ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 28, 2011

ಈ 'ಸಮಯ' ಆನಂದಮಯ’ !


ಈ 'ಸಮಯ' ಆನಂದಮಯ !
ತೀಟೆ ತಾಳಲಾರದ ಆತ
ಸಣ್ಣ ನಡುವಿನ ಸುಂದರಿಯ
ಬಳುಕುವ ವಯ್ಯಾರಕ್ಕೆ ಮನಸೋತು
"ನಾ ದುಷ್ಯಂತ ನೀ ಶಕುಂತಲೆ "ಎಂದ !

ಮಸಿಮಂಗನಂತೇ ಬಾಗಿ ಮುಸಿಮುಸಿ ನಗುತ್ತಾ
ಹಲ್ಕಿರಿದು ನಿಂತ ತೊಳೆದಿಟ್ಟ
ಮಸಿಕೆಂಡದಂಥಾ ದುಷ್ಯಂತನನ್ನು
ಸಿವನೇ ಸಂಭುಲಿಂಗವೆನ್ನುತ್ತಾ
ಕಡೆಗಣ್ಣಿನಿಂದಲೇ ನೋಡಿ ಎಚ್ಚರತಪ್ಪುತ್ತಾ
ನೀರೆ " ನಾ ಒಲ್ಲೆ " ಎಂದಳಾದರೂ
ಕಣ್ವರಿರದ ತಾಣ ಅದಾಗಿರುವುದರಿಂದ
ಕೈ ಹಿಡಿದು ಬೆನ್ನು ಸವರಿ ಸೊಂಟ ಬಳಸಿ
ಕುವರ ತೋರಿದ ನಾನಾ ವಿಧ ಭಂಗಿಯ
ಕಾಸಿನ ಕರಾಮತ್ತು ಕುವರಿಯ ಕಣ್ಣುಕೋರೈಸಿತ್ತು !

ಅಕಟಕಟಾ ಮನೆಯೊಂದಷ್ಟು ಸಾವಿರ ಸೈಟು
ಇಡೀ ರಾಜ್ಯಾಧಿಪತ್ಯವನ್ನು ಗುತ್ತಿಗೆ ಹಿಡಿದಂತೇ
ಕೃಷ್ಣ ಕಿರುಬೆರಳಲ್ಲಿ ಗೋವರ್ಧನವೆತ್ತಿದಂತೇ
ಕನ್ನಡ ಜನತೆಗಾಗಿ ತನ್ನನ್ನೇ ’ಕೊಟ್ಟುಕೊಂಡೆ’
ಎಂದು ಸಾರುವ ಆ ಗಂಡು ಅಪ್ಪ ಹಾಕಿದ ಚಿನ್ನದ
ಬೇಲಿಯನ್ನು ನಸುಕಿನಲ್ಲಿ ಮುಸುಕಿನಲ್ಲಿ ದಾಟಿಹೋದ
ಅಪ್ಪ ಕಣ್ಣಿದ್ದೂ ಕಾಣದಾದ ತ..ತ...ತಡೆಯದಾದ !

ಈ ಕಾಲಕ್ಕೆ ಮರ್ಯಾದಿತವಾಗಿ ಮಾಡಿಕೊಂಡರೆ
ನ್ಯಾಯಲಯ ಕಟ್ಟು ಕಟ್ಟಳೆ
ಗೋವಿಂದ ಕಲಾವಿದರಿಗೆ ವಯಸ್ಸಿನ ಗಡುವಿಲ್ಲ ಅದಕ್ಕೇ
"ನನಗೇನು ಬೇಕೋ ಅದನು ಕೊಟ್ಟು ನಿನಗೇನು ಬೇಕೋ
ಅದನು ಪಡೆಯುವಂಥವಳಾಗು ಮುಗುದೇ" ಎಂದಾಗ
ನಾಗಮಂಡಲಕ್ಕೆ ಹೋಗಿಬಂದ ಮರುದಿನವೇ
ಗರ್ಭಾದಾನವಾಗಿ ’ಮೋಹಿನಿ’ ಜನಿಸಿದಳು !

ಮಾಧ್ಯಮದ ಮಂದಿ ಆ ಸುದ್ದಿ ಕೇಳುತ್ತಲೇ
ನಿಸ್ತಂತು ದೂರವಾಣಿ " ಆ ವಿಷಯದ ಬಗ್ಗೆ
ನಾನೇನೂ ಹೇಳಲಾರೆನೆನ್ನುತ್ತಾ" ನೆಗೆದುಬಿದ್ದು ಹೋಗುತ್ತಿತ್ತು !

ಮಾಟವನ್ನೇ ನಂಬಿ ಬದುಕಿದ
ಮನೆಯಲ್ಲಿ ಮಡದಿ ಮತ್ತುಳಿದವರು
ಕೇಳಿದಾಗ ಯಾರೋ ಜ್ಯೋತಿಷ್ಕರು
"ಹೆಣ್ಣುಮಗುವಾದರೆ ನೀನೇ ಎಂದೆಂದೂ
ರಾಜನೆಂದರು ನಿಮ್ಮ ಕುಟುಂಬವೇ
ರಾಜ್ಯಭಾರ ನಡೆಸುತ್ತದೆಂದರು" ಎಂಬ
ಮಂತ್ರ ದಂಡವನ್ನು ಪ್ರಯೋಗಿಸಿಬಿಟ್ಟ !

’ಕಸ್ತೂರಿ’ಯ ಪರಿಮಳದಂತೇ ತನಗೂ ಇರಲೆಂದ
ಕುವರಿಯ ಒತ್ತಾಸೆಯನು ಕಂಡ ಮುದ್ದಣ
’ಸಮಯ’ಕ್ಕೆ ಸರಿಯಾಗಿ ಕೈಹಾಕುವ
ಮನಸ್ಸುಮಾಡಿದ ’ಮನೋರಮೆ’ಗಾಗಿ

ನೋಡಿರೈ ಅಣ್ಣಂದಿರೇ ತಮ್ಮಂದಿರೇ
ಅಕ್ಕತಂಗಿಯರೇ ಮದುವೆ ಎರಡಾಗುವುದು ನಿಷೇಧ
ಹಲವಾರು ಆದರೆ ಅದು ನಿರ್ವ್ಯಾಜ
ಅಂಕೆಯನ್ನು ಆಪಸ್ನಾತಿಯಲ್ಲಿ ಡೈರಿಯಲ್ಲಿ
ಬರೆದಿಟ್ಟು ವಿಕಸನ ಬಯಸಿದಾಗೆಲ್ಲಾ
ಪುಸಕ್ಕನೇ ಅಲ್ಲಿಲ್ಲಿ ಹೋಗಿ ಅಡ್ಡಡ್ಡ ಉದ್ದುದ್ದ
ಮಲಗಿಬಿಟ್ಟರೆ ಬರುವ ಸಂತಾನಗೋಪಾಲರೆಲ್ಲಾ
ನಮ್ಮವರೇ ಅಲ್ಲವೇ ? ಮುಪ್ಪಿನ ವಯಸ್ಸಿಗೆ
ಆ ಮುದಿ ಅಮ್ಮಂದಿರು ’ಅಪ್ಪಕಟ್ಟಿದ ಪಕ್ಷ’
ಎನ್ನಲು ಆ ಮಕ್ಕಳೆಲ್ಲಾ ಬಂದೇ ಬರುವರಲ್ಲವೇ?

ಯಾವ ಜ್ಞಾನಿಯೂ ವಿಜ್ಞಾನಿಯೂ ಕಾಣದ
ರಸಮಯ ಸಂಶೋಧನೆ ಆ ಕುವರನಿಗೆ
ನಿಜವಾಗಿಯೂ ಕೊಡಬೇಕು ಗೌರವ ಡಾಕ್ಟರೇಟು !
"ಯಾರಲ್ಲೀ...? ವಿದೇಶೀ
ವಿಶ್ವವಿದ್ಯಾಲಯಗಳವರೇ
ನಮ್ಮ ಕರಿದುಷ್ಯಂತನ ವಂಶಾಭಿವೃದ್ಧಿ
’ಜನಪ್ರಗತಿ’ಗೆ ನೀವಾರಾದರೂ ಅದನ್ನು ಕೊಡುವಿರೇ?"
ಕೊಡದಿದ್ದರೆ ಬಿಡಿ ನಮಗೆ ಗೊತ್ತು ಅದೂ ಕೂಡ
ಈಗ ಕಾಸಿಗೆ ಸಿಗುವ ಕಾಗದದ ಸುರುಳಿ!

Friday, February 25, 2011

ಜನ್ಮಾಂತರಗಳ ಫಲ ಸುಳ್ಳಾಗದಲ್ಲ !


ಜನ್ಮಾಂತರಗಳ ಫಲ ಸುಳ್ಳಾಗದಲ್ಲ !

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ೧

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾದಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ೨

ಸಮಸ್ತಲೋಕಶಂಕರಂ ನಿರಸ್ತದೈತ್ಯ ಕುಂಜರಂ
ದರೇತರೋದರಂ ವರಂ ವರೇಭ-ವಕ್ತ್ರಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ೩

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ ೪

ನಿತಾಂತ-ಕಾಂತದಂತ- ಕಾಂತಿಮಂತಕಾಂತಕಾಂತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯ ಕೃಂತನಂ
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ೫

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ ೬


ಅದ್ಭುತ ಸಂಸ್ಕೃತ ಸಾಹಿತ್ಯದ ಪುಷ್ಕಳ ಭೋಜನಕ್ಕೆ ಭಾಜನರಾದ ನಿಮಗೆಲ್ಲಾ ಅಭಿನಂದನೆಗಳು. ಹೀಗೆ ಹೇಳುವುದಕ್ಕೆ ಕಾರಣ ನಿಮಗೆ ತಿಳಿದೇ ಇದ್ದರೆ ಆಶ್ಚರ್ಯವೇನಿಲ್ಲ. ತಿಳಿಯದೇ ಇದ್ದವರಿಗೆ ತಿಳಿದಿರಲಿ ಎಂಬ ಕಾರಣಕ್ಕಾಗಿಯೂ ಮತ್ತು ’ಗಣೇಶ ಪಂಚರತ್ನ’ ವೆಂಬ ಈ ಪಂಚಕದ ಪ್ರಾರ್ಥನೆಯ ಪರಿಣಾಮ ಬಹಳ ಉತ್ತಮವಿರುವುದರಿಂದಲೂ ಇದನ್ನು ನಿಮಗೆಲ್ಲಾ ಹೇಳುವ ಮನಸ್ಸುಮಾಡಿದೆ. ಅಂದಹಾಗೇ ಇದರ ಕರ್ತೃ ಶ್ರೀ ಆದಿಶಂಕರರು. ಎಂತಹ ಪ್ರಾಸಬದ್ಧ ಪಂಚಕವೆಂದರೆ ಇಷ್ಟು ಸರಳ ಶಬ್ದಗಳಲ್ಲಿ ಅಗಾಧವಾದ ಮಹಿಮೆಯುಳ್ಳ ಪರಬ್ರಹ್ಮನ ವರ್ಣನೆ ಮಾಡಿದ್ದಾರೆ. ಗಣಗಳಿಗೆ ನಾಯಕನಾದ ಒಂದು ಶಕ್ತಿಯನ್ನು ಗಣನಾಯಕ ಅಥವಾ ಗಣಾಧಿಪ ಅಥವಾ ಗಣೇಶ್ವರ ಎಂದು ಕರೆದರಲ್ಲಾ ಅಂತಹ ಗಣಗಳು ಯಾವವೆಂದು ತಿಳಿಯಲಿಕ್ಕೆ ಹೊರಟಾಗ ಎಲ್ಲವೂಗಣಗಳೇ ಆಗಿವೆ. ಮನುಷ್ಯಗಣ, ಪಶುಗಣ, ಪಕ್ಷಿಗಣ ಹೀಗೇ ಲೌಕಿಕವಾಗಿ ಜೀವಿಗಳ ಗಣಗಣಗಳನ್ನು ನಾವು ಗುರುತಿಸಿದರೆನಿರ್ಜೀವಿಗಳೆಂದು ಗುರುತಿಸಲ್ಪಟ್ಟ ಅನೇಕ ಲೋಹಗಳು, ಅದಿರುಗಳು, ಕಲ್ಲು-ಮಣ್ಣುಗಳು, ಮಾನವ ನಿರ್ಮಿತ ವಸ್ತುಗಳು ಹೀಗೇಪ್ರತಿಯೊಂದೂ ಗಣಗಳೇ.

ಗಣಗಳಿಗೆ ನಾಯಕನಾದವನು ಕೇವಲ ಒಂದೇರೂಪದಲ್ಲಿರಲು ಸಾಧ್ಯವೇ? ಅಂತಹ ವಿಶ್ವಂಭರ ಸ್ವರೂಪವನ್ನು ಭಗವತ್ಪಾದರು ವಿಶಿಷ್ಟವಾದ ಶಬ್ದಗಳಲ್ಲಿ ಬಣ್ಣಿಸಿದ್ದಾರೆ. ಪ್ರಪಂಚವನ್ನು ಸೃಷ್ಟಿಸುವ, ಪೊರೆಯುವ ಮತ್ತು ವಿನಾಶಮಾಡುವ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ರೂಪವನ್ನೂ ಸೇರಿದಂತೇ ಹಲವು ಅಗಾಧ ಶಕ್ತಿಗಳನ್ನೊಳಗೊಂಡ ನಿರಾಕಾರ ಪರಬ್ರಹ್ಮನನ್ನುಸದಾಕಾರವಾಗಿಯೂ ಹೀಗೆ ಆರಾಧಿಸುವುದರಲ್ಲಿ ತಪ್ಪಿಲ್ಲವೆಂಬ ಅವರ ಅನುಭವಾಮೃತವನ್ನು ಆಸ್ತಿಕರಿಗೆ ಈ ಪಂಚಕದ ಮೂಲಕ ಉಣಬಡಿಸಿದರು. ಸುಶ್ರಾವ್ಯವಾಗಿ ಹಾಡಬಲ್ಲ ಈ ಪಂಚಕದ ಪಠನೆಯಿಂದ ಉಚ್ಛಾರ ಶುದ್ಧಿ ಮತ್ತು ಭಾಷಾಶುದ್ಧಿ ಘಟಿಸುತ್ತದೆ. ಅವರೇಹೇಳಿದಂತೇ ಇದನ್ನು ಪಠಿಸಿದವರು ಉತ್ತಮ ಸಾಹಿತಿಯಾಗಿ ಬಾಳಲಿ ಎಂದೂ ಅವರು ಹರಸಿದ್ದಾರೆ.

ಸಾಹಿತ್ಯಕ್ಕೆ ಭಾಷೆಗಳ ಗಡಿಮಿತಿಯನ್ನು ಹಾಕಬಾರದು. ಉತ್ತಮವಾದ ಸಾಹಿತ್ಯ ಯಾವ ಭಾಷೆಯಲ್ಲಿದ್ದರೂ ಅದು ಪ್ರಶಂಶನೀಯವೇ ಸರಿ. ಅದರಲ್ಲಂತೂ ಇತ್ತೀಚೆಗೆ ಕೆಲವು ಭಾಷಾಂಧರು ಎಲ್ಲಭಾಷೆಗಳ ಮಾತೃಸ್ವರೂಪಿಣಿಯಾದ ದೇವನಾಗರೀ ಅಥವಾ ಸಂಸ್ಕೃತಭಾಷೆಯನ್ನು ದೂರುತ್ತಿದ್ದಾರೆ. ಸಂಸ್ಕೃತಭಾಷೆ ಯಾವ ಭಾಷೆಗೂ ಯಾವ ಒತ್ತಡವನ್ನೂ ಹೇರಲಿಲ್ಲ. ಬದಲಾಗಿ ಮೂಲಮಹಾಕವಿಗಳೆಲ್ಲಾ ಸಂಸ್ಕೃತ ಭಾಷೆಯಲ್ಲೇ ಬರೆದರು. ವೇದ-ವೇದಾಂತಗಳು, ಶ್ರುತಿ ಸ್ಮೃತಿ ಪುರಾಣಗಳು, ರಾಮಾಯಣ ಮಹಾಭಾರತ ಭಾಗವತವೇ ಮೊದಲಾದ ಕೃತಿಗಳು ಮೊದಲಾಗಿ ರಚಿತವಾಗಿದ್ದು ದೇವನಾಗರಿಯಲ್ಲೇ. ಈ ಪ್ರಪಂಚಕ್ಕೆ, ಭಾರತಕ್ಕೆಮಾನವೀಯ ಮೌಲ್ಯವುಳ್ಳ ಅತ್ಯುತ್ತಮ ಕೃತಿಗಳನ್ನು ಕೊಟ್ಟ ಜಗತ್ತಿನ ಏಕೈಕ ಭಾಷೆ ಸಂಸ್ಕೃತ ಎಂದು ಹೇಳಲು ಯಾವಹಿಂಜರಿಕೆಯೂ ಇಲ್ಲ.

ಕನ್ನಡದಲ್ಲೇ ಪೂಜೆಯನ್ನೂ ಮಾಡಬಹುದು. ಅಥವಾ ಅವರವರ ಭಾಷೆಯಲ್ಲೇ ಆರಾಧನೆ ನಡೆಸಬಹುದು. ಆದರೂ ಸ್ವರಬದ್ಧವಾದ ವೇದಮಂತ್ರಗಳನ್ನು ದೇವನಾಗರಿಯ ಆ ಲಯತರಂಗಗಳಲ್ಲಿ ಕೇಳಿದಾಗ ಸಿಗುವ ಅಲೌಕಿಕ ಆನಂದ ಬೇರೇ ಯಾವ ಭಾಷೆಯಲ್ಲೂ ಸಿಗುವುದಿಲ್ಲ . ಪೂಜೆ ಮಾಡಿದ ಖುಷಿ ಸಿಗುವುದು ಆ ಸಂತೃಪ್ತಿ ದೊರೆಯುವುದು ಕೇವಲ ಕೇವಲ ಸಂಸ್ಕೃತದ ಸ್ವರಬದ್ಧ ವ್ಯಾಕರಣಶುದ್ಧ ಮಂತ್ರೋಚ್ಛಾರಣೆ ಕೇಳಿದಾಗ ಮಾತ್ರ. ಇತ್ತೀಚೆಗೆ ನಾವು ಸಂಗೀತದಿಂದಲೂ ನಮ್ಮ ಮಾನಸಿಕ ಒತ್ತಡಗಳಿಂದಮುಕ್ತರಾಗಬಹುದು, ಹೈ/ಲೋ ಬಿ.ಪಿ, ಶುಗರ್, ಹೃದಯ ಸಂಬಂಧೀ ತೊಂದರೆ ಮೊದಲಾದವುಗಳಿಗೆ ಸಂಗೀತದ ಆಲಾಪನೆಯನ್ನು ಆಲೈಸುತ್ತಿದ್ದರೆ ಅವುಗಳನ್ನು ತಹಬಂದಿಗೆ ತರಬಹುದು ಎಂದು ತಿಳಿದಿದ್ದೇವೆ. ಸಂಗೀತಕ್ಕೂ ಮೂಲ ಸಾಮವೇದವೇ ಕಾರಣ. ಗೇಯರೂಪದ ಈ ವೇದವೇ ಮೂಲವಾಗಿ ಭಾರತೀಯ ಸಂಗೀತದ ಜನನವಾಯಿತು. ಹೀಗೆ ಜನಿಸಿದ ನಮ್ಮ ಶಾಸ್ತ್ರೀಯ ಸಂಗೀತವಿದೇಶೀಯರನ್ನೂ ಕೈಬೀಸಿ ಸೆಳೆಯಿತು ಎಂದರೆ ಇದರಲ್ಲಿ ಲವಲೇಶವೂ ತಪ್ಪಿಲ್ಲ.

ಯಾರೋ ಓದುಗರೊಬ್ಬರು ನನ್ನಲ್ಲಿ ಕೇಳಿದ್ದರು, ತನಗೆ ಕಾಳಿದಾಸ, ಬಾಣ, ದಂಡಿ ಇಂತಹ ಕವಿ-ಸಾಹಿತಿಗಳ ಕೃತಿಗಳು ಬೇಕಾಗಿವೆ, ಕನ್ನಡದಲ್ಲಿ ಅವು ಎಲ್ಲಿ ಸಿಗುತ್ತವೆ? --ಎಂಬುದಾಗಿ. ಅಂತಹ ಸಾರಸ್ವತರ ಕೃತಿಗಳನ್ನು ಮೂಲ ಭಾಷೆಯಾದ ಸಂಸ್ಕೃತದಲ್ಲೇಓದಿದಾಗ ಸಿಗುವ ಆನಂದ ತರ್ಜುಮೆಗೊಂಡ ಕೃತಿಯನ್ನು ಓದಿದಾಗ ಸಿಗುವುದಿಲ್ಲ. ಅವರುಗಳ ಕೃತಿಗಳೆಲ್ಲಾ ದೇವನಾಗರಿಯಲ್ಲೇಇವೆ. ಸಂಸ್ಕೃತ ಬಾರದವರು ಏನುಮಾಡುವುದು ಎಂಬುದಕ್ಕೆ ಉತ್ತರ, ಸಂಸ್ಕೃತದ ಉತ್ತಮ ತಜ್ಞರನ್ನು ಕಂಡು ಭಾಷೆಯನ್ನುಅಭ್ಯಸಿಸುವುದು ಅಥವಾ ಸಂಸ್ಕೃತ ವಾಗ್ಮಿಗಳನ್ನು ಪಂಡಿತರನ್ನು ಕಂಡು ಬಿಡುವಿನಲ್ಲಿ ಅವರಿಂದ ಅಂತಹ ಕೃತಿಗಳನ್ನು ವಾಚಿಸಿಕೊಂಡು ಅರ್ಥಗ್ರಹಣಮಾಡಿ ಆನಂದಿಸುವುದು.

ಸಂಸ್ಕೃತದ ಈ ಆಕರ್ಷಣೆಯಿಂದಲೇ ಕನ್ನಡದ ವರಕವಿ ಬೇಂದ್ರೆಯವರ ಕಾವ್ಯಗಳಲ್ಲಿ ಅದರ ಪ್ರಭಾವವನ್ನು ಕಾಣಬಹುದಾಗಿದೆ. ಕಾವ್ಯವನ್ನು ಮೇಲ್ನೋಟಕ್ಕೆ ಓದುವ ಬದಲು ಆಳವಾಗಿ ಅರ್ಥೈಸುವ ಹಲವು ಕಾವ್ಯಗಳಿರುತ್ತವೆ. ಅಂತಹ ಆಳ ನಮ್ಮನ್ನು ಮೂಲವೇದಾಂತದೆಡೆಗೆ ಕರೆದೊಯ್ಯುತ್ತದೆ ಎನ್ನುವುದು ಅನುಭವಿಸಿದವರ ಅಭಿಪ್ರಾಯವಾಗಿದೆ. ಅನೇಕರಿಗೆ ಬೇಂದ್ರೆಯವರ ಕೆಲವುಕವನಗಳು ಕಗ್ಗಂಟಾಗಿ ಕಾಣುವುದು ಇದೇ ಕಾರಣಕ್ಕಾಗಿ. ನಾಟ್ಯದಲ್ಲಿ ಚಿತ್ರಕಲೆಯಲ್ಲಿ ಕಲಾವಿದರು ತನ್ಮಯರಾಗಿತೊಡಗಿಕೊಂಡಂತೇ ಬೇಂದ್ರೆಯವರು ಕವನ ರಚನೆಯಲ್ಲಿ ತೊಡಗಿದಾಗ ತನ್ನನ್ನೇ ಮರೆಯುತ್ತಿದ್ದರು.ಸಾವಿರ ಜನಸಂದಣಿ ತುಂಬಿದಸಭೆಯಲ್ಲೇ ಇದ್ದರೂ ಸುತ್ತಲ ಜಗತ್ತಿನ ಪ್ರಭಾವದಿಂದ ದೂರವಾಗಿ ಏಕಾಗ್ರತೆಯಿಂದ ಕವನ ಬರೆಯ ಹೊರಟರೆ ಆ ಕವನಸರಾಗವಾಗಿ ಹೊರಬರುವಷ್ಟು ಶಬ್ದಗಳು ಅವರ ಬಾಯಲ್ಲಿ ನುಲಿಯುತ್ತಿದ್ದವು; ನಲಿಯುತ್ತಿದ್ದವು. ಡೀವೀಜಿ ಸಂಸ್ಕೃತದಮಹಾಮೇಧಾವಿಯಾಗಿದ್ದುದರಿಂದಲೇ ಕಗ್ಗದ ಮಗ್ಗ ಉತ್ತಮ ಸಂಸ್ಕೃತಿಯ ಸಮಾಜವನ್ನು ನೇಯುವಲ್ಲಿ ಕನ್ನಡದ ಭಗವದ್ಗೀತೆಎನಿಸಿತು. ಹೆಚ್ಚೇಕೆ ಕನ್ನಡವೂ ಸೇರಿದಂತೇ ಅನೇಕ ಭಾಷೆಗಳ ಹಲವಾರು ಶಬ್ದಗಳು ಸಂಸ್ಕೃತ ಮೂಲದಿಂದಲೇ ಬಂದವು. ಹೀಗಾಗಿಸಂಸ್ಕೃತವನ್ನು ಜರಿದರೆ ಉಂಡಮನೆಗೆ ಎರಡುಬಗೆಯುವ ತಪ್ಪನ್ನು ಮಾಡಿದಂತಾಗುವುದರಲ್ಲಿ ಸಂಶಯವಿಲ್ಲ.

ಭಾರತೀಯ ಸಂಸ್ಕೃತಿಯ ಕೊಡುಗಗಳಾದ ಸಂಸ್ಕೃತ, ಯೋಗ, ಆಯುರ್ವೇದ ಇವೆಲ್ಲಾ ವಿದೇಶೀಯರ ಪಾಲಾಗಿ ಅಲ್ಲಿ ಅವರುಅದನ್ನು ತಮದೆಂದು ಹಕ್ಕುಸಾಧಿಸಹೊರಟ ಈ ಸನ್ನಿವೇಶದಲ್ಲಾದರೂ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವೊಂದುಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿ. ಸಮಾಜದ ಕೆಲವರಾದರೂ ಇದರ ಬಗ್ಗೆ ಕಳಕಳಿ ಉಳ್ಳವರು ಎಂಬುದಕ್ಕೆ ಕೆಲವು ತಿಂಗಳಹಿಂದೆ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ಸಮಯ ಲಕ್ಷಾಂತರ ಜನ ಭಾಗವಹಿಸಿದ್ದು ಸಾಕ್ಷಿಯಾಗಿದೆ. ನಮ್ಮ ತಾಯಿ ಕನ್ನಡವಾದರೆನಮ್ಮ ತಾಯಿಯ ತಾಯಿ ಅಂದರೆ ಅಜ್ಜಿ ಸಂಸ್ಕೃತ. ಅಜ್ಜಿಗೆ ಅಪಚಾರಮಾಡುವುದು ಸರಿಯೇ. ನಮಗೆ ಅಮ್ಮ ಹೇಗೆ ಅಷ್ಟೊಂದುಇಷ್ಟವೋ ಆ ಅಮ್ಮನಿಗೆ ಅವಳ ಅಮ್ಮ ಎಂದರೆ ಅಷ್ಟೇ ಇಷ್ಟ. ಅಮ್ಮ ಚೆನ್ನಾಗಿರಬೇಕೆಂದರೆ ಅಮ್ಮನಿಗೆ ಅಡಿಗೆಗೋ ಮನೆವಾರ್ತೆಗೋಮತ್ತಿನ್ನೇತಕ್ಕೋ ಅನುಭವಿಯಾಗಿ ಮಾರ್ಗದರ್ಶಿಸಲು ಅಜ್ಜಿ ಹೇಗೆ ಸಹಕರಿಸುವಳೋ ಹಾಗೇ ಕನ್ನಡ ಚೆನ್ನಾಗಿರಬೇಕಾದರೆಸಂಸ್ಕೃತವೂ ಜೊತೆಗಿರಲೇಬೇಕು. ಇದು ಒಂದು ಕೂಡುಕುಟುಂಬದ ವ್ಯವಸ್ಥೆ, ದಯಮಾಡಿ ಅನ್ಯಥಾ ಭಾವಿಸಬೇಡಿ.

ಇನ್ನು ನಿನ್ನೆಯ ಒಂದು ಘಟನೆ ನನ್ನ ಮನಸ್ಸನ್ನು ಕಲಕಿತು. ನನಗೆ ಗೊತ್ತಿರುವ ನಮ್ಮೂರ ಕಡೆಯ ಒಳ್ಳೆಯ ವ್ಯಕ್ತಿ ತನ್ನಮಧ್ಯವಯಸ್ಸಿನಲ್ಲೇ[೪೭-೪೮] ಇಲಿಜ್ವರ ಪೀಡಿತನಾಗಿ ಮರಣಿಸಿದ. ಕೇವಲ ವಾರದ ಹಿಂದೆ ಹಲವಾರು ಕೆಲಸಗಳಲ್ಲಿತೊಡಗಿಕೊಂಡಿದ್ದ ಆತ ಸರಳ ಜೀವನವನ್ನು ನಡೆಸಿಬಂದ ತುಂಬುಕುಟುಂಬದ ಬಡಜೀವಿಯಾಗಿದ್ದ. ಊರಲ್ಲಿ ಯಾರೇ ಆಗಲಿಆತನನ್ನು ಮೆಚ್ಚುತ್ತಿದ್ದರು. ಎಂದೂ ಯಾರನ್ನೂ ಆಡಿಕೊಂಡವನಲ್ಲ, ಯಾರೊಂದಿಗೂ ಜಗಳ-ದೊಂಬಿ ಇರಲಿಲ್ಲ. ಎಲ್ಲರ ಜೊತೆ ಇದ್ದುಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಡತನದಲ್ಲಿ ತನ್ನ ಉಪಜೀವಿತಕ್ಕೆ ಬೇಕಾಗಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ. ಹೆಂಡತಿ ಮತ್ತುಇಬ್ಬರು ಹೆಣ್ಣುಮಕ್ಕಳು ಹಾಗೂ ಮುಪ್ಪಿನ ತಂದೆ-ತಾಯಿಯರೊಟ್ಟಿಗೆ ಇರುವುದರಲ್ಲೇ ತೃಪ್ತನಾಗಿದ್ದ. ೪-೫ ದಿನಗಳ ಹಿಂದೆಕಾಣಿಸಿಕೊಂಡ ಜ್ವರ ಶೀಘ್ರ ಉಲ್ಬಣಿಸಿತು. ಕಳೆದ ವಾರಾಂತ್ಯದಲ್ಲಿ ಮಂಗಳೂರಿನ ದೊಡ್ಡ ಖಾಸಗೀ ಆಸ್ಪತ್ರೆಯೊಂದಕ್ಕೆಕರೆದೊಯ್ದರೂ ಅಲ್ಲಿ ಅವರು ಹೇಳಿದ್ದು ಯಕೃತ್ತು ೮೦ ಪ್ರತಿಶತ ಹಾಳಾಗಿದೆ-ಬದುಕುವುದು ಕಷ್ಟವೆಂದು. ಅಲ್ಲಿಗೆ ತೆರಳಿದಮಾರನೇದಿನವೇ ಆತ ಕಣ್ಣುಗಳನ್ನು[ದೃಷ್ಟಿ] ಕಳೆದುಕೊಂಡ. ನಂತರ ಒಂದೊಂದೇ ಅಂಗಾಂಗಗಳ ಕ್ರಿಯೆಗಳು ನಿಧಾನವಾಗಿನಿಲ್ಲಲು ಆರಂಭಿಸಿದವು. ನಿನ್ನೆ ಸುಮಾರು ಬೆಳಗಿನ ೧೦:೩೦ಕ್ಕೆ ಆತ ಇಹಲೋಕ ಯಾತ್ರೆಗೆ ವಿದಾಯಹೇಳಿದ. ಊರ ಜನರೆಲ್ಲಾಹಿರಿಕಿರಿಯ ಭೇದಭಾವವಿಲ್ಲದೇ ಸೇರಿ ಕಣ್ಣೀರ್ಗರೆದು ಆತನ ಭೌತಿಕ ದೇಹವನ್ನು ಕವ್ಯಾಗ್ನಿಗೆ ಅರ್ಪಿಸಿದರು. ಈ ಜನ್ಮದಲ್ಲಿ ಆತಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಆಲೋಚಿಸುವಾಗ ಆತಮಾಡಿದ ಯಾವತಪ್ಪೂ ಕಾಣಲಿಲ್ಲ. ಪಡೆದು ಬಂದ ವಿಧಿಲಿಖಿತವೇಹಾಗಿರುವಾಗ ಯಾವ ವೈದ್ಯರು ಏನುಮಾಡಲಾದೀತು ? ವಿಶ್ವನಾಥನೆಂಬ ಗತಿಸಿದ ಆ ಒಳ್ಳೆಯ ವ್ಯಕ್ತಿಗೆ ವಿಶ್ವದ ನಾಥನಲ್ಲಿವಿಶ್ವನಾಯಕನಲ್ಲಿ ಒಮ್ಮೆ ಪ್ರಾರ್ಥಿಸುವಾಗ ಸಹಜವಾಗಿ ಶ್ರೀ ಶಂಕರರ ಮೇಲಿನ ಪಂಚಕದ ನೆನಪು ಬಂತು. ವಿಶ್ವನಾಥನಿಗೆ ಮುಕ್ತಿಸಿಗಲಿ ಆತನ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಈ ನನ್ನ ಪ್ರಾರ್ಥನೆಯನ್ನು ಸಹೃದಯರಾದ ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದೇನೆ, ಪುನಃ ಸಿಗೋಣ, ನಮಸ್ಕಾರ.

