ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 22, 2015

ಗುರು, ಪ್ರಭುತ್ವ ಮತ್ತು ಸ್ವಸ್ಥ ಸಮಾಜ

 ಗುರು, ಪ್ರಭುತ್ವ ಮತ್ತು ಸ್ವಸ್ಥ ಸಮಾಜ

ಅನ್ಯದೇಶದ ದೊರೆಯು ಮಹಾನ್ಸೈನ್ಯದೊಡಗೂಡಿ ನಡೆಸಿದ ಅಕಾಲಿಕ ದಾಳಿಗೆ ಹೆದರಿದ ರಾಜನೊಬ್ಬ ಕಾಡಿಗೆ ಪಲಾಯನ ಮಾಡಿದ. ಆ ರಾತ್ರಿ ಮರವೊಂದರ ಕೆಳಗೆ ನಿದ್ದೆಯಿಲ್ಲದೇ ಮಲಗಿದ್ದ ವೇಳೆ, ಕಾಗೆಗಳ ಗೂಡಿಗೆ ಗೂಬೆಗಳು ದಾಳಿ ಮಾಡಿ ಅವುಗಳನ್ನು ಕುಕ್ಕಿಕುಕ್ಕಿ ಬೀಳಿಸುತ್ತಿರುವುದನ್ನು ಕಂಡ. ಹಗಲಿನಲ್ಲಿ ಕಣ್ಣು  ಕಾಣಿಸದ ಗೂಬೆಗಳಿಗೆ ಕಾಗೆಗಳು ಕಾಟ ಕೊಡುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು. ನಿಸರ್ಗದಿಂದ ಈ ಪಾಠ ಕಲಿತ ರಾಜ, ತನ್ನ ಶಕ್ತಿ, ದೌರ್ಬಲ್ಯಗಳನ್ನು ಅನ್ಯದೇಶದ ದೊರೆಯ ಶಕ್ತಿ, ದೌರ್ಬಲ್ಯಗಳಿಗೆ ಹೋಲಿಸಿಕೊಂಡು ರಣತಂತ್ರ ರೂಪಿಸಿ, ಯುದ್ಧ ಹೂಡಿ ಗೆದ್ದ. ವೈರಿಯ ದೌರ್ಬಲ್ಯವನ್ನು ಹಾಗೂ ತನ್ನ ಸಾಮರ್ಥ್ಯಗಳನ್ನು ಲೆಕ್ಕದಲ್ಲಿಟ್ಟುಕೊಂಡು ವ್ಯೂಹವನ್ನು ರೂಪಿಸಬೇಕೆಂಬುದು ಚಾಣಕ್ಯ ನೀತಿ. ಜಗತ್ಪ್ರಸಿದ್ಧನಾದ ಚಾಣಕ್ಯ ದಕ್ಷಿಣ ಭಾರತದಿಂದ ಉತ್ತರದೆಡೆಗೆ ತೆರಳಿದ ಕಪ್ಪುಬಣ್ಣದ ಕುಬ್ಜ ಕಾಯದ ವ್ಯಕ್ತಿ ಎನ್ನಲಾಗುತ್ತದೆ. ಬುದ್ಧಿಮತ್ತೆಯಲ್ಲಿ ಅವನನ್ನು ಮೀರಿಸುವ ರಾಜನೀತಿಗಳನ್ನು ಬರೆದವರು ಕಾಣಿಸುವುದಿಲ್ಲ.

ರಾಜಸನೀತಿಗೆ ಚಾಣಕ್ಯ ತಂತ್ರವೆಂಬುದು ಸರಿ. ಆದರೆ ಯಾರಿಗೂ ಕೇಡನ್ನು ಬಯಸದ ಯೋಗಿಗೆ, ವಿರಾಗಿಗೆ, ಸನಾತನ ಧರ್ಮಗುರುವಿಗೆ ಚಾಣಕ್ಯನ ರಣತಂತ್ರಗಳು ಬೇಕಾಗುವುದಿಲ್ಲ. ಒಂದೊಮ್ಮೆ ಅಂತಹ ರಣತಂತ್ರಗಳನ್ನು ಆತ ಬಳಸಿದರೆ ಆತ ಯೋಗಿಯೂ ಅಲ್ಲ, ವಿರಾಗಿಯೂ ಅಲ್ಲ, ಸನಾತನ ಧರ್ಮಗುರುವಂತೂ ಆಗಲು ಸಾಧ್ಯವೇ ಇಲ್ಲ.

ಈ ಮಹಾನ್ ಭಾರತ ಕಾಲಕಾಲಕ್ಕೆ ಭಾರತವೆಂಬ ಹೆಸರನ್ನು ಪಡೆದುಕೊಳ್ಳಲು ಇಲ್ಲಿ ಆಳಿದ ಭರತ ಚಕ್ರವರ್ತಿಗಳೇ ಕಾರಣ ಎನ್ನಲಾಗುತ್ತದೆ. ರಾಮಾಯಣದಲ್ಲಿ ಇಕ್ಷ್ವಾಕು ವಂಶಜ ಭರತನಿಂದ ಭಾರತವೆಂದು ಹೆಸರಾದರೆ ಮಹಾಭಾರತದಲ್ಲಿ ದುಷ್ಯಂತ-ಶಕುಂತಲೆಯರ ಮಗ ಭರತನಿಂದ ಭಾರತ ಆ ಹೆಸರನ್ನು ಪಡೆದುಕೊಂಡಿತು; ಒಟ್ಟಿನಲ್ಲಿ ಅಸಮ ಸಾಹಸಿಗಳು, ಪ್ರಜಾರಂಜಕ ಚಕ್ರವರ್ತಿಗಳು, ಅರಸರು, ರಾಜರು, ಮಾಂಡಲಿಕರು, ಪಾಳೇಗಾರರು ಆಳಿದ ಭೂ ಪ್ರದೇಶ ಇದಾಗಿದೆ. ರಾಜಪ್ರಭುತ್ವದ ಕಾಲದಲ್ಲಿ ರಾಜನಿಗೆ ರಾಜಗುರುಗಳು ಎಂಬವರು ಇರುತ್ತಿದ್ದು, ರಾಜನಾದವ ಕಾಲಕಾಲಕ್ಕೆ ಅವರ ಸಲಹೆಗಳನ್ನು ಪಡೆದೇ ರಾಜನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ. ಅಂದಿನ ದಿನಮಾನದಲ್ಲಿ ಗುರು ಪದವಿಯನ್ನು ಅಲಂಕರಿಸಿದವರು ಭ್ರಷ್ಟರಾಗಿರಲಿಲ್ಲ. ಆಂತರ್ಯದಲ್ಲಿ ವಿರಾಗಿಗಳಾಗಿರುತ್ತಿದ್ದ ಅವರು ರಾಜ ಕರೆಸಿಕೊಂಡಾಗ ಮಾತ್ರ ಆಸ್ಥಾನಕ್ಕೆ ಬಂದು ಸಲಹೆಗಳನ್ನು ನೀಡುತ್ತಿದ್ದರು. ತಮ್ಮ ವೈರಾಗ್ಯ, ತ್ಯಾಗ, ತಪಸ್ಸು, ಪಾರಮಾರ್ಥ ಜ್ಞಾನದೃಷ್ಟಿ ಇವೆಲ್ಲವುಗಳಿಂದ ಸ್ವಾರ್ಥ ರಹಿತವಾದ ಸಲಹೆಗಳನ್ನು ನೀಡುತ್ತಿದ್ದರು. ಗುರುವೆಂಬಾತ ತಪ್ಪೆಸಗುವ ಪ್ರಮೇಯ ಇರಲೇ ಇಲ್ಲವೆನ್ನಬಹುದು. ಅಂತಹ ಗುರು ಕಂಡಕಂಡವರೆದುರು ಇಂದಿನ ಹರೆಯದ ಹುಡುಗಿಯರಂತೆ ಹಲ್ಲು ಚಿಲಿಯುತ್ತಿರಲಿಲ್ಲ. ಆಳರಸರು ತಪ್ಪೆಸಗಿದ್ದರೆ ಅದನ್ನು ಖಂಡಿಸುವುದಕ್ಕೂ ಹಿಂಜರಿಯುತ್ತಿರಲಿಲ್ಲ. 

