ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, October 12, 2012

ಇದು ಶಿಲ್ಪಿಯ ಭಾಗ್ಯವೋ ಶಿಲೆಯಲ್ಲಿನ ಶಕ್ತಿಯ ಸಂಕಲ್ಪವೋ ? [ಲೇಖನದೊಳಗೊಂದು ಅದ್ಭುತ ಲೇಖನ]


ಇದು ಶಿಲ್ಪಿಯ ಭಾಗ್ಯವೋ ಶಿಲೆಯಲ್ಲಿನ ಶಕ್ತಿಯ ಸಂಕಲ್ಪವೋ ?
[ಲೇಖನದೊಳಗೊಂದು ಅದ್ಭುತ ಲೇಖನ]

ಕಾರಿರುಳೊಳಾಗಸದಿ ತಾರೆ ನೂರಿದ್ದೇನು
ದಾರಿಗನ ಕಣ್ಗೆ ಬೇರೊಂದು ಮನೆ ಬೆಳಕು
ದೂರದಾ ದೈವವಂತಿರಲಿ ಮಾನುಷ ಸಖನ
ಕೋರುವುದು ಬಡಜೀವ-ಮಂಕುತಿಮ್ಮ

ಸಖರು ಹಲವಾರು ಮಂದಿ, ಆದರೆ ಸಖರಲ್ಲೂ ನಿಜವಾದ ಸಖರು ಎಷ್ಟು ಮಂದಿ? ದೂರದ ದೇವರು ಬಾರದೇ ಇದ್ದರೂ ಹತ್ತಿರವೇ ಮಾನುಷ ರೂಪದಲ್ಲಿರುವ, ನಮ್ಮೆಲ್ಲರೊಡನೆ ಒಡನಾಡುವ, ನಮಗಾಗಿ ನಮ್ಮ ತಮ್ಮ ಹಿರಿತನವನ್ನು ಬದಿಗಿರಿಸಿ ಅಧುನಿಕ ವಿದ್ಯುನ್ಮಾನ ಉಪಕರಣಗಳ ಮೂಲಕ ನಮ್ಮೊಡನೆ ನಿತ್ಯವೂ ಸಂವಹಿಸುವ ಗುರುವೊಬ್ಬರ ಬಗೆಗೆ ಈ ಲೇಖನ. ಇದು ಅನಿರೀಕ್ಷಿತವಾಗಿ ಒದಗಿಬಂದ ಸಂದರ್ಭ. ಏನನ್ನೋ ಬರೆಯಬೇಕು ಎಂದುಕೊಂಡಿದ್ದ ನನಗೆ ಇದನ್ನೇ ಪ್ರಕಟಿಸಲು ಮನಸ್ಸು ಒತ್ತಾಯಿಸಿತು. ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಅಭಿವ್ಯಕ್ತ ಗೊಂಡ ಲೇಖಕರ ಅದ್ಭುತ ಲೇಖನದಂತೆಯೇ ಈ ನನ್ನ ಪ್ರಕಟಣಾ ಪ್ರಯತ್ನವೂ ಕೂಡ. ಅನೇಕ ಜನ ಸದ್ಯ, ಪ್ರತಿಬೆಳಿಗ್ಗೆ ಸುವರ್ಣ ವಾರ್ತಾವಾಹಿನಿಯಲ್ಲಿ ೫ ನಿಮಿಷಗಳ ಕಾಲ ಅವರ ಮಾತುಗಳನ್ನು ಕೇಳಿರುತ್ತೀರಿ. ಅವರು ನಿಮಗೆಲ್ಲಾ ಪರಿಚಿತರೇ! ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳು.   

ನನ್ನಲ್ಲಿ ೧೫ ವರ್ಷಗಳ ಹಿಂದೆ ಯಾರೋ ಅಸಡ್ಡೆಯಾಗಿ ಮಾತನಾಡಿದ್ದರು. ಇವತ್ತಿನ ದಿನಮಾನದಲ್ಲಿ ಗುರು ಎಂಬ ವ್ಯಕ್ತಿಯ ಅಗತ್ಯತೆ ಎಷ್ಟು ? -ಎಂಬುದಾಗಿಯೂ ಪ್ರಶ್ನಿಸಿದ್ದರು. ಅದಕ್ಕೆ ನಾನು ಮತ್ತೆ ಅವರು ಮರುಮಾತಾಡದಂತೇ ಉತ್ತರ ನೀಡಿದ್ದೆ ಎಂಬ ಅನಿಸಿಕೆ ಇದೆ. ಯೋಗಿಗಳು ಎಲ್ಲೋ ಹೇಗೋ ಇರುತ್ತಾರೆ ಎಂದೇ ತಿಳಿಯಬೇಕಿಲ್ಲ. ಕೇವಲ ಹಿಮಾಲಯದಲ್ಲಿದ್ದರೆ ಮಾತ್ರ ಯೋಗಿಗಳೆನಿಸಲು ಅರ್ಹರೆಂದೂ ಅಲ್ಲ. ಯೋಗಿಗಳು ತಮ್ಮ ಕರ್ಮಗಳಲ್ಲಿ ಅದನ್ನು ಸಾಬೀತು ಪಡಿಸುತ್ತಾರೆ. ಆದರೆ ಕರ್ಮತ್ಯಾಗವನ್ನೇ ಮಾಡಿದ ಸನ್ಯಾಸಿಯೊಬ್ಬರು ಜಗತ್ತಿನ/ಭಾರತದ ಒಳಿತಿಗಾಗಿ ತಮ್ಮ ಶಿಷ್ಯ ಗಡಣವನ್ನು ಮುಂದೆ ನಿಲ್ಲಿಸಿ ಅನೇಕ ಸಮಾಜಮುಖೀ ಕಾರ್ಯಗಳಿಗೆ ಕಾರಣೀಭೂತರಾಗುತ್ತಾರೆ ಎಂದರೆ ಅದು ವಿಶೇಷವೇ ಸರಿ. 

ಕಾಗೆಯುಂ ಕೋಗಿಲೆಯುವೊಂದೆ ಮೇಲ್ನೋಟಕ್ಕೆ
ಯೋಗಿಯುಂ ಸಂಸಾರ ಭೋಗಿಯೇ ಹೊರಕೆ
ಲೋಗರವೊಲಿರುತೆ ಸುಖದುಃಖ ಸಂಭ್ರಮಗಳಲಿ
ತ್ಯಾಗಿಯವನ್ ಅಂತರದಿ-ಮಂಕುತಿಮ್ಮ

ಸ್ವಾರ್ಥಕ್ಕಾಗಿ ಸಂಸಾರಿಯಲ್ಲದ ಸನ್ಯಾಸಿಗಳಿಗೆ ಶಿಷ್ಯಗಡಣವೇ ಸಂಸಾರವಾಗಿರುತ್ತದೆ! ಒಬ್ಬ ಮನೆಯ ಯಜಮಾನನಿಗೆ ಅವನ ಹೆಂಡತಿ ಮಕ್ಕಳು, ಅಪ್ಪ-ಅಮ್ಮ ಇವರ ಜವಾಬ್ದಾರಿಮಾತ್ರ. ಆದರೆ ಒಬ್ಬ ಪೀಠಾಧಿಪತಿಗಳಿಗೆ ಅಂತಹ ಹಲವು ಲಕ್ಷ/ಕೋಟಿ ಕುಟುಂಬಗಳ ಜವಾಬ್ದಾರಿ! ಲೌಕಿಕವಾಗಿ ಶಿಷ್ಯಗಡಣದ ಜೊತೆಗೆ ಲೋಕಮುಖವಾಗಿ ಲೋಕಾಂತವಾಡುತ್ತಿದ್ದರೂ ಸದಾ ಮನದ ಮೇಲ್ಸ್ತರದಲ್ಲಿ ಏಕಾಂತ.

ದಾಸರೋ ನಾವೆಲ್ಲ ಶುನಕನಂದದಿ ಜಗದ
ವಾಸನೆಗಳೆಳೆತಕ್ಕೆ ದಿಕ್ಕು ದಿಕ್ಕಿನಲಿ
ಪಾಶಗಳು ಹೊರಗೆ ಕೊಂಡಿಗಳು ನಮ್ಮೊಳಗಿಹವು
ವಾಸನಾಕ್ಷಯ ಮೋಕ್ಷ-ಮಂಕುತಿಮ್ಮ

ವಿಷಯ ವಾಸನೆಯಿಂದ ಬಿಡುಗಡೆ ಎಂಬುದು ಅಲಭ್ಯ ವಿದ್ಯೆಯನ್ನು ಅಭ್ಯಸಿಸಿದಷ್ಟೇ ಗಹನವಾದುದು. ಮೋಹ ಕ್ಷಯವಾದರೆ ಅದೇ ಮೋಕ್ಷ. ಆದರೆ ಮಾನವ ಜನ್ಮದಲ್ಲಿರುವ ನಮಗೆ ಲೌಕಿಕವಾಗಿ ಮೋಹಬಂಧನಗಳಿಂದ ಬಿಡುಗಡೆ ಹಾಗೆಲ್ಲಾ ಸಾಧ್ಯವೇ? ನಾವು ಯಾರೆಂಬ ಪ್ರಶ್ನೆ ಬಂದಾಗ ಓ ಇಂಥವರ ಮಗ, ಇಂಥವರ ಮೊಮ್ಮಗ, ಇಂಥವರ ಅಣ್ಣ- ಇಂಥವರ ತಮ್ಮ, ಇಂಥವರ ಅಪ್ಪ ಹೀಗೆಲ್ಲಾ ನಾವು ಹೇಳಿ ಪರಿಚಯಿಸಿಕೊಳ್ಳುತ್ತೇವೆ; ಜೊತೆಗೆ ಡಾ|, ವಿದ್ವಾನ್, ವೇದಮೂರ್ತಿ, ಪಂಡಿತ್...ಈ ಥರದ್ದೆಲ್ಲಾ ಪೂರ್ವವಿಶೇಷಣಗಳನ್ನು ಹಚ್ಚಿಕೊಂಡು ನಾವು ಯಾರಿಗೂ ಕಮ್ಮಿ ಇಲ್ಲಾ ಎಂಬುದನ್ನು ತೋರಿಸಿಕೊಳ್ಳುತ್ತೇವೆ. ಆದರೆ ಈ ನಾನು ನಿಜವಾದ ನಾನೇ? ಅಲ್ಲ. ನನ್ನೊಳಗೆ ಕುಳಿತಿರುವ ನಾನು ಯಾರು ? ಇದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಆಗ ಈ ಜಗದ ಪಾಶದ, ಮೋಹಮುದ್ಗರದ ಬಗ್ಗೆ ಎಲ್ಲೋ ಚೂರು ಏನೋ ಇರಬೇಕು ಎನಿಸುತ್ತದೆ. ಆದರೂ ರಾಮಾಯಣ ಕೇಳಿಮುಗಿದ ನಂತರ ರಾಮನಿಗೆ ಸೀತೆ ಏನಾಗಬೇಕು ಎಂದು ಯಾರೋ ಕೇಳಿದರೆ "ಅಕ್ಕನೋ ತಂಗಿಯೋ ಆಗಬೇಕು-ಪಕ್ಕಾ ನೆನಪಿಲ್ಲ" ಎನ್ನುವ ಮಂದಿಯಂತೇ ಮೋಹವನ್ನು ಕಳೆದುಕೊಳ್ಳಬೇಕು ಎಂಬ ಕಥೆ ಕೇಳಿದ ನಂತರ ಮತ್ತೆ ಈ ಸಂಸಾರದೆಡೆಗೇ ಮನಸ್ಸು ಮರಳಿಬಿಡುತ್ತದೆ. ಜೇನು ಸಾಕುವ ಜನ ನೀವಾಗಿದ್ದರೆ ನಿಮಗೆ ಈ ಅನುಭವವನ್ನು ಉದಾಹರಿಸುವುದು ಸುಲಭ: ಜೇನು ಪೆಟ್ಟಿಗೆಯನ್ನು ಸ್ಥಳಾಂತರಿಸಿ ಕಿಲೋಮೀಟರು ದೂರಕ್ಕೆ ಒಯ್ದುಬಿಡಿ, ಆಗಲೂ ಜೇನುನೊಣಗಳು ಗೂಡು/ಪೆಟ್ಟಿಗೆ ಮೊದಲಿದ್ದ ಜಾಗಕ್ಕೇ ಹಾರುತ್ತಾ ಬರುತ್ತಿರುತ್ತವೆ! ಅದೇ ರೀತಿ ವಿರಕ್ತ ಭಾವ ನಮಗೆ ಬರುವುದೇ ಇಲ್ಲ. ಸನ್ಯಾಸಿಗಳ ಪ್ರವಚನದ ಮಧ್ಯೆಯಲ್ಲೂ ಮನೆಯಲ್ಲಿ ಮಗನೋ ಮಗಳೋ ಏನುಮಾಡುತ್ತಿರಬಹುದು ಎಂಬ ಆಲೋಚನೆ! ಹೇ ಆ ಕೆಲಸಕ್ಕೆ ಬಾರದ ಪಕ್ಕದ ಮನೆಯವ ಕಾರು ತೆಗೆದುಕೊಂಡ ಅಂಥಾದ್ದರಲ್ಲಿ ನಾನು ಬಿಡ್ತೀನಾ ಎಂಬ ಅಹಂಕಾರ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿರುತ್ತದೆ. ಅವುಗಳನ್ನು ನಿಗ್ರಹಿಸುವುದರಿಂದ ಜಿತೇಂದ್ರಿಯರಾಗುತ್ತೇವೆ. ಜಿತೇಂದ್ರಿಯರಿಗೆ ಮಾತ್ರ ಮುಂದಿನ ದಾರಿ ಸುಗಮ!         

