ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 8, 2012

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ

ಆಮಂತ್ರಣ ಚಿತ್ರ ಕೃಪೆ: ಶ್ರೀ ರಾಮಚಂದ್ರ ಹೆಗಡೆ, ದ್ವಾರಾ: ಫೇಸ್ ಬುಕ್

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ

ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು.....ಎಂದು ದಾಸರು ಹೇಳಿದ ಭಜನೆ ನಮಗೆ ನಮ್ಮ ಎಳವೆಯಲ್ಲಿ ಅರ್ಥವಾಗುತ್ತಿರಲಿಲ್ಲ. ನೆಂಟರಬಾಗಿಲನ್ನು ಸೇರಬಾರದು ಎಂದರೇನು ? ಯಾರಾದರೂ ಬಾಗಿಲಲ್ಲಿ ಸೇರೋಕಾಗುತ್ಯೇ ಎಂಬ ಶಬ್ದಶಹ ಅರ್ಥದ ಅವಲೋಕನವಷ್ಟೇ ನಮಗೆ ನಿಲುಕಿದ್ದು. ಲೌಕಿಕ ಜೀವನನದಲ್ಲಿ ಬಡತನ-ಸಿರಿತನ ಇವೆಲ್ಲಾ ಪಡೆದುಬಂದ ಭಾಗ್ಯದಿಂದಲೂ ಭಾಗಶಃ ಅನುಭವಿಸಲ್ಪಡುವ ಮಜಲುಗಳು ಎಂಬುದನ್ನು ಮರೆಯುವ ಹಾಗಿಲ್ಲ. ಎಲ್ಲರಿಗೂ ಸಿರಿವಂತರಾಗಬೇಕು ತಾವೂ ಯಾರಿಗೂ ಕಮ್ಮಿಯಿಲ್ಲ ಎನಿಸಿಕೊಳ್ಳಬೇಕು, ಯಾರಿಗೂ ತಮ್ಮಲ್ಲಿ ಎಷ್ಟು ಧನಸಂಪತ್ತಿದೆ ಎಂಬ ಲೆಕ್ಕ ಸರಿಯಾಗಿ ಸಿಗಲಾಗದ ರೀತಿ ಬದುಕಬೇಕೆಂಬ ಹಪಹಪಿಕೆ. ಸಾಲದಲ್ಲಿ ಕೊಂಡರೂ ಸಾಲವಿಲ್ಲವೆಂಬಂತೇ ಸೋಗಿನಲ್ಲಿ ಓಡಿಸುವ ಕಾರು-ಬಾರು!

ವ್ಯಕ್ತಿ ಬೆಳೆದು ವ್ಯಾವಹಾರಿಕ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಂಡು ಉದ್ಯೋಗವನ್ನೋ, ವ್ಯವಸಾಯವನ್ನೋ, ವ್ಯಾಪಾರ-ವಹಿವಾಟನ್ನೋ ಆರಂಭಿಸಿದಮೇಲೆ ಎಂದೋ ಒಮ್ಮೊಮ್ಮೆ ಕುಸಿದು ಕೂರುವುದು ಸಹಜವೇ. ಜಾಗತೀಕರಣದ ಕಾರಣದಿಂದ ಸಣ್ಣಕೈಗಾರಿಕೆ ನಡೆಸುವ ಯಜಮಾನ ಕಂಗೆಡುವುದು, ಅಮೇರಿಕಾದ ಆರ್ಥಿಕ ಹಿನ್ನಡೆಯಿಂದ ತಂತ್ರಜ್ಞರಾದ ಯುವಕರು ಉದ್ಯೋಗ ಕಳೆದುಕೊಳ್ಳಬಹುದು, ಯಾವುದೋ ಗುಂಪಿನ ದುರುದ್ದೇಶದಿಂದ ವ್ಯವಹಾರದಲ್ಲಿ ಮೋಸಕ್ಕೆ ಬಲಿಯಾಗಬಹುದು, ಸಕಾಲದಲ್ಲಿ ಮಳೆಬರದೇ ಬೆಳೆತೆಗೆಯಲಾಗದೇ ರೈತರು ಕಂಗಾಲಾಗಬಹುದು ಇಂಥವೆಲ್ಲಾ ನಡೆಯುವುದು ಸಹಜವೇ ಆಗಿದೆ. ಬಡತನದಲ್ಲಿದ್ದವರಿಗೆ ಸಿರಿತನ ಬಂದರೆ ಸಹಿಸುವುದು ಸುಲಭ. ಸಿರಿತನದಲ್ಲಿದ್ದವರಿಗೆ ಬಡತನ ಬಂದರೆ ಮಾತ್ರ ಅದು ಸಹಿಸಲಸಾಧ್ಯ! ಬಡತನ-ಸಿರಿತನಗಳಲ್ಲೂ ಸುಖ-ದುಃಖಗಳಲ್ಲೂ ಸಮಾನ ಮನಸ್ಕರಾಗಿರಬೇಕು...ಪರಿಸ್ಥಿತಿ ಬಂದಹಾಗೇ ಅದನ್ನು ಸ್ವೀಕರಿಸಬೇಕು ಎಂಬುದು ದಾಸರು ಪರ್ಯಾಯವಾಗಿ ಹೇಳಿದಮಾತು.

ಈ ಪ್ರಪಂಚದ ವ್ಯಾವಹಾರಿಕ ರಂಗದಲ್ಲಿ ನಮ್ಮನ್ನು ತೊಡಗಿಸಿಕೊಂಡಮೇಲೆ ನಮ್ಮ ಮೂಗಿನ ನೇರಕ್ಕೇ ಎಲ್ಲವೂ ಇರಬೇಕೆಂಬ ನಿರೀಕ್ಷೆ ಮತ್ತು ಅಪೇಕ್ಷೆ ನಮ್ಮದು! ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲವಲ್ಲ ? ಸಮಾಜದಲ್ಲಿ ಎಲ್ಲರೂ ತಂತಮ್ಮ ಮೂಗಿನ ನೇರಕ್ಕೇ ಹೋಗಲಿ ಗಾಡಿ ಎಂದು ಬಯಸುತ್ತಾರೆ. ಎಲ್ಲರಿಗೂ ಸಲ್ಲುವ ಸಮಷ್ಟಿಯ ದಾರಿಯಲ್ಲಿ ಗಾಡಿ ಸಾಗಬೇಕಾಗುತ್ತದೆಯೇ ಹೊರತು ನಮ್ಮೊಬ್ಬರ ಸ್ವಾರ್ಥಕ್ಕೆ ಅದು ತಗುಲಿಕೊಳ್ಳಬಾರದು. ಈ ಸತ್ಯದ ಅರ್ಥ ಆಗದ ಜನರಿಗೆ ನಿಂತು ನಿಂತಲ್ಲಿ ಕೋಪ ಉಕ್ಕಿಬರುತ್ತದೆ, ಎದುರಿಗಿರುವ ಜನರು ಪರಮವೈರಿಗಳಂತೇ ಭಾಸವಾಗುತ್ತದೆ, ಎರಡು ಇಟ್ಟುಬಿಡೋಣ ಎಂದುಕೊಳ್ಳುವ ಮಹಾನುಭಾವರೂ ಇರಬಹುದು! ಇಲ್ಲೆಲ್ಲಾ ಕೆಲಸಮಾಡುವುದು ನಮ್ಮ ಅಹಂಕಾರ ವೃತ್ತಿ ಎಂಬುದನ್ನು ನೆನಪಿಸಿಕೊಳ್ಳಬೇಕು.

ರಾಮಕೃಷ್ಣಾಶ್ರಮಕ್ಕೆ ವಿರಕ್ತರು ಸೇರಿದಾಗ ಅವರಿಗೆ ಸನ್ಯಾಸ ಕೊಡುವ ಮೊದಲು ಹಲವಾರು ಪರೀಕ್ಷೆಗಳನ್ನು ಒಡ್ಡುತ್ತಾರೆ. ಅವುಗಳಲ್ಲಿ ರಸ್ತೆಬದಿಯ ಗೋಡೆಗೆ ಅಂಟಿಸಿದ ಪೋಸ್ಟರ್ ಕಿತ್ತು ಸ್ವಚ್ಛಗೊಳಿಸುವ ಕೆಲಸವೂ ಇರಬಹುದು, ಬೀದಿ ಗುಡಿಸುವ ಕೆಲಸವೂ ಆಗಬಹುದು. ವಿರಕ್ತನಾದವನಿಗೆ ಅಹಂಕಾರ ತೊಲಗಬೇಕೆಂಬ ಅನಿಸಿಕೆಯಿಂದ ಹಾಗೆ ಮಾಡುತ್ತಾರೆ ಎಂದು ಕೇಳಿದ್ದೇನೆ. ಅಹಂಕಾರದ ಅಂಶ ಇನ್ನೂ ಇದ್ದರೆ ಆತ ಅಲ್ಲಿನ ಹಿರಿಯರು ಹೇಳಿದ ಅಂತಹ ಕೆಲಸಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. ಅಹಂಕಾರ ಅಳಿದುಹೋಗಿದ್ದರೆ ಸುಮ್ಮನೇ ಹೇಳಿದ ಕೆಲಸವನ್ನು ಕರ್ತವ್ಯವೆಂದು ಪರಿಪಾಲಿಸುತ್ತಾನೆ ಎಂಬುದು ರಾಮಕೃಷ್ಣಾಶ್ರಮದ ಸಂಯಮ ಪರೀಕ್ಷಾ ಪದ್ಧತಿ ಎಂದು ಹೇಳುತ್ತಾರೆ. ದಿ| ಮತ್ತೂರು ಕೃಷ್ಣಮೂರ್ತಿಗಳು ವಾರಾನ್ನ ಮಾಡಿಕೊಂಡು ಓದಿದವರಾಗಿದ್ದರು. ಶಿವಮೊಗ್ಗೆಯಿಂದ ಬೆಂಗಳೂರಿಗೆ ಅವರು ಬಂದಾಗ ನಿಲ್ಲಲು ಜಾಗವಿರಲಿಲ್ಲ ಅವರಿಗೆ. ಶ್ರೀರಾಂಪುರದ ಒಂದು ಪುಟ್ಟ ಕೊಠಡಿಯಲ್ಲಿ ವಾಸವಿದ್ದರು ಎಂದು ತಿಳಿದುಬರುತ್ತದೆ. ಆಗ ಅವರಿಗೆ ಪರಿಚಿತರಾದ ಗಾಂಧೀವಾದಿ ಹೋ.ಶ್ರೀನಿವಾಸಯ್ಯನವರಲ್ಲಿ ತೆರಳಿದಾಗ ಮತ್ತೂರರಿಗೆ ಅವರು ಗಾಂಧೀ ಸಂಘದ ಕಾರ್ಯಕ್ರಮ ಗೊತ್ತಾಗಿದೆಯೆಂತಲೂ ನಾಳೆಯಿಂದ ನಡೆಯುವ ಕಾರ್ಯಕ್ರಮದ ಕಾರ್ಯಕರ್ತರಿಗೆ ಬಯಲಿನಲ್ಲಿ ತಂಬು[ಟೆಂಟು]-ಗುಡಾರಗಳಲ್ಲಿ ಬಿಡಾರಕ್ಕೆ ವ್ಯವಸ್ಥೆಮಾಡಿದ್ದಾಗಿಯೂ ತಿಳಿಸಿ, ಮಾರನೇ ದಿನದಿಂದ ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಕಕ್ಕಸುಗಳ ಹೊಲಸು ಎತ್ತಿ ಸ್ವಚ್ಛಗೊಳಿಸುವಂತೇ ತಿಳಿಸುತ್ತಾರೆ. "ವಾಸನೆ ಬರುತ್ತದಲ್ಲಾ" ಎಂದುಕೊಂಡರೂ ಮತ್ತೂರರು ಮರುಮಾತಿಲ್ಲದೇ ಅದನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತು ಸ್ವತಃ ನಿರ್ವಹಿಸುತ್ತಾರೆ! ಇದು ಮತ್ತೂರರು ಹುಡುಗನಾಗಿದ್ದಾಗ ನಡೆಸಿದ ನಿರಂಹಕಾರದ ಕೆಲಸ.

ವ್ಯಾವಹಾರಿಕವಾಗಿ ನಾವು ಸೋತಾಗ ಸುತ್ತಲ ಜನ ನೆಂಟರಿಷ್ಟರು, ಆಪ್ತೇಷ್ಟರು ಎನಿಸಿಕೊಂಡವರು ವಿಚಿತ್ರವಾಗಿ ನೋಡಲು ತೊಡಗುತ್ತಾರೆ. ಯಾರೂ ಹತ್ತಿರ ಕರೆಯುವುದಿರಲಿ ಮನುಷ್ಯರ ರೀತಿ ನಡೆಸಿಕೊಳ್ಳುವುದಿಲ್ಲ. ತಲೆಗೊಂದು ಮಾತನಾಡುತ್ತಾ ಎಲ್ಲವೂ ನಾವು ಬುದ್ಧ್ಯಾ ಮಾಡಿಕೊಂಡ ನಷ್ಟ ಎಂಬಂತೇ ಹಲುಬತೊಡಗುತ್ತಾರೆ. ಅದೇ ಕಾಲಕ್ಕೆ ಮನೆಯಲ್ಲಿ ಇಲ್ಲದ ದೈಹಿಕ ಅನಾರೋಗ್ಯಗಳೂ ಕಾಣಿಸಿಕೊಳ್ಳುತ್ತವೆ. ಚಿಕ್ಕಮಕ್ಕಳಿದ್ದರಂತೂ ಅವರ ಪಾಡು ಪಾಪ ಎನಿಸುತ್ತದೆ. ಇದೇ ಸಂದರ್ಭದಲ್ಲಿ ಹತ್ತಿರದವರು ಪರಿಚಯದವರು ವ್ಯಾವಹಾರಿಕವಾಗಿ ಕೊಡಬಹುದಾದ ನೈತಿಕಧೈರ್ಯವನ್ನು ಕೊಡುವುದಕ್ಕೆ ಮುಂದಾಗುವುದಿಲ್ಲ. ನನಗೆ ಪರಿಚಯವಿರುವ ವ್ಯಕ್ತಿಯೊಬ್ಬರು ವ್ಯಾವಹಾರಿಕ ನಷ್ಟವನ್ನು ಅನುಭವಿಸಿದ್ದರು. ಹಿಡಿದ ಕೆಲಸವೆಲ್ಲಾ ನಿರಾಶಾದಾಯಕವಾಗುತ್ತಿತ್ತು. ಕೆಲಸಮಾತ್ರ ಸದಾ ಇದ್ದರೂ ಪ್ರತಿಫಲ ದೊರೆಯುತ್ತಿರಲಿಲ್ಲ; ಗುಡ್ಡಕ್ಕೆ ಮಣ್ಣುಹೊತ್ತಂತೇ ಆಗುತ್ತಿತ್ತು. ಅವರು ತಯಾರಿಸುವ ಗುಣಮಟ್ಟದ ಗಣಕಯಂತ್ರಗಳು ಕಚೇರಿಗಳಲ್ಲೂ ಅಲ್ಲದೇ ಮನೆಮನೆಗಳಲ್ಲೂ ಬಳಕೆಗೆ ಯೋಗ್ಯವಾಗಿದ್ದವು. ವ್ಯಾವಹಾರಿಕ ನಷ್ಟದಲ್ಲಿದ್ದಾಗ ಅವರ ಸುತ್ತ ಇರುವ ಬಂಧುಬಳಗ ಹಲವು ಮನೆಗಳವರು ಬೇರೇ ಜನರ ಮಳಿಗೆಗಳಿಂದ ಗಣಕಯಂತ್ರಗಳನ್ನು ತಮ್ಮಲ್ಲಿಗೆ ತರಿಸಿಕೊಂಡರೇ ವಿನಃ ಯಾರೂ ಬಿಡಿಗಾಸಿನ ವ್ಯಾವಹಾರಿಕ ಪಾಯ್ದೆಯನ್ನೂ ಕೊಡಲು ಮುಂದೆ ಬರಲಿಲ್ಲ!

ಆಗೆಲ್ಲಾ ನೋಡುಗನಾದ ನನಗೆ ಅನಿಸಿದ್ದು ಬಡತನ ಬಂದಾಗ ನೆಂಟರ ಬಾಗಿಲು ಸೇರಬಾರದು....ದಾಸರು ಹೇಳಿದ ಮಾತು ಎಷ್ಟು ನೈಜತೆಯಿಂದ ಕೂಡಿದೆ! ನಮ್ಮಲ್ಲಿ ’ಇಗೊ ಮಣೆ’ ’ತಗೊ ಮಣೆ’ ’ತಾ ಮಣೆ’ ಎನ್ನುವ ಹಿಂದಿನಕಾಲದ ಗಾದೆಯೊಂದಿತ್ತು. ನೂರಾರು ಸರ್ತಿ ಕರೆದಾಗ ಒಮ್ಮೆ ಹೋದರೆ ನೆಂಟರು "ಇಗೋ ಮಣೆ ಹಾಕಿದ್ದೇನೆ" ಎನ್ನುತ್ತಾರಂತೆ. ನೆಂಟರೆನಿಸಿಕೊಂಡವರು ಅಗಾಗ ಭೇಟಿ ನೀಡುತ್ತಿದ್ದರೆ "ಓ ಅಲ್ಲಿದೆ ನೋಡು ತಗೋ ಮಣೆ" ಎನ್ನುತ್ತಾರಂತೆ, ನೆಂಟರು ಮತ್ತೆಮತ್ತೆ ಅಲ್ಲಿಗೆ ಹೋಗುತ್ತಿದ್ದರೆ "ಓ ಅಲ್ಲಿ ಮಣೆ ಇದೆ ನೋಡು ಸ್ವಲ್ಪ ಇಲ್ಲಿ ತಾ" ಎಂದು ಬಂದ ಮತ್ತಿನ್ಯಾರಿಗೋ ಮಣೆಹಾಕಲು ಮುಂದಾಗುತ್ತಾರಂತೆ! ಹೀಗಾಗಿ ’ಕೀಪ್ ದಿ ನೆಂಟರ್[ರಿಲೇಟಿವ್ಸ್] ಎಟ್ ಆರ್ಮ್ಸ್ ದಿಸ್ಟನ್ಸ್’! ನೆಂಟರನ್ನು ಅತಿಯಾಗಿ ಹತ್ತಿರಕ್ಕೆ ಬಿಟ್ಟುಕೊಳ್ಳುವುದೂ ಅಪಾಯಕರ. ಸಿರಿತನವೇ ಇರಲಿ ಬಡತನವೇ ಇರಲಿ ಒಂದೇಹದಕ್ಕೆ ಯಾರು ಮನುಷ್ಯರಾಗಿ ನಮಗೆ ಆಪ್ತರಾಗುತ್ತಾರೋ ಅವರೇ ನಿಜವಾದ ನೆಂಟರು ಎಂಬುದು ನನ್ನ ಅನಿಸಿಕೆ.

ಇನೊಮ್ಮೆ ನಾನು ಕೂತಾಗ ಯೋಚಿಸಿದ್ದು ಈ ರೀತಿ ಇದೆ : ನಮ್ಮ ನಮ್ಮ ವ್ಯವಹಾರದಲ್ಲಿ ನಮಗೆ ಗೊತ್ತಿರುವವರು ನಮಗೆ ಬೇಕಾದಂತೇ ನಡೆದುಕೊಳ್ಳದಿದ್ದರೆ ನಾವೇಕೆ ಅವರನ್ನು ದೂಷಿಸಬೇಕು? ಉದಾಹರಣೆಗೆ ನನ್ನ ಸುತ್ತಲ ಬಳಗದಲ್ಲಿ ಎಮ್.ಎಲ್.ಎಮ್. [ಮಲ್ಟಿ ಲೆವೆಲ್ ಮಾರ್ಕೆಟಿಂಗ್] ಮಾಡುವವರು ತುಂಬಾ ಮಂದಿ ಇದ್ದಾರೆ. ಆಮ್ ವೇ, ಮೋದೀ ಕೇರ್, ಕ್ವಾಂಟಮ್, ಜಪಾನ್ ಲೈಫ್, ಆದೀಶ್ವರ್, ಹರ್ಬಲ್ ಲೈಫ್, ಟಪ್ಪರ್ ವೇರ್, ವಿವಿಧ ಶೋ ಬಿಜ಼್ ಗಳು ಮೊದಲಾದ ಏಜೆಂಟರಾಗಿ ಕೆಲಸಮಾಡುತ್ತಿದ್ದವರು ಇದ್ದಾರೆ. ಬ್ಯಾಂಕ್ ಮ್ಯಾನೇಜರ್ ಒತ್ತಾಯಕ್ಕೆ ಆಮ್ ವೇ ತಗೊಂಡೆ, ಸ್ನೇಹಿತನ ಒತ್ತಾಯಕ್ಕೆ ಕ್ವಾಂಟಮ್ ತಗೊಂಡೆ, ಇನ್ನೊಬ್ಬ ನೆಂಟನ ವಿನಂತಿಗೆ ಮೋದೀಕೇರ್ ತಗೊಂಡೆ ಹೀಗೇ ಪಟ್ಟಿ ಬೆಳೆಯಿತೇ ವಿನಃ ನಾನು ಅವುಗಳನ್ನು ಮುಂದುವರಿಸಲಿಲ್ಲ. ಕೆಲವರು ತಮ್ಮಿಂದ ತೆಗೆದುಕೊಳ್ಳಲಿಲ್ಲಾ ಎಂತಲೂ ಕೆಲವರು ತೆಗೆದುಕೊಂಡಿದ್ದನ್ನು ಮುಂದುವರಿಸಲಿಲ್ಲಾ ಎಂತಲೂ ಬಿಟ್ಟುಹೋದರು; ಹಿಂದುಗಡೆಯಲ್ಲಿ ದೂಷಿಸಿದರು. ಸುಮಾರು ಎರಡು ಲಕ್ಷ ಮೊತ್ತವನ್ನು ಅದಕ್ಕೆ ಇದಕ್ಕೆ ಅಂತ ಕಳೆದುಕೊಂಡಿದ್ದೂ ಆಗಿದೆ, ಅನುಭವ ಪಡೆದುಕೊಂಡಿದ್ದೂ ಆಗಿದೆ. ಕೆಲವಂತೂ ವಿದೇಶೀ ಕಂಪನಿಗಳು ಭಾರತವನ್ನು ಟಾರ್ಗೆಟ್ ಮಾಡಿಕೊಂಡು ಮಾರುಕಟ್ಟೆ ಗಳಿಸುವತ್ತ ದಾಪುಗಾಲು ಹಾಕಿ ಇವತ್ತಿನದಿನ ಹಳ್ಳಿ ಹಳ್ಳಿಗಳಲ್ಲೂ ಈ ಎಲ್ಲಾ ಕಂಪನಿಗಳ ಏಜೆಂಟರು ಇದ್ದಾರೆ. ಎಲ್.ಐ.ಸಿ ಏಜೆಂಟರು ಬಂದರೆ ಬಾಗಿಲ ಸಂದಿಯಲ್ಲಿ ಅಡಗಿನಿಂತು "ಇಲ್ಲಾ" ಹೇಳಿಕಳಿಸುವ ಕಾಲವೊಂದಿತ್ತು! ಈಗ ಹಲವು ವಿಧದ ಏಜೆಂಟರು!! ಯಾರಿಗೆ ಬಾಗಿಲು ತೆರೆಯುತ್ತೀರಿ ಯಾರಿಗೆ ಇಲ್ಲ? ಒತ್ತಾಯಕ್ಕೆ ಬಸಿರಾದರೆ ಹಡೆಯುವುದು ದಾರಿಯಲ್ಲಿ ಎಂಬ ಗಾದೆ ಗೊತ್ತಿದೆಯಲ್ಲಾ ?

ಅಕಸ್ಮಾತ್ ನಾವೇ ಅಂತಹ ಏಜೆಂಟರುಗಳಾಗಿದ್ದಾಗ ನಮ್ಮಿಂದ ಖರೀದಿಸಲಿಲ್ಲಾ ಅಥವಾ ನಮಗೆ ಮನ್ನಣೆಕೊಡಲಿಲ್ಲಾ ಎಂಬುದೇ ನಮ್ಮ-ಅವರ ಬಾಂಧವ್ಯಕ್ಕೆ ಹೊಡೆತಕೊಡಬೇಕೇ? ವ್ಯವಹಾರವನ್ನು ಹೊರಗೇ ಇಡಿ, ಬಾಂಧವ್ಯವನ್ನು ಮರೆಯಬೇಡಿ ಎನ್ನುತ್ತಾರೆ ನಮ್ಮ ತಿಮ್ಮಗುರು.

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ

ಇಂತಹ ಲೌಕಿಕ ಜಂಜಾಟಗಳನ್ನೆಲ್ಲಾ ಮನದ ಹೊರಕೋಣೆಯಲ್ಲೇ ಬಂಧಿಸು, ಅವುಗಳಿಗೆ ಎಂದಿಗೂ ಮನದ ಒಳಕೋಣೆಗೆ ಪ್ರವೇಶ ನೀಡಬೇಡ ಎಂದಿದ್ದಾರೆ. ಒಳಕೋಣೆ ಭಗವಂತನ ವಾಸಸ್ಥಾನ! ಅಲ್ಲಿ ನಾನು ಮತ್ತು ’ನಾನಲ್ಲದ ನಾನು’ ಇಬ್ಬರಿಗೇ ಅವಕಾಶ. ಆ ಕೋಣೆಯಲ್ಲಿ ಇಬ್ಬರ ಸಂಭಾಷಣೆ ಮಾತ್ರ! ಅದು ಲೋಕಾಂತವಲ್ಲ ಏಕಾಂತ. ಆ ಏಕಾಂತದಲ್ಲಿ ಲೋಕಾಂತದ ವ್ಯವಹಾರಗಳನ್ನು ಬಳಸುವುದರಿಂದ ಏಕಾಂತಕ್ಕೆ ಭಂಗಬರುತ್ತದೆ. ಯಾವಾಗ ಆ ಏಕಾಂತಕ್ಕೆ ಭಂಗಬರುತ್ತದೋ ಆಗ ಏಕಾಂತವೂ ಲೋಕಾಂತವಾಗಿ ಮನ ಭ್ರಮೆಯಲ್ಲಿ ತೇಲಾಡುತ್ತದೆ, ತನ್ನತನ ಕಳೆದುಕೊಳ್ಳುತ್ತದೆ. ಹೇಳುವವರ ಮಾತುಗಳನ್ನು ನಮ್ಮ ಕಿವಿ ಹಿತ್ತಾಳೆಯ ಕಿವಿಯಾಗಿ ಕೇಳಿಸಿಕೊಳ್ಳುತ್ತದೆ. ಯಾರದೋ ವಿರುದ್ಧ ಯಾರನ್ನೋ ಎತ್ತಿಕಟ್ಟುತ್ತದೆ! ಎಲ್ಲಾ ಇಲ್ಲಸಲ್ಲದ ಉಪದ್ವ್ಯಾಪಗಳೇ.

ಮನಸ್ಸನ್ನು ಹೀಗೇ ಎರಡು ಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಿಕ್ಕೆ ಅಭ್ಯಾಸಮಾಡಿಕೊಳ್ಳಬೇಕು. ನಮ್ಮ ತಯಾರಿಕೆಯ ಅಥವಾ ಏಜೆನ್ಸಿಯ ವಸ್ತುಗಳನ್ನೋ ಮತ್ತಿನ್ನೇನನ್ನೋ ಅವರು ಖರೀದಿಸಲಿಲ್ಲ ಎಂದ ಮಾತ್ರಕ್ಕೆ ಅವರದೇನೂ ತಪ್ಪಿಲ್ಲಾ ಎಂಬ ಭಾವವನ್ನು ನಾವೇ ತಳೆದರೆ, ವಿರೋಧವೊಡ್ಡಿದವರ ಸಲುವಾಗಿಯೂ ಅವರಿಗೆ ಒಳ್ಳೆಯ ಬುದ್ಧಿಬರಲಿ ಎಂಬ ಸಂದೇಶವನ್ನು ಸಾರಿದರೆ ಆಗ ಎದುರಿಗಿರುವ ಆ ಜನ ತಾವೇ ಕೊರಗಲು ತೊಡಗುತ್ತಾರೆ, ತಾವೇ ಸಣ್ಣವರಾದೆವಲ್ಲಾ ಎಂಬ ಕೊರಗು ಹಲವು ವರ್ಷಗಳ ಕಾಲ ಅವರನ್ನು ಬಾಧಿಸುತ್ತದೆ!

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ
ಅಣಗಿದ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವದನುಕೂಲ ಬರೆ-ಮಂಕುತಿಮ್ಮ

ಇಂತಹ ಒಂದೊಂದೂ ಮುಕ್ತಕಗಳನ್ನು ಮಹಾತ್ಮ ಡೀವೀಜಿ ಬರೆದರು. ಕಷ್ಟದ ದಿನಗಳಲ್ಲಿ ನಮ್ಮ ದಿನಚರಿಯನ್ನು ಬರೆದಿಟ್ಟರೆ ಸುಖದ ದಿನಗಳಲ್ಲಿ ನಾವದನ್ನು ತೆರೆದು ಓದಿದಾಗ ಓ ಹೀಗೆಲ್ಲಾ ಇತ್ತಲ್ಲಾ ಎನಿಸುತ್ತದೆ!

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿದ್ದೊಡದು ಭೋಜ್ಯವಂತು ಜೀವತಮುಂ
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆ ರುಚಿ -ಮಂಕುತಿಮ್ಮ

ಉಪ್ಪಿಟ್ಟನ್ನು ಮಾಡುವಾಗ ಹೇಗೆ ಉಪ್ಪು, ಹುಳಿ, ಕಾರ, ಸಿಹಿ ಒಗ್ಗರಣೆ ಸಾಮಾನುಗಳು, ರವೆ, ನೀರು, ಕರಿಬೇವು ಇದನ್ನೆಲ್ಲಾ ಆಯಾಯ ಹದಕ್ಕೆ ಉಪಯೋಗಿಸಿದರೆ ರುಚಿಕಟ್ಟಾಗಿರುತ್ತದೋ ಈ ಜೀವನವೆಂಬುದೂ ಒಂದು ಉಪ್ಪಿಟ್ಟು! ಅದರಲ್ಲಿ ಬಡತನ, ಸಿರಿತನ, ಕಷ್ಟಕೋಟಲೆ, ಕಾಯಿಲೆ-ಕಸಾಲೆ, ದುಃಖ-ದುಮ್ಮಾನ, ಸುಖ-ಶಾಂತಿ-ನೆಮ್ಮದಿ ಎಲ್ಲವೂ ಅಷ್ಟಿಷ್ಟು ಸೇರಿಯೇ ಇರುತ್ತದೆ. ಹಣವಿದ್ದ ಮಾತ್ರಕ್ಕೆ ಸಾಯುವ ಶ್ರೀಮಂತ ಬದುಕಲಾರ ಹೇಗೋ ಹಣವಿಲ್ಲದ ಮಾತ್ರಕ್ಕೆ ಬದುಕು ಬರಡು ಎಂದು ತಿಳಿಯುವುದು ಮೂರ್ಖತನ. ಹಣದಿಂದಲೇ ಎಲ್ಲವೂ ಎಂಬ ಭ್ರಮೆಗೆ ಒಳಗಾಗಿ ನಾವು ಕೆಡುತ್ತೇವೆ.

ಉದಾಹರಣೆಗೆ ಪದ್ಮಾಲಕ್ಷ್ಮೀ ಎಂಬ ಮಹಿಳೆ ತನ್ನನ್ನು ಜಾಗತಿಕ ಮಟ್ಟದಲ್ಲಿ ಶೀಲಮಾರಿಕೊಳ್ಳುವುದರ ಮೂಲಕ ಗುರುತಿಸಿಕೊಂಡು ಹಣಮಾಡಿದ್ದಾಳೆ. ಆದರೆ ಆಕೆ ಸುಖಿಯೇ? ಸರ್ವಥಾ ಸಾಧ್ಯವಿಲ್ಲ! ಮುಪ್ಪಿನ ವಯೋಮಾನಕ್ಕೆ ಅವಳಿಗೆ ಅದರ ಅರ್ಥವ್ಯತ್ಯಾಸ ಗೊತ್ತಾಗುತ್ತದೆ, ಕಾಲ ಸರಿದುಹೋಗಿರುತ್ತದೆ! ಹಣದ ಹೊಳೆಯಲ್ಲೇ ಸದಾ ತೇಲಾಡುವ ವಿದೇಶೀಯರು ಶಾಂತಿಯನ್ನರಸಿ ಭಾರತಕ್ಕೆ ಬರುತ್ತಾರೆ ಯಾಕೆ ? ಅಲ್ಲಿ ಎಕ್ಸ್‍ಪೋರ್ಟ್ ಮಾಡಿ ಎಂದು ಕುಳಿತಲ್ಲಿಂದಲೇ ಆರ್ಡರ್ ಮಾಡಲಾಗುತ್ತಿರಲಿಲ್ಲವೇ? ಶಾಂತಿ-ನೆಮ್ಮದಿ ಖರೀದಿಸುವ ವಸ್ತುವಲ್ಲವಲ್ಲ, ಇಲ್ಲದಿದ್ದರೆ ಜನ ಅದನ್ನೂ ವ್ಯಾವಹಾರಿಕವಾಗಿ ಮಾಡಿಕೊಳ್ಳುತ್ತಿದ್ದರು!

’ಬಡವಾ ನೀ ಮಡಗದ್ಹಾಂಗಿರು’ ಎಂಬುದು ಜನಪದ ಜಾಣ್ಣುಡಿ. ಮಡಗೋದು ಎಂದರೆ ಇಡೋದು. ಇಡೋದು ಯಾರು? ಕಾಣದ ಶಕ್ತಿ ಕಾಣುವ ಈ ಲೋಕದ ಅಣುಅಣುವಿನ ಸಂಚಾರದಲ್ಲೂ ಕೆಲಸಮಾಡುತ್ತದೆ; ನಿಯಂತ್ರಿಸುತ್ತದೆ. ಇದನ್ನರಿತ ಆಚಾರ್ಯ ಶಂಕರರು " ತೃಣಮಪಿ ನ ಚಲತಿ ತೇನವಿನಾ " ಎಂದರು! ನಾವಿನ್ನೂ ಅದನ್ನು ಅರಿತಿಲ್ಲ, ಅರಿಯುವುದಕ್ಕೆ ಮುಂದಾಗುವುದೂ ಇಲ್ಲ! ಅರಿಯುವುದು ಒಂದನ್ನೇ- ಪಾರ್ಶಿಮಾತ್ಯರ ಅಂಧಾನುಕರಣೆ ಮಾಡುವುದನ್ನು ಮತ್ತು ಪ್ರಗತಿಪರರು ಎನಿಸುವ ಸಲುವಾಗಿ ಸದ್ಧರ್ಮ ಸೂತ್ರಗಳನ್ನೂ ವೇದವೇದಾಂಗಗಳನ್ನೂ ಅಲ್ಲಗಳೆಯುವುದು!

ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನ ಜೀವನಕೆ-ಮಂಕುತಿಮ್ಮ

ಬೇರು ಹಳೆಯದಾದಷ್ಟೂ ಮರ ಬಾಳುತ್ತದೆ, ಚಿಗುರು ಹೊಸದಾದಷ್ಟೂ ಅದರ ಅಂದ ಹೆಚ್ಚುತ್ತದೆ ಹೇಗೋ ಹಾಗೇ ಆರ್ಷೇಯ ತತ್ವಗಳಿಂದ ಮನುಜಮತವನ್ನು ಹೇಳಿದ ಸನಾತನ ಧರ್ಮ, ವೇದ-ಉಪನಿಷತ್ತುಗಳು ಇವೆಲ್ಲವುಗಳ ಆಧಾರದಮೇಲೆ ಆಧುನಿಕ ವಿಜ್ಞಾನವನ್ನು ಬಳಸಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ, ಜೊತೆಗೆ ಸುರಸ ಲಾಲಿತ್ಯ ಸಂಗೀತ, ಶಿಲ್ಪ, ಚಿತ್ರಕಲೆಗಳನ್ನೂ ಜೋಡಿಸಿಕೊಳ್ಳುತ್ತಾ ಬದುಕಿದರೆ ಜನಜೀವನಕ್ಕೆ ಅದು ಉತ್ತಮಮಾರ್ಗ ಎಂದು ಪ್ರಾಜ್ಞರು ಅನುಭವದಿಂದಲೂ ಆಧಾರದಿಂದಲೂ ಹೇಳಿದ್ದಾರೆ.

