ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 7, 2012

ಇಂಥದ್ದೊಂದು ರಾಮಕಥೆಯಲ್ಲಿ ಸ್ವರ್ಗ ಸುಖವನ್ನು ಕಂಡೆ!

 ಚಿತ್ರಋಣ : ಹರೇರಾಮ.ಇನ್
ಇಂಥದ್ದೊಂದು ರಾಮಕಥೆಯಲ್ಲಿ ಸ್ವರ್ಗ ಸುಖವನ್ನು ಕಂಡೆ!

ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಂಭಂಜನಸುತೇ ತತ್ತ್ವಂ ಮುನಿಭ್ಯಃ ಪರಂ
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

|| ಹರೇರಾಮ ||

ರಾಮನ ಕಥೆಯನ್ನು ಕಂಡೆ ಎನಲೇ? ಉಂಡೆ ಎನಲೇ? ಕೇಳಿದೆ ಎನಲೇ? ಕುಣಿದು ಅನುಭವಿಸಿದೆ ಎನಲೇ? ಬಾಯ್ತುಂಬಾ ಚಪ್ಪರಿಸಿದೆ ಎನಲೇ? ಮನತುಂಬ ತುಂಬಿಕೊಂಡೆ ಎನಲೇ? ಹೇಗೇ ಹೇಳಿದರೂ ಬಣ್ಣಿಸಿ ಮುಗಿಯದ ಕಥೆ ರಾಮನದ್ದು; ಅದರಲ್ಲೂ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನಡೆಸಿಕೊಡುವ ರಾಮಕಥೆಯದ್ದು ! ಇಲ್ಲಿ ಗೀತವಿದೆ, ಸಂಗೀತವಿದೆ, ನೃತ್ಯವಿದೆ, ರೂಪಕವಿದೆ, ವ್ಯಾಖ್ಯಾನವಿದೆ, ತರ್ಕವಿದೆ, ಚಿತ್ರವಿದೆ, ಮರಳು-ಚಿತ್ರವಿದೆ, ಪೂಜೆಯಿದೆ, ಧ್ಯಾನವಿದೆ, ಸುಲಲಿತ ಶ್ಲೋಕಗಳ ಸಂಪತ್ತಿದೆ; ಇಲ್ಲದ್ದು ಯಾವುದು ಎಂದರೆ ಯವುದೂ ಇಲ್ಲದೇ ಇಲ್ಲಾ ಎನಿಸುವಷ್ಟು ವೈಭಯುತ ಶ್ರೀರಾಮಕಥೆ ಇದು!! ರಾಮನೊಬ್ಬ ಮನುಷ್ಯನಾಗಿ ರಾಜನಾಗಿ ಇದ್ದನೇ? ಹಾಗಾದರೆ ಅವನ ಹಿನ್ನೆಲೆಯೇನು? ಅವನ ವೈರಿ ಎನಿಸಿದ ರಾವಣನ ಹಿನ್ನೆಲೆಯೇನು? ರಾಮಜೀವಿತದ ಪಾರಮಾರ್ಥವೇನು? ಸೀತಾಪರಿತ್ಯಾಗದ ಅಸದೃಶ ಸಂದೇಶವೇನು? -ಸಭಿಕರ ಮನದಲ್ಲಿ ಅವ್ಯಕ್ತವಾಗಿ ಎದ್ದು ಅಲ್ಲಲ್ಲೇ ಅಡಗಿರುವ ಇಂತಹ ಸಾವಿರ ಸಾವಿರ ಪ್ರಶ್ನೆಗಳಿಗೆ ಅವಧಾನಿಯಂತೇ ಸಾವಧಾನವಾಗಿ ಉತ್ತರಿಸುತ್ತಾ ಮಹಾನ್ಯಾಸದ ವಾಲ್ಮೀಕಿ ರಾಮಾಯಣವನ್ನು ಎಳೆಯೆಳೆಯಾಗಿ ಮನದಟ್ಟುಮಾಡಿಕೊಡುವ ಅಪ್ರತಿಮ ಪ್ರಯತ್ನ ಇದಾಗಿದೆ. 

ರಾಮ ಯಾರಿಗೆ ಇಷ್ಟವಲ್ಲ?  ರಾಮನನ್ನೂ ದೂಷಿಸುವ ಕೆಲವು ಆಧುನಿಕ ಮಹಿಳಾಮಣಿಗಳಿರಬಹುದು, ಆದರೆ ಸಾಮಾನ್ಯವಾಗಿ ರಾಮ ಯಾರಿಗೆ ಬೇಡಾ ಎಂದು ಚಿಂತಿಸಿದರೆ ಯಾರ ಎದೆಯಲ್ಲಿ ರಾವಣತ್ವ ಹುದುಗಿದೆಯೋ ಅಂಥವರಿಗೆ ರಾಮ ಬೇಕಾಗಿಲ್ಲ; ರಾಮನ ಕಥೆಯೂ ಬೇಕಾಗಿಲ್ಲ. ವೈದಿಕರು ಪಾರಾಯಣ ಮಾಡುತ್ತಾ ಅರ್ಥವನ್ನು ವಿವರವಾಗಿ ಹೇಳದೇ ಮುನ್ನಡೆಯುವ ಕ್ರಮಕ್ಕಿಂತಾ ವಿಭಿನ್ನವಾಗಿ, ಉತ್ತರಭಾರತದಲ್ಲಿ ಹಲವು ಸಾಧು-ಸಂತರು ನಡೆಸುವ ಕಥಾಕಾಲಕ್ಷೇಪಗಳಿಗಿಂತಲೂ ಭಿನ್ನವಾಗಿ ಮತ್ತು ಅರ್ಥಪೂರ್ಣವಾಗಿ ಜನಮಾನಸವನ್ನು ತಲ್ಪುವ ವಿಭಿನ್ನ, ವಿಶಿಷ್ಟ, ವಿಶೇಷ ಪ್ರಯತ್ನವೇ ಈ ರಾಮಕಥೆ-ಶ್ರೀರಾಮಕಥೆ. ನಾನೂ ರಾಮಕಥೆಯನ್ನು ಕೆಲವಾರು ಸರ್ತಿ ಬರೆದಿದ್ದೇನೆ, ಆ ಪೈಕಿ ಒಂದನ್ನು ನೀವು ಇಲ್ಲಿ ಓದಬಹುದಾಗಿದೆ:

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲು ನೋಡಿದರಲ್ಲಿ ಶ್ರೀರಾಮ !

