ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 26, 2012

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ


ಪೂರ್ಣಿಮಾ ಸ್ವಾಮಿ ತೆಗೆದ ಈ ಛಾಯಾಚಿತ್ರವನ್ನು ಕರುಣಿಸಿದ್ದು: ಅಂತರ್ಜಾಲ 

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ

ಭಾವಜೀವಿಯಾದ ವ್ಯಕ್ತಿಗೆ ಕೆಲವು ಹಾಡುಗಳನ್ನು ಆಲಿಸುತ್ತಾ ಕುಳಿತರೆ ಅವು ನಮ್ಮನ್ನು ಬೇರೊಂದು ಲೋಕಕ್ಕೆ ಸೆಳೆದೊಯ್ದು ಅಲ್ಲಿ ಬೀಡು ಬಿಡುವಂತೇ ಮಾಡುತ್ತವೆ ಎಂಬ ಅನಿಸಿಕೆ ಒಮ್ಮೆಯಾದರೂ ಜೀವಿತದಲ್ಲಿ ಬಂದೇ ಬರುತ್ತದೆ. ಎಲ್ಲೋ ಯಾರೋ ಹಾಗೊಮ್ಮೆ ಗುನುಗುನಿಸಿದರೂ ಮೊದಲೆಲ್ಲೋ ಕೇಳಿದ ಇಂಪಿನ ಕಂಪು ಕಿವಿಯಲ್ಲಿ ಗುಂಯ್ಯೆನ್ನಲು ಆರಂಭಿಸುತ್ತದೆ; ಮನಸ್ಸು ತಾಳಹಾಕುತ್ತ ಸಾಗುತ್ತದೆ! ಹಾಡಿನ ಜಾಡನ್ನೇ ಹಿಡಿದು ಅದರ ಮೂಲವನ್ನು ಅರಸಿ ಹೊರಟಾಗ ಕವಿತಾ ಪಿತೃವಿನ ಪರಿಚಯ ಅಷ್ಟಿಷ್ಟು ಮಾತ್ರ ದೊರೆಯುತ್ತದೆ. ಆಳಕ್ಕೆ ಇಳಿಯುತ್ತಾ ನಡೆದಾಗ ಸಾವಿರ ಮೆಟ್ಟಿಲ ಬಾವಿಯ ಹಾಗೇ ಇನ್ನೂ ಆಳಕ್ಕೆ ಕಾಣುವ ಕವಿಗಳ ಅದ್ಭುತ ಅಂತರಂಗ ಬಹಿರಂಗಗೊಳ್ಳುತ್ತದೆ. ಸೆಳೆಮಿಂಚಿನ ಬೆಳಕಲ್ಲಿ ಕವಿಯ ಸಾಕ್ಷಾತ್ಕಾರವಾದರೆ ಕೋಲ್ಮಿಂಚಿನ ಭರದಲ್ಲಿ ಅವರ ಕೃತಿಗಳ ಸಾಲು ತೋರಿಬರುತ್ತದೆ. ಕವಿಯೊಬ್ಬ ಹಾಗಿರಬಹುದೇ ಹೀಗಿರಬಹುದೇ ಎಂದು ಕಲ್ಪಿಸಿಕೊಳ್ಳುವ ಸೀಮಿತ ಸಂವಹನದ ಕಾಲವೊಂದಿತ್ತು; ಕವಿ ಸಾಹಿತಿಗಳಿಗೆ ಪತ್ರ ಬರೆದು ಅವರುಗಳ ಅನಿಸಿಕೆಗಳಿಗಾಗಿ ಕಾಯುವ ಅದಮ್ಯ ಭಾವವೂ ಇರುತ್ತಿತ್ತು. ಇಂದು ಅಂತರ್ಜಾಲದ ಕಾಲಘಟ್ಟದಲ್ಲಿ ಜಗತ್ತು ಕಿರಿದಾಗಿದೆ; ಕವಿ-ಸಾಹಿತಿಗಳ ಛಾಯಾಚಿತ್ರಗಳೂ ಮಾತುಗಳೂ ಅಲ್ಲಲ್ಲಿ ನೋಡ/ಕೇಳ ಸಿಗುತ್ತವೆ.

ನಮ್ಮ ಗೋಕರ್ಣದ ಗೌರೀಶ್ ಕಾಯ್ಕಿಣಿಯವರು ಉದಯೋನ್ಮುಖ ಬರಹಗಾರರನ್ನು ಕುರಿತು ಹೀಗೆ ಹೇಳುತ್ತಿದ್ದರಂತೆ: "ಅವರು ಬರೆಯಲಿ ಬಿಡಿ, ಒಳ್ಳೆಯದೇ, ದಿನಕ್ಕೆ ಎಷ್ಟುಗಂಟೆ ಅವರು ಬರವಣಿಗೆಯಲ್ಲಿ ತೊಡಗಿರುತ್ತಾರೋ ಅಷ್ಟುಕಾಲ ಅವರಿಂದ ಕೆಟ್ಟ ಯೋಚನೆ, ಸಮಾಜ ಘಾತುಕ ಯೋಚನೆ ದೂರವಿರುತ್ತದೆ. ಬರವಣಿಗೆಯಲ್ಲಿ ಅವರು ಮಹತ್ತರವಾದುದನ್ನು ಸಾಧಿಸಲಾಗದಿದ್ದರೂ ಸಮಾಜಕ್ಕೆ ಅವರ ಆ ಕೆಲಸದಿಂದ ಕೆಲವು ಒಳ್ಳೆಯವ್ಯಕ್ತಿಗಳು ದೊರೆತಂತಾಗುತ್ತದೆ." ಬರವಣಿಗೆ ಸಹ್ಯವಾಗಿಲ್ಲ ಎಂದೆನಿಸಿ ಯಾರೋ ಓದುಗರು ಕೆಲವು ಬರಹಗಾರರ ಬಗ್ಗೆ ಹೇಳಿದಾಗ ಕಾಯ್ಕಿಣಿ ಹಾಗೆ ಹೇಳಿದ್ದರಂತೆ. ಬರವಣಿಗೆ ಸಹ್ಯವೋ ಅಸಹ್ಯವೋ ಅದು ಓದುಗರಿಗೆ ತಿಳಿದಿರುತ್ತದೆ; ಶಿರಸಿ ಪೇಟೆಗೆ ಹೋದರೆ ಜನ ಬೆಂಡೆಗದ್ದೆ ಜಿಲೇಬಿಯನ್ನು ಹುಡುಕಿ ಹೋಗುತ್ತಾರೆ, ರುಚಿಯಾದ ಚೂಡಾಕ್ಕೆ ಕುಮಟಾದ ಅಲಕಾ ಕೆಫೆಯನ್ನೇ ಹುಡುಕಿ ಹೋಗುತ್ತಾರೆ!  ಧಾರವಾಡದ ಬಾಬು ಸಿಂಗ್ ಠಾಕೂರ್ ಪೇಡಾ ಹದವನ್ನು ಬೇರಾರೂ ಕೊಡಲು ಸಾಧ್ಯವಾಗಿಲ್ಲ! ಅದೇರೀತಿ ಬರವಣಿಗೆಯೂ ಸಹ ತನ್ನ ಯುನಿಕ್ ನೆಸ್ ನಿಂದ ಕೂಡಿರುತ್ತದೆ. ಕೆಲವರು ಬರೆದದ್ದನ್ನು ಓದುತ್ತಿದ್ದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಮನಸ್ಸಾಗುತ್ತದೆ, ಇನ್ನು ಕೆಲವರ ಬರವಣಿಗೆಗೆ ನಮ್ಮನ್ನೇ ಒಪ್ಪಿಸಿಕೊಳ್ಳಬೇಕೆನಿಸುತ್ತದೆ. ನಮ್ಮನ್ನೇ ಓದಿಗೆ ಒಪ್ಪಿಸಿಕೊಳ್ಳುವ ಸೆಳವನ್ನು ತನ್ನ ಬರಹಗಳಲ್ಲಿ ತೋರಿದ ಕೆಲವು ಮಹಾನುಭಾವರಲ್ಲಿ ನಮ್ಮ ಪ್ರೀತಿಯ ಎಚ್.ಎಸ್.ವಿ ಕೂಡ ಒಬ್ಬರು.

ಕನ್ನಡ ಸಾಹಿತ್ಯಲೋಕದಲ್ಲಿ ಕಥೆ, ಕವನ, ಕಥನ ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಬೆಳೆತೆಗೆದವರು ಡಾ| ಎಚ್. ಎಸ್. ವೆಂಕಟೇಶಮೂರ್ತಿ. ಎಚ್.ಎಸ್.ವಿಯವರನ್ನು ಪರಿಚಯಿಸಬೇಕೆ ಎಂಬುದು ಪ್ರಸಕ್ತ ನನ್ನ ಮುಂದಿರುವ ಪ್ರಶ್ನೆ! ಯಾಕೆಂದರೆ ಚಿಕ್ಕ ಹುಡುಗನಿಂದ ಮುಪ್ಪಾನ ಮುದುಕರವೆಗೂ ಎಲ್ಲರೊಡನೆ ಬೆರೆತು, ಎಲ್ಲರ ನಡುವೆ ಓಡಾಡಿಕೊಂಡು ಜೀವನ ನಡೆಸುತ್ತಿರುವ ಕವಿ ಎಚ್.ಎಸ್.ವಿ; ಯಾರನ್ನೇ ಕೇಳಿದರೂ ಅವರ ಭಾವಚಿತ್ರ ತೋರಿಸಿ’ಇವರೇ ಎಚ್.ಎಸ್.ವಿ’ ಎಂದು ಬೊಟ್ಟುಮಾಡಿ ತೋರಿಸುವಷ್ಟು ಚಿರಪರಿಚಿತರು. ಹಾಗಾಗಿ ಪರಿಚಿತರನ್ನೇ ಮತ್ತೆ ಪರಿಚಯಿಸುವುದು ದುಸ್ಸಾಹಸದ ಕೆಲಸ ಎನಿಸುತ್ತದೆಯಾದರೂ ಅವರ ಬದುಕಿನ ಕೆಲವು ನೋಟಗಳನ್ನು ಮೆಲುಕುಹಾಕುವ ಪ್ರಯತ್ನಕ್ಕಾಗಿ ಬರೆಯುತ್ತಿದ್ದೇನೆ.  

June 23, 1944ರಂದು ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ನಾರಾಯಣ ಭಟ್ಟರು ಮತ್ತು ನಾಗರತ್ನಮ್ಮನ ಮಗನಾಗಿ ಎಚ್ ಎಸ್ ವೆಂಕಟೇಶಮೂರ್ತಿ ಜನಿಸಿದರು. ತಾಯಿ ಶಿಕ್ಷಕಿಯಾಗಿದ್ದರು. ಪ್ರಾಥಮಿಕ ಶಿಕ್ಷಣ ಹೋದಿಗ್ಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದರು ಎನ್ನುತ್ತದೆ ಅವರ ಅನಾತ್ಮಕಥನದ ಕಥಾಭಾಗ. ಅಂದಹಾಗೇ ಸದ್ರಿ ಎಚ್.ಎಸ್.ವಿಯವರನ್ನು ಖುದ್ದಾಗಿ ನಾನು ನೋಡಿದ್ದು ಅವರ ’ಅನಾತ್ಮಕಥನ’ದ ಮೊದಲ ಭಾಗ ಬಿಡುಗಡೆಗೊಂಡ ದಿನ; ಅದಕ್ಕೂ ಮೊದಲು ಅವರ ಸಮಗ್ರ ಕೃತಿಗಳ ಬಿಡುಗಡೆ ಇತ್ತಾದರೂ ಆ ಕಾರ್ಯಕ್ರಮಕ್ಕೆ ನನಗೆ ಹೋಗಲಾಗಿರಲಿಲ್ಲ. ಅನಾತ್ಮಕಥನದ ಮೊದಲಭಾಗವನ್ನು ರವಿ ಬೆಳಗೆರೆಗೆ ಅರ್ಪಿಸಿದ್ದು ನನಗೆ ನಿಜಕ್ಕೂ ಸೋಜಿಗ ಹುಟ್ಟಿಸಿದೆ. ರವಿ ಬೆಳಗೆರೆ ವಿಶಿಷ್ಟ ಛಾಪಿನ ಬರಹಗಾರ ಎನ್ನುವುದು ಸುಳ್ಳಲ್ಲವಾದರೂ ಬಹುತೇಕ ಅವರ ಬರವಣಿಗೆಗಳು ಧನಾತ್ಮಕವಾಗಿರುವುದಿಲ್ಲ; ಯಾರನ್ನೋ ಹೀಗಳೆಯಲಿಕ್ಕೆ, ಯಾರನ್ನೋ ಛೇಡಿಸಲಿಕ್ಕೆ, ಇನ್ಯಾರದೋ ತೇಜೋವಧೆಗೆ, ಮತ್ಯಾವುದೋ ಕೃತ್ಯವನ್ನು ತನಗೆ ಬೇಕಾದಂತೇ ತಿರುಗಿಸಿ ಹೇಳಲಿಕ್ಕೆ, ಕಾಮ-ಕ್ರೌರ್ಯಗಳನ್ನು ವೈಭವೀಕರಿಸಿ ಓದುಗರಲ್ಲಿ ಗಲಿಬಿಲಿ ಉಂಟುಮಾಡಲಿಕ್ಕೆ ಅವರ ಬರಹಗಳು ಸೀಮಿತವೆಂಬುದು ಅವರ ಜೀವಿತದ ಇಲ್ಲಿಯವರೆಗಿನ ಪ್ರತೀ ಅಧ್ಯಾಯವೂ ಹೇಳುತ್ತದೆ. ಇದೆಲ್ಲಾ ಗೊತ್ತಿದ್ದೂ ರಾತ್ರಿಕಂಡ ಬಾವಿಯಲ್ಲಿ ಹಗಲು ಬಿದ್ದರು ಅನ್ನೋ ಹಾಗೇ ಬೆಳಗೆರೆಗೆ ತಮ್ಮ ಕೃತಿಯನ್ನು ಅರ್ಪಿಸಿದ್ದಾರೆ!

ಭದ್ರಾವತಿಯಲ್ಲಿ ಡಿಪ್ಲೋಮಾ ಮಾಡುತ್ತಿರುವಾಗ ಹುಡುಗ ಎಚ್.ಎಸ್.ವಿ ಮತ್ತು ಅವರ ಗೆಳೆಯರು ಉಳಿದುಕೊಂಡಿದ್ದ ಪಕ್ಕದ ಮನೆಯಲ್ಲಿ ನವದಂಪತಿ ವಾಸವಿದ್ದರಂತೆ; ಅವರ ಮನೆತನದ ಹೆಸರು ಹಾಲಬಾವಿ ಯೋ ಹಂಸಬಾವಿಯೋ ಇರಬೇಕು. ನವದಂಪತಿಯಲ್ಲಿ ಹರೆಯದ ಹೆಂಡತಿಯನ್ನು ಕಂಡು ಥೇಟ್ ಅಂಥದ್ದೇ ಹುಡುಗಿ ತನ್ನವಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹಂಬಲಿಸಿದವರು ಎಚ್.ಎಸ್.ವಿ! ಉಕ್ಕೇರುತ್ತಿರುವ ಹರೆಯ ಮತ್ತೂ ಮತ್ತೂ ಕದ್ದು ಆಕೆಯನ್ನು ನೋಡುವ ಹುಚ್ಚನ್ನು ಹಿಡಿಸಿತ್ತು ಎಂದಿದ್ದಾರೆ: ತಮ್ಮ ಅನಾತ್ಮಕಥನದಲ್ಲಿ. ಕಪ್ಪಗಿನ ಹುಡುಗಿಯನ್ನು ಮನದುಂಬಿಕೊಂಡ ಕವಿಹೃದಯಕ್ಕೆ ಭದ್ರಾವತಿ ಬಿಟ್ಟ ಕೆಲವು ದಿನ ಒಮ್ಮುಖ ವಿರಹವೇದನೆ ಕಾಡಿತ್ತು; ಯಾರಲ್ಲಿಯೂ ಹೇಳಿಕೊಳ್ಳಲೂ ಆಗದ ಮನದಲ್ಲೇ ಅನುಭವಿಸುತ್ತ ಬಚ್ಚಿಟ್ಟುಕೊಳ್ಳಲೂ ಆಗದ ಭಾವದ ಹಾವುಗಳು ಮನವೆಂಬ ಬುಟ್ಟಿಯ ಮುಚ್ಚಳವನ್ನು ತಮ್ಮ ಹೆಡೆಯಿಂದ ತಟ್ಟಿ ತೆರೆಯಲು ಹೊರಡುತ್ತಿದ್ದವು!

ಕಾವ್ಯರಚನೆಯಲ್ಲಿ ಎಳವೆಯಲ್ಲೇ ಆಸಕ್ತಿ ಹೊಂದಿದ ಎಚ್.ಎಸ್.ವಿಯವರು ಪ್ರೌಢ ವಿದ್ಯಾಭ್ಯಾಸವನ್ನು ಹೊಳಲ್ಕೆರೆಯ ಮಲ್ಲಾಡಿಹಳ್ಳಿ ಮಾದಣ್ಣನವರ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಮಾಡಿ ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದುಕೊಂಡರು. ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿರಾಗಿದ್ದಾರೆ. ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅಂದರೆ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಇತ್ಯಾದಿಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಅನಾಯಾಸವಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಚ್.ಎಸ್ಸ್.ವಿ ಚಿತ್ರಕಲೆಯಲ್ಲೂ ನಿಪುಣರು ಎಂಬುದು ಹಲವರಿಗೆ ಗೊತ್ತಿಲ್ಲ! 


ಅನಿರೀಕ್ಷಿತವಾಗಿ ಎದುರುಬದುರು ಮನೆಯವರಾಗಿ, ಸಿಕ್ಕು-ಆಪ್ತರಾಗಿ ಅಪ್ಪಟ ಸ್ನೇಹಿತರಾದವರು ಎಚ್.ಎಸ್.ವಿ ಮತ್ತು ಬಿ.ಆರ್ ಲಕ್ಷ್ಮಣರಾವ್. ಲಕ್ಷ್ಮಣರಾಯರನ್ನು ಕೆದಕಿದರೆ ದಿನಗಟ್ಟಲೆ ಏಕೆ ತಿಂಗಳುಗಟ್ಟಲೆ  ಎಚ್.ಎಸ್.ವಿ ಯವರ ಬಗ್ಗೆ ಹೇಳುತ್ತಾರೆ. ಅಂದಹಾಗೇ ಸ್ನೇಹಕ್ಕೆ ಅಪಾರವಾದ ಗೌರವ ಕೊಡುತ್ತಾ ಲಕ್ಷ್ಮಣರಾಯರಲ್ಲಿನ ಕವಿಯನ್ನು ಗುರುತಿಸಿದ್ದೂ ಇದೇ ಎಚ್.ಎಸ್.ವಿಯವರೇ ಅಂದರೆ ತಪ್ಪಲ್ಲ; ಹಾಗಂತ ಬಿ.ಆರ್.ಎಲ್ ಬಾಯಲ್ಲೇ ನಾನು ಕೇಳಿದ್ದೇನೆ. ಈ ಇಬ್ಬರ ಆ ಸ್ನೇಹ ಹಸಿರಾಗಿರಲಿ. 

ಕಮಲ ಕೆಸರಿನಲ್ಲೇ ಅರಳಬಹುದಾದರೂ, ಬಹುತೇಕ ಜೀವಕೋಟಿಗಳ, ಸಸ್ಯಕೋಟಿಗಳ, ವ್ಯಕ್ತಿಗಳ ಬೆಳವಣಿಗೆಯಲ್ಲಿ ಅವುಗಳ/ಅವರುಗಳ ಎಳವೆಯ ಪರಿಸರ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಬಾಲ್ಯದಲ್ಲಿ ತಮ್ಮ ತಾಯಿಯ ತವರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ ನೀಡಿದವು ಎನ್ನುತ್ತಾರೆ ಎಚ್.ಎಸ್.ವಿ.  ಬದುಕೇ ಬರವಣಿಗೆ ಎನಿಸಿದಾಗ ಬರಹಗಾರನಿಗೆ ಬಿಡುವೆಲ್ಲಿಯದು? ದಿನನಿತ್ಯದ ತಮ್ಮ ಹಲವು ಸಾಹಿತ್ಯಕ ಕೆಲಸಗಳ ನಡುವೆಯೇ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡವರು ಎಚ್.ಎಸ್.ವಿ. ’ಚಿನ್ನಾರಿಮುತ್ತ’, ’ಕೊಟ್ರೇಶಿ ಕನಸು’, ’ಕ್ರೌರ್ಯ’, ’ಕೊಟ್ಟ’, ’ಮತದಾನ’ ಚಲನಚಿತ್ರಗಳಿಗೆ ಹಾಡುಗಳನ್ನು ಬರೆದುಕೊಟ್ಟಿದ್ದರೆ ಇನ್ನೂ ಕೆಲವಕ್ಕೆ ಸಂಭಾಷಣೆ ಬರೆದುಕೊಟ್ಟಿದ್ದಾರೆ. ದೂರದರ್ಶನ ’ಯಾವ ಜನ್ಮದ ಮೈತ್ರಿ’, ’ಸವಿಗಾನ’, ’ಮುಕ್ತ’ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದುಕೊಟಿದ್ದಾರೆ. ’ಮಕ್ಕಳ ಗೀತೆಗಳು’, ’ಅನಂತ ನಮನ’, ’ತೂಗುಮಂಚ’, ’ಸುಳಿಮಿಂಚು’, ’ಅಪೂರ್ವ ರತ್ನ’, ’ಭಾವಭೃಂಗ’- ಧ್ವನಿ ಸುರಳಿಗಳಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುತ್ತಿವೆ. 
 

ಪ್ರತಿಭೆಗೆ ದೊರೆತ ವಿಶೇಷ ಗೌರವ ಪುರಸ್ಸರಗಳು:

* ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ದೇವರಾಜ ಬಹದ್ದೂರ್ ಪ್ರಶಸ್ತಿ
* ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ
* ಬಿ.ಎಚ್. ಶ್ರೀಧರ ಪ್ರಶಸ್ತಿ
* ಆರ್ಯಭಟ ಸಾಹಿತ್ಯ ಪ್ರಶಸ್ತಿ
* ಮೈಸೂರು ಅನಂತಸ್ವಾಮಿ ಪ್ರಶಸ್ತಿ
* ೨ ಬಾರಿ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ
* ಅರವತ್ತು ತುಂಬಿದ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನಗ್ರಂಥ ’ಗಂಧವ್ರತ.’