ಸರ್ವರುಂ ಸಾಧುಗಳೇ ಸರ್ವರುಂ ಬೋಧಕರೆ
ಜೀವನ ಪರೀಕ್ಷೆ ಬಂದಿದಿರು ನಿಲುವನಕ
ಭಾವಮರ್ಮಂಗಳೇಳುವುವಾಗ ತಳದಿಂದ
ದೇವರೇ ಗತಿಯಾಗ -ಮಂಕುತಿಮ್ಮ

ಹೇಳುವುದು ಸುಲಭ, ನಡೆಸುವುದು ಕಷ್ಟ ಎಂಬುದೂ ಒಂದು ಮಾತು. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬೋಧಕರೇ ಆಗಿರುತ್ತೇವೆ. ಬೇರೆಯವರಿಗೆ ಬೋಧಿಸುವ ಕೆಲಸದಂತೇ ನಾವೆಷ್ಟು ಅದನ್ನು ಅಳವಡಿಸಿಕೊಂಡಿದ್ದೇವೆ ಎಂಬುದು ಪ್ರಮುಖವಾಗಿ ಶೋಧಮಾಡಬೇಕಾದ ಅಂಶ. ಎಷ್ಟೋ ಸಲ ಬೋಧಕರಿಗೇ ನಿಂತನೆಲ ಕುಸಿಯುವ ಸನ್ನಿವೇಶವೂ ಇರಬಹುದು. ಮನದ ಮೂಸೆಯಿಂದ ಧುತ್ತನೇ ಮೇಲೇಳುವ ಎಲ್ಲಾಭಾವನೆಗಳನ್ನೂ ನಿಯಂತ್ರಿಸುತ್ತಾ ಜೀವನವೆಂಬ ನಿಜವಾದ ಪರೀಕ್ಷೆಗೆ ನಮ್ಮನ್ನು ನಾವು ಒಡ್ಡುವಾಗ ದೇವರೆಂಬ ಅಗೋಚರ ಶಕ್ತಿ ನಮಗೆ ಉತ್ತೀರ್ಣರಾಗುವ ಶಕ್ತಿಯನ್ನೂ ತಕ್ಕಮಟ್ಟಿನ ಯುಕ್ತಿಯನ್ನೂ ನೀಡಬೇಕಾಗುತ್ತದೆ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗುಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೇ -ಮಂಕುತಿಮ್ಮ

ಪಾಲಿಗೆ ಬಂದ ಯಾವ ಕೆಲಸವೇ ಆದರೂ ಅದನ್ನೇ ಮನಸ್ಸಂತೋಷದಿಂದ ಮಾಡಿ ಅದರಿಂದ ದೊರೆತ ಫಲವನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತಾ, ಯಾವುದಕ್ಕೂ ಗೊಣಗುಡದೇ ಬದುಕಿನ ಖರ್ಚುಗಳನ್ನು ’ಹಾಸಿಗೆಗೆ ತಕ್ಕಂತೇ ಕಾಲುಚಾಚು’ ಎಂಬರೀತಿಯಲ್ಲಿ ನಿಭಾಯಿಸುತ್ತಾ ನಡೆದರೆ, ಬದುಕಿದರೆ ವ್ಯಕ್ತಿ ಸತ್ತಮೇಲೂ ಜನ ಇನ್ನೂ ಬೇಕಾಗಿತ್ತು ಎನ್ನುತ್ತಾರೆ! ಇದಕ್ಕೆ ಸದ್ಯ ನಾನು ಉದಾಹರಿಸುವುದು ರಾಜಕಾರಣಿ ಡಾ|ವಿ.ಎಸ್.ಆಚಾರ್ಯರನ್ನು. ಮತ್ತೆ ವಿವರಣೆ ಬೇಡ ಎನಿಸುತ್ತದೆ.

ಕಾಗೆಯುಂ ಕೋಗಿಲೆಯುವೊಂದೆ ಮೇಲ್ನೋಟಕ್ಕೆ
ಯೋಗಿಯುಂ ಸಂಸಾರ ಭೋಗಿಯೇ ಹೊರಕೆ
ಲೋಗರವೊಲಿರುತೆ ಸುಖದುಃಖ ಸಂಭ್ರಮಗಳಲಿ
ತ್ಯಾಗಿಯವನ್ ಅಂತರದಿ -ಮಂಕುತಿಮ್ಮ

ಕಾಗೆಯೂ ಕೋಗಿಲೆಯೂ ದೂರದಿಂದ ಕಪ್ಪಗೇ ಕಾಣುತ್ತವೆ ಹೇಗೋ ಹಾಗೇ ಯೋಗಿಯೂ ಭೋಗಿಯೂ ಇಬ್ಬರೂ ಒಂದರ್ಥದಲ್ಲಿ ಸಂಸಾರಸ್ಥರೇ ಆಗಿರುತ್ತಾರೆ. ಸನ್ಯಾಸಿಗಳಿಗೆ ನೇರವಾದ ತ್ಯಾಗದ ಅನುಕೂಲವಿದ್ದರೆ ಸಂಸಾರಿಗಳಿಗೆ ಸ್ವನಿಯಂತ್ರಣದಿಂದ ತ್ಯಾಗ ಸಾಧ್ಯವಾಗುತ್ತದೆ. ಸಂಸಾರಿಯಾಗಿದ್ದೂ ಯೋಗಿಗಳಾಗುವ ಮಹಾತ್ಮರೂ ಇದ್ದಾರೆ. ಅದಕ್ಕೆ ಸ್ವತಃ ಡೀವೀಜಿಯವರೇ ಉದಾಹರಣೆಯಾಗುತ್ತಾರೆ! ತನಗೆ ಸನ್ಮಾನಧನವಾಗಿ ಬಂದ ಒಂದುಕೋಟಿ [ಅಂದಿನ ೧೯೭೫ರ ಕಾಲದಲ್ಲಿ ಒಂದುಕೋಟಿ]ಯನ್ನೂ ಸಂಪೂರ್ಣ ಸಾರ್ವಜನಿಕರ ಸೇವೆಗಾಗಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಕಟ್ಟುವುದಕ್ಕೆ ನೀಡಿ, ನಿಂತು ಕಟ್ಟಿಸಿ ಲೋಕಾರ್ಪಣೆಗೈದರು. ಮಾರನೇ ದಿನವೇ ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡುವ ವ್ಯವಸ್ಥೆಗೂ ಸ್ವಲ್ಪ ಹಣವನ್ನೂ ಇಟ್ಟುಕೊಳ್ಳಲಿಲ್ಲ, ಶೆಟ್ಟಿ ಅಂಗಡಿಯಿಂದ ಸಾಲದ ರೂಪದಲ್ಲಿ ಕಾಫಿಗೆ ಬೇಕಾದ ಸಾಮಾನು ಪಡೆದು ನಂತರ ತೀರಿಸಿದರು! ನಾವೆಲ್ಲರೂ ಹೀಗೇ ಮಾಡಲು ಸಾಧ್ಯವೇ? ಹೊರನೋಟಕ್ಕೆ ಡೀವೀಜಿಯೂ ನಮ್ಮಂತೇ ಸಂಸಾರಿಗಳೇ ಅಗಿದ್ದರಲ್ಲವೇ? ’ತ್ಯಾಗಿಯವನ್ ಅಂತರದಿ’ ಎಂಬ ಮಾತು ಎಷ್ಟು ಸತ್ಯ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಶರಣವೊಗು ಜೀವನ ರಹಸ್ಯದಲಿ ಸತ್ತ್ವದಲಿ
ಶರಣು ಜೀವನವ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮನಲಿ -ಮಂಕುತಿಮ್ಮ

|ವಸುಧೈವ ಕುಟುಂಬಕಮ್| ಎಂಬ ವ್ಯಾಖ್ಯೆಯನ್ನು ಈ ಮುಕ್ತಕದಲ್ಲಿ ಡೀವೀಜಿ ಅಳವಡಿಸಿದ್ದಾರೆ. ಆದಿಶಂಕರರು ಆತ್ಮಷಟ್ಕದಲ್ಲಿ ಚಿದಾನಂದರೂಪಂ ಶಿವೋಹಂ ಶಿವೋಹಂ ಎಂದಿದ್ದನ್ನು ಕಳೆದವರ್ಷ ವಿವರಿಸಿದ್ದೆನಷ್ಟೇ ? ಅದರಂತೇ ಈ ಪ್ರಪಂಚದ ಒಳಗೂ ಮತ್ತು ಅದರಾಚೆಗೂ ಹುದುಗಿ ಕುಳಿತು, ರಹಸ್ಯವಾಗಿ ಈ ಲೋಕವನ್ನು, ಬ್ರಹ್ಮಾಂಡವನ್ನು ನಡೆಸುತ್ತಿರುವ ಜಗನ್ನಿಯಾಮಕ ವಿಶ್ವಂಭರ ಶಕ್ತಿಗೆ ನಾವು ನಮಸ್ಕರಿಸಲು ಮರೆಯಬಾರದು. ಲೌಕಿಕವಾಗಿ ಮನುಷ್ಯನ ಜೀವನಕ್ಕಾಗಿ ಅದೆಷ್ಟೋ ಕಾರ್ಮಿಕರು ಕಾರ್ಖಾನೆಗಳಲ್ಲಿ, ರೈತರಾಗಿ ಹೊಲಗಳಲ್ಲಿ, ರಸ್ತೆ, ಸೇತುವೆ-ಸಾರ್ವಜನಿಕ ಕಟ್ಟಡಗಳ ನಿರ್ಮಾಣಗಳಲ್ಲಿ, ನೀರು-ಆಹಾರ ಪೂರೈಕೆಮಾಡುವುದರಲ್ಲಿ, ಆರೋಗ್ಯ-ವಿದ್ಯೆ-ಉದ್ಯೋಗ-ವ್ಯಾಪಾರ ಮೊದಲಾದುವುಗಳನ್ನು ಸಮದೂಗಿಸುವಲ್ಲಿ, ವಿದ್ಯುತ್ತು-ವಾಹನಾದಿ ಸಕಲ ಸೌಲಭ್ಯಗಳನ್ನು ಕೊಡುವಲ್ಲಿ ತೊಡಗಿಸಿಕೊಂಡಿರುವ ಮಾನವನಲ್ಲಿರುವ ಆ ಪರೋಕ್ಷ ಶಕ್ತಿಗೆ ನಮಸ್ಕರಿಸಬೇಕು. ಪ್ರತಿಯೊಂದೂ ಜೀವಿಯ ಆಂತರ್ಯದಲ್ಲಿ ನೆಲಸಿರುವ ಗಂಭೀರನೂ ಪ್ರಶಾಂತನೂ ಆದ ಪರಮಾತ್ಮನನ್ನು ಕಂಡು ನಮಸ್ಕರಿಸಬೇಕು ಎಂಬುದು ಡೀವೀಜಿಯವರ ಸಂದೇಶವಾಗಿದೆ. ಇಂದಿಗೆ ಸುಮಾರು ೧೨೫ ವರ್ಷಗಳ ಹಿಂದೆ ಜನಿಸಿದ್ದ ಡೀವೀಜಿಯವರ ಅನುಭವ ಮತ್ತು ಅನುಭಾವ ಅನನ್ಯ, ಮಾನ್ಯ. ಅವರ ಹೆಸರನ್ನು ಹೇಳಿಕೊಂಡು ಬರೆಯುವುದೂ ನಮ್ಮ ಪುಣ್ಯ ಎಂದು ತಿಳಿಸುತ್ತಾ, ಜೀವನಧರ್ಮವನ್ನು ಅರ್ಥಮಾಡಿಕೊಳ್ಳಲು ಅವರ ’ಜೀವನಧರ್ಮ ಯೋಗ’ ವೆಂಬ ಬೃಹದ್ಗ್ರಂಥವನ್ನು ಸಮಯಮಾಡಿಕೊಂಡು ಓದಿ ಎಂದು ಸಲಹೆ ನೀಡುತ್ತಾ ಡೀವೀಜಿಯವರಿಗೆ ನನ್ನ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸಿ ನಿಮ್ಮೆಲ್ಲರಿಗೂ ವಂದಿಸುವುದರೊಂದಿಗೆ ಶುಭಕೋರುತ್ತೇನೆ.

Wednesday, March 7, 2012

ಗೋಕುಲ ರಂಗಿನಾಟ

ಚಿತ್ರಕೃಪೆ : ಅಂತರ್ಜಾಲ

ಗೋಕುಲ ರಂಗಿನಾಟ

ಇದೊಂದು ಆದಿಪ್ರಾಸದ ಕವನ, ಎರಡೆರಡು ಸಾಲುಗಳಲ್ಲಿ ಅಂತ್ಯಪ್ರಾಸವನ್ನೂ ಕಾಣಬಹುದು, ಎರಡೆರಡು ಸಾಲುಗಳ ಗುಂಪು ಮುಕ್ತಕಗಳಂತೇ ಅಂದರೆ ಪ್ರತ್ಯೇಕ ಪ್ರತ್ಯೇಕವಾಗಿವೆ. ಯಾವುದನ್ನು ಎಲ್ಲಿಬೇಕಾದರೂ ಪ್ಲಗ್ ಅಂಡ್ ಪ್ಲೇ ಮಾಡಿಕೊಳ್ಳಬಹುದು! ಹೀಗೊಂದು ಪ್ರಯತ್ನದಲ್ಲಿ ಹೋಳಿಯಂಚಿನಲ್ಲಿ ರಂಗಿನಾಟಕ್ಕಾಗಿಯೂ ದಾಂಡಿಯಾ ನೃತ್ಯಕ್ಕಾಗಿಯೂ ಬಳಸಿಕೊಳ್ಳಬಹುದಾದ ಕನ್ನಡ ಕವನ ನಿಮಗಾಗಿ :

ಕಳ್ಳ ಕಳ್ಳ ಹೆಜ್ಜೆಯಿಟ್ಟು ಬಂದನಿಲ್ಲಿ ಮಾಧವ |
ಪಿಳ್ಳೆನೆಪವನೊಡ್ಡಿ ಸನಿಹ ಸರಿಯುತ ರಾಧಾಧವ ||

ಮಳ್ಳನಂತೆ ನಕ್ಕನಾತ ಕಾರಣಗಳೇ ಇಲ್ಲದೇ |
ಸಿಳ್ಳೆ ಹೊಡೆದ ಮುರಳಿ ನುಡಿದ ಒಂದೆಡೆಯಲಿ ನಿಲ್ಲದೇ ||

ಬಳ್ಳುತಲ್ಲಿ ರಂಗಿನಾಟ ಗೋಪಸಖಿಯರೊಂದಿಗೆ |
ಕುಳ್ಳನಲ್ಲ ಕುಂಟನಲ್ಲ ಎಂಟು ವೇಷ ಮಂದಿಗೆ! ||

ಬಳ್ಳಿಹಿಡಿದು ಜೋತುಬಿದ್ದ ವಾರೆವಾರೆ ನೋಡುತ |
ಸುಳ್ಳು ಹೇಳಿ ಬಿದ್ದೆನೆಂದು ಬೇಕಂತಲೆ ಕಾಡುತ ||

ತಳ್ಳಿಮಾಡಿ ಹೆಸರುಗಳನು ಕೆಸರನೆರಚಿ ಸುಮ್ಮಗೆ |
ತಳ್ಳುತಲ್ಲಿ ಭಾವದಲ್ಲಿ ಬಿಗಿಯುತೊಮ್ಮೆ ಬಿಮ್ಮಗೆ ||

ಗುಳ್ಳೆ ಗುಳ್ಳೆ ಹಾರಿಸುತ್ತ ಏರಿಸಿದನು ಬಣ್ಣವ |
ತೊಳ್ಳೆತೆಗೆದ ಹಲಸು ತಿಂದು ಹೊಡೆದುಬಿಟ್ಟ ಕಣ್ಣವ! ||

ಮೆಳ್ಳಗಣ್ಣು ಕೆಂಪುಗಣ್ಣು ತೋರಿ ಬೆದರಿಸಟ್ಟುತ |
ಪೊಳ್ಳು ಪುಕ್ಕಲೆಂದು ಜರಿದು ಕರೆದು ಬೆನ್ನುತಟ್ಟುತ ||

ಹಳ್ಳದಲ್ಲಿ ನೀರಿನಾಟ ಗೊಲ್ಲ ಗೋಪಜನರೊಡೆ |
ಮಿಳ್ಳೆ ಬಿದಿರ ಪಿಚಕಾರಿಯ ಬಣ್ಣ ಚೆಲ್ಲಿ ಎಲ್ಲೆಡೆ ||


Monday, March 5, 2012

ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ .....

ಈ ಚಿತ್ರಋಣ: ಆಲ್ ಇಂಡಿಯಾ ಆರ್ಟ್ಸ್.ಕಾಂ
ಮಿಕ್ಕಿದ ಚಿತ್ರಗಳ ಕೃಪೆ : ಅಂತರ್ಜಾಲ

ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ
ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ

ಹೋಲಿಕಾ-ಕಾಮದಹನ ಎಂದು ಕರೆಯಲ್ಪಡುವ ಹೋಳಿಹಬ್ಬ ನಾಳೆ ಭಾರತಪೂರ್ತಿ ಆಚರಿಸಲ್ಪಡುತ್ತದೆ. ಹಾಗೆ ನೋಡಿದರೆ ಅಂತಹ ವಿಶೇಷ ಪೂಜೆ-ಪುನಸ್ಕಾರಗಳಿಲ್ಲದ ಈ ಹಬ್ಬದ ಮಹತ್ವ ಎಂಥದ್ದು ಎಂಬುದನ್ನು ತಿಳಿಯದೇ ಆಚರಿಸುವವರೂ ಇದ್ದಾರೆ! ಹೋಳಿ ಎಂದರೆ ಬರೇ ರಂಗಿನಾಟವೇ? ಹಾಗಾದರೆ ಅದು ಯಾತಕ್ಕೆ?

ಸಂಸ್ಕೃತದ ಪರ್ವ ಎಂಬುದು ಕನ್ನಡದಲ್ಲಿ ಹಬ್ಬ ಎಂದಾಗಿದೆ. ನಮ್ಮ ಪ್ರತಿಯೊಂದೂ ಹಬ್ಬದ ಹಿಂದೆ ಮನೋವೈಜ್ಞಾನಿಕ, ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಅದೆಷ್ಟೋ ಸಂಶೋಧನೆಗಳು ಅದಾಗಲೇ ತಿಳಿಸಿವೆ. ಚಳಿಗಾಲ ಕಳಿದು ಬೇಸಿಗೆ ಕಾಲಿಡುವದರೊಳಗಿನ ಸೇತುವೆಯಂತೇ ಇರುವ ಈ ಕಾಲಘಟ್ಟವನ್ನು ಆಂಗ್ಲರು ’ಸ್ಪ್ರಿಂಗ್ ಸೀಸನ್’ ಎನುತ್ತಾರೆ. ಚಳಿ ಮುಗಿದು ಹೋಯ್ತು ಇನ್ನೇನೂ ಶೀತದ ಭಯವಿಲ್ಲ ಎಂಬ ಕಾರಣಕ್ಕೆ ಈ ಹಬ್ಬವೇ ? ಅಲ್ಲ. ಗಡದ್ದಾಗಿ ಅಡುಗೆಮಾಡಿ ಹೊಡೆಯಲಿಕ್ಕಾಗಿಯೇ ? ಅಲ್ಲ . ಯಾವುದೂ ಅಲ್ಲ ಎಂದಮೇಲೆ ಯಾಕಾಗಿ ಈ ಹಬ್ಬ ? ಹಿಂದೂಗಳಿಗೆ ಇದೊಂದು ವಿಶಿಷ್ಟ ಹಬ್ಬ. ಇದು ಗಂಡು-ಹೆಣ್ಣಿನ ನಡುವೆ ದೈಹಿಕ ಆಕರ್ಷಣೆ ಇಲ್ಲದ ಅಥವಾ ಕಾಮ ರಹಿತವಾದ ನಿಷ್ಕಲ್ಮಶ ಪ್ರೇಮವನ್ನೂ, ಸಮಾಜದಲ್ಲಿ ಎಲ್ಲರ ಬ್ರಾತೃತ್ವ ವೃದ್ಧಿಸುವ ನಿಷ್ಕಳಂಕ ಪ್ರೀತಿಯನ್ನೂ ತಿಳಿಸುವ ಹಬ್ಬ!

ಉತ್ತರ ಭಾರತದಲ್ಲಿ ಇದು ಕೃಷ್ಣನನ್ನು ಅತಿಯಾಗಿ ನೆನಪಿಸುವ ಹಬ್ಬಗಳಲ್ಲಿ ಒಂದು. ಇಂಥಾ ಹಬ್ಬದ ಸಾರವನ್ನು ತಿಳಿಯುವ ಜೊತೆಜೊತೆಗೇ ನಮ್ಮ ಕನ್ನಡದ ಕವಿ ಕೆ.ಸಿ.ಶಿವಪ್ಪನವರು ಬರೆದ ಒಂದು ಹಾಡನ್ನೂ ಗುನುಗುನಿಸುತ್ತಾ ಮುಂದುವರಿಯೋಣ. ಅಂದಹಾಗೇ ಕನ್ನಡದ ಈ ಕವಿ ಕೃಷ್ಣ-ರಾಧೆಯರ ಕುರಿತು ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಒಂದಷ್ಟು ಧ್ವನಿಮಾಧ್ಯಮ [ಆಡಿಯೋ ಕ್ಯಾಸೆಟ್]ಕ್ಕೆ ಏರಿದವು. ಅಂತಹ ಅಪರೂಪದ ಕ್ಯಾಸೆಟ್‍ಗಳು ಇಂದು ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಮಾತ್ರ ದೊರೆಯಬಹುದು. ಕವಿಯ ಸರಳ ರಚನೆಗಳು ಬಹಳ ಸೆಳೆಯುತ್ತವೆ. ಮಕ್ಕಳೂ ಕೂಡ ಹಾಡಬಹುದಾದ ಸುಲಭ ಸಾಹಿತ್ಯಕ ಪದಗಳಲ್ಲಿ ಭಾವ ಪೂರ್ಣವಾಗಿ ಬರೆದ ಕವನಗಳು ಕೇಳಲು ಬಹಳ ಪ್ರಿಯವಾಗುತ್ತವೆ; ಕೇಳುತ್ತಾ ಕೇಳುತ್ತಾ ಭಾವಸರೋವರದಲ್ಲಿ ವಿಹರಿಸುವ ಅನುಭವ ಕೇಳುಗನಿಗಾಗುತ್ತದೆ. ಅಂತಹ ಒಂದು ಹಾಡಿನ ಸಾಂಗತ್ಯದೊಡನೆ ನಮ್ಮ ಹೋಳೀ ಹಬ್ಬದ ಕಥೆ ಮುಂದುವರಿಯುತ್ತದೆ!

ಮುರಳಿನಾದ ಹರಿದು ಸುರಿಯೆ ಅಲ್ಲಿ ರಾಗಮೋಹನ
ಕಮಲ ನಾಚಿ ಬಿರಿದು ಕರೆಯೆ ಅಲ್ಲಿ ನೀಲಲೋಚನ


ಮುದ್ದು ಕೃಷ್ಣ ಯಾರಿಗೆ ಬೇಕಾಗಿಲ್ಲ? ಆತ ರಾಧೆಗೋ ರುಕ್ಮಿಣಿಗೋ ಗೋಪಿಕೆಯರಿಗೋ ಬೇಕಾದ ಹಾಗೇ ನಮಗೆಲ್ಲಾ ಬೇಕೇ ಆಗಿರುವ ಆಪ್ತ. ಮುದ್ದು ಮಗುವಿನಿಂದ ಹಿಡಿದು ಮುದಕರವರೆಗೂ ಆತ ಎಲ್ಲರಿಗೂ ಪರೋಕ್ಷ ಪರಿಚಿತನೇ! ಅಂಬೆಹರೆಯುವ ಕೃಷ್ಣನ ತುಂಬು ಗಡಿಗೆಯ ಬೆಣ್ಣೆ ಕದ್ದ ಕಥೆಕೇಳುವ ಮಕ್ಕಳಿಗೂ ಆತ ಬೇಕು, ಮಿಲನಮಹೋತ್ಸವಕ್ಕಾಗಿ ಕಾದ ದಂಪತಿಯ ಪ್ರೇಮ ಸಲ್ಲಾಪಕ್ಕೆ ಸ್ಫೂರ್ತಿ ನೀಡುವನಾಗಿ ಬೇಕು, ಹರೆಯದ ಜನರಿಗೆ ಗುರಿ ತಲುಪುವ ಬಗೆ ತೋರುವ ಗೋಪಾಲ ಬೇಕು, ನಡುಪ್ರಾಯದ ಜನರಿಗೆ ನಡೆಯುವ ಹಾದಿ ತಿಳಿಸಿದ ಜಗದ್ಗುರು ಕೃಷ್ಣ ಬೇಕು, ಹೆಜ್ಜೆ ಕಿತ್ತಿಡಲು ಊರುಗೋಲಿನ ಸಹಾಯ ಪಡೆಯುವ ಅಜ್ಜ-ಅಜ್ಜಿಯರಿಗೂ ಆತ ಭಗವಂತನಾಗಿ ಬೇಕು. ಇಷ್ಟೆಲ್ಲಾ ಹಬ್ಬಿರುವ ಆ ಕೃಷ್ಣ ಗೀತೆಯನ್ನು ಬೋಧಿಸಿದ ಅಪ್ರತಿಮ ಮೇಧಾವಿ ಎಂದರೆ ನಂಬಲಾಗದಷ್ಟು ಎಲ್ಲರಿಗೂ ಆತ ಫ್ರೆಂಡು, ಸ್ನೇಹಿತ, ಒಂಥರಾ ಮನೆಜನ ಇದ್ದಹಾಗೇ!

ತಾರೆ ಮಿನುಗಿ ಸನ್ನೆ ಮಾಡೆ ಬರುವ ಚಾರು ಚಂದಿರ
ಮುಗುದೆಯೊಡನೆ ಒಂಟಿಯಾಡೆ ನಲಿವಶ್ಯಾಮಸುಂದರ !

ಇಂತಹ ಗೊಲ್ಲನ ಆ ಕಾಲದಲ್ಲಿ ಹೋಲಿಯನ್ನು ಆತನೂ ಸೇರಿದಂತೇ ಎಲ್ಲರೂ ಸೇರಿ ಆಡುತ್ತಿದ್ದರಂತೆ. ಬಿದಿರಿನ ಪೆಟ್ಲಂಡೆ-ಪಿಚಕಾರಿಗಳಲ್ಲಿ ನೈಸರ್ಗಿಕವಾಗಿ ಸಿದ್ಧಗೊಂಡ ವಿವಿಧ ಬಣ್ಣಗಳ ನೀರನ್ನು ತುಂಬಿಕೊಂಡು ಪರಸ್ಪರ ಹಾರಿಸುತ್ತಾ ಸಂತಸಪಡುತ್ತಿದ್ದರಂತೆ. ಸಖಿಯರ ನಡುವೆ ನಿಂತ ಸಖ ಗೋವಿಂದನಿಗೆ ಸುತ್ತಲ ಎಲ್ಲರಿಂದಲೂ ಬಣ್ಣದ ಓಕುಳಿಯಾಟ. ಕೃಷ್ಣ ಹದಿನಾರು ಸಾವಿರ ಗೋಪಿಕೆಯರ ಗಂಡ ಎಂಬುದೊಂದು ಐತಿಹ್ಯವಿದೆ. ನರಕಾಸುರ ಕೂಡಿಟ್ಟ ಹದಿನಾರುಸಾವಿರ ಹೆಣ್ಣುಮಕ್ಕಳನ್ನು ಆತ ಬಂಧಮುಕ್ತಗೊಳಿಸಿದಾಗ "ಅನಾಥರಾದ ನಮಗೆ ನೀನೇ ಶ್ರೀನಾಥನಾಗು" ಎಂದು ಅವರೆಲ್ಲಾ ಗೋಳಿಟ್ಟರಂತೆ. ಅವರ ಅಳಲನ್ನು ಕೇಳಿದ ಕೇಶವ ನೆಪಮಾತ್ರಕ್ಕೆ ತಾನು ಗಂಡ ಎನಿಸಿಕೊಂಡನಾದರೂ ಅವರ ಬೇಕುಬೇಡಗಳನ್ನು ಪೂರೈಸಿದ ಬ್ರಹ್ಮಚಾರಿ ಕೃಷ್ಣ! ಇದು ಹೇಗೆ ಎಂದರೆ ಕೆಸವೆಯ ಅಥವಾ ತಾವರೆಯ ಎಲೆಯಮೇಲೆ ಬಿದ್ದ ನೀರು ಅದನ್ನು ಒದ್ದೆ ಮಾಡದಲ್ಲ? ಹಾಗೇ ಸಂಸಾರದೊಳಗಿದ್ದೂ ಆತ ಯಾವುದನ್ನೂ ಅಂಟಿಸಿಕೊಳ್ಳದವ. ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟೂ ಹೆಂಗಸರ ಮಳ್ಳ! ಇದೇ ಆ ಯಾದವನ ವೈಶಿಷ್ಟ್ಯ.

ಎಲ್ಲಿರಾಧೆ ಅಲ್ಲಿ ಶ್ಯಾಮ ಜೀವ ಭಾವ ಚಂದಕೆ
ಎಲ್ಲಿ ಚಲುವೊ ಅಲ್ಲಿ ಒಲುಮೆ ಮುಗಿಲು-ತಿರೆಯ ಮಿಲನಕೆ

ಇಂತಹ ಸಕಲರ ಪ್ರಿಯಕರ ಕೃಷ್ಣನನ್ನು ಹೆಣ್ಣು-ಗಂಡೆಂಬ ಭೇದವಿಲ್ಲದೇ ಎಲ್ಲರೂ ಪ್ರೀತಿಸುತ್ತಾರೆ. ಇಲ್ಲಿ ಒಂದು ಸೂಕ್ಷವನ್ನೂ ಗಮನಿಸಬೇಕು: ಯಾರಾದರೂ ಪ್ರಯತ್ನಿಸಿದರೆ ಹದಿನಾರು ಸಾವಿರ ಹೆಂಡಿರ ಗಂಡ ಆಗಬಹುದೇನೋ ಆದರೆ ಕಿರುಬೆರಳಲ್ಲಿ ಗೋವರ್ಧನವೆತ್ತಿ ನಿಲ್ಲುವುದು ಯಾರಿಂದಲೂ ಆಗದಮಾತು! ಅದಕ್ಕಾಗಿಯೇ ಕೃಷ್ಣ ವಿಶೇಷನಾಗುತ್ತಾನೆ; ವಿಶಿಷ್ಟನಾಗುತ್ತಾನೆ. ನೀಲಮೇಘಶ್ಯಾಮನ ನೆನಪಿನಲ್ಲಿ ಆತ ಹುಟ್ಟಿಬೆಳೆದ ನೆಲದಲ್ಲಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕೆಲವು ಪ್ರಾಂತಗಳಲ್ಲಿ ಹೋಲಿಯನ್ನು ೧೬ ದಿನಗಳ ಪರ್ಯಂತ ಅಂದರೆ ರಂಗಪಂಚಮಿಯ ವರೆಗೆ ಆಚರಿಸುವ ಪರಿಪಾಟ ಇದೆ ಎಂಬುದಾಗಿ ತಿಳಿದುಬರುತ್ತದೆ. ಆಯ್ತು ಬಣ್ಣ ಎರಚಿದ್ದಾಯ್ತಲ್ಲಾ ಇಷ್ಟೇನಾ ಹಬ್ಬ? ಅಲ್ಲ ಇನ್ನೂ ಇದೆ, ಆದರೆ ಶಿವಪ್ಪನವರ ಆ ಹಾಡು ಇಲ್ಲಿಗೆ ಪೂರ್ತಿಯಾಗುತ್ತದೆ; ನಮ್ಮ ಹೋಲೀ ಕಥೆ ಮುಂದುವರಿಯುತ್ತದೆ.

ಉತ್ತರದ ರಾಜ್ಯಗಳಲ್ಲಿ :
--------------------------

ಮಹಾವಿಷ್ಣುವಿನ ದಶಾವತಾರಗಳಲ್ಲಿ ನಾಕನೇ ಅವತಾರ ನಾರಸಿಂಹಾವತಾರ. ಹಿರಣ್ಯಕಶಿಪು ಕ್ರುದ್ಧನಾಗಿ ಮಗ ಪ್ರಹ್ಲಾದನನ್ನು ಜರಿಯುತ್ತಿರುತ್ತಾನೆ. ಹರನನ್ನು ಮಾತ್ರ ಪೂಜಿಸು ಎಂಬ ಮಾತು ಉಲ್ಲಂಘಿಸಿದ ಮಗನಿಗೆ ವಿಧವಿಧವಾದ ಹಿಂಸೆಗಳನ್ನು ನೀಡಿ ಆತನನ್ನು ಹೆದರಿಸಿ ಮನಃಪರಿವರ್ತನೆ ಮಾಡಲು ಪ್ರಯತ್ನಿಸುತ್ತಾನೆ. ಆ ಘಳಿಗೆಯಲ್ಲಿ ಒಂದು ಪ್ರಯತ್ನದಲ್ಲಿ ತನ್ನ ತಂಗಿಯಾದ ಹೋಲಿಕಾಳನ್ನು ಕಟ್ಟಿಗೆರಾಶಿಯೊಂದರಮೇಲೆ ಕೂರಿಸಿ ಅವಳ ಕಾಲಮೇಲೆ ಪ್ರಹ್ಲಾದನನ್ನೂ ಕೂರಿಸಿ ಬೆಂಕಿ ಹಚ್ಚಲಾಗುತ್ತದೆ. ಯಾಕೆಂದರೆ ಆಕೆಗೂ ಸಹ ಸಾವು ಬರದಂತೇ ಬ್ರಹ್ಮನ ವರವಿರುತ್ತದೆ. ಆದರೆ ಆಕೆ ಪ್ರಹ್ಲಾದನನ್ನು ತೊಡೆಯಮೇಲೆ ಕೂರಿಸಿಕೊಂಡಿದ್ದರ ಪರಿಣಾಮವಾಗಿ ಆಕೆಯ ವರಕ್ಕೆ ಇರುವ ಶರತ್ತು ಮುರಿದುಹೋಗುತ್ತದೆ! ಆಕೆ ಬೆಂಕಿಗೆ ಆಹುತಿಯಾಗಿ ಭಸ್ಮವಾಗುತ್ತಾಳೆ; ಪ್ರಹ್ಲಾದನಿಗೆ ಬೆಂಕಿ ತಾಗುವುದೇ ಇಲ್ಲ! ಇದು ಹೋಲಿಕಾ ದಹನದ ಕಥೆ.