[http://nimmodanevrbhat.blogspot.in/2012/03/blog-post_30.html]

ರಾಮಕಥೆಯ ಸಂಕಲ್ಪವೇ ಅದ್ಭುತ! ಸಂಕಲ್ಪಸಿದ್ಧಿಯನ್ನು ಪಡೆದ ರಾಮಕಥೆಯ ಸೂತ್ರಧಾರರೂ ಅದ್ಭುತ; ರಾಮನೇ ನಿತ್ಯಾರಾಧ್ಯ ಪ್ರಧಾನ ದೇವರಾಗಿ ಕುಳಿತು ನಡೆಸುವ ರಾಮಚಂದ್ರಾಪುರ ಮಠದ ಮಹಿಮಾನ್ವಿತ ಪೀಠದ ಸಂಕಲ್ಪವೇ ಹಾಗೆ ಅದ್ಭುತ. ಸಂಕಲ್ಪವಿಲ್ಲದೇ ಕಾರ್ಯವಿಲ್ಲ, ಕಾರಣವಿಲ್ಲದೇ ಸಂಕಲ್ಪವಿಲ್ಲ, ಅಲೌಕಿಕ ಭಾವನೆಗಳು ಧ್ಯಾನಸ್ಥ ಸ್ಥಿತಿಯಲ್ಲಿ ಹೊರಹೊಮ್ಮದಿದ್ದರೆ ಸಂಕಲ್ಪವೇ ಇರುವುದಿಲ್ಲ! ರಾಮಸತ್ರ ನಡೆಸಿ ದೇಶಮಾನ್ಯರಾದರು, ವಿಶ್ವ ಗೋ ಸಮ್ಮೇಳನ ನಡೆಸಿ ಜಗನ್ಮಾನ್ಯರಾದರು, ವಿಶ್ವಮಂಗಲ ಗೋಗ್ರಾಮ ಯಾತ್ರೆ ನಡೆಸಿ ಲೋಕಮಾನ್ಯರಾದರು...ಅವರೇ ಇವರು ಕಾಮಧೇನುವಿನ ಆರ್ತತೆಗೆ ಓಗೊಟ್ಟು ತಾನೇ ನಡೆದು ಗೋವುಗಳ ಉಳಿವಿಗೆ ಪ್ರಯತ್ನಿಸಿದವರು: ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು. ಸತ್ಯವಾನ್ ಸತ್ಯಸಂಕಲ್ಪ ಎಂದು ಭಗವಂತನನ್ನು ಹೇಳಲಾಗುತ್ತದೆ ಅದೇ ರೀತಿಯಲ್ಲಿ ಲೋಕದ ಸರ್ವರ ಹಿತಾರ್ಥ ಸತ್ಯ ಸಂಕಲ್ಪಗಳನ್ನು ಕೈಗೊಂಡು ಅದರಲ್ಲಿ ಕಾರ್ಯಸಿದ್ಧಿಗಳನ್ನು ಪಡೆದವರು. ಗೋಕರ್ಣ ಮಂಡಲಾಚಾರ್ಯ ಎಂದು ಆದಿಶಂಕರರಿಂದ ಘೋಷಿಸಲ್ಪಟ್ಟ ಪೀಠದಲ್ಲಿ ೩೬ನೇ ಗುರುಗಳಾಗಿ ವಿರಾಜಮಾನರಾಗಿದ್ದಾರೆ.

ಯಾರಿವರು ಎಂಬ ಪ್ರಶ್ನೆಗೆ ವೆಬ್ ಸೈಟ್ : ಹರೇರಾಮ.ಇನ್ [http://hareraama.in]ನಲ್ಲಿ ಕಾಣಿಸಿದ ಒಂದು ಮಾಹಿತಿ ಹೀಗಿದೆ[ಇಲ್ಲಿ ರಾಮಕಥೆಯ ಛಾಯಾಚಿತ್ರಗಳೂ ಮಾಹಿತಿಗಳೂ ಸಿಗುತ್ತವೆ] :

ಅವಿಚ್ಛಿನ್ನ ಪರಂಪರೆಯ  ಶ್ರೀ ಮಹಾಸಂಸ್ಥಾನದ ಈಗಿನ ಪೀಠಾಧಿಪತಿಗಳಾಗಿರುವ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು – ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್ ನಲ್ಲಿ ಸಂನ್ಯಾಸದೀಕ್ಷೆ ಪಡೆದರು.

೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ  ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.

ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೋಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಟ ಅಧ್ಯಾತ್ಮನಾಯಕರನ್ನಾಗಿಸಿವೆ.

ಶ್ರೀ ಶ್ರೀಗಳ ಪಾರಂಪರಿಕ ಬಿರುದುಬಾವಲಿಗಳು:

ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ,ಪದವಾಕ್ಯಪ್ರಮಾಣಪಾರಾವಾರಪಾರೀಣ,
ಯಮನಿಯಮಾಸನಪ್ರಾಣಾಯಾಮಪ್ರತ್ಯಾಹಾರಧ್ಯಾನಧಾರಣಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ,
ಷಡ್ದರ್ಶನಸ್ಥಾಪನಾಚಾರ್ಯ, 
ತಪಶ್ಚಕ್ರವರ್ತ್ಯಾದ್ಯನೇಕವಿಶೇಷಣವಿಶಿಷ್ಟ,
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶಿಷ್ಯ,
ಶ್ರೀ ಸುರೇಶ್ವರಾಚಾರ್ಯ ಜ್ಯೇಷ್ಠ ಶಿಷ್ಯ ----
ವಿದ್ಯಾನಂದಾಚಾರ್ಯಾವಿಛ್ಛಿನ್ನಗುರುಪರಂಪರಾಪ್ರಾಪ್ತ ಸಕಲನಿಗಮಾಗಮಸಾರಹೃದಯ, 
ಸಾಂಖ್ಯತ್ರಯ ಪ್ರತಿಪಾದಕ, 
ವೈದಿಕಮಾರ್ಗ ಪ್ರವರ್ತಕ, 
ಸರ್ವತಂತ್ರಸ್ವತಂತ್ರಾದಿಬಿರುದಾಂಕಿತ --
ವಿದ್ಯಾನಗರ ಮಹಾರಾಜಧಾನೀ ವೈಭವಸಿಂಹಾಸನಾಧೀಶ್ವರ,
ವಿಖ್ಯಾತವ್ಯಾಖ್ಯಾನ ಸಿಂಹಾಸನಾರೂಢ ಶ್ರೀಮದ್ರಾಜಾಧಿರಾಜಗುರು,
ಶ್ರೀ ಗೋಕರ್ಣಮಂಡಲಾಚಾರ್ಯ,
ಶ್ರೀಮಚ್ಛತಶೃಂಗಪುರವರಾಧೀಶ್ವರ,
ಶ್ರೀಮಚ್ಛರಾವತೀತೀರವಾಸ,
ಶ್ರೀಮದ್ರಾಮಚಂದ್ರಾಪುರಮಠಸ್ಥ,
ಶ್ರೀಮದ್ರಾಮಚಂದ್ರಚಂದ್ರಮೌಳೀಶ್ವರಪಾದಪದ್ಮಾರಾಧಕ,
ಶ್ರೀಮದ್ರಾಘವೇಂದ್ರಭಾರತೀ ಶ್ರೀಗುರುಕರಕಮಲಸಂಜಾತ,
|| ಶ್ರೀಮದ್ರಾಘವೇಶ್ವರ ಭಾರತೀ ಶ್ರೀ ಸ್ವಾಮಿಭಿಃ ||  

ಈ ಬಿರುದುಗಳು ತಾವೇ ತಾವಾಗಿ ಬರೆದುಕೊಂಡವುಗಳಲ್ಲ, ಈ ಒಂದೊಂದೂ ಬಿರುದಿನ ಹಿಂದೆ ಐತಿಹಾಸಿಕ ಕುರುಹು, ಘಟನೆ, ಸಾಧನೆ ಕಂಡುಬರುತ್ತದೆ.