ಸನ್ಯಾಸಕ್ಕೂ ಮೊದಲು ವೇದಾಧ್ಯಯನ ಮಾಡಿಸಿದ ಗುರುವಿಗೆ ಶಿಷ್ಯನಿಂದ ವಂದನೆ 

ತುಂಬಿದ ಸಂಸಾರದಲ್ಲಿ ಎಳೆಯ ಹುಡುಗನೊಬ್ಬನನ್ನು ಸನ್ಯಾಸಕ್ಕಾಗಿ ಕಳೆದುಕೊಳ್ಳುವುದು ಆ ಕುಟುಂಬಕ್ಕೆ ಅಸಾಧ್ಯ ನೋವನ್ನುಂಟುಮಾಡುವ ಸನ್ನಿವೇಶ. ಆದರೂ ಸಮಾಜದ ಒಳಿತಿಗಾಗಿ ಹುಡುಗನನ್ನು ಹಾಗೆ ತ್ಯಾಗಮಾಡುವುದು ಬಹುದೊಡ್ಡ ಸಮಾಜಸೇವೆ. ಜನಿಸಿದ ಮನೆಯನ್ನೂ ಓರಗೆಯ ಸಹಪಾಠಿ/ಸ್ನೇಹಿತರುಗಳನ್ನೂ ತೊರೆದು, ಹುಟ್ಟಿದ ಊರನ್ನೂ ತನ್ನತನವನ್ನೂ ತೊರೆದು ಸನ್ಯಾಸಿಯಾಗಿ ದೀಕ್ಷಾಬದ್ಧನಾಗುವುದು ಒಂದೆರಡು ದಿನದ ವ್ಯವಹಾರದ ಮಾತಲ್ಲ; ಅದು ಅಜೀವ ಪರ್ಯಂತ ಮತ್ತೆಂದೂ ಮರಳಿ ಕೌಟುಂಬಿಕ ಚೌಕಟ್ಟಿಗೆ ಬರಲಾಗದಂತಹ ಸನ್ನಿವೇಶ. ಸನ್ಯಾಸ ಸ್ವೀಕಾರದ ಮೊದಲು ಯಾವ ವ್ಯಕ್ತಿ ತನ್ನ ಗುರು-ಹಿರಿಯರಿಗೆ ನಮಸ್ಕರಿಸುತ್ತಿರುತ್ತಾನೋ ಅದೇ ವ್ಯಕ್ತಿ ದೀಕ್ಷೆ ಪಡೆದ ನಂತರ ಅದದೇ ಗುರು-ಹಿರಿಯರಿಂದಲೂ ನಮಸ್ಕಾರಗಳನ್ನು ಪಡೆಯಲು ಅರ್ಹನಾಗುತ್ತಾನೆ[ಮಾತೆಯೋರ್ವಳನ್ನುಳಿದು], ಪಡೆಯಬೇಕಾಗುತ್ತದೆ! ಸ್ವತಃ ಆತ್ಮಶ್ರಾದ್ಧವನ್ನು ಮಾಡಿಕೊಳ್ಳಬೇಕಾಗುತ್ತದೆ, ನೀರಲ್ಲಿ ನಿಂತು ಜನಿವಾರ ವಿಸರ್ಜಿಸಿ, ಸಂಸಾರ ಬಂಧನದಿಂದ ಮುಕ್ತನಾದ ಪ್ರತಿಜ್ಞಾವಿಧಿ ಸ್ವೀಕರಿಸಿ, ಸನ್ಯಾಸಿಗಳಿಂದ ಕಾಷಾಯ ವಸ್ತ್ರವನ್ನು ಪಡೆದು ಮುಂದಿನ ದೀಕ್ಷೆಗೆ ಸಿದ್ಧನಾಗಬೇಕಾಗುತ್ತದೆ.  ಅಂತಹ ಒಂದು ಭಾವಪೂರ್ಣ ಸನ್ನಿವೇಶ ಹೇಗೆ ಸೃಷ್ಟಿಯಾಯ್ತು ಎಂಬುದನ್ನು ಈ ಲೇಖನ ತಮಗೆಲ್ಲಾ ಶ್ರುತಪಡಿಸುತ್ತದೆ:   

[ಚಿತ್ರ-ಲೇಖನ ಕೃಪೆ: ಹರೇರಾಮ.ಇನ್ (http://www.hareraama.in)-ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗಿದೆ ]
---------------------------------------

ಭಾಗ್ಯದ ಬಾಗಿಲಾದ ಶಿಕ್ಷೆ : ವಿದ್ವಾನ್ ಸತ್ಯನಾರಾಯಣ ಶರ್ಮಾ
Author: Sathyanarayana Sharma ; Published On: ಶನಿವಾರ, ಜನವರಿ 22nd, 2011;
[ copy & paste this link in browser: http://hareraama.in/articles/sammukha/vidvan-sathya-narayana-sharma/ ]

“ಸತ್ಯ, ಏನೇ ಹೇಳಿದರೂ ನಿನ್ನದು ಬೇಜವಾಬ್ದಾರಿತನ. ಶ್ರೀನಿವಾಸ ನಿನ್ನನ್ನು ನಂಬಿ ಇವರಿಬ್ಬರ ವಿದ್ಯಾಭ್ಯಾಸದ ಹೊಣೆಯನ್ನು ನಿನಗೆ ಕೊಟ್ಟಮೇಲೆ ಯೋಗ್ಯರೀತಿಯಲ್ಲಿ ಇವರನ್ನು ತಯಾರುಮಾಡುವ ಕರ್ತವ್ಯ ನಿನ್ನದಾಗಿತ್ತು. ಸರಿಯಾಗಿ ಗಮನ ನೀಡಿದ್ದರೆ ಇಷ್ಟರೊಳಗೆ ಇವರಿಬ್ಬರಿಗೂ ಸಾಕಷ್ಟು ಶಾಸ್ತ್ರಾಭ್ಯಾಸ ಆಗುತ್ತಿತ್ತು. ನಿನ್ನಿಂದ ಕರ್ತವ್ಯಲೋಪವಾಗಿದೆ.”

--- ಹಿಂದಿನ ಪೀಠಾಧಿಪತಿಗಳಾದ ದೊಡ್ಡಗುರುಗಳ ಕಂಚಿನ ಕಂಠದ ಗಡಸುಧ್ವನಿ. ತೀರ್ಥಹಳ್ಳಿಯಮಠದ ಪೂಜ್ಯಶ್ರೀಗಳ ವಿಶ್ರಾಂತಿಕೋಣೆಯಲ್ಲಿ ನನ್ನ ವಿಚಾರಣೆ. ಜೊತೆಗೆ ಚದರವಳ್ಳಿಯ ಶ್ರೀನಿವಾಸ ಭಟ್ಟರು ಹಾಗೂ ಅವರ ಸುಪುತ್ರರಾದ ಈಗಿನ ಶ್ರೀಗಳು, ಜಗದೀಶ ಶರ್ಮಾ.

ಗುರುಗಳೆದುರು ಹೇಳಲಾಗದ ಸ್ಥಳೀಯವಾದ ಕೆಲವಿಚಾರಗಳು ನನ್ನ ಕೈಕಟ್ಟಿದ್ದವೆಂಬುದನ್ನು ನನ್ನಿಂದ ನಿರೂಪಿಸಲು ಅಸಾಧ್ಯವಾಯಿತು. ದೊಡ್ಡಗುರುಗಳೆದುರು ವಾದಮಾಡಿ ಉತ್ತರಕೊಟ್ಟು ಬದುಕುವುದುಂಟೇ? ತಪ್ಪಾಯಿತು, ಎಂದು ಉದ್ದಕ್ಕೆ ಅಡ್ಡಬಿದ್ದೆ. ನನ್ನಿಂದ ಅಪರಾಧವಾದದ್ದು ಹೌದು.ಸದ್ಯಕ್ಕೆ ಏನು ಎಂದು ಅಪ್ಪಣೆಯಾಗಬೇಕು ಎಂದು ನಮ್ರತೆಯಿಂದಲೇ ನಿವೇದಿಸಿಕೊಂಡೆ. “ಅದನ್ನು ನೀನೇ ನಿರ್ಧರಿಸಬೇಕು. ಶಿಕ್ಷೆ ಎಂಬುದು ತಪ್ಪು ಮಾಡಿದ್ದಕ್ಕೇ ಇರುವ ವ್ಯವಸ್ಥೆ” – ಶ್ರೀಗಳವರ ದೃಢವಾದ ಮಾತು.ಈ ವರ್ಷ ನಮ್ಮ ಮನೆಯಲ್ಲಿಯೇ ಇಬ್ಬರನ್ನೂ ಇಟ್ಟುಕೊಂಡು ಸಾಹಿತ್ಯ ಪರೀಕ್ಷೆಗೆ ನಿಯತವಾದ ಎಲ್ಲ ಪಾಠ್ಯಗಳನ್ನೂ ಪಾಠಮಾಡಿ ಪರೀಕ್ಷೆಗೆ ತಯಾರು ಮಾಡುವುದು ನನ್ನ ಹೊಣೆ ಎಂದೆ.ಒಪ್ಪಿ ಅನುಗ್ರಹಿಸಿದರು. ಆಗಿನ ಗಂಭೀರ ಮುಖಮುದ್ರೆಯ ಶಾಸಕಮೂರ್ತಿ ಸ್ವಲ್ಪ ಹೊತ್ತಿನಲ್ಲಿಯೇ ಮಾತೃವಾತ್ಸಲ್ಯದ ಪ್ರತಿರೂಪವಾಗಿ ಬದಲಾಗಿದ್ದು ಬೇರೆಯೇ ಆದ ಸಂಗತಿ.

