ವನಸುಮದೊಳೆನ್ನ ಜೀವನವು ವಿಕಸಿಸುವಂತೆ...
ವಿದ್ವಜ್ಜನರು ಕಥೆ ಹೇಳುವ-ಕಥೆ ಕೇಳುವ ಕಾಲ ಸಂದುಹೋಯ್ತು! ಮಕ್ಕಳಿಗೂ ಟಿವಿ-ಮುದುಕರಿಗೂ ಟಿವಿ ಬಂದಾಯ್ತು! ಈಗ ಕಥೆಗೆಲ್ಲ ಹೂಂ..ಗುಟ್ಟುವವರಿಲ್ಲ, ಕಥೆ ಹೇಳುವವರು ಮೊದಲೇ ಇಲ್ಲ. ಇಂತಹ ಕಥೆಹೇಳುವ ಕಾಲ-ನಿಡುಗಾಲ-ಹೊಸಕಾಲಗಳ ಕೊಂಡಿಯಾಗಿ ಅನರ್ಘ್ಯರತ್ನಗಳಂತಹ ವ್ಯಕ್ತಿಗಳು ಕೆಲವರಿದ್ದರು; ಅವರಲ್ಲಿ ದಿ.ಎನ್.ರಂಗನಾಥ ಶರ್ಮರೂ ಒಬ್ಬರು. ಅವರ ವಿದ್ವತ್ತನ್ನು ಸ್ವತಃ ಡಿವಿಜಿಯವರೇ ಕೊಂಡಾಡಿದ್ದರು! ವಾಲ್ಮೀಕಿ-ರಾಮಾಯಣವನ್ನು ಕನ್ನಡೀಕರಿಸಿದ ಖ್ಯಾತಿ ಸದರಿಯವರದ್ದು. ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಎಂಬ ಹಾಗೆ ಡಿವಿಜಿಯವರ ಮುನ್ನುಡಿ ಆವರ ಅನುವಾದಿತ ಕೃತಿಗೆ ಕಿರೀಟಪ್ರಾಯವಾಗಿತ್ತು. ಅಂತಹ ಮಹನೀಯ ರಂಗನಾಥ ಶರ್ಮರು ಬರೆದ ’ಋಷಿಗಳ ರಾಷ್ಟ್ರಾಭಿಮಾನ’ ಎಂಬ ಲೇಖನದಲ್ಲಿ ಅದೆಷ್ಟು ಉದಾತ್ತ ಭಾವಗಳು; ಎಷ್ಟೊಂದು ಉನ್ನತ ಧ್ಯೇಯಗಳು. ನಮ್ಮಲ್ಲಿನ ಅರೆಪಂಡಿತರು ಇವುಗಳನ್ನೆಲ್ಲ ಅರಿಯಬೇಕು.
ಚಪ್ಪಲಿಯೂ ಇರಲಿಲ್ಲ ರೊಕ್ಕ ಮೊದಲೇ ಇಲ್ಲ
ಇಪ್ಪತ್ತುಮನೆಗಳಲಿ ಭಿಕ್ಷೆಯನುಬೇಡಿ
ಸೊಪ್ಪು ಸಿಪ್ಪೆಗಳನು ಚಪ್ಪರಿಸಿ ತಿಂದೆಯಲೊ
ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು
ರಂಗನಾಥ ಶರ್ಮರು ತಮ್ಮ ಕಲಿಕೆಯ ದಿನಗಳ ಬಡತನವನ್ನು ತಮ್ಮಾಪ್ತರಲ್ಲಿ ಆಶು ಕವಿತೆಯ ಮೂಲಕ ಹಾಸ್ಯಮಯವಾಗಿ ಹೇಳಿಕೊಳುತ್ತಿದ್ದ ರೀತಿಯಿದು!