ಕನ್ನಡದ ಎರಡು ವಾರಪತ್ರಿಕೆಗಳನ್ನು ನಡೆಸಿ ರೋಲ್ ಕಾಲ್ ಮಾಡಿ ಬದುಕುತ್ತಿರುವ ರಾವಣ ಹೃದಯದ ಪತ್ರಿಕಾಕರ್ತರಿಬ್ಬರು ಇವರ ಬಗ್ಗೆ ಅಪಹಾಸ್ಯಮಾಡಿದ್ದಾರೆ, ನಿಂದನೆ ಮಾಡಿದ್ದಾರೆ, ಬೆದರಿಸಿದಾಗ ಹಣಸಿಗಲಿಲ್ಲವೆಂಬ ಕಾರಣಕ್ಕೆ ಏನೇನೋ ಬರೆದಿದ್ದಾರೆ. ಆ ಬಗ್ಗೆ ಇವರೆಂದೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ ಖೂಳರೇ ಸಂಪಾದಕರಾಗಿ ನಡೆಸುವ ಪತ್ರಿಕೆಗಳು ಎಂತಹ ಮಟ್ಟದವಾಗಿರಬಹುದು? ಅದು ಜನರಿಗೆ ಗೊತ್ತು! ಹಾಗಾದರೆ ಗೋಕರ್ಣಕ್ಕೂ ಈ ಮಠಕ್ಕೂ ಇರುವ ಸಂಬಂಧವೆಂಥದ್ದು? ಅದರ ಬಗ್ಗೆ ಸ್ವಲ್ಪ ತಿಳಿಯೋಣ:

ಉತ್ತರಕನ್ನಡದ ಕಡಲತಡಿಯಲ್ಲಿ ಭೂಕೈಲಾಸವೆಂಬ ಹೆಸರು ಪಡೆದ ತಾಣ ಗೋಕರ್ಣ. ರಾವಣ ತಂದ ಆತ್ಮಲಿಂಗ ಮಹಾಗಣಪತಿಯ ಅನುಗ್ರಹದಿಂದ ಅನಾಯಾಸವಾಗಿ ಧರೆಯಲ್ಲಿ ನೆಲೆನಿಂತ ಪ್ರದೇಶವಾಗಿ ಲೋಕದ ಜನತೆಗೆ ಪರಿಚಿತವಾದ ಕ್ಷೇತ್ರ. ಆದಿಶಂಕರರ ಕಾಲಘಟ್ಟದಲ್ಲಿ ಅವರ ಶಿಷ್ಯರಲ್ಲಿ ಒಬ್ಬರಾದ ವಿದ್ಯಾನಂದರು ಎಂಬ ಮಹಾಮುನಿಗಳು ಈ ಕ್ಷೇತ್ರದಲ್ಲಿ ತಪಸ್ಸನ್ನು ನಡೆಸಿದ್ದರು. ವೃದ್ಧಾಪ್ಯದಲ್ಲಿದ್ದ ಅವರಿಗೆ ದೇಹಬಿಡುವ ಕಾಲ ಸಮೀಪಿಸಿತ್ತು.[ಗಮನಿಸಿ: ರಾಮಾದಿ ವಿಗ್ರಹಗಳನ್ನು ಹಿಂದೆ ಒಂದಾನೊಂದು ಕಾಲಘಟ್ಟದಲ್ಲಿ ಅಗಸ್ತ್ಯರು ಶ್ರೀ ಶಂಕರರಿಗೆ ನೀಡಿದ್ದರು. ಹಾಗೆ ಸ್ವೀಕರಿಸದ ರಾಮಾದಿ ವಿಗ್ರಹಗಳನ್ನು ಜೊತೆಗೆ ಅಪರೂಪದ ಅಖಂಡ ಭಾರತದ ನಕ್ಷೆಯುಳ್ಳ ಅದ್ಭುತ ಚಂದ್ರಮೌಳೀಶ್ವರ ಲಿಂಗವನ್ನು  ಶಂಕರರು [ಅವರ ಪ್ರಥಮ ಶಿಷ್ಯರಾದ ಸುರೇಶ್ವರಾಚಾರ್ಯರ ಜ್ಯೇಷ್ಠ ಶಿಷ್ಯ] ವಿದ್ಯಾನಂದಾಚಾರ್ಯರಿಗೆ ಅನುಗ್ರಹಿಸಿದ್ದರು. ವಿದ್ಯಾನಂದಾಚಾರ್ಯರೂ ಇದ್ದಾಗಲೇ ಮಠದ ಸ್ಥಾಪನೆಯಾದ್ದರಿಂದ ಪರಂಪರೆಯಲ್ಲಿ ಅವರೂ ಇದ್ದಾರೆ. ವಿದ್ಯಾನಂದಾಚಾರ್ಯರ ಕೋರಿಕೆಯ ಮೇರೆಗೆ ಮಠದ ಸ್ಥಾಪನೆ ನಡೆಯಿತು ]ಶಂಕರರ ಆಗಮನವನ್ನು ತಿಳಿದ ವಿದ್ಯಾನಂದರು ತಾನು ಆರಾಧಿಸಿಕೊಂಡಿದ್ದ ರಾಮಾದಿ ವಿಗ್ರಹಗಳನ್ನು ಶಂಕರರ ಕೈಗಿತ್ತು ಅಚಂದ್ರಾರ್ಕವಾಗಿ ಅವುಗಳ ನಿತ್ಯ ಪೂಜಾ ಕೈಂಕರ್ಯಕ್ಕೆ ಯಾರನ್ನಾದರೂ ಗೊತ್ತುಮಾಡಿ ನಡೆಸಬೇಕೆಂಬ ಅಪೇಕ್ಷೆಯನ್ನು ತೋಡಿಕೊಂಡರು. ವಿದ್ಯಾನಂದರಿಂದ ಶಂಕರರ ಕೈಗೆ ದೇವ ವಿಗ್ರಹಗಳು ಬಂದಾಗ, ಶಂಕರರು ಕ್ಷಣಕಾಲ ಯೋಚಿಸಿ ಶೋಕರಹಿತವಾದ ಅಶೋಕೆ ಎಂಬ ಜಾಗದಲ್ಲಿ ಒಂದು ಮಠವನ್ನು ಸ್ಥಾಪಿಸಿದರು. ಅದೇ ರಾಮಚಂದ್ರಾಪುರ ಸಂಸ್ಥಾನದ ಮೂಲಮಠ. ಕ್ಷೇತ್ರದ ಅಧಿದೈವವಾದ ಮಹಾಬಲೇಶ್ವರನ ಸನ್ನಿಧಾನದ ವ್ಯವಸ್ಥೆಯನ್ನು ಈ ಮಠವೇ ನೋಡಿಕೊಳ್ಳುತ್ತಿತ್ತು. ಆದುದರಿಂದಲೇ ಗೋಕರ್ಣ ಕ್ಷೇತ್ರದಲ್ಲಿ ಹಿಂದಿನಿಂದಲೂ ’ಶ್ರೀಸಂಸ್ಥಾನ ಶ್ರೀಮಹಾಬಲೇಶ್ವರ ದೇವ, ಗೋಕರ್ಣ’ ಎಂಬ ಠಸ್ಸೆ[Seal]ಯನ್ನೇ ಉಪಯೋಗಿಸುತ್ತಿದ್ದುದೂ ಅಲ್ಲದೇ ಬನವಾಸಿಯ ಮಯೂರವರ್ಮನ ಕಾಲದಲ್ಲಿ ನೀಡಿದ ಶಾಸನಗಳು ದಾಖಲೆಗಳಾಗಿವೆ.

