ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 29, 2012

ಲಂಕೇಶರ ಬಗ್ಗೆ ಕೊರೆದಷ್ಟು ಸುಲಭವಲ್ಲ ಭಗವದ್ಗೀತೆ ಬೋಧನೆ ಏನಂತೀರಿ ಮಹಾಬಲಮೂರ್ತಿ ಕೊಡ್ಲೆಕೆರೆಯವರೇ ?


ಲಂಕೇಶರ ಬಗ್ಗೆ ಕೊರೆದಷ್ಟು ಸುಲಭವಲ್ಲ ಭಗವದ್ಗೀತೆ ಬೋಧನೆ ಏನಂತೀರಿ ಮಹಾಬಲಮೂರ್ತಿ ಕೊಡ್ಲೆಕೆರೆಯವರೇ ?

[ನಿನ್ನೆ ದಿವಂಗತರಾದ ಸಾಹಿತಿ ಬಸವರಾಜು ಅವರಿಗೆ ಲೇಖನಕ್ಕೂ ಮುನ್ನ ಶ್ರದ್ಧಾಂಜಲಿಗಳು]

ಹೆಸರು ಪತ್ರಿಕೆಗಳಲ್ಲಿ ದಪ್ಪ ಅಕ್ಷರಗಳಲ್ಲಿ ಕಾಣಿಸಲಿ ಎಂಬ ಅವರ ಲೆಕ್ಕದ ಸದುದ್ದೇಶದಿಂದ ಮಹಾತ್ಮರ ಚರಿತ್ರೆಗಳ ಮೇಲೆ ಭಗವದ್ಗೀತೆ ಮತ್ತು ಗೋಹತ್ಯಾ ನಿಷೇಧ ವಿಷಯಗಳ ಕುರಿತು ಬಾಂಬ್ ಹಾಕುವ ಸಾಲಿಗೆ ಈ ಮಹಾಬಲಮೂರ್ತಿಯೂ ಸೇರಿದ್ದು ಆಶ್ಚರ್ಯ ! ಅನಂತ ಮೂರ್ತಿ, ಜಿ.ಕೆ ಗೋವಿಂದ ರಾವ್ ಮೊದಲಾದ ಬುದ್ಧಿಜಾಸ್ತಿಯಾದ ಜೀವಿಗಳು ಅಡ್ಡ ಗೋಡೆಯಮೇಲೋ ಕೆಳಗೋ ಸಮಯಕ್ಕನುಸಾರವಾಗಿ ದೀಪ ಇಟ್ಟು ತಾವು ’ಬೆಳಗುವುದು’ ಈಗ ಎಲ್ಲರಿಗೂ ಗೊತ್ತಿರುವ ಆಡಲಾಗದ ಅನುಭವಿಸಲಾಗದ ಸತ್ಯ! ಇಷ್ಟು ದಿನ ಯಕ್ಷಗಾನದ ಬಗ್ಗೆ, ಕಲಾವಿದರುಗಳ ಬಗ್ಗೆ, ಲಂಕೇಶರ ಬಗ್ಗೆ ತನ್ನದೇ ಕೊರೆತ ಮಂಡಿಸುತ್ತಿದ್ದ ಗೋಕರ್ಣದ ಈ ಮಹಾಬಲ ಮೂರ್ತಿ ನಿನ್ನೆ ನಡೆದ ’ ಸರೋಜಾದೇವಿ ಪ್ರಶಸ್ತಿ ಪ್ರದಾನ’ದಲ್ಲಿ ಪಾಲ್ಗೊಂಡು " ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಗೊಂದಲಾವಾದೀತು " ಎಂಬ ಗಾಂವ್ಟಿ[ನಾಟಿ] ಬಾಂಬೊಂದನ್ನು ಹಾಕಿದ್ದಾರೆ! ಭಗವದ್ಗೀತೆಯ ಬಗ್ಗೆ ಇನ್ನೆಷ್ಟು ಸಲ ಬರೆಯಬೇಕು ಎಂದು ತಲೆಕೆಡಿಸಿಕೊಳ್ಳುತ್ತಿರುವಾಗಲೇ ಪಾದ ಮತ್ತು ಚಪ್ಪಲಿಯ ನಡುವೆ ಸಿಕ್ಹಾಕಿಕೊಂಡ ಸಣ್ಣ ಕಲ್ಲಿನಂತೇ ಇವರಾಡಿದ ಸ್ಥಿತಿ ಬಹುತೇಕರಿಗೆ ಬೇಸರ ತರಿಸುತ್ತಿದೆ.