ಶಿವಮೊಗ್ಗಾ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡಹಳ್ಳಿ ಒಂದು ಕುಗ್ರಾಮ; ಪ್ರಾಯಶಃ ೧೯೧೬ರ ವೇಳೆಗೆ ಅಲ್ಲೆಲ್ಲ ವಾಹನ ಸಂಚಾರವೇ ಇರಲಿಲ್ಲವೇನೋ. ಅಂತಹ ಹಳ್ಳಿಯಲ್ಲಿ ತಿಮ್ಮಪ್ಪ-ಜಾನಕಿಯರ ಮಗನಾಗಿ ೧೯೧೬ರಲ್ಲಿ ಈ ನೆಲಕ್ಕೆ ಬಂದಿಳಿದ ಶರ್ಮಾ, ಅತಿ ಬಡತನದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಡಹಳ್ಳಿಯಲ್ಲಿ ಪೂರೈಸಿಕೊಂಡು, ತನ್ನ ಜ್ಞಾನ ತೃಷೆಯನ್ನು ತೀರಿಸಿಕೊಳ್ಳುವ ಸಲುವಾಗಿ ಕೆಳದಿಯಲ್ಲಿ ಅಂದು ನಡೆಸಲ್ಪಡುತ್ತಿದ್ದ ಸಂಸ್ಕೃತ ಪಾಠಶಾಲೆಗೆ ಸೇರಿಕೊಂಡು, ಮೂರು ವರ್ಷಗಳಕಾಲ ಆಧ್ಯಯನಮಾಡಿ, ಪ್ರಥಮ ಹಾಗೂ ಕಾವ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ನಂತರ ಒಬ್ಬರೇ ಬೆಂಗಳೂರಿಗೆ ಬಂದು, ವಾರಾನ್ನ ಮಾಡಿಕೊಂಡಿದ್ದು, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾ ಪಾಠ ಶಾಲೆಯಲ್ಲಿ ಸಾಹಿತ್ಯ ಪರೀಕ್ಷೆ ಯನ್ನು ತೆಗೆದುಕೊಂಡು ಯಶಸ್ವಿಯಾದರು. ಮುಂದೆ ಶಾಸ್ತ್ರಾಭ್ಯಾಸ ಮಾಡಿ ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ವಿದ್ವತ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅಲ್ಲಿಯೇ ಅವರಿಗೆ ಅವಕಾಶ ದೊರೆಯಿತು. ಸ್ವಪ್ರಯತ್ನದಿಂದ ಕನ್ನಡ ವಿದ್ವಾನ್ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾದರು.
ಪ್ರೌಢಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರೂ, ಕೇವಲ ಹಣಕ್ಕಾಗಿಯೇ ಪಾಠಮಾಡುವ ಮೇಷ್ಟ್ರು ಅವರಾಗಿರಲಿಲ್ಲ. ಉದರಂಭರಣೆಗೆ ತನಗಿರುವ ಅರ್ಹತೆಯಲ್ಲಿ ಅವಕಾಶ ಸಿಕ್ಕ ಕಡೆ ಕೆಲಸಮಾಡುತ್ತ ನಡೆದರು.೧೯೪೧ರಲ್ಲಿ ಸಾಗರ ತಾಲೂಕಿನ ಮಂಚಾಲೆಯ ಕಮಲಾಕ್ಷಮ್ಮನವರ ಕೈಹಿಡಿದ ಶರ್ಮರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ೧೯೪೩ರಲ್ಲಿ ಹಾಸನದ ಮಾಧ್ಯಮಿಕ ಹಾಗೂ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿದರು. ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿಯೂ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ತಾವು ಕಲಿತ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯಲ್ಲೇ ೧೯೪೮ರಲ್ಲಿ ವ್ಯಾಕರಣದ ಅಧ್ಯಾಪಕರಾಗಿ ನೇಮಕಗೊಂಡರು. ಪ್ರಾಧ್ಯಾಪಕರಾಗಿ ೧೯೭೬ರಲ್ಲಿ ವೃತ್ತಿಯೆಂಬುದರಿಂದ ನಿವೃತ್ತರಾದರೂ ಸಹ, ಸಾಹಿತ್ಯಕ ಸೇವೆ ಕೊನೆಯುಸಿರಿನವರೆಗೂ ಅನೂಚಾನಾಗಿ ನಡೆಯುತ್ತಲೇ ಇತ್ತು. ೧೯೭೩ರಲ್ಲಿ ತೀವ್ರ ಅನಾರೋಗ್ಯದಿಂದ ಅವರ ಪತ್ನಿ ನಿಧನರಾದರು. ನಂತರ ಡಿವಿಜಿಯವರಂತೆಯೇ ಪತ್ನಿವಿಯೋಗವನ್ನು ಸಹಿಸಿಕೊಂಡೇ ಜೀವನ ನಡೆಸಿಬಂದರು.
ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಶ್ರೀಯುತರು ರಚಿಸಿದ ಕೃತಿಗಳು ಸುಮಾರು ಐವತ್ತಕ್ಕೂ ಹೆಚ್ಚು. ’ಗುರು ಪರಂಪರಾಚರಿತಮ್’, ’ಸಂಸ್ಕೃತ ಪ್ರಥಮ ಪ್ರವೇಶ’, ’ಶ್ರೀಬಾಹುಬಲಿ ವಿಜಯಮ್’[ನಾಟಕ], ’ಏಕಚಕ್ರಂ’[ನಾಟಕ],ಸಂಸ್ಸೃತ ನಾಮ ದೈವೀವಾಕ್-ಇತ್ಯಾದಿ ಸಂಸ್ಕೃತ ಕೃತಿಗಳನ್ನು ಬರೆದಿದ್ದಾರೆ. ಆವರ ಕನ್ನಡ ಸಾಹಿತ್ಯಕ ಸೇವೆ ಇಂತಿದೆ: ‘ಲೌಕಿಕ ನ್ಯಾಯಗಳು’, ‘ಹೊಸಗನ್ನಡ ವ್ಯಾಕರಣ’, ‘ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತಿ’, ‘ವರದಹಳ್ಳಿ ಶ್ರೀಧರ ಸ್ವಾಮಿಗಳು’, ‘ಶ್ರೀರಾಮಚಂz’, ‘ಸೂಕ್ತಿ-ವ್ಯಾಪಿ’, ‘ಸಂದರ್ಭಸೂಕಿ’, ‘ವ್ಯಾಸ ತಾತ್ಪರ್ಯ ನಿರ್ಣಯ’. ಅನುವಾದಿಸಿದ ಕೃತಿಗಳು: ಭಗವದ್ಗೀತೆ, ಮಾಧವೀಯ ಶಂಕರ ದಿಗ್ವಿಜಯ, ಶ್ರೀಮದ್ವಾಲ್ಮೀಕಿ ರಾಮಾಯಣ [ಏಳು ಕಾಂಡಗಳು], ಅಮರ ಕೋಶ, ವಿದುರ ನೀತಿ, ಶ್ರೀಮದ್ ಭಾಗವತ [ದಶಮಸ್ಕಂದ], ಪ್ರಾರ್ಥನಾ ಶ್ಲೋಕಗಳು, ವಿಷ್ಣು ಪುರಾಣ, ಶ್ರುತಿ ಸಾರ ಸಮುದ್ಧರಣ, ವಾಕ್ಯ ಪದೀಯ ಮೊದಲಾದವು. ಇದಲ್ಲದೇ ಹಲವಾರು ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ. ಹಳಗನ್ನಡದ ಕಾವ್ಯಗಳಲ್ಲಿ ಕೆಲವನ್ನು ಹೊಸಗನ್ನಡಕ್ಕೆ ರೂಪಾಂತರಿಸಿದ್ದಾರೆ. ಮೂಲ ’ಮಾಧವೀಯ ಶಂಕರ ದಿಗ್ವಿಜಯ’ವನ್ನು ಸಂಗ್ರಹಿಸಿ, ’ಶ್ರೀ ಶಂಕರಚರಿತಾಮೃತಮ್’ ಎಂಬ ಶಂಕರರ ಜೀವನಚರಿತ್ರೆಯನ್ನು ಚಿಕ್ಕ ಹೊತ್ತಗೆಯಾಗಿ ಸಂಸ್ಕೃತದಲ್ಲಿ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದು ಕನ್ನಡಕ್ಕೂ ಅದರ ಅನುವಾದವನ್ನೂ ಒದಗಿಸಿದ್ದಾರೆ.
