ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 31, 2011

ಚಂದಿರೆಯ ನೋಟದಲಿ !

ನೆನಕೆಗಳು : ರಾಜಾ ರವಿವರ್ಮರಿಗೆ
ಚಂದಿರೆಯ ನೋಟದಲಿ !

ಬೆಳಕಿನುತ್ಸವದಲ್ಲಿ ಗೆಳತಿಯರ ಹಿಂಡಿನಲಿ
ಥಳುಕುಬಳುಕಿನ ನೀಳ ಚಂದಿರೆಯ ಕಂಡೆ
ಪುಳಕಗೊಂಡಾ ಮನಸು ನನ್ನೊಳಗೇ ನಾಚುತ್ತಾ

ಸೆಳೆತದಲಿ ನನ್ನನ್ನೇ ನಾ ಕಳೆದುಕೊಂಡೆ!

ನಳಿನ ಮುಖಿ ನಗುವಾಗ ದಾಳಿಂಬೆ ಬೀಜಗಳು

ಚಳಿಯನೆಬ್ಬಿಸುವಂಥಾ ನಳಿದೋಳುಗಳನು

ಗುಳಿಯಿರುವ ಕೆನ್ನೆಗಳು ಕಪ್ಪುನೇರಳೆ ಕಣ್ಣು
ಬಿಳಿಯ ಬಟ್ಟೆಯನುಟ್ಟು ತೊನೆದಾಡುವಳನು


ಇಳೆಯೊಳಗೆ ಹದಬೆಳೆದ ಬಾಳೆಯಾ ದಿಂಡುಗಳ
ಎಳೆದು ನಿಲ್ಲಿಸಿದಂಥ ದುಂಡುತೊಡೆಗಳವು

ಬಳೆಗಳೆರಡಾಡುವಾ ಕೈಗಳಲಿ ಕಿಂಕಿಣಿರು

ಕೊಳೆಯಿರದ ನುಣುಪಾದ ಪಾದ ತೋರಿದಳು


ಎಳೆಯಮಗುವಿನ ಮುಗ್ಧ ಸ್ನಿಗ್ಧ ಸೌಂದರ್ಯವತಿ
ಎಳೆಗರುವಿನಾ ತೆರದಿ ಜಿಗಿಜಿಗಿದು ಓಡಿ

ಎಳೆದೊಯ್ದಳೆನ್ನ ಮನ ಅವಳೊಡನೆ ಎಲ್ಲೆಲ್ಲೋ

ಎಳೆನಡುವ ಕುಲುಕಿಸುತ ಬೆಂಬಿಡದೆ ಕಾಡಿ


ಹಳೆಯದೇಗುಲದಲ್ಲಿ ಹೊಸವಿಗ್ರಹದ ರೀತಿ

ಹೊಳೆಯುತ್ತ ನಿಂತವಳ ಕದ್ದು ನೋಡುವೊಲು

ಕಳೆಯಂಥದದು ಮೊಗದಿ ರತಿದೇವಿ ಭೂಮಿಯಲಿ!
ಅಳೆಯುತಿಹಳಲ್ಲಲ್ಲೇ ಓರೆನೋಟದಲಿ !

ಕಳಕಳಿಯು ನನ್ನದಿದೆ ಓದೇವ ನಿನ್ನಲ್ಲಿ

ಸೆಳೆತಂದು ಕೊಡಮಾಡು ಬಾಳರಥದಲ್ಲಿ

ಕಳೆಕಟ್ಟಲೆನ್ನ ಜೀವನದಾಕೆ ನಡೆಬರಲಿ
ಬೆಳಗುವೆನು ಸಾವಿರದ ಹಣತೆ ನಿತ್ಯದಲಿ !

Wednesday, March 30, 2011

ದಂಡಂ ದಶಗುಣಂ!


ದಂಡಂ ದಶಗುಣಂ!

ಹೇಳಲೇಬೇಕಾದ ಕೆಲವು ಮಾತುಗಳು ಉಳಿದುಹೋಗಿ ಆಮೇಲೆ ಆ ವಿಷಯಗಳು ಮರೆತುಹೋಗುತ್ತವೆ. ಅದನ್ನು ಸಮಯದಲ್ಲೇ ಹೇಳಿದರೆ ಹಲವರಿಗೆ ಅದರ ಸತ್ಯಾಸತ್ಯತೆಯ ಪರಾಮರ್ಶೆಗೆ ಅನುಕೂಲವಾಗುತ್ತದೆ. ಬರಬೇಕಾದ ಹಣ ಸಮಯದಲ್ಲಿ ಸಿಕ್ಕರೆ ಎಷ್ಟೋ ಅನುಕೂಲವಾಗುತ್ತದೆ. ಆ ಹಣ ತಡವಾಗಿ ಬಂದರೆ ಅದರಿಂದ ಆಗುವ ಅನಾನುಕೂಲ ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಪೀಠಿಕೆ ಹಾಕುತ್ತಿರುವುದು ಯಾವುದೋ ಪಕ್ಷ ವಹಿಸಿಕೊಂಡು ಅವರನ್ನು ಅನುಮೋದಿಸಲಲ್ಲ. ಬದಲಾಗಿ ನಾಗರಿಕ ಬದುಕಿನ ಕೆಲವು ಮಜಲುಗಳನ್ನು ವಿವೇಚಿಸುವುದು ಉದ್ದೇಶವಾಗಿದೆ.

ಇವತ್ತು ಮೋಹಾಲಿಯಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ಕ್ರಿಕೆಟ್ ಆಟ ನಡೆಯಲಿದೆ. ಜನಮಳ್ಳೊ ಜಾತ್ರೆಮಳ್ಳೋ ಅನ್ನೋ ಹಾಗೇ ಮಂದಿರ ಮಸೀದಿಗಳಲ್ಲಿ ಹೋಮ-ಹವನ,ಪೂಜೆ, ಪ್ರಾರ್ಥನೆ ಮೊದಲಾದ ಕಾರ್ಯಗಳು ನಡೆಯುತ್ತಿರುವುದನ್ನು ನಾವು ವೀಕ್ಷಿಸುತ್ತಿದ್ದೇವೆ. ಆಪ್ಟರ್ ಆಲ್ ನಡೆಯುತ್ತಿರುವುದು ಕೇವಲ ಕ್ರಿಕೆಟ್! ನಮ್ಮ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಕೊಡುವ ಸವಲತ್ತುಗಳು ಮತ್ತು ಗೌರವಗಳು ಅತಿಯೆನಿಸುವುದಿಲ್ಲವೇ? ಯಾವ ಲೆಕ್ಕದಲ್ಲಿ ಅವರು ದೇಶಕ್ಕೆ ಉಪಕಾರವಾಗುವಂತಹ ಘನಕಾರ್ಯವನ್ನು ಮಾಡಿದ್ದಾರೆ ಅಥವಾ ಮಾಡುತ್ತಾರೆ? ಒಬ್ಬೊಬ್ಬ ಕ್ರಿಕೆಟ್ ಆಟಗಾರನ ಖರ್ಚುವೆಚ್ಚ ಬಿಳೀ ಆನೆಸಾಕಿದಷ್ಟೇ ಅಥವಾ ಅದಕ್ಕೂ ದುಬಾರಿ ಎಂದರೆ ಬೆರಗಾಗಬೇಕಾಗಿಲ್ಲ. ಯಾವ ಪುರುಷಾರ್ಥವನ್ನು [ಹೆಂಗಸರು ಕ್ರಿಕೆಟ್‍ನಲ್ಲಿ ಜಾಸ್ತಿ ಇರದ್ದರಿಂದ ಈ ಶಬ್ದ ಪ್ರಯೋಗ! ಹೆಂಗಳೆಯರು ಓದುವಾಗ ’ಯಾವ ಮಹಿಳಾರ್ಥಕ್ಕೆ’ ಎಂದು ಸೇರಿಸಿಕೊಳ್ಳುವುದು]ಸಾಧಿಸುವ ಹೀರೋಗಳು ಅವರು ಎಂಬುದು ಮಾತ್ರ ಓದುಗರಿಗೆ ಬಿಟ್ಟಿದ್ದು.

ಹೇಳೀ ಕೇಳೀ ಈ ಕ್ರಿಕೆಟ್ ಸಂಭ್ರಮ ಬರುವುದಕ್ಕೂ ಇತ್ತ ವಿದ್ಯಾರ್ಜನೆಯಲ್ಲಿ ತೊಡಗಿರುವವರ ಪರೀಕ್ಷಾ ಸಮಯ ಹತ್ತಿರಬರುವುದಕ್ಕೂ ಯಾವುದೋ ಅವಿನಾಭಾವ ಸಂಬಂಧವೋ ಏನೋ ಅಂತೂ ಕ್ರಿಕೆಟ್ ಹೆಚ್ಚಾಗಿ ಈ ವೇಳೆಗೇ ಬರುತ್ತದೆ! ವಿದ್ಯಾರ್ಥಿ/ವಿದ್ಯಾರ್ಥಿನಿಯರು ಓದುವುದನ್ನು ಮರೆತು ಮಾಧ್ಯಮವಾಹಿನಿಗಳ ಮುಂದೆ ಠಿಕಾಣಿ ಹೂಡಿ ಕ್ರಿಕೆಟ್ ಟೂರ್ನಿಯೋ ಪಂದ್ಯವೋ ನೋಡುತ್ತಾ ಓದಬೇಕಾದ ಅಮೂಲ್ಯ ಸಮಯವನ್ನು ಅಲ್ಲಿ ಕಳೆದುಕೊಳ್ಳುತ್ತಾರೆ. ಕೆಲವರಿಗಂತೂ ಕ್ರಿಕೆಟ್ ಜ್ವರ ಬಂದಿರುತ್ತದೆ ಎಂದು ಕೇಳಿದ್ದೇನೆ! ದೇಶದಲ್ಲಿ ಅಳಿದುಳಿದ ಕೃಷಿಕ ಯುವಕರೂ ಕೂಡ ಕ್ರಿಕೆಟ್ ನೋಡಬಯಸಿ ತಮ್ಮ ಹಲವು ಕೆಲಸಗಳನ್ನು ಮುಂದೂಡುತ್ತಾರೆ. ಮಹಿಳೆಯರು ಕ್ರಿಕೆಟ್ ನೋಡುವುದರಲ್ಲಿ ಸಾಧನೆ ಸಾಧಿಸಿದ್ದು ನಮಗೆ ಕಾಲಗರ್ಭದಲ್ಲಿ ಕಂಡುಬಂದಿದೆ. ನಟೀಮಣಿಗಳು ತಮ್ಮ ಜೀವನದಲ್ಲಿ ಬ್ಯಾಟಿಂಗ್ ಮಾಡಲು ಇರಲಿ ಎಂಬ ಕಾರಣಕ್ಕೆ ಕ್ರಿಕೆಟಿಗರನ್ನು ಬೆನ್ನುಹತ್ತಿ ಸ್ಪರ್ಧೆಗಳು ನಡೆಯುವಲ್ಲಿ ಹಾಜರಾಗುವುದು ಮತ್ತು ಬೇಕಾದ ಆಟಗಾರರನ್ನು ಆತುಕೊಳ್ಳುವುದು ಸಂಗೀತಾ ಬಿಜಲಾನಿ-ಮಹಮ್ಮದ ಅಜರುದ್ದೀನ್ ಆಣೆಯಾಗಿಯೂ ಸತ್ಯ!

ಕ್ರೀಡೆಗಳು ಉಲ್ಲಾಸದಾಯಕ, ದೇಹಾರೋಗ್ಯಕ್ಕೆ ಅವುಗಳು ಬೇಕು--ಇವೆಲ್ಲಾ ಸರಿ. ಆದರೆ ಕ್ರೀಡೆಗಳೇ ಜಗತ್ತಿನ ಸಾಮಾಜಿಕ ಸ್ಥಿತಿಯನ್ನು, ಆರ್ಥಿಕತೆಯನ್ನು ನಿರ್ಧರಿಸುವ ಮಾಪನಗಳಲ್ಲವಲ್ಲ? ಕ್ರೀಡೆಗಳಿಂದ ವಿನೋದ ವಿಹಾರ ಮೋದವೇನೋ ಸಿಗಬಹುದು ಆದರೆ ಕ್ರೀಡೆಗಳು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಹಲವರ ಕೆಲಸಗಳಿಗೆ ಕಡಿವಾಣಹಾಕುವ, ಹೆಚ್ಚಿನ ಖರ್ಚುವೆಚ್ಚಗಳಿಗೆ ಹಣವನ್ನು ದೇಶದ ಬೊಕ್ಕಸದಿಂದ ಇಸಿದುಕೊಳ್ಳುವ ಕಾಲ ಇದಾಗಿದೆ. ಒಂದುಕಡೆ ದುಡಿಮೆಯಲ್ಲಿ ಆಲಸ್ಯ ಉಂಟುಮಾಡಿ ಆ ಮೂಲಕ ಅಲ್ಲಿ ಜನಸಾಮಾನ್ಯರ ಆದಾಯ ಕುಂಠಿತವಾಗುವುದು ಮತ್ತೊಂದುಕಡೆ ದೇಶಕ್ಕೆ ತೆರಿಗೆಯ ಮೂಲಕ ಸಂದ ಜನರ ಹಣವನ್ನು ಇದಕ್ಕಾಗಿ ಪೋಲುಮಾಡುವುದು ಅಷ್ಟಾಗಿ ಬೇಕಿತ್ತೇ ಎಂಬುದು ಪ್ರಶ್ನೆ.

ದೇಶವನ್ನು ಗಡಿಯಲ್ಲಿ ನಿಂತು ಕಾಯುವ ಯೋಧನಿಗಾಗಲೀ ದೇಶದ ವೈಜ್ಞಾನಿಕ ರಂಗದಲ್ಲಿ ಪ್ರಗತಿ ಸಾಧಿಸಿದ ಡಾ| ಅಬ್ದುಲ್ ಕಲಾಂ ಥರದ ವ್ಯಕ್ತಿಗಳಿಗಾಗಲೀ ಸಿಗದ ಪ್ರತಿಷ್ಠೆಯ ಗೌರವ ಪುರಸ್ಕಾರಗಳು ಕ್ರಿಕೆಟಿಗರಿಗೆ ಸಲ್ಲುತ್ತಿರುವುದು ನಿಜಕ್ಕೂ ಖಂಡನೀಯ. ಕ್ರಿಕೆಟಿಗರ ಹೆಸರನ್ನು ಪ್ರಮುಖ ರಸ್ತೆಗಳಿಗೆ ಅಲ್ಲಿನ ವೃತ್ತಗಳಿಗೆ ಇಡುವುದು, ಅವರಿಗೆ ಪದ್ಮ ಪ್ರಶಸ್ತಿಗಳನ್ನೆಲ್ಲಾ ಕೊಡಮಾಡುವುದು ಯಾಕಾಗಿ ನಡೆಯುತ್ತದೋ ತಿಳಿಯದಾಗಿದೆ. ಆಟಗಾರರಿಗೆ ನಗರಗಳಲ್ಲಿ ವಸತಿ ನಿವೇಶನಗಳು, ಎಲ್ಲಾ ಸೌಲಭ್ಯಗಳೂ ಮೊದಲ ಆದ್ಯತೆಯಲ್ಲಿ ಸಿಗುವುದಾದರೆ ಈ ದೇಶಕಂಡ ಕೆಲವು ಸಜ್ಜನರು ಮಡಿದಾಗ ಅವರ ಅಂತ್ಯ ಸಂಸ್ಕಾರಕ್ಕೂ ಅವರ ಖಾತೆಯಲ್ಲಿ ಕಿಂಚಿತ್ತೂ ಹಣ ಇರದಿರುವುದಕ್ಕೆ ದಿ|ಲಾಲ್ ಬಹಾದ್ದೂರ್ ಶಾಸ್ತ್ರಿ ಉದಾಹರಣೆಯಾಗಿದ್ದಾರೆ. ಕರ್ನಾಟಕದ ರಾಜಕಾರಣದಲ್ಲೂ ತಮ್ಮ ವಂಶಕ್ಕೇ ಎಲ್ಲಾ ಇರಲಿ ಎಂಬುದನ್ನು ಬಿಟ್ಟು ನಿಸ್ವಾರ್ಥರಾಗಿ ನಿಸ್ಪೃಹರಾಗಿ ಆಡಳಿತ ನಡೆಸಿದ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ ಈ ಥರದ ಬೆರಳೆಣಿಕೆಯಷ್ಟು ಜನ ಸಿಗುತ್ತಾರೆ!

ಜನಜೀವನಕ್ಕೆ ಸಂಗೀತ, ಸಾಹಿತ್ಯ, ಕಲೆ ಮೊದಲಾದ ಎಲ್ಲಾ ರಂಗಗಳೂ ಕ್ರಿಕೆಟ್ಟಿಗಿಂತ ಹೆಚ್ಚಿನ ಕೊಡುಗೆಗಳನ್ನು ಕೊಟ್ಟ ದಾಖಲೆ ಸಿಗುತ್ತದೆ. ಅಲ್ಲಿಯೂ ಕೂಡ ಚಲನಚಿತ್ರ ರಂಗದ ನಟ/ನಟಿಯರಿಗೆ ಸಿಗುವ ಗೌರವ/ಪುರಸ್ಕಾರಗಳನ್ನು ಅವಲೋಕಿಸಿದರೆ ಅವರೇನು ಸ್ವರ್ಗದಿಂದ ಧರೆಗಿಳಿದು ಸಮಾಜಸೇವೆಗೆ ಬಂದರೇ ಎಂಬುದು ಕಾಡುತ್ತದೆ. ಬೇರೇ ರಂಗಗಳಲ್ಲಿ ದುಡಿಯುವ ವ್ಯಕ್ತಿಗಳಿಗೆ ಗಣನೀಯವಾದ ಯಾವುದೇ ಮಾನ್ಯತೆಯೇ ಕಾಣಸಿಗುವುದಿಲ್ಲ. ಮೊನ್ನೆ ಒಂದು ಚಲಚಿತ್ರದ ಹಾಡುಗಳ ಧ್ವನಿಫಲಕದ ಬಿಡುಗಡೆಯ ಸಲುವಾಗಿ ನಿರ್ಮಾಪಕ ಮತ್ತು ನಟೀಮಣಿಯ ನಡುವೆ ನಡೆದ ಪ್ರಹಸನ ಎಲ್ಲಿಯವರೆಗೆ ಪ್ರಚಾರಪಡೆಯಿತು ಎಂಬುದು ಎಲ್ಲರಿಗೂ ತಿಳಿದದ್ದೇ ಆಗಿದೆ. ಕೈಲಾಗದ ನಿರ್ಮಾಪಕರಿಗೆ ಸಾಲಮಾಡಿ ಚಿತ್ರಮಾಡು ಎಂದು ಯಾರು ಹೇಳುತ್ತಾರೆ ? ರಾಜಕೀಯದ ಹಿನ್ನೆಲೆಯುಳ್ಳ ನಟ/ನಟಿಯರಿಗೆ ಕೇವಲ ಶೋಕಿಗಾಗಿ ನಟಿಸಲು ಬಂದವರಿಗೆ ನಿರ್ಮಾಪಕನನ್ನು ಉದ್ಧಾರಮಾಡಲು ಸಹಾಯಮಾಡು ಎಂದು ಯಾರಾದರೂ ಹೇಳಿದ್ದಾರಾ ? ದಶಗುಣಗಳನ್ನು ತನ್ನ ದಶಾವತಾರಗಳ ಮೂಲಕ ಆಗಾಗ ಹೊರಹೊಮ್ಮಿಸಿ ಯಾವಾಗಲೂ ಪ್ರಚಾರ ಗಿಟ್ಟಿಸುವ ವೈಖರಿ ಹೊಂದಿರುವ ನಟಿಯನ್ನೂ ಹೇಗೋ ಒಂದು ಹಂತಕ್ಕೆ ತಂದು ನಿಲ್ಲಿಸಿ ತನ್ನ ಸಿನಿಮಾ ವಿತರಣೆಯಾದ ಬಳಿಕ ಬಂದ ಹಣದಲ್ಲಿ ಸಾಲವನ್ನು ತೀರಿಸಿದರಾಯ್ತು ಎಂದುಕೊಂಡು ತಿರುಗುತ್ತಿದ್ದ ನಿರ್ಮಾಪಕನಿಗೆ ಆಕೆ ವಿಧಿಸಿದ ’ದಂಡ’ವನ್ನೂ ನೋಡಿ ನಿಜಕ್ಕೂ ಆ ಸಿನಿಮಾಗೆ ಹೆಸರು ಅನ್ವರ್ಥವಾಗಿದೆ ಎನಿಸಲಿಲ್ಲವೇ?