ಇದು ಪೂಜ್ಯಶ್ರೀಗಳು ಪೂರ್ವಾಶ್ರಮದಲ್ಲಿ ಗೋಕರ್ಣದಲ್ಲಿ ವೇದವಿದ್ಯಾಭ್ಯಾಸ ಮುಗಿಸಿದ ವರ್ಷ ನಡೆದ ಘಟನೆ. ನನ್ನ ಭಾಗ್ಯದ ಬಾಗಿಲು ತೆಗೆದ ಪರಿ.

|| ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ ||

ನಿಜ, ಮಹಾತ್ಮರ ಪ್ರತಿಯೊಂದು ನಡೆ-ನುಡಿಯ ಹಿಂದೆಯೂ ನಮಗರಿಯದ ವಿಷಯವೊಂದು ಅಂತರ್ನಿಹಿತವಾಗಿರುತ್ತದೆ.ಪಾಮರರಾದ ನಮಗೆ ತಿಳಿಯುವುದು ಫಲಸಿದ್ಧಿಯ ನಂತರವೇ.

ಶ್ರೀರಾಮಚಂದ್ರಾಪುರಮಠದ ಶಿಷ್ಯರಾಗಿರುವುದೂ ನಮ್ಮ ಬದುಕಿನ ಭಾಗ್ಯ ಎಂಬುದು ಅತಿಶಯೋಕ್ತಿಯ ಮಾತಲ್ಲ. ಅವಿಚ್ಛಿನ್ನಪರಂಪರೆಯ ಏಕೈಕ ಶಾಂಕರ ರಾಜಗುರುಪೀಠದ ಶಿಷ್ಯರು ನಾವು. ಈ ಪೀಠವನ್ನು ಆರೋಹಿಸಿ ಸಮಾಜಕ್ಕೆ ಸತ್ಪಥದರ್ಶನ ಮಾಡಿದ ಎಲ್ಲ ಪೂರ್ವಾಚಾರ್ಯರೂ ಸಹ ಪರಮತಪಸ್ವಿಗಳು, ನಿಗ್ರಹಾನುಗ್ರಹಸಮರ್ಥರು, ಧರ್ಮಸಾಮ್ರಾಜ್ಯದ ನೇತಾರರು. ಆಯಾಕಾಲದ ಆಳರಸರಿಗೆ ಮಾರ್ಗದರ್ಶನ ನೀಡಿದ ಶ್ರೇಯಸ್ಸು ಈ ಎಲ್ಲ ಪೀಠಾಧೀಶರಿಗೂ ಸಲ್ಲುತ್ತದೆ. ಈ ಗುರುಪರಂಪರೆಯನ್ನು ಸ್ಮರಿಸುವಾಗಲೇ ಮೈರೋಮಾಂಚನಗೊಳ್ಳುತ್ತದೆ.
ಈ ಮಠದ 33ನೆಯ ಪೀಠಾಧಿಪತಿಗಳಾಗಿದ್ದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪರಮತಪೋಧನರು. ಅಪಾರವಾದ ಶಿಷ್ಯವಾತ್ಸಲ್ಯವನ್ನು ಹೊಂದಿದವರು. ತಮಿಳುನಾಡಿನ ತ್ರಿಣ್ಣವಲ್ಲಿಯಲ್ಲಿ ಶಾಸ್ತ್ರಾಧ್ಯಯನಮಾಡಿದ ಪೂಜ್ಯರು ತಮ್ಮ ಪಾಂಡಿತ್ಯದಿಂದ ಕಾಂಚಿಯ ಮಹಾರಾಜರಿಂದ “ರಾಮಭದ್ರ”ನೆಂಬ ಗಜರಾಜ ಸಮರ್ಪಣೆಯ ಸಹಿತ ಸತ್ಕೃತರಾಗಿ ಶ್ರೀಮಠದ ಕೀರ್ತಿಯನ್ನು ವಿಸ್ತರಿಸಿದವರು. ಕೊಡಚಾದ್ರಿಯ ಚಿತ್ರಮೂಲದಲ್ಲಿ ಉಗ್ರತಪಸ್ಸನ್ನು ಆಚರಿಸಿ ಕಾರಣಾಂತರದಿಂದ ನಷ್ಟವಾಗಿದ್ದ ದೃಷ್ಟಿಶಕ್ತಿಯನ್ನು ಪುನಃ ಪಡೆದು “ದುರವಾಪತಪಃಪ್ರಾಪ್ತಚಕ್ಷುಷೇ ಪ್ರಥಿತಾತ್ಮನೇ” ಎಂದು ಪ್ರಶಂಸಿತರಾದ ಮಹಾತ್ಮರು.

ಹಿಂದಿನ ಪೀಠಾಧೀಶರ ಪರಮಗುರುಗಳಾಗಿದ್ದವರು. ಇವರು ಒಮ್ಮೆ ೧೯೮೦ರಲ್ಲಿ ಶಿಷ್ಯಸ್ವೀಕಾರದ ಯೋಚನೆಯೂ ಶ್ರೀಮಠದ ವಲಯದಲ್ಲಿಲ್ಲದ ಕಾಲದಲ್ಲಿ ೩೫ ನೆಯ ಯತಿಶ್ರೇಷ್ಠರಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಂದ್ರಭಾರತೀ ಶ್ರೀಗಳವರಿಗೆ ಸ್ವಪ್ನದರ್ಶನನೀಡಿ ತಾವು ತೀರ್ಥಹಳ್ಳಿಯ ಶ್ರೀಮಠವನ್ನು ಪ್ರವೇಶಿಸಿದ ಸೂಚನೆಯನ್ನು ನೀಡಿದರು. ಆಗ ಜಾಗೃತರಾದ ಶ್ರೀಗಳು ಅಂದಿನ ತತ್ಕಾಲೀನ ಗ್ರಹಸ್ಥಿತಿಯನ್ನು ಬರೆದಿಟ್ಟು ಇಂತಹ ನಕ್ಷತ್ರ ರಾಶಿಯವರಾದ ನಮ್ಮ ಪರಮಗುರುಗಳೇ ನಮ್ಮನಂತರ ಪೀಠಕ್ಕೆ ಬರುತ್ತಾರೆ. ಇನ್ನು ನಮ್ಮದು ಕೇವಲ ಉಸ್ತುವಾರಿ ಸರ್ಕಾರ ಮಾತ್ರ ಎಂದಿದ್ದರು. ಪೀಠಕ್ಕೆ ಬಂದ ಅನತಿಕಾಲದಲ್ಲಿಯೇ ಜಾಗತಿಕ ಸ್ತರದಲ್ಲಿ ಪ್ರಸಿದ್ಧರಾಗಿ ತನ್ಮೂಲಕ ಶ್ರೀಮಠದ ಕೀರ್ತಿಯನ್ನು ಜಗದಗಲಕ್ಕೆ ವಿಸ್ತರಿಸಿದ ಇಂದಿನ ೩೬ನೆಯ ಪೀಠಾಧೀಶರು ನಮಗೆ ದೊರೆತಿದ್ದು ಆಕಸ್ಮಿಕವಾಗಿರದೆ ಪ್ರಬಲವಾದ ದೈವೀಸಂಕಲ್ಪ ಹಾಗೂ ಪೂರ್ವಾಚಾರ್ಯರ ಶಿಷ್ಯವಾತ್ಸಲ್ಯಗಳೂ ಕಾರಣವಾಗಿವೆ ಎಂಬುದಕ್ಕೆ ಈ ಘಟನೆಯೂ ನಿದರ್ಶನ.

ಪೂರ್ವಾಶ್ರಮದಲ್ಲಿ ಶಿಕ್ಷಾಗುರುವಿನ ಮಕ್ಕಳೊಡನೆ

ಪೂಜ್ಯರ ಪೂರ್ವಾಶ್ರಮದ ಪಿತಾಮಹ ಚದರವಳ್ಳಿಯ ಕೀರ್ತಿಶೇಷ ವೇ|ಮಹಾಬಲೇಶ್ವರ ಭಟ್ಟರು ನಮ್ಮ ಕುಟುಂಬಕ್ಕೆ ಅತ್ಯಾಪ್ತರಾಗಿದ್ದವರು.ಎಲ್ಲ ಸುಖ-ಸಂತೋಷಗಳಲ್ಲಿ ಕಷ್ಟಕಾರ್ಪಣ್ಯಗಳಲ್ಲಿ ಭಾಗಿಗಳಾಗುತ್ತಿದ್ದವರು. ಹಾಗಾಗಿ ಎರಡೂ ಮನೆಗಳಲ್ಲಿನ ಬಾಂಧವ್ಯ ತುಂಬಾ ಚೆನ್ನಾಗಿತ್ತು. ಶ್ರೀಗಳ ಪೂರ್ವಾಶ್ರಮದ ಅಜ್ಜನ ಮನೆ ನಿಟ್ಟೂರು ಸಮೀಪದ ಹೆಬ್ಬಿಗೆ. ಮೂವತ್ತು ವರ್ಷಗಳ ಹಿಂದೆ ಅಲ್ಲಿಗೆ ಸಾರಿಗೆ ಸಂಪರ್ಕ ಈಗಿನಂತಿರಲಿಲ್ಲ. ಸುಮಾರು ಇಪ್ಪತ್ತು ಕಿಲೋಮೀಟರ್ ನಡೆದು ಈವಳ್ಳಿಹೊಳೆಯನ್ನು ದೋಣಿಯಲ್ಲಿ ದಾಟಿ ಹೋಗಬೇಕಿತ್ತು.ಹೀಗೆ ತಾಯಿಯೊಂದಿಗೆ ಅಜ್ಜನಮನೆಗೆ ಹೋಗುವಾಗ ಅಥವಾ ಬರುವಾಗ ಮಧ್ಯೆ ನಮ್ಮಮನೆಯಲ್ಲಿ ಉಳಿದುಹೋಗುವ ರೂಢಿಯಿತ್ತು. ಆದ್ದರಿಂದ ಶ್ರೀಗಳವರನ್ನು ಅವರ ಶೈಶವದಿಂದಲೂ ನೋಡಿದವನು ನಾನು. ಉಪನಯನವಾದ ನಂತರ ವೇದಾಧ್ಯಯನಕ್ಕಾಗಿ ಅವರ ಹಿರಿಯರು ಆಯ್ಕೆ ಮಾಡಿದ್ದು ಗೋಕರ್ಣವನ್ನು. ಅಷ್ಟರಲ್ಲಿ ನಾನು ಗೋಕರ್ಣದ ಶ್ರೀ ಮೇಧಾದಕ್ಷಿಣಾಮೂರ್ತಿ ವೇದಭವನ ವಿದ್ಯಾಲಯದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ.