ಅವ್ಯಕ್ತವಾದ, ಅವಿಲಂಬಿಯಾದ “ಬ್ರಹ್ಮನ್” ಎಂಬ ಶಕ್ತಿಯೊಂದರಿಂದ ಶ್ರೀಮನ್ನಾರಾಯಣ ಎಂಬ ರೂಪ ಮೊಳೆದು, ನಾರಾಯಣನ ನಾಭಿ ಕಮಲದಿಂದ ಚತುರ್ಮುಖ ಬ್ರಹ್ಮ ಹುಟ್ಟಿಕೊಂಡು ಅಲ್ಲಿಂದಾಚೆಗೆ ಈ ಸೃಷ್ಟಿಯ ನಿರ್ಮಾಣವಾಯಿತು ಎಂಬುದು ನಮ್ಮ ವೇದ ಮೂಲಗಳ ಅಭಿಪ್ರಾಯ. ಅಮೂರ್ತವಾದದ್ದನ್ನು ಧ್ಯಾನಿಸುವುದು ಜನಸಾಮಾನ್ಯರಿಗೆ ಕಷ್ಟವಾಗಬಹುದೆಂದು ನಂತರದ ಸ್ತರದ ಋಷಿಮುನಿಗಳು ಮೂರ್ತರೂಪದಲ್ಲಿ ಶಕ್ತಿಯನ್ನು ಆರಾಧಿಸಲು ರೂಪಗಳನ್ನು ಕಲ್ಪಿಸಿಕೊಂಡರು ಎಂಬುದು ವಿದಿತವಾಗುವ ವಿಷಯ. ಆಚಾರ್ಯ ಶಂಕರರು ಇದನ್ನೇ ಪ್ರತಿಪಾದಿಸಿದ್ದರು. ಆದರೆ ಇಂದಿನ ಜಗತ್ತಿನ ವಿಚಿತ್ರ ಬೆಳವಣಿಗೆಗೆ ಶಂಕರರು ಕಾರಣರಲ್ಲ.

ಶಂಕರರ ನಂತರದ ಜಗತ್ತಿನಲ್ಲಿ ಅವರ ಬೋಧನೆಗೆ ವಿರೋಧವಾಗಿ ಬಂದ ಅನೇಕಾನೇಕ  ಪಂಥಗಳಲ್ಲಿ, ಕೆಟ್ಟ ಸಂಪ್ರದಾಯಗಳಲ್ಲಿ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಕೆಲಸ, ಗುಂಪುಗಾರಿಕೆ ಎಲ್ಲವೂ ನಡೆದವು; ಸ್ವಾಮಿ ಎನಿಸಿದವರಿಗೆ ಹತ್ತಿರವಾದವರು ಎನಿಸಿಕೊಂಡು ಸಮಾಜದ ಮುಖಂಡರೆನಿಸಿಕೊಳ್ಳುತ್ತಿದ್ದ ಜನ ತಮ್ಮ ಕೆಟ್ಟ ನಡವಳಿಕೆಗಳಿಗೆ ವಿರೋಧ ವ್ಯಕ್ತಪಡಿಸುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿಸುತ್ತಿದ್ದರು. ಆ ಕಾಲಘಟ್ಟಗಳ ವಿಧವೆಯರ ಪಾಡಂತೂ ಹೇಳತೀರದು. ವಿಧವೆ ಇನ್ನೊಂದು ಮದುವೆಯಾದರೆ ಆಕೆ ತನಗೆ ಸಿಗಲಾರಳೆಂಬ ಕಾಮತೃಷೆಯುಳ್ಳ ಮುಖಂಡರು ಅವಳ ಕೇಶ ಮುಂಡನ, ಆಭರಣಗಳ ವಿಸರ್ಜನ ಕ್ರಿಯೆಗಳನ್ನು ನಡೆಸುತ್ತಿದ್ದರು. ವಿಧವೆಯರ ದುರ್ಬಲ ಘಳಿಗೆಗಳಲ್ಲಿ ಅವರನ್ನು ಬಳಸಿಕೊಂಡು, ಮಕ್ಕಳು ಜನಿಸಿದರೆ ಆ ವಿಧವೆ ಮತ್ತು ಹುಟ್ಟಿದ ಮಗು ಇಬ್ಬರೂ ಸಹ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ದೂರದಲ್ಲೆಲ್ಲೋ ಹೇಗೋ ಜೀವ ಹಿಡಿದಿರಬೇಕಾದ ಪ್ರಮೇಯವಿತ್ತು. ಘಟಶ್ರಾದ್ಧ ಮತ್ತು ಫಣಿಯಮ್ಮ ಎಂಬೆರಡು ಸಿನಿಮಾಗಳು ಬಹುತೇಕ ಇಂತಹ ಘಟನೆಗಳನ್ನೇ ಹೇಳುತ್ತವೆ. ಇಂದಿನಂತೆ ಎಲ್ಲರೂ ಋಜುಮಾರ್ಗದವರಾಗಿರದ್ದು, ಅಧುನಿಕ ರೀತಿಯ ಸಂವಹನ, ಸಾರಿಗೆ ಮತ್ತು ಸಾಗಾಟ ಮಾಧ್ಯಮಗಳು ಇಲ್ಲದ್ದು ಅಂದಿನ ಆ ದುರಾಡಳಿತಕ್ಕೆ ಕಾರಣವಾಗಿತ್ತು ಎನ್ನಬಹುದು. ಅಂದು ವಿನಾಕಾರಣ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ನೊಂದು ಸತ್ತವರೆಷ್ಟೋ ಅರಿವಿಲ್ಲ. ಆದರೆ ಧರ್ಮಗುರುವಾದವರು ಇಂತಹ  ಸಾಮಾಜಿಕ ಪಿಡುಗುಗಳಿಗೆ ಮಂಗಳ ಹಾಡಲಿಲ್ಲ ಎಂಬುದು ಅತ್ಯಂತ ಖೇದಕರ. 

ಯುಗದ ಪ್ರಭಾವವೋ ಎಂಬಂತೆ ಇಂದಿನದಿನಗಳಲ್ಲಿ ಕಾವಿ ವೇಷದ ಅನೇಕರು ಭ್ರಷ್ಟರಾಗಿರುವುದನ್ನು ಕಾಣುತ್ತಿದ್ದೇವೆ. ವೈದಿಕ ಸತ್ಸಂಪ್ರದಾಯದಲ್ಲಿ ಸನ್ಯಾಸ ದೀಕ್ಷೆ ಪಡೆಯುವ ವ್ಯಕ್ತಿಗೆ ಕೆಲವು ಅರ್ಹತೆಗಳ ಅವಶ್ಯಕತೆಯನ್ನು ಹೇಳಿದ್ದಾರೆ. ಆದರೆ ಅವುಗಳ ಗೋಜೇ ಇಲ್ಲದ ಕೆಲವು ಬಿಕನಾಸಿಗಳೂ ಕೂಡ ಇಂದು ಸನ್ಯಾಸಿಗಳಾಗುತ್ತಿದ್ದಾರೆ. ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದ ಕಾಲಮಾನದಲ್ಲೂ ಇನ್ನೂ ಸಹ ಕೆಲವೆಡೆ ಬಹಿಷ್ಕಾರಗಳು ಕಂಡುಬರುತ್ತವೆ ಎಂದರೆ ಸಮಾಜ ಯಾರ ನಿರ್ದೇಶನಕ್ಕೆ ಒಳಪಟ್ಟಿದೆ ಎಂಬುದು ತಿಳಿಯುತ್ತಿಲ್ಲ. ರಾಮಾಯಣ-ಮಹಾಭಾರತಗಳಂಥ ಪ್ರಾಗೈತಿಹಾಸಗಳನ್ನು ಓದಲು ನಮಗೆಲ್ಲಿದೆ ಸಮಯ? ಹೀಗಾಗಿ ನೀತಿಯಾವುದು-ಅನೀತಿಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ!

