ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 29, 2011

ಸಂಕ್ರುವಿನ ಸಾಂಗತ್ಯ-ಗುಮ್ಟೆಪಾಂಗ ಮತ್ತು ನಮ್ಮನೆ ದೀಪಾವಳಿ


ಸಂಕ್ರುವಿನ ಸಾಂಗತ್ಯ-ಗುಮ್ಟೆಪಾಂಗ ಮತ್ತು ನಮ್ಮನೆ ದೀಪಾವಳಿ

ಹರಿವ ಹಳ್ಳದಲ್ಲಿ ಮಿಂದು, ನೆನೆದ ಪಂಚೆಯನ್ನೇ ಹಾಗೇ ಉಟ್ಟು ಬೆಟ್ಟವೇರುವ ಸಂಕ್ರು [’ಶಂಕರ’ದ ಅಪಭ್ರಂಶ ಇರಬಹುದೇ?] ಕೀಳಿನ ಪೂಜೆಗೆ ತೊಡಗುತ್ತಿದ್ದ. ವರ್ಷಗಟ್ಟಲೆಯಿಂದ ಅನ್ನ ಕಾಣಲೇ ಇಲ್ಲವೆನ್ನುವಷ್ಟು ಸಣಕಲು ತುಂಬಾಲೆ ಶರೀರಿಯಾದ ಆತ ಹಲ್ಲಿಲ್ಲದ ಬೊಚ್ಚು ಬಾಯನ್ನು ಕಿವಿಯವರೆಗೂ ಎಳೆದು ನಗೆಸೂಸಿ ಹಿಂದಕ್ಕೆ ಬಿಟ್ಟ ತಲೆಗೂದಲನ್ನು ಜುಟ್ಟಿನಂತೇ ಸುತ್ತಿ ಕಟ್ಟಿ, ಕೆಲಸಮಾಡುತ್ತಿದ್ದ ನಮ್ಮನೆಯ ತೋಟದಿಂದ ತಂದ ಅಡಕೆ ಶಿಂಗಾರವನ್ನೂ ಬಾಳೆಗೊನೆಯನ್ನೂ ಬುಟ್ಟಿಯಲ್ಲಿಟ್ಟು ಹೆಗಲಿಗೇರಿಸಿ ಹೊರಟುಬಿಟ್ಟರೆ ಒಬ್ಬನೇ ಆದ್ರೂ ಅಡ್ಡಿಯಿಲ್ಲ ಪೂಜೆ ಮಾಡಿಯೇ ಸಿದ್ಧ. ಅಲ್ಲಿ ಅನಾದಿಕಾಲದ ಕೀಳು ದೆವ್ವಗಳನ್ನು ಹೂತಿಟ್ಟ ಕಲ್ಲಿನ ಗುತ್ತಿನಲ್ಲಿ ಕರೆದು ಪೂಜಿಸಿದರೇ ತಮ್ಮ ಮನೆತನದ, ತಮ್ಮವರ ಆರೋಗ್ಯ ಸರಿಯಿರುತ್ತದೆ ಎಂಬುದು ಆತನ ನಂಬಿಕೆ. ಹರಿಜನ ಕೇರಿಯಲ್ಲಿ ಯಾರಿಗಾದರೂ ಗಾಳಿಮೆಟ್ಟಿಕೊಂಡರೆ ಅದಕ್ಕೆ ವೈದ್ಯಗಾರ್ಕೆ ಮಾಡೋನೇ ಸಂಕ್ರು ಅಂದ್ರೆ ತಪ್ಪಲ್ಲ. ಸಾಯ್ದ ಗಾಳಿ, ಸುಂಟರಗಾಳಿ, ಮಾಯ್ದಗಾಳಿ, ಮಾಟದಗಾಳಿ, ಆಟದಗಾಳಿ ....ಎಂಬೆಲ್ಲಾ ದೆವ್ವಗಳ ಪ್ರಭೇದಗಳನ್ನು ಗುರುತಿಸಿದ್ದ.

ಮಿಕ್ಕವರಂತೇ ಹಾಗೆಲ್ಲಾ ಪಡಪೋಶಿ ಜನವಲ್ಲ ಸಂಕ್ರು. ಹರಿಜನವಾದರೇನು ಆತನ ಸೌಮ್ಯ ಸ್ವಭಾವಕ್ಕೆ ಮಾರುಹೋಗದವರೇ ಇರ್ಲಿಲ್ಲ. ನಮಗೆಲ್ಲಾ ಆತನೊಬ್ಬ ಹಿರಿಯಜ್ಜನಾಗಿದ್ದ ಎಂದರೆ ತಪ್ಪಲ್ಲ. ಮಕ್ಕಳಿಲ್ಲದ ಸಂಕ್ರುಗೆ ನಾವೆಲ್ಲಾ ಮಕ್ಕಳಂತೇ ಆಗಿಬಿಟ್ಟಿದ್ದೆವು. ಸಂಕ್ರು ನಮ್ಮನೆಗೆ ಬಂದುಬಿಟ್ಟರೆ ಸಂಜೆ ೪-೫ ಗಂಟೆಯವರೆಗೂ ಇರುತ್ತಿದ್ದ. ಆಗಾಗ ತಿಂಡಿ-ಚಾ ಊಟ ಇವೆಲ್ಲಾ ನಮ್ಮ ಮನೆಯ ವಟಾರದಲ್ಲೇ ನಡೆಯುತ್ತಿದ್ದವು. ತೋಟದ ಕೆಲಸದ ಹಲವರ ಪೈಕಿ ಸಂಕ್ರು ಕೂಡ ಒಬ್ಬ. ಅದು ಹೇಗೋ ಬೇರೆಲ್ಲೋ ಕೆಲಸಮಾಡುತ್ತಿದ್ದ ಸಂಕ್ರು ಒಂದಿನ ನಮ್ಮನೆಗೆ ಅನಿರೀಕ್ಷಿತವಾಗಿ ಬಂದ. " ಒಡ್ಯಾ ನನ್ಕೈಲಿ ಆಗು ಕೆಲ್ಸ ಮಾಡ್ಕಂಡಿರ್ಲಾ " ಕೇಳ್ದ. ಅದಕ್ಕೆ ನನ್ನಜ್ಜನಿಗೆ ಆತನ ರೂಪ, ಹಿನ್ನೆಲೆ, ಮಕ್ಕಳಿಲ್ಲದ ಪರಿ ಎಲ್ಲಾ ಕೇಳಿ ಪಾಪ ಅನ್ನಿಸಿತೋ ಏನೋ " ಹೂಂ ....." ಅಂದುಬಿಟ್ಟರು. ಅದ್ಕೂ ಮೇಲೆ ದಿನಾ ಬೆಳಿಗ್ಗೆ ೯ ಗಂಟೆಗೆ ಹಾಜರು.

ಸಂಕ್ರು ಮಾಡಿದ ಕೆಲಸಕ್ಕೆ ಯಾರೂ ತಕರಾರು ತೆಗೀತಿರ್ಲಿಲ್ಲ. ಆತ ಹೇಗೇ ಮಾಡದ್ರೂ ಒಪ್ಪಿಗೆ ಎನ್ನೋ ಮಟ್ಟಕ್ಕೆ ಆಪ್ತನಾಗಿಬಿಟ್ಟಿದ್ದ. ಕಠಿಣತಮ ಕೆಲಸಗಳು, ಮರವೇರುವ ಕೆಲಸಗಳು ಆತನಿಂದ ಊ ಹೂಂ..., ಗೊಬ್ಬರ ಹರಗುವುದು, ಕೊಟ್ಟಿಗೆ ಶುಚಿಗೊಳಿಸುವುದು, ಅಡಕೆ ತೋಟಕ್ಕೆ ನೀರುಹಾಯಿಸುವುದು, ಬಿದ್ದ ಅಡಕೆ ಸೋಗೆಗಳನ್ನು ಎಳೆದುತಂದು ಗುಪ್ಪೆ ಹಾಕುವುದು, ಬೇರೇ ಕೆಲಸಗಾರರಿಗೆ ಬೇಕಾಗುವ ಕುಟಾರೆ[ಗುದ್ಲಿ], ಪಿಕಾಸಿ ಇಂಥಾ ಕೃಷಿ ಸಲಕರಣೆಗಳನ್ನು ಒಯ್ದು ತಲ್ಪಿಸುವುದು, ಮನೆಯಲ್ಲಿ ಬಂದುಹೋಗುವವರ ಕವಳದ[ಎಲೆಯಡಿಕೆ] ಖರ್ಚಿಗೆ ವೀಳ್ಯದೆಲೆ ಕೊಯ್ದುಕೊಂಡು ಬರೋದು, ಕುಂಟುತ್ತಾ ಬಂದ ಆಕಳ ಕಾಲಿಗೆ ಏನಾಗಿದೆ ಎಂದು ನೋಡಿ ಚಿಕಿತ್ಸೆ ಮಾಡಲು ಸಹಕರಿಸುವುದು ಹೀಗೇ ಪಡಚಾಕ್ರಿ ಕೆಲಸಗಳೇ ಆತನದ್ದು.

ಸಂಕ್ರುನ ಹೆಂಡತಿ ಶಣ್ತಂಗಿ. ಆಕೆಯ ತಂದೆಗೆ ಇಬ್ರೇ ಹೆಣ್ಮಕ್ಳಂತೆ. ಒಬ್ಬಳು ದೊಡ್ತಂಗಿ ಇನ್ನೊಬ್ಬಳು ಶಣ್ತಂಗಿ! ದೊಡ್ತಂಗಿಯನ್ನು ಅಳ್ಳಂಕಿ ಕಡೆ ಮದುವೆಮಾಡಿಕೊಟ್ಟಿದ್ರಂತೆ. ಜೋಡೀ ಅಂದ್ರೆ ಹೇಳಿಮಾಡ್ಸಿದ್ ಜೋಡಿ. ಅವಳೂ ಅಷ್ಟೇ ನಿಧಾನ. ಕೆಲಸ ಬಾಳ ಅಚ್ಚುಕಟ್ಟು. ಯಾವ್ದೇ ಕೆಲಸ ಮಾಡ್ಲಿ ಅದ್ರಲ್ಲಿ ಐಬಿಲ್ಲ. ಕೊಟ್ಟಿಗೆಗೆ ಮಳೆಗಾಲದಲ್ಲಿ ಹಸಿರು ಸೊಪ್ಪು, ದೀಪಾವಳಿಯಿಂದ ಕರಡ[ಗುಡ್ಡದಲ್ಲಿ ಬೆಳೆದು ಒಣಗಿದ ಕಡ್ಡಿ ಥರದ ಹುಲ್ಲು], ಬೇಸಿಗೆಯಲ್ಲಿ ದರಕು[ಒಣಗಿದ ಎಲೆಗಳ ಗುಡ್ಡೆ]ಇವುಗಳನ್ನೆಲ್ಲಾ ಆಯಾ ಕಾಲಕ್ಕೆ ತಕ್ಕನಾಗಿ ತರೋದು ಶಣ್ತಂಗಿ ಕೆಲಸ. ಹರಿಜನಕೇರಿಯ ಹಲವು ಹೆಂಗಸರ ಜೊತೆ ಬೆಳಿಗ್ಗೆ ಬೆಟ್ಟದ ಕಡೆ ಮುಖಹಾಕಿದರೆ ಮಧ್ಯಾಹ್ನ ೧೨ ಗಂಟೆ ಹೊತ್ತಿಗೆ ಒಂದು ಹೊರೆ ತಂದುಹಾಕಿ ನಮ್ಮನೆಯಲ್ಲಿ ತಿಂಡಿ-ತೀರ್ಥ ಮುಗಿಸಿ ಆಮೇಲೆ ಮತ್ತೆ ಹೊರಟರೆ ಸಂಜೆ ೪ರ ಹೊತ್ತಿಗೆ ಇನ್ನೊಂದು ಹೊರೆ. ಹೀಗೇ ಸಂಜೆ ಸಂಕ್ರು ಮನೆಗೆ ಹೋಗುವಾಗ ಇಬ್ರೂ ಜೊತೇಲೇ ಮನೆಗೆ ಹೋಗುತ್ತಿದ್ದರು.

ನಮಗೆಲ್ಲಾ ಸಂಕ್ರು ಇಷ್ಟವಾಗಿದ್ದು ಅಂವ ಹೇಳ್ತಿದ್ದ ಕಥೆಗಳಿಂದ! ಯಾವ ಕಥೆಯನ್ನೂ ನೆಟ್ಟಗೆ ಹೇಳಿದ ಮನುಷ್ಯನೇ ಅಲ್ಲ. ಒಗಟು ಒಗಟಾಗಿ ಹೇಳಿ ಮುಸಿಮುಸಿ ನಗುತ್ತಿದ್ದ ಆತನಲ್ಲಿ ಹಲವು ಪ್ರಶ್ನೆ ಕೇಳೀ ಕೇಳೀ ಕಥಾಭಾಗವನ್ನು ಅರ್ಥಮಾಡಿಕೊಳ್ಳಬೇಕಾಗ್ತಿತ್ತು. ಆದ್ರೂ ಕಥೆಯ ವ್ಯಾಪ್ತಿ ಬಹಳ ಆಳಕ್ಕೆ ಇಳಿಯುತ್ತಿತ್ತಾದ್ದರಿಂದ ನಮಗೆ ಯಾವುದೇ ಬೇಸರವಿರಲಿಲ್ಲ. ಕಥೆಗಳು ಎಂದ್ರೆ ಅಂತಿಂಥಾ ಕಥೆಗಳಲ್ಲ, ನವರಸ ತುಂಬಿದ ಕಥೆಗಳು. ಇಂಥಾ ಸಂಕ್ರು ಬಯಲಸೀಮೆಯ ಸಂಗ್ಯಾಬಾಳ್ಯಾ ಕಥೆಯನ್ನು ಬೇರೆಯ ರೀತಿಯಲ್ಲೇ ಅರ್ಥೈಸಿಕೊಂಡು ’ಸಿಂಗಿಬೋಳ’ನನ್ನು ಮಾಡಿ ಕಟ್ಟಿಹೇಳಿದ ಕಥೆ ಇನ್ನೂ ನೆನಪಾಗಿ ನಗುಬರುತ್ತದೆ.

ಮೊದಲ ಮಳೆಬಿದ್ದು ಎಲ್ಲೆಲ್ಲೂ ಮಣ್ಣಿನ ವಾಸನೆ ಎದ್ದ ಕೆಲವೇ ದಿನಗಳಲ್ಲಿ ನಮ್ಮೂರಿಗೆ ನಾಕಾರು ಕಿಲೋಮೀಟರು ದೂರದಲ್ಲಿರುವ ಶಿಂಗಾರ ಬೇಣ ಹಸಿರುಟ್ಟು ನವವಧುವಿನಂತೇ ಆಗುತ್ತಿತ್ತು. ನಮ್ಮಂಥಾ ಚಿಕ್ಕವರು ಹೋಗಬಾರದ ಕಾಡುಪ್ರಾಣಿಗಳು ಓಡಾಡುವ ಕಾಡು ಜಾಗವದು. ಬಹಳ ಎತ್ತರದ ಬೆಟ್ಟ ಎಂದರೆ ತಪ್ಪಲ್ಲಾ.[ನಾವೆಲ್ಲಾ ಬೆಳೆದು ಖುದ್ದಾಗಿ ಹೋಗಿ ನೋಡುವ ಹೊತ್ತಿಗೆ ಅದು ಕಾಡಾಗಿರದೇ ನಾಡಿನ ಮಧ್ಯದ ಗುಡ್ಡವಾಗಿ ಮಾರ್ಪಾಡಾಗುತ್ತಾ ನಡೆದಿತ್ತು]. ತನ್ನ ಆಕಾರಶುದ್ಧತೆ, ಅಲಂಕಾರ ಬದ್ಧತೆಯಿಂದ ಹಲವು ಬಣ್ಣದ ಗಿಡಮರ ತರುಲತೆಗಳನ್ನು ಹೊಂದಿದ್ದ ಆ ಬೆಟ್ಟಕ್ಕೆ ಅನ್ವರ್ಥನಾಮ ’ಶೃಂಗಾರಬೇಣ’ ಆಡುಮಾತಲ್ಲಿ ’ಶಿಂಗಾರಬೇಣ’ವಾಗಿತ್ತು. ಅಲ್ಲಿರುವ ಗುಹೆಗಳು, ಜಲಧಾರೆಗಳು ಇವುಗಳನ್ನೆಲ್ಲಾ ಕಣ್ಣಿಗೆಕಟ್ಟುವಹಾಗೇ ವರ್ಣಿಸುತ್ತಿದ್ದ ’ಮಹಾಕವಿ ಸಂಕ್ರು’ ನಿಜಕ್ಕೂ ಕಲಾವಿದನೇ ಸೈ. ಒಂದಷ್ಟು ಬೆಲ್ಲ-ನೀರು ಬಾಯ್ತುಂಬ ಮೆಲ್ಲಲು ತಾಂಬೂಲ ಕೊಟ್ಟುಬಿಟ್ಟರೆ ಕಥೆಗೆ ಅಂತ್ಯವೇ ಇಲ್ಲ. ಶಾಲೆಗೆ ಬಿಡುವಿರುವಾಗೆಲ್ಲಾ ಸಂಕ್ರು ಇದ್ದಾನಾ ಎಂದು ತಿಳಿದು ಆತನ ಹಿಂದೆ ಓಡುವುದು ನಮ್ಮ ಪರಿಪಾಟವಾಗಿಬಿಟ್ಟಿತ್ತು.

" ಮೊನ್ನಾಗೆ ನಾವು ಹಾರ್ಬೆಕ್ಕು ಹೊಡ್ದಾಗಿತು ...ಹ್ಯಾಂಗಿತ್ತು ಗೊತ್ತದ್ಯಾ ? " ಎಂದು ಕುತೂಹಲ ಕೆರಳಿಸುತ್ತಿದ್ದ ಆತನಿಗೆ ಶಿಕಾರಿಗೆ ಹೋಗುವುದೂ ಒಂದು ಹವ್ಯಾಸ. ಹರಿಜನರಲ್ಲಿ ಕೆಲವರು ಒಟ್ಟಾಗಿ ಸೇರಿ ಕಾಡೊಳಗೆ ಶಿಕಾರಿಗೆ ಹೋಗುವುದಿತ್ತು. ಹಂದಿ, ಕಡವೆ, ಸಾರಂಗ, ಜಿಂಕೆ, ಮೊಲ, ಕಾಡುಕೋಳಿ, ಕಾನ್ಕುರಿ ಇತ್ಯಾದಿ ಪ್ರಾಣಿ-ಪಕ್ಷಿಗಳನ್ನು ಅವರು ಬೇಟೆಯಾಡಲು ಹೋಗುತ್ತಿದ್ದುದುಂಟು. ಬೇಟೆಗೆ ಹಾಗೆ ಹೋಗುವಾಗ ತಾವು ಸಾಕಿದ ಕೆಲವು ನಾಯಿಗಳನ್ನೂ, ಭರ್ಚಿಯ ಥರದ ಕೆಲವು ಹತ್ಯಾರಗಳನ್ನೂ ತೆಗೆದುಕೊಂಡು ಹೋಗುತ್ತಿದ್ದರು. ಅವರಲ್ಲಿ ಕಾಡತೂಸು ಒಂದೋ ಎರಡೋ ಇದ್ದವೇನೋ ಅಷ್ಟೇ. ಮಿಕ್ಕೆಲ್ಲಾ ವ್ಯವಹಾರ ಉಳ್ಳ[ಉರುಳು]ಹಾಕುವುದು, ಮದ್ದು ಇಡುವುದು ಈ ರೀತಿ ಹಲವು ತಂತ್ರಗಳಿಂದ ನಡೆಯುತ್ತಿತ್ತು. ಹರೆಯದ ಪುಂಡರ ನಡುವೆ ನಡುಸೋತ ಸಂಕ್ರುವೂ ಸೇರಿಕೊಳ್ಳುತ್ತಿದ್ದ. ಆತನ ಜೀವನೋತ್ಸಾಹದಿಂದ ಮಿಕ್ಕ ಜನರಿಗೆ ಧೈರ್ಯ, ಸ್ಥೈರ್ಯ ಬರುತ್ತಿತ್ತು.

" ಶಿಕಾರಿ ಮಾಡಿ ಪ್ರಾಣಿ ಹಿಂಸೆ ಮಾಡೋದು ಸರೀನಾ ?" ಅಂದ್ರೆ " ಓ ಅಲ್ಕಾಣಿ ಅದೆಲ್ಲಾ ನೋಡ್ತಾಯ್ಕಂಬುದಿಲ್ಲ..ಕೊಂದ್ ಪಾಪ ತಿಂದ್ ಪರಿಹಾರಂತೆ " ಎನ್ನುತ್ತಾ ಗರ್ರರ್ ಗರ್ರರ್ ಸದ್ದಿನೊಂದಿಗೆ ನಕ್ಕುಬಿಡ್ತಿದ್ದ ಸಂಕ್ರು. ಶಿಕಾರಿಗೆ ಹೋದ ದಿನ ಮತ್ತು ಆ ಮರುದಿನವೂ ಅಲ್ಲದೇ ಇನ್ನೂ ಒಂದೆರಡು ದಿನ ಸಂಕ್ರು ಕೆಲಸಕ್ಕೆ ರಜಾ ಒಗೆದುಬಿಡುತ್ತಿದ್ದ. ಕೊಂದು ತಂದ ಪ್ರಾಣಿಗಳನ್ನು ಪಾಲುಮಾಡಿ ತಿಂದು ತೇಗುವ ಹರಿಜನರಕೇರಿಯಲ್ಲಿ ಆ ದಿನ ಹಬ್ಬವೋ ಹಬ್ಬ! ಊಟದ ಗಮ್ಮತ್ತಿನಲ್ಲಿ ಗಾಂವ್ಟಿ ಸಾರಾಯಿ ಸೇರಿಕೊಂಡು ಗುಮ್ಟೆಪಾಂಗ[ಒಂದು ತೆರನಾದ ಮಣ್ಣಿನ ಮಡಕೆಯ ಚರ್ಮವಾದ್ಯ] ಶುರುಹಚ್ಚಿಕೊಂಡರೆ ಆ ರಾತ್ರಿ ಸಿಂಗಿಬೋಳನ ಕಥೆಯ ರೀತಿ ಏನೇನೋ ಅವರದ್ದೇ ಆದ ಹಾಡುಗಳನ್ನು ಹೇಳಿಕೊಂಡು ಅಷ್ಟೂ ಜನ ಕುಣಿಯುತ್ತಿದ್ದರು. ಸಂಕ್ರು ಹಾಡಲು ಕೂತರೆ ಆಕಾಶ ಭೂಮಿ ಒಂದಾದ್ರೂ ಏಳುವ ಆಸಾಮಿಯಲ್ಲ; ಹಾಡು ಮುಗೀಬೇಕೇ ಆತ ಏಳಬೇಕೆ. ಆತನ ಕಂಠದಲ್ಲಿ ಹಾಗೆ ಮಾಧುರ್ಯವೂ ಇತ್ತು ಅನ್ನಿ. ಸಾಹಿತ್ಯ ಸರಿಯಿರದಿದ್ದರೂ ಸ್ವರಲಾಲಿತ್ಯವನ್ನು ತೋರುತಿದ್ದ. ಹಾಗಂತ ಇವನ್ನೆಲ್ಲಾ ನಾವು ಅಲ್ಲಿಗೆ ಹೋಗಿ ನೋಡಿದ್ದಿಲ್ಲ ಮಾರಾಯ್ರೆ! ಇದು ನಮ್ಮ ಭಾತ್ಮೀದಾರರಾದ ’ಸಂಕ್ರು ಹಳ್ಳೇರ’ರಿಂದ ಬಂದ ಭಾತ್ಮೆ. ಹಾಡನ್ನು ಕೇಳಿದ್ದೆವು; ಯಾಕೆಂದ್ರೆ ನಮ್ಮ ಒತ್ತಾಯಕ್ಕೆ ತೋಟದಲ್ಲಿ ಗಾಳಿಮಳೆಗೆ ಮುರಿದುಬಿದ್ದ ಅಡಕೆಮರದ ತುಂಡಿನ ಮೇಲೆ ಕೂತು ಹಾಡು ಹೇಳಿದ್ದು ಈಗಲೂ ಕಿವಿಯಲ್ಲಿ ಗುನುಗುನಿಸುತ್ತಲೇ ಇದೆ.

" ಅಂವ್ಗೆ ಕೊಡಬೇಡಿ ನಂಕುಡೆ ಕೊಡಿ ಮನೀಲಿ ಸಾಮಾನಿಲ್ಲ, ಅಂವ್ಗೆ ಕೊಟ್ರೆ ಪೂರಾ ದೇಗನಂಗ್ಡಿಗೋಯ್ತದೆ " ಅಂತಿದ್ದು ಶಣ್ತಂಗಿ. ಅವರ ಮನೆಯ ಆಗುಹೋಗುಗಳನ್ನೆಲ್ಲಾ ಅವಳೇ ನಿಭಾಯಿಸಬೇಕಿತ್ತು. ಈ ಪುಣ್ಯಾತ್ಮ ಸಂಕ್ರು ಕೆಲಸಮಾಡಿದ್ದಕ್ಕೆ ಕಾಸು ಕೇಳಿ ಇಸ್ಗಂಡು ನೇಟ್ಗೆ ’ಡಿಯೇಗ್’ ಎನ್ನುವವರ ಸರ್ಕಾರಿ ಹೆಂಡದಂಗ್ಡಿಗೆ ನುಗ್ಗಿಬಿಡುತ್ತಿದ್ದ. ’ಪರಮಾತ್ಮ’ನನ್ನು ಒಳಗೆ ಇಳಿಸಿದವನೇ ಸೀದಾ ಮನೆಗೆ ಹೋಗಿ ಮಲಗಿಬಿಡುತ್ತಿದ್ದ. ಯಾರ್ದೂ ತಂಟಿಲ್ಲ-ತಕ್ರಾರಿಲ್ಲ, ಯಾರ ಗೋಜಿಗೆ ಹೋಗೋದು ಅಥವಾ ಹಾದಿ ಬೀದೀಲಿ ನಿಂತು ಹಲಬೋದು ಸಂಕ್ರುಗೆ ಹಿಡಿಸ್ತಾ ಇರ್ಲಿಲ್ಲ. ಆದ್ರೆ ಕೈಲಿ ಇದ್ದಷ್ಟೂ ಕಾಸಿಗೆ ಕುಡಿದುಬಿಡ್ತಿದ್ದ...ಹುಷಾರು ತಪ್ಪುವಷ್ಟಾದ್ರೂ ಬಿಡ್ತಿರಲಿಲ್ಲ. ಅದ್ಯೇನ್ ತೀಟೆಯೋ ಯಾವ ಚಿಂತ್ಯೋ ಯಾವ್ದೋ ನಮ್ಗೆ ತಿಳೀತಿರ್ಲಿಲ್ಲ. ಮಕ್ಕಳಿಲ್ಲಾ ಎಂಬ ಕಾರಣಕ್ಕೆ ಹಾಗೆ ಮಾಡ್ತಿದ್ದನೋ ಏನೋ.

ನಮ್ಮಲ್ಲಿನ ದೀಪಾವಳಿಗೆ ಸಂಕ್ರು ಇರ್ದೇ ಲಕ್ಷಣವೇ ಇಲ್ಲ ಎಂಬಷ್ಟು ನಮ್ಮಲ್ಲಿ ಒಂದಾಗಿದ್ದ ಆತ ಕೊಟ್ಟಿಗೆ ತೊಳೆದು, ಕರಡಹಾಸಿ ದನಗಳ ಮೈ ನೋವಾಗದಂತೇ ಮೆತ್ತಗೆ ಮಲಗಲಿ ಎಂದು ಬಯಸುವ ಮೃದುಮನಸ್ಸಿನವನೂ ಆಗಿದ್ದ. ದೀಪಾವಳಿಯ ಬಲಿಪಾಡ್ಯದ ದಿನ ಬೆಳ್ಳಂಬೆಳಿಗ್ಗೆ ಗೋಪೂಜೆಗೆ ಹಾಜರಾಗುವ ಆತನಿಗೆ ಗೋವುಗಳಿಗೆ ಕಟ್ಟಿರುವ ಚಾಟಿ [ಅಡಕೆ, ವೀಳ್ಯದೆಲೆ, ಶಿಂಗಾರ, ದನಮಾಲೆ ಹೂ, ಚಪ್ಪೆದೋಸೆ ] ಹರಿಯುವುದು ಬಹಳ ಮಜಾಕೊಡುವ ಕೆಲಸ. ನಮ್ಮಲ್ಲಿ ಗೋಪೂಜೆಗೆ ಒಣಗಿದ ಬಾಳೆಯ ರೆಂಬೆಗಳಿಂದ ಮಾಡಿದ ಲಡ್ಡು ಬಳ್ಳಿಗಳಲ್ಲಿ ಚಾಟಿಯನ್ನು ಪೋಣಿಸುತ್ತಿದ್ದರು. ಕೆಲವು ಅಡಕೆ ಸರಗಳನ್ನೂ ಮಾಡುತ್ತಿದ್ದರು. ಗಣಪತಿ ಪೂಜೆಯಿಂದ ಆರಂಭಗೊಳ್ಳುವ ಗೋಪೂಜೆ ಗೋವಿನ ಕಾಲುಗಳು-ಮೈ ತೊಳೆದ ಶಾಸ್ತ್ರಮಾಡಿ, ಗೋವಿಗೆ ಚಾಟಿ ಕಟ್ಟಿ, ಆರತಿ ಬೆಳಗಿ, ಗೋಗ್ರಾಸ [ಬೆಲ್ಲದ ಪಾಕದಲ್ಲಿ ಅನ್ನ, ಬಾಳೇಹಣ್ಣು, ಕಾಯಿತುರಿ, ತುಪ್ಪ, ಯಾಲಕ್ಕಿ ಇವುಗಳನ್ನು ಹಾಕಿ ಕಲಸಿ ಹದಮಾಡಿದ್ದು]ಕೊಟ್ಟು, ಬಾಯಿತೊಳೆಸಿದ ಶಾಸ್ತ್ರಮಾಡಿ ಮತ್ತೆ ಮಂಗಳಾರತಿ ಎತ್ತಿ ನಂತರ ಮಂತ್ರಪುಷ್ಪ-ಪ್ರಾರ್ಥನೆಯೊಂದಿಗೆ ಮುಗಿಯುತ್ತಿತ್ತು. ಆದಾದಮೇಲೆ ಪ್ರಸಾದ ಸ್ವೀಕರಿಸಿ ಗೊತ್ತಾದ ಮುಹೂರ್ತದಲ್ಲಿ ಅಂದು ದನಗಳ ಹಗ್ಗದ ಕಣ್ಣಿ ಕಳಚುತಿದ್ದರು. ಹಗ್ಗ ಬಿಡಿಸಿದ ದನಗಳನ್ನು ಜಾಗಟೆ ಬಡಿದು ಕೊಟ್ಟಿಗೆಯಿಂದ ಹೊರಗೆ ಓಡಿಸುವುದು ಮಕ್ಕಳ ಕೆಲಸವಾಗಿತ್ತು. ಬೆದರಿ ಓಡುವ ಹಸುಗಳ ಕುತ್ತಿಗೆಗೆ ಕಟ್ಟಿರುವ ಚಾಟಿಗಳನ್ನು ಅಡಗಿನಿಂತು ಹರಿಯುವುದು ಸಂಕ್ರು-ತಂಡದವರ ಆಟ. ಅಲ್ಲಿ ಆಟದೊಂದಿಗೆ ಅವರಿಗೊಂದಷ್ಟು ಅಡಕೆ,ವೀಳ್ಯದೆಲೆ ಇವೆಲ್ಲಾ ಸಿಗುತ್ತಿದ್ದವು!