ಆಮ್ನಾಯ ಮಠಗಳನ್ನು ಹೊರತುಪಡಿಸಿ ಹಲವು ಮಠಗಳನ್ನು ಸ್ಥಾಪಿಸಿದ ಶಂಕರರಿಂದ ಗೋಕರ್ಣ ಮಂಡಲಕ್ಕಾಗಿ ಈ ಮಠದ ಸ್ಥಾಪನೆಯಾಯ್ತು. ಅಲ್ಲಿಂದಾಚೆ ೩೫ ಸ್ವಾಮಿಗಳು ಒಬ್ಬೊಬ್ಬರಂತೇ ಅವಿಚ್ಛಿನ್ನವಾಗಿ ಮುಂದುವರಿಸಿಕೊಂಡು ಬಂದರು. ಇಲ್ಲಿ ಅವಿಚ್ಛಿನ್ನ ಎಂಬುದಕ್ಕೆ ವಿಶೇಷ ಅರ್ಥವಿದೆ: ಪೀಠದ ಅಧಿಪತ್ಯವನ್ನು ಹೊಂದಿರುವ ಸ್ವಾಮಿಗಳಿಂದಲೇ ಪೀಠದ ಮುಂದಿನ ಉತ್ತರಾಧಿಕಾರಿಗಳಿಗೆ ದೀಕ್ಷೆ ಕೊಡಲ್ಪಡುವುದರಿಂದ ಗುರುಮುಖದ ತಪಸ್ಸಿನ ಧಾರೆ ಹಾಗೆ ಹರಿದುಬರುತ್ತದೆ. ಅನೇಕ ಮಠಗಳಲ್ಲಿ ಪೀಠದ ಸನ್ಯಾಸಿಗಳು ಕಾಲವಾದ ನಂತರ ವೈದಿಕ ಕರ್ಮಾನುಸಾರ ಪುರೋಹಿತರುಗಳು ಸನ್ಯಾಸ ದೀಕ್ಷೆಯನ್ನು ಬೇರೇಲ್ಲಿಯದೋ ಸನ್ಯಾಸಿಗಳ ಮೂಲಕ ಕೊಡಿಸುವುದೂ ಇದೆ. ಆದರೆ ರಾಮಚಂದ್ರಾಪುರ ಮಠದಲ್ಲಿ ಮಾತ್ರ ಶಂಕರರಿಂದ ಇಲ್ಲಿಯವರೆಗೂ ಹಿರಿಯ ಸ್ವಾಮಿಗಳಿಂದಲೇ ಕಿರಿಯ ಸ್ವಾಮಿಗಳಿಗೆ ದೀಕ್ಷೆ ನೀಡಲ್ಪಟ್ಟು ಪರಂಪರೆ ವಿಚ್ಛಿನ್ನವಾಗದೇ ಉಳಿದುಕೊಂಡಿದೆ--ಇದು ಇನ್ನೆಲ್ಲೂ ಕಾಣಸಿಗದ [ಆತಿವಿರಳ: ಎಲ್ಲೋ ಕೆಲವು ಮಠಗಳಲ್ಲಿ ಮಾತ್ರ ಇರಬಹುದು] ಅಧಿಕೃತ ದಾಖಲೆಯಾಗಿದೆ! 

ಶಂಕರರ ನಂತರ ಬಂದ ಹಲವು ಸನ್ಯಾಸಿಗಳು ಗೋಕರ್ಣದಲ್ಲೇ ಇದ್ದರು. ಕಾಲಾನಂತರದಲ್ಲಿ ಗೋಕರ್ಣದಲ್ಲಿ ಕೆಲವರಿಂದ ಉಂಟಾದ ಪೀಡನೆಯಿಂದ ಬೇಸತ್ತ ಸ್ವಾಮಿಗಳಿಗೆ ಶಿವಮೊಗ್ಗಾ ಜಿಲ್ಲೆಯ ಹೊಸನಗರ ತಾಲೂಕಿನ ಹನಿಯ ಸಮೀಪದಲ್ಲಿ ಅಂದಿನ ರಾಜನಿಂದ ಸಾಕಷ್ಟು ಜಮೀನು ನೀಡಲ್ಪಟ್ಟಿತು. ಮಹರ್ಷಿ ಅಗಸ್ತ್ಯರ ತಪೋಭೂಮಿಯಾಗಿ ಶರಾವತೀ ತೀರವಾದ ಆ ಜಾಗಕ್ಕೆ ರಾಮಚಂದ್ರಾಪುರವೆಂದು ನಾಮಕರಣ ಮಾಡಿಕೊಂಡು ಪೀಠದ ಪ್ರಧಾನ ಮಠವೆಂದು ಅದನ್ನು ಘೋಷಿಸಲಾಯ್ತು. ಅಲ್ಲಿಂದ ಮುಂದೆ ಕೆಲವು ಶತಮಾನಗಳ ಕಾಲ ಸ್ವಾಮಿಗಳಾದವರು ಆ ಮಠದಲ್ಲೇ ಇರುತ್ತಿದ್ದರು; ತಮ್ಮ ಅಧೀನದ ಗೋಕರ್ಣ ಕ್ಷೇತ್ರದಲ್ಲಿ ಇರುವ ಶಿಷ್ಯರಲ್ಲೇ ಕೆಲವರನ್ನು ಗುರುತಿಸಿ ಉಪಾದಿವಂತರನ್ನಾಗಿಸಿ ಆ ಕ್ಷೇತ್ರದ ವ್ಯವಹಾರಗಳನ್ನು ನೋಡಿಕೊಳ್ಳುವಂತೇ ಮಾಡಲಾಯ್ತು. ಯುಗಮಹಿಮೆಯಿಂದಲೋ ಎಂಬಂತೇ ಉಪಾದಿವಂತರಲ್ಲಿ ಒಂದು ಕುಟುಂಬ ಸ್ವಾಮಿಗಳನ್ನು ಉಡಾಫೆ ಮಾಡುತ್ತಾ ಗೋಕರ್ಣ ಕ್ಷೇತ್ರಕ್ಕೆ ತಾವೇ ಮೊಕ್ತೇಸರರು ಎಂದು ಘೋಷಿಸಿಕೊಂಡಿತು-ಆದರೂ ಅದನ್ನು ಸ್ವಾಮಿಗಳ ನಜರಿಗೆ ತರದೇ ಬಹಳಕಾಲ ಹಾಗೇ ಗೌಪ್ಯವಾಗಿ ನಡೆಸಿಬಂದಿತ್ತು. ಸಂವಹನ ಮಾಧ್ಯಮಗಳೂ ಸಾರಿಗೆ ಸಂಪರ್ಕಗಳೂ ವಿರಳವಾಗಿದ್ದ ಕಾಲವಾದ್ದರಿಂದಲೂ ಗೋಕರ್ಣದಲ್ಲಿ ಅನುಭವಿಸಿದ ತೊಂದರೆಗಳಿಂದ ಉಂಟಾದ ಉದಾಸೀನ ಭಾವದಿಂದಲೂ ಸ್ವಾಮಿಗಳ ಲಕ್ಷ್ಯ ಆ ಕಡೆ ಜಾಸ್ತಿ ಹರಿಯಲೇ ಇಲ್ಲ. ಯಾವಾಗ ಸ್ವಾಮಿಗಳು ತೀರಾ ಕೇಳುತ್ತಿರಲಿಲ್ಲವೋ ಅದೇ ಸಮಯಕ್ಕಾಗಿ ಕಾದ ಉಪಾದಿವಂತರು ಕ್ಷೇತ್ರದ ಅಧಿಕಾರ ಸೂತ್ರದಲ್ಲಿ ಸ್ವಾಮಿಗಳಿಗೆ ಯಾವ ಹಕ್ಕೂ ಇಲ್ಲ ಎಂಬಂತೇ ಸುಳ್ಳು ದಾಖಲೆಗಳನ್ನು ಸೃಜಿಸಿದರು. ಕಾಲ ಪಕ್ವವಾಗಲೇ ಇಲ್ಲ; ಪಾಪಿಯ ಕೊಡ ತುಂಬಲು ಸಮಯ ಬೇಕಾಗಿತ್ತು.