ಶಾಸ್ತ್ರಗಳನ್ನು ಕ್ರಮಾಗತ ಕಲಿಕೆಗಳಿಂದ ಅಧ್ಯಯನ ನಡೆಸಿ, ಘನಪಂಡಿತರೆನಿಸಿದ ಹಲವರು ಅದನ್ನಷ್ಟೇ ಗಾಢವಾಗಿ ಆಲಂಗಿಸಿಕೊಂಡುಬಿಡುತ್ತಾರೆ; ವಿದ್ವತ್ತಿನ ಜೊತೆಗೆ ಲೋಕಜ್ಞಾನವೂ, ಏಕಾಂತದ ಜೊತೆಗೆ ಲೋಕಾಂತವೂ ಇದ್ದರೆ ಜೀವನ ಸುಲಲಿತ ಎಂದು ಬಲ್ಲ ಕೆಲವೇ ವಿದ್ವಾಂಸರಲ್ಲಿ ಶರ್ಮರೂ ಒಬ್ಬರು! ಪ್ರತಿದಿನದ ರಾಜಕೀಯ-ಸಾಮಾಜಿಕ-ಆರ್ಥಿಕ-ವ್ಯಾವಹಾರಿಕ-ವೈಜ್ಞಾನಿಕ-ಸಾಹಿತ್ಯಕ ಎಲ್ಲಾ ರಂಗಗಳಿಗೆ ಸಂಬಂಧಪಟ್ಟ ಸುದ್ದಿಗಳನ್ನೂ ತಿಳಿದುಕೊಳ್ಳುವ ಹವ್ಯಾಸವಿತ್ತು. ಕೊನೆಗಾಲದಲ್ಲಿ ಕಣ್ಣು ಕಾಣಿಸದಿದ್ದಾಗ ಸಹಾಯಕರಿಂದ ಓದಿಸಿ ಕೇಳುತ್ತಿದ್ದರು. ಅವರ ಲೋಕಮುಖಕ್ಕೊಂದು ಚಿಕ್ಕ ಉದಾಹರಣೆ ಇಲ್ಲಿದೆ: ಗುಲ್ವಾಡಿಯವರು ಇನ್ನೂ ಬದುಕಿದ್ದ ದಿನದಲ್ಲಿ ಒಮ್ಮೆ, ಶತಾವಧಾನಿ ಡಾ|ರಾ.ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯಪ್ರಕಾಶ್ ಪಂಡಿತರು ಶರ್ಮರ ಮನೆಗೆ ಹೋಗಿದ್ದರು. ಕೊಡಲ್ಪಟ್ಟ ನೈವೇದ್ಯಗಳನ್ನೆಲ್ಲ ಭುಂಜಿಸಿ, ಗಂಟೆಗಟ್ಟಲೆ ಮಾತನಾಡಿ ಹೊರಟಾಗ, ಶರ್ಮರು ತನ್ನ ಸಹಜ ರಿವಾಜಿನಂತೆ, ಅತಿಥಿಗಳನ್ನು ಬೀಳ್ಕೊಡಲು ಗೇಟಿನವರೆಗೂ ಬಂದರು. ಅಲ್ಲಿ ನಿಂತಿದ್ದ ಅವರ ವಾಹನವನ್ನು ಗಮನಿಸಿ, ಗುಲ್ವಾಡಿಯವರಲ್ಲಿ "ನೀವೇ ಡ್ರೈವ್ ಮಾಡಿಕೊಂಡು ಬಂದಿದ್ದೀರಾ?" ಎಂದು ಪ್ರಶ್ನಿಸಿದರು. "ಇಲ್ಲ ಡ್ರೈವರ್ ಇದ್ದಾನೆ" ಎಂದು ಗುಲ್ವಾಡಿಯವರು ಉತ್ತರಿಸಿದರೆ, "ಛೇ! ಎಂಥಾ ಕೆಲಸವಾಗಿ ಹೋಯ್ತು. ಇಷ್ಟು ಹೊತ್ತು ಹೊರಗೇ ಕಾದಿದ್ದ ಚಾಲಕನಿಗೆ ಏನೂ ಕೊಡಲಿಲ್ಲವಲ್ಲ" ಎಂದು ಪರಿತಪಿಸುತ್ತ, ಯಾರ ಸಮಜಾಯಿಷಿಯನ್ನೂ ಕೇಳದೆ, ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ಉಪಚರಿಸಿದರು. ಶರ್ಮರ ಅನನ್ಯ ಸೌಜನ್ಯವನ್ನು ಇಂಥದ್ದರಲ್ಲಿ ಢಾಳಾಗಿ ಕಾಣಬಹುದು.
