಿಟ್ಟು, ಅಲ್ಲಿ ಪ್ರೀತಿನಾತಿಯಿಂದ, ಸ್ನೇಹದ ಸಂಕೋಲೆಯಿಂದ ಯಾರನ್ನೂ ಕರೆಯುವುದಿಲ್ಲ, ಪೃಚ್ಛಕರು ಅವಧಾನ ನಡೆಯುವ ವಾರಕ್ಕೂ ಮುಂಚೆ ಅವರನ್ನು ಸಂಪರ್ಕಿಸುವುದನ್ನು ನಿಲ್ಲಿಸಬೇಕಾಗುತ್ತದೆ; ಯಾಕೆಂದರೆ ಪೃಚ್ಛಕರ-ಅವಧಾನಿಗಳ ನಡುವೆ ಯಾವುದೋ ಮ್ಯಾಚ್ ಫಿಕ್ಸಿಂಗ್ ಇದೆ ಎಂಬ ಭಾವನೆ ಈಗಿನ ಜನರಲ್ಲಿ ಮೂಡಲೂಬಹುದು ಎಂಬ ಕಾರಣಕ್ಕೆ. ಶತಾವಧಾನದಲ್ಲಂತೂ ದೂರದ ಊರುಗಳಿಂದ ಮತ್ತು ವಿದೇಶಗಳಲ್ಲಿ ವಾಸಿಸುವ ಕನ್ನಡಿಗರು ಪೃಚ್ಛಕರಾಗಿ ಬಂದಿದ್ದರು. ವ್ಯವಸ್ಥೆಯ ಹೊಣೆಯನ್ನು ’ಪದ್ಯಪಾನ’ ಹೊತ್ತುಕೊಂಡಿತ್ತು. ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡೂ ಅಭಿಜಾತ ಕಾವ್ಯ-ಸಾಹಿತ್ಯದಲ್ಲಿ ಆಸಕ್ತಿ ತಳೆದು, ಪದ್ಯವಿದ್ಯೆಯನ್ನು ಕಲಿಸುವ ಸಲುವಾಗಿ ಕಲೆತ ಹಲವು ಸಮಾನ ಮನಸ್ಕರ ಸಂಸ್ಥೆ ’ಪದ್ಯಪಾನ.’ ಗಣೇಶರಿಗೆ ೫೦ನೇ ಜನ್ಮದಿನದ ಗುರುತಿಗಾಗಿ ’ಪದ್ಯಪಾನ’, ’ಶತಾವಧಾನ’ ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಕಾರ್ಯಕ್ರಮದಲ್ಲಿ ನಖದಿಂದ ಶಿಖದವರೆಗೆ ಎನ್ನುವಂತೇ ಆದಿಯಿಂದ ಅಂತ್ಯದವರೆಗೆ ಪ್ರತೀ ಹೆಜ್ಜೆ ಅಚ್ಚುಕಟ್ಟಾಗಿತ್ತು. ಒಳ್ಳೆಯ ಸಭಾಗೃಹ, ಉತ್ತಮ ವೇದಿಕೆ, ಅದಕ್ಕೆ ಸರಳ ಅಲಂಕಾರ, ಧ್ವನಿ-ಬೆಳಕುಗಳ ಸಂಯೋಜನೆ, ಹೊರವಲಯದಲ್ಲಿ ಗಣೇಶರ ಪುಸ್ತಕಗಳ ಮಾರಾಟದ ಮಳಿಗೆ, ಸಾರ್ವಜನಿಕರಿಗೆ ಊಟ-ತಿಂಡಿಗೆ ಹೋಟೆಲ್, ಪೃಚ್ಛಕರಿಗೆ ವಾಹನಾದಿ ಸಾಗಾಟ ವ್ಯವಸ್ಥೆ, ಊಟ-ತಿಂಡಿ ಎಲ್ಲವನ್ನೂ ಹೇಗಿರಬೇಕೋ ಹಾಗೇ ಇರಿಸಿದ್ದರು. ಸಾಹಿತ್ಯಾಸಕ್ತ ಸ್ವಯಂಸೇವಕರು ತಮ್ಮ ಪೂರ್ಣ ಸಮಯವನ್ನು ನಮ್ಮೆಲ್ಲರ ಸೇವೆಗಾಗಿ ಮೀಸಲಿಟ್ಟು, ಕುಡಿಯುವ ನೀರು, ಕಾಫಿ-ಟೀ ಎಲ್ಲವನ್ನೂ ಸರಬರಾಜು ಮಾಡುತ್ತಿದ್ದರು. ಮಾತಿನಲ್ಲೂ ಅದೆಂಥಾ ಆತ್ಮೀಯತೆ ಅಂತೀರಿ! ಮೂರು ದಿನಗಳು ಕಳೆದಿದ್ದು ತಿಳಿಯಲೇ ಇಲ್ಲ! ಭಾನುವಾರ ರಾತ್ರಿ ೮ ಗಂಟೆಗೆ ಅವಧಾನ ಮುಗಿದಾಗ ಮುಗಿದುಹೋಯ್ತಲ್ಲ ಎಂಬ ಭಾವನೆ; ಇನ್ನಷ್ಟು ಬೇಕಿತ್ತು ಎಂಬ ಹಪಹಪಿಕೆ. ಏನೂ ಅಲ್ಲದ ನನ್ನನ್ನು ವೇದಿಕೆಗೆ ಹತ್ತಿಸಿದ್ದರಲ್ಲಾ ಆ ಗುಂಗಿನಲ್ಲಿ ನನಗೆ ನನ್ನ ಪ್ರಶ್ನಾಭಾಗವಾದ ಆಶುಕವಿತೆಯಲ್ಲಿ ಏನನ್ನು ವಸ್ತುವನ್ನಾಗಿ ಕೊಡಬೇಕೆಂದೇ ತೋಚಲಿಲ್ಲ! ಏನೇನೋ ಚೀಟಿಗಳಲ್ಲಿ ಬರೆದುಕೊಂಡಿದ್ದೆ, ಬರೆದಿದ್ದನ್ನು ಕೇಳಲೇ ಇಲ್ಲ. ವೇದಿಕೆಯಲ್ಲಿ ನಿಜಕ್ಕೂ ಹೂತರಥದ ಗಾಲಿಯನ್ನೆತ್ತುವ ಕರ್ಣನಂತಹ ಮನೋಸ್ಥಿತಿಯಲ್ಲಿ ನನ್ನ ಮನೋಗತವನ್ನು ಯಾರಲ್ಲಿ ಹೇಳಿಕೊಳ್ಳಲಿ? ಸುದೈವದಿಂದ ಬಹಳಹೊತ್ತು  ನನ್ನ ಸರದಿ ಬರಲಿಲ್ಲ; ದೇವರು ಬಚಾವ್ ಮಾಡಿದ ಎಂದುಕೊಂಡೆ. ಸುತ್ತಲೂ ಕಣ್ಣಾಡಿಸಿದಾಗ ಭೀಷ್ಮ, ದ್ರೋಣ, ಜಯದ್ರಥರಂತಹ ವೀರ ಸೇನಾನಿಗಳು ಒಂದೆಡೆಯಾದರೆ ಪರಮಾತ್ಮ ಕೃಷ್ಣ ಗಣೇಶರ ರೂಪದಲ್ಲಿ ಇರುವಂತೇ ಕಂಡಿತು, ಕೌರವ-ಪಾಂಡವ ಎಂಬ ಪಕ್ಷಗಳೇನೂ ಇಲ್ಲದಿದ್ದರೂ ಅತಿರಥ ಮಹಾರಥರ ಮುಂದೆ ನಾನಾದರೂ ಏನು ಎಂದು ಚಿಂತಿಸುವಾಗ ಕುಳಿತಲ್ಲೇ ಸ್ತಬ್ಧನಾದೆ [ಇದು ಕೀಳರಿಮೆಯಲ್ಲ,    ಆತ್ಮವಿಶ್ವಾಸದ ಕೊರತೆಯೂ ಅಲ್ಲ, ಕೇವಲ ಅನಿಸಿಕೆ ಎಂಬುದನ್ನು ಗಮನಿಸಬೇಕು] ; ಆ ಕ್ಷಣಕ್ಕೆ ನೆನಪಾಗಿದ್ದು ’ಬಂಗಾರದ ಅಂಗಡಿಯಲ್ಲಿ ನೊಣಕ್ಕೇರ್ನು ಕೆಲಸ’!  ಶತಾವಧಾನದ ಇಡೀ ವೇದಿಕೆಯೇ ಒಂದು ಬಂಗಾರದ ಅಂಗಡಿಯಾದರೆ ಅಲ್ಲಿ ನಾನೊಬ್ಬ ನೊಣ ಎಂಬುದು ಕಲ್ಪನೆ.  ನನ್ನ ಸರದಿ ಬಂದೇ ಬಿಟ್ಟಿತು ! ನನ್ನ ಮಾತು ಹೀಗಿತ್ತು :

ಶೆಟ್ಟಿಯಂಗಡಿಯಿಟ್ಟ ಸಾವ್ರಾರು ಸಾಮಾನು ! 
ಸಟ್ಟನೆಯೆ ಕೊಟ್ಟನವ ಭಟ್ಟ ಕೇಳಿದನ
ಮಟ್ಟಸದ ಮಾತುಂಟು ಹಾಡುಂಟು ಕಥೆಯುಂಟು
ಗಟ್ಟಿಗನು ಅವಧಾನಿ | ಜಗದಮಿತ್ರ

ಜಗದಮಿತ್ರನ ಕಾವ್ಯದ ಮೂಲಕ ಅವಧಾನಿಗಳಿಗೆ ನುಡಿನಮನ ಸಲ್ಲಿಸಿದ್ದೇನೆ. ಅವಧಾನಕಲಾಪುನರ್ಪ್ರತಿಷ್ಠಾಪನಾಚಾರ್ಯ ಋಷಿ ಗಣೇಶರಿಗೆ ಸಾಷ್ಟಾಂಗ ನಮಸ್ಕಾರಗಳು, ಪ್ರಚ್ಛಕಬಂಧುಗಳಿಗೆ ನಮಸ್ಕಾರಗಳು, ಸಭಾಸದರಿಗೆ ನಮಸ್ಕಾರಗಳು. ವಸ್ತು ಹೀಗಿದೆ-

’ಬಂಗಾರದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ’ ಎಂಬುದನ್ನು ಸಾಂಗತ್ಯದಲ್ಲೂ

ಅಥವಾ ಇನ್ನೊಂದು ಆಯ್ಕೆ,

ಬಿಡದಿ ನಿತ್ಯಾನಂದನ [ರಾಸಲೀಲಾ ರಹಿತ]ವೇಷಗಳನ್ನು ಭೋಗಷಟ್ಪದಿಯಲ್ಲಿ ಕೆಟ್ಟದಾಗಿ ಬಣ್ಣಿಸಬೇಕಾಗಿ ಪ್ರಾರ್ಥನೆ.

ಅವಧಾನಿಗಳು ನೊಣದ ಪ್ರಶ್ನೆಯನ್ನೇ  ತೆಗೆದುಕೊಂಡರು, ಸಾಂಗತ್ಯ ಹೇಳಿದರು :


ಹೊನ್ನೀನ ತೂಕದೆ ನೊಣಕೇನು ಕೆಲಸವು
ಬಿನ್ನಾಣವಾಯ್ತೆನ್ನಬೇಡಾ
ಹೊನ್ನೀನ ತೂಕದಿ ನೊಣಕೇನು ಕಜ್ಜವು
ಭಿನ್ನವು ತಾನಾಯ್ತು ಬೆಲೆಯು

ಹೊನ್ನಿನಂಗಡಿಯಲ್ಲಿ ದುಬಾರಿ ಬೆಲೆಯ ಹೊನ್ನನ್ನು ತೂಗುತ್ತಾರಲ್ಲಾ ಅದನ್ನು ತೂಗುವಾಗ ನೊಣ ತಕ್ಕಡಿಯಲ್ಲಿ ಕೂತರೆ ಅದರ ಭಾರವೂ ಲೆಕ್ಕಕ್ಕೆ ಬರುತ್ತದೆ, ನೊಣದ ತೂಕ ನಗಣ್ಯವಾದರೂ ಹೊನ್ನಿನ ತೂಕದಲ್ಲಿ ಅದು ದುಬಾರಿ ಬೆಲೆಯುಳ್ಳದ್ದು ಎಂಬುದು ಉತ್ತರ.


ನಾನು ಬರೆದ ಪದ್ಯ ಹೀಗಿತ್ತು -

ಕುಳಿತಿತ್ತು ನೊಣವೊಂದು ಸ್ವರ್ಣಮಹಲಿಗೆ ಬಂದು
ಪುಳಕಗೊಳ್ಳುತ ಲೇಸನರಸಿ
ಫಳಫಳನೆ ಹೊಳೆವ ಬಂಗಾರದ ಮೇಲ್ಗಾಳಿ
ಥಳುಕು ರೆಕ್ಕೆಗೆ ತಾಗಲೆನಿಸಿ

ಅಥವಾ

ಕೂತಿತ್ತು ನೊಣವೊಂದು ಸ್ವರ್ಣಮಹಲಿಗೆ ಬಂದು
ನಾಕದ ಲೇಸತಾನರಸಿ
ತೂಕದ ಬಂಗಾರ ಸೋಕಿದ ಗಾಳಿಯು
ತಾಕುತ ಹೊಳೆವುದ ಬಯಸಿ

ಬಂಗಾರದಂಗಡಿಯಲ್ಲಿ ಹೊಳೆವ ಬಂಗಾರದ ಆಭರಣಗಳಮೇಲೆ ಹಾಯ್ದ ಗಾಳಿ ತನ್ನ ರೆಕ್ಕೆಗಳಿಗೆ ತಾಗಿ ಅವುಗಳಿಗೂ ತುಸು ಹೊಂಬಣ್ಣ ಬರಲಿ ಎಂದೆನಿಸಿ ನೊಣ ಬಂಗಾರದಂಗಡಿಯಲ್ಲಿ ಕುಳಿತಿತ್ತು. ಭಾವಾರ್ಥ: ಅವಧಾನದಲ್ಲಿ ಕುಳಿತ ವಿದ್ವಾಂಸರನೇಕರ ರಸಾಭಿಜ್ಞತೆ, ಕರ್ತೃತ್ವಶಕ್ತಿ ಮತ್ತು ಕ್ರಿಯಾಶೀಲತೆಯಿಂದ, ಅವರ ಜ್ಞಾನದಾಸೋಹದಿಂದ ನನಗೂ ಸ್ವಲ್ಪ ಜ್ಞಾನಾನ್ನ ಲಭಿಸಿದರೆ ಒಳಿತು ಎಂದುಕೊಂಡು ನಾನು ವೇದಿಕೆಯಲ್ಲಿ ಕುಳಿತಿದ್ದೆ ಎಂಬುದಾಗಿ.


ಗಂಟೆ ಕಳೆದು ನನ್ನ ಇನ್ನೊಂದು ಪ್ರಶ್ನೆ :


ಕವಿಕಲ್ಪನೆಯಲ್ಲಿ  ವ್ಯಾಸ-ಕುಮಾರವ್ಯಾಸ ಪ್ರಥಮಭೇಟಿಯಲ್ಲಿ ಮೊದಲ ಮಾತು ಎಂಬ ಕುರಿತು ಭಾಮಿನಿಯಲ್ಲಿ ಬಣ್ಣಿಸಬೇಕೆಂಬ ವಿನಂತಿ.

ಅವಧಾನಿಗಳು ಈ ಲೇಖನದ ಆರಂಭದಲ್ಲಿ ಹೇಳಿದ ಭಾಮಿನಿಯನ್ನು ಉತ್ತರವಾಗಿ ನೀಡಿದರು.