ಕಿರುಬೇಸಿಗೆ ಅಂದರೆ ಜನವರಿ ತಿಂಗಳ ಹೊತ್ತಿಗೆ ನಮ್ಮ ಹಳ್ಳಿಯ ಕಡೆಗೆ ಹಸಿ ಗೇರುಬೀಜ ಸಿಗುವುದು ಅಪರೂಪ. ಎಲ್ಲೋ ಗುಡ್ಡಗಳಲ್ಲಿ ಕಣ್ಣಿಟ್ಟು ನಮಗಾಗಿ ಹಸಿಗೇರುಬೀಜಗಳನ್ನು ಹೀಚಿ ಒಳಗಿನ ಬೆಳ್ಳಗಿನ ಎಳೆಯ ಬೀಜಗಳನ್ನು ತಂದುಕೊಡುತ್ತಿದ್ದುದೂ ಕೂಡ ಸಂಕ್ರುವೇ, ತಪ್ಪಿದರೆ ಶಣ್ತಂಗಿ. ನಾನು ಓದು ಮುಗಿಸಿ ಉದ್ಯೋಗಿಯಾಗಿ ಬೆಂಗಳೂರು ತಲ್ಪಿದರೂ ಆ ಮುದುಕ-ಮುದುಕಿ ನಮ್ಮಲ್ಲೇ ಇದ್ದರು, ಬೇಸಿಗೆಯಲ್ಲಿ ನನ್ನ ಬರುವಿಕೆಯ ವಾರ್ತೆ ಮೊದಲೇ ತಿಳಿದು ಆ ದಿನಕ್ಕೆ ಸರಿಯಾಗಿ ಎಳೇ ಗೇರುಬೀಜ, ಬಿಳೀಮುಳ್ಳೇ ಹಣ್ಣು, ಕಾರೇಕಾಯಿ, ಕೌಳೀಕಾಯಿ-ಹಣ್ಣು, ಜಂಬೇಹಣ್ಣು, ನೇರಲೆಹಣ್ಣು, ಜೇನುತುಪ್ಪ ಇತ್ಯಾದಿಯಾಗಿ ಹಲವು ಹಣ್ಣು-ಕಾಯಿ ಇಟ್ಗೊಂಡು ದಾರಿಕಾಯ್ತಾ ಇರ್ತಿದ್ರು. ಅವರಿಂದ ಅವುಗಳನ್ನು ಸ್ವೀಕರಿಸಿ ಚಪ್ಪರಿಸಿ ತಿಂದರೇನೆ ಅವರಿಗೆ ಖುಷಿ. ಅವರಿಗೊಂದಷ್ಟು ಬಟ್ಟೆ-ಬರೆ, ಸ್ವಲ್ಪ ಹಣ ಇತ್ಯಾದಿ ಕೊಟ್ಟಾಗ ಬ್ರಹ್ಮಾಂಡದಲ್ಲೇ ಅವರಷ್ಟು ಸುಖಿ ಬೇರೇ ಇಲ್ಲ ಎನ್ನುವಂತಹ ಭಾವ ಅವರ ಕಂಗಳಲ್ಲಿ!

ಕಾಯದ ಕಾಲ ತನ್ನ ಪರಿಕ್ರಮದಲ್ಲಿ ಹಲವರನ್ನು ಸೃಜಿಸುತ್ತಾ-ಹಿಂಪಡೆಯುತ್ತಾ ನಡೆಯುವುದು ನಿಸರ್ಗ ನಿಯಮವಷ್ಟೇ ? ಹಾಗೆ ನಂಗೆ ಕೆಲವು ವರ್ಷಗಳ ಹಿಂದೆ ಕೇಳಿಬಂದ ಸುದ್ದಿ ಸಂಕ್ರು ಗತಿಸಿಹೋಗಿದ್ದು. ಸುಮಾರು ಮುದಿವಯಸ್ಸಿಗನೇ ಆದ್ರೂ ಇನ್ನೂ ಆತ ಬದುಕಿರಲಿ ಎಂಬುದೇ ನಮ್ಮೆಲ್ಲರ ಇಚ್ಛೆಯಾಗಿತ್ತಾದರೂ ಯಾರನ್ನು ಯಾರು ತಾನೇ ಎಷ್ಟು ದಿನ ಇಲ್ಲಿ ಇಟ್ಟುಕೊಂಡಾರು; ಅದು ವಿಧಿಯಿಚ್ಛೆ. ಯಾವುದೋ ರಾತ್ರಿ ಸ್ವಲ್ಪ ಜಾಸ್ತಿಯೇ ಕುಡಿದು ಮನೆಗೆ ಹೋಗಿದ್ದ ಸಂಕ್ರು ಬೆಳಗಾಗುವಷ್ಟರಲ್ಲಿ ಯಾತ್ರೆ ಮುಗಿಸಿಬಿಟ್ಟಿದ್ದನಂತೆ. ಶಣ್ತಂಗಿ ಈಗ ಒಬ್ಬಂಟಿ; ಆಕೆಯಿಂದ ಕೆಲಸಮಾಡಿಸುತ್ತಿಲ್ಲ-ಹಾಗೆ ತಿಳಿಯಬೇಡಿ. ಆಕೆಗೆ ಆಗಾಗ ಸ್ವಲ್ಪ ಹಣ ಅದೂ ಇದೂ ಅಂತ ಕೊಡುವುದಿದೆ. ಆಕೆಯೆ ಜೊತೆಗಾಗಿ ಆಕೆಯ ಹತ್ತಿರದ ಬಂಧುವೊಬ್ಬರ ಮಗ ಮತ್ತಾತನ ಹೆಂಡತಿ ಇದ್ದಾರೆ. ಹಬ್ಬ-ಹರಿದಿನ, ವಿಶೇಷ ದಿನಗಳಲ್ಲಿ, ಕಾರ್ಯ-ಕಟ್ಲೆ ಏನಾದ್ರೂ ಇದ್ರೆ ಹೇಳಿ ಕಳಿಸ್ತೇವೆ; ಬಂದು ಊಟಮಾಡಿ ಒಂದಷ್ಟು ಹೊತ್ತು ಮಾತನಾಡಿಕೊಂಡು, ಸ್ವಲ್ಪ ಹಣ ತೆಗೆದುಕೊಂಡು ಮರಳಿ ಹೋಗುತ್ತಾಳೆ.

ದೀಪಾವಳಿಗೆ ಈಗ ಮೊದಲಿನಂತಹ ಅಮಿತೋತ್ಸಾಹ ಇಲ್ಲ. ಆಗಿನಂತೇ ಈಗ ಕೊಟ್ಟಿಗೆಯಲ್ಲಿ ೩೪-೩೫ ದನಗಳ ಹಿಂಡಿಲ್ಲ. ಪೂಜೆಯ ಸಮಯಕ್ಕೆ ಸರಿಯಾಗಿ ಬಂದುನಿಲ್ಲುವ ಸಂಕ್ರು-ತಂಡದವರಿಲ್ಲ. ನರಕ ಚತುರ್ದಶಿಗೂ ಮುನ್ನಾದಿನದ ರಾತ್ರಿ ಹಂಡೆತೊಳೆದು ಕೆಮ್ಮಣ್ಣು-ಶೇಡಿ ಬಳಿದು, ಶಿಂಡ್ಲೆ ಬಳ್ಳಿಯನ್ನು ಹಂಡೆಯ ಕಂಟಕ್ಕೆ ಹಾಕಿ, ಉರಿವ ಕುಂಟೆಯ ಒಲೆಯಮೇಲೆ ನೀರು ಕಾಯಿಸುವುದು, ಚತುರ್ದಶಿಯ ಬೆಳಗಿನ ಜಾವ ಹಿರಿಯರಿಂದ ಎಣ್ಣೆ ಹನಿಸಿಕೊಂಡು, ಮಂಗಲಾಕ್ಷತೆ ಎರಚಿಸಿಕೊಂಡು, ಆರತಿ ಬೆಳಗಿಸಿಕೊಂಡು ರಾಜಕುಮಾರರಂತೇ ಅಭ್ಯಂಗಕ್ಕೆ ಅಣಿಯಾಗುತ್ತಿದ್ದ ಆ ದಿನಗಳು ಇತಿಹಾಸದ ಅಧ್ಯಾಯಗಳಾದಂತೇ ಅನಿಸುತ್ತಿವೆ. ಅಭ್ಯಂಗ ಪೂರೈಸಿ ಬಂದವರಿಗೆ ಹುಣಿಸೇಹಣ್ಣಿನ ಪಾನಕ, ತಿನ್ನಲು ಅವಲಕ್ಕಿ ಮೊಸರು ನೀಡುತ್ತಿದ್ದುದರ ಸಿಹಿನೆನಪು ಪ್ರತೀ ದೀಪಾವಳಿಯ ಸಂದರ್ಭ ಕಾಡುತ್ತದೆ. ಅಮ್ಮ-ಅಪ್ಪ ಎಲ್ಲರೂ ಇದ್ದರೂ ಅಜ್ಜನ ಮಂತ್ರ- ಅಜ್ಜಿಯ ಹಾಡು ಕೇಳಿಸುವುದಿಲ್ಲ. ಕಾಲಗರ್ಭದಲ್ಲಿ ಮರೆಯಾಗಿ ಹೋದ ಕೆಲವು ವ್ಯಕ್ತಿಗಳು ನಮ್ಮೊಟ್ಟಿಗೇ ಇದ್ದಿದ್ದರೆ ಎಂಬ ಭಾವ ಹುಟ್ಟಿ ತೊರೆ-ನದಿ-ಮಹಾನದಿಯಾಗಿ ತಲೆತುಂಬಿಕೊಳ್ಳುತ್ತದೆ. ನಗರಜೀವನದ ಅನಿವಾರ್ಯ ವೇಳಾಪಟ್ಟಿಯಲ್ಲಿ ಬಂಧಿಯಾಗಿರುವ ನಮಗೆ ಕೆಲವೊಮ್ಮೆ ಹೋಗಿಬರಲೂ ಬಿಡುವಿರದೇ ಇದ್ದಲ್ಲೇ ದೀಪಾವಳಿ ಆಚರಿಸುವಂತಾಗಿದೆ. ನಗರದ ಬೀದಿಗಳಲ್ಲಿ ಎತ್ತೆತ್ತರಕ್ಕೆ ಹಾರಿಸುವ ಪಟಾಕಿಗಳು ನಮ್ಮನ್ನು ಅಣಕಿಸುತ್ತವೋ ಎಂಬಂತಾಗಿಬಿಟ್ಟಿದೆ. ಆ ನೆನಪಲ್ಲೇ ದೀಪಗಳನ್ನು ಹತ್ತಿಸುತ್ತಾ ಕಳೆದು ಕೊಂಡ ಅವರನ್ನೆಲ್ಲಾ ನೆನೆದು ಆಕಾಶಬುಟ್ಟಿಯಲ್ಲಿ ದೀಪ ಬೆಳಗುವುದೇ ಮಾರ್ಗವಾಗಿದೆ; ಬದುಕಿನ ಸಹಜ ಘಟ್ಟವಾಗಿದೆ.

Saturday, October 22, 2011

ಬೆಳಗಲಾದೀಪಗಳು ಕತ್ತಲೆಯನಳಿಸುತ್ತ


ಬೆಳಗಲಾದೀಪಗಳು ಕತ್ತಲೆಯನಳಿಸುತ್ತ

ಹಂಡೆ ಹರಿವೆಯ ತುಂಬ ಮಂಗಳದ ಜಲತುಂಬಿ
ಸಿಂಡಲೆಯ ಬಳ್ಳಿಗಳ ಸಂಕೋಲೆ ತೊಡಿಸಿ
ತಂಡದಲಿ ಕೂತು ಮಣೆಗಳ ಮೇಲೆ ಜಾವದಲಿ
ತಿಂಡಿಗೂ ಮುನ್ನ ಮಂಗಳ ಸೇಸೆ ಸ್ನಾನ

ಮೂರು ದಿನಗಳ ಭಾಗ್ಯ ಪಡೆದಿರುವ ಬಲಿರಾಯ
ತೇರನೇರುತ ಬರುವ ಭುವಿಯನಾಳಲಿಕೆ
ಯಾರಿಗೇನಿದೆ ಕೊರತೆ ಮಹಾಬಲೀ ರಾಜ್ಯದಲಿ ?
ಸಾರಿ ನೀವ್ ಕೇಳುವನು ಎಲ್ಲರಹವಾಲು

ಹದಿನಾರು ಸಾವಿರದ ಹೆಮ್ಮಕ್ಕಳಾ ಸೆರೆಯ
ಉದಯಕಾಲದವೇಳೆ ಬಿಡಿಸಿ ಗೋಪಾಲ
ಸದೆಬಡಿದ ನರಕನಾ ಕೊಂದಾದ ನೋವುಗಳ
ಒದೆದೋಡಿಸಲು ಮಿಂದ ಚಂದದಭ್ಯಂಗ

ಜಯಸಿರಿಯು ಹೊಸಿಲೊಳಗೆ ಹೆಜ್ಜೆಯಿರಿಸುವ ಸಮಯ
ವಯಸು ವರ್ಚಸ್ಸುಗಳ ಬದಿಗಿರಿಸುತಿಲ್ಲಿ
ಬಯಸಿ ಆವಾಸವನು ಪೂಜಿಸುವ ಕೈಂಕರ್ಯ
ಜಯಿಸಲೆಮ್ಮಯ ಗೆಯ್ಮೆ ಹರಸೆನ್ನುತಲ್ಲಿ

ಇಂದಿರನ ಮಳೆಯಲ್ಲಿ ಗೋವುಗಳು ನೆನೆವಾಗ
ಸುಂದರದ ಗೋವರ್ಧನವೆತ್ತಿ ಬೆರಳೊಳ್
ಚಂದಿರಾನನ ನಿಂತ ಗೋವಳರ ರಕ್ಷಣೆಗೆ
ಹಂದರದಿ ಗೋಕುಲದ ಜಯಘೋಷ ಮೊಳಗೆ

ಅನ್ನದಾತನ ಮಗಗೆ ಅಂದದುಡುಗೆಯ ಕೊಡುಗೆ !
ಚನ್ನೆಮಣೆ ಚಿನ್ನಿದಾಂಡಿನ ಜೊತೆಗೆ ಭೂರೆ !!
ಹೊನ್ನಕಳಸಗಳೆಲ್ಲ ಹೊಳೆಯುವವು ದೇವಳದಿ
ಚಿನ್ನದಾ ಹಣತೆಗಳು ಹೊಡೆದು ಮನ ಸೂರೆ

ಬೆಳಗಲಾದೀಪಗಳು ಕತ್ತಲೆಯನಳಿಸುತ್ತ
ತೊಳೆದು ಮನಕಾವರಿಸಿ ನಿಂತಂಧಕಾರ
ಕಳೆಕಳೆಯ ಬೆಳ್ಳಿ ಬೆಳಕಿನ ಹಬ್ಬ ಇಳೆಯೊಳಗೆ
ಕೊಳೆಯಳಿಸಿ ನೀಡಲಿಕೆ ತತ್ವದಾಧಾರ !

Thursday, October 20, 2011

ಗಜಾನನಂ ಭೂ ತಗಣಾದಿ ಸೇವಿತಂ !!



ಗಜಾನನಂ ಭೂ ತಗಣಾದಿ ಸೇವಿತಂ !!

ಆರಂಭಕಾಲದಲ್ಲಿ ಶಾಸ್ತ್ರಕಾರರು ಗಣೇಶನನ್ನು ಸ್ತುತಿಸುತ್ತಾರೆ ಎನ್ನುವ ಎಷ್ಟೋ ಕೀರ್ತನೆ ದಾಸರುಗಳು ಅಲ್ಲಿಯೇ ಅಪಭ್ರಂಶವನ್ನು ಆರಂಭಿಸಿಬಿಡುತ್ತಾರೆ:

ಗಜಾನನಂ ಭೂ ತಗಣಾದಿ ಸೇವಿತಂ.....

ಹೌದೌದು ಸ್ವಾಮೀ ನೀವು ಧಾರವಾಡದ ಕಡೆಯವರಾದರೆ ತಿಗಣೆಗಳ ಅನುಭವ ಇನ್ನೊಂದು ಜನ್ಮಕ್ಕೆ ಸಾಕಾಗುವಷ್ಟು ಸಂಚಯವಾಗಿರುತ್ತದೆ! ತಿಗಣೆಗಳಿಗೆ ನಮ್ಮಲ್ಲಿ ತಗಣೆ ಎನ್ನುವುದೂ ಇದೆ. ಬಯಲುಸೀಮೆ ಕಡೆ ’ತಗಣಿ’ ಎನ್ನುವುದನ್ನೂ ಕೇಳಿದ ನೆನಪು. ತಗಣೆ+ಆದಿ = ತಗಣಾದಿ ಎಂದಾಗುತ್ತದಲ್ಲ, ಹೀಗೆ ಆ ಶ್ಲೋಕವನ್ನು ಅವರು ಉಚ್ಚರಿಸಿದಾಗೆಲ್ಲಾ ಮನಸ್ಸಿನಲ್ಲಿ ನೆನಪಾಗುವುದು ಈ ಚಿತ್ರ : ಧಾರವಾಡಕಡೆ ಎಲ್ಲೋ ಗಣಪತಿ ವಿಗ್ರಹ ಹಳೇ ಮಂಚದಮೇಲೆ ಪ್ರತಿಷ್ಠಾಪಿಸಿದ್ದಾರೆ, ಇರುವಷ್ಟು ದಿನ ತಗಣೆಗಳಿಂದಲೂ ಸೇವೆ ಪಡೆದ ಗಣಪತಿಯನ್ನು ನೆನೆದು ಸಂಸ್ಕೃತ ಶ್ಲೋಕರಚನೆಕಾರರು ಇದನ್ನು ಬರೆದಿರಬೇಕು ಎಂಬುದು !

ಶಾಸ್ತ್ರೀಯ ಸಂಗೀತದ ವೈಖರಿಯನ್ನು ಉಳಿಸಿಕೊಳ್ಳುವ ಭರದಲ್ಲಿ ಕೆಲವರು ಹಾಡುತ್ತಾರೆ :

ಬಲ್ಲಿದನು ಕಾಗಿನೆಲೆ ಆದಿ ಕೇ ಶವರಾಯ.......

ಇದು ಕರ್ನಾಟಕ ಸಂಗೀತದಲ್ಲಿ ಇನ್ನೂ ಪಳಗಿರದ ಬಹುತೇಕ ಮಂದಿ ಹಾಡುವ ಪರಿ. ಹಾಡುವಾಗ ಅಕ್ಷರಗಳ ವಿಂಗಡಣೆಮಾಡಲು ಹೋಗಿ ಎಲ್ಲಿ ಯಾವುದನ್ನು ವಿಭಜಿಸಬಾರದೋ ಅದನ್ನೇ ಒಡೆದು ಹಾಡುವುದು ಅವರಿಗೆ ಅರ್ಥವಾಗದೇ ಅಥವಾ ನಿರ್ಲಕ್ಷ್ಯದಿಂದ ನಡೆಯುವ ಕೆಲಸ ಎನ್ನಬಹುದೇ ?

ಇನ್ನು ನಾಟಕಗಳಲ್ಲಿ ಬರುವ ಒಕ್ಕಣಿಕೆಗಳು ಬಹಳ ಸೊಗಸು. ಉದಾಹರಣೆಗೆ

" ಹೇಲತಾ ಕೋಮಲಾಂಗಿ "

ಅಸಹ್ಯಪಟ್ಟು ಓಡಿಹೋಗಬೇಡಿ, ಇಲ್ಲಿ ಹೇಳಿದ್ದು " ಹೇ ಲತಾ ಕೋಮಲಾಂಗಿ " ಅಂತ, ಅರ್ಥವಾಯ್ತಲ್ಲ ? ಮೊದಲನೇದಕ್ಕೂ ಅರ್ಥವಿದೆ ಸ್ವಲ್ಪ ಬದಲು ಅಲ್ವೇ ?

ಹಿಂದೆ ನಿಮಗೊಮ್ಮೆ ಹೇಳಿದ್ದೆ. ಅಪಭ್ರಂಶ ಬರೇ ಅಕ್ಷರವಿಂಗಡಣೆಯ ದೋಷದಿಂದಷ್ಟೇ ಅಲ್ಲ, ಬದಲೀ ಅಕ್ಷರಗಳ ಪ್ರಯೋಗದಿಂದಲೂ ಆಗುತ್ತದೆ. ಬಹಳ ಹಿಂದೆ ಮಾಧ್ಯಮವಹಿನಿಯ ಸಂದರ್ಶಕಿಯಾಗಿದ್ದ ತೇಜಸ್ವಿನಿ ಎಂಬಾಕೆ ತನ್ನನ್ನು ನೋಡಲು ಬಂದವರಲ್ಲಿ ಕೇಳಿದಳಂತೆ :

ಹೇನ್‍ಬೇಕಾಗಿತ್ತು ?

ನನಗೆ ಬಂದ ಒಂದು ನಾಟಕದ ಆಮಂತ್ರಣದಲ್ಲಿ " ಸರ್ವರಿಗೂ ಹಾದರದ ಸ್ವಾಗತ " ಎಂದಿದ್ದುದನ್ನೇ ತಲೆಬರಹವನ್ನಾಗಿ ಹಿಂದೆಲ್ಲೋ ಬರೆದ ಜ್ಞಾಪಕ.

ಇನ್ನು ಕುಚೋದ್ಯದ ಕೆಲವು ಜನ ಹೀಗೂ ಹೇಳುತ್ತಾರೆ [ ರೈತನ ಬಾಳೇತೋಟ ಹೊಕ್ಕ ಮಂಗ ಬಾಳೆಕಾಯಿ ತಿಂದಾಗ ದೇವರಮೇಲೇ ಕೋಪಗೊಂಡ ರೈತ ಈ ರೀತಿ ಹೇಳಿದನಂತೆ] :

" ವಕ್ರತುಂಡ ಮಹಾಕಾಯ ಮಂಗತಿಂತೋ ಬಾಳೆಕಾಯ "

ಹೋಕ್ಕೊಳ್ಳಿಬಿಡಿ ನಮ್ಮ ರಾಜಕಾರಣಿಗಳಲ್ಲಿ ನೂರಕ್ಕೆ ೯೯ ಮಂದಿಗೆ ರಾಷ್ಟ್ರಗೀತೆ ಬರುವುದಿಲ್ಲ! ದೇಶೋದ್ಧಾರ ಜನೋದ್ಧಾರಕ್ಕೆ ಬಂದೆವೆಂದು ಬರುವ ಖಾದೀ ಖದೀಮರನ್ನು ಮಾತಾಡಿಸಿ ನೋಡಿ :

ಪಂಜಾಬ ಸಿಂಧು ಗುಜರಾತ ಮರಾಟ
ದ್ರಾವಿಡ ಉಚ್ಚಲ ಬಂಗ .....
ಹಿಂದೆ ಹಿಮಾಚಲ ಯಮುನಾ ಗಂಗಾ.....

ತವಸುಬ ನಾವೇ ಜಾಗೇ ತವಸುಬ ಆಸಿಸಮಾಗೇ
ಗಾಹೇ ತವಸುಬ ಗಾತಾ .......

ಇಲ್ಲಿ ಅಲ್ಪಪ್ರಾಣ, ಮಹಾಪ್ರಾಣ, ಅಕ್ಷರ ಶುದ್ಧತೆ, ಭಾಷಾಶುದ್ಧತೆ ಯಾವುದೂ ಲೆಕ್ಕಕ್ಕೇ ಇರುವುದಿಲ್ಲ.

ಮಾಧ್ಯಮಗಳಲ್ಲಿನ ಶಬ್ದಪ್ರಯೋಗಗಳ ಬಗ್ಗೆ ಜಾಸ್ತಿ ಹೇಳುವುದೇ ಬೇಡ. [ಹೇಳಿಕೊಳ್ಳಲು ನಾಚಿಕೆಯಾಗಿ ಕೈಬಿಡಲಾಗಿದೆ ಎಂದು ಅರ್ಥೈಸಿಕೊಳ್ಳಿ!]

ಪ್ರಾದೇಶಿಕವಾಗಿ ಕೆಲವರು ಬಳಸುವ ಶಬ್ದಗಳಂತೂ ಕೇಳಲಿಕ್ಕೆ ತುಂಬಾ ಮಜಕೊಡುತ್ತವೆ. ನಮ್ಮ ಪಕ್ಕದೂರಲ್ಲಿ ಒಬ್ಬಾತ ಕತ್ತರಿಗೆ " ಕತ್ತರ್ಗಿ " " ಕತ್ತರ್ಗಿ " ಅಂತಿದ್ದ. ಅಂವ ಎಲ್ಲಾದರೂ ಎದುರಾದ್ರೆ ಸಾಕು ಕತ್ತರ್ಗಿಯೇ ಎದುರು ಬರುತ್ತಿತ್ತು. ಇನ್ನು ಕೆಲವರು ತಾವೂ ಆಂಗ್ಲ ಭಾಷೆಯಲ್ಲಿ ಏನೂ ಕಮ್ಮಿಯಿಲ್ಲ ಎಂದು ತೋರಿಸಲಿಕ್ಕೆ ಪದಪ್ರಯೋಗಿಸುವ ಕಸರತ್ತು ಹೀಗಿದೆ :

" ಗ್ಯಾಸ್ ಹೌಸು " [ಲಾಲ್ ಬಾಗಿಗೆ ಅಪರೂಪಕ್ಕೆ ಬಂದು ಊರಿಗೆ ಮರಳಿದ ಒಬ್ಬ ಗ್ಲಾಸ್ ಹೌಸ್ ಎನ್ನುವ ಬದಲು ಬಳಸಿದ ಒಕ್ಕಣೆ]

" ಮ್ಯಾಟ್ನಿ ಕಾಲೇಜು " [ತನ್ನ ತಮ್ಮನ ಮಗ ಬಾಟ್ನಿ ಓದ್ತಾ ಇದಾನೆ ಎನ್ನಲು ಹೋದಾಗ ಆದ ಪ್ರಸವ-ಅದೇ ’ಕಲಾವಿದರಿ’ಂದ!]

" ಡಿಸ್ಟೆಂಪಲ್ಲು " [ಇದೂ ಅದೇ ವ್ಯಕ್ತಿಯ ಕೊಡುಗೆ]

ಒಬ್ಬಾಕೆಗೆ ಹೇಗಾದರೂ ಮಾಡಿ ಆಂಗ್ಲ ಭಾಷೆಯಲ್ಲಿ ಮಾತನಾಡಿ ತೋರಿಸುವ ಬಯಕೆ. ವಯಸ್ಸು ಅಜಮಾಸು ೪೮ರ ಆಜು ಬಾಜು, ಕೆಲಸದಲ್ಲಿರುವಾಕೆ, ಇಂಗ್ಲೀಷ್ ಮೇಜರ್ ಬಿಏ ಪದವೀಧರೆ. ಎದುರು ಬಂದ ಹಿಂದೀ ಮಹಿಳೆ ಕಷ್ಟಪತ್ತು ಕನ್ನಡದಲ್ಲೇ ಕೇಳಿದ್ದಾಳೆ " ನಿಮ್ಮ ಮಗಳು ಎಲ್ಲಿಗೆ ಹೋಯ್ತು ? "

" ಹೀ ಗೋ ಸಂ ವ್ಹೇರ್ ಯೂ ನೋ " ----ಇವಳ ಉತ್ತರ !

ರಾಜಸ್ಥಾನ್ ಕಡೆಯ ಪಾನ್ ವಾಲಾ ಒಬ್ಬ ನಮ್ಮ ಕಚೇರಿಗೆ ಹತ್ತಿರವಿದ್ದಾನೆ. ಒಮ್ಮೆ ಮಳೆಗಾಲದ ಆರಂಭದಲ್ಲಿ ಜೋರಾಗಿ ಮಳೆಬಂತು. ಸಂಜೆ ಮನೆಗೆ ಹೋಗುವ ಸಮಯ. ೯ ಗಂಟೆಯಾದ್ರೂ ಮಳೆ ಸ್ವಲ್ಪ ಹನೀತಾನೇ ಇತ್ತು.

" ಸಾರ್, ಮಳೆ ಐತೆ ಮಳೆ ಐತೆ ಬಾಡಿ ಎಲ್ಲಾ ಮೆತ್ಗಾಗ್ಬುಡುತ್ತೆ " ನಾನು ವಾಹನಕ್ಕೆ ಏರುವ ಮೊದಲು
ನನಗೆ ಹೇಳ್ತಾ ಇದ್ದ.

ಇನ್ನೊಮ್ಮೆ ಯಾವಾಗ್ಲೋ ಮನೆ ಸುದ್ದಿ ತೆಗೆದಾಗ ಹೇಳ್ತಾ ಇದ್ದ --
" ಪಕ್ಕದ್ಮನೆ ನಾಯಿ ಇದಾರಲ್ಲ ಅವರು ದಿನಾ ಬೆಳಿಗ್ಗೆ ವಾಕ್ ಹೋಗ್ತಾರೆ......ಮತ್ತೆ ಬರ್ತಾರೆ ಸುಮ್ನೇ ದುಖಾನ್ ಮುಂದೆ ರೆಸ್ಟ್ ಮಾಡ್ತಾರೆ "

ಶತಮಾನಗಳಕಾಲ ಇಲ್ಲೇ ಇದ್ದರೂ ಭಾಷೆಬಾರದ ಕೆಲವರಿದ್ದಾರೆ. ಒಮ್ಮೆ ತುಮಕೂರಿನಿಂದ ಖಾಸಗಿ ಬಸ್ಸಿನಲ್ಲಿ ಬರುತ್ತಿರುವಾಗ ಅದರಲ್ಲಿ ಏನೋ ಒಂಥರಾ ವಾಸನೆ ಬಂತು. ಕೊನೇ ಸೀಟಿನ ಕೆಳಭಾಗಕ್ಕೆ ಬಗ್ಗಿ ನೋಡಿದ್ರೆ ಎರಡು ಕುರಿಗಳು! ಹಣ ವಸೂಲಿಗೆ ಬಂದ ಬಸ್ಸಿನವನಲ್ಲಿ ಕುರಿ ಮಾಲೀಕ ಕೇಳಿದ :

" ಕುರಿಗೆ ಯಾಕೆ ಟಿಕೆಟ್ ಅವ್ರು ನಂದು ನಾಷ್ಟಾ ಅದೆ "

ಆತ ಕೋಡ್ಲೇ ಬೇಕು ಅಂದ. ಕುರಿ ಮಾಲೀಕ ಕೊಡೋದಿಲ್ಲ ಅಂದ, ಅವರ ಸಂಭಾಷಣೆ ಕೇಳಲು ಬಹಳ ಪಸಂದಾಗಿತ್ತು; ಬೆಂಗಳೂರಿಗೆ ಬಂದಿಳಿದದ್ದೇ ತಿಳೀಲಿಲ್ಲ.

ಅರೇ ನಮ್ದೂಕಿ ಗಾಡಿ ಹೋಯ್ತಾನೆ ಹವ್ರೆ, ಒಸಿ ನಿಲ್ಸಿ ಬಿರ್ಯಾನಿ ತಿಂದು ಓಗ್ಬಿಡೋಣ ಹಲ್ವೇ ?

ಅಂದಹಾಗೇ ಮಲಬಾರದ ಹೆಂಗಸೊಬ್ಬಳು ಪಕ್ಕದಮನೆ ಕನ್ನಡತಿಯೊಬ್ಬಳಿಗೆ ಯೋಳಿದ್ದು ಇಸ್ಟು :

" ನಿನ್ನೆ ದಡವಾಗಿ ಬಂತು, ರಾತ್ರಿ ಮಲಗುವಾಗ ಒಂದು ಗಂಡ ಬೆಳಿಗ್ಗೆ ಏಳುವಾಗ ಎಂಟುಗಂಡ " !

ಅರೆ ಇಸ್ಕಿ, ನಿಮ್ದೂಕಿ ಕನಡಾ ಬರಾಕಿಲ್ಲ ? ಯಾಕೆ ಸುಮ್ಕೇ ಮಾತಾಡ್ತದೆ ? ನಂದೂಕಿ ಮಿಸೆಸ್ಗ್ ಭೀ ಬರ್ತಾಇರ್ಲಿಲ್ಲ. ಬಾಳಾ ಕಶ್ಟಾಪಟ್ಟಿ ಹಲ್ಲಿ ಇಲ್ಲಿ ತಿರ್ಗಿಸ್ತಲ್ಲಾ ಹಾಗ ಕಲೀತು.

ಮಂಗಳಾಚರಣೆಗೆ ಯಾರನ್ನು ಹುಡುಕುವುದು ಎಂದುಕೊಂಡಿದ್ದೆ. ಅಷ್ಟರಲ್ಲೇ ಮತ್ತೆ ಕೀರ್ತನೆ ದಾಸರ ಹಾಡೊಂದು ನೆನಪಾಯ್ತು:

ಮಂಗಲವಾಗಾಲಿ ಸರ್ವರಿಗೆ ಸುಬ ಮಂಗಲವಾಗಲಿ ಹೆಲ್ಲರಿಗೆ
ಹಂಗನೆ ಲಕುಮಿಯು ಬಂಗವ ಕಳೆಯಲಿ ರಂಗವಿಟಲಂಗ್ರಿಗೆ ನಮಿಪೆ

Tuesday, October 18, 2011

ತಬ್ಬಲಿಯು ನೀನಾದೆ ಮಗನೆ ಹೆದ್ದಾರಿಯಲಿ ಜವರಾಯನಿರುವನು........


ತಬ್ಬಲಿಯು ನೀನಾದೆ ಮಗನೆ ಹೆದ್ದಾರಿಯಲಿ ಜವರಾಯನಿರುವನು........