ಅಕ್ಕ-ಪಕ್ಕದ ಮನೆಗಳಲ್ಲೇ ಎರಡು ಸಲಗಗಳಂತಿದ್ದ ಡಿ.ವಿ.ಜಿ ಮತ್ತು ರಂಗನಾಥ ಶರ್ಮರದ್ದು ಅನ್ಯೋನ್ಯ ಸ್ನೇಹ ಸಂಬಂಧ; ಡಿ.ವಿ.ಜಿಯವರು ತಮ್ಮ ಕೃತಿಗೆ ಶರ್ಮರ ಸಲಹೆಯನ್ನು ಪಡೆಯುತ್ತಿದ್ದರೆ, ಡಿವಿಜಿಯವರ ಮರಣಾನಂತರ ಪ್ರಕಟಗೊಂಡ ’ಮರುಳ ಮುನಿಯನ ಕಗ್ಗ’ವನ್ನು ಸಂಸ್ಕರಿಸಿ ಮುನ್ನುಡಿ ಬರೆದವರು ಇದೇ ಶರ್ಮರು. ಡಿವಿಜಿಯವರ ಸರಿಸಮಾನ ವ್ಯಕ್ತಿ ಇಲ್ಲವೇ ಇಲ್ಲ ಎಂಬುದು ಶರ್ಮರ ಅನುಭವದ ಮಾತು. ಒಳ್ಳೆಯ ಕನ್ನಡ ಯಾವುದೆಂಬುದನ್ನು ಶರ್ಮರ ಬರಹಗಳಿಂದ ತಿಳಿಯಬಹುದು ಎಂದು ಡಿ.ವಿ.ಜಿ. ಮತ್ತು ಇನ್ನಿತರ ವಿದ್ವಾಂಸರ ಅಭಿಪ್ರಾಯವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಹಳಗನ್ನಡ ಗ್ರಂಥ ಸಂಪಾದನಾ ಸಮಿತಿಗೆ ಅಧ್ಯಕ್ಷರಾಗಿ ಅನೇಕ ಗ್ರಂಥಗಳ ಪ್ರಕಟಣೆಗೆ ಕಾರಣಕರ್ತರಾದರು. ಡಾ|ರಾ.ಗಣೇಶರು ಶರ್ಮರ ಕುರಿತೇ ಬರೆದ ’ವಾಣೀವಾಹನ’ ಎಂಬ ಹೊತ್ತಗೆಯಲ್ಲಿ ವಿಸ್ತಾರವಾಗಿ ಶರ್ಮರ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ.
ಸಾಹಿತ್ಯ ಸಲಗಗಳ ವಿನೋದಾವಳಿಗಳ ಸ್ಯಾಂಪಲ್ಗಳನ್ನು ನೋಡಿ: ಒಮ್ಮೆ ಶರ್ಮರು ತಮ್ಮ ಹಲ್ಲು ನೋವಿನ ಚಿಕಿತ್ಸೆಗಾಗಿ ಹೊರಟು ದಾರಿಯಲ್ಲಿ ಡಿವಿಜಿಯವರನ್ನು ಕಂಡಾಗ, ವಿನೋದಕ್ಕಾಗಿ ಡಿವಿಜಿ, "ಏಕದಂತಸ್ಸ ವೈ ಕುರ್ಯಾದದ್ಯವೋ ದಂತ ಮಂಗಲಂ"[ಏಕದಂತ ಗಣಪತಿಯು ಇಂದು ನಿಮ್ಮ ಹಲ್ಲನ್ನು ಕಾಪಾಡಲಿ] ಎಂದು ಹೇಳಿದ್ದರಂತೆ; ಚಿಕಿತ್ಸೆ ಪಡೆದು ಮರಳಿದ ಶರ್ಮರಿಗೆ ಡಿವಿಜಿಯವರು ಸಿಕ್ಕಾಗ, "ಅಸೂಯಯೈವ ಭಗವಾನ್ ದಂತದ್ವಯಮಪಾಹರತ್" [ತಾನು ಏಕದಂತನೆಂಬ ಅಸೂಯೆಯಿಂದ ಆ ದೇವನು ನನ್ನ ಎರಡು ಹಲ್ಲುಗಳನ್ನು ಕೀಳಿಸಿಬಿಟ್ಟನು!] ಎಂದು