ನನ್ನ ನಿವೇದನೆ ಹೀಗಿತ್ತು--

ವ್ಯಾಸರ ಮಾತು :

ಕುವರಬಾರೆಲೆ ಬರೆದು ಭಾರತ
ವಿವರವಾಗಿಯೆ  ತಿಳಿಸುತೆಲ್ಲೆಡೆ
ಪ್ರವರ ಪೇಳದೆ ನುಡಿದ ಪರಿಯದು ಛಂದ ಚಂದನವು |
ಬೆವರ ಹನಿಯಲು ಕಂಡೆ ಭಾಮಿನಿ
ತವರುನಾಡಿಗರೆಲ್ಲ ಧನ್ಯರು
ನವಿರು ಕಾವ್ಯದ ಸೊಬಗು ಸವಿಯಲು ಮನಕೆ ನಂದನವು || 


ಕುಮಾರವ್ಯಾಸನ ಮಾತು :

ದೇವನಾಗರಿ ಅರಿಯದವರಿಗೆ
ದೇವ ನಿಮ್ಮಯ ಮೂಲಕಥೆಯನು
ಭಾವಪೂರಿತವಾಗಿ ತಲುಪಿಸೆ ಓಲೆಕಾರನಿವ |
ಜೀವತುಂಬುತ ಜಡಕೆ ಚೇತನ
ವೀವ ನಾರಾಯಣನ ಚರಣಕೆ
ತೇವಮನದಲಿ ತಲೆಯಬಾಗಿಹೆ ತಿಳಿಸಿ ಕಾರಣವ ||

ಹೀಗೆ ಪದ್ಯಗಳನ್ನು ರಚಿಸುತ್ತಾ ಆಸ್ವಾದಿಸುತ್ತಾ ಸಮಯ ಸರಿದದ್ದು ತಿಳಿಯಲೇ ಇಲ್ಲ. ನೂರು ಪ್ರಶ್ನೆಗಳಿಗೆ ನೂರಕ್ಕಿಂತಾ ಹೆಚ್ಚಿನ ಉತ್ತರಗಳನ್ನು ನೀಡಿದ ಅವಧಾನಿಗಳನ್ನು ಕಂಡಾಗ ನಾವೆಲ್ಲ ಮತ್ತೊಮ್ಮೆ ಬೆರಗಾಗಿದ್ದೆವು. ಅವಧಾನವನ್ನು ಧಾರಣೆ ಮಾಡಿಮುಗಿಸಿದ ಅವಧಾನಿಗಳಿಗೆ ಮೇಲಿನಿಂದ ಪುಷ್ಪವೃಷ್ಟಿಯಾಗುತ್ತಿದ್ದಂತೆಯೇ ನಡುವೇದಿಕೆಯಲ್ಲಿ ಅವಧಾನಿಗಳು ಸಭೆಗೆ ನಮಸ್ಕಾರ ಮಾಡಿದರು. ನಂತರ ’ಪದ್ಯಪಾನ’ ಕೇಳಿಕೊಂಡಮೇರೆಗೆ ಚಿತ್ರಕಾವ್ಯದ ಬಂಧಗಳನ್ನು ಸಭಿಕರಿಗೆ ವಿವರಿಸಿದರು. ಪದ್ಯಪಾನದ ಸಲಹೆಗಾರರಾದ ಡಾ| ರಾಮಸ್ವಾಮಿಯವರು ಎರಡುಮಾತುಗಳನ್ನಾಡಿದರು. ಆ ನಂತರ ಅವಧಾನಿಗಳು  ತಮ್ಮ ಹಸ್ತದಿಂದಲೇ ಪೃಚ್ಛಕರಿಗೆ ಸನ್ಮಾನ ನೆರವೇರಿಸಿದರು. ಪದ್ಯಪಾನದ ವತಿಯಿಂದ  ಗಣೇಶರನ್ನು ಸನ್ಮಾನಿಸಿ ಕೈಗೆ ಬಂಗಾರದ ಕಡಗವನ್ನು ತೊಡಿಸಲಾಯ್ತು. ಶಾಲು ಹೊದೆಸಿ,ಫಲತಾಂಬೂಲ ನೀಡಿ ಗೌರವಿಸಿದ ಜನ ಅವಧಾನಿಗಳನ್ನು ನೋಡುತ್ತಾ ವೇದಿಕೆಯೆಡೆಗೇ ಬರುತ್ತಿದ್ದರು. ಯಾರಿಗೂ ಅವಧಾನ ಮುಗಿಸುವುದು ಬೇಕಿರಲಿಲ್ಲ. ಆದರೆ ಕಾಲನಿಲ್ಲಬೇಕಾಲ್ಲಾ? ಸಮಯ ೮:೩೦ ಸಂದಾಗ ಸಭೆ ಮುಕ್ತಾಯವಾಯ್ತು. ಮಂಗಳಮಂಟಪದಲ್ಲಿ ನಡೆದ ಶತಾವಧಾನ ಮಂಗಳ ಕಂಡಿತು. ರಾಜಕೀಯದವರ ಮೇಜುಗುದ್ದುವ ಕುಟಿಲ ಕಾರಸ್ಥಾನಸಹಿತದ ಕುಹಕದ ಆರ್ಭಟವಾಗಲೀ, ಭಾಷಣದ ಹುಳಗಳೆನಿಸಿದ ಕೆಲವರ ಪುಂಖಾನುಪುಂಕದ ಬಿಂಕದ ಶಂಖನಾದವಾಗಲೀ, ಕಾಡುಜಿರಲೆ [ಕಾನ್ ಜಿರಲೆ]ಕೂಗುವಂತೇ ಬಿಟ್ಟೂಬಿಡದೇ ಕೂಗುವವರು ಕೂಗುವುದಾಗಲೀ, ’ಪಿಟೀಲು ಕುಯ್ಯುವವರು’ ಕುಯ್ಯುವುದಾಗಲೀ  ಶ್ರೋತೃಗಳ ವ್ಯವಧಾನವನ್ನು ಒರೆಗೆಹಚ್ಚುವ ಸನ್ನಿವೇಶ ಎಲ್ಲೂ ಇರಲಿಲ್ಲ ಎಂಬುದು ಅತ್ಯಂತ ದೊಡ್ಡ ವಿಷಯ. ಇದ್ದರೆ ಸಭೆ ಹೀಗಿರಬೇಕು ಎನಿಸಿದ್ದು ಜನ್ಮದಲ್ಲಿಯೇ ನನಗೆ ಇಲ್ಲಿಮಾತ್ರ ಎಂದರೆ ತಪ್ಪಾಗಲಾರದು. ಅಪ್ರಸ್ತುತ ಪ್ರಸಂಗಿ ಕೇಳಿದ "ಯಾವುದು ಸತ್ಯ ಯಾವುದು ಭ್ರಮೆ ಎಂಬ ಬಗ್ಗೆ ಉದಾಹರಣೆ ಕೊಡ್ತೀರಾ?" ಎಂಬ ಪ್ರಶ್ನೆಗೆ ಅವಧಾನಿಗಳು " ಅವಧಾನಿಗಳಿಗೆ ಏನೂ ಸಿದ್ಧಿಯಾಗಲೀ ವಿಶೇಷ ಅತಿಮಾನುಷ ಶಕ್ತಿಯ ಸಹಾಯವಾಗಲೀ ಇಲ್ಲ ಎಂಬುದು ಸತ್ಯ, ಬಹಳಜನ ಹಾಗೇನೋ ಇದೆ ಎಂದುಕೊಂಡಿರುವುದು ಭ್ರಮೆ" ಎಂದುತ್ತರಿಸಿದರು. ಅವಧಾನಿಗಳು ಹೇಳಿದ್ದು ಅವರ ವಿಷಯದಲ್ಲಿ ಸರಿಯೇ ಇದೆ. ಅದರಂತೆಯೇ ಗಣೇಶರಂತಹ ದೇವಲೋಕದ ಹೂವಿನ ಜೊತೆಗೆ ನನ್ನಂತಹ ಭೂಲೋಕದ ನಾರು ಸೇರಿಕೊಂಡು ಅವಧಾನಸರಸ್ವತಿಯ ಮುಡಿಗೇರಿದ್ದು ನನಗಿನ್ನೂ ಜೀರ್ಣವಾಗಿಲ್ಲ ಎಂಬುದು ಮಾತ್ರ ಸತ್ಯ, ಭಟ್ಟರು ಉತ್ತಮ ಪ್ರಶ್ನೆ ಕೇಳಿದರು ಎಂಬುದು ಸಭಿಕರಲ್ಲಿ, ಪೃಚ್ಛಕರಲ್ಲಿ, ಅವಧಾನಿಗಳಲ್ಲಿ ಹುಟ್ಟಿದ ಭ್ರಮೆ.     

ಭುವನದ ಭಾಗ್ಯ ಶತಾವಧಾನಿ ರಾ. ಗಣೇಶರ ಜನ್ಮ ಕನ್ನಡನಾಡಲ್ಲೇ ಆಯ್ತು, ಇವತ್ತು ಅಕ್ಷರಶಃ ಸರ್ವಜ್ಞ ಪದವಿಗೆ ಅರ್ಹರಾದವರೆಂದರೆ ಅತಿಶಯೋಕ್ತಿಯಲ್ಲ. ತಮಾಷೆಯೊಂದು ಹೀಗಿದೆ: ಎಳವೆಯಲ್ಲಿ ಮನೆಯಮುಂದೆ ಓಡಾಡುತ್ತಿದ್ದ ನಾಯಿಯ ಬಾಲಕ್ಕೆ ಕಬ್ಬಿಣದ ಪೈಪಿನ ತುಂಡನ್ನು ಸದಾ ತೂರಿಸಿ ಆಟವಾಡುತ್ತಿದ್ದ ಬಾಲಗಣೇಶರನ್ನು ಕಂಡು ಅಮ್ಮ "ಬೇಡಪ್ಪಾ ಗಣಿ[ಅವರಮ್ಮ ಅವರಿಗೆ ಪ್ರೀತಿಯಿಂದ ಕರೆಯುತ್ತಿದ್ದುದು ಹೀಗೇನೆ]ಅದು ನೆಟ್ಟಗಾಗಲ್ಲ, ಅದು ಸದಾ ಡೊಂಕೇ" ಎಂದರೆ "ಇಲ್ಲಮ್ಮಾ  ನಾನು ಪೈಪನ್ನು ಬೆಂಡ್ ಮಾಡಿಕೊಳ್ತಾ ಇದ್ದೀನಿ" ಎಂದಿದ್ದರಂತೆ ಗಣೇಶರು; ಕ್ರಿಯಾಶೀಲತೆಗೆ ಇದಲ್ಲವೇ ಉದಾಹರಣೆ? ಅವರ ಸಹಪಾಠಿ, ಚಿತ್ರನಟ ರಮೇಶ್ ಅರವಿಂದ್ ಹೇಳಿದ್ದಾರೆ:"ಸದಾ ಪಂಚೆಯನ್ನುಟ್ಟು ಶಾಲು ಹೊದ್ದು ಬರುವ ಗಣೇಶರು ನಮ್ಮಿಂದ ಬೇರೆಯಾಗಿ ತೋರುತ್ತಿದ್ದರು, ಆಟ-ಪಾಠ-ನಾಟಕಗಳಲ್ಲಿ ನಮ್ಮೆಲ್ಲರೊಂದಿಗೂ ಸಹಜವಾಗಿ ಬೆರೆಯುತ್ತಿದ್ದರೂ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಈತ ಮುಂದೇನಾಗಬಹುದು ಎಂಬುದೇ ನಮ್ಮೆಲ್ಲರ ಆಲೋಚನೆಯಾಗಿತ್ತು." ಮೆಟಲರ್ಜಿಕಲ್ ಎಂಜಿನೀಯರಿಂಗ್ ಮುಗಿಸಿಯೂ ಆ ಆಧಾರದ ಉದ್ಯೋಗವನ್ನು ಬಯಸದ ಗಣೇಶರ ಮಾರ್ಗ ಮೊದಲೇ ನಿರ್ಧರಿತವಾಗಿತ್ತು. ಇವತ್ತು ಈ ಅಖಂಡ ಭಾರತದಾದ್ಯಂತ ಇರುವ ಸನ್ಯಾಸಿಗಳಲ್ಲಿಲ್ಲದ ಅಗಣಿತ ಪಾಂಡಿತ್ಯವನ್ನು ಗಣೇಶರು ಪಡೆದುಕೊಂಡಿದ್ದಾರೆ-ಅದು ನಮ್ಮೆಲ್ಲರ ಹೆಮ್ಮೆ. ಅಭಿಜಾತ ಕಾವ್ಯ-ಸಾಹಿತ್ಯವನ್ನೂ ಭಾರತೀಯ ಸಂಸ್ಕೃತಿ ಪರಂಪರೆಯನ್ನೂ ಪುನರುಜ್ಜೀವನಗೊಳಿಸುವಲ್ಲಿ ತನ್ನಿಂದಾಗುವ ಸೇವೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೇ ನಡೆಸುತ್ತಿರುವ ಅವರಿಗೆ ಮುಗಿಯಲು ನನ್ನೊಬ್ಬನ ಕೈ ಸಾಲದು; ಈ ವಿಷಯದಲ್ಲಿ ನನಗೆ ಕಾರ್ತವೀರ್ಯನ ತೋಳುಗಳೇ ಸಿಕ್ಕರೂ ತೀರದಾದೀತು! ಆರ್ಷೇಯ ಋಷಿಪರಂಪರೆಯ ಆದರ್ಶವನ್ನು ಪ್ರಾಮಾಣಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಹಂಚುತ್ತಿರುವ ಗಣೇಶರಿಗೆ ಸಮಾಜ ಯಾವ ಪಡಿನೀಡೀತು? ನೀಡಿದರೂ ಅದು ಅವರ ಸೇವೆಗೆ ಸಂದ ಮೌಲ್ಯವಾಗಲು ಸಾಧ್ಯವಿಲ್ಲ! ಜನಸಾಮಾನ್ಯನೊಬ್ಬ ತನ್ನ ಒಂದು ಜನ್ಮದಲ್ಲಿ ಓದಿ ಮುಗಿಸಲಾರದಷ್ಟು ಓದಿದ, ಬರೆದ, ಹಂಚುತ್ತಿರುವ ಗಣೇಶರ ಜ್ಞಾನಸತ್ರ ಸದಾ ನಮಗೆಲ್ಲ ಸಿಗುತ್ತಿರಲಿ ಎಂಬುದಷ್ಟೇ ಭಗವಂತನಲ್ಲಿ ನಮ್ಮ ಬೇಡಿಕೆಯಾಗಿದೆ. ಅಂತಹ ಗಣೇಶರಿಗೆ ನನ್ನ-ನಮ್ಮೆಲ್ಲರ ಸಾಷ್ಟಾಂಗ ವಂದನೆಗಳು.

ಚಂದ್ರಶೇಖರಾಷ್ಟಕ[’ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ’]ದಾಟಿಯಲ್ಲಿ ಈ ಕೆಳಗಿನ ಪದ್ಯ ರಾ.ಗಣೇಶಾರ್ಪಿತ. 