Thursday, February 24, 2011

ಚಂದವಿರುವುದೆಲ್ಲಾ ನಮದಾಗಬೇಕಿಲ್ಲ !


ಚಂದವಿರುವುದೆಲ್ಲಾ ನಮದಾಗಬೇಕಿಲ್ಲ !

ಮನುಷ್ಯ ಸಹಜ ಆಸೆಯೆಂದರೆ ಚೆನ್ನಾಗಿರುವುದೆಲ್ಲಾ ತನ್ನದಾಗಿರಲಿ ಎಂಬುದು. ಚಂದದ ಹೂವು, ಹಣ್ಣು, ಮನೆ, ಕಾರು, ವಸ್ತು, ಒಡವೆ, ಬಟ್ಟೆ, ಹೆಣ್ಣು ಯಾವುದೇ ಇರಲಿ ಅದು ತನ್ನದಾಗಿಬಿಡಲಿ ಎಂಬುದು ಬಹುತೇಕರ ಅಪೇಕ್ಷೆ. ಈ ಕಾರಣಕ್ಕಾಗಿಯೇ ಹಲವು ಜಗಳಗಳು, ದ್ವೇಷ-ವೈಷಮ್ಯಗಳು ಹುಟ್ಟಿಕೊಳ್ಳುತ್ತವೆ. ಚಂದವನ್ನು ದೂರದಿಂದ ನೋಡಿ ಆನಂದಿಸಬೇಕು. ಅವುಗಳಲ್ಲಿ ಸಹಜವಾಗಿ ನಮಗೆ ಧಕ್ಕುವುದು ಸಿಕ್ಕೇಸಿಗುತ್ತದೆ ಅದನ್ನೂ ಮೀರಿ ಚಂದದ ಯಾವುದನ್ನೋ ಪಡೆಯುವಲ್ಲಿ ಪೈಪೋಟಿಗೋ ದುಸ್ಸಾಹಸಕ್ಕೋ ಮುನ್ನುಗ್ಗಬಾರದು.

ಕೆಲವರಿಗೆ ಗಿಡದಲ್ಲಿ ಅರಳಿರುವ ಅಂದದ ಹೂವುಗಳಷ್ಟನ್ನೂ ಕೊಯ್ಯುವ ಜಾಯಮಾನ. ಪ್ರಾಯಶಃ ಸೃಷ್ಟಿಸಿದ ದೇವರೂ ಕೂಡ ಹೂಗಳನ್ನೆಲ್ಲವನ್ನೂ ತನಗೇ ಅರ್ಪಿಸಿ ಎಂದು ಕೇಳಲಿಕ್ಕಿಲ್ಲ ಆದರೆ ಇವರು ಮಾತ್ರ ಕೀಳದೇ ಬಿಡುವುದೇ ಇಲ್ಲ. ಇನ್ನು ಕೆಲವರಿಗೆ ಸವಿಮಾತನ್ನು ಉಲಿಯುವ ಗಿಳಿ ತಮ್ಮ ಮನೆಯಲ್ಲೇ ಗೂಡಿನಲ್ಲಿರಲಿ ಎಂಬ ಇಚ್ಛೆ. ಪಾಪ ಆ ಬಂಧಿತ ಗಿಳಿಗೆ ತನ್ನ ಬಾಂಧವರು ಮರಳಿ ಸಿಗುವರೇ? ಜೀವಮಾನದಲ್ಲೇ ಅದು ತನ್ನ ವರ್ಗದ ಎಲ್ಲರಿಂದಲೂ ದೂರವಾಗಿ ಜೀವಿಸಬೇಕೆಲ್ಲವೇ ? ಸ್ವಚ್ಛಂದವಾಗಿ ಎಂದಾದರೂ ಕಾಡಲ್ಲಿ ಹಾರಲು ಮತ್ತೆ ಬಿಡುವು ಸಿಗುವುದೇ? ಮಾನವ ಸಹಜ ಇನ್ನೊಂದು ಇಚ್ಛೆ ಚಾಪಲ್ಯಕ್ಕೂ ಚಂದವನ್ನೇ ಬಯಸುವುದು. ಕೊಬ್ಬಿದ ಕುರಿಯನ್ನೋ ಕೋಳಿಯನ್ನೋ ಕಂಡಾಗ ಅದು ತಮ್ಮ ಆಹಾರಕ್ಕೆ ಸಿಗಲಿ ಎಂಬುದು ಕೆಲವರ ಅಪೇಕ್ಷೆ. ಆ ಜೀವಿಗಳಿಗೂ ಅವರವರ ಬಂಧುಗಳಿಲ್ಲವೇ ? ಅವು ನೋವು-ನಲಿವನ್ನು ಹಂಚಿಕೊಂಡು ಬದುಕುವುದಿಲ್ಲವೇ ? ಕೆಲವು ಜನರಿಗೆ ಸಿರಿವಂತಿಕೆ ಹೆಚ್ಚಿಸುತ್ತವೆ ಎಂದು ನಂಬಿಸಲ್ಪಟ್ಟು ಮಾರುವ ಹಾವುಗಳು ಇಷ್ಟ. ಹಾಗಾದರೆ ಆ ಕುರುಡುಮಂಡೆ ಹಾವುಗಳಿಗೂ ಅವುಗಳದೇ ಆದ ಬದುಕಿಲ್ಲವೇ ?

ಶೋ ಕೇಸಿನಲ್ಲಿ ಇಡುವ ಸಲುವಾಗಿ ತರಾವರಿ ಅಲಂಕಾರಿಕ ಸಾಮಾನುಗಳನ್ನು ತರುವವರಿಗೆ ತುಸುವೂ ತೆರಪೇ ಇರುವುದಿಲ್ಲ! ಆಗಾಗ ಹೋದಲ್ಲಿ ಬಂದಲ್ಲಿ ಕಂಡಲ್ಲಿ ಸಿಗುವ ಚಂದದ ವಸ್ತುಗಳೆಲ್ಲಾ ಅವರ ಶೋ ಕೇಸಿಗೆ ಬಂದುಬಿಡಬೇಕು. ಒಡವೆಗಳಲ್ಲಿ ಮಾಟದ ಬದಲಾವಣೆ ಕಂಡ ನೀರೆಯರನೇಕರಿಗೆ ಮಾರನೇ ದಿನವೇ ಹಣವೆಷ್ಟಾದರೂ ಪರವಾಗಿಲ್ಲ ಅವು ಬೇಕು. ರೇಷ್ಮೆ ಸೀರೆಗಳ ಅಂದಕ್ಕಂತೂ ಮಾರುಹೋಗದ ಹೆಂಗಸರೇ ಇರುವುದು ಸುಳ್ಳು. ’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಇದೆಯಲ್ಲಾ ಅದರಂತೇ ಆಡಂಬರಕ್ಕಾಗಿ ಹಲವನ್ನು ಹೆಂಗಸರು ಬಯಸುತ್ತಾರೆ. ಗಂಡನ ಜೇಬು [ಕಿಸೆ] ಗಟ್ಟಿ ಇದ್ದರೆ ಬಚಾವು! ಇರದಿದ್ದರೆ ಸಾಲಮಾಡಿಯಾದರೂ ಕೆಲವನ್ನು ಪಡೆದೇ ತೀರಬೇಕು. ಈ ಕಾರಣಕ್ಕಾಗಿಯೇ ಕ್ರೆಡಿಟ್ ಕಾರ್ಡ್‍ಗಳು ಚಾಲ್ತಿಗೆ ಬಂದವು. ಮಾಮೂಲೀ ಹಣದ ದುಪ್ಪಟ್ಟು ಬಡ್ಡಿ ಕೊಟ್ಟರೂ ಪರವಾಗಿಲ್ಲ ತಕ್ಷಣಕ್ಕೆ ಖರೀದಿಸಲು ಆ ಸೌಲಭ್ಯಗಳು ಬೇಕು.

ಜೀವನದ ಗತಿಯೂ ಆ ದಿಸೆಯಲ್ಲೇ ನಡೆದಿದೆ. ಮಾರುವ ಜನ ಕೊಳ್ಳುವ ಜನರ ನಾಡಿಮಿಡಿತವನ್ನು ಯಾವುದೇ ಆಯುರ್ವೇದ ವೈದ್ಯನಿಗಿಂತಾ ಚೆನ್ನಾಗಿ ಅರಿತವರು. ವೈದ್ಯರು ಮುಟ್ಟಿ ಪರೀಕ್ಷಿಸಿದರೆ ಮಾರುವ ಜನ ದೂರದಿಂದಲೇ ನಾಡಿಯನ್ನು ತಿಳಿಯುವ ಕಸರತ್ತುಳ್ಳವರು! ಥರಥರದ ಮಾರಾಟ ಶೈಲಿ, ಒಂದಕ್ಕೊಂದು ಬಿಟ್ಟಿಯಲ್ಲಿ ಎಂಬ ಘೋಷಣೆ! ದರದಲ್ಲಿ ರಿಯಾಯತಿಯ ತೋರಿಕೆ, ಹಳೇ ವಸ್ತುಗಳ ಬದಲಿಗೆ ಹೊಸದನ್ನು ಕೊಳ್ಳುವ ಸೌಭಾಗ್ಯವೆಂಬ ಉದ್ಘೋಷ! ಬೇರೆಲ್ಲೂ ಸಿಗದ ಮಾಲು ತಮ್ಮಲ್ಲಿ ಮಾತ್ರ ಸಿಗುತ್ತದೆ ಎಂಬ ಹೆಗ್ಗಳಿಕೆಯ ಹೇಳಿಕೆ, ದರದಲ್ಲಿ ನಮ್ಮಷ್ಟು ಕಮ್ಮಿ ಯಾರೂ ನೀಡರು ಎಂಬ ಜಾಹೀರಾತು, ಪರಿಶುದ್ಧ ಹಾಗೂ ಪರಿಪೂರ್ಣತೆ ಎಂಬ ಸ್ವಯಂ ವರ್ಣನೆ ಹೀಗೇ ಹಲವಾರು ದಾರಿಗಳಿಂದ ಬಿಡುವ ಅಸ್ತ್ರಗಳಲ್ಲಿ ಕೆಲವಾದರೂ ಗ್ರಾಹಕರಿಗೆ ನಾಟುವುದು ಖಚಿತ; ಈ ಮಾತು ನಿಜವಾಗಿಯೂ ಇಲ್ಲಿ ಉಚಿತ!

ಹಾಗಂತ ಕಾಲಕ್ಕೆ ತಕ್ಕ ಆವಶ್ಯಕ ವಸ್ತುಗಳು ಮತ್ತು ಪರಿಕರಗಳ ಕೊಳ್ಳುವಿಕೆ ಸರಿಯಾಗೇ ಇದೆ. ಆದರೆ ಬರೇ ಅಂದಕ್ಕಾಗಿ ಕೊಳ್ಳುವುದಿದೆಯಲ್ಲಾ ಅದು ಆಕ್ಷೇಪಾರ್ಹ. ಒಬ್ಬರು ಮಾಡುತ್ತಾರೆ ಎಂದು ಇನ್ನೊಬ್ಬರೂ ಮಾಡಲು ಹೊರಡುತ್ತಾರೆ. ಆ ಇನ್ನೊಬ್ಬರಲ್ಲಿ ಕೆಲವರು ಆರ್ಥಿಕವಾಗಿ ನಿಜವಾಗಿಯೂ ಸಮರ್ಥರಾಗಿರುವುದಿಲ್ಲ. ಸಾಲಮಾಡಿಯಾದರೂ ಮಾಡಹೊರಟ ಖರೀದಿಯ ತಪ್ಪಿಗೆ ಕೊನೆಗೊಮ್ಮೆ ತೀರಿಸಲಾಗದ ಸಾಲದಲ್ಲಿ ಬಿದ್ದು ಮಾನಸಿಕ ಖಿನ್ನತೆಗೂ ಒತ್ತಡಕ್ಕೂ ಒಳಗಾಗಿ ನಾನಾಥರದ ಕಾಯಿಲೆಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಇದ್ದುದರಲ್ಲಿ ತೃಪ್ತಿಪಡೆಯುವ ಸ್ವಭಾವದಿಂದ ಇಂತಹ ಕೆಲವು ಕಾಯಿಲೆಗಳನ್ನು ದೂರವಿಡಬಹುದು. ಯಾರೋ ದಾರಿಯಲ್ಲಿ ಮಾತನಾಡುವುದನ್ನು ಕೇಳಿದೆ. "೪೦ ಆಯ್ತು ಅಂದ್ರೆ ಬಿ.ಪಿ.ಶುಗರು ಎಲ್ಲಾ ಅಂಟಿಕೊಂಡುಬಿಡುತ್ತವೆ "ಅಂತ. ಆದರೆ ನಿಜವಾಗಿಯೂ ಅವೆರಡೂ ಕಾಯಿಲೆಗಳಲ್ಲ ಬದಲಿಗೆ ನಮ್ಮ ಒತ್ತಡಗಳಿಗೆ ಶರೀರ ಸ್ಫಂದಿಸುವ ರೂಪಗಳು! ಇನ್ನು ಅಪರೂಪಕ್ಕೆ ತೀರಾ ಎಳೆಯರಲ್ಲೂ ಈ ನ್ಯೂನತೆಗಳು ಕಂಡುಬಂದರೆ ಅದಕ್ಕೆ ಅವರ ಆಹಾರ-ವ್ಯವಹಾರ ಕಾರಣವಿರಬಹುದು ಅಥವಾ ಇನ್ಯಾವುದೋ ರಾಸಾಯನಿಕ ಮಿಶ್ರಿತ ಆಹಾರ ಸೇವನೆಯ ದುಷ್ಪರಿಣಾಮ ಇರಬಹುದು.

ಚಂದದ ಹುಡುಗಿಯರ ಬಗ್ಗೆಯಂತೂ ಬರೆಯುವುದೇ ಬೇಡ. ಅವರು ಚಂದವಿದ್ದಾರೆಂದು ಅವರಿಗೇ ಪ್ರಾಯಕ್ಕೆ ಬರುವಾಗ ತಿಳಿದು ಹೋಗಿರುತ್ತದೆ. ದಿನಂಪ್ರತಿ ಹಲವಾರು ಗಂಟೆ ನಿಲುಗನ್ನಡಿಯ ಮುಂದೆ ನಿಂತು ಆತ್ಮರತಿಯಲ್ಲಿ ತೊಡಗುತ್ತಾರೆ. ’ಕೇವಲ ಮೊದಲನೋಟದಲ್ಲೇ ಪ್ರೇಮ’ ಎಂಬ ಜನ ಅವರುಗಳ ಹಿಂದೆ ಬೀಳುತ್ತಾರೆ. ಈ ಹುಡುಗಿಯರು ತೊಡುವ ತರಾವರಿ ಬಟ್ಟೆಗಳೂ ಕೂಡ ಎಲ್ಲವನ್ನೂ ’ಅಪಾರ’ದರ್ಶಕವಾಗಿಸುವತ್ತ ಹೋಗುತ್ತಿರುವಾಗ ಬೇಡವೆಂದರೂ ಹುಡುಗಿಯರ ಬಟ್ಟೆಗಳೇ ಹಲವೊಮ್ಮೆ ಹಲವು ಹುಡುಗರನ್ನು ಸೆಳೆಯುತ್ತವೆ, ಏಕಕಾಲಕ್ಕೆ ಅನೇಕ ಪ್ರೇಮಕೊಂಡಿಗಳು ಕುದುರುತ್ತವೆ. ದ್ವೇಷ-ಕೊಲೆಗಳಲ್ಲಿ ಅವುಗಳ ಪರ್ಯವಸಾನವಾಗುತ್ತದೆ. ಚಂದದ ಹುಡುಗಿಯರನ್ನು ಬೆಳೆಸುವ ಅಪ್ಪ-ಅಮ್ಮರಿಗೆ ಖರ್ಚೇನೂ ಸಣ್ಣಾಟದ್ದಲ್ಲ ! ಅವರುಗಳ ಹಲವು ಥರದ ಬಟ್ಟೆಗಳು, ಬಣ್ಣಗಳು, ಕ್ರೀಮುಗಳು, ಮಾರ್ಜಕಗಳು, ಅತ್ತರುಗಳು ಒಂದೇ ಎರಡೇ ? ಸುಮಾರಿನ ಅಪ್ಪ ಅಯ್ಯಯ್ಯಪ್ಪ !

ಹತ್ತು ಹಣ್ಣುಗಳನ್ನು ಬುಟ್ಟಿಯಲ್ಲಿಟ್ಟಾಗ ಕೊಳ್ಳುವ ಗಿರಾಕಿ ಚೆನ್ನಾಗಿರುವುದನ್ನು ಆಯುವುದು ಸಹಜ. ಆದರೆ ಅದೇ ಹಣ್ಣು ಹಲವರ ಆಯ್ಕೆಯಾದಾಗ ಅದಕ್ಕೆ ಬೇಡಿಕೆ ಹೆಚ್ಚಾಗಿ ದುಬಾರಿಯಾಗಬಹುದು. ಚಂದದ ಹಣ್ಣು ಮತ್ತೆ ಬರುತ್ತದೆ, ಅದು ಮುಗಿದುಹೋದ ಅಧ್ಯಾಯವೇನೂ ಅಲ್ಲವಲ್ಲ. ಹಾಗಾಗಿ ಅದಕ್ಕಾಗಿ ಕರುಬುವುದು ಬೇಡ. ಅದು ಬರದಿದ್ದರೂ ಪರವಾಗಿಲ್ಲ. ಅದನ್ನು ಕೊಂಡು ತಿಂದಷ್ಟೇ ಖುಷಿಯಾಗಿರೋಣ. ಅದಕ್ಕಾಗಿ ಏನು ಮಾಡಬೇಕೆನ್ನುತ್ತೀರಿ ? ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ನಿಗ್ರಹದ ಒಂದು ಭಾಗ ಇದು. ಮನಸ್ಸು ನಮ್ಮ ಹಿಡಿತದಲ್ಲಿರಬೇಕೇ ವಿನಃ ಮನಸ್ಸಿನ ಕೈಗೆ ನಮ್ಮನ್ನು ನಾವು ಕೊಟ್ಟುಕೊಳ್ಳಬಾರದು. ಇದಕ್ಕೊಂದು ಉದಾಹರಣೆ ನೀಡಿ ಈ ಲೇಖನವನ್ನು ಮುಗಿಸುತ್ತೇನೆ :

ಒಬ್ಬ ಸನ್ಯಾಸಿಯಿದ್ದ. ಹೇಳೀ ಕೇಳೀ ಸನ್ಯಾಸಿ ಎಂದರೆ ಯಮ, ನಿಯಮ, ಆಸನ ಮೊದಲಾದವುಗಳಿಂದ ದೇಹವನ್ನು ದಂಢಿಸುವಾತ. ಅತೀವ ತಪಸ್ಸಿನಲ್ಲಿ ತೊಡಗಿದ್ದ ಆತ ತಪಸ್ಸಿನಿಂದ ಆಚೆಬಂದ ಹೊತ್ತಿನಲ್ಲಿ ಸಿಹಿಯಾದ ಪೇಡೆಗಳನ್ನು ತಿನ್ನುವ ಇಚ್ಛೆಯಾಯಿತಂತೆ. ಸನ್ಯಾಸಿಯೂ ಮನುಷ್ಯನೇ ತಾನೇ ? ಪೇಡೆಯ ನೆನಪಾಗಿ ಬಾಯಲ್ಲಿ ನೀರೂರಿತು. ಅದೇ ಮನಸ್ಸಿನಲ್ಲಿ ಸನ್ಯಾಸಿ ಹೊಳೆಯ ದಂಡೆಗೆ ಸ್ನಾನಕ್ಕೆ ತೆರಳಿದ. ಹಾಗೆ ಹೋದಾತ ಮಾರನೇದಿನದವರೆಗೂ ಬರಲೇ ಇಲ್ಲ! ಇತ್ತ ಆತನ ಶಿಷ್ಯರು ಆತ ಬರುತ್ತಾನೆಂದು ಕಾದೇ ಕಾದರು. ಆದರೂ ಬರಲಿಲ್ಲವಲ್ಲಾ ಎಂದು ಕಳವಳಿಸುತ್ತಾ ಹುಡುಕುತ್ತಾ ಮಾರನೇ ಬೆಳಿಗ್ಗೆ ಆ ನದಿಯ ದಡಕ್ಕೆ ಬಂದರು. ದೂರದಲ್ಲಿ ಬರುತ್ತಿರುವ ಶಿಷ್ಯರನ್ನು ಕಂಡು ಸನ್ಯಾಸಿ ಜೋರಾಗಿ ಹೇಳಲಾರಂಭಿಸಿದ " ನೋಡು ನನ್ನ ಶಿಷ್ಯರೆಲ್ಲಾ ಹೆದರಿಕೊಂಡು ಹುಡುಕುತ್ತಾ ಬರುವ ಹಾಗೇ ಮಾಡಿದಿಯಲ್ಲ ಬಡ್ಡೀ ಮಗನೆ ಇನ್ನಾದರೂ ಪೇಡೆ ತಿನ್ನುವ ಚಪಲವನ್ನು ಬಿಡು " ಸನ್ಯಾಸಿಯ ಜೊತೆಗೆ ಯಾರೂ ಇರಲಿಲ್ಲದಿದ್ದರೂ ಸನ್ಯಾಸಿ ಬೈಯ್ಯುತ್ತಿರುವುದನ್ನು ಶಿಷ್ಯರು ಕಾಣುತ್ತಿದ್ದರು. ಆಮೇಲೆ ಗುರುವನ್ನು ಸಮೀಪಿಸಿ ಕೇಳಿದಾಗ ಆತ ಅತ್ಯಂತ ಸಂತೋಷದಿಂದ ನಗುತ್ತಾ ಹೇಳಿದ " ನನ್ನೊಳಗಿನ ಬಡ್ಡೀಮಗನಿಗೆ ಪೇಡೆ ತಿನ್ನುವ ಚಪಲ ಜಾಸ್ತಿಯಾಗಿಬಿಟ್ಟಿತ್ತು. ಏನೇ ಹೇಳಿದರೂ ಕೇಳುತ್ತಿರಲಿಲ್ಲ. ಅದಕ್ಕೇ ನೀರಲ್ಲಿ ಸ್ನಾನಮಾಡಿಸಿ ನಿನ್ನೆಯಿಂದ ಇಲ್ಲೇ ಕಟ್ಟಿಹಾಕಿದ್ದೆ. ಈಗ ಪೇಡೆಯೇನೂ ಬೇಡ ಎನ್ನುತ್ತಿದ್ದಾನೆ, ನಡೀರಿ ಹೋಗೋಣ "

ಸಮಾಜಕ್ಕೆ ಸನ್ಯಾಸಿಗಳು ಮಾರ್ಗದರ್ಶಕರು. ಆಚರಿಸಿ ತೋರಿಸುವುದರಿಂದ ಅವರುಗಳನ್ನು ಆಚಾರ್ಯರು ಎನ್ನುತ್ತೇವೆ. ಚಂದದ್ದೆಲ್ಲಾ ನಮ್ಮದಾಗಬೇಕೆಂಬ ಬಯಕೆಯ ವಿಷಯದಲ್ಲಿ ಈ ಸನ್ಯಾಸಿಯಿಂದ ಆ ಒಂದು ತತ್ವವನ್ನು ತಿಳಿದ ನಾವು ಅದನ್ನು ಹತ್ತಂಶದಷ್ಟಾದರೂ ಅಳವಡಿಸಿಕೊಂಡರೆ ನಮಗೇ ಒಳಿತಲ್ಲವೇ ?

Wednesday, February 23, 2011

ಪಂಚ ಭೂತಗಳ ನೆನಕೆ


ಪಂಚ ಭೂತಗಳ ನೆನಕೆ

ಆಸರೆಯನು ನೀಡಿ ನಿಂತ
ಭುವಿಯೆ ನಿನಗೆ ನಮಿಸುವೆ
ಹಾಸಲು ವಿಧಿಸದ ಆಗಸ
ನಿನ್ನ ನೆನೆದು ಎರಗುವೆ

ಬೀಸಿ ಬಂದು ಕೋಶಪೊರೆವ
ಗಾಳಿ ನಿನ್ನ ಮರೆಯೆನೂ
ರಾಶಿ ಅನ್ನ ಬೇಯಿಸುವೊಲು
ಬೆಂಕಿ ನಿನ್ನ ಕರೆವೆನು

ದೋಷಗಳನು ನೀಗಿ ಹೊರಗೆ
ಒಳಗೆ ಇರುವ ಜಲವನೂ
ಆಸರಿಗೆ ಕುಡಿಯುವಾಗ
ಬಾಗುತಾ ವಂದಿಸುವೆನು

ಮಲಿನವಾಗೆ ಮತ್ತೆ ಶುದ್ಧ
ಕಲಿ ಕಲ್ಮಷ ತೊಳೆವೊಲು
ಹುಲುಮಾನವ ಜಾತಿ ಪೆದ್ದ
ಒಲಿದ ನಿಮ್ಮ ಕಾಣದು !

ನಿಮ್ಮೈವರ ಘನಕಾರ್ಯವು
ಹೆಮ್ಮೆಯ ತರುವಂಥದು
ನಮ್ಮ ಸುತ್ತ ನೀವಿರದಿರೆ
ಎಮ್ಮ ಪಾಡದೆಂಥದು ?

Tuesday, February 22, 2011

ಧರ್ಮ ಸಂಕಟ !


ಧರ್ಮ ಸಂಕಟ !


’ಅಹಿಂಸಾ ಪರಮೋಧರ್ಮ’
ಎಂದು ಪ್ರವಚಿಸುತ್ತಿರುವಾಗ
ಎದುರಿನ ಬಯಲಿನಲ್ಲಿ ಮೇಯುತ್ತಿರುವ
ಆಕಳಿನ ಮೈಮೇಲೆ ಕುಳಿತ
ಕಾಗೆ ಉಣ್ಣಿಯನ್ನು ಕುಕ್ಕುತ್ತಾ
ಆ ನೆಪದಲ್ಲಿ ಆಕಳ ರಕ್ತದ
ರುಚಿನೋಡುತ್ತಿತ್ತು
ಆದರೂ ಸುಮ್ಮನಿದ್ದೆ

ಭಾಷಣ ಬಿಗಿಯುತ್ತಿದ್ದಾಗಲೇ
ಗುಂಯ್ಯನೇ ಹಾರಿಬಂದ ಮೂರು ಸೊಳ್ಳೆಗಳು
ಕಾಲಿಗೆ ಕಚ್ಚ ಹತ್ತಿದ್ದವು
ಅದೇ ರಾತ್ರಿ ಪ್ರವಾಸಿ ಹೋಟೆಲಿನ
ಕೊಠಡಿಯಲ್ಲಿ ಮಲಗಿದ್ದಾಗ
ತಿಗಣೆಗಳು ಕಚ್ಚತೊಡಗಿದವು

ಮನೆಯಲ್ಲಿ ಎಲ್ಲೆಲ್ಲೂ
ಕಾಲಿಗೆ ಅಡರುವ ಜಿರಲೆಗಳ
ಹಿಕ್ಕೆಯ ಅಸಹ್ಯ ವಾಸನೆ
ನೊಣಗಳ ಹೂಂಕಾರದ ಮುತ್ತಿಗೆ
ಇಲಿಗಳ ಅಹರ್ನಿಶಿ ದರೋಡೆ !
ಜೋಳಿಗೆ ಹಾಕಿ ಹೊರಟ ನನ್ನ
ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು

ಹೊಡೆದರೆ ನನ್ನಿಂದ ಅವುಗಳಿಗೆ ಹಿಂಸೆ
ಹೊಡೆಯದೇ ಇದ್ದರೆ ಅವುಗಳಿಂದ
ತಾಳಲಾರದ ಹಿಂಸೆ !
ಬಡಿದರೆ ಅವು ಸಾಯುತ್ತವೆ
ಬಡಿಯದಿದ್ದರೆ ನನ್ನ ಜೀವಹಿಂಡುತ್ತವೆ

ಆಗ ಈ ಬುದ್ಧನಿಗೆ
ಅಲ್ಲಿ ಜ್ಞಾನೋದಯವಾಯಿತು !
ಧರ್ಮಸಂಕಟವೆಂದರೆ ಇಂಥದ್ದೇ ಎಂಬುದು
ಎಷ್ಟು ಸರಳವಾಗಿದೆಯಲ್ಲವೇ ?