ಪೂಜ್ಯರು ಮತ್ತು ಜಗದೀಶ ಶರ್ಮಾ ಗೋಕರ್ಣಕ್ಕೆ ವೇದಾಧ್ಯಯನಕ್ಕೆಂದು ಬಂದಿದ್ದು 1986ರ ಜೂನ್10ರಂದು. ವಿದ್ಯಾಲಯಕ್ಕೆ ಸೇರಿ ಕೃಷ್ಣಯಜುರ್ವೇದವನ್ನು ಕ್ರಮಾಂತ ಅಧ್ಯಯನ ಮಾಡಿದ್ದು 1992ರ ವರೆಗೆ.ಮೊದಲವರ್ಷ ಅಂತಹ ಪ್ರತಿಭಾನ್ವಿತ ಎಂದು ಗುರುತಿಸುವಂತಹ ವ್ಯಕ್ತಿತ್ವವೇನೂ ಎದ್ದು ಕಾಣುತ್ತಿರಲಿಲ್ಲ. ಆದರೆ ಕ್ರಮೇಣ ಸರಳ ಸಂಸ್ಕೃತ ಸಂಭಾಷಣೆಯನ್ನು ಕರಗತಗೊಳಿಸಿಕೊಂಡರು.ವಿದ್ಯಾಲಯದಲ್ಲಿ ಪ್ರತಿ ತ್ರಯೋದಶಿದಿನದಂದು ನಡೆಯುತ್ತಿದ್ದ ವೇದಕಂಠಪಾಠ-ಸಂಸ್ಕೃತಭಾಷಣಗಳಲ್ಲಿ ಭಾಗವಹಿಸತೊಡಗಿದರು. ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಗೆ ಓದುತ್ತಿದ್ದ ಶಾಸ್ತ್ರಾಭ್ಯಾಸಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಅತಿಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ನೀಡಲಾಗುತ್ತಿದ್ದ ಸರ್ವಪ್ರಥಮಾ ಪ್ರಶಸ್ತಿಯನ್ನೂ ಅನೇಕಬಾರಿ ಪಡೆದರು.ಅಂದಿನ ಆ ಹೆಜ್ಜೆಗಳಲ್ಲಿ ಇಂದಿನ ತ್ರಿವಿಕ್ರಮಪದಚಿಹ್ನೆಯನ್ನು ನಾವೀಗ ಗುರುತಿಸಬಹುದು.

ವಿದ್ಯಾರ್ಥಿನಿಲಯದಲ್ಲಿ ವಾಸ. ಆಗಿನ ನಿಲಯರಕ್ಷಕನೂ ನಾನೇ ಆಗಿದ್ದೆ. ಬಾಲ್ಯಸಹಜವಾದ ಅವರ ತುಂಟಾಟಗಳು ಮಾತ್ರ ನನ್ನ ನಿದ್ದೆಗೆಡಿಸುತ್ತಿತ್ತು. ತುಂಬಿ ಹರಿಯುವ ಕೋಟಿತೀರ್ಥದಲ್ಲಿ ಈಜಿನ ಮೋಜು. ಒಮ್ಮೆ ಕೋಟಿತೀರ್ಥದ ಮಧ್ಯದಲ್ಲಿನ ಕೋಟೀಶ್ವರದಿಂದ ಹಿಂದಿರುಗಿ ಬರುವಾಗ ಕಾಲು ಸೋತು ದಡಸೇರಲು ಹರಸಾಹಸ ಪಟ್ಟಿದ್ದರು. ಇಷ್ಟಾದ ಮೇಲೆ ನಿಲಯದ ಎಲ್ಲ ವಿದ್ಯಾರ್ಥಿಗಳಿಗೂ ಕೋಟಿತೀರ್ಥದ ಈಜನ್ನು ನಿರ್ದಾಕ್ಷಿಣ್ಯವಾಗಿ ನಿಷೇಧಿಸಬೇಕಾಯಿತು. ಆದರೆ ಸ್ನೇಹಿತರ ಮನೆಗೋ ಬಂಧುಗಳ ಮನೆಗೋ ಹೋದಾಗ ಅಲ್ಲಿಯ ಕೆರೆ, ಹೊಳೆಗಳಲ್ಲಿ ಈಜುವುದಕ್ಕೆ ಯಾವ ದೊಣ್ಣೆನಾಯಕನ ಅನುಮತಿಯೂ ಬೇಕಿರಲಿಲ್ಲವೆಂಬುದು ಬೇರೆ ಮಾತು.

ಒಮ್ಮೆಯಂತೂ ರಾಜ್ಯಾದ್ಯಂತ ಬಿಗುವಾದ ಪರಿಸ್ಥಿತಿ. ಮುಖ್ಯಪಟ್ಟಣಗಳಲ್ಲಿ 144- ಕರ್ಫ್ಯೂಗಳಿದ್ದ ಕಾಲ. ಪ್ರಾಯಶಃ ಅಯೋಧ್ಯಾ ಪ್ರಕರಣವೆಂದು ನನ್ನ ನೆನಪು. ಊರಿಗೆ ಹೋಗುತ್ತೇವೆಂದು ಹೇಳಿ ಉಳಿದ ಸಹಾಧ್ಯಾಯಿಗಳೊಂದಿಗೆ ಹೋಗಿದ್ದು ಕೋಮು ಗಲಭೆಯ ದಳ್ಳುರಿಯಲ್ಲಿ ಸಿಲುಕಿ ಬೇಯುತ್ತಿದ್ದ ದಕ್ಷಿಣಕನ್ನಡಕ್ಕೆ. ಇದನ್ನು ಆಮೇಲೆ ತಿಳಿದ ನಮ್ಮ ಸ್ಥಿತಿ ಹೇಗಾಗಿರಬಹುದೆಂಬುದನ್ನು ಊಹಿಸಬೇಕಷ್ಟೆ.

ವೇದಾಧ್ಯಯನ ಮುಗಿದ ನಂತರ ಸಂಸ್ಕೃತಸಾಹಿತ್ಯಪರೀಕ್ಷೆಗೆ ಕುಳಿತದ್ದು. ಮೊದಲೇ ಹೇಳಿದಂತೆ ಮೂರುವರ್ಷಗಳ ಪಾಠ್ಯವನ್ನು ಕೇವಲ ಎಂಟು ತಿಂಗಳುಗಳಲ್ಲಿಯೇ ಓದಿ ಪರೀಕ್ಷೆಗೆ ಸಿಧ್ಧವಾಗಬೇಕಿತ್ತು. ಅಪರಿಹಾರ್ಯವಾದ ಇಂಗ್ಲಿಶ್ ಭಾಷೆ ಬೇರೆ. ನಾನೇನೋ ಕಾಲೇಜು ಮುಗಿಸಿಬಂದವನು ಬಿಡುವಿನ ಪೂರ್ತಿ ಪಾಠ ಮಾಡುತ್ತಿದ್ದೆ. ಆದರೆ ಇನ್ನುಳಿದ ಈರ್ವರು ಅಧ್ಯಾಪಕರೂ ಸೇರಿದಂತೆ ಮಾಡಿದ ದಿನದ ಪಾಠ ಬೆಟ್ಟದಷ್ಟಾಗುತ್ತಿತ್ತು. ಆದರೂ ನಮ್ಮಮನೆಯ ಮಹಡಿಯಲ್ಲಿ ಕುಳಿತು ಜಗದೀಶ ಶರ್ಮರೊಂದಿಗೆ ಗಾಢವಾಗಿ ಅಧ್ಯಯನ ಮಾಡುತ್ತಿದ್ದರು. ಆಗ ತಮ್ಮ ಜೊತೆಗೆ ಹಸುಗೂಸಾಗಿದ್ದ ನನ್ನ ಮಗ ರಾಘವೇಂದ್ರ ಪ್ರಸಾದನನ್ನು ಹಾಗು ಮಗಳು ವಿರಜಾಳನ್ನಿಟ್ಟುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಪುಟ್ಟ ಮತ್ತು ಪುಟ್ಟಿ ಎಂದು ಅವರಿಟ್ಟ ಹೆಸರು ಇಂದಿಗೂ ನನ್ನ ಮಕ್ಕಳೀರ್ವರಿಗೂ ಖಾಯಂ ಹೆಸರಾಗಿದೆ. ಆಹಾರ-ಉಪಾಹಾರಗಳ ವಿಷಯದಲ್ಲಿ ಎಂದೂ ಯೋಚನೆ ಮಾಡಿದವರಲ್ಲ. ನಾವಾಗಿ ಕರೆದು ಕೊಟ್ಟರಷ್ಟೇ. ಆದರೆ ನಿತ್ಯಾನುಷ್ಠಾನದಲ್ಲಿ ಓದಿನ ವಿಚಾರದಲ್ಲಿ ಮಾತ್ರ ಎಂದೂ ರಾಜಿಮಾಡಿಕೊಳ್ಳುತ್ತಿರಲಿಲ್ಲ ಇದೇ ಸಂದರ್ಭದಲ್ಲಿ ಪ್ರತಿದಿನ ಕೋಟಿತೀರ್ಥದಲ್ಲಿನ ನಮ್ಮ ಮೂಲಮಠಕ್ಕೆ ಹೋಗಿ ರಾಮದೇವರ ದರ್ಶನಮಾಡಿ ಅಲ್ಲಿಯೇ ಇರುವ ಮೂವ್ವತ್ತಮೂರನೆಯ ಪೀಠಾಧಿಪತಿಗಳಾದ ಮಹಾತಪಸ್ವಿ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಮಾಧಿಗೆ ಪ್ರಣಾಮ ಸಲ್ಲಿಸಿ ಬರುತ್ತಿದ್ದರು.