ಪ್ರಕಟಿತ ಬರಹಗಳು:
===================

ಪರಿವೃತ್ತ(೧೯೬೮)
ಬಾಗಿಲು ಬಡಿವ ಜನಗಳು(೧೯೭೧)
ಮೊಖ್ತಾ(೧೯೭೪)
ಸಿಂದಬಾದನ ಆತ್ಮಕಥೆ(೧೯೭೭)
ಒಣ ಮರದ ಗಿಳಿಗಳು(೧೯೮೧)
ಮರೆತ ಸಾಲುಗಳು(೧೯೮೩)
ಸೌಗಂಧಿಕ(೧೯೮೪)
ಇಂದುಮುಖಿ(೧೯೮೫)
ಹರಿಗೋಲು(೧೯೮೫)
ವಿಸರ್ಗ(೧೯೮೮)
ಎಲೆಗಳು ನೂರಾರು(೧೯೮೯)
ಅಗ್ನಿಸ್ತಂಭ(೧೯೯೦)
ಎಷ್ಟೊಂದು ಮುಖ(೧೯೯೦)
ಅಮೆರಿಕದಲ್ಲಿ ಬಿಲ್ಲುಹಬ್ಬ(೧೯೯೭)
ವಿಮುಕ್ತಿ(೧೯೯೮)
ಭೂಮಿಯೂ ಒಂದು ಆಕಾಶ(೨೦೦೦)
ಮೂವತ್ತು ಮಳೆಗಾಲ(೨೦೦೧)

ಪ್ರಕಟಗೊಂಡ ಕಥೆಗಳು
=======================

ಬಾಣಸವಾಡಿಯ ಬೆಂಕಿ(೧೯೮೦)
ಪುಟ್ಟಾರಿಯ ಮತಾಂತರ(೧೯೯೦)

ಕಾದಂಬರಿಗಳು
=============

ತಾಪಿ(೧೯೭೮)

ಸಾಹಿತ್ಯಚರಿತ್ರೆ
===============

ಕೀರ್ತನಕಾರರು(೧೯೭೫)

ವಿಮರ್ಶೆ
========

ನೂರು ಮರ, ನೂರು ಸ್ವರ(೧೯೮೩)
ಮೇಘದೂತ(೧೯೮೯)
ಕಥನ ಕವನ(೧೯೯೦)
ಆಕಾಶದ ಹಕ್ಕು(೨೦೦೧)

ಅನುಭವ ಕಥನ
================

ಕ್ರಿಸ್ಮಸ್ ಮರ(೨೦೦೦)


ಸಂಪಾದನೆ
==========

ಶತಮಾನದ ಕಾವ್ಯ(೨೦೦೧)


ನಾಟಕಗಳು
===========

ಹೆಜ್ಜೆಗಳು(೧೯೮೧)
ಒಂದು ಸೈನಿಕ ವೃತ್ತಾಂತ(೧೯೯೩)
ಕತ್ತಲೆಗೆ ಎಷ್ಟು ಮುಖ(೧೯೯೯)
ಚಿತ್ರಪಟ(೧೯೯೯)
ಉರಿಯ ಉಯ್ಯಾಲೆ(೧೯೯೯)
ಅಗ್ನಿವರ್ಣ(೧೯೯೯)
ಸ್ವಯಂವರ(ಅಪ್ರಕಟಿತ);


ಅನುವಾದ
========

ಋತುವಿಲಾಸ(ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)


ಪ್ರಬಂಧ
=========
ಕನ್ನಡದಲ್ಲಿ ಕಥನ ಕವನಗಳು(ಪಿ.ಎಚ್.ಡಿ ಪ್ರಬಂಧ:೧೯೮೭)


ಮಕ್ಕಳ ಸಾಹಿತ್ಯ
===============

ಸಿ.ವಿ.ರಾಮನ್(೧೯೭೪)
ಹೋಮಿ ಜಹಾಂಗೀರ ಭಾಭಾ(೧೯೭೫)
ಸೋದರಿ ನಿವೇದಿತಾ(೧೯೯೫)
ಬಾಹುಬಲಿ(೨೦೦೦)


ಕವನಗಳು
==========

ಹಕ್ಕಿಸಾಲು(೧೯೮೭)
ಹೂವಿನ ಶಾಲೆ(೧೯೯೭)
ಸೋನಿ ಪದ್ಯಗಳು(೨೦೦೧)
ನದೀತೀರದಲ್ಲಿ


ಸಂದ ಪ್ರಶಸ್ತಿಗಳು
==================

ಸಿಂದಬಾದನ ಆತ್ಮಕಥೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೭೭
ತಾಪಿ-ದೇವರಾಜ ಬಹಾದ್ದೂರ ಪ್ರಶಸ್ತಿ-೧೯೭೮
ಅಮಾನುಷರು-ಸುಧಾ ಬಹುಮಾನ೧೯೮೧
ಹೆಜ್ಜೆಗಳು- ರಂಗಸಂಪದ ಬಹುಮಾನ-೧೯೮೦
ಇಂದುಮುಖಿ-ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ-೧೯೮೫
ಹರಿಗೋಲು-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೫
ಅಗ್ನಿಮುಖಿ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೬
ಋತುವಿಲಾಸ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ-೧೯೮೮
ಎಷ್ಟೊಂದು ಮುಗಿಲು ಬಿ.ಎಚ್.ಶ್ರೀಧರ ಪ್ರಶಸ್ತಿ-೧೯೯೦
ಒಂದು ಸೈನಿಕ ವೃತ್ತಾಂತ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೩
ಹೂವಿನ ಶಾಲೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೭
ಸ್ವಯಂವರ(ಅಪ್ರಕಟಿತ)-ಉಡುಪಿ ರಂಗಭೂಮಿ ಪುರಸ್ಕಾರ

’ಕವಿನೆನಪುಗಳು’ ಮಾಲಿಕೆಯಲ್ಲಿ ಆಗಿಹೋದ ಮತ್ತು ಈಗಿರುವ ಕವಿಗಳ ಕುರಿತು ಆಗಾಗ ಬರೆಯುತ್ತಲಿದ್ದೇನೆ. ಕವಿ-ಸಾಹಿತಿಗಳನ್ನು ನೇರವಾಗಿ ನೋಡುವುದು ನನಗಿಷ್ಟವಾದ ವಿಷಯ. ಅವರ ಜೊತೆ ಒಂದಷ್ಟು ಸಮಯ ಕಳೆದರೆ ಅಲ್ಲಿ ಸಿಗಬಹುದಾದ ಅಮೃತತುಲ್ಯ ಜ್ಞಾನಧಾರೆಯಲ್ಲಿ ಹಾಗೊಮ್ಮೆ ಮೀಯುವಾಸೆ. ’ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ಎಂದ ಪಂಪನಂತೇ ಭಾವುಕ ಮನಕ್ಕೆ ಜನ್ಮವಿದ್ದರೆ ಮತ್ತಿದೇ ಕನ್ನಡದಲ್ಲೇ ಪುನರಪಿ ಹುಟ್ಟುವ ಬಯಕೆ! ಸರಳ ಸಜ್ಜನ ಎಚ್.ಎಸ್.ವಿಯವರು ನನ್ನ ಬ್ಲಾಗಿಗೂ ಒಮ್ಮೆ ಬಂದು ಹರಸಿದ್ದಾರೆ. ಜೂನ್ ತಿಂಗಳು ಬಂದಾಗ ಅವರ ಹುಟ್ಟುಹಬ್ಬದ ನೆಪದಲ್ಲಿ ಹಲವು ಜನ ಅವರನ್ನು ಕಾಣಬಯಸುತ್ತಾರೆ. ಮೊನ್ನೆಯಂತೂ ಅವರೇ ಬರೆದ ಕಾವ್ಯಗಳಧಾರೆ ಗಾಯಕ/ಗಾಯಕಿಯರ ಕಂಠಗಳಲ್ಲಿ ಹೊರಹೊಮ್ಮಿತು ಎಂದು ಕೇಳಿಯೇ ಸಂತಸಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೇನೆ. ಎಚ್.ಸ್.ವಿಯವರು ಬಹುಕಾಲ ನಮ್ಮೊಟ್ಟಿಗಿರಲಿ, ನಮ್ಮಂಥವರಿಗೆ ಇನ್ನೂ ಹಲವು ಕೃತಿಗಳನ್ನು ಬಡಿಸಲಿ, ಬರಹಗಳ ಗದ್ದೆ-ತೋಟಗಳಲ್ಲಿ ಫಸಲು ಹುಲುಸಾಗಿ ಬರುವಂತೇ ಪ್ರೇರೇಪಿಸಲಿ ಎಂಬ ಪ್ರಾರ್ಥನೆಯೊಂದಿಗೆ ಎಚ್.ಎಸ್.ವಿಯವರಿಗೆ ನನ್ನ ವಂದನೆಗಳು, ಅಭಿನಂದನೆಗಳು.

’ನಮ್ಮೂರಲ್ಲಿ’ ಎಂಬ ಸಿನಿಮಾಕ್ಕಾಗಿ ಎಚ್.ಎಸ್.ವಿ ಬರೆದ ಒಂದು ಅಪರೂಪದ ಹಾಡು ನಿಮಗಾಗಿ :    

Wednesday, June 20, 2012

ಮಳೆಹುಡುಗಿ



ಚಿತ್ರಋಣ: ಅಂತರ್ಜಾಲ 

ಅರಿಕೆ : 


ನನ್ನಾತ್ಮೀಯ ಓದುಗ ಬಳಗವೇ, ಮಿತ್ರರೇ, 

ಫೇಸ್ ಬುಕ್ ಸಾಮಾಜಿಕ ತಾಣದಲ್ಲಿ ದಿನವಹಿ ಅನೇಕರು ನನ್ನ ಸ್ನೇಹಕೋರುತ್ತಿದ್ದೀರಿ, ಅನೇಕರು ನನ್ನ ಬರಹಗಳನ್ನು ಆಸ್ವಾದಿಸುತ್ತಿದ್ದೀರಿ. ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ನಿಮಗೆ ವೈಯ್ಯಕ್ತಿಕವಾಗಿ ನಾನು ಸ್ಪಂದಿಸಲಾಗದಿದ್ದರೂ ಸಾಮೂಹಿಕವಾಗಿ ನಿಮ್ಮೆಲ್ಲರಿಗೂ ಆಗಾಗ ನನ್ನ ಬರಹಗಳ ಮೂಲಕ ಸಿಗುತ್ತಲೇ ಇದ್ದೇನೆ. ಯಾರನ್ನೇ ಆಗಲಿ ಕಡೆಗಣಿಸಿದೆನೆಂಬ ಭಾವನೆ ಬೇಡ. ಬರಹಗಾರನಿಗೆ ಸಮಯದ ಅಭಾವ ಸಹಜ, ಸಿಗುವ ಸಮಯದಲ್ಲಿ ಕೆಲಹೊತ್ತು ಭಾವಲೋಕ, ಕೆಲಹೊತ್ತು ಅಧ್ಯಯನ, ಕೆಲಹೊತ್ತು ಅಧ್ಯಾಪನ, ಇನ್ನೂ ಕೆಲಹೊತ್ತು ಉದರನಿಮಿತ್ತದ ಕೆಲಸಗಳು ಹೀಗೇ ಸಮಯದ ಹೋಳುಗಳು ಹಂಚಿ ಹೋಗುತ್ತವೆ. ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ಮಾಡಿದಾಗಿನಿಂದ ಬರಹವನ್ನೇ ಉದ್ಯಮವನ್ನಾಗಿಯೂ ಅಂಗೀಕರಿಸಿದ್ದೇನೆ; ಅದರಲ್ಲೇ ಪ್ರಾಮಾಣಿಕತೆಯಿಂದ ದೇವರನ್ನೂ ಕಾಣಲು ಪ್ರಯತ್ನಿಸುತ್ತೇನೆ. ಈ ನಡುವೆ ಹತ್ತಿರದ ನೆಂಟರುಗಳ/ಸ್ನೇಹಿತರುಗಳ ಮನೆಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ನಾನು ಅಷ್ಟಾಗಿ ಹೋಗಲಾಗಲಿಲ್ಲ; ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಅಡಗಿಹೋಗಿದ್ದರಿಂದ ಬ್ಲಾಗ್ ಬರವಣಿಗೆಗಳಿಗೂ ವಿಳಂಬನೀತಿ ಅನುಸರಿಸಿದ್ದೇನೆ. ಆಮಂತ್ರಿಸಿದ್ದರೂ ಆಗಮಿಸದಿದ್ದುದಕ್ಕೆ ಹಲವರ ಆಕ್ಷೇಪಣೆಗಳನ್ನೂ ಎದುರಿಸಿದ್ದೇನೆ; ಅನಿವಾರ್ಯತೆಯಿಂದ ಭಾಗವಹಿಸಲಾಗದ್ದು ಮುಂದೆ ಅವರಿಗೆ ಅರಿವಾದಾಗ ಸರಿಹೋಗುತ್ತದೆಂಬ ವಿಶ್ವಾಸವನ್ನೂ ಇಟ್ಟುಕೊಂಡಿದ್ದೇನೆ. 

ಅಪರೂಪಕ್ಕೊಮ್ಮೆ ಹೀಗೆ ಮಳೆಯಲ್ಲಿ ತೆರಳುವಾಗ ಮಳೆಯೆಂಬ ಹುಡುಗಿಯ ನೆನಪಾಯ್ತು. ಅವಳ ಅಪ್ಪ-ಅಮ್ಮ, ಬೇರು-ಬಿತ್ತು ಎಲ್ಲದರ ವಿವರಗಳನ್ನು ಲೆಕ್ಕಹಾಕಲು ಕುಳಿತ ಮನದಲ್ಲಿ ಹೊಸದೊಂದು ಭಾವಗೀತೆ ಹುಟ್ಟಿಕೊಂಡಿತು. ಅದನ್ನೇ ಇವತ್ತು ನಿಮಗೆ ಉಪಾಹಾರವಾಗಿ ಬಡಿಸುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹಕ್ಕೆ, ಪ್ರೀತಿಗೆ, ನಿಮ್ಮ ಒಡನಾಟಕ್ಕೆ, ನಿಮ್ಮ ಓದಿಗೆ-ಸ್ಪಂದಿಸುವಿಕೆಗೆ ಸತತ ಆಭಾರಿಯಾಗಿದ್ದೇನೆ. ನೇರವಾಗಿ ಸಂವಹಿಸಲಾಗದಿದ್ದರೂ ನನ್ನ ಕೃತಿಗಳ ಮೂಲಕ ನಿಮ್ಮೊಡನೆ ವಿ.ಆರ್.ಭಟ್ ಎನಿಸಿದ್ದೇನೆ. ಸದಭಿರುಚಿಯ ಸಾಹಿತ್ಯದ ಓದಿನ ಗೀಳು ನಿಮ್ಮಲ್ಲಿ ಸದಾ ಉಕ್ಕುತ್ತಿರಲಿ, ಬರೆಯುವ ಕೆಲವು ಕೃತಿಗಳಾದರೂ ನಿಮ್ಮೆಲ್ಲರನ್ನೂ ರಂಜಿಸಲಿ ಎಂದು ಆಶಿಸುತ್ತಾ, ಬಯಸುತ್ತಾ ನಿಮ್ಮನ್ನು ಉಪಾಹಾರಕ್ಕೆ ಆಹ್ವಾನಿಸುತ್ತಿದ್ದೇನೆ-ಹೀಗೆ ಬನ್ನಿ, ಧನ್ಯವಾದಗಳು:      


ಮಳೆಹುಡುಗಿ 

ಶರಧಿಯೊಡಲಿನ ನೀರೆ ಸೂರ್ಯನಿಗೆ ಮನಸೋತು
ಹೊರಹೊರಟು ಗುಪ್ತಮಾರ್ಗದಿ ನಭಕೆ ನೆಗೆದು
ಭರದಿಂದ ಸಾಗುತ್ತ ಬರಸೆಳೆಯೆ ರವಿಯವನ
ಶರವೇಗದಲಿ ಹೇಗೆ ನಡೆವಳದೊ ಕಾಣೆ !


ಹಿರಿಹೊನ್ನ ಕಿರಣಗಳ ಬೆಡಗುರಾಯನ ಕಂಡು
ಗರಿಗರಿಯ ದಿರಿಸುಗಳ ಧರಿಸಿ ನಡೆಯುವಳೋ?
ಬರಿದಾಗಿ ಒಣಗುತ್ತ ಬಾಯ್ದೆರೆದ ಬಯಲುಗಳ
ಸರಸರನೆ ದಾಟುತ್ತ ಮುಂದೆ ಸಾಗುವಳೋ?


ಚರನಂತೆ ಗೋಚರಿಸಿ ಬಿರುಗಣ್ಣ ತೆರದಷ್ಟು
ತಿರೆಯೆಡೆಗೆ ತಿರುಗಿದನ ಹಿಡಿದು ಕಾಡುವಳೋ?
ಹರವಾದ ವಸುಧೆಯನು ಬೆಳಬೆಳಗಿ ರಂಜಿಸಿದ
ದೊರೆರಾಯನಾಟಕ್ಕೆ ಮರುಳಾಗಿರುವಳೋ?


ಹರಿಯನ್ನು ಹರನನ್ನು ಸರಸಿಜೋದ್ಭವನನ್ನು
ಗುರಿಹಿಡಿದು ತಲ್ಪಿದಳು ಹೆಣ್ಣುತಾನವಳು
ಅರಿವುಂಟೆ ಈ ಜಗಕೆ ಮಹಿಳೆಯೊಳತೋಟಿಯದು ?
ಮೆರೆಯುವಳು ಎಲ್ಲೆಡೆಗು ಭಾವರೂಪದೊಳು


ಅರೆರೆ ಅಲ್ಲೇನಾಯ್ತು ನಡುನಡುವೆ ನಿಂತಿಹಳು ?
ಮರೆಯಾದ ಮಿತ್ರನನು ಹುಡುಕಿಸೋಲುವಳೇ?
ಹಿರಿಯಲೋಸುಗ ನುಗ್ಗಿ ಪೈಪೋಟಿ ಅನುಭವಿಸಿ
ಬರಿಗೈಯ್ಯ ತಿರುವಿದನ ಕಂಡು ಬಳಲಿಹಳೇ?


ಸೊರಗಿ ಸೊಂಟದ ನೋವು ಸಿಗದಕ್ಕೆ ಸಮಯದಲಿ
ಮರುಗಿ ಮಮ್ಮಲ ತನ್ನ ಒಮ್ಮುಖದ ನಡೆಗೆ
ಕರಗಿ ಕಂಬನಿಯಾಗಿ ಹರಿದಿಹಳು ಭುವಿಯಲ್ಲಿ
ನೆರೆಬಂತು ನದಿಗೆಲ್ಲ ಅವಳ ಕೋಪದಲಿ !



Sunday, June 17, 2012

ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ!

ಚಿತ್ರಋಣ: ಅಂತರ್ಜಾಲ
ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ! 

ಇಂತಹ ವಿಷಯಗಳನ್ನು ಬರೆಯುತ್ತಲೇ ಇದ್ದೇನೆ. ಇತ್ತೀಚೆಗೆ ದಿನಪತ್ರಿಕೆಯೊಂದನ್ನು ವೇದಿಕೆಯಾಗಿ ಬಳಸಿಕೊಂಡು ಕನ್ನಡದ ಸ್ವರ ವ್ಯಂಜನಗಳ ಬಗ್ಗೆ, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಬಗ್ಗೆ ಪುಂಕಾನುಪುಂಕವಾಗಿ ಲೇಖನಗಳನ್ನು ವಿಶದೀಕರಿಸುವ ಹೊಸ ಅನಾಮಧೇಯ ಸಂಘವೊಂದು ಬೆಳೆಯುತ್ತಿದೆ! ಕನ್ನಡದ ಬೆಳವಣಿಗೆಗೆ ನಮ್ಮ ಭಾಷೆಯಲ್ಲಿನ ಕೆಲವು ಅಕ್ಷರಗಳ ಮತ್ತು ಮಹಾಪ್ರಾಣಗಳ ಬಳಕೆಯೇ ಕಾರಣ ಎಂಬ ಅವರ ವಿಚಿತ್ರಗತಿಯ ಅನಿಸಿಕೆ ತೀರಾ ಬಾಲಿಶವಾಗಿ ತೋರಿಬರುತ್ತಿದೆ. ಭಾಷಾ ಬೆಳವಣಿಗೆಗೆ ಭಾಷೆಯ ಮೂಲಾಕ್ಷರಗಳು, ಸ್ವರಗಳು, ವ್ಯಂಜನಗಳು ಅಡ್ಡಿಯಾಗಿವೆ ಎಂದು ಇದೇ ಹೊಸದಾಗಿ ಮತ್ತು ನನ್ನ ಜೀವಿತಾವಧಿಯಲ್ಲಿ ಇದೇ ಮೊದಲಾಗಿ ನಾನು ಕೇಳುತ್ತಿದ್ದೇನೆ. ಮಹಾಪ್ರಾಣದ ಉಪಯೋಗ ಬೇಡ ಎನ್ನುವ ಆ ಸಂಘದ ಸದಸ್ಯರು ’ಭಟ್ಟ’ ಎನ್ನುವ ಪದವನ್ನು ’ಬಟ್ಟ’ ಎಂದು ಬರೆದರೆ ’ಮಧ್ಯ’ ಎನ್ನುವ ಪದವನ್ನೂ ಹಾಗೇ ಬಳಸಬೇಕಾಯ್ತಲ್ಲವೇ? ಈಗಾಗಲೇ ಅಪಭ್ರಂಶವನ್ನೇ ಕನ್ನಡವೆಂದು ಆಡತೊಡಗಿದ ಕೆಲವರಿಗೆ ’ಮಧ್ಯ’ಕ್ಕೂ ’ಮದ್ಯ’ಕ್ಕೂ ಅಂತರವೇ ಇಲ್ಲಾ ಅನ್ನಿ!   

ಈ ಬೆಳವಣಿಗೆಗೆ ಕಾರಣ ಭಾಷೆಯಲ್ಲ, ಬದಲಾಗಿ ಕನ್ನಡದಲ್ಲಿ ಸಂಸ್ಕೃತವೆಂಬ ’ಪುರೋಹಿತಶಾಹಿ ಭಾಷೆ’ಯ ಪದಗಳು ಬೇಡ ಎಂಬ ಅನಿಸಿಕೆ ಅವರದಾಗಿದೆ. ಮೊನ್ನೆ ಒಬ್ಬ ಪತ್ರಕರ್ತರಲ್ಲಿ ನಾನು ಮಾತನಾಡುತ್ತಿದ್ದೆ: ಎಡಪಂಥೀಯರಾದರೆ ಜನ ಬೇಗ ಗುರುತಿಸುತ್ತಾರೆ ಅದೇ ಬಲಪಂಥೀಯರ ಜೊತೆಗಿದ್ದರೆ ಹತ್ತರ ಜೊತೆ ಹನ್ನೊಂದರಂತೇ ಇರಬೇಕಾಗುತ್ತದೆ ಎಂದು ನಕ್ಕೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿದರು. ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ಎತ್ತಿ ತೋರಿಸಿ ತಮಗೆ ಅದ್ದೂರಿಯ ಪ್ರಚಾರ, ಸ್ಥಾನಮಾನ ಸಿಗಲಿ ಎಂಬ ಉದ್ದೇಶದಿಂದ ’ಎಡಪಂಥ’ವೆಂಬ ವಾಮಮಾರ್ಗದಿಂದ ಸಮಾಜಕ್ಕೆ ಹೊಸವ್ಯಕ್ತಿಯಾಗಿ ಪ್ರವೇಶಿಸುವುದು ನಿಜಕ್ಕೂ ಸ್ವಾಗತಾರ್ಹವಲ್ಲ. ಪುರದ ಹಿತವನ್ನೇ ಬಯಸುವ ಜನರಿಗೆ ಪುರೋಹಿತರು ಎನ್ನುತ್ತೇವೆ. ’ಪುರೋಹಿತಶಾಹಿ’ ಎಂಬ ಪದವನ್ನು ಯಾವ ಪುಣ್ಯಾತ್ಮ ಸೃಷ್ಟಿಸಿದನೋ ನನ್ನರಿವಿಗಿಲ್ಲ. ಪುರೋಹಿತರು ಮಾಡಿಸುವ ಯಾಗ, ಯಜ್ಞ, ಹೋಮ ನೇಮಗಳು ಸಮಾಜದ ಒಳಿತಿಗಾಗಿ ವೇದಗಳಲ್ಲಿ ಹೇಳಲ್ಪಟ್ಟಿವೆ ಮತ್ತು ವೈಜ್ಞಾನಿಕವಾಗಿ ಈಗಾಗಲೇ ಅವುಗಳ ಉತ್ತಮ ಪರಿಣಾಮಗಳು ನಿಷ್ಕರ್ಷೆಗೆ ಒಳಗಾಗಿವೆ. ಅಷ್ಟಕ್ಕೂ ಯಾವ ಪುರೋಹಿತನೂ ಇಂಥಾ ಹೋಮವನ್ನು ಮಾಡಿಸಲೇ ಬೇಕು ಎಂದು ತಾನಾಗಿ ಯಾರನ್ನೂ ಹುಡುಕಿ ಹೋಗಿ ಹೇಳಿದ್ದು ಸುಳ್ಳು. ಮಾಡುವ ಪೂಜೆ, ಹೋಮ-ನೇಮಗಳಿಂದ ಏನೂ ಸಿಗದಿದ್ದರೂ ಕೊನೇಪಕ್ಷ ಕರ್ತೃವಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ.