ಮಹಾಬಲರೇ, ನೀವು ಲಂಕೇಶ್ ಮೇಷ್ಟ್ರ ಖಾಸಾ ಶಿಷ್ಯರಾಗಿದ್ದಿರಬಹುದು, ಅವರಿಗೆ ಗಿಂಡಿಮಾಣಿಯಾಗಿಯೂ ಕೆಲಸ ಮಾಡಿರಬಹುದು, ಅವರ ’ರಸಮಯ’ ಮತ್ತು ನೀರಸಮಯ ಸನ್ನಿವೇಶಗಳೂ ರೌದ್ರಾವತಾರಗಳೂ ನಿಮಗೆ ತಿಳಿದಿರಲು ಸಾಕು; ಅವರ ಎಂತೆಂಥದ್ದೋ ಅಂತಃಕರಣವೂ ನಿಮಗೆ ಅರ್ಥವಾಗಿ ಚಳಿಯಲ್ಲಿ ಶಾಲು ಹೊದಿಸಿ ಬೆಚ್ಚಗಾಗಿಸಿರಲೂ ಸಾಕು. ಆದರೆ ಭಗವದ್ಗೀತೆಯ ಮೇಲೆ ನಿಮ್ಮ ವಕ್ರ ದೃಷ್ಟಿ ಯಾಕೆ ಬೇಕು ? ಹೇಳ್ತೇನೆ ಕೇಳಿ: ನಿನ್ನೆ ನೀವು ಅಲ್ಲಿಗೆ ಬರುವುದಕ್ಕೂ ಮೋದಲೇ ಪ್ಲಾನ್ ಮಾಡಿದ್ರಿ! ಇಂದು ನಾನು ಈ ಅಸ್ತ್ರ ಪ್ರಯೋಗಿಸಬೇಕು ಅಂತ. ಯಾಕೆಂದರೆ ನಾಕು ದಿನದ ಹಿಂದೆ ನಿಮ್ಮ ಸಾಲಿನ ನಿಮ್ಮ ’ಹಿರಿಯಣ್ಣ’ ಜಿ.ಕೆ.ಗೋವಿಂದರಾಯರು ಅಲ್ಲೆಲ್ಲೋ ದಲಿತ ಸಭೆಗೆ ಹೋಗಿದ್ದಾಗ ಏನೋ ಆಡಲು ತೋರದೇ " ಪೇಜಾವರರು ವಿಧವಾವಿವಾಹಕ್ಕೆ ಸಮ್ಮತಿ ಸೂಚಿಸಬೇಕು" ಎಂದು ಬಾಯಿ ಚೊಚ್ಚರಿಸಿ ಹೊ[ಬೊ]ಗಳಿದ್ದರು. ಮಠಾಧೀಶರುಗಳನ್ನೆಲ್ಲಾ ಇಷ್ಟು ಅಗ್ಗದಲ್ಲಿ ಖರೀದಿಸುವ ಸ್ವಭಾವ ಯಾಕೆ ಬೆಳೆಸಿಕೊಳ್ಳಬೇಕು ಸ್ವಾಮೀ ? ಅವರುಗಳಿಗೂ ಅವರುಗಳದ್ದೇ ಆದ ನೀತಿ-ನಿಯಮಗಳಿರುತ್ತವೆ. ಸನ್ಯಾಸಿಯೊಬ್ಬ ಯಾರದ್ದೋ ಮದುವೆಗೋ, ಶ್ರಾದ್ಧಕ್ಕೋ, ಸತ್ತವರ ದೇಹದರ್ಶನಕ್ಕೋ ಹೋಗುವ ಹಾಗಿಲ್ಲ-ತಿಳಿಯಿರಿ. ಅಷ್ಟಕ್ಕೂ ಮದುವೆಯ ವಿಷಯಗಳನ್ನು ಈಗಿನ ಕಾಲದಲ್ಲೂ ಮಠಾಧೀಶರ ಮುಂದೆ ಯಾಕೆ ಕೊಂಡೊಯ್ಯುತ್ತೀರಿ?