ವೇದ ವಿಂಗಡನಾ ಕಾಲದ ಘಟನೆಯೊಂದನ್ನು ನಾವಿಲ್ಲಿ ನೋಡೋಣ: ವ್ಯಾಸರಿಗೆ ವೈಶಂಪಾಯನ ಎಂಬ ಶಿಷ್ಯರೊಬ್ಬರಿದ್ದರು. ಸಂಪಾದಕರಾದ ವ್ಯಾಸರು ತಾವು ಸಂಪಾದಿಸಿದ ಯಜುರ್ವೇದಕ್ಕೆ-ಅದರ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕೆ ವೈಶಂಪಾಯನರನ್ನು ಆಚಾರ್ಯರನ್ನಾಗಿ ನೇಮಿಸಿದ್ದರು. ವೈಶಂಪಾಯನರಿಗೆ ಇದ್ದ ಅನೇಕ ಶಿಷ್ಯರಲ್ಲಿ ಯಾಜ್ಞವಲ್ಕ್ಯರೂ ಒಬ್ಬರು. ಯಾವುದೋ ಕಠಿಣವಾದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ಋಷಿಗಳೆಲ್ಲರೂ ಸಭೆ ಸೇರಬೇಕೆಂದೂ, ಸಭೆಗೆ ಬಾರದಿದ್ದವರು ಬ್ರಹ್ಮಹತ್ಯಾ ದೋಷದಿಂದ ಬಳಲಬೇಕೆಂದು ಠರಾವುಮಾಡಿಕೊಂಡು ಸಭೆ ನಡೆಸಿದರು. ಅದೇಕಾಲಕ್ಕೆ ಯಾಜ್ಞಿಕರಾಗಿ ಯಜ್ಞದೀಕ್ಷೆಯೊಂದರಲ್ಲಿ ನಿರತರಾಗಿದ್ದ ವೈಶಂಪಾಯನರಿಗೆ ಆ ಸಭೆಗೆ ಹೋಗಲಾಗಲಿಲ್ಲ. ಪರಿಣಾಮವಾಗಿ ಅವರು ಬ್ರಹ್ಮಹತ್ಯಾ ದೋಷವನ್ನು ಅನುಭವಿಸುವ ಬದಲು ಅದಕ್ಕೆ ಪ್ರಾಯಶ್ಚಿತ್ತ-ಪರಿಹಾರ ಮಾಡೋಣವೆಂದು ವೈಶಂಪಾಯನರ ಶಿಷ್ಯಂದಿರು ಗುರುವಿನ ಬಗೆಗೆ ಕಾಳಜಿ ವಹಿಸಿದರು. ಆ ಸಮಯದಲ್ಲಿ ಯಾಜ್ಞವಲ್ಕ್ಯರು "ದುರ್ಬಲರಾದ ಈ ಶಿಷ್ಯರೆಲ್ಲ ಏನು ಮಾಡಿಯಾರು? ಅವರೆಲ್ಲಾ ಸುಮ್ಮನಿದ್ದರೆ ನಾನೊಬ್ಬನೇ ಕಠಿಣ ವ್ರತವನ್ನು ನಡೆಸಿ ಗುರುಗಳಿಗೆ ಬಂದ ದೋಷವನ್ನು ಪರಿಹರಿಸುತ್ತೇನೆ" ಎಂದುಬಿಟ್ಟರು. ಇದರಿಂದ ಬೇಸರಗೊಂಡ ವೈಶಂಪಾಯನರು, "ನಮ್ಮಿಂದ ಕಲಿತ ವೇದವನ್ನು ನಮಗೇ ಮರಳಿಸಿ ನೀವು ಇಲ್ಲಿಂದ ಹೊರಡಿ" ಎಂದು ಯಾಜ್ಞವಲ್ಕ್ಯರಿಗೆ ಅಪ್ಪಣೆ ಮಾಡಿಬಿಟ್ಟರು. ಆಗ ಯಾಜ್ಞವಲ್ಕ್ಯರು ಅದನ್ನು ವಾಂತಿ ಮಾಡಿದರೆಂದೂ, ಉಳಿದ ಶಿಷ್ಯರು ತಿತ್ತಿರಿ ಎಂಬ ಹಕ್ಕಿಗಳಾಗಿ ಅದನ್ನು ತಿಂದು ಸಂಗ್ರಹಿಸಿಕೊಂಡರೆಂದೂ ಐತಿಹ್ಯವೊಂದು ಭಾಗವತದಲ್ಲಿ ಹೇಳಲ್ಪಟ್ಟಿದೆ.

ಈ ಘಟನೆಯ ನಂತರ ಸೂರ್ಯನ ಕುರಿತಾಗಿ ಘೋರ ತಪಸ್ಸನ್ನಾಚರಿಸಿದ ಯಾಜ್ಞವಲ್ಕ್ಯರು, ತಮ್ಮ ಗುರುಗಳಾದ ವೈಶಂಪಾಯನರಿಗೂ ತಿಳಿದಿರದ ವೇದಗಳನ್ನು  ಸೂರ್ಯನಿಂದ ಪಡೆದರೆಂದು ಭಾಗವತ ಪುರಾಣದ ಶ್ಲೋಕಗಳು ಹೇಳುತ್ತವೆ.  ತಾವು ಕಂಡ ವೇದವನ್ನು ತಮ್ಮ  ಶಿಷ್ಯರ ಮೂಲಕ ಯಾಜ್ಞವಲ್ಕ್ಯರು ಪ್ರಚಾರಮಾಡಿದರು. ಪ್ರಥಮವಾಗಿ ವೈಶಂಪಾಯನರಿಂದ ಪ್ರಚುರಗೊಳ್ಳಲ್ಪಟ್ಟ ಯಜುರ್ವೇದದ ಭಾಗವನ್ನು ಕೃಷ್ಣಯಜುರ್ವೇದವೆಂದೂ ಯಾಜ್ಞವಲ್ಕ್ಯರಿಂದ ಪ್ರಚುರಗೊಂಡ ಭಾಗವನ್ನು ಶುಕ್ಲ ಯಜುರ್ವೇದವೆಂದೂ ಪರಿಗಣಿಸಲಾಗಿದೆ.

-ಅಂದಿನ ಋಷಿಗಳು ಹೀಗೆ ತಮ್ಮನು ದಂಡಿಸಿಕೊಳ್ಳುತ್ತಿದ್ದರು. ಇಂದು ಇಂಥದ್ದನ್ನೆಲ್ಲ ಕಾಣುವುದು ಸಾಧ್ಯವೇ ಇಲ್ಲವೆಂಬಂತಹ ಸ್ಥಿತಿ ಬಂದುಬಿಟ್ಟಿದೆ. ರಾಜಪ್ರಭುತ್ವದ ಕಾಲದಲ್ಲಿ ಸಿಗುತ್ತಿದ್ದ ನ್ಯಾಯ-ನೀತಿ ಇಂದು ಪ್ರಜಾಪ್ರಭುತ್ವದಲ್ಲಿ ಸಿಗುತ್ತಿಲ್ಲ. ಪ್ರದೇಶವೊಂದಕ್ಕೆ ಇಂದು ಹಲವು ಮಾಂಡಲಿಕರಿದ್ದಾರೆ; ಆದರೆ ಯಾರೂ ಅರಸರಲ್ಲ. ಆಳುವವರಿದ್ದಾರೆ; ಅವರಲ್ಲಿ ಪ್ರಜಾಹಿತದ ಯಾವ ಉದ್ದೇಶವೂ ಇಲ್ಲ. ತಮ್ಮ ಥೈಲಿ ತುಂಬಿಸಿಕೊಳ್ಳುವುದಕ್ಕಾಗಿ, ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಾರಷ್ಟೆ. ಯಾವ ಅರ್ಹತೆಯೂ ಇಲ್ಲದೆ ಜಾತೀವಾರು ರಾಜಕೀಯಕ್ಕಾಗಿಯೇ ಹುಟ್ಟಿಕೊಂಡವರು “ಗುರು” ಮತ್ತು “ಗುರೂಜಿ” ಎನ್ನಿಸಿಕೊಳ್ಳುತ್ತ ತಮ್ಮ ಸಾಂಘಿಕ ತೋಳ್ಬಲದ ಸಂಕೇತವಾಗಿ ಆಳರಸರಿಗೆ ತಮಗೆ ತೋಚಿದ್ದನ್ನೇ ನೀತಿಯೆಂಬಂತೆ ಬೋಧಿಸುತ್ತಾರೆ! ಕಾವಿ ವೇಷ ಧರಿಸಿದವರಲ್ಲಿ ಧರ್ಮಬಾಹಿರರೂ, ನೀತಿಗೆಟ್ಟವರೂ, ಕಚ್ಚೆಹರುಕರೂ ಸೇರಿಕೊಂಡಿದ್ದಾರೆ.