ರಾಗಣೇಶಗೆ ವಂದನೆ ಅಭಿನಂದನೆ ಅಭಿವಂದನೆ
ಈಜಗದ ಸೋಜಿಗವೆ ಸಾಗಲಿ ಸಾಸಿರದ ಅವಧಾನವು |
ಮಾಗಣಿಯು ನಮ್ಮೆಲ್ಲರದು ಅತಿ ಪ್ರೀತಿಯಂದಲಿ ಕಾಡುತಂ
ಬೇಗದಿಂದದನೆಲ್ಲ ಕಾಣುವ ಯೋಗಬರಲೆಂಬರ್ಥದಿಂ ||

Wednesday, November 28, 2012

ಪುರುಷೋತ್ತಮ ಪುರಿ ರಹಸ್ಯ-೩


ಚಿತ್ರಕೃಪೆ: ಅಂತರ್ಜಾಲ
ಪುರುಷೋತ್ತಮ ಪುರಿ ರಹಸ್ಯ-೩

[ರಹಸ್ಯವನ್ನು ತೆರೆದಿರಿಸುವ ಲೇಖನದ ಕೊನೆಯ ಭಾಗ ]

ಪ್ರಣೋ ದೇವೀ ಸರಸ್ವತೀ ವಾಜೇಭಿರ್ವಾಜಿನೀವತಿ| ಧೀನಾಮವಿತ್ರ್ಯವತು| ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್| ಹವಂ ದೇವೀ ಜುಜುಷಾಣಾ ಘೃತಾಚೀ ಶಗ್ಮಾಂ ನೋ ವಾಚಮುಶತೀ ಶೃಣೋತು| ವಾಗ್ದೇವ್ಯೈ ನಮಃ ||

ವಿಜ್ಞಾಪನೆ:

ಸನ್ಮಿತ್ರರೇ, ಸಹೃದಯಿಗಳೇ, ಕನ್ನಡ ಸಾಹಿತ್ಯದ ಒಂದು ಅದ್ಭುತ ಅಂಗ ಅವಧಾನ. ಜಟ್ಟಿಕಾಳಗದಲ್ಲಿ ಮೀಸೆ ತಿರುವುವ ಮಲ್ಲರು ಸೆಣಸಾಡುತ್ತಾರೆ, ಅದು ಕೇವಲ ಭೌತಿಕ ಪಟ್ಟು. ಈ ಮೊದಲೊಮ್ಮೆ ಹೇಳಿದಂತೇ ಮಲ್ಲಗಂಬವನ್ನೇರಿ ನಡೆಸುವ ಕಸರತ್ತು ಮಲ್ಲನ ತಾಕತ್ತು ! ಅದರಲ್ಲೂ ಮೊದಲೇ ನುಣುಪಾದ ಮಲ್ಲಗಂಬಕ್ಕೆ ಎಣ್ಣೆಸವರಿದಮೇಲೆ ಅದನ್ನೇರಿ ಮಧ್ಯೆ ಇನ್ಯಾರೋ ಎರಚುವ ನೀರನ್ನು ಸಹಿಸಿಕೊಂಡು  ಜಾರದೇ, ಬೀಳದೇ ಕಂಬದಮೇಲೆ ನಿಲ್ಲುವುದು, ಕಂಬವನ್ನಾತು ಕಸರತ್ತು ನಡೆಸುವುದು ಪೈಲ್ವಾನನ ಯಾ ಜಟ್ಟಿಯ ಸಾಧನೆ. ಮಾನಸವಾಗಿ ನಿರ್ಮಿತಗೊಳ್ಳುವ ಅಂತಹ ಎಣ್ಣೆಗಂಬವನ್ನೇರಿ ಅಲ್ಲಿ ತನ್ನ ಸಾಧನೆಯನ್ನು ಸಾದರಪಡಿಸುವುದು ಅವಧಾನಿಯ ಕಸರತ್ತು. ಪುಣ್ಯವಶಾತ್, ಸುದೈವವಶಾತ್, ಸೌಭಾಗ್ಯವಶಾತ್ ನಮ್ಮ ಕನ್ನಡನಾಡು ಅಂತಹ ಒಬ್ಬ ಶತಾವಧಾನಿಯನ್ನು ಪಡೆದಿದೆ. ಅಳಿದುಹೋಗುತ್ತಿದ್ದ ಕಲೆಯನ್ನು ಎತ್ತಿಹಿಡಿದು ಹಲವರಿಗೆ ಅದರ ಭಾವ ಲಾಲಿತ್ಯವನ್ನೂ, ಕಾವ್ಯ ವಿನೋದವನ್ನೂ, ಛಂದದ ಚಂದವನ್ನೂ, ಪ್ರಾಸದ ಹಾಸವನ್ನೂ, ಪದಪುಂಜಗಳ ಯುಗಳಯುಗ್ಮ ವಿಶೇಷಗಳನ್ನೂ, ಸಂಧಿ-ಸಮಾಸಗಳ ಸಾನ್ನಿಧ್ಯವನ್ನೂ ಹಿತಮಿತವಾಗಿ ಹಾಕಿಮಾಡುವ ಪಾಯಸಕ್ಕೆ ಕನ್ನಡದ ಆದಿ-ನವ್ಯ ಕವಿಗಳ ಕವನಗಳ ಸಕ್ಕರೆ ಸೇರಿಸಿ, ಅಪ್ರಸ್ತುತ ಪ್ರಸ್ತುತಿಯೆಂಬ ಲಘುಹಾಸ್ಯವನ್ನು ವ್ಯಂಜನವಾಗಿ ನೆಂಜಿಕೊಳ್ಳಲು ಇರಿಸಿ, ಸಂಖ್ಯಾಬಂಧದೊಂದಿಗೆ ಎಲ್ಲರ ಮನಸ್ಸಿಗೂ ಉಣಬಡಿಸುವ ಸಾಹಿತ್ಯಕ ಕ್ರೀಡೆ ಸುಲಭದ ಕಾರ್ಯವಲ್ಲ. ಇಂಥದ್ದೊಂದಿತ್ತು ಎಂಬುದನ್ನು ಅಂದಾಜು ಕಟ್ಟಲೂ ಸಾಧ್ಯವಿಲ್ಲದ ದಿನಗಳಲ್ಲಿ ೨೨ ವರ್ಷಗಳ ಅಂತಹ ಶತಾವಧಾನವೊಂದು ನಡೆದಿತ್ತು; ಭಾರತದ ಬಹುತೇಕ ಭಾಷೆಗಳೂ ಸೇರಿದಂತೇ ಹಲವು ಭಾಷಾಕೋವಿದರಾದ ಶ್ರೀಯುತ ರಾ, ಗಣೇಶರು ಇದೀಗ ಕನ್ನಡದ ಮೇಲಿನ ಅಭಿಮಾನದಿಂದ, ಅತ್ಯಂತ ಪ್ರೀತಿಯಿಂದ ಅಪ್ಪಟ ಕನ್ನಡವನ್ನೇ ಬಳಸಿ ಶತಾವಧಾನವನ್ನು ನಡೆಸಿಕೊಡುತ್ತಾರೆ. ಚಲಿಸುವ ವಿಶ್ವಕೋಶವಾದ ಅವರನ್ನು  ಯಾರೂ ಈ ಜನ್ಮದಲ್ಲಿ ಓದಿ ಮುಗಿಸಲು ಸಾಧ್ಯವಿಲ್ಲ! ದೈವೀದತ್ತ ನೆನಪಿನ ಕೋಶಗಳಲ್ಲಿ ಅಪಾರ ಪರಿಶ್ರಮದಿಂದ ಹುದುಗಿಸಿದ ಪಾಂಡಿತ್ಯ ಅನನ್ಯವಾಗಿದೆ; ನಿಜಕ್ಕೂ  ಅವರೊಬ್ಬ ಸವ್ಯಸಾಚಿಯೇ, ಗಾಂಡೀವಿಯೇ, ಸರ್ವಜ್ಞನೇ. ನೈಷ್ಠಿಕ ಬ್ರಹ್ಮಚರ್ಯವನ್ನು ಪಾಲಿಸಿ ನಡೆದುಬಂದ ಅವರು ಯಾವ ಋಷಿಗೂ ಕಮ್ಮಿಯಿಲ್ಲ.  

ಕನ್ನಡ ಪಂಡಿತರೆನಿಸಿ ವಿಶ್ವವಿದ್ಯಾಲಯಗಳಲ್ಲಿ ಪಾಠಮಾಡುವ ಉಪನ್ಯಾಸಕರೂ ಕೂಡ ಇವತ್ತು ಕನ್ನಡದ ಬಗ್ಗೆ ಅಷ್ಟಾಗಿ ಪರಿಣತರಲ್ಲ!![ಅಲ್ಲೇನಿದ್ದರೂ ಹಣ ಮತ್ತು ಹುದ್ದೆಗಾಗಿ ನಡೆಯುವುದು ರಾಜಕೀಯದ ಆಟವಷ್ಟೇ] ಹಲವು ವಿದ್ವನ್ಮಣಿಗಳು ಭಾಗವಹಿಸುವ ಶತಾವಧಾನ ಕಾರ್ಯಕ್ರಮ ನಾಡಿದ್ದು ೩೦ ನವೆಂಬರ್ ಮತ್ತು ೧, ೨ ಡಿಸೆಂಬರ್ ದಿನಾಂಕಗಳಂದು ಬೆಂಗಳೂರಿನ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪದಲ್ಲಿ ಜರುಗಲಿದೆ. ಸರಳಜೀವಿಗಳಾದ ಶತಾವಧಾನಿ ಗಣೇಶರನ್ನು ಮೆರವಣಿಗೆಯಲ್ಲಿ ಕರೆತರುವ ಬಗ್ಗೆ ಪ್ರಸ್ತಾಪಿಸಲಾಗಿ ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಬರೆದ ಕೆಲವು ಪುಸ್ತಕಗಳು ಮತ್ತು ಅವಧಾನದ ಕುರಿತ ಹಲವು ಪುಸ್ತಕಗಳ ಜೊತೆಗೆ ಸರಸ್ವತಿಯ ವಿಗ್ರಹದ ಮೆರವಣಿಗೆಯನ್ನು ಶತಾವಧಾನದ ಆಯೋಜಕ ’ಪದ್ಯಪಾನ’ ಸಂಸ್ಥೆ ಹಮ್ಮಿಕೊಂಡಿದೆ. ಇಂಥದ್ದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಹಿತ್ಯಾಸಕ್ತರಿಗೆ ಜ್ಞಾನಯಜ್ಞದಲ್ಲಿ ಭಾಗವಹಿಸಲೂ, ತಿಳಿದುಕೊಳ್ಳಲೂ, ಅವಕಾಶ ಮಾಡಿಕೊಟ್ಟ ಪದ್ಯಪಾನ ಸಂಸ್ಥೆಗೂ ಮತ್ತು ಅವಧಾನಿ ಗಣೇಶರಿಗೂ ಮೊದಲಾಗಿ ಕೃತಜ್ಞನಾಗಿದ್ದೇನೆ. ಕಾರ್ಯಕ್ರಮದ ಮೊದಲ ದಿನ ಅಂದರೆ ನವೆಂಬರ್ ೩೦ರಂದು ಅಪರಾಹ್ನ ೩ ಘಂಟೆಗೆ, ವೇದಘೋಷ ಮತ್ತು ಪೂರ್ಣಕುಂಭಗಳೊಡನೆ ಬಹುಶಾಸ್ತ್ರೀಯವಾಗಿ ನಡೆಯುವ ಈ ಮೆರಣಿಗೆ ಮಂಗಳಮಂಟಪದಿಂದ ತುಸು ದೂರದಲ್ಲಿರುವ ಗಣಪತಿ ದೇವಸ್ಥಾನದಿಂದ ಆರಂಭವಾಗುತ್ತದೆ. ಇದೊಂದು ಸಾಹಿತ್ಯಕ ಐತಿಹಾಸಿಕ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಅತ್ಮೀಯವಾಗಿ, ಹೃತ್ಪೂರ್ವಕವಾಗಿ ಸ್ವಾಗತವನ್ನು ಕೋರುತ್ತಿದ್ದೇನೆ. ಇನ್ನಷ್ಟು ಮಾಹಿತಿ ಇಲ್ಲಿದೆ: http://shathaavadhaani.com/

---------------
ಈಗ ಪುರುಷೋತ್ತಮ ಪುರಿಯ ಕಥೆಯನ್ನು ಮುಂದುವರಿಸೋಣ ಅಲ್ಲವೇ?

ಸಹಸ್ರಾರು ವರ್ಷಗಳ ಹಿಂದೆ ಅವಂತೀ ದೇಶವನ್ನು ಇಂದ್ರದ್ಯುಮ್ನನೆಂಬ ಧರ್ಮಾತ್ಮನಾದ ರಾಜ ಆಳುತ್ತಿದ್ದ. ಸಾಧು ಸಂತರ ಆರಾಧಕನಾಗಿದ್ದ ಆತನಿಗೆ ತೀರ್ಥಯಾತ್ರಿಗಳ ಮುಖೇನ ಪುರುಷೋತ್ತಮ ಕ್ಷೇತ್ರದಲ್ಲಿ ಸಾಕ್ಷಾತ್ ತ್ರಿಲೋಕೀನಾಥನ ದರ್ಶನವಾಗುವುದೆಂಬ ವಿಷಯ ತಿಳಿದುಬಂದಿತ್ತು. ಪುರುಷೋತ್ತಮ ಕ್ಷೇತ್ರದ ಬಗ್ಗೆ ಎಲ್ಲರೂ ಹೇಳುತ್ತಾರೆ ಆದರೆ ಅದು ಎಲ್ಲಿದೆಯೆಂಬ ಬಗ್ಗೆ ಯಾರೂ ಹೇಳುವವರೇ ಇಲ್ಲವಾಗಿದ್ದರು. ಹೀಗಾಗಿ ಪುರುಷೋತ್ತಮ ಕ್ಷೇತ್ರ ಒಂದು ದಂತಕಥೆಯಾಗಿತ್ತು. ರಾಜನಿಗೆ ಆ ಕ್ಷೇತ್ರವನ್ನು ಸಂಪೂರ್ಣವಾಗಿ ಅರಿಯುವ ಮನಸ್ಸಾಯ್ತು. ರಾಜಗುರುವನ್ನು ಕರೆದು ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾಹಿತಿ ಪಡೆಯುವಂತೇ ವಿನಂತಿಸಿದ. ಇದಕ್ಕೆ ತನ್ನ ತಮ್ಮ ವಿದ್ಯಾಪತಿಯೇ ಯೋಗ್ಯವ್ಯಕ್ತಿಯೆಂದು ಭಾವಿಸಿದ ರಾಜಗುರು ಅವನಿಗೆ ಆ ಕಾರ್ಯವನ್ನು ಒಪ್ಪಿಸಿದ.