ಸನ್ಯಾಸಿಗಳೂ ಎಲ್ಲರ ಹಾಗೇ ಕೆಲಸ ಮಾಡುವುದಾದರೆ ಅವರು ಸನ್ಯಾಸಿಯಾಗುವುದೇಕೆ ? ಶೃಂಗೇರಿ ಜಗದ್ಗುರುಗಳ ಹತ್ತಿರ ಯಾರೋ ಪತ್ರಕರ್ತರು ಕೇಳಿದರು "ಸ್ವಾಮೀಜಿ ಸಮಾಜಮುಖಿಯಾಗಿ ನೀವು ಎಷ್ಟು ಎಂಜಿನೀಯರಿಂಗ್ ಕಾಲೇಜು ಕಟ್ಟಿದ್ದೀರಿ ಏನೇನು ಮಾಡಿದ್ದೀರಿ?" ಎಂದು. ಆಗ ಅವರು ಉತ್ತರಿಸಿದ್ದನ್ನು ಕೇಳಿದ್ದೇನೆ " ಸನ್ಯಾಸಿಯಾದವರು ಜ್ಪ-ತಪಗಳಲ್ಲಿ ನಿರತರಾಗಿ, ಸನ್ಮಾರ್ಗ ಬೋಧಿಸುವುದು, ಧರ್ಮ-ಅಧರ್ಮಗಳವ್ಯತ್ಯಾಸಗಳನ್ನು ತಿಳಿಸಿಕೊಡುವುದು, ಸದಾಚಾರದ ಬಗ್ಗೆ ತಿಳಿಸಿ ಹೇಳುವುದು ನಮ್ಮ ಕೆಲಸ, ಮಿಕ್ಕಿದ್ದಕ್ಕೆ ಆಡಳಿತಾರೂಢ ರಾಜಕೀಯ ಸರಕಾರ ಇರುತ್ತದೆ ನಡೆಸುತ್ತದೆ. " ಎಂತಹ ತೂಕದ ಮಾತು. ಸನ್ಯಾಸಿಗಳು ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳನ್ನು ನಡೆಸುವುದು ನಿಜವಾಗಿ ಸಿಂಧುವಲ್ಲ. ಅದೂ ಧರ್ಮಾರ್ಥ ಮಾಡುತ್ತಾರೆಯೇ? ಲೆಕ್ಕಾತಪ್ಪಿ ಡೊನೇಶನ್ನು! ಮಿಕ್ಕವರಿಗೂ ಮಠಾಧೀಶರುಗಳಿಗೂ ಆಗ ವ್ಯತ್ಯಾಸ ಏನು ? ಕಾವಿ ತೊಟ್ಟವರು ಕೇವಲ ವೇಷಧಾರಿಗಳಂತೇ ಕಾಣಿಸುವುದಿಲ್ಲವೇ?