ಕಸವನ್ನು ತಿಂದು ಅಮೃತತುಲ್ಯ ರಸವನ್ನು ಕೊಡುವ ಏಕೈಕ ಪ್ರಾಣಿಯೆಂದರೆ ಆವು. ಆವು ಎಂದರೆ ಯಾವುದು ಎಂದು ತಬ್ಬಿಬ್ಬಾದಿರೇ ? ಗೋವು ಎಂದು ಅರ್ಥೈಸಿಕೊಳ್ಳಿ. ಗೋವಿನ ಬಗ್ಗೆ ಈ ಮೊದಲೇ ಕೆಲವು ಸಲ ಬರೆದಿದ್ದೇನೆ. ಇವತ್ತೂ ಮತ್ತೊಮ್ಮೆ ಹಾಗೇ ಬರೆಯಬೇಕು ಅನ್ನಿಸುತ್ತಿದೆ. ಕಾರಣವಿಷ್ಟೆ: ನಾನೊಬ್ಬ ಭಾವುಕ. ಹೊಕ್ಕಳ ತೊಟ್ಟನ್ನು ಅಲ್ಲೇ ಹೂತರೇನೋ ಎಂಬಂತೇ ಹುಟ್ಟಿದ ಹಳ್ಳಿಯನ್ನು ಸದಾ ಸ್ಮರಿಸುವ, ಅಲ್ಲಿನ ಬದುಕನ್ನು ನೆನೆಯುವ, ಅಲ್ಲಿರುವ ನನ್ನ ಅಪ್ಪ-ಅಮ್ಮರನ್ನು ಆಗಾಗ ದೂರವಾಣಿಯಲ್ಲಿ ಕರೆದು ಮಾತನಾಡುವ ಹೆಚ್ಚೇಕೆ ಮಹಾನಗರದಲ್ಲಿದ್ದೂ ಹುಟ್ಟಿದ ಹಳ್ಳಿಯ ಬದುಕನ್ನೇ ಮನಸಾ ತುಂಬಿಕೊಂಡವ ! ಹಾಗೆ ನಿನ್ನೆ ಒಮ್ಮೆ ಊರಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅಲ್ಲಿನ ಆಗುಹೋಗುಗಳ ಬಗ್ಗೆ ಸ್ವಲ್ಪ ವಿಚಾರಿಸಿದಾಗ ಮೊನ್ನೆಯ ರಾತ್ರಿ ಹತ್ತಿರದ ಹೈವೇಯಲ್ಲಿ ಸುಮಾರು ೪ ಕಿ.ಮೀ ಅಂತರದಲ್ಲಿ ಎರಡು ಮೂರು ಮಲೆನಾಡಗಿಡ್ಡ ತಳಿಯ ಹಸುಗಳನ್ನು ಯಾವನೋ ಖಾಸಗೀ ಬಸ್ ಚಾಲಕನೊಬ್ಬ ಗುದ್ದಿ ಸಾಯಿಸಿಹೋಗಿದ್ದಾನಂತೆ!

ನಾವೆಲ್ಲಾ ಚಿಕ್ಕವರಿರುವಾಗ ಊರಲ್ಲಿ ದೀಪಾವಳಿಯಲ್ಲಿ ಹೆಚ್ಚಿನ ಮಹತ್ವ ಕೊಡುತ್ತಿದ್ದುದು ಗೋವುಗಳಿಗೆ. ಅದು ಇವತ್ತಿಗೂ ಹಾಗೇ ಇದೆ. ಆದರೆ ’ಮಲೆನಾಡ ಗಿಡ್ಡ’ ಜಾತಿಗೆ ಸೇರಿದ ರಾಸುಗಳು ಇವತ್ತು ಸಂಖ್ಯೆಯಲ್ಲಿ ಅತೀ ಕಡಿಮೆಯಾಗಿವೆ. ಅಂದಿನ ಆ ದಿನಗಳಲ್ಲೇ ಅಲ್ಪಸ್ವಲ್ಪ ಗೋಮಾಳಗಳಿದ್ದವು. ಹೆಂಗಳೆಯರು ಬಲಿಪಾಡ್ಯದ ದಿನ ಪೂಜಿಸುವ ಗೋಮಾತೆಯಲ್ಲಿ ನಿವೇದಿಸುವ ಹಾಡಿನಲ್ಲಿ " ಹುಲ್ಲಿಗೂ ನೀರಿಗೂ ಚಿಂತೆಪಡಬೇಡ ಪಶುತಾಯೆ " ಎಂಬ ಸೊಲ್ಲನ್ನು ಹಾಡುವಾಗ ಹಸಿದಹೊಟ್ಟೆಯಲ್ಲಿ ಹುಲ್ಲಿಗಾಗಿ ನೀರಿಗಾಗಿ ಪರಿತಪಿಸಬಹುದಾದ ಗೋವಿನ ಚಿತ್ರದ ಕಲ್ಪನೆಯಾಗಿ ಕಣ್ಣಾಲಿಗಳು ತುಂಬಿ ಹರಿದಿದ್ದಿದೆ. ಸೃಷ್ಟಿಸಿದ ದೇವರೇ ಕೊಡಲು ಮನಸ್ಸುಮಾಡದಾಗ ಯಕ್ಕಶ್ಚಿತ ಒಡೆಯನೆನಿಸುವ ಸಾಕುವಾತ ಏನು ಮಹಾ ಕೊಡಲು ಸಾಧ್ಯ ಹೇಳಿ ?

ದೀಪಾವಳಿಯ ಆ ಚಳಿಗಾಲದ ಮುಂಜಾವಿನಲ್ಲಿ ಎಳೆಗರುಗಳು ಅಂಬೇ ಅಂಬೇ ಎನ್ನುತ್ತಾ ಚಿಗರೆಯ ಮರಿಗಳಂತೇ ಛಂಗನೆ ಜಿಗಿಯುತ್ತಾ ಅಮ್ಮಂದಿರ ಕಾಲ ಸಂದಿಯಲ್ಲಿ ನುಸುಳುವ ಅಲ್ಲಿಂದಲೇ ಮುಖ ಬಗ್ಗಿಸಿ ಹಣಿಕಿ ಇಣುಕಿ ನಮ್ಮನ್ನು ನೋಡುವ ದೃಶ್ಯ ಇಂದಿಗೂ ಮನದಲ್ಲಿ ಹಸಿರಾಗಿದೆ. ಒಣ ಕೆಮ್ಮಿಗೆ ದೇಸೀತಳಿಯ ಹಸುವಿನ ಉಷ್ಣಧಾರೆಯನ್ನು ಔಷಧವಾಗಿ ಕೊಡುತ್ತಿದ್ದರು. ಲೋಟವೊಂದರಲ್ಲಿ ಚೂರು ಹಸುವಿನ ತುಪ್ಪವನ್ನು ಹಾಕಿ ಕೊಟ್ಟಿಗೆಗೆ ಕೊಂಡೊಯ್ದರೆ ಅಲ್ಲಿ ಹಾಲನ್ನು ಕರೆಯುವಾಗ ಆಯಿ [ಅಂದರೆ ನಮ್ಮಮ್ಮ]ಹಸುವಿನ ಕೆಚ್ಚಲಿನಿಂದ ಮೊದಲು ಬಸಿಯುವ ಕೆಲವು ಧಾರೆಗಳು ಬಿಸಿಬಿಸಿಯಾಗಿರುತ್ತಿದ್ದವು. ಹಸುವಿನ ಮೈಬಿಸಿಯಲ್ಲಿ ಕೆಚ್ಚಲೊಳಗಿನ ಹಾಲೂ ಕೂಡ ಉಗುರುಬೆಚ್ಚಗೆ ಆಗಿರುತ್ತಿತ್ತು. ಹಾಗೆ ಕರೆದ ಧಾರೆಯನ್ನು ಉಷ್ಣಧಾರೆ ಎನ್ನಲಾಗುತ್ತಿತ್ತು. ಉಷ್ಣಧಾರೆ ಒಣಕೆಮ್ಮಿಗೆ ರಾಮಬಾಣ! ಇವತ್ತು ಅವೆಲ್ಲಾ ಪುಸ್ತಕದಲ್ಲೂ ದಾಖಲಾಗದ ಮರೆತುಹೋದ ವಿಷಯಗಳಾಗಿವೆ.

ನಮ್ಮನೆಯಲ್ಲಿ ಒಂದು ಸಂಪ್ರದಾಯವನ್ನು ಅಜ್ಜ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು ಏನೆಂದರೆ ಮಧ್ಯಾಹ್ನದ ಊಟಕ್ಕೂ ಮುಂಚೆ ಗೋವೊಂದಕ್ಕೆ ಸ್ವಲ್ಪ ಅನ್ನ-ಪದಾರ್ಥಗಳನ್ನು ತಪ್ಪಲೆಯಲ್ಲಿ ಉಣಬಡಿಸಿ ಆಮೇಲೆಯೇ ನಮ್ಮೆಲ್ಲರ ಊಟ ನಡೆಯುತ್ತಿತ್ತು. ಕೊಟ್ಟಿಗೆಯಲ್ಲಿ ಮುದುಕು ದನಗಳು ಇರುತ್ತಿದ್ದವು, ಅದಿಲ್ಲಾ ಕೊನೇಪಕ್ಷ ಅನ್ನ ತಿನ್ನಬಲ್ಲಷ್ಟು ಬೆಳೆದ ಎಳೆಯ ಕರುಗಳು ಇರುತ್ತಿದ್ದವು. ಒಟ್ಟಿನಲ್ಲಿ ಗೋಗ್ರಾಸ ಸಮರ್ಪಣೆ ಆಗಲೇಬೇಕಿತ್ತು. ಆಕ್ಷಣದಲ್ಲಿ ಮಿಕ್ಕುಳಿದ ದನಕರುಗಳಿಗೆ ಹುಲ್ಲನ್ನು ನೀಡಿ ಅವುಗಳ ಮೈದಡವುತ್ತಿದ್ದರು. ಅಜ್ಜ ಮನೆಯಲ್ಲಿಲ್ಲದ ವೇಳೆ ನಾವು ಯಾರಾದರೂ ಅದನ್ನು ನಡೆಸಬಹುದಿತ್ತು. ಅಜ್ಜನ ಗೋ ಪ್ರೇಮ ಎಷ್ಟಿತ್ತೆಂದರೆ ದೂರದಲ್ಲಿ ಅಜ್ಜ ಹೋಗುತ್ತಿದ್ದರೂ ಅವುಗಳಿಗಿರುವ ಮೂಗ್ಗಾಳಿ[ವಾಸನಾಬಲ]ಯಿಂದ ಅಜ್ಜನ ಜಾಡುಹಿಡಿದು ಅಂಬಾ ಎಂದು ಕೂಗುತ್ತಿದ್ದವು. ಬೆಳೆಯುತ್ತಿದ್ದಂತೇ ನನ್ನರಿವಿಗೆ ಬಂದ ಅಜ್ಜ ಬಳಸುತ್ತಿದ್ದ ಸಂಸ್ಕೃತದ ಶ್ಲೋಕ ಹೀಗಿತ್ತು :

ಗಾವೋಮೇ ಮಾತರಸ್ಸಂತು ಪಿತರಸ್ಸಂತು ಗೋವೃಷಃ |
ಗ್ರಾಸಮುಷ್ಠಿಂ ಮಯಾದತ್ತಂ ಗ್ರಹಾಣ ಪರಮೇಶ್ವರಿ ||

ಗೋವಿನಲ್ಲಿ ಮಾತೆಯನ್ನೂ ಹೋರಿಯಲ್ಲಿ ತಂದೆಯನ್ನೂ ಕಂಡೆನೆನ್ನುವ ಆ ಶ್ಲೋಕ ದೇವಿಯ ರೂಪವನ್ನೂ ಗೋವಿನಲ್ಲಿ ಕಂಡೆನೆನ್ನಲು ಮರೆಯುವುದಿಲ್ಲ.

ಊರಲ್ಲಿ ನಾನಿರುವಷ್ಟು ಕಾಲ ಸದಾ ದನಗಳ ಒಡನಾಟವಿತ್ತು. ಕ್ರಮೇಣ ನಾವೆಲ್ಲಾ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಸಾಗುತ್ತಿದ್ದಾಗ ಸರ್ಕಾರಗಳು ಬದಲಾಗುತ್ತಾ ರಾಜಕೀಯ ಪ್ರಪಂಚದಲ್ಲಿ ಸ್ವಾರ್ಥ, ಸ್ವೇಚ್ಛೆ ಇವೆಲ್ಲಾ ಜಾಸ್ತಿಯಾಗುತ್ತಾ ನಡೆದಾಗ ಗೋವುಗಳಿಗೆ ಸರಕಾರ ಬಿಟ್ಟಿದ್ದ ಗೋಮಾಳಗಳು ಕಡಿಮೆಯಾಗುತ್ತಾ ನಡೆದವು. ಹಿರಿಯ ಹಸುಗಳು ಕಾಲವಾದಮೇಲೆ ಕಿರಿಯವು, ಕರುಗಳು ಬೆಳೆಯುವ ಹೊತ್ತಿಗೆ ಗೋಮಾಳಗಳು ಅತ್ಯಂತ ಕ್ಷೀಣಿಸಿದವು. ರಾಜ್ಯಪದವನ್ನು ಕಳೆದಕೊಂಡ ರಾಜನಂತೇ ಗೋಮಾಳದಲ್ಲಿ ಮೇದು ಆಡಿ ಅನುಭವಿಸಿದ ದಿನಗಳನ್ನು ನೆನೆದು ಮತ್ತೆ ಸಿಗಲಾರದ ಆ ದಿನಗಳಿಗಾಗಿ ಹಂಬಲಿಸುತ್ತಾ ಆ ದನಗಳು ಮೂಕವಾಗಿ ಯಾವ ಭಾವನೆಗಳನ್ನು ತಳೆದವೋ ಅರಿವಿಗಿಲ್ಲ. ಈಗಂತೂ ಊರಲ್ಲಿ ಒಂದಿಬ್ಬರು ಮಹಾಶಯರು ಕಂಡಿದ್ದೆಲ್ಲಾ ತಮ್ಮದೇ ಎಂದು ಜಾಗವನ್ನೆಲ್ಲಾ ಕಬಳಿಸಿ ಹೋದಹೋದಲ್ಲಿ ಆಳದ ಅಗಳಗಳನ್ನೂ ಕಲ್ಲಿನ ಪಾಗಾರಗಳನ್ನೂ ನಿರ್ಮಿಸಿ ಹಳೆಯ ದಾರಿಗಳನ್ನೆಲ್ಲಾ ಮಾಯಿಸಿಬಿಟ್ಟಿದ್ದಾರೆ. ಒಮ್ಮೊಮ್ಮೆ ಹೀಗೂ ಅನಿಸುತ್ತದೆ--ನಾನು ಹುಟ್ಟಿದ್ದು ಇದೇ ಊರಿನಲ್ಲಿ ಹೌದೇ ?

ಮನುಷ್ಯನ ಸ್ವಾರ್ಥಲಾಲಸೆ ಜಾಸ್ತಿಯಾದಾಗ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗ ಬೆಟ್ಟಗಳೂ, ಹುಲ್ಲುಗಾವಲುಗಳೂ ಕಡಿಮೆಯಾದವು. ಕಾಡುಪ್ರಾಣಿಗಳ ಜೀವನಕ್ಕೆ ಹೇಗೆ ಸಮಸ್ಯೆಯಾಯಿತೋ ಅದಕ್ಕಿಂತಲೂ ಹೆಚ್ಚು ಊರಲ್ಲಿದ್ದ ದನಕರುಗಳಿಗೆ ಈ ಜ್ವಾಲೆಯ ಉರಿ ತಾಗಿತು. ಕಾಲಕೀರ್ದಿಯಲ್ಲಿ ತೆರೆದ ಪುಟಗಳಲ್ಲಿ ಓದಸಿಕ್ಕ ಮಾಹಿತಿ ಹೀಗಿದೆ. ರೈತನೊಬ್ಬ ತನ್ನ ಹಸುಗಳ ರಕ್ಷಣೆಗಾಗಿ ತನ್ನ ಜೀವವನ್ನೇ ಬಲಿದಾನಗೈದ ಕಥೆಕೂಡ ಕಾಣಸಿಗುತ್ತದೆ. ಬ್ರಾಹ್ಮಣನೊಬ್ಬ ಅರಿಯದೇ ತೆಂಗಿನಕಾಯಿ ಮರದಿಂದ ಕೆಡವಿದಾಗ, ಕೆಳಗೆ ನಿಂತಿದ್ದ ಹಸುವಿನ ತಲೆಗೆ ಅದು ತಗುಲಿ ಗತಿಸಿದ್ದನ್ನು ಕಂಡು ಭಿಕ್ಷುಕನಾದ ಕಥೆಯನ್ನೂ, ಬೇಡಿದ ಆ ಭಿಕ್ಷೆಯನ್ನು ನಿತ್ಯವೂ ಹಸುವೊಂದಕ್ಕೆ ಭಕ್ಷ್ಯವಾಗಿ ಉಣ್ಣಿಸುವ ಕಾಯಕದಲ್ಲಿ ತೊಡಗಿದ ಇತ್ತೀಚಿನ ನಿಜಜೀವನದ ಕಥೆಯನ್ನೂ ನಿಮಗೆ ಈ ಮೊದಲೇ ಹೇಳಿದ್ದೇನೆ. ಆದರೆ ಕಾಲದ ಕೂಸಾದ ರೈತ ಕ್ರಮೇಣ ತಾನೂ ಬದಲಾಗಿಬಿಟ್ಟ. ದರಏರಿಕೆಯ ಬಿಸಿ ರೈತನ ಇಕ್ಕೆಲಗಳನ್ನು ಮುತ್ತಿಕ್ಕಿದಾಗ ನಿಧಾನವಾಗಿ ರೈತ ಸಾಕುವ ದನಗಳ ಜಾತಿಯನ್ನು ಬದಲಾಯಿಸಿದ. ಮಲೆನಾಡ ಗಿಡ್ಡ ತಳಿಯ ಹಸುಗಳಿಗೆ ಹೊಸತಳಿಯ ಹೋರಿಯ ವೀರ್ಯವನ್ನು ಗರ್ಭಕ್ಕೆ ಸುರುವಿ ನಿಧಾನವಾಗಿ ತಳಿಬದಲಾವಣೆ ಮಾಡಿದ. ದೇಸೀ ತಳಿಯ ದನಗಳು ಲೀಟರುಗಟ್ಟಲೆ ಹಾಲನ್ನು ಕೊಡುವುದಿಲ್ಲ ಎಂಬ ಕಾರಣಕ್ಕೆ ಇದು ನಡೆಯಿತು. ಹಲವು ಮನೆಗಳಲ್ಲಿ ಕತ್ತೆಯೂ ಅಲ್ಲದ ಕುದುರೆಯೂ ಅಲ್ಲದ ದನವೂ ಅಲ್ಲದ ಹೊಸದೊಂದು ಪ್ರಾಣಿಯ ಉದಯವಾಯಿತು. ನೋಡಲು ದೈತ್ಯಾಕಾರ, ಹುಟ್ಟಿದ ತಿಂಗಳೊಪ್ಪತ್ತಿನಲ್ಲೇ ಬೆಳೆಬೆಳೆದು ಗರ್ಭಧರಿಸಲು ತಯಾರಾಗುವ ’ಹಾಲುಕೊಡುವ ಯಂತ್ರಗಳು’ ಜನಿಸಿದವು. ಪಾಪದ ಆ ಯಂತ್ರಗಳಿಗೆ ಬುದ್ಧಿಯೂ ಅಷ್ಟಕ್ಕಷ್ಟೇ, ದೇಹದಾರ್ಢ್ಯತೆಯೂ ಅಷ್ಟಕ್ಕಷ್ಟೇ. ಹೊಸತಳಿಯೆಂಬ ಕಾರಣಕ್ಕೆ ಹೆಚ್ಚಿನ ವಾಗತಿಮಾಡಿದ ಒಡೆಯನಿಗೆ ದೇಸೀತಳಿಗೇ ಅದೇಮಟ್ಟದ ವಾಗತಿ[ಉಪಚಾರ]ಮಾಡಿದ್ದರೆ ಚೂರ್ಹೆಚ್ಚುಕಮ್ಮಿ ಅದೇ ಪ್ರಮಾಣದ ಹಾಲನ್ನು ಕೊಡಬಹುದು ಎಂಬ ಸಣ್ಣ ಯೋಚನೆಯೂ ಆ ಕಾಲಕ್ಕೆ ಬರಲಿಲ್ಲ.

ಬದಲಾದ ವಾತಾವರಣದಲ್ಲಿ ಅಳಿದುಳಿದ ಮಲೆನಾಡ ಗಿಡ್ಡ ತಳಿಯ ದನಗಳು ’ಬಡರಾಮನ’ ಗೋವುಗಳಾಗಿ ಅಲ್ಲಲ್ಲಿ ಅಲೆಯುತ್ತಾ ದಿನಕ್ಕೊಮ್ಮೆ ಸಗಣಿಹಾಕುವಷ್ಟೂ ಆಹಾರ ತಿನ್ನಲು ಸಿಗದೇ ಸೊರಗುತ್ತಾ ಕಾಲಹಾಕಿದವು. ಬಯಲುಸೀಮೆಯಲ್ಲಿ ಬಹುತೇಕ ದನಗಳು ಮಾಂಸಕ್ಕಾಗಿ ಮಾರಲ್ಪಟ್ಟವು! ಹಾಲನ್ನು ಕುಡಿದ ಯಜಮಾನ ವಿಷವಿಕ್ಕುವಾಗ ಅರ್ಥಾತ್ ತನ್ನ ಅಸಹಾಯಕತೆಯಲ್ಲಿ ತನ್ನನ್ನು ಕಸಾಯಿಖಾನೆಗೆ ಕಳಿಸುವಾಗ ಗೋವಮ್ಮ ಏನನ್ನೂ ಚಿಂತಿಸುವ ಸ್ಥಿತಿಯಲ್ಲಿರಲಿಲ್ಲ. ತನ್ನೆದುರೇ ತನ್ನ ಮರಿಗಳನ್ನೂ ಮಕ್ಕಳನ್ನೂ ಕೈಕಾಲು ಲಟಕು ಲಟಕೆಂದು ಮುರಿದು ಲಾರಿಗೆ ಬಿಸುಟು ಕರೆದೊಯ್ಯುವ ಕಟುಕರ ಮುಂದೆ ಕಣ್ಣಂಚಿನ ಕಡೆಹನಿಗಳನ್ನು ಉರುಳಿಸಿದ್ದು ಬಿಟ್ಟರೆ ಕಾಣದ ಭಗವಂತನ ಕೃಪೆಗಾಗಿ ಪ್ರಾರ್ಥಿಸುವ ಯಾವ ಬಾಯೂ ಆ ಪ್ರಾಣಿಗಿರಲಿಲ್ಲ.

ಇದನ್ನರಿತ ಕೆಲವು ಮಠಾಧೀಶರುಗಳು, ಜೈನಸನ್ಯಾಸಿಗಳು ದೇಸೀ ಗೋವಿನ ಹೀನಾಯ ಸ್ಥಿತಿಯನ್ನು ನೆನೆದು ಮರುಗಿದರು. ಹಲವು ರೀತಿಯಲ್ಲಿ ಹಲವು ಮಗ್ಗುಲಲ್ಲಿ ಮಾನವನ ಬದುಕಿಗೆ ಅಗತ್ಯ ಬೇಕಾಗಬಹುದಾದ ಅನರ್ಘ್ಯರತ್ನಗಳಂತಹ ದೇಸೀ ಗೋವುಗಳ ತಳಿಗಳನ್ನು ಕಾಪಿಡುವುದರ ಔಚಿತ್ಯವನ್ನು ಮನದಂದು ಅದಕ್ಕೊಂದು ಆಂದೋಲನವನ್ನೇ ಹುಟ್ಟುಹಾಕಿದರು. ಹಿಂದೂಗಳಿಗೆ ಗೋವು ಪೂಜನೀಯ ಎಂಬ ಭಾವವನ್ನು ಮುಂದಿಟ್ಟು ಕೊನೇಪಕ್ಷ ಪೂಜನೀಯ ಎಂಬ ಕಾರಣಕ್ಕಾದರೂ ಹಸುಗಳನ್ನು ಕಟುಕರಿಗೆ ಮಾರದಿರಲಿ ಎಂಬ ಮನದಿಂಗಿತವನ್ನು ವ್ಯಕ್ತಪಡಿಸಿದರು. ಆದರೂ ಹಲವೆಡೆ ಮಾಂಸಕ್ಕಾಗಿ ಹಸುಗಳ ಕಳ್ಳಸಾಗಣೆ ನಡೆದೇ ಇತ್ತು; ನಡೆದೇ ಇದೆ. ಕರ್ನಾಟಕದಲ್ಲಿ ಸಿಂಹವೆಂಬ ಕಾಡುಪ್ರಾಣಿ [ಮೃಗಾಲಯಗಳನ್ನು ಬಿಟ್ಟರೆ] ಚಿತ್ರದ ವಸ್ತುವಾಗಿದೆ ಹೇಗೋ ಮುಂದೆ ದೇಸೀ ತಳಿಯ ದನಗಳೂ ಹಾಗೇ ಚಿತ್ರಗಳಿಗೆ ವಸ್ತುವಾದರೆ ಆಶ್ಚರ್ಯವೇನೂ ಇಲ್ಲ! ಉರಿವ ಸೂರ್ಯನ ಉರಿಬಿಸಿಲಿನಲ್ಲಿ ಮೇಯುತ್ತಾ ತನ್ನ ಭುಜಭಾಗದ ಸೂರ್ಯನಾಡಿಯಲ್ಲಿ ಬಿಸಿಲಿನ ಔಷಧೀಯ ಗುಣಗಳನ್ನು ಶೇಖರಿಸಿ ತನ್ನ ಹಾಲಿನ ಗ್ರಂಥಿಗಳಮೂಲಕ ಅದನ್ನು ಮನುಷ್ಯರಿಗೆ ಒದಗಿಸುತ್ತಿದ್ದ ದೇಸೀತಳಿಯ ಹಸುಗಳಿಲ್ಲದ ಪರಿಣಾಮವೇ ಇಂದು ನಾವು ಶಾರೀರಿಕವಾಗಿ ಸಾಕಷ್ಟು ದುರ್ಬಲರಾಗಿದ್ದೇವೆ; ಮೂರು ಮೂರು ದಿನಕ್ಕೊಮ್ಮೆ ವೈರಲ್ ಫೀವರ್ ಹತ್ತಿಕೊಳ್ಳುತ್ತದೆ, ಅಮೃತಬಳ್ಳಿ ಕಷಾಯ, ಅಮೃತತುಲ್ಯ ದೇಸೀತಳಿಯ ಹಸುವಿನ ಹಾಲು ಎರಡೂ ನಮಗೆ ವರ್ಜ್ಯವಾಗಿವೆ.

ಯಾರೇನೇ ಅಂದರೂ ಕಾಡುಗಳ್ಳರ, ದನಗಳ್ಳರ ಅಂಧಾದರ್ಬಾರ್ ಈಗಲೂ ಚಾಲ್ತಿಯಲ್ಲೇ ಇದೆ. ಅಲ್ಲಲ್ಲಿ ಭಜರಂಗದಳದವರು ಗೋ ಕಳ್ಳಸಾಗಣೆಯನ್ನು ಹಿಡಿದಿದ್ದಾರೆ; ಹಿಡಿಯುತ್ತಾರೆ. ಅವರು ಹಿಡಿಯುವ ಹತ್ತರಷ್ಟು ಇನ್ನೂ ಕತ್ತಲಲ್ಲೇ ಮಾರಾಟವಾಗುತ್ತಿವೆ. ಸಂಶಯವೇ ಬಾರದ ರೀತಿಯಲ್ಲಿ ಸಾಗಿಸುವ ’ಸಾಚಾ ಜನ’ಗಳಿದ್ದಾರೆ!ಹಗಲು ಅಂಥವರು ಹೋಗದ ದೇವಸ್ಥಾನಗಳಿಲ್ಲ;ಭೇಟಿಯಾಗದ ಸ್ವಾಮಿಗಳಿಲ್ಲ. ಕತ್ತಲಾದೊಡನೆಯೇ ಅವರ ಕರಾಮತ್ತು ಆರಂಭವಾಗುತ್ತದೆ! ತಿನ್ನುವವರ ಖಾನದಾನಿಗಿಂತ ಮಾರುವವರ ಕರಾಮತ್ತೇ ಬಹಳ ನೋವನ್ನು ತರಿಸುತ್ತದೆ. ಈಗ ಮಾಂಸದ ದರ ಹೆಚ್ಚಳವಂತೆ. ಮತ್ತೊಮ್ಮೆ ಬಕ್ರೀದ್, ಕ್ರಿಸ್ಮಸ್ ಎಲ್ಲಾ ಹತ್ತಿರವಾಗುತ್ತಿವೆ. ಕುರಿಗಳಿಗೆ ಬದಲಾಗಿ ಚೀಪ್ ರೇಟ್‍ನಲ್ಲಿ ದನಗಳು ಸಿಕ್ಕರೆ ಕೊಳ್ಳಲು ಮುಗಿಬೀಳುವ ಮಂದಿ ಇದ್ದಾರೆ. ಸಿಕ್ಕಿದ ಅವಕಾಶವನ್ನು ಪಾಪ-ಪುಣ್ಯದ ಹಂಗುತೊರೆದು ಮಾರಾಟದ ಮೂಲಕ ಸಕತ್ತಾಗಿ ಎನ್‍ಕ್ಯಾಶ್ ಮಾಡಿಕೊಳ್ಳುವ ಕತರ್ನಾಕ್ ಜನ ಕಾಯುತ್ತಿದ್ದಾರೆ!

ಜನಜಾತ್ರೆಗೆ ಅನಿವಾರ್ಯವಲ್ಲದಿದ್ದರೂ ಇರಲಿ ಎಂದು ಎಲ್ಲೆಂದರಲ್ಲಿ ರಸ್ತೆಗಳ ನಿರ್ಮಾಣವಾಗಿದೆ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿದೆ; ಅಗಲಗೊಳಿಸಲ್ಪಟ್ಟಿದೆ. ತಾಲೂಕುಗಳಲ್ಲೂ ಹಳ್ಳಿಗಳಲ್ಲೂ ರಾಜ್ಯಹೆದ್ದಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅಳಿದುಳಿದ ಪಾಪದ ದೇಸೀತಳಿಯ ದನಗಳು ಇರಬಹುದಾದ ಚಿಕ್ಕಪುಟ್ಟ ಜಾಗಗಳಲ್ಲಿನ ಸೊಪ್ಪು-ಸದೆ ತಿನ್ನಲು ಓಡಾಡುತ್ತಿರುತ್ತವೆ. ಮನುಷ್ಯ ನಿರ್ಮಿಸಿದ ರಸ್ತೆ, ವಾಹನಗಳು ಅತೀವೇಗದಲ್ಲಿ ಬರುತ್ತವೆ, ಬಂದಾಗ ಬದಿಗೆ ಸರಿಯಬೇಕು-ಓಡಿಹೋಗಬೇಕು ಎಂಬ ಯಾವುದೇ ಅನಿಸಿಕೆ ಬಹುಶಃ ಅವುಗಳಿಗಿರುವುದಿಲ್ಲ. ಚಾಲಕರಲ್ಲಿ ಹಲವರಿಗೆ ವೇಗಮಿತಿಯೆಂದರೆ ಏನೆಂಬುದೇ ತಿಳಿದಿಲ್ಲವಾದರೆ ಇನ್ನೂ ಹಲವು ಚಾಲಕರು ಸದಾ ’ಎಣ್ಣೆ’ಯಮೇಲೇ ಗಾಡೀ ಓಡಿಸುತ್ತಾರೆ. ಮೊನ್ನೆ ನಮ್ಮೂರಕಡೆ ನಡೆದಿದ್ದೂ ಅದೇ. ಒಬ್ಬನೇ ಚಾಲಕ ಒಂದೇ ರಾತ್ರಿಯಲ್ಲಿ ನಾಕಾರು ಮೈಲಿ ಅಂತರದಲ್ಲಿ ೩-೪ ದನಗಳನ್ನು ಸಾಯಿಸಿ ಬಸ್ ಓಡಿಸಿಕೊಂಡು ಮುಂದೆಸಾಗಿದ್ದಾನೆ. ವಾಹನ ಜಪ್ಪಿದ ಹೊಡೆತಕ್ಕೆ ಅವುಗಳ ಮಗ್ಗುಲು ಮುರಿದು ಅವು ಎಷ್ಟು ವೇದನೆಪಟ್ಟವೋ ಬೆಳಗಾಗುವಷ್ಟರಲ್ಲಿ ಹೆಣಗಳಾಗಿದ್ದವು. ಯಾರದೋ ಮನೆಯ ಸತ್ತ ದನಗಳನ್ನು ಗ್ರಾಮಸ್ಥರು ಕಂಡು ಮರುಗಿದರು, ನಂತರ ಅವುಗಳ ವಾರಸುದಾರರ ಸಮಕ್ಷಮ ಶ್ರದ್ಧೆಯಿಂದ ಮಣ್ಣುಮಾಡಿದರು.