ಗುರುಕೃಪಾಕಟಾಕ್ಷವೆಂಬುದು ಎಂತಹ ಬದಲಾವಣೆಯನ್ನು ತರಬಹುದೆಂಬುದಕ್ಕೆ ಪೂಜ್ಯಶ್ರೀಗಳೇ ದೃಷ್ಟಾಂತ. ಸಾಹಿತ್ಯ ಪಾಠಗಳು ಪ್ರಾರಂಭವಾದ ಮೂರುತಿಂಗಳಲ್ಲಿ ನವರಾತ್ರಿ ಬಂತು. ಇಬ್ಬರನ್ನೂ ಜೊತೆಗೆ ಕರೆದುಕೊಂಡು ತೀರ್ಥಹಳ್ಳಿಗೆ ಬರುವಂತೆ ದೊಡ್ಡಗುರುಗಳ ಆದೇಶವಾಯಿತು. ವಾರಪೂರ್ತಿ ಬಿಡುವಿನಲ್ಲೆಲ್ಲ ಗುರುಗಳ ಪ್ರಶ್ನೆಗಳ ಪ್ರವಾಹ. ಮೊದಲ ದಿನವೇ ಶ್ರೀಗಳು ತರ್ಕಶಾಸ್ತ್ರದಲ್ಲಿ ಅತ್ಯಂತ ಕಠಿಣವಾದ ವಾಯು ಲಕ್ಷಣವನ್ನು ದಲಕೃತ್ಯಸಹಿತವಾಗಿ ಧಾರಾರೂಪವಾಗಿ ನಿರೂಪಿಸಿದಾಗ ಗುರುಗಳು ವಿಸ್ಮಿತರಾದರು. ಅಂದೇ ಅವರು ತಮ್ಮ ಉತ್ತರಾಧಿಕಾರಿಯನ್ನು ಶ್ರೀಗಳಲ್ಲಿ ಗುರುತಿಸಿದರೇನೋ. ನಮಗೂ ಸಹ ತರ್ಕಶಾಸ್ತ್ರದಲ್ಲಿ ಇಷ್ಟು ಕಡಿಮೆ ಸಮಯದಲ್ಲಿ ಪ್ರವೇಶ ಸಿಕ್ಕಿರಲಿಲ್ಲ. “ಪದಾರ್ಥಜ್ಞಾನ, ಅವಚ್ಛೇದ್ಯಾವಚ್ಛೇದಕತ್ವ, ಉದ್ದೇಶ್ಯವಿಧೇಯಭಾವಗಳ ಪರಿಚಯವಾಯಿತೆಂದರೆ ತರ್ಕಶಾಸ್ತ್ರ ಬಂದಂತೆಯೇ. ಉಳಿದ ಎಲ್ಲಶಾಸ್ತ್ರಗಳೂ ಸುಲಭವಾಗಿ ಅರ್ಥವಾಗುತ್ತವೆ” ಎಂದು ಶ್ರೀಗುರುಗಳು ಅಂದು ನುಡಿದದ್ದು ನನ್ನ ಸ್ಮೃತಿಪಥದಲ್ಲಿ ಅಚ್ಚೊತ್ತಿದೆ.

ಓದಿನಲ್ಲಿ ಅನಿತರಸಾಧಾರಣ ಪ್ರತಿಭೆಯನ್ನು ಹೊಂದಿದ್ದ ಪೂಜ್ಯರು ಸಾಹಿತ್ಯ ಪರೀಕ್ಷೆಯಲ್ಲಿ ಆ ವರ್ಷ ರಾಜ್ಯಕ್ಕೇ ಪ್ರಥಮರಾಗಿ ಉತ್ತೀರ್ಣರಾದರು. ಅಷ್ಟೇ ಅಲ್ಲ ಇಂಗ್ಲಿಷ್ ಭಾಷೆಯಲ್ಲಿ ನೂರೈವತ್ತು ಅಂಕಗಳಿಗೆ ನೂರನಲವತ್ತೇಳು ಅಂಕಗಳನ್ನು ಪಡೆದು ದಾಖಲೆಬರೆದರು. ಆದರೆ ವ್ಯವಹಾರದಲ್ಲಿ ಮಾತ್ರ ಅಷ್ಟೊಂದು ಕುಶಲತೆಯಿತ್ತೆನ್ನಲಾರೆ. ಇಷ್ಟು ದೊಡ್ಡಸಮಾಜದ ವಿಸ್ತಾರಜವಾಬ್ದಾರಿಯನ್ನು ಹೊರುವವರಿಗೆ ವ್ಯವಹಾರಕೌಶಲವಿಲ್ಲದಿದ್ದರೆ ಏನಾದೀತೋ ಎಂಬ ಚಿಂತೆ ನನಗಿತ್ತು. ಆದರೆ ಅದೆಲ್ಲವೂ ನಮ್ಮಂತಹ ಸಾಮಾನ್ಯರಿಗೆ ಮಾತ್ರ ಎಂಬುದು ಬಹುಬೇಗ ನನ್ನ ಅರಿವಿಗೆ ಬಂತು. ಈ ಮಧ್ಯೆ ಶಿಷ್ಯಪರಿಗ್ರಹಾರ್ಥಸಮಿತಿಯ ಉಪಾಂಗವಾದ ವೈದಿಕರ ಆಯ್ಕೆಸಮಿತಿಯು ಪೂಜ್ಯರ ಜಾತಕವನ್ನು ಪರಿಶೀಲಿಸಿ ನಾಡಿನ ಶೇಷ್ಠಜ್ಯೋತಿರ್ವಿದರ ಅಭಿಪ್ರಾಯವನ್ನು ಪಡೆದು ವಿರಕ್ತಸ್ವಭಾವ, ವೇದ ಹಾಗೂ ಶಾಸ್ತ್ರಜ್ಞಾನ, ಪರಿವ್ರಾಜಕಾದಿಯೋಗಗಳನ್ನು ಅನುಲಕ್ಷಿಸಿ ಪೂಜ್ಯರನ್ನು ಮುಂದಿನ ಉತ್ತರಾಧಿಕಾರಿಗಳನ್ನಾಗಿ ಮಾಡಬಹುದೆಂಬ ಅಭಿಪ್ರಾಯವನ್ನು ಶ್ರೀಗಳಲ್ಲಿ ನಿವೇದಿಸಿಕೊಂಡಿತ್ತು. ಉತ್ತರಾಧಿಕಾರಿಯ ಆಯ್ಕೆಯ ವಿಷಯದಲ್ಲಿ ತುಂಬ ಸಂತೋಷವನ್ನು ಹೊಂದಿದ್ದ ಶ್ರೀಗಳು ಮಾರ್ಚ್ 1994ರಲ್ಲಿ ತಮ್ಮ ವಾಸ್ತವ್ಯವಾಗಿದ್ದ ಗಿರಿನಗರದಲ್ಲಿ ಪೂಜ್ಯರನ್ನು ಶ್ರೀಮಠದ ಉತ್ತರಾಧಿಕಾರಿಯೆಂದು ಘೋಷಿಸಿದರು.

ದೊಡ್ಡಗುರುಗಳು [ಪ್ರಸಕ್ತ ಗುರುಗಳ ಹಿಂದಿನ ಗುರುಗಳಾದ ಬ್ರಹ್ಮೀಭೂತ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು]

ಉತ್ತರಾಧಿಕಾರಿಯ ಆಯ್ಕೆಯ ಸಂದರ್ಭದಲ್ಲಿಯೂ ನಡೆದ ಒಂದು ದೈವೀಘಟನೆಯನ್ನು ನಾನಿಲ್ಲಿ ಸ್ಮರಿಸುತ್ತೇನೆ. ಅರ್ಹರಾದ ಮೂವರು ವಟುಗಳಲ್ಲಿ ತಾವು ಯಾರನ್ನು ಆಯ್ಕೆ ಮಾಡಬೇಕೆಂದು ಸೂಚಿಸಿ ಎಂದು ಅನೇಕಬಾರಿ ನಮ್ಮ ಪೂರ್ವಗುರುಗಳನ್ನು ಪ್ರಾರ್ಥಿಸಿದ್ದೇವೆ ಆದರೆ ಯಾವಸೂಚನೆಯನ್ನೂ ಅವರು ಅನುಗ್ರಹಿಸಿಲ್ಲ ಎಂದು ಹೇಳುತ್ತಿದ್ದ ಶ್ರೀಗಳ ಮಾರ್ಗದರ್ಶನಕ್ಕೋ ಎಂಬಂತೆ ಒಮ್ಮೆ ಎಂದಿನಂತೆ ಕೋಟಿತೀರ್ಥದ ನಮ್ಮ ಶ್ರೀಮಠಕ್ಕೆ ಹೋಗಿ ಗುರುಸಮಾಧಿಯೆದುರು ಧ್ಯಾನಸ್ಥರಾಗಿದ್ದ ನಿಯೋಜಿತಶ್ರೀಗಳಿಗೆ ದೈವೀಸೂಚನೆಯೊಂದು ಲಭಿಸಿತು. ಆ ವಿಷಯವನ್ನು ದೊಡ್ಡಗುರುಗಳಲ್ಲಿ ನಿವೇದಿಸಲೆಂದು ನಾನು ತ್ವರಿತವಾಗಿ ಅಂದೇ ಬೆಂಗಳೂರಿಗೆ ಹೋಗಿ ಗುರುಗಳನ್ನು ಕಂಡು ನಿವೇದಿಸಿದಾಗ ಆಶ್ಚರ್ಯವೊಂದು ಕಾದಿತ್ತು. ಯಾವದಿನ ಪೂಜ್ಯರಿಗೆ ದೈವೀಸೂಚನೆಯು ಲಭಿಸಿತೋ ಅಂದೇ ದೊಡ್ಡಗುರುಗಳಿಗೂ ಸಹ ನಿಮ್ಮ ಉತ್ತರಾಧಿಕಾರಿಯ ಆಯ್ಕೆ ಸಮೀಚೀನವಾಗಿದೆ ಎಂದು 33ನೆಯ ಶ್ರೀ ಶ್ರೀಮದ್ರಾಘವೇಶ್ವರಭಾರತೀಶ್ರೀಗಳು ಸ್ವಪ್ನದರ್ಶನದಲ್ಲಿ ಅಪ್ಪಣೆ ಕೊಡಿಸಿದ್ದರು.ಈ ಪೀಠದ ಗುರುಪರಂಪರೆಯಲ್ಲಿ ಬಂದ ಎಲ್ಲ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರೂ ತಮ್ಮ ವಿಶಿಷ್ಟತೆಯಿಂದ ಶ್ರೀಮಠದ ಕೀರ್ತಿಯನ್ನು ಬೆಳಗಿದವರು. ಅಷ್ಟೇ ಅಲ್ಲ ಸಮಾಜದ ಶಿಷ್ಯರಿಗಾಗಿ ತಮ್ಮ ಸಂಪೂರ್ಣ ಬದುಕನ್ನೇ ಮುಡಿಪಾಗಿಟ್ಟವರು ಎಂಬುದನ್ನು ಇತಿಹಾಸವು ಉಲ್ಲೇಖಿಸಿದೆ.