ಇತ್ತೀಚಿನ ದಿನಗಳಲ್ಲಿ ಬರೆಯುವ ಉತ್ತಮ ಸಾಹಿತಿಗಳಿಗಿಂತಾ ಬರೆಯದವರ ಜಂಬವೇ ತುಂಬಾ ಜಾಸ್ತಿ! ಎಲ್ಲಾದರೂ ಮೂಲೆಯೋ ಮೆಟ್ಟಿಲೋ ಕಾಣಿಸಿಕೊಂಡು ನಿಂತು ಒಂದಷ್ಟು ಭೋಂಗು ಬಿಟ್ಟರೆ ಮಾರನೇದಿನ ಸುದ್ದಿಮಾಡುವುದು ಹೇಗೆಂಬ ಹಿಕ್ಮತ್ತು ಅವರಿಗೆ ಕರತಲಾಮಲಕವಾಗಿರುತ್ತದೆ. ಸಮಾಜಕ್ಕೆ ಅವರು ಕೊಟ್ಟ ಅಂತಹ ಕೃತಿಗಳ ಕಾಣಿಕೆಯಾದರೂ ಇದೆಯೇ? ಇಲ್ಲ, ಹಾಗಾದರೆ ಅವರ್ಯಾವ ಸೀಮೆ ಸಾಹಿತಿಗಳಪ್ಪಾ ಎಂದರೆ ಅಲ್ಲಿಲ್ಲಿ ಅದೂ ಇದೂ ತುಣುಕುತ್ತಾ ಯಾವುದೋ ಸಂದರ್ಶನ, ಮತ್ಯಾವುದೋ ಹೂವು/ಗಿಡದ ಬಗ್ಗೆ ಕಿರುಚಿತ್ರಣ, ಗತಿಸಿಹೋಗಿದ್ದರೂ ಭೂತವಾಗಿ ಕಾಡುವ ಬೇಡದ ಬರಹಗಾರರ ಜೀವನದ ಬಗ್ಗೆ ಒಂದಷ್ಟು ಕೊರೆತ-ಮೊರೆತ ಇತ್ಯಾದಿ ಮಾಡಿಕೊಂಡು ತಾವೂ ಸಾಹಿತಿ ಎಂದುಕೊಳ್ಳುತ್ತಾ ಕುರ್ತಾ ಪೈಜಾಮು ಜೊತೆಗೊಂದು ಜೋಳಿಗೆ ಹಾಕಿಕೊಂಡು ಪೋಸು ಕೊಡುವ ಕೆಲವರನ್ನು ನೋಡಿದಾಗ ಮೈ ಉರಿಯುವುದೇಕೆಂದರೆ ಅವರು ಇಲ್ಲಸಲ್ಲದ ಹೇಳಿಕೆ ಕೊಡುವುದಕ್ಕೆ!

ಭೀಷ್ಮ ಹೋಗಿ ಕೇಳಿದಾಗ ಒಪ್ಪಲಿಲ್ಲ, ವಿದುರ ಹೋಗಿ ವಿಚಾರಿಸಿದಾಗ ಬಗ್ಗಲಿಲ್ಲ, ಸ್ವತಃ ಶ್ರೀಕೃಷ್ಣನೇ ಸಂಧಾನಕ್ಕೆ ಹೋದಾಗಲೂ ಕೇವಲ ದಾಯಭಾಗದ ಐದು ಗ್ರಾಮಗಳನ್ನು ಪಂಚಪಾಂಡವರಿಗೆ ತಲಾ ಒಂದೊಂದು ಬರುವಂತೇ ಕೊಡೆಂದರೂ ಕೌರವ ಒಪ್ಪಲಿಲ್ಲ. ಎಲ್ಲಿ ಧರ್ಮ ಅಧರ್ಮವಾಯ್ತೋ ಅಲ್ಲಿ ಮಿಕ್ಕುಳಿದ ಕೌಟುಂಬಿಕ, ವೈಯ್ಯಕ್ತಿಕ, ಸಾಮಾಜಿಕ ಸಂಬಂಧಗಳನ್ನು ಬದಿಗಿರಿಸಿ ಧರ್ಮಕ್ಕಾಗಿ ಹೋರಾಡು ಎಂಬುದು ಯುದ್ಧಭೂಮಿಯಲ್ಲಿ ಜಗದ್ಗುರು ಶ್ರೀಕೃಷ್ಣ ಯಾವ ಕ್ಲೀಷೆಗಳೂ ಇಲ್ಲದೇ ಅರ್ಜುನನಿಗೆ ಬೋಧಿಸಿದ ಪ್ರಾತ್ಯಕ್ಷಿಕಾ ಗ್ರಂಥ ಭಗವದ್ಗೀತೆ! ಭಗವದ್ಗೀತೆ ನಿಜವಾದ ಜನಲೋಕಪಾಲ್ ಎಂದರೆ ತಪ್ಪಲ್ಲ. ಗೀತೆಯನ್ನು ಆಡಳಿತದಲ್ಲಿ ಅಳವಡಿಸಿದರೆ ಇವತ್ತಿನ ರಾಜಕಾರಣಿಗಳಲ್ಲಿ ಬಹುತೇಕ ರಾಜಕಾರಣಿಗಳನ್ನು ಕೃಷ್ಣಜನ್ಮಸ್ಥಾನಕ್ಕೇ ಕರೆಸಿಕೊಳ್ಳುತ್ತಾನೆ ಕೃಷ್ಣ! ಅದಕ್ಕೇ ಇಲ್ಲದ ರಾಜಕೀಯ ನಡೆಯುತ್ತಿದೆ. ಆದರೂ ಎಲ್ಲೋ ಒಬ್ಬಿಬ್ಬರು ಅದರ ಅಳವಡಿಕೆ ಪಠ್ಯದಲ್ಲಾಗಲಿ ಎಂದರು. ಶುದ್ಧಹಸ್ತರಾದ ಕಾಗೇರಿಯವರು ಅದನ್ನು ಅಳವಡಿಸುವ ಮನೋಭಾವ ಹೊಂದಿದ್ದರೂ ಅನೇಕರು ಅದರ ವಿರುದ್ಧವೇ ಇದ್ದಾರೆ.

