ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 17, 2013

ಹಾಳೂರಲ್ಲಿ ಸೂಳೆಯೇ ಮುತ್ತೈದೆ ಎಂದುಕೊಂಡ ಕಾಳಿಸ್ವಾಮಿ ತನ್ನೊಳಗೇ ಮುಸಿಮುಸಿ ನಗುತ್ತಿದ್ದ !

ಚಿತ್ರಋಣ : ಅಂತರ್ಜಾಲ 
ಹಾಳೂರಲ್ಲಿ ಸೂಳೆಯೇ ಮುತ್ತೈದೆ ಎಂದುಕೊಂಡ ಕಾಳಿಸ್ವಾಮಿ ತನ್ನೊಳಗೇ ಮುಸಿಮುಸಿ ನಗುತ್ತಿದ್ದ ! 
[ಕನ್ನಡ ಸಮೂಹ ಮಾಧ್ಯಮದಲ್ಲಿ ಎಡಪಂಥೀಯತೆ ಆರಂಭವಾದ ಬಗೆ: ಈ ಲೇಖನದ ಪ್ರಸ್ತುತಿಯ ಹಿಂದೆ ನನ್ನ ಯಾವುದೇ ವೈಯ್ಯಕ್ತಿಕ  ಹಿತಾಸಕ್ತಿಯಾಗಲೀ, ಲಾಭವಾಗಲೀ, ರಾಗದ್ವೇಷವಾಗಲೀ ಇರುವುದಿಲ್ಲ, ಇದೊಂದು ಸತ್ಯದ ಅವಲೋಕನವಷ್ಟೆ ]

ಸರಿಸುಮಾರು ೧೯೮೦ರ ವರೆಗೂ ಕನ್ನಡದಲ್ಲಿ ಸಮೂಹಮಾಧ್ಯಮಗಳಿಗೊಂದು ಹೆಚ್ಚಿನ ಬೆಲೆಯಿತ್ತು, ಗೌರವವಿತ್ತು. ಮಹಾತ್ಮ ಡಿವಿಜಿಯವರು ತಮ್ಮ ಅವತಾರ ಮುಗಿಸಿ ತೆರಳಿದಮೇಲೆ ಕನ್ನಡದ ವೃತ್ತಪತ್ರಿಕೆಗಳು ಮತ್ತು ಇನ್ನಿತರ ನಿಯತಕಾಲಿಕೆಗಳು ಸಮಾಜ ಮುಖಿಯಾಗಿ ಸಮಾಜದ ಸಾಮಾಜಿಕ, ಧಾರ್ಮಿಕ, ಸಾರ್ವಜನಿಕ, ಸರ್ವತೋಮುಖ ಕುಂದುಕೊರತೆಗಳನ್ನು ಸರಕಾರಕ್ಕೆ-ಸಂಬಂಧಪಟ್ಟವರಿಗೆ ಮನವರಿಕೆಮಾಡಿಕೊಡುವಲ್ಲಿ ಸದಾ ನಿರತವಾಗಿದ್ದವು. ಟಿ.ಎಸ್.ರಾಮಚಂದ್ರರಾಯರು, ಪ.ಸು.ಭಟ್ಟರು, ಖಾದ್ರಿ ಶಾಮಣ್ಣನವರು, ಪಾಟೀಲ ಪುಟ್ಟಪ್ಪನವರು ಹೀಗೇ ಇಂತಹ ಮೌಲ್ಯಾಧಾರಿತ ಬದುಕನ್ನು ನಡೆಸುವ ಜನ ಸಂಪಾದಕರಾಗಿದ್ದರು. ಎಲ್ಲೂ ಯಾರಿಗೂ ನಾ ಮುಂದೆ ತಾ ಮುಂದೆ ಎಂಬ ಅನಾರೋಗ್ಯಕರ ಪೈಪೋಟಿಯಾಗಲೀ ಅವಕಾಶವಾದೀ ರಾಜಕಾರಣದ ತಂತ್ರವಾಗಲೀ ಇರಲಿಲ್ಲ. ರಾಜಕಾರಣಿಗಳಿಗೂ ಪತ್ರಿಕಾ ಸಂಪಾದಕರುಗಳಮೇಲೆ ಭಯ-ಭಕ್ತಿ ಇತ್ತು ಎಂತಲೇ ಹೇಳಬಹುದು. ಮುದ್ರಣ ತಂತ್ರಜ್ಞಾನ ಅಷ್ಟಾಗಿ ಪಸಂದಾಗಿರದಿದ್ದರೂ, ಗಣಕಯಂತ್ರಗಳ ಸಹಾಯ ಸಿಗದಿದ್ದರೂ, ಪತ್ರಿಕೆಗಳಲ್ಲಿ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಅಚ್ಚುಮಾಡುವುದು ತಪ್ಪದೇ ನಡೆಯುತ್ತಿದ್ದುದರ ಜೊತೆಗೆ ಪತ್ರಿಕೆ ಎಂಬುದು ಹೇಗಿರಬೇಕು ಎಂದು ಸಂಪಾದಕರಿಗೆ ಗೊತ್ತಿತ್ತು. ಮುಖಪುಟದ ತುಂಬಾ ಜಾಹೀರಾತು ಅಥವಾ ಕನಿಷ್ಠ ಉಡುಪು ಧರಿಸಿದ ಹೆಣ್ಣಿನ ಜಾಹೀರಾತು ಇವೆರಡನ್ನೂ ಪ್ರಕಟಿಸಿದ್ದನ್ನು ನಾನು ನೋಡಲೇ ಇಲ್ಲ! ಕೆಟ್ಟ ಯೋಚನೆಗೆ ಈಡುಮಾಡುವ, ಕೆಟ್ಟ ಚಿಂತನೆಗಳನ್ನೇ ಬಡಿಸುವ ಯಾವೊಂದೂ ಪತ್ರಿಕೆ ಕಾಣುತ್ತಿರಲಿಲ್ಲ.

ಇಂಥಾ ಸಮಯದಲ್ಲಿ ಲಂಕೇಶ್ ಪತ್ರಿಕೆಯ ಜನನವಾಯ್ತು! ತನ್ನದೇ ಹೆಸರನ್ನು ಪತ್ರಿಕೆಗೂ ಇಟ್ಟು, ವಾರಪತ್ರಿಕೆಯ ರೂಪದಲ್ಲಿ ಪ್ರಕಟಿಸುತ್ತಿದ್ದ ಪಿ. ಲಂಕೇಶರನ್ನು ಕನ್ನಡ  ಸಮೂಹ ಮಾಧ್ಯಮದ ’ಎಡಪಂಥೀಯ ಪಿತಾಮಹ’ ಎನ್ನಬೇಕು. ಬ್ರಹ್ಮದ್ವೇಷಿಯಾಗಿದ್ದ ಲಂಕೇಶರು ಜಾಹೀರಾತುಗಳಿಲ್ಲದ ಪತ್ರಿಕೆ ಎಂದು ತಮ್ಮ ಪತ್ರಿಕೆಯನ್ನು ತಾವೇ ಬಣ್ಣಿಸಿಕೊಂಡರು. ಅನೇಕ ಹೊಸ ಹೊಸ ಬರಹಗಾರರು ಅವರ ಎಡಪಂಥೀಯ ಪತ್ರಿಕೆಯಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಪತ್ರಿಕೆಯ ಉಳಿವಿಗಾಗಿ ಕೆಲವು ಬಲಪಂಥೀಯರನ್ನೂ ಸೇರಿಸಿಕೊಳ್ಳಲಾಗಿತ್ತು. ಆ ಪೈಕಿ ರವೀಂದ್ರ ರೇಷ್ಮೆ, ಆರೂರು ಲಕ್ಷ್ಮಣ ಶೇಟ್, ಮಹಾಬಲಮೂರ್ತಿ ಕೊಡ್ಲೆಕೆರೆ, ಶಶಿಧರ ಭಟ್ ಇಂಥವರೂ ಇದ್ದರು. ತನ್ನ ನಿರರ್ಗಳ ಬರಹ ಶೈಲಿಯಿಂದ ತನ್ನ  ಪತ್ರಿಕೆಯ ಬಳಗದ ಎಲ್ಲರಿಗೂ ಗುರುವೆನಿಸಿದ್ದ ಲಂಕೇಶರನ್ನು ಎಲ್ಲರೂ ಮೇಷ್ಟ್ರೆ ಎಂತಲೇ ಕರೆಯುತ್ತಿದ್ದರೂ    ಲಂಕೇಶರ ಅವಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲಿಲ್ಲ. ರೋಲ್ ಕಾಲ್ ಮಾಡುವಂತೇ ಆದೇಶ ಬಂದರೂ ನಯವಾಗಿ ತಪ್ಪಿಸಿಕೊಂಡವರೇ ಅನೇಕರು. ಆದರೂ ರೋಲ್ ಕಾಲಿಗೆ ಅಂತಲೇ ಕೆಲವು ಜನರಿದ್ದರು-ಅವರು ಅದೇ ಕೆಲಸವನ್ನು ಮಾಡುತ್ತಿದ್ದರು, ಹೀಗಾಗಿ ಜಾಹೀರಾತು ಇಲ್ಲದೆಯೂ ಪತ್ರಿಕೆ ನಡೆಯುತ್ತಿತ್ತು!! ಆಯಕಟ್ಟಿನ ನೆಲೆಗಳನ್ನು ಗುರುತಿಸಿ, ಅಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಿ ಅವರಿಗೆ ’ನಿಮ್ಮ ಬಗ್ಗೆ ಹೀಗೇ ಬರೆಯುತ್ತೇವೆ’ ಎಂಬ ಸುದ್ದಿ ತಲುಪಿಸಿ ಬುಲಾವ್ ಕೊಡಲಾಗುತ್ತಿತ್ತು. ಕೇಳಿದಷ್ಟು ಕೊಟ್ಟರೆ ಲೇಖನ ಪ್ರಕಟಗೊಳ್ಳುತ್ತಿರಲಿಲ್ಲ, ಇಲ್ಲದೇ ಇದ್ದರೆ ವ್ಯಕ್ತಿಯ ವಿರುದ್ಧ ಲೇಖನ ಪ್ರಕಟಗೊಂಡು ವ್ಯಕ್ತಿಯ ಚಾರಿತ್ರ್ಯ ಹನನ ಆಗುತ್ತಿತ್ತು. ಮರ್ಯಾದೆ ಎಂಬ ಪದಕ್ಕೆ ಬಹಳ ಮೌಲ್ಯವಿದ್ದ ಕಾಲ ಅದಾಗಿದ್ದುದರಿಂದ ಜನ ಸಾಮಾಜಿಕ ನೆಲೆಯಲ್ಲಿ ಯಾವೊಂದೂ ಅಪಸ್ವರ ತಮ್ಮ ಬಗ್ಗೆ ಬಾರದಂತೇ ಬದುಕಲು ಪ್ರಯತ್ನಿಸುತ್ತಿದ್ದರು. ಮನೆಮನೆಯ ರಾಜಕೀಯ ಇರದ ಕಾರಣ ಹಳ್ಳಿಗಳ ಜನರು ತಮ್ಮ ಸಹಜ ಪ್ರೀತಿ-ವಿಶ್ವಾಸಗಳಲ್ಲಿ ಜೀವನ ನಡೆಸಿದ್ದರು. ಆಗಲೇ ಕನ್ನಡ ಜನತೆಗೆ ಹೊಸದೇನನ್ನೋ ಕೊಡುತ್ತೇನೆ ಎಂದು ಹೊರಟ ಲಂಕೇಶರ ಪತ್ರಿಕೆ, ಎಡಪಂಥೀಯ ಧೋರಣೆಗಳನ್ನು ಮುಂದಿಟ್ಟು, ಆಧಾರವೇ ಇಲ್ಲದ ಘಟನೆಗಳನ್ನು ಹೆಣೆದು ಸಾವಿರಾರು ಲೇಖನಗಳನ್ನು ಪ್ರಕಟಿಸಿತು. 