ಒಟ್ಟರೆಯಾಗಿ ನಾವು ತಿಳಿಯಬೇಕಾದ ವಿಚಾರ ಇಷ್ಟು: ಕ್ರಿಕೆಟಿಗರಾಗಲೀ ಕಲಾವಿದರಾಗಲೀ ದೇವಲೋಕದಿಂದ ಧರೆಗಿಳಿದವರಲ್ಲ. ಅವರೆಲ್ಲಾ ನಮ್ಮ ನಿಮ್ಮಂತೆಯೇ ಇರುವವರು. ಜೀವನೋಪಾಯಕ್ಕಾಗಿ ಆ ರಂಗಗಳಲ್ಲಿ ತೊಡಗಿಕೊಂಡವರಿಗೆ ಹಣೆಬರಹ ಗಟ್ಟಿ ಇದ್ದು ಆದ್ಯತೆ/ಮಾನ್ಯತೆ ಗಳಿಸಿದವರು ಅವರಾಗಿದ್ದಾರೆ/ಗುತ್ತಾರೆ. ಒಮ್ಮೆ ಹೆಸರು ಪಡೆದರೆ ಅವರು ತಾವು ಆಡಿದ್ದೇ ಆಟ ಎನ್ನುವದನ್ನು ಸಮಾಜದಲ್ಲಿ ನಾವು ಈಗ ಕಾಣುತ್ತಿದ್ದೇವೆ. ಜೀವನೋಪಾಯಕ್ಕಾಗಿ ಆಸಕ್ತ ವಿಷಯದಲ್ಲಿ ತೊಡಗಿಕೊಂಡರೆ ಅದೂ ಕೂಡ ಅವರ ವೃತ್ತಿಯೇ ಹೊರತು ಅದು ದೇಶಕ್ಕೆ ಅವರು ಸಲ್ಲಿಸುವ ಸೇವೆ ಎನಿಸುವುದಿಲ್ಲ! ನಮ್ಮದೊಂದು ಪರಿಪಾಟ--ಯಾವನೋ ಏನನ್ನೋ ಮಾಡಲಿ " ಅವರ ಕೊಡುಗೆ ಅಪಾರ " ಎನ್ನುವ ಸ್ವಭಾವ ನಮ್ಮದು. ಕೊಡುಗೆ ಏನು ? ಸಚಿನ್ ಸೆಂಚುರಿ ಬಾರಿಸಿದ್ದೇ ? ಅದರಿಂದ ದೇಶದ ಬಡತನದ ನಿರ್ಮೂಲನೆಯಾಯಿತೇ? ಜನರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲ್ಪಟ್ಟಿತೇ ?

ಐಶ್ವರ್ಯ ರೈ ಜಗದೇಕ ಸುಂದರಿ ಎಂಬ ಪಟ್ಟವನ್ನು ಪಡೆದಾಗ ಕೇವಲ ಮಾಧ್ಯಮದೆದುರು ಅನಾಥಮಕ್ಕಳೊಡನೆ ನಿಂತು ಛಾಯಾಚಿತ್ರ ತೆಗೆಸಿಕೊಂಡಿದ್ದು ಬಿಟ್ಟರೆ ಆಕೆ "ಸಕ್ರಿಯವಾಗಿ ಅನಾಥ ಮಕ್ಕಳ ಸೇವೆಮಾಡುತ್ತೇನೆ " ಎಂದಿದ್ದು ಜಗತ್ತಿನ ಅದ್ಭುತ ಸುಳ್ಳುಗಳಲ್ಲಿ ಒಂದಾಗಿದೆ. ತಮ್ಮ ತೀಟೆ ತೀರಿಸಿಕೊಳ್ಳುವ ಕೆಲವು ಇಂತಹ ಸೆಲೆಬ್ರಿಟಿಗಳೆನಿಸಿದವರು ಆನೆ ಹೂಸು ಬಿಟ್ಟಹಾಗೇ ಆಡುವ ಮಾತುಗಳು ಮಾತ್ರ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತವೆ. ಆನೆ ಯಾವಾಗ ಬಂತು ಎಲ್ಲಿ ಹೂಸು ಬಿಟ್ಟಿತು ಎಂಬುದು ನಮಗೆ ಗೊತ್ತೇ ಆಗುವುದಿಲ್ಲ! ಕೇವಲ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಹೆಚ್ಚಿನ ಗಳಿಕೆಗಾಗಿ, ತಮಗೆ ಹೆಚ್ಚಿನ ಮಾನ ಸನ್ಮಾನ ಬಿರುದು ಬಾವಲಿ ಅಬ್ಬರದ ಪ್ರಚಾರ ಸಿಗಲಾಗಿ ಮಾಡುವ ಇಂತಹ ಸೆಲೆಬ್ರಿಟಿಗಳ ’ಗಿಮಿಕ್ಸ್’ ನಮ್ಮಂತಹ ಪೆದ್ದುಗಳಿಗೆ ನಿಜವೇನೋ ಅನ್ನಿಸಿಬಿಡುತ್ತದೆ. ಕನ್ನಡದ ಬಗ್ಗೆ ಕಿಂಚಿತ್ ಆಸಕ್ತಿಯನ್ನೂ ಇಟ್ಟುಕೊಳ್ಳದ ಐಶ್ವರ್ಯ ರೈಯ್ಯನ್ನು ವಿಶ್ವಕನ್ನಡ ವೇದಿಕೆಯಲ್ಲಿ ಪಕ್ಕದಲ್ಲೇ ಕೂರಿಸಿಕೊಂಡು ನೇತಾರರು ಪ್ರಪುಲ್ಲರಾಗುತ್ತಿದ್ದರೆ, ಸಭೆಯಲ್ಲಿ ಅಮ್ಮನಿಂದ ಮೊನ್ನೆಯ ಸಮ್ಮೇಳನಕ್ಕಾಗಿಯಷ್ಟೇ ಕಲಿತ ಒಂದೆರಡು ಗಿಣಿಪಾಠವನ್ನು ಉಲಿದ ಆಕೆಯನ್ನು ನೋಡುತ್ತಾ ನಗಬೇಕೋ ಅಳಬೇಕೋ ಎಂದು ತಿಳಿಯದ ಸ್ಥಿತಿ ನಮ್ಮಲ್ಲಿ ಕೆಲವರದಾಗಿತ್ತು.

ಅಸಾಮಾನ್ಯ ರಾಜಕಾರಣಿಗಳೇ,[ ನಮಗೆ ಗೊತ್ತು: ನಿಮಗೆ ಅಸಾಮಾನ್ಯರು ಎಂಬ ಪದವೇ ಯೋಗ್ಯವೆಂಬುದು!] ದೇಶದ ಒಳಿತಿಗಾಗಿ, ದೇಶದ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಹಾಗೂ ಇನ್ನಿತರ ರಂಗಗಳಲ್ಲಿ ತೊಡಗಿಸಿಕೊಂಡವರಿಗೆ, ಕಷ್ಟವೋ ಸುಖವೋ ತನ್ನನ್ನು ತೊಡಗಿಸಿಕೊಂಡು ಮಳೆಬಿಸಿಲುಚಳಿಯೆನ್ನದೇ ಪ್ರಕೃತಿಯನ್ನೇ ಅವಲಂಬಿಸಿ ಬಿತ್ತಿ ಬೆಳೆದು ಜನತೆಗೆ ನಿಜವಾಗಿ ಅನ್ನವನ್ನು ನೀಡುವ ಮೇಟಿವಿದ್ಯೆಯ ಸಾಧಕರಿಗೆ ಆದ್ಯತೆ ಸಿಗಲಿ, ಸನ್ಮಾನ ಸಿಗಲಿ. ದೇಶಕ್ಕೆ ದೇಶವೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದರೆ ಮುನ್ನುಗ್ಗುವವರು ಇಂಥವರೇ ಹೊರತು ಆಟಗಾರರೋ ಕಲಾವಿದರೋ ಸೆಲೆಬ್ರಿಟಿಗಳೋ ಅಲ್ಲ. ಯಾವುದಕ್ಕೆ ಎಷ್ಟು ಮಹತ್ವವನ್ನು ಕೊಡಬೇಕೆಂಬುದನ್ನು ಚಾಣಕ್ಯ ನೀತಿಯಿಂದ ಕಲಿತುಕೊಳ್ಳಿ. ನಮ್ಮ ಭಾರತದಲ್ಲಿ ಪೂರ್ವಜರು ತಮ್ಮ ಮುಂದಿನ ಜನಾಂಗಕ್ಕೆ ಉಳಿಸಿಹೋದ ಪಂಚತಂತ್ರದಂಥ ಕಥೆಗಳಿವೆ, ನೀತಿ ಪಾಠಗಳಿವೆ, ಅವುಗಳಲ್ಲೇ ಅಡಗಿರುವ ’ದಂಡ ದಶಗುಣಂ’ ಜನಸಾಮಾನ್ಯರಿಗೆ ದಂಡವಿಧಿಸುವ ಸ್ಥಿತಿ ಬಾರದಿರಲಿ. ಕ್ರಿಕೆಟ್ ಕೇವಲ ಒಂದು ಆಟವಾಗಿರಲಿ, ಅದು ಯುದ್ಧವೂ ಅಲ್ಲ, ಅವರು ಯೋಧರೂ ಅಲ್ಲ, ಆ ಆಟಗಾರರಿಗೆ ಸ್ವಲ್ಪ ಮಾನ್ಯತೆ ಕಮ್ಮಿ ಮಾಡಿ ಇತರ ರಂಗಗಳನ್ನೂ ಲೆಕ್ಕಿಸಿ ಎಂಬುದು ಜನಸಾಮಾನ್ಯನ ಆಡದೇ ಉಳಿದ ಮಾತಾಗಿದೆ.

Monday, March 28, 2011

ನಾ ನಿನ್ನ ಧ್ಯಾನದೊಳಿರಲು ಸದಾ........


ನಾ ನಿನ್ನ ಧ್ಯಾನದೊಳಿರಲು ಸದಾ........

ಮಾನವ ಶರೀರ ಎಷ್ಟು ಅದ್ಭುತವಾಗಿದೆಯೆಂಬುದರ ತಿಳುವಳಿಕೆ ನಮಗೆಲ್ಲಾ ಬರುವುದೇ ಇಲ್ಲ. ನಮ್ಮ ಇವತ್ತಿನ ಯಾವ ಮಾಧ್ಯಮದ ಜ್ಯೋತಿಷಿಗಳಿಗಾಗಲೀ ವಿಜ್ಞಾನಿಗಳಿಗಾಗಲೀ ನಿಲುಕದ ಅತ್ಯುನ್ನತ ಮನೋಸ್ತರವೊಂದಿದೆ ಎಂಬುದು ನೈಷ್ಠಿಕ ತಪೋಬಲದಿಂದ ಮತ್ತು ಸ್ವಾನುಭವದಿಂದ ಗುರುಸ್ಥಾನವನ್ನು ಅಲಂಕರಿಸಿದ ಕೆಲವು ಸನ್ಯಾಸಿಗಳು ಹೇಳುವ ಮಾತು. ಅಷ್ಟಾಂಗಯೋಗದ ಪ್ರಮುಖ ಘಟ್ಟವಾದ ’ಧಾರಣ’ ಹಂತದಲ್ಲಿ ಇಂದ್ರಿಯಗಳು ಮತ್ತು ಮನಸ್ಸನ್ನು ತನ್ನ ಕೈಯ್ಯಲ್ಲಿ ಮಾನವ ಬಂಧಿಯಾಗಿಸಿ ಇಹದ ಹಲವು ಕಾಮನೆಗಳನ್ನು ದಮನಮಾಡಿ ಕೇವಲ ಧ್ಯಾನದಲ್ಲಿ ತನ್ನ ಪ್ರಾಣವಾಯು ಅಥವಾ ಪ್ರಾಣಶಕ್ತಿಯನ್ನು ತಲ್ಲೀನಗೊಳಿಸುತ್ತಾನೆ.

ಧ್ಯಾನವೆಂಬುದುಕ್ಕೆ ಲೌಕಿಕ ವ್ಯವಹಾರದ ಕೆಲವು ಉದಾಹರಣೆಗಳನ್ನು ಕೊಡಬಹುದು. ವಿಜ್ಞಾನಿಯೊಬ್ಬನಿಗೆ ತನ್ನ ಸಂಶೋಧನೆಯಲ್ಲಿ ತಾದಾತ್ಮ್ಯತೆ ಬೇಕಾಗುತ್ತದೆ. ಹಿಡಿದ ಗುರಿಯನ್ನು ತಲ್ಪುವಾಗ ಮಧ್ಯೆ ಬಾಧಕಗಳು ಸಹಜವೇ. ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ನಿವಾರಿಸಿಕೊಂಡು ಮತ್ತೆ ತನ್ನ ಹಾದಿಯಲ್ಲಿ ಮುಂದುವರಿಯುವ ಛಲ ಮತ್ತು ತೊಡಗಿಕೊಳ್ಳುವಿಕೆ ಬೇಕಾಗುತ್ತದೆ. ಕೆಲವೊಮ್ಮೆ ಅದು ಎಷ್ಟರಮಟ್ಟಿಗೆ ಎಂದರೆ ಸಂಶೋಧನೆಯ ಪರಮೋಚ್ಛ ಸ್ಥಿತಿಯಲ್ಲಿ ಹಗಲು-ರಾತ್ರಿ,ಊಟ,ನಿದ್ರೆ ಯಾವುದರ ಪರಿವೆಯೂ ಇರುವುದೇ ಇಲ್ಲ. ಸದಾಕಾಲ ಹಿಡಿದ ಆ ಸೂತ್ರದಮೇಲೇ ಕೆಲಸ! ಕೊನೆಗೂ ಗುರಿ ಸಮರ್ಪಕವಾಗಿದ್ದರೆ, ಸೂತ್ರ ಸಮಂಜಸವಾಗಿದ್ದರೆ ಆ ವ್ಯಕ್ತಿ ಹೊಸದೊಂದು ವಿಷಯವನ್ನು ಜಗತ್ತಿಗೆ ತೋರಿಸಿಕೊಡುವಲ್ಲಿ ಸಫಲನಾಗುತ್ತಾನೆ. ಇದೊಂದು ಧ್ಯಾನವೇ ಸರಿ. ಅದೇ ರೀತಿ ಅಬಾಕಸ್ ಕಲಿತ ಹುಡುಗ/ಹುಡುಗಿ ರಸ್ತೆಯಲ್ಲಿ ಓಡುವ ವಾಹನಗಳ ಮೇಲಿನ ಸಂಖ್ಯೆಗಳನ್ನು ಕೂಡಿಸಿ ಒಟ್ಟೂ ಮೊತ್ತವನ್ನು ಹೇಳಬಲ್ಲರು, ಸಾಮಾನ್ಯರು ಕ್ಯಾಲ್ಕ್ಯುಲೇಟರ್ ಬಳಸಿ ಮಾಡುವ ಗುಣಲಬ್ಧಗಳನ್ನು ಸೇಕಂದಿನಲ್ಲಿ ಅದಕ್ಕೂ ಮೊದಲೇ ತಿಳಿಸಬಲ್ಲರು--ಇದು ಅವರ ಧ್ಯಾನ!

ಪಾಕಶಾಸ್ತ್ರಿಯೊಬ್ಬನಿಗೆ ಬುಂದಿಲಾಡು ಮಾಡುವಾಗಾಗಲೀ ಮೈಸೂರುಪಾಕ ಮಾಡುವಾಗಾಗಲೀ ಅವುಗಳಿಗೆ ಬೇಕಾದ ಮೂಲವಸ್ತುಗಳನ್ನು ಹುರಿದೋ ಕರಿದೋ ಯಾವ ಹದದಲ್ಲಿ ಹೇಗೆ ನಿಲ್ಲಿಸಬೇಕು ಎಂಬುದರ ನಿರೀಕ್ಷೆಯಿರುತ್ತದೆ. ಸ್ವಲ್ಪ ಹೆಚ್ಚುಕಮ್ಮಿಯಾದರೆ ತಯಾರಿಸುವ ಸಿಹಿತಿಂಡಿಯ ರುಚಿ,ಬಣ್ಣ, ಆಕಾರ ಅಥವಾ ವಾಸನೆ ಬದಲಾಗಿಹೋಗುತ್ತದೆ. ಇಲ್ಲಿ ಆಡುಗೆಯಾತ ಆ ವಿಷಯದಲ್ಲಿ ಧ್ಯಾನಾಸಕ್ತನಾಗಿರುತ್ತಾನೆ. ಆಲೆಮನೆಯಲ್ಲಿ ಬೆಲ್ಲವನ್ನು ತಯಾರಿಸುವಾಗ ಕಬ್ಬಿನ ಹಾಲು ಕುದಿದು ಅದರೊಳಗಿನ ನೀರಿನ ಅಂಶ ಆವಿಯಾಗಿ, ನಂತರ ಸಿಹಿಯಂಶ ಬೆಲ್ಲವಾಗಿ ಮಾರ್ಪಡುವ ಸಮಯಬರುತ್ತದೆ; ಈ ಸಮಯದಲ್ಲಿ ಬೆಲ್ಲದ ಪಾಕವನ್ನು ನಿರೀಕ್ಷಿಸುವಾತ ಎತ್ತಲೋ ನೋಡುತ್ತಿದ್ದರೆ ಅದು ಹಾಳಾಗಿ ಹೋಗುತ್ತದೆ. ವಿದ್ಯಾರ್ಜನೆಗೆ ಇಳಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಮನಸ್ಸನ್ನು ಮೊಬೈಲ್ ಕಡೆಗೋ ಫೇಸ್‍ಬುಕ್/ಆರ್ಕುಟ್ ಕಡೆಗೋ ಹರಿಸುತ್ತಾ ಸ್ನೇಹಿತ/ಸ್ನೇಹಿತೆಯರ ಬಳಗದಲ್ಲಿ ಮಜಾ ಉಡಾಯಿಸುತ್ತಿದ್ದರೆ ಪರೀಕ್ಷೆ ಹತ್ತಿರಕ್ಕೆ ಬಂದಾಗ ದಿಗಿಲು ಆವರಿಸುತ್ತದೆ. ಇತ್ತಕಡೆ ಓದಲೂ ಆರದೇ, ಅರ್ಥಮಾಡಿಕೊಳ್ಳಲೂ ಆಗದೇ ಅತ್ತಕಡೆ ಓದದೇ ಇರಲೂ ಆಗದೇ ಮಾನಸಿಕ ಉದ್ವಿಗ್ನತೆಗೆ ಕಾರಣವಾಗುತ್ತದೆ. ಅವರು ಓದುವ ಆ ಧ್ಯಾನಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿದ್ದರೆ ಹಾಗಾಗುವುದಿಲ್ಲ. ಆದರೆ ಓದುವ ಪುಸ್ತಕಗಳಿಗಿಂತಾ ಮೊಬೈಲ್ ಮತ್ತು ಫೇಸ್‍ಬುಕ್/ಗೆಳೆಯರ ಹರಟೆ ಇವೇ ಇಷ್ಟವಾಗುತ್ತವೆ; ಧ್ಯಾನ ಕೆಟ್ಟುಹೋಗುತ್ತದೆ!

ಕಲಾವಿದ ತನ್ಮಯನಾಗಿ ಚಿತ್ರಬಿಡಿಸಿದರೆ ಕಲೆ ನಮ್ಮನ್ನು ಬೆರಗುಗೊಳಿಸುತ್ತದೆ; ಇಲ್ಲವಾದರೆ ಕಲಾವಿದನಿಗೆ ಬೇಸರವಾಗಬಾರದೆಂಬ ಕಾರಣಕ್ಕೆ ’ಚೆನ್ನಾಗಿದೆ’ ಎಂದು ಹೇಳುವ ಪ್ರಸಂಗ ಬರುತ್ತದೆ!ಸಂಗೀತಗಾರ ಕೊಡುವ ಸಂಭಾವನೆಗೆ ಎಂದು ಹಾಡಹೊರಟರೆ ಒಟ್ಟಾರೆ ಅದು ಸಂಗೀತವಾಗುತ್ತದೆಯೇ ಹೊರತು ಜನ ಮನದಣಿಯೇ ಆಸ್ವಾದಿಸುವ ಸಂಗೀತವಾಗಿರುವುದಿಲ್ಲ. ಮಾಧ್ಯಮಗಳಲ್ಲಿ ಹಾಸ್ಯವನ್ನು ಉಣಬಡಿಸುವ ಇಂತಹ ಹಲವು ಕಲಾವಿದರನ್ನು ನಾವು ನೋಡಿದ್ದೇವೆ; ಅವರು ಹೇಳಿದ್ದನ್ನೇ ಮತ್ತೆ ಹೇಳುತ್ತಾ ಸಾಗುತ್ತಾರೆ-ಅದು ಬೇಸರ ತರಿಸುತ್ತದೆ. ಅಲ್ಲಿ ಧ್ಯಾನವಿರುವುದಿಲ್ಲ; ಹಾಸ್ಯ ಯಾಂತ್ರಿಕವಾಗಿ ಹೊರಹೊಮ್ಮುತ್ತಿರುತ್ತದೆ-ಅವರಲ್ಲಿ ಬೇರೇ ಸರಕು ಇರುವುದಿಲ್ಲ ನಮಗೆ ಅದನ್ನೇ ಕೇಳದೇ ವಿಧಿಯಿಲ್ಲ!