ದಕ್ಷಿಣದ ರಾಜ್ಯಗಳಲ್ಲಿ :
----------------------------

ದಕ್ಷಯಜ್ಞದಲ್ಲಿ ತನ್ನನ್ನೇ ಯಜ್ಞಕುಂಡಕ್ಕೆ ಅರ್ಪಿಸಿಕೊಂಡ ಸತಿ ಮರುಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸಿರುತ್ತಾಳೆ. ನಿತ್ಯವೂ ಹರಸೇವೆಯೇ ಅವಳ ಪರಮಗುರಿ. ತಪಸ್ಸಿಗೆ ಕುಳಿತ ಪರಮೇಶ್ವರ ಏನುಮಾಡಿದರೂ ಕಣ್ಣನ್ನೇ ಬಿಡಲೊಲ್ಲ. ಪರಿಪರಿಯಾಗಿ ಪ್ರಯತ್ನಿಸಿದರೂ ಫಲಮಾತ್ರ ಸಿಗುತ್ತಲೇ ಇರಲಿಲ್ಲ. ಇದನ್ನರಿತ ಮಹಾವಿಷ್ಣು ಮಗನಾದ ಮನ್ಮಥನನ್ನು ತನ್ನ ಬಾಣಗಳ ಸಮೇತ ಕಳುಹಿಸುತ್ತಾನೆ. ಶಿವ-ಶಿವೆಯರು ಎದುರಾಬದುರಾ ಇರುವ ಸಮಯದಲ್ಲಿ ಮನ್ಮಥ ಆ ಪ್ರಾಂತದಲ್ಲಿ ಅಶೋಕ, ಚೂತ, ಅರವಿಂದ, ನವಮಲ್ಲಿಕಾ, ನೀಲೋತ್ಫಲ ಎಂಬ ಬಾಣಗಳನ್ನು ಪ್ರಯೋಗಿಸಿ ಎಲ್ಲೆಲ್ಲೂ ಹಸಿರು ಕಂಗೊಳಿಸುವಂತೆಯೂ, ಮೊಲ್ಲೆ-ಮಲ್ಲಿಗೆ-ಜಾಜಿ-ಸಂಪಿಗೆ-ಸೇವಂತಿಗೆ-ಪುನ್ನಾಗ-ಕರವೀರ-ಕಮಲದಂತಹ ಬಣ್ಣಬಣ್ಣದ ಹೂಗಳು ಅರಳುವಂತೆಯೂ, ಸುಗಂಧಭರಿತ ತಂಗಾಳಿ ತೀಡುತ್ತಿರುವಂತೆಯೂ ನೋಡಿಕೊಂಡು ಶಿವನ ತಪೋಭಂಗಕ್ಕೆ ಕಾರಣೀಭೂತನಾಗುತ್ತಾನೆ. ಕಣ್ತೆರೆದ ಶಿವನಿಗೆ ಮೊದಲು ಕಂಡಿದ್ದು ಪಾರ್ವತಿ. ಆಕೆಯ ಮುಗುಳು ನಗೆಗೆ ಮನಸೋತರೂ ತನ್ನ ತಪಸ್ಸಿಗೆ ಭಂಗತಂದ ವ್ಯಕ್ತಿಯನ್ನು ಆತ ಕುಳಿತಲ್ಲೇ ಗ್ರಹಿಸಿ ಕೋಪದಿಂದ ತನ್ನ ಮೂರನೇ ಕಣ್ಣನ್ನು ತೆರೆದು ಕ್ಷಣಮಾತ್ರದಲ್ಲಿ ಮನ್ಮಥ[ಕಾಮ]ನನ್ನು ಸುಟ್ಟು ಭಸ್ಮಮಾಡಿಬಿಡುತ್ತಾನೆ! ಇದನ್ನು ತಿಳಿದ ರತೀದೇವಿ ತನ್ನ ಗಂಡನನ್ನು ತನಗೆ ಕೊಡು ಎಂದು ಪ್ರಾರ್ಥಿಸಿದಾಗ ಕೇವಲ ಮಾನಸರೂಪದಲ್ಲಿ ಮನ್ಮಥ ಉಳಿಯಲಿ ಎಂದು ವರನೀಡುತ್ತಾನೆ. ಹೀಗೇ ಆ ನಂತರದಲ್ಲಿ ಮನ್ಮಥ ಕೇವಲ ಸುಂದರ ಮನೋರೂಪವಾಗಿರುತ್ತಾನೆ, ಛಾಯಾರೂಪವಾಗಿದ್ದಾನೆ. ಇಂತಹ ಕಾಮನನ್ನು ದಹಿಸಿದ ದಿನ ಅತಿರೇಕದ ನಮ್ಮೆಲ್ಲಾ ಕಾಮಗಳನ್ನೂ ಸುಟ್ಟುಹಾಕಬೇಕೆಂಬುದು ಒಂದು ಹೋಲಿಕೆ. ಹೀಗಾಗಿ ಕಾಮದಹನ ನಡೆಯುತ್ತದೆ!

ಇದು ಹೋಳೀಹಬ್ಬದ ಹಿಂದಿನ ನಿಜವಾದ ಕಥೆ. ಇನ್ನು ಯಾವಯಾವ ರಾಜ್ಯದಲ್ಲಿ ಯಾವೆಲ್ಲಾ ರೀತಿಯ ಆಚರಣೆಗಳು ಎಂಬುದನ್ನು ಚಿಕ್ಕದಾಗಿ ತಿಳಿಯೋಣ:

ಉತ್ತರಪ್ರದೇಶದಲ್ಲಿ :
---------------------

ಇಲ್ಲಿನ ಬರ್ಸಾನಾ ಎಂಬಲ್ಲಿ ರಾಧಾರಾಣಿ ಎಂಬ ಪ್ರಸಿದ್ಧ ದೇವಸ್ಥಾನವಿದೆ. ಅದರ ಸುತ್ತಮುತ್ತಲಲ್ಲಿ ’ಲಾಠ್ ಮರೋ’ ಎಂದು ಹೋಳಿ ಆಚರಿಸಲ್ಪಡುತ್ತದೆ. ಬಣ್ಣ ಎರಚಿಕೊಂಡ ಗಂಡಸರು ಪರಸ್ಪರ ಕೃಷ್ಣ-ರಾಧೆಯರ ಹಾಡುಗಳನ್ನು ಹಾಡುತ್ತಾರೆ. ಸ್ತ್ರೀಯರು ದೊಣ್ಣೆಗಳನ್ನು ಹಿಡಿದು ಪುರುಷರನ್ನು ಊರಿಂದ ಹೊರಗೆ ಅಟ್ಟುವ ರೀತಿಯಲ್ಲಿ ನರ್ತಿಸುವಾಗ ಪುರುಷರು ಗುರಾಣಿಯಂತಹ ಪಾತ್ರೆಗಳನ್ನು ತಲೆಯಮೇಲೆ ಕವುಚಿಕೊಂಡು ಏಟು ತಗುಲದಂತೇ ರಕ್ಷಿಸಿಕೊಳ್ಳುತ್ತಾರೆ. ಇದು ಬಹಳಹೊತ್ತು ನಡೆಯುವ ರಂಗಿನಾಟವಾಗಿ ಹೆಸರುಮಾಡಿದೆ.

ಇನ್ನು ಮಥುರಾ ಮತ್ತು ವೃಂದಾವನಗಳಲ್ಲಿ ೧೬ ದಿನಗಳ ಪರ್ಯಂತ ಕೃಷ್ಣ ಪೂಜೆ ನಡೆಯುತ್ತದೆ. ಅಲ್ಲಿನ ಜನರಿಗೆ ಇದು ಬಹಳ ವಿಶೇಷ ಹಬ್ಬವಾಗಿದೆ. ಗೋರಖಪುರದಲ್ಲಿಯೂ ಕೂಡ ಹೋಳಿಯ ದಿನ ಬೆಳಿಗ್ಗೆ ಪೂಜೆ ನಡೆಯುತ್ತದೆ. ಸಹೋದರ ಬಾಂಧವ್ಯ ಹೆಚ್ಚಿಸುವ ಹಬ್ಬವೆಂದು ಪರಿಗಣಿತವಾದ ಈ ಹಬ್ಬದ ದಿನ ಪರಸ್ಪರ ಕೆಂಪು ಬಣ್ಣವನ್ನು ಹಚ್ಚಿಕೊಂಡು ಅನ್ಯೋನ್ಯತೆಯನ್ನು ಕಂಡುಕೊಳ್ಳುತ್ತಾರೆ.

ಉತ್ತರಖಂಡದಲ್ಲಿ :
------------------

ಕುಮಾಂವ್ ನಲ್ಲಿ ಹೋಲೀ ಆಚರಣೆಗೆ ಮಹತ್ವ ನೀಡಿರುವುದು ಸಂಗೀತದ ತಳಹದಿಯಲ್ಲಿ. ಬೈಠಕಿ ಹೋಲಿ[ನಿರ್ವಾಣ್ ಕಿ ಹೋಲಿ], ಖಾರಿ ಹೋಲಿ, ಮಹಿಳಾ ಹೋಲಿ ಹೀಗೇ ಮೂರು ವಿಧಗಳು ಕಾಣಸಿಗುತ್ತವೆ. ಸಂಗೀತದ ಆರಂಭ ದೇವಸ್ಥಾನಗಳಿಂದ. ಆಮೇಲೆ ಅದು ಹಲವು ಪ್ರದೇಶಗಳಲ್ಲಿ ನಡೆಯುತ್ತದೆ. ಹಲವು ವಾದ್ಯಪರಿಕರಗಳನ್ನು ಬಳಸಲಾಗುತ್ತದೆ. ಪೀಲು, ಭೀಂಪಲಾಸಿ, ಸಾರಂಗೀ ರಾಗಗಳು ಮಧ್ಯಾಹ್ನಕಾಲದಲ್ಲಿ ಹಾಡಲ್ಪಟ್ಟರೆ, ಕಲ್ಯಾಣ್,ಶ್ಯಾಮಕಲ್ಯಾಣ್, ಯಮನ್ ರಾಗಗಳು ಸಂಜೆಹೊತ್ತಿನಲ್ಲಿ ಹಾಡಲ್ಪಡುತ್ತವೆ. ಖಾರಿ ಹೋಲಿಯನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಿಳಿಯ ಕುರ್ತಾ ಪೈಜಾಮು ತೊಟ್ಟ ಜನ ನಮ್ಮಲ್ಲಿನ ಜನಪದರಂತೇ ಡೋಳು-ಹುರ್ಕಾ ಬಡಿಯುತ್ತಾ, ಹಾಡುತ್ತಾ ಕುಣಿಯುತ್ತಾ ಆಚರಿಸುತ್ತಾರೆ.

ಊರಿನಲ್ಲಿ ಬಳಕೆಗೆ ಅನರ್ವಾದ ಹಳೆಯ ಮರದ ವಸ್ತುಗಳನ್ನು ಹದಿನೈದುದಿನ ದಿನಗಳ ಮುಂಚೆಯೇ ಒಂದುಕಡೆ ರಾಶಿಹಾಕಿ ’ಚೀರ್ ಬಂಧನ್’ ತಯಾರಿಸಿ ಪಕ್ಕದ ಊರವರು ಕದ್ದೊಯ್ಯದಂತೇ ಕಾಯುತ್ತಾರೆ. ಹೋಳಿಯ ದಿನ ಹಸಿರು ಟೊಂಗೆಯನ್ನು ಮಧ್ಯೆ ನೆಟ್ಟು ’ದುಲ್ಹೆಂದಿ’ ಎಂಬ ಆಚರಣೆ ನಡೆಯುತ್ತದೆ.

ಬಿಹಾರದಲ್ಲಿ :
--------------

ಬಿಹಾರದ ಭೋಜ್ಪುರೀ ಭಾಷೆಯಲ್ಲಿ ಹೋಲಿಯನ್ನು ’ಫಾಗ್ವಾ’ ಎನ್ನುತ್ತಾರೆ. ಫಾಲ್ಗುಣ ಪೂರ್ಣಿಮೆಯದಿನ ಹೋಲಿಕಾದಹನ ನಡೆಯುತ್ತದೆ. ರಾಶಿಹಾಕಿದ ಬೇಡದ ಮರದ ವಸ್ತುಗಳಿಗೆ ಆ ಪ್ರಾಂತದ ಹಿರಿಯ ಪುರೋಹಿತನೊಬ್ಬ ಬೆಂಕಿಹಚ್ಚುತ್ತಾನೆ. ನಂತರ ಸುತ್ತಲೂ ಇರುವ ಜನರಿಗೆ ಆತ ಕೆಂಪು ಬಣ್ಣವನ್ನು ಹಚ್ಚುತ್ತಾನೆ. ಮಾರನೇ ಬೆಳಿಗ್ಗೆ ಎಲ್ಲರೂ ಪರಸ್ಪರ ಬಣ್ಣ ಎರಚಾಡುತ್ತಾರೆ. ಭಂಗೀ ಪಾನಕ, ಗಾಂಜಾ, ಪಕೋಡ, ತಂಪುಪಾನೀಯಗಳು ಮತ್ತು ಸಾರಾಯಿ ಹೇರಳವಾಗಿ ಬಳಸಲ್ಪಡುತ್ತವೆ.


ಬಂಗಾಳದಲ್ಲಿ:
--------------

’ಡೋಳ್ ಪೂರ್ಣಿಮಾ’ ದಿನ ಬೆಳಿಗ್ಗೆ ವಿದ್ಯಾರ್ಥಿಗಳು ಕೇಸರೀ ಅಥವಾ ಬಿಳಿ ಬಣ್ಣದ ದಿರಿಸುಗಳಲ್ಲಿ ತಯಾರಾಗಿ ಕೊರಳಿಗೆ ಸುಗಂಧಸೂಸುವ ಹೂಮಾಲೆಗಳನ್ನು ಧರಿಸುತ್ತಾರೆ. ಕೃಷ್ಣ-ರಾಧೆಯರ ಚಿತ್ರಪಟಗಳನ್ನು ಅಲಂಕೃತ ವಾಹನಗಳಲ್ಲಿಟ್ಟು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಹುಡುಗರು ಕೃಷ್ಣ-ರಾಧೆಯರ ಹಾಡುಹಾಡುತ್ತಾ ನಲಿದರೆ ಮಿಕ್ಕುಳಿದವರು ಬಣ್ಣ ಎರಚಾಟ ನಡೆಸುತ್ತಾರೆ. ಪ್ರತೀ ಮನೆಯಲ್ಲೂ ಮನೆಹಿರಿಯ ಉಪವಾಸ ವ್ರತ ನಡೆಸಿ ಕೃಷ್ಣ ಮತ್ತು ಅಗ್ನಿ ಇಬ್ಬರನ್ನೂ ಪೂಜಿಸುತ್ತಾನೆ. ಪೂಜಾವಿಧಿಗಳು ಮುಗಿದಮೇಲೆ ನೈವೇದ್ಯ ಅರ್ಪಿಸುತ್ತಾನೆ.

ಶಾಂತಿನಿಕೇತನದಲ್ಲಿ ಈ ಹಬ್ಬವನ್ನು ಸಂಗೀತದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಇಡೀ ಬಂಗಾಳದಲ್ಲಿ ಮಾಲ್ಪೋವಾ, ಕ್ಷೀರ್ ಸಂದೇಶ್, ಬಸಂತಿ ಸಂದೇಶ್ ಮತ್ತು ಪಾಯಸಗಳನ್ನು ತಯಾರಿಸಿ ತಿನ್ನುತ್ತಾರೆ.

ಓಡಿಶಾದಲ್ಲಿ :
--------------

ಬಹುತೇಕ ಉತ್ತರಭಾರದೆಡೆಯಲ್ಲೆಲ್ಲಾ ನಡೆದಂತೇ ಇಲ್ಲೂ ಹಬ್ಬ ಆಚರಿಸಲ್ಪಡುತ್ತದೆ. ಒಂದೇ ಬದಲಾವಣೆ ಎಂದರೆ ಇಲ್ಲಿ ಕೃಷ್ಣನ ಚಿತ್ರಪಟಗಳ ಬದಲಿಗೆ ಪೂರಿ ಜಗನ್ನಾಥನ ಚಿತ್ರಪಟಗಳನ್ನು ಬಳಸಲಾಗುತ್ತದೆ.

ಗೋವಾದಲ್ಲಿ :
-----------------

ಗೋವಾವಾಸೀ ಕೊಂಕಣಿಗರಿಗೆ ವಿಶಿಷ್ಟ ಹಬ್ಬವಿದು. ಇದನ್ನವರು ಸಿಗ್ಮೋ ಅಥವಾ ಶಿಶಿರೋತ್ಸವ್ ಎನ್ನುತ್ತಾರೆ. ಸುಮಾರು ತಿಂಗಳವರೆಗೂ ಈ ಹಬ್ಬದ ಅಚರಣೆಯ ಸಂಭ್ರಮ ಅಲ್ಲಲ್ಲಿ ಕಾಣುತ್ತದೆ. ಹೋಳಿಯದಿನ ಮಾತ್ರ ಹೋಲಿಕಾ ಪೂಜೆ, ದಹನ, ಧೂಳ್ವಾಡ್, ಧೂಳೀ ವಂದನ್, ಹಳ್ದೂಣೆ ಅಥವಾ ಹಳದೀ ಮತ್ತು ಕೇಸರೀ ಬಣ್ಣಗಳನ್ನು ಗುಲಾಲು ಬಣ್ಣವಾಗಿ ದೇವರಿಗೆ ಅರ್ಪಿಸುವ ಆಚರಣೆಗಳು ನಡೆಸಲ್ಪಡುತ್ತವೆ.


ಗುಜರಾತ್ ನಲ್ಲಿ :
----------------
--



ಮುಖ್ಯಬೀದಿಗಳ ಚೌಕಗಳಲ್ಲಿ ಹೋಲಿಕಾದಹನ ನಡೆಯುತ್ತದೆ. ರಾಬೀ ಬೆಳೆಯ ಕಾಲವಾದ್ದರಿಂದ ರೈತರಿಗೆ ಸುಗ್ಗಿಯ ಕಾಲ ಇದಾಗಿದೆ. ಉಡುಪಿಯ ಇಟ್ಲಪಿಂಡಿ ಉತ್ಸವದಂತೇ ಅಲ್ಲಲ್ಲಿ ಮಡಕೆಗಳಲ್ಲಿ ಮೊಸರನ್ನು ತುಂಬಿ ಎತ್ತರದಲ್ಲಿ ನೇತಾಡಿಸಿರುತ್ತಾರೆ. ಹರೆಯದ ಹುಡುಗರು ಒಬ್ಬರಮೇಲೋಬ್ಬರು ಹತ್ತಿಕೊಂಡು ಅದನ್ನು ಒಡೆಯುವ ಸಾಹಸ ಕ್ರೀಡೆ ನಡೆಯುತ್ತದೆ. ಹುಡುಗರು ಈ ಪ್ರಯತ್ನದಲ್ಲಿರುವಾಗ ಹುಡುಗಿಯರು ದೂರದಿಂದ ಪಿಚಕಾರಿಗಳ ಮೂಲಕ ಅವರಮೇಲೆ ಬಣ್ಣದ ನೀರನ್ನು ಎರಚುತ್ತಿರುತ್ತಾರೆ. ಮಡಕೆ ಒಡೆದ ಹುಡುಗನನ್ನು ’ಹೋಲಿ ಕಿಂಗ್’ ಎಂದು ಗೌರವಿಸಲಾಗುತ್ತದೆ. ನಂತರ ಸಾವಿರಾರು ಜನರು ಮೆರವಣಿಗೆಗಳಲ್ಲಿ ತೆರಳಿ ಕೃಷ್ಣ ತಮ್ಮ ಮನೆಗಳಿಗೆ ಬೆಣ್ಣೆ ಕದಿಯಲು ಬಂದಿರಬಹುದೆಂದು ಭಾವಿಸುತ್ತಾರೆ!

ಕೆಲವು ಪ್ರದೇಶಗಳಲ್ಲಿ ಮೈದುನರು ಅತ್ತಿಗೆಯರಿಗೆ ಬಣ್ಣ ಎರಚುತ್ತಿದ್ದರೆ ಅತ್ತಿಗೆಯಂದಿರು ಸುತ್ತಿದ ಸೀರೆಯ ಹಗ್ಗದಿಂದ ತಮ್ಮ ಮೈದುನರಿಗೆ ಠಳಾಯಿಸುತ್ತಾರೆ.

ಮಹಾರಾಷ್ಟ್ರದಲ್ಲಿ :
-------------------

ಮಹಾರಾಷ್ಟ್ರದಲ್ಲಿಯೂ ಹೋಲಿಕಾ ಕಾಮದಹನ ನಡೆಯುತ್ತದೆ. ಇದನ್ನು ’ಶಿಗ್ಮಾ’ ಎನ್ನುತ್ತಾರೆ. ಹೋಳೀ ಹಬ್ಬಕ್ಕೂ ವಾರಕಾಲ ಮುಂಚೆಯೇ ಹರೆಯದ ಹುಡುಗರು ಮನೆಮನೆಗೂ ತೆರಳಿ ಹಣ, ಸೌದೆ ಸಂಗ್ರಹಿಸುತ್ತಾರೆ. ಹಬ್ಬದ ದನ ಗೊತ್ತಾದ ಜಾಗದಲ್ಲಿ ದೊಡ್ಡದಾಗಿ ರಾಶಿಹಾಕಿದ ಕಟ್ಟಿಗೆತುಂಡುಗಳಿಗೆ ಬೆಂಕಿ ಹಚ್ಚುತ್ತಾರೆ. ಅಗ್ನಿಗೆ ನೈವೇದ್ಯ ಅರ್ಪಿಸುವುದು ಇಲ್ಲಿನವರ ವಾಡಿಕೆ. ಬಹುತೇಕ ಎಲ್ಲಾ ಮನೆಗಳಲ್ಲೂ ’ಪೂರಣ್ ಪೊಳಿ’ [ಹೂರಣದ ಹೋಳಿಗೆ] ಮಾಡುತ್ತಾರೆ. ಮಕ್ಕಳು " ಹೋಳೀರೇ ಹೋಳಿ ಪೂರಣಾಚಿ ಪೊಳಿ" ಎಂದು ಕೂಗಿ ಹರ್ಷಿಸುತ್ತಾರೆ. ಆದರೆ ಇಲ್ಲಿ ಬಣ್ಣಗಳ ಎರಚಾಟ ನಡೆಯುವುದು ರಂಗಪಂಚಮಿಯ ದಿನ ಎಂದರೆ ಹೋಳಿಯ ದಿನದಿಂದ ಐದನೇ ದಿನ.

ಮಣಿಪುರದಲ್ಲಿ :
-----------------

ಮಣಿಪುರದಲ್ಲಿ ಹೋಳಿ ಆರು ದಿನಗಳ ಹಬ್ಬ. ಈ ಹಬ್ಬ ಅಲ್ಲಿನ ಯೋಸಾಂಗ್ ಎಂಬ ಹಬ್ಬದ ಜೊತೆಗೆ ಸಮ್ಮಿಶ್ರವಾಗಿ ಆಚರಿಸಲ್ಪಡುತ್ತದೆ. ಬೇಡದ ವಸ್ತುಗಳನ್ನು ಪೇರಿಸಿ ಮಾಡಿದ ಗುಡಿಸಲಿಗೆ ಬೆಂಕಿ ಹಚ್ಚುವ ಮೂಲಕ ಹಬ್ಬದ ಆರಂಭವಾಗುತ್ತದೆ. ಹುಡುಗರು ಮನೆಮನೆಗೆ ತೆರಳಿ ’ನಾಕಾಥೆಂಗ್’ ಎಂದು ಕರೆಯಲ್ಪಡುವ ಹಣ ಮತ್ತು ಕಾಣಿಕೆಗಳನ್ನು ಸಂಗ್ರಹಿಸುತ್ತಾರೆ. ’ಲಾಮ್ಟಾ’[ಫಾಲ್ಗುಣ]ದ ಹೋಳಿಯ ರಾತ್ರಿ ’ತಾಬಾಲ್ ಚೋಂಗ್ಬಾ’ ನರ್ತನ ನಡೆಸಲ್ಪಡುತ್ತದೆ. ಲಯಬದ್ಧ ಡ್ರಮ್ ಗಳ ಸದ್ದಿನೊಂದಿಗೆ ಮನಮೋಹಕ ನರ್ತನ ಮುದನೀಡುತ್ತದೆ. ಕೃಷ್ಣನ ದೇವಾಲಯಗಳಲ್ಲಿ ಪೂಜೆ ನಡೆಯುತ್ತದೆ. ಜನ ಭಜನೆಗಳನ್ನೂ ಹಾಡುತ್ತಾರೆ. ಬಿಳೀ ದಿರಿಸುಗಳಲ್ಲಿ ಸಾವಿರಾರು ಜನ ಒಟ್ಟೊಟ್ಟಿಗೆ ಕೃಷ್ಣಮಂದಿರಗಳಿಂದ ಮೆರವಣಿಗೆ ಹೊರಡುತ್ತಾರೆ. ಮೊದಲು ಇಂಪಾಲದಲ್ಲಿ ಮಾತ್ರ ಇದು ನಡೆಯುತ್ತಿದ್ದು ಈಗೀಗ ಮಣಿಪುರದ ಎಲ್ಲೆಡೆಯಲ್ಲೂ ನಡೆಯುತ್ತದೆ.

ನಮ್ಮ ಕರ್ನಾಟಕದಲ್ಲಿ :
-----------------------

ನಮ್ಮ ಮೈಸೂರಿನದೇ ಚಿತ್ರ

ಹೊಸದಾಗಿ ಹೇಳಬೇಕಾಗಿಲ್ಲ. ಹೋಲಿಕಾ-ಕಾಮದಹನದ ಆಚರಣೆ ನಡೆಯುತ್ತದೆ. ಕನ್ನಡ ರೈತರಿಗೆ ಸುಗ್ಗಿಯಕಾಲ. ಹಲವು ಫಸಲುಗಳು ಕೈಗೆ ಬರುವ ಈ ಸಮಯದಲ್ಲಿ ರಾಜ್ಯದ ಕರಾವಳಿ ಭಾಗಗಳಲ್ಲಿ ಸುಗ್ಗಿ ಕುಣಿತವನ್ನು ಕಾಣಬಹುದಾಗಿದೆ. ಹಾಲಕ್ಕೀ ಜನಾಂಗದ ಸುಗ್ಗಿ ಕುಣಿತ ನೋಡಲು ಸುಂದರವಾಗಿರುತ್ತದೆ. ವಾರಕ್ಕೂ ಹೆಚ್ಚುದಿನ ಸುಗ್ಗಿಕಟ್ಟಿದ ಜನ ಅವರವರ ಮನೆಗಳಿಗೆ ತೆರಳದೇ ಪ್ರತ್ಯೇಕವಾಗಿ ಒಂದು ಜಾಗದಲ್ಲಿ ಉಳಿದುಕೊಳ್ಳುತ್ತಾರೆ. ಸುಗ್ಗೀ ತುರಾಯಿ ಬಿಚ್ಚುವ ಹೋಳೀ ಹಬ್ಬದ ರಾತ್ರಿ ಕಾಮನ ಪೂಜೆ ಮತ್ತು ದಹನ ನಡೆಯುತ್ತದೆ. ಮಾರನೇ ದಿನ ಬೆಳಿಗ್ಗೆ ಗುಮ್ಟೆಪಾಂಗ ಮೃದಂಗ ತಾಳ ಹಿಡಿದ ಆ ಜನ ಮನೆಮನೆಗೆ ತೆರಳಿ "ದುಮ್ಸಾಲ್ಯೋ" ಎಂದು ರಾಗವಾಗಿ ಹಾಡುತ್ತಾ ಹಣ, ತೆಂಗಿನಕಾಯಿ, ಭತ್ತ ಇತ್ಯಾದಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಆ ದಿನ ’ಸುಗ್ಗಿಮನೆ’ಯಲ್ಲಿ ಭೂರಿಭೋಜನ ಮುಗಿಸಿದ ಅವರು ತಮ್ಮ ತಮ್ಮ ಮನೆಗೆ ತೆರಳುತ್ತಾರೆ. ಇನ್ನು ಮುಂದಿನವರ್ಷವೇ ಅವರು ಸುಗ್ಗಿ ಕಟ್ಟುವುದು!

ಕರ್ನಾಟಕದಲ್ಲಿ ಬಣ್ಣಗಳ ಎರಚಾಟ ಜಾಸ್ತಿ ಇಲ್ಲ. ಈಗೀಗ ಉತ್ತರಭಾರತದವರ ವಾಸ್ತವ್ಯಗಳೂ ಕೆಲವು ಅಲ್ಲಲ್ಲಿ ಇರುವುದರಿಂದ ಬಣ್ಣಗಳ ಬಳಕೆ ನಡೆಯುತ್ತಿದೆ.

ಆಂಧ್ರಪ್ರದೇಶದಲ್ಲಿ :
----------------------

ಬಹುತೇಕ ಕರ್ನಾಟಕದಂತೆಯೇ. ಕಾಮದಹನ ನಡೆಯುತ್ತದೆ. ತೆಲಂಗಾಣ ಪ್ರದೇಶಗಳಲ್ಲಿ ಬಸಂತ ಪಂಚಮಿ ಆಚರಿಸಲ್ಪಡುತ್ತದೆ. ಹೈದ್ರಾಬಾದ್ ಮುಂತಾಡೆಡೆಗೆ ಬಣ್ಣಗಳ ಎರಚಾಟ ನಡೆಯುತ್ತದೆ.


ಕೇರಳದಲ್ಲಿ:
----------------

’ಗಾಡ್ಸ್ ಓನ್ ಕಂಟ್ರಿ’ ಎಂದು ಕರೆಸಿಕೊಂಡ ಕೇರಳದಲ್ಲಿ ಸುಮಾರು ೨೨ ವಿವಿಧ ಜನಾಂಗಗಳು ಸಾಮರಸ್ಯದಲ್ಲಿ ಬದುಕುತ್ತಿವೆ. ಪಶ್ಚಿಮ ಕೋಚಿಯ ಚೆರ್ಲೈ ಎಂಬಲ್ಲಿ ಈ ಹಬ್ಬ ಗೌಡ ಸಾರಸ್ವತ ಬ್ರಾಹ್ಮಣರಿಂದ ನಡೆಸಲ್ಪಡುತ್ತದೆ. ಇಲ್ಲಿನ ಕೊಂಕಣಿಯಲ್ಲಿ ಉಕ್ಕುಳಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ಮಲಬಾರದವರು ಮಂಜಾಳ್ ಕುಳಿ ಎನ್ನುತ್ತಾರೆ. ಗೊಸ್ರೀಪುರಂದಲ್ಲಿರುವ ತಿರುಮಲ ದೇವಸ್ಥಾನದಲ್ಲಿ ಈ ಹಬ್ಬ ಆಚರಿಸಲ್ಪಡುತ್ತದೆ.

ಜಮ್ಮು-ಕಾಶ್ಮೀರದಲ್ಲಿ:
--------------------

ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿರುವಂತೇಯೇ ನಡೆಯುತ್ತದೆ.


ಮಧ್ಯಪ್ರದೇಶದಲ್ಲಿ:
--------------------

ಉತ್ತರಭಾರತದ ಅಚರಣೆಗಳನ್ನು ಹೋಲುವ ರೀತಿಯಲ್ಲೇ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ.


ಪಂಜಾಬ್ ನಲ್ಲಿ :
------------------

ಸಿಖ್ಖರು ಹೋಲ್ ಎಂಬ ಹಬ್ಬವನ್ನು ಮಾರ್ಚ್ ಆರಂಭದಿಂದಲೇ ಆಚರಿಸಲು ಆರಂಭಿಸುತ್ತಾರೆ. ಕತ್ತಿವರಸೆ, ಕುದುರೆ ಸವಾರಿ ಇನ್ನೂ ಮೊದಲಾದ ಕುಶಲಕಲೆಗಳಲ್ಲಿ ಪಳಗಿರುವ ಸಿಖ್ಖರು ಅವುಗಳನ್ನು ದೊಡ್ಡಮಟ್ಟದಲ್ಲಿ ವ್ಯಕ್ತಪಡಿಸುತ್ತಾರೆ. ಹೆಚ್ಚಿನದಾಗಿ ಗುರುದ್ವಾರಗಳಲ್ಲಿ ಈ ಚಟುವಟಿಕೆಗಳು ಕಂಡುಬರುತ್ತವೆ.

ಸಣ್ಣದೊಂದು ಸಲಹೆ :
-------------------------------

ಇತ್ತೀಚೆಗೆ ರಾಸಾಯನಿಕ ಜನ್ಯ ಬಣ್ಣಗಳನ್ನು ತಯಾರಿಸಿ ಮಾರುತ್ತಾರೆ. ಅವುಗಳ ಬಳಕೆಯಿಂದ ಹಲವುವಿಧದ ಚರ್ಮರೋಗಗಳು ಬರುತ್ತವೆ. ಹಬ್ಬವನ್ನು ಸಂಭ್ರಮಿಸುವ ಹಂಬಲದಲ್ಲಿ, ಕಣ್ಣುಕುಕ್ಕುವ ಕಡು ರಾಸಾಯನಿಕ ಬಣ್ಣಗಳ ಆಕರ್ಷಣೆಯಲ್ಲಿ ಅವುಗಳನ್ನು ಬಳಸಿದರೆ ಹೋಳಿಯ ಪರಿಣಾಮ ಆಚರಿಸುವವರನ್ನೇ ದಹಿಸಲೂ ಬಹುದು. ಆದಷ್ಟೂ ನೈಸರ್ಗಿಕ ಬಣ್ಣಗಳನ್ನು ಹುಡುಕಿ ಬಳಸುವುದು ಒಳಿತು.


ಫಲಶ್ರುತಿ :
------------

ದೇಶದ ಜನತೆ ಸಹಜವಾಗಿ ಖುಷಿಪಡುವುದು ಬೆನ್ನೆಲುಬಾದ ಅನ್ನದಾತ ರೈತ ಸುಖಿಸಿದಾಗ ಮಾತ್ರ. ’ಬೇಸಿಗೆಯ ಬೆಳೆ’ ಎಂಬ ವಿವಿಧ ಫಸಲುಗಳು ಈ ಸಮಯ ರೈತನ ಕೈಸೇರುವುದು ನಿಸರ್ಗ ನಿಯಮ. ದೈನಂದಿನ ತನ್ನ ಕಷ್ಟಕೋಟಲೆಗಳನ್ನು ಮರೆತ ರೈತ ಹೋಳಿ ಆಚರಿಸಿ ಸಂಭ್ರಮಿಸುತ್ತಾನೆ, ರಂಜನೆಗೊಳಗಾಗಿ ಮಾನಸಿಕ ನೆಮ್ಮದಿಪಡೆಯುತ್ತಾನೆ. ಚಳಿಗಾಲದ ಚುಮುಚುಮು ಚಳಿಯ ಹಿತಕರ ಅನುಭವವನ್ನು ಮರೆತು ಬಿರುಬೇಸಿಗೆಯ ಬಿಸಿಲ ಝಳವನ್ನೂ ಸೆಕೆಯನ್ನೂ ಸಹಿಸಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸುವ ಈ ವಾತಾವರಣ, ನಿಸರ್ಗವೇ ಜಲಧಾರೆಯಂತೇ ಒರಟಾಗದೇ, ತೈಲಧಾರೆಯಂತೇ ಪಸೆಯುಳ್ಳದ್ದಾಗಿ ನುಣುಪಾಗಿ ಕರೆದೊಯ್ಯುವ ಉಪಾಯ ಈ ಟ್ರಾನ್ಸಿಷನ್ ಪೀರಿಯಡ್! [ನೀರಿನಧಾರೆ ಹರಿದು ಮುಗಿದಾನಂತರ ಆರಿದ ಜಾಗದಲ್ಲಿ ತೇವ ಇರುವುದಿಲ್ಲ, ತೈಲಧಾರೆ ಹರಿಸಿದ ಜಾಗದಲ್ಲಿ ಎಣ್ಣೆಯ ನಯವಾದ ಪಸೆ ಇದ್ದೇಇರುವುದಲ್ಲಾ ?] ಇದು ಈ ಹಬ್ಬದ ವೈಜ್ಞಾನಿಕ ಮಹತ್ವವಾಗಿದೆ.