ದಾರಿಹೋಕರನೇಕರ ಕೆಲಸಕ್ಕೆ ಬಾರದ ಕಥೆಗಳನ್ನು ಕಟ್ಟಿಕೊಂಡು ನಮ್ಮ ಮುಂದಿನ ಜನಾಂಗ ಏನೂ ಮಾಡುವುದುಳುಯುವುದಿಲ್ಲ. ನಿಮ್ಮ ತೀಟೆ ತೀರಿಸಿಕೊಳ್ಳಲು ಬೇಕಾದ್ದು ಬರೆಯಿರಿ, ಪ್ರಶ್ನೆ ಬೇರೆ. ಆದರೆ ಪಠ್ಯಕ್ರಮದಲ್ಲಿ ಗೀತೆ ಅಳವಡಿಕೆ ಸಮಸ್ಯೆಯನ್ನೊಡ್ಡಬಹುದು, ಮಕ್ಕಳಿಗೆ ಕ್ಲಿಷ್ಟವಾಗಬಹುದು ಎಂಬ ಧೋರಣೆ ಬಹಳ ವಿಚಿತ್ರವಾದದ್ದು; ಹಾಸ್ಯಾಸ್ಪದವಾದದ್ದು. ಗೀತೆಯ ಅಳವಡಿಕೆ ಇಲ್ಲದ ೨೦ ವರ್ಷಗಳ ಹಿಂದೆಯೇ ನನಗೆ ಗೊತ್ತಿರುವ ಒಬ್ಬ ಹುಡುಗ ದೇವಸ್ಥಾನವೊಂದರ ವಿಶ್ವಸ್ಥ ಸಮಿತಿ ಹೂಡಿದ್ದ ಸ್ಪರ್ಧೆಗಾಗಿ ಗೀತೆಯ ಕೆಲವು ಅಧ್ಯಾಯಗಳನ್ನು ಕಂಠಪಾಠಮಾಡಿದ. ಸ್ಪರ್ಧೆಯಲ್ಲಿ ಆತನಿಗೇ ಮೊದಲ ಸ್ಥಾನ! ಆಮೇಲೆ ಅನೇಕವರ್ಷ ಅದನ್ನು ಮುಟ್ಟಲಿಲ್ಲ. ಯಾವಾಗ ಹೈಸ್ಕೂಲು ಕಳೆದು ಕಾಲೇಜಿಗೆ ಹೋಗಲು ಆರಂಭಿಸಿದನೋ ಯಾವುದೋ ಆಸಕ್ತಿಯಿಂದ ಗೀತೆಯನ್ನು ಓದಿದ. ನಿಧಾನವಾಗಿ ಅದರಲ್ಲಿರುವ ಉತ್ತಮ ಅಂಶಗಳನ್ನು ತನ್ನ ಓದಿನ ವ್ಯಾಪ್ತಿಗನುಗುಣವಾಗಿ ಅಳವಡಸಿಕೊಂಡ. ಈಗ ಆತ ಐಏಎಸ್ ಅಧಿಕಾರಿಯಾಗಿದ್ದಾನೆ. ಕ್ಲಿಷ್ಟಕರವಾಗಿದ್ದರೆ ಆತ ಅದನ್ನು ತಪ್ಪಾಗಿ ಅರ್ಥವಿಸಬಹುದಿತ್ತು, ಓದದೇ ಎತ್ತಿಡಬಹುದಿತ್ತು. ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲವಲ್ಲಾ.