ಇಂದಿನ ಸ್ವಾಮಿಗಳು ಬರುವವರೆಗೂ ಗೋಕರ್ಣದ ಆಡಳಿತಕ್ಕೆ ಅಧಿಕಾರಿ ಯಾರು ಎಂಬುದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಹಿಂದಿನಸ್ವಾಮಿಗಳಾದ ಶ್ರೀ ಶ್ರೀ ರಾಘವೇಂದ್ರ ಭಾರತೀ ಯವರ ಕಾಲದಲ್ಲೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದರೂ ಭೌತಿಕವಾದ ಅನರೋಗ್ಯದಿಂದ ಅವರು ಅದರ ಬಗ್ಗೆ ಜಾಸ್ತಿ ವಿಚಾರಿಸಲಾಗಲಿಲ್ಲ. ನೆನೆಗುದಿಗೆ ಬಿದ್ದ ಈ ಕೆಲಸವನ್ನು ಸದಾ ಪ್ರಯತ್ನಿಸುತ್ತಲೇ ಇದ್ದ ಈಗಿನ ಸ್ವಾಮಿಗಳು ತಮ್ಮ ಮೂಲವನ್ನು ತಮಗೆ ಮರಳಿಸುವಂತೇ ಕರ್ನಾಟಕ ಸರಕಾರವನ್ನು ಮಧ್ಯಸ್ಥಿಕೆಗಾಗಿ ಕೇಳಿದರು. ಸರಕಾರದಲ್ಲಿ ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆ ಕೆಲಸಕ್ಕೆ ಅಸ್ತು ಎಂದರು. ನ್ಯಾಯಾಲಯ ಕೂಡ ಸಕಲ ದಾಖಲುಪತ್ರಗಳನ್ನು ಪರಿಶೋಧಿಸಿ, ಅಳೆದು-ಸುರಿದು-ತೂಗೀ-ತಟ್ಟಿ ಈ ಕ್ಷೇತ್ರ ರಾಮಚಂದ್ರಾಪುರ ಮಠಕ್ಕೇ ಸಂಬಂಧಪಟ್ಟಿದ್ದು ಎಂಬುದನ್ನು ಮನಗಂಡು ಸ್ವಾಮಿಗಳಿಗೆ ಅದರ ಜವಾಬ್ದಾರಿಯನ್ನು ನೀಡಿತು.

ಇತ್ತ ಬೆಂಗಳೂರಿನಲ್ಲೇ ಕೂತ ಉಪಾದಿವಂತರಲ್ಲಿ ಕೆಲವರು ತಮ್ಮ ಕಪಿಮುಷ್ಠಿಯಿಂದ ಸಡಿಲಗೊಂಡು ಮಠದ ಆಡಳಿತಕ್ಕೆ ಒಳಪಟ್ಟ ಗೋಕರ್ಣ ಕ್ಷೇತ್ರದ ಬಗ್ಗೆ ಇಲ್ಲಸಲ್ಲದ ನಕಲೀ ದಾಖಲೆಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡು, ರೋಲ್ ಕಾಲ್ ಮಾಡುತ್ತಾ ’ಪತ್ರಕರ್ತರು’ ಎಂದು ಬೋರ್ಡು ಹಾಕಿಕೊಂಡ ಒಂದಿಬ್ಬರ ಪಾದ ಹಿಡಿದರು. ಆ ಪತ್ರಕರ್ತರಿಗೂ ಹಸಿವೆ ಜಾಸ್ತಿಯಾಗಿತ್ತು; ತಿನ್ನಲು ಬಹಳದಿನಗಳಿಂದ ಹೊಟ್ಟೆಗೆ ಏನೂ ಸಿಗದೇ ಹಸಿವಿನಿಂದ ಹೈರಾಣಾಗಿ ಹೋದ ಹೆಬ್ಬುಲಿಯಂತೇ, ಸಿಕ್ಕಿದ ಇದೇ ಪ್ರಕರಣವನ್ನು ತಿರುಚಿ ಸ್ವಾಮಿಗಳ ವಿರುದ್ಧ ಬರೆಯಲು ಆರಂಭಿಸಿದರು. ಹಣಕ್ಕಾಗಿ ಸ್ವಾಮಿಗಳಲ್ಲಿ ದೂತರನ್ನೂ ಕಳಿಸಿದರು. ಸ್ವಾಮಿಗಳು ಯಾವುದಕ್ಕೂ ಸೊಪ್ಪುಹಾಕಲೇ ಇಲ್ಲ!! ಇದನ್ನು ಕಂಡು ಇನ್ನೂ ಕಂಗೆಟ್ಟ ಆ ’ಪತ್ರಿಕಾಕರ್ತರು’ ಗೋಕರ್ಣ ಎಲ್ಲಾ ಸಮಾಜದ್ದು, ಗೋಕರ್ಣ ಎಲ್ಲಾ ಸಮಾಜಕ್ಕೆ ಸೇರಬೇಕಾದ ಆಸ್ತಿ, ಗೋಕರ್ಣಕ್ಕೆ ಎಲ್ಲಾ ಸ್ವಾಮಿಗಳನ್ನೂ ಸೇರಿಸಿದ ಸಮಿತಿ ನೇಮಿಸಿ ಎಂದೆಲ್ಲಾ ಬರೆದರು. ನೈತಿಕ ಅಧಃಪತನಕ್ಕಿಳಿದ ಗಡ್ಡದ ಪಿಸ್ತೂಲುಧಾರಿ ಪತ್ರಕರ್ತನೊಬ್ಬ ತಾನು ಸೂರ್ಯನಂತೇ ಎಂದುಕೊಂಡು ಯದ್ವಾತದ್ವಾ ಬರೆದೇ ಬರೆದ. ಆತನಿಂದ ಯಾವುದೇ ಕಿರಣಗಳು ಹೊರಸೂಸುವ ಬದಲು, ಬೆಂಗಳೂರಿನ ಕಲಾಸಿಪಾಳ್ಯದ ಗಬ್ಬುನಾರುವ ತಿಪ್ಪೆಗುಂಡಿಯಂತೇ ವಾಕರಿಕೆ ತರಿಸುವ ಆತನ ಮೈ-ಮನಗಳಿಂದ ಅಸಹ್ಯಕರ ವಾಸನೆ ಹೊರಸೂಸುತ್ತಿತ್ತೇ ಹೊರತು ಯಾವುದೇ ಕಿರಣಗಳು ಹೊರಹೊಮ್ಮಲಿಲ್ಲ. ಪೆಚ್ಚಾಗಿ ಕೂತ ಅದೇ ಪತ್ರಕರ್ತ ಸಿನಿಮಾ ಕಥೆಯೊಂದರ ಬಗ್ಗೆ ರೋಲ್ ಕಾಲ್ ಮಾಡಲು ಹೋಗಿ ಸಾರ್ವಜನಿಕರಿಂದ ಉಗುಳಿಸಿಕೊಂಡಿದ್ದು ಈಗ ಕಥೆ ! 