ಗುರು ಎಂಬುದೊಂದು ಪದವಿ, ಅದು ತ್ಯಾಗ ಮತ್ತು ತಪಸ್ಸಿನಿಂದ ಸಿದ್ಧಿಸುವಂಥದ್ದೇ ಹೊರತು ಲೌಕಿಕವಾಗಿ ಕೊಡಲ್ಪಡುವ ಗೌರವ ಡಾಕ್ಟರೇಟ್ ಅಲ್ಲ! ದೀಕ್ಷೆ ಪಡೆದಂದಿನಿಂದ ವ್ಯಕ್ತಿ ಸನ್ಯಾಸಿಯೆನಿಸಿದರೂ ಗುರುತ್ವದ ಸಲ್ಲಕ್ಷಣಗಳು ಆತನಲ್ಲಿ ಜಾಗೃತವಾಗಿರುವುದಿಲ್ಲ. ಅದನ್ನು ಜಾಗೃತಗೊಳಿಸಿಕೊಳ್ಳಲಾರದವರು ಪವಾಡದ ಕಥೆಗಳನ್ನು ಹೆಣೆಯಲಿಕ್ಕೆ ತಮ್ಮ ರಾಜಕೀಯ ಬಳಗವನ್ನು ಬಳಸಿಕೊಳ್ಳುತ್ತಾರೆ.    

ಸನ್ಯಾಸಿಯಾಗಲು ಇರಬೇಕಾದ ಮೊದಲ ಅರ್ಹತೆಯೇ ಧರ್ಮಾತ್ಮನೆನಿಸುವುದು. ಯಾರು ಕಾಯಾ-ವಾಚಾ-ಮನಸಾ[ತ್ರಿಕರಣ] ಮೂರು ಸ್ತರಗಳಲ್ಲೂ ಒಂದೇ ವಿಧದ ಸಚ್ಚಾರಿತ್ರ್ಯ ಉಳ್ಳವರೋ ಅವರೇ ಧರ್ಮಾತ್ಮರೆನಿಸುತ್ತಾರೆಂದು ಪ್ರಕಾಂಡ ಪಂಡಿತರಾಗಿದ್ದ ಧಾರವಾಡದ ಭಾಲಚಂದ್ರ ಶಾಸ್ತ್ರಿಗಳು ಹೇಳಿದ್ದರು. ತ್ರಿಕರಣದಲ್ಲೂ ಭಿನ್ನತೆಯನ್ನೇ ಹೊಂದಿರುವ ವ್ಯಕ್ತಿಯನ್ನು ಸನ್ಯಾಸಿಯೆಂದು ಆತನಿಗೆ ಜೈಕಾರ ಹಾಕುತ್ತ ತಿರುಗುವುದರಿಂದ ಸಾಮಾಜಿಕ ಸ್ಸಾಸ್ಥ್ಯ ಹಾಳಾಗುತ್ತದೆ ಎಂಬುದನ್ನು ಗಮನಿಸಬೇಕು. ಭಕಸನ್ಯಾಸಿಯ ಕಥೆಯನ್ನು ಕೇಳಿದ್ದೀರಲ್ಲ? ಹಾಗೆ. ಢೋಂಗಿ ಸನ್ಯಾಸಿಗಳನ್ನು ಆರಾಧಿಸುವುದು ಮತ್ತು ಅಂಥವರಿಂದ ಪ್ರಧಾನ ವಿಗ್ರಹಗಳಿಗೆ ಅರ್ಚನೆ ಸಲ್ಲಿಸುವುದು ವಿರೋಧಾಭಾಸಕ್ಕೆ ಕಾರಣವಾಗುತ್ತದೆ. ಪ್ರತಿಯೊಂದು ವ್ಯಕ್ತಿಯ ದೇಹದ ಸುತ್ತ ಪ್ರಭಾವಲಯವೊಂದು ಇರುತ್ತದೆ ಎಂದು ವಿಜ್ಞಾನವೇ ಒಪ್ಪಿಕೊಂಡಿದೆ; ಅವರವರ ಧನಾತ್ಮಕ ಯಾ ಋಣಾತ್ಮಕ ಅರ್ಹತೆಗೆ ತಕ್ಕಂತೆ ಪ್ರಭಾವಲಯದ ಗಾತ್ರ ಮತ್ತು ಬಣ್ಣಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಋಣಾತ್ಮಕತೆಯಿಂದ ಕೂಡಿದ ವ್ಯಕ್ತಿ ಧನಾತ್ಮಕತೆಯಿಂದ ಕೂಡಿದ ವ್ಯಕ್ತಿಯ/ಕ್ಷೇತ್ರದ ಸಂಸರ್ಗ ಮಾಡುವುದರಿಂದ ಧನಾತ್ಮಕತೆಯಿರುವ ವ್ಯಕ್ತಿ/ಸ್ಥಳದ ಧನಾತ್ಮಕತೆಯಲ್ಲಿ ಕಡಿತವುಂಟಾಗುತ್ತದೆ. ಧನಾತ್ಮಕತೆಯನ್ನು ಮರಳಿ ಸಂಪಾದಿಸಲು ವ್ಯಕ್ತಿಯಾದರೆ ತ್ರಿಕರಣ ಶುದ್ಧಿಯಿಂದ ತಪಸ್ಸು ಅಥವಾ ಕ್ಷೇತ್ರವಾದರೆ ಕಲಾವೃದ್ಧಿ ಹವನವನ್ನು ಮಾಡಬೇಕಾಗುತ್ತದೆ. ಈ ಕಾರಣದಿಂದಲೇ ಮಡಿ-ಮೈಲಿಗೆ ಎಂಬ ಸಂಪ್ರದಾಯ ಜಾರಿಗೆ ಬಂದಿದೆ ಎನ್ನಬಹುದು. [ಇದು ಅಸ್ಪೃಶ್ಯತೆಗೆ ಕಾರಣವಲ್ಲ] ಇದನ್ನಾವುದನ್ನೂ ಪರಿಗಣಿಸದೇ ಎಲ್ಲರೂ ತಮತಮಗೆ ತೋಚಿದ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದರಿಂದ ನಿಜವಾದ ಧರ್ಮಗುರು ಯಾರೆಂಬುದನ್ನು ಅರಿಯುವ ಅರ್ಹತೆಯನ್ನೇ ಸಮಾಜ ಕಳೆದುಕೊಂಡಿದೆ.