ಪ್ರಥಮ ಶ್ರೀರಾಘವೇಶ್ವರಭಾರತಿಗಳು ತಮ್ಮ ಅಪ್ರತಿಮ ತಪಃಶಕ್ತಿ ಶಾಸ್ತ್ರವಿದಗ್ಧತೆಗಳಿಂದ ವಿಜಯನಗರದ ಅರಸರಿಂದ ಪಂಚಕಲಶಯುಕ್ತವಾದ ಆಂದೋಲಿಕೆಯ ಸಹಿತ ವಿಶೇಷವಾಗಿ ಸಮ್ಮಾನಿತರಾದವರು. ಅಷ್ಟೇ ಅಲ್ಲ ಜ್ಯೊತಿಷ್ಯದಲ್ಲಿ ಅಗಾಧಪಾಂಡಿತ್ಯವನ್ನು ಹೊಂದಿದ್ದ ಮಹಾಮೇಧಾವಿಗಳು. ಎರಡನೆಯ ಶ್ರೀ ರಾಘವೇಶ್ವರಭಾರತೀಶ್ರೀಗಳು ಹಿರೇ ಒಡೆಯರೆಂದೇ ಖ್ಯಾತರಾಗಿ ಮಹಾರಾಜರಂತೆ ಅಪ್ರತಿಹತವಾದ ಶಾಸಕಶಕ್ತಿಯುಳ್ಳವರಾಗಿದ್ದು ಶ್ರೀಮಠಕ್ಕೆ ಅನೇಕ ರೀತಿಯ ಉಂಬಳಿ, ಉತಾರಗಳನ್ನು ಸಂಪಾದಿಸಿದ ಯತಿಶ್ರೇಷ್ಠರು. ವೇಂಕಟೇಶ್ವರಭಾರತೀ ಎಂಬ ಮತ್ತೊಂದು ಹೆಸರನ್ನು ಹೊಂದಿದ್ದ ತೃತೀಯ ಶ್ರೀರಾಘವೇಶ್ವರಭಾರತಿಗಳ ಹಾಗೂ ಶ್ರೀರಘೂತ್ತಮ ಭಾರತೀ ಶ್ರೀಗಳ ಉತ್ತರಾಧಿಕಾರಿಗಳಾದ ಚತುರ್ಥ ರಾಘವೇಶ್ವರ ಭಾರತೀಶ್ರೀಗಳ ಕಾಲದಲ್ಲಿ ಶ್ರೀಮಠದವ್ಯಾಪ್ತಿ ವಿಸ್ತಾರವಾಯಿತು.  ಈಗಿನ ಒಂಬತ್ತನೆಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳವರ ಪೀಠಾಧಿಪತ್ಯದಲ್ಲಿ ಮಠದ ಹೆಸರು ಜಾಗತಿಕಸ್ತರದಲ್ಲಿ ವಿರಾಜಮಾನವಾಯಿತು.

ಸನ್ಯಾಸದ ನಂತರ ಪೀಠಾರೋಹಣ ಆದಮೇಲೆ ಶ್ರೀಗಳಿಗೆ ಪೂರ್ವಾಶ್ರಮದ ಶಿಕ್ಷಾಗುರುವಿನಿಂದ ಪಾದಪೂಜೆ
ಈಗಿನ 36ನೆಯ ಪೀಠಾಧಿಪತಿಗಳ ಎಲ್ಲ ನಡವಳಿಕೆಗಳಲ್ಲಿ ಹಿಂದಿನ 33ನೆಯ ಪೀಠಾಧೀಶರಾದ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಶ್ರೀಗಳ ಸಾದೃಶ್ಯ ಕಂಡುಬರುವುದು ಖಂಡಿತವಾಗಿಯೂ ಆಕಸ್ಮಿಕವಲ್ಲ. ಒಂದರೆಡು ಘಟನೆಗಳನ್ನು ದೃಷ್ಟಾಂತವಾಗಿ ನೀಡುವುದಾದರೆ: 
ರಾಮಭದ್ರ ಎಂಬ,   ಶ್ರೀಮಠದ ಆನೆ ಗತಿಸಿದ ಬಳಿಕ ಅದರ ದಂತವನ್ನುಪಯೋಗಿಸಿ ತಯಾರಿಸಿದ, ಅತ್ಯದ್ಭುತ ಕಲಾಕುಸುರಿಯ ಏಕೈಕ ಹಸ್ತಿದಂತ ಸಿಂಹಾಸನ

33ನೆಯ ಶ್ರೀಶ್ರೀಮದ್ರಾಘವೇಶ್ವರಭಾರತೀಶ್ರೀಗಳು ಪೀಠಕ್ಕೆ ಬಂದ ಹೊಸದರಲ್ಲಿ ಶ್ರೀಮಠಕ್ಕೆ ಆನೆಯೊಂದನ್ನು ಬಯಸಿದ್ದರು. ಗುರುಗಳಾದ [ಅಂದಿನ] ಶ್ರೀ ಶ್ರೀಮದ್ರಾಘವೇಂದ್ರಭಾರತೀ ಶ್ರೀಗಳು ಶಿಷ್ಯರ ಆಸಕ್ತಿಯನ್ನು ತಿಳಿದು ಆನೆಯನ್ನು ಸಂಪಾದಿಸಲು ಕೊಡಗಿನ ಅರಸರಿಗೆ ಕರಣಿಕ ಸುಬ್ಬಯ್ಯನ ಮೂಲಕ ಪತ್ರವನ್ನು ಬರೆಸಿದ್ದರು. ನಂತರ ಕಾಂಚಿಯ ಮಹಾರಾಜನಿಂದ ರಾಮಭದ್ರ ಎಂಬ ಗಜರಾಜ ಶ್ರೀಗಳಿಗೆ ದೊರೆತು ಕೊನೆಯ ಕ್ಷಣದವರೆಗೂ ಶ್ರೀಗಳ ಸೇವೆ ಸಲ್ಲಿಸಿದ್ದು ಮಾತ್ರವಲ್ಲ ಮುಂದೆ ಹಸ್ತಿದಂತಸಿಂಹಾಸನದ ರೂಪದಲ್ಲಿ ಈಗಲೂ ಈ ಪೀಠದ ಅಧಿಪತಿಗಳ ಸೇವೆಯನ್ನು ನಡೆಸುತ್ತಿದ್ದಾನೆ. ಇವರಂತೆಯೇ ಈಗಿನ ಶ್ರೀಶ್ರೀಮದ್ರಾಘವೇಶ್ವರಭಾರತೀ ಶ್ರೀಗಳೂ ಸಹ ಎಂದೂ ಯಾವುದನ್ನೂ ಅಪೇಕ್ಷೆಪಡದವರು. ಮುಂಬಯಿ ಪ್ರಾಂತಕ್ಕೆ ಸಂಚಾರ ಹೋದಾಗ ನಮ್ಮ ಗೋಶಾಲೆಯ ರತ್ನರೂಪವಾಗಿರುವ ಮಹಾನಂದಿಯನ್ನು ಕಂಡು ಅದನ್ನು ಬಯಸಿದರು. ಅಷ್ಟೇ ಅಲ್ಲ ಯಾವಾಗ ಆ ವೃಷಭರಾಜ ಶ್ರೀಮಠವನ್ನು ಪ್ರವೇಶಿಸಿದನೋ ಆಮೇಲೆ ಮಠದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಗೋವಿನ ಕುರಿತಾಗಿ ಜನಜಾಗೃತಿ ಮೂಡುವಂತಾಯಿತು.

ಭಾರತೀಯ ಗೋಯಾತ್ರೆಯಂತಹ ಬೃಹತ್ ಆಂದೋಲನಕ್ಕೆ ಪೂಜ್ಯಶ್ರೀಗಳು ನೇತಾರರಾದರು. ೩೩ನೆಯ ಯತಿಶ್ರೇಷ್ಠರು ಮದವೇರಿದ್ದ ರಾಮಭದ್ರನನ್ನು ಪ್ರೀತಿಯ ಮಾತಿನಿಂದಲೇ ಶಾಂತಗೊಳಿಸಿದ್ದರೆ ಈಗಿನ ಶ್ರೀಗಳ ಕಾಲದಲ್ಲಿ ಪೂಜ್ಯಶ್ರೀಗಳು ಗೋಶಾಲೆಯನ್ನು ಪ್ರವೇಶಿಸುವುದರ ಒಳಗೇ ಅವರ ಆಗಮನದ ಸುಳಿವು ಪಡೆದ ಗೋವುಗಳು ಶ್ರೀಗಳತ್ತ ಹೋಗಲು ಕೊರಳಿನ ಹಗ್ಗವನ್ನೂ ಲೆಕ್ಕಿಸದೆ ಧಾವಿಸುವುದನ್ನು ಕಾಣಬಹುದು.

ಶ್ರೀಮಠದ ಉತ್ತರಾಧಿಕಾರಿಯಾಗುವವರೆಗೆ ನಂತರವೂ ಕೂಡಾ ಪೂಜ್ಯರು ಅನೇಕ ಅಗ್ನಿದಿವ್ಯಗಳನ್ನು ಕಠಿಣಪರೀಕ್ಷೆಗಳನ್ನು ಎದುರಿಸಬೇಕಾಯಿತು. ಬೇರೆಯವರಾಗಿದ್ದರೆ ಕರಗಿ ನಾಮಾವಶೇಷವೂ ಉಳಿಯದಂತಾಗುತ್ತಿದ್ದ ಆ ಎಲ್ಲ ಪರಿಸ್ಥಿತಿಗಳನ್ನೂ ದೃಢವಾಗಿ ನಿಂತು ಎದುರಿಸಿ ಗೆದ್ದು ಬಂದಿದ್ದು ಅವರ ಹಿರಿಮೆ. ನಿಯೋಜಿತ ಶ್ರೀಗಳಾಗಿ ಹತ್ತಿರದ ಬಂಧುಗಳ ಮನೆಗೆ ಭೇಟಿನೀಡಿದ ಸಂದರ್ಭದಲ್ಲಿ ನಡೆದ ಘಟನೆಯೊಂದು ಪ್ರಾಯಶಃ ಅವರ ಮನೋಭಿತ್ತಿಯಿಂದ ಎಂದೂ ಮರೆಯಾಗಲಿಕ್ಕಿಲ್ಲ. ಆಪ್ತರೆನ್ನಿಸಿಕೊಂಡವರೇ ಖುದ್ದು ಗಿರಿನಗರಕ್ಕೆ ಹೋಗಿ ಸಲ್ಲದ ಮಾತನ್ನು ಹೇಳಿಬಂದರು. ಮತ್ತೋರ್ವ ಬೃಹಸ್ಪತಿ ದೊಡ್ಡಗುರುಗಳಿಗೆ ದೀರ್ಘಪತ್ರವೊಂದನ್ನು ಬರೆದು ಕೃತಾರ್ಥನಾದ. ಆ ಸಂದರ್ಭದಲ್ಲಿ ನಾನು ಅಕ್ಷರಶಃ ಎಲ್ಲರ ಕಾಲ್ಚೆಂಡಿನಂತಾಗಿದ್ದೆ. ಒಂದೆಡೆ ದೊಡ್ಡ ಗುರುಗಳಿಂದ ಗುರುದ್ರೋಹಿ ಎನ್ನಿಸಿಕೊಳ್ಳಬೇಕಾಯಿತು. ಆಯ್ಕೆಯ ವಿಷಯದಲ್ಲಿ ನಾನು ಗುರುಗಳ ಮೇಲೆ ಪ್ರಭಾವ ಬೀರಿದೆ ಎಂದು ಕೆಲವರು. ಆಗಿರುವ ಆಯ್ಕೆಯನ್ನು ತಪ್ಪಿಸುವ ಪ್ರಯತ್ನವನ್ನು ನಾನು ಮಾಡಿದೆ ಎಂದು ಕೆಲವರು. ಆದರೆ ಇಂತಹ ಅವಿಚ್ಛಿನ್ನಪರಂಪರೆಯ ಭಾರತೀಪೀಠಕ್ಕೆ ಆಯ್ಕೆಯ ವಿಷಯದಲ್ಲಿ ಪ್ರಭಾವವಾಗಲೀ ಪ್ರತಿಬಂಧಕವಾಗಲೀ ನಡೆಯಲು ಸಾಧ್ಯವೇ ಎಂಬುದನ್ನು ಯಾರೂ, ವಿಚಾರಶೀಲರೆನಿಸಿಕೊಂಡವರೂ ಸಹ ಯೋಚಿಸಲಿಲ್ಲ.