ಶ್ಲೋಕಮಯವಾಗಿಯೇ ಉತ್ತರಿಸಿದ್ದರಂತೆ! ಡಿವಿಜಿಯವರಿಗೆ ಕರಿದ ತಿಂಡಿಗಳೆಂದರೆ ಪರಮಪ್ರೀತಿ! ಶರ್ಮರದ್ದೋ ಮಿತಾಹಾರ. ಡಿವಿಜಿಯವರ ಮನೆಗೆ ಹೋದಾಗಲೆಲ್ಲಾ ಶರ್ಮರಿಗೆ ಬೋಂಡಾ ಸೇವೆ ನಡೆಯುತ್ತಿತ್ತು. ಇಬ್ಬರ ಮುಂದೆ ಬೋಂಡಾದ ಬಟ್ಟಲು ಬಂದು ಕುಳಿತಾಗೊಮ್ಮೆ ಎಷ್ಟು ಒತ್ತಾಯಿಸಿದರೂ, ಶರ್ಮರು ಒಂದಕ್ಕಿಂತ ಹೆಚ್ಚು ಬೋಂಡ ತಿನ್ನಲೇ ಇಲ್ಲವಂತೆ; ಆಗ ಡಿವಿಜಿ: "ಪಂಡಿತರೇ ನಿಮ್ಮ ಹೊಟ್ಟೆ ಲೇಡೀಸ್ ರಿಸ್ಟ್ವಾಚ್. ನನ್ನದಾದರೋ ವಾಲ್ಕ್ಲಾಕ್"ಎಂದು ನಕ್ಕರಂತೆ!
ಶರ್ಮರು ಆದಿಚುಂಚನಗಿರಿಯಲ್ಲಿ ನಡೆದ ೫ನೇ-ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ಅನೇಕ ಸಂನ್ಯಾಸಿಗಳಿಗೆ ಗುರುವಾಗಿ ವೇದ-ಶಾಸ್ತ್ರಾದಿಗಳನ್ನು ಬೋಧಿಸಿದ್ದಾರೆ. ಅನೇಕ ಮಠ-ಮಂದಿರ-ಸಂಘ-ಸಂಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ತಿರುಪತಿಯ ಸಂಸ್ಕೃತ ವಿಶ್ವವಿದ್ಯಾಲಯ, ಗೌರವ ಪೂರ್ವಕವಾಗಿ, ‘ಮಹಾಮಹೋಪಾಧ್ಯಾಯ’ ಮತ್ತು ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರದಾನಮಾಡಿತ್ತು. ’ವಿದ್ಯಾವಾರಿಧಿ’ ಎಂಬ ಬಿರುದನ್ನು ಪಡೆದಿದ್ದರು. ೧೯೭೪ರಲ್ಲಿ ರಾಜ್ಯ ಸರಕಾರ ’ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ನೀಡಿದ್ದರೆ, ಅದೇ ವರ್ಷ "ಅತ್ಯುತ್ತಮ ಶಿಕ್ಷಕ" ನೆಂಬ ರಾಷ್ಟ್ರಪ್ರಶಸ್ತಿಯೂ ಪ್ರಾಪ್ತವಾಗಿತ್ತು. ‘ರಂಗಾಭಿನಂದನ’[ಕನ್ನಡ]-‘ರಂಗಾಭಿನಂದನಮ್’[ಸಂಸ್ಕೃತ]-ಶ್ರೀಯುತರಿಗೆ ಅರ್ಪಿಸಲ್ಪಟ್ಟ ಅಭಿನಂದನ ಗ್ರಂಥಗಳು. ರಂಗನಾಧ ಶರ್ಮರೆಂಬ ಸಂಸ್ಕೃತಿ ಶಿಖರವೊಂದು ಇತ್ತೀಚೆಗೆ ಸಾರಸ್ವತ ಲೋಕದಲ್ಲೆಲ್ಲೋ ಮರೆಯಾಗಿ, ಅಮರವಾಯಿತು.