ಗೋಕರ್ಣವನ್ನೇ ಪ್ರಧಾನ ಮಠವಾಗುಳ್ಳ ಸಂಸ್ಥಾನ ’ಗೋಕರ್ಣ ಸಂಸ್ಥಾನ’ ಎಂದೇ ಹೆಸರಿಸಲ್ಪಟ್ಟಿತು. ತರಹೇವಾರಿ ತಕರಾರೀ ಕುಳಗಳೂ ರಾವಣಹೃದಯದ ಪತ್ರಿಕಾಕರ್ತರೂ ಇಲ್ಲದ ಆ ಕಾಲದಲ್ಲಿ, ಅಂಧಾನುಕರಣೆಗಳ ಮೌಢ್ಯಗಳಿಂದ ಕೆಟ್ಟುನಿಂತ ಸಮಾಜಕ್ಕೆ ಅಧರ್ಮದ ಬದಲಾಗಿ ಧರ್ಮಮಾರ್ಗವನ್ನು ಬೋಧಿಸಲೇ ಶಂಕರನಾಗಿ ಜನ್ಮ ತಳೆದುಬಂದ ಸಾಕ್ಷಾತ್ ಪರಶಿವ, ಧರ್ಮ ಮಂಡಲವಾಗಿ ಗೋಕರ್ಣ ಮಂಡಲವನ್ನು ಗುರುತಿಸಿ ಆ ಮಂಡಲಕ್ಕೆ ’ಶ್ರೀ ಸಂಸ್ಥಾನ ಗೋಕರ್ಣ’ ಎಂದು ಕರೆದು, ಮಠವನ್ನು ಆಚಾರ್ಯಪೀಠವೆಂದು ಘೋಷಿಸಿದರು. ಆದಿ ಶಂಕರರಿಂದ ಹಿಡಿದು ಇಲ್ಲಿಯತನಕ ೩೫ ಸ್ವಾಮಿಗಳು ತಮ್ಮ ಅಖಂಡ ತಪಸ್ಸಿನ ಫಲವನ್ನೇ ಸಮಾಜಕ್ಕೆ ಹಂಚಿದ್ದಾರೆ. ಇಂತಹ ಅವಿಚ್ಛಿನ್ನ ಪರಂಪರೆಯ ಪೀಠದಲ್ಲಿ ೩೬ ನೇ ಯತಿಯಾಗಿ, ರಾಜಯೋಗಿ ಇಂದಿಗೆ ವಿರಾಜಮಾನರಾಗಿರುವವರು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು.

ರಾಮಚಂದ್ರಾಪುರ ಮಠದ ಪರಂಪರೆಯಲ್ಲಿ ಒಂದು ವಿಸ್ಮಯಕರ ಪ್ರಸಂಗ ಅಡಕವಾಗಿದೆ. ಇಲ್ಲಿನ ಕೆಲವು ತಪಸ್ವಿಗಳು ತಮಗೆ ಮರಳಿ ಪೀಠಕ್ಕೆ ಬಂದು ಲೋಕಕಲ್ಯಾಣಾರ್ಥ ಕಾರ್ಯವನ್ನು ನಡೆಸುವ ಮನಸ್ಸಾದಾಗ, ಪೀಠದಲ್ಲಿ ಮುಪ್ಪಿನ ವಯಸ್ಸಿನ ಯತಿಗಳಿದ್ದರೆ, ಆ ಯತಿಗಳಿಗೆ ಸ್ವಪ್ನ ಸಂದೇಶದ ಮೂಲಕ ತಾವು ಮರಳುತ್ತೇವೆ ಎಂಬುದನ್ನು ಸೂಚಿಸುತ್ತಾರೆ. ಈಗಿನ ಪೀಠಾಧಿಪತಿಗಳಿಗಿಂತ ಹಿಂದೆ ಶ್ರೀ ರಾಘವೇಂದ್ರ ಭಾರತಿಗಳು[ ಪರಮ ಗುರುಗಳು]ಅದಕ್ಕೂ ಹಿಂದೆ ಶ್ರೀ ರಾಮಚಂದ್ರ ಭಾರತಿಗಳು[ಪರಮೇಷ್ಠಿ ಗುರುಗಳು] ಅದಕ್ಕೂ ಹಿಂದೆ ಶ್ರೀ ’ರಾಘವೇಶ್ವರ ಭಾರತಿ’ [ಪರಾತ್ಪರ ಗುರುಗಳು]ಎಂಬ ಅಭಿದಾನವನ್ನು ಪಡೆದ ಯತಿಗಳೇ ಇದ್ದರು. ಆ ರಾಘವೇಶ್ವರರಿಗೆ ಆ ಕಾಲಘಟ್ಟದಲ್ಲಿ ಮೈಲಿ ರೋಗ [ಸಮಾಜದ ಎಲ್ಲೆಡೆಗೂ ಹಬ್ಬಿದ್ದು, ಸ್ವಾಮಿಗಳಿಗೂ ತಗಲಿತ್ತು ಎಂದಾಯ್ತು-ಭೌತಿಕವಾಗಿ ಅನುಭವಿಸಬೇಕಾದ್ದನ್ನು ತಪ್ಪಿಸಲು ಸಾಧ್ಯವೇ?] ದಿಂದ ಕಣ್ಣುಗಳೆರಡೂ ಕುರುಡಾಗಿಬಿಟ್ಟಿದ್ದವಂತೆ. ಶಿಷ್ಯರ ಸಹಾಯದಿಂದ ಕೊಲ್ಲೂರಿನ ಕೊಡಚಾದ್ರಿಗೆ ತೆರಳಿ, ಅಲ್ಲಿಯೇ ೭ ವರ್ಷಗಳ ಕಾಲ ಕಠಿಣ ತಪಸ್ಸನ್ನು ನಡೆಸಿ ಹೋದ ಚಕ್ಷುಗಳೆರಡನ್ನೂ ಮರಳಿ ಪಡೆಯುವುದರ ಜೊತೆಗೆ ಅತ್ಯಂತ ಹೆಚ್ಚಿನ ತಪೋಬಲವನ್ನು ಪಡೆದವರಾಗಿದ್ದರು ಎಂದು ಮಠದ ದಾಖಲೆಗಳು ತಿಳಿಸುತ್ತವೆ. ಅವರ ಕಾಲದಲ್ಲಿಯೇ ಒಮ್ಮೆ, ಮಠಕ್ಕೆ ರಾಜ ದಾನವಾಗಿ ಪ್ರೀತಿಯಿಂದ ಕೊಟ್ಟಿದ್ದ ಬಹುದೊಡ್ಡ ಸಲಗವೊಂದಕ್ಕೆ ಮದ ಉಕ್ಕಿಬಂತು. ಮದಿಸಿದ ಸಲಗವನ್ನು ಎಲ್ಲರೂ ಹೆದರಿಬಿಟ್ಟೋಡಿದರು, ಮಠದ ಪರಿಸರದಲ್ಲಿರುವ ಜನರೆಲ್ಲಾ ಕಂಗಾಲಾಗಿದ್ದಾಗ ವಿಷಯ ತಿಳಿದ ಆ ರಾಘವೇಶ್ವರರು ಹೊರಗೆ ಬಂದು ಆನೆಗೆ ತನ್ನ ಕಾವಿಯ ಉತ್ತರೀಯವನ್ನು ಬೀಸಿ ಎಸೆಯುತ್ತಾ" ಏನೋ ರಾಮಭದ್ರಾ [ಆನೆಗೆ ಇದ್ದ ಹೆಸರು], ಏನಾಯ್ತೋ ನಿಂಗೆ?" ಎಂದು ಕೇಳುತ್ತಿದ್ದಂತೆಯೇ ಆನೆಯ ಮದವಿಳಿದುಹೋಗಿ ಸಾಧು ಸಾಕುಪ್ರಾಣಿಗಳಂತಾದ ಆನೆ ಅವರು ಹೇಳಿದ್ದನ್ನು ಆಲೈಸತೊಡಗಿತಂತೆ. ಇಷ್ಟೆಲ್ಲಾ ಮಹಿಮೆಯನ್ನು ಅಂದಿಗೆ ತೋರಿದ್ದ ಆ ರಾಘವೇಶ್ವರರು, ಪ್ರಸಕ್ತ ಪೀಠದಲ್ಲಿರುವವರಿಗೂ ಹಿಂದಿನವರಾದ ರಾಘವೇಂದ್ರ ಭಾರತಿಗಳ ಕನಸಲ್ಲಿ ಬಂದು, "ಮಠ ಈಗ ಚೆನ್ನಾಗಿದೆ, ನಾವು ಮಠಕ್ಕೆ ಮರಳುತ್ತೇವೆ" ಎಂದಹಾಗೆ ಅನಿಸಿದ್ದನ್ನು ಮಠದ ದಾಖಲೆಗಳಲ್ಲಿ ಅವರು ಬರೆಯಿಸಿದ್ದಾರೆ. ಮೂರು ತಲೆಮಾರುಗಳ ಹಿಂದಿನ ಆ ರಾಘವೇಶ್ವರರು "ಮರಳಿ ಬರುತ್ತೇವೆ" ಎಂದಿದ್ದರಿಂದ ಸಂತುಷ್ಟಗೊಂಡ ರಾಘವೇದ್ರ ಭಾರತಿಗಳು, ಶಿಷ್ಯ ಪರಿಗ್ರಹವಾದಾಗ ಇಂದಿನ ಸ್ವಾಮಿಗಳಿಗೆ ’ರಾಘವೇಶ್ವರ ಭಾರತೀ’ ಎಂಬ ಹೆಸರನ್ನೇ ಅಭಿದಾನ ಮಾಡಿದರು.