ಹೋಳೀ ಹಬ್ಬದ ಬಗ್ಗೆ ಕಥೆಗಳನ್ನೂ ವಿವಿಧ ಪ್ರಾಂತಗಳಲ್ಲಿನ ಪ್ರಾದೇಶಿಕ ಆಚರಣೆಗಳನ್ನೂ ತಿಳಿದುಕೊಂಡ ನಿಮಗೆ ಹಬ್ಬದ ಸಡಗರವನ್ನು ಹಂಚುವ ಸಲುವಾಗಿ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯ ಅತ್ಯುತ್ತಮ ಕೃಷ್ಣ ಭಜನೆಯೊಂದನ್ನು ತೋರಿಸುತ್ತಾ ಹೋಳಿಯ ಶುಭ ಅವಸರದಲ್ಲಿ ಹಾರ್ದಿಕ ಶುಭಕಾಮನೆಗಳನ್ನು ಸಲ್ಲಿಸುತ್ತಿದ್ದೇನೆ, ನಮಸ್ಕಾರ.




Saturday, March 3, 2012

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ !

ಚಿತ್ರಕೃಪೆ: ಅಂತರ್ಜಾಲ

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ!

ಚಿಕ್ಕದೊಂದು ವಿಷಯವನ್ನು ದೊಡ್ಡದಾಗಿ ಹೇಳಿ ಸಂಭ್ರಮಿಸುವ ಪರಿಪಾಟ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಅದು ತಪ್ಪು ಎನ್ನುವುದಿಲ್ಲ. ಆದರೆ ಚಿಕ್ಕದನ್ನೇ ದೊಡ್ಡದನ್ನಾಗಿ ಮಾಡುವ/ಬೆಳೆಸುವ ಸ್ವಭಾವ ಕೆಲವೊಮ್ಮೆ ಹೋದಲ್ಲೆಲ್ಲಾ ಅದನ್ನೇ ಮಾಡುವುದು ಅರಿವಿಗಿಲ್ಲದೇ ನಡೆದುಬಿಡುತ್ತದೆ. ಕೆಲವೊಮ್ಮೆ ಚಿಕ್ಕದನ್ನು ದೊಡ್ಡದನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಬಂದುಬಿಡುತ್ತದೆ! ಅದಕ್ಕೊಂದು ಚಿಕ್ಕ ಉದಾಹರಣೆ: ನಮ್ಮೂರಕಡೆ ಹಳ್ಳಿಯ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಒಬ್ಬ ಅನಿರೀಕ್ಷಿತವಾಗಿ ಸೈಕಲ್ ಏರಿ ಹೊರಟ. ಅವನು ತುರ್ತಾಗಿ ತಾಲೂಕಾ ಪ್ರದೇಶವನ್ನು ತಲ್ಪಲೇಬೇಕಾದ ಅನಿವಾರ್ಯತೆ ಇತ್ತಂತೆ. ಹೋಗುತ್ತಾ ಹೋಗುತ್ತಾ ತಾಲೂಕು ಕೇಂದ್ರ ತಲುಪುವಾಗ ಪಟ್ಟಣದ ವ್ಯಾಪ್ತಿ ಬರುತ್ತದಲ್ಲಾ....ಅಲ್ಲಿ ಪೋಲೀಸನೊಬ್ಬ ಕೈ ಅಡ್ಡಹಾಕಿ ನಿಲ್ಲಿಸಿದ್ದಾನೆ.


" ಹೇಯ್ ನಿಲ್ಲು "

ಸೈಕಲ್‍ನಲ್ಲಿದ್ದವನಿಗೆ ಉಚ್ಚೆ ಬರುವುದೊಂದು ಬಾಕಿ! ಯಾಕೆಂದರೆ ಹಳ್ಳೀಜನ ಪೋಲೀಸರಿಗೆ ಅಷ್ಟು ಹೆದರುತ್ತಿದ್ದರು ಆಗ.

" ಮಹಾಸ್ವಾಮೀ ನಿಂತೆ, ಯಾಕೆ ಎಂದು ಕೇಳಬಹುದಾ ? "


" ಎಲ್ಲಯ್ಯ ನಿನ್ನ ಸೈಕಲ್ ಡೈನೆಮೋ ? "

[ಆಗೆಲ್ಲಾ ರಾತ್ರಿ ಓಡಿಸೋ ಸೈಕಲ್ಲಿಗೆ ಡೈನೆಮೋ ಎಂಬ ಚಿಕ್ಕ ಹೆಡ್ ಲೈಟು ಇರಬೇಕಾದುದು ಕಡ್ಡಾಯವಾಗಿತ್ತು]


" ಮಹಾಸ್ವಾಮೀ ಡೈನೆಮೋ ಇಲ್ಲ, ಮನೇಲಿ ಯಾರಿಗೋ ಹುಷಾರಿಲ್ಲ, ಅದಕ್ಕೇ ವೈದ್ಯರನ್ನು ಕಾಣಲು ಬಂದೆ "


" ಎಲಾ ಇವನ ನನ್ನ ಹತ್ರ ಸುಳ್ ಹೇಳ್ತೀಯಾ ? ಬಿಡುವುದಿಲ್ಲ ಇಲ್ಲೇ ಇರು "

ಪರಿಪರಿಯಾಗಿ ಸೈಕಲ್ಲಿನಾತ ಬೇಡಿಕೊಂಡಮೇಲೆ ...


" ಆಯ್ತು ನಿನ್ನ ಹೆಸರು ಹೇಳು ಬರೆದುಕೊಳ್ತೇನೆ "


" ಭಯಕೃದ್ಭಯನಾಶನಾಚಾರ್ " --ಉತ್ತರ ಬಂತು !

ಪೋಲೀಸ ಇನ್ನೊಮ್ಮೆ ಕೇಳಿದ, ಮತ್ತೊಮ್ಮೆ ಕೇಳಿದ. ಸರಿಯಾಗಿ ಬರೆದುಕೊಳ್ಳಲು ಆಗಲೇ ಇಲ್ವಂತೆ!

" ಹೂಂ ..ಹೋಗ್ ಹೋಗು ಇನ್ಮೇಲೆ ಡೈನೆಮೋ ಇಲ್ದೇ ಓಡಿಸ್ಬೇಡ "

ಎಂದನಂತೆ!

ಸೈಕಲ್ ಸುದ್ದಿ ಬಂದಾಗಲೆಲ್ಲಾ ಈ ಕಥೆ ನೆನಪಾಗುತ್ತದೆ; ಗೆಳೆಯರ ಗುಂಪಿನಲ್ಲಿ ತಮಾಷೆಯಾಗಿ ಬೆಳೆಯುತ್ತದೆ, ದೊಡ್ಡದಾಗುತ್ತದೆ!

ಆದರೆ ಹಿಂದೊಮ್ಮೆ ಚಿಕ್ಕದಾದ, ಪೋಲೀಸರು ಮತ್ತು ವಕೀಲರ ನಡುವಿನ ತೊಡಕೊಂದನ್ನು ಮಾಧ್ಯಮದವರು ದೊಡ್ಡದಾಗಿ ತೋರಿಸಿದ್ದೇ ನಿನ್ನೆಯ ಅನಾಹುತಕ್ಕೆ ಕಾರಣವಾಯ್ತು ಎಂಬುದು ನನ್ನ ಅನಿಸಿಕೆಯಾಗಿದೆ. ಸಮಾಜಕ್ಕೆ ಎಲ್ಲರೂ ಬೇಕು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಮಾಧ್ಯಮ ಚತುರ್ಥ ಅಂಗವಾಗಿ ಬರುತ್ತದೆ ಎಂದರೆ ತಪ್ಪಲ್ಲ. ಕೆಲವೊಮ್ಮೆ ಸರಕಾರೀ ವಿಭಾಗಗಳಲ್ಲೇ ಕೆಲವು ತಂಟೆ-ತಕರಾರು ಉದ್ಭವವಾಗುವುದು ಸಹಜ. ಅದಕ್ಕೂ ನ್ಯಾಯಾಲಯ ಪರಿಶೀಲಿಸಿ ಪರಿಹಾರ ಸೂಚಿಸುತ್ತದೆ. ವಕೀಲರ ಮತ್ತು ಪೋಲೀಸರ ನಡುವೆ ನಡೆದ ಚಿಕ್ಕ ಬಡಿದಾಟವನ್ನು ತಿಂಗಳುಗಳ ಹಿಂದೆ ಮಾಧ್ಯಮದವರು ಬಿತ್ತರಿಸಿದ್ದೇ ನಿನ್ನೆಯ ಘಟನೆಗೆ ಮೂಲ ಕಾರಣವಿರಬಹುದೇ ಎಂಬುದು ಹಲವರಿಗೆ ಬಂದ ಸಂಶಯ.

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮಾಧ್ಯಮದವರ ವೃತ್ತಿ ಗುಣಧರ್ಮ ಅವತ್ತು ವಕೀಲರುಗಳ-ಆರಕ್ಷಕರ ನಡುವಿನ ಕಥೆಯನ್ನೂ ತೋರಿಸಿತ್ತು! ಆ ಈರ್ಷ್ಯೆಯೇ ವಕೀಲರುಗಳಿಗೆ ಕೋಪಬರಿಸಿತ್ತು ಎನಿಸುತ್ತದೆ. ಏನಿದ್ದರೂ ನ್ಯಾಯಾಂಗದಲ್ಲಿ ಕೆಲಸಮಾಡುವ ವಕೀಲರುಗಳು ಹೊಡೆದಾಟಕ್ಕೆ ಇಳಿದಿದ್ದು ಖಂಡನಾರ್ಹವೇ ಸರಿ. ಅದು ಎಲ್ಲರಿಗೂ ಬೇಸರ ತರಿಸಿದೆ. ಹೀಗಾಗಿ ಚಿಕ್ಕದನ್ನು ದೊಡ್ಡದುಮಾಡಿ ಸಂಭ್ರಮಿಸುವ ಮೊದಲು ಯೋಚಿಸಲೇ ಬೇಕು ಎಂಬುದು ಪಥ್ಯ.

ಇತ್ತೀಚೆಗೆ ಮಾಧ್ಯಮದವರ ಮೇಲೂ ಸಾಕಷ್ಟು ಆಪಾದನೆಗಳಿವೆ. ಮಾಧ್ಯಮದ ಕೆಲವರು [ಎಲ್ಲವರೂ ಅಲ್ಲ ಎಂಬುದನ್ನು ಈಗಲೇ ಸ್ಪಷ್ಟಪಡಿಸುತ್ತೇನೆ] ದಬ್ಬಾಳಿಕೆ ಮಾಡುತ್ತಾರಂತೆ. " ಏನ್ರೀ ನಾವು ಮಾಧ್ಯಮದವ್ರು " ಎಂದು ಎಲ್ಲದಕ್ಕೂ ಬೆದರಿಕೆ ಹಾಕುತ್ತಾರಂತೆ! ಇದಕ್ಕೆ ಪೂರಕವಾಗಿ ನಾನು ಕೇಳಿದ ಘಟನೆಯೊಂದು ಹೀಗಿದೆ : ಒಂದುಕಡೆ ಪ್ರಾಚೀನ ದೇವಳವೊಂದಿದೆ. ಅಲ್ಲಿ ಯಾತ್ರಿಕರು ಜಾಸ್ತಿ ಬರುತ್ತಿದ್ದಾರೆ. ಯಾರ್ಯಾರೋ ನಿಸರ್ಗ, ಪ್ರವಾಸ ಎಂದೆಲ್ಲಾ ಹೇಳಿಕೊಂಡು ತಿನ್ನುವುದಕ್ಕೆ, ಕುಡಿಯುವುದಕ್ಕೆ ಒಂದಷ್ಟು ಕಟ್ಟಿಸಿಕೊಂಡು ಬರುತ್ತಾರೆ. ಹಾಗೆ ಬರುವ ನಾಕುಚಕ್ರದ ಗಾಡಿಗಳನ್ನು ಗೇಟಿನಲ್ಲಿ ಪಾಸ್ ಮೂಲಕ ಒಳಗೆ ನಿಲ್ಲಿಸಲು ಬಿಡಲಾಗುತ್ತದೆ. ಯಾಕೆಂದರೆ ಯಾರು ಯಾರು? ಯಾರು ಭಯೋತ್ಫಾದಕರು-ಯಾರು ಅಲ್ಲಾ ? ಎಂದೆಲ್ಲಾ ಗೊತ್ತಾಗುವುದಿಲ್ಲವಲ್ಲಾ! ಹೀಗಾಗಿ ವಾಹನದಲ್ಲಿ ಬಂದವರು ಒಬ್ಬರು ಕೆಳಗಿಳಿದು ಅಲ್ಲಿನ ಕಚೇರಿಗೆ ಹೋಗಿ ಹೆಸರು, ವಿಳಾಸ, ಗಾಡಿಯ ಮಾಹಿತಿ ನೀಡಿ ಪಾಸು ಪಡೆದು ಬರಬೇಕು. ಆಮೇಲೆ ಗೇಟ್ ಕೀಪರ್ ಗಾಡಿಯನ್ನು ಒಳಗೆ ಬಿಡುತ್ತಾನೆ.

ಒಂದುದಿನ ಅನಿರೀಕ್ಷಿತವಾಗಿ ಒಂದು ನಾಕುಚಕ್ರದ ವಾಹನ ಬಂದಿದೆ. ಅದರಲ್ಲಿ ಒಬ್ಬಳು ಹೆಂಗಸು ಇದ್ದಳಂತೆ. ಕೂತಲ್ಲಿಂದಲೇ ಅದೇನೋ ಮಾತು ನಡೆಯಿತು ಗೇಟ್ ಕೀಪರ್ ಜೊತೆಗೆ. ಮಾತು ವಾದಕ್ಕಿಳಿಯಿತು. ಆತ ಪಾಸು ಇಲ್ಲದೇ ಬಿಡುವುದಿಲ್ಲ ಎಂದು...ಈಕೆ "ನಾವು ಮಾಧ್ಯಮದವರು" ಎಂದು! ಮಾಧ್ಯಮದ ಮಹಿಳೆಯ ಧಮಕಿ ಎಲ್ಲೀವರೆಗೆ ಬಂತೆಂದರೆ ಪಾಪದ ಗೇಟ್ ಕೀಪರನನ್ನು ಕಾಲರ್ ಹಿಡಿದು ಕೆನ್ನೆಗೆ ಒಂದು ಹೊಡೆದಳಂತೆ. ಆಮೇಲೆ ಗಾಡಿಯಲ್ಲಿ ಅವಳ ಜೊತೆ ಬಂದಿರುವವರೆಲ್ಲಾ ಸೇರಿಕೊಂಡು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರಂತೆ. ಆಮೇಲೆ ಕಚೇರಿಗೆ ನುಗ್ಗಿ ಅಲ್ಲಿನ ಆಡಳಿತ ಕಚೇರಿಯಲ್ಲಿರುವ ಗುಮಾಸ್ತರನ್ನೂ ಬಿಡದೇ ಅವರ ಕಾಲರ್ ಕೂಡ ಹಿಡಿದು ದಬಾಯಿಸಿದರಂತೆ! ಆಯ್ತು ಆ ಪಾಪದ ಜನ ಸುಮ್ಮನಿದ್ದರು. ಗುಮಾಸ್ತರು ಅಲ್ಲಿನ ಆಡಳ್ತೆಯ ಹಿರಿಯರಿಗೆ ಸುದ್ದಿ ತಲ್ಪಿಸಲೋ ಬೇಡವೋ ಎಂದುಕೊಂಡು ಅಳುಮುಖದಲ್ಲಿ ಕೆಲಸ ಮುಂದುವರಿಸಿದ್ದರಂತೆ.

ಮಾಧ್ಯಮದವರು ಎನಿಸಿಕೊಂಡವರು ಒಳಗೆ ಹೋದರು. ತಮಗೆ ಬೇಕಾದ ಕೆಲಸ ಮುಗಿಸಿಕೊಂಡು ಹೊರಗೆ ಬಂದರು. ಮರಳಿ ಗಾಡಿ ತೆಗೆಯಲು ಹೊರಟಾಗ ಆ ಸುತ್ತಮುತ್ತಲಿನ ಅಲ್ಲಿನ ಸ್ಥಾನಿಕ ನಿವಾಸಿಗಳು ೨೫೦-೩೦೦ ಮಂದಿ ಜಮಾಯಿಸಿದ್ದರಂತೆ. ಎಲ್ಲರೂ ಸೇರಿ ಮಾಧ್ಯಮದವರು ಎಂದು ಹೇಳಿಕೊಂಡವರಿಗೆ ಎರಡೆರಡು ಬಿಟ್ಟು ಇನ್ನು ಆ ಕಡೆ ಮುಖಹಾಕದಹಾಗೇ ಮಾಡಿದ ಘಟನೆ ನಡೆದಿದೆ. ಇದನ್ನು ಆ ಮಾಧ್ಯಮದವರೂ ಸೇರಿದಂತೇ ಯಾರೂ ಸುದ್ದಿಮಾಡಲಿಲ್ಲ ಯಾಕೆಂದರೆ ಮಾಧ್ಯಮದವರೂ ತಪ್ಪು ಮಾಡುವ ಸಾಧ್ಯತೆ ಇರುತ್ತದೆ ಎಂಬುದು ಸಾಬೀತಾಗಿ ಜನ ಹಾಗೇ ಭಾವಿಸಬಹುದು ಎಂದು! ಹೀಗಾಗಿ ಮಾಧ್ಯಮದವರು ಸಿಕ್ಕಾಪಟ್ಟೆ ಸಂಭಾವಿತರು ಎಂಬುದು ತಳ್ಳಿಹಾಕಿದ ಮಾತು!

ಮಾಧ್ಯಮದಲ್ಲಿರುವ ವರದಿಗಾರರಿಗೆ ಕೆಲವೊಮ್ಮೆ ತಾವೇನು ಮಾಡುತ್ತಿದ್ದೇವೆ, ಯಾರ ಹತ್ತಿರ ಏನು ಮಾತಾಡುತ್ತಿದ್ದೇವೆ ಎಂಬ ಕನಿಷ್ಠ ಪರಿವೆಯೂ ಇರುವುದಿಲ್ಲ ಎಂಬುದಕ್ಕೆ ಒಂದು ಉದಾಹರಣೆ : ಕಳೆದಸಾಲಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧಕ್ಷರಾಗಿದ್ದ ಜೀವಿಯವರನ್ನು ಒಬ್ಬ ವರದಿಗಾರ್ತಿ ಸಂದರ್ಶಿಸಿದ್ದು ನನಗಿನ್ನೂ ನೆನಪಿದೆ. ನೂರರ ವಯೋಮಾನದ ಅವರಲ್ಲಿ " ಕನ್ನಡಕ್ಕೆ ನೀವೇನು ಕೊಡ್ಬೇಕು ಅಂತಿದೀರಾ ? " ಎಂದು ಕೇಳಿದ್ದಾಳೆ. ಅವರು ನಗುತ್ತಲೇ ತುಸು ಬಿಗುವಿನಿಂದ " ಕನ್ನಡಕ್ಕೆ ನಾನು ಕೊಡುವುದನ್ನು ಕೊಟ್ಟಾಗಿದೆ ಇನ್ನು ಬೇರೆಯವರು ಕೊಡುವುದನ್ನು ನೋಡುವುದು " ಎಂದಿದ್ದಾರೆ. ಕನ್ನಡಕ್ಕೆ ಅತ್ಯಮೂಲ್ಯ ನಿಘಂಟನ್ನೇ ತಯಾರಿಸಿ ಕೊಟ್ಟ ಜೀವಿಯವರಲ್ಲಿ ಆಕೆ ಹಾಗೆ ಕೇಳಬಹುದಿತ್ತೇ ?

ಒಪ್ಪಿಕೊಳ್ಳೋಣ: ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿಸದೇ ಮಾಧ್ಯಮದವರು ಕ್ಯಾಮೆರಾ, ಮೈಕು ಹಿಡಿದು ವೀಕ್ಷಕ ಪ್ರಭುಗಳಿಗೆ, ಜನಸಾಮಾನ್ಯರಿಗೆ, ಪ್ರಜೆಗಳಿಗೆ ವಿಷಯತಲ್ಪಿಸುವಲ್ಲಿ ಬಹಳ ಪ್ರಯಾಸಪಡುತ್ತಾರೆ. ಅಷ್ಟಷ್ಟೇ ಪ್ರಯಾಸವನ್ನು ಆ ಯಾ ರಂಗಗಳಲ್ಲಿ ಇರುವವರು ಅನುಭವಿಸುವುದು ಬದುಕಿನ ಅನಿವಾರ್ಯತೆ. ಮಾಧ್ಯಮವೂ ಒಂದು ವೃತ್ತಿ ತಾನೇ? ಅಲ್ಲಿ ಕೆಲಸಮಾಡಿ ಅದಕ್ಕೆ ಹಣಸಂಪಾದಿಸುತ್ತಾರಲ್ಲ? ಕೊನೇಪಕ್ಷ ರೈತರ ಹಾಗಲ್ಲ! ನಿಗದಿತ ಸಂಬಳವೋ ಪ್ಯಾಕೇಜೋ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಂತೂ ಇರುತ್ತದೆ. "ಪ್ರಯಾಸ ಪಡ್ತೀವಿ ಪ್ರಯಾಸ ಪಡ್ತೀವಿ " ಅಂತ ಅದನ್ನೇ ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಕಾಣುವುದಿಲ್ಲ. ಎಲ್ಲಾ ವೃತ್ತಿಗಳ ಹಾಗೇ ಅಲ್ಲೂ ಅದು ಅನಿವಾರ್ಯು!

ಶುಕ್ರವಾರ ೦೨.೦೩.೧೦೧೨ ರ ಸಂಜೆ, ವಾಹಿನಿಯೊಂದರಲ್ಲಿ , ವಕೀಲರುಗಳ ದೌರ್ಜನ್ಯದಿಂದ ಒಬ್ಬ ಪೋಲೀಸ ಸತ್ತನೆಂದೂ, ಸುಮಾರು ೨೦ ಮಂದಿ ಪೋಲೀಸರನ್ನು ಕಟ್ಟಡವೊಂದರಲ್ಲಿ ಕೂಡಿಟ್ಟು ಇಬ್ಬರ ಕಣ್ಣುಕೀಳಲಾಯಿತೆಂದೂ ಪೇದೆಗಳ ಹೆಸರು ಸಹಿತ ತಿಳಿಸಿ ವರದಿ ಬಿತ್ತರಿಸುತ್ತಿದ್ದ ಒಬ್ಬ ಪುಣ್ಯಾತ್ಮ!! ಇದರ ಸತ್ಯಾಸತ್ಯತೆ ಎಷ್ಟು? ಬರೇ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಹಪಾಹಪಿಯಿಂದ ಇಲ್ಲದ್ದನ್ನೂ ಇದ್ದಹಾಗೇ ಹೇಳುವುದಕ್ಕೆ ಇದು ಸಾಕ್ಷಿಯಲ್ಲವೇ? "ವಕೀಲರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಕೆಲಸವಿಲ್ಲದೇ ಅಲೆಯುವ ವಕೀಲರು ಈ ದೊಂಬಿಗೆ ಕಾರಣರಾಗಿರಬಹುದೇ?"--ಎಂಬ ಪ್ರಶ್ನೆಯನ್ನೂ ಆ ಪುಣ್ಯಾತ್ಮ ಎದುರು ಕೂತವರಲ್ಲಿ ಕೇಳುತ್ತಿದ್ದ. ಇನ್ನೊಂದು ವೃತ್ತಿ ಸಮುದಾಯದ ಸಂಖ್ಯಾಬಲ-ನಿರುದ್ಯೋಗದ ಬಗ್ಗೆ ಅವಹೇಳನಕಾರೀ ಮಾತು ಇದಾಗುವುದಿಲ್ಲವೇ? ಇದರಿಂದ ನೋಡುಗರ ಮನದಲ್ಲಿ ಕೆರಳುವ ಭಾವನೆಗಳೇನಿರಬಹುದು? [ಸುಳ್ಳನ್ನೇ ನೂರು ಸಲ ತೋರಿಸಿದರೆ ದೂರದಲ್ಲಿನ ಜನ ಅದನ್ನೇ ಸತ್ಯ ಎಂದು ನಂಬುವಷ್ಟು ಪರಿಣಾಮಕಾರೀ ಮಾಧ್ಯಮವಾಹಕಗಳೇ ಮಾಧ್ಯಮದವರ ಹತ್ತಿರ ಇವೆ!] ಇಂಥಾದ್ದೆಲ್ಲಾ ನೋಡಿದರೆ ಮಾಧ್ಯಮದವರು ಹೇಗಾದರೂ ಏನಾದರೂ ಹೇಳಿ ಯಾವರೀತಿಯಲ್ಲಾದರೂ ನುಣುಚಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆಲ್ಲಾ ಒಂದು ನಿಯಂತ್ರಕ ಕಾನೂನು ಜಾರಿಗೆ ಬರಬೇಕಾಗಿದೆ.

ಕೆಲವೊಮ್ಮೆ ಮಾಧ್ಯಮವಾಹಿನಿಗಳ ಕುರ್ಚಿಗಳಲ್ಲಿ ಕುಳಿತಾಗ ಅಧಿಕಾರ ಮದವೋ ಎಂಬಂತೇ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಗಿರುವ ಮಹಾನ್ ವ್ಯಕ್ತಿಗಳಲ್ಲಿ ಕೇಳುತ್ತಾರೆ. ಸ್ವರ್ಗದಿಂದ ಧರೆಗಿಳಿದವರಂತೇ ಕಾಣಿಸುತ್ತಾ, ಜನಸಾಮಾನ್ಯರಿಗಿಂತ ತಾವು ಭಿನ್ನ ತಾವು ಮಾಧ್ಯಮದವರು ಎಂಬ ಅಹಮಿಕೆ ಮೆರೆಯುವ ನಿರೂಪಕರೂ/ಸಂದರ್ಶಕರೂ ಇದ್ದಾರೆ. ತಾವು ಜನಸಾಮಾನ್ಯರಲ್ಲಿ ಒಂದುಭಾಗ ಎನ್ನುವ ಭಾವನೆ ಬರುವವರೆಗೂ ಅವರು ತಪ್ಪುಗಳನ್ನು ಮಾಡಬಹುದು ಎನಿಸುತ್ತದೆ! ಯಾವಾಗ ತಮ್ಮನ್ನು ತಾವು ಸರಿಯಾಗಿ ಅರಿಯುತ್ತಾರೋ ಆಗ ಇಂತಹ ತಾಪತ್ರಯಗಳು ನಿವಾರಣೆಯಾಗಬಹುದು.

ಪತ್ರಿಕೆ ನಡೆಸುವ ಒಬ್ಬಾತ ಹಿಂದೊಮ್ಮೆ ಅತ್ಯಂತ ಹಳೆಯ, ಉತ್ತಮ ಸಂಪ್ರದಾಯದ, ಯಾವುದೇ ತಪ್ಪನ್ನೆಸಗದ ಮಠವೊಂದಕ್ಕೆ ಕರೆಮಾಡಿ ಹಣ ಕೇಳಿದ್ದೂ ಸುದ್ದಿ ಮೊದಲೇ ಬಂದಿದೆ. ಆದರೆ ಆ ಮಠದವರು ಅದಕ್ಕೆ ಸೊಪ್ಪುಹಾಕಲಿಲ್ಲ. ಅವರ ವಿರುದ್ಧ ಒಂದಷ್ಟು ಬರೆದ ಆತ ಇನ್ಯಾರಿಗೋ ಕರೆಮಾಡಿ ಕೈಕಾಲು ಮುರಿಸಿಕೊಂಡಿದ್ದ! ’ಮಾಧ್ಯಮದವರು’ ಎನಿಸಿಕೊಂಡು ರೋಲ್ ಕಾಲ್ ಮಾಡುವ ಜನವೂ ಇದ್ದಾರೆ. ರೋಲ್ ಕಾಲ್ ನಲ್ಲೇ ಪತ್ರಿಕೆ ಓಡಿಸಿ ಮನೆ-ಮಠ ಕಟ್ಟಿಕೊಂಡವರೂ ಇದ್ದಾರೆ. ಹೀಗಾಗಿ ದೇಶದ ಎಲ್ಲೆಡೆ ಮಾಧ್ಯಮವೂ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಪರೂಪಕ್ಕೆ ಆರಕ್ಷಕರಲ್ಲಿ ಕೆಲವರು ಎಣ್ಣೆಹಾಕಿ ಡ್ಯೂಟಿ ಮಾಡಿದಂತೇ ಮಾಧ್ಯಮದಲ್ಲೂ ಎಡವಟ್ಟುಗಳು ಸೇರ್ಕೊಂಡಿರ್ತಾರೆ. ಇನ್ನು ಹಣ ಸ್ವೀಕೃತಿಯ ಬಗ್ಗೆ ದಿನಪತ್ರಿಕೆಗಳೇ ವರದಿ ಮಾಡಿವೆ! ಲೋಕಾಯುಕ್ತರ ವರದಿಯಲ್ಲೂ ಗಣಿಧಣಿಗಳಿಂದ ಕೆಲವರು ಹಣಪಡೆದದ್ದರ ಬಗ್ಗೆ ದಾಖಲೆ ಇದೆ ಎಂಬುದು ಗುಸುಗುಸು! ಹೀಗಾಗಿ ಮಾಧ್ಯಮದವರೂ ತಮ್ಮ ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ.

ಬೆಂಗಳೂರಿನ ವಕೀಲರ ಬಗ್ಗೆ ಬರೆಯುವ ಅಗತ್ಯವೇ ಇಲ್ಲ! ೦೨.೦೩.೧೦೧೨ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ರಾತ್ರೀವರೆಗೆ ಅದನ್ನು ಜನ ನೋಡೀ ನೋಡೀ ಸುಸ್ತಾಗಿ, ಬೇಸತ್ತು ಟಿವಿ ಆನ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ! ಇದೊಂದು ತ್ರಿಕೋನ ದ್ವೇಷ ಸರಣಿಯೆನ್ನಬಹುದೇ? ಪೋಲೀಸರ ಮೇಲಿನ ಸಿಟ್ಟಿಗೆ ವಕೀಲರು ಅವರಮೇಲೆ-ವಕೀಲರಮೇಲಿನ ಸಿಟ್ಟಿಗೆ ಪೋಲೀಸರು ವಕೀಲರ ಮೇಲೆ, ತಮ್ಮೊಳಗಿನ ಜಗಳವನ್ನು ಕೋಟ್ಯಂತರ ಜನರಿಗೆ ತೋರಿಸಿದ್ದಕ್ಕಾಗಿ ವಕೀಲರು ಮಾಧ್ಯಮದವರ ಮೇಲೆ ಹೀಗೆ ನಡೆದಿದೆ ಈ ನಿಯಮ ಉಲ್ಲಂಘನೆ! ಸರಕಾರೀ ಇಲಾಖೆಗಳಿಗೆ-ವಿಭಾಗಗಳಿಗೆ ಸಂಬಂಧಿಸಿದ ವಕೀಲರು ಮತ್ತು ಪೋಲೀಸರು ತಮ್ಮೊಳಗಿನ ಸಮಸ್ಯೆಗಳನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಆದಷ್ಟೂ ಚಿಕ್ಕದಾಗಿ ಮಾಧ್ಯಮ ತೋರಿಸಿದ್ದರೆ ಅವರುಗಳಿಗೂ ಬೇಸರವಾಗುತ್ತಿರಲಿಲ್ಲವೇನೋ. ಹೀಗೆ ನೋಡಿದಾಗ ವಕೀಲರುಗಳೂ ಪೋಲೀಸರೂ ತಮ್ಮತಮ್ಮೊಳಗೇ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವೆನಿಸುತ್ತದೆ.

ಇಲ್ಲಿ ರಾಜಕಾರಣಿಗಳ ಸ್ವಾರ್ಥಪರತೆಯಿಂದ, ಪರಸ್ಪರ ಕಚ್ಚಾಟಗಳಿಂದ ಹಡಾಲೆದ್ದುಹೋದ ಪ್ರಜಾತಂತ್ರದ ವ್ಯವಸ್ಥೆಯೂ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಆಳುವವರು ಸರಿಯಾಗಿದ್ದರೆ ಎಲ್ಲರೂ ಸರಿಯಾಗಿರುತ್ತಾರೆ. ಸ್ವಾತಂತ್ರ್ಯಬಂದ ಆ ಕಾಲಘಟ್ಟದಲ್ಲಿ ಆತುರದಲ್ಲಿ ಮಾಡಿದ ಸಂವಿಧಾನದಲ್ಲಿ ಸಾಕಷ್ಟು ಲೋಪದೋಷಗಳಿವೆ-ಅದನ್ನೇ ಬಂಡವಾಳ ಮಾಡಿಕೊಂಡ ಧೂರ್ತ ರಾಜಕಾರಣಿಗಳು ಅದರಿಂದಲೇ ಲಾಭಪಡೆಯಲು ತಂತ್ರಗಾರಿಕೆ ಮಾಡಿಕೊಂಡಿದ್ದಾರೆ. ವೈಯ್ಯಕ್ತಿಕ ಬದುಕಿನ ನಡತೆಯೇ ಸರಿಯಿಲ್ಲದ ಖೂಳಜನರನೇಕರು ಆಡಳಿತ ಯಂತ್ರಕ್ಕೆ ಸೇರಿಕೊಂಡಿದ್ದಾಗ, ಆಳುವ ಪಕ್ಷದ ಒಳಹುಳುಕು-ಜಗಳ ವಿಪರೀತವಾದಾಗ, ವಿರೋಧ ಪಕ್ಷಗಳು ಕೇವಲ ಚಿಕ್ಕಚಿಕ್ಕ ತಪ್ಪುಗಳನ್ನೇ ದೊಡ್ಡದು ಮಾಡಿ ವಿಜೃಂಭಿಸಿ ತಮ್ಮ ಬೇಳೇ ಬೇಯಿಸಿಕೊಳ್ಳುವ ಪರಿ ನಡೆಯುವಾಗ ಆಡಳಿತ ಹಿಡಿತವಿಲ್ಲದೇ ಸಡಿಲಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಮ್ಮಿ ಇರುವ ಬಲಹೀನ ಶರೀರಕ್ಕೆ ಹಲವು ಕಾಯಿಲೆಗಳು ಅಮರಿಕೊಂಡಂತೇ ಸಡಿಲವಾದ ಪ್ರಜಾತಂತ್ರದ ಅಂಗಾಂಗಗಳಲ್ಲಿ ಇಂತಹ ಬಡಿದಾಟ ಮೊದಲಾದ ’ಸಾಮಾಜಿಕ ರೋಗಗಳು’ ಕಾಣಿಸಿಕೊಳ್ಳುತ್ತವೆ.

ಒಟ್ಟಿನಲ್ಲಿ ನಿನ್ನೆಯ ಈ ತ್ರಿಕೋನ ಜಗಳದಲ್ಲಿ, ದೊಂಬಿಯಲ್ಲಿ, ಯಾರದು ತಪ್ಪು ಯಾರದು ಒಪ್ಪು ಎಂಬುದನ್ನು ಬಹಳ ಸಂಯಮದಿಂದ ನಿಗಾವಹಿಸಿ ನಿರ್ಧರಿಸಬೇಕಾಗಿದೆ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕಾಗಿದೆ. ಸಂಬಂಧಿಸಿದ ಈ ಮೂರೂ ವಿಭಾಗಗಳವರು ಕೂತು ಮಾತಾಡಿ ಜಗಳ ಪರಿಹರಿಸಿಕೊಳ್ಳಬೇಕಾಗಿದೆ. ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮೊದಲು ಹತ್ತಾರುಸಲ ಯೋಚನೆ ಮಾಡುವ ಅಗತ್ಯ ಕಾಣುತ್ತದೆ.