ಮೇಲಾಗಿ, ಸನ್ಯಾಸಿಯಾದವನು ಅರಿಷಡ್ವರ್ಗಗಳನ್ನು ಮೆಟ್ಟಿ ನಿಲ್ಲದಿದ್ದರೆ ಆತನನ್ನು ಸನ್ಯಾಸಿಯೆಂದು ಒಪ್ಪಿಕೊಳ್ಳಲೇಬಾರದು. ಯಾವುದೇ ಸನ್ಯಾಸಿ ಸಮಾಜದಲ್ಲಿ ಒಡಕನ್ನು ಉಂಟುಮಾಡಿ ಪಕ್ಷ-ಪಂಗಡ ಕಟ್ಟಿಕೊಂಡು, ಸಮಾಜದಲ್ಲಿ ಯಾರಿಗೇ ಆಗಲಿ, ವಿರೋಧವನ್ನು ವ್ಯಕ್ತ ಪಡಿಸಿದರೆ ಆತ ಢೋಂಗಿಯೆಂದು ಆ ಕ್ಷಣದಲ್ಲೇ ನಿರ್ಧರಿಸಬೇಕು. ನಿಜವಾದ ಸನ್ಯಾಸಿಗೆ ವೈರಿಗಳಿರುವುದಿಲ್ಲ; ತಪ್ಪಿತಸ್ಥರಿದ್ದರೆ ಆತ ಕರೆದು ತಿಳುವಳಿಕೆ ಹೇಳುವ ಸ್ಥಾನದಲ್ಲಿರುತ್ತಾನೆ. ಅನ್ಯರನ್ನು ತಿದ್ದುವ ಅರ್ಹತೆಯನ್ನು ಪರಿಶ್ರಮದಿಂದ ಪಡೆದುಕೊಂಡಿರುತ್ತಾನೆ. ವಿಪರ್ಯಾಸವೆಂದರೆ ಇಂದು ಕೆಲವು ಸಮಾಜ ಘಾತುಕರು ಕಾವಿ ವೇಷಗಳನ್ನು ತೊಟ್ಟಿದ್ದಾರೆ; ಉಳಿದ ಬಣ್ಣದ ವೇಷಗಳಲ್ಲೂ ಅಲ್ಲಲ್ಲಿ ಇದ್ದಾರೆನ್ನಿ. ಆದರೆ ಅಂಥವರ್ಯಾರೂ ಧರ್ಮಗುರುವೆನಿಸುವುದು ಸಾಧ್ಯವಿಲ್ಲ. ಅವರ ತೀಟೆಗೆ ತಕ್ಕಂತೆ ಅವರು ಜಗದ್ಗುರುವೆಂದಾದರೂ ಹೆಸರಿಟ್ಟುಕೊಳ್ಳಲಿ ಮಹಾಸಂಸ್ಥಾನ-ಪೀಠ ಎಂದೆಲ್ಲ ಹೆಸರಿಟ್ಟುಕೊಳ್ಳಲಿ-ಜಗದ್ಗುರುವಾಗುವ ನಿಜವಾದ ಅರ್ಹತೆ ತೋಳ್ಬಲದಲ್ಲಿಲ್ಲ; ಜಗದ್ಗುರುವಾಗುವ ಅರ್ಹತೆಯಿರುವುದು ಜಗತ್ತಿನ ಎಲ್ಲರಿಗೂ ಹಿತವನ್ನು ಬಯಸುವ ಆತ್ಮೋನ್ನತಿಯಿಂದ, ಕೌಶಿಕ ವಿಶ್ವಾಮಿತ್ರನಾಗುವ ಮುನ್ನ “ಬ್ರಹ್ಮ ತೇಜಂ ಬಲಂ ಬಲಂ” ಎಂದಿದ್ದನ್ನು ನೀವಿಲ್ಲಿ ನೆನೆದುಕೊಳ್ಳಬಹುದು.    

Friday, March 13, 2015

ಹುಲಿಯ ಚರ್ಮ ಧರಿಸಿದ ಮಾತ್ರಕ್ಕೆ................!!













ಹುಲಿಯ ಚರ್ಮ ಧರಿಸಿದ ಮಾತ್ರಕ್ಕೆ................!!

ಇದು ನಿಮಗೆಲ್ಲ ಗೊತ್ತೇ ಇರುವ ಪಂಚತಂತ್ರದ ಕಥೆ: ಇಂತಹ ಕಥೆಗಳನ್ನು ಅದೆಷ್ಟು ಸರ್ತಿ ಕೇಳಿದರೂ ರಂಜನೀಯ-ಸರಳ ನೀತಿ ಬೋಧಕವಾಗಿರುವುದರಿಂದ ಬೇಸರವೆನಿಸಲಾರದು. ಶುದ್ಧವಸ್ತ್ರನೆಂಬ ರಜಕ ನಿತ್ಯ ಬಟ್ಟೆಹೊರುವ ಕಾಯಕಕ್ಕೆ ಬಡಕಲು ಗಂಡು ಕತ್ತೆಯನ್ನು ಸಾಕಿಕೊಂಡಿದ್ದ. ಒಮ್ಮೆ ಹಾಗೆ ಹೋಗುತ್ತಿರುವಾಗ ಸತ್ತುಬಿದ್ದ ಹುಲಿಯೊಂದನ್ನು ಕಂಡವನೇ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದ. ಸತ್ತ ಹುಲಿಯ ಚರ್ಮವನ್ನು ಸುಲಿದು ಕತ್ತೆಯ ಶರೀರಕ್ಕೆ ಅದನ್ನು ಸುತ್ತಿ, ರಾತ್ರಿಯ ಹೊತ್ತು ಹತ್ತಿರದ ಹೊಲಗಳಿಗೆ ಮೇಯಲು ಬಿಟ್ಟ. ರೈತರು ಹುಲಿಯೆಂದು ಹೆದರಿ ಸುಮ್ಮನಿರುತ್ತಾರೆ, ತನ್ನ ಕತ್ತೆ ಚೆನ್ನಾಗಿ ಮೇಯ್ದು ದಷ್ಟ ಪುಷ್ಟವಾಗುತ್ತದೆ ಎಂಬುದು ಆವನ ಅನಿಸಿಕೆ. ರಜಕನ ಕತ್ತೆ ಭತ್ತ,ಕಬ್ಬು, ತೊಗರಿ,ಹುರುಳಿ, ಅವರೆ ಇವೇ ಮುಂತಾದ ಹೊಲಗಳಿಗೆ ನುಗ್ಗಿ ನಿರ್ಭಯವಾಗಿ ಬಯಸಿದ್ದನ್ನು ತಿನ್ನತೊಡಗಿತು. ಒಂದು ಬೆಳಗಿನ ಜಾವ ಇನ್ನಾವುದೋ ಹೆಣ್ಣು ಕತ್ತೆಯೊಂದು ಅಲ್ಲಿಗೆ ಮೇಯಲು ಬಂದು ಕೂಗತೊಡಗಿದ್ದನ್ನು ಕಂಡ ಮಡಿವಾಳನ ಕತ್ತೆ, ಹೆಣ್ಣು ಕತ್ತೆಯ ಹತ್ತಿರಕ್ಕೆ ತೆರಳಿ ಮೂಸುತ್ತ ತಾನೂ ಗಾರ್ದಭಗಾನ ಆರಂಭಿಸಿತು. ತಾವು ಕಂಡಿದ್ದು ಹುಲಿಯ ವೇಷದ ಕತ್ತೆಯನ್ನು ಎಂಬ ಅಸಲೀಯತ್ತು ಗೊತ್ತಾದಾಗ ಹೊಲಗಳ ರೈತರು ದೊಣ್ಣೆಗಳನ್ನು ತಂದು ಕತ್ತೆಗೆ ಸನ್ಮಾನ ಮಾಡಿದರು. ಅವಸರದಲ್ಲಿ ಸತ್ತೆನೋ ಇದ್ದೆನೋ ಎನ್ನುತ್ತಾ ಓಡುವಾಗ ಮಡಿವಾಳನ ಕತ್ತೆಯ ಹುಲಿಚರ್ಮ ಎಲ್ಲಿಯೋ ಬಿದ್ದು ಹೋಯಿತು. 

ಜನಜೀವನದಲ್ಲಿ ಅಪಾತ್ರರು ಪಾತ್ರರಾದಾಗ ಈ ಕಥೆ ಹೇಳಲ್ಪಡುತ್ತದೆ. ಅಪಾತ್ರರನ್ನು ಎಲ್ಲಿಡಬೇಕೋ ಅಲ್ಲಿಯೇ ಇಡುವುದನ್ನು ಬಿಟ್ಟು ಅವರನ್ನು ಘನತೆವೆತ್ತವರೆಂದೇ ಮೆರೆಯಿಸುವ ಕೆಲಸದಲ್ಲಿ ಕೆಲವರು ತೊಡಗಿಕೊಳ್ಳುತ್ತಾರೆ. ಅದೊಂದು ಥರದ ಬಿಸಿ ತುಪ್ಪದ ಕಥೆ. ತುಪ್ಪ ಬಿಸಿ ಇರುವಾಗ ನುಂಗಿದರೆ ಗಂಟಲು ಸುಡುತ್ತದೆ; ಉಗುಳಿದರೆ ತುಪ್ಪ ಯಾರಿಗೂ ಇಲ್ಲದೇ ಹಾಳಾಗಿ ಹೋಗುತ್ತದೆ. ಕೇವಲ ಬಿಸಿ ತುಪ್ಪವೊಂದೇ ಅಲ್ಲ; ಜಡ್ಡುತುಪ್ಪವೂ ಹಾಗೇ. [ನಮ್ಮಲ್ಲಿ ನಾರುವ ತುಪ್ಪವನ್ನು “ಜಡ್ಡುತುಪ್ಪ” ಎನ್ನುತ್ತೇವೆ; ಶಾರ್ಟ್ ಆಗಿ ‘ವಿಟೆಮಿನ್ ಝಡ್’ ಎಂದೂ ಕರೆಯುವುದುಂಟು] ಅಪರೂಪಕ್ಕೆ ಯಾರದೋ ಮನೆಗೆ ಹೋದಾಗ ಸತ್ಕಾರದಲ್ಲಿ [ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ತಾವೇ ಇಷ್ಟಪಟ್ಟು ತಯಾರಿಸಿಟ್ಟುಕೊಂಡ] ತುಪ್ಪವನ್ನು ಬಡಿಸಿಬಿಡುತ್ತಾರೆ. ಅರಿವಿಲ್ಲದೇ ಬಾಯಿಗೆ ಸೇರುವ ಅಂತಹ ತುಪ್ಪ ಕೂಡ ಒಳಗೂ ಹೋಗುವುದಿಲ್ಲ-ಹೊರಗೂ ಹೋಗಲಾರದಲ್ಲ! ನುಂಗಿದರೆ ಅರೆಕ್ಷಣದಲ್ಲಿ ವಾಂತಿ ಉಚಿತ; ಉಗುಳಿದರೆ ಆ ಮನೆಯವರು ಹಿಂದುಗಡೆ ಆಡಿಕೊಳ್ಳುವುದೂ ಖಚಿತ!! 