ಲಂಕೇಶರ ಗರಡಿಯಲ್ಲಿ ಅದೇ ಜಾಡಿನಲ್ಲಿ ಪಳಗಿದ ಕೆಲವು ಜನ ಇನ್ನೂ ಇದ್ದಾರೆ. ಆ ಪೈಕಿ ರವಿ ಬೆಳಗೆರೆಯೂ ಒಬ್ಬ. ರವಿಬೆಳಗೆರೆಯ ’ಹಾಯ್ ಬೆಂಗಳೂರ್’ ಬಗ್ಗೆ ಜನರಿಗೆ ಹೊಸದಾಗಿ ಪರಿಚಯಿಸಬೇಕಾದ ಆಗತ್ಯತೆ ಇಲ್ಲವೇ ಇಲ್ಲ! ಸುಲಭವಾಗಿ ಹಣಮಾಡುವುದಕ್ಕೆ ಏನುಬೇಕೋ ಅಷ್ಟನ್ನೂ ಮೈಗೂಡಿಸಿಕೊಂಡ ವ್ಯಕ್ತಿ ರವಿ ಬೆಳಗೆರೆ; ಲಂಕೇಶರ ಸರ್ವ ಲಕ್ಷಣಗಳ ಜೊತೆಗೆ ಬೀಚಿ ಮೊದಲಾದ ಸಾಹಿತಿಗಳ ಕೆಲವು ಅಡ್ಡಚಾಳಿಗಳನ್ನು ಅಂಟಿಸಿಕೊಂಡು ನವರಂಧ್ರಗಳಲ್ಲೂ ಸತತ ಕಿಲೋಮೀಟರುಗಳತನಕ ನಾರುವ ನಿತ್ಯನಾರಕಿ; ಅದು ರಕ್ತಗತವಾಗೇ ಬಂದಿದೆ ಎಂಬುದು ಕೆಲವರ ಅಭಿಮತ. ತಮ್ಮ ಕೆಟ್ಟ ಬರಹಗಳಿಂದ ಸಮಾಜದಲ್ಲಿ ತಮ್ಮದೇ ಆದ ಓದುಗವರ್ಗವನ್ನು ಪಡೆದುಕೊಂಡ ಇಂಥಾ ಜನ ಸಮಾಜದ ಒಂದು ಭಾಗ ಕೆಟ್ಟದ್ದನ್ನೇ ಒಳ್ಳೆಯದೆಂದು ಅನುಭವಿಸುವಂತೇ ತರಬೇತಿ ನೀಡಿಬಿಟ್ಟರು. ಹಸಿರು ಹುಲ್ಲುಗಾವಲನ್ನು ಕಂಡ ಹಸಿದ ಪಶುವಿನಂತೇ, ಜಿಂಕೆ-ಚಿಗರೆ-ಕಡವೆ-ಕಾಡೆಮ್ಮೆಗಳನ್ನು ಕಂಡ ಹಸಿದ ಹೆಬ್ಬುಲಿಯಂತೇ ವಾರಕ್ಕೊಮ್ಮೆ ಇಂಥಾ ಕೆಟ್ಟ ಪತ್ರಿಕೆಗಳು-ಪೀತ ಪತ್ರಿಕೆಗಳು ಬರುವುದನ್ನೇ ಕಾಯುತ್ತಾ ಕೂರುವ ಜನ ತಯಾರಾಗಿಬಿಟ್ಟರು!  ನೀಲಿಚಿತ್ರಗಳನ್ನು ಕದ್ದು ನೋಡುವ ಅಷ್ಟೂ ಮಂದಿ ಇಂಥಾ ಪತ್ರಿಕೆಗಳಿಗೆ ಏಜೆಂಟರಾಗಿ, ಬಾಬು ಸಿಂಗ ಠಾಕೂರರ ತಾಜಾ ತಾಜಾ ಧಾರವಾಡ ಪೇಡಾ ಹಂಚಿದಹಾಗೇ ಹಂಚಲಿಕ್ಕೆ ಸುರುವಿಟ್ಟುಕೊಂಡುಬಿಟ್ಟರು. || ಸಮಾನ ಶೀಲೇಷು ವ್ಯಸನೇಷು ಸಖ್ಯಂ || ಎನ್ನೋ ಹಾಗೇ ಇಂಥಾ ಪೀತಪತ್ರಿಕೆಗಳಲ್ಲಿ ರಾಜಾರೋಷವಾಗಿ ಪ್ರಕಟಗೊಳ್ಳುತ್ತಿದ್ದ ರಾಸಲೀಲೆಯ ಕಥೆಗಳನ್ನು ’ಆ ವರ್ಗ’ದ ಜನ ಸದಾ ಓದಿ ಪುಳಕಗೊಳ್ಳತೊಡಗಿದರು. ಇಲ್ಲದ ರಾಸಲೀಲೆಯ ಕಥೆಗಳನ್ನು ಹೆಣೆದು ಹೇಳುವುದರಲ್ಲಿ ಪೀತಪತ್ರಿಕೆಗಳ ಸಂಪಾದಕರುಗಳು ಸಿದ್ಧಹಸ್ತರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲವಲ್ಲ! ಪಡ್ಡೆಗಳಿಗೆ ಇಂಥಾದ್ದೊಂದು ಪತ್ರಿಕೆ ಸಿಕ್ಕರೆ ವಾರಕ್ಕಾಗುವಷ್ಟು ರಸಗವಳ ಸಿಕ್ಕಂತಾಗುತ್ತಿತ್ತು.    

ಮೇಷ್ಟ್ರು ಮಹಾನ್ ರಸಿಕ ಶಿಖಾಮಣಿಗಳಾಗಿದ್ದರು. ಎಣ್ಣೆಹಾಕದೇ ಇದ್ದ ದಿನವೇ ಇಲ್ಲ; ಕೆಲವೊಮ್ಮೆ ಎರಡೆರಡು ಗಂಟೆಗೊಮ್ಮೆ ’ಗುಂಡಿನ ಸದ್ದು’ ಕೇಳಲೇಬೇಕಿತ್ತು. ವಾರದ ಅಖೈರಿಗೆ ಮೂಡಿಗೆರೆ ಕಡೆಗೂ ಸವಾರಿ ಆಗಾಗ ಚಿತ್ತೈಸುತ್ತಿತ್ತು; ತೇಜಸ್ವಿ ಇದ್ದರಲ್ಲಾ ಹಾಗಾಗಿ! ತೇಜಸ್ವಿಯವರಿಗೂ ಮೇಷ್ಟ್ರಿಗೂ ಬಹಳ ನಿಕಟ ಸಂಪರ್ಕವಿತ್ತಂತೆ! ಯಾರನ್ನೂ ತನ್ನ ಸ್ಕೂಟರಿನಲ್ಲಿ ಕೂರಿಸಿಕೊಳ್ಳದ ತೇಜಸ್ವಿಗಳಿಗೆ ಈ ಮೇಷ್ಟ್ರು ಬರುತ್ತಾರೆ ಎಂದರೆ ಸಾಕು-ಪರಮಖುಷಿ, ಅಲ್ಲಿ ನಾಲ್ಕುಚಕ್ರದ ವಾಹನವೇ ಕರೆದೊಯ್ಯಲು ಸಿದ್ಧವಾಗಿರುತ್ತಿತ್ತು ಎಂದು ಮೂಡಿಗೆರೆಯ ಜನ ಹೇಳುತ್ತಾರೆ. ಆಮೇಲೆ ಬಿಡಿ, ತೇಜಸ್ವಿಗಳು ’ಎಲ್ಲಾ ವ್ಯವಸ್ಥೆಯನ್ನೂ’ ಮಾಡುತ್ತಿದ್ದರಂತೆ! ಅಲ್ಲಿ ನಡೆಯುತ್ತಿದ್ದ ರಂಗಿನಾಟಗಳಿಗೆ ಅಕ್ಷರರೂಪ ಕೊಡುವ ಎದೆಗಾರಿಕೆ ಯಾರಿಗೂ ಇರಲಿಲ್ಲವೆಂದಲ್ಲ; ಸಭ್ಯ-ಸುಸಂಕೃತ ಪತ್ರಿಕಾಕರ್ತರಿಗೆ ಅದು ಬೇಕಾಗಿರಲಿಲ್ಲ. ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ತೀರಾ ಬ್ಯೂಸಿ ಇದ್ದರೆ ತಿಂಗಳಿಗೊಮ್ಮೆಯಾದರೂ ಸರ್ವಾಂಗ ಸೇವೆಗಳೂ ನಡೆಯಲೇ ಬೇಕಿತ್ತು ಎಂಬುದು ಅಲ್ಲಿನ ಜನರ ಅಂಬೋಣ. ಜೋಡಿ ಬಹಳ ಹೇಳಿಮಾಡಿಸಿದ ಹಾಗಿತ್ತು ನೋಡಿ, ಸೇವೆಗಳೆಲ್ಲಾ ತೀರಿದಮೇಲೆ, ಡಬಲ್ ಬ್ಯಾರಲ್ ಗನ್ನು ತೆಗೆದುಕೊಂಡು ಕಾಡಿನಲ್ಲಿ ಹೊರಟು ಕಣ್ಣಿಗೆ ಬಿದ್ದ ಮೃಗಗಳನ್ನು ಬೇಟೆಯಾಡುವಾಗ ಎಡಪಂಥೀಯ ವಿಚಾರ ಲಹರಿಗಳು ಸಾಂಗೋಪಾಂಗವಾಗಿ ವಿನಿಮಯಗೊಳ್ಳುತ್ತಿದ್ದವಂತೆ. ಮನಸ್ಸೆಂಬ ಗನ್ನಿಗೆ ಈಡು ತುಂಬಿಸಿಕೊಂಡು ಬರುತ್ತಿದ್ದ ಮೇಷ್ಟ್ರು ಪತ್ರಿಕೆಯಲ್ಲಿ ಆ ವಾರ ಅದನ್ನೇ ಆಹಾರವಾಗಿ ಹಸಿದ ತನ್ನ ಓದುಗ ಬಳಗಕ್ಕೆ ನೀಡುತ್ತಿದ್ದರು! ಹೀಗೇ ಅದು ಮುಗಿಯದ ಕಥೆ. ಕಥೆಗೊಂದು ಕಥೆ, ಕಥೆಗೊಂದು ಕಥೆ ಬೆಳೆಯುತ್ತಲೇ ಇತ್ತು. ಅದೇ ಕಾರಣದಿಂದ ತೇಜಸ್ವಿಯವರು ಮೇಷ್ಟ್ರ ಪತ್ರಿಕೆಯ ಅವಿಭಾಜ್ಯ ಅಂಗವಾಗಿಬಿಟ್ಟಿದ್ದರು.   