Monday, February 21, 2011

ಆಸಕ್ತಿ ಮತ್ತು ಶ್ರದ್ಧೆ



ಆಸಕ್ತಿ ಮತ್ತು ಶ್ರದ್ಧೆ

ಜಗತ್ತಿನಲ್ಲಿ ಯಾರೂ ಕುಳಿತು ಉಣ್ಣುವಂತಿಲ್ಲ, ಅವರವರ ಅನ್ನಕ್ಕಾಗಿ ಅವರವರು ದುಡಿಯಲೇಬೇಕು. ದುಡಿಯುವ ರೀತಿಯಲ್ಲಿ ಕೆಲವು ಬದಲಾವಣೆಗಳಿರಬಹುದು. ಮಾಡುವ ವೃತ್ತಿ ಬೇರೇ ಇರಬಹುದು. ಆದರೆ ಪ್ರಾಮಾಣಿಕ ದುಡಿತವೇ ಒಳ್ಳೆಯ ಜೀವನಕ್ಕೆ ಮಾರ್ಗ. ಇಂದಿನ ದಿನಮಾನದಲ್ಲಿ ಎಳೆಯ ವಯಸ್ಸಿಗರಿಗೆ ಕೆಲಸಗಳಲ್ಲಿ ಆಸಕ್ತಿಯಿಲ್ಲ. ಹೇಗಾದರೂ ಆಗಲಿ ಆದಷ್ಟೂ ಜಾಸ್ತಿ ಗಳಿಸಬೇಕೆಂಬುದೇ ಅವರ ಉದ್ದೇಶವಾಗಿದೆ. ಹಳ್ಳಿಗಳಲ್ಲಿ ತೋಟ-ತುಡಿಕೆ ಹೊಲಗದ್ದೆಗಳಲ್ಲಿ ಕೆಲಸಮಾಡುವ ವೃತ್ತಿ ಯಾರಿಗೂ ಬೇಡವಾಗಿದೆ. ಒಂದು ಕಾಲದಲ್ಲಿ ಸರ್ವಜ್ಞ ಹೇಳಿದ ’ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಯೇ ಮೇಲು’ ಎನ್ನುವ ಮಾತನ್ನು ಇಂದಿನ ಯುವಜನಾಂಗ ಅಲ್ಲಗಳೆಯುತ್ತಿದೆ. ಆದರೆ ಮೇಟಿ ವಿದ್ಯೆಯೇ ಎಲ್ಲರಿಗೂ ಮೂಲ ಜೀವನಾಧಾರವೆಂಬ ಸತ್ಯ ಹಲವರು ಮರೆತಂತಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಟ್ಟ ರಾಜಕಾರಣಿಗಳ ಹಣಮಾಡುವ ಕಸರತ್ತನ್ನು ಮಾಧ್ಯಮಗಳಲ್ಲಿ ಕಂಡು ಹಳ್ಳಿಯಲ್ಲೂ ಜನಜೀವನದಲ್ಲಿ ಅದರ ಗಾಳಿ ಬೀಸಿದೆ. ಪರರಿಗೆ ಏನಾದರೂ ಆಗಲಿ ತನ್ನ ಹುಂಡಿಗೆ ಆದಷ್ಟೂ ಜಾಸ್ತಿ ಹಣ ತುಂಬಲಿ ಎಂಬುದು ಜನರೆಲ್ಲರ ಅನಿಸಿಕೆಯಾಗುತ್ತಿದೆ. ಕಾಲಮಾನದ ಬಗ್ಗೆ ಹೇಳುವಾಗ ಇತಿಹಾಸದಲ್ಲಿ ನಡೆದ ಸತ್ಯವನ್ನು ಮರೆಯಲಾಗುವುದಿಲ್ಲವಲ್ಲ...ಹೀಗಾಗಿ ಹೇಳುತ್ತಿದ್ದೇನೆ : ಹಿಂದಿನ ದಿನಗಳಲ್ಲಿ ಇರುವ ಮಾನವೀಯ ಮೌಲ್ಯಗಳಿಗೆ ಇಂದು ಪುರಸ್ಕಾರವಿಲ್ಲ. ದುಡ್ಡೇ ಎಲ್ಲದಕ್ಕೂ ಮೌಲ್ಯತರುವ ಏಕೈಕ ಕಾರಣವಾಗಿದೆ! ಹಣ ಎಷ್ಟಿಲ್ಲದಿದ್ದರೂ ಸಾಲದು ಎಂಬಂತಹ ವಾತಾವರಣವೂ ಸಮಾಜದಲ್ಲಿ ಸೃಷ್ಟಿಯಾಗಿಬಿಟ್ಟಿದೆ. ಮಾನವರೆಲ್ಲ ಕೇವಲ ಜೀವವಿರುವ ಬೊಂಬೆಗಳಾಗಿದ್ದಾರೆಯೇ ವಿನಃ ಭಾವನಾಶೂನ್ಯರಾಗಿದ್ದಾರೆ. ಅಪ್ಪ ಮಗನನ್ನೂ ಮಗ ಅಪ್ಪನನ್ನೂ ಧನಕನಕ ಆಸ್ತಿಗಾಗಿ ಬಡಿದು ತಿನ್ನುವ ಕಾಲ ಬಂದುಬಿಟ್ಟಿದೆ ಎಂದಮೇಲೆ ಮೂರನೆಯ ವ್ಯಕ್ತಿಗಳ ಸ್ಥಿತಿ ನಿಮಗೇ ಅರ್ಥವಾಗುತ್ತದೆ. ಹಣವಿದ್ದರೆ ಮಾತ್ರ ಮುಖದ ಮುಂದೆ ಗೌರವ ಸಿಗುತ್ತದೆ, ಇನ್ನು ಕೆಲವೊಮ್ಮೆ ತಮಗೆ ಏನಾದರೂ ತೊಂದರೆಯಾಗದಿರಲಿ ಎನ್ನುವ ಅನಿಸಿಕೆಯಿಂದ ರಾಜಕೀಯದವರನ್ನು ಸುಮ್ಮನೇ ಇನ್ಯಾರದೋ ಎದುರಿಗೆ ಹೊಗಳುವ ಪರಿಪಾಟವಿದೆ. ಆದರೆ ನಿಜಕ್ಕೂ ವ್ಯಕ್ತಿ ವ್ಯಕ್ತಿಗಳ ನಡುವೆ ಗೌರವದ ನಡವಳಿಕೆಗಳು, ಸಂಸ್ಕಾರಭರಿತ ಸಂಪರ್ಕಗಳು ಕ್ಷೀಣಿಸುತ್ತಿವೆ. ’ಮುಖ ನೋಡಿ ಮಣೆಹಾಕು’ ಎನ್ನುವುದನ್ನು ಸ್ವಲ್ಪ ತಿರುಚಿ ’ಹಣನೋಡಿ ಮಣೆಹಾಕು’ ಎಂದೆನ್ನಬೇಕಾಗಿದೆ. ಹಣ ಜಾಸ್ತಿ ಇದ್ದಷ್ಟೂ ಎಲ್ಲಾ ಕ್ರತ್ರಿಮ ಗೌರವಗಳೂ ಲಭ್ಯ, ಹಣವಿಲ್ಲದಿದ್ದರೆ ಯಾರೂ ಮೂಸನೋಡದ ಸ್ಥಿತಿ. ಹಣದ ಈ ಝಣತ್ಕಾರ ಜೋರಾಗಿಸಲು ಕಾರಣ ಕೆಟ್ಟ ರಾಜಕಾರಣದ ವಾತಾವರಣ. ’ಯಥಾ ರಾಜಾ ತಥಾ ಪ್ರಜಾ’! ಅಲ್ಲವೇ?

ಜಗತ್ತಿನಲ್ಲಿ ಯಾರಿಗೂ ಕೆಲಸವಿಲ್ಲಾ ಎಂಬುದಿಲ್ಲ. ಖಂಡಿತಾ ಕೆಲಸವಿದೆ. ಕೆಲಸವನ್ನು ಮಾಡುವ ಬುದ್ಧಿ ಮೊದಲಾಗಿ ಇರಬೇಕು. ಕೆಲಸವನ್ನು ನಾವೇ ಹುಡುಕಿಕೊಳ್ಳಬಹುದು. ಕೆಲಸವನ್ನು ಬೇರೆಯವರಲ್ಲಿ ಯಾಚಿಸುವುದಕ್ಕಿಂತಾ ನಮ್ಮ ಆರ್ಹತೆಗೆ ತಕ್ಕುದಾಗಿ ನಾವು ಮಾಡಬಲ್ಲ ಕೆಲಸಗಳಲ್ಲಿ ನಾವೇ ತೊಡಗಿಕೊಳ್ಳಬಹುದು. ಉದಾಹರಣೆಗೆ ಒಬ್ಬಾತ ಬಿ.ಕಾಮ್ ಮಾಡಿದ್ದರೆ ನೇರವಾಗಿ ಅಕೌಂಟೆಂಟ್ ಕೆಲಸವನ್ನು ಹುಡುಕುತ್ತಾ ಕೂರುವ ಬದಲು ಲೆಕ್ಕಪತ್ರ ಪರಿಶೋಧನೆಯಲ್ಲಿ ಪರಿಣತಿಗಾಗಿ ನುರಿತ ಲೆಕ್ಕಿಗರ ಮಾರ್ಗದರ್ಶನ ಕೆಲವುಕಾಲ ಪಡೆದು ಆಮೇಲೆ ತಾನೇ ಕೆಲಮಟ್ಟಿಗೆ ಖಾಸಗೀ ಕಂಪನಿಗಳ, ಚಿಕ್ಕಪುಟ್ಟ ವಹಿವಾಟುದಾರ ಲೆಕ್ಕಪುಸ್ತಕಗಳನ್ನು ಬರೆಯುವುದರಲ್ಲಿ ತೊಡಗಿಕೊಳ್ಳಬಹುದು. ಕೆಲವರಿಗೆ ಓದು ಕೇವಲ ಜ್ಞಾನಕ್ಕಾಗಿ ಮಾತ್ರ. ಅವರು ಓದಿದ್ದೇನೋ ಆಗಿದ್ದರೆ ಮಾಡುವ ವೃತ್ತಿ ಇನ್ನೇನೋ ಆಗುತ್ತದೆ. ಅದಕ್ಕೆ ಆಸಕ್ತಿ ಕಾರಣ.

ಎಲ್ಲರಿಗೂ ಎಲ್ಲವುದರಲ್ಲೂ ಆಸಕ್ತಿಯಿರುವುದಿಲ್ಲ. ನನಗೆ ಗೊತ್ತಿರುವ ವೈದ್ಯರು ಮೂವರನ್ನು ತೆಗೆದುಕೊಂಡರೆ ಒಬ್ಬರು ಆಂಗ್ಲ ಪದ್ಧತಿಯ ವೈದ್ಯವಿದ್ಯೆಯನ್ನು ಓದಿದವರು-ಆದರೆ ವೃತ್ತಿಯಲ್ಲಿ ’ಮೆಡಿಕಲ್ ಟ್ರಾನ್ಸ್‍ಕ್ರಿಪ್ಶನಿಷ್ಟ್’ ಆಗಿದ್ದಾರೆ. ಇನ್ನಿಬ್ಬರಲ್ಲಿ ಒಬ್ಬರು ಆಯುರ್ವೇದದ ಪದವಿ ಪಡೆದಿದ್ದರೂ ಆಂಗ್ಲಪದ್ಧತಿಯ ಆಸ್ಪತ್ರೆಗೆ ಯಜಮಾನರಾಗಿದ್ದಾರೆ. ಇನ್ನು ಮೂರನೆಯವರು ಆಯುರ್ವೇದದಲ್ಲಿ ವಿದ್ವತ್ತು ಮುಗಿಸಿ ತಮ್ಮದೇ ರಂಗದಲ್ಲಿ ತೊಡಗಿಕೊಂಡು ಚಿಕಿತ್ಸಾಲಯ ಆರಂಭಿಸಿ ಇದೀಗ ಬಹಳ ಹೆಸರುವಾಸಿಯಾಗಿದ್ದಾರೆ-ಬೆಳೆದಿದ್ದಾರೆ. ಇಲ್ಲಿ ಅವರವರ ಮನೋ ವಾಂಛೆಗೆ ತಕ್ಕಂತೇ ಅವರವರು ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಓದಿದ ಮೆಕಾನಿಕಲ್ ಅಭಿಯಂತರರು ಬಹಳಜನ ತಂತ್ರಾಂಶ ಅಭಿಯಂತರರಾಗಿ ಕೆಲಸನಿರತರಾಗಿದ್ದಾರೆ. ಇಲೆಕ್ಟ್ರಿಕಲ್ ಅಭಿಯಂತರರೊಬ್ಬರು ’ಈವೆಂಟ್ ಮ್ಯಾನೇಜ್‍ಮೆಂಟ್’ ಕಂಪನಿಯನ್ನು ನಡೆಸುತ್ತಿದ್ದಾರೆ. ಹೀಗೇ ಓದಿಗೂ ಮಡುವ ವೃತ್ತಿಗೂ ಕೆಲವೊಮ್ಮೆ ತಾಳೆಹಾಕಲಾಗುವುದಿಲ್ಲ.

ವ್ಯಕ್ತಿಗೆ ಆತನ ಆಂತರ್ಯ ಇಷ್ಟಪಡುವಂತಹ ಯಾವುದೋ ಕೆಲಸ ಆತ ಹುಡುಕುತ್ತಿರುತ್ತಾನೆ. ಆದರೆ ಕೆಲವೊಮ್ಮೆ ಮನಸ್ಸು ಬೇಡಾ ಎನ್ನುವ ವೃತ್ತಿಯಲ್ಲೂ ತೊಡಗಿಕೊಂಡುಬಿಡುತ್ತಾನೆ. ಅಂತಹ ವ್ಯಕ್ತಿಯು ಜೀವನದಲ್ಲಿ ಉನ್ನತಿಯನ್ನು ಪಡೆಯಲು ಕಷ್ಟಸಾಧ್ಯವಾಗಬಹುದು. ಉನ್ನತಿಯನ್ನು ಕಾಣಲು ಉನ್ನತ ಗುರಿಯೊಂದೇ ಸಾಲದು; ಪೂರಕ ಮನೋಗತವೂ ಬೇಕು. ವಕೀಲನೊಬ್ಬ ತನ್ನ ಕಛೇರಿಯಲ್ಲಿ ನಿವೃತ್ತರಾದ ಕೆಲವು ವ್ಯಕ್ತಿಗಳನ್ನು ಬೆರೆಳಚ್ಚಿಸಲು ನಿಯಮಿಸಿಕೊಂಡಿದ್ದ. ಗಣಕಯಂತ್ರ ಬಂದಾದಿನಗಳಲ್ಲಿ ತಕ್ಷಣ ಅವರಿಗೆಲ್ಲಾ ಗಣಕಯಂತ್ರದಲ್ಲಿ ಬೆರಳಚ್ಚಿಸುವುದನ್ನು ಕಲಿಯಹೇಳಿದ. ಆದರೆ ಆ ನಿವೃತ್ತ ಗುಮಾಸ್ತರುಗಳ ಅಂಬೋಣ ಹೀಗಿತ್ತು " ೩೫ ವರ್ಷಗಳಿಂದ ಮಾಮೂಲೀ ಟೈಪರೈಟರ್ ನಲ್ಲಿ ಕೆಲ್ಸಾ ಮಾಡಿದೀವಿ ಸಾರ್...ನಮ್ಗೆ ಇವೆಲ್ಲಾ ಯಾಕೆ ಬೇಕು ಹೇಳಿ....ಏನೋ ಸಾರು ಹೇಳ್ತಾರೆ ನಾವೂ ಕಲೀಬೇಕಾಗಿದೆ. " ಆ ಜನರಿಗೆ ಕಲಿಸಲು ನಿಂತ ವ್ಯಕ್ತಿ ಸೋತನೇ ಹೊರತು ಅವರು ಸರಿಯಾಗಿ ಕಲಿಯಲಿಲ್ಲ. ಅದೇ ಕಿರ್ಲೋಸ್ಕರ್ ಕಂಪನಿಯ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ೭೭ ವರ್ಷ ತುಂಬಿದ ಹಿರಿಯರೊಬ್ಬರು ಗಣಕಯಂತ್ರವನ್ನು ಸ್ವಂತದ ಬಳಕೆಗಾಗಿ ತರಗತಿಗೆ ಬಂದು ಕಲಿತಿದ್ದು ನನ್ನ ನೆನಪಿನಲ್ಲಿದೆ, ಅವರ ಚಿತ್ರಗಳೂ ಇವೆ--ಇದು ನಿಜವಾದ ಆಸಕ್ತಿ.

ಎಲ್ಲಿ ಆಸಕ್ತಿಯಿದೆಯೋ ಅಲ್ಲಿ ಕೆಲಸ ಸಲೀಸಾಗಿ, ಚೆನ್ನಾಗಿ ನಡೆಯುತ್ತದೆ.ಆಸಕ್ತಿ ರಹಿತ ಕೆಲಸವಾದರೆ ಕೆಲಸಮಾಡುವಾಗಲೇ ನಿದ್ದೆಯೂ ಬರಬಹುದು, ಆಕಳಿಕೆಯೂ ಬರಬಹುದು, ಎದ್ದು ಓಡುವ ಮನಸ್ಸೂ ಬರಬಹುದು. ಆದರೆ ಉದರಂಭರಣೆಗೆ ಬೇಕಲ್ಲಾ ಎಂದುಕೊಂಡು ಸಿಕ್ಕ ಆ ವೃತ್ತಿಯನ್ನು ಹೇಗೋ ಒಟ್ಟಿನಲ್ಲಿ ಮಾಡುತ್ತಾ ಕಾಲಹಾಕುವುದು ಒಂದು ವರ್ಗ. ಅಲ್ಲಿ ಎಲ್ಲವೂ ಯಾಂತ್ರಿಕವಾಗಿರುತ್ತದೆ! ಯಾವುದೂ ಇಷ್ಟವಾಗುವುದಿಲ್ಲ. ಕೆಲಸದಲ್ಲಿ ಆಸಕ್ತಿಯಿದ್ದರೆ ತಂತಾನೇ ಶ್ರದ್ಧೆಯೂ ಹುಟ್ಟಿಕೊಳ್ಳುತ್ತದೆ. ಶ್ರದ್ಧೆ ಎಂದರೆ ಇನ್ವಾಲ್ವ್‍ಮೆಂಟ್ ಹೌದಲ್ಲ? ಲೋಟದಲ್ಲಿ ನೀರು ಕೊಡುವ ಹೋಟೆಲ್ ಹುಡುಗ ಲೋಟಕ್ಕೆ ಅಂಟಿರುವ ಕೊಳೆಯನ್ನು ಗ್ರಹಿಸದೇ ಕೊಡುವುದು ಅಶ್ರದ್ಧೆ, ಅದನ್ನು ಗ್ರಹಿಸಿ ಸ್ವಚ್ಛವಾಗುಳ್ಳ ಲೋಟದಲ್ಲಿ ಕೊಡುವುದು ಶ್ರದ್ಧೆ. ಕೆಲಸವೊಂದೇ; ಮಾಡುವಲ್ಲಿ ಕಾಳಜಿ ಬೇರೆ. ಅಪ್ಪ-ಅಮ್ಮನನ್ನು ಹುಟ್ಟಿಸಿದವರು ಹೇಗೋ ಸಾಕಬೇಕಲ್ಲಾ ಎಂದುಕೊಳ್ಳುತ್ತಾ ನೋಡಿಕೊಳ್ಳುವುದಕ್ಕೂ ತಂದೆ-ತಾಯಿ ನಮ್ಮ ದೇವರೆಂದು ತಿಳಿದು ಮುಪ್ಪಿನಲ್ಲಿ ಅವರನ್ನು ಪಾಲನೆಮಾಡುವುದಕ್ಕೂ ಅಂತರವಿದೆಯಲ್ಲ? ಇದು ನಮ್ಮ ಶ್ರದ್ಧೆಯನ್ನು ತೋರಿಸುತ್ತದೆ. ಶ್ರದ್ಧೆ ಭಕ್ತಿಯ ಇನ್ನೊಂದು ರೂಪಕೂಡ ಹೌದು. ಆದರೆ ಇದು ದೇವರಮೇಲಿನ ಭಕ್ತಿಯಲ್ಲಿ; ಮಾಡುವ ಕೆಲಸದಲ್ಲೇ ದೇವರನ್ನು ಕಾಣುವ ಭಕ್ತಿ!

ಸಮಾಜದಲ್ಲಿ ಎಲ್ಲರಿಗೆ ಮೇಲಾಗಿ ಬೆಳೆಯುವ ಹುಡುಗರಿಗೆ ಕೆಲಸದಲ್ಲಿ ಆಸಕ್ತಿ ಮತ್ತು ಶ್ರದ್ಧೆ ಬೇಕು. ಮಾಡುವ ವೃತ್ತಿಯಲ್ಲಿ ಇವೆರಡೂ ಇದ್ದಾಗ ಆ ಮಾರ್ಗವಾಗಿ ಪ್ರತಿಫಲ ದೊರೆತೇ ದೊರೆಯುತ್ತದೆ. ಹಾಗಂತ ಗುಡ್ಡಕ್ಕೆ ಮಣ್ಣುಹೊರುವ ಕೆಲಸವನ್ನು ಶ್ರದ್ಧೆಯ ಕೆಲಸವಾಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲಸವನ್ನು ಆಯ್ದುಕೊಳ್ಳುವಾಗ ಹಲವಾರು ಪರಿಮಿತಿಗಳನ್ನು ಅವಲೋಕಿಸಬೇಕಾಗುತ್ತದೆ. ಮರುಭೂಮಿಯ ಬರದ ನಾಡಿನಲ್ಲಿ ಬಾವಿ ತೆಗೆದರೆ ನೀರು ಸಿಗುವುದು ದುರ್ಲಭ ಎಂಬುದು ಹೊರನೋಟಕ್ಕೆ ತಿಳಿದುಬರುವ ವಿಷಯ. ಅನುಭವಿಕರ ಮಾರ್ಗದರ್ಶನ ಪಡೆದು ಆಸಕ್ತಿತಳೆದು ಹಿಡಿಯಬೇಕಾದ ವೃತ್ತಿಗಳ ಪಟ್ಟಿಯಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕು. ಬಾವಿತೆಗೆಯುವವ ಮೂರಡಿ ತೆಗೆದು ನೀರು ಬರಲಿಲ್ಲ ಎಂದು ಬಿಡುವುದಿಲ್ಲ ಹೇಗೋ ಹಾಗೇ ಆಯ್ಕೆಮಾಡಿಕೊಂಡ ವೃತ್ತಿಯಲ್ಲಿ ತಾದಾತ್ಮ್ಯತೆಯಿಂದ ತೊಡಗಿಕೊಂಡು ಸಹನಶೀಲರಾಗಿ ಕೆಲಕಾಲ ಮುನ್ನಡೆಯಬೇಕು. ಹಾಗೊಮ್ಮೆ ಮಾಡಿದ ವೃತ್ತಿಯಲ್ಲಿ ತಕ್ಕ ಪ್ರತಿಫಲ ಕಾಣಿಸದೇ ಹೋದರೆ ಆಗ ಮಾಡಿದ ವೃತ್ತಿಯ ದೋಷಗಳತ್ತ ಕಣ್ಣುಹಾಯಿಸಬೇಕು.

ವಾಡಿಕೆಯಲ್ಲೊಂದು ಗಾದೆಯಿದೆ ’ಎಣ್ಣೆಬರುತ್ತದೆ ಎನ್ನುವಾಗ ಗಾಣಮುರಿಯಿತು’ ಎಂದು ಈ ರೀತಿ ಸೃಷ್ಟಿಸಹಜ ವೈಪರೀತ್ಯಗಳಿಂದ ಅನುಭವಿಸಬೇಕಾಗಿ ಬರಬಹುದಾದ ಕೆಲವು ಪರಿಣಾಮಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಬೇಕಾಗುತ್ತದೆ. ಗಾಣವನ್ನು ನಾವು ಮೊದಲೇ ಸುಸ್ಥಿತಿಯಲ್ಲಿಟ್ಟುಕೊಂಡಿದ್ದರೆ ಗಾಣ ಮುರಿಯುತ್ತಿರಲಿಲ್ಲವೇನೋ ಅಥವಾ ಮುರಿದುಹೋಗಬಹುದಾದ ಗಾಣದ ಬದಲು ಬೇರೇ ಗಾಣವನ್ನು ಬಳಸಬಹುದಿತ್ತೇನೋ ಎಂಬುದನ್ನು ನಾವು ಲೆಕ್ಕಿಸಬೇಕಾಗುತ್ತದೆ.

ಒಟ್ಟಿನಲ್ಲಿ ಸೂಕ್ತ ಮುಂಧೋರಣೆ, ವೃತ್ತಿ ತಾದಾತ್ಮ್ಯತೆ ಮತ್ತು ತಾಳ್ಮೆ ಈ ಮೂರು ಅಂಶಗಳಿಂದ ಪ್ರೇರಿತರಾಗಿ ಆಸಕ್ತಿ ಮತ್ತು ಶ್ರದ್ಧೆಯನ್ನು ವಹಿಸಿ ಕೆಲಸಮಾಡಿದರೆ ವ್ಯಕ್ತಿ ಗೆದ್ದೇಗೆಲ್ಲುತ್ತಾನೆ. ಆ ಗೆಲುವು ಎಲ್ಲರದಾಗಲಿ ಎಂದು ಹಾರೈಸೋಣ.

Friday, February 18, 2011

ಹೊತ್ತಿನ ಮಹತ್ವ


ಹೊತ್ತಿನ ಮಹತ್ವ

ಹೆತ್ತ ತಾಯಿ-ತಂದೆ ಹೊತ್ತ ಇಳೆಯನ್ನು
ಎತ್ತರಕೆ ಬೆಳೆಯಲುಪಕರಿಸಿದ ಗುರುಗಳನು
ಕತ್ತು ಬಾಗಿಸಿ ನಮಿಸು ಕಷ್ಟವೇನೇ ಇರಲಿ
ಮತ್ತೆ ಕರ್ತವ್ಯಮೆರೆ | ಜಗದಮಿತ್ರ

ಹೊತ್ತು ಮುತ್ತಿನ ಥರದ ಮೌಲ್ಯವುಳ್ಳದ್ದಿಹುದು
ತೆತ್ತು ಕಲಿತಂತಲ್ಲ ಮತ್ತೆ ಅದುಬರದು
ಬಿತ್ತ ಬೀಜವು ಬೆಳೆದು ಗಿಡವಾಗಿ ಮರವಾಗಿ
ಮತ್ತುದುರಿ ಬೀಳುವುದು | ಜಗದಮಿತ್ರ

ತುತ್ತ ತುದಿಯೇರಿ ನಿಂತಿಹೆನೆಂದು ಹಮ್ಮಿನಲಿ
ಸೊತ್ತು ವೈಭವ ನೆನೆದು ಮೆರೆಯಲದು ತರವೇ ?
ಹೊತ್ತೇ ಕುತ್ತುಗಳ ತಂದಿಡುತ ದೂಡ್ಕೆಡಹೆ

ತುತ್ತಿಗೂ ಕಷ್ಟವೈ | ಜಗದಮಿತ್ರ

ಹೊತ್ತಿನಲಿ ಕಾರ್ಯವನು ನಿಗದಿಯಲಿ ಮುಗಿಪರವಿ
ಹತ್ತಿ ಮೇಲೇರಿ ಕೆಳಗಿಳಿದು ತೋರುವನು
ಅತ್ತರೂ ಕರೆದರೂ ಬರದು ಕಳೆದಿಹ ಕಾಲ
ಮತ್ತೇಕೆ ತಡವಿನ್ನು ? ಜಗದಮಿತ್ರ


ಅತ್ತ ಮುಪ್ಪಿನಲೊಮ್ಮೆ ಮಾಡಿದಕೆ ಕಳವಳಿಸೆ
ಸುತ್ತ ಯಾರೂ ಬರರು ಬಲು ಕಠಿಣ ಸಹಿಸೆ !
ಬೆತ್ತದಾ ಹೊಡೆತವೂ ಅಷ್ಟು ನೋವಿನದಲ್ಲ
ಕತ್ತೆ ನೀನಾಗಪ್ಪೆ | ಜಗದಮಿತ್ರ

ಕತ್ತೂರಿ ಪರಿಮಳವು ಕತ್ತೆಗರಿವಾಗುವುದೇ?
ಮತ್ತದೇ ಹೊಲಸ್ಕಾಣೆ ನಗುವುದ್ಹಲ್ಕಿರಿದು
ಎತ್ತಣಿಂದೆತ್ತಣಕೂ ಸಮಯದರಿವಿನ ಬಗ್ಗೆ
ಎತ್ತಿ ಅನುಸರಿಸದನು | ಜಗದಮಿತ್ರ

ಬತ್ತಿದಾ ತೊರೆಗಳಲಿ ನೀರು ಉಕ್ಕಲೂಬಹುದು
ಕೊತ್ತಳದ ಕೋಟೆಯಲಿ ರಾಜ ದರ್ಬಾರು
ಎತ್ತರದ ಗೋಪುರಕೆ ಹತ್ತು ಸವಾಲುಗಳು
ಹೊತ್ತರಿದು ಮುನ್ನಡೆಯೋ | ಜಗದಮಿತ್ರ

Wednesday, February 16, 2011

ದಿನಕರನ್ ಟ್ರಾನ್ಸ್‍ಪೋರ್ಟ್!

[ಅಜ್ಞಾತ ಚಿತ್ರಕಲಾವಿದನಿಗೆ ನಮಸ್ಕಾರ ]

ದಿನಕರನ್ ಟ್ರಾನ್ಸ್‍ಪೋರ್ಟ್!

ತೀರಾ ಹಗುರವಾಗಿ ಮಾತನಾಡಬೇಡಿ. ನಾವು ಅಷ್ಟೇನೂ ಹಗುರವಲ್ಲ. ನಮಗೂ ಸಾಕಷ್ಟು ಸ್ವಾಭಿಮಾನವಿದೆ. ತುಸು ಹೆಚ್ಚಾಗಿ ನಾವೂ ಕಮ್ಮಿಯೇನಲ್ಲ ಎನ್ನಲು ಕನ್ನಡನಾಡಿನಲ್ಲಿ ಅದೂ ಬೆಂದಕಾಳೂರೆಂಬ ಬೆಂಗಳೂರಿನಲ್ಲಿ ನಾವು ನೆಲೆನಿಂತು ಒಂದು ಲೆವಲ್ ಮ್ಯಾಂಟೇನ್ ಮಾಡಿಕೊಂಡಿದ್ದೇವೆ. ಉಟ್ಟಬಟ್ಟೆಯೂ ಚಿಕ್ಕ ಚಡ್ಡಿಯೇ ಆಗಿದ್ದು ಅದೇ ಸ್ಥಿತಿಯಲ್ಲಿ ಇಲ್ಲಿಗೆ ಬಂದ ಈ ದಿನಕರನ್ ಏನಿಲ್ಲವೆಂದರೂ ಇವತ್ತಿಗೆ ನಾಲ್ಕು ಲಾರಿ ಮತ್ತು ೬ ಕಾರುಗಳ ಮಾಲೀಕನಾಗಿರುವುದೇ ಇದಕ್ಕೆ ಸಾಕ್ಷಿ!

" ನೀ ಎನ್ನ ಪೇಸರಂಗ ಎನಕೆ ತೆರಿಯಾದು " ಎದುರಿಗೆ ಕುಳಿತಿರುವವರ ಮಾತನ್ನು ಕೇಳಿ ಅವಾಕ್ಕಾದರು ದಿನಕರನ್. ದಿನಕರನ್ ಬೆಂಗಳೂರಿನ ಕೊಳೇಗೇರಿ ತಮಿಳಿಗರ ಸಂಘದ ಅಧ್ಯಕ್ಷರೂ ಹೌದು. ಅಲ್ಲೇ ಇರುವ ಜಾಗದಲ್ಲೇ ಸ್ವಲ್ಪ ಎತ್ತರದ ಗುಡಿಸಲು ಕಾಣಿಸುತ್ತದೆ ನೋಡಿ ಅದೇ ಅವರ ಮನೆ. ಬಹಳ ಸರಳ ಜೀವನ !ಹರುಕು ಮುರುಕು ಕನ್ನಡ ಕಲಿತಿದ್ದ ದಿನಕರನ್ ಪರವಾಗಿ ಅಂದು ಕೊಳೇಗೇರಿಯಲ್ಲಿ ನಿಂತು ಸಭೆಯಲ್ಲಿ ಮಾತನ್ನಾಡುತ್ತಿದ್ದುದು ದಿನಕರನ್ ಅವರ ಸ್ನೇಹಿತ ಮುನಿರಾಜು-ಕನ್ನಡದವರೇ. ತಮಿಳರೇ ತುಂಬಿರುವ ಸಭೆಯಲ್ಲಿ ಕನ್ನಡದಲ್ಲಿ ಭಾಷಣಮಾಡಲು ಎದೆಗಾರಿಕೆ ಬೇಕು ಸ್ವಾಮೀ. ಸ್ವಲ್ಪ ರೌಡೀ ಶೈಲಿಯಲ್ಲೇ ಬದುಕುತ್ತಿದ್ದ ಮುನಿರಾಜುಗೆ ಹುಂಬಧೈರ್ಯ ಸಹಜವಾಗೇ ಇದೆ; ಹಾಗಾಗಿ ಮುನಿರಾಜು ಕನ್ನಡದಲ್ಲೇ ಮಾತನಾಡುತ್ತಿದ್ದುದು. ನೀವು ತಿಪ್ಪಸಂದ್ರ, ನೀಲಸಂದ್ರ, ಕೃಷ್ಣರಾಜಪುರ ಇಲ್ಲೆಲ್ಲಾ ಸುತ್ತಾಡಿ ಒಂದೆರಡು ರಸ್ತೆಗಳ ಬಗ್ಗೆ ಕೇಳಿ-ನಿಮಗೆ ತಮಿಳಿನಲ್ಲೇ ಪೂರ್ಣ ಮಾಹಿತಿ ಸಿಗುತ್ತದೆಯೇ ಹೊರತು ಕನ್ನಡದಲ್ಲಲ್ಲ! ಮೈಚಿವುಟಿಕೊಂಡು ನಾವೆಲ್ಲಿದ್ದೇವೆ ಅಂತಲೋ ಸಚಿನ್ ತೆಂಡೂಲ್ಕರ್ ತಂಪು ಪಾನೀಯದ ಜಾಹೀರಾತೊಂದರಲ್ಲಿ " ಮೈ ಕಹಾಂ ಹೂಂ ..." ಎಂದು ಹಲ್ಲುಕಿರಿದ ಹಾಗೇ ಮಾಡುತ್ತಲೋ ನಾವೆಲ್ಲಿದ್ದೇವೆ ಎಂದು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಕನ್ನಡಿಗರಿಗಿದೆ.