ಅಪಾತ್ರರಿಗೆ ದಾನವನ್ನೂ ಕೊಡಬಾರದು ಎಂಬುದೊಂದು ಹೇಳಿಕೆಯಿದೆ. ದಾನ ತೆಗೆದುಕೊಳ್ಳುವವನಿಗೆ ದಾನದ ಮಹತ್ವ ತಿಳಿದಿರಬೇಕು ಎಂದರ್ಥ. ಕೊಡುವ ದಾನ ಕೂಡ ಉಪಯೋಗಕ್ಕೆ ಬರುವ ಧನ-ಕನಕ-ದವಸ-ಧಾನ್ಯಾದಿ ವಸ್ತು ವಿಶೇಷಗಳಿಂದಲೇ ಕೂಡಿರಬೇಕೇ ಹೊರತು, ಹಾಲು ಹಿಂಡದ ಗೊಡ್ಡು ಹಸುವಿನಂಥದ್ದನ್ನು ದಾನ ಮಾಡಬಾರದು ಎಂಬುದು ನಿಯಮ. ರಾಜಕಾರಣದಲ್ಲಿರುವವರು ಸಾಮಾನ್ಯವಾಗಿ ತಮಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳಲು ಹೇಗಾದರೂ ಪ್ರಯತ್ನಿಸಿ ಅನೇಕಸಲ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂಬುದು ಹಲವರ ಅನಿಸಿಕೆ; ಯಾಕೆಂದರೆ ಈ ನೆಲದಲ್ಲಿ ಮಿಕ್ಕವರಿಗೆ ಅನ್ವಯಿಸುವ ಕಾನೂನು ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲ; ಅಪಾರ ಧನಿಕರೆನಿಸಿದವರಿಗೂ ಹಾಗೇ! 

ಕೆಲವೊಮ್ಮೆ ಅರ್ಹರೂ ತಮಗೆ ಅರ್ಹವಾದ ಸ್ಥಾನವನ್ನು ಅಲಂಕರಿಸಲು ಒಪ್ಪದ ಸನ್ನಿವೇಶಗಳಿರುತ್ತವೆ. ಅಜಾತಶತ್ರುವೆನಿಸಿದ ವಾಜಪೇಯಿಯವರು ತಮ್ಮದೇ ಕೇಂದ್ರ ಸರ್ಕಾರ ಆಡಳಿತದಲ್ಲಿದ್ದಾಗ ಭಾರತರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ತಾವೇ ಶಿಫಾರಸು ಮಾಡಿಕೊಳ್ಳಲು ಬರುತ್ತಿತ್ತು; ಹಾಗೆ ಮಾಡಲು ಅವರ ಸಹೋದ್ಯೋಗಿಗಳು ಸಲಹೆ ನೀಡಿದ್ದರೂ ವಾಜಪೇಯಿಯವರು ಹಾಗೆ ಮಾಡಲಿಲ್ಲ. ವಾಜಪೇಯಿಯಂತಹ ರಾಜಕಾರಣಿಗಳು ಶತಕೋಟಿಗೊಬ್ಬರು ಎನ್ನಬಹುದೇನೋ. ಈ ಸರ್ತಿ ಅವರಿಗೆ ‘ಭಾರತರತ್ನ’ ಪುರಸ್ಕಾರವನ್ನು ಘೋಷಿಸಲಾಯ್ತು ಎಂಬುದು ಹೆಮ್ಮೆ. ಇದರಿಂದ ‘ಭಾರತರತ್ನ’ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ. 
 
ಯಾವುದೇ ರಂಗವನ್ನು ತೆಗೆದುಕೊಳ್ಳಿ, ‘ಊರಿದ್ದಲ್ಲಿ ಹೊಲಸು ಇದ್ದಿದ್ದೇ’ ಎಂಬಂತೆ ಎಲ್ಲೆಡೆಯೂ ಕೆಲವು ಅಸಮರ್ಪಕ ಸಂಗತಿಗಳನ್ನು ಕಾಣುತ್ತೇವೆ. ಈ ಹಿಂದೆ ಕರ್ನಾಟಕದಲ್ಲಿ “ಗೌಡಾ” ಪಡೆಯುವವರ ಹಾವಳಿ ಹೆಚ್ಚಿತ್ತು! ಗೊತ್ತಿಲ್ಲದ ಜಗತ್ತಿನ ಯಾವುದೋ ದೇಶದವರು ನಮಗೇ ಗೊತ್ತಿಲ್ಲದ ನಮ್ಮ ನಾಡಿನ ‘ಮಹಾನುಭಾವ’ರ ‘ಘನಂದಾರಿ’ ಕೆಲಸಗಳನ್ನು ಅಲ್ಲಿಂದಲೇ ಕಂಡು, ಗುರುತಿಸಿ, ‘ಗೌಡಾ’ ಕೊಟ್ಟು ಕಳುಹಿಸುತ್ತಿದ್ದರು; ದುಬಾರಿ ಮೊತ್ತಕ್ಕೆ ಖರೀಸಿದಿಸಿದ್ದರೂ ಖರೀದಿಸಿದ್ದು ಬಹಿರಂಗ ಗೊಳ್ಳದ್ದದಿಂದ, ಮುಗುಮ್ಮಾಗಿ ಕಪ್ಪು ಗೌನಿನಲ್ಲಿ ನಿಂತು ಮುಖದಲ್ಲಿ ಹೊಸ ಖದರ್ ತೋರಿಸಿರುವುದೆಲ್ಲ ಈಗ ಹಳೆಯ ಸಂಗತಿ ಬಿಡಿ. ಅದಷ್ಟೇ ಅಲ್ಲ; ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳಲ್ಲೂ ಹೀಗೇನೇ ‘ಗೌಡಾ’ ಕೊಡುವ ವ್ಯವಸ್ಥೆ ಕೆಲಕೆಲವು ಕುಲಪತಿಗಳ ಸುಪರ್ದಿಯಲ್ಲಿ ನಡೆಯುತ್ತದೆ ಎಂಬ ಗುಸುಗುಸು ಟಿಸಿಲೊಡೆದು “ಢಂ” ಎನ್ನಿಸಲು ಯಾರಿಗೂ ಆಸಕ್ತಿಯಿರದೆ “ಠುಸ್” ಆಗಿಹೋಯ್ತಾದರೂ ಎಲ್ಲವನ್ನೂ ಕುಳಿತಲ್ಲೇ ಅಳೆಯುವ ಜನರ ಮನಸ್ಸಿಗೆ ಗೊತ್ತಿದೆ. 