ವೇದಮಂತ್ರಗಳು, ಉಪನಿಷತ್ತು-ಭಾಷ್ಯಗಳು ಮೊದಲಾದವೆಲ್ಲಾ ಸಂಸ್ಕೃತದಲ್ಲಿ ಉಪಲಬ್ಧವಿದ್ದುದರಿಂದ ಅವುಗಳನ್ನು ತಿಳಿದುಕೊಳ್ಳಲು ಪುರೋಹಿತವರ್ಗ ಸಂಸ್ಕೃತಭಾಷೆಯನ್ನು ಓದಿತೇ ಹೊರತು ಅದು ಯಾರಿಗೂ ಗೊತ್ತಾಗದ ಭಾಷೆಯಾಗಿ ತಮಗೆ ಮಾತ್ರ ಸೀಮಿತವಾಗಿರಲಿ ಎಂಬ ದುರುದ್ದೇಶ ಅವರದಲ್ಲ. ಅಷ್ಟಕ್ಕೂ ಭಾರತೀಯ ಮೂಲದ ಸಂಸ್ಕೃತ ಭಾಷೆಯಷ್ಟು ಸೊಗಸಾದ ಭಾಷೆ ಪ್ರಪಂಚದಲ್ಲೇ ಇನ್ನೊಂದಿಲ್ಲ ಎಂಬುದನ್ನು ಎಲ್ಲೇ ನಿಂತು ಹೇಳಲೂ ಹೆದರುವ ವ್ಯಕ್ತಿ ನಾನಲ್ಲ. ಭಾರತೀಯ ಮೂಲ ಸಂಸ್ಕೃತಿಯನ್ನು ಸಾರಿದ್ದೇ ಸಂಸ್ಕೃತ ಎಂದರೆ ತಪ್ಪಲ್ಲ. ಅಂತಹ ಸಂಸ್ಕೃತ ಭಾಷೆಯನ್ನು ಪುರೋಹಿತವರ್ಗಗಳು, ಬ್ರಾಹ್ಮಣರು ಬಳಸಿದ್ದಾರೆ, ಬಳಸುತ್ತಿದ್ದಾರೆ ಮತ್ತು ಬಳಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಅದನ್ನು ’ಸತ್ತ ಭಾಷೆ’ ಎಂದು ದೂರುವುದು ಕಾಣುತ್ತಿದೆ; ಈ ಬೆಳವಣಿಗೆ ವಿಷಾದನೀಯ ಮತ್ತು ಖಡಾಖಂಡಿತವಾಗಿಯೂ ಖಂಡನೀಯ. ಭಾಷೆ ಚೆನ್ನಾಗಿರಬೇಕೆಂದರೆ ಅದಕ್ಕೆ ಅದರದ್ದೇ ಆದ ನಿರ್ದಿಷ್ಟ ಛಂದಸ್ಸು, ವ್ಯಾಕರಣಗಳ ನಿರ್ಬಂಧನೆ ಇರಲೇಬೇಕು. ಬೇರೇ ಭಾಷೆಗಳಿಂದ ಪದಗಳನ್ನು ಸ್ವೀಕರಿಸಬಹುದೇ ಹೊರತು ತನ್ನ ಮೂಲಸ್ವರೂಪದಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳಬಾರದು-ಆಗಮಾತ್ರ ಭಾಷೆ ಸದಾ ಎತ್ತರದ ಸ್ಥಾನದಲ್ಲಿರುತ್ತದೆ ಎಂಬುದು ಭಾಷಾತಜ್ಞರ ಅನಿಸಿಕೆಯಾಗಿದೆ; ಅದು ನನ್ನ ಅನಿಸಿಕೆಯೂ ಕೂಡಾ.

ಹರಿಯುವ ನದಿಯು ಕಾಲಕ್ರಮದಲ್ಲಿ ತನ್ನ ಪಾತ್ರವನ್ನು ಅಲ್ಲಲ್ಲಿ ಬದಲಾಯಿಸಿದಂತೇ ನಮ್ಮ ಕನ್ನಡ ಆಗಾಗ ಬದಲಾಗಿದೆ! ನದಿಯಲ್ಲಿ ಹೂಳು ಸೇರಿಕೊಂಡಂತೇ ಕನ್ನಡದಲ್ಲಿ ಬೇರೇ ಭಾಷೆಗಳ ಪದಗಳೂ ಅತಿಯಾಗಿ ವಿಜೃಂಭಿಸುತ್ತಿವೆ. ಸಂಸ್ಕೃತವೊಂದನ್ನುಳಿದು ಉಳಿದ ಭಾಷೆಗಳ ಅತಿಯಾದ ಪ್ರಭಾವವೇ ಕನ್ನಡದಮೇಲೆ ಜಾಸ್ತಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ತನ್ನ ಮೂಲವನ್ನೇ ಮರೆತು ಹಲವನ್ನು ಸ್ವೀಕರಿಸಿದರೆ ಆಗ ಬೆಳವಣಿಗೆಯ ಬದಲಿಗೆ ವಿನಾಶದ ಹಾದಿ ಹಿಡಿಯಬೇಕಾದೀತು! ಕೇವಲ ’ಪುರೋಹಿತಶಾಹಿಯ ಭಾಷೆ’ ಎಂಬ ಒಂದೇ ಕಾರಣಕ್ಕೆ ಸಂಸ್ಕೃತವನ್ನು ದೂರುತ್ತಾ ಕನ್ನಡದಿಂದ ಸಂಸ್ಕೃತವನ್ನು ಆಮೂಲಾಗ್ರವಾಗಿ ಕಿತ್ತೆಸೆಯಲು ಹೊರಟ ಅಸಂಘಟಿತ ’ಅನಾಮಧೇಯ ಸಂಘ’ದವರು ಕನ್ನಡದಲ್ಲಿನ  ಹಲವು ಮೂಲ ಪದಗಳು ಸಂಸ್ಕೃತದ ಕೊಡುಗೆಗಳೇ ಆಗಿವೆ ಎಂಬುದನ್ನು ಕಿಂಚಿತ್ತಾದರೂ ಯೋಚಿಸಬೇಕಾಗುತ್ತದೆ. ಉದಾಹರಣೆಗೆ: ನೀರು ಎಂಬ ಪದಕ್ಕೆ ಕನ್ನಡದಲ್ಲಿ ಯಾವ ಪದವನ್ನು ಬಳಸುತ್ತೀರಿ? ಜಲ, ಉದಕ...ಇವೆಲ್ಲಾ ಸಂಸ್ಕೃತಮೂಲದವೇ ಆಗಿವೆ. ಬ್ರಾಹ್ಮಣರ ಭಾಷೆ ಎಂಬ ಕಾರಣಕ್ಕೆ ಇತ್ತೀಚೆಗೆ ಸಂಸ್ಕೃತ ವಿಶ್ವವಿದ್ಯಾಲಯವನ್ನೂ ಮುಚ್ಚಿಸುವ ತರಾವರಿ ಪ್ರಯತ್ನಗಳು ನಡೆದಿವೆ!

ದೇಶವಾಸಿಗಳ ಔನ್ನತ್ಯವನ್ನು ಬಯಸಿದ ಸಮಾಜದ ಒಂದು ಸ್ವಸ್ಥ ವರ್ಗ, ಮಾನವ ಬದುಕಿನ ಉತ್ತಮ ಅಂಶಗಳನ್ನು ಕಲೆಹಾಕಿದ ಅಥವಾ ಬದುಕುವ ಕಲೆಯನ್ನು ತಿಳಿಸಿಕೊಡುವ ಉನ್ನತ ಆಕರ ಗ್ರಂಥಗಳನ್ನು ಬಳಸುವ ಸಲುವಾಗಿ, ಅತಿವಿಶಿಷ್ಟವಾದ ದೇವನಾಗರೀ ಲಿಪಿಯನ್ನು ಕಲಿಯುತ್ತದೆ, ಸಂಸ್ಕೃತ ಭಾಷೆಯನ್ನು ಕಲಿಯುತ್ತದೆ ಎಂದಾದಾಗ, "ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ-ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತ ಭಾಷೆ ಬಳಸಿಕೊಳ್ಳುತ್ತಾರೆ-ಹೋಮ-ನೇಮ ಮಾಡಿಸುತ್ತಾರೆ" ಎಂಬ ಅಪವಾದ ಹೊರಬೇಕಾಗಿ ಬಂದಿರುವುದು ಸಮಾಜದಲ್ಲಿ ಎಡಪಂಥೀಯ ರಕ್ಕಸಕುಲದ ಬೆಳವಣಿಗೆ ಸಂಖ್ಯೆಯಲ್ಲಿ ವಿಪರೀತವಾಗುತ್ತಿರುವುದನ್ನು ತಿಳಿಸುತ್ತದೆ. ವಿದೇಶೀ ಮೂಲದ, ಲಂಗುಲಗಾಮು ರಹಿತ ಸ್ವೇಚ್ಛಾಚಾರದ ಲಿವ್-ಇನ್ ಭಾರತಕ್ಕೆ ಬಂದಮೇಲಂತೂ ದೇಶವಾಸಿಗಳ ಮೂಲ ಸಂಸ್ಕೃತಿಯ ಮೇಲೆ ಅದರ ಅಡ್ಡ ಪರಿಣಾಮ ಈಗಾಗಲೇ ಆಗುತ್ತಿದೆ ಎಂಬುದು ದೃಗ್ಗೋಚರವಾದ ವಿಷಯ. ನಾನು ಹಿಂದೊಮ್ಮೆ ಬರೆದಿದ್ದೆ: ಮರಾಠೀ ಮೂಲದ ಉದ್ಯಮಿಯೊಬ್ಬರು, ಕಳೆದ ಸಾಲಿನಲ್ಲಿ ಮುಂಬೈಯಲ್ಲಿ ಅದ ಏಕಕಾಲದ ಅತಿವೃಷ್ಟಿಯಂದು ಯಾರ್ಯಾರೋ ಯಾರ್ಯಾರಿಗೋ ತಮ್ಮ ಮನೆಗಳಲ್ಲಿ ಅತಿಥಿಗಳಾಗಿ ಕರೆದು ಆಶ್ರಯ ನೀಡಿ ಸತ್ಕರಿಸಿದ್ದನ್ನು ನೆನೆದರು-ಭಾರತೀಯ ಸಂಸ್ಕೃತಿಯನ್ನು ನೆನೆದು ಕಣ್ಣೀರಾದರು ಎಂದು. ಹೆಚ್ಚಿನ ಆರ್ಥಿಕತೆ ಇದ್ದರೂ ಇಲ್ಲದಿದ್ದರೂ ಇರುವುದರಲ್ಲೇ ಸಂತೃಪ್ತಭಾವವನ್ನು ಪಡೆಯುವ ಕಲೆಯನ್ನು ನಮ್ಮ ಸಂಸ್ಕೃತಿ ಕಲಿಸಿಕೊಟ್ಟಿದೆಯೇ ವಿನಃ ಕ್ರೆಡಿಟ್ ಕಾರ್ಡ್ ಕಲ್ಚರನ್ನಲ್ಲ! ’ಢೋಂಗೀ ಧನಿಕ’ರಾಗಿ ಒಳಗೊಳಗೇ ಅನುಭವಿಸುವ ಆರ್ಥಿಕ-ಮಾನಸಿಕ ಒತ್ತಡಗಳನ್ನಲ್ಲ. 

ದಿನಪತ್ರಿಕೆಯೊಂದರ ಸಂಪಾದಕರು ಬದಲಾಗುತ್ತಿದ್ದಂತೆಯೇ ಆ ಪತ್ರಿಕೆಯ ಅಂಕಣಗಳೂ, ಅಂಕಣಕಾರರೂ ಬದಲಾಗಿದ್ದು ಕಾಣಿಸುತ್ತಿದೆ. ಸಮಾಜಕ್ಕೆ ನೀತಿಯನ್ನು, ಸನ್ಮಾರ್ಗವನ್ನು ಬೋಧಿಸುವ ನೈತಿಕ ಜವಾಬ್ದಾರಿಯನ್ನು ಮಾಧ್ಯಮ ಮಾಡುತ್ತಿತ್ತು; ಆದರೆ ಈಗ ಅದು ಹಾಗಿಲ್ಲ. ’ಮಾಧ್ಯಮ’ ಎಂಬುದು ’ಹೆಚ್ಚಿನ ಸಂಪಾದನೆಯ-ಮಾಧ್ಯಮ’ವಾಗಿ ಪರಿಣಮಿಸಿದ ಈ ಕಾಲದಲ್ಲಿ ಬೇಕಾದ್ದು-ಬೇಡಾದ್ದು ಎಲ್ಲವನ್ನೂ ಸೇರಿಸಿಕೊಂಡು ಪತ್ರಿಕೆಯೋ ವಾಹಿನಿಯೋ ಸಮಾಜವನ್ನು ತಲ್ಪುತ್ತಿದೆ. ದಿನವೂ ವಾಹಿನಿಗಳಲ್ಲಿ ಕೆಟ್ಟಘಟನೆಗಳು, ಕೊಲೆ-ಸುಲಿಗೆ-ದರೋಡೆಗಳು ವೈಭವೀಕರಿಸಲ್ಪಡುತ್ತಿವೆ. ಒಬ್ಬಾತ ಹನ್ನೆರಡು ಮದುವೆಯಾಗಿದ್ದ, ಪೋಲೀಸರು ಕೇಳಿದಾಗ ಆತ ಹೇಳಿದ: "ಟಿವಿ ಯಲ್ಲಿ ಒಬ್ಬ ಮಾಡಿದ್ದನ್ನು ತೋರಿಸಿದ್ದರು ಅದೇರೀತಿ ನಾನೂ ಮಾಡಿದೆ!" ನಿತ್ಯವೂ ವೀಕ್ಷಕರಲ್ಲಿ, ಓದುಗರಲ್ಲಿ ಮಕ್ಕಳ ಸಂಖ್ಯೆಯೂ ಒಂದು ಭಾಗವಿರುತ್ತದಷ್ಟೇ? ಕೆಟ್ಟದನ್ನೇ ಒಳ್ಳೆಯದೇನೋ ಎಂಬಂತೇ ಎತ್ತಿ ಎತ್ತಿ ತೋರಿಸುವ, ಓದಿಸುವ ಮಾಧ್ಯಮವಿರುವಾಗ ಎಳೆಯ ಮಕ್ಕಳ ಮನಸ್ಸಿನಮೇಲೆ ಅದು ವ್ಯತಿರಿಕ್ತ ಪರಿಣಾಮ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ವರದಿಯಾದ ಒಂದು ಘಟನೆ ಹೀಗಿದೆ: ಮನೆಯಲ್ಲಿ ಹೋಳಿಗೆ ಮಾಡುತ್ತಿದ್ದರು, ಅನುಕೂಲಸ್ಥರ ಮಹಡಿಮನೆ, ಬಾಲಕ ಮಹಡಿಗೆ ತೆರಳಿದ. ನೇಣುಹಾಕಿಕೊಳ್ಳುವ ದೃಶ್ಯವನ್ನು ಆತ ಟಿವಿಯಲ್ಲಿ [’ಮರುಸೃಷ್ಟಿ’ಯಲ್ಲಿ]ನೋಡಿದ್ದನಂತೆ-ಅದನ್ನು ಕ್ರಿಯಾತ್ಮಕವಾಗಿ ನಡೆಸಿದ. ಹೋಳಿಗೆಮಾಡಿ ಮುಗಿಯುವ ವೇಳೆಗೆ ಮನೆಜನ ಬಾಲಕನನ್ನು ಹುಡುಕಿದರು-ಬಾಲಕ ಸತ್ತುಹೋಗಿದ್ದ! ಸಂವೇದನೆಯೇ ಇಲ್ಲದ ಮತ್ತು ಸಂಪಾದನೆಯೇ ಮುಖ್ಯವಾದ ಮಾಧ್ಯಮಗಳಿಂದ ಸುಸಂಸ್ಕೃತ ಸಮಾಜವನ್ನು ನಿರೀಕ್ಷಿಸಲು ಸಾಧ್ಯವೇ?

ಹೊಸ ಸಂಪಾದಕತ್ವದಲ್ಲಿ ಜನರನ್ನು ತಲ್ಪುತ್ತಿರುವ ದಿನಪತ್ರಿಕೆಯೊಂದು ಜನರಿಗೆ ’ಬಯ್ಗುಳ’ದ ಬಗ್ಗೆ ಅಂಕಣವನ್ನೇ ಆರಂಭಿಸಿದ ಹಾಗಿದೆ! ಸಭ್ಯ ಮತ್ತು ಸ್ವಸ್ಥ ಸಮಾಜಕ್ಕೆ ಬಯ್ಗುಳದ ಬಗ್ಗೆಯೂ ಹೊಸದಾಗಿ ತಿಳುವಳಿಕೆ ನೀಡಬೇಕೇ? ನೋಡೀ ಸ್ವಾಮೀ ಸಂಸ್ಕೃತದಂತಹ ’ಪುರೋಹಿತಶಾಹಿ ಭಾಷೆ’ ಇಂತಹ ಕೆಟ್ಟ ಯೋಜನೆ ಮತ್ತು ಯೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ! ನವಿಲು ಕುಣಿಯಿತು ಎಂದು ಕೆಂಬೂತನೂ ...ಎಂಬ ಗಾದೆ ನಿಮಗೆ ತಿಳಿದೇ ಇದೆ. ನಾಯಿಗೆ ಆಹಾರ ಸಿಗದಾಗ, ಸಿಕ್ಕ ಹಳೆಯ ಎಲುಬಿನ ತುಂಡನ್ನೇ ಅಗಿಯುತ್ತಾ, ತನ್ನ ದವಡೆಯಲ್ಲಿ ಗಾಯವಾಗಿ ಸೋರುವ ರಕ್ತವನ್ನೇ ತಾನು ಚಪ್ಪರಿಸುತ್ತದಂತೆ, ಅದೇರೀತಿ ಸುದ್ದಿಮನೆಯಲ್ಲಿ ಸಿಗುವ ಸುದ್ದಿಗಳು ಸಾಲದಾದಾಗ ಯಾ ಹೊಸತನವನ್ನು ಕೊಡುವ ಹುಚ್ಚುಹಂಬಲ ಅತಿಯಾದಾಗ ’ಬಯ್ಗುಳ’ದಂತಹ ವಿಪರೀತ ಅಂಕಣಗಳು ಒಡಮೂಡಲು ಸಾಧ್ಯ; ಇದಕ್ಕೆ ಸಂಪಾದಕರು ಕಾರಣವೋ ವರದಿಗಾರರು ಕಾರಣವೋ ಓದುಗರೇ ಹುಡುಕಬೇಕಾಗಿದೆ.

ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲದಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ’ಪತ್ರಿಕಾಕರ್ತರನ್ನು ಗೌರವಿಸುವ ಕಾರ್ಯಕ್ರಮ’ಕ್ಕೆ ಒಮ್ಮೆ ಡೀವೀಜಿಯವರು ಹೋಗಿದ್ದರಂತೆ. ಮೈಸೂರು ಸರಕಾರ ಪತ್ರಿಕಾಕರ್ತರನ್ನು ಹೊಗಳಿ ಅವರಿಗೆ ಒಂದಷ್ಟು ಹಣಕೊಟ್ಟು ಕಳಿಸುವ ಇರಾದೆ ಮಹಾರಾಜರ ಕಾಲದಲ್ಲೂ ಇತ್ತು ಎನಿಸುತ್ತದೆ. ಸನ್ಮಾನ ಮುಗಿದು ಡೀವೀಜಿ ಬೆಂಗಳೂರಿಗೆ ಮರಳಿ ಬಂದ ಕೆಲವೇ ದಿನಗಳಲ್ಲಿ ಅವರಿಗೆ  ೨೦೦ ರೂ. ತಲ್ಪಿತಂತೆ! ತನಗೆ ತಲ್ಪಿದ ಇನ್ನೂರು ರೂಪಾಯಿಯನ್ನು ಹಿಡಿದುಕೊಂಡು ನೇರವಾಗಿ ಸಂಬಂಧಪಟ್ಟ ಕಚೇರಿಗೆ ತೆರಳಿದ ಡೀವೀಜಿಯವರು ಯಾಕೆ ಹಾಗೆ ತನಗೆ ಹಣ ಕಳಿಸಿದ್ದು ಎಂದು ಕೇಳಿದರಂತೆ. "ನೀವು ಮೈಸೂರಿಗೆ ಬರ-ಹೋಗುವ ಖರ್ಚೂ ಸೇರಿದಂತೇ ನಿಮಗೆ ಖರ್ಚುಗಳಿರುತ್ತವೆ-ಅದಕ್ಕಾಗಿ" ಎಂದು ಬಂದ ಉತ್ತರಕ್ಕೆ ದಂಗಾದ ಡೀವೀಜಿ ಆ ಇನ್ನೂರು ರೂಪಾಯಿಗಳನ್ನು ಸರಕಾರಕ್ಕೆ ಮರಳಿಸಿದರು. ಪತ್ರಕರ್ತನಿಗೆ ತನ್ನ ದಿನನಿತ್ಯದ ಖರ್ಚಿನ ಭಾಗವಾಗಿ ಪತ್ರಿಕೆಗೆ ವರದಿಮಾಡಲು ವಿನಿಯೋಗಿಸುವ ಸಮಯ-ಪರಿಕರಗಳೂ ಸೇರಿವೆ ಎಂಬುದು ಅವರ ಅನಿಸಿಕೆಯಾಗಿತ್ತಂತೆ. ಹಣವನ್ನೇ ಗುರಿಯಾಗಿಸಿಕೊಂಡು ಅವರೆಂದೂ ಪತ್ರಿಕಾಕರ್ತರಾಗಲಿಲ್ಲ; ಡೀವೀಜಿ ತಮ್ಮ ತಪ್ಪುಗಳನ್ನು ಬರೆದುಬಿಡುತ್ತಾರೆ ಎಂಬ ಹೆದರಿಕೆಯೂ ಸರಕಾರಕ್ಕೆ ಇಲ್ಲದಿರಲಿಲ್ಲ! ಅಂದಿನ ಸರಕಾರದ ಕೆಲಸಕ್ಕೆ ಮುಂಚಿತವಾಗಿ ಸಲಹೆ ಪಡೆಯುವ ಸಲುವಾಗಿ ಸ್ವತಃ ವಿಶ್ವೇಶ್ವರಯ್ಯನವರೇ ಡೀವೀಜಿಯವರ ಕಚೇರಿಗೆ ಬರುತ್ತಿದ್ದರಂತೆ!! 