ಇತ್ತೀಚೆಗೆ, ವರ್ಷದ ಕೆಳಗೆ ಕನ್ನಡಪ್ರಭದಲ್ಲಿ, ಕೊಡ್ಲಕೆರೆ ಮಹಾಬಲಮೂರ್ತಿಗಳು, ’ಮುಸ್ಸಂಜೆಯ ಕಥಾಪ್ರಸಂಗ’ ಎಂಬ ’ಪುಣ್ಯ ಕಥಾನಕ’ವನ್ನು ಬರೆದ ಅವರ ಮೇಷ್ಟ್ರ ಬಗ್ಗೆ, ಪುಂಖಾನುಪುಂಕವಾಗಿ ’ಅವರು ಬಹಳ ದೊಡ್ಡ ವ್ಯಕ್ತಿ’ ಎಂಬಂತೇ ಅಲವತ್ತುಕೊಳ್ಳುತ್ತಾ, ರಾಮಾಯಣ ಬರೆದ ಪುಣ್ಯವಿಶೇಷಫಲ ತನಗೆ ಲಭಿಸಬಹುದು ಎಂಬ ರೀತಿಯಲ್ಲಿ  ಸೀರಿಯಲ್ಲು ಆರಂಭಿಸಿಕೊಂಡಿದ್ದರು, ಅದಕ್ಕೆ ನಾನು ತಗಾದೆ ತೆಗೆದಿದ್ದೆ, ಆಮೇಲೆ ಕೆಲವೇ ವಾರಗಳಲ್ಲಿ ಅದು ನಿಂತುಹೋಯ್ತಪ್ಪ! ಯಾಕೆ ಎಂಬುದು ಗೊತ್ತಾಗಲಿಲ್ಲ. ಮೇಷ್ಟ್ರ ಪತ್ರಿಕೆಯ ಮೇರು ದಿನಗಳಲ್ಲಿ ಈಗ ಇನ್ನೊಂದು ಪೀತ ಪತ್ರಿಕೆಯನ್ನು ನಡೆಸುವ ಅಗ್ನಿ ಶ್ರೀಧರ ’ಆ ದಿನಗಳ’ಲ್ಲಿದ್ದ! ನಂತರ ಅದೇನೋ ಇನ್ನು ಕೈಲಾಗದು ಎನಿಸಿತೋ ಏನೋ ತಾನು ಇನ್ನುಮುಂದೆ ಯುದ್ಧಮಾಡುವುದಿಲ್ಲ ಎಂದು ಕುಳಿತ ಅರ್ಜುನನ ಹಾಗೇ ಕುಳಿತುಬಿಟ್ಟ. ಅಲ್ಲಿ ಯಾವ ಕೃಷ್ಣನೂ ಧರ್ಮಬೋಧನೆ ಮಾಡಲು ಸಿಗದ ಕಾರಣ, ಬೇಡನಾಗಿದ್ದಾತ ವಾಲ್ಮೀಕಿಯಾದೆ ಎಂಬಂತೇ ಬಿಂಬಿಸಿಕೊಳ್ಳುತ್ತಾ ತನ್ನದೇ ಪತ್ರಿಕೆಯೊಂದನ್ನು ಹೊರತಂದ. ಈಗ ಆತ ಮಾಡುತ್ತಿರುವುದೂ ಕೂಡ ಅದೇ ಎಡಪಂಥೀಯ ಸಮಾಜಘಾತುಕ ಕೆಲಸ. ಎಡಪಂಥೀಯರೆಲ್ಲಾ ಒಟ್ಟಿಗೇ ಮೆರವಣಿಗೆ ಹೊರಟಿದ್ದನ್ನು ನೋಡಬೇಕೆಂದರೆ ನೀವು ಶ್ರೀಧರನ ಅಗ್ನಿಯನ್ನು ಓದಬೇಕು. ಅಗ್ನಿ ಎಂಬುದು ಪವಿತ್ರವಾದ ಹೆಸರು, ಅದನ್ನು ಯಾಕೆ ಇಡಬೇಕಿತ್ತು ಎಂದು ನನ್ನಲ್ಲಿ ಎಷ್ಟೋ ಜನ ಕೇಳಿದರು; ಅದು ಉರಿದು ಭಸ್ಮವಾಗುತ್ತದೇನೋ ಅದಕ್ಕೇ ಆ ಹೆಸರನ್ನೇ ಇಟ್ಟಿದ್ದಾನೆ ಎಂದಿದ್ದೇನೆ.

ಈಗ ಇಂತಹ ಅನೇಕ ಪತ್ರಿಕೆಗಳು ಬಂದಿವೆ ಬಿಡಿ; ಕೆಲವು ಓಡುತ್ತಿವೆ, ಕೆಲವು ನಡೆಯುತ್ತಿವೆ, ಕೆಲವು ಕುಂಟುತ್ತಿವೆ, ಇನ್ನು ಕೆಲವು ಮಕಾಡೆ ಮಲಗಿಬಿಟ್ಟಿವೆ, ಕೆಲವದರ ಬೋರ್ರ್ಡನ್ನೂ ತೆಗೆಯಲು ವಾರಸುದಾರರಿಲ್ಲದೇ ಅವರ ಕಚೇರಿಗಳ ಕಟ್ಟಡದ ಮಾಲೀಕರ್ಯಾರೋ ಕಿತ್ತುಹಾಕಿದ್ದಾರೆ! ಮೇಷ್ಟ್ರು ಸತ್ತುಹೋದಮೇಲೆ ಅಲ್ಲಿದ್ದ ಕೆಲವರು ತಮಗೆ "ಮುಂದೆ ಅನ್ನ?" ಎಂದು ಹುಡುಕಿದರು. ಸಂಯುಕ್ತ ಕರ್ನಾಟಕದಿಂದ ಆಗತಾನೇ ಹೊರಬಂದು, ಹಾಯ್ ಬೆಂಗಳೂರ್ ಆರಂಭಿಸಿ ಮುಗ್ಗರಿಸುತ್ತಿದ್ದ ರವಿ, ಕೆಲವರಿಗೆ ಜಾಬು ಕೊಟ್ಟ. ಇನ್ನೂ ಕೆಲವರು ಬೇರೇ ಬೇರೇ ಪತ್ರಿಕೆಗಳಲ್ಲಿ ನೆಲೆ ಕಂಡುಕೊಂಡರು. ಮೇಷ್ಟ್ರು ತಲೆಮೇಲೆ ಕೈಯ್ಯಿಟ್ಟು  ಶಕ್ತೀಪಾತ ಯೋಗದಿಂದ ಹರಸಿದಂತೇ ತಯಾರಾಗಿದ್ದ ರವಿಗೆ ರೋಲ್ ಕಾಲ್ ಮಾಡಿಸುವುದು ಬಹಳ ಕಷ್ಟದ ಕೆಲಸವೇನೂ ಆಗಲಿಲ್ಲ. ಜೊತೆಗೆ ಅದೂ ಇದೂ ಹಾಳೂ ಮೂಳೂ ಸೇರಿಸಿ ಗಂಟುಕಟ್ಟಿ ಪುಸ್ತಕ ಅಂತ ಮಾಡಿ ಅದನ್ನು ಮಾರಾಟಮಾಡಿ ಹಣಮಾಡುವ ಕಲೆ ಇತ್ತಲ್ಲಾ, ಆ ಪುಸ್ತಕಗಳನ್ನು ಕೊಂಡ ಜನ ದಿಂಬಿನಕೆಳಗೇ ಅಂಥದ್ದನ್ನು ಇಟ್ಟುಕೊಂಡು, ಎಲ್ಲರ ಕಣ್ಣುತಪ್ಪಿಸಿ ಆಗಾಗ ಓದುವಂತೇ ಅದರಲ್ಲಿ ಕಾಮದ ಬೀಜಗಳನ್ನು ತುಂಬಿಸುತ್ತಿದ್ದ! ಸ್ವತಃ ತನ್ನ ಅನುಭವದ ವಿಷಯವಾದುದರಿಂದ ಕಾಮದಾಟ ಮತ್ತು ಕಾಮಕೂಟಗಳ ಬಗ್ಗೆ ಮತ್ತಷ್ಟು ಬಣ್ಣಹಚ್ಚಿ ಬರೆಯುವುದು ರವಿಗೆ ಶ್ರಮದ ಕೆಲಸವೇನೂ ಆಗಿರಲಿಲ್ಲ. ಇಂತಹ ೪೦-೫೦ ಪುಸ್ತಕಗಳನ್ನು ಬರೆದು ಅದನ್ನೇ ಜನಗಳಿಗೆ ಓದಿಸಿದ್ದಾನೆಂದರೆ ಸಮಾಜ ಯಾವ ಮಟ್ಟಕ್ಕೆ ಆ ಗುಣವನ್ನು ತನ್ನಲ್ಲಿ ಪ್ರಚೋದನೆಗೊಳಪಡಿಸಿಕೊಂಡಿದೆ ಎಂಬುದು ತಿಳಿಯುತ್ತದೆ. ಉತ್ತಮ ಕವಿ-ಸಾಹಿತಿಗಳ ಪುಸ್ತಕಗಳು ೧೦೦೦-೨೦೦೦[1000-2000] ಪ್ರತಿಗಳು ಖರ್ಚಾಗದಿದ್ದರೂ ಸಹ, ’ಕಾಮರಾಜಮಾರ್ಗ’ ದಂಥಾ ಕಾಮೋದ್ದೀಪಕ ಪುಸ್ತಕಗಳು ಇಪ್ಪತ್ತು ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆಯಂತೆ. ಜೊತೆಗೆ ತನ್ನದೇ ಪತ್ರಿಕೆಯಲ್ಲಿ ತನ್ನ ಪುಸ್ತಕಗಳ ಬಗ್ಗೆ, ತನ್ನ ವಸಾಹತುಗಳ ಬಗ್ಗೆ ತೀರಾ ಅತಿಯಾಗಿ, ಅಸಹ್ಯಕರವಾಗಿ ಕೊಚ್ಚಿಕೊಳ್ಳುವ ಈತ, ಕುಡಿದವರು ಕುಡಿದದ್ದು ಗೊತ್ತಾಗದ ಹಾಗೇ ಜರ್ದಾಬೀಡಾ ತಿಂದು ’ಯಾರಿಗೂ ಗೊತ್ತಾಗಿಲ್ಲ’ ಎಂದುಕೊಳ್ಳುವಂತೇ, ತನ್ನ ವೈಯಕ್ತಿ’ಕಥೆ’ಯ ಬಗ್ಗೆ ಏನೂ ಗೊತ್ತಿಲ್ಲವೆಂಬಂತೇ ಇದ್ದುಬಿಟ್ಟಿದ್ದಾನೆ! ಸಾವಿರಾರು ಜನ ತಮ್ಮ ಕುಟುಂಬಗಳನ್ನು ಒಡೆದುಕೊಂಡ ಘಟನೆಗಳ ಹಿಂದೆ ಇಂಥಾ ಪೀತ ಪತ್ರಿಕೆಗಳವರ ಕೈವಾಡ ಇರುತ್ತದೆ ಎಂಬುದನ್ನು ಪ್ರಜ್ಞಾವಂತ ಸಮಾಜ ಗಮನಿಸಬೇಕು.              