ಶಿಷ್ಯ ಪರಿಗ್ರಹವಾದ ನಾಲ್ಕೇ ವರ್ಷಗಳಲ್ಲಿ ರಾಘವೇಂದ್ರರು ಮುಕ್ತರಾದಾಗ ಭಕ್ತಜನಸಂದಣಿ ಅವರ ಅಗಲುವಿಕೆಯನ್ನು ಸಹಿಸದಾಗಿತ್ತು. ಹೊರಗೆ ತೀರಾ ಸೌಮ್ಯರಾಗಿ ಕಾಣದಿದ್ದರೂ ಹೃದಯದಲ್ಲಿ ಮೃದುಮಧುರ ಭಾವಗಳನ್ನು ಹೊಂದಿದ್ದ ಅವರ ಶಿಷ್ಯಗಣಗಳಲ್ಲಿ ಅನೇಕರಿಗೆ ಇದೇ ಭಾಸವಿದೆ. ಮಹಾಸಮಾಧಿ ಕಾರ್ಯ ಮುಗಿದು ಆರಾಧನೆ ನಡೆದ ದಿನ ಸಾಯಂಕಾಲದ ತುಂಬಿದ ಸಭೆಯಲ್ಲಿ,"ಸೂರ್ಯಾಸ್ತವಾಯ್ತೆಂದು ಬೇಸರಿಸಬೇಡಿ,ಮುಳುಗುವ ಮುನ್ನವೇ ಆ ಸೂರ್ಯ ಚಂದ್ರನನ್ನು ನಿಮ್ಮಲ್ಲಿಗೆ ಬಿಟ್ಟು ಹೋಗಿದ್ದಾನೆ." ಎಂದು ಪ್ರವಚಿಸಿದ ಇಂದಿನ ಸ್ವಾಮಿಗಳ ಮಾತುಗಳನ್ನು ಆಲಿಸಿದ್ದ ನನಗೆ ಇವರೊಬ್ಬ ಕೋಟಿ ಸೂರ್ಯನ ಪ್ರಭೆಯನ್ನು ಹೊತ್ತ ಚಂದ್ರ ಎನಿಸಿತ್ತು! ಸನ್ಯಾಸಿಗಳನ್ನು ಲೌಕಿಕವಾಗಿ ಗುರುತಿಸುವುದರ ಜೊತೆಗೆ ಅವರನ್ನು ಪಾರಮಾರ್ಥಿಕವಾಗಿ ಗಣಿಸುವ ಬುದ್ಧಿ ಬಹಳ ಜನರಿಗೆ ಇರುವುದಿಲ್ಲ; ಬುದ್ಧಿಮಟ್ಟವನ್ನು ಅಳೆಯಲು ಯಾವುದೇ ಸಮಂಜಸವಾದ ಉಪಕರಣಗಳೂ ಇಲ್ಲ. ೧೯೯೯ ರಲ್ಲಿ ಪಟ್ಟಾಭಿಷಿಕ್ತರಾದ ಇಂದಿನ ರಾಘವೇಶ್ವರರು ಹಾಕಿಕೊಂಡ ಯೋಜನೆಗಳು ಮತ್ತು ಅವುಗಳ ಆಯೋಜನೆಗಳು, ಯೋಚನೆಗಳು ಅವರ ದಿವ್ಯತ್ವಕ್ಕೆ ಸಾಕ್ಷಿಯಾಗಿವೆ. ಅಂದಿನಿಂದ ಇಂದಿನವರೆಗೆ, ಸಂಕಲ್ಪಿಸಿದ ಯಾವುದೇ ಕೆಲಸ ಸಾಧ್ಯವಾಗಲಿಲ್ಲ ಎಂಬುದೇ ಇಲ್ಲ! 