ಧ್ಯಾನದಲ್ಲಿ ತೊಡಗಿ ಫಲಪಡೆದ ಕೆಲವು ಜನರನ್ನು ಹೇಳಿದರೆ ಉತ್ತಮವೆನಿಸುತ್ತದೆ. ಕನ್ನಡಭಾಷೆಗೆ ಆಂಗ್ಲಭಾಷಿಕನೊಬ್ಬ ಶಬ್ದಕೋಶ ರಚಿಸುವುದೆಂದರೆ ಬಹುಶಃ ಅದು ಕಷ್ಟಸಾಧ್ಯದ ಕೆಲಸ; ಬಹುತೇಕರಿಗೆ ಇಷ್ಟವಾಗುವ ಕಾರ್ಯವಲ್ಲ. ಕಿಟೆಲ್ ಎನ್ನುವ ವ್ಯಕ್ತಿ ಭಾರತಕ್ಕೆ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು ತನ್ನ ಸತತ ಧ್ಯಾನದಿಂದ ಅಂತಹ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ ಎಂಬುದು ಇತಿಹಾಸದ ದಾಖಲೆ! ಇವತ್ತು ಗಿನ್ನೆಸ್ ದಾಖಲೆಗೋಸ್ಕರ ಯಾರ್ಯಾರೋ ಬೇಡದ್ದನ್ನೆಲ್ಲಾ ಮಾಡುತ್ತಾರೆ. ಆದರೆ ಕೇವಲ ದಾಖಲೆ-ಪುರಸ್ಕಾರಗಳಿಗಾಗಿಯಲ್ಲದೇ ಸಮಾಜದ ಹಿತಕ್ಕಾಗಿ ಇಂತಹ ಸಾಧನೆಗಳನ್ನು ಮಾಡುವವರು ಅತಿವಿರಳ.

ಹಾಗಾದರೆ ಧ್ಯಾನ ಇಷ್ಟು ಸುಲಭವಾಗಿದ್ದರೆ ಮತ್ತೇತಕ್ಕೆ ಅಂತಹ ಇಂದ್ರಿಯ ನಿಗ್ರಹದಂತಹ ಕಷ್ಟದ ಕೆಲಸ ಎಂಬ ಪ್ರಶ್ನೆ ಕಾಡುತ್ತದೆಯಲ್ಲವೇ? ಆದರೆ ಲೌಕಿಕವಾದ ಈ ಧ್ಯಾನ ಕೇವಲ ಆ ಯಾ ಗುರಿಗೆ ಸೀಮಿತವಾಗಿರುತ್ತದೆ. ಆದರೆ ಮನಸ್ಸನ್ನು ಎಲ್ಲೂ ಹೋಗದಂತೇ ಅಂದರೆ ಯಾವ ಆಲೋಚನೆಗೂ ಒಳಗಾಗದಂತೇ ತಹಂಬದಿಗೆ ತಂದುಕೊಂಡು ತದೇಕಚಿತ್ತನಾಗಿ ಅಲೌಕಿಕವಾಗಿ ನಿರ್ವಿಷಯವಾಗಿ ಧ್ಯಾನಮಾಡುವುದು ಸ್ವಲ್ಪ ಮಹತ್ತರ ಕೆಲಸ. ಈ ಸ್ಥಾನಕ್ಕೆ ವ್ಯಕ್ತಿ ಏರಿದಾಗ ಜಗತ್ತಿನಲ್ಲಿ ಆತನಿಗೆ ದ್ವೇಷಿಕರಿಲ್ಲ, ದೇಶಕಾಲದ ಗಡಿಮಿತಿಯಿಲ್ಲ, ಬಂಧು-ಭಗಿನಿ ಎಂಬ ಭಾವ ಬಂಧುರವಿಲ್ಲ! ಹಾಗಂತ ಆತ ಇಡೀ ವಿಶ್ವಕ್ಕೇ ಇಡೀ ಮನುಕುಲಕ್ಕೇ ಒಳಿತನ್ನು ಬಯಸುವ ವ್ಯಕ್ತಿಯಾಗುತ್ತಾನೆ. ಈ ಹಂತವನ್ನು ತಲ್ಪುವಾಗ ಆತನಿಗೇ ಅರಿವಿಲ್ಲದೇ ಹಲವು ಪವಾಡಗಳು ಅತನಿಂದ ಘಟಿಸುತ್ತವೆ. ಹಾಗೆ ಘಟಿಸುವ ಪವಾಡಗಳಿಗೆ ಆತ ಆಕರ್ಷಿತನಾಗಿಬಿಟ್ಟರೆ ಅಲ್ಲಿಗೆ ಆ ಧ್ಯಾನ ನಿಂತುಹೋಗುತ್ತದೆ. ಅಲ್ಲಿಯೂ ಮಧ್ಯೆ ಮಧ್ಯೆ ಬರಬಹುದಾದ ಇಂತಹ ಪವಾಡಗಳೇ ಮೊದಲಾದ ಅಡೆತಡೆಗಳನ್ನು ಕಡೆಗಣಿಸಿ ಧ್ಯಾನದಲ್ಲಿ ಮುನ್ನಡೆದರೆ ಆತ ಸಾಧಕನಾಗುತ್ತಾನೆ, ಸಿದ್ಧಪುರುಷನಾಗುತ್ತಾನೆ, ಸನ್ಯಾಸಿಯಾಗುತ್ತಾನೆ. ಇದಕ್ಕೆ ಯಾವುದೇ ಧರ್ಮ,ಮತಗಳ ಲೇಪವಿಲ್ಲ, ಲೋಪವೂ ಇಲ್ಲ. ಧ್ಯಾನಾಸಕ್ತನಾದ ವ್ಯಕ್ತಿ ಕ್ರಮೇಣ ತನ್ನ ಸತತ ಪರಿಕ್ರಮದಿಂದ ಸಮಾಧಿ ಸ್ಥಿತಿಗೆ ತಲುಪುತ್ತಾನೆ!

ಸಮಾಧಿ ಎಂದರೆ ಗೋರಿಯಲ್ಲ! ಇಲ್ಲಿ ’ಸಮಾಧಿ’ ಎಂಬುದು ಯೋಗದ ಕೊನೆಯ ಹಂತ. ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಗೆ ಬಾಹ್ಯ ಪ್ರಪಂಚದ ಅರಿವಿರುವುದಿಲ್ಲ. ಆತ ಕುಳಿತಿರಲಿ/ಮಲಗಿರಲಿ ಆತನ ಶರೀರ ನಿಶ್ಚಲವಾಗಿರುತ್ತದೆ-ನೋಡುಗರಿಗೆ ವ್ಯಕ್ತಿ ಸತ್ತಿರುವಂತೇ ಭಾಸವಾಗುತ್ತದೆ. ಆದರೆ ವಿಚಿತ್ರವೆಂದರೆ ಸಮಾಧಿ ಸ್ಥಿತಿಯಲ್ಲಿರುವ ವ್ಯಕ್ತಿಯ ಭೌತಿಕ ಶರೀರವನ್ನು ಪರಿಸರವೇ ಸಂರಕ್ಷಿಸುತ್ತದೆ. ಆತನಿಗೆ ಹಸಿವು,ನೀರಡಿಕೆ, ಆಯಾಸ, ನಿದ್ದೆ, ಬಹಿರ್ದೆಶೆಗಳ ಗಣನೆ ಇರುವುದಿಲ್ಲ- ಬೇಕಾಗಿರುವುದೂ ಇಲ್ಲ. ಆ ಕಾಲದಲ್ಲಿ ಆತ ’ಆನಂದಲೋಕ’ದ ದ್ವಾರದಲ್ಲಿ ನಿಂತಿರುತ್ತಾನೆ. ಒಂದೊಮ್ಮೆ ಆತನ ಸಾಧನೆ ಅತ್ಯುನ್ನತವಾಗಿದ್ದರೆ ಆ ಸ್ಥಿತಿಯಲ್ಲೇ ಆತ ಪರಮಾನಂದವನ್ನು ಪಡೆಯಲು ಆರಂಭಿಸುತ್ತಾನೆ.

ಪರಮಾನಂದವೆಂದು ಅಂದುಕೊಳ್ಳುವ ಹಲವು ನಮ್ಮ ಲೌಕಿಕ ಘಟನೆಗಳು ನಿಜಕ್ಕೂ ಆ ಶಬ್ದದ ಬಳಕೆಗೆ ಅರ್ಹವಲ್ಲ! " ಎಂಥಾ ಬಿಸಿಲು ಮಾರಾಯಾ ದಾರಿಯಲ್ಲಿ ಒಳ್ಳೇ ಕಬ್ಬಿನಹಾಲು ಎಳೆನೀರು ಎಲ್ಲಾ ಸಿಕ್ತು...ಕುಡಿದುಬಿಟ್ಟೆ..ಪರಮಾನಂದವಾಯ್ತು" ಎಂದು ನಾವಂದುಕೊಳ್ಳುವುದಾಗಲೀ, " ನಮ್ಮ ಮಗ-ಮಗಳು ಎಲ್ಲಾ ಚೆನ್ನಾಗಿ ಓದಿ ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದು ನಮಗೆ ಪರಮಾನಂದ " ಎನ್ನುವ ತಂದೆ-ತಾಯಿಗಳದ್ದಾಗಲೀ, " ಈ ಸರ್ತಿ ನಮ್ಮ ಸ್ಕೂಲ್‍ಗೇ ಪ್ರಥಮ ಬಹುಮಾನ ಬಂದಿದ್ದು ನಮಗೆ ಪರಮಾನಂದ ತಂದಿದೆ " ಎಂಬ ಶಾಲೆಯ ಸಮಿತಿಯದಾಗಲೀ ನಿಜವಾದ ಪರಮಾನಂದವಲ್ಲ. ಇಲ್ಲಿರುವ ಎಲ್ಲಾ ಆನಂದಕರ ಸನ್ನಿವೇಶಗಳೂ ಘಟನೆಗಳೂ ಕೇವಲ ಕ್ಷಣಿಕ! ಗಿನ್ನೆಸ್ ದಾಖಲೆಯ ವೀರನೊಬ್ಬನ ’ಪರಮಾನಂದ’ ಇನ್ನೊಬ್ಬ ಆ ದಾಖಲೆಯನ್ನು ಮುರಿಯುವವರೆಗೆ, ಜಪಾನಿನಲ್ಲಿ ನೆಲೆಸಿರುವ ಮಕ್ಕಳನ್ನು ಕಂಡು ಅನಿಭವಿಸುವ ’ಪರಮಾನಂದ’ ಭೂಕಂಪ ಸಂಭವಿಸುವವರೆಗೆ, ತಾನೇ ಸುಂದರಿ ಎಂದು ’ಡ್ರೀಮ್ ಗರ್ಲ್’ ಪಟ್ಟಪಡೆದ ಹೆಣ್ಣಿನ ’ಪರಮಾನಂದ’ ಮುಖದ ಚರ್ಮ ಸುಕ್ಕುಗಟ್ಟುವವರೆಗೆ,ಮೊನ್ನೆ ಮೊನ್ನೆಯವರೆಗೆ ನಾಯಕಿಯಾಗಿ ನಾಚುತ್ತಾ ಬಳುಕುತ್ತಾ ಬಿಂಕದ ಬೆಡಗು ಮೆರೆದ ನಟಿಯ ’ಪರಮಾನಂದ’ ಅಮ್ಮನ ಪಾತ್ರವನ್ನು ಅನಿವಾರ್ಯವಾಗಿ ಒಪ್ಪಿ ಮಾಡಬೇಕಾದ ನೈಜಸ್ಥಿತಿ ತಲುಪುವವರೆಗೆ, ೧೯೮೫-೮೬ ರಲ್ಲಿ ಹೆಮ್ಮೆಯಿಂದ ಪರರಿಗೆ ತೋರಿಸಲು ತಮ್ಮ ಶ್ರೀಮಂತಿಕೆಯ ದ್ಯೋತಕವಾಗಿ ’ಪ್ರೀಮಿಯರ್ ಪದ್ಮಿನಿ’ ಕರೀದಿಸಿದಮ್ ’ಪರಮಾನಂದ’ಇದ್ದಿದ್ದು ಅಕ್ಕ-ಪಕ್ಕದವರು ಸ್ಯಾಂಟ್ರೋ,ಫೋರ್ಡ್, ಸ್ಕಾರ್ಪಿಯೋ,ಇನ್ನೊವಾ, ಇನ್ಯಾವುದೊ ನೋವಾ ಕೊಳ್ಳುವವರೆಗೆ! ತನ್ನನ್ನು ಬಿಟ್ಟರೆ ಇನ್ನೊಬ್ಬ ಉದ್ದಿಮೆದಾರನಿಲ್ಲ ಎಂಬ ಬೆಳವಣಿಗೆ ಮತ್ತೊಬ್ಬ ಉದ್ದಿಮೆದಾರ ಮೊದಲಿನಾತನಿಗಿಂತ ಹೆಚ್ಚಿಗೆ ಬೆಳೆಯುವವರೆಗೆ---ಹೀಗೇ ಲೌಕಿಕದ ಯಾವುದೇ ಸಾಧನೆ ತೆಗೆದುಕೊಳ್ಳಿ ಅದು ಶಾಶ್ವತವಲ್ಲ! ಇದು ಕೇವಲ ಲೌಕಿಕಾನಂದವೇ ಹೊರತು ಪರಮಾನಂದವಲ್ಲ.

ಪರಮಾನಂದದ ಸ್ಥಿತಿ ತಲುಪಿದ ವ್ಯಕ್ತಿಯ ಸಾಧನೆಯನ್ನು ಮುರಿಯುವ ಮತ್ತೊಬ್ಬ ಹುಟ್ಟುವುದಿಲ್ಲ! ಅಲ್ಲಿ ಯಾವುದೇ ವಿಷಯಕ್ಕೂ ಪೈಪೋಟಿಯಿಲ್ಲ; ವಿಷಯವಸ್ತುಗಳೇ ಇಲ್ಲ! ಅಂತಹ ಪರಮಾನಂದ ಸ್ಥಿತಿಯನ್ನು ತಲುಪುವುದು ಸಾಧಾರಣ ಧ್ಯಾನದಿಂದ ಸಾಧ್ಯವಿಲ್ಲ. ಪ್ರಯತ್ನಿಸಿ ಪ್ರಯತ್ನಿಸಿ ಪ್ರಯತ್ನಿಸಿ ಧ್ಯಾನವನ್ನು ಅಂತಹ ಮಟ್ಟಕ್ಕೆ ಬೆಳೆಸಿದರೆ, ನಡೆಸಿದರೆ ಬಹಳ ನಿಧಾನಗತಿಯಲ್ಲಿ ಸಿಗುವ ಅತ್ಯುತ್ಕೃಷ್ಟ ಫಲ ಅದು. ಆ ಸಾಧಕ ಜಗತ್ತಿನ ಯಾವುದೇ ಭಾಷೆಯನ್ನೂ ಅಧ್ಯಯನ ಮಾಡದೇ ಬಳಸಬಲ್ಲ! ಯಾವ ಧರ್ಮಗ್ರಂಥವನ್ನಾದರೂ ಓದದೇ ಹೇಳಬಲ್ಲ! ಯಾವ ತಂತ್ರಜ್ಞಾನವನ್ನಾದರೂ ಕುಳಿತಲ್ಲೇ ನಿಯೋಜಿಸಬಲ್ಲ-ನಿಯಂತ್ರಿಸಬಲ್ಲ! ಅಂತಹ ಅಸಾಧಾರಣ ಶಕ್ತಿ ಒದಗಿಬರುತ್ತದೆ. ಅಂತಹ ಶಕ್ತಿಯನ್ನು ಪಡೆದ ಸನ್ಯಾಸಿಗಳು ಲೌಕಿಕವಾಗಿ ಇತರರ ಬಳಲುವಿಕೆಗಳನ್ನು ಪರಿಗಣಿಸಿ, ಅವರ ನೋವುಗಳನ್ನು ತಾವು ಸ್ವೀಕರಿಸಿ ಅನುಭವಿಸಿ ತಮ್ಮ ಧ್ಯಾನದ ಶಕ್ತಿಯ ಫಲದಿಂದ ಜನಸಾಮಾನ್ಯರನೇಕರ ರೋಗರುಜಿನ-ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ನಿಗ್ರಹಾನುಗ್ರಹ ಸಮರ್ಥರು ಎನ್ನುತ್ತೇವೆ.

ಧ್ಯಾನದ ಸ್ಥಿತಿ ಎಣ್ಣೆಗಂಬ ಏರಿದಂತೇ ಇರುತ್ತದೆ. ಅದನ್ನು ನಾವು ಏರಿದಷ್ಟೂ ಯಾರೋ ನಮಗೆ ಮತ್ತಷ್ಟು ಎಣ್ಣೆಯನ್ನು ಸುರಿದು ಜಾರುವಂತೇ ಮಾಡುತ್ತಿದ್ದಾರೆನ್ನುವಂತಹ ಭಾಸವಾಗುತ್ತದೆ. ಜಾರುಗಂಬವನ್ನು ಮಲ್ಲಯುದ್ಧ ಪರಿಣತರು ಬಿಟ್ಟೂ ಬಿಡದೇ ಏರುವಂತೇ ಧ್ಯಾನವೆಂದ ಮಲ್ಲಗಂಬವನ್ನು ನಾವು ಏರಲು ಪ್ರಯತ್ನಿಸುವುದೇ ನಮ್ಮೊಳಗೆ ಕುಳಿತ ಪ್ರಾಣವಾಯುವಿನ ಅಥವಾ ಪ್ರಾಣಶಕ್ತಿಯ ಅರಿಯುವಿಕೆಗಾಗಿ! ಇಂತಹ ಪ್ರಾಣಶಕ್ತಿಯ ಪರಿಪೂರ್ಣ ಅರಿವು ನಮಗಾದರೆ ಅದೇ ಆತ್ಮಸಾಕ್ಷಾತ್ಕಾರ. ಈ ಧ್ಯಾನದ ಮಾರ್ಗ ಎಲ್ಲರಿಗೂ ಹಿಡಿಸುವುದಿಲ್ಲ. ಯಾಕೆಂದರೆ ಅದು ಕ್ಷಣಿಕಸುಖವನ್ನು ನೀಡುವ ಮಾರ್ಗವಲ್ಲ. ಧ್ಯಾನ ಆಯುರ್ವೇದದಂತೇ ಬಹಳ ಪರಿಣಾಮಕಾರಿ. ಆದರೆ ಅಲೋಪಥಿ ಚಿಕಿತ್ಸೆಯ ಕ್ಷಣಿಕ ಪರಿಣಾಮವನ್ನು ಮೆಚ್ಚಿಕೊಂಡವರಿಗೆ ಆಯುರ್ವೇದದ ಮಹತ್ವ ಅರಿವಿಗೆ ಬಾರದಲ್ಲಾ ಹೀಗಾಗಿ ’ನಮಗೆ ಪೂಜೆ ಧ್ಯಾನ ಅಂದ್ರೆಲ್ಲಾ ಆಸಕ್ತಿಯಿಲ್ಲ... ನಮ್ಮ ಕೆಲ್ಸಾಯ್ತು ನಾವಾಯ್ತು...ನಾವು ಮಾಡೋ ಕೆಲ್ಸದಲ್ಲೇ ದೇವರು ಇದ್ದಾನೆ’ ಎನ್ನುವವರಿದ್ದಾರೆ. ಅದೂ ಸರಿಯೇ ಆದರೆ ಅವರು ಪರಮಾನಂದಕ್ಕೆ ಅರ್ಹರಲ್ಲ. ಅವರು ಮಾಡುವ ಕೆಲಸದಲ್ಲಿ ದೇವರು ಎಂಬ ಶಕ್ತಿ ಮೆಚ್ಚುವಂತೇ ನಡೆದರೆ ಆ ಕೆಲಸದಲ್ಲಿ ಅವರಿಗೆ ಔನ್ನತ್ಯ ಬರಬಹುದೇ ವಿನಃ ಅದಕ್ಕೂ ಮೀರಿದ ಸಾಧನೆ ಅವರದಾಗುವುದಿಲ್ಲ. ಮೇರೆ ಮೀರಿದ ನಿಜವಾದ ಆನಂದದ ಅನುಭೂತಿಗೆ ಅವರು ಪಾತ್ರರಾಗುವುದಿಲ್ಲ.