ನಾವೆಲ್ಲಾ ಪ್ರಾಥಮಿಕ ಓದುವುದಕ್ಕೂ ಹಿಂದೆಯೇ ಬರೆಯಲ್ಪಟ್ಟ ಗೋವಿನ ಗೀತೆಯೊಂದು ನೆನಪಿಗೆ ಬರುತ್ತಿದೆ. ಅದನ್ನು ನೀವು ಕೇಳಿಯೇ ಇದ್ದೀರಿ:

ತಬ್ಬಲಿಯು ನೀನಾದೆ ಮಗನೇ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದೂ
ತಬ್ಬಿಕೊಂಡಿತು ಕಂದನ.....


ಈಗ ಇಲ್ಲಿ ಕಂದನನ್ನು ತಬ್ಬಿಕೊಳ್ಳುವುದಕ್ಕೂ ಅವಕಾಶವಿಲ್ಲ! ಹೆಬ್ಬುಲಿಯ ಬದಲಿಗೆ ಹೆದ್ದಾರಿಗಳಿವೆ! ಹಾಡು ಬದಲಾಗುತ್ತದೆ :

ತಬ್ಬಲಿಯು ನೀನಾದೆ ಮಗನೇ
ಹೆದ್ದಾರಿಯಲಿ ಜವರಾಯನಿರುವನು
ಇಬ್ಬರಾ ಋಣ ತೀರಿತೆನಲೂ
ಬಿಡದೇ ತಬ್ಬಿಕೊಳುವನು.....

ಓದುಗ ಮಹಾಶಯರೇ, ನೀವು ಯಾರೇ ಆಗಿರಲಿ ನಿಮ್ಮಲ್ಲಿ ನನ್ನ ವಿನಂತಿ ಇಷ್ಟೇ: ದೇಸೀ ಹಾಗೂ ಸೀಮೆ ಎಲ್ಲಾಗೋವುಗಳೂ ಎಮ್ಮೆಗಳೂ ಬೇಕು. ಆದರೂ ದೇಸೀ ತಳಿಯ ಗೋವುಗಳನ್ನು ರಕ್ಷಿಸುವಲ್ಲಿ ನಿಮ್ಮಪಾತ್ರವನ್ನು ಊಹಿಸಿಕೊಳ್ಳಿ. ಎಲ್ಲೀವರೆಗೆ ನಾವು ಹಾಲನ್ನು ಕೊಡುವ ಗೋಮಾತೆಗೆ ಹಾಲಾಹಲವನ್ನು ನೀಡುವ ಮನಸ್ಸಿನವರಾಗಿರುತ್ತೇವೋ ಅಲ್ಲೀವರೆಗೂ ನಮ್ಮ ಉನ್ನತಿ ಸಾಧ್ಯವಿಲ್ಲ. ಉನ್ನತಿ ಎಂಬುದನ್ನು ಸಿರಿವಂತಿಕೆ ಎಂಬುದಕ್ಕೆ ಹೋಲಿಸಿಕೊಳ್ಳಬೇಡಿ. ಉನ್ನತಿ ಎಂಬುದಕ್ಕೆ ಉನ್ನತವಾದ ಅರ್ಥವಿದೆ ಎಂಬುದನ್ನು ಮರೆಯಬೇಡಿ. ದನ ತಿನ್ನುವವರಿಗೆ ತಿನ್ನಬಾರದಂತೇ ಜಗನ್ನಿಯಾಮಕ ಪ್ರೇರೇಪಿಸಲಿ. ದಿನವೂ ಹಿಡಿಯಕ್ಕಿಯನ್ನು ಗೋವಿಗೆ ನೀಡಿ, ನಗರವಾಸಿಗಳು ಒಂದು ಬಾಳೆಯ ಹಣ್ಣು ನೀಡಿ, ನಿಮ್ಮೆಲ್ಲರ ಜನ್ಮ ಪಾವನವಾಗಲಿ, ಹಾಲುಕೊಟ್ಟ ಎರಡನೇ ಅಮ್ಮನ ಕಣ್ಣಲ್ಲಿ ಆನಂದಭಾಷ್ಪ ಸುರಿಯಲಿ.

Monday, October 17, 2011

ಕೋಂಪ್ಲಾನ್ ಬಾಯ್ ಬೋರ್ನವೀಟಾ ಕುಡಿದ ಸಂಭ್ರಮ !


ಕೋಂಪ್ಲಾನ್ ಬಾಯ್ ಬೋರ್ನವೀಟಾ ಕುಡಿದ ಸಂಭ್ರಮ !

ಬ್ಲಾಗಿಗ ಮಿತ್ರರಿಗೆ ಕೋಂಪ್ಲಾನ್ ಬಾಯ್ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲವೇನೋ, ಯಾಕೆಂದರೆ ಅವರು ಅಷ್ಟು ಪರಿಚಿತರು. ವಯಸ್ಸು ಕೇವಲ ೭೫ ಹುಮ್ಮಸ್ಸು ೨೫ರದ್ದು! ಛಾಯಾಚಿತ್ರ ಜಗತ್ತಿನಲ್ಲಿ ಅವರದ್ದೇ ಆದ ವಿಭಿನ್ನ ಛಾಪು ಮೂಡಿಸಿದ ವ್ಯಕ್ತಿ. ೨೦೧೦ ಆಗಷ್ಟ್ ತಿಂಗಳ ಬ್ಲಾಗಿಗರ ಕೂಟದಲ್ಲಿ ತಮಾಷೆಗಾಗಿ ಆಯೋಜಿಸಿದ್ದ ಸರ್ಪ್ರೈಸ್ ಗಿಫ್ಟ್ ನಲ್ಲಿ ಕೋಂಪ್ಲಾನ್ ಪಡೆದು ಅದನ್ನು ಕೈಯ್ಯಲ್ಲಿ ಎತ್ತಿಹಿಡಿದು ನಗೆಯಾಡಿದವರು. ಈಗಲಾದರೂ ನೆನಪಾಯಿತಲ್ಲ : ಎಮ್.ಶ್ರೀನಿವಾಸ ಹೆಬ್ಬಾರ ಎಂಬುದು ನಾಮಧೇಯ. ಅವರಿಗೆ ಮೊನ್ನೆ ಭಾರತೀಯ ವಿದ್ಯಾಭವನದಲ್ಲಿ ಈ. ಹನುಮಂತರಾವ್ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇದು ನಮ್ಮ ಕೋಂಪ್ಲಾನ ಬಾಯ್ ಬೋರ್ನವೀಟಾ ಕುಡಿದ ಕ್ಷಣವೇನೋ ಅನ್ನಿಸಿತು !

ಸುಮಾರು ೧೯೫೦ರ ದಶಕದಿಂದ ಆರಂಭಿಸಿ ೧೯೯೦ರ ದಶಕದ ವರೆಗೂ ತಮ್ಮ ಛಾಯಾಗ್ರಹಣವನ್ನು ನಡೆಸಿದ್ದ ಹೆಬ್ಬಾರರು ಗಣ್ಯ ಹಿರಿಯ ತಲೆಗಳಿಗೆ ಚೆನ್ನಾಗಿ ಪರಿಚಿತರು. ಹಲವರಿಗೆ ಫೋಟೋಗ್ರಫಿ ಮಾಡಿಕೊಟ್ಟ ಹೆಗ್ಗಳಿಕೆ ಅವರದು. ಅದಲ್ಲದೇ ಫೋಟೋಗ್ರಫಿಯಲ್ಲಿ ಕಲೆಯನ್ನು ಹೊರಸೂಸುವ ಚಾಕಚಕ್ಯತೆ ಅವರಿಗೆ ಆ ಕಾಲದಲ್ಲೇ ಮೈಗೂಡಿತ್ತು. ಅಂದಿನ ಕ್ಯಾಮೆರಾಗಳು ಮೆಕಾನಿಕಲ್ ಸ್ಟಿಲ್ ಕ್ಯಾಮೆರಾಗಳು. ತೆಗೆಯುವ ಚಿತ್ರಗಳು ರೀಲ್ ಅಥವಾ ಫಿಲ್ಮ್ ರೋಲ್ ಮೇಲೆ ಕೇವಲ ನೆಗೆಟಿವ್ ಬಿಂಬಗಳಾಗಿ ಮೂಡುವಂತಹ ದಿನಗಳು. ಚಿತ್ರಗಳ ಗ್ರಹಣ ಮುಗಿದಮೇಲೆ ಖಗ್ರಾಸ ಗ್ರಹಣಹಿಡಿದ ಕೊಠಡಿಯಲ್ಲಿ ನಿಂತು ಕಪ್ಪು ಬಟ್ಟೆಯ ಒಳಗೆ ನಿಧಾನಕ್ಕೆ ಫಿಲ್ಮ ರೋಲ್ ಕ್ಯಾಮೆರಾದಿಂದ ಹೊರತೆಗೆದು ಅದನ್ನು ಸಂಬಂಧಿಸಿದ ಕೆಮಿಕಲ್ ನಲ್ಲಿ ಹಾಕಿ ಆಮೇಲೆ ಅದನ್ನು ಪಾಸಿಟಿವ್ ಆಗಿ ಇನ್ನೊಂದು ಫಿಲ್ಮ್ ಕಾಗದದಮೇಲೆ ಅಚ್ಚಿಸಬೇಕಾಗುತ್ತಿತ್ತು. ಇದನ್ನು ತೊಳೆಯುವ ಕೆಲಸ ಎನ್ನುತ್ತಿದ್ದರು! ತೊಳೆಯುವ ಕೆಲಸದಲ್ಲಿ ತುಸು ವ್ಯತ್ಯಾಸವಾದರೆ ಚಿತ್ರಗಳು ಸ್ಫುಟವಾಗಿ ಮೂಡುತ್ತಿರಲಿಲ್ಲ. ಚಿತ್ರಗಳು ಅಚ್ಚಾದಮೇಲೆ ಮತ್ತೆ ಅವುಗಳನ್ನು ತಿದ್ದಲು ಇಂದಿನಂತೇ ಫೋಟೋಶಾಪ್ ತಂತ್ರಾಂಶ ಇರುವ ಕಾಲ ಅದಲ್ಲ! ಹೀಗಾಗಿ ಫೋಟೊಗ್ರಾಫರ್ ಆಗಿದ್ದವರು ಚಿತ್ರಗಳ ಡೆವಲಪ್‍ಮೆಂಟ್ ಮತ್ತು ಪ್ರಾಸೆಸಿಂಗ್‍ನಲ್ಲಿ ಸಾಕಷ್ಟು ಪರಿಣತರಾಗಿರಬೇಕಾಗುತ್ತಿತ್ತು. ಅಂದು ನಿಜಕ್ಕೂ ಅದು ಕೇವಲ ಕೆಲವರಿಗಷ್ಟೇ ಮೀಸಲಾದ ಸಾಧನೆ. ಆ ಸಾಧಕರು ಫೋಟೋಗ್ರಫಿಯಲ್ಲಿ ತಪಸ್ಸನ್ನು ಮಾಡುವವರಾಗಿದ್ದರು. ಅಂತಹ ಸಾಧಕರಲ್ಲಿ ಹೆಬ್ಬಾರರೂ ಒಬ್ಬರು.

ಅವರದೇ ಮಾತಿನಲ್ಲಿ ಹೇಳುವುದಾದರೆ ತೆಗೆದ ಚಿತ್ರಗಳನ್ನು ಸರಿಯಾಗಿ ಒಪ್ಪಿಸಬೇಕಾದರೆ ಪ್ರಾಸೆಸಿಂಗ್ ಹಂತದಲ್ಲಿ ಸಮಾಧಾನವಾಗುವವರೆಗೂ ನಾಕಾರು ಸರ್ತಿ ಮರುಪ್ರಯತ್ನಮಾಡಿ ಚಿತ್ರಗಳ ಗುಣಮಟ್ಟವನ್ನು ಉತ್ತಮವಾಗಿಸಬೇಕಾಗುತ್ತಿತ್ತು. ಹೀಗೆ ತೆಗೆದ ಅಂದಿನ ಹಲವು ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ನಳನಳಿಸುತ್ತಿವೆ. ವಿಷಾದವೆಂದರೆ ಮೊನ್ನೆಮೊನ್ನೆ ಕೆಲವರು ತೆಗೆದ ಬಣ್ಣದ ಚಿತ್ರಗಳು ಅದಾಗಲೇ ಅಳುತ್ತಿವೆ !! ಬಣ್ಣಗಳ ಮೇಲೆ ಅದೇನೋ ಹೊಸ ಕಲೆಗಳು ಮೂಡಿ ಮೂಲ ಚಿತ್ರ ಕಳೆಗುಂದಿ ಚಿತ್ರಗಳಲ್ಲಿರುವ ಕಲೆ ಮಾಯವಾಗಿದೆ. ಫೋಟೋಗ್ರಾಫರ್ ಕೇವಲ ವೃತ್ತಿಗಾಗಿ ಅದನ್ನು ಆಯ್ದುಕೊಂಡವನಾಗಿರದೇ ಆವನೊಬ್ಬ ಕಲಾವಿದನೂ ಕಲಾರಸಿಕನೂ ಆಗಿದ್ದರೆ ಆತ ತೆಗೆಯುವ ಚಿತ್ರಗಳಲ್ಲಿ ನೋಡುವಂತಹ ’ಜಾದೂ’ ಇರುತ್ತದೆ. ಇದು ಸಿನಿಮಾ ಚಿತ್ರೀಕರಣ ಮಾಡಿದ ಕೆಲವು ಮಹಾನುಭಾವರಿಗೂ ಅನ್ವಯವಾಗುತ್ತದೆ. ಒಳಗಿನ ಕಲಾವಿದನನ್ನು ಓಲೈಸಿ ಪಡೆದ ಚಿತ್ರಗಳಾದರೆ ಆ ಚಿತ್ರಗಳು ನೋಡುಗರ ಹೃದಯವನ್ನು ಸೂರೆಗೈಯ್ಯುವುದರಲ್ಲಿ ಸಂದೇಹವಿರುವುದಿಲ್ಲ. ಬದಲಿಗೆ ಎಲ್ಲರೂ ಮಾಡುತ್ತಾರೆ ಅದೇನು ಮಹಾ ಎಂದು ಫೋಟೋ ತೆಗೆಯುತ್ತಿದ್ದರೆ ಅದು ’ಫೋಟೋ ಜಾತಿ’ಯೇ ’ಜಾತಿ ಫೋಟೋ’ ಆಗುವುದಿಲ್ಲ !

ಇಂದಿನ ಆಧುನಿಕ ಕಾಲಮಾನದಲ್ಲಿ ವಿದ್ಯುನ್ಮಾನದ ನಾನಾಹಂತದ ಆವಿಷ್ಕಾರಗಳಿಂದ ಮಿರರ್ ಲೆಸ್ ಕ್ಯಾಮೆರಾಗಳವರೆಗೂ ತಾಂತ್ರಿಕತೆ ಹಬ್ಬಿದೆ ! ಡಿಜಿಟಲ್ ಕ್ಯಾಮೆರಾಗಳು ಬಂದಮೇಲಂತೂ ಎಂಥಾ ಹುಚ್ಚನೂ ಛಾಯಾಚಿತ್ರ ತೆಗೆಯಬಹುದಾದಷ್ಟು ಸಲೀಸಾಗಿದೆ. ಮೊದಲಿನ ಫೋಟೋಗ್ರಾಫರ್ಸ್ ಅನುಭವಿಸದ ಕಷ್ಟ ಈಗಿನವರಿಗಿಲ್ಲ. ನೋಡುಗನಿಗೊಂದು ಒಳ್ಳೆಯ ದೃಷ್ಟಿಕೋನವಿದ್ದರೆ ಚಿತ್ರಗಳು ಸುಂದರವಾಗಿ ಬಂದುಬಿಡುತ್ತವೆ. ಮೇಲಾಗಿ ತೆಗೆದ ಚಿತ್ರಗಳನ್ನು ತಕ್ಷಣ ನೋಡಬಹುದಾಗಿದೆ, ಸರಿಬಂದಿಲ್ಲವಾದರೆ ಮತ್ತೊಮ್ಮೆ ಪ್ರಯತ್ನಿಸಿ ಸರಿಪಡಿಸಬಹುದಾಗಿದೆ. ಆದರೂ ಕೆಲವರು ಎಡವುತ್ತಾರೆ. ಕೆಲವು ಚಿತ್ರಗಳಲ್ಲಿ ಯಾರದ್ದೋ ತಲೆಗಳನ್ನೇ ಹಾರಿಸಿರುತ್ತಾರೆ, ಇನ್ಯಾರಿಗೋ ಕೈಕಾಲುಗಳೇ ಇರುವುದಿಲ್ಲ, ಇನ್ನಷ್ಟು ಫೋಟೋಗಳು ತಮ್ಮದೇ ಹೌದೋ ಎಂದು ತೆಗೆಸಿಕೊಂಡವರು ಸಂಶಯಾಸ್ಪದವಾಗಿ ನೋಡುವಹಾಗೇ ಮುಖ ಊದ್ದುದ್ದವೋ ಅಡ್ಡಡ್ಡವೋ ಬಂದಿರುವಂತೇ ತೆಗೆಯುತ್ತಾರೆ. ಒಟ್ಟಾರೆ ಹೇಳುವುದಾದರೆ ಇವತ್ತಿಗೆ ಫೋಟೋಗ್ರಾಫಿ ಕಷ್ಟದಾಯಕವಲ್ಲ. ’ಇಂಗು ತೆಂಗು ಎರಡಿದ್ದರೆ ಮಂಗಮ್ಮನಾದರೂ ಅಡುಗೆಮಾಡುತ್ತದಂತೆ’ ಎಂಬ ಗಾದೆಯೊಂದು ನಮ್ಮಲ್ಲಿ ವಾಡಿಕೆಯಲ್ಲಿದೆ. ಅದೇ ರೀತಿ ತಕ್ಕಮಟ್ಟಿಗೆ ಉತ್ತಮವಾದ ಡಿಜಿಟಲ್ ಕ್ಯಾಮೆರಾವೊಂದಿದ್ದರೆ, ಫೋಟೋಗೆ ತಕ್ಕುದಾದ ಪರಿಸರವಿದ್ದರೆ ಚಿತ್ರಗಳು ಬಹುತೇಕ ಚೆನ್ನಾಗಿ ಬಂದಂತೆಯೇ.

ಇವತ್ತಿನ ಕಮರ್ಷಿಯಲೈಸೇಶನ್ ನಲ್ಲಿ ಎಲ್ಲವೂ ಹರಿಬಿರಿ, ಈಗ ತೆಗೆದ ಚಿತ್ರಗಳನ್ನು ಗಂಟೆಯೊಂದರಲ್ಲೇ ಪಡೆದುಬಿಡುತ್ತೇವೆ! ಆದರೆ ಚಿತ್ರಗಳ ಕಾಗದ ಮತ್ತು ಬಣ್ಣಗಳ ಗುಣಮಟ್ಟ ಪಸಂದಾಗಿರುವುದಿಲ್ಲ. ಕೊಡ್ಯಾಕ್ ಕಂಪನಿಯಂತಹ ಕೆಲವು ಫೋಟೋ ಮಾರ್ಟ್ ಕಂಪನಿಗಳು ಹಲವು ಪ್ರಾಸೆಸಿಂಗ್ ಯಂತ್ರಗಳನ್ನು ತಯಾರಿಸಿದ್ದಾರೆ. ಆದರೆ ಅವರು ಹೇಳಿದ ಉತ್ತಮ ವಸ್ತುಗಳನ್ನು ಬಳಸದೇ [ಹಣವುಳಿಸುವ ಉದ್ದೇಶದಿಂದ] ಕೀಳುಗುಣಮಟ್ಟದ ವಸ್ತುಗಳನ್ನು ಬಳಸುವುದರಿಂದ ಚಿತ್ರಗಳು ಬಹುಬೇಗ ಕೆಡುತ್ತವೆ! ಕೆಲವು ಲ್ಯಾಬ್ ಗಳಲ್ಲಿ ಚಿತ್ರಗಳಿಗೆ ಬಣ್ಣಹಚ್ಚುವ ಯಂತ್ರಗಳಲ್ಲಿ ಅವುಗಳ ಗಾಢಾಂಶ [ಥಿಕ್‍ನೆಸ್] ನಿಯಂತ್ರಕದಲ್ಲಿ ಕಮ್ಮಿ ಆಯ್ಕೆಮಾಡಿ ತೆಳುವಾಗಿ ಬಣ್ಣಲೇಪಿಸುವುದರಿಂದಲೂ ಚಿತ್ರಗಳು ಕೆಡುತ್ತವೆ ಅಥವಾ ಮಾಸಲು ಚಿತ್ರಗಳಾಗಿ ಕಾಣುತ್ತವೆ. ಇವುಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ಹೇಳುತ್ತಿದ್ದೇನೆ. ಬೆಂಗಳೂರಿನ ಹೆಸರಾಂತ ಜಿ.ಕೆ.ವೇಲ್ ನಲ್ಲಿ ಅಚ್ಚಿಸಿದ ಚಿತ್ರಗಳಿಗಿಂತ ಕುಂದಾಪುರದಲ್ಲಿ ಅಚ್ಚಿಸಿದ ಚಿತ್ರಗಳು ಬಹಳ ಮುದ್ದಾಗಿ ಕಾಣುತ್ತವೆ. ಈ ಅನುಭವ ನಿಮ್ಮದಾಗಬೇಕಾದರೆ ನಾಕಾರು ಲ್ಯಾಬ್ ಗಳಲ್ಲಿ ಒಮ್ಮೊಮ್ಮೆ ಚಿತ್ರ ಅಚ್ಚಿಸಿ ಪಡೆದು ನೋಡಬೇಕಾಗುತ್ತದೆ, ಸರ್ವ ಕಾಂಚಾಣಮಯಂ ಜಗತ್ ! ಭೌಗೋಳಿಕ ಸನ್ನಿವೇಶಗಳು ಮತ್ತು ವಾತಾವರಣಗಳೂ ಚಿತ್ರಗಳಮೇಲೆ ಪರಿಣಾಮ ಬೀರುತ್ತವೆ. ಕರಾವಳಿಯಲ್ಲಿ ಇಂದಿನ ಕಲರ್ ಚಿತ್ರಗಳು ಬಹುಬೇಗ ಹಾಳಾಗುತ್ತವೆ. ಅಲ್ಲಿನ ಹವೆಯಲ್ಲಿನ ಉಪ್ಪಿನಂಶವೂ ಅದಕ್ಕೆ ಕಾರಣವಿರಬಹುದು. ಆದರೆ ೪೦-೫೦ ವರ್ಷ ಹಳೆಯ ಕಪ್ಪು-ಬಿಳುಪು ಚಿತ್ರಗಳು ಇನ್ನೂ ಚೆನ್ನಾಗಿದ್ದುದುದು ನನ್ನ ಅಶ್ಚರ್ಯಕ್ಕೆ ಕಾರಣವಾಗಿದೆ.

ಇನ್ನು ಹೆಬ್ಬಾರರ ಬಗ್ಗೆ ಒಂದೆರಡು ಮಾತು. ಸಹೃದಯೀ ಹೆಬ್ಬಾರರು ’ಅರುಣ ಚೇತನ’ ಎಂಬ ಅಂಗವಿಕಲರ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅದರಲ್ಲಿ ಮಾಂಸದಮುದ್ದೆಯಂತಹ ಅಂಗವಿಕಲ ಹಸುಗೂಸುಗಳನ್ನು ತರಬೇತುಗೊಳಿಸಿ ಸಮಾಜದಲ್ಲಿ ಎಲ್ಲರಂತೇ ಆ ಮಕ್ಕಳು ಬೆಳೆದು ಬದುಕಲು ಅನುಕೂಲ ಕಲ್ಪಿಸುತ್ತಾರೆ. ಅದಕ್ಕಾಗಿ ಸರಕಾರದ ಯಾವುದೇ ನೆರವು ಪಡೆದಿಲ್ಲ ಬದಲಾಗಿ ಸಾರ್ವಜನಿಕರಲ್ಲಿ ಉಳ್ಳವರಲ್ಲಿ ದೇಣಿಗೆ ಸ್ವೀಕರಿಸಿ ಆ ಶಾಲೆಯನ್ನು ನಡೆಸುತ್ತಾರೆ. ವರ್ಷದ ಹಿಂದೆ ಅವರು ಹೇಳಿದ್ದು- ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹಸಿದವರಿಗೆ ಊಟನೀಡುವ ಕಾರ್ಯಕ್ರಮ ಕೂಡ ಅವರ ಕೆಲವು ಕಾರ್ಯಗಳಲ್ಲಿ ಒಂದಾಗಿದೆ. ಉಳ್ಳವರು ಯಾರದರೂ ದಾನ-ಧರ್ಮಮಾಡಲು ಮುಂದಾದರೆ, ಅಂಥವರಿಂದ ಅನ್ನದಾನವನ್ನು ಏರ್ಪಡಿಸುತ್ತಾರೆ. ಹೀಗೇ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ಕಾಣಸಿಗುತ್ತದೆ. ಅಂಗವಿಕಲ/ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ವಿಷಯ ಜ್ಯೋತಿಷ್ಯದ ಮೂಲಕ ಪರಿಗಣಿಸಿ ತಿಳಿದುಕೊಳ್ಳಬಹುದೇ ಎಂಬ ಕುತೂಹಲದಿಂದ ಜ್ಯೋತಿಷ್ಯವನ್ನು ಐಚ್ಛಿಕವಾಗಿ ಅಭ್ಯಸಿಸಿದ್ದಾರೆ. ಆದರೆ ಅವರು ವೃತ್ತಿ ಜ್ಯೋತಿಷ್ಕರಲ್ಲ, ಅದೊಂದು ಪ್ರವೃತ್ತಿ ಅಷ್ಟೆ. ಹೆಬ್ಬಾರರು ಇಂದಿನ ಕ್ಯಾಮೆರಾಗೂ ಅಡ್ಜೆಸ್ಟಾಗಿದ್ದು ಫೋಟೋಶಾಪ್ ಕೂಡ ಬಳಸುತ್ತಾರೆ. ನಿತ್ಯವೂ ಬೆಳಿಗ್ಗೆ ಶುಭೋದಯದ ಸಂದೇಶ ನನ್ನ ಜಂಗಮವಾಣಿಗೆ ತಲ್ಪುತ್ತದೆ.

ಕೊಟ್ಟಕಾಸಿನ ಜೊತೆಗೆ ಕೊಡದ ಕಾಸನ್ನೂ ಕಬಳಿಸುವ ಕೆಟ್ಟಸಂಸ್ಕೃತಿ ಮೆರೆಯುತ್ತಿರುವಾಗ ಅಲ್ಲಲ್ಲಿ ಎಲೆಮರೆಯ ಕಾಯಿಯಂತೇ ಕೆಲವು ಜನ ಅದರಾಚೆ ನಿಂತು ತಾವು ಹಾಗಲ್ಲ ಎಂದು ಸಾಬೀತುಪಡಿಸುತ್ತಾರೆ. ಸನ್ಮಾನವಾಗಿ ಬಂದ ಹತ್ತುಸಾವಿರ ರೂಪಾಯಿ ಹಣವನ್ನು ತಾವೇ ಹುಟ್ಟುಹಾಕಿದ ’ಅರುಣಚೇತನ’ಕ್ಕೆ ಕೊಟ್ಟ ಹೆಬ್ಬಾರರ ಕೆಲಸವನ್ನು ಈ ವಿಷಯದಲ್ಲೂ ಇಲ್ಲಿ ನೆನೆಯಬೇಕಾಗುತ್ತದೆ. ಸನ್ಮಾನದ ವೇದಿಕೆಯಲ್ಲಿ ಅವರು ’ಅರುಣಚೇತನ’ದ ವಿಷಯ ಪ್ರಸ್ತಾಪಿಸಿದ ಮರುಘಳಿಗೆಯಲ್ಲೇ ಕೆಲವರು ೫ರಿಂದ ಹತ್ತುಸಾವಿರ ರೂಪಾಯಿಗಳನ್ನು ನೀಡುವುದಾಗಿ ಯಾವುದೇ ಒತ್ತಾಯವಿಲ್ಲದೇ [ಸ್ವಯಂ]ಘೋಷಿಸಿದ್ದಾರೆ.

ಹೆಬ್ಬಾರರಿಗೆ ಸನ್ಮಾನ ಆನೆಗೆ ಅಲಂಕರಿಸಿದಂತೇ ಅಂತನಿಸಿತು ನನಗೆ. ಯಾಕೆಂದರೆ ಆನೆ ಸಹಜ ಸುಂದರ ಪ್ರಾಣಿ. ಗಜಗಾಂಭೀರ್ಯ ಅಂತಾರಲ್ಲ ಗಂಭೀರ ಸುಂದರ ನಡಿಗೆಗೆ ಆನೆ ಹೆಸರುವಾಸಿ. ಆಕಾರದಲ್ಲಿ ಅದರ ಸೌಂದರ್ಯ ಮನದೊಳಗೆ ಅಚ್ಚೊತ್ತಿ ನಿಲ್ಲುವಂಥದು. ಬುದ್ಧಿಮತ್ತೆಯಲ್ಲೂ ಕೂಡ ಪ್ರಾಣಿಗಳಲ್ಲಿ ಮನುಷ್ಯನನ್ನು ಬಿಟ್ಟರೆ ಅತೀ ಬುದ್ಧಿವಂತ ಪ್ರಾಣಿ ಎಂದರೆ ಆನೆ ಎಂಬುದು ಬೆಳಕಿಗೆ ಬಂದ ವಿಷಯ. ಅಂತಹ ಆನೆಗೆ ಅಲಂಕರಿಸಿದಾಗ ಹೇಗೆ ಕಾಣುತ್ತದೆ ಎಂಬುದನ್ನು ಜಂಬೂಸವಾರಿಯಲ್ಲಿ ನೋಡಿದ್ದೀರಿ. ಹಾಗೇ ಇಲ್ಲಿ ಕರ್ತವ್ಯದಲ್ಲಿ ಪರಿಪಕ್ವತೆ ಕೊಡಬಯಸುವ ಹೆಬ್ಬಾರರಿಗೆ ಸನ್ಮಾನ, ಪ್ರಶಸ್ತಿ ಇವುಗಳೆಲ್ಲಾ ಬಂದರೆ ಅದು ಆನೆಗೆ ಮಾಡುವ ಅಲಂಕಾರವಾಗುತ್ತದೆ. ನನ್ನ ಅವರ ಪರಿಚಯ-ಒಡನಾಟ ಬಹಳ ಹಿಂದಿನದೇನಲ್ಲ, ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಿಂದ ಸುಮಾರು ಒಂದೂವರೆ ವರ್ಷದ ಹಿಂದೆಯಷ್ಟೇ ಅವರ ನೇರ ಪರಿಚಯವಾಯಿತು. ಆಮೇಲೆ ಬ್ಲಾಗಿಗರ ಪುಸ್ತಕಗಳ ಬಿಡುಗಡೆಗೆ ಬಂದಾಗ ಆಗೀಗ ಭೇಟಿ, ಜಂಗಮವಾಣಿಯಲ್ಲಿ ಸಂಭಾಷಣೆ ಹೀಗೇ ಅದು ಮುಂದುವರಿದಿದೆ. ಇಷ್ಟೆಲ್ಲಾ ಇದ್ದರೂ ಹೆಬ್ಬಾರರು ಉತ್ತಮ ವಾಗ್ಮಿ ಎಂಬುದು ಹೊರನೋಟಕ್ಕೆ ಯಾರಿಗೂ ತಿಳಿಯುವ ವಿಷಯವಲ್ಲ. ಅವರೊಬ್ಬ ಒಳ್ಳೆಯ ಮಾತುಗಾರ ಕೂಡ. ಉತ್ತಮ ಪುಸ್ತಕಗಳನ್ನು ಓದುವುದು ಅವರ ಹವ್ಯಾಸಗಳಲ್ಲೊಂದು. ಬರಹಗಳ ಕುರಿತಾಗಿ ವಿಮರ್ಶೆಯನ್ನೂ ಮಾಡುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರು ಮೌನಿ! ಅದುಯಾಕೋ ಗೊತ್ತಿಲ್ಲ. ಹೆಸರಿಗೆ ’ಹೆಬ್ಬಾರ್ ಪಿಕ್ಚರ್ಸ್’ ಎಂಬ ಬ್ಲಾಗೊಂದಿದ್ದು ಅಲ್ಲಿ ಏನನ್ನೂ ಬರೆದದ್ದನ್ನು ಕಾಣಲಿಲ್ಲ, ಅವರ ಚಿತ್ರಗಳನ್ನೂ ಹಾಕಿರಲಿಲ್ಲವಪ್ಪ. ಅವರ ಅಭಿಪ್ರಾಯ ಮಾತ್ರ ನಿಖರವಾಗಿರುತ್ತದೆ, ನೇರವಾಗಿರುತ್ತದೆ. ದಾಕ್ಷಿಣ್ಯಕ್ಕೆ ಯಾರಿಗೋ ಹೊಗಳಿಕೆ ಹಾಕುವ ಜಯಮಾನ ಅವರದಲ್ಲ.