Thursday, March 1, 2012

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಚಿತ್ರಗಳ ಋಣ : ಗೂಗಲ್ ಅಂತರ್ಜಾಲ

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಗುಜರಿ ಆಯುವ ಹುಡುಗನೊಬ್ಬ ಬರೆಯುತ್ತಾನೆ- ’ಗೋರಿ ಕಾಯುವವರು’ ಎಂಬ ತನ್ನ ಕೆಟ್ಟ ಪದಗಳ ಬರಹದಲ್ಲಿ! ಆತನಿಗೆ ಗೋರಿಯಾವುದು ದೇವಳಯಾವುದು ಬೇರ್ಪಡಿಸಲಾಗದ ಹುಟ್ಟುಕುರುಡು! ಇಂಥವರೆಲ್ಲಾ ಇವತ್ತು ಪತ್ರಕರ್ತರಾಗಿ ಬರಹಗಾರರಾಗಿ ತಯರಾಗಿದ್ದಾರೆ ಎಂದಾಗ ಕಾಲದ ಸ್ಥಿತಿಯ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಮೊನ್ನೆಯಷ್ಟೇ ಒಬ್ಬ ಮಹಾತ್ಮರು ಹೇಳಿದ್ದಾರೆ " ಧರ್ಮ ಕಾಲಕ್ಕೆ ತಕ್ಕಂತೇ ಬದಲಾಗುವುದಿಲ್ಲ, ಧರ್ಮವೆಂಬುದು ಮಾನವ ಜೀವನದ ಒಳಿತಿಗಾಗಿ ಇರುವ ನೀತಿಯುಕ್ತ ಜೀವನಮಾರ್ಗ. ಧರ್ಮವನ್ನು ಬದಲಿಸಹೊರಡುವುದೇ ಅಧರ್ಮ, ಅದಕ್ಕೆ ಬದಲಾಗಿ ಧರ್ಮಕ್ಕೆ ನಾವು ನಮ್ಮನ್ನು ಅಳವಡಿಸಿಕೊಳ್ಳಬೇಕಾಗುತ್ತದೆ." ಅವರ ಮಾತು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದು ಎಂಬ ಪ್ರಶ್ನೆ ಮೂಡಬಹುದು: ಅದು ಮಾನವ ಜೀವನಧರ್ಮ. ಮಹಾಕವಿ ಡೀವೀಜಿಯವರು ’ಜೀವನಧರ್ಮ ಯೋಗ’ ಎಂಬ ಗ್ರಂಥವನ್ನು ಬರೆದರು. ’ಮಂಕುತಿಮ್ಮನ ಕಗ್ಗ’ ಅರ್ಥವಾಗದವರಿಗೆ/ಕಗ್ಗಂಟು ಎನಿಸುವವರಿಗೆ ಇದು ಬಳಕೆಯಾಗಲಿ ಎಂಬುದು ಅವರ ಆಶಯವಾಗಿತ್ತು. ಅಂತಹ ಡೀವೀಜಿಯವರು ಬಾಳಿ ಬದುಕಿದ್ದ ಅವರ ಮನೆ ಇಂದು ಇಲ್ಲವೇ ಇಲ್ಲ. ಅ.ನ.ಕೃಷ್ಣರಾಯರು ಒಂದುಕಾಲಕ್ಕೆ ಉಪವಾಸವಿದ್ದ ಕನ್ನಡದ ಕೆಲಸಗಾರರಿಗೆ ಊಟವೊದಗಿಸಿದವರು! ಅವರ ಮನೆ ಇರುವ ಜಾಗ ಚಪ್ಪಲಿಗಳ ಗೋದಾಮು ಎಂಬುದು ತಿಳಿದರೆ ಬೇಸರವಾಗುವುದಿಲ್ಲವೇ? ಅದರಂತೇ ಮಲ್ಲಿಗೆಕವಿ ನರಸಿಂಹಸ್ವಾಮಿಯವರ ಮನೆಗೆ ಖುದ್ದಾಗಿ ನಾನು ಹೋಗಿ ನೋಡಿಬಂದಿದ್ದಿದೆ. ಇವತ್ತು ಹುಡುಕಿದರೆ ಆ ಮನೆ ಇಲ್ಲವೇ ಇಲ್ಲ!

ಕಾರಂತರು ಹುಟ್ಟಿಬೆಳೆದ ಮನೆ

ಕುಪ್ಪಳ್ಳಿಯ ವಿಸ್ತಾರವಾದ ಪ್ರದೇಶದಲ್ಲಿ ರಾಷ್ಟ್ರೀಯ ರಸ್ತೆಗಳಿಂದ ದೂರ ಉಳಿದ ಕುವೆಂಪು ಅವರ ಮನೆ ಮಾತ್ರ ಉಳಿದುಕೊಂಡಿತು. ಅದನ್ನು ರಕ್ಷಿಸಿಕೊಳ್ಳಲು, ನೋಡಿಕೊಳ್ಳಲು ಹಲವರು ಇದ್ದಾರೆ ಬಿಡಿ, ಕಾರಂತರ ಮನೆ ಹಾಗಲ್ಲ! ’ಬೆಟ್ಟದ ಜೀವ’, ’ಚೋಮನ ದುಡಿ’, ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತುಮುಖಗಳು’ ಮುಂತಾದ ಮನನೀಯ ಕಾದಂಬರಿಗಳನ್ನು ಕೊಟ್ಟ ಕಾರಂತರು ಕೈಯಾಡಿಸಿದ ಕಾರ್ಯಕ್ಷೇತ್ರ ಒಂದೇ ಎರಡೇ? ಕನ್ನಡಕ್ಕಾಗಿ ಅವರು ಕೊಟ್ಟ ಕೊಡುಗೆ ಲೆಕ್ಕಹಾಕಿದರೆ ಕುವೆಂಪುವಿಗಿಂತ ಮೇಲೆ ಕೂರಬೇಕಾದ ವ್ಯಕ್ತಿತ್ವ ಅವರದ್ದು! ಅಪಾರ ಪಾಂಡಿತ್ಯದ ಕಾರಂತರು ಸಾಹಿತ್ಯಾಸಕ್ತಿಯುಳ್ಳ ಹೊರದೇಶದಲ್ಲಿನ ಜನ ಕರೆದಾಗ ತನ್ನ ಸ್ವಂತ ಜಮೀನಿನ ಭಾಗವನ್ನೇ ಮಾರಿ ಅದರಿಂದ ಖರ್ಚನ್ನು ನಿಭಾಯಿಸಿದರೂ ಮತ್ತೂ ಸಾಲ ಬಾಕಿ ಉಳಿದಿತ್ತು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ! ಕಾರಂತರು ವೇತನ ಪಡೆಯುವ ಯಾವುದೇ ಹುದ್ದೆಗೆ ಅಂಟಿಕೊಳ್ಳಲಿಲ್ಲ. ಕನ್ನಡಕ್ಕಾಗಿ ತನ್ನಲ್ಲಿದ್ದುದನ್ನೇ ಖರ್ಚುಮಾಡಿದರು!’ಈ ಜಗತ್ತು’ ಎಂಬ ಐದು ಸಂಪುಟಗಳ ಅವರ ಖಗೋಳಗ್ರಂಥವನ್ನು ಇಂದಿನ ಖಗೋಳಶಾಸ್ತ್ರಿಗಳು ಓದಿ ತಿಳಿದುಕೊಳ್ಳುವಂಥದ್ದಿದೆ! ಯಕ್ಷಗಾನ, ಬ್ಯಾಲೆ ನರ್ತನ, ಹಾಡು-ಹಸೆ, ಸಾಹಿತ್ಯ, ರಾಜಕೀಯ, ಶರಾವತೀ ಟೇಲರೇಸ್ ಎಂಬ ನಿಸರ್ಗಾಂದೋಲನ, ಮಕ್ಕಳಿಗೆ ಶಿಕ್ಷಣ ಹೀಗೇ ಕಾರಂತರದು ಆನೆಗಾತ್ರದ ಹೆಜ್ಜೆಗಳು! ಎಲ್ಲೇ ಹೋಗಲಿ ಕಾರಂತರು ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಈ ಉಯ್ಯಾಲೆ ಮಂಚದಲ್ಲಿ ಕಾರಂತರು ಕುಳಿತು ಅದೆಷ್ಟು ಚಿಂತಿಸಿದರೋ ! [ಹಳೆಯ ಪರಿಕರಗಳನ್ನು ಗಮನಿಸಿ]

ಇವತ್ತು ಸರಕಾರದ ಸವಲತ್ತುಗಳಿಗೆ ಬುದ್ಧ್ಯಾಪೂರ್ವಕ ನಿಷೇಧಕ್ಕೊಳಗಾಗಿರುವ ಮೇಲ್ವರ್ಗದಲ್ಲಿ ಜನಿಸಿದ್ದರೂ ’ಚೋಮನ ದುಡಿ’ಯಲ್ಲಿ ಅವರ ಮನಮಿಡಿದ ರೀತಿಯನ್ನು ಕಾದಂಬರಿ ಓದದ ಅನೇಕರು ಅದೇ ಹೆಸರಿನ ಸಿನಿಮಾ ನೋಡಿ ಅರಿತಿದ್ದಾರೆ. ನಿಮ್ನವರ್ಗದವರ ಬಗ್ಗೆ ಕಾಳಜಿ ಇರದಿದ್ದರೆ ಅವರು ಅದನ್ನು ಬರೆಯಲು ಸಾಧ್ಯವಿತ್ತೇ ? ಒಂದು ಕಾಲಕ್ಕೆ ಕಾರಂತರು ಇದ್ದಾರೆಂದರೆ ಅವರೆದುರು ಕೆಲವರು ನಿಲ್ಲಲು ಹೆದರಿಕೊಳ್ಳುತ್ತಿದ್ದರು ಯಾಕೆಂದರೆ ತನಗನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೇ ನೇರಾನೇರ ಮುಖದಮೇಲೆ ಬಡಿದಹಾಗೇ ಹೇಳುವ ನಿಷ್ಠುರವಾದಿಯಾಗಿದ್ದರು ಕಾರಂತರು. ಮೀಸಾಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕೇಂದ್ರ ಕೊಡಮಾಡಿದ ಪ್ರಶಸ್ತಿಯನ್ನು ಧಿಕ್ಕರಿಸಿ ಜನರ ನೋವಿರುವವರೆಗೂ ತನಗೆ ಪ್ರಶಸ್ತಿ ಬೇಡವೆಂದ ಮಹಾಜನ ಕಾರಂತರು!

ಬರೆದು ಮುಗಿಯದಷ್ಟು ಬರೆಯಲ್ಲಿಕ್ಕಿರುವ ಅಗಾಧ ವ್ಯಕ್ತಿತ್ವ ಕಾರಂತರದ್ದು. ಅವರ ಬಗ್ಗೆ ಹೆಚ್ಚಿನದಾಗಿ ಇಲ್ಲಿ ಓದಿ :

ಥೈ ಥೈ ತದ್ದಿನ ಧೇಂ ಧೇಂ......[ http://nimmodanevrbhat.blogspot.in/2010/07/blog-post_14.html ]

ಕಾರಂತರೇ ಬದುಕಿದ್ದರೆ ಚತುಷ್ಪಥಕ್ಕೆ ಏನೆನ್ನುತ್ತಿದ್ದರೋ ತಿಳಿಯದು! ಯಾಕೆಂದರೆ ಇರುವ ಭೂಪ್ರದೇಶವನ್ನೆಲ್ಲಾ ಗಣಿಗೊಂದಿಷ್ಟು, ರಸ್ತೆಗಳಿಗೊಂದಿಷ್ಟು ಕೊಟ್ಟುಬಿಟ್ಟರೆ ಜನಜೀವನ ಸುಧಾರಿಸುತ್ತದೇನು ? ಅಷ್ಟಕ್ಕೂ ಅಲ್ಲಿ ಚತುಷ್ಪಥ ಯಾರಿಗೆ ಬೇಕಾಗಿದೆ? ನಾವು ವಿದೇಶೀಯರಲ್ಲ, ನಾವು ಅಮೇರಿಕನ್ನರಲ್ಲ,ನಾವು ಭಾರತೀಯರು! ನಮ್ಮದು ಕೃಷಿಪ್ರಧಾನ ದೇಶ; ಹಳ್ಳಿಗಳೇ ನಮ್ಮ ಪ್ರಮುಖ ಜೀವಜೀವಾಳ! ಅನೇಕ ಹಳ್ಳಿಗಳ ಜನಜೀವನವನ್ನೂ ಹಳ್ಳಿಗಳ ಜನರ ಜೀವನಕ್ರಮವನ್ನೂ ತಿರುಚಿಹಾಕುವ ಇಂತಹ ಹೆದ್ದಾರಿಗಳು ಯಾವ ಉದ್ಧಾರಕ್ಕಾಗಿ? ಕೇಂದ್ರ ರಸ್ತೆಕಾಮಗಾರಿಯಲ್ಲಿ ಯಾರ್ಯಾರಿಗೆ ಎಷ್ಟುಪಾಲು ? ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ರಾಜ್ಯಗಳ ಸಂಪರ್ಕವನ್ನು ಕಲ್ಪಿಸುವುದಕ್ಕೆ ಚತುಷ್ಪಥ ಅನಿವಾರ್ಯವಿತ್ತೇ ಹೊರತು ಇಲ್ಲೆಲ್ಲಾ ಅದರ ಅನಿವಾರ್ಯತೆ ಕಾಣಲಿಲ್ಲ. ಕರ್ನಾಟಕ ರಾಜ್ಯದಲ್ಲೂ ಅನವಶ್ಯಕವಾಗಿ ನಿರ್ಮಾಣಗೊಂಡ ರಾಜ್ಯಹೆದ್ದಾರಿಗಳೆಷ್ಟೋ! ಇಲ್ಲೆಲ್ಲಾ ಅಭಿವೃದ್ಧಿಯ ನೆಪದಲ್ಲಿ ಕಳ್ಳ ರಾಜಕಾರಣಿಗಳ ಬೊಕ್ಕಸಕ್ಕೆ ಎಷ್ಟೆಷ್ಟು ಹರಿದುಬಂತು ಎಂಬುದು ತಿಳಿಯುತ್ತಿಲ್ಲ!

ಕಾರಂತರ ಮನೆಯ ಹಿಂಪಾರ್ಶ್ವದಲ್ಲಿ ಔಟ್ ಹೌಸ್

ಎಡಪಂಥೀಯ ಎನಿಸಿಕೊಂಡ ಜನ ಬುದ್ಧಿಜೀವಿಗಳು ಎಂದು ಅವರಷ್ಟಕ್ಕೇ ಅವರು ಘೋಷಿಸಿಕೊಂಡಿದ್ದಾರೆ. ನೇರವಾಗಿರುವ ಮಾರ್ಗಕ್ಕೆ ಅಡ್ಡಹಾಕಿ ತಮ್ಮತ್ತ ಜನರನ್ನು ಆಕರ್ಷಿಸುವ ಅಡ್ಡಕಸುಬಿಗಳು ಅವರು! ಕಾರಂತರಿದ್ದರೆ ಇವತ್ತು ಕನ್ನಡನಾಡಿನಲ್ಲಿ ಮೆರೆಯುತ್ತಿದ್ದ ಅನೇಕ ಬುದ್ಧಿಜೀವಿಗಳು ಅಡಗಿ ಹೋಗುತ್ತಿದ್ದರು! ಗುಜರಿ ಆಯುವ ಹುಡುಗ ಬರೆಯುವ ರೀತಿ ನೋಡಿದರೆ ಆತನ ಗುಜರಿ ಸಾಮಗ್ರಿಗಳ ಬಗ್ಗೆ ನಿಜಕ್ಕೂ ಅಸಹ್ಯ ಹುಟ್ಟುತ್ತದೆ. ಕವಿ-ಸಾಹಿತಿಗಳು ಗತಿಸಿದಮೇಲೆ ಅವರ ಮನೆಗಳು, ಅವರು ಬಳಸಿದ್ದ ವಸ್ತುಗಳು ಇಂಥವೆಲ್ಲಾ ಮುಖ್ಯವಲ್ಲಾ ಕೇವಲ ಅವರ ಬರಹಗಳು-ತತ್ವಗಳು ಮಾತ್ರ ಮುಖ್ಯವೆಂಬ ಆತನ ಅನಿಸಿಕೆಯೊಂದಿಗೆ ಕಾರಂತರ ಮನೆ ಕೆಡವಿದಂತೇ ಅನೇಕ ಜನಸಾಮಾನ್ಯರ ಮನೆ ಕೆಡವಿದ್ದಾರೆ, ಸಾವಿರಾರು ಜನ ಬೀದಿ ಪಾಲಾಗಿದ್ದಾರೆ ಎನ್ನುವ ಆತನ ’ಸಾಮಾಜಿಕ ಕಳಕಳಿ’ಯಲ್ಲಿ ಕಾರಂತರೇ ಇದಕ್ಕೆಲ್ಲಾ ಪರೋಕ್ಷ ಕಾರಣವೋ ಎಂಬಂತೇ ಪ್ರತಿಧ್ವನಿತವಾಗಿದೆ. ಜನಸಾಮಾನ್ಯರು ಎಲ್ಲೆಡೆಯೂ ಇರುತ್ತಾರೆ ಆದರೆ ಎಲ್ಲರೂ ಕಾರಂತರಾಗಲು ಸಾಧ್ಯವೇ? ಕಾರಂತರ ಸಾಹಿತ್ಯ ದಾರ್ಷ್ಟ್ಯತೆ ಆ ವೈವಿಧ್ಯತೆ ಯಾರಲ್ಲಿದೆ ಕನ್ನಡದಲ್ಲಿ ? ಕಾರಂತರ ಮನೆ ಹೋಗಿದ್ದು ತನಗಂತೂ ಬೇಸರವಿಲ್ಲಾ ಎನ್ನುವ ಗುಜರಿ ಹುಡುಗನನ್ನು ಅನುಮೋದಿಸುವ ಮಂದಿಯೂ ಇದ್ದಾರೆ ಎಂಬುದು ಗೊತ್ತಾಗಿ ಬಹಳಖೇದವೂ ಆಯ್ತು. ಅಕಸ್ಮಾತ್ ಕುವೆಂಪು ಮನೆಯ ಒಂದು ಹಂಚನ್ನು ಕೆಡವಲಿ : ಅದರ ಪರಿಣಾಮ ಅನುಭವಕ್ಕೆ ಬರುತ್ತದೆ!

ಕುವೆಂಪು ಅವರಿಗೆ ಕೊಡಮಾಡಿದ ಘನತೆ ಗೌರವವನ್ನು ಕಾರಂತ, ಮಾಸ್ತಿ, ಡೀವೀಜಿ, ಅನಕೃ ಮುಂತಾದವರಿಗೆ ಸರಕಾರ ಕೊಡಲಿಲ್ಲ. [ಕುವೆಂಪು ಹುಟ್ಟಾ ಶ್ರೀಮಂತರಾಗಿದ್ದರು! ದಕ್ಷಿಣಕನ್ನಡದ ಉಪಾಧ್ಯಾಯರೊಬ್ಬರು ಅವರ ಮನೆಗೇ ಹೋಗಿ ಪಾಠಹೇಳಿಕೊಡುತ್ತಿದ್ದರು! ಈ ಸವಲತ್ತು ನಾನು ಇಲ್ಲಿ ಪಟ್ಟಿಮಾಡಿದ ಎಷ್ಟು ಜನರಿಗಿತ್ತು? ] ಡೀವೀಜಿ ಬದುಕಿನಲ್ಲಿ ಬಡತನದಿಂದ ಬಳಲಿದರೂ ಸಾರ್ವಜನಿಕರಿಗಾಗಿ ಗೋಖಲೆ ಸಂಸ್ಥೆಯನ್ನು ಕಟ್ಟಿಕೊಟ್ಟರು-ತನಗೆ ಬಂದ ಸನ್ಮಾನಧನದಲ್ಲಿ! ಸನ್ಮಾನ ಪಡೆದ ಮಾರನೇ ದಿನವೂ ಸೆಟ್ಟಿ ಅಂಗಡಿಯಿಂದ ತರಿಸುವ ಕಾಫಿ ಪುಡಿಗೆ ಕಾಸಿರಲಿಲ್ಲ ಡೀವೀಜಿಯಲ್ಲಿ! ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡಲು ಅನುಕೂಲವಿಲ್ಲದಾಗ " ಶೆಟ್ಟರೇ, ದಯಮಾಡಿ ಕಾಫಿಪುಡಿ, ಸಕ್ಕರೆ ಕೊಟ್ಟು ಕಳಿಸಿ, ಲೆಕ್ಕ ಬರೆದಿಟ್ಟುಕೊಳ್ಳಿ ಆಮೇಲೆ ತೀರಿಸುತ್ತೇನೆ" ಎಂದು ಗುಪ್ತವಾಗಿ ಹುಡುಗನೊಬ್ಬನ ಮೂಲಕ ಚೀಟಿ ಕಳಿಸಿದ್ದಾರೆ ಅಂಗಡಿಗೆ! ಎಂತೆಂತೆಹ ಮಹಾನುಭಾವರು ಕನ್ನಡದಲ್ಲಿ ಆಗಿಹೋದರೂ ಅವರಿಗಿಲ್ಲದ ವಿಶೇಷ ರಾಜಮರ್ಯಾದೆ ಕುವೆಂಪು ಅವರಿಗೆ ಮಾತ್ರ ದೊರೆತಿದೆ; ದೊರೆಯುತ್ತಿದೆ; ದೊರೆಯುತ್ತದೆ!!ಕವಿ-ಸಾಹಿತಿಗಳ ಬಗ್ಗೆಯೂ ಜಾತೀ ರಾಜಕಾರಣ ಎನಿಸುವುದಿಲ್ಲವೇ?

ಕಾರಂತರ ಮನೆಯನ್ನು ಕೆಡವಿದ್ದು ಕನ್ನಡದ ಮನೆಯ ಒಂದು ಕಂಬ ಕೆಡವಿದಂತೆಯೇ ಸರಿ. ಮುಕ್ತಮನದಿಂದ ಕಾರಂತರನ್ನು ಆಮೂಲಾಗ್ರವಾಗಿ ತಿಳಿದುಕೊಂಡ ಜನ ಕಾರಂತರು ಕೇವಲ ಮೇಲ್ವರ್ಗಕ್ಕಾಗಿ ಅಥವಾ ಮೇಲ್ವರ್ಗವನ್ನು ಹೊಗಳಿ ಏನನ್ನೋ ಬರೆದರು ಎನ್ನುವುದಿಲ್ಲ. ’ಚೋಮನ ದುಡ”ಯ ಕೆಲವು ಸನ್ನಿವೇಶಗಳು ಅಸಹಾಯ ದಲಿತನ ಕಣ್ಣೀರಕಥೆ ಹೃದಯದೊಳಗೆ ಮಡುಗಟ್ಟಿ-ಹಾಡಾಗಿ, ಆತ ದುಡಿಬಡಿದು ಕುಣಿಯುವುದನ್ನು ನೆನಪಿಸಿಕೊಳ್ಳುವಾಗ ಓದುಗನ ಕಣ್ಣಲ್ಲಿ ಆರ್ದ್ರತೆ ಒಸರದಿದ್ದರೆ ನನ್ನ ಮಾತನ್ನು ತೆಗೆದುಹಾಕಿ! ಇವತ್ತಿಗೂ ಕಾರಂತರು ಕಟ್ಟಿದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮುಖ್ಯಸ್ಥರಾಗಿರುವ ಸಂಜೀವ ಸುವರ್ಣರನ್ನು ಕೇಳಿದರೆ ಕಾರಂತರ ಬಗ್ಗೆ ತುಸು ಆತ್ಮೀಯವಾಗಿ ಹೇಳಿಯಾರು. ನನಗೆ ಆಶ್ಚರ್ಯವಾಗಿದ್ದು, ದಕ್ಷಿಣ ಕನ್ನಡ ಜನತೆ ಯಾಕೆ ಹಾಗೆ ಸುಮ್ಮನೇ ಕುಳಿತಿದ್ದಾರೆ, ಕಾರಂತರ ಮನೆ ಹೋಗುತ್ತದೆ ಎಂದಾಗಲೂ ಅವರಿಗೆ ಏನೂ ಅನಿಸಲಿಲ್ಲವೇ? ಅಥವಾ ಹತ್ತಿರವಿರುವ ದೇವರು ಸಸಾರವಾದಂತೇ ಆಯ್ತೇ?

ಧರ್ಮಸ್ಥಳ/ತಿರುಪತಿ ದೇವಳದ ಪಕ್ಕದಲ್ಲೇ ಇರುವವರಿಗೆ ಆ ದೇವರು ಸಸಾರ! ನೋಡೀ ನೋಡೀ ಚಡ್ಡೆ! ಅದೇ ದೂರದಿಂದ ಹೋಗುವ ಯಾತ್ರಿಗೆ ಅವು ಕಣ್ತುಂಬಿಸಿಕೊಳ್ಳುವ ಭಕ್ತಿಯ ಸ್ವರ್ಗ! ಅದೇ ರೀತೀ ಕವಿ-ಸಾಹಿತಿಗಳನ್ನು ಖುದ್ದಾಗಿ ಕಾಣುವುದು ಸಾಧ್ಯವಾಗದಾಗ ಕೊನೇಪಕ್ಷ ಅವರು ಈ ಜಾಗದಲ್ಲಿ ಬದುಕಿದ್ದರು ಎನ್ನಲಿಕ್ಕೆ, ಅವರು ಬಳಸಿದ ವಸ್ತುಗಳನ್ನು ನೋಡಿ ಖುಷಿಪಡಲಿಕ್ಕೆ ಒಂದು ಸ್ಮಾರಕವಿದ್ದರೆ ಅದರಿಂದ ಸಿಗುವ ಆತ್ಮತೃಪ್ತಿ ಹೇಳಿಕೊಳ್ಳಲು ಆಗುವಂಥದ್ದಲ್ಲ. ’ಗೋರಿ’ ಎಂಬ ಗುಜರಿ ಹುಡುಗ ಬಳಸಿದ ಪದ ಇದೆಯಲ್ಲ ಅದು ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ.
ಏನೇ ಇರಲಿ ಕಾರಂತರ ಮನೆ ಕೆಡವಿದ್ದು ಖಂಡನೀಯ, ವಿಷಾದನೀಯ, ಅದನ್ನು ಸಮರ್ಥಿಸಿ ಬರೆಯುವ ಎಲ್ಲರ ಲೇಖನಗಳೂ ಖಂಡನೀಯ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತಿದ್ದೇನೆ.

Wednesday, February 29, 2012

ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....


ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....

ನನ್ನ ಬಾಲ್ಯದ ಚಳಿಗಾಲದ ಒಂದುದಿನ. ಬೆಳಗಿನ ಚುಮುಚುಮು ಚಳಿ ಇನ್ನೂ ಹರಿಯದ ಸಮಯ. ನಮ್ಮ ಹಳ್ಳಿಯ ರಿವಾಜಿನಂತೇ ಬೆಳಿಗ್ಗೆ ಬೇಗ ಎದ್ದು, ಮುಖಮಾರ್ಜನೆ ಶೌಚವಿಧಿಗಳನ್ನು ತೀರಿಸಿಕೊಂಡು ದೇವರಿಗೆ ಹೂವುಗಳನ್ನು ಕೊಯ್ದಿಟ್ಟು ನಮಿಸಿ, ೭ ಗಂಟೆಗೇ ತಿಂಡಿತಿಂದು ಪ್ರಾಥಮಿಕ ಶಾಲೆಗೆ ನಮ್ಮ ಪಯಣ. ಆದರೆ ಅಂದು ಭಾನುವಾರ ಬೆಳಿಗ್ಗೆ ಎಂದಿನಂತೇ ಮಿಕ್ಕೆಲ್ಲಾ ಮುಗಿದಿತ್ತು. ರಜಾದಿನವಾದ್ದರಿಂದ ಸ್ವಲ್ಪ ಆಟೋಪಚಾರಗಳು ನಡೆಯುವ ಸಮಯ. ಅಂಗಳದ ಮೂಲೆಯಿಂದ ಹಾರ್ಮೋನಿಯಂ ನಿಂದ ಹೊರಟ ಸದ್ದು..ಸ.ರಿ.ಗ.ಮ.ಪ...ಮುದುಕಿಯೊಬ್ಬಳು ಹೆಗಲಿಂದ ಇಳಿದ ದಾರಕ್ಕೆ ಹಾರ್ಮೋನಿಯಂ ಕಟ್ಟಿಕೊಂಡು ನುಡಿಸುತ್ತಾ ಮುಂದೆ ಬರುತ್ತಿದ್ದಳು. ಹಣೆಯಲ್ಲಿ ವಿಭೂತಿ, ಮಧ್ಯೆ ಕಾಸಿನಗಲದ ಕುಂಕುಮ, ಮೊಳಕಾಲ್ಮೂರು ಸೀರೆ ಧರಿಸಿದ್ದಳು. ಬಂದವಳೇ ಅಂಗಳದ ಒಂದು ಪಕ್ಕದಲ್ಲಿ ಕೂತು

ಬಾರೊ ಗೋಪಾಲ ಮುಖವನೇ ತೋರೊ ಶ್ರೀಲೋಲ
ಬಾರಿಬಾರಿಗೂ ಭಾಗ್ಯವ ಕೊಡುವಾ ತುಳಸೀ ವನಮಾಲ ....

ರಾಗವಾಗಿ ಹಾಡುತ್ತಿದ್ದಳು. ಕಂಠ ಸುಮಧುರವಾಗಿತ್ತು, ತಾಳದ ಗತಿಯೂ ಇತ್ತು, ಹಾರ್ಮೋನಿಯಂ ಸಾಥ್ ಕೂಡ ಅವಳೇ ಕೊಟ್ಟುಕೊಂಡು ಕೇಳುಗರಿಗೆ ಮುದನೀಡುವಂತೇ ಭಕ್ತಿ-ಶ್ರದ್ಧೆಯಿಂದ ಹಾಡುತ್ತಿದ್ದಳು. ಹಾಡುವ ಮುಖ ಭಾವದಲ್ಲಿ ಪರಮಾತ್ಮನನ್ನು ಕರೆಯುವ ಭಾವತಲ್ಲೀನತೆ ಕಾಣುತ್ತಿತ್ತು. ಹೇಳೀಕೇಳೀ ಅವಳೊಬ್ಬ ಸಾದಾಸೀದಾ ಬೇಡುವ ಹೆಂಗಸು, ಬಯಲಸೀಮೆಯ ಕಡೆಯವಳು. ಅವಳಿಗೆ ಯಾರು ಸಂಗೀತ ಕಲಿಸಿದರು ? ತಿಳಿದುಬಂದಿಲ್ಲ. ಹಿತಮಿತ ಆಲಾಪದ ಜೊತೆಗೆ ಹಾಡುತ್ತಿದ್ದ ಅವಳ ಹಾಡು

ಇಂದುಧರ ಸಖನೇ ಇಂದ್ರಾದಿ ವಂದಿತನೇ
ಇಂದು ನಿನ್ನಯ ಪಾದವ ಪೊಗಳುವೆ ವೆಂಕಟಾಚಲನೇ .....

ಆಹಾ ...ಇನ್ನೂ ಆ ಗರಳಿನ ನೆನೆಪು ನನಗಾಗುತ್ತಿದೆ. ಹಾಡು ಮುಗಿಸಿ ಕೈಮುಗಿದು " ತಮ್ಮಾ ಅಜ್ಜೀಗೆ ಏನಾರಾ ತಿನ್ನಾಕ್ ಕೊಡಪ್ಪಾ ಶಿವಾ ....ಏನೋ ಒಂಚೂರು ಮನೇಲಿ ಮಾಡಿದ್ದು ಮಿಕ್ಕಿದ್ದು ಪಕ್ಕಿದ್ದು....ಅಜ್ಜಿಗೆ ಚಳಿಗೆ ಹಾಕ್ಕೊಳ್ಳೋದಕ್ಕೆ ಹಳೇ ಹರಿದ ಬಟ್ಟೆಬರೆ ಇದ್ರೆ. " ಯಾವುದಕ್ಕೂ ಆ ಅಜ್ಜಿಯ ಒತ್ತಾಯವಿರಲಿಲ್ಲ. ಅದೊಂದು ಪ್ರಾರ್ಥನೆಯಷ್ಟೇ. ಎಂತಹ ಪ್ರತಿಭೆಗೂ ಇದೆಂತಹ ಸ್ಥಿತಿ ಎಂಬುದು ಮುಗ್ಧಬಾಲಕನಾಗಿದ್ದ ನನ್ನ ಮನಸ್ಸಿಗೆ ಅಂದೇ ನಾಟಿದ ವಿಷಯ! ಎಂತೆಂಥವರಿಗೂ ಎಂತೆಂಥಾ ವಿಶಿಷ್ಟ ಶಕ್ತಿಯನ್ನೂ ಚೈತನ್ಯವನ್ನೂ ಕೊಟ್ಟ ಭಗವಂತ ಅವರವರ ಪಾಲಿಗೆ ಸಂಚಿತ ಕರ್ಮಫಲಗಳನ್ನಷ್ಟೇ ನೀಡುತ್ತಾನೆ ಎಂಬುದು ಸುಳ್ಳಲ್ಲ ಎಂದು ನನಗೀಗ ಅನ್ನಿಸುತ್ತಿದೆ. ಅಜ್ಜಿಗೆ ತಿಂಡಿ, ಹಳೆಬಟ್ಟೆ ಕೊಡಿಸಿ ಅಜ್ಜಿ ಅಕ್ಕ-ಪಕ್ಕದ ಮನೆಗಳಿಗೆ ಹೋಗಿ ಹಾಡುವುದನ್ನೂ ಹಿಂಬಾಲಿಸಿ ಹೋಗಿ ಕೇಳಿ ಸುಖಪಟ್ಟೆ. ಅಜ್ಜಿಯ ರಾಗಕ್ಕೆ ಹಿರಿಕಿರಿಯರಾದಿಯಾಗಿ ಹಲವು ಜನ ನಿಂತು ಆಲೈಸುತ್ತಿದ್ದರು! ಅಂಥಾ ಸುಶ್ರಾವ್ಯ ಸಂಗೀತವದು! ಸಾಹಿತ್ಯದಲ್ಲೂ ತಪ್ಪಿಲ್ಲದೇ ಲಯಬದ್ಧವಾಗಿ ಹಾಡುವ ಕಲೆಗಾರಿಕೆಯನ್ನೇ ಬಂಡವಾಳವನ್ನಾಗಿ ಭಗವಂತ ಆಕೆಗೆ ನೀಡಿದ್ದ.