ಜನಜೀವನ ವೈವಿಧ್ಯದಲ್ಲಿ ಹಲವು ಆಸೆಗಳನ್ನು ಜನಸಾಮಾನ್ಯರು ಅದುಮಿಡಲು ಸಾಧ್ಯವೇ ಇಲ್ಲ. ಅದರಲ್ಲೂ ಸುತ್ತಲೂ ಉನ್ನತಮಟ್ಟದ ಜೀವನವನ್ನು ಉಪಭೋಗಿಸುವ ಜನರನ್ನು ಕಾಣುತ್ತಾ ಬದುಕುವ ಕೊಳೆಗೇರಿಗರಿಗೆ ತಾವೂ ಹಲವು ಸೌಲಭ್ಯಗಳನ್ನು ಪಡೆಯುವಾಸೆ. ಆದರೆ ಅದು ಸಾಧ್ಯವೇ? ಅಂತಹ ಅದಮ್ಯ ಆಸೆಗಳನ್ನು ಸಿಗುವ ಚಿಕ್ಕಪುಟ್ಟ ಪರಿಕರಗಳಿಂದಲೇ ಪಡೆದುಕೊಳ್ಳುವುದು ಅವರಲ್ಲೇ ಕೆಲವರ ಇರಾದೆಯಾದರೆ ಇನ್ನು ಕೆಲವರು ಅವರಲ್ಲೂ ಅಂತಸ್ತುಗಳನ್ನು ತೋರಬಯಸುವವರು ! ಇಂತಹ ’ಅಂತಸ್ತಿನ ಕೊಳೆಗೇರಿ’ ವಾಸಿಗಳಿಗೆ ಅವರ ಅನುಕೂಲಕ್ಕಾಗಿ ಅವರಲ್ಲೇ ಒಬ್ಬ ಸ್ಥಾಪಿಸಿದ ನಾಮಫಲಕವಿಲ್ಲದ ಸಂಸ್ಥೆ ’ದಿನಕರನ್ ಟ್ರಾನ್ಸ್‍ಪೋರ್ಟ್’ !

ಮಾರುಕಟ್ಟೆಯಲ್ಲಿ ಸಿಗುವ ಹಳೆಯಬಟ್ಟೆಗಳಲ್ಲಿ ಚೆನ್ನಾಗಿಕಾಣುವ ಒಂದು ಸಫಾರಿ ದಿರಿಸನ್ನು ಖರೀದಿಸಿ ಹಾಕಿಕೊಂಡು ಕತ್ತಿನಲ್ಲಿ ಮಿಂಚುವ ರೋಲ್ಡ್ ಗೋಲ್ಡ್ ಸರ, ಹತ್ತೂ ಬೆರಳುಗಳಿಗೆ ಥಳಥಳ ಹೊಳೆಯುವ ಕಲ್ಲುಗಳುಳ್ಳ ಕ್ಷಮಿಸಿ ನವರತ್ನಗಳುಳ್ಳ [ ಆಭರಣದ ಅಂಗಡಿಗಳಲ್ಲಿ ನಾವು ಕೊಳ್ಳುವಾಗ ’ನವರತ್ನಗಳೆ’ಂದು ನಮಗೆ ಮೋಸದಿಂದ ಮಾರಲ್ಪಡುವ ವಸ್ತುಗಳು ವಿನ್ಯಾಸ ವೈಖರಿಗೆ ಸೋಲುವ ಹೆಂಗಸರ ಕೊಸರುವಿಕೆಯಿಂದ ಅಸಹಾಯರಾಗಿ ಅದೇ ಆಭರಣಗಳನ್ನು ಬದಲಾಯಿಸಿ ಹೊಸದು ಕೊಳ್ಳಲು ಹೋದಾಗ ಕಲ್ಲುಗಳೆಂದು ಅದೇ ಅಂಗಡಿಯವರಿಂದ ಗುರುತಿಸಲ್ಪಟ್ಟು ಬೆಲೆಯಿಲ್ಲದ ಹರಳುಗಳಾಗಿ ನಮ್ಮ ಹೃದಯದಲ್ಲಿ ರಕ್ತ ಹರಳುಗಟ್ಟಿಸುವುದು ಹಗಲು ದರೋಡೆಯ ಇನ್ನೊಂದು ರೂಪ ಎನ್ನೋಣವೇ ? ಮಿಕ್ಕೆಲ್ಲಕ್ಕೂ ಆಯ ಅಳತೆ ಕಲ್ಪಿಸಿರುವ ಸಮಾಜದಲ್ಲಿ ಆಭರಣಗಳಿಗೆ ಮತ್ತು ರೇಶ್ಮೆ ಬಟ್ಟೆಗಳಿಗೆ ಇನ್ನೂ ಸಮರ್ಪಕ ಮೌಲ್ಯಮಾಪನ ಬರದಿದ್ದುದು ನಮ್ಮ ಆಧುನಿಕ ವಿಜ್ಞಾನದ ಔನ್ನತ್ಯಕ್ಕೆ ಹಿಡಿದ ಕನ್ನಡಿ ಎನ್ನೋಣವೇ ? ಅಥವಾ ನಾವೇ ಬುದ್ದುಗಳು ಎಂದುಕೊಂಡು ಸುಮ್ಮನಾಗೋಣವೇ ?-ತೀರ್ಮಾನ ನಿಮಗೇ ಬಿಟ್ಟಿದ್ದು! ] ಉಂಗುರಗಳನ್ನು ತೊಟ್ಟ ಉದ್ದನೆಯ ಸಣಕಲು ಇದ್ದಿಲಬಣ್ಣದ ವ್ಯಕ್ತಿಯೇ ಶ್ರೀಮಾನ್ ದಿನಕರನ್. ಏಕಾಂಗಿಯಾಗಿ ಸಾಹುಕಾರನಾಗಿಯೂ ನೌಕರನಾಗಿಯೂ ’ಒನ್ ಮ್ಯಾನ್ ಆರ್ಮಿ’ ಎಂಬಂತೇ ಅವರು ಚಾಲಕನೂ ಮಾಲಕನೂ ಆಗಿ ಹಲವು ಗಾಡಿಗಳನ್ನು ನಡೆಸುತ್ತಾ ಇದ್ದಾರೆ. ಎಲ್ಲಕ್ಕೂ ಮೇಲ್ಗಡೆ ’ದಿನಕರನ್ ಟ್ರಾನ್ಸ್‍ಪೋರ್ಟ್’ ಎಂದೇ ಬರೆದಿರುತ್ತದೆ. ಅವರು ಬರೆಸಿರುವ ಅಕ್ಷರಗಳಲ್ಲಿ ಸ್ವಲ್ಪ ತಪ್ಪಿದ್ದರೆ ತಿದ್ದುಕೊಂಡು ಓದಿ.

ದಿನಕರನ್ ಟ್ರಾನ್ಸ್‍ಪೋರ್ಟ್ ಬಗ್ಗೆ ಬರೆಯಬೇಕಾಗಿ ಬಂದುದು ಏಕೆಗೊತ್ತೋ ಅವರನ್ನು ಆಡಿಕೊಳ್ಳುವ ಸಲುವಾಗಿ ಖಂಡಿತಾ ಅಲ್ಲ. ಅವರಲ್ಲಿರುವ ಗಾಡಿಗಳಿಗೆ ಒಂದಕ್ಕೂ ಸರಿಯಾದ ಬ್ರೇಕು, ಸಸ್ಪೆನ್ಶನ್ ವಗೈರೆ ಇಲ್ಲ. ಅಕಸ್ಮಾತ್ ರಸ್ತೆಯಲ್ಲಿ ಅವರು ಗಾಡಿತೆಗೆದುಕೊಂಡು ಹೊರಟರೆ ಅವರ ಹಿಂದೆ ಹಾಗೂ ಮುಂದೆ ಚಲಿಸುವ ಗಾಡಿಗಳವರು ಅವರವರ ಬ್ರೇಕುಗಳನ್ನು ಅತಿಯಾಗಿ ಆತುಕೊಂಡೇ ಇರಬೇಕಾದ ಅಪ್ರಮೇಯವಿದೆ. ಬರೇ ಗೇರಿನಲ್ಲೇ ನಿಯಂತ್ರಿಸಿ ನಿಲ್ಲಿಸುವ ಕಲೆ ದಿನಕರನ್ ಅವರಿಗೆ ಸಿದ್ಧಿಸಿದೆಯಾದರೂ ಒಂದೊಮ್ಮೆ ಗಾಡಿ ನಿಲ್ಲದೇ ಹೋದರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ! ಬೇಸಿಗೆಯಲ್ಲಿ ಹಲವುಸಲ ಏಕಕಾಲಕ್ಕೆ ಒಂದು ಕೊಳೇಗೇರಿಯವರು ಇನ್ನೊಂದೆಡೆ ಸಂಬಂಧ ಕುದುರಿಸಲೋ ಅಥವಾ ಇನ್ನೇತಕ್ಕೋ ಹೋಗಬೇಕಾದಾಗ ಕೆಲವರು ಅವರನ್ನು ಕರೆದೇ ಕರೆಯುತ್ತಾರೆ. ಆಗ ಒಂದೇ ದಿನ ಒಂದೇ ಸಮಯಕ್ಕೆ ಹಲವು ಗಾಡಿಗಳನ್ನು ಚಲಾಯಿಸುವ ಪ್ರಮೇಯ ಬಂದರೆ ಆಗ ಚಾಲಕರಾಗಿ ಅವರ ಪರಿಚಯದ ಕೆಲವು ಸ್ಲಮ್ ಹುಡುಗರು ಅವರ ಗಾಡಿಗಳನ್ನು ಎತ್ತುಕೊಂಡು ಹೊರಡುವುದಿದೆ. ಅಂತಹ ಸನ್ನಿವೇಶಗಳಲ್ಲಿ ದೇವರಮೇಲೇ ಭಾರಹಾಕಿ ನಡೆಯಬೇಕಾದ ಪರಿಸ್ಥಿತಿ ದಾರಿಹೋಕರದು.

ಉಳಿದ ದಿನಗಳಲ್ಲಿ ನಗರಪಾಲಿಕೆಯ ಕಸ ವಿಲೇವಾರಿಗೂ ಅವರ ಗಾಡಿಗಳು ಹೋಗುತ್ತಿರುತ್ತವೆ. ಒಂದೇ ಹೆಡ್ ಲೈಟಿರುವ ಒಕ್ಕಣ್ಣಗಳು, ಚಕ್ರಗಳ ಅಲೈನಮೆಂಟು ಕಳೆದುಹೋಗಿ ನಾನಾ ರೀತಿಯಲ್ಲಿ ನರ್ತಿಸುತ್ತಾ ಓಡುವ ಲಾರಿ ಮತ್ತು ಕಾರುಗಳು, ಸವಕಳಿಯಾಗಿ ಇನ್ನೇನು ಒಡೆದು ಹೋಗಬಹುದಾದ ರೀತಿಯ ಟೈರುಗಳು, ರಾಚಿರುವ ರಾಡಿಗಳೇ ಬಣ್ಣಗಳಾಗಿ ’ಕಳೆಕಟ್ಟಿರುವ’ ವಾಹನಗಳು, ಬೆಂಕಿಬಿದ್ದಾಗ ಮೇಲೇಳುವ ಹೊಗೆಯಂತೇ ದುತ್ತನೇ ಹೊಗೆಯುಗುಳುವ ಗಾಡಿಗಳು, ಗೇರ್ ಬದಲಾಯಿಸಿದಾಗ ಕಿಟಾರನೆ ಕಿರುಚುವ ಗಾಡಿಗಳು ಹೀಗೇ ವೈವಿಧ್ಯಮಯ ಗಾಡಿಗಳನ್ನು ದಿನಕರನ್ ಹೊಂದಿದ್ದಾರೆ. ಕಾರುಗಳೆಲ್ಲಾ ಬಹುತೇಕ ಪ್ರೀಮಿಯರ್ ಪದ್ಮಿನಿ ಅಥವಾ ಪ್ರೀಮಿಯರ್ ೧೦೮ ಈ ಕಾರುಗಳು. ಒಂದುಕಾಲಕ್ಕೆ ರಾಜಕಾರಣಿಗಳ ಕನಸಿನ ಕಾರಾಗಿದ್ದ ಕಾಂಟೆಸ್ಸಾ ಕಾರೂ ಒಂದು ಇತ್ತೀಚೆಗೆ ಬಂದು ಸೇರಿದೆ! ಲಾರಿಗಳಲ್ಲಿ ಹಲವೆಲ್ಲಾ ಕಲ್ಲಂಗಡಿ ಹಣ್ಣಿನ ಮೂತಿಯವು! ಆ ಲಾರಿಗಳ ಬಾಡಿ ಬಿಲ್ಡರ‍್ ಗಳು ಯಾರೋ ಅವರಿಗೆ ಬಹುಮಾನ ಘೋಷಿಸಬೇಕು. ಹೀಗೇ ವೈವಿಧ್ಯಮಯ ಗಾಡಿಗಳನ್ನು ನಡೆಸುವ ದಿನಕರನ್ ಅವರು ಖಾಲಿ ಇರುವ ದಿನಗಳಲ್ಲಿ ಮಿಕ್ಕಿದ ಗಾಡಿಗಳನ್ನೆಲ್ಲಾ ಅವರ ಏರಿಯಾದ ಹತ್ತಿರ ರಸ್ತೆಗಳಲ್ಲೇ ನಿಲ್ಲಿಸಿ [ಕೆಲವು ಸದಾ ಅಲ್ಲೀ ಇಲ್ಲೀ ಪೂರ್ತಿ ಕೆಟ್ಟು ವಾರಗಟ್ಟಲೆ ನಿಂತೇ ಇರುತ್ತವೆ ಅನ್ನಿ]ಅವರ ಗಿರಾಕಿಗಳಿಗೆ ಬೇಕಾದ ಕಾರನ್ನು ತೆಗೆದುಕೊಂಡು ಹೊರಡುತ್ತಾರೆ. ಒಮ್ಮೆ ಈ ಗಾಡಿ ಚಲಾಯಿಸಿದರೆ ಇನ್ನೊಮ್ಮೆ ಆ ಗಾಡಿ ಹೀಗೇ ಗಿರಾಕಿಗಳ ತೃಪ್ತಿಯೇ ಅವರ ಧ್ಯೇಯ !

ಅವರ ಗಾಡಿಗಳಲ್ಲಿ ಓಡಾಡುವ ಮಂದಿಗೆ ಅದೇ ಪರಮಾನಂದ! ಅದು ಅವರಿಗೆ ಅತ್ಯಂತ ಹೆಮ್ಮೆಯ ಅಂತಸ್ತಿನ ವಿಷಯ! ಒಂದೊಮ್ಮೆ ಓಡಾಡುವಾಗ ಏನಾದರೂ ಆದರೂ ಜನ್ಮದಲ್ಲೇ ದುಡಿಯಲಾರದಷ್ಟನ್ನು ಸರಕಾರ ಪರಿಹಾರಧನವಾಗಿ ಕೊಡುತ್ತದೆ ಎಂಬ ಅಭಿಮತವೂ ಇರಬಹುದು. ಬೆಂಗಳೂರಿಗರಾದರೆ ನೀವು ದಿನಕರನ್ ಟ್ರಾನ್ಸ್‍ಪೋರ್ಟ್ ಗಾಡಿಗಳನ್ನು ನೋಡಿಯೇ ಇರುತ್ತೀರಿ. ಕೆಲವರಂತೂ ಕೇವಲ ವಾಸನಾಬಲದಿಂದಲೇ ಈ ಗಾಡಿಗಳನ್ನು ಪತ್ತೆಹಚ್ಚಬಲ್ಲರು! ಫಿಟ್‍ನೆಸ್ ಸರ್ಟಿಫಿಕೇಟ್ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಹಲವು ಗಾಡಿಗಳ ಪೈಕಿ ಇವೂ ಸೇರುತ್ತವೆ. ಯಶವಂತಪುರದ ಮಂಡಿದೊರೆಗಳ ಕಿರಾಣಿ ಸಾಮಾನು ಸಾಗಿಸುವ ಕೆಲವು ಲಾರಿಗಳು ವೈಖರಿಯಲ್ಲಿ ಈ ವಾಹನಗಳ ಸಂಬಂಧಿಗಳು. ಕೆಲವೊಮ್ಮೆ ಅದಲುಬದಲಾದರೂ ತಿಳಿಯದಷ್ಟು ಸಾಮ್ಯತೆ ಇದೆ. ಒಂದೇ ವ್ಯತ್ಯಾಸವೆಂದರೆ ದಿನಕರನ್ ಅವರ ಲಾರಿಗಳಿಗೆ ಕಸವಿಲೇವಾರಿಮಾಡುವಾಗ ಅಂಟಿದ ಕೊಳೆಯ ಚಿತ್ರಗಳು, ಬಗ್ಗಡದ ಕಲೆಗಳು ಮತ್ತದರ ಅಸಾಧ್ಯ ’ಘಮಲು’! ಬಿಟ್ಟರೆ ಮಿಕ್ಕುಳಿದ ಸ್ಥಿತಿ ಒಂದೇ.

ಇನ್ನು ಕೆಲವು ಮರಳು ಲಾರಿಗಳು. ಅವುಗಳಲ್ಲಿ ನಿನ್ನೆಯವರೆಗೆ ಕಿನ್ನರ್ [ಕ್ಷಮಿಸಿ ಅವರನ್ನೇ ಕೇಳಿದಾಗ ತಾನು ’ಕಿನ್ನರ್’ ಎನ್ನುತ್ತಿದ್ದರು ಅಷ್ಟೆಲ್ಲಾ ಕಲಿತವರು: ಕಿನ್ನರ್= ಕ್ಲೀನರ್]ಆಗಿದ್ದವರು ಇಂದು ಡೈವರ್ [ಅವರೇ ಹೇಳಿದ್ದು]ಆಗುತ್ತಾರೆ. ಅವರಲ್ಲಿ ಅನೇಕರಿಗೆ ಸರಿಯಾದ ಸೂಚನೆಗಳ ಅರಿವಿರುವುದಿಲ್ಲ. ಚಾಲನೆಮಾಡುವಾಗ ಒಂದು ಪೆಗ್ಗು ’ಪರಮಾತ್ಮ’ನನ್ನು ಒಳಗೆ ಬಿಟ್ಟುಕೊಂಡುಬಿಟ್ಟರೆ ಅವರಲ್ಲಿರುವ ಪರಮಾತ್ಮ ಆಡಿಸಿದ್ದೇ ಆಟ! ಯಶವಂತಪುರದಲ್ಲಿ ಇದೇ ರೀತಿಯ ಮರಳು ಲಾರಿಯೊಂದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಹುಡುಗನೋರ್ವನನ್ನು ಬಲಿತೆಗೆದುಕೊಂಡಿದ್ದು ನನಗೆ ಕಣ್ಣಿಗಿನ್ನೂ ಕಟ್ಟಿದಂತಿದೆ.ಅದು ನಡೆದು ಒಂದು ವರ್ಷ. ಹೀಗಾಗಿ ಆ ಡೈವರ್ ನಡೆಸಿದ ಘಟನೆ ವಾರ್ಷಿಕೋತ್ಸವದ ನೆನಪಿನಲ್ಲಿ ಇದನ್ನು ಬರೆಯುತ್ತಿದ್ದೇನೆ! ಒಮ್ಮೆ ಬಸ್ಸಿನಲ್ಲಿ ನೆಲಮಂಗಲ ಕಡೆಯಿಂದ ಬರುತ್ತಿದ್ದಾಗ ಬೆಳಗಿನ ಜಾವದಲ್ಲಿ ತುಂತುರು ಮಳೆ ಹನಿಯುತ್ತಿತ್ತು. ಒಂದು ಮರಳುಲಾರಿ ಮುಂದೆ ಬರುತ್ತಿದ್ದುದು ಮಾತ್ರ ಗೊತ್ತು. ಆಮೇಲೆ ನಮ್ಮ ಬಸ್ಸು ರಸ್ತೆಯ ಪಕ್ಕದ ಮರವನ್ನು ಮುದ್ದಿಸಿತ್ತು. ನಮ್ಮ ಡ್ರೈವರ್ ಹೆದರಿ ಓಡಿಹೋಗಿದ್ದ! ಆದರೆ ಬಸ್ಸಿನಲ್ಲಿ ಇರುವವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದವು. ಮರಳಲಾರಿ ಅಡ್ಡ ಬಂದುಬಿಟ್ಟಿತಂತೆ ಎಂದು ಯಾರೋ ಹೇಳಿದರು. ಸದ್ಯ ಬದುಕಿದೆಯಾ ಬಡಜೀವವೇ ಎನ್ನುತ್ತಾ ಕಾಲೆಳೆದುಕೊಂಡು ಮನೆಗೆ ಹೋದಮೇಲೆ ದೇವರಿಗೆ ತುಪ್ಪದ ದೀಪ ಹಚ್ಚಿದೆವು !

೧೯೯೮ ರ ವರೆಗೂ ಕಾರೆಂಬುದು ಒಂದು ವಿಶೇಷ ಆಸ್ತಿ-ಅಂತಸ್ತಿನ ಹೆಗ್ಗುರುತಾಗಿತ್ತು. ಆಮೇಲೆ ಬಂದ ತಂತ್ರಾಂಶ ಕಂಪನಿಗಳ ಉನ್ನತ ಸಂಬಳದಿಂದ ಸಾಮಾಜಿಕ ಕ್ರಾಂತಿಯುಂಟಾಗಿ ’ಗಂಡಾಗುಂಡಿ ಮಾಡಿಯಾದರೂ ಗಡಿಗೇ ತುಪ್ಪಾ ಕುಡೀಬೇಕು’ ಎನ್ನುವ ಹೇಳಿಕೆಯನ್ನೇ ಬೇರೇ ರೀತಿಯಲ್ಲಿ ಹೇಳುತ್ತಾ ವಿದೇಶೀ ಬ್ಯಾಂಕುಗಳು ಬಂದವು. ಎಲ್ಲದಕ್ಕೂ ಸಾಲ ನೀಡಲ್ಪಟ್ಟಿತ್ತು. ೧೯೮೦ರ ವೇಳೆಗೆ ಹೇಗೆ ಎಲ್ಲರಮನೆಯ ಛಾವಣಿಯಮೇಲೆ ಟಿವಿ ಆಂಟೆನಾ ಕಾಣಿಸಿದರೇ ಅದೊಂದು ಅಂತಸ್ತಿನ ಧ್ಯೋತಕವಾಗಿತ್ತೋ ಅದೇ ತೆರನಾಗಿ ೧೯೯೮ರಿಂದ ಸುಮಾರು ೨೦೦೦ನೇ ಇಸವಿಯ ವರೆಗೆ ಎಲ್ಲರ ಮನೆಯಮುಂದೂ ಒಂದೊಂದು ಕಾರು! ಕಾರುಬಾರು ಜೋರು. ಆಮೇಲೆ ೨೦೦೧ ರಲ್ಲಿ ಆದ ಜಾಗತಿಕ ಆರ್ಥಿಕ ಹಿಂಜರಿತ ಹಲವು ತಂತ್ರಾಂಶ ತಂತ್ರಜ್ಞರನ್ನು ಬೀದಿಯಲ್ಲಿ ನಿಲ್ಲುವಂತೇ ಮಾಡಿತು. ಅವರಿಗೆ ಕರೆದು ಕೊಟ್ಟು ಕಾರು-ಬಂಗಲೆ ಕೊಡಿಸಿದ್ದ ಬ್ಯಾಂಕುಗಳು ಬಾಕಿಹಣ ಪಾವತಿಯಾಗದಾದಾಗ ಕೊಟ್ಟಿದ್ದನ್ನೆಲ್ಲಾ ಕಿತ್ತುಕೊಂಡರು. ಈ ದಿನಗಳಲ್ಲಿ ವಾಹನಸಾಲ ಸರ್ವೇಸಾಮಾನ್ಯವಾಗಿಹೋಯಿತು. ಈಗ ಕಾರೆಂಬುದು ಅಂತಸ್ತಿನ ಪ್ರಶ್ನೆಯಲ್ಲ-ಅನುಕೂಲದ ಪ್ರಶ್ನೆಯಾಗಿದೆ.ಆದರೆ ಕೆಲವರಿಗೆ ಮಾತ್ರ ಅದು ಇನ್ನೂ ಅಂತಸ್ತಿನ ಹೆಗ್ಗುರುತೇ ಆಗುಳಿದಿದೆ. ಇಂತಹ ಹೆಗ್ಗುರುತಿಗಾಗಿ ೧೯೮೫ ರಲ್ಲಿ ಚಾಲ್ತಿಯಲ್ಲಿ ಕಣ್ಮಣಿಯಾಗಿದ್ದ ಪ್ರೀಮಿಯರ್ ಪದ್ಮಿನಿ ಕಾರುಗಳು ಇಂದೂ ಅವರಲ್ಲಿವೆ. ಅಪರೂಪಕ್ಕೊಮ್ಮೆ ರಸ್ತೆಗೆ ಇಳಿಯುವ ಅವುಗಳನ್ನು ತಿರುಗಿಸುವಾಗ, ಬ್ರೇಕ್ ಹಾಕುವಾಗ ಚಾಲಕನಾಗಿರುವ ಯಜಮಾನ ಅನುಭವಿಸುವ ಯಾತನೆ ಪಕ್ಕದ ಗಾಡಿಗಳಲ್ಲಿ ಕೂತಿರುವ ನಮಗೆ ನೋಡಸಿಗುತ್ತದೆ. ಆದರೂ ಅವರಿಗೆ ಅದೇ ಕಾರು ಬೇಕು! ಅವರ ಈ ರಥಯಾತ್ರೆ ಅಲ್ಲಲ್ಲಿ ಹಲವು ಸರ್ತಿ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತದೆ ಎಂಬುದನ್ನೂ ಅವರು ಅರಿತಂತಿಲ್ಲ, ಇದು ವಿಪರ್ಯಾಸ.

ನಮ್ಮ ಬಿಳೀ ಕಾಪರ್ ಬಾಟಮ್ ಸಾರಿ ಸಾರಿ ಖಾಕಿ ಬಾಟಮ್ ನವರು ಖರ್ಚಿಗೆ ಕಾಸುಬೇಕಾದಾಗೆಲ್ಲಾ ಸಿಗ್ನಾಲ್ ತಿರುವಿನಲ್ಲೋ ಪಕ್ಕದಲ್ಲೋ ನಿಂತು ಸಿಗ್ನಾಲ್ ಹಳದಿ ಇರುವಾಗ ದಾಟಿದವರನ್ನೂ ಹಿಡಿದು ಸಾವಿರದೆಂಟು ತರಲೆಮಾಡುತ್ತಾರೆ. ಆಮೇಲೆ ನೂರೋ ನೂರೈವತ್ತೋ ತೆತ್ತರೆ ಕೋಳೀಸಾರಿಗೋ ’ಪರಮಾತ್ಮ’ನ ಲೆಕ್ಕಕ್ಕೋ ಆಯ್ತು ಎಂದು ಬಿಟ್ಟುಬಿಡುತ್ತಾರೆ. ಅದೇ ಖಾಖೀ ಬಾಟಮ್ ನವರಿಗೆ ಇಂತಹ ’ರಥ’ಗಳು ಕಾಣಿಸುವುದೇ ಇಲ್ಲವೋ ಅಥವಾ ಇವುಗಳ ಹಿಂದೆಯೂ ಯಾವುದೇ ಮಾಫಿಯಾ ಇದೆಯೋ ತಿಳಿಯದಾಗಿದೆ. ಅಂತೂ ’ಸಿಂಗಾಪೂರ್’ ಆಗುತ್ತಿರುವ ಬೆಂಗಳೂರಿನಲ್ಲಿ ಎತ್ತಿನ ಗಾಡಿಗಳನ್ನಂತೂ ಮುಖ್ಯರಸ್ತೆಗಳಲ್ಲಿ ನಿಲ್ಲಿಸಿದರು, ಆದರೆ ಕಲ್ಲಂಗಡಿ ಮೂತಿಯ ರಥಗಳು ಮಾತ್ರ ಹರೆದಾಡುತ್ತಲೇ ಇವೆ. ಅವುಗಳ ಉಪಟಳ ಹೇಳತೀರದ್ದು. ಡೈವರು ದಾರಿ ಕೊಟ್ಟರೆ ನಾವು ಮುಂದೆ ಸಾಗಬೇಕು. ಒಪಕ್ಷ ದಾರಿ ಕೊಡಲಿಲ್ಲವೋ ಆ ರಥಗಳ ಹಿಂದೆ ನಾವು ಕಾಲಾಳುಗಳಂತೇ ತೆರಳಬೇಕು!

ಅಗೋ ನೋಡಿ ನಾನು ಹೇಳುತ್ತಿರುವಂತೇ ಬಂದೇ ಬಿಟ್ಟಿತು ’ದಿನಕರನ್ ಟ್ರಾನ್ಸ್‍ಪೋರ್ಟ್’ ಲಾರಿ. ರಬ್ಬರ್ ಹಾರ್ನ್ ಪೋಂ ಪೋಂ ಪೋಂ ಎನ್ನುವುದು ಸದ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲೂ ಈಗ ಕಾಣಿಸುತ್ತಿಲ್ಲ, ಆದರೆ ಈ ರಥಗಳಲ್ಲಿದೆ. ಯಾಕೆಂದರೆ ಮಿಕ್ಕಿದ ಹಾರ್ನ್ ಗಳಿಗೆ ಬ್ಯಾಟರಿ ಬಹಳ ಬೇಕಾಗುತ್ತದೆ ಇದಾದರೆ ಬ್ಯಾಟರಿ ಇರದಿದ್ದರೂ ಸೈ! ಬೆಂಗಳೂರಿನಲ್ಲಿ ವಿಹರಿಸುವ ಜನ ಒಮ್ಮೆಯಾದರೂ ’ದಿನಕರನ್ ಟ್ರಾನ್ಸ್‍ಪೋರ್ಟ್’ ಕಾರು ಹತ್ತಿ- ಜಸ್ಟ್ ಫಾರೇ ಚೇಂಜ್ ! ಜೈ ದಿನಕರನ್ !