ಶುಭಮುಹೂರ್ತವೊಂದರಲ್ಲಿ ವಿದ್ಯಾಪತಿ ಪುರುಷೋತ್ತಮ ಕ್ಷೇತ್ರವನ್ನು ಅರಸುತ್ತ ಹೊರಟ. ನೂರಾರು ತೀರ್ಥಸ್ನಾನಗಳನ್ನು ಸಂದರ್ಶಿಸಿದ ಬಳಿಕ ವಿದ್ಯಾಪತಿ ಭುವನೇಶ್ವರಕ್ಕೆ ತಲುಪಿದ. ಅಲ್ಲಿಯ ನೀಲಾದ್ರಿ ಪರ್ವತದಲ್ಲಿ ಸಾಕ್ಷಾತ್ ವಿಷ್ಣುವೇ ವಾಸವಾಗಿದ್ದಾನೆಂದು ಅವನಿಗೆ ಯಾರೋ ತಿಳಿಸಿದರು. ವಿದ್ಯಾಪತಿ ಅಲ್ಲಿನ ದುರ್ಗಮ ಅರಣ್ಯವನ್ನು ದಾಟಿ ಅಲ್ಲಿಗೆ ತಲ್ಪಿದಾಗ, ಅಲ್ಲಿನ ಪ್ರಾಚೀನ ಮೂಲನಿವಾಸಿ ಸಬರ್ ರಾಜನಿಗೆ ತ್ರಿಲೋಕೀನಾಥನ ಸ್ಥಾನದ ಅರಿವಿದೆಯೆಂಬ ವಿಚಾರ ಗೊತ್ತಾಯ್ತು. ಒಮ್ಮೆ ಸಬರ್ ರಾಜ ಸಮುದ್ರದಲ್ಲಿ ತನ್ನ ನೌಕೆಗಳೊಂದಿಗೆ ಸಾಗುತ್ತಿದ್ದಾಗ, ಅಕಸ್ಮಾತ್ ಸಮುದ್ರದಲ್ಲಿ ಜ್ಯೋತಿಯ ದರ್ಶನವಾಯ್ತು. ಚಂಚಲ ಅಲೆಗಳ ನಡುವೆಯೂ ಆ ಜ್ಯೋತಿ ಸ್ಥಿರವಾಗಿ ಪ್ರಜ್ವಲಿಸುತ್ತಿತ್ತು. ಜ್ಯೋತಿಯಿದ್ದೆಡೆಗೆ ನಡೆದ ಸಬರ್ ರಾಜ ಭಾವಾವಿಷ್ಟನಾಗಿ ಜ್ಯೋತಿಯೆದುರು ನಿಂತುಬಿಟ್ಟ. ತನ್ನ ಆಂಗಾಂಗಗಳಲ್ಲಿ ಸಾಕ್ಷಾತ್ ಈಶ್ವರನೇ ತುಂಬಿಕೊಂಡಹಾಗಾಯ್ತು ಆತನಿಗೆ. ನಿತ್ಯವೂ ರಾಜ ಸಮುದ್ರದೆಡೆಗೆ ತೆರಳುತ್ತಿದ್ದ, ಜ್ಯೋತಿ ನಿತ್ಯವೂ ಕಾಣಿಸುತ್ತಿತ್ತು. ಆ ದಿವ್ಯ ಜ್ಯೋತಿಯನ್ನು ಊರಿನಲ್ಲೇ ಸ್ಥಾಪಿಸಿಬಿಡಿ ಎಂದು ಮಂತ್ರಿಗಳು ಸಲಹೆ ಇತ್ತರು. ಸಲಹೆಯೇನೋ ಒಳ್ಳೆಯದೇ ಆದರೆ ಸಾಕ್ಷಾತ್ ಈಶ್ವರನ ಪರಂಜ್ಯೋತಿಯನ್ನು ಎಲ್ಲರೆದುರೂ ಪ್ರದರ್ಶಿಸುವುದು ಸರಿಯೇ? ಎಂಬ ಸಂದೇಹ ಉಂಟಾಯ್ತು. ಜ್ಯೋತಿಯನ್ನು ಗುಟ್ಟಾಗಿ ಸ್ಥಾಪಿಸಬೇಕೆಂದೂ ಅದರ ಮಾಹಿತಿಯನ್ನು ಗೌಪ್ಯವಾಗಿಟ್ಟು ಸ್ವತಃ ರಾಜ ಮಾತ್ರ ಅದನ್ನು ಪೂಜಿಸಬೇಕೆಂದೂ ನಿರ್ಧರಿಸಲಾಯ್ತು.

ಕಟ್ಟಕಡೆಗೆ ದಟ್ಟ ಅಡವಿಗಳ ಮಧ್ಯದ ದುರ್ಗಮ ಪ್ರದೇಶವೊಂದರ ಗುಹೆಯೊಂದರಲ್ಲಿ ರಾಜ ಜ್ಯೋತಿಯನ್ನು ಸ್ಥಾಪಿಸಿದ; ದಿನಾಲೂ ಗುಟ್ಟಾಗಿ ಅಲ್ಲಿಗೆ ಪೂಜೆಗೆ ತೆರಳುತ್ತಿದ್ದ. ಜ್ಯೋತಿ ತಲ್ಪಿದ ಕೆಲವೇ ದಿನಗಳಲ್ಲಿ ಸಬರ್ ದೇಶದ ಸ್ಥಿತಿ ಪೂರ್ತಿ ಬದಲಾಯ್ತು. ಎಲ್ಲೆಡೆಯಲ್ಲೂ ಸುಖ ಸಂಪತ್ತು ನಲಿಯತೊಡಗಿತು. ಇದೆಲ್ಲವೂ ಆ ಜ್ಯೋತಿಯ ಮಹಿಮೆಯೆಂದು ಅಲ್ಲಿನ ಜನ ಹೇಳತೊಡಗಿದರು. ಜ್ಯೋತಿ ಇರುವ ಜಾಗದ ರಹಸ್ಯ ಬಹಿರಂಗಗೊಳ್ಳಬಾರದೆಂದು ಸ್ವತಃ ತಾವೂ ಆ ಜಾಗವನ್ನು ನೋಡದಿರಲು ನಿರ್ಧರಿಸಿದರು. ಪುರುಷೋತ್ತಮ ಕ್ಷೇತ್ರಕ್ಕೆ ತಾನು ಬಂದಿರುವುದು ವಿದ್ಯಾಪತಿಗೆ ಖಚಿತವಾಯ್ತು. ದಿವ್ಯಜ್ಯೋತಿಯ ದರ್ಶನ ಪಡೆಯುವುದು ಮಾತ್ರ ಬಾಕಿ ಉಳಿಯಿತು. ಆತ ಈ ಕುರಿತು ಸಬರ್ ರಾಜನೊಡನೆ ಹಲವು ಬಾರಿ ವಿನಂತಿಸಿದ. ಆದರೆ ರಾಜ ಪ್ರತೀ ಸಲವೂ ನುಣುಚಿಕೊಳ್ಳುತ್ತಿದ್ದ. ವಿದ್ಯಾಪತಿ ಸಬರ್ ರಾಜನ ಅತಿಥಿ ಗೃಹದಲ್ಲೇ ತಂಗಿದ್ದ. ಒಂದು ವರ್ಷ ಪರ್ಯಂತ ರಾಜನಲ್ಲಿ ಬಿಟ್ಟೂ ಬಿಡದೇ, ಜ್ಯೋತಿಯನ್ನು ತೋರಿಸುವಂತೇ ವಿನಂತಿಸುತ್ತಿದ್ದರೂ, ಏನಾದರೂ ನೆಪವೊಡ್ಡಿ ರಾಜ ತಪ್ಪಿಸಿಕೊಳ್ಳುತ್ತಿದ್ದ.   

ಸಬರ್ ರಾಜನಿಗೆ ಲಲಿತೆಯೆಂಬ ಒಬ್ಬ ಮಗಳಿದ್ದಳು. ಅತಿಥಿ ಬ್ರಾಹ್ಮಣನ ಸತ್ಕಾರದಲ್ಲಿ ಯಾವುದೇ ಕೊರತೆ ಉಂಟಾಗಬಾರದೆಂದು ರಾಜ ಮಗಳಿಗೆ ಮೊದಲೇ ಹೇಳಿದ್ದ. ಲಲಿತೆ ಆ ಪ್ರಕಾರ, ಅತಿಥಿಯ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದಳು. ದೈನಿಕ ಜಪ-ತಪಗಳ ನಂತರ ವಿದ್ಯಾಪತಿ ನಗರಕ್ಕೆ ಸಂಚಾರ ಹೊರಡುತ್ತಿದ್ದ. ಅವನು ಕುಶಲಶಿಲ್ಪಿಯಾಗಿದ್ದು, ಮೂರ್ತಿ ಮಾಡಲುಬೇಕಾದ ಎಲ್ಲಾ ಸಾಮಗ್ರಿಗಳನ್ನು ತರಿಸಿಕೊಂಡು ಅತಿಥಿಗೃಹದಲ್ಲೇ ಕಲ್ಲಿನ ಮೂರ್ತಿಯೊಂದನ್ನು ನಿರ್ಮಿಸತೊಡಗಿದ. ಒಂದು ದಿನ ಲಲಿತೆಯನ್ನು ಅಲ್ಲಿಗೆ ಬರಹೇಳಿ, ಮೂರ್ತಿಯಮೇಲಿನ ಪರದೆಯನ್ನು ಏರಿಸುವಂತೇ ಸೂಚಿಸಿದ. ಪರದೆ ಸರಿಯುತ್ತಲೇ, ಎದುರಿಗೆ ಕೈಯ್ಯಲ್ಲಿ ಲೆಕ್ಕಣಿಕೆ ಹಿಡಿದು ಕಾಗದ ಬರೆಯುತ್ತಿರುವ ತನ್ನದೇ ಮೂರ್ತಿಯನ್ನು ಕಂಡು ದಂಗಾದಳು! "ನಾನು ಪತ್ರಬರೆಯುವುದನ್ನು ಯಾವಾಗ ನೋಡಿದಿರಿ? ಈ ಮೂರ್ತಿಯನ್ನು ಯಾವಾಗ ತಯಾರಿಸಿದಿರಿ ? ನೀವು ಗುಟ್ಟಾಗಿ ನನ್ನ ಕೋಣೆಗೆ ಬರುತ್ತಿದ್ದಿರಾ?" ಎಂದು ಕೇಳಿದಳು.  ಅದು ತನ್ನ ಕಲ್ಪನೆಯ ಪರಿಣಾಮವೆಂದೂ, ನೋಡಿದಂದಿನಿಂದ ತನ್ನಲ್ಲಿ ಲಲಿತೆಯೇ ತುಂಬಿಕೊಂಡು ಎಲ್ಲೆಲ್ಲೂ ಅವಳೇ ಕಾಣುತ್ತಾಳೆಂದೂ, ತಾನು ಲಲಿತೆಯನ್ನು ಹಾರ್ದಿಕವಾಗಿ ಪ್ರೀತಿಸುತ್ತೇನೆಂದೂ ತಿಳಿಸಿದ. ವಿದ್ಯಾಪತಿ ಅವಳಿಗೆ ಪ್ರೀತಿಯ ಆಮಿಷವೊಡ್ಡಿ ಜ್ಯೋತಿಯ ದರ್ಶನ ಪಡೆಯುವ ಮಸಲತ್ತು ನಡೆಸಿದ್ದ; ವಾಸ್ತವವಾಗಿ ಅವನಿಗೆ ಅವಳಮೇಲೆ ಪ್ರೀತಿಯೇನೋ ಇರಲಿಲ್ಲ. ಆದರೆ ಲಲಿತೆ ವಿದ್ಯಾಪತಿಯನ್ನು ಬಹಳವಾಗಿ ಮೆಚ್ಚಿದ್ದಳು; ಪ್ರೀತಿಸುತ್ತಿದ್ದಳು. ವಿದ್ಯಾಪತಿಗೆ ಬರೆದ ಪ್ರೇಮಪತ್ರವನ್ನು ನಾಚಿಕೆಯಿಂದ ಕೊಟ್ಟಿರಲಿಲ್ಲ; ಈಗ ಆ ಪತ್ರವನ್ನು ಅವಳು ವಿದ್ಯಾಪತಿಗೆ ಕೊಟ್ಟಳು. ಪತ್ರದ ಪ್ರತೀ ಪದವೂ ಪ್ರೀತಿಯ ಮೇರುವನ್ನು ತೋರುತ್ತಿತ್ತು, ಆದರೆ ವಿದ್ಯಾಪತಿಗೆ ದಿವ್ಯ ಜ್ಯೋತಿಯ ದರ್ಶನ ಪಡೆಯುವ ಉಪಾಯಗಳ ಬಗ್ಗೆ ಮಾತ್ರ ಮನಸ್ಸು ಮುಂದಾಗಿತ್ತು. ಪ್ರೀತಿಯ ಬಲೆಯಲ್ಲಿ ತನ್ನ ಕೆಲಸ ಪೂರ್ಣವಾಗುವುದೆಂದು ಆತ ನಂಬಿದ.   

ವಿದ್ಯಾಪತಿಯ ಸೂಚನೆಯಂತೇ, ಅವನಿಗೆ ಜ್ಯೋತಿಯ ದರ್ಶನ ಮಾಡಿಸಬೇಕೆಂದು ಲಲಿತೆ ದಿನಾಲೂ ತಂದೆಯನ್ನು ಒತ್ತಾಯಿಸತೊಡಗಿದಳು. ಆದರೆ ರಾಜ ತನ್ನ ನಿರ್ಧಾರದಿಂದ ಕದಲಲಿಲ್ಲ. ವಿದ್ಯಾಪತಿಯ ಒತ್ತಾಯವೂ ಹೆಚ್ಚುತ್ತ ಹೋಯ್ತು. ಕಟ್ಟಕಡೆಗೆ ಲಲಿತೆ ಸಿಟ್ಟಿನಿಂದ "ನಾಳೆ ನೀವು ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸದೇ ಹೋದ ಪಕ್ಷದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ" ಎಂದಳು. ಸಬರ್ ರಾಜನಿಗೆ ಬೇರಾವುದೇ ದಾರಿ ಉಳಿಯಲಿಲ್ಲ; ಮಗಳೆಂದರೆ ಅವನಿಗೆ ಸರ್ವಸ್ವ. ಹೆಂಡತಿ ಸತ್ತ ಬಳಿಕ ಮಗಳಿಗಾಗಿಯೇ ಆತ ಬದುಕಿದ್ದ. ಅವಳ ಬಾಯಿಂದ ಇಂಥಾ ಕಠೋರ ವಚನವನ್ನು ಕೇಳಿ ರಾಜ ನಿರುಪಾಯನಾಗಿ, ವಿದ್ಯಾಪತಿಗೆ ಜ್ಯೋತಿಯ ದರ್ಶನ ಮಾಡಿಸಲು ಒಪ್ಪಿಕೊಂಡ. ಆದರೆ ಜ್ಯೋತಿಯಿರುವ ಜಾಗದವರೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ಹೋಗಬೇಕೆಂದು ಷರತ್ತುವೊಡ್ಡಿದ. ವಿದ್ಯಾಪತಿಗೆ ಈ ವಿಷಯ ಹೇಳಿ ಲಲಿತೆ ಮುಗುಳುನಕ್ಕು ಅವನ ಕೈಲಿ ಒಂದು ಮುಷ್ಠಿ ಸಾಸಿವೆ ಬೀಜಗಳನ್ನಿಡುತ್ತಾ ದಾರಿಯುದ್ದಕ್ಕೂ ಅವುಗಳನ್ನು ಚೆಲ್ಲುತ್ತಾ ಹೋಗಲು ತಿಳಿಸಿದಳು. ಗುಹೆಗೆ ತಲುಪುತ್ತಲೇ ಸಬರ್ ರಾಜ ವಿದ್ಯಾಪತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಡಿಸಿದ. ಪರಬ್ರಹ್ಮ ಪರಮೇಶ್ವರ ಸ್ವರೂಪಿಯಾದ ಆ ಜ್ಯೋತಿಯನ್ನು ಕಂಡು ವಿದ್ಯಾಪತಿ ಭಾವಾವಿಷ್ಟನಾದ. ರಾಜನಿಗೆ ಶಾಸ್ತ್ರಗಳ ಜ್ಞಾನವಿರಲಿಲ್ಲ; ಆದರೆ ವಿದ್ಯಾಪತಿಗೆ ಅವು ತಿಳಿದಿದ್ದವು. ದಿವ್ಯದೇಹಧಾರಿಯಾದ ಪರಮಪಿತ ಪರಮೇಶ್ವರ ಸಾಕ್ಷಾತ್ ಎದುರುನಿಂತ ಹಾಗನ್ನಿಸಿತು-ವಿದ್ಯಾಪತಿಗೆ; ಒಂದಷ್ಟೂ ಅಲುಗಾಡದೇ ಭಗವಂತನನ್ನು ಆತ ಸ್ತುತಿಸತೊಡಗಿದ. ಎಷ್ಟೋ ತಾಸುಗಳ ಬಳಿಕ ಸಬರ್ ರಾಜ ವಿದ್ಯಾಪತಿಯನ್ನು ಅಲ್ಲಾಡಿಸಿದ. ನಂತರ ಇಬ್ಬರೂ ಅರಮನೆಗೆ ಮರಳಿದರು. ಈ ವಿಷಯವನ್ನು ಬೇರ್ರಾರಿಗೂ ಹೇಳುವುದಿಲ್ಲವೆಂದು ಪ್ರತಿಜ್ಞೆಮಾಡುವಂತೇ ಸಬರ್ ರಾಜ ವಿದ್ಯಾಪತಿಯನ್ನು ಒತ್ತಾಯಿಸುತ್ತಿದ್ದ. ಆದರೆ ವಿದ್ಯಾಪತಿ ವಿಷಯಾಂತರ ಮಾಡುತ್ತಾ ನುಣುಚಿಕೊಂಡ. ಅವನ ಉದ್ದೇಶ ಈಡೇರಿತ್ತು. ತಾನಿನ್ನು ಊರಿಗೆ ಹೊರಡುವೆನೆಂದ. ತಡೆಯಲು ಲಲಿತೆ ಅದೆಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವಳಿಗೆ ಸುಳ್ಳು ಭರವಸೆ ಇತ್ತು ಆತ ಹೊರಟೇಹೋದ.  