ಭಾರತದ ಮೂಲನಿವಾಸಿಗಳಿಗೆ ಅವರದ್ದೇ ಆದೊಂದು ಇತಿ-ಮಿತಿ ರೀತಿ ರಿವಾಜುಗಳಿವೆ. ನಾವೆಲ್ಲಾ ಪ್ರಾಥಮಿಕ ಶಾಲೆ ಕಲಿಯುವುದಕೂ ಪೂರ್ವದಲ್ಲಿ ’ಕಥಾರೂಪ ಇತಿಹಾಸ’ ಎಂಬುದೊಂದು ಪುಸ್ತಕ ಕನ್ನಡ ಮಾಧ್ಯಮದ ಪಠ್ಯಕ್ರಮದಲ್ಲಿತ್ತು. ಯಾವ ರಾಜಕೀಯ ಪುಢಾರಿಯ ಕೈವಾಡವೋ ಕಥಾರೂಪ ಇತಿಹಾಸ ಕೈಬಿಟ್ಟು ಹೋಯ್ತು. ಕಥಾರೂಪ ಇತಿಹಾಸದಲ್ಲಿ ರಾಮಾಯಣ-ಮಹಾಭಾರತದ ಕೆಲವು ಆಯ್ದ ಪಾತ್ರಗಳ ಸಚಿತ್ರ ಕಥೆಗಳಿದ್ದವು; ಮಕ್ಕಳಿಗೆ ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ತಿಳಿಯುವಲ್ಲಿ ಅವು ಸಹಕಾರಿಯಾಗಿದ್ದವು. ಇವತ್ತು ಅಂತಹ ಯಾವುದೇ ಪರಿಪಾಟ ಉಳಿದಿಲ್ಲ. ಎಲ್ಲಿ ನೋಡಿದರೂ ಮತಗಳ ರಾಜಕೀಯ; ಮತಾಂಧರ ರಾಜಕೀಯ. ಯಾರೋ ಒಬ್ಬ ಸಮಾಜದ ಸರ್ವರ ಹಿತಬಯಸಿ ಯಾವುದೋ ಕೆಲಸಕ್ಕೆ ಮುಂದಾದರೆ ಅಲ್ಲಿ ತಲೆತೂರಿಸಿ ರಾಜಕೀಯ ಮಾಡುವುದು ಇಂದಿನ ಪ್ರಕ್ರಿಯೆ. ಮಹಾಬಲ ಮೂರ್ತಿಗಳೇ ಬಹುಶಃ ಕಥಾರೂಪ ಇತಿಹಾಸವನ್ನು ನೀವು ಓದಿರಲೂ ಸಾಕು. ಅದು ನಿಮಗೆ ಕ್ಲಿಷ್ಟವಾಗಲಿಲ್ಲವೇ? ಭಗವದ್ಗೀತೆಯಲ್ಲಿರುವ ಉತ್ತಮ ಅಂಶಗಳಿಂದ ಜಗತ್ತಿನಾದ್ಯಂತ ಹಲವು ರೀತಿಯಲ್ಲಿ ಅದು ಆದರ್ಶಪ್ರಾಯವೆನಿಸಿದೆ. ಕಾಲದ ಗತಿಗೆ ಬದಲಾಗದ ಕೃತಿಗಳಲ್ಲಿ ಭಗವದ್ಗೀತೆ ಒಂದು. ಅದು ಕೇವಲ ಯಾರೋ ಕವಿಯ ಕೃತಿಯಾದರೆ ಸಾವಿರಾರು ವರ್ಷಗಳ ಕಾಲ ಹಾಗೇ ಓದಿಸಿಕೊಂಡು ಜನಮೆಚ್ಚುಗೆ ಗಳಿಸಿಕೊಂಡು ಬರುತ್ತಿರಲಿಲ್ಲ. ಏನೋ ಇದೆ ಎಂಬ ಕುತೂಹಲಕ್ಕೆ ನಿಮ್ಮಂತಹ ಹಲವರು ಅದನ್ನು ಓದುವುದಕ್ಕೆ ಮುಂದಾದಾಗ ಇರುವ ಸತ್ಯದ ಅರಿವಾಗಿ ಅದನ್ನು ಒಪ್ಪಿದ್ದಾರೆ. ಅದನ್ನು ಕೇವಲ ಸನಾತನ ಧರ್ಮಗ್ರಂಥವೆಂದು ಭಾವಿಸಬೇಡಿ! ಅದು ಮಾನವೀಯ ಧರ್ಮಕ್ಕೆ ಒತ್ತುಕೊಡುವ ಗ್ರಂಥ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯಾದರೆ ಅದನ್ನು ಬೋಧಿಸುವ ವರ್ಗ ಆ ಸಲುವಾಗಿಯಾದರೂ ಓದುತ್ತದೆ. ಅಲ್ಲಿ ಪಾಲಕ-ಬಾಲಕ-ಶಿಕ್ಷಕ ಹೀಗೇ ಮೂರು ಸ್ತರಗಳಲ್ಲಿ ಮೌಲ್ಯಗಳ ಅವಲೋಕನ ನಡೆಯುತ್ತದೆ. ಇದು ಒಳಿತಲ್ಲವೇ?