Friday, February 11, 2011

’ಕಾಲಹರಣ’


’ಕಾಲಹರಣ’
[ಇಂತಹ ಭಾಷಣಕಾರರು ಕಾಲವನ್ನಲ್ಲ ಕಾಲನನ್ನೂ ಹರಣಮಾಡಬಲ್ಲ ಹುರುಳಿಲ್ಲದ ಭಾಷಣಕಲೆಯನ್ನು ಸಿದ್ಧಿಸಿಕೊಂಡ ಭಾಷಣಕಲಾ ಭೂಷಣರು!: ನೋಡಿ ನಿಮಗೂ ಇವರು ಸಿಕ್ಕಿರಬಹುದು ]

ಎಲ್ಲರ ಒತ್ತಾಯಕ್ಕೆ ಮಣಿದು
ಈ ಭಾಷಣವನ್ನು ಮಂಡಿಸುತ್ತಿದ್ದೇನೆ
ಅಷ್ಟಕ್ಕೂ ನಾನು ಮಾತಾಡುವುದೇನೂ ಉಳಿದಿಲ್ಲ !
ನಾನು ಹೇಳಬೇಕಾದುದನ್ನೆಲ್ಲ ಅವರೇ ಹೇಳಿದ್ದಾರೆ
ಅವರು ಹೇಳಿದ್ದಕ್ಕೆ ಇವರು ಒತ್ತು ಕೊಟ್ಟಿದ್ದಾರೆ
ಅವರೆಲ್ಲಾ ಹೇಳಿದ್ದನ್ನೇ ನಾನು ಮತ್ತೆ ಹೇಳಿದರೆ ಚಂದವೇ?
ಅದಕ್ಕೇ ನಾನು ಜಾಸ್ತಿ ಮಾತನಾಡುವುದಿಲ್ಲ

ಒಂದರ್ಥದಲ್ಲಿ ಅವರು ಹೇಳಿದ್ದನ್ನು ನೋಡಿದರೆ
ಅದರಲ್ಲಿ ಸತ್ಯವೇ ಅಡಗಿದೆ
ಹಾಗಂತ ಸತ್ಯವನ್ನೂ ಕೂಡ
ಪರಾಮರ್ಶಿಸಬೇಕಾದ ಕಾಲ ಇದು
ಅದರಲ್ಲೂ ಇವರು ಅವರ ಮಾತಿಗೆ ಒತ್ತುಕೊಟ್ಟಾಗ
ಅವರ ಮಾತಿಗೆ ಎಲ್ಲಿಲ್ಲದ
ಜಾವಾಬ್ದಾರಿ ಬರುತ್ತದೆ
ತೂಕ ಹೆಚ್ಚುತ್ತದೆ
ತೂಕವನ್ನು ಉಳಿಸಿಕೊಳ್ಳಬೇಕಾದರೆ
ನಾನು ಮಾತನಾಡಲೇಬೇಕಾಯ್ತು

ಅವರ ಅನಿಸಿಕೆಯಲ್ಲಿ ತಪ್ಪೇನೂ ಕಾಣುವುದಿಲ್ಲ
ಇವರ ಪುಷ್ಟೀಕರಣವೂ ಸಮರ್ಪಕವಾಗಿಯೇ ಇದೆ
ಅಂದಮೇಲೆ ಮತ್ತೆ ಕಾಣದ ತಪ್ಪನ್ನು
ಹುಡುಕುವ ವ್ರಥಾ ಪ್ರಯತ್ನವನ್ನು ಮಾಡಬೇಕೆ?
-ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ!
ಆದರೂ ಅವರೆಲ್ಲಾ ಹೇಳಿದ್ದಕ್ಕೆ
ನಾನು ಕೋಲೇ ಬಸವನ ರೀತಿ
ತಲೆಯಲ್ಲಾಡಿಸಿಬಿಟ್ಟರೆ
ಎದುರಿಗೆ ಕುಳಿತ ನೀವೆಲ್ಲಾ ತಪ್ಪು ತಿಳಿಯುತ್ತೀರಿ !
ಈ ಕಾರಣಕ್ಕಾಗಿ ವಿಷಯವನ್ನು
ಕೂಲಂಕಷವಾಗಿ ಪರಿಶೀಲಿಸಲೇಬೇಕಾಗಿದೆ
ಎಂಬುದನ್ನು ಮೇಜು ಗುದ್ದಿ ಹೇಳುತ್ತಿದ್ದೇನೆ

ನಿಮಗೂ ಭಾಷಣಗಳನ್ನು ಕೇಳೀ ಕೇಳೀ
ಇಷ್ಟುಹೊತ್ತಿಗೆ ಸುಸ್ತಾಗಿ ಹೋಗಿರುತ್ತದೆ
ಎಷ್ಟೋ ಭಾಷಣಗಳು ನಿದ್ರೆ ಮಾತ್ರೆಗಿಂತಾ ಮೇಲು!
ಇದನ್ನು ನಾನು ಹೇಳುತ್ತಿಲ್ಲ
ನನ್ನಂತಹ ಅನೇಕರು ಹೇಳುತ್ತಿದ್ದಾರೆ
ಹಾಗಂತ ಭಾಷಣಕಾರರ ಎದುರಿಗೇ
ಡಣಾಡಂಗುರವಾಗಿ ಇದನ್ನು ಸಾರಲು ಸಾಧ್ಯವೇ ?
ಅನಿವಾರ್ಯತೆ ಹಲವು ಸರ್ತಿ ಹೀಗೇ ಕಾಡುತ್ತದೆ
ಈಗ ತಮಗೆಲ್ಲಾ ಇದರ ಅರಿವಾಗಿರಬಹುದು
ಪ್ರತಿಯೊಂದು ಭಾಷಣದ ಹಿಂದೆಯೂ
ಹಲವುದಿನಗಳ ತಯಾರಿ ನಡೆದಿರುತ್ತದೆ
ಹಾಗಿದ್ದರೇನೇ ಭಾಷಣ ಕಳೆಕಟ್ಟುವುದು
ಇಷ್ಟು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ

Wednesday, February 9, 2011

ಶಿಷ್ಟ ’ಜೂಜು’


ಶಿಷ್ಟ ’ಜೂಜು’

ಈಜುವುದು ಸುಲಭವೇ ?ಸೋಜಿಗದ ಈ ಕೊಳದಿ
ಹೂಜಿನೀರನು ಕಾಗೆ ಕುಡಿದ ಥರವಲ್ಲ !
ರಾಜಮಹಾರಾಜರೂ ಈಜಾಡಿ ಸೋತರು
ಜೂಜು ಬಲುದೊಡ್ಡದಿದು ಆಟದರಿವಿಲ್ಲ !

ಮುರಿದು ಬೇಲಿಯನೆಲ್ಲ ಕರಗಿಸುತಾನಂತದಲಿ
ಅರಿತು ನೋಡುವಲೊಮ್ಮೆ ಅದುವೇ ಅದ್ವೈತ
ಮುರಿಯದೇ ಒಟ್ಟಿನಲಿ ಬೇರೇ ಗುಣಿಸುತ ನಡೆಯೆ
ಬರುವುದಾಗಲ್ಲೆಲ್ಲ ಹಲವಿಧದ ದ್ವೈತ

ಮುರಿಯಲೂ ಬೇಡೆನುತ ಅರಿಯಲೂ ಬೇಕೆನುತ
ಪರಿಯಲ್ಲಿ ಹುಡುಕುವುದೇ ವಿಶಿಷ್ಟಾದ್ವೈತ
ಗುರಿಯೊಂದೇ ಸೇರುವುದು ನದಿ-ಸಾಗರಗಳಂತೆ
ಹಿರಿಮೆ-ಗರಿಮೆಯ ಮರೆತು ಬರಲಿ ಜ್ಞಾನಪಥ

ತೀರದಲಿ ಕುಳಿತಾಗ ದೂರದೆಡೆ ಈಕ್ಷಿಸುತ
ಯಾರು ಕಂಡರು ಶರಧಿಯಿನ್ನೊಂದು ದಡವ ?
ಜಾರುವುದು ಈ ಮನಸು ಜಾರೆ ಹಣಕಂಡಂತೇ !
ಮೋರೆಯಿಲ್ಲದೆ ಸುತ್ತಿ ಬದುಕಾಯ್ತು ಬಡವ

ವಿಶ್ವದಲಿ ನಮ್ಮಿರವು ಹೊಳೆಗೆ ಹುಣಿಸೆಯ ಹಣ್ಣು
ಈಶ್ವರನ ಪ್ರಣಿದಾನ ಜೀವ ನಿರವದ್ಯ
ಶಾಶ್ವತವ ಪಡೆವಾಗ ಜಾರುಗಂಬವೇ ಸ್ಫೂರ್ತಿ
ನಶ್ವರವ ಕಡೆಗಣಿಸಿ ಮುನ್ನಡೆಯೆ ವೇದ್ಯ !

Tuesday, February 8, 2011

ಗರ್ಮಜ್ಞನ ನವ ನೀತಿ ದಶಕಗಳು !


ಗರ್ಮಜ್ಞನ ನವ ನೀತಿ ದಶಕಗಳು !

ರಾಗಿ ಮುದ್ದೆಯ ಮುಖವಾದೊಡೇನು ?
ಯೋಗವಿದ್ದೊಡೆ ಚಲನಚಿತ್ರ ನಟಿಯನ್ನೂ
ಭೋಗಿಸಿ ಮಕ್ಕಳ ಪಡೆವನೆಂದನಾ |
ಗರ್ಮಜ್ಞ

ಮಾಜಿಯಾದರೇನು ಹಾಲಿಯಾದರೇನು ?
ರಾಜಿಮಾಡಿಕೊಳ್ಳದೇ ಖುರ್ಚಿಯಬಗ್ಗೆ ಆ
ಯೋಜಿಸಿ ಕಸರತ್ತು ನಡೆಸೆಂದನಾ | ಗರ್ಮಜ್ಞ

ಮಾರುವುದ-ಕೊಳ್ಳುವುದ ಕಲಿತರದು ಒಳ್ಳೆಯದು
ತೇರುಜಾತ್ರೆಗಳಲ್ಲಿ ಬೆಂಡುಬತ್ತಾಸುಕೊಂಡಂತೇ ಕೊಳ್ಳಬಹುದು
ಕಾರಿನಲ್ಲೋಡಾಡುವ ’ಕುದುರೆಗಳ’ನೆಂದನಾ |
ಗರ್ಮಜ್ಞ

ಹನ್ನೊಂದು ಎಕರೆ ಜಮೀನಿನ ’ಮಣ್ಣಿನಮಗ’
ಹನ್ನೊಂದು ನೂರು ಕೋಟಿ ಆಸ್ತಿಗೆ ಒಡೆಯನಪ್ಪುದು !
ನಿನ್ನಿಂದವೂ ಸಾಧ್ಯ ನೀತಿಮರೆತರೆಂದನಾ |
ಗರ್ಮಜ್ಞ

ಮಾವನ ಆಸ್ತಿ ಪಡೆದುದನೇ ತೋರುತ್ತ
ಬಾವ-ಅಕ್ಕ ಬಂಧು ಮಿತ್ರರಿಗೆಲ್ಲಾ ಹಂಚಲು ಕನ್ನಡ ಜನ
ನಾವು ಆಳ್ವರಿಗೆ ಸಹಕರಿಸುವೆವೆಂದನಾ |
ಗರ್ಮಜ್ಞ

ಪಾಲಿಸುವೆನೆಂಬುದನೇ ಹಿರಿದಾಗಿ ಹೇಳುತ್ತ
ಕಾಲಿಹಾಳೆಗಾದರೂ ಸಹಿಮಾಳ್ಪೆ ಗೌರವ ಡಾಕ್ಟರೇಟ್ ಮಾತ್ರ
ಕೀಲುಮುರಿದರೂ ಕೊಡಲು ಸಮ್ಮತಿಸೆನೆಂದನ ಕಂಡು ನಕ್ಕನಾ |
ಗರ್ಮಜ್ಞ

ಸಮಪಾಲು ಸಮಬಾಳು ಭಾಷಣದಿ ಬಲುಚಂದ
ಘಮಘಮಿಸುತಿದೆ ಕುರುಡು ಕಾಂಚಾಣವದನುಂಡು
ನಮಗೆ ಅರಿವಾಗುವಾ ಮೊದಲೇ ಕೈತೊಳೆದ ಕಂಡನಾ |
ಗರ್ಮಜ್ಞ

ಅಧಿಕಾರ ಬರುವುದು ಹಣದ ಆ ಘಮಲಿನಲಿ
ಒದೆಯುವುದು ಮಿಕ್ಕವರ ದೂರ ಕ್ಷೇತ್ರದಲಿ ಸಮಾಜದ
ಹದತಪ್ಪಿದ ಗತಿಕಂಡು ಮಮ್ಮಲ ಮರುಗಿದನಾ |
ಗರ್ಮಜ್ಞ

’ಚರಿಗೆ’ಗಳ ಹೊರೆಹೊತ್ತ ಭೂಪಾಲರಿವರಯ್ಯ
ಖರಿಗೆ ಕಾಂತಣ್ಣ ಸುಲಿಗೆಯೇ ಸಂಪ್ರದಾಯ! ಕೋಟಿಭಕ್ಷಣೆ
ತೆರಿಗೆ ವಂಚನೆ ಕಂಡೂಮಾತಾಡದಾದನಾ |
ಗರ್ಮಜ್ಞ

ನಮ್ಮದೇ ಸಂವಿಧಾನ ತಿನ್ನುವರೆಲ್ಲಾ ನಮ್ಮವರೇ
ಹೆಮ್ಮೆ ನಮಗೆ-ಅವರನಾಯ್ದುದಕೆ ’ಮನೆ’ಯಾವುದಾದರೂ ’ಅವರೂಟ’
ಗಮ್ಮತ್ತಿನದು ಯೋಚಿಸಿನೋಡೆಂದನಾ |
ಗರ್ಮಜ್ಞ

Monday, February 7, 2011

ಅತ್ಯಭೂತಪೂರ್ವ ಮಂಗಳ ಸನ್ನಿವೇಶ



ಅತ್ಯಭೂತಪೂರ್ವ ಮಂಗಳ ಸನ್ನಿವೇಶ

ಕನ್ನಡದ ಮನೆಯಂಗಳದಲ್ಲಿ ನಿಜವಾಗಲೂ ಎಂದೋ ಆಗಬೇಕಿದ್ದ ಉಚ್ಛಕಾರ್ಯವೊಂದು ಸುಸೂತ್ರವಾಗಿ ಮತ್ತು ಸಮರ್ಪಕವಗಿ ನಡೆಯಿತು: ಅದೇ ೭೭ನೇ ಕನ್ನಡ ನುಡಿ ತೇರು. ಕನ್ನಡ ತನ್ನತನವನ್ನು ಕಳೆದುಕೊಂಡು ಸಮ್ಮಿಶ್ರ ಸರಕಾರದಂತೇ ಸಮ್ಮಿಶ್ರ ಭಾಷೆಯಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ, ಯಾವುದೋ ದೇಶದ, ರಾಜ್ಯಗಳ ಜನರು ಬಂದು-ಇಲ್ಲಿ ನೆಲೆನಿಂತು ತಮಗೆ ಬೇಕಾದ ಬೇಳೆಬೇಯಿಸಿಕೊಂಡು ಒತ್ತಾಯದಿಂದ ತಮ್ಮೆಲ್ಲರ ಭಾಷೆಯನ್ನು ಕನ್ನಡಿಗರಿಗೆ ಹೇರುತ್ತಿರುವ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿರುವ ಉತ್ತಮ ಕೆಲಸವೊಂದನ್ನು ಮಾಡಿದೆ ಎಂಬುದು ಸ್ತುತ್ಯಾರ್ಹ.ರಾಜ್ಯಗಳ ವಿಂಗಡಣೆಯಾಗಿ ಎಲ್ಲರೂ ಭಾಷಾವಾರು ತಂತಮ್ಮ ಜಾಗವನ್ನು ಭದ್ರಪಡಿಸಿಕೊಂಡರೂ ಬೇರೇ ಭಾಷೆಗಳವರ ಬಗ್ಗೆ ಮಲತಾಯ ಧೋರಣೆ ತಳೆಯದ ಸಹಿಷ್ಣುತೆಯನ್ನು ಒಗ್ಗಿಸಿಕೊಂಡು ಸಂಯಮದಿಂದಲೂ ಸೌಜನ್ಯದಿಂದಲೂ ನಡೆದ ಏಕೈಕ ರಾಜ್ಯವೆಂದರೆ ಅದು ಕನ್ನಡನೆಲ-ಕರ್ನಾಟಕ.

ಯಾವುದೇ ಕಾರ್ಯ ಯಶಸ್ವಿಯಾದಗಲೂ ಅದರ ಬಗ್ಗೆ ಹೇಳುವವರು ಕಮ್ಮಿ ಇರುತ್ತಾರೆ. ಅದೇ ಬೃಹತ್ ಕಾರ್ಯವೊಂದರಲ್ಲಿ ಕಿಂಚಿತ್ತು ಕೊರತೆ ಕಂಡರೂ ಎಲ್ಲರೂ ಆಡುವವರೇ. ಹಿಂದಿನ ನನ್ನ ಲೇಖನದಲ್ಲಿ ನಾನು ಕೆಲವು ನ್ಯೂನತೆಗಳನ್ನು ನೆನಪಿಸಿದ್ದೇನೆಯೇ ಹೊರತು ಅದರ ಬಗ್ಗೆ ವಿವಾದವನ್ನು ಹುಟ್ಟಿಸುವ ಮನಸ್ಸಿನಿಂದ ಎಂದೂ ಬರೆಯಲಿಲ್ಲ. ಪರಿಷತ್ತಿನ ಸಾಮನ್ಯ ಸದಸ್ಯರು ಬಯಸುವುದು ಕೊನೇಪಕ್ಷ ತಮಗೊಂದು ಮಾಹಿತಿ ಪತ್ರ ತಲ್ಪಲಿ ಎಂಬುದು. ಅದರ ಕುರಿತು ಸದಸ್ಯರೊಬ್ಬರು ದೂರವಾಣಿಯಲ್ಲಿ ಮಾತನಾಡಿ ತಮ್ಮ ಅನಿಸಿಕೆ ಹೇಳಿಕೊಂಡಿದ್ದರಿಂದ ಅದನ್ನೇ ಬರೆದಿದ್ದೇನೆ. ಆದರೆ ನನಗೆ ಸಭೆಯಲ್ಲಿ ಗೊತ್ತಾಗಿದ್ದು ನಿಜಕ್ಕೂ ಆಶ್ಚರ್ಯಕರ ವಿಷಯ. "೪೦ ವರ್ಷಗಳ ಹಿಂದಿನ ಪರಿಷತ್ತಿನ ಸದಸ್ಯರ ಸಂಖ್ಯೆ ಕೇವಲ ೫-೬೦೦೦ -ಈಗ ಅದು ಒಂದು ಲಕ್ಷದ ಹದಿನೇಳುಸಾವಿರ. ಆಗಿನ ಪರಿಷತ್ತಿನಲ್ಲಿ ಕೆಲಸಗಾರರ ಸಂಖ್ಯೆ ಇದ್ದದ್ದು ನೂರಾರು ಆದರೆ ಇಂದು ಬರೇ ಹದಿನೇಳು. ಇಂದಿನ ಇರುವ ಹದಿನೇಳು ಜನರಲ್ಲಿ ಯಾರು ವ್ಯವಸ್ಥಾಪಕರು ಯಾರು ಕಸಗುಡಿಸುವವರು ಯಾರು ಗುಮಾಸ್ತೆ ಇದ್ಯಾವುದೂ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಬದಲಿಗೆ ಎಲ್ಲರೂ ಎಲ್ಲಾ ಕೆಲಸವನ್ನೂ ಹಂಚಿಕೊಂಡು ಮಾಡುತ್ತಿರುವುದರಿಂದ ಯಾವ ಕೆಲಸವೂ ಸಮರ್ಪಕವಾಗಿ ನಡೆಯುತ್ತಿಲ್ಲ." --ಇದೆಲ್ಲಾ ಅಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್ ಅವರೇ ಹೇಳಿದ್ದು. ಕೇವಲ ಹದಿನೇಳು ಜನರ ಕೇಂದ್ರ ಪರಿಷತ್ತು ೬ ಕೋಟಿ ಜನರ ಪ್ರತಿನಿಧಿಗಳಾಗಿ ಈ ಸಮಾರಂಭಕ್ಕೆ ತಯಾರಿ ನಡೆಸುವಾಗ ಸಹಜವಾಗಿ ಒತ್ತಡಗಳಲ್ಲಿ ಕೆಲವು ಚಿಕ್ಕಪುಟ್ಟ ನ್ಯೂನತೆಗಳು ಕಂಡರೂ ಇದು ನಿಜಕ್ಕೂ ಒಂದು ಸಾಧನೆಯೇ ಸರಿ.

ಯಾವುದೇ ಕಾರ್ಯವನ್ನು ಹೊರಗೆ ನಿಂತು ನೋಡುವುದು, ದೂಷಿಸುವುದು ತುಂಬಾ ಸುಲಭದ ಕೆಲಸ. ಅದೇ ಕಾರ್ಯಕರ್ತರ ಸ್ಥಾನದಲ್ಲಿ ನಿಂತು ನಿರ್ವಹಿಸಿದಾಗ ಮಾತ್ರ ಅದರ ಕಷ್ಟಕೋಟಲೆಗಳು ಅನುಭವ ವೇದ್ಯ. ಇಂತಹ ಅಕ್ಷರ ಸಮ್ಮೇಳನಕ್ಕೆ ಹೋಗುವಾಗ ಜ್ಞಾನದಾಹಿಗಳಾಗಿ ಹೋಗಬೇಕೇ ವಿನಃ ಹೊಟ್ಟೆತುಂಬಿಸಿಕೊಂಡು ಬರಲು ಬರಿದೇ ಏನಿದೆಯೆಂದು ವಿಹರಿಸಿ ಬರಲು ಇದು ಸಾದಾ ಸೀದಾ ಜಾತ್ರೆಯಲ್ಲ. ಕೆಲವರಂತೂ ಕೂಗಾಡಿದ್ದನ್ನು ಮಾಧ್ಯಮವಾಹಿನಿಗಳಲ್ಲಿ ಗಮನಿಸಿದಾಗ ಅನಿಸಿದ್ದು ಅಂಥವರು ಬರೇ ಊಟಕ್ಕಾಗೇ ಅಲ್ಲಿಗೆ ಬಂದಿದ್ದರೇ ಎಂಬುದು! ಕಂತ್ರಾಟುದಾರ ಯಾರೇ ಇರಲಿ ವ್ಯವಸ್ಥೆ ಯಾವುದೇ ಇರಲಿ ಲಕ್ಷ ಅಥವಾ ಅಧಿಕ ಜನರಿಗೆ ಏಕಕಾಲಕ್ಕೆ ಭೋಜನವ್ಯವಸ್ಥೆ ಏರ್ಪಾಟುಮಾಡುವುದು ಹುಡುಗಾಟಿಕೆಯ ಮಾತೇ ? ಹಣವನ್ನು ಕೋಟಿಯಲ್ಲಿ ಎಣಿಸುವುದಾದರೂ ಸುಲಭವಾಗಬಹುದು ಆದರೆ ಈ ಕೆಲಸ ಅಷ್ಟೇನೂ ಸುಲಭಸಾಧ್ಯವಲ್ಲ ಅನಿಸುತ್ತಿದೆ; ಆದರೂ ತಕ್ಕಮಟ್ಟಿಗೆ ಮಾಡಿದ್ದಾರೆ.

ಪ್ರತಿನಿಧಿಗಳಾಗಿ ಹಲವು ಪ್ರದೇಶಗಳಿಂದ ಬರುವ ಜನರೂ ಸಮ್ಮೇಳನದ ಗಾತ್ರ ಮತ್ತು ಗುರುತರ ಜವಬ್ದಾರಿಗಳನ್ನರಿತು ಅವರದೇ ಆದ ಪರ್ಯಾಯ ವ್ಯವಸ್ಥೆಯೊಂದನ್ನು ಇಟ್ಟುಕೊಂಡಿದ್ದರೇ ಉತ್ತಮ. ಕನ್ನಡ ನುಡಿತೇರಿನಲ್ಲಿ ಭಾಗವಹಿಸಿದ ’ಪ್ರತಿನಿಧಿಗಳಿಗಷ್ಟೇ ಭೋಜನ ವ್ಯವಸ್ಥೆ ಮಿಕ್ಕಿದವರಿಗೆ ಇಲ್ಲಾ’ ಎನ್ನುವ ಮನೋಭಾವ ಕನ್ನಡಿಗರದಲ್ಲ. ಕನ್ನಡಿಗರು ಎಷ್ಟೆಂದರೂ ಅತಿಥಿಸತ್ಕಾರಕ್ಕೆ ಆದ್ಯತೆ ಕೊಡುವವರು. ಹೀಗಿರುವಾಗ ಲಕ್ಷಾಂತರ ಜನರು ಊಟಮಾಡುವಾಗ ಕೆಲವು ಪ್ರತಿನಿಧಿಗಳಿಗೇ ಮಧ್ಯೆ ಆಹಾರ ಪೂರೈಕೆಯಾಗಲಿಲ್ಲ ಎಂಬುದನ್ನು ಅವರು ತೋಡಿಕೊಂಡಿರುವುದು ನಿಜಕ್ಕೂ ವಿಷಾದನೀಯ, ಮತ್ತು ನಗಣ್ಯ.

ಯಾವ ಮಹಾನಗರ ಕೇವಲ ಕನ್ನಡೆತರರ ಔದ್ಯೋಗಿಕ ಕೇಂದ್ರವಾಗಿ ಬೆಳೆದು ಜಾಗತಿಕ ಮಟ್ಟದಲ್ಲಿ ತಂತ್ರಾಂಶ ಮತ್ತು ಜೈವಿಕ ತಂತ್ರಜ್ಞಾನಕ್ಕಾಗಿ ಹೆಸರುಮಾಡಿದೆಯೋ, ಯಾವ ಇನ್ಫೋಸಿಸ್ ಎಂಬ ಕಂಪೆನಿ ತಾನು ಹುಟ್ಟಿದ ನೆಲದ ಮಹತ್ವಸಾರುವ ರಾಷ್ಟ್ರಗೀತೆಯನ್ನು ತನ್ನ ಕಟ್ಟಡದಲ್ಲಿ ತನ್ನ ಉದ್ಯೋಗಿಗಳು ಬೇಕಾಬಿಟ್ಟಿ ಹೀಯಾಳಿಸಿ ಅಣಕವಾಡಿದ್ದನ್ನು ಕ್ಷಮಿಸಿತೋ ಅದೇ ಮಹಾನಗರಿಯ ನೆಲದಲ್ಲಿ ಅತ್ಯಭೂತಪೂರ್ವವಾಗಿ ಈ ಸಮ್ಮೇಳನ ನಡೆಯಿತು ಎಂಬುದು ಅತ್ಯಂತ ಖುಷಿತಂದಿರುವ ಸಮಾಧಾನತಂದಿರುವ ವಿಷಯ. ಇದೇ ನೆಲದಲ್ಲಿ ಹುಟ್ಟಿಬೆಳೆದು ಜಗದ್ವ್ಯಾಪಿಯಾಗಿ ವಿಸ್ತರಿಸಿಕೊಂಡ ಅನೇಕ ಖಾಸಗೀ ಸಂಸ್ಥೆಗಳು ನಮ್ಮ ಕನ್ನಡಕ್ಕೆ ಕೊಟ್ಟಿರುವ ಕಾಣಿಕೆ ಮಾತ್ರ ಶೂನ್ಯ. ಈ ವಿಷಯದಲ್ಲಿ ತಂತ್ರಾಂಶದ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಕೂಡ ಅಕ್ಷಮ್ಯ ಅಪರಧವನ್ನೇ ಮಾಡಿದೆ ಎಂದರೆ ತಪ್ಪಲ್ಲ. ಕನ್ನಡ ಜನತೆ ಕೇವಲ ಇಂದಿನ ಇನ್ಫೋಸಿಸ್ ಮತ್ತಿತರ ಐಟಿ ಬಿಟಿ ಕಂಪನಿಗಳ ಭಿಕ್ಷೆಯಿಂದ ಬದುಕಿಲ್ಲ. ಕನ್ನಡ ಜನತೆ ಮೊದಲೂ ಬದುಕಿದ್ದರು ಈಗಲೂ ಬದುಕಿದ್ದಾರೆ. ಕನ್ನಡ ಜನತೆಯ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಬೆಳೆದ ಅಂತಹ ಸಂಸ್ಥೆಗಳು ಕನ್ನಡ ನೆಲಕ್ಕಾಗಿಯೇ ಮೀಸಲಾದ ಯವುದದರೂ ಘನಕಾರ್ಯ ಮಾಡಿದ್ದರೆ ಹೇಳಿ.

ತಮಗೆ ಅನುಕೂಲವಾಗುವ ಕಡೆ ಕ್ಯಾಂಪಸ್ ತೆರೆಯುವುದು. ಪರಿಣತರಲ್ಲಿ ಹೆಚ್ಚಿನ ಸಂಬಳಪಡೆಯುವವರನ್ನು ನಿಧಾನವಾಗಿ ಮನೆಗೆ ಕಳಿಸಿ ಹೊಸಬರನ್ನು ಆರಿಸಿಕೊಳ್ಳುವುದು ಅವುಗಳ ಆದ್ಯತೆ-ಅದು ಅವರವರ ಅನುಕೂಲ ಮಾಡಿಕೊಳ್ಳಲಿ ಬಿಡಿ. ಆದರೆ ನಾವು ತೆರಿಗೆ ಕಟ್ಟಿದ್ದೇವೆ ಎನ್ನುವ ಜನ ಯಾವಗಿನಿಂದ ಎಷ್ಟೆಷ್ಟು ಲಾಭ ಗಳಿಸಿದರು ಎಷ್ಟೆಷ್ಟು ತೆರಿಗೆ ಕೊಟ್ಟರು ಎಂಬುದು ಮುಖ್ಯ. ಅಷ್ಟಕ್ಕೂ ಮೂರ್ನಾಲ್ಕು ವರ್ಷಗಳ ಹಿಂದಿನವರೆಗೂ ತಂತ್ರಾಂಶ ತಯಾರಕರಿಗೆ ತೆರಿಗೆ ವಿನಾಯತಿ ಇತ್ತು. ಕರ್ನಾಟಕದ ಬಡ ಮೆಕಾನಿಕಲ್ ಅಥವಾ ಇನ್ನಿತರ ರಂಗಗಳ ಕಂಪನಿಗಳು ದೊಡ್ಡ ಲಾಭದ ಹಾದಿ ಬಹುದೂರವೇ ಇದ್ದರೂ ತೆರಿಗೆ ಪಾವತಿಸಿದವು. ಆದರೆ ಬಹುದೊಡ್ಡ ಲಾಭವನ್ನು ಹೇರಳವಾಗಿ ಎಣಿಸಿಕೊಂಡ ತಂತ್ರಾಂಶ ಕಂಪನಿಗಳು ತೆರಿಗೆಯಿಂದ ಮುಕ್ತಗೊಂಡವು! ಎಂತಹ ವಿಪರ್ಯಾಸ ಎನಿಸಿವುದಿಲ್ಲವೇ? ಈಗ ತರಾವರಿ ರಸ್ತೆಕೊಡಿ, ಮತ್ತೊಂದು ಕೊಡಿ ಇಲ್ಲದಿದ್ದರೆ ನಾವು ಪುಣೆಗೋ ಮತ್ತೆಲ್ಲಿಗೋ ಹೋಗಿಬಿಡುತ್ತೇವೆ ಎಂದು ಗಂಡ ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವಂತೇ ಪೀಡಿಸುವ ಇಂಥವರು ಇಲ್ಲಿದ್ದರೆಷ್ಟು ಅಲ್ಲಿಗೆ ಹೋದರೆಷ್ಟು. ಕನ್ನಡ ಜನತೆ ಇನ್ನಾದರೂ ಇಂತಹ ’ಬುದ್ಧಿಜೀವಿಗಳನ್ನು’ ಚಂದ್ರಲೋಕದಿಂದ ಕರೆತಂದು ಭೂಮಿಗೆ ಕರೆತಂದು ಸೂರ್ಯನ ಬಿಸಿಲು ತಾಗಿಸಬೇಕು. ಅಂದರೇನೇ ಅವರಿಗೆ ಕನ್ನಡದ ಅಭಿಮಾನ ಅನಿವಾರ್ಯವಾಗಿ ಬರುತ್ತದೆ. ಕನ್ನಡ ಜನತೆಯಲ್ಲಿ ಅರ್ಹತೆಯುಳ್ಳ ವ್ಯಕ್ತಿಗಳಿಲ್ಲವೇ? ಇಲ್ಲಿನವರಿಗೇ ಉದ್ಯೋಗದಲ್ಲಿ ಆದ್ಯತೆ ಸಿಗಲಿ, ಅದಿಲ್ಲಾ ಕಂಪನಿಗಳು ಜಾಗ ಖಾಲಿಮಾಡಲಿ.