ಹುಟ್ಟು ಆಯ್ಕೆಯಲ್ಲ, ಅದು ಕೇವಲ ಅನಿವಾರ್ಯ ಸಹಜ ಎಂದು ಹಲವರು ಹೇಳುತ್ತಾರೆ. ಬೆಳೆಯುತ್ತಾ ತಮ್ಮನ್ನು ಬದಲಿಸಿ ದುಡಿಮೆಗೆ ಹಚ್ಚಿಕೊಳ್ಳುವ ದುಡಿದು ಶ್ರೀಮಂತಿಕೆ ಪಡೆಯಬಹುದೆನ್ನುವ ಇರಾದೆ ಬಹುತೇಕರದ್ದು. ಅದರ ಜೊತೆಜೊತೆಗೇ ಬದುಕಿನಲ್ಲಿ ಅದೃಷ್ಟದಾಟವೂ ಕೆಲಮಟ್ಟಿಗೆ ನಡೆಯುತ್ತದೆ ಎಂಬುದನ್ನು ಮರೆಯುವಹಾಗಿಲ್ಲ! ಇದರರ್ಥ ಅದೃಷ್ಟವೇ ಎಲ್ಲವನ್ನೂ ಮಾಡುತ್ತದೆ ಎಂದಲ್ಲ, ಅಡಿಗೆಯಲ್ಲಿ ಉಪ್ಪಿನ ಪಾತ್ರ ಎಷ್ಟು ಮಹತ್ವವೋ ಅಂಥದ್ದೇ ಮಹತ್ವವನ್ನು ಜೀವನದ ಅಡಿಗೆಯಲ್ಲಿ ಅದೃಷ್ಟವೆಂಬ ಉಪ್ಪು ನಿರ್ವಹಿಸುತ್ತದೆ. ಅದೃಷ್ಟ ಸರಿಯಾಗಿಲ್ಲದಿದ್ದರೆ ಎಷ್ಟೇ ದುಡಿದರೂ ಅದರ ಫಲಗಳು ಸಂಚಿತಕರ್ಮ ನಿಷ್ಪನ್ನವಾಗಿರುತ್ತವೆ. ಆಗಲೂ ಜಗನ್ನಿಯಾಮಕ ಶಕ್ತಿ ಯಾವುದೋ ಒಂದು ರೀತಿಯಲ್ಲಿ ಅದನ್ನು ನಿಭಾಯಿಸಲು ಬೇಕಾಗುವ ವಿಶೇಷ ಸೌಲತ್ತುಗಳನ್ನು ಕೊಟ್ಟಿರುತ್ತದೆ ಎಂಬುದಕ್ಕೆ ಹುಟ್ಟಾ ಕಣ್ಣುಗಳಿದ್ದೂ ಶೈಶವಾವಸ್ಥೆಯಲ್ಲಿ ಕುರುಡರಾಗಿಹೋಗಿ ನಂತರ ಗಾನಯೋಗಿ ಎಂದೇ ಖ್ಯಾತರಾದ ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಪಡೆದ ದಿ|ಪುಟ್ಟರಾಜ ಗವಾಯಿಗಳ ಜೀವನಗಾಥೆಯನ್ನು ನೋಡಿ ತಿಳಿಯಬಹುದಾಗಿದೆ. ಕಳೆದುಹೋದ ಚೊಂಬನ್ನೂ ತಮ್ಮ ಆಶ್ರಮದ್ದೆಂದು ಕೇವಲ ಅದನ್ನು ಬಡಿದಾಗ ಹೊರಡುವ ಸದ್ದಿನಿಂದಲೇ ಅವರು ನಿರ್ಧರಿಸಿದ್ದ/ನಿರ್ಧರಿಸಬಲ್ಲ ವಿಶಿಷ್ಟ ಶಕ್ತಿ ಉಳ್ಳವರಾಗಿದ್ದರು. ಇಂದ್ರಿಯಗಳ ನ್ಯೂನತೆ ಹೊಂದಿದ ಜನರಿಗೆಲ್ಲಾ ಸಾಮಾನ್ಯರಿಗೆ ಅಗೋಚರವಾದ ಹೆಚ್ಚಿನ ಶಕ್ತಿಯೊಂದು ಲಭಿಸಿರುತ್ತದೆ.

ಸೃಷ್ಟಿ ಒಂದು ಮಾಯೆ ಅಥವಾ ಮಿಥ್ಯೆ ಎಂಬುದು ಬಲ್ಲವರ/ವಿಮುಕ್ತರ ಮಾತು. ನಾವು ಕಾಣಲಾಗದ ಪರಾಶಕ್ತಿ ತನ್ನ ಲೀಲಾನಾಟಕವಾಗಿ ಈ ಬ್ರಹ್ಮಾಂಡವನ್ನು ಸೃಷ್ಟಿಸಿದೆ, ಇಲ್ಲಿನ ಪ್ರತಿಯೊಂದೂ ಕ್ರಿಯೆಗಳೂ ಆ ಶಕ್ತಿಯ ಪ್ರೇರಣೆಯಿಂದ ನಡೆಯುತ್ತವೆ ಎಂಬುದೂ ಕೂಡ ನಂಬಲರ್ಹ ಸತ್ಯ. ಏನೂ ತಪ್ಪೆಸಗದ ಯಾತ್ರಿಗಳು ಹೊರಟ ವಾಹನದ ಚಾಲಕ ಎಲ್ಲೋ ಅಪಘಾತಕ್ಕೆ ಈಡುಮಾಡಿದಾಗ ಕೆಲವರು ಮಡಿಯಬಹುದು, ಏಟು ಅನುಭವಿಸಬಹುದು, ದೈಹಿಕ ನ್ಯೂನತೆಗಳಿಗೆ ಒಳಗಾಗಬಹುದು. ವಾಹನ ಚಲಾಯಿಸುತ್ತಿರುವ ಚಾಲಕನಿಗೆ ಹೃದಯಾಘಾತವಾಗಿ ಆತ ಬದುಕಿನ ಕೊನೇ ಕ್ಷಣದಲ್ಲೂ ತನ್ನನ್ನು ನಂಬಿ ವಾಹನವೇರಿದ್ದ ಜನರನ್ನು ಬದುಕಿಸಿ ತಾನು ಸತ್ತ ಘಟನೆಗಳನ್ನೂ ಓದಿ ತಿಳಿದುಕೊಂಡಿದ್ದೇವೆ. ಯಾವುದೋ ರಸ್ತೆ ಅಪಘಾತದಲ್ಲಿ ಕಾರಿನಲ್ಲಿರುವ ಎಲ್ಲರೂ ಸತ್ತು ಮಗುವೊಂದು ಹಾರಿಹೋಗಿ ದೂರಬಿದ್ದರೂ ಬದುಕಿರುವುದನ್ನು ಅರಿತಿದ್ದೇವೆ. ಸುನಾಮಿ ಬಂದು ಎಲ್ಲರನ್ನೂ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕೆಲವರು ಮಾತ್ರ ಉಳಿಯುವಂತೇ ಮಾಡುವುದನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಎಂದಮೇಲೆ ನಿಸರ್ಗದ ಕೈಲಿ ಮಾನವನೇ ಹೊರತು ಮಾನವನ ನಿಯಂತ್ರಣಕ್ಕೆ ನಿಸರ್ಗ ಒಳಪಡುವುದಿಲ್ಲ.

ಈ ಬದುಕು ಮಾಯೆಯ ಆಟ ಎಂಬುದನ್ನು ಸ್ವಾನುಭವದಿಂದ ಅರಿತ ಕವಿವರ್ಯ ಬೇಂದ್ರೆ ಅದನ್ನೇ ಒಂದು ಕಾವ್ಯವಾಗಿ ಬರೆದರು. ಪ್ರಾಯಶಃ ಬೇಂದ್ರೆಯಷ್ಟು ಕಷ್ಟದ ಜೀವನಗತಿಯನ್ನು ಯಾವ ಕವಿಯೂ ಅನುಭವಿಸಿರಲಿಕ್ಕಿಲ್ಲ. ಕಷ್ಟಗಳನ್ನು ನುಂಗಿ ಹೇಗೆ ಬದುಕಬೇಕು ಎಂಬುದಕ್ಕೆ ಬೇಂದ್ರೆ ಮಾದರಿಯಾಗುತ್ತಾರೆ. ಸಿರಿವಂತರಾಗಬೇಕೆಂಬ ಆಸೆ, ಆಸಕ್ತಿ ಎಲ್ಲರಿಗೂ ಸಹಜ. ಕಾಣುವ ಓ ಅವರಿಗಿಂತಾ ತಾವೇನೂ ಕಮ್ಮಿಯಿಲ್ಲಾ ಎಂಬ ಅನಿಸಿಕೆಯೂ ಅಹಂಕಾರವೂ ನಮ್ಮನ್ನು ನಮಗೇ ಅರಿವಿಲ್ಲದಂತೇ ಆಕ್ರಮಿಸಿರುತ್ತದೆ. ಎಲ್ಲರಂತೇ ಬದುಕಬೇಕೆಂಬ ತಹತಹ ನಮ್ಮನ್ನು ನಿತ್ಯ ಧನೋಪಾಸಕರನ್ನಾಗುವಂತೇ ಹಚ್ಚುತ್ತದೆ! ಆಸೆಗಳ ಮಟ್ಟ ಅಧಿಕವಾದಾಗ ಅನೇಕಾವರ್ತಿ ನಿರೀಕ್ಷೆಗಳು ಹುಸಿಯಾಗುತ್ತವೆ, ಗುರಿಗಳು ನೆರವೇರದೇ ಚಡಪಡಿಸುವಂತಾಗುತ್ತದೆ. ಮಗ ಕೊನೆಯ ಕ್ಷಣದಲ್ಲಿ ಸಹಾಯಕ್ಕೆ ಬರುತ್ತಾನೆಂದು ನಿರೀಕ್ಷಿಸಿದ ಅಪ್ಪನ-ಅಮ್ಮನ ಮುಪ್ಪಿನ ವಯದಲ್ಲಿ, ಇದ್ದೊಬ್ಬ ಮಗ ಅಮೇರಿಕಾದಲ್ಲಿ ತಂತ್ರಾಂಶ ತಂತ್ರಜ್ಞನಾಗಿದ್ದು, ಅಪ್ಪ-ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ, ಸಾವಿನ ಕ್ಷಣದಲ್ಲೂ ಮಗನ ಮುಖ ಕಾಣುವ ಹಂಬಲದಲ್ಲೇ ಅವರು ಅಸುನೀಗುತ್ತಾರೆ. ಹೀಗೆಲ್ಲಾ ಆಗುವಾಗ ನೆನಪಾಗುವುದು ಬದುಕು ಮಾಯೆಯ ಮಾಟ!

ಮರದಮೇಲಿನ ಮುಸ್ಯಾನನ್ನೂ[ಮಂಗನನ್ನೂ] ಮಾತನಾಡಿಸುವ ಕಲೆ ಬೇಂದ್ರೆಯವರಿಗಿತ್ತು. ಧಾರವಾಡದ ಜನರಿಗಷ್ಟೇ ಅವರ ಬಳಕೆಯಲ್ಲ, ಪಶು-ಪಕ್ಷಿಗಳೂ ಬೇಂದ್ರೆಯವರ ಕವಿಹೃದಯವನ್ನು ಅರಿತಿದ್ದವು ಎಂದರೆ ತಪ್ಪಾಗಲಾರದು. ಸಮಾನ್ಯವಾಗಿ ಬಯಲಸೀಮೆ ಮಂದಿ ಮಂಗಗಳನ್ನೆಲ್ಲಾ ಹತ್ತಿರಬಿಟ್ಟುಕೊಳ್ಳುವುದಿಲ್ಲ. ಕಾಗೆ, ಮಂಗ, ಪಾರಿವಾಳ ಇಂತಹ ಸುತ್ತಲ ವಾಸಿಗಳನ್ನೂ ಬೇಂದ್ರೆ ಹತ್ತಿರ ಕರೆಯುತ್ತಿದ್ದರು. ಅವು ಬರುತ್ತಿದ್ದವು. ಬೇಂದ್ರೆ ಕೊಡುವ ಏನಾದರೂ ಚೂರುಪಾರು ಪಡೆದುಕೊಂಡು ತಿಂದು ಸುಖಿಸುತ್ತಿದ್ದವು! ಇಂತಹ ಬೇಂದ್ರೆ ಹಲವು ಮಕ್ಕಳನ್ನು ಕಳೆದುಕೊಂಡರು. ಶೈಶವಾವಸ್ಥೆಯ ಮಕ್ಕಳು-ಅವರ ನಗು, ಮುಗ್ಧ-ಸ್ನಿಗ್ಧ ಮುಖಭಾವ-ಭಂಗಿ, ಅವರುಗಳ ಆಟ-ಪಾಟ ಯಾರಿಗೆ ತಾನೇ ಹಿತವಲ್ಲ ? ಅದನ್ನು ಮರೆಯಲು ಸಾಧ್ಯವೇ? ರಾಮನನ್ನು ಕಾಡಿಗೆ ಕಳುಹಿಸಿದ ಕೊರಗಿನಲ್ಲೇ ಪುತ್ರನ ಅಗಲುವಿಕೆಯ ಶೋಕದಿಂದ ದಶರಥ ಮಹಾರಾಜ ಸತ್ತ! || ಪುತ್ರಶೋಕಂ ನಿರಂತರಂ|| ಎಂಬೊಂದು ಉಲ್ಲೇಖವಿದೆ. ಇಲ್ಲಿ ಪುತ್ರ ಎಂದರೆ ಕೇವಲ ಗಂಡು ಮಗು ಎಂದಲ್ಲ, ಮಕ್ಕಳು ಎಂಬ ಭಾವ. ರಾಮ ಜೀವಂತವಾಗಿಯೇ ಇದ್ದರೂ ಆತ ವನವಾಸದಲ್ಲಿ ಅದೆಷ್ಟು ಕಷ್ಟಪಡಬೇಕಾಗಬಹುದು ಎಂಬುದನ್ನು ಚಿಂತಿಸಿಯೇ ಕಂಗೆಟ್ಟು ಇಹಲೋಕ ತ್ಯಜಿಸಿದ್ದ ರಾಜಾ ದಶರಥ ಎಂದಮೇಲೆ ಹಲವು ಮಕ್ಕಳ ಸಾವಿನ ಸಮಯದಲ್ಲಿ ಕಣ್ಣಾರೆ ಕಾಣುತ್ತಾ ಬದುಕಿಸಿಕೊಳ್ಳಲಾಗದ ಆ ಅಸಹನೀಯ ಕ್ಷಣಗಳು ತಂದೆ-ತಾಯಿಗೆ ಯಾವ ನೋವನ್ನು ಕೊಡಬಹುದು ಎಂಬುದು ಚಿಂತನ ಮಾಡಬೇಕಾದ ವಿಷಯ.

ಮಗುವನ್ನು ಕಳೆದುಕೊಂಡ ಹಲವು ಘಳಿಗೆಗಳು ಮೌನವಾಗಿದ್ದವು, ಅಲ್ಲಿ ಬರೇ ಬೇಂದ್ರೆಯಲ್ಲ-ಆ ಇಡೀ ವಾತಾವರಣವೇ ರೋದಿಸುತ್ತಿತ್ತು! ಒಮ್ಮೆ ಹೆಂಡತಿ ಮಮ್ಮಲ ಮರುಗುತ್ತಾ ಬೇಂದ್ರೆಯವರನ್ನು ತಿರುಗಿ ನೋಡುವಾಗ ಹುಟ್ಟಿದ್ದು ’ನೀ ಹೀಂಗ ನೋಡಬ್ಯಾಡ ನನ್ನ..’ಕವನವಾದರೆ ಇನೊಮ್ಮೆ ಹೆಂಡತಿಗೆ ಬದುಕೇ ಬೇಡವೆನಿಸಿದಾಗ ಹುಟ್ಟಿದ್ದು ’ಕುಣಿಯೋಣು ಬಾರಾ ಕುಣಿಯೋಣು ಬಾ... .’ ಇಂಥದ್ದೇ ಇನ್ನೊಂದು ಘಳಿಗೆಯಲ್ಲಿ ಬೇಂದ್ರೆ ಬರೆದರು

ಬದುಕು ಮಾಯೆಯೆ ಮಾಟ
ಮಾತು ನೊರೆತೆರೆಯಾಟ
ಜೀವ ಮೌನದ ತುಂಬಾ ...

ಇದನ್ನು ಸಂಗೀತಕ್ಕೆ ಅಳವಡಿಸಿದ್ದ ಸುಗಮ ಸಂಗೀತದ ದಿಗ್ಗಜ ದಿ| ಸಿ. ಅಶ್ವತ್ಥ್ ರವರು ತಮ್ಮ ಬದುಕಿನ ಮಹತ್ತರ ಘಟ್ಟವಾಗಿ ’ ಕನ್ನಡವೇ ಸತ್ಯ’ ಎಂಬ ಸಂಗೀತ ಕಾರ್ಯಕ್ರಮದಂತೇ ಇನ್ನೊಂದು ಅತಿದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮೈಸೂರು ಅನಂತಸ್ವಾಮಿಯವರ ನಂತರ ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಗಾಢವಾಗಿ ಒತ್ತಿ, ಹಲವು ಕವಿಗಳ ಭಾವನೆಗಳಿಗೆ ಕಂಠವಾಗಿದ್ದ, ಅನೇಕ ಕೃತಿಗಳನ್ನು ರಾಗಬದ್ಧವಾಗಿ ಸಂಯೋಜಿಸಿ ನಿರೂಪಿಸಿ ಶ್ರೋತೃಗಳಿಗೆ ತಲುಪಿಸಿದ್ದ ಅಶ್ವತ್ಥರಿಗೂ ಕೂಡ ಅವರ ಬದುಕಿನ ಕೊನೆಯ ಮಾಯೆಯ ಮಾಟ ಗೊತ್ತಿರಲಿಲ್ಲ ಅಲ್ಲವೇ? ಈ ಬದುಕೇ ಹೀಗೆ. ಇರುವಷ್ಟುಕಾಲ ಇರುವಷ್ಟು ಘಳಿಗೆ ಉತ್ತಮ ಕೆಲಸಗಳನ್ನು ಮಾಡಬೇಕು, ಆದಷ್ಟೂ ಪರೋಪಕಾರಿಯಾಗಿ, ನಿಸ್ವಾರ್ಥಿಯಾಗಿ, ಮನುಜಮತವನ್ನು ಅರಿತು ಜೀವನ ನಡೆಸಿದರೆ ಆ ಕರ್ಮಫಲವನ್ನು ಮುಂದಿನ ನಮ್ಮ ಜನ್ಮದಲ್ಲಿ ಪಡೆಯಲು ಅನುಕೂಲವಾಗುತ್ತದೆ. ಮಾಯೆಯ ಮಾಟಕ್ಕೆ ಬಲಿಯಾದ ರಾಜೀವ ದೀಕ್ಷಿತರನ್ನೂ ನಾವು ಕಂಡಿದ್ದೇವೆ. ನಿನ್ನೆ ಕಂಡವರು ಇವತ್ತು ಕಾಣುತ್ತಾರೆಂಬ ಗ್ಯಾರಂಟಿ ಇಲ್ಲ. ಇಂದು ಇರುವವರು ನಾಳೆ ಇರುತ್ತಾರೋ ಗೊತ್ತಿಲ್ಲ. ಯಾರು ಯಾವ ಕ್ಷಣವೂ ಹೋಗಬಹುದು ಇಲ್ಲಾ ನೂರಾರು ವರುಷಗಳ ಕಾಲ ಆರಾಮಾಗಿಯೇ ಬದುಕಬಹುದು! ತಾಮಾಷೆಗೆ ಹನಿಗವಿ ಜೋಕು ಹೇಳಿದ್ದರು :

ರಾತ್ರಿ ಮಲಗುವಾಗ
ನೆನೆಸಿಡಿ ಉದ್ದು

ಎದ್ದರೆ ದೋಸೆ
ಇಲ್ಲದಿದ್ದರೆ ವಡೆ !

ಇಷ್ಟೇ ನಮ್ಮ ಬದುಕು ಎಂದಾದಾಗ ಬದುಕಿನ ಮುಖಗಳ ಅರಿವಿಲ್ಲದೇ ನಾವು ಗಟ್ಟಿ ನಾವು ಗಟ್ಟಿ ಎಂದು ಪರಾಕ್ರಮ ಕೊಚ್ಚಿಕೊಳ್ಳುವ ಹಲವರಿಗೆ ಮಾಯಯೆ ಮಾಟದ ಅರಿವು ಯಾವಕ್ಷಣದಲ್ಲಾದರೂ ಆಗಬಹುದು. ನಾವೆಲ್ಲಾ ಯೋಚಿಸಲೂ ಹಿಂದೇಟುಹಾಕುವ ವಿಷಯವನ್ನು ವರಕವಿ ಬೇಂದ್ರೆ ಕವನವಾಗಿಸಿದರು. ಅಶ್ವತ್ಥರು ಅದಕ್ಕೆ ಸಂಗೀತ ಜೋಡಿಸಿದರು! ಇಬ್ಬರೂ ದಿಗ್ಗಜರೇ ಅವರವರ ಕ್ಷೇತ್ರಗಳಲ್ಲಿ. ಈ ಇಬ್ಬರ ಜೊತೆಗೆ ಎಲ್ಲಾ ಪಕ್ಕವಾದ್ಯಗಳವರಿಗೂ ವಂದಿಸುತ್ತಾ , ಹಾಡನ್ನು ನಿಮ್ಮ ಮುಂದಿಡುತ್ತಾ ಈ ಲೇಖನಕ್ಕೆ ಮಂಗಳಹಾಡುತ್ತೇನೆ.



Monday, February 27, 2012

ಸಗ್ಗವೀ ವಸುಂಧರಾ !

ಸಗ್ಗವೀ ವಸುಂಧರಾ !

ಚಿಗುರು ಹೂವು ಕಾಯಿ ಹಣ್ಣು
ನಗದು ಲೋಕ ಸುಂದರ !
ಬಗೆಬಗೆಯಲಿ ಬದಲುಗೊಳುವ
ಸಗ್ಗವೀ ವಸುಂಧರಾ !!

ಜಲದ ಚಿಲುಮೆ ಹರಿದು ಮುಂದೆ
ವಲಯ ಮಲಯಗಳಲಿ ಸಾಗಿ
ಸಲಿಲ ಜಲಲಧಾರೆಯಾಗಿ
ನಲಿದು ಧುಮ್ಮಿಕ್ಕುತಾ |
ಒಲಿದ ಮಿಥುನಗಳವು ನಿಂದು
ಕಲೆಯುತಲ್ಲಿ ದೇವಳದಲಿ
ನಲಿವುದಂತು ದೃಶ್ಯಕಾವ್ಯ
ಕಲೆಯು ಹಿಗ್ಗಿ ಸೊಕ್ಕುತಾ ||

ವನದ ತುಂಬ ವೃಕ್ಷರಾಶಿ
ದಿನವು ಮೊಲ್ಲೆ ಹುಲ್ಲು ಹಸಿರು
ಮನಕೆ ಮುದವ ನೀಡ್ವ ರಂಗು
ಘನತರಂಗವೆಬ್ಬಿಸೀ |
ಜಿನುಗುತಿರುವ ಜೇನು ಮಿಸರೆ
ಗುನುಗು ದುಂಬಿನಾದ ತುಂಬಿ
ಸನಿಹ ನವಿಲ ನಾಟ್ಯ ಭಂಗಿ
ಬನದಿ ಗುಲ್ಲು ಹಬ್ಬಿಸೀ ||

ಕೆಂಪು ಹಳದಿ ಪಚ್ಚೆ ನೀಲಿ
ಗುಂಪಿನ ಬಂಗಾರ ಸೇರಿ
ತಂಪು ಸ್ಫಟಿಕ ಮುತ್ತು ಹವಳ
ಸೊಂಪಾಗಿಸಿ ಭರಣವ |
ಇಂಪಿನ ಸಂಗೀತ ಗಾನ
ಮಂಪರಿನಲು ಸುಖದ ಧ್ಯಾನ
ನೋಂಪಿ ನಾಂದಿ ಮಂತ್ರ ಘೋಷ
ಗಂಪಾಗಿಸಿ ಕರಣವ ||

ಗಿರಿ ಸಾಗರ ನದಿ ಪರ್ವತ
ಪುರಿ ದ್ವಾರಕೆ ಹರಿದ್ವಾರ
ಮರೆಯಲಪ್ಪುದೇ ಅಜಂತಾ
ಕರೆವ ಎಲ್ಲೋರವಾ ?
ಬರಿಯದಲ್ಲ ಶಿಲೆಯ ಕಬ್ಬ
ಹಿರಿದು ಹಂಪೆ ಹಳೆಬೀಡಲಿ
ಬರಿದೇ ಜನ್ಮತಳೆದ ಕಾವ್ಯ
ಹರಿದು ಬಂತು ಕಲರವ ||

Sunday, February 26, 2012

ಸತ್ಯಾನಂದ


ಸತ್ಯಾನಂದ

ಪೀಠಸ್ಥಾಪನೆ ಮಾಡುವ ಉದ್ದೇಶವೇ ಬೇರೆ ಎಂಬುದು ಭಕ್ತರಿಗೆ ತಿಳಿದರೆ ನಾಕಾರು ಜನರೂ ಇರಲಿಕ್ಕಿಲ್ಲ! ಅದಕ್ಕೇ ಉದ್ದೇಶ ವಿವರಿಸುವ ಗೋಜು ಯಾರಿಗೆ ಬೇಕು ? ಯಾರೋ ಒಂದಷ್ಟು ಜನ ಕೇಳಿದಾಗ ಅವರಲ್ಲಿ ಸಮಾನ ಮನಸ್ಕರನ್ನು ಆಯ್ದುಕೊಂಡು ಹತ್ತಿರಕ್ಕೆ ಬಿಟ್ಟುಕೊಂಡರೆ ಸರಿಯಪ್ಪ ! ಪೀಠವಿಲ್ಲದೇ ಯಾವುದನ್ನೂ ಸಾಧಿಸಲಾಗದು. ರಾಜಕೀಯದ ಕಳ್ಳ-ಖದೀಮರ ಕಪ್ಪುಹಣ ದೇಖರೇಖೆಯಲ್ಲಿ ಬಂದೋಬಸ್ತು ಮಾಡಿಡಲು ಅವರಿಗೂ ಜನಬೇಕು, ಜಾಗಬೇಕು. ಅಂತಹ ಜಾಗವನ್ನು ತಾನೇ ಸೃಷ್ಟಿ ಮಾಡಿಕೊಂಡುಬಿಟ್ಟರೆ ಹುಡುಕುವ ಕಣ್ಣುಗಳು ಸಾವಿರಾರು. ಅಲ್ಲಿಗೆ ತನ್ನ ಉದ್ದೇಶ ಸಾರ್ಥಕವೆಂದುಕೊಂಡ ಸತ್ಯಾನಂದ ಕಾವಿ ಶಾಟಿಯನ್ನು ಕೊಡವಿ ಮೇಲೆದ್ದ.

ಹೆಬ್ಬಂಡೆಯ ಹಾಸಿನಮೇಲೆ ಮೈಚಾಚುತ್ತಾ ಮತ್ತೆ ಮೆತ್ತಗೆ ಒರಗಿಕೊಂಡ ಸತ್ಯಾನಂದನಿಗೆ ಬಾಲ್ಯದ ನೆನಪುಗಳು. ಅಪ್ಪ-ಅಮ್ಮ-ಬಡತನ ಬಡತನ ಮತ್ತು ಬಡತನ ! ಎಳವೆಯಲ್ಲಿ ಓದು-ಬರಹ ಕಲಿಯಬೇಕಾಗಿದ್ದ ತನ್ನನ್ನು ದನಕಾಯಲು ಕಳುಹಿಸುವುದು ಅನಿವಾರ್ಯವಾಗಿತ್ತು. ಅಪ್ಪ-ಅಮ್ಮ ನಿತ್ಯದ ಕೂಳಿಗೇ ಪರದಾಡುವಾಗ ಇನ್ನೆಲ್ಲಿ ಓದಿಸಿಯಾರು? ಆದರೂ ಕಷ್ಟಪಟ್ಟು ಅಷ್ಟಿಷ್ಟು ಓದಿಸಲು ಮುಂದಾದರು. ಹಸಿರುಟ್ಟ ಹೊಲಗದ್ದೆಗಳ ನಡುವೆ ಬಿಸಿಲ ಬೋಳು ಗುಡ್ಡಗಳ ನಡುವೆ ಹಳ್ಳಿಯ ಬಾಲಕನಾಗಿದ್ದ ಸತ್ಯಾನಂದ ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಓರಗೆಯ ಬಾಲಕರ ಜೊತೆ ಸಿನಿಮಾ ನೋಡುತ್ತಿದ್ದ. ಆಹಹಾ...ಎಂತೆಂತಹ ಬಣ್ಣಬಣ್ಣದ ಸಿನಿಮಾಗಳು...ಕಾಣುವ ನಟ-ನಟಿಯರೆಲ್ಲಾ ದೇವ-ದೇವತೆಗಳ ಪ್ರತಿರೂಪದಂತೇ ಕಾಣುತ್ತಿದ್ದರೆ ಸತ್ಯ ತನ್ನನ್ನೇ ಮರೆಯುತ್ತಿದ್ದ! ವಾರಕ್ಕೊಮ್ಮೆಯಾದರೂ ಟೆಂಟ್ ಸಿನಿಮಾ ನೋಡದಿದ್ದರೆ ಊಟ ರುಚಿಸುತ್ತಿರಲಿಲ್ಲ. ಮನೆಯಲ್ಲಿ ಹೇಳಿಕೊಳ್ಳುವ ಹಾಗಿರಲೂ ಇಲ್ಲ!

ಬರುಬರುತ್ತಾ ಸತ್ಯನಿಗೆ ಹನ್ನೊಂದು-ಹನ್ನೆರಡು ವಯಸ್ಸು ಕಾಲಿಟ್ಟಿತು. ಸಿನಿಮಾ ಮಾತ್ರ ವಾರದ ಆರಾಧನೆಯಾಗಿ ಮುಂದುವರೆದೇ ಇತ್ತು. ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣುವ ನಾಯಕಿಯರು ಬಹಳ ಸುಂದರವಾಗಿದ್ದಾದರೂ ಯಾಕೆ ಎಂಬುದು ಅವನಿಗೇ ತಿಳಿಯುತ್ತಿರಲಿಲ್ಲ! ಸಿನಿಮಾ ಮುಗಿದು ವಾರಗಳೇ ಕೆಲವೊಮ್ಮೆ ತಿಂಗಳುಗಳೇ ಕಳೆದರೂ ಕೆಲವು ನಾಯಕಿಯರನ್ನು ಮರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಯಾಕೋ ನಾಯಕಿಯರನ್ನು ಹತ್ತಿರದಿಂದ ಕಾಣುವಾಸೆ, ಕೈಹಿಡಿಯುವಾಸೆ. ಆ ತುಡಿತದಲ್ಲೇ ಕೆಲವು ಕಾಲ ದೂಡುತ್ತಾ ದೂಡುತ್ತಾ ಹದಿಮೂರು ವಯಸ್ಸು ಕಳೆದು ಹದಿನಾಲ್ಕಕ್ಕೆ ಬಂತು. ಈಗ ಮಾತ್ರ ನಿಜಕ್ಕೂ ಒಳಗಿನ ತಹತಹ ತಾಳಲಾರದಾದ ಸತ್ಯಾನಂದ ದಿನವಿಡೀ ಸುಂದರಿಯರ ಕಲ್ಪನೆಯಲ್ಲೇ ಸುಸ್ತಾಗಿಹೋದ! ಊರಲ್ಲೆಲ್ಲಾ ಅಲೆದರೂ ಅಂತಹ ಸುಂದರ ಹುಡುಗಿಯರು ಎಲ್ಲೂ ಸಿಗುವುದಿಲ್ಲಾ ಎಂಬುದು ಆತನಿಗೆ ಗೊತ್ತು. ರಂಭೆ-ಊರ್ವಶಿ-ಅಪ್ಸರೆ-ಮೇನಕೆ ಆ..ಥೂ ..... ಎಲ್ಲರಿಗಿಂತಾ ಮೇಲು ಅಂಜಿತಾ ! ಸುಪುಷ್ಟವಾದ ಅವಳ ಉಬ್ಬುತಗ್ಗುಗಳನ್ನು ಕಣ್ತುಂಬ ತುಂಬಿಕೊಂಡ ಸತ್ಯ ನಿತ್ಯಾನುಷ್ಠಾನಕ್ಕೆ ತೊಡಗಿಬಿಟ್ಟ! ಅದು ತ್ರಿಕಾಲಪೂಜೆಯಲ್ಲ, ಸದಾ ಅದೇ ಧ್ಯಾನ-ಅದೇ ಮೌನ! ದೇವಿ ಅಂಜಿತಾ ’ಕಾಮೇಶ್ವರಿ’ಯ ಮೋಡಿ ಅಪಾರ-ಅವಳ ಮಹಿಮೆ ಅಪಾರ ಎಂದು ತಿಳಿದ ಸತ್ಯ ಸತ್ಯಾನ್ವೇಷಣೆಗಾಗಿ ’ರಮಣೀಚಲ’ ಪರ್ವತಕ್ಕೆ ತೆರಳಿ ತಪಸ್ಸಿಗೆ ಕೂತುಬಿಟ್ಟ!

ಅಪ್ಪ-ಅಮ್ಮ ಸಾಕಷ್ಟು ತಿಳಿಹೇಳಿದರು. ಮಗನೇ ಎಮ್ಮೆ ತೊಳೆದುಕೊಂಡು ದನಮೇಯಿಸಿಕೊಂಡು ಆರಾಮಾಗಿ ಸಂಸಾರಿಯಾಗಿ ಬದುಕಬೇಕಿದ್ದ ನಿನಗೆ ಸ್ವಲ್ಪ ವಿದ್ಯೆ ಕಲಿಸಿದ್ದರಿಂದ ನಮ್ಮ ಕೈಮೀರಿಹೋದೆಯಲ್ಲಾ... ನೀನು ಸಂಸಾರಿಯಾಗಿರಲಿ ಎಂದು ನಾವು ಬಯಸಿದ್ದರೆ ಎಲ್ಲವನ್ನೂ ಬಿಟ್ಟು ’ಸರ್ವಸಂಗ ಪರಿತ್ಯಾಗಿ’ಯಾಗಿ ಖಾವಿ ತೊಟ್ಟು ಬೆಟ್ಟವೇರಿಬಿಟ್ಟೆಯಲ್ಲಾ ಎಂದು ಪರಿತಪಿಸಿದರು. ಮರಳಿ ಕರೆದೊಯ್ಯಲು ಬಂದರು. ಆದರೆ ಸತ್ಯ ಮನಸ್ಸು ಮಾಡಲೇ ಇಲ್ಲ. ಅವನು ಸಾಕ್ಷಾತ್ ಅಂಜಿತಾ ’ಕಾಮೇಶ್ವರಿ’ಯಲ್ಲಿ ತನ್ನ ಕಣ್ಣುಗಳನ್ನು ನೆಟ್ಟಿದ್ದ. ಅಂಜಿತಾ ದೇವಿಯ ಭಕ್ತಿನಾದ ಆತನಿಗೆ ಅಂಜಿತಾ ಅಥವಾ ತತ್ಸಮಾನ ದೇವಿಯ/ದೇವಿಯರ ಸಾಕ್ಷಾತ್ಕಾರ ಆಗುವವರೆಗೂ ಆ ತಪಸ್ಸು ಬಿಟ್ಟು ಆತ ಮೇಲೇಳಲು ಸಿದ್ಧನಿರಲಿಲ್ಲ. ಹಗಲೆಲ್ಲಾ ಘೋರ ತಪಸ್ಸು! ಅಘೋರ ತಪಸ್ಸು !! ರಾತ್ರಿಯಾಯ್ತೆಂದರೆ ತಡೆಯಲಾರದ ಹುಮ್ಮಸ್ಸು! ಹಾರಿ ಕುಣಿವ ಗಮ್ಮತ್ತಿನ ಹುಮ್ಮಸ್ಸು! ಕುಂತಲ್ಲೇ ಹಾರುವುದೂ ಅಲ್ಲೇ ಕರಗತವಾಗಿಬಿಟ್ಟಿತು! ಮಗನ ಊಟ-ತಿಂಡಿಯ ಚಿಂತೆ ಹತ್ತಿದ ಮನೆಮಂದಿ ಕೆಲವುಕಾಲ ಅಲ್ಲಿಗೇ ಸಪ್ಲೈ ಮಾಡಿದರು. ಹೀಗಾಗಿ ತಪಸ್ಸು-ತಿಂಡಿ-ಊಟ-ಹಾರಾಟ, ತಪಸ್ಸು-ತಿಂಡಿ-ಊಟ-ಹಾರಾಟ ಇವಿಷ್ಟರಲ್ಲೇ ಕೆಲಕಾಲ ಕಳೆದ ಸತ್ಯನನ್ನು ಕಾಣಲು ಸುದ್ದಿಕೇಳಿದ ಸುತ್ತಲ ಗ್ರಾಮಗಳ ಜನ ನಿಧಾನವಾಗಿ ಒಬ್ಬೊಬ್ಬರೇ ಬರಹತ್ತಿದರು.