ಇಂದ್ರದ್ಯುಮ್ನ ರಾಜನಿಗೆ ಪುರುಷೋತ್ತಮ ಕ್ಷೇತ್ರದ ದಿವ್ಯಜ್ಯೋತಿಯ ಕತೆ ಹೇಳಿದಾಗ ಅವನ ಕಂಗಳಿಂದ ಶ್ರದ್ಧೆಯ ಕಣ್ಣೀರು ಉಕ್ಕಿಬಂತು. ತನ್ನ ಸೈನ್ಯದೊಂದಿಗೆ ಆ ಸ್ಥಾನಕ್ಕೆ ಆತ ಹೊರಟುನಿಂತೇಬಿಟ್ಟ! ನೀಲಾದ್ರಿ ಪರ್ವತ ಅತಿ ಫಲವತ್ತಾದ ಪ್ರದೇಶ. ಅಲ್ಲಲ್ಲಿ ಹಣ್ಣಿನ ಮರಗಳು ಕಾಣಿಸುತ್ತಿದ್ದವು. ಬೇಸಾಯ ಪ್ರಾಕೃತಿಕ ರೂಪದಲ್ಲೇ ನಡೆಯುತ್ತಿತ್ತು. ವಿದ್ಯಾಪತಿ ಚೆಲ್ಲಿದ್ದ ಸಾಸಿವೆ ಬೀಜಗಳಿಂದ ಗಿಡಗಳು ಹುಟ್ಟಿಬಂದಿದ್ದವು. ದಾರಿ ಸುಲಭವಾಗಿ ತಿಳಿಯುತ್ತಿತ್ತು. ರಾಜ ಇಂದ್ರದ್ಯುಮ್ನ ಅಲೌಕಿಕ ಪರಮಜ್ಯೋತಿಯ ದಿವ್ಯದರ್ಶನ ಪಡೆಯಲು ಕಾತುರನಾಗಿದ್ದ. ಅತ್ಯುತ್ಸಾಹದಲ್ಲಿ ಧಾವಿಸುವ ಭರದಲ್ಲಿ ಸಬರ್ ರಾಜನಿಗೆ ಸಂದೇಶ ಕಳಿಸುವ ಪರಂಪರೆಯನ್ನೂ ಆತ ಮರೆತುಬಿಟ್ಟಿದ್ದ. ರಾಜ ವಿದ್ಯಾಪತಿಯೊಂದಿಗೆ ವೇಗವಾಗಿ ಮುಂದೆಸಾಗಿದ. ಎಲ್ಲವೂ ಮೊದಲಿನಂತೆಯೇ ಇದ್ದವು. ಅಕ್ಕಪಕ್ಕದ ಕಲ್ಲುಗಳೂ ವಿದ್ಯಾಪತಿ ಕೆಲದಿನಗಳ ಹಿಂದೆ ಕುಳಿತು ಧ್ಯಾನಿಸಿದ್ದ ಜಾಗವೂ ಹಾಗೆಯೇ ಇದ್ದವು. ಆತ ಆಚಮನಕ್ಕಾಗಿ ಬಳಸಿ ಮತ್ತೆ ತೊಳೆದಿರಿಸಿದ ತಾಮ್ರದ ಪುಟ್ಟಪಾತ್ರೆಯೂ ಹಾಗೇ ಅಲ್ಲೇ ಇತ್ತು. ಆದರೆ ಅಲ್ಲಿ ಆ ದಿವ್ಯಜ್ಯೋತಿಮಾತ್ರ ಇರಲಿಲ್ಲ!! ಅದು ಅಲ್ಲಿಂದ ಅಂತರ್ಧಾನವಾಗಿತ್ತು. ಇಂದ್ರದ್ಯುಮ್ನ ನಿರಾಶನಾದ. ವಿದ್ಯಾಪತಿ ಚಿಂತಾಮಗ್ನನಾದ, ಅವನು ಲಲಿತೆಯನ್ನು ವಂಚಿಸಿದ್ದೂ ಅಲ್ಲದೇ ಸಬರ್ ರಾಜನಿಗೂ ವಿಶ್ವಾಸಘಾತಕ ಕೃತ್ಯ ಅಮಾಡಿದ್ದ; ಯಾವುದೇ ಸ್ವಾರ್ಥವಿಲ್ಲದೇ ಕೇವಲ ತನ್ನ ರಾಜ್ಯದ ರಾಜನ ಸಲುವಾಗಿಯೇ ಹಾಗೆ ಮಾಡಿದ್ದರೂ ಜನ್ಮಾಂತರಗಳಲ್ಲಾದರೂ ಅದರ ಪಾಪವನ್ನು ಅನುಭವಿಸಬೇಕಾಗುತ್ತದೆ ಎಂಬುದು ಆತನಿಗೆ ಸ್ಪಷ್ಟವಾಗಿತ್ತು; ಆತ ಪದ್ಮಾಸನದಲ್ಲಿ ಕುಳಿತು ಈಶ್ವರನ ಕ್ಷಮೆಯಾಚಿಸಿದ. ಕಾಣದ ಆ ದಿವ್ಯ ಜ್ಯೋತಿಯನ್ನು ರಾಜಾ ಇಂದ್ರದ್ಯುಮ್ನ ಕನಸಿನ ರೂಪದಲ್ಲಿ ಕಂಡ. ಕನಸಿನಲ್ಲಿ ಜಗನ್ನಾಥಸ್ವಾಮಿ ಕಾಣಿಸಿಕೊಂಡು ಸೂಚಿಸಿದಂತೇ  ರಾಜಾ ಇಂದ್ರದ್ಯುಮ್ನ ಮುಂದೆ, ಪುರಿಯಲ್ಲಿ ಜಗನ್ನಾಥ ಮಂದಿರವನ್ನು ನಿರ್ಮಿಸಿ ಅದರಲ್ಲಿ ಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿದ.   

ನಾಥೇ ನಃ ಪುರುಷೋತ್ತಮೇ ತ್ರಿಜಗತಾಮೇಕಾಧಿಪೇ ಚೇತಸಾ
ಸೇವ್ಯೇ ಸೇವ್ಯ ಪದಸ್ಯ ದಾತರಿ ಸುರೇ ನಾರಾಯಣೇ ತಿಷ್ಠತಿ |
ಯಂ ಕಂಚಿತ್ಪುರುಷಾಧಮಂ ಕತಿಪಯಾಗ್ರಾಮೇಶಮಲ್ಪಾರ್ಥದಂ
ಸೇವಾಯೈ ಮೃಗಯಾಮಹೇ ನರಮಹೋ ಮೂಕಾ ವರಾಕಾ ವಯಮ್ ||

ಕೃಷ್ಣೋ ರಕ್ಷತು ನೋ ಜಗತ್ರಯಗುರುಃ ಕೃಷ್ಣಂ ನಮಸ್ಯಾಮ್ಯಹಂ
ಕೃಷ್ಣೇನಾಮರ-ಶತ್ರವೋ ವಿನಿಹತಾಃ ಕೃಷ್ಣಾಯ ತಸ್ಮೈ ನಮಃ |
ಕೃಷ್ಣಾದೇವ ಸಮುತ್ಥಿತಂ ಜಗದಿದಂ ಕೃಷ್ಣಸ್ಯ ದಾಸೋಸ್ಮ್ಯಹಂ
ಕೃಷ್ಣೇ ತಿಷ್ಠತಿ ಸರ್ವಮೇತದಖಿಲಂ ಹೇ ಕೃಷ್ಣ ರಕ್ಷಸ್ವ ಮಾಮ್ ||

                                                          --ಮುಕುಂದಮಾಲಾ

ಪುರಿ ಜಗನ್ನಾಥ ಕ್ಷೇತ್ರದ ಸುತ್ತ ಇಂತಹ ಹಲವಾರು ಕಥೆಗಳೇ ಇವೆ! ಒಂದೊಂದು ಕಥೆಯೂ ವಿಭಿನ್ನ ಮೂಲದಿಂದ ಆರಂಭಗೊಳ್ಳುತ್ತದೆ. ನಿರ್ಗುಣದಿಂದ ಸಗುಣರೂಪವನ್ನು ಉಪದದಾನ ಮಾಡುವ ಪರಬ್ರಹ್ಮ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎರಡನ್ನೂ ಒಪ್ಪಿಕೊಳ್ಳುತ್ತಾನೆ. ಪುರಿಯ ವಿಗ್ರಹಗಳು ಪೂರ್ಣವಲ್ಲ; ಅವು ಅಪೂರ್ಣ ಆಕೃತಿಗಳು; ನೋಡಲು ವಿಚಿತ್ರವಾಗಿವೆ, ಮರದ ವಿಗ್ರಹಗಳಾದರೂ ಗರ್ಭಗುಡಿಯಲ್ಲೂ ನೆಲೆನಿಂತು, ವರ್ಷಂಪ್ರತಿ ಜಾತ್ರೆಯಲ್ಲಿ ರಥಾರೂಢವೂ ಆಗಿ ಚಲಾಚಲ ಮೂರ್ತಿಗಳೆನಿಸಿವೆ. ಬ್ರಹ್ಮದೇವರು ಮೂರ್ತಿಯನ್ನು ಪೂರ್ಣಗೊಳಿಸುವ ಮುನ್ನವೇ, ಭವನದ ಬಾಗಿಲು ತೆರೆದಿದ್ದರಿಂದ ಮೂರ್ತಿಯ ತಯಾರಿ ಅಷ್ಟಕ್ಕೇ ನಿಂತು ಅದೇ ರೂಪದಲ್ಲಿ ಮೂರ್ತಿಗಳು ಪೂಜೆಗೊಳ್ಳುತ್ತಿವೆ ಎಂದೂ ಜನಪದ ಕಥೆ ತಿಳಿಸುತ್ತದೆ. ಇವತ್ತಿಗೂ ಪುರಿಯಲ್ಲಿ ನಾವು ಬಲಭದ್ರ, ಸುಭದ್ರ ಮತ್ತು ಜಗನ್ನಾಥರೆಂಬ ಮುಖವಾಡಗಳ ರೀತಿಯ ಮೂರು ವಿಗ್ರಹಗಳನ್ನು ಕಾಣುತ್ತೇವೆ. ರಾಜಬೀದಿಯಲ್ಲಿ ರಥವೇರಿ ಅವು ಬರುವಾಗ ರಾಜವಂಶಸ್ಥರು ಬೀದಿ ಗುಡಿಸಿ ಸ್ವಚ್ಛಗೊಳಿಸುವ ಶಾಸ್ತ್ರ ನಡೆಸುತ್ತಾರೆ. ವರ್ಷವರ್ಷವೂ ಹೊಸ ಹೊಸದಾಗಿ ಸಿದ್ಧಪಡಿಸಿದ ರಥಗಳನ್ನು ಲಕ್ಷೋಪಲಕ್ಷಜನ ಎಳೆದು ಸಂತಸಪಡುತ್ತಾರೆ. ಇಂತಹ ಪರಬ್ರಹ್ಮನನ್ನು ಸ್ವರೂಪಸಂಧಾನಾಷ್ಟಕ ಆಚಾರ್ಯರು ಹೀಗೆ ವರ್ಣಿಸಿದ್ದಾರೆ:

ಅನಂತಂ ವಿಭುಂ ಸರ್ವಯೋನಿರ್ನಿರೀಹಂ
ಶಿವಂ ಸಂಗಹೀನಂ ಯದೋಂಕಾರಗಮ್ಯಂ |
ನಿರಾಕಾರಮತ್ಯುಜ್ಜ್ವಲಂ ಮೃತ್ಯುಹೀನಂ
ಪರಬ್ರಹ್ಮ ನಿತ್ಯಂ ತದೇವಾಹಮಸ್ಮಿ || 

ಗೀತಗೋವಿಂದವನ್ನು ಬರೆದ ಕವಿ ಜಯದೇವ ತನ್ನ ಅಷ್ಟಪದೀ ಎಂಬ ಸ್ತೋತ್ರದಲ್ಲಿ ಹೀಗೆ ಹೇಳುತ್ತಾನೆ:

ವೇದಾನುದ್ಧರತೇ ಜಗನ್ನಿವಹತೇ ಭೂಗೋಲಮುದ್ಬಿಭ್ರತೇ
ದೈತ್ಯಾನ್ ದಾರಯತೇ ಬಲಿಂ ಛಲಯತೇ ಕ್ಷತ್ರಕ್ಷಯಂ ಕುರ್ವತೇ |
ಪೌಲಸ್ತ್ಯಂ ಜಯತೇ ಹಲಂಕಲಯತೇ ಕಾರುಣ್ಯಮಾತನ್ವತೇ
ಮ್ಲೇಚ್ಛಾನ್ ಮೂರ್ಛಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ ||

ಅಂತೂ ಪುರುಷೋತ್ತಮ ಪುರಿಯ ರಹಸ್ಯವನ್ನು ತಿಳಿದುಕೊಂಡಿದ್ದೀರಿ. ರಹಸ್ಯ ನಿಮಗೆಲ್ಲಾ ತಿಳಿದರೂ ಅದು ಹಾಗೇ ಗೌಪ್ಯವಾಗಿರಲಿ!  ಇಲ್ಲದಿದ್ದರೆ ಸಬರ್ ರಾಜ ಕೋಪಿಸಿಕೊಂಡಾನು, ವಿದ್ಯಾಪತಿ ಮಾಡಿದ ತಪ್ಪಿಗೆ ಅನವರತ ನೊಂದುಕೊಂಡಾನು! ಲಲಿತೆ ಮಾತ್ರ ಸಂತತ ತನ್ನ ಪ್ರಿಯಕರನ ಹಾದಿಕಾಯುತ್ತಿರುವಳೋ ಏನೋ, ಪಾಪ! ಇಂತಹ ಕಥೆಗಳನ್ನು ಕಾರ್ತಿಕ-ಮಾರ್ಗಶೀರ್ಷ ಮಾಸಗಳಲ್ಲಿ ಕೇಳಬೇಕು. ಅಚ್ಚರಿಯೆನಿಸಿದರೂ, ನಂಬಲಸಾಧ್ಯವೆನಿಸಿದರೂ ಘಟಿಸಿದ ಘಟನೆಗಳನ್ನೇ ಆಧರಿಸಿ ಪೂರ್ವಜರು ಕಥೆಗಳನ್ನು ಬರೆಯುತ್ತಿದ್ದರು. ಹುಟ್ಟಿದ ಪ್ರತಿಯೊಂದು ಜೀವಿಗೂ ತನ್ನದ್ದೇ ಆದ ಒಂದು ಕಥೆ ಇದೆ ಅಲ್ಲವೇ? ಹಾಗೊಮ್ಮೆ ನೋಡಿದಾಗ ಹಲವು ಇಂದ್ರದ್ಯುಮ್ನರು ತತ್ಸಮಾನ ವಿದ್ಯಾಪತಿಗಳೂ ಲಲಿತೆಯರೂ ಈ ಜಗದಲ್ಲಿ ಜನ್ಮಾಂತರಗಳಲ್ಲಿ ಹಲವುಬಾರಿ ಬಂದುಹೋಗಿರಬಹುದು, ಈಗಲೂ ಇನ್ನಾವುದೋ ರೂಪದಲ್ಲಿರಲೂ ಬಹುದು; ವಿಚಾರ ಮಥಿಸಿದರೆ ಈ ಜಗ ಸೋಜಿಗ, ಜಗಕ್ಕೊಬ್ಬನೇ ಬಹುದೊಡ್ಡ ಬಾಣಸಿಗ-ಅವನೇ ಪರಬ್ರಹ್ಮ. ಅಂತಹ ಪರಬ್ರಹ್ಮನ ನೆನಕೆಗೆ ಕಾಲ-ದೇಶಗಳ ಗಡುವೇ ಎನ್ನಬೇಡಿ, ಆತ ಗೀತೆಯಲ್ಲಿ ಹೇಳಿದ ಪ್ರಕಾರ ಕಾಲದ/ವರ್ಷದ/ಋತುಗಳ ಕೆಲವೊಂದು ಭಾಗಗಳು ಇಂತಿಂಥಾ ಕೆಲಸಕ್ಕೇ ಮೀಸಲಾಗಿವೆ; ಸಂವತ್ಸರದ ಈ ಕಾಲ ಪುಣ್ಯಕಥೆಗಳನ್ನು ಶ್ರವಣ ಮಾಡುವ ಕಾಲ, ತೀರ್ಥಯಾತ್ರೆಗೂ ಹೋಗುವ ಕಾಲ. ಕಥಾಶ್ರವಣ ಮಾಡಿದ ನಿಮಗೆಲ್ಲಾ ಭಗವಂತ, ಪುರಿಯ ಪುರುಷೋತ್ತಮ ಸುಫಲವನ್ನೀಯಲಿ, ನಮಸ್ಕಾರ. 