ವಿಪರ್ಯಾಸವೆಂದರೆ ಇಂತಹ ಎಡಪಂಥೀಯ ಮತ್ತು ಪೀತಪತ್ರಿಕೆಗಳ ತೆವಲುಗಳ ಅವಲಕ್ಷಣ ಆಗಾಗ ಕೆಲವು ದಿನಪತ್ರಿಕೆಗಳಿಗೂ ಹಬ್ಬುತ್ತಿದೆ, ಸುದ್ದಿ ವಾಹಿನಿಗಳಲ್ಲಂತೂ ಅಂಥಾದ್ದೇ ಭರಾಟೆ. ಹಡಾಲೆದ್ದ ಮಾಧ್ಯಮಗಳ ಟಿ.ಆರ್.ಪಿ ಗಿಟ್ಟಿಸುವ ವೇಗದಲ್ಲಿ ಯಾವುದು ಸತ್ಯ ಯಾವುದು ಅಸತ್ಯ  ಎಂಬುದನ್ನೂ ಅರಿಯದೇ, ಕೇವಲ ’ಬ್ರೇಕಿಂಗ್ ನ್ಯೂಸ್’, ’ಎಕ್ಸ್ ಕ್ಲೂಸಿವ್’ ಎಂದು ತೋರಿಸಿಕೊಳ್ಳುತ್ತಾ ಬೇಡದ ಅನೇಕ ವಿಷಯಗಳನ್ನು ವೀಕ್ಷಕರಿಗೆ ಬಡಿಸುವುದು ಮಾಧ್ಯಮಗಳ ಅಧಃಪತನವನ್ನು ತೋರಿಸುತ್ತದೆ. ಚಡ್ಡಿ ಹರುಕರ ಕಥೆಗಳಿಗೆ ಮತ್ತಷ್ಟು ಸುಣ್ಣ-ಬಣ್ಣ ಬಳಿದು ರಂಗುರಂಗಾಗಿಸಿ ತೋರಿಸುವ ಮಾಧ್ಯಮ ವಾಹಿನಿಗಳಿಗೆ ಸಮಾಜದ ಜನರಲ್ಲಿ ಯಾವ ಭಾವನೆ ಮೂಡಬಹುದು ಎಂಬುದರ ಬಗ್ಗೆ ಕಿಂಚಿತ್ತೂ ಯೋಚನೆಯಿಲ್ಲ. ಇದೂ ಅಲ್ಲದೇ ಸುದ್ದಿ ವಾಹಿನಿಗಳೂ ರೋಲ್ ಕಾಲ್ ಹಂತಕ್ಕೆ ತಲುಪಿವೆ ಎಂಬುದನ್ನು ನಂಬಬೇಕಾಗುವ ಸನ್ನಿವೇಶ ಬಂದುಬಿಟ್ಟಿದೆ. ’ಕಾಸು ಕೊಟ್ಟರೆ ಏನನ್ನೇ ಬೇಕಾದರೂ ತೋರಿಸ್ತೇವೆ’ ಎಂದು ಬೋರ್ಡನ್ನು ಅಧಿಕೃತವಾಗಿ ಇನ್ನೂ ಹಾಕಿಕೊಳ್ಳದೇ ಇದ್ದರೂ ಒಳಗೊಳಗೇ ನಡೆಯುತ್ತಿರುವ ಕಾಂಚಾಣ ಮಹಾತ್ಮೆಯ ಝಣತ್ಕಾರ ಹೊರಗಿನ ಗೇಟು ದಾಟಿ ರಸ್ತೆಗಳಲ್ಲಿ ಹೋಗುತ್ತಿರುವವರಿಗೂ ಕೇಳಿಸುತ್ತಿದೆ. ’ಹಣಕ್ಕಾಗಿ ಸುದ್ದಿಸಮಯ ಮಾರಾಟಕ್ಕಿದೆ’ ಎಂಬ ಲಘುನಗೆ ಲಹರಿಯನ್ನು ಫೇಸ್ ಬುಕ್ ನಂತಹ ಸಾಮಾಜಿಕ ಸಂಪರ್ಕತಾಣಗಳಲ್ಲಿ ಅನೇಕರು ಹರಿಬಿಟ್ಟಿದ್ದಾರೆ. ’ಮುಂಡೆ ಮದುವೆಯಲ್ಲಿ ಉಂಡವನೇ ಜಾಣ’ ಎಂಬ ಗಾದೆಯಂತೇ ಸಾರ್ವಜನಿಕ ಸ್ವತ್ತನ್ನು ಕಬಳಿಸುವ ಭ್ರಷ್ಟರಾಜಕಾರಣಿಗಳ ’ರಾಜ್ಯಭಾರ’ದಲ್ಲಿ ಸಿಕ್ಕಲ್ಲೆಲ್ಲಾ ಕೈಯ್ಯಾಡಿಸಿ ತಾವೂ ಒಂದಷ್ಟು ಕೋಟಿಗಳಲ್ಲಿ ಬಾಚಿಕೊಳ್ಳೋಣ ಎಂಬ ಇರಾದೆ ಅನೇಕ ಮಾಧ್ಯಮ ಪ್ರಮುಖರದು!