ಲೌಕಿಕವಾಗಿ ನಾವು ಯಾವುದೇ ಕೆಲಸದಲ್ಲಿ ತೊಡಗಿದ್ದರೂ ಒಮ್ಮೆ ಯೋಚಿಸಿ ನೋಡಿ: ಅದು ನಮ್ಮ ಜನ್ಮಾಂತರದ ಕರ್ಮಬಂಧನವೇ ಹೊರತು ನಾವಾಗಿ ನಾವು ಆಯ್ದುಕೊಂಡ ಪ್ರದೇಶ ಇದಲ್ಲ. ಯಾರೋ ಒಬ್ಬಾತ ಬಡವನಾಗಿ ಇನ್ನೊಬ್ಬ ಸಿರಿವಂತನಾಗಿ ಬದುಕುವುದು ಕೇವಲ ಲೌಕಿಕದ ಪರಿಣಾಮವಲ್ಲ. ಭಿಕ್ಷುಕ ಹಾಗೆ ಭಿಕ್ಷಾಟನೆ ಮಾಡಲು ಆತನ ಜನ್ಮಾಂತರದ ಕರ್ಮಫಲ ಕಾರಣವಾಗಿರುತ್ತದೆ. ಬಡ ಮನೆತನದಲ್ಲೇ ಹುಟ್ಟಿದ ವ್ಯಕ್ತಿಯೊಬ್ಬ ಜಗತ್ತಿನಲ್ಲೇ ಸಿರಿವಂತನಾಗಿ ಮೆರೆಯುವುದು ಶ್ರೀಮಂತನೊಬ್ಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವುದು ಅವರವರ ವಿಧಿ. ಇಂತಹ ಜನ್ಮಗಳೆಷ್ಟನ್ನೋ ಪೂರೈಸಿದರೂ ನಮಗೆ ’ಪರಮಾನಂದದ’ ಸ್ಥಿತಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಹಿಂದೆಮಾಡಿದ ಪಾಪ-ಪುಣ್ಯಗಳನ್ನು ಈ ಜನ್ಮದಲ್ಲೂ ಇಂದು ಮಾಡುತ್ತಿರುವುದನ್ನು ಮುಂದಿನ ಜನ್ಮದಲ್ಲೂ ಅನುಭವಿಸುವವರಾಗಿ ಜನನ-ಮರಣಗಳ ಚಕ್ರದಲ್ಲಿ ಸುತ್ತುತ್ತಿದ್ದೇವೆ. ಒಂದರೆಕ್ಷಣ ಆ ಬಗ್ಗೆ ಆಲೋಚಿಸಿದರೆ ಧ್ಯಾನದ ಮಹತ್ವ ಅರಿವಿಗೆ ಬರುತ್ತದೆ. ಧ್ಯಾನದಲ್ಲಿ ಸ್ವಲ್ಪವೇ ತೊಡಗಿಕೊಂಡರೂ ರಕ್ತದೊತ್ತಡದ ವ್ಯತ್ಯಾಸ, ಹಲವು ಕಾಯಿಲೆಗಳು ನಿವಾರಣೆಯಾದ ದಾಖಲೆಗಳು ಸಿಗುತ್ತವೆ. ನಮ್ಮ ಸುತ್ತ ಯಾರೋ ಏನೋ ಹೇಳಿದರು ಎಂಬುದನ್ನು ಮರೆತು ಧ್ಯಾನಾಸಕ್ತರಾದರೆ ಮನದ ಕ್ಲೇಶಗಳು ನಾಶವಾಗುತ್ತವೆ. ಇದ್ದನ್ನರಿತ ದಾಸರು ಇತರರಿಗೂ ಹೇಳಿದರು...

ನಾ ನಿನ್ನ ಧ್ಯಾನದೊಳಿರಲು ಸದಾ .....ಮಿಕ್ಕ ಹೀನಮಾನವರಿಂದ


ಜಗತ್ತಿಗೇ ಅನ್ವಯಿಸುವ ನಿಜಾರ್ಥದ ಮಾನವ ಧರ್ಮವನ್ನು ತನ್ನ ಅತೀ ಕಮ್ಮೀ ವಯದಲ್ಲೇ ತಿಳಿಸಿಕೊಟ್ಟು ಜಗದ್ಗುರುವೆನಿಸಿದ ಆದಿಶಂಕರರೂ ಇದನ್ನೇ ಹೇಳಿದರು

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ |
ಇಹ ಸಂಸಾರೇ ಬದುದುಸ್ತಾರೇ
ಕೃಪಯಾ ಪಾರೇ ಪಾಹಿ ಮುರಾರೇ ||

ಇಲ್ಲಿ ಮುರಾರಿ ಎಂದಿದ್ದಾರೆ ಎಂದಾಕ್ಷಣ ಕೇವಲ ಹಿಂದೂ ದೇವರೆಂಬ ಭಾವನೆ ಬೇಡ. ಆಯಾಯ ಧರ್ಮಗಳವರೌ ಅವರವರ ದೇವರುಗಳನ್ನು ಆರಾಧಿಸಿಬಹುದು. ಸೂರ್ಯನ ಕಿರಣಗಳ ಮೂಲವನ್ನು ಹುಡುಕುತ್ತಾ ನಡೆದರೆ ಹಲವು ಕೋಟಿ ಕಿರಣಗಳು ಸೇರುವುದು ಕೇವಲ ಸೂರ್ಯನೊಬ್ಬನನ್ನೇ ! ಅದರಂತೇ ಯಾವುದೇ ದೇವರನ್ನು ನೆನೆದರೂ ಅದು ಸಲ್ಲುವುದು ಜಗನ್ನಿಯಾಮಕ ಶಕ್ತಿಯೊಂದಕ್ಕೇ. ಇಂತಹ ಧ್ಯಾನದೆಡೆಗೆ ಒಮ್ಮೆ ಗಮನ ಹರಿಸೋಣ. ಮೇರೇ ಮೀರಿದ ಪರಮಾನಂದ ಎಲ್ಲರಿಗೂ ಸಿಗುವಂತಾಗಲಿ ಎಂದು ಪ್ರಾರ್ಥಿಸೋಣ,


|| ಶುಭಂ ಭ್ರೂಯಾತ್ ||

Monday, March 21, 2011

ನೋಡೀ ಸ್ವಾಮೀ ನೀವೂ ಇರಬೇಕು ಹೀಗೇ......!


ನೋಡೀ ಸ್ವಾಮೀ ನೀವೂ ಇರಬೇಕು ಹೀಗೇ.....!

ಬಿಟ್ಟಿ ಸಿಕ್ಕದ್ದಾದರೂ ಪರವಾಗಿಲ್ಲ
ಕದ್ದದ್ದಾದರೂ ತೊಂದರೆಯಿಲ್ಲ
ನಮಗೆ ಬೇಕಾದ್ದು ಸಿಕ್ಕಿಬಿಟ್ಟರೆ ಆಯಿತು
ನಾವು ಅಷ್ಟು ಸಾದಾ ಸೀದಾ ಜನ !
ರಸ್ತೆಯಲ್ಲಿ ಅಪಘಾತವಾದ ಸ್ಥಳವಿರಲಿ
ಸುನಾಮಿ ನುಗ್ಗಿ ಜನತೆ ತತ್ತರಿಸಿ
ಸಾವಿರಾರು ಮಂದಿ ಸತ್ತು ಹೋಗಿದ್ದರೂ ಪರವಾಗಿಲ್ಲ
ನಮಗೇನಾದರೂ ಸಿಗುವುದೇ ಎಂದು
ಸಂಶೋಧನೆಗೆ ಹೊರಡುವ ’ಸಭ್ಯ’ರು ನಾವು !
ನೆರೆಹಾವಳಿಯೇ ಬರಲಿ ಅತಿವೃಷ್ಟಿಯೇ ಇರಲಿ
’ಪಾಪದ ಜನತೆಗೆ ಒಂದಷ್ಟು ಪರಿಹಾರಕೊಡಿ’
ಎಂದು ತಮ್ಮ ’ಕೈ’ ಸಬಲವಾಗಿದ್ದರೂ
ಕಂಡವರಲ್ಲಿ ’ಕೈ’ಯ್ಯೊಡ್ಡಿ ಬೇಡಿ
ಅದನ್ನೂ ಬಿಡದೇ ತಿನ್ನುವ
’ಕೈ’ಗುಣದ ಭಾಗ್ಯವಂತರು ನಾವು !

ಸಭೆ-ಸಮಾರಂಭಗಳಿಗೆ
ಮಾತನಾಡಲೂ ತಿಳಿಯದ ಮುಗ್ಧ
ಮರದ ತಿಮ್ಮಕ್ಕ ಸುಕ್ರಿ ಜಟ್ಟಪ್ಪ
ಇಂಥವರನ್ನೆಲ್ಲಾ ಕರೆದು
’ಓಹೋಹೋ ಏನೋ ಮಹದುಪಕಾರಮಾಡಿದ್ದೇವೆ’
ಎನ್ನುತ್ತಾ ಜೀವಿತದಲ್ಲಿ ಅವರಿಗೆ
ಯಾವ ಕೆಲಸಕ್ಕೂ ಉಪಕಾರಕ್ಕೂ ಬಾರದ
ಮುದ್ರಿತ ’ಪ್ರಶಸ್ತಿ ಪತ್ರ’ಗಳನ್ನು
ಬೇಡವೆಂದರೂ ಬಿಡದೇ ಅವರ ಕೈಗಿತ್ತು
ಅದನ್ನೇ ’ಪ್ರಜಾತಂತ್ರದ ವೈಭವ’ ಎಂದು
ಬಣ್ಣಿಸುವ ನಾಗರಿಕರು ನಾವು !

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
ಎಂದುಕೊಳ್ಳುತ್ತಾ ಗಾದಿಗಾಗಿ
ಪರಸ್ಪರ ಕಿತ್ತಾಡುತ್ತಾ
ದಿನಬೆಳಗಾದರೆ ಹೋದ ಪಿಶಾಚಿ
"ಮರಳಿ ಬಂದೆ ಗವಾಕ್ಷಿಯಲ್ಲಿ"
ಎನಿಸುವ ಹಾಗೇ ರಾಜಕೀಯದಲ್ಲಿ
ಹೊಸ ವರಸೆಗಳೊಂದಿಗೆ ಹೊಲಸಲ್ಲಿ ಬಿದ್ದ
ಕಿಲುಬು ಕಾಸನ್ನೂ ಬಿಡದೇ ಮಟ್ಟಸವಾಗಿ
ನೆಕ್ಕಿ ಧಕ್ಕಿಸಿಕೊಳ್ಳುವ ಭೂಪರು ನಾವು !

ಅಲ್ಲಿದ್ದಾರೆ ನೋಡಿ ಜಪಾನೀಯರು
ತಂತ್ರಜ್ಞಾನವನ್ನು ಕಂಡುಕೊಳ್ಳುತ್ತಾ
ಬದುಕನ್ನೂ ದೇಶವನ್ನೂ ಕಟ್ಟೀ ಕಟ್ಟೀ
ಕೆಡವಿಸಿಕೊಳ್ಳುತ್ತಾ ತಲೆಯಿಲ್ಲದ
ಕೆಲಸಮಾಡುತ್ತಿದ್ದಾರೆ!
ಅವರೂ ನಮ್ಮಂತೇ ಆಗಿದ್ದರೆ
ಅಲ್ಲಿ ಸುನಾಮಿ ಬರುತ್ತಿರಲಿಲ್ಲ
ಭೂಕಂಪವೂ ಆಗುತ್ತಿರಲಿಲ್ಲ !
ಪಾಪ ಅವರ ಒಳ್ಳೆಯತನವೇ ಅವರನ್ನು
ಹಾಳುಮಾಡುತ್ತಿದೆ..ಕಲಿಯುಗ!

ಇನ್ನಾದರೂ ಅವರು ಪುಗಸಟ್ಟೆ ಸಿಗುವ
ಕಾಸನ್ನು ಹುಡುಕಲಿ
ಹೊಟ್ಟೆ ಖಂಡ್ಗಕ್ಕಿ ಚರಿಗೆಯಾದರೆ ಸಾಕು
ಅವರೆಲ್ಲಾ ನಮ್ಮವರೇ ಆಗಿಬಿಡುತ್ತಾರೆ !
ಆಗ ನಮ್ಮಂತೇ ಎಲ್ಲವೂ ನಿಧಾನ
ನಿಧಾನವೇ ಪ್ರಧಾನ !
ಮೂರಕ್ಕೆ ಬರೋಬ್ಬರಿ ಮೂರುಕ್ವಿಂಟಾಲು
ತೂಗುವ ನಮ್ಮಲ್ಲಿ ಕೆಲವರನ್ನು
ಅನುಕರಿಸಿದರೆ ಜಪಾನಿನ ತೂಕ
ಜಾಸ್ತಿಯಾಗಿ ನೆಲ ಅಲ್ಲಾಡುವುದು
ನಿಂತುಹೋಗುತ್ತದೆ ! ಎಂಥಾ ಅಪ್ಪಟ
ದೇಶೀ ತಂತ್ರಜ್ಞಾನ ಗೊತ್ತಾಯಿತಲ್ಲ ?
ಸ್ವಲ್ಪ ಅವರಿಗೂ ಹೇಳಿಬಿಡಿ

Friday, March 18, 2011

’ಜೀವನ’



’ಜೀವನ’

ತೊಗಲು ಗೊಂಬೆಗಳ್ ನಾವು ಹಗಲಿರುಳು ಆಟಗಳು
ನಗುಅಳುಗಳೆಲ್ಲವೂ ಸೂತ್ರಧಾರನದು
ಬಗೆಬಗೆಯ ಪೋಷಾಕು ಹಚ್ಚಿ-ಬಣ್ಣವ ಕುಣಿಸಿ
ನೆಗೆದೆತ್ತಿ ಒಯ್ಯುವನು | ಜಗದಮಿತ್ರ

ಹೆಗಲಿಗೇರಿಸಿ ನೊಗವ ನಡೆಯಲಾಜ್ಞಾಪಿಸುವ
ಬಗಲೊಳಗೆ ಛಾಟಿಯಿದೆ ಎಂದು ಎಚ್ಚರಿಸಿ
ಅಗಲದಾ ಗಾಡಿಯಿದು ಕಿರಿದಾದ ಹಾದಿಗಳು
ಮುಗಿದು ಮುಂದಕೆ ಸಾಗು | ಜಗದಮಿತ್ರ

ಸುಗಮ ಕೆಲವರ ದಾರಿ ದುರ್ಗಮವು ಉಳಿದರ್ಗೆ
ನಿಗಮ ಮಂಡಳಿ ಕಾಯ್ದೆ ನಮಗೆ ಕಾಣಿಸದು
ಉಗಮವಾಗುವ ದುಃಖ ದುಮ್ಮಾನಗಳ ಸಹಿಸಿ
ಜಗದ ಋಣವನು ವ್ಯಯಿಸು | ಜಗದಮಿತ್ರ

ಜಗದಿ ಉತ್ತಮರಿಂಗೆ ಸುಖದ ಬಾಳೆಂದಿಲ್ಲ
ನಗುತ ನಡೆದರ್ ರಾಮ ನಳ ವಿಕ್ರಮರುಗಳು
ಅಗಣಿತ ಜ್ಞಾನವಂ ಪಡೆಯೆ ವಿಶ್ವಾಮಿತ್ರ
ಒಗೆದ ರಾಜ್ಯವ ತಪಕೆ | ಜಗದಮಿತ್ರ

ಹಗೆತನವು ತರವಲ್ಲ ದೊರೆತ ಈ ಜೀವನದಿ
ನಗನಾಣ್ಯ ಜಾಗಗಳು ಬರವು ಜೊತೆಯಲ್ಲಿ
ಹೊಗೆಯುಗುಳಿ ನೀರ್ನುಗ್ಗಿ ನಿಂತ ನೆಲವೇ ಕುಸಿಯೆ
ಹಗುರ ಹೋಗುತ ಭಾರ ! ಜಗದಮಿತ್ರ

ಮೊಗೆದುಣಿಸು ದಯೆ ಕರುಣೆ ವಾತ್ಸಲ್ಯ ಮಮತೆಯಲಿ
ಬಗೆಯದೇ ದ್ರೋಹವನು ನೇರನಡೆಯುತಲಿ
ಯುಗಯುಗಕು ಈ ಜಗವು ಸುಖದಿ ಬಾಳ್ವುದ ಬಯಸು
ಅಗಲುವಿಕೆ ಅನಿವಾರ್ಯ | ಜಗದಮಿತ್ರ


Wednesday, March 16, 2011

ಜಪಾನ್ ಬಂಧುಗಳಿಗೆ ಶುಭ ಹಾರೈಕೆಗಳು


ಜಪಾನ್ ಬಂಧುಗಳಿಗೆ ಶುಭ ಹಾರೈಕೆಗಳು

ಮತ್ತೆ ಕಟ್ಟಿರಿ ನೀವು ಓ ನನ್ನ ಬಂಧುಗಳೇ
ಸುತ್ತ ನೂರಡಿ ಎತ್ತರದಾ ಕೋಟೆಯನು
ಹತ್ತಿ ಬಂದರೂ ನೀರು ಹೆದರದೇ ತಳ್ಳುತಿರಿ
ಎತ್ತ ಹೋದರೂ ಸಿಗದಂತೇ ಬೇಟೆಯನು

ಸತ್ತು ಹೋದವರೆಷ್ಟೋ ಅತ್ತು ಕರೆದವರೆಷ್ಟೋ
ಕತ್ತು ತಿರುಗಿಸಿ ನೋಡಲೆಲ್ಲ ಅವಶೇಷ
ಅತ್ತ ಭೂಕಂಪನವು ಅಣುಸ್ಥಾವರದ ಸ್ಫೋಟ
ತತ್ತರಿಸಿ ನಿಲುವಂತೆ ಮಾಡಿದಕೆ ಕ್ಲೇಶ

ಹೊತ್ತುಮುಳುಗದ ದೇಶ ಉತ್ತಮದ ಕಾರ್ಯಸಿರಿ
ತುತ್ತತುದಿಯಲಿ ಮೆರೆದ ಶ್ರಮಜೀವಿಗಳಿರಾ
ತುತ್ತಿಲ್ಲದಾ ಹೊತ್ತು ಆಯಾಸವನೇ ಮರೆತು
ಕಿತ್ತುಹೋದಾ ಬದುಕ ಕಟ್ಟಲೆಣಿಸುವಿರಾ ?

ಪತ್ತಿನಲಿ ಕೈಯ್ಯೊಡ್ಡಿ ಕೇಳದಂತಹ ಮನಸು
ನೆತ್ತಿಯಲಿ ಕತ್ತಿ ಕುಣಿದಾಡೆ ದಣಿವಿರದೇ !
ಪುತ್ಥಳಿಗಳಂತಿರುವ ನಿಮ್ಮ ನೋಡುತ ನಾವು
ತೆತ್ತು ಕಲಿತರೂ ಕಮ್ಮಿ ಅರಿವೆಮಗೆ ಬರದೇ !

ಹುತ್ತನಾಗೆದ್ದಲುಗಳ್ ಕಟ್ಟುತಲೆ ಇರುವಂತೇ
ಮೆತ್ತಗೆ ಓಡಾಡಿ ಎತ್ತಿ ದೇಶವನು
ಕುತ್ತು ಬಾರದೆ ಇರಲಿ ನಾವೆಲ್ಲ ಪ್ರಾರ್ಥಿಪೆವು
ನತ್ತು ಜಗಕದು ನಿಮ್ಮಾ ಚಿಕ್ಕ ಜಪಾನು

Tuesday, March 15, 2011

ಮರೆತೆಯಾದರೆ ಅಯ್ಯೋ ಮರೆತಂತೇ ನನ್ನ ....


ಮರೆತೆಯಾದರೆ ಅಯ್ಯೋ ಮರೆತಂತೇ ನನ್ನ ....

ವಿಶ್ವಕನ್ನಡ ಸಮ್ಮೇಳನ ಅದ್ಧೂರಿಯಾಗಿ ಮುಗಿದಿದ್ದು ಅತ್ಯಂತ ಖುಷಿಯ ವಿಚಾರ. ಅದರ ಮಧ್ಯೆ ನಾರಾಯಣ ಮೂರ್ತಿಗಳ ನೀರಸ ಭಾಷಣ ಅಷ್ಟೇ ದುಃಖತಂದ ವಿಚಾರ. ಕನ್ನಡದ ನೆಲದಲ್ಲಿ ಹುಟ್ಟಿ, ಇಲ್ಲಿನ ಉಪ್ಪನ್ನವನ್ನೇ ಉಂಡು ಇಲ್ಲಿನ ನೆಲಜಲದ ಸೌಲಭ್ಯವನ್ನೇ ಪಡೆದು, ವಿಶ್ವವೇ ನಿಬ್ಬೆರಗಾಗುವ ತಂತ್ರಾಂಶ ಸಂಸ್ಥೆಯನ್ನು ಕಟ್ಟಿ ತನ್ನ ವ್ಯವಹಾರ ಚಾಣಾಕ್ಷತೆಯನ್ನು ಮೆರೆದ ಮೂರ್ತಿ ಕನ್ನಡಕ್ಕೆ ತಾನು ಕೊಟ್ಟಿದ್ದು ಮಾತ್ರ ಏನೂ ಇಲ್ಲ ಎಂದರೆ ತಪ್ಪಲ್ಲ. ಕೇವಲ ಕನ್ನಡ ನೆಲದಲ್ಲಿ ಸೌಕರ್ಯಗಳು ಸಿಕ್ಕವು ಅಂತ ಅದನ್ನು ಬಳಸಿಕೊಂಡರೂ ಉದ್ಯೋಗವನ್ನು ಕನ್ನಡದವರಿಗಾಗಿಯೇ ಮೀಸಲಿಟ್ಟ ಯಾವುದೇ ಗುರುತು ಕಾಣಲಿಲ್ಲ. ಬೆಂಗಳೂರು ಮಂಗಳೂರು ಮೈಸೂರು ಹೀಗೇ ಎಲ್ಲೆಲ್ಲೂ ಅವರ ಸಂಸ್ಥೆಯ ಶಾಖೆ ಇರಬಹುದು ಬಿಡಿ ಅದು ಬೇರೇ ವಿಷಯ, ಅದನ್ನೇ ಕನ್ನಡಿಗರಲ್ಲದ ವಿಪ್ರೋದ ಅಜ಼ೀಂ ಪ್ರೇಮ್ಜೀ ಅಥವಾ ಇನ್ನಿತರ ಯಾವುದೇ ಸಂಸ್ಥೆಗಳು ಮಾಡಿಯಾವು..ಅದು ಅವರವರ ವ್ಯಾವಹಾರಿಕ ಅನುಕೂಲತೆಯ ಪ್ರಶ್ನೆ. ಆದರೆ ಕನ್ನಡದವರೇ ಆಗಿ ಈ ಮಟ್ಟಕ್ಕೆ ಬೆಳೆದು ಕನ್ನಡನಾಡಿಗೆ ನೀಡಿದ ಹೆಮ್ಮೆಯ ಕೊಡುಗೆ ಯಾವುದೂ ಇಲ್ಲ!