ನಮ್ಮನ್ನಾಳುವ ದೊರೆಗಳಲ್ಲೂ ಒಂದು ನ್ಯೂನತೆಯಿದೆ. ಉಂಡು ಬೋರಲು ಬಿದ್ದು ನಿದ್ದೆಮಾಡುವಂತೇ ನಮ್ಮ ದೊರೆಗಳು ಒಂದಷ್ಟು ತಮ್ಮ ’ಹೊಟ್ಟೆ’ ತುಂಬಿದಮೇಲೆ ನಿದ್ದೆ ಮಾಡಿಬಿಡುತ್ತಾರೆ. ಎಲ್ಲಾದರೂ ಚುನಾವಣೆ ಅದೂ ಇದೂ ಸಮ್ಮೇಳನ ಬಂದರೆ ಅಲ್ಲಿಗೆ ಹೋಗಿ ವೇದಿಕೆಗೆ ತಕ್ಕ ಹಾಗೇ ಒಂದಷ್ಟು ವದರಿವಿಟ್ಟರೆ ಮುಗಿಯಿತು. ಇನ್ನೂ ಕೆಲವರು ಕುಡಿದ ಮತ್ತಿನಲ್ಲಿ ಕುಡುಕ ಹಳವಳಿಸಿದಂತೇ "ಕನ್ನಡ ನಮ್ ಭಾಷೆಯಾಬೇಕು ಕನ್ನಡ ನಮ್ ತಾಯಿ " ಎಂದೆಲ್ಲಾ ಹೇಳುತ್ತಿರುತ್ತಾರೆಯೇ ಶಿವಾಯಿ ಕನ್ನಡವನ್ನು ಅಧಿಕಾರಯುತವಾಗಿ ಅಳವಡಿಸಲು ಯಾವಯಾವ ಕೆಲಸಗಳು ಬೇಕೋ ಅದನ್ನು ಮಾಡಲು ಹೋಗುವುದಿಲ್ಲ. ಇದಕ್ಕೆ ಕಾರಣವೊಂದಿದೆ. ದೊರೆಗಳ ಜೊತೆಗಿರುವ ಅಧಿಕಾರಿಗಳಲ್ಲಿ ಅನೇಕರು ವಿವಿಧ ರಾಜ್ಯಗಳಿಂದ ಬಂದಿರುತ್ತಾರೆ. ಅವರುಗಳಿಗೆ ಕನ್ನಡ ಬರುವುದಿಲ್ಲ. ಇವರ ಹರುಮುರುಕು ಇಂಗ್ಲೀಷನ್ನು ಅವರುಗಳು ಡಾಕ್ಟರುಗಳ ಕೈಬರಹವನ್ನು ಔಷಧ ಅಂಗಡಿಯವರು ಅರ್ಥವಿಸುವಂತೇ ಅರ್ಥವಿಸುತ್ತಾರೆ. ಒಂದೊಮ್ಮೆ ಕನ್ನಡದಲ್ಲೇ ಎಲ್ಲವನ್ನೂ ಜಾರಿಗೊಳಿಸಿಬಿಟ್ಟರೆ ನಮ್ಮ ದೊರೆಗಳಿಗಳಲ್ಲಿ ಹಲವರಿಗೆ ಕನ್ನಡದ ಬಹುತೇಕ ಉಚ್ಛಶಬ್ದಗಾಳು ತಿಳಿದಿಲ್ಲ! ಅಧಿಕಾರಿಗಳಿಗೆಲ್ಲಾ ಕನ್ನಡ ಕಲಿಸುತ್ತಾ ಇವರೂ ಹೊಸದಾಗಿ ಕನ್ನಡ ಕಲಿಯಬೇಕಾದ ಪ್ರಮೇಯ ಬರುತ್ತದೆ. ಹೀಗಾಗಿ ’ಏನಾದರೂ ಮಾಡಿಕೊಂಡು ಹೋಗಲಿ’ ಎಂದು ಸುಮ್ಮನಾಗಿಬಿಡುತ್ತಾರೆ. ಇಲ್ಲೇ ಎಡವಟ್ಟಾಗುತ್ತಿದೆ.

ಆಳುವ ದೊರೆಗಳಿಗೆ ಹಿಂದೆಲ್ಲಾ ಅದಕ್ಕೆಂದೇ ವಿದ್ಯಾಭ್ಯಾಸವನ್ನು ಅವರ ಪೂರ್ವಜರು ಅತೀ ಕಾಳಜಿಯಿಂದ ಗುರುಕುಲದಲ್ಲಿ ನಡೆಸುತ್ತಿದ್ದರು. ಇಂದು ಗುರುಕುಲವೂ ಇಲ್ಲ; ಇದ್ದರೆ ಹೋಗುವವರೂ ಇಲ್ಲ. ಇಂದಿನ ನಮ್ಮ ದೊರೆಗಳಲ್ಲಿ ಬಹುತೇಕರು ಕ್ರಿಮಿನಲ್ ಮೊಕದ್ದಮೆಗಳ ಸರದಾರರಾಗಿರುತ್ತಾರೆ. ಯಾವ ಸ್ಥಾನದಲ್ಲಿ ಜಗಳ-ದೊಂಬಿ,ಕೈಕೈ ಮಿಲಾಯಿಸುವಿಕೆ ನಡೆಯಬಾರದೋ ಅಂತಹ ಜಾಗದಲ್ಲಿ ಪ್ರಜಾಪ್ರಭುತ್ವದ ’ಕುರುಡುಕಾಂಚಾಣದ ತಾಕತ್ತು’ ಎದ್ದು ಕುಣಿಯುತ್ತದೆ. ಇದನ್ನಿಲ್ಲಿ ಪ್ರಸ್ತಾಪಿಸಿದ್ದು ಏಕೆಂದರೆ ಅಕ್ಷರಕ್ಕೂ ಆಳುವಿಕೆಗೂ ಅನ್ಯೋನ್ಯ ಸಂಬಂಧವಿದೆ. ನಿಜವಾದ ’ಅಕ್ಷರಿಗಳು’ ಆಳುವ ದೊರೆಗಳಾದರೆ ಅಲ್ಲಿ ಈ ತೆರನಾದ ಹೊಡೆದಾಟ ಗುದ್ದಾಟ ಇರುತ್ತಿರಲಿಲ್ಲ. ಇವತ್ತಿನ ಈ ಎಲ್ಲಾ ಹೊಡೆದಾಟಗಳಿಗೂ ಜ್ಞಾನಿಗಳ ಮರ್ಗದರ್ಶನ ಪಡೆಯದಿರುವುದೇ ಕಾರಣವಾಗಿದೆ.ಜ್ಞಾನಿಗಳು ಬಂದರೆ ಅಲ್ಲಿ ಅವರು ಎಲ್ಲರಿಗೂ ನಿಜವಾಗಿ ಸಮಪಾಲು-ಸಹಬಾಳ್ವೆ ಬೋಧಿಸುತ್ತಾರೆ. ಆಗ ಕುದುರೆ ವ್ಯಾಪಾರಕ್ಕೋ ಸ್ವಿಸ್ ಬ್ಯಾಂಕಿನ ವ್ಯವಹರಕ್ಕೋ ಅವಕಾಶವಾಗುವುದಿಲ್ಲ. ಹೀಗಾಗಿ ಜ್ಞಾನಿಗಳನ್ನು ಕಡೆಗಣಿಸಿಬಿಟ್ಟರೆ ತಮ್ಮ ಬೇಳೆ ಬೇಯುತ್ತದಲ್ಲ ಎಂಬುದು ರಾಜಕಾರಣಿಗಳ ಹಂಬಲ! ಎಲ್ಲೋ ಕೆಲವರು ಉತ್ತಮ ರಾಜಕಾರಣಿಗಳೂ ಇರಬಹುದು. ಆದರೆ ಬಹುತೇಕರು ಹಣದ ಥೈಲಿಯನ್ನು ಹಿಡಿದೇ ಅದನ್ನು ವೃದ್ಧಿಮಾಡಲು ಬಯಸುವವರು. ಅವರಿಗೆ ಕನ್ನಡವೋ ಮರಾಠಿಯೋ ಥೈಲಿ ತುಂಬಿದ್ದೇ ಗೊತ್ತು!

ಇರಲಿ ಅಕ್ಷರ ಜಾತ್ರೆ ಸಮರ್ಪಕವಾಗಿ ಸಂಪನ್ನವಾಯಿತು. ೮ ಕೋಟಿ ಮೌಲ್ಯದ ಕನ್ನಡ ಪುಸ್ತಕಗಳು ಮಾರಲ್ಪಟ್ಟವು. ಬಂದ ಮೂರು ಲಕ್ಷಕ್ಕೂ ಅಧಿಕ ಮಂದಿ ಒಳ್ಳೆಯ ನೆನಪನ್ನು ಹೊತ್ತು ಮರಳಿದರು. ಕೋಟಿ ಕೋಟಿ ಕನ್ನಡಿಗರು ಮಾಧ್ಯಮಗಳಲ್ಲಿ ವೀಕ್ಷಿಸಿದರು. ಇಂತಹ ಹಬ್ಬ ಹಲವು ಹತ್ತು ನಡೆಯಲಿ. ಮುಂಬರುವ ವಿಶ್ವಕನ್ನಡ ಸಮ್ಮೇಳನಕ್ಕೂ ಶುಭವನ್ನು ಕೋರಿ ನಿಮ್ಮಿಂದ ಈಗೊಮ್ಮೆ ಬೀಳ್ಕೊಳ್ಳುತ್ತೇನೆ, ಹಾರ್ದಿಕ ಶುಭಕಾಮನೆಗಳು,

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗಲ್ಲಿಗಲ್ಲಿಗೆ.

Friday, February 4, 2011

ಸಾರ್ಥಕ ’ಜೀವಿ’ಯ ಬಗ್ಗೆರಡು ಮಾತು


ಸಾರ್ಥಕ ’ಜೀವಿ’ಯ ಬಗ್ಗೆರಡು ಮಾತು

ಕನ್ನಡ ನುಡಿತೇರನ್ನು ಈ ಸರ್ತಿ ಬೆಂಗಳೂರಿನಲ್ಲಿ ಎಳೆಯುತ್ತಿರುವುದು ತಮಗೆಲ್ಲಾ ಗೊತ್ತಿರುವ ವಿಷಯ. ಕನ್ನಡ ಸಾಹಿತ್ಯ ಪರಿಷತ್ತು ಮಾಡಿದ ಒಂದು ಉತ್ತಮ ಕೆಲಸವೆಂದರೆ ಸಮ್ಮೇಳನದ ಅಧ್ಯಕ್ಷತೆಗೆ ಪ್ರೊ.ಗಂಜಾಂ ವೆಂಕಟಸುಬ್ಬಯ್ಯನವರನ್ನು ಆಯ್ಕೆಮಾಡಿರುವುದು. ಅದು ಪರಿಷತ್ತಿಗೇ ಸಂದ ಗೌರವ. ವಯಸ್ಸಿನಲ್ಲಿ ಅತ್ಯಂತ ಹಿರಿಯರಾಗಿ, ಹಿಂದಿನ ಹಾಗೂ ಇಂದಿನ ಶತಮಾನಗಳ ಕೊಂಡಿಯಾಗಿ, ಕನ್ನಡಕ್ಕಾಗಿ ಹಲವು ಒಳ್ಳೆಯ ಪುಸ್ತಕಗಳನ್ನು ಬರೆದು ಇತ್ತೀಚೆಗೆ ಕನ್ನಡಕ್ಕೆ ನಿಘಂಟನ್ನೂ ಅರ್ಪಿಸಿದ ಮುತ್ಸದ್ಧಿಗೆ ಈ ಸ್ಥಾನ ಯಥಾಯೋಗ್ಯವೇ ಸರಿ.

ಉಳಿದರಂಗಗಳಂತೇ ಸಾಹಿತ್ಯರಂಗ ಕೂಡ ಇಂದು ರಾಜಕೀಯದಿಂದ ತುಂಬಿದೆ. ಪ್ರಶಸ್ತಿ ಪುರಸ್ಕಾರಗಳಿಗೂ ಮಸಲತ್ತುಗಳು ನಡೆಯುತ್ತವೆ ಎಂಬುದು ಪರದೆಯ ಹಿಂದೆ ನಡೆಯುತ್ತಿರುವ ಆದರೆ ಎಲ್ಲರಿಗೂ ತಿಳಿದೇ ಇರುವ ವಿಷಯ. ಸಮ್ಮೇಳನದ ಅಧ್ಯಕ್ಷಸ್ಥಾನಕ್ಕೂ ’ತನಗೆ ಕೊಡಲಿಲ್ಲ ತನಗೆ ಕೊಡಲಿಲ್ಲ’ ಎಂಬ ಹತಾಶ ಮನೋವೃತ್ತಿ ಕೆಲವರಲ್ಲಿ ಕಂಡುಬರುತ್ತಿದೆ. ಇದೇ ಕಾರಣವಾಗಿ ಕೆಲವರು ಸಮ್ಮೇಳನದ ಸಭೆಯಲ್ಲಿ ಭಾಗವಹಿಸಲೂ ಇಲ್ಲ ಎಂಬುದು ಗಮನಿಸಬೇಕಾದ ಅಂಶ. ಅಷ್ಟಾಗಿ ’ಕನ್ನಡ ಕನ್ನಡ’ ಎಂದು ಕುಣಿಯುವವರು ಕೇವಲ ತಮಗೆ ಸಿಗಬಹುದಾದ ಆದ್ಯತೆಯನ್ನು ಗಮನಿಸಿಕೊಂಡೇ ಆ ಕೆಲಸವನ್ನು ಮಾಡುವರೇ ಎಂಬುದು ನಮಗೆ ಗುಮಾನಿ! ಆದರೂ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಮಾಡುವಾಗ ಕೊಡುಗೆ, ವಯಸ್ಸು ಈ ಎರಡೂ ಅಂಶಗಳನ್ನು ಆಧರಿಸಿ ಆಯ್ಕೆಮಾಡುವುದು ಸರ್ವೋತ್ತಮ. ಈ ಸಲವಂತೂ ಅದು ಸಮರ್ಪಕವಾಗಿ ನಡೆದಿದೆ ಎಂಬುದು ಯಾವುದೇ ಕನ್ನಡಿಗನಿಗೂ ಅನಿಸದೇ ಇರದು.

ವ್ಯಕ್ತಿಗಳನ್ನು ನೋಡುವಾಗ ನಮಗೆ ಸಹಜವಾಗಿ ಏನೆನ್ನಿಸುತ್ತದೆ ಎಂಬುದು ಮುಖ್ಯ. ಸರಳ ಜೀವನದ ವ್ಯಕ್ತಿಗಳು ನಿಗರ್ವಿಗಳಾಗಿ ಹಿರಿ-ಕಿರಿಯ ಭೇದಭಾವವಿಲ್ಲದೇ ಎಲ್ಲರೊಡನೆಯೂ ಒಡನಾಡುತ್ತಾ ತಾವು ಮಾಡಬೇಕಾದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾವುದೇ ಪ್ರಶಸ್ತಿಗಳಿಗಾಗಲೀ ರಾಜಕೀಯಕ್ಕಾಗಲೀ ಅವರು ತಲೆಹಾಕುವುದಿಲ್ಲ. ನಿಜವಾದ ಕವಿ-ಸಾಹಿತಿಗಳು ಮತ್ತು ಭಾಷಾ ಕೋವಿದರು ಪ್ರಶಸ್ತಿಗಳು ಬರಲಿ ಎಂದು ಬರೆಯುವುದಿಲ್ಲ. ಬರವಣಿಗೆ ಅವರ ಸಹಜ ಪ್ರವೃತ್ತಿ. ತಮ್ಮ ವೃತ್ತಿ ಜೀವನದ ಜೊತೆಜೊತೆಗೇ ಬರವಣಿಗೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಸಂತಸವನ್ನು ಪಡೆಯುವ ಇಂತಹ ಸಾರಸ್ವತರು ದೃಷ್ಟಿಸಿ ನೋಡಿದರೆ ಋಷಿಸದೃಶರೇ ಆಗಿರುತ್ತಾರೆ. ದೈನಂದಿನ ತಮ್ಮ ಬದುಕಿನಲ್ಲಿ ಅಚ್ಚುಕಟ್ಟಾಗಿ ವೇಳೆಯನ್ನು ಸದುಪಯೋಗಪಡಿಸಿಕೊಳ್ಳುತ್ತಾ ಮುಂದಿನ ಜನಾಂಗಕ್ಕೆ ತಮ್ಮಿಂದ ನೀಡಬಹುದಾದ ನೀಡಲು ಸಾಧ್ಯವಾದ ಅನೇಕ ಕೃತಿಗಳನ್ನು ಹೊರತರುತ್ತಾರೆ.

ಪುಸ್ತಕ ವ್ಯಾಪಾರವೇ ಕವಿ-ಸಾಹಿತಿಗಳ ಉದ್ದೇಶವಲ್ಲ. ತಾವು ಬರೆದಿದ್ದು ನಾಲ್ಕು ಜನರಿಗೆ ಓದಲು ಸಿಕ್ಕು ಅದರಿಂದ ಓದುಗರ ಜ್ಞಾನವೃದ್ಧಿಯಾದರೆ ಆಗ ಓದುಗರಲ್ಲಿ ಉಂಟಾಗಬಹುದಾದ ಮನಸ್ಸಿನ ಪ್ರಪುಲ್ಲತೆಯೇ ಕೃತಿಕಾರರಿಗೆ ಸಿಗಬಹುದಾದ ನಿಜವಾದ ಪುರಸ್ಕಾರ. ಗಾದೆಯೊಂದು ಹೀಗಿದೆ--ಉಂಡವರು ಹರಸುವುದು ಬೇಡ ನೊಂದವರು ಬೈಯ್ಯುವುದು ಬೇಡ-- ಇದರ ಅರ್ಥ ತಿಳಿಯಿತಲ್ಲ? ಒಬ್ಬಾತನಿಗೆ ಹಸಿವಾಗಿದ್ದರೆ ಆತನ ಹೊಟ್ಟೆಯ ಹಸಿವಿಗೆ ಒಂದಷ್ಟು ಸುಕೃತ ಭೋಜನವನ್ನು ಉಣಬಡಿಸಿದಾಗ ಆತ ಉಂಡು ಹಸಿವು ನೀಗಿಸಿಕೊಂಡು ತೇಗುತ್ತಾನಲ್ಲಾ ಆಗಲೇ ಆತನಲ್ಲಿರುವ ಪರಮಾತ್ಮ ಅನ್ನಹಾಕಿದಾತನನ್ನು ತಂತಾನೇ ಉಂಡವನ ಮೂಲಕ ಹರಸಿಬಿಡುತ್ತಾನೆ. ಅದರಂತೆಯೇ ಯಾವನ ಮನಸ್ಸಿಗಾದರೂ ನಾವು ನೋವುಂಟುಮಾಡಿದಾಗ ಆತ ಹೊಸದಾಗಿ ಬೈಯ್ಯುವ ಅಗತ್ಯ ಬೀಳುವುದಿಲ್ಲ. ಅಲ್ಲಿ ಆತನ ಮನಸ್ಸು ನೋವುಂಟುಮಾಡಿದ ವ್ಯಕ್ತಿಗೆ ಹಿಡಿಶಾಪಹಾಕುತ್ತದೆ. ಹೀಗೇ ಮಾನಸಿಕ ಹಸಿವಿಗೆ ಉಣಬಡಿಸುವ ಕಾಯಕವನ್ನು ತನ್ನಿಂದಾಗಬಹುದಾದ ಎಲ್ಲರೀತಿಯ ಸಾಹಿತ್ಯಕ ಅಡುಗೆಗಳಿಂದ ಕೃತಿಗಳೆಂಬ ಎಡೆಸಿಂಗರಿಸಿ ಉಣಬಡಿಸುವಾತನೇ ಕವಿ-ಸಾಹಿತಿ-ಭಾಷಾ ಕೋವಿದ.

ಅಡುಗೆಯ ರುಚಿಯಲ್ಲಿ ವ್ಯತ್ಯಾಸವಿರುವಂತೇ, ಅಡುಗೆಯ ಉತ್ಫನ್ನಗಳಲ್ಲಿ ವೈವಿಧ್ಯವಿರುವಂತೇ ಬರಹಗಾರನ ಭಾಷಾಶೈಲಿಯಲ್ಲಿಯೂ ಭಿನ್ನತೆ ಇರುತ್ತದೆ. ಅದು ಕೆಲವೊಮ್ಮೆ ಯಾರದೋ ಬರಹವನ್ನು ಹೋಲಬಹುದೇ ವಿನಃ ಪ್ರತೀ ಬರಹಗಾರನ ಬರಹಗಳಲ್ಲೂ ಅವನದೇ/ಅವಳದೇ ಆದ ಸ್ಪಷ್ಟ ಛಾಯೆಯೊಂದು ಅಚ್ಚೊತ್ತಿರುತ್ತದೆ. ಕೆಲವರು ಕೆಟ್ಟರುಚಿಯ ಅಡುಗೆ ಮಾಡುವಂತೇ ಇಲ್ಲೂ ಕೆಲವರು ಕೆಟ್ಟ ಸಾಹಿತ್ಯವನ್ನು ಸೃಜಿಸಬಹುದು. ಆದರೆ ಉತ್ತಮ ಕವಿ-ಸಾಹಿತಿಯಿಂದ ಉತ್ತಮ ಕೃತಿಗಳೇ ಜನಿಸುತ್ತವೆ. ಇನ್ನೊಂದು ಗಾದೆ ತಮಗೆ ನೆನಪಾಗಬಹುದಲ್ಲ ’ ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಜನಿಸುತ್ತದೆ’ ಎಂಬುದು ಅಲ್ಲವೇ ? ಅದೇ ರೀತಿ ಸಿಂಹವೊಂದೇ ಪ್ರಾಣಿಯಲ್ಲ ನರಿ,ಕರಡಿ,ಹಂದಿಗಳೂ ಜೀವಿಸುವುದು ಸಹಜವಷ್ಟೇ ? ಇದೇ ತೆರನಾಗಿ ಸಾಹಿತ್ಯಕ ರಂಗದಲ್ಲೂ ಎಲ್ಲರೂ ಸಾರ್ಥಕ ಜೀವಿಯಾಗಲು ಸಾಧ್ಯವಾಗುವುದಿಲ್ಲ. ಬರೆದಿದ್ದೆಲ್ಲಾ ಸಾಹಿತ್ಯ ಎನಿಸಿಕೊಳ್ಳುವುದೂ ಇಲ್ಲ.

ಕೃತಿಗಳನ್ನು ರಚಿಸುವಾಗ ಕೃತಿಕಾರರಿಗೆ ಅದರ ಓದಿನ ಪರಿಣಾಮದ ಚಿಂತೆ ಇರಬೇಕು. ಉತ್ತಮ ಕವಿತ್ವವಿರುವ ವ್ಯಕ್ತಿ ಸಮಾಜದ ಉನ್ನತಿಯನ್ನು ಬಯಸಿ ಹಲವರು ಓದಿದಾಗ ಅವರ ಮನಸ್ಸಿನಮೇಲೆ ಉತ್ತಮ ಪರಿಣಾಮ ಬೀರುವ ಕೃತಿಗಳನ್ನೇ ರಚಿಸುತ್ತಾನೆ.[ ಇಲ್ಲಿ ಗದ್ಯ-ಪದ್ಯ ಯಾವುದನ್ನೇ ತೆಗೆದುಕೊಂಡರೂ ಗದ್ಯವೂ ಒಂದರ್ಥದಲ್ಲಿ ಪದ್ಯವೇ ಆಗುತ್ತದೆ.]ಕೇವಲ ತಾನು ಬರೆದಿದ್ದೇ ವೇದ, ಅದನ್ನು ಓದಿದದವರೇ ಪುಣ್ಯವಂತರು ಎಂಬ ಅನಿಸಿಕೆ ಅ ವ್ಯಕ್ತಿಯಲ್ಲಿರುವುದಿಲ್ಲ. ಬದಲಾಗಿ ತನ್ನ ಹುಟ್ಟು, ಶೈಶವ, ಯೌವ್ವನ, ವಾರ್ಧಕ್ಯ, ಮುಪ್ಪು ಗಳನ್ನು ಸಮಾಜದ ಎಲ್ಲಾ ವರ್ಗಗಳ ಜನರ ಬದುಕಿನೊಂದಿಗೆ ಅಳೆದುನೋಡಿ ಸಮಷ್ಟಿಯಿಂದ ಕೃತಿಗಳನ್ನು ರಚಿಸುತ್ತಾನೆ/ಳೆ. ಬರೆದ ಕೃತಿಗಳು ಬಡವರಿಗೂ ಬಲ್ಲಿದರಿಗೂ ಎಲ್ಲರಿಗೂ ಏಕಕಾಲಕ್ಕೆ ಸಮನ್ವಯವಾಗುತ್ತವೆ ಮತ್ತು ಓದುಗರು ಅವುಗಳಲ್ಲಿ ತಮ್ಮನ್ನೇ ಕಾಣತೊಡಗುತ್ತಾರೆ. ಹೇಗೆ ಒಂದು ಚಲಚಿತ್ರವನ್ನು ನೋಡುವಾಗ ಆ ಯಾ ಪಾತ್ರಗಳಲ್ಲಿ ನಾವು ತೊಡಗಿಕೊಳ್ಳುತ್ತೇವೋ ಹಾಗೆಯೇ ಕೃತಿಗಳ ಓದಿನಲ್ಲೂ ಅದೇ ರೀತಿಯ ತಾದಾತ್ಮ್ಯತೆ ಉಂಟಾಗುತ್ತದೆ.

ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡಿದ ಕೃತಿಕಾರ ಮನಸಾ ಉತ್ತಮ ಮಟ್ಟವನ್ನು ಹೊಂದಿರುತ್ತಾನೆ. ಕರ್ತವ್ಯ ಪರಾಯಣನಾಗಿರುತ್ತಾನೆ. ತಾನು ತನದೆಂಬ ಚಿತ್ತ ವೃತ್ತಿಗಳನ್ನು ತೊರೆದು ಸಾಹಿತ್ಯದಲ್ಲೇ ಭಗವಂತನನ್ನು ಕಾಣುವ ಉಚ್ಚ ಮನೋಗತವನ್ನು ಹೊಂದಿರುತ್ತಾನೆ. ಕೃತಿಗಳಿಂದಲೇ ಸಮಾಜದ ದೂಷಿತ ಮುಖಗಳನ್ನು ತಿದ್ದುವ ಕೆಲಸವನ್ನಾತ ಮಾಡುತ್ತಾನೆ. ತನ್ನ ಆದರ್ಶ ಬದುಕಿನಿಂದ ಪರರಿಗೆ ಮಾರ್ಗದರ್ಶನ ಮಾಡುತ್ತಾನೆ. ಅಂತಹ ಕೃತಿಕಾರರನ್ನು ನಾವು ದೂರದಲ್ಲೋ ಹತ್ತಿರದಲ್ಲೋ ನೋಡಿದಾಗ ಅವರನ್ನು ಸಂಪರ್ಕಿಸುವ ತಹತಹ ಓದುಗರಲ್ಲಿ ಬೆಳೆಯುತ್ತದೆ. ಹಾಗಂತ ಕೃತಿಕಾರ ಸಂಪರ್ಕಿಸಿದರೆ ಏನನ್ನೋ ಕೊಡುತ್ತಾನೆ ಎಂಬ ಅನಿಸಿಕೆಯಲ್ಲ. ಉತ್ತಮ ಸಂಗೀತವನ್ನು ಕೇಳಿದಾಗ ನೃತ್ಯವನ್ನು ನೋಡಿದಾಗ ಚಿತ್ರರಚನೆಯನ್ನು ಕಂಡಾಗ ಕರತಾಡನದಿಂದ ಕಲಾವಿದರನ್ನು ಗೌರವಿಸುವಂತೇ ಉತ್ತಮ ಕೃತಿಗಳನ್ನು ಕೊಟ್ಟ ಸಾರ್ಥಕ ಜೀವಿಯನ್ನು ಒಮ್ಮೆ ಕಂಡು ಕೈಮುಗಿದು ನಿಮ್ಮ ಕೃತಿಗಳನ್ನು ಓದಿ ಆನಂದತುಂದಿಲನಾದೆ ಎಂದು ಹೇಳಬೇಕೆನಿಸುತ್ತದೆ. ಅಂತಹ ರಸಋಷಿಗಳಲ್ಲಿ ಇವತ್ತಿನ ನಮ್ಮ ’ಜೀವಿ’ ಕೂಡ ಒಬ್ಬರು.