ಇನ್ನು ಗೂಗಲ್ ಬಜ್‍ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕೆಲವು ಮಹನೀಯ ದೋಸ್ತರುಗಳು ಯಾರೂ ಅಂದಿನ ಸಮಾರಂಭದಲ್ಲಿ ಕಾಣಸಿಗಲಿಲ್ಲ. ದೂರದಲ್ಲಿರುವ ಗೆಳೆಯರಿಗೆ ಬರಲು ಕಷ್ಟ ಎಂದಿಟ್ಟುಕೊಂಡರೂ ಹತ್ತಿರದಲ್ಲಿ ಅದೂ ಬೆಂಗಳೂರಲ್ಲಿ ಇರುವ ಬ್ಲಾಗಿಗ ಮಿತ್ರರಿಗೆ ಬಹುಶಃ ಸಮಯವಾಗಲಿಲ್ಲವೇನೋ ಅನಿಸುತ್ತದೆ. ಬ್ಲಾಗಿಗರಲ್ಲಿ ಶಶಿ ಜೋಯಿಸ್ ಮತ್ತು ದಿಗ್ವಾಸ್ ಹೆಗಡೆ ಕಾಣಸಿಕ್ಕರು. ಹೋಗಲಿಬಿಡಿ ಸಭೆ ಕಿಕ್ಕಿರಿದ ಜನಸಂದಣಿಯಿಂದ ತುಂಬಿತ್ತು. ಬಂದ ಬಹುತೇಕ ಜನರೆಲ್ಲಾ ಅವರವರ ರಂಗಗಳಲ್ಲಿ ಪರಿಣತರೂ ಮತ್ತು ಪ್ರಬುದ್ಧ ಮನಸ್ಕರು ಎಂದಷ್ಟೇ ಹೇಳಬಯಸುತ್ತೇನೆ. ಗಣೇಶನ ದೇವಸ್ಥಾನ ಎಲ್ಲಾದಿನವೂ ತೆರೆದಿರುತ್ತದೆಯಾದರೂ ಮಹಾಚೌತಿಯ ದಿನ ಗಣಪತಿಯ ದರ್ಶನ ಶ್ರೇಷ್ಠವಂತೆ. ಅಂತೆಯೇ ಸನ್ಮಾನಿತರಾದ ಹೆಬ್ಬಾರರನ್ನು ಅಲ್ಲೇ ಕಂಡು ಸಂಭ್ರಮಿಸಿದ, ಅಭಿನಂದಿಸಿದ ಧನ್ಯತಾಭಾವ ನನ್ನದಾಗಿದೆ. ಹೆಬ್ಬಾರರು ನೂರ್ಕಾಲ ಸುಖವಾಗಿ ಬಾಳಲಿ ದಿನಗಳೆದಂತೇ ಇನ್ನೂ ಎಳಬರಾಗುತ್ತಾ ಮಿಕ್ಕುಳಿದ ಎಳಬರಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ, ನಮಸ್ಕಾರ ಹೆಬ್ಬಾರರಿಗೆ ಹಾಗೂ ಈ ಕಥೆ ಕೇಳಿದ ನಿಮಗೆಲ್ಲರಿಗೆ.

Thursday, October 13, 2011

ಕುರಿ ಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ !


ಕುರಿ ಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ !

ಹೌದ್ರೀ ಮನುಷ್ಯರನ್ನ ಬೇಕಾರೆ ಕುಯ್ಕೊಳಿ ಕೋಳಿ-ಕುರಿ ಮಾತ್ರ ಕುಯ್ಬೇಡಿ ಅನ್ನೋದು ಮಚ್ಚಣ್ಣಗಳ ಹಾಡು. ಅಂದಹಾಗೆ ಇದು ಜೋಗಯ್ಯ ಸಿನಿಮಾದ ಹಾಡಲ್ವೇ ? ಹೌದು ಮಾಸಾಮೀ ಇಲ್ಲಾ ಯಾರು ಇಲ್ಲಾ ಅಂಬೋದು, ಇತ್ತಿತ್ಲಾಗೆ ಇಂಥಾ ಮಚ್ಚಿನ ಹಾಡು ಇಸ್ಯಗಳೇ ಜನ[ಅ]ಪ್ರಿಯ ಅಂತಾರೆ ಕೆಲ್ವು ನಿರ್ದೇಸಕ್ರು. ನಿರ್ದೇಸ್ನ ಮಾಡಕಂತೂ ಯಾವುದೇ ಇಸ್ಕೂಲು ಕಾಲೇಜಿನ ದರ್ದಿಲ್ಲ ಬುಡಿ. ವೈನಾಗಿ ಹರ್ದ ಜೀನ್ಸು ನಾರ್ತಾ ಇರೋ ಟೀ ಸಲ್ಟು ಯೆಗಲ್ಮೇಲೊಂದು ಟರ್ಕಿ ಟವಲ್ಲು ಅಣೇಮೇಲೆ ಒಂದಷ್ಟ್ ನಾಮ ಇವಿದ್ರೆ ಸಾಕು! ಪುಟ್ಟಣ್ಣ ಕಣಗಾಲು ಎಂಬೊಬ್ಬ ’ಅಡ್ಡಕಸಬಿ’ ನಿರ್ದೇಸಕ ಇದ್ದಾ ನೋಡಿ ಆ ವಯ್ಯ ಹದೂ ಇದೂ ಅಂತೆಲ್ಲಾ ರಾಗಾ ಯೆಳಿತಾ ಇರ್ತಿದ್ದ. ಅದ್ಯಾರೋ ಕಾದಂಬ್ರಿಯಂತೆ ಕಥ್ಯಂತೆ....ಒಂದೆರಡಾ ಆ ವಯ್ಯಂಗೆ ಬೋ ವಯ್ಯಾರ ಸಿನ್ಮಾ ಮಾಡಕೆ. ರಾಮನವಮಿ ದಿನ ಕುರೀಕೋಳಿ ಕುಯ್ಯದ್ ವಸಿ ನಿಲ್ಸಿ ಕೋಸಂಬ್ರಿ ತಿಂದ್ಕಬುಟ್ಟು ಬೀಡೀ ಎಳೀತಿದ್ದ ನಮ್ ಹನೇಕ್ ನಿರ್ದೇಸಕ್ರುಗಳೆಲ್ಲಾ ಹೇನಾಗ್ಬೇಕು ಯೋಳಿ ನೀವೇಯ.

ಥೂ...ನಾವಿತ್ಲಾಗೆ ಕುರಿಕೋಳಿ ಸುದ್ದೀ ಯೋಳೂತ್ಲೂವೆ ಅವನ್ಯಾರೋ ಯೋಗರಾಜ್ ಭಟ್ನಂತೆ ಬಂದವ್ನೆ ಕರಡೀ ಕುಣೀಸ್ಕತಾವ ! ಹಾದೀ ಬೀದಿಲೆಲ್ಲಾ ಗಣೇಸ್ನ ಕುಂಡರ್ಸ್ಬುಟ್ಟು ’ಕುರಿಕೋಳಿ ಕುಯ್ಬೇಡಿ’ ಹಾಡು ಹಾಕಾವ ಅಂದ್ಕಂಡ್ರೆ ಈ ಜನೀಕ್ಕು ವಸಿ ತಲೆ ಇರ್ಬಾರ್ದ ? ಅದೆಂಥದೋ ಕತ್ಲಂತೆ ಕರಡ್ಯಂತೆ ಜಾಮೂನಂತೆ ! ನಾನೂ ಸುಮ್ನೇ ನಿಂತು ಕೇಳಿಸ್ಕತಾ ಇದ್ದೆ. ಇದೆಲ್ಲಾ ನಿಂಗೆ ಯಾರು ಯೋಳ್ಕೊಟ್ಟಿರಾದು ಅಂತಾ ಕೇಳ್ಕೋಬೇಕು ಅನ್ಕೊಳೋಸ್ಟ್ರಗೆ ’ಯಾವಾನಿಗ್ಗೊತ್ತು ? ’ ಅಂದ್ಬುಟ್ನೇ ಸಾಕತ್ಲಗೆ ಅಂತ ಮನೆಕಡೆ ಹೊಂಟೆ. ಸಿನ್ಮಾ ಮಂದಿಗೆ ಗಣೇಸ್ನ ಕಂಡ್ರೆ ಮಾಪ್ರೀತಿ ಅನ್ನುಸ್ತದೆ...ಯಾಕೆಂದ್ರೆ ನೀವೆಲ್ಲಾನಾ ನೋಡಿ ಗಣೇಸ್ ಯಾವ ಆಡು ಆಕದ್ರು ಬ್ಯಾಡ ಅನ್ನಂಗಿಲ್ಲ ! ಕೂತ್ಗಂಡು ಅಷ್ಟೂ ಹಾಡು ಕೇಳಿಶ್ಕತಾನೆ.

ಹೋಕ್ಕಳಿ ಬುಡಿ, ನಮ್ಮಲ್ಲಿ ಕಲಾಸಾಮ್ರಾಟ್ರು ಪ್ರೀತಿ ಯಾಕಾರು ಈ ಬೂಮಿಮೇಲದೆ ಅಂತೆಲ್ಲಾ ಕೇಳೋ ಒಳ್ಳೊಳ್ಳೆ ನಿರ್ದೇಸಕರವ್ರೆ. ಒಂದ್ ಕಿತಾ ಹೀರೋ ಮಚ್ ಇಡ್ಕಂಡ ಅಂದ್ರೆ ಅಂಗೆ ಎಲ್ರನೂ ಅಡ್ಡಡ್ಡ ಕತ್ತುರ್ಸಿ ಪೀಸ್ ಪೀಸ್ ಮಾಡೋವರ್ಗೂ ತೋರುಸ್ತಾರೆ. ನೆತ್ರು ಹರೀತದೆ ಯಂಗೆ ಅಂತೀರಾ ! ಅಂತದ್ನೆಲ್ಲಾ ಜನ ನೋಡ್ಬಕು. ಸಮಾಜ ಸುದಾರ್ಸ್ಬೋಕು ಅಂತಾನೆ ಅಸ್ಟೆಲ್ಲಾ ಖರ್ಚ್ ಮಾಅಡಿ ತೆಗೀತರೆ! ಕೆಲವ್ರಂತೂ ಕೋಟಿ ಕೋಟಿ ಸುರೀತರೆ ಅದೇನ್ ಸುಮ್ಕೇನಾ? ಕಾನಡಾ ಬಾಸೆ ಹುಳ್ಕಬೇಕು ಅಂದ್ರೆ ಕಾನಡಾ ಸಿನ್ಮಾ ಜನ ನೋಡ್ಬಕು ಹದ್ರಲ್ಲೂ ಮಚ್ಚು ಲಾಂಗು ಇರೋ ಸಿನ್ಮಾನೇ ನೋಡ್ಬಕು. ಈ ನಡ್ವೆ ಮಾದ್ಯಮದೋರು ರಾತ್ರಿ ರಕ್ತದ ಕಥೆ ಯೋಳೋದ್ನ ಸಲ್ಪ ಕಮ್ಮಿ ಮಡಗವ್ರೆ...ತಲೆಯಿಲ್ಲ ನನ್ಮಕ್ಳೂಗೆ. ಇಡೀ ದಿನ ದುಡ್ದ ರೈತಾಬಿ ಜನಿಕ್ಕೂ ಸೇರ್ದಂತೆಯ ಎಲ್ಲರ್ಗೂ ವಸಿ ಮಜಾತಗೊಳಕಾಯ್ತಿತು. ಬೋ ಒಳ್ಳೆ ಕಾರ್ಯಕ್ರಮಗೋಳ್ನ ಎತ್ಬುಟ್ಟು ಈಗೀಗ ಬರೀ ಹೆಂಡ್ತೀಗ್ ಹೊಡ್ದ ಕತೆ ಆಕ್ತರೆ. ಆ ದರ್ಸನ ಪಾಪ ಮಾಡಿದ್ದಾರು ಏನಪಾ ? ಹಿದೆಲ್ಲಾ ಮಾಮೂಲು. ಹೇಂಡ್ತಿದೀರು ಮಾತ್ ಕೇಳ್ದೇ ಇದ್ರೆ ಯೇನ್ ಮಾಡ್ಬೇಕೋ ಹದನ್ನೇ ಮಾಡವ್ನೆ. ಅಪ್ಪಂಗ ಹುಟ್ಟದ್ ಮಗ ಹವನು ಹದ್ಕೇಯ ಇಂದೆಮುಂದೆ ನೋಡ್ಡಲೆ ಇಕ್ಕವ್ನೆ. ಕಿವಿ ಹರದವ್ನೆ...ಅವನಾಗೋಕಾಗಿ ಅಸ್ಟಕ್ಕೇ ಬಿಟ್ಟ ಜರ್ ನಾನಾಗಿದ್ರೆ ಕತೆ ಬೇರೇನೇ ಆಯ್ತಿತ್ತು ಹೇನಂತೀರಾ ?

ಹೆಣ್ಮಕ್ಳು ಹಂದ್ರೇನು ವೈನಾಗಿ ಮನೆಗಿನೆ ಕಿಲೀನ್ ಮಾಡಿ, ಪಾತ್ರೆ-ಪಗಡೆ ಬೆಳಗ್ ಮಡೀಕಬುಟ್ಟು, ಒತ್ತೊತ್ಗೆ ಅನ್ನಾ-ಸಾರು ಮಾಡ್ಕೋತಾ ದೇವ್ರು ದಿಂಡ್ರು ಇವರ್ನೆಲ್ಲಾ ಮಾತಾಡ್ಸ್ಕೆಂಡು ಸುಮ್ಕೇರ್ಬೇಕು. ಅವರ್ಗೇನ್ ಖರ್ಚೀಗ್ ಕಮ್ಮೀ ಆಗ್ದಂಗೆ ಗಂಡ ಹಂಬೋನು ತಂದ ಆಕ್ತನಲ್ವಾ ? ಮುಗೀತು. ಮಿಕ್ದಂತೆ ಅವನೇನಾನಾ ಮಾಡ್ಕಂಡೋಗ್ಲಿ ಬುಡಿ. ಗಂಡ್‍ಗೆ ಚಟ ಯೆಣ್‍ಗೆ ಹಠ ಹಂತಾರಲ್ಲ ಅಂಗೇಯ ಆವಯ್ಯ ಆಚೆ ಓದ್ಮ್ಯಾಕೆ ಅವನ ಉಸಾಬರಿ ಎಲ್ಲಾ ಇವ್ರೂಗ್ಯಾಕೆ ಹಂತೀನಿ ? ತಿಂದು ಕೊಬ್ಬಿ ಸುಮ್ಕಿರೋಕಾಗ್ದೆ ಕ್ಯಾತೆ ತಗುದ್ರೆ ದರ್ಸನ ಮಾಡಿತ್ತರ ಅಲ್ಲ ಮತ್ತೂ ಬೇರೇನೆ ತರ ಆಯ್ತದೆ. ನೀವ್ ಯೋಳೂತ್ಲೂವೆ ನೆಪ್ಪಾಯ್ತು ಈ ಕಾರ್ಪೋರೇಟ್ರಗಳು ಅವ್ರಲ್ಲ ಅವರಂತಾ ಖದೀಮ್ರು ಬೇರೇ ಇಲ್ಲ. ಮೊನ್ನೆ ಮಲ್ಲೇಸ್ವರ್ದಗೆ ಆಡಹಗಲೇ ಜೋಗಯ್ಯನ ತರ್ದೋರು ಬಂದು ನಟರಾಜ ಅನ್ನೋನ ಮೇಲಕ್ಕಳುಸ್ಬುಟ್ರು. ಆವಯ್ಯ ಒಂದಿಬ್ರು ಉಡ್ಗೀರ್ನ ಬಾಳ ಪಿರೂತಿ ಮಾಡ್ತಿತ್ತಂತೆ. ಪೂರ್ವಾಸ್ರಮದಾಗೆ ಜೋಗಯ್ಯನೇ ಹಾಗಿದ್ದ ಪಾಲ್ಟಿ ಹದು! ಇಲೆಕ್ಸನ್ನಾಗೆ ಗೆದ್‍ಮೇಲೆ ಸಲ್ಪ ದೊಡ್ ಕುಳ ಅಂದ್ಕಬುಟ್ಟಿತ್ತು. ತನ್ನ ಜೊತೀಗೆ ಮಾಮೂಲಿ ವಸೂಲಿಗೆ ಓಡಾಡ್ತಾ ಇದ್ದ ಮನೀಷನ್ನ ತನ್ ಮನೆ ಕಕ್ಸ ಬಾತ್ರೂಮು ತೊಳ್ಯಕೆ ಮಡಗಿತ್ತು. ಆವಯ್ಯಂಗೆ ಬಾಳ ಕೋಪಬಂದಿತ್ತಾ ಹದು ಹೀ ರೀತಿ ತೀರಿಸ್ಕೋತು ಹಂತವ್ರೆ ಹಲ್ಲೀ ಜನ. ಹಿನ್ ಕೆಲವೇ ದಿನ್ದಲ್ಲಿ ಈ ಕತೆ ಸಿನ್ಮಾ ಆತದೆ. ನಮ್ ಕ್ಯಾತ ನಿರ್ದೇಸಕರೊಬ್ರು ಹೀಗ್ಲೇ ಸ್ಕೆಚ್ ಆಕ್ಯವ್ರೆ! ’ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಅವನ್ನಾ’ ಆಡು ಇದಕ್ಕೇ ಕರೆಕ್ಟಾಗಿ ಮ್ಯಾಚಾಯ್ತಿತು ಹಾದ್ರೆ ಹಾಗ್ಲೇ ಬಳಸ್ಬುಟ್ಟವ್ರೆ. ಅದರಪ್ಪನಂತಾ ಬೇರೇ ಆಡು ಬರೀತರೆ ಬುಡಿ.

ಪ್ರೇಕ್ಸಕ್ರು ನೀವಾರ ವಸಿ ಯೋಳ್ಬಾರ್ದಾ ? ’ಬೆಟ್ಟದ ಜೀವ’ ’ಮುಂಗಾರು ಮಳೆ’ ಈ ತರಾ ಡಬ್ಬಾ ಸಿನ್ಮಾ ಮಾಡ್ತರೆ ನಮ್ ಕೆಲು ನಿರ್ದೇಸಕ್ರು...ಥೂ ....ನೋಡಕೆ ಬೇಜಾರಪ್ಪ. ೫೦ ರೂಪಾಯಿ ಕೊಟ್ಟೋದ್ರೆ ಬರೀ ವೇಶ್ಟು. ಸಿನ್ಮಾ ಹಂದ್ಮೇಲೆ ಒಂದಸ್ಟ್ ಪೈಟಿಂಗು ಹದೂ ಇದೂ ಹಿರ್ಲೇಬೇಕು. ಬೆಳ್ಬೆಳಿಗ್ಗೆ ಯೆದ್ದು ರಡಿಯೋ ಆಕುದ್ರೆ ಕುರೀಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ ಅಂದೇಟ್ಗೆ ನೆಪ್ಪಾಗೋತದೆ --ಓ ಹಿವತ್ತು ಕುಯ್ಬಾರ್ದು ಹಂತವ! ಅದೊಂತರ ಅಲಾರಾಮು ಕಣ್ರಪ್ಪ. ನೀವೊಪ್ಕಳಿ ಬಿಡಿ ಹಿನ್ಮುಂದೆಲ್ಲಾ ಇಂತದ್ಕೇ ಡಿಮೇಂಡು ಜಾಸ್ತಿ ಆತದೆ! ಜನ ಬೋ ಪ್ರೀತಿಯಿಟ್ಟು ನೋಡ್ತರೆ. ಒಂದ್ಸಲ ಟೀವಿನಾಗೆ ಒಬ್ಬಾತ ನಾಕಾರು ಮದ್ವೆ ಎಂಗಾದ ಅಂಬೋ ಕತೆ ತೋರ್ಸುದ್ರಾ ಅದರ್ನಂತ್ರ ಒಂದೆರಡೇ ತಿಂಗ್ಳಾಗೆ ಹಿನ್ನೊಬ್ಬ ಸಿಕ್ಕಾಕಬಿದ್ದ. ಕೇಳುದ್ರೆ ನಾನು ಆ ದಿನ ಟೀವಿನಾಗೆ ಇಂಗ್ ಮಾಡ್ಬೌದು ಅಂತ ಕಂಡಿದ್ದೆ...ಯೇನೋ ಮಾಡನ ಅನ್ನುಸ್ತು ಮಾಡ್ಬುಟ್ಟೆ.....ತಪ್ಪಾಗ್ಬುಟ್ಟದೆ ಕ್ಸಮ್ಸಿ ಹಂತಾವ ಎಸ್ಟ್ ಒಳ್ಳೆ ರೀತಿನಾಗೆ ಕೇಳ್ದ ಅಂತೀರಿ ! ಇಂಗೇ ಮಾದ್ಯಮದೋರು ಸಿನ್ಮಾದೋರು ಇಂತಿಂತಾ ಕಥೆಗೋಳ್ನ ತೋರುಸ್ತಾ ಇದ್ರೆ ಮನ್ಸ್ರು ಪಾಟ ಕಲೀತರೆ.

ಹದ್ಯಾರೋ ಬತ್ತವ್ರಲ್ಲ .......... ಓ ಅಂತಾದ್ದೇನಿಲ್ಲ ಬುಡಿ....ನನ್ ಬದ್ಕೇಯ. ಹದೇಯ ನಿಮಗ್ಗೊತ್ತಾಯಾಕಿಲ್ಲ ನನ್ನೆಂಡ್ರ ಪಿರುತಿ ಅಸ್ಟ ಸಾಕಾಯ್ತಿರಲಿಲ್ಲ...ಹದ್ಕೇ ಹಿಲ್ಲೇ ಬೂದಿಪಾಳ್ಯದಾಗೆ ಈ ನನ್ನ್ ಬದ್ಕೀಗೆ ಮನೆಮಾಡ್ಕೊಟ್ಟಿವ್ನಿ. ಆಗೀಗ ಅಂಗ ಬಂದ್ ಬ್ಯಾಟ್ರಿ ಚಾರ್ಜ್ ಮಾಡ್ಕೆಂಡು ಇಂಗ ಒಂಟೋಯ್ತಿನಿ. ಇವಳ್ಗೂ ನನ್ಕಂಡ್ರೆ ಬೋ ಆಸೆ ಬುಡಿ. ನಾ ಯೋಳಿದ್ದೆಲ್ಲಾ ಮಾಡ್ತದೆ ಕಣ್ರಪ್ಪ. ಇನ್ನೊಂದ ಹತ್ ವರ್ಸ ಯೇನ್ ತೊಂದ್ರೆ ಇರಾಂಗಿಲ್ಲ. ಆಮೇಲಿದ್ಯಾವೋನಗ್‍ಬೇಕು ? ಇನ್ನೂ ಒಂದ್ ಎಳಸು ಮಾಡ್ಬೇಕಾಗಿತು ಯಾವ್ದೂ ಸೆಟ್ಟಾಗ್ಲಿಲ್ಲ ! ಶಾನೆ ಸಮ್ಯ ಆಗೋಯ್ತು. ಹಿನ್ಮುಂದೆ ಸೋಮ್ವಾರ ಶನ್ವಾರ ಯಾವ್ದೇ ಪಾಲ್ಟಿ ಗೀಲ್ಟಿ ಇರಂಗಿಲ್ಲ...ನೆಪ್ಪಿಟ್ಗಳಿ...ಬರ್ಲಾ? ಇಂಗೇ ಸಮ್ಯ ಸಿಕ್ದಾಗ ಸಿಗುಮು.

Saturday, October 8, 2011

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!


ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!

ಮತ್ತೂರು ಕೃಷ್ಣಮೂರ್ತಿಗಳು ದಿವಂಗತರು ಎಂಬ ಸುದ್ದಿ ಕೇಳಿಬಂದಿದ್ದು ವಿಜಯದಶಮಿಯ ಬೆಳ್ಳಂಬೆಳಿಗ್ಗೆಯ ೯ ಗಂಟೆಯ ವಾರ್ತೆಯಲ್ಲಿ. ನಾವೆಲ್ಲಾ ಹಬ್ಬದ ಸಡಗರದಲ್ಲಿ ಮೈಸೂರಿನ ಜಂಬೂಸವಾರಿ, ೯ ದಿನಗಳ ಮಟ್ಟಿಗೆ ಗತವೈಭವ ಮರುಕಳಿಸುವ ಈಗಿನ ಅರಸರ ಭಾಗ್ಯ, ಶೃಂಗೇರಿ-ಕೊಲ್ಲೂರು ಮುಂತಾದ ಕ್ಷೇತ್ರಗಳಲ್ಲಿನ ಉಪಾಸನಾ ವೈಖರಿ ಇವುಗಳ ಬಗ್ಗೆ ಕುತೂಹಲಿಗಳಾಗಿ ಮಾಧ್ಯಮವಾಹಿನಿಗಳನ್ನು ಅವಲೋಕಿಸುತ್ತಾ ಕುಂತಾಗಲೇ ಈ ವಿಷಯ ತಿಳಿಯಿತು. ಹಳ್ಳಿಯ ಮೂಲೆಯ ಬಡ ಹುಡುಗನೊಬ್ಬ ವಾರಾನ್ನವನ್ನುಂಡು ಸಂಸ್ಕೃತವನ್ನು ಕಲಿತು ಬೆಂಗಳೂರು ಸೇರಿ ಭಾರತೀಯ ವಿದ್ಯಾಭವನದ ನಿರ್ದೇಶಕರ ಸಾಲಿಗೆ ಸೇರುವ ಎತ್ತರಕ್ಕೆ ಬೆಳೆದಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪಡೆದಿದ್ದು ಎಲ್ಲವೂ ನೆನಪಾದವು. ಸಂಸ್ಕೃತಗ್ರಾಮವೆಂದೇ ಖ್ಯಾತವಾದ ಶಿವಮೊಗ್ಗೆಯ ಮತ್ತೂರಿನಲ್ಲಿ ಜನಿಸಿದರೂ ಬ್ರಿಟಿಷರ ಕಾಲದಲ್ಲಿ ಅಲ್ಲೆಲ್ಲಾ ಬಡತನವೇ ಹಾಸುಹೊಕ್ಕಾಗಿತ್ತು.

ಸಹಜವಾಗಿ ರಾಜಾಶ್ರಯ ತಪ್ಪಿದ ಹಲವು ಬ್ರಾಹ್ಮಣ ವರ್ಗಗಳಲ್ಲಿ ಒಂದಾದ ಸಾಂಕೇತಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹುಡುಗನಿಗೆ ಅಧ್ಯಯನ ಮತ್ತು ಅಧ್ಯಾಪನಗಳೇ ಹಿಡಿಸಿದವು. ಉದರಂಭರಣೆಗಾಗಿ ಖಾಸಗೀ ಬಸ್‍ಕಂಡಕ್ಟರ್ ಆಗಿ ಕೆಲವುಕಾಲ ಕೆಲಸಮಾಡಿದರೂ ಮಾನಸಿಕ ಹಸಿವು ಭರಿಸುವುದಕ್ಕೆ ಅಥವಾ ಮನೋದರಂಭರಣೆಗೆ ಮಾಡುವ ಆವೃತ್ತಿ ಹಿಡಿಸುತ್ತಿರಲಿಲ್ಲ. ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’ ಎಂದ ದಾಸವಾಣಿಯಂತೇ ಬದುಕಿನಲ್ಲಿ ಬೇರೇಯದನ್ನೇ ಬಯಸಿದ ವ್ಯಕ್ತಿ ಕೃಷ್ಣಮೂರ್ತಿಗಳು. ಅಲ್ಲಲ್ಲಿ ಉನ್ನತಮಟ್ಟದ ವ್ಯಾಖ್ಯಾನಗಳನ್ನು ನಡೆಸಿಕೊಡುತ್ತಿದ್ದ ಅವರ ಉಪನ್ಯಾಸಗಳನ್ನೂ, ಅರ್ಥವಿವರಣೆಗಳನ್ನೂ ಸ್ವತಃ ಕಂಡ ನಟ ಶ್ರೀನಾಥ್ ಹಿಂದಕ್ಕೆ ಉದಯ ವಾಹಿನಿಯ ನಿರ್ವಾಹಕ ಮುಖ್ಯಸ್ಥರಾಗಿದ್ದಾಗ ಕೃಷ್ಣಮೂರ್ತಿಗಳಲ್ಲಿ ಒಂದು ಬೇಡಿಕೆ ಇಟ್ಟರಂತೆ. ಅದರ ಫಲವಾಗಿ ಉದಯವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಮಹಾಭಾರತದ ವ್ಯಾಖ್ಯಾನ ನಡೆಯಿತು. ಗಮಕ ವಿದ್ವಾನ್ ಹೊಸಳ್ಳಿ ಕೇಶವಮೂರ್ತಿ ಮತ್ತು ಮತ್ತೂರು ಕೃಷ್ಣಮೂರ್ತಿ -ಈ ಮೂರ್ತಿದ್ವಯರ ಸಾಂಗತ್ಯ ಬೆಳಗಿನ ಅರ್ಧಗಂಟೆ ಕನ್ನಡ ಸಾರಸ್ವತಲೋಕದ/ಭಾವುಕ ಜನರ, ವಿದ್ವಾಂಸರ ಮನೋರಂಜನೆಗೆ ಕಾರಣವಾಗಿತ್ತು. ಕುಮಾರವ್ಯಾಸ ಭಾರತದ ಕಥಾಮಾಲಿಕೆ ಹರಿದು ಬರುವಾಗ ಸಮಯಾನುಕೂಲವುಳ್ಳ ಬಹಳಜನ ಅದನ್ನು ಇಷ್ಟಪಟ್ಟು ನೋಡುತ್ತಿದ್ದರು.

ಹಲವು ಜನರೊಡನೆ ಬೆರೆತು, ದೇಶವಿದೇಶಗಳಲ್ಲಿ ಸಂಚರಿಸಿ ಉಪನ್ಯಾಸಗಳನ್ನು ನೀಡಿ, ೭ ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿ, ಇತಿಹಾಸದ ಪುಟಗಳನ್ನು ಸೇರಬೇಕಿದ್ದ ಕೆಲವು ಶಾಲೆಗಳನ್ನು ಊರ್ಜಿತಗೊಳಿಸಿ, ನವೀಕರಿಸಿ, ಹೊಸದಾಗಿ ಒಂದೆರಡು ಶಾಲೆಗಳನ್ನೂ ಆರಂಭಿಸಿ ಸಮಾಜಕ್ಕೆ ಈ ರೀತಿಯಲ್ಲಿ ಸೇವೆಮಾಡಿದವರು ಕೃಷ್ಣಮೂರ್ತಿಗಳು. ಇದು ಅವರಿಗೆ ನನ್ನ ಭಾವನಮನ. ಇವರಂತಹ ಆದರ್ಶ ಜನ ಇವತ್ತಿನಲ್ಲಿ ಕಡಿಮೆ ಇದ್ದಾರೆ. ಆಡಂಬರವನ್ನೇ ಆಲಿಂಗಿಸಿಕೊಂಡ, ಅಹಂಕಾರವೇ ಮೈವತ್ತ ಅನೇಕ ವಿದ್ವನ್ಮಣಿಗಳಿದ್ದಾರೆ. ಅಂಥವರಲ್ಲಿ ವಿದ್ವತ್ತಿಗಿಂತ ಅವರ ’ಮಣಿ’ಗಳೇ ಎದ್ದು ಕಾಣುತ್ತವೆ! ಅಂಥವರ ಮಧ್ಯೆ ಇಂಥವರೂ ಅಲ್ಲಲ್ಲಲ್ಲಲ್ಲಿ ಇದ್ದಾರೆ ಎಂಬುದನ್ನು ತೆಗೆದುಹಾಕುವ ಹಾಗಿಲ್ಲ.