ಬೆಣ್ಣೆ ತಿಂದವರು ಕೈಯ್ಯನ್ನು ಇತರರ ಬಾಯಿಗೆ ಒರೆಸಿದಂತೇ ಯಾವ ಲೆಕ್ಕಕ್ಕೂ ಸಿಗದ ಅತೀ ಚಿಕ್ಕಮಟ್ಟದಲ್ಲಿ ಇನ್ಫೋಸಿಸ್ ಫೌಂಡೇಶನ್ ಮತ್ತಿತರ ಚಿಕ್ಕಪುಟ್ಟ ಪ್ರತಿಷ್ಠಾನಗಳನ್ನು ಹುಟ್ಟುಹಾಕಿ ಅದರಿಂದ ಕನ್ನಡಿಗರಿಗೆ ಹಲವಾರು ರೀತಿಯಲ್ಲಿ ಉಪಕೃತರು ಎಂದು ವೇದಿಕೆಯಲ್ಲಿ ಯಾರೋ ಹೇಳಿದ ಮಾತನ್ನು ಮಾಧ್ಯಮಗಳಲ್ಲಿ ಕಂಡು ನಗು ಉಕ್ಕಿಬಂತು. ಹೌದಪ್ಪಾ ಬಹಳ ಮನನೀಯರು ಪ್ರಾತಃಸ್ಮರಣೀಯರು ಎಂದು ನನಗರಿವಿಲ್ಲದೇ ಬಾಯಿಂದ ಹೊರಬಿತ್ತು. ಕನ್ನಡದ ಡಾ| ರಾಜಕುಮಾರ್ ಇರುವವರೆಗೆ "ಅಭಿಮಾನೀ ದೇವರುಗಳೇ " ಎನ್ನುತ್ತಾ ಯಾರಿಗೂ ಬಿಡಿಗಾಸನ್ನೂ ಸಹಾಯಮಾಡದೇ ಬದುಕಿದರು...ಅದೇ ವಿಷ್ಣುವರ್ಧನ್ ಆಗಲೀ ಅಂಬರೀಷ್ ಆಗಲೀ ಹಾಗೆ ಮಾಡಲಿಲ್ಲ. ಅವರು ಏನನ್ನೂ ಕೊಡದೇ ಹೋದರೂ ನಮ್ಮ ಕನ್ನಡ ಜನತೆ ಅವರನ್ನು ಇಂದಿಗೂ ನೆನೆಯುತ್ತಾ ಕಷ್ಟವಾದರೂ ಅವರ ಮಕ್ಕಳೆಂದು ಅಭಿಮಾನದಿಂದ ಆ ಮೂವರು ಮಕ್ಕಳ ಚಲನಚಿತ್ರಗಳನ್ನು ಹೊತ್ತು ಮೆರೆಯುವುದು ಕನ್ನಡ ಜನತೆಯ ಅಭಿಮಾನೀ ಸ್ವಭಾವದ ಧ್ಯೋತಕ. ಅದೇರೀತಿಯಲ್ಲಿ ನಾರಾಯಣ ಮೂರ್ತಿಗಳನ್ನೂ ಬಹಳ ಅಭಿಮಾನದಿಂದ ಕಂಡರು. ಬಂಡಾಯ ಸಾಹಿತಿಗಳು ವಿರೋಧಿಸಿದರೂ ಪ್ರಜ್ಞಾವಂತ ಸಾಹಿತಿಗಳು ತಟಸ್ಥಸ್ಥಿತಿಯಲ್ಲಿದ್ದು ಉಧ್ಘಾಟನೆಗೆ ಅವರನು ಕರೆದಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಬದುಕಿನಲ್ಲಿ ಮನುಷ್ಯನಿಗೆ ಹಣೆಬರಹವೂ ಮಹತ್ತರ ಪಾತ್ರವಹಿಸುತ್ತದೆ ಎಂಬುದಕ್ಕೆ ಅತ್ಯಂತ ಸಮರ್ಪಕ ಉದಾಹರಣೆ ನಾರಾಯಣ ಮೂರ್ತಿ. ಅದೇ ರೀತಿ ಇನ್ನೂ ಕೆಲವರು ಸಿಗುತ್ತಾರೆ. ಬರೇ ಅವರಲ್ಲಿನ ಆದರ್ಶ, ಮ್ಯಾನೇಜಮೆಂಟಿಗೆ ಸಂಬಂಧಿಸಿದ ಚಾಣಾಕ್ಷತನ, ಕಾರ್ಯದಕ್ಷತೆ ಮತ್ತು ಪರಿಷ್ರಮವೇ ಅಲ್ಲದೇ ಅವರ ನಸೀಬು ಅತ್ಯಂತ ಚೆನ್ನಾಗಿತ್ತು. ಎಲ್ಲವೂ ಇದ್ದ ಅನೇಕರನ್ನು ನೋಡಿದ್ದೇನೆ... ಅವರಲ್ಲಿ ಯಾವ ಕೊರತೆಯೂ ಇಲ್ಲ...ಆದರೆ ಅವರು ಯಾವುದೇ ಕೆಲಸ ಮಾಡಿದರೂ ಗುಡ್ಡಕ್ಕೆ ಮಣ್ಣುಹೊತ್ತಂತೇ ಆಗುತ್ತದೆ. ಇದಕ್ಕೆ ಕಾರಣ ಅವರ ವಿಧಿಲಿಖಿತವಷ್ಟೇ ಅಲ್ಲದೇ ಇನ್ನೇನೂ ಇಲ್ಲ. ಅಪಥ್ಯವಾದರೂ ಸಹಿಸಿಕೊಳ್ಳಿ ಇವತ್ತು ನಾವು ನೀವು ನೋಡಿದ ನಾರಾಯಣ ಮೂರ್ತಿಗಿಂತಲೂ ಅತ್ಯಂತ ಉತ್ತಮ ರೀತಿಯಲ್ಲಿ ಮ್ಯಾನೇಜ್‍ಮೆಂಟ್ ಗೊತ್ತಿರುವ ಅಥವಾ ಬೋಧಿಸುವ ವ್ಯಕ್ತಿಗಳು ಭಾರತದಲ್ಲಿದ್ದಾರೆ...ಕರ್ನಾಟಕದಲ್ಲೇ ಇದ್ದಾರೆ. ಆದರೆ ನಾರಾಯಣ ಮೂರ್ತಿಗಳ ಯೋಗ ಚೆನ್ನಾಗಿದೆ ಹೀಗಾಗಿ ಅವರು ಎಸೆದ ಕಲ್ಲಿಗೆಲ್ಲಾ ಹಣ್ಣು ಉದುರುತ್ತಲೇ ನಡೆದಿದೆ!

ಮಾಧ್ಯಮದಲ್ಲಿ ನಾರಯಣ ಮೂರ್ತಿಗಳ ಭಾಷಣದ ಬಗ್ಗೆ ತರ್ಕ ನಡೆದೇ ಇತ್ತು.ಇಷ್ಟೆಲ್ಲಾ ಇದೇ ಮೊಟ್ಟಮೊದಲ ಸರ್ತಿ ನಾರಾಯಣ ಮೂರ್ತಿ ಸಾರ್ವಜನಿಕ ವೇದಿಕೆಯಲ್ಲಿ ಕನ್ನಡದಲ್ಲಿ ಮಾತನಾಡಿದ್ದು. ಯಾವುದೋ ಭಾಷೆಯ ಜನ ಕನ್ನಡವನ್ನು ಹೊಸದಾಗಿ ಕಲಿತು ಮಾತನಾಡಿದಂತೇ ಗಿಣಿಪಾಠದ ರೀತಿಯಲ್ಲಿ ಅವರು ಬಿತ್ತರಿಸಿದ ನುಡಿಗಳು ಬಹಳ ನೀರಸವೆನಿಸಿದವು. ಮತ್ತೆ ಹುಟ್ಟಿದರೆ ಕನ್ನಡನಾಡಿನಲ್ಲಿಯೇ ಎಂಬುದಕ್ಕೆ ಸಮಜಾಯಿಷಿ ನೀಡಿದ್ದಾನೆ ಪಂಪ ಮಹಾಕವಿ. ಆದಿಕವಿಗಳ ಯಾವ ಕೃತಿಗಳಬಗ್ಗಾಗಲೀ ಜೀವಿತದ ಬಗ್ಗಾಗಲೀ ಹೆಚ್ಚಾಗಿ ಓದಿರದ ತಿಳಿದಿರದ ಮೂರ್ತಿಗಳು ಪಂಪನ ಕುರಿತು ಹೇಳುವಾಗ ಸೇರಿದ ಲಕ್ಷಾಂತರ ಜನರ ಹಿಂದೆ ಪಂಪ ನಿಂತು ಅಳು ವರೀತಿ ಇತ್ತು! ಮತ್ತೆ ಕನ್ನಡದಲ್ಲೇ ಇವರೂಒ ಹುಟ್ಟಬೇಕಂತೆ ಯಾಕೆಂದರೆ ಹಿಂದಿನ ಸರಕಾರಗಳು ತೆರಿಗೆ ವಿನಾಯತಿ ನೀಡಿ ಇವರನ್ನೆಲ್ಲಾ ಬೆಳೆಸಿದರಲ್ಲಾ ಅದರ ರುಚಿಸಿಕ್ಕಿರಬಹುದು! ಪತ್ರಕರ್ತ ರವಿ ಬೆಳಗೆರೆ ಮಾಧ್ಯಮದಲ್ಲಿ ಹೇಳಿದ್ದು ಕೇಳಿದೆ. ಸುಂದರವಾಗಿರುವ ನಟಿಯನ್ನು ನಟಿಸಲು ಕೇಳಬಹುದು, ಉತ್ತಮ ಹಾಡುಗಾರನಿಂದ ಹಾಡಿಸಬಹುದು ಅದೇ ರೀತಿ ಉತ್ತಮ ಉದ್ದಿಮೆದಾರನಿಂದ ಒಳ್ಳೆಯ ಉದ್ದಿಮೆಗಳ ಬಗ್ಗೆ ಯೋಜನೆ ನಿರೂಪಿಸಬಹುದೇ ಹೊರತು ಅದರ ಹೊರತಾಗಿ ಅವರಿಂದ ಒಳ್ಳೆಯ ಭಾಷಣಗಳನ್ನೆಲ್ಲಾ ನಿರೀಕ್ಷಿಸುವುದು ತಪ್ಪು ಎಂಬುದರ ಜೊತೆಗೆ ಕನ್ನಡ ಸಮ್ಮೇಳನದ ಆ ವೇದಿಕೆಗೆ ಉದ್ಘಾಟಕರಾಗಿ ನಾರಾಯಣ ಮೂರ್ತಿಗಳ ಆಯ್ಕೆ ನಿಜವಾಗಿಯೂ ಅಪ್ರಸ್ತುತ ಎಂಬುದನ್ನು ವಿವರಿಸಿ ಹೇಳುತ್ತಿದ್ದರು.

ಕನ್ನಡ ಸಂಸ್ಕೃತಿಯಬಗ್ಗೆ ತಮ್ಮನ್ನು ಕೊಟ್ಟುಕೊಂಡ ಹಲವು ಮಹಾನುಭಾವ ಕವಿ-ಸಾಹಿತಿಗಳಲ್ಲಿ ಯಾರಿಗೋ ಸಿಗಬೇಕಾಗಿದ್ದ ಗೌರವಕ್ಕೆ ಮೂರ್ತಿ ಪಾತ್ರರಾಗಿದ್ದೂ ಕೂಡ ಅವರ ಯೋಗವೇ! ಉದ್ದಿಮೆದಾರರಿಗೆ ಅವರ ಉದ್ದಿಮೆಯ ವಸಾಹತುಗಳಲ್ಲಿನ ವೇದಿಕೆಗಳು ಮತ್ತು ರಾಜಕೀಯದವರಿಗೆ ಹಲವು ವೇದಿಕೆಗಳು ಸಿಗುತ್ತವೆ ಆದರೆ ಕನ್ನಡದ ಕಟ್ಟಾಳುಗಳಿಗೆ ತಮ್ಮ ಮಾತುಗಳನ್ನು ಹಂಚಿಕೊಳ್ಳಲು ಯಾವುದೇ ಜಾಗವಿರುವುದಿಲ್ಲ. ಅವರು ತಮ್ಮ ಅನಿಸಿಕೆಗಳನ್ನು ಅದುಮಿಟ್ಟುಕೊಂಡೇ ಜೀವಿಸಿ ತೆರಳುತ್ತಾರೆ. ಅಂತಹ ಮಹಾನ್ ಚೇತನಗಳೆಷ್ಟೋ ಕಾಲಗರ್ಭದಲ್ಲಿ ಸಂದುಹೋಗಿವೆ. ಅವರೆಲ್ಲರಿಗೂ ನಮ್ಮ ನಮನಗಳು. ಆದರೆ ಕನ್ನಡದ ಬಗ್ಗೆ ಯಾವ ಕಳಕಳಿಯಾಗಲೀ ಗೌರವವಾಗಲೀ ಇರದ ಮೂರ್ತಿಗಳನ್ನು ಪುಗ್ಗೆಗೆ ಗಾಳಿತುಂಬಿಸಿದಂತೇ ತಯಾರುಮಾಡಿ ವೇದಿಕೆ ಹತ್ತಿಸಿದ್ದು ನಿಜಕ್ಕೂ ವಿಷಾದಕರ. ಅದೇ ಅವರ ಮಡದಿ ಸುಧಾಮೂರ್ತಿಯವರಾದರೂ ಪರವಾಗಿರಲಿಲ್ಲ. ಮನುಷ್ಯನಿಗೆ ಹಣದ ವ್ಯಾಮೋಹದ ಜೊತೆಗೆ ಭಾಷಾವ್ಯಾಮೋಹವೂ ಸ್ವಲ್ಪ ಇರಬೇಕಾಗುತ್ತದೆ. ಅದರಲ್ಲೂ ಅತ್ಯಂತ ಪ್ರಾಚೀನ ಭಾಷೆಯೆನಿಸಿದ ಕನ್ನಡದ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದರೆ ಮೂರ್ತಿಯವರು ಹೆಂಡತಿಯನ್ನು ಕೇಳಿ ಹೇಳಬೇಕಾಗಬಹುದು.

ಕನ್ನಡ ಭಾಷೆಯಲ್ಲಿ ಈಗಲೂ ಬಳಕೆದಾರರಿಗೆ ಸುಲಭಸಾಧ್ಯವಾಗುವ ತಂತ್ರಾಂಶಗಳಿಲ್ಲ ಎಂಬುದು ಹಲವರಿಗೆ ತಿಳಿದಿರುವ ವಿಷಯ. ಬರಹ ಕನ್ನಡ ಈಗಿನ ತಂತ್ರಾಂಶದ ಬಗ್ಗೇ ಹಲವು ತಕರಾರುಗಳನ್ನು ಕೆಲವರು ಮಾಡಿದ್ದಾರೆ. ಈ ನಡುವೆ ನುಡಿ ಎಂಬ ತಂತ್ರಾಂಶವನ್ನು ಸರಕಾರ ಮಾನ್ಯಮಾಡಿ ಬಳಕೆಗೆ ತಂದಿತಾದರೂ ಅದರ ವ್ಯಾಪ್ತಿಯೂ ಅಷ್ಟಕ್ಕಷ್ಟೇ. ಇನ್ಫೋಸಿಸ್ ನಂತಹ ಸಂಸ್ಥೆಗೆ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲು ಅವರ ವಸಾಹತುಗಳಲ್ಲಿ ಹೆಚ್ಚೆಂದರೆ ಕೇವಲ ಕನ್ನಡಬಲ್ಲ ೧೦ ಉದ್ಯೋಗಿಗಳ ಒಂದು ವಾರದ ಸಮಯ ಸಾಕು. ಆದರೆ ಈ ಮಹಾನುಭಾವ ಕನ್ನಡಕ್ಕೆ ಅಂತಹ ಯಾವುದೇ ಕೊಡುಗೆಯನ್ನು ಕೊಟ್ಟವರಾಗಲೀ ಕೊಡುತ್ತೇನೆ ಎಂದವರಾಗಲೀ ಅಲ್ಲ! ತಮ್ಮ ಅನುಕೂಲಕ್ಕಾಗಿ ನಾವಿರುವ ಸ್ಥಳವನ್ನೋ ದೇಶವನ್ನೋ ಸ್ವಲ್ಪ ಹೊರಗಿನಿಂದ ನೆಚ್ಚಿಕೊಳ್ಳುವ ಸ್ವಭಾವ ಎಲ್ಲಾ ಉದ್ದಿಮೆದಾರರಿಗೂ ಇರುತ್ತದೆ. ಇದರಲ್ಲಿ ಅದೂ ಬೆಂಗಳೂರಿನಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ಕಡೆಗಳಿಂದ ಬಂದು ನೆಲೆಸಿದ ಹಲವು ವ್ಯಾಪಾರಿಗಳು ಕನ್ನಡ ರಾಜ್ಯೋತ್ಸವಕ್ಕೆ ತಮ್ಮ ದೇಣಿಗೆ ಕೊಡುವುದನ್ನು ಸ್ಮರಿಸಬಹುದಾಗಿದೆ. ಅಂತಹ ಜನಗಳೇ ಅನಿವಾರ್ಯವಾಗಿ ನೆಚ್ಚಿಕೊಂಡರೂ ತಾನು ಮಾತ್ರ ಒಂಚೂರೂ ಜಗ್ಗದೇ ಬಗ್ಗದೇ ಕನ್ನಡಕ್ಕೂ ತನಗೂ ಏನೂ ಸಂಬಂಧವೇ ಇಲ್ಲಾ ಎನ್ನುವ ರೀತಿಯಲ್ಲಿ ಇರುವ ಮೂರ್ತಿಗಳನ್ನು ಈ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದು ಮತ್ತು ಬೆಂಕಿ ಬಿದ್ದಾಗ ಬಾವಿ ತೋಡಿದಂತೇ ತುರ್ತಾಗಿ ಅವರೌ ಕನ್ನಡದ ಭಾಷಣವನ್ನು ಬರೆಸಿಕೊಂಡು ತಯಾರಾಗಿ ಬಂದಿದ್ದು ನಿಜಕ್ಕೂ ನಗುಉಕ್ಕಿಸಿದ ಸಂಗತಿ! ಇಷ್ಟೆಲ್ಲಾ ಗೌರವಯುತವಾಗಿ ನಡೆದಕೊಂಡ ಕನ್ನಡ ಜನತೆಗೆ ತನ್ನ ಕಡೆಯಿಂದ ಈಗಲೂ ಯಾವುದೇ ಕೊಡುಗೆಯನು ಘೋಷಿಸದೇ ಸುಮ್ಮನಾದ ಮೂರ್ತಿಯವರನ್ನು ಕನ್ನಡದ ಕಂದಾ ಎಂದು ಕರೆದವರಿಗೆ ದೊಡ್ಡ ನಮಸ್ಕಾರ.