“ಕೊಡುವುದೇನು? ಕೊಂಬುದೇನು? ಒಲವು-ಸ್ನೇಹ-ಪ್ರೇಮ
ಹೊರಗೆ ಬರಿದು ಒಳಗೆ ನಲಿದು ಇದ್ದವರಿಗೆ ನೇಮ” --ಬೇಂದ್ರೆಯವರ ಕವನದ ಈ ಸಾಲುಗಳಿಗೆ ಇಲ್ಲಿ ಬೇರೆ ಅರ್ಥವ್ಯಾಪ್ತಿಯನ್ನೇ ಕೊಡಬಹುದು!

ಪ್ರಶಸ್ತಿಗಳನ್ನು ಹೊಡೆದುಕೊಳ್ಳುವ ವಹಿವಾಟು ಆರಂಭವಾಗಿ ‘ಬೆಳ್ಳಿಹಬ್ಬ’ದ ವರ್ಷವೇ ಕಳೆದಿದೆ. ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ವಿರುದ್ಧ ವಿದ್ವಾಂಸ ಚಿದಾನಂದ ಮೂರ್ತಿಯವರು ಕೆಲವು ಕಡೆ ಬುಸ್ ಎಂದಿದ್ದಾರೆ. ಕೆಲವು ಪ್ರಶಸ್ತಿಗಳು ಮತ್ತು ಅವುಗಳನ್ನು ಹೊಡೆದುಕೊಳ್ಳುವುದರ ಹಿಂದಿನ ಮಸಲತ್ತುಗಳ ಬಗೆಗೆ ಖಾರವಾದ ಹೇಳಿಕೆಗಳು ಅವರ ಕೆಲವು ಲೇಖನಗಳಲ್ಲಿ ಕಾಣಿಸುತ್ತವೆ. ‘ಜ್ಞಾನಪೀಠ ಪ್ರಶಸ್ತಿ’ಯೂ ಕೆಲವೊಮ್ಮೆ ಇದೇ ರೀತಿ ಯಾರ್ಯಾರಿಗೋ ನೀಡಲ್ಪಟ್ಟಿದೆ ಎಂಬುದು ಅನೇಕರ ಅನಿಸಿಕೆ. ಹಲವು ಭಾಷೆಗಳಲ್ಲಿ ವಿದ್ವತ್ತುಳ್ಳ ಕನ್ನಡದ ಪ್ರಕಾಂಡ ಪಂಡಿತರೋರ್ವರು, “ಕನ್ನಡಕ್ಕೆ ಸಂದ ಮೊದಲ ನಾಲ್ಕು ಜ್ಞಾನಪೀಠಗಳನ್ನು ಹೊರತುಪಡಿಸಿದರೆ ಉಳಿದದ್ದರ ಬಗೆಗೆ ನಾನೇನೂ ಹೇಳಲಾಗದು”ಎಂದಿದ್ದಾರೆ. ಅಂದರೆ ಸತ್ಯವನ್ನು ಬಚ್ಚಿಟ್ಟು ನಾವು ‘ಹೊಡೆದುಕೊಳ್ಳುವ ವಿಕೃತಿ’ಯ ‘ಬೆಳ್ಳಿಹಬ್ಬ’ವನ್ನು ಆಚರಿಸಿಬಿಟ್ಟಿದ್ದೇವೆ!

ಪೀಠ, ವಿದ್ಯೆ, ತಪಸ್ಸು, ತ್ಯಾಗ, ಅನುಭವ ಮತ್ತು ಅರ್ಹತೆಗಳ ಪ್ರಶ್ನೆ ಬಂದಾಗ ಈಗೀಗ ಹಲವು ಘಟನೆಗಳು ಧುತ್ತನೆ ಎದುರಿಗೆ ಬರುತ್ತವೆ. ಧಾರ್ಮಿಕ ಪೀಠಗಳಿಗೆ ಅಂಟಿಕೊಂಡು ಕೂತವರು ನಡೆಸುವ ನೆಳಲು-ಬೆಳಕಿನಾಟಕ್ಕೆ ಬಲಿಯಾದ ಮಂದಿ ದನಿಯೆತ್ತಿದರೆ ಅವರ ವಿರುದ್ಧ ತಾಲಿಬಾನ್ ರೀತಿಯ ದಾಳಿಗಳು ನಡೆಯುತ್ತವೆ. ಧರ್ಮದ ಹೆಸರಿನಲ್ಲಿ ನಡೆಯುವ ದುರಾಚಾರಕ್ಕಂತೂ ಲೆಕ್ಕವೇ ಇಲ್ಲ. ಇತ್ತೀಚೆಗೆ, ಆಳುವ ಸರಕಾರವನ್ನೇ ಬೆದರಿಸಿದ್ದ ಅನೇಕ ‘ಸಂತ’ರನ್ನು ನಾವು ಕಂಡಿದ್ದೇವೆ. ಇಂತಹ ‘ಸಂv’ರಿಗೆಲ್ಲ ಅವರವರದ್ದೇ ಆದ ತಾಲಿಬಾನ್ ಪಡೆಯಿರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡೇ ವ್ಯವಹರಿಸಬೇಕಾಗುತ್ತದೆ. ಅರ್ಹತೆಯಿಲ್ಲದಿದ್ದರೂ, ಭಕ್ಷೀಸು- ಫಲಾನುಭವಿ ಬಾಲಬಡುಕರನ್ನು ಕಟ್ಟಿಕೊಂಡು, ತಾವೇ ದೇವರೆಂದೋ, ಸ್ವಾಮಿಯೆಂದೋ, ಸಂತನೆಂದೋ ಭೋಂಗುಬಿಡುತ್ತಾ, ಮುಗ್ಧ ಜನgನ್ನು ಬಣ್ಣದ ಮಾತುಗಳಿಂದ ಮಂತ್ರಮುಗ್ಧರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ತಮ್ಮ ರಕ್ಷಣೆಗೆ “ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ” ಎಂಬ ಅಸ್ತ್ರವನ್ನು ಬಳಕೆಮಾಡಿಕೊಳ್ಳುತ್ತಾರೆ. ವಾಸ್ತವವಾಗಿ ನಿಜವಾದ ಹಿಂದೂಗಳಿಗೆ ಇಂತಹ ಸಂತರನ್ನು ತಮ್ಮಲ್ಲಿ ಇರಿಸಿಕೊಳ್ಳುವುದು ಹೇಗೆಂಬುದು ಮೇಲೆ ಹೇಳಿದ ಜಡ್ಡುತುಪ್ಪದ ಕಥೆಯಾಗಿದೆ; ಇವರನ್ನೆಲ್ಲ ಇರಿಸಿಕೊಳ್ಳುವುದೂ ಹಿಂದೂ ಧರ್ಮದ ನೀತಿಯೆಂದು ಯಾರೂ ತಿಳಿಯಬೇಕಾಗಿಲ್ಲ; ಶುದ್ಧ ಹಿಂದೂ ಧರ್ಮ ಇದನ್ನೆಲ್ಲ ಸಹಿಸುವುದೂ ಇಲ್ಲ. ಉತ್ತಮನಾಗಿದ್ದ-ದಾನಶೂರನೆನಿಸಿದ್ದ ಕರ್ಣ, ವೇದವ್ಯಾಸರಿಂದಲೇ “ದುಷ್ಟ ಚತುಷ್ಟಯ”ರಲ್ಲಿ ಒಬ್ಬನೆಂದು ವಿಂಗಡಿಸಲ್ಪಟ್ಟ ಧರ್ಮಸೂಕ್ಷ್ಮವನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.  