ಹೇಳುವವರಾಗಲೀ ಕೇಳುವವರಾಗಲೀ ಇಲ್ಲದಂತೇ ಆಗಿರುವ ಪ್ರಜಾ-ಅತಂತ್ರದಲ್ಲಿ ಸುದ್ದಿವಾಹಿನಿಗಳನ್ನು ರಾಜಕಾರಣಿಗಳೇ ನಡೆಸುತ್ತಿದ್ದಾರೆ. ಅಲ್ಲಿ ಅವರಿಗೆ ಬೇಕಾದ ಸುದ್ದಿಗಳು ಬಿತ್ತರಗೊಳ್ಳುತ್ತವೆ! ಚುನಾವಣೆ ಬಂದಾಗ ಪ್ರಚಾರಕ್ಕೂ ಬಹಳ ಅನುಕೂಲವಾಯ್ತಲ್ಲಾ? ಹೀಗಾಗಿ ಒಬ್ಬ ಮಾಡಿದ ಅಂತ ಇನ್ನೊಬ್ಬ ಮಾಡಲು ಹೋಗಿ ಇಂದು ಒಂದೆರಡು ವಾಹಿನಿಗಳನ್ನು ಬಿಟ್ಟರೆ ಮಿಕ್ಕವು ರಾಜಕಾರಣಿಗಳೇ ಖುದ್ದಾಗಿ ಮಾಲೀಕತ್ವ ವಹಿಸಿರುವ ವಾಹಿನಿಗಳಾಗಿವೆ. ಆಳರಸರಿಗೆ, ಪ್ರಜಾಪ್ರತಿನಿಧಿಗಳಿಗೆ ಪ್ರಜೆಗಳ ಅಹವಾಲನ್ನು ತಪುಪಿಸಬೇಕಾದ ಸಮೂಹ ಮಾಧ್ಯಮಗಳೇ ಪ್ರಜಾಪ್ರತಿನಿಧಿಗಳ/ರಾಜಕಾರಣಿಗಳ ಕೈಯ್ಯಲ್ಲಿ ಸಿಕ್ಕರೆ ಅದರ ಬಗ್ಗೆ ಬೇರಿನ್ನೇನು ಹೇಳಲು ಉಳಿದೀತು? ತೀರಾ ಇತ್ತೀಚೆಗೆ ಸೋಮಣ್ಣ-ರೇಣುಕ ಎಂಬ ಮಂತ್ರಿಗಳಿಬ್ಬರು ಹೊಡೆದಾಡಿದರು ಎಂದು ಸುದ್ದಿ ಬಿಂಬಿಸಿದ್ದ, ಭಾರಧ್ವಜವನ್ನು ತಲೆಯಲ್ಲಿ ಹೊತ್ತ, ವಾಹಿನಿಯೊಂದರ ವಾರ್ತಾವಾಚಕ, ತತ್ಸಂಬಂಧವಾಗಿ ಇನ್ನೊಬ್ಬ ವ್ಯಕ್ತಿಯಿಂದ ಹಣಪಡೆದು ಹಾಗೆ ಮಾಡಿದ್ದ ಎನ್ನಲಾಗಿದೆ. ಮಾಸ್ಟರ್ ಹಿರಣ್ಣಯ್ಯನವರ ಕಾರ್ಯಕ್ರಮವೊಂದು, ೨೩[23]ನೇ ಶತಮಾನದ ತತ್ವಜ್ಞಾನಿಯೆನಿಸಿದ ರಂಗಣ್ಣನ ’ಪಬ್ಲಿಕ್ ಟಿವಿ’ಯಲ್ಲಿ ಮೂಡಿಬರುತ್ತಿದ್ದುದನ್ನು ವಿನಾಕಾರಣ ನಿಲ್ಲಿಸುವಂತೇ, ಅದರ ಮಾಲೀಕ ಕಡ್ಡಿ ರಂಗಣ್ಣ ಹೇಳಿದ್ದಕ್ಕೆ ಕಾಂಚಾಣದ ಕರಾಮತ್ತೇ ಕಾರಣವಾಗಿದೆ ಎಂಬುದು ೬ ಕೋಟಿ ಕನ್ನಡಿಗರಿಗೆ ಈಗಾಗಲೇ ತಿಳಿದು, ಯಾರಪ್ನಮನೆ ಆಸ್ತೀನೂ ಅಲ್ಲ-ರಂಗಪ್ಪನ ಮನೇದೇ ಸರಿ ಎಂಬುದು ಪಕ್ಕಾ ಆಗಿಬಿಟ್ಟಿದೆ! ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಮಾಧ್ಯಮಗಳ ಈ ಕೆಲವು ಸಂಪಾದಕರುಗಳಿಗೆ ಸಮರ್ಪಕವಾಗಿ ಅನ್ವಯವಾಗುತ್ತದೆ. ಒಂದಷ್ಟು ಜನ ಕಿತ್ತಾಡುವುದನ್ನು ಮತ್ತೊಂದಷ್ಟು ಜನ ಕುತೂಹಲದಿಂದ ನೋಡಲಿ ಎಂಬ ಕೆಟ್ಟ ಉದ್ದೇಶದಿಂದ, ಎಡಪಂಥೀಯ ಖೂಳರನ್ನು ಬಲಪಂಥೀಯ ಸಜ್ಜನರೊಟ್ಟಿಗೆ ಮುಖಾಮುಖಿಯಾಗಿ ಕೂರಿಸಿ ಮಾತನಾಡಿಸುತ್ತಾ, ಸಜ್ಜನ-ಸಮಾಜಮುಖಿಗಳನ್ನು ಛೇಡಿಸುವುದು, ಹೀಯಾಳಿಸುವುದು ನಿಜಕ್ಕೂ ವಿಷಾದನೀಯ. ಸಮಾಜಕ್ಕೆ ಸಾರ್ವಕಾಲಿಕವಾದ ಕೊಡುಗೆಯನ್ನು ಕೊಟ್ಟು ಸನಾತನ ಪರಂಪರೆಯನ್ನೂ ಸಂಸ್ಕೃತಿಯನ್ನೂ ಉಳಿಸಿದ ಮಹನೀಯ ಸಂತ-ಮಹಂತರ ಬಗ್ಗೆ ಪತ್ರಿಕೆಗಳು-ಸುದ್ದಿವಾಹಿನಿಗಳು ತಮ್ಮ ಮನೋವಿಕಾರವನ್ನು ಕಾರುವುದು ತೀರಾ ಕೆಳಮಟ್ಟದ ಕೆಲಸ; ಇದು ಪರೋಕ್ಷ ಸಮಾಜಕ್ಕೆ ಮಾಡುವ ಅಪಚಾರ.  

ನನ್ನಲ್ಲಿ ಒಬ್ಬರು ಒಂದೆರಡು ಪ್ರಶ್ನೆಗಳನ್ನು ಕೇಳಿದ್ದಾರೆ :

೧. ಯುಧಿಷ್ಠಿರ ಯಾಕೆ ದ್ಯೂತವಾಡಿದ? ಅವನಿಗೆ ಬುದ್ಧಿಯಿರಲಿಲ್ಲವೇ? 

೨. ದ್ಯೂತದಲ್ಲಿ ತನ್ನ ಹೆಂಡತಿಯನ್ನೇಕೆ ಪಣವಾಗಿಟ್ಟ? ಅವನಿಗೆ ಆ ಹಕ್ಕಿತ್ತೇ?

೩. ಪರಸ್ತ್ರೀಯರ ಪತಿವ್ರತಾಭಂಗ ಮಾಡಿದ ಇಂದ್ರನಿಗೆ ಯಾವ ಶಿಕ್ಷೆಯೂ ಆಗಲಿಲ್ಲ, ಆದರೆ ಕದ್ದು, ಮುಟ್ಟದೇ ಹಾಗೇ ಇಟ್ಟ ಮಾತ್ರಕ್ಕೇ ರಾವಣನಿಗೇಕೆ ಶಿಕ್ಷೆಯಾಯ್ತು?

ಉತ್ತರಗಳನ್ನು ಸ್ಥೂಲವಾಗಿ ನೋಡೋಣ:

೧. ಯುಧಿಷ್ಠಿರನಿಗೆ ದ್ಯೂತವೆಂಬುದು ದೌರ್ಬಲ್ಯವಾಗಿತ್ತು, ಎಲ್ಲದರಲ್ಲೂ ಧರ್ಮಾತ್ಮನೆನಿಸಿದ್ದರೂ ದ್ಯೂತದ ಚಟ ಅವನನ್ನು ಬಿಡಲೇ ಇಲ್ಲ-ಬಿಡಲು ಆತ ಯತ್ನಿಸಲೂ ಇಲ್ಲ. ನಳಮಹಾರಾಜ ಕೂಡ ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ! ದ್ಯೂತ/ಕೆಟ್ಟ ಚಟ ಒಳಿತಲ್ಲಾ ಎಂಬುದನ್ನು ಬಿಂಬಿಸಲು ನಮಗೆ ಭಾರತಕಥೆ ಸಹಕರಿಸುವುದು ಹೀಗೆ. ದ್ಯೂತವನ್ನಾಡಿದ ಪರಿಣಾಮವನ್ನೂ ನಾವು ಕಥೆಯಲ್ಲೇ ಕಾಣುತ್ತೇವೆ.

೨. ದ್ಯೂತದಲ್ಲಿ ತಮ್ಮದಾದ ಎಲ್ಲವನ್ನೂ ಕಳೆದ ಯುಧಿಷ್ಠಿರನಿಗೆ ಕಳೆಯುತ್ತಾ ಕಳೆಯುತ್ತಾ ಏನೂ ಬೇಡವೆನ್ನಿಸಿಬಿಟ್ಟಿತು. ತನ್ನನ್ನೇ ತಾನು ಪಣಕ್ಕಿಟ್ಟು ಆಡುವ ಮಟ್ಟಕ್ಕೆ ಬಂದ ಆತ ಮೊದಲು ಪಾಂಚಾಲಿಯನ್ನು ಪಣಕ್ಕಿಟ್ಟ. ಅವಳಮೇಲಿನ ಮೋಹದಿಂದಲಾದರೂ ತಾನು ಗೆದ್ದೇನೆಂಬ ಅನಿಸಿಕೆ ಇದ್ದಿರಬಹುದು. ಹಾಗೆ ಪಣಕ್ಕಿಡುವಾಗ ದ್ರೌಪದಿಯನ್ನು ಕೇಳುವ ಪ್ರಮೇಯ ಇಟ್ಟುಕೊಳ್ಳಲಿಲ್ಲ-ಹೇಗೂ ಸಹಧರ್ಮಿಣಿಯೆಂಬ ಭಾವದಿಂದ ಹಾಗೆ ಪಣಕ್ಕಿಟ್ಟ. ಧರ್ಮರಾಯನ ಜೀವನದಲ್ಲಿ ನಡೆದ ಒಂದೇ ಒಂದು ದೊಡ್ಡ ತಪ್ಪು ಇದು. ಇಂದು ಕುದುರೆ ರೇಸ್ ಆಡುವ ಮಂದಿ, ತಮ್ಮ ಹೆಂಡತಿ-ಮಕ್ಕಳನ್ನೂ ಮಾರಿ ಹಾಗೆ ತೊಡಗಿಕೊಳ್ಳುವ ರೀತಿಯ ಮನಸ್ಸು ಉಳ್ಳವರಾಗುತ್ತಾರಂತೆ. ಜೂಜು ಎಂಬುದೇ ಅಂಥದ್ದು! ಅದನ್ನು ತಿಳಿಸುವ ಸಲುವಾಗಿ ಮಹಾಭಾರತದಲ್ಲಿ ಈ ಸಂಗತಿ ವಿಶದಗೊಂಡಿದೆ. 