ನಿನ್ನೆಯ ಅಧ್ಯಕ್ಷೀಯ ಭಾಷಣದಲ್ಲೇ ತಾವು ವೆಂಕಟಸುಬ್ಬಯ್ಯನವರ ಇಡೀ ಜೀವಿತದ ಬಗ್ಗೆ ತಿಳಿಯಬಹುದು. ಅವರ ಅನುಭವ ಅಗಾಧ. ಬೆಳಿಗ್ಗೆಯ ತಿಂಡಿಯ ನಂತರ ನಿನ್ನೆ ನಿರಂತರ ಸಾಯಂಕಾಲ ೪ ಗಂಟೆಯವರೆವಿಗೂ ಅವರಿಗೆ ಊಟಕ್ಕೆ ಸಹ ಬಿಡುವಾಗಲಿಲ್ಲ. ದಣಿವರಿಯದ ಕುದುರೆಯಂತೇ ಈ ವಯಸ್ಸಿನಲ್ಲೂ ನಿಂತು ಭಾಷಣ ಮಂಡಿಸಿರುವುದು ಮತ್ತು ಕನ್ನಡಕವನ್ನೂ ಉಪಯೋಗಿಸದೇ ಮರೆಯಬಾರದೆಂದು ಬರೆದುಕೊಂಡಿದ್ದನ್ನು ಓದಿದ್ದು, ಕನ್ನಡ ಭಾಷೆಯ ಇತಿಹಾಸ, ಇಂದಿನ ಸಾಮಾಜಿಕ, ರಾಜಕೀಯ ಪ್ರಕ್ಷುಬ್ಧ ಸನ್ನಿವೇಶಗಳು ಹೀಗೇ ಎಲ್ಲಾ ದೃಷ್ಟಿಕೋನಗಳಿಂದಲೂ ತಮ್ಮ ವಿದ್ವತ್ಪೂರ್ಣ ವಿಷಯವನ್ನು ಜನರ ಮುಂದಿಟ್ಟರು. ೯೮ ವರ್ಷಗಳಲ್ಲಿ ಪ್ರಾಯಶಃ ಒಂದೇ ಒಂದು ವರ್ಷವನ್ನೂ ನಿರರ್ಥಕವಾಗಿ ಕಳೆಯದ ಸಾಧಕರಾದ ಅವರಲ್ಲಿ ಇನ್ನೂ ಏನನ್ನೋ ಕೊಡಮಾಡುವ ತರುಣ ಮನೋಸ್ಥಿತಿಯಿದೆ. ಸಮಾಜಕ್ಕೆ ಇನ್ನೂ ಒಂದೆರಡು ಕೃತಿಗಳನ್ನು ಕೊಡಬೇಕೆಂಬ ಉತ್ಕಟೇಚ್ಛೆಯಿದೆ. ಈ ವಯಸ್ಸಿನ ಹಲವು ಮಹನೀಯರು ಕಾಲಗರ್ಭದಲ್ಲಿ ಲೀನವಾಗಿ ಅದೆಷ್ಟೋ ಕಾಲವಾಗಿರಬಹುದು, ಇವರಿಗಿಂತಾ ಎಳಬರು ವೃತ್ತಿಯಿಂದ ನಿವೃತ್ತರಾಗಿ ಟಿವಿ ಮುಂದೆ ಪ್ರತಿಷ್ಠಾಪಿತರಾಗಿರಬಹುದು, ಇನ್ನೂ ಕೆಲವರು ಕಾಯಿಲೆ-ಕಸಾಲೆಗಳಿಂದ ಬಳಲುತ್ತಾ ಇಂದೋ ನಾಳೆಯೋ ಎಣಿಸುತ್ತಾ ಅಂತೂ ಜೀವನ ಸಾಗಿಸುತ್ತಿರಬಹುದು. ಈ ಎಲ್ಲಾ ರೀತಿಯ ಜನಗಳ ನಡುವೆ ಕೇವಲ ಶರೀರಕ್ಕೆ ಮುಪ್ಪು ಎನ್ನುವ ಅನಿಸಿಕೆಯಿಂದ ಮನದಲ್ಲಿ ತಾರುಣ್ಯದ ಪ್ರಬುದ್ಧ ಸ್ಥಿತಿಯನ್ನು ಇಟ್ಟುಕೊಂಡು ಹಲವರಿಗೆ ಆದರ್ಶಪ್ರಾಯರಾಗಿ ಬದುಕುತ್ತಿರುವ ’ಜೀವಿ’ಯದು ಸಾರ್ಥಕ ತುಂಬು ಜೀವನ. ಅಜಾತಶತ್ರುವಾದ ಅವರ ಸಾಧನೆಗಳಿಗೆ ನಾವೆಲ್ಲಾ ಶರಣೆನ್ನೋಣ.

ಕೊನೆಯ ಒಂದು ಮಾತು : ಅಂದಹಾಗೇ ಕಳೆದವರ್ಷ ತೊಳೆದ ಹಳೆಯ ಜೀಪಿನಲ್ಲಿ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆದಿತ್ತು. ಆ ವಿಷಯವಾಗಿ ವಿಡಂಬನಾ ಕಾವ್ಯವನ್ನೂ ಬರೆದಿದ್ದೆ. ಸುದೈವ ವಶಾತ್ ಇಂದು ಪರಿಷತ್ತು ಆ ರೀತಿ ಮಾಡಿಲ್ಲ. ಮೆರವಣಿಗೆಯೂ ಬಹು ಅಂದವಾಗಿ ನಡೆಯಿತು. ಅದು ಕನ್ನಡತಾಯಿಗೆ ಸಂದ ಗೌರವ. ದಕ್ಷ ಅಧ್ಯಕ್ಷರನ್ನು ಆಯ್ದಿದ್ದಕ್ಕಾಗಿ ಮತ್ತು ತಕ್ಕ ಮೆರವಣಿಗೆ, ವ್ಯವಸ್ಥೆ ಮಾಡಿದ್ದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಇಂದಿನ ಸೂತ್ರಧಾರ ಡಾನಲ್ಲೂರು ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ. ಮುಂಬರುವ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಮಟ್ಟದ ಸಾಹಿತ್ಯ ಪರಿಷತ್ತುಗಳಿಗೆ, ಸದಸ್ಯರಿಗೆ ಇಂತಹ ಸಮ್ಮೇಳನಗಳ ಆಮಂತ್ರಣಗಳನ್ನು ಮುಂಚಿತವಾಗಿ ತಲ್ಪಿಸುವ ಕೆಲಸದ ಜೊತೆಗೆ ಬಂದ ಸದಸ್ಯರಿಗೆ ಸರಿಯಾದ ವ್ಯವಸ್ಥೆಯಾಗುವಂತೇ ನೋಡಿಕೊಂಡರೆ ಉತ್ತಮ ಎನಿಸುತ್ತದೆ. ಏನಿದ್ದರೂ ಲಕ್ಷಾಂತರ ಜನ ಸೇರುವುದರಿಂದ ಸಾಹಿತ್ಯಾಸಕ್ತರಿಗಿಂತ ಹೆಚ್ಚಾಗಿ ತಿಂಡಿಪೋತಗಳೂ ಬಂದಿರಬಹುದು-- ಈ ಕಾರಣದಿಂದ ಒಂದು ನಿಗದಿತ ವ್ಯವಸ್ಥೆ ಎಲ್ಲದಕ್ಕೂ ಅನುಕೂಲ. ಸಮಾರಂಭಕ್ಕೆ ಸಣ್ಣ ವೆಚ್ಚದ ಟಿಕೆಟ್ ಇಟ್ಟರೂ ಪರವಾಗಿಲ್ಲ, ಆಗ ಬೇಡದ ಜನಗಳು ಬರುವ ಬೇಕಾದವರಿಗೆ ಜಾಗ ಸಿಗದೇ ಇರುವ ಸಮಸ್ಯೆಯ ನಿವಾರಣೆಯಾಗುತ್ತದೆ ಎಂಬುದು ನನ್ನ ಅನಿಸಿಕೆ.

ನುಡಿಹಬ್ಬದ ಈ ಶುಭ ಸಂದರ್ಭದಲ್ಲಿ ಕನ್ನಡತಾಯಿ ಭುವನೇಶ್ವರಿಯ ಕೃಪೆ ಎಲ್ಲರಿಗಿರಲಿ, ಎಲ್ಲರ ಬದುಕೂ ಜ್ಞಾನ-ಸಂಪತ್ತಿನಿಂದ ತುಂಬಲಿ ಎಂದು ಹಾರೈಸುತ್ತಿದ್ದೇನೆ, ನಮಸ್ಕಾರ.

Thursday, February 3, 2011

ಕನ್ನಡಾಂಬೆಯಲ್ಲಿ ಅಹವಾಲು


ಕನ್ನಡಾಂಬೆಯಲ್ಲಿ ಅಹವಾಲು

[ಆತ್ಮೀಯ ಕನ್ನಡಾಭಿಮಾನಿಗಳೇ, ಕನ್ನಡದ ಸಹೋದರ ಸಹೋದರಿಯರೇ ನಾಳೆಯಿಂದ ಮೂರುದಿನ ಬೆಂಗಳೂರಿನಲ್ಲಿ ನಡೆಯುವ ಕನ್ನಡ ನುಡಿಹಬ್ಬಕ್ಕೆ ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ. ]

ತೊದಲುಮಾತುಗಳಿಂದ ಪೂಜಿಸುವೆವು ನಿನ್ನ
ಕನ್ನಡ ಭುವನೇಶ್ವರಿಯೆ ಪ್ರೀತಿಯಿಂದ
ಹೃದಯ ದೇಗುಲದಲ್ಲಿ ಸಿಂಹಾಸನವನಿರಿಸಿ
ಅರ್ಚಿಸುವೆವೂ ದಿನವೂ ಅಭಿಮಾನದಿಂದ

ಮುಕ್ಕೋಟಿ ಆರಾಗಿ ಮಿಕ್ಕಿ ಬೆಳೆಯುತ್ತಿಹೆವು
ಅಕ್ಕರೆಯ ನುಡಿಗಳನು ಮರೆಯುವವರಲ್ಲ
ಸಿಕ್ಕಲ್ಲಿ ಅಲ್ಲಿಲ್ಲಿ ಕೆಲತಪ್ಪು ಕಾಣುತಿರೆ
ನಕ್ಕು ಕ್ಷಮಿಸಿಬಿಡಮ್ಮ ನೋವು ತರವಲ್ಲ

ಗಡಿಜಗಳ ಮತಜಗಳ ನದಿಯ ನೀರಿಗೆ ಜಗಳ
ಅಡಿಗಡಿಗೂ ನೂರೆಂಟು ತೀರದಾ ದಾಹ
ಉಡಿಯ ತುಂಬುವೆವಮ್ಮ ಅದನೇ ಪೇರಿಸುತಿಲ್ಲಿ
ಬಿಡಿಸಲಾರದ ಕೆಲವು ಕಗ್ಗಂಟ ಮೋಹ !

ಬರೆಯುವೆವು ಮೆರೆಯುವೆವು ಮರೆಯುವೆವು ನಮ್ಮತನ
ತೊರೆಯುವೆವು ಕನ್ನಡದ ಸೊಗಡ ಮಧ್ಯದಲಿ
ಬಿರಿಯುವವು ರಾತ್ರಿಯಲಿ ತರಹಾವರಿಯ ಕೂಟ
ಹರಿಯುವವು ಪಾನ ಬಹುವಿಧದ ಮದ್ಯದಲಿ !

ಕೆಲವು ಹೊಸ ಜಿಲ್ಲೆಗಳ ತಾಲೂಕುಗಳ ಸೃಜಿಸಿ
ಹಲವು ಜಾಗಗಳನ್ನು ರಸ್ತೆಗಳ ಮಾಡಿ
ನಲಿಯುತಿದ್ದಾ ಕಾಡು-ಪ್ರಾಣಿಗಳ ಲಕ್ಷಿಸದೆ
ಕಲಿವುದೊಂದೇ ಮಂತ್ರ ’ಗಳಿಸು ಗಣಿಮಾಡಿ’ !

ಇಂದು ನಿನ್ನೆಯದಲ್ಲ ಸಂಪತ್ತುಗಳ ಲೂಟಿ
ತಿಂದುಹಾಕಿದೆವೆಲ್ಲ ನಾಳೆಗಳ ಮರೆತು
ನಂದು ಹೋಗದಹಾಗೆ ಜೀವಸಂಕುಲ ಕೋಟಿ
ಬಂದು ವರುಷದಲೊಮ್ಮೆ ಹರಸಮ್ಮ ನಿಂತು

Tuesday, February 1, 2011

ತಲ್ಲಣ

[ಚಿತ್ರ ಕೇವಲ ಕಾಲ್ಪನಿಕ, ರೂಪದರ್ಶಿ: ಸೊನಾಲಿ ಬೇಂದ್ರೆ ]

ತಲ್ಲಣ

ಜಾಲಹಳ್ಳಿಯ ಅಯ್ಯಪ್ಪ ಬ್ಲಾಕಿನ ನಾಲ್ಕನೇ ಮುಖ್ಯರಸ್ತೆಯಲ್ಲಿರುವ ೨೮/೬೭ ನಂಬರಿನ ಮನೆಯ ಮುಂದೆ ಪೋಲೀಸ್ ಜೀಪು ಬಂದು ನಿಂತಿತ್ತು. ಗೌತಮ್‍ಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಆತ ಅಲ್ಲಿರುವ ವಿಷಯವನ್ನು ಪೋಲೀಸರು ಪತ್ತೆ ಹಚ್ಚಿರುವುದು ಅವನಿಗೆ ಆಶ್ಚರ್ಯವಾಗಿತ್ತು. ಅದು ಆತನ ದೂರದ ಸಂಬಂಧಿಕರ ಮನೆ. ಅಲ್ಲಿರುವ ನೆಂಟ ಹಾಗೂ ಮಿತ್ರ ನವೀನ್‍ನಿಗೆ ಪತ್ರ ಬರೆದು "ವಾರದ ಮಟ್ಟಿಗೆ ಬೆಂಗಳೂರಿಗೆ ಬರಬೇಕೆಂದಿದ್ದೇನೆ ಅಲ್ಲೇ ಎಲ್ಲಾದರೂ ನೌಕರಿ ಹುಡುಕಿ ಆಮೇಲೆ ಬಾಡಿಗೆ ಮನೆ ಪಡೆದು ಇದ್ದು ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ, ಎಲ್ಲಾದರೂ ಉಳಿಯಲು ತುರ್ತಾಗಿ ವ್ಯವಸ್ಥೆ ಮಡುತ್ತೀಯಾ " ಎಂದು ಕೇಳಿದ್ದ ಮಿಂಚಂಚೆಗೆ ನವೀನ್ ತಮ್ಮನೆಯಲ್ಲೇ ಇರಲು ಆಹ್ವಾನಿಸಿದ್ದ. ಹೇಗೂ ಗೊತ್ತಿರುವ ಹಳೆಯ ಸಂಬಂಧ. ಒಳ್ಳೆಯ ಹುಡುಗ ಗೌತಮ್. ಹೀಗಾಗಿ ಆತನಿಗೆ ಸಣ್ಣ ಸಹಾಯವಾದರೆ ಆಗಲಿ ಎಂಬ ಅನಿಸಿಕೆಯಿಂದ ನವೀನ್ ತಂದೆ-ತಾಯಿಗಳೂ ಒಪ್ಪಿ ಆಹ್ವಾನಿಸಿದ್ದರು.

ಯಾರದೇ ಜೊತೆಗೂ ಜಗಳವಾಡದ, ಎಲ್ಲರಿಗೂ ಬೇಕಾದ ಸ್ಥಳೀಯ ಜನಪ್ರಿಯ ಜನರಾಗಿದ್ದ ಅವರ ಮನೆಯ ಮುಂದೆ ಪೋಲೀಸ್ ಜೀಪು ಬಂದಿದ್ದು ನೋಡಿ ಆ ರಸ್ತೆಯಲ್ಲಿರುವ ಎಲ್ಲಾ ಮನೆಗಳ ಅನೇಕರು ಒಬ್ಬೊಬ್ಬರಾಗಿ ಬಂದು ಜಮಾಯಿಸತೊಡಗಿದರು. ಎಸ್.ಐ. ಕೂಗುತ್ತಿದ್ದ " ಏನ್ರೀ ಗೌತಮ್ ಎನ್ನುವ ವ್ಯಕ್ತಿಗೆ ನೀವು ಆಶ್ರಯ ಕೊಟ್ಟಿದ್ದೀರಾ ? "

ಮನೆಯ ಯಜಮಾನಿ ಮೆಲುದನಿಯಲ್ಲಿ ಹೇಳಿದರು " ಹೌದು ಸರ್, ಆತ ತುಂಬಾ ಒಳ್ಳೇ ಹುಡುಗ, ಏನಾಗ್ಬೇಕಾಗಿತ್ತು ಸರ್ ? "

" ಮೊದಲು ಆತನನ್ನು ಹೊರಗೆ ಕಳಿಸಿ ಆಮೇಲೆ ಮಾತಾಡೋಣ "

ಗೌತಮ್ ದಿಂಬಿನಲ್ಲಿ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಆತನನ್ನು ಕರೆಯಲು ಬಂದ ಆ ಮನೆಯ ಯಜಮಾನಿಗೆ ಆತ ಮುಖತೋರಿಸಲಾರ. " ಯಾಕಪ್ಪಾ ಗೌತಮ್ ಏನು ಮಾಡಿದ್ದೀಯಾಂತ ? ಪೋಲೀಸರು ನಿನ್ನನ್ನು ಕರೀತಾ ಇದ್ದಾರಲ್ಲ ಯಾಕೆ ? ಬಾ ಬಾ ಮಾತಾಡು....ತಪ್ಪಿಲ್ಲದಿದ್ದರೆ ನೀನ್ಯಾಕೆ ಹೆದರಬೇಕು ? "

ಗೌತಮ್ ಅಳುವುದನ್ನು ಇನ್ನೂ ಜಾಸ್ತಿಯಾಗಿಸಿದನೇ ಹೊರತು ಮುಖವನ್ನು ಎತ್ತಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಷ್ಟೊತ್ತಿಗಾಗಲೇ ಪೇದೆಯೊಬ್ಬ ಬಂದು ಆತನನ್ನು ದರದರನೇ ಎಳೆಯತೊಡಗಿದ. ಬರುವುದಿಲ್ಲಾ ಎನ್ನಲಾಗಲೀ ಏನು ನಡೆಯಿತು ಎನ್ನುವುದನ್ನು ಆ ಮನೆಯ ಯಜಮಾನಿಗೆ ಹೇಳಲಾಗಲೀ ಸಮಯವನ್ನೇ ಕೊಡದೇ ಆತನನ್ನು ಜೀಪಿನಲ್ಲಿ ಒಳಗೆ ದಬ್ಬಿ ಕೂರಿಸಿ ಕೊಂಡು ಹೊರಟೇ ಹೋದರು.

******
ಜೈಲಿನ ಕೋಣೆಯಲ್ಲಿ ಕೂತಿದ್ದ ಗೌತಮ್‍ಗೆ ತಾನು ಮಾಡಿದ ಅಪರಾಧದ ಬಗ್ಗೆ ಬಹಳ ಬೇಸರವಾಗಿತ್ತು. ಅದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಹೌದು. ಹಾಗೊಮ್ಮೆ ತಾನು ವರ್ತಿಸದಿದ್ದಲ್ಲಿ ಎಲ್ಲರಂತೇ ಹೊರಗೆ ಆರಾಮಾಗಿ ತಿರುಗಿಕೊಂಡು ಬೇಕಾದ ಕೆಲಸ ಮಾಡಿಕೊಂಡು ಬದುಕಬಹುದಿತ್ತು. ಉದ್ಯೋಗವೇ ಇಲ್ಲದ ತಾನು ಒಳ್ಳೆಯ ಉದ್ಯೋಗಿಯಾದರೆ ಸಿನಿಮಾ ..ಸಿನಿಮಾ ತಾರೆಯಂತಹ ಹುಡುಗಿಯನ್ನು ವರಿಸಬಹುದಿತ್ತು. ಆದರೆ ಹಾಳಾದ ಪ್ರೀತಿ ಎಲ್ಲವನ್ನೂ ಅರೆಕ್ಷಣ ಮರೆಸಿಬಿಟ್ಟಿತ್ತು! ನಡೆಯಬಾರದ್ದು ನಡೆದೇ ಹೋಗಿತ್ತು.

ಉಪೇಂದ್ರನ ಕೆಲವು ಸಿನಿಮಾಗಳನ್ನು ಬಹಳವಾಗಿ ನೋಡಿದ್ದ ಗೌತಮ್‍ಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದವಳೇ ಶಿಲ್ಪಾ. ಆಕೆ ಸತತವಾಗಿ ಫೇಸ್‍ಬುಕ್‍ನಲ್ಲೇ ಈಜಾಡುವವಳು. ಕಾಲೇಜು ಓದುತ್ತಿದ್ದರೂ ಸಮಯದ ಬಹುಪಾಲು ಸ್ನೇಹಿತರ ಬಳಗದಲ್ಲಿ ಮತ್ತು ಅಂತರ್ಜಾಲದಲ್ಲಿ ಕಳೆಯುತ್ತಿದ್ದಳು. ಸ್ಫುರದ್ರೂಪಿಯಾಗಿದ್ದ ಅವಳಿಗೆ ತನ್ನ ರೂಪದ ಬಗ್ಗೆ ಅಪಾರವಾದ ಹೆಮ್ಮೆಯಿತ್ತು. ಮಾಡ್ ಆಗಿರುವ ೨೦೦-೩೦೦ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದಳು. ಅವಳ ವಿವಿಧ ಭಂಗಿಗಳ ಫೋಟೊಗಳನ್ನು ನೋಡಿಯೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಗೌತಮ್. ಆಕೆ ಅನುಮತಿಸಿದಾಗ ದಿನವೂ ಅವನಿಗೆ ಆಕೆಯ ಫೋಟೊಗಳು ಕಾಮೆಂಟುಗಳು ಇವುಗಳನ್ನೆಲ್ಲಾ ನೋಡುವ ಹವ್ಯಾಸ ಬೆಳೆಯಿತು. ಒಂದೇ ಒಂದು ದಿನವೂ ಆತ ಫೇಸ್‍ಬುಕ್ ಬಿಟ್ಟಿರಲಾರ! ದಿನಗಳೆದಂತೇ ಆತ ನಿಜವಾಗಿಯೂ ಆಕೆಯನ್ನು ಅಪಾರವಾಗಿ ಹಚ್ಚಿಕೊಂಡಿದ್ದ. ಹೇಗೋ ಧೈರ್ಯಮಾಡಿ " ಐ ಲವ್ ಯೂ " ಎನ್ನುವ ಮನಸ್ಸು. ಆದರೆ ಆಗಬೇಕಲ್ಲ? ಆಕೆಯೂ ಅನೇಕರ ಕಾಮೆಂಟುಗಳಿಗೆ ಉತ್ತರಿಸಿದಂತೇ ಈತನ ಕಾಮೆಂಟಿಗೂ ಉತ್ತರಿಸುತ್ತಿದ್ದಳು. " ಯೂ ಆರ್ ಲುಕಿಂಗ್ ವೆರಿ ವೆರಿ ಸ್ವೀಟ್ " ಎಂಬ ಈತನ ಕಾಮೆಂಟಿಗೆ " ಸೋ ನೈಸ್ ಆಫ್ ಯೂ " ಅಂದಿದ್ದಳು. ಹುಡುಗಿಯರಿಗೆ ’ತುಂಬಾ ಚೆನ್ನಾಗಿದ್ದೀಯಾ’ ಎಂದುಬಿಟ್ಟರೆ ಮುಖ ಕತ್ತೆಯ ಥರವಿದ್ದರೂ ಮೂರಡಿ ಏರಿಬಿಡುತ್ತಾರಲ್ಲವೇ. ಇಲ್ಲಂತೂ ಆಕೆ ಸಹಜವಾಗಿಯೇ ಸುಂದರಿ; ಕೇಳಬೇಕೆ! ಚಾಟ್ ಆರಂಭವಾಯಿತು.

ಚಾಟ್ ಮಾಡುತ್ತಾ ಮಾಡುತ್ತಾ ಆಕೆ ಇರುವ ಏರಿಯಾ,ಮನೆ, ಕಾಲೇಜು ಆದಿಯಾಗಿ ಎಲ್ಲವನ್ನೂ ತಿಳಿದುಕೊಂಡ ಗೌತಮ್ ಆಕೆಗೆ ಪರ್ಸನಲ್ ಮಿಂಚಂಚೆ ಕಳಿಸತೊಡಗಿದ. ಆಕೆಯ ಮೊಬೈಲಿಗೆ ಎಸ್.ಎಮ್.ಎಸ್ ಕಳಿಸತೊಡಗಿದ. ಹೇಗಾದರೂ ಆಕೆ ತನ್ನವಳಾಗಿಬಿಟ್ಟರೆ ತನ್ನಂಥಾ ಅದೃಷ್ಟವಂತ ಯಾರು ಈ ಜಗತ್ತಿನಲ್ಲಿ ! ಆದರೂ "ಐ ಲವ್ ಯೂ " ಎಂದಿರಲಿಲ್ಲ, ಯಾಕೋ ಮನಸ್ಸು ಹೆದರುತ್ತಿತ್ತು. ಗೌತಮ್ ಕೂಡ ಸ್ಫುರದ್ರೂಪಿಯೇ. ಜೀನ್ಸ್ ಮತ್ತು ಟೀ ತೊಟ್ಟು ಅಪ್ಪ ಕೊಡಿಸಿದ್ದ ಬೈಕಿನಲ್ಲಿ ಕೂತುಬಿಟ್ಟರೆ ಎಲ್ಲಿಗೇ ಹೋದರೂ ಅಪ್ಪ ಅಷ್ಟಾಗಿ ಕೇಳುತ್ತಿರಲಿಲ್ಲ. ಕೊಡಗಿನಲ್ಲಿಯೇ ಶ್ರೀಮಂತರೆನಿಸಿದ್ದ ಕುಟುಂಬ ಅವರದ್ದು. ಬೈಕ್ ಬದಲಿಗೆ ಕಾರೂ ಕೊಡಿಸಬಹುದಿತ್ತು. ಆದರೂ ಅದ್ಯಾಕೋ ಅಪ್ಪ ಆತನಿಗೆ ಉದ್ಯೋಗ ಸಿಕ್ಕಮೇಲೆ ಆತನೇ ಖರೀದಿಸಲಿ ಎಂಬ ಅನಿಸಿಕೆಯಿಂದ ಬಿಟ್ಟಿರಬೇಕು. ಹಾಗಂತ ನೌಕರಿ ಮಾಡಬೇಕಾದ ಪರಿಸ್ಥಿತಿಯೇನೂ ಇರಲಿಲ್ಲ. ಆದರೂ ಕಾಫೀ ಪ್ಲಾಂಟೇಶನ್‍ನಲ್ಲಿ ಇತ್ತೀಚೆಗೆ ತೀರಾ ಲಾಭಬರುತ್ತಿಲ್ಲ ಮತ್ತು ಕಾರ್ಮಿಕರ ಅಭಾವ ಜಾಸ್ತಿಯೆಂಬ ಕಾರಣಕ್ಕೆ ಮಗ ಬರೇ ಕಾಫೀತೋಟವನ್ನೇ ನೆಚ್ಚಿಕೊಂಡು ಬದುಕುವುದು ಬೇಡವೆಂಬುದು ಅಪ್ಪ ಬೋಪಣ್ಣನವರ ಇರಾದೆ.

ಹುಡುಗು ಬುದ್ಧಿ ತುಡುಗು ಬುದ್ಧಿ ಅಂತಾರಲ್ಲ. ಬೇಲಿಹಾರುವ ವಯಸ್ಸಿನಲ್ಲಿ ಮನಸ್ಸು ನಿಗ್ರಹಕ್ಕೆ ಬರುವುದು ಕಷ್ಟವಾಗಿತ್ತು. ಅಲ್ಲಿಲ್ಲಿ ಒಂದಷ್ಟು ಗೆಳೆಯರೂ ಜೊತೆಯಾಗುತ್ತಿದ್ದರು. ಓದಿನಲ್ಲಿ ಅಷ್ಟಾಗಿ ಆಸಕ್ತಿಯೇ ಬರಲಿಲ್ಲ. ಪಾಸಾದರೂ ಆಯ್ತೂ ಬಿಟ್ಟರೊ ಆಯ್ತು. ಆದರೂ ಬೋಪಣ್ಣ ಮಗನನ್ನು ಕಾಲೇಜಿನಿಂದ ಬಿಡಿಸಿರಲಿಲ್ಲ. ಓದುವಷ್ಟು ಓದಲಿ ಆಮೇಲೆ ಜೀವನ ಅವರವರ ಹಣೆಬರಹ ಎಂಬ ತಿಳುವಳಿಕೆಯುಳ್ಳ ಜನ ಅವರು. ಆದರೂ ಪ್ರಾಯದ ಮಗನನ್ನು ನಿಗಾವಹಿಸಿ ನೋಡಿದ್ದರೆ ಸ್ವಲ್ಪವಾದರೂ ದಿಕ್ಕುತಪ್ಪದಂತೇ ಮಾಡಬಹುದಿತ್ತೇನೋ.

ಗೆಳೆಯರ ಸಂಗದಲ್ಲಿ ಅಲ್ಲಲ್ಲಿ ಇಸ್ಪೀಟು, ಕಂಪ್ಯೂಟರ್ ಗೇಮ್ಸ್ ಆಡುತ್ತಿದ್ದ ಗೌತಮ್‍ಗೆ ಬೇರೇನೂ ಚಟಗಳು ಅಂಟಿರಲಿಲ್ಲ. ಎಲ್ಲೋ ಒಂಚೂರು ಮದ್ಯ ತೆಗೆದುಕೊಳ್ಳುವುದು ಕೊಡವರಿಗೆ ಮಾಮೂಲು ಬಿಡಿ. ಆದರೆ ಅದನ್ನೇ ಬೆನ್ನುಹತ್ತಿದವನಲ್ಲ. ಎಲ್ಲರನ್ನೂ ಮೆಚ್ಚಿಸುವ ಗುಣ. ಯಾರು ಏನೇ ಕೇಳಿದರೂ ’ಇಲ್ಲಾ’ ಎನ್ನದ ಸ್ವಭಾವ. ಹೀಗಾಗಿ ಸ್ನೇಹಿತರೆಲ್ಲರಿಗೂ ಗೌತಮ್ ಎಂದರೆ ಅಚ್ಚುಮೆಚ್ಚು. ಅಂತರ್ಜಾಲ ವೀಕ್ಷಣೆಯನ್ನು ಅಭ್ಯಾಸಮಾಡಿಕೊಂಡ ಗೌತಮ್ ಅದಾಗಲೇ ಫೇಸ್‍ಬುಕ್‍ನಲ್ಲಿ ಖಾತೆ ತೆರೆದಿದ್ದ. ನೋಡುತ್ತಾ ನೋಡುತ್ತಾ ಆತನಿಗೆ ಹುಡುಗಿಯರ ಫೋಟೋಗಳು ಹಿಡಿಸತೊಡಗಿದವು. ಆಗ ಕಂಡವಳೇ ಚೆಲ್ಲು ಚೆಲ್ಲು ಶಿಲ್ಪಾ.

ಕಡೆದಿಟ್ಟ ಶಿಲ್ಪದಂತೇ ಮೈಮಾಟಹೊಂದಿರುವ ಶಿಲ್ಪಾಳ ವಿವಿಧ ಭಂಗಿಗಳ ಚಿತ್ರಗಳನ್ನು ನೋಡತೊಡಗಿದ ಗೌತಮ್‍ಗೆ ನಿತ್ಯವೂ ಗಣಕಯಂತ್ರದಿಂದ ಆಚೆಬಂದಮೇಲೆ ಏನನ್ನೋ ಕಳೆದುಕೊಂಡ ಅನುಭವ. ಆಕೆಯೊಂದಿಗೆ ಇಡೀದಿನ ಚಾಟ್ ಮಾಡುವಾ ಎಂಬ ಆಸೆ. ಆಕೆಯೂ ಮಡೀಕೇರಿಯವಳೇ ಎಂಬುದು ತಿಳಿದಾಗಲಂತೂ ಕುಣಿದಾಡಿಬಿಟ್ಟಿದ್ದ ಆತ. ತನ್ನ ಮನೆಗೂ ಅವಳ ಮನೆಗೂ ಕೇವಲ ಹನ್ನೆರಡು ಕಿಲೋಮೀಟರ್ ಅಂತರ, ಆದರೂ ಓ ದೇವರೇ ನಾವೆಷ್ಟು ದೂರ ದೂರ ಎಂದುಕೊಳ್ಳುತ್ತಿದ್ದ. ಆದಷ್ಟೂ ಶೀಘ್ರ ಆಕೆಯನ್ನು ಭೇಟಿಮಾಡಲೂ ಹಾತೊರೆಯುತ್ತಿದ್ದ. ಆಕೆಯೂ ಈತನ ಎಲ್ಲಾ ಲೀಲೆಗಳಿಗೂ ಸ್ಫಂದಿಸಿದರೂ ಇಬ್ಬರೂ " ಐ ಲವ್ ಯೂ " ಅನ್ನಲಿಲ್ಲ. ಆದರೂ ಇಬ್ಬರೂ ಸಾಕಷ್ಟು ಅನ್ಯೋನ್ಯ ಎಂಬಷ್ಟು ಹತ್ತಿರವಾಗಿದ್ದರು.