ಕಲೆ, ಸಾಹಿತ್ಯ, ಸಂಗೀತ ಲೋಕಗಳಲ್ಲಿಯೂ ಸಹ ಇಂತಹ ಧರ್ಮಸೂಕ್ಷ್ಮವನ್ನು ಅರಿತು ನಡೆಯಬೇಕಾದ ಅಗತ್ಯವಿದೆ. ದೊಡ್ಡ ನಟನೊಬ್ಬನ ಮಕ್ಕಳು ಎಂಬ ಕಾರಣಕ್ಕೆ ಮಸಿಮಂಗನ ಮುಸುಡಿಯ ಅನರ್ಹರನ್ನೂ ದೊಡ್ಡ ನಟರೆಂಬಂತೆಯೇ ಸಂಭಾಳಿಸುತ್ತಿದ್ದೇವೆ. ದೊಡ್ಡ ರಾಜಕಾರಣಿಗಳ ಮಕ್ಕಳನ್ನೂ ಸಹ ಅದೇ ಒಂದು ಕಾರಣಕ್ಕೆ ನಾವು ಮುಖಸ್ತುತಿ ಮಾಡುತ್ತಿದ್ದೇವೆ. ಸಮಾಜದಲ್ಲಿ ಕೆಲವರಿಗೆ ಮುಂದೆ ಪ್ರಭಾವೀ ಅನರ್ಹರಿಂದ ತಮಗೆ ಯಾವುದೋ ಕೆಲಸ ಆಗಬೇಕೆಂದಿರುತ್ತದೆ; ಹೀಗಾಗಿ ನಿಜವಿಷಯದ ಅರಿವಿದ್ದೂ ಸಹ ಅನರ್ಹರನ್ನು ಅರ್ಹರೆಂದೇ ಹೊಗಳಿ ಜೈಕಾರ ಹಾಕುತ್ತಿರುತ್ತಾರೆ. ಇನ್ನೂ ಕೆಲವರಿಗೆ ಅನರ್ಹರಿಂದ ಯಾವುದೋ ಸಹಕಾರ ಸಿಕ್ಕಿರುತ್ತದೆ; ಆ ಹಂಗಿನಲ್ಲಿ ಇವರು ಅನರ್ಹರನ್ನು ಅರ್ಹರೆಂದೇ ಹೇಳುತ್ತಿರುತ್ತಾರೆ.  

ಭ್ರಷ್ಟ ಸಮಾಜದ ಇನ್ನೊಂದು ಮುಖವೆಂದರೆ ಸತ್ಯ ಹೇಳಿದರೆ ತಮಗೆಲ್ಲಿ ಕುತ್ತು ಬರುತ್ತದೋ ಎಂದು ಇನ್ನೊಬ್ಬರು ಹೇಳಿದ್ದಕ್ಕೆ  ಕಣ್ಮುಚ್ಚಿ  ಹೂಂ.....ಗುಟ್ಟುವ ಅಥವಾ ಅನುಮೋದಿಸುವ ಅನಿವಾರ್ಯತೆಯಲ್ಲಿ ಅನೇಕರು ತೊಳಲುತ್ತಿದ್ದಾರೆ.  ಇಂತಹ ಸಿನಿಕತನ ನಿರ್ನಾಮವಾಗದ ಹೊರತು ಶುದ್ಧ ಸಮಾಜದ ನಿರ್ಮಾಣ ಸಾಧ್ಯವಾಗುವುದಿಲ್ಲ. ಹಣಕ್ಕಾಗಿ ಅಥವಾ ಇನ್ನಾವುದೋ ಪ್ರಲೋಭನೆಯಿಂದಾಗಿ ಇರುವ ಸಂಗತಿ ಮುಚ್ಚಿಟ್ಟು-ಬಚ್ಚಿಟ್ಟು ಇನ್ನೊಂದನ್ನೇ ಕಟ್ಟಿ ಹೇಳಿದರೆ-ಬಿಂಬಿಸಿದರೆ ಕತ್ತೆ ಹುಲಿಯ ಚರ್ಮವನ್ನು ಸುತ್ತಿಕೊಂಡದ್ದು ನೆನಪಾಗುತ್ತದೆ. ಹೋಗಲಿ, ಕತ್ತೆಗಾದರೆ ಬುದ್ಧಿಯಿರಲಿಲ್ಲ-ಅದು ಒಡೆಯನ ಒತ್ತಾಯಕ್ಕೆ ತಕ್ಕಂತೆ ನಡೆಯುತ್ತ ಹೊಟ್ಟೆಯ ಹಸಿವಿಗೆ ಹೊಲವನ್ನು ಮೆಂದಿತ್ತು. ಬುದ್ಧಿವಂತ ಮನುಷ್ಯರಲ್ಲಿ ಒಳ್ಳೊಳ್ಳೆಯ ಸ್ಥಾನಗಳಲ್ಲಿ ಅರ್ಹತೆಯಿಲ್ಲದೇ ಕೂತವರು ಕತ್ತೆಯಂತೆ ವರ್ತಿಸಿದರೆ ಏನು ಹೇಳಬೇಕು? ಇದಕ್ಕೆಲ್ಲ ಪರಿಹಾರವೆಂದು?

ಪೌಲಸ್ತ್ಯಃ ಕಥಮನ್ಯದಾರಹರಣೇ ದೋಷಂ ನ ವಿಜ್ಞಾತವಾನ್
ಕಾಕುತ್ಸ್ಥೇನ ಹೇಮಕಾಂತಿಹರಿಣಸ್ಯಾಸಂಭವೋ ಲಕ್ಷಿತಃ
ಅಕ್ಷಾಣಾಂ ನ ಯುಷ್ಟರೇಣ ವಿಷಮೋ ದೃಷ್ಟೋ ವಿಪಾಕಃ ಕಥಂ
ಪ್ರತ್ಯಾಸನ್ನವಿಪತ್ತಿ ಮೂಡಮನಸಾಂ ಪ್ರಾಯೋ ಮತಿಃ ಕ್ಷೀಯತೆ|
                                      -ಪಂಚತಂತ್ರ
[ಅನ್ಯರ ಮಡದಿಯನ್ನು ಕದ್ದೊಯ್ಯುವುದು ತಪ್ಪೆಂದು ರಾವಣನಿಗೇಕೆ ಹೊಳೆಯಲಿಲ್ಲ? ಬಂಗಾರದ ಜಿಂಕೆ ಮಾಯಾಜಿಂಕೆಯೆಂದು ರಾಮನಿಗೇಕೆ ತಿಳಿಯಲಿಲ್ಲ? ಜೂಜು-ಪಗಡೆಯಾಟ ದುಃಖದ ಘಟನೆಗಳ ಸರಮಾಲೆಯನ್ನೇ ಹೆಣೆಯಬಹುದೆಂಬುದು ಧರ್ಮಾತ್ಮನಾದ ಯುಧಿಷ್ಠಿರನಿಗೇಕೆ ಗೊತ್ತಾಗಲಿಲ್ಲ? ದುಷ್ಟರನ್ನು/ದುಷ್ಟತನವನ್ನು ಹಿಡಿದುಕೊಳ್ಳುವುದು, ಮೆಚ್ಚಿಕೊಳ್ಳುವುದು, ಆರಾಧಿಸುವುದು,  ಬುದ್ಧಿಗೆ ಮಂಕು ಕವಿಯುವಂತೆ ಮಾಡುತ್ತದೆ; ರಾವಣನಿಗೂ, ರಾಮನಿಗೂ, ಯುಧಿಷ್ಠಿರನಿಗೂ ಆಗಿದ್ದು ಇದೇ.] 

ಕನ್ನಡಕ್ಕೆ ಹೊಸ ಹೊಸ ಪ್ರಶಸ್ತಿಗಳೂ, ಗೌ.ಡಾ.ಗಳೂ ಬಂದು ಧೂಳೆಬ್ಬಿಸುತ್ತಿರುವ ಈ ಹೊತ್ತಿನಲ್ಲಿ ಹಲವೆಡೆ ಅಪಸ್ವರಗಳು ಎದ್ದಿವೆ, ಏಳುತ್ತಿವೆ; ಹುಲಿಯ ಚರ್ಮದ ಹೊದಕೆಯಲ್ಲಿ ಸಾಹಿತ್ಯದ ಹೊಲದಲ್ಲಿ ಪ್ರಶಸ್ತಿಯ ಬೆಳೆಯನ್ನು ಮೆಂದಿದ್ದು  ಕತ್ತೆಯೆಂದು ತಿಳಿಯಲು ಬಹುಶಃ ಬಹಳ ಕಾಲ ಬೇಕಾಗಲಿಕ್ಕಿಲ್ಲ; ಕತ್ತೆಯನ್ನು ಹುಲಿಯೆಂದೇ ಸಂಭ್ರಮಿಸುವ ಮುಟ್ಠಾಳರೂ ಈ ಸಮಾಜದಲ್ಲಿ ಇಲ್ಲವೆಂದು ಅಂದುಕೊಳ್ಳಬೇಕಾಗಿಲ್ಲ!    
------o೦o------