ಭಾರತಕಥೆಯಲ್ಲಿ ಭೀಷ್ಮ, ಕರ್ಣ, ಸುಯೋಧನ ಎಲ್ಲರೂ ಪಾಪದ ಪಾತ್ರಗಳಾಗಿಯೇ ನಮ್ಮ ಮಂಕುಬುದ್ಧಿಗೆ ಕಾಣುತ್ತಾರೆ; ಅವರೆಲ್ಲರ ಜನ್ಮ-ಜನ್ಮಾಂತರಗಳ ಕುಕೃತ್ಯಗಳ ಫಲಗಳನ್ನು ಅವರು ಅನುಭವಿಸಲು ಆ ರೀತಿ ಜನ್ಮವೆತ್ತಿದ್ದರು ಎಂಬುದನ್ನು ಭಾರತಕಥೆ ಆಧಾರವಾಗಿ ನೀಡುವುದನ್ನು ನಾವು ಓದಿಕೊಳ್ಳದೇ ಇರುವುದು ನಮ್ಮ ಅವಿದ್ಯೆಗೆ-ಅಜ್ಞಾನಕ್ಕೆ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯ ಯುವ ಭಾರತೀಯರಿಗೆ ರಾಮಾಯಣ-ಮಹಾಭಾರತಗಳ ಕಥೆಗಳ ಆಳಗಲಗಳ ಅರಿವಿಲ್ಲ! ಆದರೆ ತಪ್ಪನ್ನು ಹುಡುಕಲು ಮಾತ್ರ ನಮ್ಮ ಜನ ನಿಸ್ಸೀಮರು ಎನ್ನುವುದು ಮಾತ್ರ ಸುಳ್ಳಲ್ಲ.  

೩. ಇಂದ್ರ ಎಂಬುದು ಒಂದು ಪದವಿ. ಇಂದ್ರನ ಸ್ಥಾನದಲ್ಲಿ ಹಿಂದಿನ ಮನ್ವಂತರದಲ್ಲಿ ಇರುವ ವ್ಯಕ್ತಿ ಈಗ ಇರುವುದಿಲ್ಲ. ಮುಂದಿನ ಮನ್ವಂತರದಲ್ಲಿ ಮತ್ತೆ ಬೇರೇ ವ್ಯಕ್ತಿ ಆ ಅಧಿಕಾರಕ್ಕೆ ಬರುತ್ತಾನೆ.  ಪರಸ್ತ್ರೀಯರ ಪತಿವ್ರತಾ ಭಂಗಕ್ಕೆ ಕಾರಣವಾದ ಇಂದ್ರ ಒಬ್ಬ ವ್ಯಕ್ತಿಯಾಗಿ ತತ್ಪರಿಣಾಮವನ್ನು ಪಡೆಯುತ್ತಾನೆ; ಇಂದ್ರ ಪದವಿಯಿಂದ ಕುಸಿಯುತ್ತಾನೆ, ಕುಸಿದು ಇನ್ನಾವುದೋ ಶರೀರದಲ್ಲಿ ಜನ್ಮವೆತ್ತುತ್ತಾನೆ. ಆದರೆ ಅಲ್ಲಿ ಶಿಕ್ಷೆ ಇಂದ್ರನಿಗಲ್ಲ! ಮುಖ್ಯಮಂತ್ರಿ ಎಂಬುದು ಒಂದು ಪದವಿ, ಮುಖ್ಯಮಂತ್ರಿ ತಪ್ಪೆಸಗಿದರೆ ಆತನ ಅಧಿಕಾರಸ್ಥಾನ ಹೋಗುತ್ತದೆ ಬಿಟ್ಟರೆ ಅಲ್ಲಿ ಮುಖ್ಯಮಂತ್ರಿಸ್ಥಾನಕ್ಕೇ ನೇರವಾಗಿ ಶಿಕ್ಷೆಯಲ್ಲ. ಮುಖ್ಯಮಂತ್ರಿ ಸ್ಥಾನಕ್ಕೇ ಶಿಕ್ಷೆಯಾಗಿದ್ದರೆ ಒಬ್ಬ ರಾಜೀನಾಮೆ ಕೊಟ್ಟಮೇಲೆ ಬರುವ ಮತ್ತೊಬ್ಬನಿಗೂ[ವಿನಾಕಾರಣ] ಶಿಕ್ಷೆ ಪ್ರಾಪ್ತವಾಗಬೇಕಿತ್ತಲ್ಲಾ? 

ಇನ್ನು ರಾವಣ ಎಂಬಾತ ರಾಮನ ಜನ್ಮ ಆಗುವುದಕ್ಕಿಂತಾ ಸಾವಿರಗಟ್ಟಲೆ ವರ್ಷ ಮೊದಲೇ ಜನಿಸಿದ್ದ! ರಾಮನ ಪೂರ್ವಜರು ರಾವಣನನ್ನು ಎದುರಿಸಿ ಸೋತರೇ ಹೊರತು ರಾವಣನನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ರಾವಣನೊಬ್ಬ ಮಹಾನ್ ಮೋಸಗಾರನಾಗಿದ್ದು ಅಣ್ಣ ಕುಬೇರನ ಲಂಕೆಯನ್ನು ಬಲವಂತವಾಗಿ ತನ್ನದಾಗಿಸಿಕೊಂಡ, ನಂತರ ಕುಬೇರ ವಾಸಿಸಿದ ಅಲಕಾಪುರಿಗೆ ಹೋಗಿ ಅಲ್ಲಿ ಆತನ ಪುಷ್ಪಕ ವಿಮಾನವನ್ನು ಅಪಹರಿಸಿದ. ರಾಮ ಜನ್ಮವಾಗುವುದಕ್ಕೂ ಮೊದಲು ನೂರಾರು ಸ್ತ್ರೀಯರನ್ನು ಆತ ಭೋಗಿಸಿದ-ಅವರ ವ್ರತವನ್ನು ಅಳಿದ. ವಾಲಿಯೊಡನೆ ಮೈತ್ರಿ ಸಾಧಿಸಿಕೊಂಡು ಹೆಂಡಂದಿರನ್ನೂ ಸೇರಿದಂತೇ ಎಲ್ಲವನ್ನೂ ಹಂಚಿಕೊಳ್ಳುವ ಅಪವಿತ್ರ ಕಾರ್ಯಕ್ಕೆ ಅವನನ್ನೂ ಇಳಿಸಿ ತಾನೂ ಇಳಿದ. ಜಗತ್ತೇ ರಾವಣನ ಉಪಟಳಕ್ಕೆ ಹೆದರಿ ಕಂಗಾಲಾಗಿ ಮುಂದೇನು ಎಂದು ಚಿಂತೆಗೀಡಾಗಿದ್ದ ಸಮಯದಲ್ಲಿ ರಾಮ ಜನನವಾಯ್ತು. ರಾವಣ ವಧೆಗೆ ಸೀತಾಪಹರಣ ಕೇವಲ ನೆಪವಷ್ಟೇ ಹೊರತು ಆತ ಸೀತೆಯನ್ನು ಕದ್ದೊಯ್ದ ಎಂಬುದಕ್ಕೂ ಕೂಡ ಅಲ್ಲ! ರಾಮನಿಗೊಂದು ನೆಪಬೇಕಿತ್ತು, ರಾವಣನನ್ನು ವಧಿಸಿ ಶಿಷ್ಟಜನರನ್ನು ರಕ್ಷಿಸಬೇಕಿತ್ತು. ಅದಕ್ಕಾಗಿ ರಾಮ ರಾವಣನನ್ನು ವಧಿಸಿದ. ಮೇಲಾಗಿ ರಾವಣ-ಕುಂಭಕರ್ಣ ಎಂಬ ಮೂರನೇ ಅಸುರಜನ್ಮವೆತ್ತಿದ್ದ ಜಯ-ವಿಜಯರು, ಅದನ್ನು ಕಳೆದುಕೊಂಡು-ಸನಕಾದಿ ಅವಧೂತರ ಶಾಪದಿಂದ ವಿಮೋಚನೆಗೊಂಡು, ವೈಕುಂಠವನ್ನು ಸೇರಬೇಕಿತ್ತು.