ಇವತ್ತಿನ ಜನಾಂಗ ಮೌಲಿಕವಾದ ಲೇಖನಗಳನ್ನು ಓದುವುದನ್ನು ಬಿಟ್ಟು ಯಾರದೋ ಹರಕಲು ಕಥೆಗಳನ್ನು ಓದುತ್ತಾರೆ. ಬೇಡದ ಜಾಹೀರಾತುಗಳನ್ನೂ, ಮೌಲ್ಯವೇ ಇಲ್ಲದ ವಿಷಯಗಳನ್ನೂ ಮುದ್ರಿಸುವುದಕ್ಕಾಗಿ ಅದೆಷ್ಟು ಮರಗಳು ಹತವಾಗಿ ಹೋದವು ಎಂದು ಲೆಕ್ಕಹಾಕಿದರೆ ಕಾಡನ್ನು ಬರಿದಾಗಿಸುವಲ್ಲಿ ಅನೇಕ ಲೇಖಕರ ಪಾತ್ರವೂ ಇದೆ ಎಂಬುದು ಸ್ಪಷ್ಟವಾಗುತ್ತದೆ! ಮುಂದಿನ ಪೀಳಿಗೆಗೆ ಕುಡುಕರ ಕಥೆಗಳನ್ನು ನೀಡುವ ಬದಲು ಮೌಲ್ಯಾಧಾರಿತ ಕೃತಿಗಳಿಂದ ಅವರ ಜೀವನಕ್ಕೆ ಕೆಲವು ಉತ್ತಮ ಅಂಶಗಳು ಸಿಗುವಂತೇ ಮಾಡಿದರೆ ಅದೊಂದು ಸಮಾಜಮುಖಿಯಾದ ಕೆಲಸವಾಗುತ್ತದೆ. ಹೊಸದಿಗಂತದಲ್ಲಿ ಡಾ| ಸತ್ಯನಾರಾಯಣ ಭಟ್ಟರು ’ಪೃಥಿವೀಸೂಕ್ತ’ವನ್ನು ಪ್ರತೀ ಭಾನುವಾರ ಬರೆಯುತ್ತಿದ್ದಾರೆ. ನಿಜಕ್ಕೂ ಓದಬೇಕಾದ ವಿಷಯಮಾಲಿಕೆ. ಪ್ರತೀವಾರ ಅಳಿದುಹೋಗುವ ಸಸ್ಯಸ/ಪ್ರಾಣಿ ಸಂಕುಲಗಳಬಗ್ಗೆ ಅವುಗಳಿಂದಾಗುತ್ತಿದ್ದ ಉಪಕಾರಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಸಹಿತ ಹಲವು ಮಾಹಿತಿಗಳನ್ನು ಹೊತ್ತು ಬರುವ ಅವರ ಅಂಕಣ ಮೌಲಿಕವಾದದ್ದಾಗಿದೆ.