ದಸರೆಯ ಮರುದಿನ ಅಂದರೆ ನಿನ್ನೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ಸಂಚರಿಸುವಾಗ ಟ್ರಾಫಿಕ್ ಸಿಗ್ನಾಲ್‍ನಲ್ಲಿ ನನ್ನ ವಾಹನ ನಿಲ್ಲಿಸಿಕೊಂಡೆ. ೬ ವರ್ಷದ ಚಿಕ್ಕ ಹುಡುಗ ಗಿಜಿಗುಡುವ ಹಲವು ವಾಹನಗಳ ಜಂಗುಳಿಯ ಮಧ್ಯೆ ಓಡೋಡಿ ಬೇಡುತ್ತಿದ್ದ. ಇನ್ನೇನು ಹಸಿರು ನಿಶಾನೆ ಬಂದರೆ ಆತ ಯಾವುದದರೂ ವಾಹನದ ಚಕ್ರಕ್ಕೆ ಸಿಲುಕಬಹುದೇ ಎಂಬ ಆತಂಕ ನನ್ನಲ್ಲಿತ್ತು. ಆದರೆ ಆತನಿಗೆ ಅದ್ಯಾವ ಭಯವೂ ಇದ್ದಿರಲಿಲ್ಲ. ಜನ್ಮಕೊಟ್ಟ ಅಪ್ಪ-ಅಮ್ಮ ಹೇಳಿಕೊಟ್ಟು ಹೆದರಿಸಿ ಬೇಡುವಂತೇ ಮಾಡಿದರೋ ಅಥವಾ ಯಾವುದೋ ಕಾಣದ ಧೂರ್ತ ಇಂತಹ ಮಕ್ಕಳನ್ನು ಹೀಗೆಲ್ಲಾ ದುಡಿಸಲು ತೊಡಗಿದ್ದಾನೋ ತಿಳಿಯಲಿಲ್ಲ. ಮನದತುಂಬ ಹಲವು ಭಾವನೆಗಳ ಅಲೆಗಳು ಎದ್ದವು. ನಾವು ಕೊಡಬಹುದಾದ ಒಂದು ನಾಣ್ಯ ಆತನ ಜೀವನಕ್ಕೇನೂ ಸಾಲುವುದಿಲ್ಲ, ಆದರೆ ಅವನಂತಹ ಅಸಂಖ್ಯ ಮಕ್ಕಳು ಇದೇ ರೀತಿ ರಸ್ತೆಗಳ ಬದಿಯಲ್ಲಿ ಡೊಂಬರಾಟ ತೋರಿಸುತ್ತಾ, ಇನ್ನೇನೋ ಮಾರುತ್ತಾ ಅಲ್ಲಲ್ಲಿ ಕಾಣಸಿಗುತ್ತಾರೆ. ಬಾಲ್ಯದ ಆಡುವ ವಯಸ್ಸಿಗೇ ಸ್ವಯಂ ಬಾಲಕಾರ್ಮಿಕರಾಗಿದ್ದಾರೆ; ಇಲ್ಲದಿದ್ದರೆ ಅವರಿಗೆ ಹೊತ್ತಿಗೆ, ತುತ್ತಿಗೆ ಕಾಸಿಲ್ಲ!

ನಮ್ಮಗಳ ಮನೆಯಲ್ಲಿ ಒಂದನ್ನೇ ಹಡೆಯುತ್ತೇವೆ, ಹಲವು ರೀತಿಯಲ್ಲಿ ಪ್ರಯತ್ನಿಸಿದರೂ ಊಟಮಾಡಿಸುವುದೇ ಒಂದು ಯಜ್ಞ. ಅದಕ್ಕೇ ಇರಬೇಕು ನಮ್ಮೂರಲ್ಲೊಂದು ಗಾದೆ-’ಕಂಡು ಸಾಕಿದ ಎಮ್ಮೆಯ ಕಣ್ಣು ಕುರುಡು’ ಎಂಬುದಾಗಿ. ವಯೋಮಾನದಲ್ಲಿ ಚಿಕ್ಕವರು ಮಾಡಲು ಕಷ್ಟವದುದನ್ನು ಹೊಟ್ಟೆಪಾಡಿನ ಅನಿವಾರ್ಯತೆಗೆ ಮಾಡುವ ಆ ಕಂದಮ್ಮಗಳಿಗೂ ಹೊತ್ತಿಗೆ ನಿಮಗೇನೂ ಕೊರತೆಮಾಡುವುದಿಲ್ಲ ತಿಂದುಂಡು ಸುಖವಾಗಿರಿ ಎಂದರೂ ರಂಪಮಾಡುತ್ತಾ ಮಾಧ್ಯಮಗಳ ಕಾರ್ಟೂನುಗಳಿಗಂಟಿಕೊಳ್ಳುವ ನಮ್ಮ ಮಕ್ಕಳಿಗೂ ತುಲನೆಮಾಡಿಕೊಂಡೆ. ಎಂತಹ ವಿಪರ್ಯಾಸ ನೋಡಿ: ಅಲ್ಲಿಗೂ ಇಲ್ಲಿಗೂ ಅಜಗಜಾಂತರ, ’ಪರಿಸ್ಥಿತಿ ಮನುಷ್ಯನನ್ನು ನಿರ್ಮಿಸುತ್ತದೆ’ ಎಂಬುದು ಸುಳ್ಳಲ್ಲ.

ಕೊನೆಯದಾಗಿ ನಿನ್ನೆಯ ಸಾಯಂಕಾಲದ ಒಂದು ಘಟನೆ. ಪತ್ನೀಪೀಡಕನಾಗಿ ಜೈಲು ಸೇರ್‍ರಿದ್ದ ಕನ್ನಡದ ನಟ ದರ್ಶನನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಆತನ ಮನೆಹತ್ತಿರ ಜಮಾಯಿಸಿಬಿಟ್ಟರಂತೆ! ಪಟಾಕಿ ಹಚ್ಚಿದರಂತೆ, ಕೇಕು ತಂದರಂತೆ. ಇಂತಹ ಅಭಿಮಾನಿಗಳೆಲ್ಲಾ ಪೊರ್ಕಿಜನ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ. ಅಂತಹ ಜನರನ್ನು ಹಾಗೆ ಕಲೆಹಾಕಲು ನಟನಟಿಯರಿಗೆ ತಗಲುವ ಖರ್ಚು ಸುಮಾರು ಜಾಸ್ತಿಯೇ ಇರಬಹುದು! ಆದರೂ ಸಮಾಜದಲ್ಲಿ ಏನೂ ಬಿಲ್ಡಪ್ ತೋರಿಸದಿದ್ದರೆ ವರ್ಚಸ್ಸಿಗ್ಗೇ ಕಮ್ಮಿ ಎಂಬ ಅಂತ[ಸ್ತು]ರಂಗದ ಅನಿಸಿಕೆಯಿಂದ ಸಹೋದರನಿಗೋ ಇನ್ನಾರಿಗೋ ಹೇಳಿ ಹೀಗೆ ಮಾಡಿಸಿರಬಹುದು ಬಿಡಿ. ಎಲ್ಲಾರಂಗಗಳೂ ಗಬ್ಬೆದ್ದು ನಾರುವಾಗ ಮೊದಲೇ ವೇಷಧಾರಿಗಳಾಗಿ ವಿಜೃಂಭಿಸುವ ಸಿನಿಮಾರಂಗದಲ್ಲಿರುವವರ ನಾಟಕ, ವೇಷ, ರಾಜಕೀಯ, ರುಷುವತ್ತು ಇವುಗಳ ಬಗ್ಗೆ ಬರೆಯುವಾತನಿಗೆ ನಿತ್ಯವೂ ಒಂದಿಲ್ಲೊಂದು ಸುದ್ದಿ ದೊರೆಯಬಹುದು.

ಸಮಾಜ ವಿಚಿತ್ರವಾಗಿದೆ. ದರ್ಶನ್ ಮಾಡಿದ ಕೆಲಸವನ್ನು ಇನ್ಯಾರೋ ಶ್ರೀಸಾಮಾನ್ಯ ಮಾಡಿದರೆ ಜನತೆ ಕ್ಷಮಿಸುತ್ತಿರಲಿಲ್ಲ. ಯಾವ ಹೆಂಡತಿಗೂ ಕೊಟ್ಟ ದೂರನ್ನು ಮರಳಿಪಡೆಯುವ ಒತ್ತಡ ಅಷ್ಟಾಗಿ ಬರುತ್ತಿರಲಿಲ್ಲ! ಖೈದಿಯಾಗಿ ಒಮ್ಮೆ ಒಳಸೇರಿ ಹೊರಬಂದಮೇಲೆ ಮನೆಯವರನ್ನುಳಿದು ಯಾರೂ ಆತನನ್ನು ಸ್ವಾಗತಿಸುವ ಮನೋಸ್ಥಿತಿ ಉಳ್ಳವರಾಗಿರುವುದಿಲ್ಲ. ಖರ್ಚಿಗೆ ಕೊಟ್ಟು ಕರೆದರೂ ಬರುವುದಿಲ್ಲ! ಅದೇ ನಟನೊಬ್ಬ ಅಥವಾ ರಾಜಕಾರಣಿಯೊಬ್ಬ ಮಾಡಿದ ಅಪರಾಧಗಳು ಆಗಸದಲ್ಲಿ ಮಿಂಚು ಮಿಂಚಿ ಮರೆಯಾದಹಾಗೇ ಗುಡುಗಿ ಮಳೆಸುರಿಸದೇ ಸುಮ್ಮನಾಗುವ ಕೆಲವು ಮೋಡಗಳ ಹಾಗೇ ಏನೂ ನಡೆದೇ ಇಲ್ಲವೆಂಬ ರೀತಿ ಮಾಯವಾಗಿಬಿಡುತ್ತವೆ. ಈ ದಿಸೆಯಲ್ಲಿ ಅಧಿಕಾರಶಾಹಿಯಾದ ಬೀಜೇಪಿಯ ಉಡುಪಿ ಶಾಸಕ ರಘುಪತಿ ಭಟ್ಟ ಒಬ್ಬಾತ ಧುತ್ತನೇ ಕಾಣುತ್ತಾನೆ. ಹೋದ ಹೆಂಡತಿ ಹೋದಳು-ಇರುವಶಾಸಕನಿಗೆ ಜೀವದಾನ ಕೊಡಿ ಎಂದು ಮೇಲ್ದರ್ಜೆಯ ರಾಜಕಾರಣಿಗಳು ಉಸುರಿದರೇ ? ಗೊತ್ತಿಲ್ಲ.

ಸದಾ ಹೊಸಬಟ್ಟೆಯಲ್ಲೇ ಮಿರುಗಿತ್ತಿದ್ದ ಸಭೆಗಳಲ್ಲಿ ಸಮಾಜಕ್ಕೆ ಸದ್ಬೋಧನೆಗೈತಿದ್ದ ಹಾಲಪ್ಪನೆಂಬ ಮಂತ್ರಿ , ಸಿನಿಮಾರಂಗದಲ್ಲಿ ಮಸಲ್ ಪೂರಿ ಸಿನಿಮಾ ಗೀತಸಾಹಿತ್ಯವನ್ನು ಬರೆದು ಇಂದಿನ ಯುವ ಜನಾಂಗಕ್ಕೆ ಬೇಕಾದ್ದನ್ನೇ ಕೊಡುತ್ತಿರುವ ಯೋಗರಾಜ ಭಟ್ಟರ ’ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದುರೀ’ ಹಾಡಿಗೆ ತಕ್ಕವನಾದ ಜಯಲಕ್ಷ್ಮೀ ಹೃದಯಾಂತರ್ಗತ ’ಜಗದ್ಗುರು ನರ್ಸ್ ರೇಣುಕ’ ಇನ್ನೂ ನೇಪಥ್ಯದಲ್ಲಿ ಖಾಯಂ ಪರಸ್ತ್ರೀಯರ ಶೀಲವನ್ನೇ /ಮೈಸುಖವನ್ನೇ ಮೇಯುತ್ತಿರುವ ಬಹುತೇಕ ರಾಜಕಾರಣಿಗಳು, ಸಿನಿಮಾ ರಂಗದ ದಿಗ್ಗಜ, ಆಗಜ ಈಗಜ, ಗಜ ಎಲ್ಲಾ ತೆರನಾದ ಗಜಗಳು ಇವರುಗಳನ್ನೆಲ್ಲಾ ನೆನಪಾದಾಗ ಸಾಮಜಿಕ ಸ್ವಾಸ್ಥ್ಯ ಎಂಬುದು ಬರೀ ಕಲ್ಪನೆಯೇ ಅಥವಾ ವಾಸ್ತವವೇ ಎಂಬ ಇಬ್ಬಂದಿತನ ಕಾಡುತ್ತದೆ.

ಮನುಷ್ಯ ಸಹಜವಾಗಿ ತಪ್ಪು ಮಾಡುತ್ತಾನೆ-ಸಮಾಜ ಅದನ್ನು ಕ್ಷಮಿಸಬೇಕು ಎನ್ನುವ ಹಲವರಲ್ಲಿ ನನ್ನದೊಂದು ಸಣ್ಣ ಪ್ರಶ್ನೆ, ಮನುಷ್ಯ ತಪ್ಪುಮಾಡದಿರಲಿ ಎಂಬ ಕಾರಣಕ್ಕೆ ನಮ್ಮ ಪೂರ್ವಜರು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಬರೆದರು ಮತ್ತು ಅವುಗಳಲ್ಲಿ ತಮ್ಮಕಾಲಘಟ್ಟದ ಜೀವನಾನುಭವಗಳನ್ನು ಕಥೆಗಳನ್ನಾಗಿ ಉಪಕಥೆಗಳನ್ನಾಗಿ ಜೋಡಿಸಿದರು ಅಲ್ಲವೇ ? ಅವುಗಳನ್ನು ಓದುವ ವ್ಯವಧಾನ ಸಮಾಜದ ಮುಖಂಡಿರಿಗಿದೆಯೇ ? ಮಹತ್ವಾಕಾಂಕ್ಷಿಗಳಾಗಿ ದಿಲ್ಲಿ ಸರಕಾರದಲ್ಲೇ ಮಹೋನ್ನತ ಸ್ಥಾನವನ್ನು ಬಯಸುವವರು ಯಾರನ್ನೋ ಬಿಟ್ಟು ’ಮಹಾನ್ವೇಷಣ’ ಬರೆಸುತ್ತಾರೆ-ಬರೆದವರಿಗಾಗಲೀ ಬರೆಸಿದವಗಾಗಲೀ ಅದರ ತಲೆಬುಡ ಗೊತ್ತಿರುವುದಿಲ್ಲ! ಕೆಟ್ಟುಹೋದ ಸಮಾಜದಲ್ಲಿ ಮುಂದಾದರೂ ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತೆ ಚಿಗುರಲಿ ಎಂಬ ಕಾರಣಕ್ಕಾಗಿ. ವಿಜೃಂಭಿಸುತ್ತಿರುವ ವಿದೇಶೀ ಸಂಸ್ಕೃತಿಯ ಕೊಡೆಯಾದ ಲಿವ್-ಇನ್, ಒನ್ ನೈಟ್ ಸ್ಟೇ, ಡೇಟಿಂಗ್ ಮುಂತಾದ ಅನೈತಿಕ ಸಂಪರ್ಕ-ಸಂಬಂಧಗಳು ನಾಶವಾಗಲಿ ಎಂಬ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ಮತ್ತು ಜೀವನದಲ್ಲಿ ಹತಾಶೆಯಿಂದ, ನಿರಾಸೆಯಿಂದ, ನೋವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಅಧಃಪತನಕ್ಕೆ ಇಳಿಯುವ ಜನರನ್ನು ಉದ್ದೇಶಿಸಲಾಗಿ ಕೆಲವು ಮಠಮಾನ್ಯಗಳು ಭಾರತೀಯ ಮೂಲದ್ದಾಗಿ ವಿಶ್ವವೇ ನಿಬ್ಬೆರಗಾಗಿ ಓದುವ ಬೌದ್ಧಿಕ ತರಬೇತಿ ಗ್ರಂಥ ’ಭಗವದ್ಗೀತೆ’ಯನ್ನು ಬೋಧಿಸಲು ಮುಂದಾದರೆ ರಾಜಕೀಯದ ಕೊಳಕರು ಅದರ ವಿರುದ್ಧ ಜನಾಂಗಗಳನ್ನು ಎತ್ತಿಕಟ್ಟುತ್ತಾರೆ; ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ ! ಇದು ಇಂದಿನ ಜೀವನದ ಮತ್ತೊಂದು ಮಜಲು.

ಮಾನಸಿಕ, ದೈಹಿಕ ಹಲವು ನೋವುಗಳನ್ನು ಸಹಿಸಿಯೂ ಕುಟುಂಬ ಒಡೆಯದಿರಲಿ, ತನ್ನ ಮಗನ ಭವಿಷ್ಯ ಹಾಳಾಗದಿರಲಿ, ತನ್ನಿಂದ ತನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸಿದವನ ಕಲಾಬದುಕಿನ ಭವಿಷ್ಯ ಕೆಡದಿರಲಿ ಎಂಬ ಕಾರಣಕ್ಕೆ ಭಾರತೀಯತೆಯನ್ನು ಮೆರೆದ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರಿಗೆ ನನ್ನದೊಂದು ಸಲಾಮು. ತನ್ನ ನೋವನ್ನೆಲ್ಲಾ ನುಂಗಿ ತಾನು ತಿರುಗಿ ಬಿದ್ದಿದ್ದೇ ಸುಳ್ಳೆಂದು ವಾದಿಸುತ್ತಾ ಯಾವುದೋ ವಿಷಮ ಘಳಿಗೆ ನಮ್ಮ ಬದುಕಿನಲ್ಲಿ ಘಟಿಸಿಹೋಗಿದೆ, ಅದನ್ನೆಲ್ಲಾ ಮರೆತಿದ್ದೇವೆ ಮತ್ತೆ ಒಂದಾಗಿ ಬದುಕುತ್ತೇವೆ ಎಂಬ ಅವರ ಮನೋವೃತ್ತಿಗೆ ಎಂತಹ ತಾಕತ್ತಿರಬೇಕು ಅನಿಸಿತು, ಅವರ ಕ್ಷಮಾಗುಣದ ಅರಿವಾಯಿತು. ಬಣ್ಣದ ರಂಗದಲ್ಲಿರುವ ಬಹುತೇಕರ ಹಿಂದೆ ಸದಾ ಅಪಸ್ವರಗಳು ಕೇಳುತ್ತಲೇ ಇರುತ್ತವೆ. ಅವು ಬೆಂಕಿಯಿರದೇ ಎದ್ದ ಹೊಗೆಯ ಸುರುಳಿಗಳಲ್ಲ! ಕೆಲವು ಆರುತ್ತವೆ; ಮತ್ತೆ ಕೆಲವು ಮುಂಬರುವ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುತ್ತವೆ!

ಮನುಷ್ಯನ ಬದುಕಿಗೆ ಕಲಾವಿದರು, ನಟನಟಿಯರು, ಸಂಗೀತಜ್ಞರು, ವಿದ್ವಾಂಸರು ಮಾದರಿಯೆನಿಸುತ್ತಾರೆ ! ಆ ಯಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆ ಜನ ಕಚ್ಚೆಹರುಕರಾಗಿದ್ದರೆ ಸಮಾಜಕ್ಕೆ ಅವರಿಂದ ದುಷ್ಪರಿಣಾಮ ಉಂಟಾಗುತ್ತದೆ. ಪ್ರತಿಭಾವಂತರಬೇಕರು ಕೆಲವೊಮ್ಮೆ ಮಾನಸಿಕ ಉದ್ವಿಗ್ನರೂ ಒಂಥರಾ ಹುಚ್ಚರೂ ಆಗಿರುತ್ತಾರೆ. ಕೆಲವು ಸಂಗೀತಗಾರರ ಕೂದಲು, ದಿರಿಸುಗಳನ್ನು ಗಮನಿಸಿ! ಯಾಕೆ ಅವರೂ ಮನುಷ್ಯರಲ್ಲವೇ ಅನಿಸುತ್ತದೆ ತಾನೇ ? ನಾವು ಶ್ರೀಸಾಮಾನ್ಯರು, ಯುವಜನಾಂಗ ಇನ್ನಾದರೂ ತಿಳಿಯಬೇಕು ಏನೆಂದರೆ ಇಂತಹ ಯಾರೂ ನಮಗೆ ರೋಲ್ ಮಾಡೆಲ್ ಅಲ್ಲ. ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದರಲ್ಲಾ ಹಲವು ಗಣ್ಯರು ಅಂತಹ ದೇಶಭಕ್ತರು, ನೈತಿಕ ನಿಷ್ಠೆಯಿದ್ದವರು ನಮಗೆ ಆದರ್ಶವೆನಿಸಬೇಕೇ ಶಿವಾಯಿ ಇಂದಿನ ರಾಜಕಾರಣಿಗಳು,ಕಲಾವಿದರು, ಸಂಗೀತಗಾರರು [ಕ್ಷಮಿಸಿ ಕೆಲವು ಅಪವಾದಗಳು ಇರಲೂ ಸಾಕು] ನಮಗೆ ರೋಲ್ ಮಾಡೆಲ್ ಅಲ್ಲ. ಸರ್ವಜ್ಞನ ಕಾಲದಲ್ಲೂ ಕಚ್ಚೆಹರುಕರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದ್ರೆ ಕವಿ ಹೇಳಿದ್ದಾನೆ

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದೊಳು
ನಿಶ್ಚಿಂತನಪ್ಪ | ಸರ್ವಜ್ಞ

-ಎಂಥಾ ಹಿತವಚನ ಅಲ್ಲವೇ ? ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಆಗ ಜಗವನ್ನೂ ಜಯಿಸಬಹುದಂತೆ! ಕಾಲ, ದೇಶ ಯಾವುದೇ ಇದ್ದರೂ ಉತ್ತಮ ಅಂಶಗಳನ್ನು, ಉಚ್ಚ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮೊಳಗೇ ಅವಿತಿರುವ ಕಾಮ,ಕ್ರೋಧ, ಲೋಭ, ಮೋಹ, ಮದ, ಮತ್ಸರ ಗಳೆಂಬ ರಾಕ್ಷಸೀ ಪ್ರವೃತ್ತಿಯನ್ನು ದಮನಗೊಳಿಸುವರೇ ಶರನ್ನವರಾತ್ರಿಯ / ವಿಜಯದಶಮಿಯ/ ದಸರೆಯ ಈ ಸಂದೇಶವನ್ನು ತಮ್ಮಲ್ಲಿ ಈ ಅಂಕಣದ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿದ್ದೇನೆ

ಮುಗಿಸುವ ಮುನ್ನ ಒಂದು ಸಣ್ಣ ಜೋಕು-- ’ ಮಾಡಿದ್ದುಣ್ಣೋ ಮಹರಾಯ ’ ಎಂಬ ನಾಟಕ ವೇದಿಕೆಯೇರುತ್ತಿದೆ. ಪರಿಕಲ್ಪನೆ ಮತ್ತು ಮೂಲ ಕಥೆ: ಶ್ರೀ ಅಣ್ಣಾ ಹಜಾರೆ. ಕದ್ದು ದುರುದ್ದೇಶಕ್ಕೆ ಗೀತರೂಪಕಕ್ಕೆ ಅಳವಡಿಸಿದವರು : ಕೇಂದ್ರ ಕಾಂಗೈ, ಚಪ್ಪರ ಚಾವಡಿ ಮತ್ತು ನೃತ್ಯ ಸಂಯೋಜನೆ : ಸಿಬಿಐ. ಪ್ರಧಾನ ಭೂಮಿಕೆಯಲ್ಲಿ : ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ, ಇವರಿಂದ ಕೃತಜ್ಞತಾ ಪೂರ್ವಕ ರಂಗಸಜ್ಜಿಕೆಯನ್ನು ನಿರ್ಮಿಸಿಕೊಳ್ಳಲಾಗಿದೆ : ಕರ್ನಾಟಕ ಲೋಕಾಯುಕ್ತ. ಪ್ರಾಂತೀಯ ಜೋಕರ್‍ಗಳಾಗಿ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್. ಮೊದಲಬಾರಿಗೆ ಖಳನಾಯಕನಾಗಿ ಕುಮಾರಣ್ಣ. ಮರದಕೆಳಗೆ ಬಿದ್ದ ಮಂಗನ ಪಾತ್ರದಲ್ಲಿ ಯಡ್ಯೂರಣ್ಣ. ಹಿನ್ನೆಲೆ ಗಾಯನ : ’ಮಣ್ಣಿನಮಕ್ಕಳಿ’ಂದ! ನಾಟಕ ಪೊಗದಸ್ತಾಗಿದೆ! ಅಂತೂ ಜನತೆಗೆ ಜೀವ ಇಲ್ಲದಿದ್ದರೂ ನಿಸರ್ಗ ಒಬ್ಬರಮೇಲೆ ಇನ್ನೊಬರನ್ನಾದರೂ ಛೂ ಬಿಟ್ಟು ಕೊನೆಗೊಮ್ಮೆ ನಿಯಂತ್ರಿಸುವುದೇ ಕಥೆಯ ಮೂಲವಸ್ತು! ಇನ್ನೂ ಹಲವು ಪಾತ್ರಗಳು ಚೌಕಿಯಲ್ಲಿ [ಗ್ರೀನ್ ರೂಮ್] ಬಣ್ಣ ಮೆತ್ತಿಸಿಕೊಳ್ಳುತ್ತಾ ವೇಷ ಕಟ್ಟಿಕೊಳ್ಳುತ್ತಾ ಇವೆ, ವಿದ್ಯುತ್ ಅಭಾವ ಇರುವುದರಿಂದ ಸ್ತ್ರೀರಾಮುಲು ಸೀಮೆ ಎಣ್ಣೆ ಗ್ಯಾಸ್‍ಲೈಟುಗಳನ್ನು ಸಂಗ್ರಹಿಸುವತ್ತ ಹೋಗಿದ್ದಾರೆ! ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ,

ಮಧ್ಯೆ ಹೀಗೊಂದು ಹಾಡು ಹರಿದುಬರುತ್ತದೆ --

ಜೈಲಲ್ಲಿ ಕರಡೀಗೆ ಜಾಮೀನು ಕೊಡಿಸೋಕೆ
ಯಾವತ್ತು ಹೋಗ್ಬಾರ್ದುರೀ
ಲಾರೀಲಿ ಲೋಡ್‍ಮಾಡಿ ಮುಟ್ಟುಗೋಲ್ಹಾಕ್ಕೊಳಕೆ
ಯಾವತ್ತು ಮರಿಬಾರ್ದುರೀ
ಅವ್ನೊಬ್ಬ ಇವ್ನೊಬ್ಬ ಮತ್ತೊಬ್ಬ ಮಗದೊಬ್ಬ
ಗಣಿಗೊಬ್ಬ ಧಣಿಗೊಬ್ಬ ೨ಜಿ ಸ್ಪೆಕ್ಟ್ರಂಗೊಬ್ಬ
ಯಾರನ್ನೂ ಹೊರಗಡೆಗೆ ಬಿಡಬಾರ್ದುರೀ.........

[ದೇಶಾದ್ಯಂತ ಒಂದೇ ಪ್ರದರ್ಶನ. ಆಕಸ್ಮಿಕವಾಗಿ ಸಂಭವಿಸಿಬಹುದಾದ ರಾಜಕೀಯ ಅವಘಡಗಳಿಂದ ಪ್ರದರ್ಶನ ರದ್ದಾದರೆ ಯಾವುದೇಕಾರಣಕ್ಕೂ ಹಣಮರುಪಾವತಿ ಸಾಧ್ಯವಿಲ್ಲ, ಸಹೃದಯೀ ಪ್ರೇಕ್ಷಕರು ಸಹಕರಿಸಲು ಕೋರಿದೆ] ನಮಸ್ಕಾರ.

Thursday, October 6, 2011

|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


’ಅಮ್ಮ’ ಎಂಬ ಶಬ್ದದ ಬಗ್ಗೆ ವರ್ಣನೆ ಮಾಡುವುದು ಬೇಕಾಗುವುದಿಲ್ಲ ಯಾಕೆಂದರೆ ಅದರ ತಾಕತ್ತೇ ಅಂಥದ್ದಿದೆ. ಹುಟ್ಟಿದ ಪ್ರತಿಯೊಂದೂ ಜೀವಿಗೂ ಅಮ್ಮ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜನ್ಮವೀಯುತ್ತಾಳೆ. ಬಹುತೇಕ ಸಸ್ತನಿಗಳಲ್ಲಿ ನೇರವಾದ ಜನ್ಮವಾದರೆ ಕೆಲವು ಸರೀಸೃಪಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಮೊಟ್ಟೆಯ ರೂಪದಲ್ಲಿ ಅಮ್ಮ ಜನ್ಮವೀಯುತ್ತಾಳೆ. ಅಂತಹ ಸಾವಿರಕೋಟಿ ಅಮ್ಮಂದಿರ ಹುಟ್ಟಿಗೂ ಕಾರಣವಾದ ಒಬ್ಬ ಅಮ್ಮ ಇರಬೇಕಲ್ಲ ? ಆ ರೂಪವನ್ನೇ ’ಆದಿಶಕ್ತಿ’ ಎಂದೂ ಜಗನ್ಮಾತೆ ಎಂದೂ ಋಷಿಗಳು ಹೆಸರಿಸಿದರು. ದೇವನೊಬ್ಬನೇ ಆದರೂ ಆತನ ಬಹುರೂಪಗಳನ್ನು ಕಂಡ ಅದೇ ಮಹನೀಯರು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಅಲ್ಲಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳಲ್ಲಿ ನವದುರ್ಗೆಯರು, ಸಪ್ತಮಾತೃಕೆಯರು, ತ್ರಿಮೂರ್ತಿಗಳ ಹೆಂಡಂದಿರು ಮತ್ತು ಆ ಮೂರು ರೂಪಗಳ ಸಮ್ಮಿಲನದ ಶ್ರೀರಾಜರಾಜೇಶ್ವರೀ ರೂಪವನ್ನೂ ಅವರು ಗುಣಗಾನಮಾಡಿದರು.

ಆರಾಧನೆಯ ಕಾಲದಲ್ಲಿ ವರ್ಷದ ಕೆಲವು ಭಾಗಗಳನ್ನು ಹೀಗೀಗೆ ಅಂತ ತಿಳಿಸಿಕೊಟ್ಟು ಅವುಗಳ ಸಂದರ್ಭದ ಮಹತ್ವವನ್ನೂ ಔಚಿತ್ಯವನ್ನೂ ತಿಳಿಸಿಕೊಟ್ಟರು. ವೇದಗಳಲ್ಲಿ ಅಡಕವಾಗಿರುವ ರೀತಿಯಲ್ಲಿ ಹೇಳಬಹುದಾದರೆ ಶ್ರೀಸೂಕ್ತ, ಸರಸ್ವತೀ ಸೂಕ್ತ, ದುರ್ಗಾಸೂಕ್ತಗಳೇ ಮೊದಲಾದ ಕೆಲವು ಸೂಕ್ತಗಳಿಂದ ಅಮ್ಮನನ್ನು ಅರ್ಚಿಸಿದರು. ಇದನ್ನೇ ಪ್ರತಿಪಾದಿಸಿದ ನಮ್ಮ ಯುಗದ ಪ್ರಮುಖ ಅದ್ವರ್ಯುವಾದ ಭಗವತ್ಪಾದ ಶ್ರೀ ಆದಿಶಂಕರರು ಅಮ್ಮನನ್ನು ಆಜನ್ಮ ಪರ್ಯಂತ ಹಲವು ರೂಪಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಕಂಡರು, ಹಲವು ಕಾರಣಿಕ ಸನ್ನಿಧಾನಗಳನ್ನು ಸೃಜಿಸಿ ಅಲ್ಲೆಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು ಎಂಬುದನ್ನು ನಾವೆಲ್ಲಾ ಓದುತ್ತಾ ತಿಳಿದಿದ್ದೇವೆ, ತಿರುಗುತ್ತಾ ಅವರು ಸ್ಥಾಪಿಸಿದ ಮೂರ್ತಿಗಳಲ್ಲಿ ಅಮ್ಮನನ್ನು ದರ್ಶನಮಾಡಿದ್ದೇವೆ. ಆಚಾರ್ಯ ಶಂಕರರಷ್ಟು ಅಮ್ಮನನ್ನು ಭಜಿಸಿದ ಸನ್ಯಾಸಿಗಳು, ಸಂತರು ಭೂಮಿಯಲ್ಲಿ ಈಗ ಸಿಗುವುದು ವಿರಳ. ಅವರು ರಚಿಸಿದ ಸ್ತೋತ್ರಗಳು, ಸ್ತುತಿಗೀತೆಗಳು ಗೇಯವೂ ಮನೋಹರವೂ ಆಗಿವೆ ಎಂಬುದಕ್ಕೆ ನಿತ್ಯವೂ ನಾವು ರೇಡಿಯೋ, ಮಾಧ್ಯಮಗಳಲ್ಲಿ ಕೇಳುವ ಅವರ ಹಲವು ಕೃತಿಗಳೇ ಸಾಕ್ಷಿಯಾಗಿವೆ. ಪ್ರಾಸಬದ್ಧವಾಗಿ ಅನೇಕ ಸ್ತೋತ್ರಗಳನ್ನು ಅವರು ರಚಿಸುವಾಗ ಅವುಗಳಲ್ಲಿ ಜಗತ್ತಿನ ಭಾಷೆಗಳಿಗೆ ಮಾತೃಭಾಷೆಯಾದ ಸಂಸ್ಕೃತಭಾಷೆಯ ಉತ್ಕೃಷ್ಟ ಪದಗಳನ್ನು ಪೋಣಿಸಿದ ಶೈಲಿಯನ್ನು ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ.