ಇಂತಹ ಅನೇಕ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಕೆಲವು ಎಡಪಂಥೀಯರು ವಾಹಿನಿಗಳಲ್ಲಿ ಬಹಳ ಕೆಟ್ಟದಾಗಿ ರಾವಣರಂತೇ ತಿಣುಕಾಡುತ್ತಾರೆ!  ರಾಮಾಯಣ ಮತ್ತು ಮಹಾಭಾರತವನ್ನು ಆಮೂಲಾಗ್ರ ಓದಿಕೊಂಡಿದ್ದರೆ ಕಥೆಯ ಹಂದರ ಅರ್ಥವಾಗುತ್ತಿತ್ತು. ಪ್ರತಿಯೊಂದೂ ಘಟನೆಗೆ ಕಾರಣವೇನು ಎಂಬ ವಿಶಾಲ ದೃಷ್ಟಿಕೋನವನ್ನು ಇಟ್ಟುಕೊಂಡು ನೋಡಿದ್ದರೆ ಕಾರಣಗಳು ಸಿಗುತ್ತಿದ್ದವು. ಅದು ಬಿಟ್ಟು ಸನಾತನ ಧರ್ಮದ ಸಂಸ್ಕೃತಿ ಬೋಧಕ ಮಹಾಕಾವ್ಯ-ಕಥನಗಳನ್ನೇ ಟೀಕಿಸುವ ಎಡಪಂಥೀಯರನ್ನು ’ಲೋಕೋದ್ಧಾರಕರು’ ಎಂದು ಬಿಂಬಿಸುವುದು ಇಂದಿನ ಮಾಧ್ಯಮಗಳ ರೇಜಿಗೆ ಹುಟ್ಟಿಸುವ ಕೆಲಸವಾಗಿದೆ. ಕೆಲವೊಮ್ಮೆಯಂತೂ ಕ್ಷುಲ್ಲಕ ವಿಷಯವನ್ನು ಇಟ್ಟುಕೊಂಡು ಗಂಟೆಗಟ್ಟಲೆ ಕಾಲಹರಣಮಾಡುವುದನ್ನು ನೋಡುವಾಗ ಮಾಧ್ಯಮಗಳವರಿಗೆ ಸುದ್ದಿಗಳು ಇಲ್ಲದ್ದರಿಂದ, ಪ್ಯಾಸೆಂಜರ್ ಸಿಗದ ಆಟೋ ಮಾಲಕ/ಚಾಲಕ ನಡುರಸ್ತೆಯಲ್ಲಿ, ಮುಂದೆಯೂ ಹೋಗದೇ      ಹಿಂದೆಯೂ ಉಳಿಯದೇ ರಟ್ ರಟ್ ರಟರ್ ..... ಎಂದು ಅಲ್ಲೆ ಎಂಜಿನ್ ಕುರುಗುಟ್ಟಿಸುತ್ತಿರುವಂತೇ  ಕ್ಷುಲ್ಲಕವಿಷಯವನ್ನೇ ದಿನವಿಡೀ ಎಳೆಯುತ್ತಿರುತ್ತಾರೆ! ಮಾಧ್ಯಮವೆಂಬ ಸಮುದ್ರದಲ್ಲಿ ಈಜು ಹೊಡೆಯುವುದರಲ್ಲಿ ಪ್ರವೀಣರೆಂದು ತಮ್ಮ ಹೆಗಲನ್ನು ತಾವೇ ತಟ್ಟಿಕೊಳ್ಳುವ ಕೆಲವು ಸಂಪಾದಕರು ಅನೇಕಾವರ್ತಿ ಯಾಕೆ ಕೈಕಾಲು ಸೋತವರಂತೇ ಆಡುತ್ತಾರೆ ಎಂಬುದು ತಿಳಿಯದ ಸಂಗತಿ! ಹೀಗೇ ಕೈಕಾಲು ಸೋತಾಗಲೆಲ್ಲಾ ಹೊಸದೇನನ್ನೋ ಮಾಡಲು ಹೋಗಿ ಕೈಸುಟ್ಟುಕೊಳ್ಳುವ ಹೊಣೆಗೇಡಿತನಕ್ಕೆ ಇಳಿದುಬಿಡುತ್ತಾರೆ! ಅರಿಯದೇ ಮುಟ್ಟಿದರೂ ಸುಡುವ ಧರ್ಮದ ಬೆಂಕಿ ಅರಿತೂ ಮುಟ್ಟಿದರೆ ಸುಡದೇ ಇದ್ದೀತೇ? ಸಂಪಾದಕರ ಹೊಣೆಗೇಡಿತನ ಸಮಾಜದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ; ಯಜಮಾನ ಯುಧಿಷ್ಠಿರ ದ್ಯೂತವಾಡಿ ಕಳೆದುಕೊಂಡ ತಪ್ಪಿಗೆ  ಕುಟುಂಬದ ಸದಸ್ಯರೆಲ್ಲರೂ ಶಿಕ್ಷೆ ಅನುಭವಿಸಿದಂತೇ, ಅವಸರಿಸಿಯೋ ಹೆಂಡಕುಡಿದೋ ಚಾಲಕ ಬಸ್ಸನ್ನೋಡಿಸಿ ಅಪಘಾತವೆಸಗಿದಾಗ ಒಳಗಿರುವ ಪ್ರಯಾಣಿಕರೆಲ್ಲಾ ಸಾಯುವ/ಬಳಲುವ ಪ್ರಸಂಗವೆದುರಾಗುವಂತೇ, ಸಂಪಾದಕರೆಸಗುವ ಮಾಧ್ಯಮ ವಿಕೃತಿಗಳು ಸಮಾಜವನ್ನು ಬಳಲಿಸುತ್ತವೆ. ಉದಾಹರಣೆಗೆ ಸುವರ್ಣ ವಾಹಿನಿಯ ವಿಶ್ವೇಶ್ವರ ಭಟ್ಟರು, ಕಾಲಹರಣಕ್ಕೆ ಅಗತ್ಯವ್ಯಕ್ತಿಯೆನಿಸಿದ್ದ- ಕಾಲು ಮಾಡುವುದನ್ನೇ ಕಾದು ಸ್ಟುಡಿಯೋಗೆ ಓಡಿಬರುತ್ತಿದ್ದ, ಕೋಳಿ-ಕುರಿಯನ್ನು ನಿತ್ಯಭಕ್ಷಣೆ ಮಾಡುತ್ತಿದ್ದ ’ಕಾಳಿಸ್ವಾಮಿ’ಯನ್ನು ಸಮಾಜಕ್ಕೆ ಪರಿಚಯಿಸಿ ಉತ್ತುಂಗಕ್ಕೇರಿಸಿದ್ದರು! ಇಂಥಾ ಎಡವಟ್ಟು ಕೆಲಸಗಳಿಂದ, ಅರಿಯದೇ ಅನೇಕ ಜನ  ಕಷ್ಟ ಅನುಭವಿಸಿಯೋ, ಅನರ್ಥವಾಗಿಯೋ  ಎಡಪಂಥೀಯರಾಗುತ್ತಾರೆ, ಸಮಾಜದಲ್ಲಿ ಬಲಪಂಥೀಯರ ಬಾಳಿಗೆ ಕಂಟಕವಾಗುವ ಬ್ಯಾಡ್ ಎಲಿಮೆಂಟ್ ಗಳಾಗುತ್ತಾರೆ!  ಪತ್ರಿಕಾಕರ್ತರು ತಮ್ಮೊಳಗಿನ ತಿಕ್ಕಲುತನವನ್ನು ಹೊರಹಾಕಿ ರಾಗದ್ವೇಷಗಳನ್ನು ಬೆಳೆಸಿಕೊಂಡು ಪರಸ್ಪರ ಕಿತ್ತಾಡುವಾಗ ನನ್ನಂತಹ ಅನೇಕರಿಗೆ ’ಕೋಣೆವೆರಡೂ ಹೋರೆ ಗಿಡವಿಂಗೆ ಮೃತ್ಯು’ ಎಂಬ ಜಾಣ್ನುಡಿ ನೆನಪಾಯ್ತು. ಓದುಗರ/ವೀಕ್ಷಕರ ದಾರಿತಪ್ಪಿಸುವ ಮಾಧ್ಯಮಗಳ ಪ್ರಮುಖರಿಗೆ ಮಹಾಭಾರತದ ನೀತಿಸೂತ್ರಗಳನ್ನು  ಅಪ್ಲೈ ಮಾಡಿದರೆ ಹೇಗಾಗಬಹುದು ಎಂಬುದನ್ನು ಸುಮ್ನೇ ಚಿಂತಿಸಿನೋಡಿ.    


4 comments:

 1. ಪೇಪರ್ ತುಂಬಾ ಕೆಸರೇ ತುಂಬಿದಂತಹ ಈಗಿನ ಲಂಕೇಶ್ ದ್ವಯರ ಪತ್ರಿಕೆ, ಅಗ್ನಿ ಓದುಗರಿಲ್ಲದೆ ಮಕಾಡೆ ಬಿದ್ದಿವೆ, ಅವು ಉಸಿರಾಡುತ್ತಿರುವುದು ರೋಲ್ ಕಾಲ್ ಗಳಿಂದಲೇ, ಇನ್ನೂ ಹಾಯ್ ಬೆಂಗಳೂರು ರೋಲ್ ಕಾಲ್ ಕಥೆ ಹೇಗಿದ್ದರೂ ಸುದ್ದಿ ವಿಷಯದಲ್ಲಿ ಎಡ ಬಲ ಅನ್ನದೇ ಪ್ರಕಟಿಸುವುದು ಆಗಾಗ ಕಂಡುಬರುತ್ತದೆ

  ReplyDelete
  Replies
  1. ತಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದ, ಏನೂ ವಿಷಯ ಸಿಗದಿದ್ದರೆ ಅವರು ಬಲಪಂಥೀಯ ಲೇಖನವನ್ನು ಪ್ರಕಟಿಸುತ್ತಾರೆ. ಅಷ್ಟಾಗಿ ಯಾಕೆ ನಮ್ಮ ಧರ್ಮವನ್ನು ಹೀಗಳೆಯಬೇಕು ಈ ಪತ್ರಿಕಾಕರ್ತರು ?

   Delete
  2. ''ಎಷ್ಟೇ ಶ್ರೇಷ್ಟವಾದ ಸಂವಿಧಾನವಾದರೂ ಕಾರ್ಯರೂಪಕ್ಕೆ ತರುವ ಜನ ದುರ್ಜನರಾದರೆ ಶ್ರೇಷ್ಠ ಸಂವಿಧಾನವು ದುಷ್ಟವಾಗುತ್ತದೆ. ಎಷ್ಟೇ ದೋಷ ಪೂರ್ಣ ವಾದ ಸಂವಿಧಾನವಾದರೂ ಕಾರ್ಯ ರೂಪಕ್ಕೆ ತರುವ (ಶಾಸಕಾಂಗದ .ಕಾರ್ಯಾಂಗದ ,ನ್ಯಾಯಾಂಗದ ,ಪತ್ರಿಕಾ ರಂಗದ ) ಕಾರ್ಯ ನಿರ್ವಹಿಸುವ ಜನ ಸಜ್ಜನರಾದರೆ ದುಷ್ಟ ಸಂವಿಧಾನವು ಶ್ರೇಷ್ಠ ವಾಗಿರುತ್ತದೆ''

   Delete
 2. ನಮ್ಮ ಸಮಾಜ ಎತ್ತ ಹೋಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಈ ಎಡಪಂಥೀಯ ಖೂಳರು ರಾಮಾಯಣ, ಮಹಾಭಾರತ ಯಾ ಭಾಗವತ ಇಂಥ ಯಾವುದೇ ಗ್ರಂಥಗಳನ್ನು ರಚಿಸಿದ ಭಾಷೆಯಾದ ಸಂಸ್ಕೃತದ ಬಗ್ಗೆ ಯಾವುದೇ ಅರಿವಿಲ್ಲದೆಯೇ ಭಾಷೆ ಮತ್ತು ಗ್ರಂಥಗಳ ಬಗ್ಗೆ ಅಷ್ಟು ಕೆಟ್ಟದಾಗಿ ಬರೆಯುತ್ತಾರಲ್ಲಾ...