******
ಅವಳ ಕಾಲೇಜಿನ ಹೊರಗೆ ತಂದೆಯ ಕಾರಿನಲ್ಲಿ ಕುಳಿತಿದ್ದ ಗೌತಮ್ ಆಕೆ ಬರುವುದನ್ನೇ ಕಾಯುತ್ತಿದ್ದ. ಆತನೇ ಸ್ವತಃ ಡ್ರೈವ್ ಮಾಡಿಬಂದಿದ್ದ. ಜೊತೆಗೆ ಇನ್ಯಾರೂ ಇರಲಿಲ್ಲ. ಅದು ಉದ್ದೇಶಪೂರ್ವಕವೂ ಹೌದು. ತಾನು ಶಿಲ್ಪಾಳನ್ನು ಪ್ರೀತಿಸುತ್ತಿರುವುದು ಯಾರಿಗೂ ತಿಳಿಯದಿರಲಿ ಎಂಬುದೇ ಆತನಲ್ಲಿರುವ ಗುಟ್ಟು. ಹಾಗಂತ ಆತ ಯಾವುದೇ ಕ್ಷಣದಲ್ಲೂ ಆಕೆಯನ್ನು ಮದುವೆಯಾಗಲು ರೆಡಿ. ಆದರೆ ಮನೆಯಲ್ಲಾಗಲೀ ಗೆಳೆಯರಲ್ಲಾಗಲೀ ಈ ವಿಷಯದ ಬಗ್ಗೆ ಹೇಳಿದ್ದಿಲ್ಲ. ಯಾಕೋ ಹಿಂಜರಿಯುತ್ತಿದ್ದ. ಕಡಿ ನೀಲಿ ಬಣ್ಣದ ಮಾರುತಿ ಡಿಸೈರ್ ಕಾರಿನಲ್ಲಿ ಚಲನಚಿತ್ರದ ಹೀರೋ ಕುಳಿತಂತೇ ಪೋಸುಕೊಡುತ್ತಾ ಕುಳಿತಿದ್ದ ಆತನನ್ನು ಹಲವಾರು ಹುಡುಗಿಯರು ನೋಡಿಕೊಂಡು ಮುನ್ನಡೆದರು. ಶಿಲ್ಪಾ ತಡವಾಗಿ ಬಂದವಳು ಮೊದಲ ಭೇಟಿಯಲ್ಲೇ "ಹಾಯ್, ಯಾವುದೋ ಅರ್ಜೆಂಟ್ ಕೆಲಸವಿದೆ ನಾಳೆ ಸಿಗುತ್ತೇನೆ " ಎಂದವಳೇ ಮರುಮಾತಿಗೂ ಕಾಯದೇ ಹೊರಟೇ ಹೋದಳು. ಆಕೆಗೆ ಈ ಥರದ ಹಲವು ಹುಡುಗರು ಫೇಸ್‍ಬುಕ್ ಮೂಲಕ ಸ್ನೇಹಿತರಾಗಿದ್ದರು. ಕಾಲೇಜಿನಲ್ಲಿಯೂ ಬಹಳ ಹುಡುಗರು ಆಕೆಯ ಹಿಂದೆಯೇ ಸುತ್ತುತ್ತಿದ್ದರು. ಒಂದಿಬ್ಬರು ಹರೆಯದ ಗಂಡು ಉಪನ್ಯಾಸಕರೂ ಆಕೆಯನ್ನು ಯಾಕೋ ಏಕೋಭಾವದಿಂದ ದೃಷ್ಟಿಸುತ್ತಿದ್ದರು ! ಇದೆಲ್ಲಾ ಮಾಮೂಲಿಯಾಗಿಬಿಟ್ಟಿದ್ದರಿಂದ ಆಕೆ ಯಾವುದಕ್ಕೂ ಅಷ್ಟಾಗಿ ತಲೆಕೆಡಿಸಿಕೊಂಡವಳಲ್ಲ. ಆದರೂ ಅವಳು ನಗುನಗುತ್ತಾ ಸ್ವಲ್ಪ ಅತಿಯಾಗಿ ಸಂಭಾಷಿಸುವ ಪರಿಯನ್ನು ಆಕೆಯ ಅಭಿಮಾನೀ ಹುಡುಗರೆಲ್ಲಾ ಅಪಾರ್ಥಮಾಡಿಕೊಂಡಿದ್ದರು. ಗೌತಮ್ ಕೂಡ ಅವರಲ್ಲೊಬ್ಬ.

ವಿಧಿಯಿಲ್ಲದೇ ಮರಳಿದ ಗೌತಮ್‍ಗೆ ನಾಳೆ ಯಾವಾಗ ಬರುತ್ತದೆ ಎಂಬ ಕಾತರ. ಆಕೆಯೊಡನೆ ಗಂಟೆಗಟ್ಟಲೇ ಮಾತನಾಡುವ ಆತುರ. ಇಡೀ ದಿನವನ್ನು ಹೇಗುಹೇಗೋ ಕಳೆದ ಆತನಿಗೆ ತಂದೆ ವಹಿಸಿದ ಕೆಲವು ಕೆಲಸಗಳನ್ನೂ ಮನಸ್ಸಿಲ್ಲದ ಮನಸ್ಸಿನಿಂದ ಮಾಡಿಮುಗಿಸುವ ಪ್ರಮೇಯ ಬಂದಿತ್ತು. ಕ್ಷಣವೂ ದಿನಾವಾದಂತೇ ಯಾಕೋ ಬೇಸರ. ಮೈಮುರಿಯುತ್ತಾ ಆಕಳಿಸಿದ ಆತನಿಗೆ ಆ ರಾತ್ರಿ ನಿದ್ದೆಯೇ ಹತ್ತಲಿಲ್ಲ. ದಿಂಬು ಹಾಸಿಗೆ ಎಲ್ಲವನ್ನೂ ಶಿಲ್ಪಾ ಆವರಿಸಿಬಿಟ್ಟಿದ್ದಳು! ಎಲ್ಲಿ ನೋಡಿದರೂ ಅವಳೇ ಕಾಣಿಸುತ್ತಿದ್ದಳು. ಯಾವ ದಿಕ್ಕಿಗೇ ತಿರುಗಿಕೊಂಡರೂ ಅಲ್ಲಿ ಅವಳ ಚಿತ್ರ ಕಾಣುತ್ತಿತ್ತು. ಅಂತೂ ರಾತ್ರಿ ಕಳೆದು ಹಗಲಾಯಿತು. ಭಾರವಾದ ಕ್ಷಣಗಳು ಮತ್ತೆ ಬರಬರನೇ ಓಡತೊಡಗಿದವು. ಸ್ನಾನಮಾಡಿ ಅತಿ ವಿಶೇಷವಾದ ದಿರಿಸನ್ನು ಧರಿಸಿ, ಶಾಸ್ತ್ರಕ್ಕೆ ತಿಂಡಿ ತಿಂದು ಅಪ್ಪ-ಅಮ್ಮರಿಗೆ ಯಾವುದೋ ನೆಪಹೇಳಿ ಅಪ್ಪನ ಕಾರನ್ನು ಮತ್ತೆ ಕೇಳಿ ಪಡೆದು ಹೊರಟು ಶಿಲ್ಪಾಳ ಕಾಲೇಜಿಗೆ ಬಂದಿದ್ದ ಗೌತಮ್.

ಈ ದಿನ ಮಾತ್ರ ಆಕೆ ಗೌತಮ್‍ನನ್ನು ಬಹಳ ಆಪ್ತವಾಗಿ ಮಾತನಾಡಿಸುತ್ತಾ ಆತನೊಡನೆ ಆತ ಕರೆದಲ್ಲಿಗೆ ಹೊರಡಲು ಸಿದ್ಧವಾದಳು. ಈರ್ವರೂ ಮಡಿಕೇರಿಯ ಕಾವೇರಿ ಕಾಂಟಿನೆಂಟಲ್ ಹೋಟೆಲ್ ನಲ್ಲಿ ಕುಳಿತು ಗಂಟೆಗಟ್ಟಲೇ ಮಾತನಾಡುತ್ತಾ ತಿಂಡಿ, ಐಸಕ್ರೀಮ್ ಹೀಗೇ ಸಮಯಕಳೆದಿದ್ದೇ ಗೊತ್ತಾಗಲಿಲ್ಲ. ನಿಸರ್ಗನಿರ್ಮಿತ ಉದ್ಯಾನದಲ್ಲಿ ತುಸುಹೊತ್ತು ಕುಳಿತುಬರೋಣ ಎಂದ ಗೌತಮ್‍ನ ಮಾತಿಗೂ ಅಸ್ತು ಎಂದು ಆತನ ಜೊತೆ ಹೆಜ್ಜೆಹಾಕಿದ್ದಳು ಶಿಲ್ಪಾ. ಸ್ವರ್ಗವೇ ಧರೆಗಿಳಿದ ಖುಷಿಯಲ್ಲಿದ್ದರೂ ಗೌತಮ್‍ಗೆ ಆಕೆಯನ್ನು ಇನ್ನೂ ಹತ್ತಿರ ಹತ್ತಿರ ಸೆಳೆಯುವ ಆಸೆಯಾಗುತ್ತಿತ್ತು. ಹಾಗೂ ಹೀಗೂ ಕಷ್ಟಪತ್ತು " ಐ ಲವ್ ಯೂ " ಎನ್ನಬಯಸಿದ್ದ ಪ್ರಯತ್ನಗಳು ನಾಲಿಗೆಯ ತುದಿಯಲ್ಲೆಲ್ಲೋ ಅಂಟಿಕೊಂಡು ಹೊರಬರದಾಗುತ್ತಿದ್ದವು. ಆಕೆ ಮಾತ್ರ " ಐ ಲವ್ ಯೂ " ಅನ್ನುವ ಮನೋಭಾವದವಳಾಗಿರಲಿಲ್ಲ. ಯಾಕೆಂದರೆ ಆಕೆಗೆ ಅದೊಂದು ಸ್ನೇಹವಷ್ಟೇ! ಅಲ್ಲಿ ಸಿಗುವ ಖುಷಿಯನ್ನು ಪಡೆಯಲಷ್ಟೇ ಆಕೆ ಬಯಸುತ್ತಿದ್ದಳು.

ಅಗಾಗ ಭೇಟಿಯಾಗುತ್ತಿದ್ದ ಈರ್ವರೂ ವಾರಕ್ಕೊಮ್ಮೆ ಭೇಟಿಯಾಗಬಯಸಿದರು. ಕಾಲ ಸರ್ರೆಂದು ಕಳೆಯುತ್ತಿತ್ತು. ಒಂದಾನೊಂದು ದಿನ ಮಿಂಚಂಚೆಯಲ್ಲಿ ತನ್ನ ಇಂಗಿತವನ್ನು ಹೇಗೋ ಅಂತೂ ಪ್ರಯಾಸಪೂರ್ವಕ ನಿವೇದಿಸಿದ್ದ ಗೌತಮ್. ಅದಕ್ಕೆ ಆಕೆ ಉತ್ತರಿಸುವ ಬದಲು ಮೊಬೈಲ್ ನಲ್ಲಿ ನಕ್ಕಳು. ಆಕೆ ಒಪ್ಪಿದಾಳೆಂಬ ಸಂತೋಷದಲ್ಲಿ ಆಕಾಶ ಭೂಮಿಗೇ ಬಾಗಿನಿಂತಿತ್ತು. ಇನ್ನೇನು ಅದಕ್ಕೆ ಮೂರೇಗೇಣು! ಸಂತಸದ ಅಸದೃಶ ಚಳುಕೊಂದು ಬೆನ್ನ ಹುರಿಯಲ್ಲಿ ಹಾದುಹೋದ ಅನುಭವವಾಗಿತ್ತು ಗೌತಮ್‍ಗೆ.

******
ಮಡೀಕೇರಿಯ ಚಳಿಗಾಲ. ಕೇಳಬೇಕೇ ? ಸುತ್ತಲ ಪರಿಸರವೆಲ್ಲಾ ಹಸಿರು, ಮಂಜುಮುಸುಕಿದ ಮತ್ತು ಮೋಡಗಳ ವಾತಾವರಣ. ಚುಮುಚುಮು ಚಳಿಯಲ್ಲೇ ಆ ದಿನ ಶಿಲ್ಪಾಳನ್ನು ಮತ್ತೆ ಕಾಣುವ ಹಸಿದ ಕಣ್ಣುಗಳನ್ನು ಹೊತ್ತು ಬಹಳ ಬೇಗನೇ ಕಾಲೇಜಿನ ಹೊರಗೆ ಕಾಯುತ್ತಿದ್ದ ಗೌತಮ್. ಆಕೆ ಬರುತ್ತೇನೆ ಎಂದಿದ್ದ ಸಮಯ ಅದಾಗಲೇ ಕಳೆದು ಬಹಳ ಸಮಯವಾಗಿತ್ತು. ಮೊಬೈಲಿಗೆ ಕಾಲ್ ಮಾಡಿದ್ದರೆ ’ಯಾವುದೇ ಕರೆಯನ್ನು ಸ್ವೀಕರಿಸುತ್ತಿಲ್ಲ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ’ ಎಂಬ ಉಲಿಕೆ. ಕಾದೂ ಕಾದೂ ಬಳಲಿದ ಆತ ಹೊರಟು ಹಿಂದೆ ತಾವಿಬ್ಬರೂ ಅನೇಕ ಸರ್ತಿ ಕುಳಿತು ತಿಂಡಿತಿಂದಿದ್ದ ಕಾವೇರಿ ಕಾಂಟಿನೆಂಟಲ್ ಹೋಟೆಲ್‍ಗೆ ಬಂದಿದ್ದ. ಹಸಿವೆಯ ಅರಿವು ಕಾಡುತ್ತಿತ್ತು. ಮನಸ್ಸು ಬೇಡವೆಂದರೂ ಹೊಟ್ಟೆ ಬಯಸುತ್ತಿತ್ತು. ತಿಂಡಿಗೆ ಆರ್ಡರ್ ಮಾಡಿದ. ಇನ್ನೇನು ತಿಂದು ಮುಗಿಸಿ ಹೊರಡುವಾಗ ಮಹಡಿಯ ’ಸ್ಪೆಶಲ್ ಸರ್ವಿಸ್ ಹಾಲ್’ ನಿಂದ ಶಿಲ್ಪಾ ಯಾವುದೋ ಯುವಕನೊಡನೆ ಕೆಳಗಿಳಿದು ಬರುತ್ತಿರುವುದು ಕಾಣಿಸಿತು !

ತನ್ನವಳೇ ಎನಿಸಿದ್ದ ಆ ಹುಡುಗಿ ಇನ್ನೊಬ್ಬನೊಟ್ಟಿಗೆ ಚೆಲ್ಲುಚೆಲ್ಲಾಗಿ ವರ್ತಿಸುತ್ತಿರುವುದನ್ನು ಕಂಡ ಗೌತಮ್‍ಗೆ ಭೂಮಿಯಲ್ಲಿಲ್ಲದಂಥಾ ಅಸಾಧ್ಯ ಕೋಪವುಕ್ಕಿಬಂತು. ಕೈ ಕೈ ಹಿಸುಕಿಕೊಂಡನಾದರೂ ಅದನ್ನು ವ್ಯಕ್ತ ಪಡಿಸಲು ಆಗುವುದೇ? ಬೆಳಗಿನಿಂದ ಅಷ್ಟುಹೊತ್ತು ತಾನು ಕಾದಿದ್ದೇ ಬಂತು. ಈ ಹುಡುಗಿ ಇಲ್ಲಿ ನೋಡಿದರೆ ಹಾಯಾಗಿ ಬೇರೊಬ್ಬನೊಡನೆ ಸುತ್ತುತ್ತಾ ಎಂಜಾಯ್ ಮಾಡುತ್ತಿರುವುದನ್ನು ಆತ ಸಹಿಸದಾದ. ವೇಟರ್ ಕರೆದು ಬಿಲ್ಲು ತೆತ್ತು ಹೊರಟುನಿಂತ ಆತ ಶಿಲ್ಪಾ ಇನ್ನೊಬ್ಬನೊಡನೆ ಹತ್ತಿರಬಂದು ನಕ್ಕಾಗ ನಗಲಾರದೇ ನಕ್ಕ. " ಯೂ ನೋ ಹೀ ಈಸ್ ತರುಣ್. ಮೈ ಬೆಸ್ಟ್ ಫ್ರೆಂಡ್ " ಎಂದಾಗ ಯಾಂತ್ರಿಕವಾಗಿ ಆ ಹುಡುಗನ ಕೈಕುಲುಕಿದ. ಆಕೆ ಆತನಿಗೂ ಗೌತಮ್‍ನ ಪರಿಚಯ ಹೇಳಿ " ಮೈ ಫೇಸ್‍ಬುಕ್ ಫ್ರೆಂಡ್" ಎಂದಳು. ಭೂಮಿಗೆ ಬಾಗಿದ್ದ ಆಗಸ ಬರ್ರನೆ ನಿಲುಕದ ಎತ್ತರಕ್ಕೆ ಏರಿಹೋಗಿತ್ತು. ಯಾಕೋ ತನ್ನ ಮನಸ್ಸು ಶಿಲ್ಪಾಳನ್ನು ದ್ವೇಷಿಸುವ ಹಾಗಾಗಿತ್ತು. ಆ ದಿನ ನೋವಿನಲ್ಲೇ ಆ ಜಗದಿಂದ ’ಬೈ ಬೈ’ ಹೇಳಿದ ಗೌತಮ್.

ಮನೆಗೆ ಬಂದವನಿಗೆ ಊಟ ತಿಂಡಿ ಎಲ್ಲಕ್ಕಿಂತಾ ಹೆಚ್ಚಾಗಿ ವಿಶ್ರಾಂತಿಯ ಅವಶ್ಯಕತೆಯಿತ್ತು. ಮಲಗಿದರೂ ನಿದ್ದೆಯೇನೂ ಬರದು...ಆದರೂ ಮಲಗಬೇಕು ಎನಿಸುತ್ತಿತ್ತು. ಶಿಲ್ಪಾ ಯಾಕೋ ದೂರವಾಗುತ್ತಿದ್ದಾಳೆನೋ ಅನಿಸುತ್ತಿತ್ತು. ಅಂತರ್ಜಾಲ ತೆರೆದು ಗುಪ್ತವಾಗಿ ಮೆಸ್ಸೇಜ್ ಕಳಿಸಿದ್ದೂ ಆಯಿತು. ಸಾಕಷ್ಟು ಎಸ್.ಎಮ್.ಎಸ್ ಗಳೂ ಸಂದವು. ಆದರೆ ಅದಕ್ಕೆಲ್ಲಾ ಅವಳ ಉತ್ತರ " ಹಾಗೇನೂ ಇಲ್ಲ " ಎಂಬುದಾಗಿತ್ತು. ಆಕೆಯನ್ನು ಹೇಗೆ ಅರ್ಥಮಾಡಿಕೊಳ್ಳಲಿ ಎಂಬುದೇ ತೋಚದ ಮನ ಹುಚ್ಚುಹುಚ್ಚಾಗಿ ವಿಚಿತ್ರಗಳನ್ನು ಚಿಂತಿಸುತ್ತಿತ್ತು. ಮನದಲ್ಲಿ ನಡೆದ ಈ ಹೊಯ್ದಾಟಗಳನ್ನು ಹೇಳಿಕೊಳ್ಳಲು ಮನೆಯಲ್ಲಿ ಸಾಧ್ಯವಿರಲಿಲ್ಲ, ಗೆಳೆಯರು ನಕ್ಕಾರು ಎಂದೆನಿಸುತ್ತಿತ್ತು. ತಾನೇ ತಾನಾಗಿ ತುಮುಲಗಳು ಬಗೆಹರಿಯಲು ಸಮಯ ಜಾಸ್ತಿ ಬೇಕಲ್ಲವೇ? ಅದಕ್ಕಾಗಿ ಆತ ಮಲಗಿ ಮಲಗಿ ಸೋತ. ಅಪ್ಪ-ಅಮ್ಮ "ಯಾಕೇ ಒಂಥರಾ ಇದೀಯಾ ? " ಎಂದರೆ " ಯಾಕೂ ಇಲ್ಲ ಯಾವುದೋ ಆಟದಲ್ಲಿ ಸೋತುಬಿಟ್ಟೆ ಅದಕೇ ಬೇಜಾರಾಗಿದೆ " ಎಂದಿದ್ದ.

******
ದಿನಗಳು ಕಳೆದರೂ ಆ ಕಹಿ ನೆನಪು ಮಾತ್ರ ಮನದ ಮೂಲೆಯಲ್ಲಿ ಶಾಶ್ವತವಾಗಿ ಬೇರುಬಿಟ್ಟಿತ್ತು. ಶಿಲ್ಪಾ ತನ್ನವಳೇ ಆಗಬಲ್ಲಳೇ ಎಂಬ ಅಳಿದುಳಿದ ಆಸೆ ಇನ್ನೂ ಬತ್ತಿರಲಿಲ್ಲ. ಶಿಲ್ಪಾಗೆ ಸಾಕಷ್ಟು ತಿಳಿಹೇಳಿದರೂ ಅವಳ ಜಾಯಮಾನದಲ್ಲಿ ಬದಲಾವಣೆಯಿರಲೇ ಇಲ್ಲ. "ನಾವಿಬ್ಬರೂ ಮದುವೆಯಾಗೋಣವೇ ? " ಎಂಬ ಪ್ರಶ್ನೆಗೆ "ನನಗೆ ಮದುವೆ ಈಗಲೇ ಇಷ್ಟವಿಲ್ಲ " ಎನ್ನುತ್ತಿದ್ದಳು. ಕೇಳಿ ಕೇಳಿ ಸೋತ ಗೌತಮ್‍ಗೆ ಆಕೆಯನ್ನು ತಾನು ಪಡೆಯಲೇ ಬೇಕೆಂಬ ಬಯಕೆ ತೀರಾ ಅತಿಯಾಗತೊಡಗಿತು. ಒಂದಿನ ಊರ ಹೊರಗಲ್ಲೆಲ್ಲೋ ಹೋಗಿಬರೋಣವೆಂದಿದ್ದಕ್ಕೆ ಶಿಲ್ಪಾ ಸಮ್ಮತಿಸಿದಳು. ಹಾಗೆ ಇಬ್ಬರೂ ಹೋದಾಗ ಸ್ವಲ್ಪ ಸಮಯದ ನಂತರ ತಾನು ಬಲವಂತವಾಗಿ ಆಕೆಯನ್ನು ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದ್ದ. ಏನೇ ಮಾಡಿದರೂ ಆಕೆ ಒಪ್ಪಲಿಲ್ಲ ಮಾತ್ರವಲ್ಲ " ನಾವಿಬ್ಬರೂ ಸ್ನೇಹಿತರಾಗೇ ಇರೋಣ, ನಮ್ಮ ನಡುವೆ ಮದುವೆಯ ಬಂಧನ ಬೇಡ" ಎಂದುಬಿಟ್ಟಳು.

ಅಕೆಗಾಗಿ ಹಲವಾರು ದಿನಗಳಿಂದ ಆಸೆಹೊತ್ತ ಚಿಗುರು ಮೀಸೆಯ ಪೋರ ಕುಸಿದು ಕುಳಿತಿದ್ದ. ಇನ್ನು ಉಳಿದಿದ್ದು ಆತನಿಗೆ ಉಪೇಂದ್ರ ಹೇಳಿದ್ದ ಕೊನೇ ಅಸ್ತ್ರ. ತನಗೆ ಧಕ್ಕದ ಆಗದ ಇನ್ಯಾರಿಗೂ ಧಕ್ಕದೇ ಹೋಗಲಿ ಎಂಬ ನಿರ್ಧಾರ! ಹಾಗೆ ನಿರ್ಧರಿಸಿದವನೇ ಆಕೆಯನ್ನು ಮತ್ತೊಂದು ದಿನ ಊರ ಹೊರಗಿನ ನಿಸರ್ಗೋದ್ಯಾನಕ್ಕೆ ಕರೆದ. ಆಕೆ ಒಮ್ಮೆ ಹೀಗೆ ಯೋಚಿಸಿದರೂ ಸ್ನೇಹಿತನೆಂಬ ಭಾವನೆಯಿಂದ ಬಂದುಬಿಟ್ಟಳು. ನಿಸರ್ಗೋದ್ಯಾನದಲ್ಲಿ ನಡೆಯುತ್ತಾ ಇರುವಾಗ ಆತ ತನ್ನ ಜೇಬಿನಿಂದ ಯಾವುದೋ ದ್ರವವೊಂದನ್ನು ಆಕೆಯ ಮುಖಕ್ಕೆ ಎರಚಿಬಿಟ್ಟ. ಆಕೆ ಉರಿಯಿಂದ ಚೀರುತ್ತಿರುವಾಗಲೇ ತನ್ನ ಕಾರನ್ನು ಹತ್ತಿ ಪಾರಾರಿಯಾಗಿ ಹೋದ.

******
ಸಾವು ಬದುಕಿನ ತೂಗುಯ್ಯಾಲೆಯಲ್ಲಿ ಹಲವು ದಿನ ಕಳೆದ ಶಿಲ್ಪಾ ಅಂತೂ ಬದುಕಿ ಬಂದಿದ್ದಳು. ಘಟನೆ ನಡೆದಿದ್ದ ದಿನ ಆಸ್ಪತ್ರೆಯಲ್ಲಿ ಆಕೆ ಕೊಟ್ಟಿದ್ದ ಮಾಹಿತಿಯ ಪ್ರಕಾರ ಆಕೆಯ ಪಾಲಕರು ಆರಕ್ಷಕರಲ್ಲಿ ಅರ್ಜಿ ನೀಡಿದ್ದರು. ಅರ್ಜಿಯನ್ನು ಪಡೆದ ಆರಕ್ಷಕರು ಗೌತಮ್‍ನ ಹುಡುಕಾಟಕ್ಕೆ ತೊಡಗಿದ್ದರು. ಆತನ ಮನೆಗೆ ಬಂದಿಳಿದ ಪೋಲೀಸರನ್ನು ಕಂಡು ಆತನ ತಂದೆ ತಾಯಿಗಳು ಹೌಹಾರಿ ನಿಂತರು. ಅವರಿಗೆ ಯಾವೊಂದೂ ವಿಷಯಗಳು ತಿಳಿದಿರಲಿಲ್ಲ. ಪೋಲೀಸರು ಮಾತ್ರ ಅವರನ್ನು ಠಾಣೆಗೆ ಎಳೆದೊಯ್ದು ವಿಚಾರಿಸಿದ್ದರು. ಬೆಳಿಗ್ಗೆಯೇ ಹೊರಟು ಹೋದ ಆತ ಕಾರನ್ನು ಮಾತ್ರ ಮನೆಯಂಗಳದಲ್ಲಿ ತಂದು ನಿಲ್ಲಿಸಿದ್ದು ಕಾಣಿಸಿತ್ತು. ಆದರೆ ಮನೆಯೊಳಗೆ ಆತ ಬಂದಿರಲಿಲ್ಲ. ಇನ್ನೇನು ಸಂಜೆಯೊಳಗೆ ಎಲ್ಲಿದ್ದರೂ ಬರುತ್ತಾನೆ ಎಂದೇ ತಂದೆ-ತಾಯಿ ತಿಳಿದಿದ್ದರೂ ಆತ ಬರದಿದ್ದಾಗ ಆತನ ಹುಡುಕುವಿಕೆಗೇ ಪೋಲೀಸರಲ್ಲಿ ವಿನಂತಿಸುವ ವಿಚಾರ ಅವರದಾಗಿತ್ತು. ಅವರ ವಿಚಾರಣೆ ಮುಗಿಸಿದ ಪೋಲೀಸರು ಘಟನೆಯ ಬಗ್ಗೆ ತಿಳಿಸಿ ಅವರ ಮಗನ ಎಲ್ಲಾ ಸಂಪರ್ಕಗಳ ಜಾಡನ್ನು ತಿಳಿಸುವಂತೇ ತಾಕೀತು ಮಾಡಿದರು. ತಂದೆ-ತಾಯಿಗಳು ವಿಧಿಯಿಲ್ಲದೇ ತಿಳಿದಷ್ಟನ್ನೂ ಹೇಳಿದರು. ಆದರೆ ಅವರು ಹೇಳಿದ ಪಟ್ಟಿಯಲ್ಲಿ ಬೆಂಗಳೂರಿನ ಜಾಲಹಳ್ಳಿಯ ದೂರದ ಸಂಬಂಧಿಕರ ಹೆಸರು ಇರಲಿಲ್ಲ!

ಘಟನೆಯ ಪೂರ್ವಭಾವಿಯಾಗಿ ಬೆಂಗಳೂರಿಗೆ ಹೊರಡುವ ತಯಾರಿನಡೆಸಿದ್ದ ಗೌತಮ್ ಬಂಧು-ಸ್ನೇಹಿತ ನವೀನ್ ಸಂಪರ್ಕ ಸಾಧಿಸಿದ್ದ. ಮತ್ತು ಸೀದಾ ಹೊರಟು ಅವರ ಮನೆಗೆ ಬಂದಿಳಿದಿದ್ದ. ಸುಮಾರಿಗೆ ಪೋಲೀಸರು ತನ್ನನ್ನು ಹುಡುಕಲು ಸಾಧ್ಯವಿಲ್ಲ, ಆದಷ್ಟು ದಿನ ಹೀಗೇ ತಳ್ಳಿ ಬೇರೆಲ್ಲಿಗಾದರೂ ಹೋಗಿಬಿಡೋಣವೆಂಬ ಮನಸ್ಸು ಆತನದ್ದಿತ್ತು.

ಮಡಿಕೇರಿಯ ಪೋಲೀಸರು ಸಾಕಷ್ಟು ಪರಿಶ್ರಮ ವಹಿಸಿದರು. ಗೌತಮ್‍ನ ಮೊಬೈಲ್ ಕರೆಗಳ ವಿವರಗಳನು ಪಡೆದು ಆತನ ಅಡಗುದಾಣವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಅದರಲ್ಲಿ ಅವರು ಇಂದು ಯಶಸ್ಸು ಕಂಡಿದ್ದರು. ಪ್ರೀತಿಯೇ ದ್ವೇಷವಾಗಿ ಹೊಮ್ಮಿ ಪ್ರೇಯಸಿಯ ಜೀವಕ್ಕೇ ಅಪಾಯವೊಡ್ಡಿದ್ದ ಗೌತಮ್ ತನ್ನ ಒಳ್ಳೆಯತನವನ್ನು ಕಳೆದುಕೊಂಡುಬಿಟ್ಟಿದ್ದ. ಕಂಡವರೆಲ್ಲಾ ಛೀಮಾರಿ ಹಾಕುವಾಗ ಸಹಿಸಲಾಗದಷ್ಟು ನೋವಾಗುತ್ತಿತ್ತು. ಯಾಕಾದರೂ ಹೀಗೆ ಮಾಡಿದೆ ಎಂದು ಆತ ಜೈಲಿನ ಕೋಣೆಯಲ್ಲಿ ಕಣ್ಣೀರ್ಗರೆಯುತ್ತಾ ಕುಳಿತಿದ್ದ. ತನಗೆ ಮರಳಿ ಜೀವನವೇ ಬೇಡ ತಾನು ಸಾಯಬೇಕೆಂದು ಬಯಸುತ್ತಿದ್ದ.

*******

" ಗೌತಮ್.... ಹೇ....ಗೌತಮ್ ಬೆಳಗಾಯ್ತು ಕಣೋ....ಯಾಕೋ ಇನ್ನೂ ಎದ್ದಿಲ್ಲಾ ? " ಅಮ್ಮ ಕೂಗಿ ಕರೆದಾಗ ದುಃ ಸ್ವಪ್ನದಿಂದ ಎಚ್ಚೆತ್ತ ಗೌತಮ್ ನಡೆದದ್ದನ್ನು ನೆನೆಸಿ ಬೆವತು ಹೋದ. ತಲೆಯ ಕೆಳಗಿನ ದಿಂಬು ಒದ್ದೆಯಾಗಿತ್ತು.