ನಿನ್ನೆ ಶತಾವಧಾನಿ ಡಾ| ಗಣೇಶರ ಜೊತೆ ಮಾತನಾಡುತ್ತಿದ್ದೆ. ನವ್ಯೋತ್ತರ ಕವನಗಳ ಬಗ್ಗೆ ಮಾತನಾಡುತ್ತಿರುವಾಗ ಅವರು ಹೇಳಿದರು " ನನ್ನ ಹತ್ತಿರ ಅವಧಾನದಲ್ಲಿ ಯಾರೋ ಕೇಳಿದರು ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತು ಹೋಗ್ಬಾರ್ದು ಯಾಕೆ ? ಅಂತ. ಯಾಕೆ ಎಂಬುದನ್ನು ತಿನ್ನಿಸಿ ನೋಡಿ ಎಂದೆ " ಎಂದು. ಹುಚ್ಚು ಸಾಹಿತ್ಯವನ್ನು ಹೊತ್ತುಬರುವ ಇಂತಹ ಪೋಲೀ ಕವನಗಳು ಯಾವ ಸಮಾಜೋದ್ಧಾರಕ್ಕಾಗಿ ? ಹೆಚ್ಚಿಗೆ ಬರೆಯಲಾರೆ, ನೀವೂ ಎಡಪಂಥೀಯರ ಸಾಲಿಗೆ ಸೇರ್ಪಡೆಯಾಗುತ್ತಿರುವುದು ವಿಷಾದನೀಯ !

4 comments:

 1. ಇದು ವಿಷಾದನೀಯ ವ್ಯಂಗ್ಯ. ನಿಜವಾದ ಎಡಪಂಥೀಯರು ಸೋಲುತ್ತಿರುವಾಗ ಈ ಅರೆಬಿರಿದ ಮೊಟ್ಟೆಗಳು ಎಡವಾಗಿ ಬಡವಾಗುತ್ತಿರುವುದು. ಏನನ್ನು ಇವರಿಂದ ನಿರೀಕ್ಷಿಸಬಹುದು . ಸಕಾಲಿಕ ಬರಹ ನಿಮ್ಮದು ಸರ್.

  ReplyDelete
 2. ‘ಏನಕೇನ ಪ್ರಕಾರೇಣ (ಕು)ಪ್ರಸಿದ್ಧ ಪುರುಷೋ ಭವ!’ ಎನ್ನುವ ಜಾತಿಗೆ ಸೇರಿದವರು ಈ ಮಹಾಬಲಮೂರ್ತಿಗಳು! ಇಂತಹ ಪತ್ರಿಕಾಜೀವಿಗಳ (ದಿನೇಶ ಅಮೀನಮಟ್ಟು, ಕೊಡ್ಲೆಕೆರೆ) ಪೊಳ್ಳನ್ನು ಸರಿಯಾಗಿ ಹೊರಗೆಳೆಯುತ್ತಿರುವಿರಿ!

  ReplyDelete
 3. ಸಕಾಲಿಕ ಲೇಖನ ಸರ್....

  ReplyDelete
 4. ಸಕಾಲಿಕ ... ಆದರೆ ಇದು ಅವರಿಗೆ ತಲುಪಿದೆಯಾ? ತಲುಪುವ ಮಾಧ್ಯಮ ( ಪತ್ರಿಕೆ ಗೆ) ಯಾಕೆ ಕಳಿಸಬಾರದು.? ( ಏನೂ ಗೊತ್ತಿಲ್ದೆ ಮಧ್ಯ ತಲೆ ತೂರ್ಸ್ತ ಇದೀನಿ... ಆದರೆ ತಲುಪ ಬೇಕಾದವರಿಗೆ ತಲುಪಿದರೆ ಸೂಕ್ತ ). ಅದ್ಯಾಕೆ ಭಗ್ವದ್ಗೀತೆಯನ್ನು ಬರೀ ಹಿಂದು ಪರ ಅನ್ನುತ್ತಾರೋ ಆ ಕೃಷ್ಣನಿಗೇ ಗೊತ್ತು ... ಅದು ಜನ ಪರ .. ನೀವು ಹೇಳಿದಂತೆ ಜನ ಲೋಕಪಾಲ್ ತರ .. ಬೇರೆ ದೇಶದವರು ಅದರಿಂದ ಎಸ್ಟೋ ಕಲಿತು ಅಳವಡಿಸಿಕೊಳ್ಳುತ್ತಿದ್ದಾರೆ .. ಇಲ್ಲಿ ಯಾರನ್ನೋ ಓಲೈಸಲು .. ಏನೇನೋ ಮಾಡ್ತಾರೆ... ಮನಸ್ಸಾಕ್ಷಿ ಒಪ್ಪತ್ತಾ ? ಅಥವಾ ಇಲ್ಲವಾ ?

  ReplyDelete