ಅಂತಹ ಕೃತಿಗಳನ್ನು ಅರ್ಥವಿಸಿಕೊಂಡು ಆಸ್ವಾದಿಸಿದರೆ ಮಾತ್ರ ಶಂಕರರು ಯಾಕೆ ಹೀಗೆ ಹೇಳಿದರು ಎಂಬುದು ತಿಳಿಯುತ್ತದೆಯೇ ವಿನಃ ಬರಿದೇ ಕಿವಿಗೆ ಮುದನೀಡುತ್ತದೆ ಎಂಬ ಕಾರಣಕ್ಕೆ ಸಿನಿಮಾ ಹಾಡುಗಳಂತೇ ಕೇಳಿಬಿಟ್ಟರೆ ಅವುಗಳ ಮೂಲ ರಸಾಭಿಜ್ಞತೆ ನಮಗೆ ನಿಲುಕುವುದಿಲ್ಲ. ಭಗವಾನ್ ಶ್ರೀಧರ ಸ್ವಾಮಿಗಳು ಒಮ್ಮೆ ಊರೊಂದಕ್ಕೆ ಭೇಟಿ ನೀಡಿ ಗುಡ್ಡದಲ್ಲಿ ನೆಲೆಸಿರುವ ಅಮ್ಮನನ್ನು ದರ್ಶಿಸುತ್ತಾರೆ. ಅಲ್ಲಿನ ಬಡ ಬ್ರಾಹ್ಮಣ ಅರ್ಚಕರಿಗೆ ಯಾವುದೇ ಸೌಲತ್ತು ಇಲ್ಲವಾಗಿ ಅಲ್ಲಿ ಪೂಜೋಪಕರಣಗಳ ಕೊರತೆ ಇದ್ದುದು ಶ್ರೀಧರರಿಗೆ ಕಾಣುತ್ತದೆ. [ತಾವು ಮೊದಲು ಉಪಯೋಗಿಸುತ್ತಿದ್ದ ಮರದ ಪಂಚಪಾತ್ರೆ-ಉದ್ದರಣೆಗಳನ್ನೇ ಇಟ್ಟುಕೊಂಡು]ತಮಗೆ ಯಾರೋ ಶ್ರೀಮಂತ ಭಕ್ತರು ಅರ್ಪಿಸಿದ್ದ ಬೆಳ್ಳಿಯ ಪೂಜೋಪಕರಣಗಳನ್ನು ಅಲ್ಲಿನ ಅರ್ಚಕರಿಗೆ ಬಳಸಲು ನೀಡಿ ಅಮ್ಮನಿಗೆ ಹೊಸ ಸೀರೆಯೊಂದನ್ನು ತರಿಸಿಕೊಟ್ಟು ಅಲಂಕರಿಸಿ ಪೂಜಿಸಿದ್ದನ್ನು ತಾವು ನೋಡುವಾಗ ವಿಗ್ರಹದ ಕಣ್ಣಲ್ಲಿ ಧಾರಾಕಾರವಾಗಿ ನೀರುಹರಿಯಿತಂತೆ! ಇದಕ್ಕೆ ದಾಖಲೆಗಳಿವೆ ಎಂದರಾದರೂ ನೀವು ನಂಬುತ್ತೀರೇನೋ.

ಇಂಥಾ ಅಮ್ಮನನ್ನು ಶರತ್ ಕಾಲದಲ್ಲಿ ನವದಿನಗಳಲ್ಲಿ ನವದುರ್ಗೆಯರೂಪದಲ್ಲಿ, ಲಕ್ಷ್ಮೀ ಪಾರ್ವತೀ ಸರಸ್ವತೀ ರೂಪದಲ್ಲಿ ಆರಾಧಿಸುವುದನ್ನು ಭಾರತವಾಸಿಗಳು ಸಹಸ್ರಮಾನಗಳಿಂದ ಆಚರಿಸುತ್ತಿದ್ದಾರೆ. || ನವೋ ನವೋ ಭವತಿ ಜಾಯಮಾನಃ || ಜಾಯಮಾನ ಕಾಲಮಾನ ಬದಲಾದರೂ ಅಮ್ಮನನ್ನು ಮರೆಯಲು ಸಾಧ್ಯವಾಗುವುದಿಲ್ಲ ಮತ್ತು ಅದು ವಿಹಿತವೂ ಅಲ್ಲ. ನವರಾತ್ರಿ ಪ್ರತೀ ಸಂವತ್ಸರದಲ್ಲೂ ಮೂರು ಬಾರಿ ಬರುತ್ತದೆ, ಆದರೆ ಬರುವ ಮೂರು ನವರಾತ್ರಿಗಳಲ್ಲಿ ಎರಡು ಬಹಳ ವಿಶೇಷ, ಮೊದಲನೆಯದು ವಸಂತ ನವರಾತ್ರಿ ಮತ್ತು ಇನ್ನೊಂದು ಈ ಶರನ್ನವರಾತ್ರಿ. ಇಂತಹ ಪರ್ವಕಾಲದಲ್ಲೇ ಶ್ರೀರಾಮ ರಾವಣನನ್ನು ವಿಜಯದಶಮಿಯ ದಿನ ವಧಿಸಿದನಂತೆ, ಪಾಂಡವರು ಅಜ್ಞಾತವಾಸಕ್ಕೆ ಹೊರಡುವಾಗ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಮೂಟೆ ಕಟ್ಟಿ ಬನ್ನಿ ಮರಕ್ಕೆ ಎತ್ತರದಲ್ಲಿ ಬಿಗಿದಿಟ್ಟು ಹೋಗಿದ್ದು ವಿಜಯದಶಮಿಯ ದಿನ ತಮ್ಮ ಆಯುಧಗಳಿಗೆ ಆಶ್ರಯನೀಡಿ ಕಾಪಾಡಿದ ಬನ್ನಿ ಮರವನ್ನು ಪೂಜಿಸಿ ಆಯುಧಗಳನ್ನು ಮರಳಿ ಎತ್ತಿಕೊಂಡರಂತೆ. ಹೀಗೇ ಹಲವು ಕಾರ್ಯಗಳು ನಡೆದು ಸಾತ್ವಿಕ ಶಕ್ತಿ ವಿಜೃಂಭಿಸಿ ವಿಜಯ ಲಭಿಸಿದ ದಿನವನ್ನು ಇವತ್ತಿಗೂ ವಿಜಯದಶಮಿ ಎಂಬುದಾಗಿ ನಾವು ಕರೆಯುತ್ತೇವೆ, ಆಚರಿಸುತ್ತೇವೆ.

ವೈದಿಕರೊಬ್ಬರ ಕೂಡ ನನ್ನ ಮಾತುಕತೆನಡೆದಿತ್ತು. ಕೆಲವು ವೈದಿಕರು ವೇದಪಾಠವನ್ನು ಗಿಣಿಪಾಠದಂತೇ ಕಂಠಪಾಠ ಮಾಡಿಕೊಂಡಿರುತ್ತಾರೆ, ಎಲ್ಲರಿಗೂ ವೇದಪಾಠಗಳ ಹುರುಳು ಕರಗತವಾಗಿರುವುದಿಲ್ಲ. ವೇದಪಾಠಗಳನ್ನು ಸಮರ್ಪಕವಾಗಿ ಅರ್ಥವಿಸಿಕೊಳ್ಳಲು ಶ್ರದ್ಧೆ ಮತ್ತು ಆಸಕ್ತಿ ಇವುಗಳ ಜೊತೆಗೆ ಸಂಸ್ಕೃತದ ಪ್ರೌಢಿಮೆಯ ಅಗತ್ಯತೆ ಇದೆ. ನಾನು ಮಾತನಾಡುತ್ತಿದ್ದುದು ಸ್ವಲ್ಪ ಗಂಧಗಾಳಿ ಇರುವ ವೈದಿಕರಲ್ಲಿ ಎಂಬುದನ್ನು ಮರೆಯುವಂತಿಲ್ಲ. ಮಾತುಕತೆಯ ಮಧ್ಯೆ ನಾನೊಂದು ಪ್ರಾಯೋಗಿಕ ಕಲ್ಪನೆಯನ್ನು ಪ್ರತಿಪಾದಿಸಿದ್ದೇನೆ. ಕೃಷ್ಣಯಜುರ್ವೇದದಲ್ಲಿ ದುರ್ಗಾ ಸೂಕ್ತ ಹೇಳಲ್ಪಟ್ಟಿದೆ. ಈ ದುರ್ಗಾ ಸೂಕ್ತದಲ್ಲಿ ಅಗ್ನಿಯನ್ನು ಧರಿಸಿದ ದೇವಿಯ ಬಗ್ಗೆ ತಿಳಿಸಿದ್ದಾರೆ. ಅಂಥಾ ಅಗ್ನಿಯನ್ನೇ ಉದರದಲ್ಲೂ ಕೈಯ್ಯಲ್ಲೂ ಜ್ವಲಿಸಿದ ಮಹತಾಯಿಯ ಈ ಸ್ತುತಿಯನ್ನು ಇಂದಿನ ನಮ್ಮ ವಾಹನಗಳನ್ನು ಚಲಾಯಿಸುವ ಪೂರ್ವ ಭಕ್ತಿಯಿಂದ ಪಠಿಸಿದರೆ/ ಅಥವಾ ಪುರೋಹಿತರ ದ್ವಾರಾ ಪಠಿಸುವಂತೇ ಕೇಳಿಕೊಂಡು ಪೂಜೆನಡೆಸಿದರೆ ಸಂಭವಿಸಬಹುದಾದ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತದೆ, ಮತ್ತು ಹಾಗೊಮ್ಮೆ ಸಂಭವಿಸಿದರೂ ಪ್ರಯಾಣಿಕರಿಗೆ, ಚಾಲಕರಿಗೆ ಯಾವುದೇ ಹಾನಿ ಸಂಭವಿಸಿದ ರೀತಿಯಲ್ಲಿ ಬಗೆಹರಿಯುತ್ತದೆ. ಇದು ಹಲವು ದಿನಗಳ ಅವಲೋಕನದಿಂದ ತಿಳಿದು ಬಂದಿದ್ದು ಈ ಬಗ್ಗೆ ಯಾರಾದರೂ ಸಂಶೋಧನೆ ಮಾಡುವವರಿದ್ದರೆ ಅವರಿಗೆ ಸ್ವಾಗತ ಬಯಸುತ್ತೇನೆ !

ಇದೇ ಕಾರಣಕ್ಕೂ ಇರಬಹುದು ಮಹಾನವಮಿಯ ದಿನ ಎಲ್ಲೆಡೆ ಯಂತ್ರಗಳ, ಆಯುಧಗಳ ಪೂಜೆ ನಡೆಯುತ್ತದೆ. ಪಂಚಭೂತಗಳನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಅವುಗಳ ಮೂಲವನ್ನು ಹುಡುಕುವುದೂ ನಮ್ಮಿಂದ ಆಗದ ಮಾತು. ಬಾವಿಯೊಂದನ್ನು ತೋಡಿದಾಗ ಕಾಣುವ ನೀರಿನ ಸೆಲೆಯೇ ಅಲ್ಲಿನ ಜಲಮೂಲ ಎಂದುಕೊಳ್ಳುತ್ತೇವೆಯೇ ಹೊರತು ಆ ನೀರಿನ ಸೆಲೆಯ ಆದಿ ಎಲ್ಲಿ ಎಂಬುದನ್ನು ಅಳೆಯಲು ನಾವು ಹೋಗುವುದೂ ಇಲ್ಲ, ಹೋದರೆ ಅದು ಮುಗಿಯುವ ಕೆಲಸವೂ ಅಲ್ಲ. ಕಣ್ಣಿಗೆ ಕಾಣುವ ನಾವು ನಿತ್ಯ ಉಪಯೋಗಿಸುವ ವಸ್ತು, ಪರಿಕರಗಳಲ್ಲಿ ಹೆಚ್ಚೇಕೆ ನಮ್ಮ ಈ ಭೌತಿಕ ಶರೀರದಲ್ಲೇ ಪಂಚಭೂತಗಳಿವೆ. ಆದರೆ ಆ ಶಕ್ತಿಗಳನ್ನು ನಾವು ಪರಿಗಣಿಸುವುದಿಲ್ಲ. ಶರೀರಕ್ಕೊಂದು ಕಾವು ಇರುತ್ತದೆ. ಆ ಶಾಖದಲ್ಲಿ ಏರಿಳಿತ ಇರುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆಯಾದರೂ ಆ ಶಾಖದ ಮೂಲ ಎಲ್ಲಿದೆ ಎಂಬುದು ನಮಗೆ ಅರ್ಥವಾಗಿದೆಯೇ ? ಇಲ್ಲ. ಆಹಾರ ಜೀರ್ಣಿಸುವ ಸಲುವಾಗಿ ಜಠರದಲ್ಲಿ ಸೃವಿಸುವ ದುರ್ಬಲ ಗಂಧಕಾಮ್ಲ ಅಗ್ನಿಯ ರೂಪವೇ ಆಗಿರುತ್ತದೆ; ತಿಂದ ಅನ್ನವನ್ನು ಕರಗಿಸುತ್ತದೆ. ವಿನಾಕಾರಣ ಅದೇ ದುರ್ಬಲ ಗಂಧಕಾಮ್ಲ ತೀಕ್ಷ್ಣವಾಗತೊಡಗಿ ಕೆಲವರಲ್ಲಿ ಹೊಟ್ಟೆ ಹುಣ್ಣಿಗೆ /ಕರುಳು ಹುಣ್ಣಿಗೆ ಕಾರಣವಾಗುತ್ತದೆ ! ಅಗ್ನಿಯಿಲ್ಲದೇ ನಮ್ಮ ಬದುಕು ಸಾಧ್ಯವಿಲ್ಲ. ನಿತ್ಯದ ಸೂರ್ಯನ ಬೆಳಕಿನಲ್ಲೂ ಅಗ್ನಿಯೇ ಅಡಗಿದೆ. ಹೀಗಿರುವಾಗ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಅಗ್ನಿಯೇ ಪ್ರಪಂಚದ ಅಳಿವು ಉಳಿವಿನಲ್ಲಿ ಪಾಲ್ಗೊಳ್ಳುತ್ತದೆ ಎಂಬುದು ತೋರಿಬರುವ ಸತ್ಯ. ಯಂತ್ರವೊಂದು ಚಾಲನೆಗೊಂಡಾಗ ಅಲ್ಲಿ ಶಾಖೋತ್ಫತ್ತಿಯಾಗುತ್ತದೆ. ಶಾಖೋತ್ಫತ್ತಿ ಜಾಸ್ತಿ ಇದ್ದಾಗ ಅಲ್ಲಿ ಅಗ್ನಿಯ ಆವಾಸ ಇದ್ದೇ ಇರುತ್ತದೆ--ಹೀಗೆ ಅರ್ಥವಿಸೋಣ ಪ್ರತಿಯೊಂದೂ ವಸ್ತುವಿನಲ್ಲೂ ಸುಪ್ತರೂಪದಲ್ಲಿ ಅಗ್ನಿ ಅಡಗಿದೆ! ಕರೆದರೆ ಜ್ವಲಿಸುತ್ತದೆ, ಇಲ್ಲವಾದರೆ ತಣ್ಣಗೆ ಕಾಣದಂತಿರುತ್ತದೆ. ಹೀಗಾಗಿ ಇರುವ ಎಲ್ಲಾ ಉಪಕರಣಗಳಿಗೆ ವಸ್ತುಗಳಿಗೆ ಪೂಜೆ ಸಲ್ಲುವುದು ಸಮರ್ಪಕವಾಗಿದೆ. ಅಗ್ನಿಯನ್ನೇ ಧರಿಸಿದ ಅಮ್ಮ ಅಲ್ಲೆಲ್ಲಾ ಇರುತ್ತಾಳೆ ಎಂಬ ಆಳವಾದ ಪರಿಕಲ್ಪನೆಯಿಂದ ಪೂರ್ವಜರು ಹಾಗೆ ಆರಂಭಿಸಿದರು; ಎಷ್ಟು ವೈಜ್ಞಾನಿಕವಲ್ಲವೇ ?

ವರ್ಷಪೂರ್ತಿ ಅಮ್ಮ ನಮ್ಮ ಸೇವೆಗೆ ನಿಂತಿರುತ್ತಾಳೆ, ವರ್ಷದಲ್ಲಿ ಒಮ್ಮೆ ಅಮ್ಮನಿಗೆ ನಾವು ಗೌರವ ಸಲ್ಲಿಸಿ ಕೃತಜ್ಞರಾಗೋಣ ಎಂಬ ಗೌರವ ಸೂಚಕ ಪ್ರಕ್ರಿಯೆಯೇ ಆಯುಧಪೂಜೆ/ಮಹಾನವಮಿ ಪೂಜೆ. ಈಗೀಗ ನವರಾತ್ರಿಯಲ್ಲಿ ಆರಂಭದಲ್ಲೇ ಕಾರ್ಖಾನೆಗಳಲ್ಲಿ ಸ್ವಚ್ಛಗೊಳಿಸಿ, ಬಣ್ಣ-ಸುಣ್ಣ ಬಳಿದು, ಅಲಂಕರಿಸಿ, ಒಂದಷ್ಟು ಹೂವು ಹಣ್ಣು ಇಟ್ಟು ಪೂಜೆಮಾಡಿ, ಪಟಾಖಿ ಹಚ್ಚಿ, ಕುಂಬಳಕಾಯಿ ಒಡೆದು, ಸಿಹಿತಿಂದು ರಜಾ ಎಂದುಬಿಟ್ಟರೆ ವಾರದ ತನಕ ಯಾರೂ ಬರುವುದಿಲ್ಲ. ಆದರೆ ಈ ಪೊಜೆಯ ಮಹತ್ವದ ಅರಿವಿರುವ ಕೆಲವೇ ಜನ ಮಾತ್ರ ಮಹಾನವಮಿಯ ಆ ದಿನದಂದೇ ಯಂತ್ರಗಳನ್ನು ಪೂಜಿಸುತ್ತಾರೆ. ಯಾವಾಗಲೋ ಮಾಡುವುದನ್ನು ಯಾವಾಗ ಬೇಕಾದರೂ ಮಾಡುವ ಚಾಳಿಗೆ ಏನೂ ಹೇಳಲಾಗುವುದಿಲ್ಲ. ಆದರೆ ರೀತಿಯಲ್ಲಿ ಆಯುಧಪೂಜೆ ಮಾಡಬೇಕಾಗಿರುವುದು ಮಹಾನವಮಿಯಂದೇ. ಬಿಡಿ ಅಷ್ಟಾದರೂ ಮಾಡುತ್ತಾರಲ್ಲ, ಸುಮ್ಮನಾಗೋಣ.

ಕೋಲ್ಕತಾದಲ್ಲಿ ಕಾಳಿಯಾಗಿ, ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯಾಗಿ, ಮೈಸೂರಿನಲ್ಲಿ ಚಾಮುಂಡಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಶೃಂಗೇರಿಯಲ್ಲಿ ಶಾರದೆಯಾಗಿ ನೆಲೆಸಿದ ಅಮ್ಮ ಎಲ್ಲರನ್ನೂ ಹರಸಲಿ, ಜಗದ ಎಲ್ಲಾ ಮಕ್ಕಳಿಗೂ ಅವರ ಸದುದ್ದೇಶಪೂರಿತ ವಾಂಛಿತಗಳನ್ನು ದಯಪಾಲಿಸಿ ಕಷ್ಟದಲ್ಲಿರುವ ತನ್ನ ಮಕ್ಕಳನ್ನು ಪಾರುಮಾಡುವ ಕೃಪೆಮಾಡಲಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಶುಭ ಶರನ್ನವರಾತ್ರಿಯ, ವಿಜಯದಶಮಿಯ ಹಾರ್ದಿಕ ಶುಭಕಾಮನೆಗಳನ್ನು ತಮಗೆಲ್ಲಾ ಘೋಷಿಸುತ್ತಿದ್ದೇನೆ, ಶುಭಾಶಯಗಳು.

ಅಯಿ ಸುಮನಃ ಸುಮನಃ ಸುಮನಃ
ಸುಮನಃ ಸುಮನೋಹರ ಕಾಂತಿಯುತೇ |
ಶ್ರಿತರಜನೀ ರಜನೀ ರಜನೀ
ರಜನೀ ರಜನೀಕರ ವಕ್ತ್ರವೃತೇ |
ಸುನಯನವಿಭ್ರಮರ ಭ್ರಮರ ಭ್ರಮರ
ಭ್ರಮರ ಭ್ರಮರಾಧಿಪತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣಿ ನಮೋಸ್ತುತೇ ||

ಯಾ ದೇವಿ ಸರ್ವ ಭೂತೇಷು ಯಂತ್ರರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಚಂಡೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ವಿದ್ಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ನಾನಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

|| ಓಂ ಸ್ವಸ್ತಿ ||

Saturday, October 1, 2011

ಮತ್ತೆ ಹಾಡಿತು ಕೋಗಿಲೆ !


ಮತ್ತೆ ಹಾಡಿತು ಕೋಗಿಲೆ !

ನದಿಯಾ ತಮಿಳು ಮೂಲದ ಕೂಲಿ ಕಾರ್ಮಿಕಳು. ಕೃಷ್ಣ ಸುಂದರ ಷೋಡಶಿ. ಬಡತನದಲ್ಲೂ ಬೆಂಕಿಯಲ್ಲಿ ಅರಳಿದ ಹೂವಂತೇ ಅರಳಿದ ಹೂವು. ಕಪ್ಪು ಮುಖದಲ್ಲಿ ಮಲ್ಲಿಗೆ ದಂಡೆ ಅರಳಿದಂತೇ ಕಾಣುವ ತುಂಬುನಗು. ಹದವಾದ ನಿತಂಬ. ಸಪಾಟು ಹೊಟ್ಟೆಯ ತೀಕ್ಷ್ಣ ಕಣ್ಣಿನ ಚಟುವಟಿಕೆಯ ಹುಡುಗಿ. ಮೈಸೂರು ಮಲ್ಲಿಗೆಯ ಮಾಲೆಯನ್ನು ಮೊಳವೆರಡು ಮುಡಿದು ಗಾರೆ ಕೆಲಸಕ್ಕೆ ಬಂದರೆ ಕೆಲಸದ ಗಂಡುಹುಡುಗರಿಗೂ ಯಾವುದೋ ಇಲ್ಲದ ಚಾಲನೆ ಸಿಗುತ್ತಿತ್ತು; ಮೈಯ್ಯಲ್ಲಿ ಏನೋ ಸಂಚಲನವಾಗುತ್ತಿತ್ತು. ಎಷ್ಟೋ ದಿನ ಮನೆಕಟ್ಟಿಸುತ್ತಿದ್ದ ಯಜಮಾನಿ ನಂದಿನಿಗೇ ಸ್ವಗತದಲ್ಲಿ ಅನಿಸಿದ್ದಿದೆ ’ ಏನಪ್ಪಾ ಮಲ್ಲಿಗೆ ಮೊಳಕ್ಕೆ ೨೦ ರೂಪಾಯಿ ಆದರೂ ಕೂಲಿ ಮಾಡಿ ಹೊಟ್ಟೆಹೊರೆದುಕೊಳ್ಳುವ ಈ ಹುಡುಗಿ ಅದು ಹೇಗೆ ಪ್ರತಿನಿತ್ಯ ಎರಡೆರಡು ಮೊಳ ಮಲ್ಲಿಗೆ ಹೂ ಮುಡಿದುಬರ್ತಾಳೆ ? ’ ಉತ್ತರ ಸಿಕ್ಕಿರಲೇ ಇಲ್ಲ. ಹೋಗಲಿ ತಾವು ಮಧ್ಯಮವರ್ಗದವರಾಗಿಯೂ ಪ್ರತಿಯೊಂದನ್ನೂ ಲೆಕ್ಕಹಾಕಿ ಅಳೆದು ತೂಗಿ ಸಂಸಾರ ನಡೆಸುವಾಗ ಖರ್ಚಿಗೆ ಸಾಲದೇ ಸಾಲದ ಮೊರೆಹೋಗುವ ನಮಗೆ ಮೊಳ ಮಲ್ಲಿಗೆ ಅಪರೂಪಕ್ಕೆ ಕೊಳ್ಳುವುದಕ್ಕೂ ಆತಂಕ, ಅಂಥಾದ್ದರಲ್ಲಿ ಇವಳದ್ದೇನಪ್ಪಾ ಈ ವಿಚಿತ್ರ ಎಂದುಕೊಂಡೇ ಇದ್ದಳು. ಮನಸ್ಸಿದ್ದರೆ ಮಾರ್ಗ ಎನ್ನುವ ಉತ್ತರವೂ ಒಮ್ಮೆ ನೆನಪಿಗೆ ಬಂದಿತ್ತು.

ಆತನಿಗೆ ಗೊತ್ತು ತನಗೆ ಬೇಕಾದ ವಸ್ತು ಎಲ್ಲಿ ಹಿಡಿದರೆ ಸಿಗುತ್ತದೆ? ಯಾವಾಗ ಎಲ್ಲಿ ಹೇಗೆ ಹಿಡಿಯಬೇಕು ಎಂಬುದು. ಹೂವು ಮಾರುವ ದಾರಿಯಲ್ಲಿ ಸೈಕಲ್ ಓಡಿಸಿ ಬರುತ್ತಾ ಬರುತ್ತಾ ಕಂಡವಳೇ ನದಿಯಾ! " ಪರವಾಗಿಲ್ಲ, ನಲ್ಲ ಇರಕ್ಕು" ಎಂದುಕೊಂಡ ಆತನ ಮತೃಮೂಲವೂ ತಮಿಳೇ. ನದಿಯಾ ಕೂಲಿಮಾಡಿದರೇನಾಯ್ತು ಆಕೆಯಲ್ಲಿ ಆಕೆಯ ಹರೆಯದಲ್ಲಿ ಜಗನ್ಮೋಹಿನಿಯನ್ನೇ ಕಂಡ ಈ ಮುರುಗ ! ಹೇಗಾದರೂ ಮಾಡಿ ಆಕೆಯನ್ನು ಪಡೆಯುವ ಮನಸ್ಸು ಆತನಿಗೆ. ಆರಂಭದ ಮುಗುಳ್ನಗು ಬರುಬರುತ್ತಾ ೫ ನಿಮಿಷದ ಮಾತಿಗೆ ತಿರುಗಿ ಈಗೀಗ ಗಂಟೆಗಟ್ಟಲೆ ಮಾತೂ ಮಾತೂ ಮಾತು. ಆಕೆಗೆ ಜಾಸ್ತಿ ಏನೂ ತಿಳೀದು. ಹರೆಯದ ಮುಗ್ಧ ಸ್ನಿಗ್ಧ ಭಾವಗಳಿಗೆ ತೆರೆದುಕೊಂಡಿದ್ದಳಷ್ಟೇ. ಮುರುಗನನ್ನು ಕಂಡಾಗಲೆಲ್ಲಾ ’ಮುರಳೀಧರ’ನ ಮುರಳಿಗೆ ಮನಸೋತ ಗೋವಿನಂತಾಗುತ್ತಿದ್ದಳು! ಯಾಕೋ ಮುರುಗ ಬರುವ ಸಮಯ ಹತ್ತಿರ ಬಂದಾಗ ಹಾದಿಬದಿಯಲ್ಲೇ ನಿಂತಿರೋಳು. ಅಪ್ಪ-ಅಮ್ಮ ಬೇರೇ ಜಾಗದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಸಿಕ್ಕಿತ್ತು.

ಜೋಗುಪಾಳ್ಯದ ಮುರುಗೇಶ ನಿತ್ಯವೂ ಹೂ ಮಾರುತ್ತಾ ಬರುತ್ತಿದ್ದ. ಸೈಕಲ್ಲಿಗೆ ಹೂವಿನ ಬುಟ್ಟಿ ಏರಿಸಿ ಹೊರಟುಬಿಟ್ಟರೆ ಹೂ ಮಾರಿ ಮುಗಿದಮೇಲೇ ಮನೆ ಸೇರುವಾತ. ಆಗಾಗ ಆಗಾಗ ನಂದಿನಿಯ ನಿರ್ಮಾಣ ಹಂತದಲ್ಲಿರುವ ಮನೆಯ ಅಕ್ಕ-ಪಕ್ಕ ನಿಂತು ಹುಡುಗರ ಕೂಡ ಮಾತನಾಡಿಕೊಂಡು ಹೋಗುತ್ತಿರುವಾಗಲೇ ಅವನಿಗೆ ನದಿಯಾಳ ಸಲುಗೆ ಸಿಗಲು ಆರಂಭವಾಯ್ತು. ಆತನೋ ಈಕೆಗಿಂತ ಸ್ಥಿತಿವಂತ. ಹೊಟ್ಟೆಬಟ್ಟೆಗೆ ಮನೆಯ ಎಲ್ಲರೂ ಸೇರಿ ಅದೂ ಇದೂ ಯಾಪಾರ ಸಾಪಾರ ಮಾಡಿ ದುಡೀತಿದ್ರು-ಸಾಕಾಗ್ತಿತ್ತು. ಅಪ್ಪ ಹಳೇ ಲಾರಿ ಬಾಡಿಗೆ ಓಡಿಸಿ ಒಂದಷ್ಟು ಹಣ ಕೂಡಿಟ್ಟು ಸಣ್ಣ ಸೈಟುಕೊಂಡು ಗೂಡೊಂದ ಕಟ್ಟಿದ್ದ. ಇರುವ ಇಬ್ರು ಹೆಣ್ಮಕ್ಕಳ ಮದುವೆ ಅದಾಗಲೇ ಆಗಿಹೋಗಿತ್ತು. ಮುರುಗನಿಗೂ ಇನ್ನೇನು ಮದುವೆ ವಯಸ್ಸೇ ಆತನ ಅಪ್ಪನ ಲೆಕ್ಕದಲ್ಲಿ. ೨೧ ವರ್ಷ ಕಳೆದು ೨೨ ಮೆಟ್ಟಿತ್ತು. ಎಲ್ಲಾದರೂ ಸಲ್ಪ ಅನುಕೂಲ ಇರುವ ತಮಿಳು ಮನೆತನದಿಂದ ಹೆಣ್ಣೊಂದನ್ನ ಸೊಸೆಯಾಗಿ ತರುವ ಬಯಕೆ ಅವರಿಗಿತ್ತು.

ಗಾರೆ ಕೆಲಸಕ್ಕೆ ಸಹಾಯಕಳಾಗಿರುವ ಬಡ ನದಿಯಾಳನ್ನು ಮದುವೆಯಾಗುತ್ತೇನೆ ಎಂದರೆ ಮನೆಯಲ್ಲಿ ಹುರಿದುಮುಕ್ಕಿಬಿಡುತ್ತಾರೆ. ಅದೂ ಅಲ್ಲದೇ ಆಕೆಗೆ ಯಾವ ಆಸ್ತಿಯೂ ಇಲ್ಲ. ಇರುವ ಹರೆಯದ ದೇಹವೇ ಆಸ್ತಿ. ಮುರುಗನಿಗೂ ಆಸ್ತಿಬೇಕೆಂಬ ಆಸೆ ಇತ್ತು ಆದರೆ ಹರೆಯದ ಕರೆಯ ಜೋರಾಗಿತ್ತು, ಮೈಯಲಿ ಆಕೆಯನ್ನು ಕಂಡಾಗಲೆಲ್ಲ ಕರೆಂಟು ಹರಿಯುತ್ತಿತ್ತು. ’ಆಸ್ತಿ ಪಾಸ್ತಿ ಆಮೇಲೆ ನೋಡುವಾ ಮೊದಲೊಮ್ಮೆ ಸಿಕ್ಕರೆ’ ಎನ್ನುತ್ತಿತ್ತು ಮನಸ್ಸು. ಬಿಗಿದಪ್ಪಿ ಏನೇನೋ ಮಾಡುವ ಬಯಕೆಯೆಲ್ಲಾ ಚಿಗುರಿ ಬಹಳಕಾಲವಾಗಿತ್ತು. ಬುಟ್ಟಿಯೊಳಗಿನ ಹಾವು ಆಗಾಗ ಆಗಾಗ ಬುಸುಗುಡುತ್ತಲೇ ಇತ್ತು. ತಾಳಲಾಗದ ಕಿಚ್ಚಿಗೆ ಏನೆಲ್ಲಾ ಮಾಡಿದ್ದಿದೆ ಎಂದರೆ ಛೆ ಹೇಳುವುದು ಬೇಡಬಿಡಿ. ಅದು ಕೇಳುವುದಕ್ಕೆ ಲಾಯಕ್ಕಿಲ್ಲ. ತಡ್ಕೋಬೇಕು ತಡ್ಕೋಬೇಕು ಅಂದ್ರೆ ಎಲ್ಲೀವರೆಗೆ ತಡ್ಕೋಬೇಕು ? ಅದ್ಕೂ ಇತಿಮಿತಿ ಇಲ್ವೇ? ನಿರ್ಧಾರಕ್ಕೆ ಬಂದುಬಿಟ್ಟಿದ್ದ: ಮನೆಯವರು ಏನಾದ್ರೂ ಮಾಡ್ಕೊಳ್ಲಿ, ತನಗಂತೂ ಒಂದಷ್ಟ್ ದಿನ ಆಕೆ ಬೇಕು !