ಸ್ವಾಮಿಗಳು ಬಂದಿದ್ದಾರೆ ಎಂಬುದು ಸಹಜವಾಗಿ ಅನೇಕರಿಗೆ ಬಹಳ ಖುಷಿತರುವ ವಿಷಯವಾಗಿತ್ತು. ಏನೋ ತಮ್ಮ ಐಹಿಕ ಜೀವನದ ಕಷ್ಟನಷ್ಟಗಳಿಗೆ-ರೋಗರುಜಿನಗಳಿಗೆ ಪರಿಹಾರ ಕಲ್ಪಿಸಬಹುದೇನೋ ಎಂಬ ಆಸೆಕಂಗಳಿಂದ ಸ್ವಾಮಿಯನ್ನು ಖುದ್ದಾಗಿ ದರುಶನಮಾಡಲು ಜನ ಬಂದೇ ಬಂದರು! ಬಂದವರು ದಣಿದಿದ್ದರು. ಅಲ್ಲಿ ಕುಡಿಯಲು ನೀರಿಗೂ ತತ್ವಾರ. ಬಂದವರಲ್ಲೇ ಕೆಲವರು ಸೇವೆಗೆ ಒಂದು ಸಂಘ ಯಾಕೆ ಮಾಡಿಕೊಳ್ಳಬಾರದು? ಊಟ-ತಿಂಡಿ ವ್ಯವಸ್ಥೆಯನ್ನೂ ಮಾಡಿಕೊಂಡರೆ ಎಲ್ಲರಿಗೂ ಅನುಕೂಲ ಎಂಬ ಅನಿಸಿಕೆಯಿಂದ ಸ್ವಾಮಿಯ ಸೇವೆಗಿಂತ ಹೆಚ್ಚಾಗಿ ಬರುವ ’ಭಕ್ತರ’ ಸೇವೆಗಾಗಿ ಸಂಘ ಆರಂಭವಾಗಲೆಂದು ಸತ್ಯಾನಂದನಾಗಿ ಬದಲಾದ ಸತ್ಯ ಹೇಳಿಕೆಕೊಟ್ಟು ’ಅನುಗ್ರಹಿ’ಸಿದ! ಅಲ್ಲೇ ಸತ್ಯ ತನ್ನ ’ಅನುಕೂಲಗಳನ್ನೂ’ ಗ್ರಹಿಸಿದ! ಬಂದವರನ್ನು ತನ್ನ ಹತ್ತಿರವೇ ಇಟ್ಟುಕೊಳ್ಳಲು ಸ್ವಾಮಿ ಸರಳತೆಯನ್ನು ಮೆರೆದ; ನಿತ್ಯವೂ ಅದೇನು ಭಜನೆ, ಅದೇನು ಧ್ಯಾನ ಅಂತೀರಿ ! ಜನ ಬಾಯಿಂದ ಬಾಯಿಗೆ ಬಾಯಿಂದ ಬಾಯಿಗೆ ಹೇಳಿಕೊಂಡು ಸುದ್ದಿ ಬೆಂಕಿಯ ಕೆನ್ನಾಲಗೆಯಂತೇ ಬಹುಬೇಗ ಆವರಿಸಿಬಿಟ್ಟಿತು!

ಇಂತಿಪ್ಪ ಸ್ವಾಮಿಗೆ ಒಮ್ಮೆ ಕುಳಿತಲ್ಲೇ ಹೆಚ್ಚಿನಮಟ್ಟದ ’ಜ್ಞಾನೋದಯ’ವಾಯಿತು. ತಪಸ್ಸಿನ ಕೇಂದ್ರವನ್ನು ಈ ಕುಗ್ರಾಮದ ಬೋಳುಬೆಟ್ಟವಾದ ’ರಮಣೀಚಲ’ದಲ್ಲಿ ಇರಿಸುವುದಕ್ಕಿಂತಾ ಬೆಟ್ಟಹತ್ತುವ ತೊಂದರೆಯೇ ಇರದ ಜಾಗದ ಬಗ್ಗೆ ಚಿಂತನ-ಮಂಥನ ನಡೆಸುತ್ತಾ ಇದ್ದಾಗ ಬೆಂಗಳೂರಿನ ಪಕ್ಕದಲ್ಲೇ ಆದರೆ ’ಒಳ್ಳೊಳ್ಳೆಯ ಭಕ್ತರು’ ಬರಬಹುದೆಂಬ ಅನಿಸಿಕೆಯೂ ಆ ಕಾಲಕ್ಕೊದಗಿ ಸೈಂಧವಲವಣವನ್ನು ಅಭಿಮಂತ್ರಿಸಿ ಎದುರು ಹಿಡಿದಾಗ ಕಣ್ಣಿಗೆ ಗೋಚರವಾದದ್ದು : ಹಿಂದೆ ಅನೇಕ ಜನ್ಮಗಳಲ್ಲಿ ಸ್ವತಃ ತಾನೇ ತಪಸ್ಸಿದ್ಧಿಗೈದ ’ಪುಣ್ಯಕ್ಷೇತ್ರ’--’ಪರಿಧಿ’! ಪರಿಧಿಯಲ್ಲೇ ಪೀಠಸ್ಥಾಪನೆಯಾಗಿಬಿಟ್ಟರೆ ಬೆಳ್ಳನೆಯ ಜಿಂಕೆಗಳಂತಹ ಭಕ್ತರು ಜೀವನದ ಅದ್ಯಾವುದೋ ಘಳಿಗೆಯಲ್ಲಿ ಸೋತು ನಿಡುಸುಯ್ದು ಬರುವಾಗ ತಣ್ಣಗೆ ಕೈಯ್ಯಾಡಿಸಿದರೆ ಸಮಾಧಾನ ಅವರಿಗೂ ತನಗೂ ಆಗುತ್ತದೆಂಬ ’ಜ್ಞಾನಚಕ್ಷು’ವಿಗೆ ಗೋಚರಿಸಿದ ಸತ್ಯವನ್ನೇ ನೆಚ್ಚಿ ರಾಜಧಾನಿಯನ್ನು ಓ ಸಾರಿ ಸಾರಿ ತಪೋಭೂಮಿಯನ್ನು ಪರಿಧಿಗೆ ವರ್ಗಾಯಿಸುವುದಾಗಿ ಘೋಷಿಸಿಯೇ ಬಿಟ್ಟ.

ಪೀಠ ಎಂದಮೇಲೆ ಒಂದಷ್ಟು ಪೂಜೆ-ಪುನಸ್ಕಾರ ಅಂತೆಲ್ಲಾ ನಡೆಸಬೇಕಲ್ಲಾ ಎಂಬ ಕಾರಣದಿಂದ ಮಂತ್ರವೇ ಅಲ್ಲದ ಮಂತ್ರಗಳನ್ನು ಕಲಿತ ಮಹಾಸ್ವಾಮಿಗಳು ಪರಿಧಿಯಲ್ಲಿ ಧ್ವಜ ನೆಟ್ಟು ಪೀಠಸ್ಥಾಪನೆ ಗೈದರು. ಅಹೋರಾತ್ರಿ ಉತ್ಸವವೋ ಉತ್ಸವ ಉತ್ಸವವೋ ಉತ್ಸವ! ಊರಕಡೆಗಳಿಂದ ಬಂದ ’ಭಕ್ತರು’ ಬೆಂಗಳೂರಿನಲ್ಲಿರುವ ತಮ್ಮ ನೆಂಟರಿಷ್ಟರಿಗೂ ಸ್ನೇಹಿತರಿಗೂ ವಿಷಯ ತಲ್ಪಿಸಿಯೇ ತಲ್ಪಿಸಿದರು. ಭಾನುವಾರ ಉಂಡಾಡಿಗಳಾಗುವ ಬೆಂಗಳೂರಿನ ಕೆಲವು ಬ್ರೆಮ್ಮಚಾರಿಗಳು ಭೋ ಗುಡುತ್ತಾ ಓಡೋಡಿ ಬಂದವರೇ ’ಸಂಭೋ’ ಎಂದು ಬೋರಲು ಬಿದ್ದರು. ಕುಳಿತಲ್ಲೇ ವಿನಾಕಾರಣ ಪಕಪಕನೇ ನಗುತ್ತಿದ್ದ ಸತ್ಯಾನಂದರನ್ನು ಕಂಡು ಜನ್ಮಸಾರ್ಥಕ ಮಾಡಿಕೊಂಡರು! ಮನದಣಿಯೇ ಜಾಜ್-ಪಾಪ್-ಇಂಡಿಪಾಪ್-ರಾಕ್-ಸಲ್ಸಾ ಎಂಬೆಲ್ಲಾ ತೆರನಾದ ಕುಣಿತಗಳಲ್ಲಿ ಸತ್ಯಾನಂದರಿಗೆ ಸೇವೆ ಸಲ್ಲಿಸಿದರು. ಆನಂದತುಂದಿಲರಾದ ಸತ್ಯಾನಂದರು ಇದು ನಿತ್ಯೋತ್ಸವವಾಗಲಿ ಎಂದು ಅಪ್ಪಣೆಕೊಡಿಸಿದರು. ಇಲ್ಲಿ ಜಾತಿ-ಮತ-ಪಂಥ, ಸಂಪ್ರದಾಯ-ಮಡಿ-ಮೈಲಿಗೆ-ವೇಷಭೂಷಣ ಎಂಬ ಕಟ್ಟುಪಾಡುಗಳಿಲ್ಲಾ, ನೀವು ಏನೇ ಮಾಡಿದರೂ ಎಲ್ಲಾ ವೆಲ್ ಕಂ ಎಲ್ಲಾ ನಮ್ಮ ಸೇವೆಯೇ ಸರಿ ಎಂದ ಸತ್ಯಾನಂದರ ಕಣ್ಣುಗಳಲ್ಲಿ ಹೊಸಹುರುಪನ್ನು ಕಂಡ ಪಡ್ಡೆಗಳು ಗುರುವಿನ ಜೊತೆಗೇ ಪಕಪಕಪಕಪಕನೆ ನಕ್ಕವು!

ವರುಷವೊಂದೆರಡು ಕಳೆದಿರಲು ನಿಧಾನವಾಗಿ ಆ ಬ್ರೆಮ್ಮಜಾರಿಗಳ ಜೊತೆಗೆ ಗಾಂಜಾವಾಲಾಗಳೂ ಅಫೀಮಿನವರೂ ಜೊತೆಯಾದರು! ಬ್ರೆಮ್ಮಜಾರಿಗಳು ತಾವಿನ್ನು ಹೀಗಿದ್ದಿದ್ದು ಸಾಕೂ...ಇನ್ನು ಏನಾದ್ರೂ ಸಾಧಿಸಬೇಕು ಎಂದುಕೊಂಡರು. ಲಿವ್-ಇನ್ ಎಂಬ ಹೊಸಪೀಳಿಗೆಯ ಜೀವನಕ್ರಮವನ್ನು ಪೀಠಕ್ಕೆ ಪರಿಚಯಿಸಿದ ಖ್ಯಾತಿ ಈ ’ಭಕ್ತರಿ’ಗೇ ಸಲ್ಲಬೇಕು. ಈಗೀಗ ಬ್ರೆಮ್ಮಜಾರಿಗಳ ಜೊತೆಗೆ ಬ್ರೆಮ್ಮಜಾರಿಣಿಯರೂ ಬರತೊಡಗಿದರು! ವಿದೇಶೀ ಬ್ರೆಮ್ಮಜಾರಿಗಳೂ ಬ್ರೆಮ್ಮಜಾರಿಣಿಯರೂ ಬಂದರು! ಎಲ್ಲವೂ ಬ್ರೆಮ್ಮಮಯವಾಗಿ ಫಾರಿನ್ ವೈನುಗಳು ಘಮಘಮಿಸತೊಡಗಿದವು! ಎಲ್ಲೆಲ್ಲೂ ಜೈಜೈಕಾರ, ಎಲ್ಲೆಲ್ಲೂ ನಿತ್ಯ ನೃತ್ಯ! ಪರಿಧಿ ಆಶ್ರಮ ನಿತ್ಯ-ಸತ್ಯ-ನಿರಂತರವೆಂಬ ಸ್ಲೋಗನ್ನು ಹಾಕಿಕೊಂಡು ಧ್ಯಾನ ಮತ್ತು ತಪಸ್ಸು ಈ ಪದಗಳಿಗೆ ಹೊಸ ’ಆಯಾಮ’ವನ್ನೇ ಕೊಟ್ಟಿತು! ನಿತ್ಯವೂ ಸಮಾನಮನಸ್ಕ ಹೊಸಹೊಸ ’ಭಕ್ತರು’ ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ ಪರಿಧಿಯ ಪೀಠಕ್ಕೆ ಬರುತ್ತಲೇ ಇದ್ದರು. ಪರಿಧಿಯ ವ್ಯಾಪ್ತಿ ಭೂಮಿಯಲ್ಲೂ ಗಾಳಿಯಲ್ಲೂ ವಿಸ್ತಾರವಾಗಿ ಸಿನಿಮಾ ಮಂದಿ-ರಾಜಕಾರಣಿಗಳಿಗೂ ಇದರ ಗಂಧ ಬಡಿಯಿತು!

ಕೆಲವು ಸಿನಿಮಾಗಳಲ್ಲಿ ನೋಡಿದ್ದನ್ನೇ ನೋಡಿ ಬೇಸತ್ತ ಪ್ರೇಕ್ಷಕ ಬೇರೇ ತೋರ್ಸಿ ಎಂದು ಬಡಕೊಂಡಿದ್ದರಿಂದ ಮಾರ್ಕೆಟ್ಟು ಬಿದ್ದುಹೋದ ನಟಿಯರಲ್ಲಿ ಅಂಜಿತಾ ದೇವಿಯೂ ಒಬ್ಬಳು. ಅವಳ ಅಂಗಸೌಷ್ಠವವನ್ನೇ ಅಂದಕಾಲತ್ತಿಲ್ ನಮ್ಮ ಸತ್ಯಾನಂದರು ಬಯಸಿದ್ದಲ್ಲವೇ? ಹೊಸ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗದೇ ಇದ್ದುದರಿಂದ ಆರ್ಥಿಕ ಹಿನ್ನಡೆಯನ್ನು ಸತತ ಅನುಭವಿಸುತ್ತಿದ್ದ ಅಂಜಿತಾ ಪತಿಯ ಜೊತೆ ಜೀವಿಸುವುದೇ ಕಷ್ಟ ಎಂಬಂತಹ ಮಟ್ಟಕ್ಕೆ ಬಂದಿದ್ದಳು! ಲೆಕ್ಕಕ್ಕೆ ಪತಿಯಾದವ ನಟೀಮಣಿ ಪತ್ನಿಯ ಮಾತುಗಳಿಗೆಲ್ಲಾ ಅಸ್ತು ಅನ್ನುತ್ತಿರಲಿಲ್ಲವಾಗಿ ಹೆಸರಿಗೆ ಆದ ಮದುವೆ ಒಳಗೊಳಗೇ ಮುರಿದು ಬೀಳುವ ಹಂತ ತಲ್ಪಿತ್ತು. ಬೇಸರದಲ್ಲಿ ಬ್ರಹ್ಮಾಂಡ ಸುತ್ತುತ್ತಾ ಇದ್ದ ಅಂಜಿತಾಳಿಗೆ ಪರಿಧಿಯ ನಿತ್ಯಾನಂದರ ಪರದೆ ಸರಿಸಿದರೆ ಹೇಗೆ? -ಎಂಬ ವಿಚಾರ ಮನಸ್ಸಿಗೆ ಬಂತು! ಸಾಮಾನ್ಯವಾಗಿ ಈಗಿನ ಕಾಲಕ್ಕೆ ಹೊಸ ನಟಿಯರಿಗೆ ನಾಯಕಿ ಎಂದು ಸಿಗುವ ಅವಕಾಶ ಒಂದೋ ಎರಡೋ ಸಿನಿಮಾಗಳಿಗೆ ಮಾತ್ರ. ಆಮೇಲೆ ನೋಡುವ ನಮ್ಮ ಮಂದಿಗೂ ಬೇರೇ ಬೇಕು-ನಟಿಸುವ ನಾಯಕನಟ, ಸಹನಟ, ನಿರ್ದೇಶಕ, ನಿರ್ಮಾಪಕ ಎಲ್ಲರಿಗೂ ಬೇರೇ ಬೇಕು!--ಇದು ಸಿನಿಮಾ ರಂಗದ ನೆಳಲು-ಬೆಳಕಿನಾಟದ ನಿತ್ಯಸತ್ಯ! ಗೊತ್ತಿದ್ದೂ ಗೊತ್ತಿದ್ದೂ ತಮ್ಮ ಸೌಂದರ್ಯ-ನೇಮ್ ಆಂಡ್ ಫೇಮ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಇರುಳುಕಂಡ ಬಾವಿಗೆ ಹಗಲು ಉರುಳುವುದು ಇಂದಿನ ನಾಯಕಿಯರ ಇಚ್ಛಾಪ್ರಾರಬ್ಧ!

ಒಂದು ದಿನ ಪೀಠದಜನ ಬಾಗಿಲು ತೆಗೆಯುತ್ತಾರೆ ...ಏನಾಶ್ಚರ್ಯ : ಸ್ವತಃ ಅಂಜಿತಾ ದೇವಿ ಬಾಗಿಲಲ್ಲೇ ಪ್ರತ್ಯಕ್ಷವಾಗಿದ್ದಾಳೆ! ಆಶ್ರಮದ ಜನ ಒಳಗಡೆ ’ಧ್ಯಾನ’ಸ್ಥರಾಗಿದ್ದ ಸತ್ಯಾನಂದರೆಡೆಗೆ ಓಡಿಯೇ ಓಡಿದರು. " ಸತ್ಯಾನಂದ ಮಹಾಸ್ವಾಮಿಗಳೇ ಅಂಜಿತಾ ದೇವಿ ಬಂದಿದ್ದಾರೆ " ಎಂದಿದ್ದೇ ತಡ ಪೀಠದಿಂದ ಬೆಕ್ಕು ಹಾರಿದ ರೀತಿಯಲ್ಲಿ ಹಾರಿದ ಸತ್ಯಾನಂದರು ಆಶ್ರಮದ ಬಾಗಿಲಿಗೆ ತಾವೇ ತೆರಳಿ ಸ್ವಾಗತ ಕೋರಿದರು! ಬಂದಿರತಕ್ಕಂತಹ ಅಂಜಿತಾ ’ಕಾಮೇಶ್ವರಿ’ಯ ಸಾಕ್ಷಾತ್ ದರುಶನಮಾತ್ರದಿಂದ ಪುನೀತರಾದ ಸತ್ಯಾನಂದರು ಇರುವ ಮೂವತ್ತೆರಡು ಹಲ್ಲಿಗೆ ಮತ್ತೆರಡು ಹೆಚ್ಚಿಗೆ ಜೋಡಿಸಿದವರಂತೇ ಕಿವಿಯವರೆಗೂ ಬಾಯಿ ಚಿಲಿದರು! ನಗದೇ ವರ್ಷಗಳೇ ಕಳೆದಿದ್ದ ಅಂಜಿತಾ ಮನದಣಿಯೇ ’ಗುರು’ಗಳೊಂದಿಗೆ ನಕ್ಕಳು! ಸಮಾಗಮ ಬಹಳ ಸಂತೋಷಮಯವಾಗಿತ್ತು; ಆಶ್ರಮಕ್ಕೆ ಹೊಸ ಕಳೆಯೇ ಪ್ರಾಪ್ತವಾಗಿತ್ತು!

ಪೀಠಸ್ಥಾಪನೆಯಾಗಿ ವರ್ಷಗಳೇ ಕಳೆದರೂ ಆಪ್ತ ಸಹಾಯಕನಾಗಿ ಸತ್ಯಭಕ್ತಾನಂದನಾದ ತನಗೆ ಹೆಚ್ಚಿನ ಆದ್ಯತೆಯನ್ನಾಗಲೀ ತನ್ನ ಖರ್ಚಿಗೆ ಹೆಚ್ಚೆಂಬಷ್ಟು ಹಣವನ್ನಾಗಲೀ ನೀಡದೇ ಕೇವಲ ತನ್ನ ಸ್ವಾರ್ಥವನ್ನಷ್ಟೇ ನೋಡಿಕೊಳ್ಳುತ್ತಿದ್ದ ಸತ್ಯಾನಂದನನ್ನು ಕಂಡರೆ ಸತ್ಯಭಕ್ತಾನಂದನೊಬ್ಬನಿಗೆ ಈಗೀಗ ಅಷ್ಟಕ್ಕಷ್ಟೇ ಆಗಿತ್ತು. ಆಶ್ರಮದ ನಿತ್ಯ-ಸತ್ಯ ರಂಜನೀಯ ಕಥೆಗಳ ಸತ್ಯದರ್ಶನಮಾಡಿಕೊಂಡಿದ್ದ ಆತನಿಗೆ ’ಪೀಠ ಸೇವೆ ಸಾಕು’ ಎಂಬ ಭಾವ ಉದ್ಭವವಾಗಿತ್ತು. ವಯಸ್ಸೂ ಹೆಚ್ಚಾಗಿ ಸ್ವಂತ ಬುದ್ಧಿ ತುಸು ಬಲಿತು ಈ ಸಮಯದ ’ಸದುಪಯೋಗ’ ಮಾಡಿಕೊಳ್ಳುವ ರಾಜಕೀಯ ಬುದ್ಧಿಯೂ ಪ್ರಾಪ್ತವಾಗಿತ್ತು! ಪೀಠದ ಸಮಸ್ತ ವ್ಯವಹಾರಗಳನ್ನು ’ಗುರುಗಳಿ’ಗೆ ತೋರಿಸುವ ಟ್ರಾನ್ಸ್‍ಪರೆನ್ಸಿ ವ್ಯವಹಾರಕ್ಕಾಗಿ ಹೈಟೆಕ್ ಮಾಡಲು ಅನುಮತಿ ಪಡೆದ ಆತ ಎಲ್ಲೆಲ್ಲಾ ಕ್ಯಾಮೆರಾ ಇಟ್ಟಿದ್ದನೋ ಶಿವನೇ ಬಲ್ಲ-ಸತ್ಯನಿಗೆ ದೇವರಾಣೆ ಗೊತ್ತಿರಲಿಲ್ಲ! ಆನ್ ಲೈನ್ ದರ್ಶನ ಬುಕಿಂಗ್ ವ್ಯವಸ್ಥೆಯೂ ಇತ್ತು ! ಸರ್ವಾಂಗಸುಂದರ ಸತ್ಯಾನಂದರ ಸರ್ವಾಭರಣ ಪೂಜೆ, ಅಷ್ಟಾಂಗಸೇವೆ ಎಲ್ಲವೂ ಸೇರಿದಂತೇ ಶಯನೋತ್ಸವವನ್ನೂ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಸತ್ಯಭಕ್ತಾನಂದ ಕೈಗೊಂಡಿದ್ದು ಬಂದ ಹಾಲೀ ’ಭಕ್ತರಿ’ಗಾಗಲೀ ಅಲ್ಲಿರುವ ’ನಿತ್ಯಭಕ್ತ’ರಿಗಾಗಲೀ ತಿಳಿದಿರಲೇ ಇಲ್ಲ. " ಜೈ ಜಗದೀಶಹರೇ ಸ್ವಾಮಿ ಸತ್ಯಾನಂದ ಹರೇ ...." ಎಂದು ಬಿಲ್ಡಿಂಗು ಹರಿದುಬೀಳುವಂತೇ ಪ್ರಾರ್ಥಿನೆ ನಡೆಸಿ ಮುಖಕ್ಕೆ ಮಂಗಳಾರತಿ ಬೆಳಗುವ ಆ ’ಭಕ್ತರಿ’ಗೆ ಅವರವರ ಇಷ್ಟಾರ್ಥ ಅಲ್ಲಲ್ಲಿ ಪ್ರಾಪ್ತವಾಗುತ್ತಿತ್ತು!

ಒಳಗೊಳಗೇ ಉರಿದುಬೀಳುತ್ತಿದ್ದ ಸತ್ಯಭಕ್ತಾನಂದ ತನ್ನ ಕೊನೆಯ ಕರಾರನ್ನು ಖಡಾಖಂಡಿತವಾಗಿ ಸತ್ಯಾನಂದರಲ್ಲಿ ಹೇಳಿದ. " ನೀನು ಏನು ಮಾಡ್ಕೋತೀಯೋ ಮಾಡ್ಕೋ ಹೋಗು " ಎಂದು ಸತ್ಯಾನಂದರು ಆಶೀರ್ವದಿಸಿದ್ದು ಜಾಸ್ತಿ ಜೀರ್ಣವಾಗದೇ ಯಾವುದೋ ಮಾಧ್ಯಮದ ವಠಾರದಲ್ಲಿ ವಾಂತಿಮಾಡಿಕೊಂಡುಬಿಟ್ಟಿದ್ದಾನೆ! ಸಾಸಿವೆಯನ್ನು ಸಾಗರದಷ್ಟು ವಿಸ್ತರಿಸಬಲ್ಲ ಅಪರಮಿತ ತಾಕತ್ತುಳ್ಳ ಮಾಧ್ಯಮ ವಾಹಿನಿಗಳಲ್ಲಿ ದಿನಗಟ್ಟಲೆ ವಾರಗಟ್ಟಲೇ ಅದೇ ಕಥೆ ! ಸತ್ಯಾನಂದರ ’ತಪಸ್ಸಿ’ನ ಕಥೆ! ವಿಷಯ ಗಂಭೀರ ಎಂಬ ಕುರುಹು ತಿಳಿದ ಆಡಳಿತ ಪಕ್ಷದವರು ಸಂಬಂಧಿಸಿದವರನ್ನು ಆಶ್ರಮಕ್ಕೆ ದರ್ಶನಕ್ಕೆ ಕಳುಹಿದರೆ ಅಷ್ಟೊತ್ತಿಗಾಗಲೇ ಗಾಳಿಸುದ್ದಿ ಪಡೆದ ಸ್ವಾಮಿ ಸತ್ಯಾನಂದರು ಘೋರ ತಪಸ್ಸಿಗಾಗಿ ಹಲವು ಸಿಮ್ಮುಗಳ ಸಮೇತ ಹಿಮಾಲಕ್ಕೆ ತೆರಳಿಬಿಟ್ಟಿದ್ದರು!

ಅದು ಹೇಗೋ ಯಾವುದೋ ಆಧಾರ ದೊರೆತ ಕಾಲಜ್ಞಾನೀ ಪೋಲೀಸರು ಕೆಲವೊಮ್ಮೆ ಉತ್ತಮ ಕೆಲಸವನ್ನೂ ಮಾಡುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದು ಸತ್ಯಾನಂದರಿಗೆ ಕಷ್ಟವಾಗಿತ್ತು. ಜನ್ಮದಲೇ ಇಂತಹ ಶತ್ರುಗಳನ್ನು ಕಂಡಿರದ ಸತ್ಯಾನಂದರು ನಸುನಗುತ್ತಲೇ ತಾವು ’ಹುದುಗಿ ತಪಸ್ಸಿಗೆ’ ಕೂತಿದ್ದ ಸ್ಥಳದಿಂದ ನಿಧಾನವಾಗಿ ನಡೆತಂದರು! ಪೋಲೀಸರು ಕರೆದಲ್ಲೆಲ್ಲಾ ಹೋದರು! ರಾಜಕೀಯದವರ ಕೃಪೆಯಿಂದ ಸತ್ಯಾನಂದರಿಗೆ ಕಠಿಣ ಸಜೆಯಿರಲಿಲ್ಲ. ಅವರನ್ನು ಗೌರವಾನ್ವಿತ ಖೈದಿ ಎಂಬುದಾಗಿ ತಿಂಗಳುಗಳ ಕಾಲ ನಡೆಸಿಕೊಳ್ಳಲಾಯ್ತು!

ಹಲವು ಸರ್ಕಸ್ಸುಗಳನ್ನು ಮಾಡಿದ ಮಿಕ್ಕುಳಿದ ಸತ್ಯಭಕ್ತಾನಂದ ಸಮೂಹ ’ಗುರುಗಳನ್ನು’ ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವಲ್ಲಿ ಅಂತೂ ಯಶಸ್ವಿಯಾಯ್ತು! ಹೊರಗೆ ಬಂದ ’ಸ್ವಾಮಿಗಳು’ ಪಕಪಕಪಕಪಕನೇ ನಕ್ಕರು! ಮರುದಿನ ಪ್ರಾಯಶ್ಚಿತ್ತಕ್ಕಾಗಿ ಬೆಂಗಳೂರಿನ ಸುತ್ತ ಸಿಗುವ ಎಲ್ಲಾ ಅಂಗಡಿಗಳಲ್ಲಿ ಸಿಗಬಹುದಾದ ಸೀಮೆ ಎಣ್ಣೆ ಖರೀದಿಸಲಾಯ್ತು. ಉರುಟಾದ ಚಿಕ್ಕ ಅಗಳ ಹೊಡೆದು ಅದರಲ್ಲಿ ಕಟ್ಟಿಗೆ ತುಂಡುಗಳನ್ನು ಹಾಕಿ ಸೀಮೆ ಎಣ್ಣೆ ಸುರಿದು ’ಪಂಚಾಗ್ನಿ’ ಹೊತ್ತಿಸಿ ಸತ್ಯಾನಂದರು ರಾಮಾಯಣದ ಸೀತೆಯ ಅಗ್ನಿದಿವ್ಯಕ್ಕಿಂತಲೂ ಹೆಚ್ಚಿನ ಸತ್ವಪರೀಕ್ಷೆ ಎಂದು ಸ್ವಯಂ ಘೋಷಿಸಿದರು! ಮತ್ತೆ ಮಾಧ್ಯಮವಾಹಿನಿಗಳಿಗೆ ಹಬ್ಬವೋ ಹಬ್ಬ ! ಆಶ್ರಮಕ್ಕೆ ಎಲ್ಲಿಲ್ಲದ ಜನ !! ಮತ್ತೆ ಮುಖಕ್ಕೆ ಮಂಗಳಾರತಿ! "ಸಂಭೋ ಮಹಾದೇವ ಸತ್ಯಾನಂದ"!

ಅಂಜುತ್ತಲೇ ಇದ್ದ ಅಂಜಿತಾ ತನ್ನ ಸ್ವಾಮಿ ಜೈಲಿನಿಂದ ಹೊರಬರುವವರೆಗೂ ಅಜ್ಞಾತವಾಸ ಅನುಭವಿಸಿದಳು! ಸತ್ಯಾನಂದ ಬಂದ ಕೆಲವೇ ದಿನಗಳಲ್ಲಿ ಮಾಧ್ಯಮಕ್ಕೆ ಮುಖ ಕೊಟ್ಟ ಅಂಜಿತಾ ತಮ್ಮ ನಡುವೆ ಅಂಥಾದ್ದೇನೂ ನಡೆದಿರಲಿಲ್ಲ ಎಲ್ಲಾ ವೀಡಿಯೋ ಮಾರ್ಫಿಂಗು ಎಂದಳು ! ಥೂ ಹಾಳಾದ್ ನನ್ಮಗಂದು ಟೆಕ್ನಾಲಜಿ ಕೆಲವೊಮ್ಮೆ ಸದ್ಬಳಕೆಯಾದರೂ ಕೆಲವೊಮ್ಮೆ ದುರ್ಬಳಕೆಯಾಗುತ್ತದೆ ಎಂಬುದಕ್ಕೆ ಈ ಮಾರ್ಫಿಂಗ್ ಎಂದಿ ಜಾರಿಕೊಳ್ಳುವ ಕ್ರಿಯೆ ಉದಾಹರಣೆ ಆಗುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ! ಸಿಕ್ಕಿದ ಅಷ್ಟೂ ಸಿಡಿಗಳನ್ನೂ ವೀಡಿಯೋ ನೋಡಿ ಅದು ಒರಿಜಿನಲ್ಲೋ ಮಾರ್ಫಿಂಗೋ ಎಂದು ಹೇಳಲು ಪ್ರಯೋಗಾಲಯಕ್ಕೆ ಕಳಿಸಿದರು! ಪ್ರಯೋಗಾಲಯದಲ್ಲಿ ವೀಡಿಯೋ ಮಾರ್ಫಿಂಗ್ ಎಂಬ ವಿಷಯವೇ ಹೊಚ್ಚಹೊಸದು-ಅಲ್ಲಿ ಅದನ್ನು ಪರಿಶೀಲಿಸಲು ಅಂತಹ ಯಾವುದೇ ಉಪಕರಣ ಇನ್ನೂ ಸಿದ್ಧವಿಲ್ಲ--ಹೀಗಾಗಿ ಅಲ್ಲಿನ ಸಿಬ್ಬಂದಿ ಮುಖಮುಖ ನೋಡಿಕೊಂಡು ನಕ್ಕರು! ಅಂತೂ ವಿಷಯ ಸಮಂಜಸವಾಗಿ ಇತ್ಯರ್ಥವಾಗದೇ ’ಸತ್ಯಾನಂದರ ಕಥೆ’ ಸುಳ್ಳೆಂದು ತೀರ್ಮಾನಿಸಿದರು!

ಜೈಲಿನಿಂದ ಮರಳಿದ ಸತ್ಯಾನಂದರಿಗೆ ಕನಸಲ್ಲೂ ಹಾರಿಬೀಳುವ ಅನುಭವ! ನಿತ್ಯ ದುಃಸ್ವಪ್ನ ಆರಂಭವಾಗಿ ಕೆಲವು ರಾತ್ರಿ ನಿದ್ದೆಯನ್ನೇ ತೊರೆದರು. ಹೊಸ ಇಮೇಜಿನ ಬಿಲ್ಡಪ್ಪಿಗಾಗಿ ಹೊಸಹೊಸ ಯೋಜನೆಗಳನ್ನೂ ಆಯೋಜನೆಗಳನ್ನೂ ಆರಂಭಿಸಿದರು! ಕುಂಡೆಯೋಗವನ್ನೂ ಕಲಿಸಿ ಬಂದ ಭಕ್ತರು ತಾವಾಗಿಯೇ ಕುಳಿತಲ್ಲೇ ಹಾರುವುದನ್ನೂ ಕಲಿಸಿದರು! ಹೋದವರು ಹೋಗಲಿ ಬಾರದವರು ಬಾರದೇ ಇರಲಿ ಎಂದುಕೊಂಡ ಒಂದು ತೆರನಾದ ಸಮೂಹ ಇವತ್ತಿಗೂ ಅಲ್ಲಿ ತನ್ನ ನಿತ್ಯಸೇವೆಯನ್ನು ಜಾರಿಯಲ್ಲಿಟ್ಟಿದೆ. ಆಶ್ರಮದಲ್ಲಿ ರಾತ್ರಿ ವಿದ್ಯುತ್ ಸರ್ಕಿಟ್ ಬದಲಾಗಿಹೋಗುತ್ತದೆ! ಯಾವ ಕ್ಯಾಮೆರಾಗಳೂ ಕೆಲಸಮಾಡದಂತೇ ಅದರ ಪವರ್ ಆನ್ ಪೆಟ್ಟಿಗೆಯನ್ನು ಖಜಾನೆಗಿಂತಲೂ ಭದ್ರಪಡಿಸಿದ ಸತ್ಯಾನಂದರು ಕೀಲಿಯನ್ನು ಕಾವಿಶಾಟಿಯಲ್ಲೇ ಕಟ್ಟಿಕೊಂಡಿದ್ದಾರೆ! ಅಂಜಿತಾ ಮತ್ತೆ ಮತ್ತೆ ಬರುತ್ತಾ ತನ್ನ ’ದೈಹಿಕ ಕಾಯಿಲೆ’ಗೆ ಪರಿಹಾರ ಕಂಡುಕೊಂಡಿದ್ದಾಳೆ! ಒಂದಾನೊಂದು ಕಾಲಕ್ಕೆ ಸಿನಿಮಾಗಳಲ್ಲಿ ನೋಡಿದ, ನೋಡಿ ಪಡೆಯಲಾರದೇ ಕನವರಿಸಿ ಕಾತರಿಸಿ ಬಳಲಿದ್ದ ಬಾಲಕ ಸತ್ಯ ಸ್ವಲ್ಪ ತಡವಾದರೂ ಸತ್ಯಾನಂದರಾಗಿ ಅಂಜಿತಾ ಕಾಮೇಶ್ವರಿಯ ಸಾಕ್ಷಾತ್ ದರ್ಶನ ಭಾಗ್ಯವನ್ನು ಕಾಯಂ ಕಬ್ಜಾಕ್ಕೆ ಪಡೆದಿದ್ದು ನಿಜಕ್ಕೂ ಈ ಭುವಿಯ ’ಸಾಧಕರಿ’ಗೆ ಆಶ್ಚರ್ಯವಾಗಿದೆ!