ಹಲವು ಬೇಡದ ಹೂರಣಗಳನ್ನು ತುಂಬಿಸಿ ವರದಿಯನ್ನು ಒಪ್ಪಿಸಿ, ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದೇವೆಂದು ಬಡಾಯಿಕೊಚ್ಚಿಕೊಳ್ಳುವುದಕ್ಕಿಂತಾ, ಸಮಾಜಮುಖಿಯಾಗಿ ಕೆಲವೇ ವರದಿಗಳನ್ನು ಸಲ್ಲಿಸುವುದು ಹಿತಕರವೆನಿಸುತ್ತದೆ. ಕೆಲಸಕ್ಕೆ ಬಾರದ ವ್ಯಕ್ತಿಗಳ ಒಣಕಥೆಗಳನ್ನೂ ಜಂಬದ ಸರಕುಗಳನ್ನೂ ಬಿಂಬಿಸುವುದಕ್ಕಿಂತಾ ಸಶಕ್ತವಾದ ಮತ್ತು ಮೊನಚಾದ ಲೇಖನಗಳು ಪ್ರಕಟಿಸಲ್ಪಟ್ಟರೆ, ಅವು ಖಡ್ಗದಂತೇ ಕೆಲಸಮಾಡಬಲ್ಲವು ಮತ್ತು ಆಳುವ ಪ್ರಭುಗಳಿಗೆ [ಅವರಿಗೆ ಒಪ್ಪಿಕೊಳ್ಳುವ ಸ್ವಭಾವ ಇದ್ದರೆ] ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಹೇಳಬಲ್ಲವು; ಅಶಕ್ತವಾದ ಮತ್ತು ರೋಗಗ್ರಸ್ತ ಮನಸ್ಸುಗಳ ವಿಚಿತ್ರ ತೆವಲುಗಳುಳ್ಳ ಬರಹಗಳಿಗಿಂತ ಈ ದಾರಿ ಉತ್ತಮವೆನಿಸುತ್ತದೆ. ಎಲ್ಲಿಯವರೆಗೆ ಎಡಪಂಥೀಯ ಅಧುನಿಕ ರಾಕ್ಷಸರ ಮನದಲ್ಲಿ, ಬಾಯಲ್ಲಿ, ಕೃತಿಯಲ್ಲಿ  ಸುಖಾಸುಮ್ನೇ ’ಪುರೋಹಿತಶಾಹಿ’ ಮತ್ತು ಪುರೋಹಿತಶಾಹಿ ಭಾಷೆ [ಸಂಸ್ಕೃತ]’ ಎಂಬ ಧೋರಣೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಸ್ವಸ್ಥ ಸಮಾಜದ ನಿರ್ಮಾಣ ’ಕನ್ನಡಿಯಲ್ಲಿ ಕಂಡ ಗಂಟಾ’ಗಿರುತ್ತದೆಯೇ ವಿನಃ ಅದು ನಮಗೆಟುವುಕಿದಿಲ್ಲ! ಕನ್ನಡದ ಬೆಳವಣಿಗೆಯೂ ಆಗ ಸಾಧ್ಯವಾಗುವುದಿಲ್ಲ.  


Friday, June 15, 2012

"ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು"

ಚಿತ್ರಋಣ : ಅಂತರ್ಜಾಲ 

"ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು"

ಒತ್ತಿಹಾಕುವ ಡಬ್ಬದ ಮುಚ್ಚಳ ಗಟ್ಟಿಯಾಗಿದ್ದರೆ ತೆರೆಯಲು ಬಳಸುವುದು ಉಗುರುಗಳನ್ನು. ನೋಡುವುದಕ್ಕೆ ಉಗುರುಗಳು ಬರೇ ಅಲಂಕಾರಿಕ, ಆದರೆ ಅವುಗಳ ಕೆಲಸಮಾತ್ರ ಜಾಸ್ತಿ ಪರಿಗಣಿತವಾಗುವುದಿಲ್ಲ. ಮನೆಯ ಮುಂದಿನ ಕುನ್ನಿಗೆ ಅಂತಹ ಕೆಲಸವಾದರೂ ಏನು ? ಆದರೆ ಅದರ ಕೆಲಸ ಏನು ಎಂಬುದು ಅದಕ್ಕೆ ಮಾತ್ರ ಗೊತ್ತು! ಅದಕ್ಕೇ ನಮ್ಮಲ್ಲೊಂದು ಗಾದೆ ಇದೆ: " ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ." ಈಗೀಗ ನಗರಗಳಲ್ಲಿ ಕುನ್ನಿಗಿಂತಾ ಪಾಪ ಕುನ್ನಿ ಮಾಲೀಕರಿಗೇ ಹೆಚ್ಚಿನ ಕೆಲಸ. ನಿತ್ಯ ಕುನ್ನಿ ಮೈ ತೊಳೆಸಬೇಕು, ಕೂದಲು ಬಾಚಬೇಕು, ಸ್ನೋ ಪೌಡರ್, ಬಟ್ಟೆ ಬೆಲ್ಟು [ಚಡ್ಡಿ, ಟೈ] ವಗೈರೆ ಹಾಕಬೇಕು. ಊಟಕ್ಕೆ ದುಬಾರಿ ಬೆಲೆಯ, ಎಲುಬಿನ ಆಕಾರದ ಬ್ರಾಂಡೆಡ್ ತಿನಿಸುಗಳನ್ನು ತಂದುಕೊಡಬೇಕು. ಬೆಳ್ಳಂಬೆಳಗ್ಗೆ ಪಕ್ಕದ ಮನೆಯವ ಏಳುವ ಮೊದಲೇ ಕುನ್ನಿಯನ್ನು ಒಯ್ದು ಅವರ ಮನೆ ಕಂಪೌಂಡ್ ಹೊರಗಿನ ರಸ್ತೆಯಲ್ಲಿ ಕಕ್ಕ-ಸೂಸು ಮಾಡಿಸಿಕೊಂಡು ವಾಪಸ್ಸಾಗಬೇಕು. ಸಾಯಂಕಾಲ ಕುನ್ನಿಗೆ ವಾಕಿಂಗ್ ಮಾಡಿಸಬೇಕು. ಛೆ ಛೆ ಪ್ರೀತಿಯ ನಾಯಿಗೆ ಅಷ್ಟೂ ಮಾಡದಿದ್ದರೆ ಹೇಗೆ ಪಾಪ ?

ನಮ್ಮಲ್ಲೆಲ್ಲಾ ಗಾಂವ್ಟಿ ಕುನ್ನಿಗಳಿದ್ದವು. ಹೆಸರೇ ದಾಸ, ಹಂಡ, ಕಾಳ ಇತ್ಯಾದಿ ಇರುತ್ತಿದ್ದು ನಾವು ತಿನ್ನುವ ಆಹಾರವನ್ನೇ ಕುನ್ನಿಗೆ ಕೊಡುತ್ತಿದ್ದೆವು. ಕುನ್ನಿಗೆ ನಿತ್ಯ ಸೇವೆ ಎಂದು ಹೆಚ್ಚಿನದೇನೂ ಇರುತ್ತಿರಲಿಲ್ಲ. ಮನೆಯ ಅಂಗಳದ ಮೂಲೆಯಲ್ಲಿ ಮಲಗಿದ್ದು ತನ್ನ ಕೆಲಸಗಳನ್ನು ಮಾಡಿಕೊಂಡಿರುತ್ತಿತ್ತು. ಈಗ ನಗರಗಳಲ್ಲಿ ಕುನ್ನಿಗೆ ನಮ್ಮ ಜೊತೆಗೇ ಬೆಡ್ಡು, ನಮ್ಮ್ ಜೊತೆಗೇ ಬ್ರೆಡ್ಡು! "ಬಡವರ ಮನೆಯಲ್ಲಿ ಮಗುವಾಗಿ ಜನಿಸುವುದಕ್ಕಿಂತಾ ಧನಿಕರ ಮನೆಯಲ್ಲಿ ಕುನ್ನಿಯಾಗಿ ಹುಟ್ಟುವುದೇ ಮೇಲು" ಎಂಬ ಹೊಸ ಗಾದೆಯನ್ನು ಬರೆದಿಟ್ಟಿದ್ದೆ-ಈಗ ನಿಮಗೆ ಕೊಡುತ್ತಿದ್ದೇನೆ; ಸಾಂದರ್ಭಿಕವಾಗಿ ಉದಾರವಾಗಿ ಬಳಸಿಕೊಳ್ಳಬಹುದು! ಪುಣ್ಯಕ್ಷೇತ್ರಗಳಲ್ಲಿ ದೇವರಿಗೆ ಆ ಸೇವೆ ಈಸೇವೆ ಎಂತ ನೂರೆಂಟು ಸೇವೆಗಳನ್ನು ನಡೆಸುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಅಲ್ಲಿ ದೇವರಿಗೆ ಹೊತ್ತಿನಿಂದ ಹೊತ್ತಿಗೆ ಹೇಗೆ ಸೇವೆಗಳು ಸಲ್ಲಿಸಲ್ಪಡುತ್ತವೋ ಹಾಗೇ ಅಥವಾ ಅದಕ್ಕಿಂತಾ ಉತ್ತಮ ಸಮಯ ಪರಿಜ್ಞಾನದಿಂದ ನಗರವಾಸಿಗಳು ತಮ್ಮ ಕುನ್ನಿಗೆ ಸೇವೆ ಸಲ್ಲಿಸುತ್ತಾರೆ. ಹೆಣ್ಣಾದರೆ ಕಾಡಿಗೆ, ಬಿಂದಿ ಬಣ್ಣದ ರಿಬ್ಬನ್ನು, ಲೇಸ್ ಹಚ್ಚಿದ ಫ್ರಾಕು, ಇನ್ನೇನು ಲಿಪ್ ಸ್ಟಿಕ್ ಕೂಡಾ ಬಳಸುವ ದಿನ ಹತ್ತಿರದಲ್ಲೇ ಇದೆ!

ಜಾತೀ ನಾಯಿಗಳಲ್ಲಿ ಹಲವು ವಿಧಗಳು ಅಂತ ತಿಳಿದಿದೆಯಲ್ಲಾ, ಅವುಗಳ ಮುಖವನ್ನೊಮ್ಮೆ ನೋಡುತ್ತಿರಿ: ಕೆಲವು ಪೋಲೀಸ್ ಇನ್ಸ್ಪೆಕ್ಟರ್ ನಂತೇ ನೋಡುತ್ತಿರುತ್ತವೆ, ಕೆಲವುಗಳ ಮುಖ ಟ್ರಾಫಿಕ ಪೇದೆ ಮೂಗಿಗೆ ಏರ್ ಫಿಲ್ಟರ್ ಹಾಕಿಕೊಂಡಾಗ ಹೇಗೆ ಕಾಣಿಸುತ್ತಾನೋ ಹಾಗಿರುತ್ತದೆ, ಕೆಲವು ಹಳೇಕಾಲದ ದಫೇದಾರರು ನಡೆದಂತೇ ನಡೆಯುತ್ತಾ ನಿಧಾನವಾಗಿ ಅಡ್ಡಡ್ಡ ಆಚೀಚೆ ನೋಡುವ ದೊಡ್ಡ ಮುಖದವು, ಇನ್ನು ಕೆಲವು ಮೈಗಿಂತಾ ಮುಖವೇ ಉದ್ದವೇನೋ ಎಂಬ ರೀತಿ ಮುಖವನ್ನು ಪಡೆದಿವೆ, ಕೆಲವಕ್ಕೆ ಉರುಟುರುಟು ಮುಖ, ಇನ್ನೂ ಕೆಲವಕ್ಕೆ ದೊಡ್ಡ ಕಣ್ಣು- ಕಣ್ಣ ಹುಬ್ಬಿನಲ್ಲಿ ಉದ್ದುದ್ದ ಕೂದಲು. ಬಣ್ಣದಲ್ಲಿ ಕೆಲವು ಸಿಮೆಂಟ್ ವಿಗ್ರಹಗಳಂತೇ ಕಂಡರೆ ಕೆಲವು ಹಂಡುಪಟ್ಟೆ [ಕಪ್ಪು-ಬಿಳುಪು, ಕಂದು ಬಿಳುಪು]. ಕೇಸರಿ ಬಣ್ಣದ ಕುನ್ನಿಯೊಂದು ಎದುರಾದಾಗ ಬಿಜೆಪಿಗೆ ಹೇಳಿಮಾಡಿಸಿದ್ದು ಎನಿಸಿತಾದರೂ ಕೈಗೆ ಮಿಶ್ರಬಣ್ಣದ್ದನ್ನ ಹೇಗೋ ಒದಗಿಸಿಕೊಂಡರೂ ದಳದಕ್ಕೆ ಏನು ಮಾಡೋಣ ಎಂಬ ಚಿಂತೆ ಜಾಸ್ತಿಯಾಗ್ಹೋಯ್ತು ಹೀಗಾಗಿ ಸತ್ಕೊಂಡ್ ಹೋಗ್ಲಿ ಎಂದು ಸುಮ್ನಾಗಿಬಿಟ್ಟೆ. ಅಂದಹಾಗೇ ಹಸಿರು ಮತ್ತು ನೀಲಿ ನಾಯಿಗಳು ಜಗತ್ತಿನ ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿಯಾದರೂ ಬಳಕೆಯಲ್ಲಿರಬಹುದು ಎಂದು ಈಗ ಹೊಸ ಆಲೋಚನೆ ಒಡಮೂಡಿದೆ.

ಹಳ್ಳಿಕಡೆ ಹತ್ತುಮಂದಿ ಸಾಕಿದ ಬಡಕಲು ನಾಯಿ ಕಂಡಾಗ, ಪಾಪ ನಾಯಿ ಜಾತಿ ಎಂದು ನಾವು ತಮಾಷೆಯಾಡುವುದಿತ್ತು. ಸಣಕಲು ಶರೀರದ, ಇನ್ನೇನು ಸತ್ತೇ ಹೋಗುವುದೇನೋ ಎಂಬಂತಿರುವ ಅಂತಹ ಕುನ್ನಿಗಳಿಗೆ ಎಲ್ಲೋ ಬೀದಿಗಳಲ್ಲೋ ತೋಟದ ಬದುಗಳಲ್ಲೋ ಜನ ತಿಂದು ಮಿಕ್ಕಿದ್ದನ್ನು ಬಿಸಾಕಿದರೇ ಉಂಟು ಇಲ್ಲದಿದ್ದರೆ ಇಲ್ಲ. ಕೆಲವೊಮ್ಮೆ ಅವುಗಳನ್ನು ಕಂಡಾಗ ನಿಜವಾದ ’ಉಪವಾಸ’ದ ಅರ್ಥವೇನು ಮತ್ತು ಉಪವಾಸ ಮಾಡುವುದು ಹೇಗೆ ಎಂಬುದನ್ನು ಅವುಗಳಿಂದ ತಿಳಿದುಕೊಳ್ಳಬಹುದೇನೋ ಅನಿಸುತ್ತಿತ್ತು. ಹಾದಿಯಲ್ಲಿ ಸಿಗುವ ಹುಚ್ಚರನ್ನು ಕಂಡೋ ಇನ್ಯಾವುದೋ ಸದ್ದನ್ನು ಆಲಿಸಿಯೋ ಅವೂ ಕೂಗುತ್ತವೆ!  ಅಂದಹಾಗೇ ನಮ್ಮ ಹಳ್ಳೀಲಿ ಒಬ್ಬರ ಮನೇಲಿ ಒಂದು ಕುನ್ನಿ ಸಾಕಿದ್ದರು. ಅವರ ಲೆಕ್ಕದಲ್ಲಿ ಬಹಳ ಪರಾಕ್ರಮಿ! ನಡೆದಿದ್ದಿಷ್ಟೇ: ಒಂದು ಕಾರ್ತೀಕದ ರಾತ್ರಿ ಊರ ನಡುವಿನ ದೇವಸ್ಥಾನದಲ್ಲಿ ರಾತ್ರಿಯ ದೀಪೋತ್ಸವ ಮುಗಿಸಿಕೊಂಡು ನಾನು ಮರಳುತ್ತಿದ್ದೆ. ಕಾಲುದಾರಿಯಲ್ಲಿ ಕೇರಿಯ ಮೂಲಕ ಸಾಗಿಬರುವಾಗ ಆ ಕುನ್ನಿ ಮಾಲೀಕರ ಮನೆ ಸಿಗುತ್ತಿತ್ತು. ರಾತ್ರಿ ೯ ಮೀರಿ ಹೋಗಿತ್ತು,  ಆ ಮನೆಯ ಆಜುಬಾಜು ದೀಪ ಕಾಣುತ್ತಿರಲಿಲ್ಲ. ಮಾಲೀಕರು ಒಂದೇ ಮಲಗಿರಬೇಕು; ಇಲ್ಲಾ ಇನ್ನೆಲ್ಲೋ ಹೋಗಿರಬೇಕು. ಸರಿ, ನನ್ನ ಪಾಡಿಗೆ ನಾನು ಟಾರ್ಚ್ ಹಾಕಿಕೊಂಡು ಸಾಗುತ್ತಾ ಬಂದಾಗ ದೂರದಿಂದಲೇ ಅವರ ನಾಯಿಯ ’ಘರ್ಜನೆ’ ಕೇಳುತ್ತಿತ್ತು. ಮುಂದೆ ಹಾದಿ ತುಳಿದರೆ ಎಲ್ಲಾದ್ರೂ ಕಚ್ಚಿಬಿಟ್ರೆ ಎಂಬ ಭಯ ನನ್ನಲ್ಲಿ ಉದ್ಭವವಾದರೂ, ನೋಡೋಣ ಅಂದ್ಕೊಂಡು  ಟಾರ್ಚನ್ನು ಸ್ವಲ್ಪ ಕೂಗುವ ನಾಯಿಯ ಮುಖದೆಡೆಗೆ ತಿರುಗಿಸಿದೆ, ಇಲ್ಲಾ ಸರಪಳಿ ಹಾಕಿಲ್ಲ, ದಪ್ಪ ನಾಯಿ ಬೇರೆ! ಮೈಮೇಲೆ ಹಾರಿದರೂ ಹಾರಿಬಿಡಬಹುದು ಎಂಬುದು ನನ್ನ ಆ ಕ್ಷಣದ ಅನಿಸಿಕೆ.             

ಯಾವಾಗ ಮುಖದಮೇಲೆ ಬೆಳಕು ಬಿತ್ತೋ ನಾಯಿ ಅವರ ಮನೆಯ ಆ ಕಡೆ ಪಕ್ಕಕ್ಕೆ ಸ್ವಲ್ಪ ಸರಿದ ಹಾಗೇ ಕಂಡಿತು. ಓಹೋ ಆ ಕಡೆ ಹೋಗಿ ಕ್ರಿಕೆಟ್ ಬೌಲರ್ ಥರಾ ಒಮ್ಮೆಲೇ ಜಿಗಿದು ಬರುತ್ತದೇನೋ ಎಂಬ ಅನುಮಾನ ಇದ್ದರೂ ಸ್ವಲ್ಪ ಧೈರ್ಯಮಾಡಿಕೊಂಡು ಮುಂದೆ ಹೆಜ್ಜೆಹಾಕಿ ಆ ಕಡೆ ಸರಿದ ನಾಯಿಗೆ ಮತ್ತೆ ಟಾರ್ಚ್ ಬೆಳಕು ಬಿಟ್ಟೆ. ನಾಯಿ ಆ ಮನೆಯ ಹಿಂದಕ್ಕೆ ಓಡಿಹೋಯ್ತು! ಏನಾಶ್ಚರ್ಯ, ನನಗೂ ನೋಡಿಬಿಡುವ ಹುಮ್ಮಸ್ಸು, ಮನೆಯ ಹಿಂದುಗಡೆ ನಾಯಿಯಿರುವ ಜಾಗದೆಡೆ ಹೋಗುತ್ತಾ ಮತ್ತೆ ಬೆಳಕು ಚೆಲ್ಲಿದೆ, ನಾಯಿ ಮನೆಯ ಪಕ್ಕದ ಎತ್ತರದ  ಜಾಗಕ್ಕೆ ಓಡಿಹೋಗಿ ಅಲ್ಲಿಂದ ಬೊಗಳು ಛೆ...ಛೆ ಘರ್ಜಿಸುತ್ತಿತ್ತು! ಇಷ್ಟೇ ಅಂದುಕೊಂಡು ಮನೆಯ ದಾರಿ ಹಿಡಿದೆ. ನಾನು ದೂರಸಾಗಿದ್ದನ್ನು ಕಂಡ ’ಹುಲಿ’ಯಂತಹ ಆ ನಾಯಿ ಮತ್ತೆ ತನ್ನ ಸ್ವಸ್ಥಾನಕ್ಕೆ ಮರಳಿ ’ಘರ್ಜಿಸ’ತೊಡಗಿತು. ಮಾರನೇ ಬೆಳಿಗ್ಗೆ ನಮ್ಮ ಪಕ್ಕದ ಮನೆಯ ಓರಗೆಯವರಲ್ಲಿ ಹೇಳಿಕೊಂಡು ನಕ್ಕದ್ದೇ ನಕ್ಕಿದ್ದು.

ಬೆಂಗಳೂರಿನ ರಾಜಾಜಿನಗರದಲ್ಲಿ ಬೆಳಿಗ್ಗೆ ಹಾಲುತರಲೆಂದು ನಾನು ಹೋದರೆ ಒಮ್ಮೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಹಾಲಿನ ಪ್ಯಾಕೆಟ್ ಗಳಿಂದ ತುಂಬಿದ ಪ್ಲಾಸ್ಟಿಕ್ ಬ್ಯಾಗೊಂದನ್ನು ನಾಯಿ ಬಾಯಲ್ಲಿ ಕಚ್ಚಿಕೊಂಡು ನಡೆದುಬರುತ್ತಿತ್ತು. ಅದರಿಂದ ಅನತಿ ದೂರದಲ್ಲಿ ಅದರ ಮಾಲೀಕರು ನಡೆದುಬರುತ್ತಿದ್ದರು. ಗುಡಾಣ ಹೊಟ್ಟೆಯ ಮಾಲೀಕರಿಗೆ ನಾಯಿ ಸಲ್ಲಿಸುವ ಸೇವೆಯನ್ನೂ ಮರೆಯಬಾರದಲ್ಲ! ಕೆಲವು ಮನೆಗಳಲ್ಲಿ ಯಜಮಾನ್ ನಾಯಿಗಳಿರುತ್ತವೆ! ಅವು ದಿನಪತ್ರಿಕೆಗಳನ್ನು ತೆರೆದು ಓದುವವರಂತೇ ತಿರುವಿಹಾಕುವುದನ್ನೂ ಮತ್ತೆ ಜೋಡಿಸಿ ಇಡುವ ಸರ್ಕಸ್ಸನ್ನೂ ಕಂಡಿದ್ದೇನೆ. ಇನ್ನು ಕೆಲವು ಮನೆಗಳಲ್ಲಿ ನಾಯಿಗೆ ಮಾಡಿರುವ ಗೂಡುಗಳ ಬಾಗಿಲುಗಳನ್ನು ಅವೇ ತೆರೆದುಕೊಂಡು ಒಳಗೆ ಹೋಗಿ ವಿಶ್ರಮಿಸುತ್ತವೆ. ಕೆಲವು ಮನೆಗಳ ನಾಯಿಗಳು ಅವುಗಳ ಮಾಲೀಕರು ನಡೆದಂತೇ ನಡೆಯುತ್ತವೆ: ಕೆಲವರು ಸ್ವಭಾವತಃ ವಿವಿಧ ರೀತಿಯಲ್ಲಿ ನಡೆಯುತ್ತಾರೆ, ಕೆಲವರು ನಡೆಯುವಾಗ ಇಡೀ ಶರೀರ ಹಳೇಗಡಿಯಾರದ ಲೋಲಕದ ರೀತಿ ಆ ಕಡೆ ಅರ್ಧ ಈ ಕಡೆ ಅರ್ಧ ವಾಲುತ್ತಾ ನಡೆಯುತ್ತಾರೆ, ಇನ್ನು ಕೆಲವರದು ಹವಾಲ್ದಾರ್ ನಡಿಗೆ, ಕೆಲವರು ಮಿಲಿಟ್ರಿ ರಿಟಾಯರ್ಡ್ ಇದ್ದಹಾಗೇ ನಡೆದರೆ ಮತ್ತೆ ಕೆಲವರು ಯಾಕಾದ್ರೂ ಬೇಕಿತ್ತು ಈ ಲೋಕ ಅಂದುಕೊಂಡವರ ಹಾಗೇ ನಡೆಯುತ್ತಾರೆ; ನಡಿಗೆಯಲ್ಲಿ ಅವರ ನಾಯಿಗಳು ಅವರುಗಳನ್ನೇರ್ ಅನುಸರಿಸುವುದನ್ನು ಕಂಡು ಬೆಕ್ಕಸಬೆರಗಾಗಿದ್ದೇನೆ-ಕಣ್ಣಲ್ಲೂ ಅದೆಂಥಾ ಭಾವನೆಯಪ್ಪಾ ಶಿವನೇ!