ಇಷ್ಟಕ್ಕೂ ನನ್ನ ಮತ್ತು ಮೂರ್ತಿಗಳ ನಡುವೆ ಯಾವುದೇ ದ್ವೇಷವಿಲ್ಲ, ವೈಮನಸ್ಸಿಲ್ಲ. ಆದರೆ ಕನ್ನಡಕ್ಕೆ ಕ್ಷಣವೂ ಮನಸ್ಸನ್ನು ಕೊಡದ ವ್ಯಕ್ತಿ ಯಾರೇ ಆದರೂ ಅವರನ್ನು ಇಂಥಾ ಸಭೆ-ಸಮಾರಂಭಗಳ ವೇದಿಕೆಗೆ ಆಹ್ವಾನಿಸಿದರೆ ಅದು ಸಹಿಸಲಾರದ ಮನಸ್ಸು ನನ್ನದು ಮತ್ತು ನನ್ನಂಥಾ ಅನೇಕರದು ಎಂದು ನಾನು ನಂಬಿದ್ದೇನೆ. ಕನ್ನಡದ ಜನ ಭಿಕ್ಷುಕರಲ್ಲ...ನಿಮ್ಮ ಸಂಸ್ಥೆಯಲ್ಲಿ ನಮ್ಮ ಯುವಕರಿಗೇ ಮನ್ನಣೆ ನೀಡಿ ಎಂದು ಮೂರ್ತಿಗಳಲ್ಲಿ ಬೇಡುವುದಿಲ್ಲ. ನಮ್ಮಜನ ಸಾಕಷ್ಟು ವಿದ್ಯಾ-ಬುದ್ಧಿವಂತರು, ಜಾಗತಿಕ ಮಟ್ಟದಲ್ಲಿ ಬೆಳೆಯಬಲ್ಲ-ಬೆಳಗಬಲ್ಲ ಸಾಮರ್ಥ್ಯವುಳ್ಳವರು..ಅಂಥವರ ನಡುವೆಯೇ ನೀವೂ ಹುಟ್ಟಿ ಬೆಳೆದು ಯೋಗದಿಂದ ಬಹುದೊಡ್ಡ ಉದ್ದಿಮೆ ಕಟ್ಟಿ ಬೆಳೆಸಿದಿರಿ...ನಮಗೆ ಹೊಟ್ಟೆಯುರಿಯಿಲ್ಲ. ಆದರೆ ನಿಂತ ನೆಲದ ಸುತ್ತಲ ಜನರು ನಿಮ್ಮನ್ನೆಷ್ಟು ಪ್ರೀತಿಯಿಂದ ಆತುಕೊಂಡರೋ ಆ ಪ್ರೀತಿಯ ಋಣಕ್ಕೆ ನಿಮ್ಮಿಂದ ಯಾವುದೇ ಬೆಲೆಕಟ್ಟಲು ಸಾಧ್ಯವಿಲ್ಲ...ಕಟ್ಟಿದರೂ ಕಟ್ಟಬಹುದು ಬಿಡಿ ಉದ್ದಿಮೆದಾರರಿಗೆ ಎಲ್ಲವೂ ವ್ಯಾವಹಾರಿಕವೇ ಆಗಿರುತ್ತದೆ!

ಸಮಾಧಾನಕರ ಸಂಗತಿಯೆಂದರೆ ಸಮಾರೋಪದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಹಲವರು ಅಡಚಣೆ ಮಾಡುತ್ತಿದ್ದರೂ ಕನ್ನಡದ ಸಮಗ್ರತೆಯನ್ನೂ ಅದರ ಅಗಾಧತೆಯನ್ನೂ ಸಾಧಾರವಾಗಿ ಉದ್ಧರಿಸಿದ ಪಾಟೀಲ್ ಪುಟ್ಟಪ್ಪನವರನ್ನು ನೋಡಿ ಸಂತೋಷವಾಯಿತು. ಬೆಂಗಳೂರಿನಿಂದ ಬೆಳಗಾವಿಗೆ ಈ ಬಿಸಿಲ ಝಳದಲ್ಲೂ ಧಾವಿಸಿಬಂದ ಕನ್ನಡದ ೯೮ ವರ್ಷದ ಹಸುಗೂಸು ಜಿ.ವೆಂಕಟಸುಬ್ಬಯ್ಯನವರನ್ನು ನೋಡಿ ಆನಂದಭಾಷ್ಪ ಹರಿಯಿತು. ರಾಜಕಾರಣಿಗಳ ಅಟಾಟೋಪದ ಭಾಷಣಗಳಿಗೇ ಮಹತ್ವನೀಡಿದ್ದ ಆ ವೇದಿಕೆಯಲ್ಲಿ ನಿಸಾರ್ ಅಹ್ಮದ್ ರಂಥಾ ಕವಿ ಮೌನಕ್ಕೆ ಶರಣಾಗಿ ತನ್ನ ಮಾತು ಬೇಡಾ ಎಂದಿದ್ದು ನೋಡಿ ಮನ ಮರುಗಿತು. ಜಟ್ಟಿ ಕಾಳಗಕ್ಕೆ ಹೆಸರಾದ ಸಿದ್ಧರಾಮಯ್ಯನವರ ಗಂಟೆಗೊಮ್ಮೆ ಶಬ್ದವನು ನೆನಪಿಸಿಕೊಂಡು ಅಸಂಬದ್ಧವಾಗಿ ಪ್ರಲಾಪಿಸುವ ಕ್ರಮ ನೋಡಿ ತುಸು ಕೋಪವೂ ಬಂತು. ಊಟಕ್ಕಾಗಿ-ತಿಂಡಿಗಾಗಿ ೨೦ ಲಕ್ಷಜನ ಪರದಾಡದೇ ಸಲೀಸಾಗಿ ಇದನ್ನು ಪೂರೈಸಿದ್ದು ಕಂಡು ಹೆಮ್ಮೆಯೂ ಆಯಿತು. ಹೀಗೇ ಹಲವು ಭಾವಗಳ ಸಮ್ಮಿಶ್ರಣವಾಗಿತ್ತು ಈ ನಮ್ಮ ವಿಶ್ವಸಮ್ಮೇಳನ.

ನನ್ನ ಎಳವೆಯ ದಿನಗಳಲ್ಲಿ ಕವಿಯೋರ್ವರು ಬರೆದ ಕವನವನ್ನು ನನ್ನ ಚಿಕ್ಕಪ್ಪಂದಿರು ಹೇಳುವುದನ್ನು ಕೇಳಿದ್ದೆ.

ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದಾ
ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನಾ

---ಎಂತಹ ಹೃದಯಂಗಮ ಸನ್ನಿವೇಶ! ತಾಯಿ ತನ್ನ ಮಗುವನ್ನು ತೊಟ್ಟಿಲೊಳಿಟ್ಟು ಲಾಲಿಸುತ್ತಾ ಉತ್ತಮ ಭವಿಷ್ಯದ ಕನಸುಗಳನ್ನು ಹೆಣೆಯುತ್ತಾಳೆ. ಆ ಕಾಲದಲ್ಲಿ ಆ ಮುಗ್ಧ ಮಗುವಿಗೆ ತಾಯಿ ಹಲವನ್ನು ಹಾಡಿನಮೂಲಕ ಹೇಳುತ್ತಾ ರಮಿಸುತ್ತಾಳೆ. ಕನ್ನಡದ ತಾಯಿ ತನ್ನ ಮಗುವಿನಿಂದ ಇಂತಹ ಆಣೆಯೊಂದನ್ನು ಪ್ರತಿಜ್ಞೆಯೊಂದನ್ನು ಬಯಸುತ್ತಾಳೆ.. ಮಗುವೇ ನಿನ್ನ ಜೋಗುಳದ ಹರಕೆಯಾಗಿ ನಿನ್ನಲ್ಲಿ ನಾನು ಕೇಳುತ್ತೇನೆ ನನಗಾಗಿ ನನ್ನ ರಕ್ಷಣೆಗಾಗಿ ನೀನು ಹೋರಾಡು...ಅದನ್ನು ಮರೆತರೆ ನೀನು ನನ್ನನ್ನೇ ಮರೆತಂತೇ. ನವಯುಗದ ಕಾಲಧರ್ಮದಲ್ಲಿ ತಾಯಿ-ತಂದೆಗಳನ್ನೇ ದೂರಮಾಡುವ ನಮ್ಮಲ್ಲಿ ಕೆಲವರಿಗೆ ಇದರ ಅರ್ಥವಾಗದೇ ಹೋಗಬಹುದು. ಆದರೆ ಕರುಳಕುಡಿಯ ಕಿಂಚಿತ್ ಅನಿಸಿಕೆ ಇದ್ದರೆ ಕವಿ ಇಲ್ಲಿ ಹೇಳಿದ್ದನ್ನು ಅರ್ಥೈಸಿ ನೋಡಿ. ಕನ್ನಡ ಸಮ್ಮೇಳನವಷ್ಟೇ ನಮ್ಮ ಕರ್ತವ್ಯವಲ್ಲ ಕನ್ನಡ ನಮ್ಮ ನಿತ್ಯದ ಅನುಸಂಧಾನವಾಗಬೇಕು ನಿತ್ಯಾನುಷ್ಠಾನವಾಗಬೇಕು ಎಂಬುದನ್ನು ನಿಮ್ಮೆಲ್ಲರಿಂದ ಬಯಸುತ್ತಾ ಸದ್ಯಕ್ಕೆ ವಿರಮಿಸುತ್ತೇನೆ, ನಮಸ್ಕಾರ.

Monday, March 14, 2011

ಸ ರಿ ಗ ಮ ಪ ದ ನಿ ಸ..........!!!


ರಿ ನಿ ..........!!!

" ಅಣಾ ಇಸ್ಯ ಗೊತ್ತಾಯ್ತಾ ? ಹರಾಮಿ ಮತ್ತೆ ಭೂಕೆಂಪು ಎರ್ಡೂವೆ ಸೇರ್ಕೆಂಡು ಪಾಕಿಸ್ತಾನ ತೊಳ್ಕಂಡೋಗ್ಬುಟ್ಟದೆ. ಜನ್ಗೋಳೆಲ್ಲಾ ಹೋಯ್ತಾ ಇರೋದ್ ಕಂಡ್ಬುಟ್ಟು ತಲೆ ಗಿರಿಕ್ ಅಂದ್ಬುಡ್ತು "

" ಯಾರಲೇ ಪಾಕಿಸ್ತಾನ ಹಂತಾ ಯೋಳಿದ್ದು ಮುಂಡೇದೆ ನಿಂಗೆ ಅದು ಜಪಾನ್ ಕಣಲೇ ಜಪಾನು. ಹರಾಮಿ ಹಂತೀಯಲ್ಲ ಅಷ್ಟೂನೂ ಗೊತಾಯಾಕಿಲ್ವಾ ತುನಾಮಿ ಅಂತಾವ ಅದು. ಭೂಕೆಂಪಗಲ್ಲ ಭೂಕಂಪ ಹಂತಾವ ಅಂಗಂದ್ರೆ ಭೂಮಿ ಇದ್ದಲ್ಲೇ ಒದರಕಂತದೆ ಹಂತರ್ಥ "

" ಎಂತೆಂಥಾ ಸಬ್ದನೆಲ್ಲಾ ತಂದಾಕ್ಬುಟ್ರು ನಮ್ ಇಗ್ನಾನಿಗಳು. ತುನಾಮಿ ಅಂದ್ರೇನ್ಕಣಣ್ಣಾ ಒಸಿ ಯೋಳ್ತೀಯಾ ಅಂಗೇ ಭೂಮಿ ಒದರಕಂಬುದೂ ಯೋಳ್ಬುಡಣಾ ನಿನ್ ಕಡೀಕಿಂದ್ಲೇ ಕೇಳ್ಕಬುಡುವಾ "

" ತುನಾಮಿ ಹಂದ್ರೆ ಸಮುದ್ರಕ್ಕೆ ಅಪರೂಪದಗೆ ಕೋಪಬಂದೋತದೆ. ಟೇಮ್ನಾಗೆ ಅದು ಜೋರಾಗಿ ಹಲೆ ಹೆಬ್ಸಿ ಹತ್ತರ್ದ ಊರೊಳೀಕೆಲ್ಲಾ ಕಳ್ಸಬುಡ್ತದೆ ಕಣ್ಲಾ. ಪ್ಯಾಟೆ ಮಂದಿ ಮುಳಕಟ್ಟಮ್ಗೂ ಕರುಮಾರಮ್ಗೂ ಸರ್ಯಾಗಿ ನಡ್ಕಳಾಕಿಲ್ಲ. ಹವ್ರಿಬ್ರೂ ಅಕ್ಕತಂಗೀದೀರು ಸೇರ್ಕಂಡು ಸಮುದ್ರಕೋಗಿ ಅಲ್ಲಿ ಕೋಪ ಬರುಸ್ತವೆ. ಕೋಪ ಬಂದೇಟ್ಗೆ ಅಗ್ಲೋ ರಾತ್ರ್ಯೋ ನೋಡ್ದೇಯಾ ನೀರು ನುಗ್ಗಸ್ಬುಡ್ತರೆ. ಜನೀಕೆ ಸಾಕೋ ಸಾಕಾಗೋತದೆ. ಇತ್ಲಗೆ ಭೂಕಂಪ್ಸು ಹೇಳಿದ್ನಲ್ಲ ಭೂಮಿಗೂವ ಆಗಾಗ ಮೈ ಒದರಕಂಬೋ ಅಭ್ಯಾಸ ಕಣ್ಲಾ. ಅದು ಯಾಪಾಟೀ ಎಲ್ಲಾತದೆ ಹಂತ ಯಾರ್ಗೂ ಮೊದ್ಲೇ ಗೊತಾಯಾಕಿಲ್ಲ..ಇಲ್ಲಾಂದ್ರೆ ತಪ್ಸಕಬುಟ್ಟಿರೋರು. ಭೂಮಿಗೆ ಚಂದ್ರನ ಕಂಡ್ರೆ ಆಯಾಕಿಲ್ಲ. ಯಾವ್ದೋ ಅಳೇ ದ್ವೇಸ. ಆಯಪ್ಪ ಅಂಗೂ ಇಂಗೂ ಒಂದೊಂದಪಾ ಹದೇನೋ ಭೂಮಿ ಅತ್ರ ಬತ್ತವ್ನಂತೆ...ಹಂತ ಅದ್ಯಾರೋ ಟೀವಿನೋರು ಯೋಳ್ತಾ ಇದ್ರು. ಅಂಗಾಂಗುತ್ಲೂವೆ ಭೂಮಿ ತಿರೀಕಬೇಕಾಯ್ತಾ ? ಹದ್ಕೇಯ ಅದು ಮಗ್ಗಲ ಬದಲಾಯ್ಸ್ತದೆ ಕಣ್ಲಾ. ತಿರೀಕಂಬೋ ಟೇಮ್ನಾಗೆ ಮನೀ ಒಳಿಕ್ಕೆ ಬಿರಡಿಂಗ್ನಾಗೆ ಇದ್ದೋರ್ಗೆಲ್ಲಾ ಒಳ್ಳೇ ಟ್ರೈನಗೆ ಆದಾಂಗಾತದೆ. ಕೆಲೂ ಸರ್ತಿ ಕಟ್ಟಡಗೋಳು ಬಿದ್ದೋಯ್ತವಂತೆ. ಹದ್ಕೇಯ ಭೂಕಂಪ್ಸು ಹಂತರೆ. ಅಲ್ಲಯ್ಯಾ ಚಂದ್ರಂಗಾದ್ರೂ ಒಸಿ ಬುದ್ಧಿ ಬ್ಯಾಡ್ವಾ ? "

" ಈಗ ನಮ್ಕತೆ ಯೋಳು ಮುಂದೆ ಭಾರತ ದೇಸ್ದಾಗೂ ಐತಾ ತುನಾಮಿ ಭೂಕಂಪ್ಸು ಎಂಗೆ?"

" ಅದೆ ಕಣ್ಲಾ ಎಲ್ಲಾಕಡೀಕ್ಕೂ ಅದೆ. ವರ್ಸಾ ವರ್ಸಾ ಊರಬ್ಬ ಮಾಡಿ ಕುರಿ-ಕೋಳಿ ಕೊಡ್ದೇವೋದ್ರೆ ಇದು ಆಗೇ ಆತದೆ"

---------------

" ಓಗ್ಲಿ ಬುಡಣಾ ನಮ್ ಮುಕ್ಮಂತ್ರಿ ಮುಂದೆ ಹದೇನೋ ಬುವನೇಸ್ವರಿ ದೇವಿ ಹಂತಾ ಕಟ್ಟುಸ್ತಾವ್ರಂತೆ. ಅದ್ಕೇ ಅದೆಷ್ಟೋ ಕೋಟಿ ಎತ್ತಿ ಮಡ್ಗವ್ರೆ ಅಷ್ಟೆಲ್ಲಾ ಬೇಕಾತದ ಒಂದು ಮೂರ್ತಿಗೆ ? "

" ಮಂತ್ರಿಗಿರಿ ಯಾಕೆ ಸುಮ್ನೇ ಏನ್ಲಾ? ಈಗೆಲ್ಲಾ ಎಲ್ಲಾ ಇಸ್ಯಾನೂ ಇರೋದ ಪಕ್ಸದವ್ರು ಕಣ್ಣಲ್ಲಿ ಎಣ್ಣೆಬಿಟ್ಗಂಡು ನೋಡ್ತಾ ಕೂತವ್ರೆ. ನಮ್ ಕುಮಾರಣ್ಣಂಗಂತೂ ಬಿಳೀ ಮಗಳಾಯ್ತಲ ಹದ್ಕೇಯ ಮುಂದೆ ಎಂಗಿದ್ರೂ ಸೀಟು ನಿಂಗೇಯ ಅಂದವ್ರಂತೆ. ಕಾಗದಪತ್ರ ಎಲ್ಲಾ ಕಂಪೂಟ್ರಗೆ ಸಿಕ್ಕಾಕಬುಟ್ಟದೆ...ಯಾರೇನ್ಮಾಡದ್ರೂ ಸಿಕ್ಕಾಕಬುಡ್ತರೆ.. ಇಂಗಾಗಿ ಓದಲ್ಲೆಲ್ಲಾ ಹದೂ ಇದೂ ಅಂತಾ ಕೊಟ್ಗಂಬುಟ್ಟು ಸಲ್ಪ ಸಿಗೋ ಪ್ರಸಾದ ಇಸ್ಗಂಡು ಸುಮ್ಕಿರ್ಬೋಕು"

-----------

" ಅಲ್ಲಣಾ ಸಾಲ್ಮರ್ದ ತಿಮ್ಮಕ್ಕ ಅಷ್ಟೆಲ್ಲಾ ಕೂಕ್ಕತದೆ ಒಂದ್ ಹೆರಿಗೆ ಆಸ್ಪತ್ರೆ ಕಟ್ಟಾಕಿ ಹಂತಾವ. ಬರೇ ಪಂಕ್ಸನ್ ಮಾಡದು ಪ್ರಸಸ್ತಿ ಕೊಡದು ಮಾಡ್ತರೆ ಬಿಟ್ರೆ ಆಯಮ್ಮಂಗೆ ಉಳ್ಕಳಕೊಂದು ಮನೆನೂ ಹಿಲ್ವಂತೆ, ಅದ್ಕೇನಾರಾ ಮಾಡ್ಬಾರ್ದಾ ? "

" ಹೋಗಲೇ ಗೂಬೆ ಅದರ್ತಾವ ಎಷ್ಟು ಓಟೈತೆ. ಅಬ್ಬಬ್ಬಾ ಹಂದ್ರೆ ಒಂದೇಯ...ಈಗ್ಲೋ ಆಗ್ಲೋ ನೆಗ್ದ್ ಬೀಳೋ ಮುದ್ಕಿಬೇರೆ..ಹದ್ಕೆಲ್ಲಾ ಕೊಡೋ ಬದ್ಲು ಯಾರಾನಾ ಸಲ್ಪ ಗಟ್ಟಿ ಜನೀನ ಕಂಡು ಮುಂದೆ ಇಲೆಕ್ಸನ್ನಾಗೆ ಕೆಲ್ಸಕ್ಬರೋ ಅಂಗೆ ಮಡೀಕಂಡ್ರೆ ಎಲ್ಲಾ ಸಲೀಸು ಅಂಬೋ ಲೆಕ್ಕಾಚಾರ "

-----------

" ಅಣಾ ಒಬ್ಬ್ ಮನಷ್ತೀಗೆ ಬದೀಕಣಕೆ ಲಕ್ಸಾಂತ್ರ ಎಕರೆ ಕಾಪೀ ತೋಟ ಬೇಕಾ ? ಅದೂ ಯಾವ್ದೇ ಆದಾಯ್ದ ಗಟ್ಟಿ ಮೂಲ ಇಲ್ದೇ ಇರೋ ರಾಜ್ಕೀಯ್ದೋರ್ಗೆ ಯಾವನೋ ಬ್ಯಾಂಕೋನು ಕೋಟಿಗಟ್ಲೆ ಅಣ ಸುರೀತಾನಲ್ಲಣಾ ಇದ್ಯಾವ್ ಮಾಯ ಹಂತೀಯ ? "

" ಯಾರೋ ನಿಂಗೇಳಿದ್ದು ರಾಜ್ಕೀಯ್ದೋರ್ಗೆ ಇನ್ಕಮ್ಮು ಇರಾಕಿಲ್ಲಾ ಹಂತಾವ...? ಅದೂ ಕೂಡ ಬಿಜ್ನೆಸ್ಸು ಕಣಲೇ ಗೂಬ್ನನ್ಮಗನೇ...ಆಳೋರು ನೇರಾಗಿ ಕೊಟ್ಬುಟ್ರೆ ಕಂಡೋತದೆ ಹಂತ ಬ್ಯಾಂಕೋನ್ಗೆ ಯೋಳಿ ಯವಸ್ತೆ ಮಾಡಿರಾದು. ಪಿರೂತಿ ಮುಂದೆ ಯಾವ್ದೈತೆ..ಹದ್ಕೇ ಹಿರೀಕ್ರಂದಿಲ್ವಾ ಗಂಡುಸ್ನ ಸಾಧ್ನೆ ಇಂದೆ ಹೆಂಗ್ಸು ಇದ್ದೇ ಇರ್ತಳೆ ಅಂತ ಅಷ್ಟೇಯ ತಿಳ್ಕ. ಇಂದಿರೋ ಗೆಳ್ತೀಗೆ ಎಂಗಾರಾಮಾಡಿ ಒಂದಷ್ಟು ಕೊಡ್ದೇವೋದ್ರೆ ಎಂಗೆ ಯೋಳು. ಹದ್ಕೇಯ ನಮ್ ಮಣ್ಣಿನ ಮಕ್ಳವ್ರ ಮಕ್ಳೂ ಬಿಳೀ ಬೊಂಬೆಗೆ ಅದೇನೆಲ್ಲಾ ಕೊಡುಸ್ಯವ್ರೆ."