ನದಿಯಾಗೂ ಶರೀರ ಅದ್ಯಾಕೋ ಮುರುಗನನ್ನು ಕಂದಾಗೆಲ್ಲ ಕಾದ ಕಬ್ಬಿಣದಂತಾಗುತ್ತಿತ್ತು. ಕರಗಿ ನೀರಾಗಿ ಹರಿದ ಮಂಜು ಬಿಂದಿವಿನಿಂದ ತೊರೆ, ಹಳ್ಳ, ನದಿ ಎಲ್ಲಾ ಅಗಿ ಸಾಗರ ಸೇರುವಂತೇ ಒಳಗೊಳಗೆ ಒತ್ತರಿಸಿ ಓಡಾಡುವ ಭಾವನೆಗಳನ್ನು ಮುರುಗನ ಎದೆಗೊರಗಿ ಹಂಚಿಕೊಳ್ಳುವುದರಲ್ಲಿ ಇಷ್ಟವಿತ್ತು. ಆಕೆ ಟೆಂಟಿನಲ್ಲಿ ಸಿನಿಮಾಗಳನ್ನು ನೋಡುತ್ತಿದ್ದಳಲ್ಲಾ ಅಲ್ಲೆಲ್ಲಾ ನಾಯಕ ನಾಯಕಿ ರೋಮಾನ್ಸು ನೋಡಿದಾಗ ನಾಯಕನಲ್ಲಿ ಮುರುಗನನ್ನೇ ಕಾಣುತ್ತಿದ್ದಳು. ಹೇಳುವುದಕ್ಕೇ ಮರೆತೆ- ಬನ್ನೇರು ಘಟ್ಟ ರಸ್ತೆಯ ಬಿಳೇಕಳ್ಳಿ ಪಕ್ಕದ ಟೆಂಟಿನಲ್ಲಿ ಇತ್ತೀಚೆಗೆ ಮುರುಗ ಮತ್ತು ನದಿಯಾ ಸೇರಿ ಒಂದು ಸಿನಿಮಾ ನೋಡಿದ್ದರು. ಸಿನಿಮಾ ಅರಂಭದಿಂದ ಮುಗ್ಯೋವರೆಗೂ ಕಥೆಗಿಂತಾ ಆತ ಗಟ್ಟಿಯಾಗಿ ಆಗಾಗ ಅಪ್ಪಿಕೊಂಡು ಮೇಲೆಲ್ಲಾ ಏನೇನೋ ಮಾಡುತ್ತಿದ್ದುದು ನೆನಪಾದಗ ಜೀವನ ಸುಂದರವಾಗಿ ಕಾಣುತ್ತಿತ್ತು. ಪ್ರತೀದಿನವೂ ಸಿನಿಮಾ ನೋಡುವ ಮನಸ್ಸಾಗುತ್ತಿತ್ತು. ಯಾವಾಗಲೂ ಸಿನಿಮಾ ಟೆಂಟಿನಲ್ಲಿ ಕೂತೇ ಇರೋಣ ಎನ್ನಿಸುತ್ತಲೂ ಇತ್ತು. ಕರೆಂಟು ಹೋಗಿ ಕತ್ತಲಲ್ಲಿ ಮುರುಗ ಜೋರಾಗಿ ಮುತ್ತುಕೊಡುವಾಗ ಎಲ್ಲಿಂದಲೋ ಟಾರ್ಚ್ ಬೆಳಕೊಂದು ಹಾದುಹೋಗಿ ತಮ್ಮನ್ನು ಕಂಡ ಪಡ್ಡೆಗಳು ಸೀಟಿ ಹೊಡೆದು ಅದೇನೋ ಕೂಗಿದ್ದು ಈಕೆಗೆ ಈಗಲೂ ನಗುಬರಿಸುತ್ತಿತ್ತು.

ಅಂತೂ ಕಟ್ಟಡಕ್ಕೆ ಮೊದಲ ಹಂತದ ಮುಚ್ಚಿಗೆ ಮುಗಿದು ಮಹಡಿ ಕಟ್ಟುತ್ತಿರುವಾಗ ಕೆಲವು ಕೊಠಡಿಗಳನ್ನು ಕಟ್ಟುತ್ತಿದ್ದರು. ಬಹಳದಿನದಿಂದ ಬುಟ್ಟಿಯಿಂದ ಹೊರಬರಲೆತ್ನಿಸುತ್ತಿದ್ದ ಮುರುಗನ ಹಾವಿಗೆ ಅಂದುಬಿಡುಗಡೆಯ ಅವಕಾಶ ಒದಗಿಬಂದಿತ್ತು! ಮುರುಗನ ಆಸೆಗೆ ನದಿಯಾ ಬೇಡ ಎನ್ನಲಿಲ್ಲ. ನಿತ್ಯವೂ ಮಲ್ಲಿಗೆ ಮೊಳವೆರಡನ್ನು ಕೊಟ್ಟು ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮುರುಗನಿಗೆ ಹಾಗೆಲ್ಲಾ ಯಾವುದನ್ನೂ ಬೇಡಾ ಎನ್ನುವ ದಾರ್ಷ್ಟ್ಯ ಅವಳಲ್ಲಿರಲಿಲ್ಲ. ಮದುವೆಯ ಬಗ್ಗೆ ಆಕೆಗೆ ತಿಳೀದು ಬಿಡಿ....ಅದನ್ನೆಲ್ಲಾ ಅಕೆ ಸದ್ಯ ಯೋಚಿಸಲೇ ಇಲ್ಲ. ಅಂದು ಕೃಷ್ಣ ಪಕ್ಷದ ಕ್ಷೀಣಚಂದ್ರನಿದ್ದ. ತಿಂಗಳು ಹಾಲು ಚೆಲ್ಲಿದಂತಿರಲಿಲ್ಲ, ಬದಲಾಗಿ ಅಲ್ಲಲ್ಲಿ ಅಲ್ಲಲ್ಲಿ ಮೋಡಗಳ ನೆರಳೂ ಸೇರಿದಂತೇ ಬಿಳೀ ಕಾಗದದಮೇಲೆ ವಾಟರ್ ಮಾರ್ಕ್ ಬಣ್ಣ ಬರೆದಂತಿತ್ತು. ನದಿಯಾ ಕೆಲಸಮುಗಿದು ಮನೆಗೆ ಹೊರಟವಳು ದಾರಿಯಲ್ಲಿ ಮುರುಗನನ್ನು ಭೇಟಿಮಾಡಿದಳು. ಮನೆಗಳಲ್ಲಿ ಏನು ಹೇಳಿದರೋ ಅರಿವಿಲ್ಲ. ಅಂತೂ ಇಬ್ಬರ ಮನೆಗಳಲ್ಲೂ ಹುಡುಕಾಟವೂ ನಡೆದಿರಬಹುದು. ಆದರೆ ಆ ರಾತ್ರಿಮಾತ್ರ ಹಾವು ಹುತ್ತಸೇರಿತ್ತು! ಕೀಲಿ ತಿರುಗಿಸಿದ ಭೂಪನ ಚಿಗುರುಮೀಸೆಯನ್ನು ಸ್ವತಃ ತಾನೇ ಕೈಯಿಂದ ನೀವುತ್ತ ಖುಷಿಪಟ್ಟಳು ನದಿಯಾ. ಎಂದೂ ಕಂಡಿರದ ಅದೇನೋ ಕಂಡಂತಾಗಿತ್ತು. ಬೆಳಗಿನ ಜಾವದವರೆಗೂ ’ಅರೆಮನೆ’ಯ ಮಹಡಿಯಲ್ಲಿ ರೂಪುಗೊಳ್ಳುತ್ತಿದ್ದ ಕೊಠಡಿದ ಗೋಡೆಯ ಪಕ್ಕದಲ್ಲಿ ದೇಹವೆರಡೂ ಒಂದಾಗಿತ್ತು. ಬೆಳಗಿನ ಐದುಗಂಟೆಗೆ ಜಾಗ್ ಮಾಡುವವರ ಮಾತುಕೇಳಿ ಎಚ್ಚೆತ್ತು ಇಬ್ಬರೂ ಅಗಲಲಾರದೇ ಅಗಲಿದರು!

ನದಿಯಾಳ ಅಪ್ಪ-ಅಮ್ಮ ಹುಡುಕಿ ಸೋತರು. ಬಡವರಾದ ತಮಗೆ ಮಗಳೂ ಕಳೆದು ಈ ರೀತಿ ತೊಂದರೆಯಾಗಬೇಕೇ ಎಂದು ಚಿಂತಿಸುತ್ತಿರುವ ವೇಳೆಗೆ ಬೆಳ್ಳಂಬೆಳಿಗ್ಗೆ ನದಿಯಾ ಬಂದುಬಿಟ್ಟಿದ್ದಳು. ಗದರಿಕೊಂಡ ಅಪ್ಪ-ಅಮ್ಮನಿಗೆ ಯಾರೋ ತೊಂದರೆಕೊಟ್ಟು ಅಟ್ಟಿಸಿಕೊಂಡು ಬಂದಾಗ ಅಲ್ಲೆಲ್ಲೋ ಅಡಗಿದ್ದು ರಾತ್ರಿ ಕಳೆದು ಬಂದೆ ಎಂದಳು. ಹುಡುಕಿದ ಅಪ್ಪ-ಅಮ್ಮನಿಗೆ ಗೆಳೆಯನೊಬ್ಬನಿಗೆ ಏನೋ ಅಪಘಾತಕ್ಕೆ ಈಡಾಗಿದ್ದು ರಾತ್ರಿಯೆಲ್ಲಾ ಆಸ್ಪತ್ರೆಯಲ್ಲಿ ಕಳೆದುದಾಗಿ ವರದಿ ಒಪ್ಪಿಸಿದ ಮುರುಗ! ಅಲ್ಲಿಗೆ ಆ ರಾತ್ರಿಯ ಕಥೆ ಹಾಗೆ ಕಳೆದು ಹೋಯ್ತು, ಮುಗಿದೂ ಹೋಯ್ತು.

ವಾರವೆರಡು ಕಳೆದಿರಲಿಲ್ಲ, ನದಿಯಾಗೆ ವಾಂತಿ ! "ಏನು ತಿಂದೆ ಯಾಕೆ ವಾಂತಿ ? " ಎಂದರು ಅಪ್ಪ-ಅಮ್ಮ. ತನಗೇನೂ ತಿಳಿದಿಲ್ಲವೆಂದೊ ಹೊರಗಡೆ ತಾನೇನೂ ತಿಂದಿಲ್ಲವೆಂದೂ ತಿಳಿಸಿದಳು. ವೈದ್ಯರಲ್ಲಿಗೆ ಹೋಗಲು ಜಾಸ್ತಿ ಕಾಸಿಲ್ಲ. ಸರಕಾರೀ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹೋದಾಗ ಅಲ್ಲಿನ ವೈದ್ಯರು ಕೇಳಿದ್ದು " ನೋಡಮ್ಮಾ ನಿನಗೆ ಹುಡುಗ ಯಾರದರೂ ಗೊತ್ತಾ ? " , ಆಕೆಗೆ ಹೌದು ಅನ್ನಬೇಕೋ ಇಲ್ಲಾ ಅನ್ನಬೇಕೋ ತಿಳೀಲಿಲ್ಲ. ವೈದ್ಯರೇ ಮುಂದುವರಿಸಿದರು " ನೀನೀಗ ಬಸುರಿಯಾಗಿದೀಯ ಕಣಮ್ಮ...ಮದುವೆ ಆಗಿಲ್ವಾ ? " ಕುಸಿದುಹೋದ ಅವಳೆಂದಳು " ಆಗಿದೆ" . ವೈದ್ಯರು ವಾಂತಿ ತಹಬದಿಗೆ ಬರಲು ಸ್ವಲ್ಪ ಮಾತ್ರೆ ಪಡೆದುಹೋಗುವಂತೇ ಚೀಟಿ ನೀಡಿದರು. ಕಟ್ಟುತ್ತಿರುವ ಜಾಗದಲ್ಲೇ ಒಂದು ಸಣ್ಣ ಗೂಡು ಅವಳ ಮನೆ. ಮನಗೆ ಬಂದ ಆಕೆಗೆ ತಲೆಸುತ್ತು ಬರುತ್ತಿತ್ತು, ನಿದ್ದೆ ಬರುತ್ತಿತ್ತು. ಇನ್ನೂ ಏನೇನೋ ! " ವೈದ್ಯರು ಕಮ್ಮಿ ಆಗ್ತದೆ ಎಂದು ಹೇಳಿದ್ದಾರೆ " ಎಂದು ಸುಮ್ಮನಾಗಿಸಿಬಿಟ್ಟಿದ್ದಳು ಅಪ್ಪ-ಅಮ್ಮನ್ನ. ಮುರುಗನಿಗೆ ನಿಧಾನಕ್ಕೆ ವಿಷಯ ತಿಳಿಸಿದಳು. ಮುರುಗ ನಕ್ಕು ಅದೇನಾಗಲ್ಲ ಬಿಡು ಎಂದ, ತಾನು ನೋಡ್ಕೋತೀನಿ ಎಂದ. ಆ ನಂತರದ ದಿನಗಳಲ್ಲಿ ಮುರುಗ ಬಹಳ ಹೊತ್ತು ನಿಲ್ಲುತ್ತಿರಲಿಲ್ಲ. ಬರುತ್ತಿದ್ದ, ನಗುತ್ತಿದ್ದ, ಹೂ ನೀಡುತ್ತಿದ್ದ, ಸ್ವಲ್ಪವೇ ಸ್ವಲ್ಪ ಹೊತ್ತು ಹೊರಟುಹೋಗಿಬಿಡುತ್ತಿದ್ದ!

ಒತ್ತಾಯಕ್ಕೆ ಬಸಿರಾದರೆ ಹಡೆಯೋದು ದಾರೀಲಿ ಎಂಬೊಂದು ಗಾದೆ ಇದ್ಯಲ್ಲ ಹಾಗೇ ಮೂರು ತಿಂಗಳವರೆಗೆ ಹೇಗೋ ಮ್ಯಾನೇಜ್ ಮಾಡಿದಳು. ಆನಂತರ ಹೊಟ್ಟೆ ಉಬ್ಬರಿಸಿ ಕಾಣುತ್ತಿತ್ತು. ಕೆಲಸಮಾಡಲು ಆಸಕ್ತಿ ಇರಲಿಲ್ಲ. ಶರೀರ ನಿತ್ರಾಣವಾದಂತಿತ್ತು. ಕುಂತಲ್ಲೇ ನಿದ್ದೆ ಹೋಗೋಳು. ಅಪ್ಪ-ಅಮ್ಮಂಗೆ ಹೊಟ್ಟೆನೋಡಿ ಡೌಟು ಬಂತು. ಕೇಳೇ ಕೇಳಿದರು. ಅಪ್ಪ ಒಂದು ಇಟ್ಟೂ ಬಿಟ್ಟರು. ಒಡಲಾಳದ ಉರಿ ಬೇರೆ ಅಪ್ಪನ ಹೊಡೆತ ಬೇರೆ ನದಿಯಾ ಮರುಗಿದಳು. ಆಕೆಯ ಅಮ್ಮ ತಾನು ಸತ್ತುಹೋಗಬಾರದಿತ್ತೇ ಎಂದಳು. ಅಪ್ಪ-ಅಮ್ಮನ ಮನಸ್ಸನ್ನು ಇಷ್ಟೆಲ್ಲಾ ನೋಯಿಸಿ ತಾನು ಇರಬೇಕೆ ಎಂಬ ಅನಿಸಿಕೆಗೂ ಅವಕಾಶ ಕೂಡಿಬಂತು. " ಯಾರು ಬೊಗಳು ? " ಅಪ್ಪ ಗದರಿದರು. ಕಡೆಗಣ್ಣಿನಲ್ಲಿ ಅದು ಹೇಗೋ ಎಲ್ಲೆಲ್ಲೋ ನೋಡುತ್ತಾ " ಮುರುಗ " ಸಣ್ಣಗೆ ಉಲಿದಳು.

ಮಾರನೇ ಬೆಳಿಗ್ಗೆ ನಂದಿನಿಯ ನಿರ್ಮಾಣವಾಗುತ್ತಿರುವ ಆ ಮನೆಮುಂದೆ ನದಿಯಾಳ ಅಪ್ಪ ಅಡಗಿನಿಂತಿದ್ದ. ಯಾರು ಎಲ್ಲಿ ಏನು ಸೂಟುಕೊಟ್ಟರೋ ಗೊತ್ತಾಗಲಿಲ್ಲ, ಆ ದಿನ ಮುರುಗ ಬರಲೇ ಇಲ್ಲ. ಅದಕ್ಕೂ ಮಾರನೇ ದಿನವೂ ಬರಲಿಲ್ಲ. ಆ ನಂತರ ಆತ ಬರುವುದನ್ನೇ ನಿಲ್ಲಿಸಿಬಿಟ್ಟ. ಹೂ ಮಾರುವುದನ್ನು ಬೇರೇ ಪ್ರದೇಶಕ್ಕೆ ಸೀಮಿತಗೊಳಿಸಿಬಿಟ್ಟ. ನದಿಯಾ ನಲುಗಿದಳು. ಹೇಳಲೂ ಆಗದ ಕೇಳಲೂ ಆಗದ ಸ್ಥಿತಿ ಅವಳದು. ಮುರುಗನ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಬೇಡಿ ಕಾಡಿ ಪಡೆದ ಭಾವಚಿತ್ರವೊಂದೇ ಅವಳ ತಾಬಾ ಇದ್ದಿದ್ದು. ಭಾವಚಿತ್ರವನ್ನು ಅಪ್ಪನಿಗೆ ಕೊಟ್ಟಳು. ಮೇಸ್ತ್ರಿ ಮತ್ತು ಇನ್ನೊಂದಿಬ್ಬರಿಗೆ ಅಪ್ಪ ವಿಷಯ ಹೇಳಲೇಬೇಕಾಯ್ತು. ಅವರನ್ನೊಡಗೂಡಿ ಅಪ್ಪ ಪೋಲೀಸರಿಗೆ ವಿಷಯ ತಿಳಿಸಿದ. ಕಾಸಿಲ್ಲದ ಕೈಲಿ ಬಂದ ಅವರನ್ನು " ಆಯ್ತಪ್ಪಾ ನೋಡ್ತೀವಿ ಕಂಪ್ಲೇಂಟು ಕೊಟ್ಟು ಹೋಗಿ " ಎಂದರು. ಬಡತನ ಇಲ್ಲೂ ಹಾಗೇ ತನ್ನತನ ಕಾಪಾಡಿಕೊಂಡಿತ್ತು! ಫಿರ್ಯಾದಿ ಕೊಟ್ಟಿದ್ದು ಕೆಲಸಕ್ಕೆ ಬರಲಿಲ್ಲ. ಯಾರೋ ಹೇಳಿದರು ನೀವು ಮಾಧ್ಯಮದವರಿಗೆ ಹೇಳಿ ವಿನಂತಿಸಿಕೊಳ್ಳಿ.

ಮಾಧ್ಯಮದ ಮಂದಿ ನದಿಯಾಳನ್ನೂ ತಂದೆಯನ್ನೂ ಮಾತನಾಡಿಸಿ ಅದನ್ನು ಬಿತ್ತರಿಸಿದರು. ಮುರುಗನ ಛಾಯಾಚಿತ್ರವನ್ನು ಬಹಿರಂಗಗೊಳಿಸಿದರು. ಮುರುಗನ ಅಮ್ಮ ಲೋಕಲ್ ಚಾನೆಲ್‍ನಲ್ಲಿ ಇದನ್ನು ಕಂಡುಬಿಟ್ಟರು. ಆ ರಾತ್ರಿ ಮುರುಗ ಮನೆಗೆ ಬರುತ್ತಿದ್ದಂತೇ ಆತನಗೆ ಮಂಗಳಾರತಿ ಬೆಳಗಿದರು. " ಪೋಲೀಸರು ಹುಡುಕಿದರೆ ಏನು ಮಾಡ್ತೀಯಾ ? " ಕೇಳಿದರು. ಕೂಲಿಯವಳನ್ನು ಮುಟ್ಟಿದೆಯಾ ಮನೆಹಾಳನೆ ಎಂದು ಜರಿದರು. ಅಪ್ಪ-ಅಮ್ಮ ಪ್ಲಾನುಮಾಡಿ ಚೆನ್ನೈ ಹತ್ತಿರದ ಹಳ್ಳಿಯ ನೆಂಟರ ಮನೆಗೆ ಕಳಿಸಿಬಿಟ್ಟರು. ಅಲ್ಲಿಂದಲೇ ವ್ಯವಹಾರ ಕುದುರಿಸಿ ಮದುವೆ ಗೊತ್ತುಮಾಡಿ ಮುರುಗನ ಮದುವೆ ನಡೆದುಹೋಯಿತು. ಕಾಸಿರುವ ಕುಟುಂಬದ ಕನ್ಯೆ ಮುರುಗನ ಹೆಂಡತಿಯಾಗಿ ಮನೆಸೇರಿದಳು. ಮುರುಗ ಗಡ್ಡ ಮೀಸೆ ಬೆಳೆಸಿಕೊಂಡು ಚಹರೆ ಬದಲಿಸಿಕೊಂಡು ಬದುಕುತ್ತಿದ್ದ.

ಒಂದಷ್ಟು ದಿನ ಮಾಧ್ಯಮದವರು, ಪೋಲೀಸರು ತಡಕಾಡಿದರು. ಗಟ್ಟಿಇಲ್ಲದ ಕೇಸು ಎಂದು ಬಿಟ್ಟುಕೊಟ್ಟರು. ಸಾರ್ವಜನಿಕರಿಗೆ ನಿತ್ಯವೂ ಇಂಥದೇ ಯಾವುದೋ ಒಂದು ಕಥೆ ನಡೆದೇ ಇರುವುದರಿಂದ ಜಾಸ್ತಿ ತಲೆತೂರಿಸುವ ಮನಸ್ಸಾಗಲಿಲ್ಲ. ಮದುವೆಗೆ ಮೊದಲೇ ಬಸಿರಾದ ಹುಡುಗಿಯ ಅಪ್ಪ-ಅಮ್ಮನಿಗೆ ಅವರ ಜಾತಿಯವರು ಕಟ್ಟಿಕೊಟ್ಟರು ;ಬಹಿಷ್ಕಾರ ಹಾಕಿದರು. ಅಪ್ಪ-ಅಮ್ಮನ ಅಳಲು ಕಂಡು ತಾಳಲಾರದ ಗರ್ಭಿಣಿ ನದಿಯಾ ಮುರುಗನ ಪ್ರೀತಿಯನ್ನೂ ಮರೆಯಲಾಗದೇ ಮನೆಯನ್ನೇ ತೊರೆದಳು. ರೈಲುನಿಲ್ದಾಣ ಅಲ್ಲಿ-ಇಲ್ಲಿ ಅಂತ ಅಲೆದಳು. ಅದೆಲ್ಲೋ ಹೇಗೋ ಹಡೆದಳು. ಹೆತ್ತ ಕೂಸನ್ನು ಬಗಲಿನ ಜೋಳಿಗೆಗೆ ತುಂಬಿಸಿಕೊಂಡು ಬೇಡಿದಳು. ಜನವೆಲ್ಲ ಅಕೆಯನ್ನು ಅರೆಹುಚ್ಚಿ ಎಂದು ತಿಳಿದರು. ರಾತ್ರಿ ಹೊತ್ತು ಕಾಮುಕರ ಕಾಟ ತಪ್ಪಿಸಿಕೊಳ್ಳುವುದು ಹರಸಾಹಸವಾಗಿತ್ತು. ಆದರೂ ತನ್ನ ಶರೀರವನ್ನು ಇನ್ಯಾರಿಗೂ ಕೊಡದೇ ರಕ್ಷಿಸಿಕೊಂಡಳು. ಮಗುವಿನ ಭಾಗ್ಯವನ್ನು ನೆನೆದು ಮಮ್ಮಲ ಮರುಗಿದಳು. ಮಗು ಸ್ವಲ್ಪ ದೊಡ್ಡದಾಗುತ್ತಿರುವಂತೇ ಮತ್ತೆಲ್ಲೋ ಗಾರೆ ಕೆಲಸಕ್ಕೆ ಶುರುವಿಟ್ಟಳು.

ಮುರುಗನ ಅಪ್ಪ-ಅಮ್ಮ ವರದಕ್ಷಿಣೆ ಆಸೆಗೆ ಏನೋ ಮಾಡಲು ಹೋಗಿ ಮುರುಗನೋ ಸೇರಿದಂತೇ ಎಲ್ಲರೂ ಜೈಲುಸೇರಿದ್ದರು. ಬೀಗರ ಬಡಿತಕ್ಕೆ ಅಡ್ಡಡ್ಡ ಮಲಗಿಬಿಟ್ಟ ಮುರುಗನ ಅಪ್ಪ-ಅಮ್ಮ ತಪ್ಪಿನ ಅರಿವಿಗೆ ಬಂದರು. ಜೈಲುಹಕ್ಕಿಯಾಗಿ ಬಂಧಿಯಾಗಿರುವ ಮುರುಗನಿಗೆ ಕೃಷ್ಣಪಕ್ಷನ ಕ್ಷೀಣಚಂದ್ರನ ತಿಂಗಳ ಬೆಳಕು ಮತ್ತೆ ಚೆಲ್ಲಿದ ನೆನಪು ಕಾಡುತ್ತಿತ್ತು. ೫ ವರ್ಷಗಳ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ಮಹಾನಗರಪಾಲಿಕೆಯವರು ಮುರುಗನ ಅಪ್ಪ ಕೊಂಡಿರುವ ಜಾಗ ತಮ್ಮದೆಂದೂ ಅದರ ಖಾತೆಯಲ್ಲಿ ಮೋಸವಾಗಿದೆಯೆಂದೂ ಮನೆಯನ್ನೂ ಉರುಳಿಸಿದ್ದರು. ಮನೆಯಿರಲಿ ಅವರ ವಸ್ತುಗಳೆಲ್ಲಾ ಎಲ್ಲಿಗೆ ಹೋದವೋ ಅರಿವಿಲ್ಲ. ಕೈಲಿರುವ ಕಾಸು ಕರಗಿತ್ತು. ಮತ್ತೆ ದುಡಿತ ಬೇಕಿತ್ತು. ಕೆಲಸ ಹುಡುಕುತ್ತಾ ಹೊರಟ ಮುರುಗನ ಮನೆಯವರಿಗೆ ಸಸಾರದ ಕೆಲಸ ಮತ್ತದೇ ಗಾರೆ ಕೆಲಸವಾಗಿತ್ತು. ಮನೆಯ ಮೂರೂ ಜನ ಹಾಗೆ ಗಾರೆ ಕೆಲಸಕ್ಕೆ ಆತು ಜೀವನ ನಡೆಸಬೇಕಾಯಿತು.

ಕಟ್ಟುತ್ತಿರುವ ಕಟ್ಟಡದ ಹತ್ತಿರದಲ್ಲಿ ಮರಳಿನ ರಾಶಿಯಮೇಲೆ ಆಡುತ್ತಿರುವ ಮುದ್ದಾದ ಮಗುವನ್ನು ಕಂಡು ಮಾತನಾಡಿಸಿದ ಮುರುಗ. ಆತನಿಗೆ ಆಕೆ ತಮಿಳು ಮೂಲದವರ ಮಗಳೆಂಬುದು ಗೊತ್ತೇ ವಿನಃ ಮತ್ತೇನೂ ತಿಳಿದಿರಲಿಲ್ಲ. ಮಗುವನ್ನು ಬಿಟ್ಟು ಬಹಳಹೊತ್ತು ಒಳಗಡೆ ಕೆಲಸದಲ್ಲಿದ್ದ ಮಗುವಿನ ತಾಯಿ ಮಗು ಏನುಮಾಡುತ್ತಿರಬಹುದೆಂಬ ಸಹಜ ಕುತೂಹಲದಿಂದ ಬಂದು ನೋಡುತ್ತಾಳೆ--ಮುರುಗ ಮಗುವನ್ನು ಮಾತನಾಡಿಸುತ್ತಿದ್ದಾನೆ ! ಓಡೋಡಿ ಬಂದು ಮುರುಗನನ್ನು ಮಾತನಾಡಿಸಿದಳು. " ಹೇಗಿದ್ದೀರಿ ? " ಎಂಬ ಪ್ರೀತಿಯ ಹರವನ್ನು ಹೊರಸೂಸಿದಳು. ತನ್ನ ನೋವನ್ನೆಲ್ಲಾ ಅರೆಕ್ಷಣ ಮರೆತು ಮುರುಗ ಮಾಡಿದ್ದು ತಪ್ಪು ಎನ್ನುವುದನ್ನೂ ಮರೆತಳು. ಮಾತನಾಡಿದರು ಜೋಡಿ. ಮಗುವಿಗೆ ಒಂದೂ ಅರ್ಥವಿಲ್ಲ! ಬಹಳ ಹೊತ್ತಿನ ಮಾತು. ಮತ್ತೆ ಪ್ರೀತಿ, ಮತ್ತೆ ಬಯಕೆ! ಯಾರೋ ಪುಣ್ಯಾತ್ಮರು ಆಕೆಗೆ ಒಳ್ಳೆಯ ಕಂತ್ರಾಟುದಾರರ ಪರಿಚಯ ಮಾಡಿಸಿದ್ದರಿಂದ ಅನುದಿನವೂ ಕೆಲಸಕ್ಕೆ ಬರಗಾಲವಿರಲಿಲ್ಲ. ಮುರುಗನಿಗೂ ಅಲ್ಲೇ ಕೆಲಸ ಕೊಡಿಸುವ ಇಚ್ಛೆ ವ್ಯಕ್ತಪಡಿಸಿದಾಗ ಆತ ಒಪ್ಪಿಕೊಂಡ. ಮಗು ತನ್ನದೇ ಎಂಬುದನ್ನರಿತ ಆ ಕ್ಷಣ ಭುವಿಯೇ ಸ್ವರ್ಗದಂತಿತ್ತು. ಮಗುವನ್ನು ಎತ್ತಿ ಮುದ್ದಾಡಿದ ಮುರುಗ ನದಿಯಾಳ ಸಂಗಾತಿಯಾಗಿ ಶಾಶ್ವತವಾಗಿ ಅವಳೊಂದಿಗೆ ಬದುಕು ಕಟ್ಟುವ ಮನಸ್ಸುಮಾಡಿದ. ಇಬ್ಬರ ಮನದಲ್ಲೂ ಕೋಗಿಲೆ ಮತ್ತೆ ಹಾಡಿತು. ದೂರದ ಮಾಮರದಲ್ಲಿ ವಸಂತಾಗಮನವಾಗಿ ಹೊಸಹಸಿರು ಚಿಗುರೊಡೆದು ಕೋಗಿಲೆಯೊಂದು ಕುಳಿತು ಇಂಪಾಗಿ ಹಾಡಹತ್ತಿತ್ತು. ಕಣ್ಣಂಚಲ್ಲಿ ಹರಿದ ಮುತ್ತಿನಮಣಿಗಳು ಗಲ್ಲದಮೇಲೆ ಧುಮ್ಮಿಕ್ಕುತ್ತಿರುವಂತೇ ಹಾದಿಯಲ್ಲಿ ಹಾದುಹೋಗುತ್ತಿರುವ ಮಲ್ಲಿಗೆ ಹೂ ಮಾರುವವನನ್ನು ಕರೆದು ಮೊಳ ಮಲ್ಲಿಗೆ ಕೊಂಡು ನದಿಯಾಗೆ ಮುಡಿಸಿದ ಮುರುಗ.