Friday, February 24, 2012

ಒತ್ತಡ-ನಿಗ್ರಹ


ಒತ್ತಡ-ನಿಗ್ರಹ

ಅನುಗಾಲವೂ ಚಿಂತೆ ಈ ಜೀವ ಜೀವನಕೆ
ತನುಮನಕೆ ಇಲ್ಲ ಸುಖ ಎಲ್ಲ ಸಂದೇಹ
ಕನಸುಗಳು ಏರುತ್ತ ತಕತಕನೆ ಕುಣಿವಾಗ
ಮನಸು ಬಳಲುತಲಿಹುದು | ಜಗದಮಿತ್ರ

ಅಧಿಕಾರ ಬೇಕೆಂಬ ಆಸೆ ಒಂದೆಡೆಯಲ್ಲಿ
ಪದಕುಸಿವ ಭಯವಿಹುದು ಇನ್ನೊಂದು ಕಡೆಗೆ
ಬೆದಕುತ್ತ ಹಲವರಲಿ ಅಂಗಲಾಚುವ ಕಾಲ
ಬದುಕು ಹೋರಾಟವೈ | ಜಗದಮಿತ್ರ

ಒಡೆಯನಣತಿಯ ಮೀರೆ ಹದಗೆಡುಗು ಜೀವನವು
ಬಿಡುಗಡೆಗೆ ಬಯಸುವುದು ಸೋತ ತನುಮನವು
ಕಡೆಗೊಮ್ಮೆ ತನುವೆದುರು ಮನಸೋತು ಮಣಿದಾಗ
ಕೆಡುಗು ದೇಹಸ್ಥಿತಿಯು | ಜಗದಮಿತ್ರ

ಸಿರಿವಂತ ನೆಂಟರನು ಕಂಡೊಮ್ಮೆ ಕುಳಿತಾಗ
ಕರೆವಂತೆ ಧನಿಕನಾಗುವ ಆಸೆ ಮನಕೆ !
ಹರಸಾಹಸದಿ ನಿತ್ಯ ಹಣಗಳಿಸುವಾಸೆಯಲಿ
ತಿರುಚಿ ಕೊಂಬುದು ಹೃದಯ | ಜಗದಮಿತ್ರ

ಸತಿಯಾಸೆ ಅತಿಯಾಗೆ ಪತಿಗಧಿಕದೊತ್ತಡವು
ಪತಿಯಾಸೆ ಅತಿಯಾಗೆ ಸತಿಗಕ್ಕು ನೋವು
ಸತಿಪತಿಗಳಿಬ್ಬರಿಗೂ ಅತಿಯಾಸೆ ಜೋರಾಗೆ
ಕಥೆಗೆ ಮಂಗಳವಕ್ಕು ! ಜಗದಮಿತ್ರ

ಮಕ್ಕಳಿಗೆ ಶಿಕ್ಷಣದಿ ಹೆಚ್ಚು ಗುಣಪಡೆವಂತೆ
ಇಕ್ಕಳದ ಅಡಕೊತ್ತು ಇಟ್ಟು ಹೆದರಿಸುತ
ಹೊಕ್ಕಳಿನ ಬಳ್ಳಿಕೊಯ್ಯುವಮುಂಚೆಯೇ ಶಾಲೆ !
ಮಕ್ಕಳಾಟವೆ ಬದುಕು ? ಜಗದಮಿತ್ರ

ಯುಗಧರ್ಮ ನಗಧರ್ಮ ಆಗಿಹುದು ಈ ದಿನದಿ
ಬಗೆಬಗೆಯ ಹಾದಿಯಲಿ ಮೋಸ-ವಂಚನೆಯು !
ನಗುನಗುತ ಬಂದವರೆ ನುಗ್ಗಿ ಕದ್ದೊಯ್ಯುವರು
ನಗಕೆ ಚೋರರ ಭಯವು | ಜಗದಮಿತ್ರ

ನಿತ್ಯ ಕುಳಿತಾಗೊಮ್ಮೆ ಬರೆದು ಕರ್ಮಂಗಳನು
ಸತ್ಯ-ಮಿಥ್ಯದ ಲೆಕ್ಕ ಒಪ್ಪಿಸುತ ಮನಕೆ
ತಥ್ಯದೊಳ್ ಪರಮಾತ್ಮ ಅಡಗಿಹನು ಮನದೊಳಗೆ
ಪಥ್ಯ ಸರಳತೆ ಇಹಕೆ | ಜಗದಮಿತ್ರ

ತಾಪ-ತ್ರಯಗಳಿಂ ಬೇಯುವುದು ಜೀವನವು
ಕೋಪ ಮೋಹಾದಿ ಮದ-ಮಾತ್ಸರ್ಯ ಗುಣಗಳ್
ವ್ಯಾಪಾರ ನಡೆದಿಹುದು ನಮಗರಿವೆ ಇಲ್ಲದಲೆ
ದೀಪಬುಡ ಕತ್ತಲವು | ಜಗದಮಿತ್ರ

ಯೋಗ-ಧ್ಯಾನವು ಬೇಕು ಭೋಗವೈಖರಿ ಜೊತೆಗೆ
ಕಾಗೆ-ಕುನ್ನಿಗೆ ಹಾರ ಇಡಬೇಕು ಬದುಕೆ
ಸಾಗರವು ಸಂಸಾರ ಆಗುವುದು ಸಾಕಾರ
ನೀಗು ಒತ್ತಡ ನಿರತ | ಜಗದಮಿತ್ರ

Thursday, February 23, 2012

ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......


ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......

ರಾಜಾರಾಮನ ರಾಜಸಭೆ ಸೇರಿದೆ. ವಂದಿಮಾಗಧರು, ಪಂಡಿತ-ವಿದ್ವನ್ಮಣಿಗಳು, ಕಲಾವಿದರು, ಸಂಗೀತಗಾರರು, ಅರಮನೆ ಆಡಳಿತ ವರ್ಗ ಎಲ್ಲಾ ಸೇರಿದ ಶ್ರೀರಾಮನ ಒಡ್ಡೋಲಗ. ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿಂಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ ’ನಮ್ಮ ಕಾಲ ಸನ್ನಿಹಿತವಾಗಿದೆ’ ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೇನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ’ ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು’ ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಠಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ’ ರಾಮನ ಕೂಗ ’ ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ತೊರೆದುಹೋಗುವ ಕಾಲಕ್ಕೆ ಅಣ್ಣನನ್ನೊಮ್ಮೆ ಭಕ್ತಿಯಿಂದ ನೆನೆದುಕೊಂಡಿದ್ದಾನೆ.ಇದು ಮಹಾಕವಿ ವಾಲ್ಮೀಕಿ ಬರೆದ ರಾಮಾಯಣದ ಕಥಾಭಾಗ. ಹಿಂದೆಯೂ ನನ್ನೊಂದು ಕವನಕ್ಕೆ ಪೂರಕವಾಗಿ ಇದನ್ನು ಹೇಳಿದ್ದೆ.

ಇವತ್ತಿನ ನಮ್ಮ ರಾಜಕೀಯದ ಮಾಜಿಗಳ ಭೋಜನಾಂತರ್ಗತ ಸಂದೇಶವನ್ನು ಅನೇಕರು ಈಗಲೇ ತಿಳಿದಿದ್ದೇವೆ! ಹಣಬಲವೋ ಜನಬಲವೋ ಅಥವಾ ಹಣದ ಆಸೆಗೆ/ಅಧಿಕಾರದ ಅಸೆಗೆ ಹಲ್ಕಿರಿದು ಬರುವ ಗೋಸುಂಬೆ ತೆರನ ಬಾಲಬಡುಕರ ಬಲವೋ ರಾಜಕೀಯ ಸ್ಥಿತ್ಯಂತರ ಕಾಣುತ್ತಿದೆ! ನೆಲಗಳ್ಳತನದಲ್ಲಿ ಆರೋಪಗಳನ್ನು ಹೊತ್ತ ಯಡ್ಯೂರಪ್ಪ ಜನರ ಒತ್ತಡಕ್ಕೆ ಮಣಿದು ಖುರ್ಚಿ ಬಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದೊಮ್ಮೆ ಪಕ್ಷದ ಮುಖಂಡರು ಅಸ್ತು ಎನ್ನದಿದ್ದರೆ ಪಕ್ಷ ಒಡೆಯಲು ಸಿದ್ಧವಿರುವುದೂ ಅಷ್ಟೇ ’ಅಪಾರ’ದರ್ಶಕ ! ಯಾರ ಕೈಗೆ ಅಧಿಕಾರ ಕೊಟ್ಟು ಮೂಗುದಾರವನ್ನು ತನ್ನ ಕೈಲೇ ಇರಿಸಿಕೊಂಡು ಕುಣಿಸಬೇಕೆಂದುಕೊಂಡಿದ್ದಿತ್ತೋ ಹಿಂದೆ ಸ್ನೇಹಿತ, ಮಿತ್ರ, ಆಪ್ತ ಎನಿಸಿದ್ದ ಅದೇ ವ್ಯಕ್ತಿ-ಅನಾಯಾಸವಾಗಿ ತನಗೆ ಒದಗಿಬಂದ ಅವಕಾಶದಲ್ಲಿ ತನ್ನತನವನ್ನು ಮೆರೆದು ರಾಜ್ಯದ ಜನತೆಗೆ ಒಳಿತನ್ನು ಮಾಡಲು ಇನ್ನೇನು ಕೂರಬೇಕೆನ್ನುವ ಹೊತ್ತಲ್ಲೇ ಕಿಬ್ಬದಿಯ ಕೀಲು ಮುರಿದಂತೇ ಪರೋಕ್ಷ ಝಾಡಿಸಿ ಒದ್ದಿರುವುದು ಕಣ್ಣಲ್ಲಿ ಕಂಡರೂ ಪರಾಂಬರಿಸಬೇಕಿಲ್ಲದ ವಿಷಯ !

ಕೊಟ್ಟ ಒಂದು ಮಾತಿಗೆ ತಪ್ಪಿ ನಡೆದಿದ್ದಕ್ಕೆ ಶ್ರೀರಾಮ ಒಪ್ಪಿನಡೆದ; ತನಗತೀ ಪ್ರಿಯನಾಗಿದ್ದ ತಮ್ಮ ಲಕ್ಷ್ಮಣನನ್ನು ಅಗಲಿರಲಾರದ ಸ್ಥಿತಿಯಲ್ಲೂ ಅಗಲಿದ, ದೇಹಾಂತ ಶಿಕ್ಷೆ ವಿಧಿಸಿದ. ಅದರೆ ಅದು ಇಂದಿಗೆ ಕಥೆಯಾಗಿ ಪುಸ್ತಕವಾಗಿ ಕುಳಿತಿದೆಯೇ ಹೊರತು ಯಾರಿಗೆ ಆ ಆದರ್ಶ ಬೇಕಾಗಿದೆ ಸ್ವಾಮೀ ? ರಾಜೀನಾಮೆ ಕೊಟ್ಟು ಬೇಡವೆಂದು ಕಾಣಿಸಿಕೊಳ್ಳದೇ ಉತ್ತರಭಾರತಕ್ಕೆ ಓಡಿದರೂ ಅಂದಿನ ರಾಜ್ಯಪಾಲರು ಅದನ್ನು ಅಂಗೀಕರಿಸದೇ ಹಾಗೇ ಇರಿಸಿದ ಘಟನೆ ನಡೆದಿದ್ದು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ. ಅಂದಿನ ರಾಜಕೀಯದವರಿಗೆ ಕೊನೇ ಪಕ್ಷ ಒಂದು ರೀತಿ ಮರ್ಯಾದೆ ಇತ್ತು; ಇವತ್ತು ಮರ್ಯಾದೆ ಎಂದರೇನು ಎಂದು ರಾಜಕೀಯದವರೇ ನಮ್ಮನ್ನು ಹಂಗಿಸಲು ಮುಂದಾಗುತ್ತಾರೆ. ಎಂತೆಂಥವರಿದ್ದಾರೆ: ನೇರವಾಗಿ ವಿಧಾನಸೌಧದಲ್ಲೇ ಲಂಚ ಪಡೆದವರಿದ್ದಾರೆ, ಮಿತ್ರನ ಹೆಂಡತಿಯನ್ನು ಭೋಗಿಸಿದವರಿದ್ದಾರೆ, ನರ್ಸ್ ಗಳನ್ನು ಅಪ್ಪಿಮುದ್ದಾಡಿ ಕೋರ್ಟಿನಲ್ಲಿ ಅವಳೊಡನೆಯೇ ರಾಜಿಮಾಡಿಕೊಂಡ ಡ್ಯಾನ್ಸ್ ರಾಜಾಗಳಿದ್ದಾರೆ,ಶಾಸಕಾಂಗ ಸಭೆಯಲ್ಲೇ ಕೂತು ನೀಲಿಚಿತ್ರದ ಮಜಾ ತೆಗೆದುಕೊಂಡ ಮಹಿಮಾನ್ವಿತರಿದ್ದಾರೆ! ಸಾಕೋ ಬೇಕೋ ?

ಇವರನ್ನೆಲ್ಲಾ ಆಡಿಸಲು ತನ್ನಿಂದ ಸಾಧ್ಯವಾಗುವುದಿಲ್ಲಾ ಅದಕ್ಕೇ ತನಗೆ ಮುಖ್ಯಮಂತ್ರಿ ಗಾದಿ ಬೇಡಾ ಎಂದಿದ್ದರಂತೆ ದಿ| ವಿ.ಎಸ್.ಆಚಾರ್ಯ ! ಅವರ ದೂರಾಲೋಚನೆ ಎಷ್ಟು ನಿಜವಾಗಿದೆ ಅಲ್ಲವೇ? ಹಾಸಿಗೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ನುಸುಳಿಕೊಳ್ಳುವ ಮನೆಹಾಳ ನಿಸ್ಸೀಮರಿರುವಾಗ ಪ್ರಜಾರಾಜ್ಯದ ಪ್ರಜೆಗಳ ಸುಖ ಯಾರಿಗೆ ಬೇಕಾಗಿದೆ? ಕಥೆಯೊಂದು ಹೀಗಿದೆ : ಅಕ್ಬರ್ ರಾಜನಾಗಿದ್ದಾಗ ಅವನಿಗೆ ಚಾಣಾಕ್ಷ ಮಂತ್ರಿಯಾಗಿದ್ದಾತ ಬೀರ್ಬಲ್. ಒಮ್ಮೆ ರಾಜಭಕ್ತಿಯನ್ನು ಪರಿಶೀಲಿಸುವ ಆಸೆಯಿಂದ ಬೀರ್ಬಲ್ ಪ್ರಜೆಗಳಿಗೆ ಒಂದು ಪರೀಕ್ಷೆ ಒಡ್ಡಿದ. ಹೊಸದಾಗಿ ಕಟ್ಟಿಸಿದ ಟಾಕಿಯೊಂದಕ್ಕೆ ಮೇಲ್ಭಾಗದಲ್ಲಿ ಚಿಕ್ಕ ಕೊಳವೆಯ ಕಿಂಡಿಯೊಂದನ್ನು ಬಿಟ್ಟು ಪ್ರತಿಯೊಬ್ಬರೂ ಒಂದೊಂದು ಚೊಂಬು ಹಾಲು ಸುರಿಯುವಂತೇ ಡಂಗುರ ಹೊಡೆಸಿದ. ರಾಜನಮೇಲಿನ ನಿಚ್ಚಳ ಭಕ್ತಿಯಿದ್ದವರು ಕಮ್ಮಿ ಇದ್ದರು! ಅರೆಮನಸ್ಸಿನಿಂದಲೇ ರಾಜನ ಟಾಕಿಗೆ ಚೊಂಬು ಹಾಲನ್ನು ನಾವೇಕೆ ಸುರಿಯಬೇಕೆಂದುಕೊಂಡು ’ಹಲವರು ಹಾಲನ್ನು ಹಾಕಿದಾಗ ತಾನೊಬ್ಬನೇ ನೀರು ಹಾಕಿದರೆ ತಾನು ಹಾಕಿದ್ದು ಹಾಲೇ ಎಂದು ತಿಳಿಯುತ್ತಾರೆ, ಯಾರಿಗೂ ಗೊತ್ತಾಗುವುದಿಲ್ಲ’ ಎಂದುಕೊಂಡು ಮುಚ್ಚಿದ ಬಾಯ ಚೊಂಬು ಹಿಡಿದು ಒಬ್ಬೊಬ್ಬರೂ ನಿಧಾನವಾಗಿ ಬಿಟ್ಟೂ ಬಿಟ್ಟೂ ಬಂದು ಟಾಕಿಗೆ ಸುರುವಿದರು! ಗೊತ್ತಾದ ಹೊತ್ತಿಗೆ ಬೀರ್ಬಲ್ ಅಕ್ಬರನ ಎದುರಲ್ಲಿ ಟಾಕಿಯ ಕೆಳಭಾಗದ ನಳವನ್ನು ತಿರುಗಿಸಿದ್ದಾನೆ. ಏನಾಶ್ಚರ್ಯ ಪರಿಶುದ್ಧ ಗಂಗಾಭವಾನಿ ಹೊರಗೆ ಹರಿದು ಬಂದಿದ್ದಾಳೆ ! ಅಕ್ಬರನ ಕಾಲಕ್ಕೇ ಪ್ರಜೆಗಳು ಈ ರೀತಿ ಇದ್ದರೆಂದಮೇಲೆ ಇಂದಿನ ಪ್ರಜೆಗಳಲ್ಲಿ ತಾವು ಮಾಡಿಸಿಕೊಂಡು ಹೋಗುವ ಸರಕಾರೀ ಮೊಹರಿನ ಅವಶ್ಯಕತೆಯ ಕೆಲಸಗಳಿಗಾಗಿ ಲಂಚ ನೀಡದೇ ಇರುವವರೆಷ್ಟು? ತಾವೊಬ್ಬರೇ ಒಳಗಿಂದಲೇ ಮನೆಗೇ ಹೋಗಿ ಕೊಟ್ಟು ಕೆಲಸಮಾಡಿಸಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡ ಮಹನೀಯರೆಷ್ಟು ಎಂದು ಪ್ರಜೆಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಯಥಾ ಪ್ರಜಾ ತಥಾ ರಾಜಾ ಎಂದು ಸಂಸ್ಕೃತ ತನ್ನ ಹೇಳಿಕೆಯನ್ನು ಬದಲಿಸಿಕೊಳ್ಳಲು ಸೂಚಿಸಿದೆ, ಇದಕ್ಕೆ ಕಾರಣ: ಪ್ರಜಾಸತ್ತೆ! ಪ್ರಜೆ ಸಾಯದೇ ಬದುಕಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ತನ್ನೊಳಗೆ ಹರಿಶ್ಚಂದ್ರನನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವಾಗ ಪ್ರಜಾಮೂಲದಿಂದ ಲಂಚ ಎಂಬ ಶಬ್ದವೇ ನಾಶವಾಗುತ್ತದೋ ಆಗ ರಾಜಕೀಯ ಒಂದು ಹಿಡಿತಕ್ಕೆ ಬರುತ್ತದೆ. ಪ್ರಜಾರಾಜ್ಯಕ್ಕೊಂದು ಘನತೆ, ಮರ್ಯಾದೆ ಇರುತ್ತದೆ. ಮೇವು ಕಂಡಲ್ಲಿ ಪಶುವೊಂದು ಸಹಜವಾಗಿ ನುಗ್ಗುವಂತೇ ರಾಜಕೀಯ ಆಡುಂಬೊಲದಲ್ಲಿ ಧನದಾಹದ ಹೆಬ್ಬುಲಿಗಳೇ ಸೇರಿಕೊಂಡು ಆಡುಗಳು ಬಲಿಯಾಗಿವೆ! ಪ್ರಜಾಸತ್ತೆ ಎಂಬ ನದಿ ಮಲಿನವಾಗಿದೆ; ಕೆಲವು ಕಡೆ ಹೂಳುತುಂಬಿದೆ; ಇನ್ನೂ ಎಲವುಕಡೆ ನೀತಿ-ನಿಯಮಗಳೆಂಬ ನೀರಿಲ್ಲದ ಬರಡು ನದಿಯಾಗಿದೆ! ಸಾಕ್ಷಾತ್ ದೂರ್ವಾಸನೋ ಕಾಲಪುರುಷನೋ ಬಂದರೂ ಅವರಿಗೇ ತಿರುಮಂತ್ರ ಹಾಕುವ ಪ್ರತ್ಯಂಗಿರಾ ದೇವಿಯ ಕಳ್ಳ ಭಕ್ತರು ವಿಧಾನಸೌಧ ಸೇರಿದ್ದಾರೆ-ಸೂರೆ ಹೊಡೆಯುತ್ತಿದ್ದಾರೆ!

ಕೆಲವರು ೫೦ ವರ್ಷದಿಂದ ಮೇದರೆ ಇನ್ನೂ ಕೆಲವರು ೪೦ ರಿಂದ ಮತ್ತೆ ಕೆಲವರು ೩೦...೨೦..೧೦...೫ ಹೀಗೇ ಶಕ್ತ್ಯಾನುಸಾರ ಮೇಯುತ್ತಲೇ ಸಮಯ ಸರಿದುಹೋಗುತ್ತಿದೆ; ಬಡರೈತ, ಬಡಪ್ರಜೆ ಹೊತ್ತಿನ ತುತ್ತಿಗೂ ಅಲ್ಲಿಲ್ಲಿ ತೂರಾಡುತ್ತಾ ಕೈಒಡ್ಡುವ ಪ್ರಸಂಗ ನಡೆದೇ ಇದೆ. ಕಾಡುಗಳು ನಾಶವಾಗಿ ಕಾಡುಪ್ರಾಣಿಗಳು ಹಸಿದು ಊರಿಗೆ ನುಗ್ಗಿ ಹಳ್ಳಿಗಳ ರೈತರ ವಸಾಹತುಗಳನ್ನು ನಾಶಪಡಿಸಿದರೆ, ಕಾಡುನಾಶಕ್ಕೆ ಕಾರಣವನ್ನು ಹುಡುಕಿದರೆ ಇದೇ ಕಳ್ಳರು ಅಲ್ಲೂ ಸಿಗುತ್ತಾರೆ! ಒಂದುಕಾಲಕ್ಕೆ ಶ್ರೀಗಂಧ ಭರಿತ ನಾಡಾದ ಕರ್ನಾಟಕ ಇಂದು ಅಪರೂಪಕ್ಕೆ ಔಷಧಿಗೂ ಗಂಧದ ಮರಗಳು ಸಿಗದಂತಹ ಪ್ರದೇಶವಾಗಿದೆ! ಶ್ರೀಮಂತೆಯಾಗಿದ್ದ ಭೂಮಿಯಾಯಿಯ ಬಸಿರನ್ನೇ ಬಗೆದು ಅದಿರುಗಳನ್ನು ಬರಿದಾಗಿಗಿಸಿ ಕೈಚೆಲ್ಲುವ ಹಂತಕ್ಕೆ ಆಳುವ ಪ್ರಭುಗಳು ಮುನ್ನಡೆದಿದ್ದಾರೆ. ತಮ್ಮ ಖುರ್ಚಿ, ತಮ್ಮ ಬೊಕ್ಕಸ ಇವುಗಳ ಬಗ್ಗೆ ಮಾತ್ರ ಸದಾ ಆಸಕ್ತರಾದ ಈ ಖೂಳರಿಗೆ ಕೂಳೂ ಸಿಗದಂತೇ ಗಡೀಪಾರು ಮಾಡಬೇಕಾದ ಜನಸಾಮಾನ್ಯರಾದ ಮತದಾರರು ಆಡಳಿತ ಕೇಂದ್ರವಾದ ಬೆಂಗಳೂರಿಗೆ ಬರುವುದಕ್ಕೂ ಕಾಸಿಲ್ಲದ ಸ್ಥಿತಿಯಲ್ಲಿ ಮರುಗಿದ್ದಾರೆ. ಕೈಲಾಗದ ಅನಿವಾರ್ಯತೆಗೆ, ಚುನಾವಣೆಯ ಸಂದರ್ಭದ ಮುಖ ತೋರಿಸಿ ಹಲ್ಲುಗಿಂಜುವ ನೇತಾರ ಪುಡಿಗಾಸಿಗೆ ಕಯ್ಯೊಡ್ಡಿ, ಕುಡಿಸಿದ ಅಮಲಿನಲ್ಲಿ ಧಣಿಹೇಳಿದ ಗುರುತಿಗೆ ಒತ್ತುವ ದಯನೀಯ ಸ್ಥಿತಿಯಲ್ಲಿರುವ ಜನಾಂಗಕ್ಕೆ ತಿಳಿಸಿಹೇಳಿದರೂ ಅವರು ಅರಿಯುತ್ತಿಲ್ಲ; ತಿಳಿಸಿ ಹೇಳುವವರಿಗೂ ಇಷ್ಟವಿಲ್ಲ! ಸುಶಿಕ್ಷಿತರಿಗೆ ಮತದಾನವೇ ಬೇಡವಾದರೆ ಅಶಿಕ್ಷಿತರಿಗೆ ಮತದಾನ ಮತ್ತೆ ಮತ್ತೆ ಬರುವ ಹೆಂಡದ ಹಬ್ಬವಾಗಿದೆ!

’ನೀತಿ ಇದು’ ಎಂದು ಸರಿಯಾದ ಮಾರ್ಗದಲ್ಲಿ ನಡೆವ ಮನಸ್ಸುಳ್ಳ ಪ್ರಬುದ್ಧ ರಾಜಕಾರಣಿಗಳ ಸಂಖ್ಯೆ ಕಮ್ಮಿ ಇದೆ. ಅವರ ಮಾತು ನಡೆಯುತ್ತಿಲ್ಲ. ಅಪರಾಧ ಮಾಡದೇ ಇದ್ದರೂ ಅಪರಾಧಿಯಂತೇ ತಲೆತಗ್ಗಿಸಿ ಕೂರಬೇಕಾದ ಅಶೋಕವನದ ಸೀತೆಯ ಅರಣ್ಯ ರೋದನದಂತೇ ಒಬ್ಬಿಬ್ಬರು ಕೂಗುತ್ತಿದ್ದಾರೆ-ಅವರ ಕೂಗು ಯಾರಿಗೂ ಕೇಳಿಸುತ್ತಿಲ್ಲ! ಪಕ್ಷ-ಪಕ್ಷಗಳಲ್ಲಿ ಇದ್ದ ಕೆಟ್ಟ ರಾಜಕೀಯ ಪಕ್ಷಗಳಲ್ಲೇ ಬಣಗಳಾಗಿ ವಿಜೃಂಭಿಸಿ ಯಾರು ಮಿತ್ರ ಯಾರು ಶತ್ರು ಎಂಬೆಲ್ಲಾ ಕೆಟ್ಟ ಭಾವಗಳನ್ನು ಒಡಮೂಡಿಸಿ ಶಾಸಕಾಂಗ ಎಂಬುದೊಂದು ಡೊಂಬರಾಟದ ಕಂಪನಿಯಾಗಿದೆ, ಅದರ ಪ್ರೋತ್ಸಾಹದಿಂದ ನಡೆಯುವ ಸರಕಾರ ಸರ್ಕಸ್ ಕಂಪನಿಯಾಗಿದೆ! ಅನೀತಿಯನ್ನೇ ನೀತಿ ಎಂದು ಸಾರುವ ದುಡ್ಡಿನ ದೊಡ್ಡಪ್ಪಗಳು ಪ್ರಜಾಸೇವೆಗೆ ಇದ್ದ ಜಾಗವನ್ನು ರಾಜಕೀಯ ಇಂಡಸ್ಟ್ರಿ ಮಾಡಿದ್ದಾರೆ; ಅದರಿಂದ ಬೇಜ್ಜಾನು ಹಣ ಗುಂಜುತ್ತಾರೆ! ಅಧಿಕಾರ ಹಿಡಿದವರ ಹಾಗೂ ಅವರ ಬಂಟರ ಬಳಗಕ್ಕೇ ಖಾಸಗೀ ತಾಂತ್ರಿಕ/ಮೆಡಿಕಲ್ ಕಾಲೇಜುಗಳನ್ನು ನಡೆಸಲು ಅನುಮತಿ, ಪೆಟ್ರೋಲ್ ಬಂಕ್ ನಡೆಸಲು ಅನುಮತಿ ಇತ್ಯಾದಿಯಾಗಿ ಅಧಿಕ ಇಳುವರಿಯ ಆಯಕಟ್ಟಿನ ಜಾಗಗಳಲ್ಲಿ ಆ ಧನದಾಹೀ ಹುಲಿಗಳು ಅಡಗಿ ಕೂತಿವೆ; ಸದಾ ಮೇಯುತ್ತಲೇ ಇರುತ್ತವೆ!

ಗತಿ ಮುಂದಿನದೇನು? ಎಂದರೆ ಎಲ್ಲರೂ ಆಕಾಶದತ್ತ ಮುಖಮಾಡಿ ಬರಗಾಲದ ಭೂಮಿಯಲ್ಲಿ ಗದ್ದೆ ನಾಟಿ ಮಾಡಿಕೊಂಡು ಆಕಾಶದತ್ತ ಹಣುಕುವ ಬಡರೈತರಂತೇ ಕಾಣುತ್ತಾರೆ! ರಾಜಕೀಯದ ಇಂತಹ ಡೊಂಬರಾಟಗಳನ್ನು ನಿಯಂತ್ರಿಸುವ ಸಲುವಾಗಿ ಜನಲೋಕಪಾಲ ಮಸೂದೆ ಶೀಘ್ರ ಜಾರಿಗೆ ಬರಬೇಕಾಗಿದೆ. ಕೆಲವರು ಹೇಳುತ್ತಾರೆ ಮುದುಕು ರಾಜಕಾರಣಿಗಳು ಆಸ್ತಿ-ಪಾಸ್ತಿ ನ್ಯಾಯವತ್ತಾಗಿ ಮಾಡಿಕೊಂಡರು ಎಂದು; ಆ ಕಾಲಕ್ಕೆ ರೈಟ್ ಟಿ ಇನ್ಫಾರ್ಮೇಷನ್ ಆಕ್ಟ್ ಇರಲಿಲ್ಲ, ಲೋಕಾಯುಕ್ತ ಇರಲಿಲ್ಲ. ಹಾಗೊಮ್ಮೆ ಇದ್ದಿದ್ದರೆ, ಗಣಕಯಂತ್ರಗಳಲ್ಲಿ ಸರಕಾರೀ ಕಡತಗಳು ನೋಡಸಿಗುವಂತಿದ್ದರೆ ೫೦-೬೦ ವರ್ಷಗಳ ಕಾಲ ಯಾರೂ ಹಾಗೇ ರಾಜಕೀಯದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಆಗ ಗಂಟುಕಟ್ಟಿದವರು ಭದ್ರವಾದರು-ಈಗ ಬಂದವರು ಪ್ರಯತ್ನಿಸಿ ಕೆಲವರು ವಿಫಲರದರು; ಇನ್ನೂ ಕೆಲವರು ಉಂಡೂ-ಕೊಂಡೂ ಹೋದರು! ಯಾರ್ಯಾರು ಎಷ್ಟೆಷ್ಟು ನುಂಗಿದರು ಎಂಬುದಕ್ಕೆ ದಾಖಲೆ ಸಿಗದಂತೇ ಆಗಿಬಿಟ್ಟಿದೆ-ಹೀಗಾಗಿ ಅವರು ಗೆದ್ದೆವೆಂದು ವೃದ್ಧನಾರೀ ಪತಿವೃತೆ ಎಂಬಂತಾಡುತ್ತಿದ್ದಾರೆ. ಈ ರಾಜ್ಯದ ’ಮುತ್ಸದ್ಧಿಗಳು’ ಎನಿಸಿಕೊಳ್ಳುವ ಕೆಲವು ಮುದುಕರಿಗೆ 'ಮೊಸಳೆಕಣ್ಣೀರಿನ ಕರಾಮತ್ತು ಕೆಲಸಮಾಡುವುದು' ಗೊತ್ತಿದೆ! ಅಂತಹ ’ಮುತ್ಸದ್ಧಿಗಳು’ ರಾಜ್ಯಕ್ಕಾಗಿಯಾಗಲೀ ದೇಶಕ್ಕಾಗಿಯಾಗಲೀ ಕೊಟ್ಟ ಕೊಡುಗೆಗಳೇನೂ ಇಲ್ಲ!! ಪ್ರಜಾತಂತ್ರದಲ್ಲಿ ಪ್ರಜೆಗಳಿಂದ ಬಂದ ಹಣವನ್ನೇ ಪ್ರಜೆಗಳಿಗಾಗಿ ಸ್ವಲ್ಪವಾದರೂ ಪ್ರಾಯೋಗಿಕವಾಗಿ ಬಳಸಿದ್ದರೆ ಇಲ್ಲಿನವರೆಗೆ ಈ ಸ್ಥಿತಿ ಇರುತ್ತಿರಲಿಲ್ಲ! ಮೇಲಿನ ಟಾಕಿಗೆ ಹಾಲು ತುಂಬಿದ ಕಥೆಯಂತೇ ಆಳುವ ದೊರೆಗಳಲ್ಲಿ ಬಹುತೇಕರು ಟಾಕಿಗೆ ಸುರಿದಿದ್ದು ನೀರನ್ನೇ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದಂತೇ ಎತ್ತಣ ರಾಮಾಯಣ ಎತ್ತಣ ರಾಜಕಾರಣ ? ಯಾವುದೇ ರೀತಿ-ನೀತಿ ಇಲ್ಲದ ದುಷ್ಟರಿಂದ, ಲಜ್ಜೆಗೆಟ್ಟ ಪಾತಕಿಗಳೂ ಧನಪಿಶಾಚಿಗಳೂ ಕುಣಿಯುವ ರಂಗಸ್ಥಳವಾಗಿ ವಿಧಾನಸೌಧ ಆಶ್ರಯ ನೀಡುತ್ತಿದೆ. ತಮ್ಮನ್ನೇ ಸರಿಪಡಿಸಿಕೊಳ್ಳಲಾರದ ಜನ [ಯಾವುದೇ ಪಕ್ಷವಿರಲಿ]ಪ್ರಜೆಗಳ ಕುಂದುಕೊರತೆಗಳನ್ನು ಲಕ್ಷ್ಯಿಸುವರೇ? ಉತ್ತರವನ್ನು ನಿಮ್ಮೆಲ್ಲರ ಊಹೆಗೆ ಬಿಟ್ಟು ಪೂರ್ಣವಿರಾಮ ಹಾಕಿದ್ದೇನೆ.