  ಎಷ್ಟೊಂದು ಕಡೆ ಇವರೇ ಹೇಳುತ್ತಾರೆ ಯಾವುದೇ ಗ್ರಂಥದ ಬಗೆಗಿನ ಪರಿಪೂರ್ಣ ಜ್ಞಾನಕ್ಕಾಗಿ ಗ್ರಂಥ ಬರೆಯಲ್ಪಟ್ಟ ಭಾಷೆಯ ಬಗ್ಗೆ ಪರಿಪೂರ್ಣ ಜ್ಞಾನವಿರಬೇಕು ಎಂದು. ಆದರೆ ಇವರಿಗೆಷ್ಟು ಸಂಸ್ಕೃತದ ಬಗ್ಗೆ ಜ್ಞಾನ ಯಾ ಗೌರವವಿದೆ? ನಮ್ಮ ಸಂಸ್ಕೃತಿಯ ಬಗ್ಗೆ ಎಷ್ಟು ಅರಿವಿದೆ? ಭಾರತೀಯನಾಗಿ ಹುಟ್ಟಿದ ಮಾತ್ರಕ್ಕೆ ಭಾರತೀಯತೆ ಬರುವುದಿಲ್ಲ ಎನ್ನುವುದಕ್ಕೆ ಇವರುಗಳೇ ಪ್ರತ್ಯಕ್ಷ ಸಾಕ್ಷಿ.

  ಎಷ್ಟೊಂದು ಬಾರಿ ಇಂಥಾ ಭಾವನೆ ನಮಗೆ ಆಗಾಗ ಬರುತ್ತದೆ. ಒಂದೊಮ್ಮೆ ನಾನು ಕೆಲಸ ನಿಮಿತ್ತ ನನ್ನ ಕಂಪೆನಿಯಿಂದ ಹೊರ ರಾಷ್ಟ್ರಕ್ಕೆ ಹೋಗಿದ್ದೆ. ಅಲ್ಲಿ ಕೂಡಾ ನಮ್ಮಲ್ಲಿಯಂತೇ ಜನಸಾಮಾನ್ಯನಿಗೆ ಆಂಗ್ಲ ಭಾಷೆ ಕಬ್ಬಿಣದ ಕಡಲೆಕಾಯಿ. ಹಾಗೇ ಒಂದು ಮುಸ್ಸಂಜೆ ನನ್ನ ಕಛೇರಿಮಿತ್ರನೊಂದಿಗೆ ಹೊರಹೋಗಿದ್ದಾಗ ಅವನೇನೋ ಅವನ ರಾತ್ರಿಯೂಟಕ್ಕೆ ಕೊಳ್ಳಲೆಂದು ಅಲ್ಲಿನ ಹೋಟೇಲೊಂದಕ್ಕೆ ಹೋಗಿ ಆರ್ಡರ್ ಕೊಟ್ಟಿದ್ದ. ಅದು ತಯಾರಾಗುವ ತನಕ ನಾವಲ್ಲೇ ಕೂತಿದ್ವಿ. ಆಗ ಅಲ್ಲಯೇ ಇದ್ದ 2 ಜನಸಾಮಾನ್ಯರು ನಮ್ಮನ್ನು ನೋಡಿಕೊಳ್ಳುತ್ತಾ ಮಾತನ್ನಾಡಿಕೊಳ್ಳುತ್ತಿದ್ದುದು ನನ್ನ ಗಮನಕ್ಕೆ ಬಂತು. ಸ್ವಲ್ಪ ಸಮಯದ ನಂತರ ಅವರಲ್ಲೊಬ್ಬ ನನ್ನ ಹತ್ತಿರ ಏನೋ ಕೇಳಿದ. ನನಗದು ಅರ್ಥವಾಗದೇ ನನಗೆ ಇಂಗ್ಲೀಷ್ ಮಾತ್ರ ಬರುತ್ತದೆ ಎಂದು ಇಂಗ್ಲೀಷಿನಲ್ಲೇ ಬಡಬಡಾಯಿಸಿಕೊಂಡಿದ್ದೆ. ಸ್ವಲ್ಪ ಸಮಯದ ನಂತರ ತಿಳಿಯಿತು, ಆತ, ನಾನು ಯಾವ ದೇಶದಿಂದ ಅವರ ದೇಶಕ್ಕೆ ಬಂದೆ ಎಂದು ತಿಳಿಯಲೆತ್ನಿಸಿದ್ದ ಎಂದು. ಯಾಕೆಂದರೆ ನನ್ನ ಕಿವಿಯಲ್ಲಿ ನನ್ನ ತಂದೆತಾಯಿ ನನಗೆ ಚಿಕ್ಕಂದಿನಲ್ಲಿದ್ದಾಗ ತೊಡಿಸಿದ್ದ ಚಿನ್ನದ ಕಿವಿಯೋಲೆ(ಟಿಕ್ಕಿ) ಇತ್ತು ಮತ್ತು ಅದನ್ನು ನೋಡಿಯೇ ಆತ ನನ್ನನ್ನು ಹಾಗೆ ಪ್ರಶ್ನಿಸಿದ್ದ. ಆಗ ನಾನು ಇಂಡಿಯಾದಿಂದ ಎಂದೆ. ಆತ ಸಂತೋಷದಿಂದ ಏನೋ ಅಂದ. ನನಗೆ ಅದು ಅರ್ಥವಾಗದೇ "ನಾನು ಇಂಡಿಯನ್" ಎಂದೆ. ಆಗ ಅವನು ನನಗೆ ಅರ್ಥೈಸಿದ... ನಾನೊಬ್ಬ "ಹಿಂದೂಸ್ಥಾನಿ/ಹಿಂದೂ ದೇಶೀ" ಎಂದು. ನನಗೆಷ್ಟು ನಾಚಿಕೆಯಾಯಿತೆಂದರೆ ಅದನ್ನು ವರ್ಣಿಸಲು ಸಾಧ್ಯವಿಲ್ಲ. ಅವನು ನನ್ನನ್ನು ಇಂಡಿಯನ್ ಬದಲಾಗಿ ಹಿಂದೂಸ್ಥಾನೀ ಯಾ ಹಿಂದೂ ದೇಶೀ ಎಂದಿದ್ದ. ಇಂಥಾ ಪ್ರಸಂಗಗಳು ನನಗಷ್ಟೇ ಅಲ್ಲ ಬಹಳಷ್ಟು ಮಂದಿಗೆ ಆಗಿರುತ್ತವೆ. ಆದರೆ ತಮ್ಮೊಳಗಿನ ಅಹಂನಿಂದಾಗಿ ಹೇಳಿಕೊಂಡಿರುವುದಿಲ್ಲ ಅಷ್ಟೆ. ಆದರೆ ನಾವು ಯಾವಾಗ ಅರಿತುಕೊಳ್ಳುತ್ತೇವೆ, "ಮೊದಲಿಗೆ ನಾವೊಬ್ಬ ಭಾರತೀಯ ಯಾ ಹಿಂದೂಸ್ಥಾನಿ ಯಾ ಹಿಂದೂ ದೇಶೀ, ಹೊರತೂ ಒಬ್ಬ ಇಂಡಿಯನ್ ಅಲ್ಲ" ಎಂದು?

  ಇಂಥಾ ಪ್ರಸಂಗಗಳಿಂದ ಮತ್ತೆ ಮತ್ತೆ ಒಂದು ವಿಷಯ ಭಯ ತರಿಸುತ್ತದೆ. ಅದೇನೆಂದರೆ "ನಮ್ಮ ಜನಾಂಗ ಯಾ ನಮ್ಮ ಮುಂದಿನ ಪೀಳಿಗೆಗಳು ಭಾರತೀಯ ಸಂಸ್ಕೃತಿ, ಸಂಸ್ಕೃತ ಯಾ ಇನ್ನಿತರ ಭಾರತೀಯ ಭಾಷೆಗಳು ಮತ್ತು ಇಲ್ಲಿ ರಚಿಸಲ್ಪಟ್ಟ ಮಹಾಕಾವ್ಯಗಳು, ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಇತ್ಯಾದಿ ಕಲಾ ಪ್ರಕಾರಗಳ ಬಗ್ಗೆ ತಿಳಿಯಲು ಅಥವಾ ಸ್ನಾತಕ ಯಾ ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಭಾರತವನ್ನು ಬಿಟ್ಟು ಹೊರದೇಶಗಳಿಗೆ ಮುಂದಿನ ದಿನಗಳಲ್ಲಿ ತೆರಳಲಿದೆ!!!"

  ಎಂಥಾ ವಿಪರ್ಯಾಸ!! ಇವೆಲ್ಲಾ ಯಾಕೆ? ನಮ್ಮಲ್ಲೇ ಇರುವ ಈ ಎಡಪಂಥೀಯರ ಹಾವಳಿ ಜಾಸ್ತಿಯಾಗುತ್ತಿರುವುದರಿಂದ. ಇದನ್ನು ನಾವು ನಿಲ್ಲಿಸಲೇ ಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಹೇಗಾಗುತ್ತದೆಂದರೆ, ನೀರಿನ ಬಗ್ಗೆ ಅಭ್ಯಸಿಸಲು ಮೀನು ನೀರಿಂದ ಹೊರಬಂದಂತೆ. ಇದು ಸಾಧ್ಯವೇ? ಯೋಚಿಸಿ.

  ನನಗನ್ನಿಸುತ್ತಿದೆ... ಇವಕ್ಕೆಲ್ಲ ಇನ್ನೊಂದು ಮಹಾಭಾರತ ಯುಧ್ಧದ ಅಗತ್ಯವಿದೆ. ಅಲ್ಲೊಬ್ಬ ಕೃಷ್ಣ, ಅರ್ಜುನನಿಗೆ ಹೇಳಬೇಕಾಗಿದೆ "ದುಷ್ಟರನ್ನು ದೌಷ್ಟ್ಯದಿಂದ ನಿರ್ಮೂಲನ ಮಾಡುವುದು ಸರಿಯಾದ ರಾಜನೀತಿ ಮತ್ತು ಸಮಾಜನೀತಿ ಕೂಡಾ. ಇಲ್ಲವಾದಲ್ಲಿ ನಮ್ಮಿಂದಲೂ ಸಮಾಜದ್ರೋಹತನ ನಡೆದಂತೆ."

  ReplyDelete