|| ಯಮೇವೈಷ ವೃಣುತೇ ತೇನ ಲಭ್ಯಃ || --ಎಂಬ ಮಾತು ಉಪನಿಷತ್ತಿನಲ್ಲಿಯೇ ಉಳಿಯಿತು. ದೈವಾನುಗ್ರಹದಿಂದ ದೊಡ್ಡಗುರುಗಳು ಸಮಾಹಿತಚಿತ್ತರಾಗಿ ಎಲ್ಲವನ್ನೂ ತಿಳಿಗೊಳಿಸಿದರು. ಇಂತಹ ಹಲವಾರು ಅಗ್ನಿಪರೀಕ್ಷೆಗಳನ್ನು ದಾಟಿಬಂದು ಸಾಂಸಾರಿಕವಾದ ಎಲ್ಲ ಬಂಧನಗಳನ್ನೂ ಕಿತ್ತೊಗೆದು ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಬಂದರೂ ಬವಣೆ ತಪ್ಪಲಿಲ್ಲ. ಇಂತಹ ಪರಿಸ್ಥಿತಿಯನ್ನು ಹಿಂದಿನ ಪೀಠಾಧಿಪತಿಗಳೂ ಸಹ ಅನುಭವಿಸಿದವರೇ. ಆದರೆ ಸ್ವರೂಪ ಮಾತ್ರ ಬೇರೆ ಅಷ್ಟೆ. ಒಂದುರೀತಿಯಲ್ಲಿ ಈ ಒಂದು ಸಂಧಿಕಾಲವೆಂದರೆ ಶ್ರೀಸನ್ನಿಧಾನವು ಹೇಳುವಂತೆ ಚಿಕ್ಕ ಪ್ರಳಯಕಾಲವೇ. ಹಳೆಯದೆಲ್ಲ ಅಳಿಸಿ ಹೊಸತು ಉದಯವಾಗುವ ಸಮಯ. || ಪುರಾಣಮಿತ್ಯೇವ ನ ಸಾಧು ಸರ್ವಮ್ || ---ಎಂಬ ಕಾಳಿದಾಸನ ಮಾತು ಅಕ್ಷರಶಃ ಅನ್ವಯವಾಗುವ ಹೊತ್ತು.ಮರದ ಮೂಲವನ್ನು ನಂಬಿ ಕುಳಿತವ ಹಣ್ಣಿನಿಂದ ಎಂದೂ ವಂಚಿತನಾಗುವುದಿಲ್ಲ. ಪಕ್ವವಾದ ಹಣ್ಣು ಬೀಳುವುದು ಮರದ ಬುಡಕ್ಕೇ. ಆದರೆ ಕೇವಲ ಹಣ್ಣಿನ ಮೇಲೆ ಮಾತ್ರ ದೃಷ್ಟಿಯಿಟ್ಟವನಿಗೆ ಮರವನ್ನು ಹತ್ತಿ ಅದನ್ನು ಪಡೆಯುವ ಪ್ರಯಾಸ ತಪ್ಪಿದ್ದಲ್ಲ.

ನಿಯೋಜಿತ ಉತ್ತರಾಧಿಕಾರಿಗಳಾದ ಪೂಜ್ಯಶ್ರೀಗಳ ಬಗ್ಗೆ ದೊಡ್ಡಗುರುಗಳಿಗೆ ಸಂಪೂರ್ಣತೃಪ್ತಿಯಿತ್ತು. ಸಮರ್ಥರಾದವರನ್ನು ಆಯ್ಕೆಮಾಡಿದ್ದೇವೆಂಬ ಹೆಮ್ಮೆಯಿತ್ತು. ಮಹಾತಪೋಧನರೆಂದೇ ಖ್ಯಾತರಾಗಿದ್ದ ತಮ್ಮ ಪರಮಗುರುಗಳಾದ ಮೂವ್ವತ್ತಮೂರನೆಯ ಶ್ರೀಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳೇ ಪೀಠಕ್ಕೆ ಉತ್ತರಾಧಿಕಾರಿಗಳಾಗುತ್ತಾರೆ ಎಂಬುದನ್ನು ತಿಳಿದಿದ್ದ ಅವರು ತಮ್ಮ ದೈಹಿಕವಾದ ಅಸ್ವಾಸ್ಥ್ಯದ ನಡುವೆಯೂ ನೂತನಶ್ರೀಗಳಿಗೆ ಅಗತ್ಯವಾದ ವಸ್ತುಗಳನ್ನು ಮಣೆಯಿಂದ ಪ್ರಾರಂಭಿಸಿ ಮಂಚದವರೆಗಿನ ಎಲ್ಲ ಸಾಧನಗಳನ್ನೂ ಸ್ವತಃ ತಾವೇ ಅವಲೋಕಿಸಿ ಉತ್ಕೃಷ್ಟವಾದದ್ದನ್ನೇ ಆರಿಸಿ ಯೋಜಿಸುವಲ್ಲಿ ತೋರಿದ ಆಸಕ್ತಿಯನ್ನು ಗಮನಿಸಿದವರಿಗೆ ನೋಡಿದವರಿಗೆ, ಹಾಗೆಯೇ ನಾವು ಆಶ್ರಮಸ್ವೀಕಾರ ಮಾಡಿದಾಗ ನಮಗಿದ್ದ ಬೌದ್ಧಿಕಸ್ತರಕ್ಕಿಂತ ಚಿಕ್ಕಶ್ರೀಗಳ ಬುದ್ಧಿಮಟ್ಟ ನೂರುಪಾಲು ಮೇಲ್ಮಟ್ಟದಲ್ಲಿದೆ ಎಂಬ ಅವರ ಹೃದಯತುಂಬಿದ ಮಾತುಗಳನ್ನು ಕೇಳಿದವರಿಗೆ ಹಿಂದಿನ ಪೀಠಾಧಿಪತಿಗಳ ವಾತ್ಸಲ್ಯಭಾವದ ಅರಿವಾಗುವುದು ಸಾಧ್ಯ.

ಎಷ್ಟೋ ಬಾರಿ ಪೂಜ್ಯರು ಚಿಕ್ಕಮಕ್ಕಳನ್ನು ಎತ್ತಿಕೊಂಡು ಲಾಲಿಸುವುದನ್ನು ಕಂಡಾಗ ನನಗೆ ಆ ಮಕ್ಕಳ ಬಗ್ಗೆ ಅಸೂಯೆಯುಂಟಾಗಿ ಅದನ್ನು ಮುಚ್ಚಿಡದೆ ಶ್ರೀ ಸಂಸ್ಥಾನದೆದುರು ನಾವು ಬೇಗ ಹುಟ್ಟಿ ಈ ಭಾಗ್ಯದಿಂದ ವಂಚಿತರಾಗಿದ್ದೇವೆ ಎಂದು ನಿವೇದಿಸಿದ್ದಿದೆ. ಅದಕ್ಕೆ ಅವರ ಉತ್ತರವೇನು ಗೊತ್ತೆ? ನೀವು ತಡವಾಗಿ ಹುಟ್ಟಿದ್ದರೆ ನಮಗೆ ಪಾಠಮಾಡುವ ಯೋಗ ನಿಮಗಿರುತ್ತಿರಲಿಲ್ಲ ಎಂದು. ನಿಜ, ಒಂದರ ಪ್ರಾಪ್ತಿಗಾಗಿ ಮತ್ತೊಂದರ ಪರಿತ್ಯಾಗ ಲೋಕನಿಯಮ. ಒಟ್ಟಿನಲ್ಲಿ ಇಷ್ಟನ್ನು ಮಾತ್ರ ಹೇಳಬಲ್ಲೆ. ರಾಜಪೀಠದಲ್ಲಿ ವಿರಾಜಮಾನನಾದ ಶ್ರೀರಾಮನ ಹಾಗೂ ಭಾರತೀಪೀಠದಲ್ಲಿ ಶೋಭಿಸುವ ಶ್ರೀಗುರುವಿನ ಮಧ್ಯೆ ಯಾವ ಅಂತರವೂ ಇಲ್ಲ. ಒಂದು ಅವ್ಯಕ್ತವಾದರೆ ಮತ್ತೊಂದು ವ್ಯಕ್ತ. ಒಂದರಲ್ಲಿ ಮೌನ ಸ್ಥಾಯಿಯಾದರೆ ಮತ್ತೊಂದರಲ್ಲಿ ಮಾತಿನ ಸಂಚಾರಿಭಾವಷ್ಟೆ. ಧರ್ಮಾಚಾರ್ಯಪೀಠದಲ್ಲಿರುವ ಪ್ರಭು ಶ್ರೀರಾಮಚಂದ್ರನಿಗೆ ನಮ್ಮ ಸರ್ವಸ್ವವನ್ನೂ ನಿರ್ವಂಚನೆಯಿಂದ ಸಮರ್ಪಿಸಿ ಶರಣಾಗತರಾದರೆ ನಮ್ಮ ಬದುಕು ಸಮೃದ್ಧವಾಗುತ್ತದೆ. ಎಂದೂ ಯಾವುದೂ ಬೇಕೆನ್ನಿಸುವುದಿಲ್ಲ. ಇದು ನನ್ನ ಅನುಭವದ ಮಾತು. ನನ್ನ ಬದುಕಿನ ಭಾಗ್ಯದ ಬಾಗಿಲು ತೆರೆದುಕೊಂಡ ಪರಿಯಿದು. ಅದೂ ಶಿಕ್ಷೆಯರೂಪದಲ್ಲಿ ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ಓರ್ವ ಅಧ್ಯಾಪಕನಾಗಿ ವೃತ್ತಿಯಲ್ಲಿ ಪಡೆಯಬಹುದಾದ ಸಾರ್ಥಕತೆಯನ್ನು ಎಂದೋ ಪಡೆದಾಗಿದೆ. ಬಯಸುವಂತಹದ್ದು ಬೇರೇನೂ ಇಲ್ಲ. ಭಗವಂತನಲ್ಲಿ ಬೇಡುವುದು ಸಲ್ಲದ ಕಾರ್ಯ. ನಮ್ಮ ಒಳಿತು ಯಾವುದೆಂಬುದನ್ನು ನಮಗಿಂತ ಚೆನ್ನಾಗಿ ಅವನು ಬಲ್ಲ. ಆದರೂ ತಾಯಿಗೆ ಹಾಲು ಕುಡಿಸುವ ನೆನಪು ಮಾಡಲಾದರೂ ಮಗು ಅಳುವುದು ಅಗತ್ಯ. ಆ ಹಿನ್ನೆಲೆಯಲ್ಲಿ ನನ್ನ ಪ್ರಾರ್ಥನೆಯಿಷ್ಟೇ. ಲೋಕ ಸುಖವಾಗಿರಲಿ, ನಾನಾಗಲೀ ನನ್ನ ಕುಟುಂಬದವರಾಗಲೀ ಧರ್ಮಮಾರ್ಗದಿಂದ ಚ್ಯುತರಾಗದೆ ಸದಾ ಪ್ರಭುಶ್ರೀರಾಮಚಂದ್ರನ ದಾಸ್ಯದಲ್ಲಿಯೇ ಜೀವನಸಾರ್ಥಕ್ಯವನ್ನು ಕಾಣುತ್ತ ಈ ಪೀಠದ ಕೃಪಾಛತ್ರದಡಿಯಲ್ಲಿ ಬದುಕುವಂತಾಗಲಿ ಎಂಬುದು ಮಾತ್ರ.