Thursday, November 22, 2012

ಪುರುಷೋತ್ತಮ ಪುರಿಯ ರಹಸ್ಯ-೨


ಪುರುಷೋತ್ತಮ ಪುರಿಯ ರಹಸ್ಯ-೨

[ಮುಂದುವರಿದು ಈಗ ಇದು ಎರಡನೇ ಭಾಗ ]

ಪ್ರಮಾದ [ಪೀತ] ಸಾಹಿತ್ಯವನ್ನು ಓದುವುದು ಕ್ಷಣಿಕವಾಗಿ ಮುದವನ್ನು ನೀಡಬಹುದಾದರೂ ಅಂತ್ಯದಲ್ಲಿ ಅದರಿಂದ ಮನೋವೈಕಲ್ಯತೆ ಉಂಟಾಗುತ್ತದೆ; ಹಲವು ವಿಕಾರಗಳು ಮನದ ತುಂಬೆಲ್ಲಾ ತುಂಬಿಕೊಳ್ಳುತ್ತವೆ. ಕಾಲದ ಮಹಿಮೆಯಿಂದ ಬೇಡದ್ದು ಬೇಕಾಗುವುದು, ದುಷ್ಟರೇ ಶಿಷ್ಟರಂತೇ ವಿಜೃಂಭಿಸುವುದು, ಮದ್ಯ-ಮಾಂಸ-ಮಾನಿನಿಯರ ಸಹವಾಸ ಇರುವವರೇ ಸಂಭಾವಿತರಾಗಿಯೂ ನಾಗರಿಕರೆನಿಸಿಯೂ ಬದುಕುವುದು ಇಂದಿನ ವಿಧಿನಿಯಮ. ಮಾಧ್ಯಮಗಳಲ್ಲಿ ಪ್ರತೀ ಹಗಲು ಪ್ರತೀ ರಾತ್ರಿ ಕೊಲೆ-ಸುಲಿಗೆ-ದರೋಡೆ-ಮಾನಭಂಗ-ಪರಸ್ತ್ರೀ ಸಂಗ ಮೊದಲಾದ ಹಲವು ಸಲ್ಲದ ಘಟನಾವಳಿಗಳ ಮಹಾಪೂರವೇ ಹರಿದುಬರುತ್ತಿದೆ. ಘಟನೆಗಳನ್ನು ಪುನರ್ಸೃಷ್ಟಿಗೊಳಿಸಿ ವೈಭವೀಕರಿಸಿ ತನ್ಮೂಲಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದನ್ನೇ ಉದ್ದೇಶವಾಗಿಸಿಕೊಂಡವರು ಮೌಲ್ಯಗಳಿಗೆ ಆದ್ಯತೆ ನೀಡುತ್ತಿಲ್ಲ. ಎಷ್ಟೋ ಕಡೆ ಅಬಾಲವೃದ್ಧರಾದಿಯಾಗಿ ಮನೆಯವರೆಲ್ಲರೂ ಕುಳಿತು ನೋಡುವ ಕೆಟ್ಟಪರಿಪಾಠ ಬೆಳೆದುಬಿಟ್ಟಿದೆ. ಭಜನೆ, ಕೀರ್ತನೆ-ಸಂಕೀರ್ತನೆ, ಪ್ರವಚನ, ಅಥವಾ ಜೀವನದ ಉನ್ನತ ಮೌಲ್ಯಗಳ ಬಗೆಗೆ ಯಾವುದೇ ಕಾರ್ಯಕ್ರಮಗಳಿದ್ದರೆ ಅವುಗಳನ್ನು ನೋಡುವವರು ಕಮ್ಮಿಯಾಗಿದ್ದಾರೆ. ನಾವು ಸೇವಿಸುವ ಆಹಾರ ಕೂಡ ನಮ್ಮ ಮನದಮೇಲೆ ಪರಿಣಾಮ ಬೀರುತ್ತದೆ ಎಂಬ ವೈಜ್ಞಾನಿಕ ನಿಲುವನ್ನು ಅನೇಕರು ಅಲ್ಲಗಳೆಯುತ್ತಾರೆ. ಅಧುನಿಕ ವಿಜ್ಞಾನದ ಆವಿರ್ಭಾವ ಆಗಿರದ ಆ ಕಾಲದಲ್ಲೇ ಬೆಳಿಗ್ಗೆ ಎದ್ದೊಡನೆ [ಶುದ್ಧ ಆಮ್ಲಜನಕವನ್ನು  ಹೇರಳವಾಗಿ ಹೊರಸೂಸುವ] ಅಶ್ವತ್ಥವೃಕ್ಷವನ್ನು ಸುತ್ತಬೇಕೆಂದರು ನಮ್ಮ ಪೂರ್ವಜರು, ಕೊನೇಪಕ್ಷ ಅಂಗಳದಲ್ಲಿರುವ [ಕಾಮಹಾರಿಣಿಯಾದ] ತುಳಸಿಯನ್ನಾದರೂ ಸುತ್ತಬೇಕು ಎಂದರು. ಆಹಾರದಲ್ಲಿ ಸ್ವಾಭಾವಿಕವಾಗಿ ಕೆಲಮಟ್ಟಿಗೆ ಕಾಮೋತ್ತೇಜಕ ಪದಾರ್ಥಗಳು ಸೇರಿರುತ್ತವೆ.

ಕಾಂದಾಬಜೆ ಅಥವಾ ಈರುಳ್ಳಿ ಬಜ್ಜಿ-ಪಕೋಡ ಕರಿಯುವಾಗ ಮೈಲಿಗಟ್ಟಲೇ ಅದರ ಪರಿಮಳ ಹರಡಿ ಜಿಹ್ವಾಚಾಪಲ್ಯದವರನ್ನು ತಿನ್ನಲು ಕರೆಯುತ್ತದೆ! ಈರುಳ್ಳಿ-ಬೆಳ್ಳುಳ್ಳಿ ಇಂಥವೂ ಕೂಡ ಕಾಮೋತ್ತೇಜಕಗಳಾಗಿವೆ. ಅಡಿಗೆ ಮಾಡಿ ತೋರಿಸುವಾಗ ಜನ ರುಚಿಗೆ ತಕ್ಕಷ್ಟು ಉಪ್ಪು ಎಂಬುದು ವಾಡಿಕೆ, ಅದರಂತೇ ಜೀವನಕ್ಕೆ ಧರ್ಮ, ಅರ್ಥ, ಕಾಮ, ಮೋಕ್ಷದ ಜೊತೆಗಿರುವ ಕಾಮ ಇರಬೇಕಾದುದು ಸಂಸಾರಿಗಳಿಗೆ ಸಹಜ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸಾಲಿನಲ್ಲಿರುವ ಕಾಮ ಅಂಟಿಕೊಂಡಾಗ ಜೀವನ  ಇಲ್ಲದ್ದನ್ನು ಬಯಸುತ್ತದೆ! ಧರ್ಮದ ಮೇರೆಮೀರಿ ಕಾಮ ವಿಕಾರಗಳು ಉದ್ಭವವಾಗುತ್ತವೆ. ಪೀತ ಸಾಹಿತ್ಯ ಕೂಡ ಕೆಟ್ಟ ಕೆಲಸಕ್ಕೆ ಅನುಮೋದನೆ ನೀಡುತ್ತದೆ! ಉತ್ತಮವಾದುದನ್ನು ಓದಿದಾಗ ಮನಸ್ಸು ಉತ್ತಮ ನಡೆಯಲ್ಲೇ ಹೆಜ್ಜೆ ಹಾಕುತ್ತದೆ. ನಿಮ್ನವಾದುದನ್ನು ಓದಿದರೆ, ನೋಡಿದರೆ ಮನಸ್ಸು ಆ ಕಡೆಗೇ ವಾಲುತ್ತದೆ. ಕೊಳೆಗೇರಿಯಲ್ಲೇ ಹುಟ್ಟಿ ಅಲ್ಲೇ ಬೆಳೆಯುವ ವ್ಯಕ್ತಿಗೆ ಅದರಿಂದಾಚೆ ಬಂದರೂ ಅದೇ ಸುಖವೆನಿಸುತ್ತದೆ! ಜನ್ಮದಾರಭ್ಯ ಶುಭ್ರವಾದ ಬಟ್ಟೆಗಳನ್ನೋ ಶ್ವೇತವರ್ಣದ ಬಟ್ಟೆಗಳನ್ನೋ ಧರಿಸಿ ಬೆಳೆದ ವ್ಯಕ್ತಿಗೆ ಕೊಂಚ ಕೊಳೆ ತಗುಲಿದರೂ ಅದನ್ನು ತೊಳೆದುಕೊಳ್ಳುವ ವರೆಗೆ ಮನಸ್ಸು ಚಡಪಡಿಸುತ್ತದೆ! ಆಚಾರವಂತ ಬ್ರಾಹ್ಮಣರನೇಕರು ಇಂದಿಗೂ ಈರುಳ್ಳಿ-ಬೆಳ್ಳುಳ್ಳಿಯನ್ನು ಈ ಕಾರಣದಿಂದ ತಿನ್ನುವುದಿಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಊಟವಾದಮೇಲೆ ಅವರು "ಸುಮನಸಃ ಅಸ್ತು  ಸೌಮನಸ್ಯಂ" ಎಂದುಚ್ಚರಿಸುತ್ತಾ ತುಳಸೀ ದಳಗಳನ್ನು ತಿನ್ನುತ್ತಾರೆ. ತುಳಸಿಯಲ್ಲಿ ಕಾಮವಿಕಾರಗಳನ್ನು ತಡೆಗಟ್ಟುವ ಗುಣವಿದೆ. ತುಳಸಿಯ ಸುತ್ತಲ ಹವೆಯಲ್ಲಿ ಕಾಮನಿಗ್ರಹದ ಗುಣವಿರುತ್ತದೆ! ಅದಕ್ಕೆಂದೇ ಋಷಿಗಳಾದಿಯಾಗಿ ಪೂರ್ವಜರು ತುಳಸಿಯನ್ನು ಬಳಸಿದರು. ಕಂಡ ಕಂಡ ಕಾಡುಗಿಡಗಳಿಗೆಲ್ಲಾ ಹಾಗೆ ಆದ್ಯತೆ ನೀಡಲಾಗುವುದೇ? ತುಳಸಿಯಲ್ಲಿ ಹಲವು ಔಷಧೀಯ ಗುಣಗಳನ್ನು ಅವರು ಕಂಡುಕೊಂಡಿದ್ದರು; ತುಳಸಿ ನಿತ್ಯ ಪೂಜನೀಯ ಎಂದರು, ಮನೆಯಮುಂದೆ ಬಲಪಾರ್ಶ್ವದಲ್ಲಿ ಇದ್ದರೆ ಒಳಿತು ಎಂದರು; ದೇವರಿಗೆ ಅತಿ ಪ್ರೀತಿ ಎಂದರು. ಕಾಮಹಾರಿಣಿಯಾದ ತುಳಸಿ ಸನ್ಯಾಸಿಗಳಿಗೂ ಬಹಳ ಇಷ್ಟ. ಅದಕ್ಕೆಂದೇ ಸನ್ಯಾಸಿಗಳಿಗೆ ಬೇರೆಲ್ಲಾ ಹಾರಗಳಿಗಿಂತಾ ತುಳಸೀಕೊಂಬೆಗಳ ಹಾರವನ್ನು ಹಾಕುತ್ತಾರೆ. ಪ್ರಪಂಚದಲ್ಲಿ ಯಾವ ಧರ್ಮ ಶ್ರೇಷ್ಠ ಎಂಬ ಪ್ರಶ್ನೆ ಬಂದಾಗ ಯಾವ ಧರ್ಮ ಆಚರಿಸುವ ವ್ಯಕ್ತಿಯ ಒಳಿತನ್ನೂ ಮತ್ತು ಸುತ್ತಲ ಸಮಾಜದ ಒಳಿತನ್ನೂ ಏಕಕಾಲಕ್ಕೆ ಎತ್ತಿಹಿಡಿಯುತ್ತದೋ ಅಂತಹ ಧರ್ಮ ಶ್ರೇಷ್ಠ ಮಾನವಧರ್ಮವಾಗುತ್ತದೆ; ಈ ಪ್ರಪಂಚದಲ್ಲಿ ಹಾಗಿರುವುದು ಸನಾತನ ಜೀವನಧರ್ಮ ಮಾತ್ರ ಎಂಬುದನ್ನು ಮರೆಯಬಾರದು-ಅದಕ್ಕೇ ’ಧರ್ಮೋ ರಕ್ಷತಿ ರಕ್ಷಿತಃ’ ಎಂದು ಪ್ರಾಜ್ಞರು ತಿಳಿಸಿದ್ದಾರೆ[ಈ ವಿಷಯವನ್ನು ಪ್ರತ್ಯೇಕವಾಗಿ ಸವಿವರವಾಗಿ ಮುಂದೊಮ್ಮೆ ತಿಳಿಯೋಣ.]   

ಪಂಚತಂತ್ರದ ಅಪರೀಕ್ಷಿತಕಾರಕ ಭಾಗದಲ್ಲಿ ತಿರುಕನ ಕನಸು ಎಂಬ ಕಥೆಯೊಂದು ಬರುತ್ತದೆ. ತಿರುಕನ ಕನಸಿನ ಬಗ್ಗೆ ಕನ್ನಡದ ಕವಿಯೋರ್ವರು ಬರೆದ ಹಾಡನ್ನು ನಾವೆಲ್ಲಾ ಕೇಳಿದ್ದೇವಲ್ಲವೇ?   