ಕೆಲವು ಮನೆಗಳಲ್ಲಿ ಕುನ್ನಿ ಮಾಲೀಕರೇ ಸಣಕಲು, ನಾಯಿ ಮಾತ್ರ ದಪ್ಪದಪ್ಪ. ಎತ್ತರದ ಕಾಡುಹಂದಿಯಂತಹ ನಾಯಿಯನ್ನು ಹೊಳೆಯುವ ದಪ್ಪದ ಸರಪಳಿ ಹಾಕಿ ಹಿಡಿದುಕೊಂಡು, ಸರ್ಕಸ್ಸಿನ ರಿಂಗ್ ಮಾಸ್ಟರ್ ಹತ್ತಿರ ಇರುವಂತಹ ಸ್ಟಿಕ್ ತೆಗೆದುಕೊಂಡು, ನಾಯಿಗೆ ಹಾಕಿರುವ ಹೊಟ್ಟೆ-ಕೈಕಾಲುಗಳನ್ನು ಸುತ್ತರಿದ ಬೆಲ್ಟನ್ನೂ ಹಿಡಿದುಕೊಂಡು ಅವರು ನಡೆದುಹೋಗುವಾಗ ಕುನ್ನಿ ಎಳೆದೆಡೆಗೆ ಅವರು ಸಾಗಬೇಕು ಪಾಪ! ಕುನ್ನಿ ಯಾವ ದಿಕ್ಕಿಗೆ ಎಳೆಯುತ್ತದೋ ಆ ದಿಕ್ಕಿಗೆ ಅವರು ಹೋಗುತ್ತಾರೆ. ಹಿಡಿದುಕೊಂಡವರು ಅವರಾದರೂ ಕಂಟ್ರೋಲ್ ಮಾಡುವುದು ನಡೆಯುವ ಕುನ್ನಿ ಎಂಬುದು ನನಗೆ ಆಗಾಗ ಕಾಣಿಸುವ ಮೋಜಿನ ಸಂಗತಿ. ಕೆಲವೊಮ್ಮೆ ಹೆದರಿದ್ದೂ ಇದೆ-ಯಾಕೆ ಗೊತ್ತೋ? ಸರಿಯಾಗಿ ಊಟವನ್ನೇ ಮಾಡದಂತಹ ಮಾಲೀಕನ ಕೈಯ್ಯಿಂದ ತಪ್ಪಿಸಿಕೊಂಡು ಎಲ್ಲಾದ್ರೂ ಮೈಮೇಲೆ ಹಾರಿಬಿಟ್ಟರೆ ಎಂದು. ಯಾರಿಗ್ಬೇಕು ಮಾರಾಯ್ರೆ? ಹದಿನಾಲ್ಕು ಲೋಕಗಳನ್ನೇ ತೋರಿಸುವಂತಹ ಯಾತನೆ ನೀಡುವ ಹೊಕ್ಕಳ ಸುತ್ತಿನ ಹದಿನಾಲ್ಕು ಇಂಜೆಕ್ಷನ್ನು, ಅಂದಹಾಗೇ ಈಗ ಅಲ್ಲೂ ಕಾಸಿನ ವ್ಯವಹಾರ! ಕಾಸು ಜಾಸ್ತಿ ಮಡಗಿದ್ರೆ ತೋಳಿಗೆ ನೀಡಬಹುದಾದ ಮೂರು ಇಂಜೆಕ್ಷನ್ನೂ ಉಂಟು, ಗೊತ್ತಾಯ್ತಲ್ಲ? ಕಾಸಿಲ್ಲದ ಬಡವನಿಗೆ ಹದಿನಾಕೇ ಗತಿ !

ಕೆಲವು ಮನೆಗಳಲ್ಲಿ ನಾಯಿಗಳೇ ಇರುವುದಿಲ್ಲ; ’ನಾಯಿಗಳಿವೆ ಎಚ್ಚರಿಕೆ’ ಎಂಬ ಬೋರ್ಡು ಮಾತ್ರ ಬರೆದಿರುತ್ತದೆ. ಅಂದಹಾಗೇ ತಿಮ್ಮೇಗೌಡರು ತಮ್ಮ ಮನೆ ಗೇಟಿಗೆ ’ನಾಯ್ಗೊಳವೆ ಹೆಚ್ಚರಿಕೆ’ ಎಂಬ ಬೋರ್ಡು ಹಾಕಿದ್ದು ಕಂಡಿದ್ದೆ. ವಾಡಿಕೆಯಿಂದ ಅವರು ಹೇಳಿದ್ದನ್ನು ’ಅಚ್ಚಗನ್ನಡ’ದಲ್ಲಿ ಬರೆದಿದ್ದು ತಮಿಳಿನ ಸೆಲ್ವಂ!  ಬೋರ್ಡು ಹಾಕಿದ ಮನೆಯಲ್ಲಿ ನಾಯಿಗಳಿಲ್ಲದಿದ್ದರೆ ಏನು ತಿಳಿದುಕೊಳ್ಳಬೇಕು ಎಂಬುದನ್ನು ನಿಮ್ಮ ಅನಿಸಿಕೆಗೆ ಬಿಟ್ಟುಬಿಡುತ್ತೇನೆ. ನಾಯಿಗಳಿದ್ದರೂ ಬೋರ್ಡು ಹಾಕದೇ ಇರುವ ದೊಡ್ಡ ಕಂಪೌಂಡಿನ ಮನೆಗಳೂ ಇವೆ. ಅಲ್ಲಿಗೆ ಅಕಸ್ಮಾತ್ ನುಗ್ಗಿದ ಮಾರ್ಕೆಟಿಂಗ್ ಹುಡುಗರ ಕಥೆ ಏನಾಗಿರಬೇಡ? ಮನೆಮನೆಗೆ ಮಾರ್ಕೆಟಿಂಗ್ ಮಾಡಲು ತೆರಳುವ ಹುಡುಗರಿಗೆ ಇನ್ನುಮೇಲೆ ಕಳಿಸುವ ಕಂಪನಿಯವರು ಭದ್ರತಾ ಕವಚವನ್ನೂ ಕೊಟ್ಟು ಕಳಿಸುವುದು ಒಳಿತು; ಬೀಳುವ ವಿಮಾನದಿಂದ ಹೊರಜಿಗಿದು ಪ್ಯಾರಾಚ್ಯೂಟ್ ಬಿಡಿಸಿಕೊಳ್ಳುವ ಯೋಧರಂತೇ, ಹಾರುವ ಕುನ್ನಿಯ ಎದುರು ತಟ್ಟನೆ ಎದ್ದುನಿಲುವ ಎತ್ತರದ ಬೇಲಿಯ ರೀತಿಯ ಕವಚವನ್ನು ಬಿಡಿಸಿಕೊಳ್ಳುವ ’ಮಾರ್ಕೆಟಿಂಗ್ ಯೋಧ’ರನ್ನು ತಯಾರುಮಾಡಿದರೆ ಒಳ್ಳೆಯದು.

ನಾಯಿಗಳನ್ನು ಕಾರಿನಲ್ಲಿ, ಬೈಕಿನಲ್ಲಿ ಕೂರಿಸಿಕೊಂಡು ಹೋಗುವುದು ಮಾಮೂಲಾಗಿಬಿಟ್ಟಿದೆ. ಕಾರಿನ ಹಿಂದುಗಡೆ ಸೀಟಿನಲ್ಲಿ ಕುಳಿತ ಕುನ್ನಿರಾಯರು ಆಗಾಗ ಕತ್ತನ್ನು ಹೊರಚಾಚಿ ಕಾಕಳಿಸುವುದು ನಮ್ಮಂತಹ ಓಡಾಟಪ್ರಿಯರಿಗೆ ಬೇಡವೆಂದರೂ ಎದುರಾಗುವ ಸನ್ನಿವೇಶ. ಹೀಗೇ ಒಮ್ಮೆ ಒಂದು ಸಿಗ್ನಾಲ್ ನಲ್ಲಿ ತಿರುಗಿ ನೋಡಿದೆ, ಆ ಕಡೆ ನಾಯಿಯೊಂದು ಕಾರಿನ ಕಿಟಕಿಯಿಂದ ನೋಡುತ್ತಿತ್ತು. ನನ್ನನ್ನು ನೋಡಿ ನಕ್ಕಿತೋ, ಅಪಹಾಸ್ಯ ಮಾಡಿತೋ ಅರಿಯೆ. ನನ್ನ ಮುಖ ತಿರುಗಿಸಿ ಮತ್ತೆಲ್ಲೋ ನೋಡಿ ನಿಮಿಷದ ನಂತರ ಮತ್ತೆ ನಾಯಿಯೆಡೆ ದೃಷ್ಟಿ ಹೋಯಿತು. ಆ ಕಡೆ ತಿರುಗಿದ್ದ ಕತ್ತನ್ನು ಮತ್ತೆ ನನ್ನೆಡೆ ತಿರುಗಿಸಿ ನೋಡಿದ ನಾಯಿಯ ಮುಖದಲ್ಲಿ ರಾಜಕೀಯ ಪುಢಾರಿಯ ಭಾವವನ್ನು ಕಂಡೆ! ಪಕ್ಕದಲ್ಲಿ  ಕುಳಿತ ವ್ಯಕ್ತಿ ಏನನ್ನೋ ಕೊಟ್ಟಿದ್ದನ್ನು ಬಾಯಲ್ಲಿ ಹಾಕಿಕೊಂಡು ಅಲ್ಲಾಡಿಸುವಾಗ ಸಿನಿಮಾ ಹೀರೋ ಪೋಸು ಕಂಡೆ! ಇನ್ನೊಮ್ಮೆ ಪಮೆರಿಯನ್ ನಾಯಿಯೊಂದು ಹಾಗೆ ನೋಡುತ್ತಿತ್ತು- ’ಹಿಂಭಾಗದ ಸೀಟಲ್ಲಿ ಕೂತ ಜಂಬದ ಹೆಂಗಸಿನ ನೋಟ’ವನ್ನು ಆಗ ಅದರ ಮುಖದಲ್ಲಿ ಕಂಡಿದ್ದೆ.

ಅಲಲಲಲಾ, ಗಂಗಾವತಿ ಪ್ರಾಣೇಶರು ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ದೂರದಿಂದ ತಮಗೆ ಶಾಲು ಎಸೆದು ಸನ್ಮಾಸಿದ್ದನ್ನು ಹೇಳಿದ್ದು ನೆನಪಿಗೆ ಬಂತು! ನಮ್ಮ ಹಳ್ಳಿಗಳಲ್ಲಿ ದಾಸ, ಹಂಡ, ಕಾಳರಿಗೆ ಎಂದೂ ಪಾತ್ರೆಯಲ್ಲಿ ಊಟ ಹಾಕುತ್ತಿರಲಿಲ್ಲ. ಬಾಳೆಲೆಯ ತುಂಡು ಅದೂ ಇರದಿದ್ದರೆ ನೆಲದಮೇಲೇ ಬಡಿಸುವುದು ಪದ್ಧತಿಯಾಗಿತ್ತು. ಬೆಳಗಿನ ದೋಸೆಯನ್ನು ಹತ್ತಾರು ಸಲ ಎತ್ತರಕ್ಕೆ ಹಿಡಿದು, ಅವು ಮುಂಗಾಲೆತ್ತಿ ಹಾರುತ್ತಾ ಪಡೆಯಲು ಪ್ರಯತ್ನಿಸಿದಮೇಲೆ ಬೀಸಿ ಎಸೆಯುವುದಿತ್ತು. ತಿರುಗಾಟಕ್ಕೆ ಅವು-ಅವುಗಳ ಪಾಡಿಗೆ, ನಾವು-ನಮ್ಮ ಪಾಡಿಗೆ. ನಮಗೇ ಕಾರು,ಬೈಕು ಇರಲಿಲ್ಲ-ಇನ್ನು ಕುನ್ನಿಗಳಿಗೆಲ್ಲಿ ಬಂತು ಸ್ವಾಮೀ? ಅಪರೂಪಕ್ಕೆ ತೋಟತುಡಿಕೆಗಳಿಗೆ ನೀರು ಹಾಯಿಸುವಾಗ ಹರಿವ ನೀರಲ್ಲಿ ಅವು ಮಲಗೇಳುವುದು ಬಿಟ್ಟರೆ ಸಾಬೂನು ಹಾಕಿ ಸ್ನಾನಮಾಡಿಸಿದ ನೆನಪಿಲ್ಲ. ಬಿಸ್ಕೀಟು ನಮಗೇ ದುಬಾರಿಯಾಗಿ ನೆಂಟರು ತಂದರೆ ಮಾತ್ರ ದೊರೆಯುತ್ತಿದ್ದ ಆ ಕಾಲದಲ್ಲಿ ನಮ್ಮ ದಾಸ,ಹಂಡ, ಕಾಳ ಅದರ ಹೆಸರನ್ನು ಕೇಳಿದ್ದಾಗಲೀ, ಆಕಾರವನ್ನು ಜೀವಿತದಲ್ಲೇ ಕಣ್ಣಲ್ಲಿ ಕಂಡಿದ್ದಾಗಲೀ ಇದ್ದ ಬಗ್ಗೆ ಯಾವುದೇ ದಾಖಲಾತಿ ಸಿಗುವುದಿಲ್ಲ. ಹೊರಗೆ ಬಿಸಾಕಿದ ಗೋಣಿ ಚಪ್ಪಿನ ಮೇಲೆ ಮಲಗಿದ್ದು ಬಿಟ್ಟರೆ ಹತ್ತಿಯ ಗಾದಿಗಳನ್ನೆಂದೂ ಹತ್ತದ ನಾಯಿಗಳವು. ಆಗಾಗ ಬಚ್ಚಲು ಒಲೆಯ ಬೂದಿಗುಡ್ಡೆಯಲ್ಲಿ ಹೊರಳಾಡುತ್ತಿದ್ದ ಅವುಗಳಿಗೆ ಯಾವುದೇ ಚರ್ಮವ್ಯಾಧಿ ತಗುಲುತ್ತಿರಲಿಲ್ಲ. ಮನೆಗೆ ಬರ-ಹೋಗುವವರನ್ನು ಯಾವುದೇ ತರಬೇತಿ ಇಲ್ಲದೇ ನಿಯಂತ್ರಿಸಬಲ್ಲ ಅವುಗಳ ಬುದ್ಧಿಮತ್ತೆ ನೆನೆದಾಗ ಪಡೆದ ಸೇವೆಯ ಮೌಲ್ಯದ ಅರಿವು ಇಂದಿಗೆ ತಿಳಿಯುತ್ತಿದೆ. ಗೊತ್ತಿರುವ ವ್ಯಕ್ತಿಗಳೂ ತನ್ನನ್ನು ಸಾಕಿದವರಿಗೆ ವಿರುದ್ಧವಾದ ಕೆಲಸವನ್ನು ಮಾಡಹೊರಟಾಗ ನಿರ್ಬಂಧಿಸಿದ ಸಾಹಸದ ಕುನ್ನಿಗಳ ಯಶೋಗಾಥೆ ಅದೆಷ್ಟೋ. ಒಂದೇ ಒಂದು ದಿನ ಹರತಾಳ ಮಾಡಿದ್ದಿಲ್ಲ, ಇಂಥಾದ್ದೇ ಊಟಕೊಡಿ-ಇಂಥಾದ್ದೇ ಸೋಪಲ್ಲಿ ಸ್ನಾನಮಾಡಿಸಿ-ಇಂಥಾ ಹಾಸಿಗೆಯನ್ನೇ ಕೊಡಿ ಎಂದು ಕೇಳಿದ್ದಿಲ್ಲ. ಬಹುಶಃ ಈ ನಿಷ್ಠೆಯನ್ನು ನೆನೆದೇ ಸಿಂಡಿಕೇಟ್ ಬ್ಯಾಂಕಿನವರು ತಮ್ಮ ಲೋಗೋದಲ್ಲಿ ಕುನ್ನಿಯ ಚಿತ್ರ ಹಾಕಿದ್ದಿರಬೇಕು ಎನಿಸುತ್ತದೆ; ಆದರೆ ಆ ಬ್ಯಾಂಕಿನವರಿಗೆ ಅಂಥದ್ದೇ ನಿಷ್ಠೆ ಇದೆಯೇ ಎಂಬುದು ಅನುಭವದಿಂದ ಅವರವರು ಅರಿತುಕೊಳ್ಳಬಹುದಾದ ವಿಷಯ!  

ಬೆಂಗಳೂರಲ್ಲಿ ಮಾತ್ರ ಜನ, ಹತ್ತುಮಂದಿ ನಾಯಿಗೆ ಅಲ್ಲಲ್ಲಿ ಮಾಂಸದ ವೇಸ್ಟೇಜ್ ಹಾಕುತ್ತಾರೆ. ಕುರಿ-ಕೋಳಿಗಳನ್ನು ಕೊಚ್ಚುವ ಬುಚ್ಚರ್ ಗಳ ಅಂಗಡಿಯ ಅಕ್ಕ-ಪಕ್ಕದಲ್ಲಿ ವಾಸಿಸುವ ನಾಯಿಗಳಿಗೆ ಅದೇ ಊಟ. ಕೆಲವು ಜನ ಅಂತಹ ವೇಸ್ಟ್ ಕೊಂಡೊಯ್ದು ದೂರದಲ್ಲಿರುವ ಬೀದಿನಾಯಿಗಳಿಗೆ ಹಾಕುತ್ತಾರೆ. ಯಾವಾಗ ಆಹಾರ ಸಿಕ್ಕದೇ ಹಸಿವಾಗುತ್ತದೋ ಆಗ ಆ ನಾಯಿಗಳು ಯಾರಾದರೇನಂತೆ ಎಂದು ಮಾಂಸವನ್ನು ಹುಡುಕುತ್ತವೆ; ಮಕ್ಕಳು-ದೊಡ್ಡವರು ಯಾರೇ ಸಿಕ್ಕರೂ ಬಿಡದೇ ಅಟ್ಟಿಸಿಹೋಗಿ ಕಚ್ಚಿ ಸಾಯಿಸಿ ತಿನ್ನಲು ಮುಂದಾಗುತ್ತವೆ. ಅದು ಮಾಂಸದ ರುಚಿಕಂಡ ಮತ್ತು ಸದಾ ಅದನ್ನೇ ಉಂಡ ಕೆಲವು ನಾಯಿಗಳ ರಿವಾಜು ಮಾತ್ರ! ಸಹಜಗತಿಯಲ್ಲಿ ಅಲ್ಲಿಲ್ಲಿ ಸಿಕ್ಕಿದ್ದನ್ನುಂಡು ಬೆಳೆವ ಬೀದಿನಾಯಿಗಳು ಹಾಗೆ ಕಂಡವರ ಮೇಲೆ ಹಾಯುವ/ಹರಿಯುವ ಗೋಜಿಗೆ ಹೋಗುವುದಿಲ್ಲ. ಕಾಮಿಸ್ವಾಮಿಯೊಬ್ಬನಿಂದ ಕಾವಿಕುಲಕ್ಕೇ ಅವಮಾನವಾದಹಾಗೇ ಕೆಲವೇ ಕೆಲವು ಮಾಂಸಾಹಾರಿ ನಾಯಿಗಳಿಂದ ಇಡೀ ಬೀದಿನಾಯಿ ಸಂಕುಲ ಒಂದೇ ಹೆಸರಿನಡಿ ಗುರುತಿಸಲ್ಪಟ್ಟಿತು. ಕಾರ್ಪೋರೇಷನ್ ನಿಂದ ಸಂತಾನಹರಣ ಚಿಕಿತ್ಸಾ ಅಭಿಯಾನ ನಡೆಸಲ್ಪಟ್ಟಿತು. ಗಾಡಿಗಳಲ್ಲಿ ಹಿಡಿದೊಯ್ದು ನೇರವಾಗಿ ಮಣ್ಣುಮಾಡುವ ಹಿಂಸಾತ್ಮಕ ಕೃತ್ಯಗಳೂ ನಡೆದವು. ಹುಲಿ-ಸಿಂಹ-ಕತ್ತೆಕಿರುಬಗಳ ಧಾಮಕ್ಕೆ ಆಹಾರವಾಗಿ ಬಿಡುವ ಮಟ್ಟಕ್ಕೂ ಬೆಳೆಯಿತು. ಆದರೂ ಕಾರ್ಪೋರೇಷನ್ ಗಾಡಿ ಬಂದಾಗ ಮೋರಿಗಳಲ್ಲಿ ಅಡಗಿ ತಪ್ಪಿಸಿಕೊಳ್ಳುವ ಪ್ರಯತ್ನ ಬೀದಿ ನಾಯಿಗಳದ್ದು. ಬಂದವರು ಆ ಪ್ರದೇಶದಲ್ಲೆಲ್ಲೂ ಬೀದಿ ನಾಯಿಗಳೇ ಇಲ್ಲವೇನೋ ಎಂದುಕೊಳ್ಳುವಷ್ಟು ಸೈಲೆಂಟ್ ಆಗಿ ಮಲಗಿಬಿಡುವ ಬುದ್ಧಿತೋರಿಸುತ್ತವೆ ಈ ನಾಯಿಗಳು. ಒಂದು ನಾಯಿಗೆ ದೂರದಿಂದಲೇ ನಗರಪಾಲಿಕೆಯ ಗಾಡಿಯ ಸುಳಿವು ಸಿಕ್ಕರೆ ಸಾಕು, ಅವುಗಳ ನಡುವಿನ ನಿತ್ಯದ ವೈಷಮ್ಯಗಳೆಲ್ಲಾ ಮಾಯವಾಗಿ ಉಳಿವಿಗಾಗಿ ಅವು ಮಾಡುವ ಜಾದೂ ವಿದ್ಯೆಯನ್ನೂ ಕಂಡಿದ್ದೇನೆ. ಬೀದಿ ಅಲೆಯುವ ಬೀಡಾಡಿ ನಾಯಿಗೂ ಕೂಡ ಒಂದು ನಿಷ್ಠೆ ಇದೆ; ಅದಕ್ಕೆ ಆಹಾರ ಹಾಕಿದವರನ್ನು ಗೌರವಿಸುವ ಮತ್ತು ಅವರ ಆಜ್ಞೆಗಳನ್ನು ಪಾಲಿಸುವ ವಿಧೇಯತೆ ಇದೆ-ಇದು ಇಲ್ಲದಿರುವುದು ಮನುಷ್ಯರಲ್ಲಿ ಮಾತ್ರ!       