------------

" ಅಣಾ ಟ್ರಷ್ಟು ಪಷ್ಟು ಹಂದ್ರೆಲ್ಲಾ ಯೇನಣಾ ? "

" ಅಂಗಂತವಾ ಒಂದು ಕಮೀಟಿ ಮಾಡ್ಕತರೆ. ರಾಜ್ಕೀಯದೋರ್ ಕಾಲ್ದಗೆ ಯಾರೋ ಒಳ್ಳೇ ಜನ ಮಾಡ್ದ ಟ್ರಷ್ಟ್ಗೂ ಬೆಲೆಯಿಲ್ದಾಂಗಾಗೋಗದೆ. ರಾಜ್ಕೀಯ್ದೋರು ಮಾಡ್ಕಂಬುದು ಕಳ್ ಕಮೀಟಿ. ಎಲ್ಲೆಲ್ಲಿ ತಿಂಬುಕಾತದೆ ಹದ್ನೆಲ್ಲಾ ತಮ್ಕಡೀಗೆ ಮಾಡ್ಕಳಕೇಯ ಕಮೀಟಿ ಎಲ್ಲಾನೂವೆ. ನಿತ್ಯಾನಂದ್ನ ಕಂಡು ಕಾವಿ ಬಟ್ಯೋರ್ನೆಲ್ಲಾ ಹಳ್ದೀಕಣ್ಣಿಂದ ನೋಡ್ತವ್ರಲ್ಲ ಹದೇತರ ಹೀಗ ಎಲ್ಲಾ ಟ್ರಷ್ಟೂನೂ ಆಗ್ಬುಟದೆ. ನಡ್ವೆ ರಾಜ್ಕೀಯ್ದೋರ್ ಬುಟ್ಟು ಯಾರಾನಾ ಸಾಲೆ-ಕಾಲೇಜು ನಡುಸ್ತರ ನೋಡು."

" ಹೌದಣೋ ನಮ್ ಮಾದ ಯೋಳ್ತಿತ್ತುಬೇಸ್ಗೆ ಬಂತು ಅಂದ್ರೆ ಇತ್ಲಾಗೆ ಕುಡಿಯೋ ನೀರ್ಗೂ ಪರ್ದಾಟ ಆಕಡೀಕೆ ಸ್ಕೂಲ್ನಾಗೆ ಸೀಟ್ಗೂ ಪರ್ದಾಟಹಂತಾವ "

" ಇದ್ಯಾದಾನ ಹನ್ನೋ ಹೆಸ್ರಲ್ಲಿ ಬೇಕಷ್ಟು ಅಣಾ ಮಾಡವ್ರೆ ಕಣಪಾ. ಬಡವ್ರ ಕುಡಿಯೋ ಗಂಜೀ ಕಸ್ದಾದ್ರೂ ತಮ್ಗೆ ಬೇಕಾದ್ನ ಮಡೀಕತರೆ."

-----------

" ಅಣಾ ಹೌದೂ ಮರ್ತಿದ್ದೆ ಪಿಸ್ ಬ್ಯಾಂಕಂದ್ರೆ ಯಾವ ಬ್ಯಾಂಕು ? ಮೊನ್ನೆ ಮೂರ್ದಿವ್ಸದ ಕೆಳ್ಗೆ ಪ್ಯಾಟೆಗೆ ಹೋಗಿದ್ನಾ ಹಲ್ಲೆಲ್ಲಾ ತಿರ್ಗೋವಾಗ ಇರೋ ಬರೋ ಎಲ್ಲಾ ಬ್ಯಾಂಕುಗೋಳ್ ಬೋಲ್ಡನ್ನೂ ಓದ್ದೆ ಆದ್ರೆ ಪಿಸ್ ಬ್ಯಾಂಕು ಸಿಗ್ಲೇ ಇಲ್ಲ ಕಣಣೋ "

" ಐತ್ತಲಕಡಿ.... ಅಂಗೆಲ್ಲಾ ಕಾಣ್ಸಕೆ ಅದೇನ್ ಸಣ್ಮುಕಪ್ನ ತಟ್ಟೆ ಇಡ್ಲಿ ಹೋಟ್ಲೇಲ್ನಾ? ಪಿಸ್ ಬ್ಯಾಂಕು ಅಂತ್ಯಲ್ಲ ಎಲ್ಲೂ ಪೇಪರ್ನಗೂ ಓದಿಲ್ವೆ? ಅದು ಸ್ವಿಸ್ ಬ್ಯಾಂಕು ಕಣ್ಲಾ. ಇದೇಸದಾಗಿರೋದು. ರಾಜ್ಕೀಯದೋರು ಮತ್ತೆ ಜಾಸ್ತಿ ದುಡ್ಡಿರೋರು ಸರ್ಕಾರಕ್ಕೆ ಲೆಕ್ಕ ತಪ್ಸಿ ಅಲ್ಲಿ ದುಡ್ ಮಡುಗ್ತರೆ. ಹಲ್ಲಿದ್ರೆ ಅದು ಎಲ್ಲೂ ಹೋಯಾಕಿಲ್ಲ ಅನ್ನೋ ಗ್ಯಾರಂಟಿಮೇಲೆ ಯಾವನೋ ಒಬ್ಬ ಸುರುವಿಟ್ಕಂಡ್ನ..ಅದುನ್ನ ನಮ್ ದುಡ್ಡಿರೋ ಖುಳಗೋಳೆಲ್ಲಾ ಕಂಡ್ಕಬುಟವ್ರೆ"

" ಅಲ್ಲಣಾ ದೇಸಕ್ಕೆ ಬಡ್ತನ ಅಂತವ್ರೆ ಮತ್ಯಾಂಗೆ ಅಲ್ಲೆಲ್ಲಾ ದುಡ್ಡಿಡ್ತರೆ ? "

" ಬಡ್ತನ ಬಡ್ತನ ಅಂಬೋದೆಲ್ಲಾ ಬಾಸಣ ಅಷ್ಟೇಯ. ನಿನ್ನಂತಾ ಮೂದೇವಿಗೊಳ್ನ ಯಾಮಾರ್ಸೋದು ಭಲೇ ಸಲೀಸು. ಇದ್ಯಂಗೆ ಅಂದ್ರೆ ಬೆಂಗ್ಳೂರ್ ಬಸ್ ಸ್ಟ್ಯಾಂಡ್ನಗೆಬ್ಯಾಗ ಕಳ್ದೋಗದೆ ಊರಿಗೋಗಾಕಿಲ್ಲ ಒಸಿ ಹಣ ಕೊಟ್ರೆ ಊರಿಗೋಗುತ್ಲೂವೆ ನಿಮ್ಗೆ ಮನಿ ಆಡ್ರ ಮಾಡ್ತೀನಿಅಂತ ಬತ್ತಾರಲ್ಲ ಹದೇ ರೀತಿ ಬಾಸಣ ಮಾಡ್ಕೋತಾ ಸುಮ್ಕೇ ಹೋಗಿ ಅಲ್ಲಿಟ್ಟು ಬರಾದು."

" ಮತ್ತೆ ಸರಕಾರ ನಡ್ಸೋ ಮಂದಿ ಎಂಗಾದ್ರೂ ಮಾಡಿ ಅದ್ನ ಪತ್ತೆ ಅಚ್ಚಿ ಇಸ್ಗಂಬೋದಲ್ವ ? "

" ಅಂಗೆಲ್ಲಾ ಆಯ್ತದೇನ್ಲಾ ? ಅಲ್ಲೇನಾಗದೆ ನನ್ನ ನಿನ್ನ ಬಿಟ್ಟು ಆಳೋ ಪಕ್ಸ ಇರೋದ್ ಪಕ್ಸ ಹನ್ನೋ ಬೇದ ಇಲ್ದೇ ಎಲ್ರೂ ಸಕ್ತಿಮೀರಿ ಮಡಗವ್ರೆ. ಜರ್ ಯಾರಾನಾ ಒಬ್ಬ ತಕಂಬರೋಕೋದ್ರೆ ಎಲ್ಲರ ಎಸ್ರೂ ಕಾಣಸ್ಕಬುಡ್ತದೆ. ಬರೇ ಯೋಳ್ತರೆ ಅಲ್ಲದೆ ಅಲ್ಲದೆ ಅಂತಾವ ಆದ್ರೆ ಯಾರೂ ತರಾಕೋಯಾಕಿಲ್ಲ "

" ಅಣಾ ನಾ ಬರ್ಲಾ ಹೊತ್ತಾತದೆ ಮತ್ತಿಂಗೆ ಸಿಗುಮು ? "

" ಚೋದಿ ಮಗ್ನೆ ಇಸ್ಯ ಒಟ್ಟಾಕಣಕೆ ಅಣ್ಣ ಬೇಕು ಮಿಕ್ಕಿದ್ದಕ್ಕೆ ಬ್ಯಾಡ ನಿಂಗೆ....ಒಸಿ ಏನಾರಾ ಯವಸ್ತೆ ಗಿವಸ್ತೆ ಮಾಡೀಯೋ ಇಲ್ಲಾ ಅಂಗೇ ಒಂಟೋಯ್ತೀಯೋ ? "

" ಇಲ್ಲಣಾ ಉಗಾದಿಗೆ ಒಸ್ತಡ್ಕು ಮಾಡ್ತೀವಲ್ಲ ಅದ್ಕಿರಲಿ ಅಂದವ್ನೆ ತಿಮ್ಮೇಗೌಡ ಅದ್ಕೇಯ ಇವತ್ತು ತರ್ನಿಲ್ಲ"

" ಮುಂದಿಂದ್ ಮುಂದೆ ಕಣಲೇ ಇಂದ್ನ ಕತೆ ಯೋಳು ನೀ ಈಗೇನ್ ತತ್ತೀಯೋ ಹಿಲ್ಲಾ ನಾನೇ ತರ್ಲೋ ? "

" ಇದೊಂದ್ಕಿತಾ ಬುಟ್ಬುಡಣಾ ಉಗಾದಿ ಆಕ್ಕಬುಡ್ಲಿ ಆಮೇಲೆ ಎಂಗೂ ಇದ್ದೇ ಅದೆ "

" ಆಯ್ತೋಗು ಉಗಾದಿ ಮಾರ್ನೇದಿನ ತರ್ಲಿಲ್ಲಾ ಅಂದ್ರೆ ನಿನ್ ಹುಟ್ಲಿಲ್ಲಾ ಅನ್ನಸ್ಬುಡ್ತೀನಿ ಹೋಗು "

Friday, March 11, 2011

ಬೊಂಬೆಯಾಟವಯ್ಯಾ ಆ ದೇವನಾಡುವಾ .....

ಚಿತ್ರ ಕೃಪೆ : ಅಂತರ್ಜಾಲ
ಬೊಂಬೆಯಾಟವಯ್ಯಾ ಆ ದೇವನಾಡುವಾ .....

ಜಪಾನಿನ ಸುನಾಮಿ ಆಕಸ್ಮಿಕದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಸೃಷ್ಟಿಯ ಈ ವಿಕೋಪವನ್ನು ನೆನೆಯುತ್ತಿದ್ದೇನೆ. ಜಗತ್ತಿನಲ್ಲಿಯೇ ಅತೀ ಉತ್ಕೃಷ್ಟ ತಂತ್ರಜ್ಞಾನವನ್ನು ಆವಿಷ್ಕಾರಗೊಳಿಸುವ ದೇಶ ಜಪಾನ್. ಭಾರತದ ೨೨,೦೦೦ ಜನರೂ ಸೇರಿದಂತೇ ಹಲವು ರಾಷ್ಟ್ರಗಳ ಜನರು ಇಲ್ಲಿ ಉದ್ಯೋಗದಲ್ಲಿ ತೊಡಗಿದ್ದಾರೆ. ಮತ್ತೆ ಮತ್ತೆ ಮರುಕಳಿಸುವ ಭೂಕಂಪವನ್ನು ದಿನನಿತ್ಯದ ಅನಿವಾರ್ಯತೆಯೆಂದು ಸ್ವೀಕರಿಸಿ ಹೆದರದೇ, ಹಲವುಸಲ ಫೀನಿಕ್ಸ್ ಹಕ್ಕಿಯಂತೇ ಮತ್ತೆ ಜೀವತಾಳಿ ಮೇಲೆದ್ದ ರಾಷ್ಟ್ರ ಜಪಾನ್. ಬಹುಶಃ ಇದೇ ಒಂದು ಕಾರಣಕ್ಕೆ ಅಲ್ಲಿನ ಆ ಜನರಿಗೆ ಅಷ್ಟು ನೈಪುಣ್ಯತೆಯನ್ನು ಸೃಷ್ಟಿ ಒದಗಿಸಿದೆಯೇನೋ ಅನಿಸುತ್ತದೆ.

ಒಂದುಕಡೆ ಯಾವ ಕ್ಷಣದಲ್ಲೂ ಘಟಿಸಬಹುದಾದ ಭೂಕಂಪ, ಇನ್ನೊಂದು ಕಡೆ ಅಭಿವೃದ್ಧಿಯತ್ತ ಹೊಸ ತಂತ್ರಜ್ಞಾನಗಳ ಆವಿಷ್ಕಾರ...ಈ ಎರಡು ಶೃಂಗಗಳ ನಡುವೆ ಅತೀ ಲಘುವಾದ ಹಾಗೂ ಬಾಳಿಕೆಬರುವ ವಸ್ತುಗಳಿಂದ ಕಟ್ಟಡಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡವರು ಜಪಾನೀಯರು. ಅಲ್ಲಿನ ತಂತ್ರಜ್ಞಾನವೇ ಅವರ ನಿಜವಾದ ಬಂಡವಾಳ ಎಂದರೆ ತಪ್ಪಾಗಲಾರದೇನೋ. ಅವರು ತಯಾರಿಸಿದ ಯಾವುದೇ ವಸ್ತುವಿರಲಿ ಅದಕ್ಕೆ ಜಗತ್ತಿನಾದ್ಯಂತ ಬೇಡಿಕೆ. ಹೇಗೆ ಚೀನಾ ಅತೀ ಕಮ್ಮಿ ದರದಲ್ಲಿ ಬಾಳಿಕೆಬರಲಾರದ ಉತ್ಫನ್ನಗಳನ್ನು ತಯಾರಿಸಿದರೆ ಜಪಾನ್‍ನ ಉತ್ಫನ್ನಗಳು ಬಾಳಿಕೆಯಲ್ಲಿ ವಿಶ್ವಗುಣಮಟ್ಟವನ್ನು ಹೊಂದಿದಂಥವು. ಬೇರೇ ದೇಶಗಳೊಂದಿಗೆ ದರದಲ್ಲಿ ಪೈಪೋಟಿ ನಡೆಸದೇ ತಾವು ಸೃಜಿಸುವ ವಸ್ತುಗಳಲ್ಲಿ ತಮ್ಮತನವನ್ನು ಮೆರೆದವರು ಜಪಾನೀಯರು. ನೋಡಲು ಕುಬ್ಜರಾದರೂ ಮೆದುಳುಮಾತ್ರ ಬಹಳ ಚುರುಕು! ಬಹಳ ಚಾಲಾಕು.

ನಾಗಾಸಾಕಿ, ಹಿರೋಶೀಮಾ ಮೊದಲಾದ ಜಾಗಗಳು ಮತ್ತು ಅಲ್ಲಿ ನಡೆದ ಕೆಲವು ಘಟನೆಗಳು ನಮಗೆ ಜಪಾನನ್ನು ಆಗಾಗ ನೆನಪಿಗೆ ತರುತ್ತಲೇ ಇರುತ್ತವೆ. ನಮ್ಮಲ್ಲಿ ತುಸು ಜೋರಾಗಿ ಗಾಳಿ ಬೀಸಿದಷ್ಟು ಸಹಜ ಅಲ್ಲಿನ ಭೂಕಂಪ. ಚಿಕ್ಕ-ಪುಟ್ಟ ಭೂಕಂಪವೇನು ರಿಕ್ಟರ್ ಮಾಪಕದಲ್ಲಿ ೬-೭ ಕಾಣಿಸಿಕೊಂಡರೂ ತೀರಾ ತಲೆಕೆಡಿಸಿಕೊಂಡ ಜನಸಮುದಾಯ ಅದಲ್ಲ. ಬದಲಿಗೆ ಸದಾ ಮೃತ್ಯುವಿನ ದವಡೆಯಲ್ಲೇ ಜಾಗಮಾಡಿಕೊಂಡು ಕಾಲಹಾಕಿದವರು-ಕಾಲಹಾಕುತ್ತಿರುವವರು ಜಪಾನೀಯರು. ವಿದ್ಯುನ್ಮಾನ ರಂಗದಲ್ಲಿ ಆದ ವೇಗದ ಬೆಳವಣಿಗೆಗಳಲ್ಲಿ ಜಪಾನಿನ ಕೊಡುಗೆ ಸಿಂಹಪಾಲು. ಯಾವುದೇ ವಿದ್ಯುನ್ಮಾನ ವಸ್ತುವನ್ನು ತೆಗೆದುಕೊಳ್ಳಿ ಇಂದಿಗೂ ಅವರದ್ದೇ ಆದ ಕೊಡುಗೆ ಅಲ್ಲಿರುತ್ತದೆ! ಅನಿಶ್ಚಿತತೆಯ ನಡುವೆಯೂ ಅದನ್ನು ಮರೆತು ಸೃಜನಶೀಲರಾಗಿ ಬದುಕಲು ಕಲಿಯುವ ಆ ಮೂಲಕ ಜಗತ್ತಿಗೆ ಬದುಕುವ ಕಲೆಯನ್ನು ಬೋಧಿಸುವ ಆ ಮಂದಿ ಬಹಳ ಶ್ರಮಜೀವಿಗಳು.

ನಮ್ಮಂತಹ ದೇಶಗಳಲ್ಲಿ ಯಾವುದೇ ಅಪಘಾತವಾದರೆ ನಾವು ಪರಿಹಾರಕ್ಕೋ ನೆರವಿಗೋ ಬಾಯಿಬಾಯಿ ಬಿಡುತ್ತಾ ಕೂತುಬಿಡುತ್ತೇವೆ. ಮಂತ್ರಿ-ಮಾಗಧರು ಕಂಡರೂ ಕಾಣದಹಾಗೇ ಕೇಳಿದರೂ ಕೇಳದಹಾಗೇ ತಿಳಿದರೂ ತಿಳಿಯದಹಾಗೇ ಇದ್ದುಕೊಂಡು ತಡವಾಗಿ ಮಾಧ್ಯಮಗಳಲ್ಲಿ ಉತ್ತರಿಸುತ್ತಾರೆ! ಆ ಕಾಲದಲ್ಲೂ ಆಳುವ ಪಕ್ಷ ಮತ್ತು ವಿರೋಧಪಕ್ಷಗಳ ಜಗಳಗಳು ಮುಂದುವರಿಯುತ್ತವೆ. ಪರಿಹಾರಕ್ಕಾಗಿ ಸಮಾಜದಿಂದ ಬೇಡಿಪಡೆದ ’ಕೈ’ಗಳೇ ಅದನ್ನು ಸರಿಯಾಗಿ ತಲುಪಿಸದೇ ಮಧ್ಯೆ ತಿಂದುಹಾಕುತ್ತವೆ. ಸತ್ತ ಸಾವಿರಾರು ಜನರಿಗಾಗಿ ಜೀವಸಹಿತ ಉಳಿದ ಹಲವುಸಾವಿರ ನಿರಾಶ್ರಿತರಿಗಾಗಿ ಎಲ್ಲಾ ಸೇರಿ ಅಲ್ಲೆಲ್ಲೋ ಸಭೆಗಳನ್ನು ಮಾಡಿ ನಾವಿದ್ದೇವೆ ಎಂದು ಧ್ವನಿವರ್ಧಕದಲ್ಲಿ ಹೇಳಿಹೋದವರು ಮತ್ತೆ ಆ ಕಡೆ ತಲೆಹಾಕುವುದು ಚುನಾವಣೆ ಬಂದ ಸಂದರ್ಭಗಳಲ್ಲಿಯೇ! ಯಾವುದೋ ಮಠ-ಮಾನ್ಯ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳು ಕೊಡಬಹುದಾದ ಪರಿಹಾರವೇ ದೊಡ್ಡದಾಗಿರುತ್ತದೆ. ಆದರೆ ಜಪಾನಿನಲ್ಲಿ ಇಂದಿನ ಆ ದುರಂತ ಸನ್ನಿವೇಶ ಕಾಣುತ್ತಿರುವಂತೆಯೇ ಅವರು ೯೦೦ ಜೀವರಕ್ಷಕ ದಳಗಳನ್ನು ಕಳಿಸಿದ್ದಾರೆ. ತೊಂದರೆಗಳಲ್ಲಿ ಸಿಲುಕಿದ ಜನರಿಗೆ ಹಲವು ಮಾರ್ಗಗಳ ಮುಖಾಂತರ ಸಹಾಯ ಒದಗಿಸಲು ಹೆಣಗಾಡುತ್ತಿದ್ದಾರೆ.

ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಆದಷ್ಟೂ ಅದನ್ನು ಮರೆತು ಮೆರೆಯುತ್ತೇವೆ. ನಮ್ಮ ಜೀವನವೇ ನಮ್ಮ ಕೈಯ್ಯಲ್ಲಿಲ್ಲ ಎಂಬುದು ನಮಗೇ ಅರಿವಿಗೆ ಬಾರದ ಮಿಥ್ಯಾಪ್ರಪಂಚದಲ್ಲಿ ಇಂತಹ ಘಟನೆಗಳನ್ನು ಮಾಧ್ಯಮಗಳಲ್ಲಿ ಕಾಣುವಾಗ ನಮಗನಿಸುವುದು " ಓಹೋಹೋ ಏನಪ್ಪಾ ಇದು ಸಾವಿರಾರು ವಾಹನಗಳೇ ಬೊಂಬೆಗಳ ಮಕ್ಕಳಾಟಿಕೆಯ ವಾಹನಗಳ ರೀತಿ ನೀರಿನಲ್ಲಿ ಕೊಚ್ಚಿಹೋಗುತ್ತಿವೆ ? "ಎಂದು ನಮ್ಮಲ್ಲೇ ಅಂದುಕೊಳ್ಳುತ್ತೇವೆ. ಬೀಸಿ ಬರುವ ಚಂಡಮಾರುತಕ್ಕಾಗಲೀ, ನುಗ್ಗಿಬರುವ ನೀರಿಗಾಗಲೀ, ಹೊತ್ತುರಿಯುತ್ತ ಬರುವ ಬೆಂಕಿಗಾಗಲೀ ನಮ್ಮ ಯಾವ ಆಧುನಿಕ ತಂತ್ರಜ್ಞಾನವೂ ತಡೆಹಾಕಲಾರದಲ್ಲ ! ಏನಿದ್ದರೂ ಸಣ್ಣ ಮಟ್ಟದಲ್ಲಿರುವ ಅವುಗಳನ್ನು ಹೇಗೋ ನಿಯಂತ್ರಿಣಕ್ಕೆ ತಂದಾಗ ’ನಾವು ಮಾಡಿದ್ದೇವೆ’ ಎಂದುಕೊಳ್ಳಬಹುದೇ ಹೊರತು ಮಿತಿಮೀರಿದ ಮಟ್ಟದಲ್ಲಿ ಅವುಗಳ ವ್ಯಾಪಕತ್ವ ಬೆಳೆದುನಿಂತಾಗ ಮನುಷ್ಯ ಸೋತುಹೋಗುತ್ತಾನೆ; ಕುಬ್ಜನಾಗಿ ಕಾಣುತ್ತಾನೆ.

ಇದೇ ಸಂದರ್ಭಗಳಲ್ಲಿ ನಮ್ಮಲ್ಲಿ ಮಾಧ್ಯಮವನ್ನು ಆತುಕೊಂಡಿರುವ ಹಣದ ಥೈಲಿಯ ಜ್ಯೋತಿಷಿಗಳು ಹೊಟ್ಟೆತೊಳೆದುಹೋದವರಂತೇ ಬಡಬಡಿಸುತ್ತಾ ಜನರಲ್ಲಿ ಇನ್ನಷ್ಟು ದಿಗಿಲನ್ನು ಉಂಟುಮಾಡುವುದು ವಿಪರ್ಯಾಸವೆನಿಸುತ್ತದೆ. ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಮಹಾಜನಗಳೇ ಕೇಳಿ-- ನಿಮ್ಮ ಹಣೆಯಲ್ಲಿ ಏನು ಬರೆದಿದೆಯೋ ಅದನ್ನು ಯಾವನೇ ಜ್ಯೋತಿಷಿಯೂ ತಿದ್ದಲಾರ. ಅದು ನಿಮಗೆ ಬೇಕಾಗಿರಲಿ ಬೇಡವಾಗಿರಲಿ ಘಟಿಸೇ ಘಟಿಸುತ್ತದೆ. ಅಂದಮೇಲೆ ಕೇವಲ ತಂತಮ್ಮ ಉಳಿವಿಗಾಗಿ ಓಡಿಹೋಗಿ ದೇವಸ್ಥಾನಗಳಲ್ಲೋ ಮಸೀದಿಗಳಲ್ಲೋ ಇಗರ್ಜಿಗಳಲ್ಲೋ ದೀಪಹಚ್ಚುವುದೇ ಮೊದಲಾದ ತುರ್ತು ಕಾರ್ಯ ಬೇಕಾಗಿಲ್ಲ! ದೀಪವನ್ನು ನಿತ್ಯವೂ ಹಚ್ಚಿ-ಅದು ಜ್ಞಾನವನ್ನೀಯುವ ಸಂಕೇತ,ಅದು ಅಂಧಕಾರವನ್ನು ಕಳೆಯುತ್ತದೆ. ಬದಲಾಗಿ ಸ್ವಾರ್ಥಿಯಾಗಿ ತಾನೋ ತಮ್ಮನೆಯವರೋ ಇತ್ಯಾದಿಯಾಗಿ ಹಾಯಾಗಿರಲಿ ಎಂದು ವಿಶೇಷವಾಗಿ ಪ್ರಾರ್ಥಿಸುವ ಕೈಂಕರ್ಯ ಬೇಡ. ಹುಟ್ಟಿಸಿದಾತನಿಗೆ ಗೊತ್ತು ನಿಮ್ಮ ಜಾತಕ. ಕೊಡುವಾತನಿಗೆ ಕೊಳ್ಳುವ ಹಕ್ಕೂ ಅರ್ಹತೆಯೂ ಪರಿಪೂರ್ಣ ಮಾಹಿತಿಯೂ ಇರುತ್ತದೆ. ತಾನೇ ಸೃಷ್ಟಿಸಿದ ಪ್ರಪಂಚವನ್ನು ಹೇಗೆ ಸುಸ್ಥಿತಿಯಲ್ಲಿಡಬೇಕು ಅಥವಾ ಯಾವಾಗ ನಾಶಗೊಳಿಸಬೇಕೆಂಬುದು ಆತನ ಲಕ್ಷ್ಯಕ್ಕಿರುತ್ತದೆ. ಹೀಗಾಗಿ ಹೆದರಿಕೆಯಿಂದ ನಾವು ಮಾಡುವ ಯಾವುದೇ ಪ್ರಾರ್ಥನೆಯೂ ಫಲಿಸುವುದಿಲ್ಲ. ಬದಲಾಗಿ ದೇವರೆಂಬ ಶಕ್ತಿಯನ್ನು ಕಚ್ಚಾಟವಿಲ್ಲದೇ ನಿತ್ಯವೂ ಸ್ನೇಹಿತನರೀತಿ, ನಮ್ಮದೇ ತಂದೆ-ತಾಯಿಗಳನ್ನು ನೋಡುವ ರೀತಿ[ಇಲ್ಲಿ ಕೆಲವರು ತಂದೆ-ತಾಯಿಗಳನ್ನು ನೋಡಿಕೊಳ್ಳುವ ರೀತಿ ಬದಲಿರಬಹುದು: ಅವರನ್ನು ಕೈಬಿಡಲಾಗಿದೆ]ನೋಡಿ ಆ ಶಕ್ತಿಯಲ್ಲಿ ನಿಮ್ಮ ದೈನಂದಿನ ಕರ್ತವ್ಯಪಾಲನೆಯ ವರದಿಯನ್ನು ಒಪ್ಪಿಸಿ. ಅದೇ ಸರಿಯಾದ ಮಾರ್ಗವೇ ಹೊರತು ವಿಜ್ಞಾನ ಜ್ಯೋತಿಷಿಗಳೆಂದುಕೊಳ್ಳುವವರಾಗಲೀ, ಧೂಳುಮೂಟೆಯಂತೇ ಪೀಠತುಂಬಾ ಮೈಚೆಲ್ಲಿ ಕುಳಿತು ಅಕರಾಳ ವಿಕರಾಳವಾಗಿ ಕೈಯ್ಯಾಡಿಸುತ್ತಾ ಬಾಯಿಗೆ ಬಂದಿದ್ದನ್ನು ಹಲಬುವವರಾಗಲೀ ಜ್ಯೋತಿಷ್ಯದಲ್ಲಿ ಇದಮಿತ್ಥಂ ಎನ್ನುತ್ತಾ ಇರುವ ಹತ್ತು ಬೆರಳಿಗೆ ಇಪ್ಪತ್ತೋ ಇಪ್ಪತ್ತೈದೋ ಉಂಗುರ ತೊಟ್ಟು ಭವಿಷ್ಯ ನುಡಿಯುವವರಾಗಲೀ ಹೇಳುವುದು ಕೇವಲ ಕೇವಲ ಕಾಕತಾಳೀಯ.

ಇಲ್ಲಿ ಒಂದನ್ನು ನೆನಪಿಡಬೇಕು. ಖಗೋಲ ಗಣಿತ ಸತ್ಯ. ಅದರಿಂದ ಅವರು ಗುಣಿಸಿ ಹೇಳುವ ಗ್ರಹಣವೇ ಮೊದಲಾದ ಘಟನೆಗಳೂ ಸತ್ಯ. ಆದರೆ ಫಲ ಜ್ಯೋತಿಷ್ಯ ಇದೆಯಲ್ಲಾ--ಇದರಲ್ಲಿ ಹುರುಳಿಲ್ಲ. ಎಲ್ಲಾಂದರೆ ನಾಳೆ ಏನು ಘಟಿಸುತ್ತದೆ ಎನ್ನುವುದನ್ನು ಮೊದಲೇ ಸೂಚಿಸಲು ಮುಖ್ಯಮಂತ್ರಿಗಳಿಗೋ ಪ್ರಧಾನಮಂತ್ರಿಗಳಿಗೋ ಆಪ್ತ ಜ್ಯೋತಿಷ್ಯ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತಿತ್ತು. ಹಾಗಾಗುವುದಿಲ್ಲ ಯಾಕೆ ? ಯಾವ ಜ್ಯೋತಿಷಿಯೂ ಪರಿಪೂರ್ಣನಲ್ಲ. ಅದಲ್ಲದೇ ಫಲ ಜ್ಯೋತಿಷ್ಯದಲ್ಲಿ ಅವರ ಆಧ್ಯಾತ್ಮಿಕ ಬ್ಯಾಲೆನ್ಸ್ ಖರ್ಚಾಗುತ್ತದೆ--ಅವರು ಮಾಡಿದ ಜಪ-ತಪ ಪ್ರಾರ್ಥನೆಯಿಂದ ಅವರು ಹೆಳಿದ ಕೆಲವು ಸಂಗತಿಗಳು ನಡೆಯಬಹುದು --ಆದರೆ ಅಂತಹ ತಪೋ ನಿಷ್ಠ ಜ್ಯೋತಿಷಿಗಳು ಮಾಧ್ಯಮಗಳಲ್ಲಿರಲಿ ನಗರವಾಸಿಗಳಿಗಂತೂ ಸಿಗುವುದಿಲ್ಲ.

ಪ್ರಕೃತಿಯಲ್ಲಿ ಯಾವುದು ಆಗಬಾರದಿತ್ತೋ ಅಂತಹ ಅನಾಹುತಗಳು ಆಗಾಗ ಘಟಿಸುತ್ತವೆ. ನಮ್ಮೆಲ್ಲರನ್ನು ಆಗಾಗ ಭಯ ವಿಹ್ವಲರನ್ನಾಗಿ ಮಾಡುತ್ತವೆ. ಚಲಿಸುವ ರೈಲು ಅಪಘಾತಕ್ಕೀಡಾದಾಗ ರೈಲಿನಲ್ಲಿ ಹೋಗಲು ಭಯ, ಹಾರುವ ವಿಮಾನ ಧರೆಗುರುಳಿ ಉರಿದುಹೋದಾಗ ವಿಮಾನಯಾನದಲ್ಲೇ ಶಂಕೆ, ಮಾರ್ಗಮಧ್ಯೆ ಅಪಘಾತಕ್ಕೀಡಾದ ವಾಹನಗಳನ್ನು ನೋಡಿ ವಾಹನಪ್ರಯಾಣವೇ ಬೇಡವೆಂಬ ಅನಿಸಿಕೆ, ಯಾವುದೋ ಕಟ್ಟಡ ಕುಸಿದುಬಿದ್ದದ್ದನ್ನು ನೋಡಿ ನಾವಿರುವ ತಾಣ ಗಟ್ಟಿಯಿದೇಯೋ ಅಲುಗಾಡುತ್ತಿದೆಯೋ ಎಂಬ ಆತಂಕ, ಬಾಂಬು ಹಾಕಿದ್ದಾರೆಂಬ ಸುದ್ದಿ ತಿಳಿದಾಗ ನಗರವಾಸವೇ ಬೇಡ ಎಂಬ ತೀರ್ಮಾನ .....ಹೀಗೇ ಒಂದೇ ಎರಡೇ ನಮ್ಮ ಅನಿಸಿಕೆಗಳು ಹಲವು. ಆದರೆ ನಮ್ಮ ಭಾವನೆಗಳನ್ನೂ ಮೀರಿದ ಜಗನ್ನಿಯಾಮಕ ಶಕ್ತಿ ನಾವು ಏನೇ ಮಾಡಿದರೂ ಅದರ ಕರ್ತವ್ಯದಲ್ಲಿ ಅದು ನಿರತವಾಗಿರುತ್ತದೆ. ಭುವಿಯ ಋಣ ತೀರಿದ ಜೀವಿಯನ್ನು ಕ್ಷಣಕಾಲವೂ ಇಲ್ಲಿರಗೊಡದು ಆ ಶಕ್ತಿ. ಋಣವಿದ್ದರೆ ಏನೇ ಆದರೂ ಸಾಯುವ ಪ್ರಶ್ನೆ ಬರುವುದೇ ಇಲ್ಲ.

ಅರೆಪ್ರಜ್ಞಾವಸ್ಥೆಯಲ್ಲಿ ೩೭ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಇನ್ನೂ ಜೀವದಿಂದಿರುವ ಅರುಣಾ ಶಾನಭಾಗ್ ಸುದ್ದಿ ಕೇಳಿದ್ದೀರಿ. ಕೊಂಕಣ ರೈಲ್ವೆಯಲ್ಲಿ ಕೆಲಸಮಾಡುತ್ತಿದ್ದ ದಕ್ಷಿಣ ಕನ್ನಡದ ಶೆಟ್ಟರೊಬ್ಬರು ಬೆನ್ನಮೇಲೆ ಕಲ್ಲು ಬಿದ್ದ ಪರಿಣಾಮ ೧೭-೧೮ ವರ್ಷಗಳಿಂದ ಸೊಂಟದಕೆಳಭಾಗಕ್ಕೆ ಯಾವುದೇ ಚಲನೆಯಿಲ್ಲದೇ ಮುದಿ ತಾಯಿಯ ಶುಶ್ರೂಷೆಯಲ್ಲಿ ಇನ್ನೂ ಜೀವದಿಂದಿದ್ದಾರೆ. ಇವರುಗಳಿಗೆಲ್ಲಾ ನಮ್ಮ ಆಧುನಿಕ ಔಷಧೀಯ ಪದ್ಧತಿಗಳೂ ಏನೂ ಮಾಡಲಾಗಲಿಲ್ಲ! ಎರಡು ದೇಹದಾಕೃತಿಗಳು ಇದ್ದ ಸಣ್ಣ ಮಗು ಲಕ್ಷ್ಮಿಯ ಶರೀರದ ಬೇಡದ ಭಾಗಗಳನ್ನು ತೆಗೆದುಹಾಕಿ ಮತ್ತೆ ಸಾಧಾರಣ ಮಾಮೂಲು ಶರೀರದ ರೂಪಕ್ಕೆ ತಂದಿದ್ದಾರೆ--ಇದು ಸಾಧ್ಯವಾಯಿತು, ಆದರೆ ಎಳವೆಯಲ್ಲೇ ಆ ಹುಡುಗಿ ಬಹುದೊಡ್ಡ ಶಸ್ತ್ರಕ್ರಿಯೆಗೆ ಒಳಗಾಗಬೇಕಾಯಿತು. ಅಂದಮೇಲೆ ಎಲ್ಲರ ಮಾಹಿತಿಯನ್ನೂ ದಾಖಲಿಸಿಕೊಳ್ಳುವ ಸರ್ವೇ ವಿಭಾಗವೊಂದಿದೆ ಅಂತಾಯಿತು! ಆ ಸರ್ವೇ ವಿಭಾಗ ನಮಗೆ ಕಾಣುವಂಥದ್ದಲ್ಲ, ಕಾಣದಿದ್ದರೂ ಕಾರ್ಯಮಾತ್ರ ನಡೆದೇ ಇದೆ.

ಜಪಾನಿನಲ್ಲಿ ಪ್ರಕೃತಿ ವಿಕೋಪ ನಡೆದ ಈ ಸಂದರ್ಭದಲ್ಲಿ ನಾವು ಪ್ರಾರ್ಥಿಸಬಹುದಾದದ್ದಿಷ್ಟೇ " ಹೇ ಜಗನ್ನಿಯಾಮಕನೇ, ಮಾನವ ಮಾತ್ರರು ಹಿಂದೆ ಮಾಡಿದ ಎಲ್ಲಾ ಕುಕೃತ್ಯಗಳನ್ನೂ ತಜ್ಜನಿತ ಪಾಪಫಲಗಳ್ನೂ ಒಮ್ಮೆ ನಿನ್ನ ಪುಸ್ತಕದಿಂದ ಅಳಿಸಿಬಿಡು. ಹಲವರ ಆಕ್ರಂದನ ಕೇಳಿ ನಾವು ಮನಸಾ ಸೋತಿದ್ದೇವೆ, ನೋವನುಭವಿಸುತ್ತಿದ್ದೇವೆ. ನಿನ್ನ ಕ್ರೀಡಾಂಗಣವಾದ ಈ ಜಗದಲ್ಲಿ ಆದಷ್ಟೂ ಮತ್ತೆಂದೂ ಇಂತಹ ದುರ್ಘಟನೆಗಳು ಮರುಕಳಿಸದಂತೇ ಶಾಂತಿಯಿಂದ ನಡೆಸು. ನೀನೇ ಇಚ್ಛಿಸಿದಷ್ಟು ದಿನ ಇದ್ದು ನಿನ್ನಲ್ಲಿಗೇ ಮರಳುತ್ತೇವೆ ..ಆದರೆ ಆ ನಡುವೆ ಈ ದಯನೀಯ ಸ್ಥಿತಿಗೆ ನಮ್ಮನ್ನು ನೂಕುವ ನೂಕಿ ಪರೀಕ್ಷಿಸುವ ಹಂತ ಬೇಡ. ಎಲ್ಲರೂ ನಿನ್ನ ಮಕ್ಕಳೇ. ತಪ್ಪು ಮಾಡಿದ ಮಕ್ಕಳನ್ನು ಕ್ಷಮಿಸುವುದು ತಂದೆಯಾದ ನಿನ್ನಲ್ಲೇ ಇದೆ. ನಮಗೆಲ್ಲಾ ಒಳ್ಳೆಯ ಪ್ರೇರೇಪಣೆ ಕೊಡು. ಎಲ್ಲರಿಗೂ ಒಳಿತಾಗಲಿ, ಎಲ್ಲೆಲ್ಲೂ ಸುಭಿಕ್ಷ, ಸಮೃದ್ಧಿ ನೆಲೆಸಲಿ."