ತಿರುಕನೋರ್ವನೂರಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸು ಕಂಡನಂತೇನೆ
.
.
.
.
ಬಿಡದೆ ಯಾರ ಕೊರಳಿನಲ್ಲಿ
ತೊಡರಿಸುವುದೊ ಅವರ ಪಟ್ಟ
ಪೊಡವಿಯಾಳ್ವೆನೆಂದು ಮನದಿ ಹಿಗ್ಗುತಿರ್ದನು
.
.
.
ಮುನಿದ ನೃಪರ ದಂಡುಬಂದು
ಮನೆಯಮುತ್ತಿದಂತೆಯಾಗಿ
ಕನಸುಕಾಣುತೆದ್ದು ಹೆದರಿ ಕಣ್ಣುತೆರೆದನು 


ಅಲ್ಲವೇ ? ಈ ಕಥೆಗೆ ತುಸು ಭಿನ್ನವಾಗಿ ಕಾಣುವ ತಿರುಕನ ಕಥೆ ಭಿಕ್ಷುಕರಲ್ಲೂ ಲೋಭಿಗಳು ಇರುತ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಕನಸಿನ ಸೌಧ ಕಟ್ಟುವ ಮನಸ್ಸಿಗೆ  ಯಾವುದೇ ಇತಿಮಿತಿಗಳಿರುವುದಿಲ್ಲ ಎಂಬುದನ್ನೂ ಸೂಚಿಸುತ್ತದೆ. ಆ ಕಥೆ ಹೀಗಿದೆ: ಓಬೀರಾಯನ ಕಾಲದ ನಗರವೊಂದರಲ್ಲಿ ರಂಗಣ್ಣನೆಂಬ ತಿರುಕ ಮಹಾಕೃಪಣನಾಗಿದ್ದು, ದಿನಾ ಬೇಡಿತಂದ ಹಿಟ್ಟಿನಲ್ಲಿ ಅಲ್ಪಸ್ವಲ್ಪವನ್ನು ಉಳಿಸಿ ಒಂದು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿ ಅದನ್ನು ಆತ ನೆಲೆಸಿದ್ದ ಮುರುಕಲು ಮನೆಯ ಗೋಡೆಯ ಗೂಟಕ್ಕೆ ನೇತು ಬಿಟ್ಟಿದ್ದ. ಹರಕುಮುರುಕು ಮಂಚದಲ್ಲಿ ಅಂಗಾತ ಮಲಗಿ ನಿತ್ಯವೂ ಬಹಳ ಹೊತ್ತು ಅದನ್ನೇ ದಿಟ್ಟಿಸುತ್ತಾ ಒರಗಿರುತ್ತಿದ್ದ. ಒಮ್ಮೆ ಹೀಗೇ ಒರಗಿರುತ್ತಾ ಕನಸುಕಂಡು ಈಗೇನಾದರೂ ಕ್ಷಾಮಬಂದರೆ ಹಿಟ್ಟಿನಿಂದ ತುಂಬಿಹೋಗಿರುವ ಮಡಿಕೆಯನ್ನು ಯೋಗ್ಯ ಬೆಲೆಗೆ ಮಾರಾಟಮಾಡಿ ಎರಡು ಆಡುಗಳನ್ನು ಕೊಂಡುಕೊಳ್ಳುತ್ತೇನೆ ಎಂದುಕೊಂಡ. ಕನಸು ಮುಂದುವರಿಯಿತು. ಆಡುಗಳು ಮರಿಹಾಕಿದವು, ಅವುಗಳನ್ನೆಲ್ಲಾ ಮಾರಿ ಹಸುಗಳನ್ನು ಕೊಂಡ, ಹಸುಗಳ ಹೈನವನ್ನೆಲ್ಲಾ ಮಾರಿ ಎಮ್ಮೆಗಳನ್ನು ಕೊಂಡ, ಎಮ್ಮೆಗಳನ್ನೆಲ್ಲಾ ಮಾರಿ ಕುದುರೆಗಳನ್ನು ಕೊಂಡ. ಕುದುರೆಗಳ ಸಂತಾನಾಭಿವೃದ್ಧಿಯಿಂದ ಅವುಗಳ ಸಂಖ್ಯಾವೃದ್ಧಿಯಾಗಿ, ಅವುಗಳನ್ನೆಲ್ಲಾ ಮಾರಿ ಭಾರೀ ಶ್ರೀಮಂತನಾಗಿ ಬಂಗಲೆಯೊಂದನ್ನು ಕಟ್ಟಿಸಿದ. ಊರಿನ ದೊಡ್ಡ ಶ್ರೀಮಂತರು ಬಂದು ತಮ್ಮ ಮಗಳನ್ನು ಕೊಡುತ್ತೇವೆ ಮದುವೆಯಾಗು ಎಂದು ಒತ್ತಾಯಿಸಿದರು. ಸುರಸುಂದರಾಂಗಿಯೋರ್ವಳನ್ನು ಮದುವೆಯಾದ ಆತನಿಗೆ ಗಂಡುಮಗುವೊಂದು ಜನಿಸಿ, ಮಗುವಿಗೆ ಪೂರ್ಣಚಂದ್ರನೆಂದು ನಾಮಕರಣವನ್ನೂ ಮಾಡಿದ. ಮಗುವು ಅಂಬೆಗಾಲಿಡುತ್ತಾ, ಆತ ಸವಾರಿ ಮಾಡುವ ಕುದುರೆ ಲಾಯದೆಡೆಗೆ ಹೋದಾಗ, ಮೋಹನಾಂಗಿಯಾದ ಅರ್ಧಾಂಗಿಯನ್ನು ಕರೆದು, " ಎಲಗೇ, ಪಾಪು ಕುದುರೆಬಳಿ ಹೋಗುತ್ತಿದ್ದಾನೆ, ಜೋಕೆ, ನೋಡಿಕೋ" ಎಂದು ಗತ್ತಿನಿಂದ ಆಜ್ಞಾಪಿಸಿಯೂ ಬಿಟ್ಟ. ಆಕೆ ಸಲಿಗೆಯಿಂದ "ನಿಮಗೇನು ಧಾಡಿ? ನಾನು ಒಂಬತ್ತು ತಿಂಗಳು ಹೊತ್ತು ಹೆತ್ತು ಸುತ್ತಿದುದು ಸಾಲದೇ? ನಿಮ್ಮ ಕೂಸನ್ನು ನೀವೇ ನೋಡಿಕೊಳ್ಳಿ" ಎಂದೇನಾದರೂ ಅಂದರೆ ತಕ್ಷಣ ಹೆಂಡತಿಗೆ ಹೀಗೆ ಒದೆಯುತ್ತೇನೆ ಎನ್ನುತ್ತಾ ಗೂಟಕ್ಕೆ ನೇತುಬಿಟ್ಟಿದ್ದ ಹಿಟ್ಟಿನ ಕುಡಿಕೆಗೆ ಚೆನ್ನಾಗಿ ಒದ್ದೇಬಿಟ್ಟ. ಗಡಿಗೆ ಇಬ್ಭಾಗವಾಯ್ತು ಕನಸೂ ಹಾರಿಹೋಯ್ತು! ತಿರುಕ ವಾಸ್ತವಕ್ಕೆ ಬಂದ.  

ಕನಸುಕಾಣುವುದ ತಪ್ಪಲ್ಲ, ಆದರೆ ಕಾಣುವ ಕನಸೆಲ್ಲಾ ನನಸಾಗಲೇಬೇಕೆಂದೇನೂ ಇಲ್ಲ. ಕನಸಿನಲ್ಲೂ ವಿಧಗಳಿವೆ. ದೈವಿಕವಾದ ಅಥವಾ ಅಲೌಕಿಕವಾದ ಕನಸು, ಲೌಕಿಕವಾದ ಅಥವಾ ಪ್ರಾಪಂಚಿಕ ವ್ಯವಹಾರಗಳ ಕನಸು, ಹಗಲುಗನಸು ಹೀಗೆ ಅವುಗಳನ್ನು ಹೆಸರಿಸಬಹುದಾಗಿದೆ. ಭೌತಿಕ ಶರೀರಕ್ಕೂ ಕೂಡ ಮೂರು ಆಯಾಮಗಳು: ಅವು ಜಾಗೃತ್, ಸುಷುಪ್ತ ಮತ್ತು ಸ್ವಪ್ನ. ಎಚ್ಚರವಾಗಿರುವುದು ಜಾಗೃತಾವಸ್ಥೆ, ಗಾಢವಾಗಿ ನಿದ್ರಿಸುವುದು ಸುಷುಪ್ತಾವಸ್ಥೆ ಮತ್ತು ಕನಸುಕಾಣುವುದು ಸ್ವಪ್ನಾವಸ್ಥೆ. ದೈವೀಭಕ್ತರು, ಸಾಧಕರು ಸ್ವಪ್ನಾವಸ್ಥೆಯಲ್ಲಿ ಅಲೌಕಿಕವಾದ ಕನಸನ್ನೇ ಕಾಣುತ್ತಾರೆ. ಸಂಸಾರಿಗಳು, ಜನಸಾಮಾನ್ಯರು ಲೌಕಿಕವಾದ ಕನಸುಗಳನ್ನು ಕಾಣುತ್ತಾರೆ. ಅರಿಷಡ್ವರ್ಗಗಳನ್ನು ಅನವರತ ಆರಾಧಿಸಿ ತಮ್ಮಲ್ಲೇ ಹುದುಗಿಸಿಕೊಂಡವರು ಹಗಲುಗನಸನ್ನು ಬಹುವಾಗಿ ಕಾಣುತ್ತಾರೆ: ಉದಾಹರಣೆಗೆ ನಮ್ಮ ರಾಜಕಾರಣಿಗಳು: ಪಾಕಿಸ್ತಾನ-ಭಾರತ ಯುದ್ಧದಲ್ಲಿ, ಪಾಕಿಗಳು ಸೋತು, ಭಾರತದ ಸೈನ್ಯಕ್ಕೆ ಸೆರೆಸಿಕ್ಕ ಸಹಸ್ರಾರು ಪಾಕೀ ಸೈನಿಕರನ್ನು ತಮ್ಮ ಸ್ವಾರ್ಥ ಸಾಧನೆಯ ಹಗಲುಗನಸುಕಂಡು ಬಿಡುಗಡೆಗೊಳಿಸಿದವರು ಇಂದಿರಾಗಾಂಧಿಯವರು. ಅದೇ ಇಂದಿರಾ ಅವರು ಭಾರತೀಯರೇ ತನ್ನ ವಿರುದ್ಧ ಸಿಡಿದೆದ್ದಾಗ ಮೀಸಾಕಾಯ್ದೆಯನ್ನು ಜಾರಿಗೊಳಿಸಿ ಹಲವರನ್ನು ಬಂಧಿಸಿದರು. ಭಾರತ ತನ್ನ ಸಂತತಿಯ ಕಾಂಗ್ರೆಸ್ ಸಾಮ್ರಾಜ್ಯವೇ ಅಗಿರಬೇಕೆಂಬ ಹಗಲುಗನಸು ಅವರದಾಗಿತ್ತು! ವಿಮಾನ ಸಾರಿಗೆಯ ಅನುಭವವಿಲ್ಲದ ಉದ್ಯಮಿ ಮಲ್ಯ ಸಾವಿರ ಸಾವಿರ ಕೋಟಿಗಳನ್ನು ಬಾಚಿಕೊಳ್ಳುವ ಹಗಲುಗನಸು ಕಂಡಿದ್ದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಾಗೈತಿಹಾಸದಲ್ಲಿ ಕಂಸನಿಗೆ ಹಳಸ್ಲು ಅನ್ನವನ್ನುಂಡು ಕತ್ತೆಯನ್ನಡರಿ ದಕ್ಷಿಣದಿಕ್ಕಿಗೆ ಹೋದಂತೇ ದುಃಸ್ವಪ್ನ ಕಾಣಿಸಿತ್ತು, ಸಹಿಸಲಾರದ ತಲೆನೋವುಬಂದಿತ್ತು; ಅದಾದ ಕೆಲದಿನಗಳಲ್ಲೇ ಕೃಷ್ಣ ಕಂಸನನ್ನು ವಧಿಸಿದ- ಇದು ದೈವಿಕ ದಾಳಿಯ ಮುನ್ಸೂಚನೆಯ ಕನಸು. ಇಂದು ಸಮಾಜದಲ್ಲಿ ಹಲವು ಮಂದಿ ಕಂಸರಿದ್ದಾರೆ-ಕೃಷ್ಣರುಗಳ ಬರುವಿಕೆಗೆ ನಾವೆಲ್ಲಾ ಕಾದಿದ್ದೇವೆ!      

ದಶಾವತಾರಗಳಲ್ಲಿ ಒಂದಾದ ಶ್ರೀರಾಮಾವತಾರದ ಕಥೆಯೇ ವಾಲ್ಮೀಕಿ ರಾಮಾಯಣ; ಅದು ಸೂರ್ಯವಂಶದವರ ಕಥೆಯಾಗಿದ್ದು ದೈವತ್ವವನ್ನೇ ಮೈವೆತ್ತ ರಾಮನೇ ಅಲ್ಲಿ ಕಥಾನಾಯಕ. ಧರ್ಮಾಧರ್ಮಗಳ ನಿಷ್ಕರ್ಷೆಯಲ್ಲಿ ರಾಜರುಗಳ ಜೊತೆಗೆ ಮಿಕ್ಕವರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಅಲ್ಲಿ ಸಿಗದ ವಿವರಗಳನ್ನು ತಿಳಿಸಿಕೊಡುವುದಕ್ಕಾಗಿ ಮಹರ್ಷಿ ವೇದವ್ಯಾಸರು ಭಾರತವನ್ನು ಬರೆದರು; ಅದು ಚಂದ್ರವಂಶದವರ ಕಥೆ. ಭಾರತ ಭಾರತದ ಕಥೆ-ಅದು ನಂತರ ಮಹಾಭಾರತವೆಂದೂ ಪಂಚಮವೇದವೆಂದೂ ಪ್ರಸಿದ್ಧವಾಯ್ತು. ರಾಜನೀತಿಯನ್ನು ವಿಶದವಾಗಿ ತಿಳಿದುಕೊಳ್ಳಲು ಇಂದಿಗೂ ಅದು ಆಕರವಾಗುತ್ತದೆ; ಆಧಾರವಾಗುತ್ತದೆ. ರಾಜನೀತಿಯಲ್ಲಿ ನಾವು ನಡೆಯುವುದಾದರೆ ಪಾಕಿಸ್ತಾನದ ಕಥೆ ಅದೆಂದೋ ಮುಗಿದುಹೋಗಬೇಕಿತ್ತು; ಸಾಮ, ದಾನ, ದಂಡ, ಭೇದ ಯಾವ ನೀತಿಗೂ ನಿಲುಕದ ಪಾತಕಿಗಳೇ ತುಂಬಿರುವ ಪಾಕಿಸ್ತಾನ ಆಮೂಲಾಗ್ರ ನಿರ್ನಾಮವಾಗದ ಹೊರತು ಭಾರತವಷ್ಟೇ ಅಲ್ಲ, ಜಗತ್ತಿಗೇ ನೆಮ್ಮದಿಯಿಲ್ಲ, ಸುಖವಿಲ್ಲ; ಯಾವ ಕ್ಷಣದಲ್ಲೂ ಎಲ್ಲಾದರೂ ಉಗ್ರರು ಯಾವುದೋ ಸೋಗಿನಲ್ಲಿ ಬಂದು ಮಾರಣಹೋಮ ನಡೆಸುಬಹುದಾದ ಚಾಲ್ತಿ ಖಾತೆ ಅದು! ಗಾಂಧಾರ[ಈಗಿನ ಕಂದಹಾರ] ದೇಶ ಮೊದಲಿನಿಂದಲೂ ಅಂತಹ ಜನಗಳನ್ನೇ ಹೆತ್ತಿದ್ದಕ್ಕೆ ದಾಖಲೆಗಳಿವೆ; ಅಲ್ಲಿ ಜನಿಸುವವರೆಲ್ಲಾ ರಕ್ಕಸ ಸ್ವಭಾವದವರೇ. ಸೆರೆಸಿಕ್ಕ ಉಗ್ರರನ್ನು ವಿಚಾರಣೆಗಾಗಿ ಇಟ್ಟುಕೊಳ್ಳಲು ತಗಲುವ ವೆಚ್ಚದ ಹಣ ದೇಶದ ಬಡವರ ಭಾಗ್ಯನಿಧಿಯಾಗಿ ವಿನಿಯೋಗಿಸಲ್ಪಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಸೆರೆಸಿಕ್ಕ ಪಾಪಿಗಳನ್ನು ನಿರ್ದಾಕ್ಷಿಣ್ಯವಾಗಿ ವಾರವೊಪ್ಪತ್ತರಲ್ಲಿ [ಅವರಿಂದ ಮಾಹಿತಿಗಳನ್ನು ಪಡೆದು] ಮುಗಿಸಿಬಿಟ್ಟರೆ ಉಗ್ರರ ಅಟ್ಟಹಾಸಕ್ಕೆ ಅದೇ ತಕ್ಕಮದ್ದಾಗುತ್ತದೆ. ಮನೆಯಲ್ಲೇ ಇರುವ ಹೊಸ ಹೊಸ ಉಗ್ರ ಸಂಘಟನೆಗಳು ಮದರಸಾದಲ್ಲಿ ತಯಾರಾಗುತ್ತವೆ! ದೇಶವ್ಯಾಪಿ ಅಕ್ಟೋಪಸ್ ರೀತಿಯಲ್ಲಿ ಹಬ್ಬಿರುವ ಅಂಥಾ ಸಂಘಟನೆಗಳನ್ನು ಬೇರುಸಹಿತ ಕಿತ್ತೆಸೆಯದ ಹೊರತು ಭಾರತೀಯತೆಗೆ ಉಳಿಗಾಲವಿಲ್ಲ; ಜಿಹಾದಿಗಳು ಸಭ್ಯರಲ್ಲ. ಒತ್ತಾಯದಿಂದ ಹೊಡೆದು, ಬಡಿದು ಮಾಡಿಯಾದರೂ ಧರ್ಮವನ್ನು ವಿಸ್ತರಿಸು ಎಂಬ ಹೇಳಿಕೆಯಿರುವ ಧರ್ಮಗ್ರಂಥವನ್ನಾಧರಿಸಿದ ಧರ್ಮ ಅದೆಂಥದ್ದು ಎಂದು ಪ್ರತ್ಯೇಕ ಹೇಳಬೇಕಿಲ್ಲ; ಜಿಹಾದಿಗಳ ಸಂಖ್ಯೆ ವಿಪರೀತಕ್ಕೆ ಏರುವ ಮೊದಲು ಅವರನ್ನು ಮಟ್ಟಹಾಕದಿದ್ದರೆ ನಮ್ಮ ವಿನಾಶಕ್ಕೆ ನಾವೇ ಪರೋಕ್ಷ ಕಾರಣರಾಗುತ್ತೇವೆ. ಈ ನಿಟ್ಟಿನಲ್ಲಿ ಒಂದಂತೂ ಸ್ಪಷ್ಟ: ಪಾಕಿಸ್ತಾನಕ್ಕೆ ಬಹಳಕಾಲದ ಭವಿಷ್ಯವಿಲ್ಲ, ಹಿಂದೂಸ್ಥಾನದಲ್ಲಿದ್ದೇ ಒಳಗಿನಿಂದ ಆ ಪಾಕಿಸ್ತಾನವನ್ನು ಅನುಮೋದಿಸುವ ದೇಶದ್ರೋಹಿಗಳಿಗೂ ಕೂಡ ಬಹಳಕಾಲದ ಗಡುವು ಇರುವುದಿಲ್ಲ.