ಶರೀರದಲ್ಲಿ ಪ್ರತಿಯೊಂದು ಅಂಗವೂ ಮುಖ್ಯ, ಯಾವುದೂ ನಗಣ್ಯವಲ್ಲ; ಅಂತೆಯೇ ಪರಿಸರದಲ್ಲಿ ಎಲ್ಲಾ ಜೀವಿಯೂ ಮುಖ್ಯ. ನಾಯಿಯೆಂದು ಕೇವಲವಾಗಿ ಕಾಣುವ ನಮಗೆ ಅವುಗಳ ಅನಿವಾರ್ಯತೆ ತಿಳಿಯುವುದು ಆ ಜಾಗ ಖುಲ್ಲಾ ಹೊಡೆದಾಗ ಮಾತ್ರ. ಹಾಗಂತ ನಾಯಿ ನಾಯಿಯ ಕೆಲಸವನ್ನು ಮಾಡಬೇಕೇ ಹೊರತು ನಾಯಿಯ ಸೇವೆಯನ್ನೇ ದೊಡ್ಡ ಕೈಂಕರ್ಯವನ್ನಾಗಿಸಿಕೊಳ್ಳುವುದು ಸ್ವಲ್ಪ ಅತಿ ಎನಿಸುತ್ತದೆ; ಕೆಲವೊಮ್ಮೆ ಹಾಸ್ಯಾಸ್ಪದವೂ ಆಗಿಬಿಡುತ್ತದೆ. ಉಗುರಿನ ಬಗ್ಗೆ ಆರಂಭಿಸಿದೆ, ಎಡಗೈ ಬೆರಳಿನ ಉಗುರು ಎಂದರೆ ಜಾಸ್ತಿ ಮಹತ್ವ ಕೊಡುವ ಜಾಯಮಾನ ನಮ್ಮದಲ್ಲ; ಆದರೆ ಯಾವುದೋ ಸಮಯದಲ್ಲಿ ಅದರ ಅನಿವಾರ್ಯತೆ ಕೂಡ ಇದೆ ಎಂಬುದು ಗಮನಕ್ಕೆ ಬರುತ್ತದಲ್ಲ! ’ಉಗುರಿನಿಂದ ಹೋಗುತ್ತಿದ್ದುದಕ್ಕೆ ಕೊಡಲಿ ಎತ್ತಿಕೊಂಡರು’ ಎಂಬ ನಾಣ್ನುಡಿ ಕೂಡ ಇದೆಯಲ್ಲಾ ಉಗುರಿನಿಂದಲೂ ಕೆಲವು ಕೆಲಸ ಸಾಧ್ಯ ಎಂಬುದಕ್ಕೆ ಇದೇ ಆಧಾರ ಸಾಕು ಅಲ್ಲವೇ? ಉಗುರಿನ ಹೆಳೆ[ನೆಪ]ಯಲ್ಲಿ ನಾಯಿಯ ಬೆಳೆ[ಅಥವಾ ಬೆಲೆ!] ಕಂಡಿರಿ ಅಲ್ಲವೇ? ಈಗ ನಿಮಗೂ ನನ್ನ ಹೊಸಗಾದೆಯ ಅರ್ಥ ಸಮರ್ಪಕವಾಗಿ ಆಗಿರಲಿಕ್ಕೇಬೇಕು ಎಂಬುದು ನನ್ನ ಈ ಹಂತದ ಅನಿಸಿಕೆ.   

Monday, June 11, 2012

ಮಾತನಾಡಲು ಹೊರಟರೆ ಹೊತ್ತು ಕಳೆಯುವುದು ತಿಳಿಯುವುದಿಲ್ಲವಲ್ಲ ?

ಶ್ರೀ ಎದುರ್ಕಳ ಈಶ್ವರ ಭಟ್ ರ ಚಿತ್ರಋಣ: ಫೇಸ್ ಬುಕ್ 
ಮಾತನಾಡಲು ಹೊರಟರೆ ಹೊತ್ತು ಕಳೆಯುವುದು ತಿಳಿಯುವುದಿಲ್ಲವಲ್ಲ ?

ಬರೆಯದೇ ವಾರ ಕಳೆಯಿತು. ಬರವಣಿಗೆಯನ್ನು ನಿರೀಕ್ಷಿಸುವವರು ತುಂಬಾ ಜನ ಇದ್ದೀರಿ ಎಂಬುದು ಗೊತ್ತು. ಆದರೂ, ಹೊಸದಾಗಿ ಆರಂಭಗೊಂಡ ’ಉದ್ದಿಮೆ’ಯ ಕಡೆ ಗಮನ ಹರಿಸುತ್ತಿದ್ದೇನೆ. ಉದ್ದಿಮೆಯ ಬಗ್ಗೆ ನಿಮಗೆ ಮತ್ತೊಮ್ಮೆ ಹೇಳಿದರೆ ಜಾಸ್ತಿಯಾಗಬಹುದೇನೋ ಎಂಬ ಆತಂಕ, ಕಮ್ಮಿಯಾದರೆ ನಿಮಗದರಬಗ್ಗೆ ಮಾಹಿತಿ ಸಾಕಾಗದೇನೋ ಎಂಬ ಚಿಂತೆ, ಹೀಗೇ ಎರಡೂ ಮಗ್ಗಲುಗಳನ್ನು ಅವಲೋಕಿಸುತ್ತಾ ಉದ್ದಿಮೆಯ ಹೆಜ್ಜೆಗಳ ಬಗ್ಗೆ ಕಾರ್ಯಗತವಾಗಿ ಮುಂದಿನ ಹೆಜ್ಜೆ ಇಡುತ್ತಿದ್ದೆ. ಯಾವುದೇ ಉದ್ದಿಮೆದಾರರು, ವೃತ್ತಿಪರರು, ಸೇವೆಗಳನ್ನು ಒದಗಿಸುವವರು, ಕಲಾವಿದರು, ತಂತ್ರಜ್ಞರು ಮೊದಲಾದ ಎಲ್ಲಾ ರಂಗಗಳವರು ತಮ್ಮಬಗ್ಗೆ ಮತ್ತು ತಮ್ಮಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕ ಗೊತ್ತುವಳಿ ಅಥವಾ ತಿಳುವಳಿಕೆ ಮೂಡಿಸುವ ಕೆಲಸವನ್ನು ನಮ್ಮ ಬಳಗದ ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ನಡೆಸುತ್ತದೆ. ಆ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡ ನನಗೆ ಮಿತ್ರ ಶ್ರೀ ಶಿವಶಂಕರ್ ಅವರು ಫೋನಾಯಿಸಿ ಬ್ಲಾಗ್ ನಿರ್ಮಾಣದ ಬಗ್ಗೆ ಸಲಹೆ ಕೇಳಿದ್ದರೂ ಸಹಕರಿಸಲು ತನ್ಮಧ್ಯೆ ಸಾಧ್ಯವಾಗಿಲ್ಲ, ಇನ್ನೆರಡು ವಾರಗಳಲ್ಲಾದರೂ ಅವರನ್ನು ಕಂಡು ಅವರಿಗೆ ಅದರ ಬಗ್ಗೆ ತೋರಿಸಿಕೊಡುವ ತರಾತುರಿ ಮನಸ್ಸಿನಲ್ಲಿದೆ.

ಗೀತೆಯಲ್ಲಿ ಕಾಮ್ಯಕರ್ಮ ಮತ್ತು ನ-ಕಾಮ್ಯಕರ್ಮದ ಬಗ್ಗೆ ಉಲ್ಲೇಖವಿದೆ. ದಾರಿಯಲ್ಲಿ ಒಬ್ಬ ಹೋಗುತ್ತಿರುವಾಗ ಸಾವಿರ ರೂಪಾಯಿಗಳ ನೋಟೊಂದು ಬಿದ್ದಿರುವುದು ಕಾಣಿಸುತ್ತದೆ. ಆತ ಅದನ್ನು ಎತ್ತಿಕೊಂಡು ತನ್ನ ಯಾವುದೇ ಖರ್ಚಿಗೆ ಬಳಸಿಕೊಳ್ಳುತ್ತಾನೆ, ಇನ್ನೊಬ್ಬ ದಾರಿಹೋಕನಿಗೂ ಹಾಗೇ ಸಾವಿರ ರೂಪಾಯಿಗಳ ನೋಟು ಸಿಕ್ಕಿತು, ಆತನೂ ಅದನ್ನು ಎತ್ತಿಕೊಂಡು ಮುಂದೆಸಾಗಿ ಅನಾಥಾಶ್ರಮವೊಂದರ ಮಕ್ಕಳಿಗೆ ಅದರಿಂದಾಗುವ ಉಪಯೋಗ ಕಲ್ಪಿಸುತ್ತಾನೆ. ಮೊದಲನೆಯವನದು ಕಾಮ್ಯಕರ್ಮ, ಎರಡನೆಯವನದು ನ-ಕಾಮ್ಯಕರ್ಮ/ನಿಷ್ಕಾಮ್ಯ ಕರ್ಮ. ಮೊದಲನೆಯವ ಕ್ಷಣಿಕ ಫಲವನ್ನು ಪಡೆಯುತ್ತಾನೆ, ಎರಡನೆಯದಕ್ಕೆ ಪಾರಮಾರ್ಥಿಕ ಉತ್ತಮ ಫಲ ದೊರೆಯುತ್ತದೆ. ಇದನ್ನು ನನಗೆ ಇಷ್ಟು ಸರಳವಾಗಿ ತಿಳಿಸಿದವರು ಹೆಸರಾಂತ ಉದ್ಯಮಿ ಶ್ರೀ ಎದುರ್ಕಳ ಈಶ್ವರ ಭಟ್ಟರು. ನನ್ನ ಅಸಹಾಯಕತೆಯಲ್ಲಿ ಹಲವು ಬಾರಿ ನನಗೆ ಸಹಾಯ ನೀಡಿದ ಈ ಮಹನೀಯ ಬೆಂಗಳೂರಿನ ಪೀಣ್ಯ ಎರಡನೇ ಹಂತದಲ್ಲಿ, ತಮ್ಮದೇ ಆದ ಕಾರ್ಖಾನೆ ಹೊಂದಿದ್ದಾರೆ; ಕಷ್ಟ-ಸುಖಗಳ ಸ್ವಾನುಭವ ರಕ್ತದ ಕಣಕಣದಲ್ಲೂ ಇದೆ. ಎಲೆಮರೆಯ ಕಾಯಿಯಾಗಿ ಹಲವು ಜನರಿಗೆ ಗೀತೆಯ ಕುರಿತಾಗಿ ಬೋಧಿಸುತ್ತಾ, ಯಕ್ಷಗಾನ-ತಾಳಮದ್ದಳೆಗಳಲ್ಲಿ ತಮ್ಮ ಮಾತಿನ ಚಮತ್ಕಾರವನ್ನು ತೆರೆದಿಡುತ್ತಾ ಆಗಾಗ ಅಲ್ಲಲ್ಲಿ ಕಾಣಿಸಿಕೊಂಡರೂ, ಕೇವಲ ಪ್ರದರ್ಶನದ ಬೂಟಾಟಿಕೆ ಅವರದ್ದಲ್ಲ. ಸೋತು ಸಣ್ಣಗಾದ ಸಮಾಜದ ಹಲವು ವ್ಯಕ್ತಿಗಳಿಗೆ ಮಾರ್ಗದರ್ಶಿಸಿದ ಅವರ ಮನೋಗತವನ್ನು ಹತ್ತಿರವಿದ್ದು ಅನುಭವಿಸಿದ ವ್ಯಕ್ತಿ ನಾನು. ಪ್ರತಿಫಲವನ್ನು ಬಯಸದೇ ಹಲವು ಕೆಲಸಗಳನ್ನು ಮಾಡುವ ಮಂದಿ ಇವತ್ತು ತೀರಾ ಕಮ್ಮಿ.

|ಸರ್ವೇ ಗುಣಾಂ ಕಾಂಚನಮಾಶ್ರಯಂತಿ| ಎಂಬ ಕಲಿಯುಗ ಮಂತ್ರದಂತೇ ಕಾಂಚಾಣವಿದ್ದವರಿಗೇ ಈಗ ಕಾಲ. ಹಣವಿಲ್ಲದೆಯೂ ಶ್ರದ್ಧೆ, ಪರಿಶ್ರಮ, ಕಾರ್ಯಕ್ಷಮತೆ ಮತ್ತು ಉತ್ತಮ ಗುರಿ ಇದ್ದರೆ ಹೇಗೆ ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ ಈಶ್ವರ ಭಟ್ಟರು. ಹತಾಶ ಸ್ಥಿತಿಯನ್ನು ತಲುಪಿದ ಹಲವು ಉದ್ಯಮಿಗಳಿಗೆ ಮರಳಿ ಹೊಸಚಿಗುರನ್ನು ಹೊರಡಿಸಿದ ಸಾರ್ಥಕತೆ ಭಟ್ಟರದಾಗಿದೆ. ನನ್ನೆದುರು ಅರ್ಧಘಂಟೆ ಯಾರಿಗೋ ತಮ್ಮ ಚರದೂರವಾಣಿಯಲ್ಲಿ ಮಾರ್ಗದರ್ಶಿಸುವುದನ್ನು ಕಂಡೆ. ಈ ಲೋಕದಲ್ಲಿ ಸ್ಥಿರಾಸ್ತಿ ಎಂದು ನಾವಂದುಕೊಳ್ಳುವುದೆಲ್ಲಾ ಸ್ಥಿರವೇನಲ್ಲ, ಕಾಲಘಟ್ಟದಲ್ಲಿ ಯಾರ್ಯಾರದೋ ಆಗಿದ್ದ ಭೂಮಿ-ಮನೆಗಳು ಇಂದು ನಮ್ಮದಾಗಿವೆ, ನಾಳೆ ಇನ್ಯಾರದೋ ಕೈಗೆ ಸಾಗುತ್ತವೆ. ಗಳಿಸಿದ ಆಸ್ಥಿಯನ್ನು ಕಳೆದುಕೊಳ್ಳಬೇಕಾಗಿ ಬಂದಾಗ ಅದರಮೇಲಿನ ವ್ಯಾಮೋಹ ತೊರೆದು, ಮತ್ತೆ ಮುಂದಿನ ದಿನಗಳಲ್ಲಿ  ಮರಳಿ  ಆಸ್ಥಿಗಳಿಸುವಂಥಾ ಅವಕಾಶ ಒದಗಲೆಂಬ ಪ್ರಾರ್ಥನೆಯೊಂದಿಗೆ ಅದನ್ನು ವಿಲೇವಾರಿ ಮಾಡುವುದು, ಮಾರಿದ ಆಸ್ಥಿಯಿಂದ ಬಂದ ಹಣವನ್ನು ಕ್ಷಣಿಕವಾಗಿ ಉದ್ಭವಿಸಿದ ಆರ್ಥಿಕ ಅನಾನುಕೂಲತೆಗೆ ಪರಿಹಾರವಾಗಿ ಬಳಸಿಕೊಂಡು ಅದರಿಂದ ಮತ್ತೆ ಪುನರ್ಗಳಿಕೆಗೂ ದಾರಿಮಾಡಿಕೊಳ್ಳುವುದು ಸರಿಯಾದ ಕ್ರಮ. ಸಮಸ್ಯೆಗಳಿಗೆ ಹೆದರದೇ ಉತ್ತರಗಳನ್ನು ಹುಡುಕಿಕೊಳ್ಳುವುದನ್ನು ಅಭ್ಯಾಸಮಾಡಿಕೊಂಡರೆ ಜೀವನದ ಕಗ್ಗಂಟುಗಳು ಬಿಡಿಸಿಕೊಳ್ಳಲಾರಂಭಿಸುತ್ತವೆ. ಯಾವ ಮನುಷ್ಯನ ಹೃದಯದಲ್ಲಿ ಕಲ್ಮಶವಿಲ್ಲವೋ ಅಂತಹ ವ್ಯಕ್ತಿ ತನ್ನ ಶ್ರದ್ಧಾ ಭಕ್ತಿ ಪುರಸ್ಸರ ತೊಡಗಿಕೊಳ್ಳುವಿಕೆಯಿಂದ ಹೊಸಜೀವನವನ್ನು ಪಡೆಯಲು ಸಾಧ್ಯ ಎಂಬುದಕ್ಕೆ ಅನೇಕ ಜ್ವಲಂತ ಉದಾಹರಣೆಗಳು ಭಟ್ಟರ ತಾಬಾ ಇವೆ. ವ್ಯಕ್ತಿ ಸರಳವಾಗಿದ್ದಷ್ಟೂ ಸುಶೀಲನಾಗುತ್ತಾನೆ, ಸುಶೀಲನಾಗಿದ್ದಷ್ಟೂ ಸದೃಢನಾಗುತ್ತಾನೆ, ಸಫಲನಾಗುತ್ತಾನೆ; ಯಾವುದೇ ತೊಂದರೆಗಳನ್ನೂ ನಿಭಾಯಿಸುವ ದಾರ್ಷ್ಟ್ಯತೆ ಗಳಿಸುತ್ತಾನೆ.

ನೆನೆಯಬೇಕಾದ ಹಲವು ಜನರಲ್ಲಿ ಎದುರ್ಕಳ ಈಶ್ವರ ಭಟ್ಟರೂ ಒಬ್ಬರು. ಭಗವದ್ಗೀತೆಯ ಸಾರವನ್ನು ಬರೆದು,ತನ್ನ ಸ್ವಂತ ಖರ್ಚಿನಲ್ಲಿ ಅದನ್ನು ಡೈರಿಗಳನ್ನಾಗಿಸಿ, ಪುಸ್ತಿಕೆಗಳನ್ನಾಗಿಸಿ ಹಲವರಿಗೆ ಅವರು ನೀಡಿದ್ದಾರೆ. ಅ-ದ್ವೈತದ ಪರಬ್ರಹ್ಮನ ಭಾಗವೇ ನಾವು ಎನಿಸಿದಾಗ ನಮ್ಮ ಕಷ್ಟಗಳನ್ನು ನಿವಾರಿಸಬಲ್ಲವ ಆತನೊಬ್ಬನೇ, ನಿರಾಕಾರನಾದ ಆತನನ್ನು ಸಾಕಾರದಿಂದ ಹಲವುರೂಪಗಳಲ್ಲಿ ಪೂಜಿಸುವ, ಆರಾಧಿಸುವ ಭಕ್ತರಿಗೆ ಆಯಾಯ ರೂಪದಲ್ಲಿ ಅವರ ಭಾವಕ್ಕೆ ತಕ್ಕಂತೇ ಫಲವನ್ನು ನೀಡುತ್ತಾನೆ ಎನ್ನುವ ಭಟ್ಟರ ಮಾತು ನಿಜಕ್ಕೂ ಒಪ್ಪಿಕೊಳ್ಳಬೇಕಾದ ಅಂಶ; ಉದ್ಯಮಿಗಳಲ್ಲಿ ಈ.ಐ.ಭಟ್ಟರ ತೆರನಾದ ವ್ಯಕ್ತಿ ಸಿಗುವುದೇ ಇಲ್ಲ. ಉತ್ತಮ ವ್ಯಕ್ತಿತ್ವಕ್ಕೆ ಯಾರನ್ನು ಹೆಸರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದಾಗ ನನ್ನ ಮನಸ್ಸು ಸಹಜವಾಗಿ ವಾಲುವುದು ಅವರಕಡೆಗೆ.  |ವ್ಯಾಪಾರಂ ದ್ರೋಹ ಚಿಂತನಂ| ಎಂಬ ಮಾತೊಂದಿದೆ, ಆದರೆ ವ್ಯಾಪಾರದಲ್ಲೂ ಯಾವುದೇ ದ್ರೋಹವೆಸಗದೇ ಮಾಡುವ ವ್ಯಾಪಾರವಿದ್ದರೆ ಅದು ಈಶ್ವರ ಭಟ್ಟರಂಥವರಿಗೆ ಮಾತ್ರ ಸಾಧ್ಯ! ತಾವು ತಯಾರಿಸುವ ಬಹುವಿಧದ ಕೈಗಾರಿಕಾ ಆಯಸ್ಕಾಂತಗಳನ್ನು  ದೇಶ-ವಿದೇಶಗಳಿಗೆ ವ್ಯಾಪಾರಮಾಡುತ್ತಾರೆ. ಗುಣಮಟ್ಟದಲ್ಲಿ, ತಾಂತ್ರಿಕತೆಯಲ್ಲಿ  ಗರಿಷ್ಠ ಪರಿಮಾಣಗಳನ್ನು ಗಣನೆಯಲ್ಲಿರಿಸಿ ತಯಾರಿಸುವ ಅವರ ಉತ್ಫನ್ನಗಳು ಹಲವು ಕೈಗಾರಿಕೆಗಳಿಗೆ ಬಳಸಲ್ಪಡುತ್ತವೆ. ಉದ್ಯಮದ ಜೊತೆಗೆ ಹಲವರ ಜೀವನದಲ್ಲಿ ಬೆಳಕು ಮೂಡಿಸುತ್ತಾ ಪ್ರಚಾರಪ್ರಿಯರಾಗದೇ ಮರೆಯಲ್ಲೇ ಇರುವ ಅವರ ಮಾತೃಸದೃಶ ಹೃದಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.

ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದೆ. ಅಲ್ಲಿ ಬಂದದ್ದು ದೇಶದ/ರಾಜ್ಯದ ರಾಜಕೀಯ/ಸಾಮಾಜಿಕ ಸ್ಥಿತಿಗತಿಯ ಬಗ್ಗೆ. ಸಮಾಜದಲ್ಲಿ ಉತ್ತಮ ಅಧಿಕಾರಿಗಳೂ ತಮ್ಮ ಕಾರ್ಯಕ್ಷಮತೆಯನ್ನು ಮೆರೆಯಲು ಸುರಕ್ಷಿತ ದಿನಮಾನವಲ್ಲ ಎಂಬುದರ ಕುರಿತೂ ಮಾತನಾಡಿದೆವು. ರಾಜ್ಯದ ಬೊಕ್ಕಸಕ್ಕೆ ಹೆಗ್ಗಣಗಳ ಕಾಟ, ಭೂಮಿಗಾಗಿ ನಡೆದ ಡಿನೋಟಿಫಿಕೇಶನ್ ಗುದ್ದಾಟ ಇಂಥವುಗಳನ್ನು ನೋಡಿದಾಗ ಕರ್ನಾಟಕದಲ್ಲಿಯೂ ಗುಜರಾತ್ ರೀತಿಯ ಸರ್ಕಾರ ಬರಲು ಸಾಧ್ಯವೇ? ಸದ್ಯಕ್ಕಂತೂ ಸಾಧ್ಯವಿಲ್ಲವೇನೋ. ಆದರೂ ಯಡ್ಯೂರಪ್ಪನವರ ವಿಷಾದದ ಈ ಕಾಲ ಜನತೆಗೆ ಅನುಕೂಲಕರವಾಗಿದೆ ಎಂದರೆ ತಪ್ಪಲ್ಲ. ಸುಖಾಸುಮ್ನೇ ಯಾವುದೇ ಒಂದು ಪಕ್ಷವನ್ನು ಜರಿಯುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ ರಾಜಕೀಯ ಸ್ಥಿತಿ ಪಕ್ಷಾತೀತವಾಗಿದೆ! ಎಲ್ಲಾ ಪಕ್ಷಗಳಲ್ಲೂ ಬ್ರಷ್ಟಾಚಾರಿಗಳು ಇದ್ದೇ ಇದ್ದಾರೆ. ಅದೇ ರೀತಿ ಎಲ್ಲಾ ಪಕ್ಷಗಳಲ್ಲೂ ಮುತ್ಸದ್ಧಿಗಳು, ದೇಶ/ರಾಜ್ಯಗಳ ಹಿತಚಿಂತಕರೂ ಇದ್ದಾರೆ-ಆದರೆ ಅಂಥವರು ಮೂಲೆಗುಂಪಾಗಿದ್ದಾರೆ. ಬರೇ ಗೋಧ್ರಾ ಪ್ರಕರಣವನ್ನೇ ಹಿಡಿದುಕೊಂಡು ನರೇಂದ್ರ ಮೋದಿಯನ್ನು ಇತರೆ ಪಕ್ಷಗಳು ಜರಿದೇ ಜರಿದವು. ಆದರೆ ಅಲ್ಲಿ ನಿಜವಾಗಿಯೂ ಮೋದಿಯ ಪಾತ್ರವಿತ್ತೇ? ಇರಲಿಲ್ಲ. ಮೋದಿ ಎಂದೂ ಸಮಾಜ ಘಾತುಕ ಕೆಲಸವನ್ನು ಬಯಸಿದವರಲ್ಲ, ಮಾಡಿದವರಲ್ಲ. ಕೇವಲ ಮತ-ಧರ್ಮಗಳ ಆಧಾರದ ಮೇಲೆ ಒಡೆದು ಆಳುವ ನೀತಿಯನ್ನು ಜಾರಿಯಲ್ಲಿಟ್ಟವರೂ ಅಲ್ಲ. ಅವರ ಚಿಂತನೆಯಲ್ಲಿ ಅಡಕವಾಗಿರುವ ಅಂಶವೇ ಸಮಾಜಕ್ಕೆ ಉತ್ತಮ ಆಡಳಿತ ನೀಡುವುದು.

ಗುಜರಾತ್ನಲ್ಲಿ ಸರ್ಕಾರಿ ಅಧಿಕಾರಿಗಳು, ಮಂತ್ರಿಮಹೋದಯರು ಲಂಚ ಪಡೆಯಲು ಹೆದರಿ ಕೈಬಿಟ್ಟಿದ್ದರೆ ಅದಕ್ಕೆ ಮೋದಿಯೇ ಕಾರಣ. ನಿಷ್ಕಳಂಕ, ನಿರ್ಭೀತ ನಡತೆಯ ಮೋದಿ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕತೆಗೆ ಒಳಪಡಿಸಿದವರು. ಜನಜೀವನದಲ್ಲಿ ಯಾವುದರ ಕೊರತೆ ಇದೆ? ಯಾವುದು ಅನಿವಾರ್ಯ ಎಂಬುದನ್ನು ಆಮೂಲಾಗ್ರ ಪರಿಶೀಲಿಸಿ, ಕಂಡುಬರುವ ಸಮಸ್ಯೆಗಳಿಗೆ ಉತ್ತಮವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಮೋದಿ ಯಶಸ್ವೀ ಹೆಜ್ಜೆಗಳನ್ನಿಟ್ಟು ತಾವು ಆಡಳಿತ ಸಮರ್ಥ ಎಂಬುದನ್ನು ಸಾಬೀತುಪಡಿಸಿದ್ದಾರೆ. ನರ್ಮದಾ ಕಾಲುವೆಗಳಗುಂಟ ಸೌರಶಕ್ತಿ ಶೇಖರಣಾ ಘಟಕಗಳನ್ನು ಸ್ಥಾಪಿಸಿ ಬೇಕಾದ ವಿದ್ಯುತ್ತಿನ ಕೊರತೆ ನೀಗಿಸಲು ಮುಂದಾಗುವುದರ ಜೊತೆಗೆ ಕಾಲುವೆಯ ನೀರು ಬಿಸಿಲಿನ ಝಳಕ್ಕೆ ಇಂಗಿಹೋಗದಂತೇ ತಡೆಯುವಲ್ಲೂ ಸಫಲರಾದರು. ಏಕಕಾಲಕ್ಕೆ ಎರಡು ಉದ್ದೇಶಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಏರ್ಪಾಟಾಗಿರುವುದರಿಂದ ಜನ ಮೋದಿಯ ಜಾಣ್ಮೆಯನ್ನು ಗುರುತಿಸಿ  ವಿಶಿಷ್ಟರೀತಿಯ ಸಾಧನೆಗೆ ಮುಂದಾಗಿರುವ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಕಲಾಂ ಮೇಷ್ಟ್ರ ಬಗ್ಗೆ ಹೇಳುವುದೇ ಬೇಡ. ರಾಷ್ಟ್ರಪತಿ ಸ್ಥಾನಕ್ಕೆ ನಾನು ನೇರವಾಗಿ ಬೆರಳುಮಾಡಿ ತೋರಿಸಬಹುದಾದರೆ ಅದು ಅಬ್ದುಲ್ ಕಲಾಂ ಮಾತ್ರ! ದೇಶಸೇವೆಗೆ ತೊಡಗಿಸಿಕೊಳ್ಳುವ ವ್ಯಕ್ತಿಗೆ ಸ್ವಾರ್ಥ ಎಂಬ ವಿಷಯ ಹತ್ತಿರ ಸುಳಿಯದಿದ್ದರೆ ಒಳ್ಳೆಯದು. ಜೊತೆಗೆ ದೇಶದ ಬಗ್ಗೆ, ದೇಶದ ಜನತೆಯ ಬಗ್ಗೆ ಅಪಾರ ಕಾಳಜಿ ಇರಬೇಕು; ದೇಶದ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇರಬೇಕು. ದೇಶದ ಆರ್ಥಿಕತೆ, ವೈಜ್ಞಾನಿಕತೆಯ ಬಗ್ಗೆ ಗಮನವಿರಬೇಕು. ರಾಷ್ಟ್ರಪತಿ ಎಂಬ ಹುದ್ದೆ ರಬ್ಬರ್ ಸ್ಟಾಂಪ್ ಆಗಿರುವುದರ ಬದಲು ಅಲ್ಲಿ ಕುಳಿತ ವ್ಯಕ್ತಿ ಲೋಕಮುಖಿಯಾಗಿದ್ದು ಚೈತನ್ಯದಾಯಿಯಾಗಿದ್ದರೆ ಅದು ದೇಶಕ್ಕೆ ಬಲುಹಿತ. ಇದನ್ನು ಗಮನಿಸಿಯೇ ಅಂದಿನ ಎನ್.ಡಿ.ಏ ಸರಕಾರ ಕಲಾಂ ಅವರನ್ನು ರಾಷ್ರ್ಟ್ರಪತಿಯನ್ನಾಗಿ ನೇಮಿಸಿತು. ಸ್ವಾತಂತ್ರ್ಯಾ ನಂತರ ಬಂದ ಕಾಂಗ್ರೆಸ್ಸೇತರ ಸರಕಾರದಲ್ಲಿ ಕೇವಲ ಶ್ರೀಮಾನ್ ಅಟಲ್ ಬಿಹಾರಿ  ವಾಜಪೇಯಿಯವರ ನೇತೃತ್ವದ ಎನ್.ಡಿ.ಎ ದೇಶಕ್ಕೆ ಹೊಸಬೆಳಕು ನೀಡುವಲ್ಲಿ ಶ್ರಮಿಸಿದ್ದು ಸುಳ್ಳಲ್ಲ. ಅಂದು ನಿರ್ಮಾಣವಾದ ದಕ್ಷಿಣೋತ್ತರ ಮತ್ತು ಪೂರ್ವಪಶ್ಚಿಮವನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿಗಳು ದೇಶದ ಸಂವಹನ ಕ್ರಮವನ್ನೇ ಬದಲಿಸಿ, ಸಾಗಾಟವನ್ನು ಸರಳವಾಗಿ ಮತ್ತು ಶೀಘ್ರವಾಗಿ ಆಗುವಂತೇ ಮಾಡಿದ ಸಾಧನೆಯನ್ನು ಯಾರೂ ಮರೆಯುವಂತಿಲ್ಲ. ಒಂದೇ ಮನೆಯಲ್ಲಿ ಮನೆಮಂದಿ ಸೇರಿ ನಡೆಯುವುದು ಕಷ್ಟವಾದ ಇಂದಿನ ಕಾಲದಲ್ಲಿ ಸರಿಸುಮಾರು ಇಪ್ಪತ್ತು ಪಕ್ಷಗಳ ಬೆಸುಗೆಯ ಎನ್.ಡಿ.ಎ ಪಕ್ಷದ ನಾವಿಕನಾಗಿ ನೌಕೆಯನು ನಾಲ್ಕೂವರೆ ವರ್ಷ ನಡೆಸಿ, ದೇಶದಲ್ಲಿ ಕ್ಷಿಪ್ರಬದಲಾವಣೆಗಳನ್ನು ತಂದು ತೋರಿಸಿದ ಹೆಗ್ಗಳಿಕೆ ಅವರದ್ದು; ಇನ್ನೂ ಚುನಾವಣೆಗೆ ಆರು ತಿಂಗಳ ಅವಕಾಶ ಇರುವಾಗಲೇ ಸರಕಾರವನ್ನು ವಿಸರ್ಜಿಸಿ ಜನರಿಗೆ ಹೊಸ ಆಯ್ಕೆಗೆ ಅವಕಾಶ ಮಾಡಿಕೊಟ್ಟ ವಿಶಿಷ್ಟ ಮಾರ್ಗ ಕೂಡಾ ವಾಜಪೇಯಿಯವರದ್ದು. 

ಪ್ರಸಕ್ತ ದಿನಗಳಲ್ಲಿನ ಧನಾತ್ಮಕ ಆಡಳಿತ ಕ್ರಮಗಳನ್ನು ನೋಡಿದರೆ ಕೇಂದ್ರದಲ್ಲಿ ಒಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತು ಕಲಾಂ ಮೇಷ್ಟ್ರು ಮತ್ತೊಮ್ಮೆ ರಾಷ್ಟ್ರಪತಿಯಾಗಿ ಒಂದೈದು ವರ್ಷ ಆಡಳಿತ ನಡೆಸಿದರೆ ಅದು ದೇಶದ ಪರಮಭಾಗ್ಯ ಎನಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಅರ್ಹತೆಯನ್ನರಿತು, ತನಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಲು ಎಲ್ಲಾ ಅನುಕೂಲಗಳತೆಗಳು ಕಲ್ಪಿತವಾಗುತ್ತವೆ ಎಂಬುದು ನನ್ನ ಅನಿಸಿಕೆಯಾಗಿದೆ. ಒಂದೊಮ್ಮೆ ಹಾಗೇನಾದರೂ ಆದರೆ, ನಮ್ಮ ವಯಸ್ಸಿಗರ ಜೀವಮಾನದಲ್ಲಿಯೇ ಅದು ಒಮ್ಮೆ ಮಾತ್ರ ಕಾಣಬಹುದಾದ ಉತ್ತಮ ರಾಜಕೀಯ ಬೆಳವಣಿಗೆ ಎಂಬುದನ್ನು ಉಲ್ಲೇಖಿಸಲು ಮರೆಯುವುದಿಲ್ಲ. ಮಾತಾಡುತ್ತಿದ್ದರೆ, ಹರಟುತ್ತಿದ್ದರೆ ಸಮಯ ಹೋಗಿದ್ದು ತಿಳಿಯುವುದೇ ಇಲ್ಲವಾದ್ದರಿಂದ ಇಲ್ಲಿಗೇ ನಿಮ್ಮನ್ನು ನಿಲ್ಲಿಸಿ ಮತ್ತೊಮ್ಮೆ ಸಿಗೋಣವೆಂದು ತಿಳಿಸುವುದನ್ನೂ ಮರೆಯುವಹಾಗಿಲ್ಲ!  


Sunday, June 3, 2012

ಗುರಿಯನ್ನೇ ತಪಸ್ಸನ್ನಾಗಿ ಸ್ವೀಕರಿಸಿ ಸಾಧಿಸಿದ ಕೆಲವರು


ಚಿತ್ರಋಣ: ಅಂತರ್ಜಾಲ
ಗುರಿಯನ್ನೇ ತಪಸ್ಸನ್ನಾಗಿ ಸ್ವೀಕರಿಸಿ ಸಾಧಿಸಿದ ಕೆಲವರು

ಮನುಜ ಜೀವನಕ್ಕೆ ಗುರಿ ಬೇಕು ಎಂಬುದು ಬಹಳ ಜನರಿಗೆ ಗೊತ್ತು; ಗೊತ್ತಿಲ್ಲದೇ ಗುರಿಯನ್ನು ಸಾಧಿಸಿದವರೂ ಇದ್ದಾರೆ ಎಂದಿಟ್ಟುಕೊಳ್ಳೋಣ, ಆದರೂ ಗುರಿ ಇರಬೇಕಾದುದು ಕ್ರಮ. ಸರಿಯಾದ ಗುರಿ ಸಮರ್ಪಕ ಗುರು ಇದ್ದರೆ ಜೀವನ ಸುಲಭವೆನಿಸುತ್ತದೆ. ನಿಶ್ಚಿತ ಗುರಿಯನ್ನು ತಲುಪಲು ಹಲವು ಮಾರ್ಗಗಳಿದ್ದಾವೆ ಎಂದಿಟ್ಟುಕೊಂಡರೆ, ಯಾವ ಮಾರ್ಗ ಅತ್ಯಂತ ಸಮಂಜಸ ಎಂಬುದನ್ನು ನಿರ್ಧರಿಸುವುದು ಗುರಿ ಸಾಧನೆಯಲ್ಲಿ ತೊಡಗಿಸಿಕೊಳ್ಳುವವನ ಜಾಣ್ಮೆಯನ್ನವಲಂಬಿಸಿರುತ್ತದೆ; ಇದು ಯಾರೋ ಹೇಳಿಕೊಟ್ಟು ಬರುವ ಜ್ಞಾನವಲ್ಲ. ’ಬರ್ನಿಂಗ್ ಡಿಸಾಯರ್’ ಎಂಬ ಮನದೊಳಗಿನ ’ಬರ್ನಿಂಗ್ ಛೇಂಬರ್’ನಲ್ಲಿ ಸದಾ ಉರಿಯುವ ಗುರಿಯೆಂಬ ಅಗ್ನಿ ತನ್ನ ಕಸುವನ್ನು ಕಳೆದುಕೊಳ್ಳದೇ ಇದ್ದರೆ ಸಾಧನೆ ಸಾಧ್ಯವಾಗುತ್ತದೆ. ಗುರಿ ಸಾಧನೆಯ ಮಾರ್ಗದರ್ಶಕ  ವೆನಿಸಿದ,  ’ಥಿಂಕ್ ಅಂಡ್ ಗ್ರೋ ರಿಚ್’ ಶಿರೋನಾಮೆಯಲ್ಲಿ ನೆಪೋಲಿಯನ್ ಹಿಲ್ ಬರೆದ ಪುಸ್ತಕದಲ್ಲಿ ಒಂದೆಡೆ ಮಗುವೊಂದು ಚಿಕ್ಕ ಬಿಲ್ಲಿ ಕಾಸನ್ನು ಪಡೆಯಲೇಬೇಕೆಂಬ ಅನಿವಾರ್ಯತೆಯಿಂದ ಹೇಗೆ ನಡೆದುಕೊಂಡಿತು ಎಂಬುದರ ಬಗ್ಗೆ ತಿಳಿಸಿದ್ದಾನೆ. ’ಹೌ ಟು ವಿನ್ ಫ್ರೆಂಡ್ಸ್’ ಮೊದಲಾದ ಪುಸ್ತಕಗಳನ್ನು ಅನೇಕರು ಓದಿರುತ್ತೀರಿ. ಇಂತಹ ಪುಸ್ತಕಗಳನ್ನು ಓದುವವರು ಓದುತ್ತಲೇ ಇದ್ದಾರೆಯೇ ಹೊರತು ಅದನ್ನು ಪ್ರಯೋಗವಾಗಿ ಅಳವಡಿಸಿಕೊಳ್ಳಲಿಲ್ಲ. ರಿಚರ್ಡ್ ಬ್ರಾನ್ಸನ್  ಬಗ್ಗೆ ಓದಿ ಅದನ್ನೇ ಬಹಳಕಾಲ ಪತ್ರಿಕೆಗಳಲ್ಲಿ ಬರೆದ ಪತ್ರಕರ್ತರೂ ಇದ್ದಾರೆ. ಆದರೆ ಓದಿದ ಘಟನೆಗಳಲ್ಲಿನ ತತ್ವಗಳನ್ನು ಅಳವಡಿಸಿಕೊಂಡವರ ಪೈಕಿ ಕೆಲವರನ್ನು ನೆನಪಿಸಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ.

ಸುಹಾಸ್ ಗೋಪಿನಾಥ್ ಎಂಬ ಹುಡುಗ ಸೈಬರ್ ಕೆಫೆಯಲ್ಲೇ ತನ್ನ ಕಂಪನಿಯನ್ನು ಹುಟ್ಟುಹಾಕಿದ ಕಥೆಯ ಬಗ್ಗೆ ತಾವು ಟಿವಿಗಳಲ್ಲಿ ಸುದ್ದಿ ಕೇಳಿದ್ದೀರಿ. ಕ್ಯಾಪ್ಟನ್ ಗೋಪಿನಾಥ್ ಅವರ ಸಾಧನೆಯನ್ನೂ ಅದಾಗಲೇ ಕಂಡಿದ್ದೀರಿ. ಇವರುಗಳ ಬಗ್ಗೆ ಜಾಸ್ತಿ ಹೇಳುವುದು ಬೇಡವೇನೋ ಅನ್ನಿಸುತ್ತದೆ. ಓದುವುದಕ್ಕೂ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಬಂದ ಈ ಇಬ್ಬರೂ ತಮ್ಮ ಅವಿರತ ಪ್ರಯತ್ನದ ಫಲವಾಗಿ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ. ಉತ್ತಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುವುದು ಪ್ರಕೃತಿ ಧರ್ಮ! ಪ್ರತಿಯೊಬ್ಬ ಸಾಧಕನ ಹಿಂದೆಯೂ ಆ ರಂಗದಲ್ಲಿ ಅವನ ಅಗ್ರ ತಪಸ್ಸು ಅಡಗಿದೆ ಎಂಬುದನ್ನು ಮರೆಯುವ ಹಾಗಿಲ್ಲ;ಕೈ ಕೆಸರಾಗದ ಹೊರತು ಬಾಯಿಗೆ ಮೊಸರು ಸಿಗುವುದಿಲ್ಲ. ಕೈಯ್ಯನ್ನು ಕೆಸರುಮಾಡಿಕೊಳ್ಳುವುದು ಮೇಟಿವಿದ್ಯೆಯ ಯೋಗಿಯ ಕೆಲಸವಾದರೆ ಮನಸಾ ತನ್ನ ಅಂಗಾಂಗಗಳನ್ನು ದುಡಿಮೆಯಲ್ಲಿ ಹರಿಬಿಟ್ಟು, ಅವಿಶ್ರಾಂತವಾಗಿ ಪ್ರಯತ್ನಿಸುವುದೂ ಕೂಡ ಪರೋಕ್ಷ ಕೈಕೆಸರು ಮಾಡಿಕೊಂಡಂತೆಯೇ ಸರಿ. ಲೋಕದಲ್ಲಿ ಎಲ್ಲರೂ ರೈತರಾಗಲು ಸಾಧ್ಯವಿಲ್ಲ, ವ್ಯವಹಾರಕ್ಕೊಂದಷ್ಟು, ಆಡಳಿತಕ್ಕೊಂದಷ್ಟು, ಕಲೆ-ಸಾಹಿತ್ಯ-ಸಂಗೀತಕ್ಕೊಂದಷ್ಟು ಹೀಗೆಲ್ಲಾ ಬೇರೇ ಬೇರೇ ರಂಗಗಳಲ್ಲಿ ಜನ ತೊಡಗಿಕೊಂಡಾಗಲೇ ಈ ಜಗನ್ನಾಟಕ ನಡೆಯುತ್ತದೆ.


ಜೇಂಟ್ ವ್ಹೀಲ್ ಸುತ್ತುತ್ತಿರುವಾಗ, ಅದರಲ್ಲಿರುವ ಕೆಲವರು ಕೂಗಿಕೊಳ್ಳುವಾಗ ಕೆಳಗಡೆ ನಿಂತು ನೋಡುವ ನಾವು "ಅಯ್ಯೋ ಅದ್ಯಾಕೆ ಆ ಥರಾ ಹುಯ್ಕೋತೀರಪ್ಪಾ ? ಏನೂ ಆಗಲ್ಲ" ಎಂದು ಅನುಭವದಿಂದ ಹೇಳುವಂತೇ ಹೇಳುವುದಾಗಲೀ, ನೋಡಿ ನಗುವುದಾಗಲೀ ಸುಲಭ; ಅದೇ ಜೇಂಟ್ ವ್ಹೀಲ್ನಲ್ಲಿ ನಾವೇ ಕೂತಾಗ ಆಗುವ ಸ್ವಾನುಭವ ಬೇರೆಯೇ ಆಗಿರುತ್ತದೆ. ತೊಟ್ಟಿಲ ಜೋಡಿಕೆಗಳು ಅಕಸ್ಮಾತ್ ತುಂಡಾಗಿ ಕೆಳಗೆ ಬಿದ್ದುಬಿಟ್ಟರೆ? ನಾವು ಏಟುತಿಂದು ಕೆಲಸಮಾಡದಂತಾದರೆ ನಮ್ಮನ್ನೇ ನಂಬಿರುವ ನಮ್ಮ ಸಂಸಾರಕ್ಕೆ? ತೊಟ್ಟಿಲಿನಿಂದ ಬಿದ್ದು ಸತ್ತುಹೋದರೆ? ಕೈಯ್ಯೋ ಕಾಲೋ ಮುರಿದು ಮತ್ತೆ ಪುನಃ ಸರಿಪಡಿಸಲಾಗದ ಸ್ಥಿತಿಗೆ ತಲ್ಪಿದರೆ? ---ಎಂಬೀ ಹಲವು ರೀತಿಯ ಪ್ರಶ್ನೆಗಳು ನಮ್ಮಲ್ಲಿ ಉದ್ಭವವಾಗುತ್ತವೆ. ನಮ್ಮ ಪಕ್ಕದಲ್ಲೇ ನಿರಾಳವಾಗಿ ಜಗತ್ತನ್ನೇ ಮರೆತು ಕೂತಂತೇ ಕೂತ, ಮಜಾ ಅನಿಭವಿಸಿದ ಜನರೂ ಇರುತ್ತಾರೆ. ತೂಗುವ ಅದೇ ತೊಟ್ಟಿಲಲ್ಲಿ ಕೂತು ಮತ್ತಿನ್ಯಾವುದೋ ಮ್ಯಾನೇಜ್ಮೆಂಟ್ ಪ್ಲಾನ್ ಮಾಡಿಕೊಳ್ಳುವ ಜನರೂ ಇದ್ದಾರೆ! ಮನುಷ್ಯನ ಮೆದುಳಿಗೆ ಅಂತಹ ಅಪರಿಮಿತ ತಾಕತ್ತಿದೆ; ಅದು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿದೆ. ಮೆದುಳಿಗಿರುವ ಅಂತಹ ಅದ್ಭುತ ಶಕ್ತಿ ಜಗನ್ನಿಯಾಮಕನ ಕೊಡುಗೆಯಾಗಿದೆ. ಇರುವ ಶಕ್ತಿಯನ್ನು ಉದ್ದೀಪಿಸಬಹುದೇ ಹೊರತು ಹೊಸದಾಗಿ ಮೆದುಳಿಗೆ ಅದನ್ನು ತುಂಬಲು ಸಾಧ್ಯವಿಲ್ಲ.