ಮತ್ತೊಂದು ಮಾತು-ಈ ಎಲ್ಲವನ್ನೂ ಪುನಃ ಸ್ಮರಣೆಗೆ ತಂದುಕೊಟ್ಟಿದ್ದು ತೀರ್ಥಹಳ್ಳಿ ಮಠದ ಶ್ರೀಗುರುಗಳ ವಿಶ್ರಾಂತಿಯ ಕೋಣೆ. ದೊಡ್ಡಗುರುಗಳ ಯಾವ ವಿಶ್ರಾಂತಿಕೊಠಡಿಯಲ್ಲಿ ಈಗಿನ ಪೀಠಾಧೀಶರ ಆಯ್ಕೆ ನಡೆಯಿತೋ ಅದೇ ಕೊಠಡಿಯಲ್ಲಿ ಕಳೆದ ನವೆಂಬರ್ 27ರಂದು ಹದಿನೇಳು ವರ್ಷಗಳಷ್ಟು ದೀರ್ಘಕಾಲದ ನಂತರ ನಾನು ನಮ್ಮ ಹರೇರಾಮ ತಂಡದ ಸದಸ್ಯರೊಂದಿಗೆ ಶ್ರೀಗಳವರ ಸಮ್ಮುಖದಲ್ಲಿ ಸಭೆಯಲ್ಲಿ ಪಾಲ್ಗೊಂಡಾಗ. ಈ ಎಲ್ಲ ನೆನಪುಗಳೂ ಭಾವಕ್ಕೆ ಲಗ್ಗೆಯಿಟ್ಟು ಅನುಭವಕ್ಕೆ ಅಕ್ಷರರೂಪವನ್ನು ಕೊಡಲು ಪ್ರಚೋದಿಸಿದವು. ಅಷ್ಟೇ ಅಲ್ಲ ಗುರುಪೀಠದ ವಿಷಯದಲ್ಲಿನ ಈ ಎಲ್ಲ ಘಟನೆಗಳು ಸಮಾಜದ ಗಮನಕ್ಕೆ ಬರಬೇಕೆಂಬುದೂ ಈ ಲೇಖನದ ಉದ್ದೇಶ.

~*~*~

ಲೇಖಕರ ಪರಿಚಯ

ಶ್ರೀಮತಿ ಕಮಲಾಕ್ಷಮ್ಮ ಮತ್ತು ಬೇದರಕೊಪ್ಪ ಶ್ರೀಯುತ ರಾಮಯ್ಯ ದಂಪತಿಗಳಿಗೆ ಜ್ಯೇಷ್ಠ ಪುತ್ರರಾಗಿ ಕೀಡುದುಂಬೆಯಲ್ಲಿ 1954ರಲ್ಲಿ ಜನಿಸಿದರು.


ಪೂರ್ವಾಶ್ರಮದ ಶ್ರೀಗಳು, ಲೇಖಕ-ಗುರುಗಳೊಂದಿಗೆ ಬೆಂಗಳೂರಿನ ಗಿರಿನಗರದ ವಿವೇಕಾನಂದ ಉದ್ಯಾನದಲ್ಲಿ

ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಾಗರ ತಾಲೂಕಿನ ಬ್ರಾಹ್ಮಣಕೆಪ್ಪಿಗೆಯಲ್ಲಿ ಪಡೆದು, ಅಲ್ಲಿಯೇ ಸ್ವಲ್ಪಕಾಲ ವೇದಾಭ್ಯಾಸವನ್ನು ಮಾಡಿ, ವೇ| ಮೂ| ರಾಮಚಂದ್ರ ಭಟ್ಟ ಸುಳುಮನೆ ಮತ್ತು ವಿದ್ವಾನ್ ಕೃಷ್ಣಮೂರ್ತಿ ಶಾಸ್ತ್ರಿ ಹುಳೇಗಾರು ಇವರುಗಳಲ್ಲಿ ಪ್ರಾರಂಭಿಕ ಸಂಸ್ಕೃತಾಧ್ಯಯನವನ್ನು ಪೂರೈಸಿ, ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಉಚ್ಛಶಿಕ್ಷಣವನ್ನು ಪಡೆದು, ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮೇಧಾದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ 1980ರಿಂದ ಸೇವೆ ಸಲ್ಲಿಸುತ್ತಿದ್ದು, ಅನೇಕ ಸಂಸ್ಕೃತ ವಿದ್ವಾಂಸರನ್ನು ತಯಾರುಗೊಳಿಸಿ ಸಮಾಜಕ್ಕೆ ನೀಡಿದ ಕೀರ್ತಿ ಇವರದ್ದು. 1984ರಲ್ಲಿ ಹೊಸೂರು ಶ್ರೀ ಲಕ್ಷ್ಮೀನಾರಾಯಣಪ್ಪ ಮತ್ತು ಶ್ರೀಮತಿ ಚಂದ್ರಮತಿ ದಂಪತಿಗಳ ಏಕಮಾತ್ರ ಪುತ್ರಿ ವಸುಮತಿಯವರನ್ನು ವರಿಸುವುದರೊಂದಿಗೆ ಗೃಹಸ್ಥಜೀವನವನ್ನು ಪ್ರವೇಶಿಸಿರುತ್ತಾರೆ.

ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರಭಾರತೀಮಹಾಸ್ವಾಮಿಗಳವರ ಕಾಲದಲ್ಲಿ ಶ್ರೀಮಠದ ಸಂಪರ್ಕಕ್ಕೆ ಬಂದು, ಶ್ರೀಪರಿವಾರ ಸದಸ್ಯರಾಗಿ ಕೂಡಾ ಕೆಲವು ಕಾಲ ಶ್ರೀಗುರುಪೀಠದಸೇವೆಯನ್ನು ಮಾಡಿರುವ ಶ್ರೀಯುತರು, ಅಂದಿನಿಂದ ಇಂದಿನವರೆಗೂ ಶ್ರೀಪೀಠದ ಜೊತೆಗಿದ್ದು ತಮ್ಮ ವಿಶೇಷ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಮ್ಮ ಕಾರ್ಯದೊತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಶ್ರೀಪೀಠದ ಸೇವೆಯನ್ನು ಮಾಡುತ್ತಿರುವ ಲೇಖಕರು ಗೋಕರ್ಣದಲ್ಲಿ ಶ್ರೀಕ್ಷೇತ್ರ ಮತ್ತು ಶ್ರೀಮಠದ ಮಾಧ್ಯಮ ವಿಭಾಗದ ಜವಾಬ್ದಾರಿ, ಶ್ರೀಮಠದಲ್ಲಿ ಸಾಹಿತ್ಯ ವಿಭಾಗದಲ್ಲಿ ಮತ್ತು ಹರೇರಾಮ ಅಂತರಜಾಲ ತಾಣದಲ್ಲಿ ವಿಶೇಷ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಕೆ.

---------------------------

ರಾಮನಿರ್ದಂದು ರಾವಣನೊಬ್ಬನಿದ್ದನಲ
ಭೀಮನಿರ್ದಂದು ದುಶ್ಯಾಸನನದೋರ್ವನ್
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು ?
ರಾಮಭಟನಾಗು ನೀಂ-ಮಂಕುತಿಮ್ಮ

ತಮಾಷೆಗೆ ನಾನು ಹೇಳುವುದಿದೆ- ನಾನು ರಾಮಭಟನಲ್ಲ ಎಂದು ಯಾರಾದರೂ ಹೇಳಿದರೂ ಪರವಾಗಿಲ್ಲ, ರಾಮಭಟ್ಟನ ಮಗನಂತೂ ಹೌದು ಎಂದು![ನೋಡಿ ಮತ್ತೆ ಇಲ್ಲಿ ನನಗೆ ಸಂಸಾರದ ನೆನಪು ಕ್ಕರಿಸೇ ಬಿಟ್ಟಿತು!!] ಕಾಲಕಾಲಕ್ಕೂ ರಾವಣ, ದುಶ್ಯಾಸನ ಇದ್ದೇ ಇರುತ್ತಾರೆ. ಅವರಿದ್ದರೇ ರಾಮನ ಆದರ್ಶ ನಮಗೆ ಗೊತ್ತಾಗುತ್ತದೆ. ಶ್ರೀಗಳ ಬಗ್ಗೆಯೂ ಕೆಟ್ಟದಾಗಿ ಬರೆಯುವ, ವಾರಪತ್ರಿಕೆಯೊಂದರ ಒಡೆಯನಾದ  ರಾವಣನೊಬ್ಬನಿದ್ದಾನೆ! ಒಂದರ್ಥದಲ್ಲಿ ರಾವಣ, ದುಶ್ಯಾಸನ, ಭೀಮ, ರಾಮ ಎಲ್ಲಾ ನಮ್ಮ ಮನದಲ್ಲೇ ಇದ್ದಾರೆ! ನಮ್ಮ ಮನದಲ್ಲಿ ಅವಿತಿರುವ ರಾವಣ, ದುಶ್ಯಾಸನಾದಿ ದೈತ್ಯ ಭಾವಗಳನ್ನು ಹೊರಗೋಡಿಸಿ ರಾಮನನ್ನು ಅಲ್ಲಿ ನೆಲೆಗೊಳಿಸಬೇಕು ಎಂದು ಸ್ವತಃ ಯೋಗಿಯೇ ಆಗಿದ್ದ ಡೀವೀಜಿ ಹೇಳಿದ್ದಾರೆ. ಮಠವೊಂದರ ಇತಿಹಾಸದ ಭಾಗವಾದ ಈ ಪುಣ್ಯಕಥೆಯನ್ನು ಕೇಳಿದ್ದೀರಿ, ಮಂಗಳವು ಸದಾ ನಿಮ್ಮ ಮನೆಯಂಗಳದಲ್ಲೇ ಆಡುತ್ತಿರಲಿ ಎಂದು ಹಾರೈಸುತ್ತಿದ್ದೇನೆ, ಧನ್ಯವಾದಗಳು.  

No comments:

Post a Comment