ಇಂತಹ ದಿವ್ಯ ಹಿನ್ನೆಲೆಯುಳ್ಳ ಅದ್ವೈತ ಪೀಠದಲ್ಲಿ ೩೬ನೇ ಯತಿಗಳು ಇವರಾದರೆ, ಅಯೋಧ್ಯೆಯ ರಘುವಂಶದ ಪ್ರಖ್ಯಾತ ದೊರೆಗಳಲ್ಲಿ ೩೬ನೆಯವ ಶ್ರೀರಾಮ.[ವಂಶಾವಳಿಯಿಂದ ೬೪ನೇ ರಾಜರಾದರೂ ಕೆಲವರು ಅಷ್ಟೊಂದು ಪ್ರಮುಖರೆನಿಸಲಿಲ್ಲ] ರಾಮನ ಮನೋಭೂಮಿಕೆಯನ್ನು ಸಂಪೂರ್ಣವಾಗಿ ತನ್ನಲ್ಲಿ ಹುದುಗಿಸಿಕೊಂಡ ಈ ರಾಘವರಿಗೂ ಆ ರಾಘವನಿಗೂ ಎಂತಹ ತಾಳೆ ಎಂಬುದನ್ನು ನೇರವಾಗಿ ಸಂಪರ್ಕಕ್ಕೆ ಬಂದ ಜನ ಬಲ್ಲರು! ಇದನ್ನೆಲ್ಲಾ ನಿಮಗೆ ಹೇಳಬೇಕಾದ ಪ್ರಮೇಯವೇನೂ ಇರಲಿಲ್ಲ, ಅಂತಹ ಅನಿವಾರ್ಯತೆಯಾಗಲೀ ಅಗತ್ಯತೆಯಾಗಲೀ ಕಂಡುಬರಲಿಲ್ಲ. ಆದರೂ ಕೆಟ್ಟ ಪತ್ರಿಕೆಗಳಲ್ಲಿ ಓದಿದ್ದನ್ನೇ ಸತ್ಯವೆಂದು ತಿಳಿದುಕೊಂಡವರಿದ್ದರೆ ಅವರ ಅರಿವಿಗೆ ಇರಲಿ ಎಂದು ಹೀಗೆ ಉಲ್ಲೇಖಿಸಿದ್ದೇನೆ. ಎಲ್ಲರಂತೇ ರಾಮಕಥೆಯನ್ನು ಉದ್ದಕ್ಕೆ ಹೇಳುತ್ತಾ ಹೋದರೆ ಯಾರೋ ಕೆಲವು ಮುದಿವಯಸ್ಕರಷ್ಟೇ ಕೇಳಲು ಬಂದಾರು, ರಾಮಕಥೆಯನ್ನು ಅಸಡ್ಡೆಮಾಡಿದ ಯುವವರ್ಗವನ್ನೂ ಮತ್ತು ರಾಮಾಯಣವನ್ನು ಕೇಳುವ/ಓದುವ ಸೌಲಭ್ಯ ವಂಚಿತರಾದ ಹಲವರಿಗೆ ರುಚಿಕರವಾಗಿ ರಾಮಾಯಣವನ್ನು ಅನುಭವಿಸುವ ಅನುಕೂಲವನ್ನು ಕಲ್ಪಿಸಲೋಸುಗ ’ರಾಮಕಥೆ’ಹೇಳುವಿಕೆಯ ಆರಂಭವಾಯ್ತು. ಏನೋ ಇರಬೇಕೆಂದು ನೋಡಲು ಬಂದವರು ಸ್ವಲ್ಪ ಹೊತ್ತು ಹಾಗೇ ನಿಂತರು-ಆಮೇಲೆ ನಿಧಾನವಾಗಿ ಕೇಳುತ್ತಾ ಕುಂತರು, ಒಮ್ಮೆ ಬಂದವರು ಮಾರನೇದಿನವೂ ಬಂದರು-ಬಂದವರೇ ಕುಂತರು, ಮೂರನೇ ದಿನ ಬರುವಾಗ ಮನೆಯ ಜನರನ್ನೂ ಅಕ್ಕಪಕ್ಕದವರನ್ನೂ ಕರೆತಂದರು! ಬಾಯಿಂದ ಬಾಯಿಗೆ ಬಾಯಿಂದ ಬಾಯಿಗೆ ಹಬ್ಬಿದ ರಾಮಕಥೆಯ ಸುದ್ದಿ ಈಗ ಕರ್ನಾಟಕದ ಹಲವೆಡೆಗೆ ಮನೆಮಾತಾಗಿದೆ! "ಅಂಥಾದ್ದೇನಿದೆ?"ಎಂಬ ನಿಮ್ಮ ಪ್ರಶ್ನೆಗೆ "ಬಂದು ಅನುಭವಿಸಿ" ಎಂಬುದೇ ಉತ್ತರವಾಗಿದೆ. ಸದ್ಯಕ್ಕೆ ಬೆಂಗಳೂರಿನ ಮಲ್ಲೇಶ್ವರದ ೧೩ನೇ ಕ್ರಾಸಿನ ಸರ್ಕಾರೀ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಂಜೆ ೬-೯ರ ತನಕ ನಡೆಯುತ್ತಿದೆ-ಆಗಸ್ಟ್ ೧೨ ರ ತನಕ ಇಲ್ಲಿ, ನಂತರ ಸಪ್ಟೆಂಬರ್ ೨ ರಿಂದ- ೯ರ ವರೆಗೆ ಅರಮನೆ ಮೈದಾನದ ’ಗಾಯತ್ರಿ ವಿಹಾರ’ದಲ್ಲಿ ನಡೆಸಲ್ಪಡುತ್ತದೆ. ಆಸಕ್ತರು ಭಾಗವಹಿಸಿ ಕಥೆಯನ್ನು ಅನುಭವಿಸಬಹುದಾಗಿದೆ. ಭಕ್ತ-ಭಾವುಕರ ಒಳಿತಿಗಾಗಿ, ಯುವಪೀಳಿಗೆಗೆ ರಾಮ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಸಲುವಾಗಿ, ಹಲವು ರಾಮಾಯಣಗಳು ಚಿತ್ರ-ವಿಚಿತ್ರ ಗತಿಯಲ್ಲಿ ಘಾತ-ಉಪೋಧ್ಘಾತಗಳನ್ನು ಪಡೆದು ಮೆರೆಯುತ್ತಿರುವಾಗ--ಆದಿ ಕವಿಯ ಆದಿಕಾವ್ಯದ ಸೊಗಡು ಮರೆಯಾಗದಿರುವ ಸಲುವಾಗಿ, ಹೆಚ್ಚೇಕೆ ಲೋಕೋಪಕಾರಾರ್ಥವಾಗಿ ರಾಮಕಥೆಯನ್ನು ನಡೆಸಿಕೊಡುತ್ತಿರುವ ರಾಘವೇಶ್ವರರಿಗೆ ಸಮಸ್ತರ ಪರವಾಗಿ ನನ್ನ ಸಾಷ್ಟಾಂಗ ನಮಸ್ಕಾರಗಳು.

ನನಗೆ ಅವತಾರಗಳಲ್ಲೇ ಶ್ರೀರಾಮ ಅತ್ಯಂತ ಇಷ್ಟದ ಅವತಾರ. ರಾಮನ ಕುರಿತಾದ ಎರಡು ಶ್ಲೋಕಗಳೂ ಬಹಳ ಇಷ್ಟ: ಒಂದರಿಂದ ಆರಂಭಿಸಿದ್ದೇನೆ; ಇನ್ನೊಂದರಿಂದ ಈ ಲೇಖನಕ್ಕೆ ಮುಕ್ತಾಯ ಹಾಡುತ್ತಿದ್ದೇನೆ :

ವಾಮೇ ಭೂಮಿಸುತಾ ಪುರಶ್ಚ ಹನುಮಾನ್ ಪಶ್ಚಾತ್ ಸುಮಿತ್ರಾಸುತಃ
ಶತ್ರುಘ್ನೋ ಭರತಶ್ಚ ಪಾರ್ಶ್ವದಲಯೋರ್ವಾಯ್ವಾದಿಕೋಣೇಷು ಚ|
ಸುಗ್ರೀವಶ್ಚ ವಿಭೀಷಣಶ್ಚ ಯುವರಾಟ್ ತಾರಾಸುತೋ ಜಾಂಬವಾನ್
ಮಧ್ಯೇ ನೀಲಸರೋಜಕೋಮಲರುಚಿಂ ರಾಮಂ ಭಜೇ ಶ್ಯಾಮಲಮ್ ||

ಸಮರ್ಥನಾದ ಶ್ರೀರಾಮ ಸಕಲರಿಗೂ ಶುಭವನ್ನುಂಟುಮಾಡಲಿ.

|| ಹರೇರಾಮ ||


9 comments:

 1. ಗುರುಗಳಿಗೆ ನಮೋನಮಃ. ಬರೆದ ನಿಮಗೆ ಧನ್ಯವಾದ.

  ReplyDelete
 2. सरसं मनोहरं भट्भाग । धन्यं मन्यामहे तादृशपीठस्य शिष्याः वयमिति ।

  ReplyDelete
 3. vERY NICE collection. Keep it up.

  ReplyDelete
 4. ಸಮಗ್ರ ಮಾಹಿತಿಗಳ ಅತ್ಯುತ್ತಮ ಬರಹ..

  ReplyDelete
 5. ಸರ್ವಮಿದಂ ಕೃತಂ ಅತ್ರ ಗುರುಸಮರ್ಪಣಂ |
  ಯಸ್ಯಾನುಗ್ರಹಾದೇವ ವರಮಿದಂ ಜೀವನಂ ||

  ReplyDelete