ನಮ್ಮ ನೆರೆಕೆರೆಯ ಸದಾನಂದ ಮಯ್ಯ ಆಹಾರೋದ್ಯಮದಲ್ಲಿ ತೊಡಗಿಕೊಂಡವರು. ಎಂಜಿನೀಯರಿಂಗ್ ಮಾಡಿದ ನಂತರ ತನ್ನ ಅಪ್ಪ ಸ್ಥಾಪಿಸಿದ್ದ ’ಮಾವಳ್ಳಿ ಟಿಫಿನ್ ರೂಮ್’ ಗೆ ಹೊಸ ರೂಪ ಕೊಡಲು ಮುಂದಾದರು. ನಾನು ಅವರನ್ನೊಮ್ಮೆ ಪ್ರತ್ಯಕ್ಷವಾಗಿ ಭೇಟಿಯಾಗಿದ್ದೆ. ಬರೇ ಹೋಟೆಲ್ ಒಂದೇ ರೂಪ ಸಾಲದು, ತಾವು ತಯಾರಿಸುವ ಆಹಾರ ಪರಿಕರಗಳು ದೇಶವ್ಯಾಪಿ ಅಷ್ಟೇ ಏಕೆ ವಿದೇಶಗಳಲ್ಲೂ ಸಿಗುವಂತಾಗಬೇಕು ಎಂಬುದು ಅವರ ಕನಸಾಗಿತ್ತು. ಹಾಗಾದರೆ ಆಹಾರವನ್ನು ಸಿದ್ಧಪಡಿಸುವುದು ಹೇಗೆ? ಸಿದ್ಧ ಆಹಾರ ಕೆಡದಂತೇ ರಕ್ಷಿಸಿ ಮಾರುಕಟ್ಟೆ ಪಡೆಯುವುದು ಹೇಗೆ? ಗಿರಾಕಿಗಳನ್ನು ತಮ್ಮ ತಯಾರಿಕೆಯ ಹೆಸರಿನಲ್ಲಿ ಕೊಳ್ಳಲು ಒಪ್ಪಿಸಿವುದು ಹೇಗೆ? ಇಂತಹ ಹಲವು ಸಮಸ್ಯೆಗಳು ಮೊದಲಾಗಿ ಅವರನ್ನು ಬಾಧಿಸಿದ್ದವು. ಎಂ.ಟಿ.ಆರ್ ಗೆ ತೆರಳಿ ೭೫ರೂ ಕೊಟ್ಟು, ಶುಚಿರುಚಿಯಾದ ಪುಷ್ಕಳ ಭೋಜನವನ್ನು ಸವಿದವರಲ್ಲಿ ನಾನೂ ಒಬ್ಬ. ಅದೇ ಎಂ.ಟಿ.ಆರ್ ತನ್ನದಾದ ಬ್ರಾಂಡ್ ನಲ್ಲಿ ಹೊಸ ಹೊಸ ಸಿದ್ಧ ಆಹಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆರಂಭಿಕ ಹಂತದಲ್ಲಿ ಕೆಲವು ಸರಕುಗಳು ಮಾರಾಟವಾಗದೇ ಉಳಿದಿದ್ದೂ ದಾಖಲೆ ಇದೆ! ಆದರೆ ಮಯ್ಯ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ; ಎಂ.ಟಿ.ಆರ್ ಫುಡ್ಸ್-ಲಿಮಿಟೆಡ್ ಕಂಪನಿಯಾಗಿ ಬೆಳೆಯಿತು. ಮಯ್ಯ ಅವರ ಕನಸು ನನಸಾಯ್ತು. ಶುದ್ಧ ಸಿದ್ಧ ಆಹಾರವಸ್ತುಗಳು ಬೇಕೆಂದರೆ ಇಂದಿಗೂ ಜನ ಎಂ.ಟಿ.ಆರ್ ಬ್ರಾಂಡ್ ಹುಡುಕುತ್ತಾರೆ. ಯಾವುದೋ ಹಂತದಲ್ಲಿ ಮಯ್ಯ ಸಂಸ್ಥೆಯನ್ನು ವಿದೇಶೀ ಮೂಲದ ಕಂಪನಿಗೆ ಮಾರಿದರು. ನಂತರ ಈಗ ’ಮಯ್ಯಾಸ್’ ಎಂಬ ಹೆಸರಿನಲ್ಲಿ ಮತ್ತೆ ಅಂಥದ್ದೇ ಇನ್ನೊಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇದು ಮತ್ತೊಂದು ಸಾಧನೆ. ಮಾಮೂಲೀ ಹೋಟೆಲಿಗರಂತೇ ಚಿಂತಿಸದೇ ತಾರ್ಕಿಕವಾಗಿ ಹಲವು ವಿಚಾರಗಳನ್ನು ಮಥಿಸಿದ ಮಯ್ಯರಿಗೆ ಕಂಡ ಗುರಿಗಳೆಷ್ಟು? ಗುರಿಗಳ ಈಡೇರಿಕೆಯ ಹಿಂದಿರುವ ಅವರ ಶ್ರಮವೆಷ್ಟು? ಸಾಧನೆಯ ನಂತರ ಅವರಿಗೆ ಸಿಕ್ಕ ಮಾನಸಿಕ ಸಂತೋಷವೆಷ್ಟು? -ಇವನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.


ಆದಿತ್ಯ ಘೋಷ್ ಒಬ್ಬ ಸಾಮಾನ್ಯ ನ್ಯಾಯವಾದಿಯಾಗಿ ವೃತ್ತಿ ಜೀವನ ಆರಂಭಿಸಿದ್ದು ತನ್ನ ೨೨ನೇ ವಯಸ್ಸಿನಲ್ಲಿ. ತಮ್ಮದೇ ಕಚೇರಿಯೊಂದನ್ನು ತೆರೆದು ಕೆಲಸನಿರ್ವಹಿಸುತ್ತಿದ್ದ ಅವರು ನಂತರ ಜ್ಯೋತಿ ಸಾಗರ್ ಎಂಬ ಹಿರಿಯ ನ್ಯಾಯವಾದಿಗಳ ಸಹಾಯಕ ನ್ಯಾಯವಾದಿಗಳಾಗಿ ’ಜ್ಯೋತಿ ಸಾಗರ್ ಅಸ್ಸೋಸಿಯೇಟ್ಸ್’ ನಲ್ಲಿ ಕೆಲಸ ನಿರ್ವಹಿಸಿದರು. ಎಳವೆಯಲ್ಲಿ ತಮ್ಮ ಮಗ ಯಾವುದಕ್ಕೂ ಅರ್ಹನಲ್ಲ ಎಂಬ ಭಾವನೆ ಅವರ ಅಮ್ಮನಲ್ಲಿತ್ತಂತೆ! ಆದರೆ ತಾನು ಏನಾಗಬೇಕು ಎಂಬುದನ್ನು ಅವರ ಮನಸ್ಸು ನಿರ್ಧರಿಸಿತ್ತು. ’ಜ್ಯೋತಿ ಸಾಗರ್ ಆಸ್ಸೋಸಿಯೇಟ್ಸ್’ ಗೆ ಭಾಟಿಯಾ ಎಂಬೊಬ್ಬರು ಕಕ್ಷಿದಾರರಿದ್ದರು. ಉತ್ತಮ ವಾಣಿಜ್ಯವ್ಯವಹಾರಗಳನ್ನು ನಡೆಸುತ್ತಿದ್ದ ಭಾಟಿಯಾ ಅವರ ಸಂಸ್ಥೆಯ ಕಾನೂನು ಸಲಹೆಗಾರರಾಗಿ ಜ್ಯೋತಿ ಅವರು ಕೆಲಸಮಾಡುತ್ತಿದ್ದರು. ಭಾಟಿಯಾ ಅವರು ಇನ್ನೊಬ್ಬರೊಡನೆ ಭಾಗೀದಾರರಾಗಿ ’ಇಂಡಿಗೋ ಏರ್ಲೈನ್ಸ್’ ಸಂಸ್ಥೆಯನ್ನು ಸ್ಥಾಪಿಸಿದರು. ಸಂಸ್ಥೆಗೆ ನಾಲ್ಕುವರ್ಷ ತುಂಬಿದರೂ ಅಷ್ಟಾಗಿ ಬೆಳವಣಿಗೆ ಕಂಡಿರಲಿಲ್ಲ. ಅನಿರೀಕ್ಷಿತವಾಗಿ ಭಾಟಿಯಾ, ಆದಿತ್ಯ ಘೋಷ್ ಅವರನ್ನು ತಮ್ಮ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವಂತೇ ಕೋರಿದರು. ಆದಿತ್ಯ ಅವರೂ ಒಪ್ಪಿದರು.


ಆದಿತ್ಯ ಘೋಷ್ ’ಅಧಕ್ಷ’ರೆನಿಸಿ ಇಂಡಿಗೋ ಸೇರಿದಾಗ ಅವರಿಗೆ ೩೨ ವಯಸ್ಸಾಗಿತ್ತಷ್ಟೇ! ಇಂಡಿಗೋದ ಆಡಳಿತ ಮಂಡಳಿಯಲ್ಲಿರುವ ಎಲ್ಲರೂ ಆದಿತ್ಯರಿಗಿಂತ ಹಿರಿಯರಾಗಿದ್ದರು. ಮೇಲಾಗಿ ಆದಿತ್ಯ ಓದಿಕೊಂಡ ವಿಷಯಕ್ಕೂ ಅವರು ಆಯ್ದುಕೊಂಡ ರಂಗಕ್ಕೂ ಸಂಬಂಧವೇ ಇರಲಿಲ್ಲ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆದಿತ್ಯ ಚಿಂತಿಸಿದ ರೀತಿ ಬೇರೆಯಾಗಿತ್ತು: ಏರ್ಲೈನ್ಸ್ ವ್ಯವಹಾರಕ್ಕೆ ಬೇರೇ ಯಾವ್ಯಾವ ಉದ್ಯಮಗಳ ಸಹಕಾರ ಅಗತ್ಯ? ಎಲ್ಲೆಲ್ಲಿ ಯಾವ ಯಾವ್ ರೀತಿಯ ಸಮಸ್ಯೆಗಳು ಎದುರಾಗುತ್ತವೆ? ಅನವಶ್ಯಕ ಖರ್ಚುವೆಚ್ಚಗಳೆಷ್ಟು? ಖರ್ಚುವೆಚ್ಚಗಳನ್ನು ತಹಬಂದಿಯಲ್ಲಿಟ್ಟು ಪ್ರಯಾಣಿಕರಿಗೆ ಆದಷ್ಟೂ ಕಮ್ಮಿ ದರದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬಹುದೇ?--ಇಂತಹ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರ ಹುಡುಕಿದರು. ವಿಮಾನ ತಯಾರಕರೊಡನೆ, ಬಿಡಿಭಾಗಗಳ ತಯಾರಕರೊಡನೆ ಕಂತ್ರಾಟು ನಡೆಸಿದರು. ಸಿಬ್ಬಂದಿಯನ್ನು ಕರೆದು ಗಿರಾಕಿಗಳನ್ನು ಸಂತುಷ್ಟಗೊಳಿಸುವ ಬಗೆಯನ್ನು ಚರ್ಚಿಸಿದರು. ಪ್ರಥಮವಾಗಿ ಡೆಲ್ಲಿಯಿಂದ ಗೌಹಾಟಿಗೆ ಪ್ರಯಾಣಿಸಿದ ವಿಮಾನಕ್ಕೆ ಬಳಸಲಾಗುವ ಏಣಿ ಮತ್ತು ಟ್ರಾಕ್ಟರ್ ಬಂದು ತಲ್ಪುವುದು ತಡವಾಗಿ, ಅವುಗಳಿಗೆ ಇಂಡಿಗೋ ಕಂಪನಿಯು ಬಳಸುವ ಬಣ್ಣವನ್ನು ಹಚ್ಚಲಾಗಿರಲಿಲ್ಲ; ರಾತ್ರೋರಾತ್ರಿ ಆದಿತ್ಯ ಅವರ ಟೀಮ್ ಅವುಗಳಿಗೆ ಇಂಡಿಗೋ ಸಂಸ್ಥೆಯ ಬಣ್ಣವನ್ನು ಬಳಿಯಿತು!


ಡೆಲ್ಲಿಯಲ್ಲಿ ಇತ್ತೀಚೆಗೆ ನಡೆಸಿದ ಏರ್ಲೈನ್ಸ್ಗಳು ಮತ್ತು ಸರಕಾರದ ನಡುವಿನ ಮೀಟಿಂಗ್ ಒಂದಕ್ಕೆ ಆದಿತ್ಯ ಪ್ರಯಾಣಿಸಿದ್ದು ವ್ಯಾಗನ್ ಆರ್ ಕಾರಿನಲ್ಲಿ-ಸ್ವತಃ ಚಾಲನೆಮಾಡಿಕೊಂಡು. ಮಿಕ್ಕಿದ ಏರ್ಲೈನ್ಸ್ ಸಂಸ್ಥೆಗಳವರು ವಿದೇಶೀ ಕಾರುಗಳಲ್ಲೋ ಜೆಟ್ ಗಳಲ್ಲೋ ಬಂದಿಳಿದರು. ಪ್ರಯಾಣಿಕ ಪ್ರಯಾಣಿಸುವಾಗ ಅಧ್ಯಕ್ಷ ಯಾರೆಂದು ನೋಡುವುದಿಲ್ಲ ಬದಲಾಗಿ ತನ್ನ ಅನುಕೂಲತೆಗಳನ್ನು ನೋಡುತ್ತಾನೆ ಎಂಬುದು ಆದಿತ್ಯರ ಹೇಳಿಕೆ. ಇಂಡಿಗೋ ಸಂಸ್ಥೆಗೆ ಪೈಪೋಟಿ ನೀಡುತ್ತಿರುವ ಬೇರೇ ಸಂಸ್ಥೆಗಳು ಜಾಸ್ತಿ ಸಂಭಾವನೆ ನೀಡುವುದಾದರೆ ಹೋಗಲು ಸಿದ್ಧರಿದ್ದೀರಾ ? --ಎಂಬ ಪ್ರಶ್ನೆಯನ್ನು ಕೇಳಿದಾಗ, ಆದಿತ್ಯ ಹೇಳಿದ್ದು " ನನ್ನಿಂದ ಇಂಡಿಗೋ ಬೆಳೆದಿದೆ ಎಂದು ನಾನು ತಿಳಿದಿಲ್ಲ, ಇಂಡಿಗೋ ಬೆಳೆದಿರುವುದರ ಹಿಂದೆ ನಮ್ಮ ಟೀಮ್ನ ಪರಿಶ್ರಮ ಅಡಗಿದೆ. ಇಂಡಿಗೋ ನನಗೂ ಬೆಳೆಯುವ ಉತ್ತಮ ಅವಕಾಶ ಒದಗಿಸಿದೆ. ಹೀಗಾಗಿ ನನ್ನಿಂದಲೇ ಇಂಡಿಗೋ ಬೆಳೆದಿದೆ ಎಂದು ತಿಳಿದುಕೊಂಡು ನಾನು ಬೇರೇ ಸಂಸ್ಥೆಗೆ ಜಿಗಿದರೆ ಅಂತಹ ಮೂರ್ಖತನ ಬೇರೊಂದಿಲ್ಲ."೩೬ ವರ್ಷ ವಯಸ್ಸಿನ ಆದಿತ್ಯ ಅಧ್ಯಕ್ಷರಾಗಿರುವ ’ಇಂಡಿಗೋ ಏರ್ಲೈನ್ಸ್’ ಸಂಸ್ಥೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಪಡೆಯಲು ಮುಂದಾಗಿದೆ, ದೇಶದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವಲ್ಲಿ ನಂಬರ್ ಒನ್ ಎನಿಸಿದೆ.


ಗ್ರಾಂಡ್ ಮಾಸ್ಟರ್ ಎಂದ ತಕ್ಷಣವೇ ನೆನಪಾಗುವುದು ವಿಶ್ವನಾಥನ್ ಆನಂದ್. ಚೆಸ್ ಲೋಕದ ಮಾಂತ್ರಿಕ ಅವರು. ಭಾರತಕ್ಕೆ ೫ನೇ ಬಾರಿ ವಿಶ್ವಮಟ್ಟದ ಚಾಂಪಿಯನ್ ಆಗಿ ಕೀರ್ತಿ ತಂದುಕೊಟ್ಟಿದ್ದಾರೆ. ಗಣಕಯಂತ್ರಗಳಲ್ಲೂ ಚೆಸ್ ಆಟವಿರುತ್ತದೆ. ಅಲ್ಲೆಲ್ಲಾ ಸಾಮಾನ್ಯವಾಗಿ ಬಳಸುವುದು ಸರ್ಚ್ ಅಲ್ಗೊರಿದಮ್ ಪದ್ಧತಿಯನ್ನು. ಸಾಮಾನ್ಯವಾಗಿ ಆಟಗಾರರು ಆಡುವಾಗಲೂ ಇಂತಹ ಅಲ್ಗೊರಿದಮ್ ಅವರ ಮನದಲ್ಲಿ ಉದ್ಭವವಾಗಿರುತ್ತದೆ! ಚಿಂತನೆಯ ಮಟ್ಟದಲ್ಲಿ ಸಾಂಪ್ರದಾಯಿಕವಾಗಿ ಮೂಡುವ ಇಂತಹ ಅಲ್ಗೊರಿದಮ್ ಮೀರಿ ಬೆಳೆದವರು ವಿಶ್ವನಾಥನ್ ಆನಂದ್. ಕಾಯಿಗಳನ್ನು ಚಲಿಸುವಾಗ ಯಾವ ರೀತಿಯಲ್ಲಿ ಚಲಿಸಿದರೆ ತಾನು ಮುಂದೆಸಾಗಬಹುದು ಎಂಬುದರ ಜೊತೆಗೆ ಎದುರಾಳಿಗಳ ಮುಂದಿನ ನಡೆ ಹೇಗಿರಬಹುದೆಂಬುದನ್ನೂ ಅವಲೋಕಿಸಿ ನಡೆಯುವ ಜಾಣ್ಮೆಯದು. ಕಾಯಿ ಉರುಳಿಸುವುದು ಅಥವಾ ಮುಂದೆ ಹೆಜ್ಜೆ ಇಡುವುದು ಎಲ್ಲರಿಗೂ ಗೊತ್ತಿರುವ ಪ್ರಯತ್ನ; ಅದನ್ನೇ ಭಿನ್ನವಾಗಿ ಚಿಂತಿಸಿ ಎದುರಾಳಿ ಮತ್ತೆ ಮುಂದೆಸಾಗದಂತೇ ಮಂತ್ರಹಾಕುವುದು ಯಾವುದೇ ಪುಸ್ತಕದಲ್ಲಿ ಹೇಳಿಕೊಟ್ಟ ನಿಯಮವಲ್ಲ! ಅದು ಅವರ ಮಾನಸಿಕ ಸಿದ್ಧತೆ!


ನಮ್ಮಲ್ಲಿ ’ದ್ರಾವಿಡ ಪ್ರಾಣಾಯಾಮ’ ಎಂಬ ಒಂದು ಗಾಂವ್ಟಿ ಶಬ್ದ ಬಳಕೆಯಲ್ಲಿದೆ! ನೇರವಾಗಿ ಸಿಗುವ ಮೂಗನ್ನು ಬಲಗೈಯಲ್ಲಿ ಹಿಡಿದುಕೊಳ್ಳುವ ಬದಲು, ಅದೇ ಬಲಗೈಯ್ಯಿಂದ ತಲೆಯನ್ನು ಸುತ್ತಿಬಂದು ಮೂಗು ತಲ್ಪುವುದು ದ್ರಾವಿಡ ಪ್ರಾಣಾಯಾಮದ ಕ್ರಮವಾಗಿತ್ತಂತೆ. ದಯವಿಟ್ಟು ದ್ರಾವಿಡರು ಕ್ಷಮಿಸಿ! ಇದು ಚಿಂತನೆಗೆ ಸಕಾಲ. ಧುಮ್ಮಿಕ್ಕಿ ಹರಿಯುವ ಶರಾವತಿಯ ದಬದಬೆಯನ್ನು ಕಂಡು ಸಾವಿರಾರು ಜನ ಸಂತಸ ವ್ಯಕ್ತಪಡಿಸುತ್ತಿದ್ದರೆ ಅದನ್ನು ನೋಡಿದ ಘಳಿಗೆಯಲ್ಲೇ "ವ್ಹಾಟ್ ಎ ವೇಸ್ಟ್?" ಎಂದು ಉದ್ಗರಿಸಿದವರು ಸರ್ ಎಂ. ವಿಶ್ವೇಶ್ವರಯ್ಯ! ಅವರು ಕಂಡ ಕನಸೇ ಇವತ್ತು ಕಾರ್ಯನಿರ್ವಹಿಸುತ್ತಿರುವ, ರಾಜ್ಯದ ಹೆಗ್ಗಳಿಕೆಯ, ಮಹಾತ್ಮಾಗಾಂಧಿ ಜಲವಿದ್ಯುದಾಗಾರ. ಕೃಷ್ಣರಾಜ ಸಾಗರ ನಿರ್ಮಾಣದ ವೇಳೆ, ಗುರಿ ಸಾಧನೆಗೆ ಅವರು ಬಳಸಿದ ವಿಶಿಷ್ಟ ಮಾರ್ಗಗಳನ್ನು ಹಿಂದೊಮ್ಮೆ ಬರೆದಿದ್ದೆ. ಸಾಧಕರಿಗೆ ಬಾಧಕಗಳು ಹಲವು; ಮತ್ತು ಅದು ಸಹಜವೇ. ಅದನ್ನರಿತುಕೊಂಡೇ, ಗುರಿ ಸಾಧನೆಗೆ ಇರಬಹುದಾದ ಮಾರ್ಗಗಗಳಲ್ಲಿ ಉತ್ತಮವಾದ ಮಾರ್ಗ ಯಾವುದು ಎಂಬುದನ್ನು ತಿಳಿದು ಮುನ್ನಡೆದರೆ ವ್ಯಕ್ತಿ ವಿಶಿಷ್ಟನಾಗುತ್ತಾನೆ; ವಿಶೇಷನಾಗುತ್ತಾನೆ. ಸಾಧಕರಿಗೆ ಅಭಿನಂದನೆಗಳು, ಸಾಧಿಸ ಬಯಸುವ ಯುವಜನತೆಗೆ ಹಾರ್ದಿಕ ಶುಭಾಶಯಗಳು.