ಇರಲಿ, ಪಂಚತಂತ್ರದ ಲಬ್ಧಪ್ರಣಾಶ ವಿಭಾಗದಲ್ಲಿ ಸಿಂಹಸಾಕಿದ ನರಿಯ ಕಥೆ ಬರುತ್ತದೆ. ಆ ಕಥೆಯನ್ನು ಸ್ವಲ್ಪ ತಿಳಿದುಕೊಳ್ಳುವುದು ಮುದನೀಡುತ್ತದೆ ಎನಿಸಿತು [ಕಥೆಗಳ ಸಾರವನ್ನಷ್ಟೇ ಹೇಳುತ್ತಿದ್ದೇನೆ]: ಕಾಡೊಂದರಲ್ಲಿ ಸಿಂಹ-ಸಿಂಹಿಣಿ ವಾಸವಾಗಿದ್ದರು. ಮಾಮೂಲಿಯಾಗಿ ಹಸಿದಾಗ ಬೇಟೆಯಾಡುತ್ತಿದ್ದರು. ಒಂದುದಿನ ಬೇಟೆಗೆ ತೆರಳಿದ ಸಿಂಹಕ್ಕೆ ಯಾವುದೂ ಸಿಗಲಿಲ್ಲ; ನರಿಯ ಮರಿಯೊಂದು ಹತ್ತಿರಕ್ಕೆ ಬಂತು. ಅದನ್ನೇ ನಡೆಸಿಕೊಂಡು ಸಿಂಹಿಣಿಯಿದ್ದ ಗುಹೆಗೆ ಸಿಂಹ ನಡೆದ. "ಪ್ರಿಯೆ, ಇದು ನರಿಯಮರಿ, ಈ ಮೃಗಶಾಬಕನನ್ನು ಕೊಲ್ಲುವುದು ನನಗೆ ಸರಿಕಾಣಲಿಲ್ಲ. ಇದು ಆಹಾರದಿಂದ ನಮ್ಮ ಜಾತಿಗೆ ಹತ್ತಿರದ ಪ್ರಾಣಿ. ನೀತಿಸಾರ ಹೀಗಿದೆ: ಸ್ತ್ರೀಯರನ್ನೂ, ಬಾಲಕ-ಬಾಲಕಿಯರನ್ನೂ, ಯತಿಗಳನ್ನೂ ಎಂತಹ ಪ್ರಸಂಗದಲ್ಲೂ ಕೊಲ್ಲಬಾರದು ಎಂದು." ಗಂಡನ ಹೇಳಿಕೆಗೆ ಉತ್ತರಿಸಿದ ಸಿಂಹಿಣಿ ಪ್ರಾಣಹೋಗುವ ಕಾಲದಲ್ಲೂ ಅಕೃತ್ಯವನ್ನು ಎಸಗಬಾರದೆಂದೂ ತಾನೂ ಕೂಡ ನರಿಮರಿಯನ್ನು ಕೊಲ್ಲುವುದಿಲ್ಲವೆಂದು ತಿಳಿಸಿದಳು. ಸಿಂಹ ಸಿಂಹಿಣಿ ಆ ಮರಿಯನ್ನು ಬೆಳೆಸಲಾರಂಭಿಸಿದರು. ಕಾಲಕ್ರಮದಲ್ಲಿ ಸಿಂಹಿಣಿ ಗರ್ಭವತಿಯಾಗಿ ಎರಡು ಮರಿಸಿಂಹಗಳಿಗೆ ಜನ್ಮವಿತ್ತಳು. ಮರಿಗಳು ಆಡುತ್ತಾ ಬೆಳೆಯತೊಡಗಿದವು. ಒಂದು ದಿನ ಕಾಡಾನೆಯೊಂದು ಆ ಮಾರ್ಗವಾಗಿ ಧಾವಿಸಿ ಬಂತು. ಅಟ್ಟಿಸಿಕೊಂಡು ಹೋದ ಸಿಂಹದ ಮರಿಗಳ ಮುಂಚೂಣಿಯಲ್ಲಿದ್ದ ನರಿಮರಿ"ತಮ್ಮಂದಿರೇ ಅದು ನಮ್ಮವಂಶದ ವೈರಿ, ಅದರ ಬಳಿಗೆ ಹೋಗುವುದು ಒಳಿತಲ್ಲ" ಎನ್ನುತ್ತಾ ಹಿಂದಿರುಗಿ  ಗುಹೆಯೆಡೆಗೆ ಓಡಿತು. ತುಸುಹೊತ್ತು ತಡೆದು ಸಿಂಹದ ಮರಿಗಳು ಗುಹೆಗೆ ಮರಳಿ ನಗುತ್ತಾ ನಡೆದ ಘಟನೆಯನ್ನು ಅಮ್ಮನಿಗೆ ಅರುಹಿದವು. ಕೋಪಗೊಂಡ ಸೃಗಾಲವು ಹುಬ್ಬುಗಂಟಿಕ್ಕಿ ಕಠಿಣವಾಗಿ ಅವುಗಳನ್ನು ನಿಂದಿಸಿತು. ಆಗ ಸಿಂಹಿಣಿ ಆ ಸೃಗಾಲವನ್ನು ಪಕ್ಕಕ್ಕೆ ಕರೆದು" ಅಪ್ಪಾ ಮಗನೇ, ನೀನು ಹಾಗೆಲ್ಲಾ ಮಾಡಲಾಗದು, ಅವರು ನಿನ್ನ ತಮ್ಮಂದಿರಿರಬಹುದು, ಆದರೆ ಅವರು ಮಹಾ ಸತ್ವಶಾಲಿಗಳು." ನರಿಮರಿಗೆ ಇನ್ನಷ್ಟು ಕೋಪ ಉಕ್ಕಿ " ಅಮ್ಮಾ, ನಾನೇನು ರೂಪದಲ್ಲಿ, ಶೌರ್ಯದಲ್ಲಿ, ವಿದ್ಯಾಭ್ಯಾಸದಲ್ಲಿ, ಜಾಣತನದಲ್ಲಿ ಇವರಿಗಿಂತ ಕಡಿಮೆಯವನೇ? ಅವರು ನನ್ನನ್ನು ಇನ್ನೊಮ್ಮೆ ಹಾಸ್ಯಮಾಡಿದರೆ ನಾನು ಅವರನ್ನು ಕಚ್ಚಿ ಕೊಂದೇ ಬಿಡುವೆನು." ಇದನ್ನೆಲ್ಲಾ ನೋಡಿದ ಸಿಂಹಿಣಿಗೆ ಮುಂದೆ ಸೃಗಾಲಪುತ್ರನಿಗೆ ಒದಗಬಹುದಾದ ಆಪತ್ತಿನ ಅರಿವಾಗಿ " ಹಾಂಗಲ್ಲ ಅಪ್ಪಯ್ಯೋ, ನನ್ನ ಮುದ್ದು ಕಂದಾ ನೀನು ಬಹಳ ಜಾಣ, ಬಹಳ ಗಟ್ಟಿಗ, ನೀನು ಚಟುವಟಿಕೆಯಲ್ಲಿ ಸಮರ್ಥ, ತಂತ್ರ ಪಾರಾವಾರ ನಿಜ. ನೀನು ಸೃಗಾಲಿಯ ಪುತ್ರ. ನಾನು ನಿನ್ನ ಸಾಕುತಾಯಿ, ನಿನಗೆ ಎದೆಹಾಲು ಕೊಟ್ಟು ಮಮತೆಯಿಂದ ಸಾಕಿದವಳು ನಾನು. ನನ್ನ ಕುವರರಿಗೆ ನರಿಯೆಂದು ತಿಳಿದರೆ ಅವರು ನಿನ್ನನ್ನು ಶಿಕ್ಷಿಸದೇ ಬಿಡರು. ಅವರು ಅರಿಯುವ ಮುನ್ನ ನೀನು ಸಜಾತಿ ಬಾಂಧವರನ್ನು ಸೇರುವುದು ವಿಹಿತ." ಜಂಭುಕಸೂನು ವಿಷಯವನ್ನು ಕೇಳಿ ಭಯದಿಂದ ತಳಮಳಗೊಂಡಿತು. ಸಿಂಹಿಣಿಗೆ ವಂದಿಸಿ ಮೆಲ್ಲನೆ ನುಸುಳಿ ತನ್ನ ಜಾತಿಬಾಂಧವರನ್ನು ಸೇರಿಕೊಂಡು ಹರ್ಷಗೊಂಡಿತು.  

ಈ ಕಥೆಯಲ್ಲಿ ಭಾರತಮಾತೆ ಸಿಂಹಿಣಿ, ಸನಾತನ ಜೀವನಧರ್ಮವೇ ದೇವರು ಅರ್ಥಾತ್ ದೇವರೇ ಸಿಂಹ; ಸಿಂಹಿಣಿಯ ಯಜಮಾನ. ನಾವೆಲ್ಲಾ ಸಿಂಹ-ಸಿಂಹಿಣಿಯ ಮಕ್ಕಳು. ದೇಶವನ್ನು ಸೇರಿಕೊಂಡ ಸೃಗಾಲದ ಮರಿ ಯಾವುದೆಂದು ಹೇಳಬೇಕೇ? ಆ ಸೃಗಾಲದ ಮರಿ ಅದರ ಸ್ವಸ್ಥಾನಕ್ಕೆ ವಾಪಸ್ಸು ಹೋದರೆ ಅದಕ್ಕೇ ಒಳಿತು. ಒಂದೊಮ್ಮೆ ಹೋಗದೇ ಇಲ್ಲೇ ಇರುವುದಾದರೆ ಇಲ್ಲಿನ ಜೀವನಧರ್ಮಕ್ಕೆ ತೊಂದರೆಯಾಗದಂತೇ ನಡೆದುಕೊಳ್ಳಬೇಕು. ಅದುಬಿಟ್ಟು ಬಾಲಬಿಚ್ಚಿ ಸಿಂಹದಮರಿಗಳ ಜೊತೆ ಸೆಣಸಾಟಕ್ಕಿಳಿದರೆ ಸೃಗಾಲ ಬದುಕಿ ಉಳಿಯುವುದಿಲ್ಲ! ಹಾಗಾಗಿ ಈ ದೇಶವಾಸೀ ಗುಪ್ತ-ಜಿಹಾದಿಗಳು ಈ ಕುರಿತು ಚಿಂತಿಸಬೇಕು. ಈ ಕಥೆಯ ಸಾರ್ವಕಾಲಿಕತೆಯನ್ನು ನೋಡಿ: ಕೆಲಸಕ್ಕೆ ಬಾರದವರು ಕೆಲಸಕ್ಕೆ ಸೇರಿಕೊಂಡರೆ ಆಗ ಎದುರಾಗಬಹುದಾದ ಸನ್ನಿವೇಶಕ್ಕೂ ಈ ಕಥೆ ಉದಾಹರಣೆಯಾಗುತ್ತದೆ; ಅರ್ಹತೆಯಿಲ್ಲದೇ ಗಳಿಸಿದ ಪದವಿ, ಸ್ಥಾನಮಾನ ಕೊನೆಗೊಮ್ಮೆ ಬಹಿರಂಗಗೊಳ್ಳುತ್ತದೆ! ಸಿಂಹದ ವೇಷದಲ್ಲಿ ನರಿ ಎಷ್ಟುದಿನವೇ ಇದ್ದರೂ ಅದರ ಒಳಗಿನ ಕುಬುದ್ಧಿ, ಅಧೈರ್ಯ ಇವೆಲ್ಲಾ ಅಳಿಸಿಹೋಗದಲ್ಲಾ?   

ಧರ್ಮಾರ್ಥ ಕಾಮ ಮೋಕ್ಷಾಣಾಂ ಉಪದೇಶ ಸಮನ್ವಿತಂ |
ಪೂರ್ವವೃತ್ತಂ ಕಥಾಯುಕ್ತಂ ಇತಿಹಾಸಂ ಪ್ರಚಕ್ಷತೇ ||

ಪುರುಷೋತ್ತಮ ಪುರಿಯ ರಹಸ್ಯಮಾತ್ರ ಹಾಗೇ ಉಳಿಯಿತು, ಅದನ್ನು ತಿಳಿಯಲು ಬಹುದೂರ ಕ್ರಮಿಸಬೇಕಾಗುತ್ತದೆಂಬ ಸಂಜ್ಞೆಯನ್ನು ನಾನು ತಮಗೆಲ್ಲಾ ಕೊಟ್ಟುಬಿಟ್ಟಿದ್ದೇನಲ್ಲಾ ? ಹೀಗಾಗಿ ಮೂರನೆಯ ಕಂತಿನಲ್ಲಿ ಅದರಬಗ್ಗೆ ತಿಳಿಸಲು ಉದ್ಯುಕ್ತನಾಗಿ ಸದ್ಯಕ್ಕೆ ನಿಮ್ಮನ್ನು ಬೀಳ್ಕೊಡುತ್ತೇನೆ,

ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ |
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||